ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 32
ಸಾರ
ಮಾನವರಲ್ಲಿ ಯಾರು ಪೂಜ್ಯರು ಮತ್ತು ನಮಸ್ಕಾರಕ್ಕೆ ಅರ್ಹರು ಎಂಬ ಯುಧಿಷ್ಠಿರನ ಪ್ರಶ್ನೆಗೆ ಭೀಷ್ಮನು ಕೃಷ್ಣ-ನಾರದರ ಸಂಭಾಷಣೆಯನ್ನು ಉದಾಹರಿಸುವುದು (1-33).
13032001 ಯುಧಿಷ್ಠಿರ ಉವಾಚ।
13032001a ಕೇ ಪೂಜ್ಯಾಃ ಕೇ ನಮಸ್ಕಾರ್ಯಾ ಮಾನವೈರ್ಭರತರ್ಷಭ।
13032001c ವಿಸ್ತರೇಣ ತದಾಚಕ್ಷ್ವ ನ ಹಿ ತೃಪ್ಯಾಮಿ ಕಥ್ಯತಾಮ್।।
ಯುಧಿಷ್ಠಿರನು ಹೇಳಿದನು: “ಭರತರ್ಷಭ! ಮಾನವರಲ್ಲಿ ಯಾರು ಪೂಜ್ಯರು ಮತ್ತು ಯಾರು ನಮಸ್ಕಾರಕ್ಕೆ ಅರ್ಹರು? ಅದನ್ನು ವಿಸ್ತಾರವಾಗಿ ಹೇಳು. ಏಕೆಂದರೆ ಕೇಳುವುದರಲ್ಲಿ ನಾನು ಇನ್ನೂ ತೃಪ್ತನಾಗಿಲ್ಲ.”
13032002 ಭೀಷ್ಮ ಉವಾಚ।
13032002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
13032002c ನಾರದಸ್ಯ ಚ ಸಂವಾದಂ ವಾಸುದೇವಸ್ಯ ಚೋಭಯೋಃ।।
ಭೀಷ್ಮನು ಹೇಳಿದನು: “ಇದಕ್ಕೆ ಪುರಾತನ ಇತಿಹಾಸವಾದ ವಾಸುದೇವ ಮತ್ತು ನಾರದರಿಬ್ಬರ ನಡುವಿನ ಸಂವಾದವನ್ನು ಉದಾಹರಿಸುತ್ತಾರೆ.
13032003a ನಾರದಂ ಪ್ರಾಂಜಲಿಂ ದೃಷ್ಟ್ವಾ ಪೂಜಯಾನಂ ದ್ವಿಜರ್ಷಭಾನ್।
13032003c ಕೇಶವಃ ಪರಿಪಪ್ರಚ್ಚ ಭಗವನ್ಕಾನ್ನಮಸ್ಯಸಿ।।
ನಾರದನು ಅಂಜಲೀ ಬದ್ಧನಾಗಿದ್ದುದನ್ನು ನೋಡಿ ದ್ವಿಜರ್ಷಭರನ್ನು ಪೂಜಿಸುತ್ತಿದ್ದ ಕೇಶವನು ಕೇಳಿದನು: “ಭಗವನ್! ಏಕೆ ನಮಸ್ಕರಿಸುತ್ತಿದ್ದೀಯೆ?
13032004a ಬಹುಮಾನಃ ಪರಃ ಕೇಷು ಭವತೋ ಯಾನ್ನಮಸ್ಯಸಿ।
13032004c ಶಕ್ಯಂ ಚೇಚ್ಚ್ರೋತುಮಿಚ್ಚಾಮಿ ಬ್ರೂಹ್ಯೇತದ್ಧರ್ಮವಿತ್ತಮ।।
ನೀನು ಯಾರನ್ನು ಪರಮ ಗೌರವಿಸುತ್ತೀಯೆ? ನೀನು ಯಾರನ್ನು ನಮಸ್ಕರಿಸುತ್ತೀಯೆ? ಧರ್ಮವಿತ್ತಮ! ಶಕ್ಯನಾದರೆ ಕೇಳಬಯಸುತ್ತೇನೆ. ಹೇಳು!”
