035: ಬ್ರಾಹ್ಮಣಪ್ರಶಂಸಾ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 35

ಸಾರ

ಬ್ರಹ್ಮಗೀತೆಯನ್ನು ಹೇಳಿ ಭೀಷ್ಮನು ಬ್ರಾಹ್ಮಣರನ್ನು ಪ್ರಶಂಸಿಸಿದುದು (1-23).

13035001 ಭೀಷ್ಮ ಉವಾಚ।
13035001a ಜನ್ಮನೈವ ಮಹಾಭಾಗೋ ಬ್ರಾಹ್ಮಣೋ ನಾಮ ಜಾಯತೇ।
13035001c ನಮಸ್ಯಃ ಸರ್ವಭೂತಾನಾಮತಿಥಿಃ ಪ್ರಸೃತಾಗ್ರಭುಕ್।।

ಭೀಷ್ಮನು ಹೇಳಿದನು: “ಜನ್ಮದಿಂದಲೇ ಬ್ರಾಹ್ಮಣನು ಮಹಾಭಾಗನಾಗಿ ಹುಟ್ಟುತ್ತಾನೆ. ಸರ್ವಭೂತಗಳಿಗೂ ವಂದನೀಯನೂ, ಶ್ರೇಷ್ಠ ಅತಿಥಿಯೂ ಮತ್ತು ಅಗ್ರ ಭೋಜನಕ್ಕೆ ಅರ್ಹನೂ ಆಗುತ್ತಾನೆ.

13035002a ಸರ್ವಾನ್ನಃ ಸುಹೃದಸ್ತಾತ ಬ್ರಾಹ್ಮಣಾಃ ಸುಮನೋಮುಖಾಃ।
13035002c ಗೀರ್ಭಿರ್ಮಂಗಲಯುಕ್ತಾಭಿರನುಧ್ಯಾಯಂತಿ ಪೂಜಿತಾಃ।।

ಅಯ್ಯಾ! ಪೂಜಿತರಾದ ಸುಹೃದಯಿ ಬ್ರಾಹ್ಮಣರು ಸುಮನೋಮುಖರಾಗಿ ನಮ್ಮನ್ನು ಮಂಗಲ ಮಾತುಗಳಿಂದ ಯುಕ್ತರಾಗಿ ಅನುಗ್ರಹಿಸುತ್ತಾರೆ.

13035003a ಸರ್ವಾನ್ನೋ ದ್ವಿಷತಸ್ತಾತ ಬ್ರಾಹ್ಮಣಾ ಜಾತಮನ್ಯವಃ।
13035003c ಗೀರ್ಭಿರ್ದಾರುಣಯುಕ್ತಾಭಿರಭಿಹನ್ಯುರಪೂಜಿತಾಃ।।

ಪೂಜಿಸಲ್ಪಡದ ಬ್ರಾಹ್ಮಣರು ನಮ್ಮನ್ನು ಶತ್ರುಗಳೆಂದು ಭಾವಿಸಿ ದಾರುಣ ಮಾತುಗಳಿಂದ ಯುಕ್ತರಾಗಿ ವಿನಾಶಗೊಳಿಸುತ್ತಾರೆ.

13035004a ಅತ್ರ ಗಾಥಾ ಬ್ರಹ್ಮಗೀತಾಃ ಕೀರ್ತಯಂತಿ ಪುರಾವಿದಃ।
13035004c ಸೃಷ್ಟ್ವಾ ದ್ವಿಜಾತೀನ್ಧಾತಾ ಹಿ ಯಥಾಪೂರ್ವಂ ಸಮಾದಧತ್।।

ಇದರ ಕುರಿತು ಪುರಾಣಗಳನ್ನು ತಿಳಿದವರು ಬ್ರಹ್ಮಗೀತೆಯನ್ನು ಹಾಡುತ್ತಾರೆ. ಧಾತಾ ಬ್ರಹ್ಮನು ಯಥಾಪೂರ್ವವಾಗಿ1 ದ್ವಿಜಾತಿಯವರನ್ನು ಸೃಷ್ಟಿಸಿ ಅವರಿಗೆ ಹೇಳಿದನು:

13035005a ನ ವೋಽನ್ಯದಿಹ ಕರ್ತವ್ಯಂ ಕಿಂ ಚಿದೂರ್ಧ್ವಂ ಯಥಾವಿಧಿ।
13035005c ಗುಪ್ತಾ ಗೋಪಾಯತ ಬ್ರಹ್ಮ ಶ್ರೇಯೋ ವಸ್ತೇನ ಶೋಭನಮ್।।

“ಯಥಾವಿಧಿಯಾಗಿ ಬ್ರಹ್ಮವನ್ನು ರಕ್ಷಿಸಿ. ರಕ್ಷಿಸಿದ ಬ್ರಹ್ಮದಿಂದ ಶ್ರೇಯಸ್ಸನ್ನು ಪಡೆದು ಶೋಭಿಸುವಿರಿ. ಇದಕ್ಕಿಂತಲೂ ಶ್ರೇಷ್ಠವಾದ ಕರ್ಮವು ಬೇರೆ ಯಾವುದೂ ಇಲ್ಲ.

13035006a ಸ್ವಮೇವ ಕುರ್ವತಾಂ ಕರ್ಮ ಶ್ರೀರ್ವೋ ಬ್ರಾಹ್ಮೀ ಭವಿಷ್ಯತಿ।
13035006c ಪ್ರಮಾಣಂ ಸರ್ವಭೂತಾನಾಂ ಪ್ರಗ್ರಹಂ ಚ ಗಮಿಷ್ಯಥ।।

ಈ ಕರ್ಮವನ್ನು ಮಾಡುವುದರಿಂದ ಸ್ವಯಂ ನಿಮಗೆ ಬ್ರಾಹ್ಮೀ ಸಂಪತ್ತು ಪ್ರಾಪ್ತವಾಗುತ್ತದೆ. ಸರ್ವಭೂತಗಳ ಪ್ರಮಾಣವೂ ಪ್ರಗ್ರಹಿಗಳೂ ಆಗುವಿರಿ.

13035007a ನ ಶೌದ್ರಂ ಕರ್ಮ ಕರ್ತವ್ಯಂ ಬ್ರಾಹ್ಮಣೇನ ವಿಪಶ್ಚಿತಾ।
13035007c ಶೌದ್ರಂ ಹಿ ಕುರ್ವತಃ ಕರ್ಮ ಧರ್ಮಃ ಸಮುಪರುಧ್ಯತೇ।।

ಬ್ರಾಹ್ಮಣನು ಶೂದ್ರ ಕರ್ಮವನ್ನು ಮಾಡಬಾರದು. ಶೂದ್ರಕರ್ಮಗಳನ್ನು ಮಾಡುವುದರಿಂದ ಧರ್ಮವು ಭ್ರಷ್ಟವಾಗುತ್ತದೆ.

13035008a ಶ್ರೀಶ್ಚ ಬುದ್ಧಿಶ್ಚ ತೇಜಶ್ಚ ವಿಭೂತಿಶ್ಚ ಪ್ರತಾಪಿನೀ।
13035008c ಸ್ವಾಧ್ಯಾಯೇನೈವ ಮಾಹಾತ್ಮ್ಯಂ ವಿಮಲಂ ಪ್ರತಿಪತ್ಸ್ಯಥ।।

ಸ್ವಾಧ್ಯಾಯದಿಂದಲೇ ಅವನು ಶ್ರೀ, ಬುದ್ಧಿ, ತೇಜಸ್ಸು, ವಿಭೂತಿ, ಪ್ರತಾಪ, ಮತ್ತು ವಿಮಲ ಮಹಾತ್ಮೆಯನ್ನು ಪಡೆಯುತ್ತಾನೆ.

13035009a ಹುತ್ವಾ ಚಾಹವನೀಯಸ್ಥಂ ಮಹಾಭಾಗ್ಯೇ ಪ್ರತಿಷ್ಠಿತಾಃ।
13035009c ಅಗ್ರಭೋಜ್ಯಾಃ ಪ್ರಸೂತೀನಾಂ ಶ್ರಿಯಾ ಬ್ರಾಹ್ಮ್ಯಾನುಕಲ್ಪಿತಾಃ।।

ಆಹವನೀಯಾಗ್ನಿಯಲ್ಲಿ ಆಹುತಿಯನ್ನಿತ್ತು ಅವರು ಮಹಾಭಾಗ್ಯದಲ್ಲಿ ಪ್ರತಿಷ್ಠಿತರಾಗುತ್ತಾರೆ. ಬ್ರಾಹ್ಮ್ಯದಿಂದ ಕಲ್ಪಿತವಾದ ಶ್ರೀಯಿಂದ ಸತ್ಪಾತ್ರರಾದ ಅವರು ಎಲ್ಲ ಪ್ರಜೆಗಳಿಗಿಂತ ಮೊದಲು ಭೋಜನ ಮಾಡಲು ಅಧಿಕಾರವುಳ್ಳವರಾಗುತ್ತಾರೆ.