13032005 ನಾರದ ಉವಾಚ।
13032005a ಶೃಣು ಗೋವಿಂದ ಯಾನೇತಾನ್ಪೂಜಯಾಮ್ಯರಿಮರ್ದನ।
13032005c ತ್ವತ್ತೋಽನ್ಯಃ ಕಃ ಪುಮಾಽಲ್ಲೋಕೇ ಶ್ರೋತುಮೇತದಿಹಾರ್ಹತಿ।।
ನಾರದನು ಹೇಳಿದನು: “ಗೋವಿಂದ! ಅರಿಮರ್ದನ! ನಾನು ಯಾರನ್ನು ಪೂಜಿಸುತ್ತೇನೆನ್ನುವುದನ್ನು ಕೇಳು. ಇದನ್ನು ಕೇಳಲು ಲೋಕದಲ್ಲಿ ನೀನಲ್ಲದೇ ಬೇರೆ ಯಾರು ಅರ್ಹರಾಗಿದ್ದಾರೆ?
13032006a ವರುಣಂ ವಾಯುಮಾದಿತ್ಯಂ ಪರ್ಜನ್ಯಂ ಜಾತವೇದಸಮ್।
13032006c ಸ್ಥಾಣುಂ ಸ್ಕಂದಂ ತಥಾ ಲಕ್ಷ್ಮೀಂ ವಿಷ್ಣುಂ ಬ್ರಹ್ಮಾಣಮೇವ ಚ।।
13032007a ವಾಚಸ್ಪತಿಂ ಚಂದ್ರಮಸಮಪಃ ಪೃಥ್ವೀಂ ಸರಸ್ವತೀಮ್।
13032007c ಸತತಂ ಯೇ ನಮಸ್ಯಂತಿ ತಾನ್ನಮಸ್ಯಾಮ್ಯಹಂ ವಿಭೋ।।
ವಿಭೋ! ಯಾರು ವರುಣ, ವಾಯು, ಆದಿತ್ಯ, ಪರ್ಜನ್ಯ, ಜಾತವೇದಸ, ಸ್ಥಾಣು, ಸ್ಕಂದ, ಲಕ್ಷ್ಮೀ, ವಿಷ್ಣು, ಬ್ರಹ್ಮ, ವಾಚಸ್ಪತಿ, ಚಂದ್ರಮಸ, ನೀರು, ಪೃಥ್ವಿ ಮತ್ತು ಸರಸ್ವತಿ – ಇವರನ್ನು ಸತತವೂ ನಮಸ್ಕರಿಸುವರೋ ಅವರನ್ನು ನಾನು ನಮಸ್ಕರಿಸುತ್ತೇನೆ.
13032008a ತಪೋಧನಾನ್ವೇದವಿದೋ ನಿತ್ಯಂ ವೇದಪರಾಯಣಾನ್।
13032008c ಮಹಾರ್ಹಾನ್ವೃಷ್ಣಿಶಾರ್ದೂಲ ಸದಾ ಸಂಪೂಜಯಾಮ್ಯಹಮ್।।
ವೃಷ್ಣಿಶಾರ್ದೂಲ! ಅತ್ಯಂತ ದುರ್ಲಭರಾದ ತಪೋಧನರನ್ನು, ವೇದವಿದುಗಳನ್ನು, ಮತ್ತು ನಿತ್ಯ ವೇದಪರಾಯಣರನ್ನು ಸದಾ ಸಂಪೂಜಿಸುತ್ತೇನೆ.
13032009a ಅಭುಕ್ತ್ವಾ ದೇವಕಾರ್ಯಾಣಿ ಕುರ್ವತೇ ಯೇಽವಿಕತ್ಥನಾಃ।
13032009c ಸಂತುಷ್ಟಾಶ್ಚ ಕ್ಷಮಾಯುಕ್ತಾಸ್ತಾನ್ನಮಸ್ಯಾಮ್ಯಹಂ ವಿಭೋ।।
ವಿಭೋ! ಆಹಾರಸೇವಿಸದೇ ದೇವಕಾರ್ಯವನ್ನು ಮಾಡುವವರನ್ನು, ತಮ್ಮನ್ನು ತಾವೇ ಹೊಗಳಿಕೊಳ್ಳದಿರುವವರನ್ನು, ಸಂತುಷ್ಟರನ್ನು ಮತ್ತು ಕ್ಷಮಾವಂತರನ್ನು ನಾನು ನಮಸ್ಕರಿಸುತ್ತೇನೆ.