13035010a ಶ್ರದ್ಧಯಾ ಪರಯಾ ಯುಕ್ತಾ ಹ್ಯನಭಿದ್ರೋಹಲಬ್ಧಯಾ।
13035010c ದಮಸ್ವಾಧ್ಯಾಯನಿರತಾಃ ಸರ್ವಾನ್ಕಾಮಾನವಾಪ್ಸ್ಯಥ।।

ಯಾರಿಗೂ ದ್ರೋಹವನ್ನೆಸಗದೇ ಪರಮ ಶ್ರದ್ಧೆಯಿಂದ ಅಲುಬ್ಧರಾಗಿ ಇಂದ್ರಿಯ ಸಂಯಮ ಮತ್ತು ಸ್ವಾಧ್ಯಾಯನಿರತರಾಗಿ ಸರ್ವಕಾಮನೆಗಳನ್ನೂ ಪಡೆದುಕೊಳ್ಳಿ.

13035011a ಯಚ್ಚೈವ ಮಾನುಷೇ ಲೋಕೇ ಯಚ್ಚ ದೇವೇಷು ಕಿಂ ಚನ।
13035011c ಸರ್ವಂ ತತ್ತಪಸಾ ಸಾಧ್ಯಂ ಜ್ಞಾನೇನ ವಿನಯೇನ ಚ।।

ಮನುಷ್ಯ ಲೋಕದಲ್ಲಿ ಅಥವಾ ದೇವಲೋಕದಲ್ಲಿ ಯಾವುದಾದರೂ ದುರ್ಲಭವಾದುದಿದ್ದರೆ ಅವೆಲ್ಲವನ್ನೂ ತಪಸ್ಸು, ಜ್ಞಾನ ಮತ್ತು ವಿನಯಗಳಿಂದ ಪಡೆದುಕೊಳ್ಳಲು ಸಾಧ್ಯ.”

13035012a ಇತ್ಯೇತಾ ಬ್ರಹ್ಮಗೀತಾಸ್ತೇ ಸಮಾಖ್ಯಾತಾ ಮಯಾನಘ।
13035012c ವಿಪ್ರಾನುಕಂಪಾರ್ಥಮಿದಂ ತೇನ ಪ್ರೋಕ್ತಂ ಹಿ ಧೀಮತಾ।।

ಅನಘ! ಇದು ವಿಪ್ರರ ಮೇಲಿನ ಅನುಕಂಪದಿಂದ ಧೀಮತ ಬ್ರಹ್ಮನು ಹೇಳಿದುದು. ಈ ಬ್ರಹ್ಮಗೀತೆಯನ್ನು ನಾನು ನಿನಗೆ ಹೇಳಿದ್ದೇನೆ.

13035013a ಭೂಯಸ್ತೇಷಾಂ ಬಲಂ ಮನ್ಯೇ ಯಥಾ ರಾಜ್ಞಸ್ತಪಸ್ವಿನಃ।
13035013c ದುರಾಸದಾಶ್ಚ ಚಂಡಾಶ್ಚ ರಭಸಾಃ ಕ್ಷಿಪ್ರಕಾರಿಣಃ।।

ಇನ್ನು ತಪಸ್ವೀ ರಾಜರ ಬಲಕ್ಕಿಂತ ಬ್ರಾಹ್ಮಣರ ಬಲವು ಹೆಚ್ಚೆಂಬುದು ನನ್ನ ಮತ. ಅವರು ದುರಾಸದರು. ಪ್ರಚಂಡರು. ವೇಗಶಾಲಿಗಳು ಮತ್ತು ಶೀಘ್ರಕಾರಿಗಳು.

13035014a ಸಂತ್ಯೇಷಾಂ ಸಿಂಹಸತ್ತ್ವಾಶ್ಚ ವ್ಯಾಘ್ರಸತ್ತ್ವಾಸ್ತಥಾಪರೇ।
13035014c ವರಾಹಮೃಗಸತ್ತ್ವಾಶ್ಚ ಗಜಸತ್ತ್ವಾಸ್ತಥಾಪರೇ।।

ಅವರಲ್ಲಿ ಕೆಲವರು ಸಿಂಹದ ಶಕ್ತಿಯನ್ನು ಪಡೆದಿದ್ದರೆ ಇನ್ನು ಕೆಲವರು ಹುಲಿಯ ಶಕ್ತಿಯನ್ನು ಪಡೆದಿರುತ್ತಾರೆ. ವರಾಹದ ಶಕ್ತಿಯು ಕೆಲವರಿಗಿದ್ದರೆ ಕೆಲವರಿಗೆ ಆನೆಗಳ ಶಕ್ತಿಯಿರುತ್ತದೆ.

13035015a ಕರ್ಪಾಸಮೃದವಃ ಕೇ ಚಿತ್ತಥಾನ್ಯೇ ಮಕರಸ್ಪೃಶಃ।
13035015c ವಿಭಾಷ್ಯಘಾತಿನಃ ಕೇ ಚಿತ್ತಥಾ ಚಕ್ಷುರ್ಹಣೋಽಪರೇ।।

ಕೆಲವರು ಹತ್ತಿಯಂತೆ ಮೃದುವಾಗಿದ್ದರೆ ಅನ್ಯರು ಮೊಸಳೆಯಂತೆ ಕಠೋರಸ್ಪರ್ಶರಾಗಿರುತ್ತಾರೆ. ಕೆಲವರು ಶಾಪದಿಂದ ಮತ್ತು ಇನ್ನು ಕೆಲವರು ನೋಟದಿಂದಲೇ ನಾಶಮಾಡುತ್ತಾರೆ.

13035016a ಸಂತಿ ಚಾಶೀವಿಷನಿಭಾಃ ಸಂತಿ ಮಂದಾಸ್ತಥಾಪರೇ।
13035016c ವಿವಿಧಾನೀಹ ವೃತ್ತಾನಿ ಬ್ರಾಹ್ಮಣಾನಾಂ ಯುಧಿಷ್ಠಿರ।।

ಯುಧಿಷ್ಠಿರ! ಕೆಲವರು ಹಾವಿನ ವಿಷದಂತಿದ್ದರೆ ಇನ್ನು ಕೆಲವರು ಮಂದಸ್ವಭಾವದವರಾಗಿರುತ್ತಾರೆ. ಬ್ರಾಹ್ಮಣರ ವ್ಯವಹಾರಗಳು ವಿವಿಧತರನಾಗಿವೆ.

13035017a ಮೇಕಲಾ ದ್ರಮಿಡಾಃ ಕಾಶಾಃ ಪೌಂಡ್ರಾಃ ಕೋಲ್ಲಗಿರಾಸ್ತಥಾ।
13035017c ಶೌಂಡಿಕಾ ದರದಾ ದರ್ವಾಶ್ಚೌರಾಃ ಶಬರಬರ್ಬರಾಃ।।
13035018a ಕಿರಾತಾ ಯವನಾಶ್ಚೈವ ತಾಸ್ತಾಃ ಕ್ಷತ್ರಿಯಜಾತಯಃ।
13035018c ವೃಷಲತ್ವಮನುಪ್ರಾಪ್ತಾ ಬ್ರಾಹ್ಮಣಾನಾಮದರ್ಶನಾತ್।।

ಬ್ರಾಹ್ಮಣರ ದರ್ಶನ ಮಾಡದೇ ಕ್ಷತ್ರಿಯ ಕುಲದಲ್ಲಿ ಹುಟ್ಟಿದ ಮೇಕಲರು, ದ್ರಮಿಡರು, ಕಾಶರು, ಪೌಂಡ್ರರು, ಕೋಲ್ಲಗಿರರು, ಶೌಂಡಿಕರು, ದರದರು, ದರ್ವರು, ಚೌರರು, ಶಬರರು, ಬರ್ಬರರು, ಕಿರಾತರು ಮತ್ತು ಯವನರು ಶೂದ್ರತ್ವವನ್ನು ಹೊಂದಿದರು.

13035019a ಬ್ರಾಹ್ಮಣಾನಾಂ ಪರಿಭವಾದಸುರಾಃ ಸಲಿಲೇಶಯಾಃ।
13035019c ಬ್ರಾಹ್ಮಣಾನಾಂ ಪ್ರಸಾದಾಚ್ಚ ದೇವಾಃ ಸ್ವರ್ಗನಿವಾಸಿನಃ।।

ಬ್ರಾಹ್ಮಣರ ತಿರಸ್ಕಾರದಿಂದ ಅಸುರರು ಸಮುದ್ರದಲ್ಲಿ ಅಡಗಬೇಕಾಯಿತು. ಬ್ರಾಹ್ಮಣರ ಪ್ರಸಾದದಿಂದ ದೇವತೆಗಳು ಸ್ವರ್ಗನಿವಾಸಿಗಳಾದರು.