13032010a ಸಮ್ಯಗ್ದದತಿ ಯೇ ಚೇಷ್ಟಾನ್ಕ್ಷಾಂತಾ ದಾಂತಾ ಜಿತೇಂದ್ರಿಯಾಃ।
13032010c ಸಸ್ಯಂ ಧನಂ ಕ್ಷಿತಿಂ ಗಾಶ್ಚ ತಾನ್ನಮಸ್ಯಾಮಿ ಯಾದವ।।
ಯಾದವ! ಚೆನ್ನಾಗಿ ಇಷ್ಟಿ-ದಾನಗಳನ್ನು ಮಾಡಿರುವವನು, ದಾಂತನು. ಜಿತೇಂದ್ರಿಯನು, ಸಸ್ಯ-ಧನ-ಭೂಮಿ ಮತ್ತು ಗೋವುಗಳನ್ನು ರಕ್ಷಿಸುವವನನ್ನು ನಾನು ನಮಸ್ಕರಿಸುತ್ತೇನೆ.
13032011a ಯೇ ತೇ ತಪಸಿ ವರ್ತಂತೇ ವನೇ ಮೂಲಫಲಾಶನಾಃ।
13032011c ಅಸಂಚಯಾಃ ಕ್ರಿಯಾವಂತಸ್ತಾನ್ನಮಸ್ಯಾಮಿ ಯಾದವ।।
ಯಾದವ! ವನದಲ್ಲಿ ಮೂಲ-ಫಲಗಳನ್ನು ತಿನ್ನುತ್ತಾ ತಪಸ್ಸಿನಲ್ಲಿ ನಿರತರಾದವರನ್ನು ಮತ್ತು ಸಂಗ್ರಹಿಸದೇ ಇರುವ ಕ್ರಿಯಾವಂತರನ್ನು ನಾನು ನಮಸ್ಕರಿಸುತ್ತೇನೆ.
13032012a ಯೇ ಭೃತ್ಯಭರಣೇ ಸಕ್ತಾಃ ಸತತಂ ಚಾತಿಥಿಪ್ರಿಯಾಃ।
13032012c ಭುಂಜಂತೇ ದೇವಶೇಷಾಣಿ ತಾನ್ನಮಸ್ಯಾಮಿ ಯಾದವ।।
ಯಾದವ! ಕುಟುಂಬ ಮತ್ತು ಸೇವಕರ ಭರಣ-ಪೋಷಣೆಗಳನ್ನು ಮಾಡುವ, ಸತತವೂ ಅತಿಥಿಪ್ರಿಯರಾಗಿರುವ, ದೇವರಿಗೆ ಕೊಟ್ಟು ಉಳಿದುದನ್ನು ಭುಂಜಿಸುವವರನ್ನು ನಾನು ನಮಸ್ಕರಿಸುತ್ತೇನೆ.
13032013a ಯೇ ವೇದಂ ಪ್ರಾಪ್ಯ ದುರ್ಧರ್ಷಾ ವಾಗ್ಮಿನೋ ಬ್ರಹ್ಮವಾದಿನಃ।
13032013c ಯಾಜನಾಧ್ಯಾಪನೇ ಯುಕ್ತಾ ನಿತ್ಯಂ ತಾನ್ಪೂಜಯಾಮ್ಯಹಮ್।।
ವೇದವನ್ನು ಪಡೆದು ದುರ್ಧರ್ಷರೂ ವಾಗ್ಮಿಗಳೂ ಬ್ರಹ್ಮವಾದಿಗಳೂ ಆದ, ಮತ್ತು ಯಾಜನ-ಅಧ್ಯಾಪನಗಳಲ್ಲಿ ನಿತ್ಯವೂ ಯುಕ್ತರಾಗಿರುವವರನ್ನು ನಾನು ಪೂಜಿಸುತ್ತೇನೆ.
13032014a ಪ್ರಸನ್ನಹೃದಯಾಶ್ಚೈವ ಸರ್ವಸತ್ತ್ವೇಷು ನಿತ್ಯಶಃ।
13032014c ಆ ಪೃಷ್ಠತಾಪಾತ್ಸ್ವಾಧ್ಯಾಯೇ ಯುಕ್ತಾಸ್ತಾನ್ಪೂಜಯಾಮ್ಯಹಮ್।।
ಸರ್ವಸತ್ವಗಳ ಕುರಿತು ಪ್ರಸನ್ನಹೃದಯಿಗಳಾಗಿರುವ, ನಿತ್ಯವೂ ಮಧ್ಯಾಹ್ನದ ವರೆಗೆ ಸ್ವಾಧ್ಯಾಯದಲ್ಲಿ ಯುಕ್ತರಾಗಿರುವವರನ್ನು ನಾನು ಪೂಜಿಸುತ್ತೇನೆ.
13032015a ಗುರುಪ್ರಸಾದೇ ಸ್ವಾಧ್ಯಾಯೇ ಯತಂತೇ ಯೇ ಸ್ಥಿರವ್ರತಾಃ।
13032015c ಶುಶ್ರೂಷವೋಽನಸೂಯಂತಸ್ತಾನ್ನಮಸ್ಯಾಮಿ ಯಾದವ।।
ಯಾದವ! ಗುರುವನ್ನು ಪ್ರಸನ್ನಗೊಳಿಸುವುದರಲ್ಲಿ ಮತ್ತು ಸ್ವಾಧ್ಯಾಯದಲ್ಲಿ ಪ್ರಯತ್ನಪಡುತ್ತಿರುವ ಸ್ಥಿರವ್ರತರು ಮತ್ತು ಅಸೂಯೆಯಿಲ್ಲದೇ ಶುಶ್ರೂಷೆಮಾಡುವವರನ್ನು ನಾನು ನಮಸ್ಕರಿಸುತ್ತೇನೆ.
13032016a ಸುವ್ರತಾ ಮುನಯೋ ಯೇ ಚ ಬ್ರಹ್ಮಣ್ಯಾಃ ಸತ್ಯಸಂಗರಾಃ।
13032016c ವೋಢಾರೋ ಹವ್ಯಕವ್ಯಾನಾಂ ತಾನ್ನಮಸ್ಯಾಮಿ ಯಾದವ।।
ಯಾದವ! ಸುವ್ರತ ಮುನಿಗಳು, ಸತ್ಯಸಂಗರ ಬ್ರಹ್ಮಣ್ಯರು ಮತ್ತು ಹವ್ಯ-ಕವ್ಯಗಳನ್ನು ನಿರ್ವಹಿಸುವವರನ್ನು ನಾನು ನಮಸ್ಕರಿಸುತ್ತೇನೆ.
13032017a ಭೈಕ್ಷ್ಯಚರ್ಯಾಸು ನಿರತಾಃ ಕೃಶಾ ಗುರುಕುಲಾಶ್ರಯಾಃ।
13032017c ನಿಃಸುಖಾ ನಿರ್ಧನಾ ಯೇ ಚ ತಾನ್ನಮಸ್ಯಾಮಿ ಯಾದವ।।
ಯಾದವ! ಭೈಕ್ಷ್ಯಚರ್ಯದಲ್ಲಿ ನಿರತರಾಗಿರುವವರು, ಗುರುಕುಲಾಶ್ರಯದಲ್ಲಿ ಕೃಶರಾದವರು, ಸುಖವಿಲ್ಲದವರು, ನಿರ್ಧನರು – ಇವರನ್ನು ನಾನು ನಮಸ್ಕರಿಸುತ್ತೇನೆ.
13032018a ನಿರ್ಮಮಾ ನಿಷ್ಪ್ರತಿದ್ವಂದ್ವಾ ನಿರ್ಹ್ರೀಕಾ ನಿಷ್ಪ್ರಯೋಜನಾಃ।
13032018c ಅಹಿಂಸಾನಿರತಾ ಯೇ ಚ ಯೇ ಚ ಸತ್ಯವ್ರತಾ ನರಾಃ।
13032018e ದಾಂತಾಃ ಶಮಪರಾಶ್ಚೈವ ತಾನ್ನಮಸ್ಯಾಮಿ ಕೇಶವ।।
ಕೇಶವ! ಮಮಕಾರವಿಲ್ಲದವರೂ, ದ್ವಂದ್ವರಹಿತರಾದವರೂ, ನಾಚಿಕೆಯಿಲ್ಲದವರೂ, ನಿಷ್ಪ್ರಯೋಜನರೂ, ಅಹಿಂಸಾನಿರತರೂ, ಸತ್ಯವ್ರತ ನರರೂ, ದಾಂತರೂ, ಶಮಪರರೂ ಆದವರನ್ನು ನಾನು ನಮಸ್ಕರಿಸುತ್ತೇನೆ.