13035020a ಅಶಕ್ಯಂ ಸ್ಪ್ರಷ್ಟುಮಾಕಾಶಮಚಾಲ್ಯೋ ಹಿಮವಾನ್ಗಿರಿಃ।
13035020c ಅವಾರ್ಯಾ ಸೇತುನಾ ಗಂಗಾ ದುರ್ಜಯಾ ಬ್ರಾಹ್ಮಣಾ ಭುವಿ।।

ಆಕಾಶವನ್ನು ಮುಟ್ಟುವುದು ಅಶಕ್ಯ. ಹಿಮವತ್ಪರ್ವತವನ್ನು ಅಲ್ಲಾಡಿಸಲು ಅಶಕ್ಯ. ಸೇತುವೆಯನ್ನು ಕಟ್ಟಿ ಗಂಗೆಯನ್ನು ತಡೆಯುವುದು ಅಶಕ್ಯ. ಹಾಗೆಯೇ ಭುವಿಯಲ್ಲಿ ಬ್ರಾಹ್ಮಣರನ್ನು ಜಯಿಸುವುದು ಅಶಕ್ಯ.

13035021a ನ ಬ್ರಾಹ್ಮಣವಿರೋಧೇನ ಶಕ್ಯಾ ಶಾಸ್ತುಂ ವಸುಂಧರಾ।
13035021c ಬ್ರಾಹ್ಮಣಾ ಹಿ ಮಹಾತ್ಮಾನೋ ದೇವಾನಾಮಪಿ ದೇವತಾಃ।।

ಬ್ರಾಹ್ಮಣವಿರೋಧದಿಂದ ವಸುಂಧರೆಯನ್ನು ಆಳಲು ಶಕ್ಯವಿಲ್ಲ. ಮಹಾತ್ಮ ಬ್ರಾಹ್ಮಣರು ದೇವತೆಗಳಿಗೂ ದೇವತೆಗಳು.

13035022a ತಾನ್ಪೂಜಯಸ್ವ ಸತತಂ ದಾನೇನ ಪರಿಚರ್ಯಯಾ।
13035022c ಯದೀಚ್ಚಸಿ ಮಹೀಂ ಭೋಕ್ತುಮಿಮಾಂ ಸಾಗರಮೇಖಲಾಮ್।।

ಈ ಸಾಗರಮೇಖಲ ಮಹಿಯನ್ನು ಭೋಗಿಸಲು ಇಚ್ಛಿಸುವೆಯಾದರೆ ಸತತವೂ ದಾನ ಮತ್ತು ಪರಿಚರ್ಯಗಳಿಂದ ಬ್ರಾಹ್ಮಣರನ್ನು ಪೂಜಿಸು.

13035023a ಪ್ರತಿಗ್ರಹೇಣ ತೇಜೋ ಹಿ ವಿಪ್ರಾಣಾಂ ಶಾಮ್ಯತೇಽನಘ।
13035023c ಪ್ರತಿಗ್ರಹಂ ಯೇ ನೇಚ್ಚೇಯುಸ್ತೇಽಪಿ ರಕ್ಷ್ಯಾಸ್ತ್ವಯಾನಘ।।

ಅನಘ! ದಾನವನ್ನು ಪ್ರತಿಗ್ರಹಿಸುವುದರಿಂದ ವಿಪ್ರರ ತೇಜಸ್ಸು ಕುಂದುತ್ತದೆ. ಅನಘ! ಆದುದರಿಂದ ದಾನವನ್ನು ಸ್ವೀಕರಿಸಲು ಇಚ್ಛಿಸದ ಬ್ರಾಹ್ಮಣರಿಂದ ನಿನ್ನನ್ನು ರಕ್ಷಿಸಿಕೊಳ್ಳಬೇಕು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಬ್ರಾಹ್ಮಣಪ್ರಶಂಸಾಯಾಂ ಪಂಚತ್ರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಬ್ರಾಹ್ಮಣಪ್ರಶಂಸಾ ಎನ್ನುವ ಮೂವತ್ತೈದನೇ ಅಧ್ಯಾಯವು.


  1. ಅವರವರ ಹಿಂದಿನ ಕರ್ಮಗಳಿಗೆ ಅನುಸಾರವಾಗಿ (ಭಾರತ ದರ್ಶನ). ↩︎