13032019a ದೇವತಾತಿಥಿಪೂಜಾಯಾಂ ಪ್ರಸಕ್ತಾ ಗೃಹಮೇಧಿನಃ।
13032019c ಕಪೋತವೃತ್ತಯೋ ನಿತ್ಯಂ ತಾನ್ನಮಸ್ಯಾಮಿ ಯಾದವ।।
ಯಾದವ! ದೇವ-ಅತಿಥಿಪೂಜನೆಗಳಲ್ಲಿ ಪ್ರಸಕ್ತರಾಗಿರುವ, ನಿತ್ಯವೂ ಕಪೋತವೃತ್ತಿಯಲ್ಲಿರುವ ಗೃಹಸ್ಥರನ್ನು ನಾನು ನಮಸ್ಕರಿಸುತ್ತೇನೆ.
13032020a ಯೇಷಾಂ ತ್ರಿವರ್ಗಃ ಕೃತ್ಯೇಷು ವರ್ತತೇ ನೋಪಹೀಯತೇ।
13032020c ಶಿಷ್ಟಾಚಾರಪ್ರವೃತ್ತಾಶ್ಚ ತಾನ್ನಮಸ್ಯಾಮ್ಯಹಂ ಸದಾ।।
ಯಾರ ಕೃತ್ಯಗಳಲ್ಲಿ ಧರ್ಮ-ಅರ್ಥ-ಕಾಮಗಳೆಂಬ ತ್ರಿವರ್ಗಗಳೂ ಅಡಕವಾಗಿರುವವೋ, ಯಾವುದಕ್ಕೂ ಹಾನಿಯುಂಟಾಗದಂತೆ ಯಾರು ನಡೆದುಕೊಳ್ಳುತ್ತಾರೋ, ಮತ್ತು ಯಾರು ಶಿಷ್ಟಾಚಾರಪ್ರವೃತ್ತರೋ ಅವರನ್ನು ಸದಾ ನಾನು ನಮಸ್ಕರಿಸುತ್ತೇನೆ.
13032021a ಬ್ರಾಹ್ಮಣಾಸ್ತ್ರಿಷು ಲೋಕೇಷು ಯೇ ತ್ರಿವರ್ಗಮನುಷ್ಠಿತಾಃ।
13032021c ಅಲೋಲುಪಾಃ ಪುಣ್ಯಶೀಲಾಸ್ತಾನ್ನಮಸ್ಯಾಮಿ ಕೇಶವ।।
ಕೇಶವ! ಮೂರು ಲೋಕಗಳಲ್ಲಿಯೂ ತ್ರಿವರ್ಗವನ್ನು ಸಾಧಿಸುವ, ಯಾವುದಕ್ಕೂ ಲೋಪವುಂಟಾಗದೇ ಇರುವ ಪುಣ್ಯಶೀಲ ಬ್ರಾಹ್ಮಣರನ್ನು ನಾನು ನಮಸ್ಕರಿಸುತ್ತೇನೆ.
13032022a ಅಬ್ಭಕ್ಷಾ ವಾಯುಭಕ್ಷಾಶ್ಚ ಸುಧಾಭಕ್ಷಾಶ್ಚ ಯೇ ಸದಾ।
13032022c ವ್ರತೈಶ್ಚ ವಿವಿಧೈರ್ಯುಕ್ತಾಸ್ತಾನ್ನಮಸ್ಯಾಮಿ ಮಾಧವ।।
ಮಾಧವ! ನೀರನ್ನು ಸೇವಿಸುತ್ತಾ, ವಾಯುವನ್ನು ಸೇವಿಸುತ್ತಾ ಮತ್ತು ಸದಾ ಯಜ್ಞೋಶಿಷ್ಟವನ್ನು ಸೇವಿಸುತ್ತಾ ವಿವಿಧ ವ್ರತಗಳಲ್ಲಿ ಯುಕ್ತರಾದವರನ್ನು ನಾನು ನಮಸ್ಕರಿಸುತ್ತೇನೆ.
13032023a ಅಯೋನೀನಗ್ನಿಯೋನೀಂಶ್ಚ ಬ್ರಹ್ಮಯೋನೀಂಸ್ತಥೈವ ಚ।
13032023c ಸರ್ವಭೂತಾತ್ಮಯೋನೀಂಶ್ಚ ತಾನ್ನಮಸ್ಯಾಮ್ಯಹಂ ದ್ವಿಜಾನ್।।
ಅಯೋನಿಗಳು, ಅಗ್ನಿಯೋನಿಗಳು, ಬ್ರಹ್ಮಯೋನಿಗಳು, ಮತ್ತು ಸರ್ವಭೂತಾತ್ಮಯೋನಿ ದ್ವಿಜರನ್ನು ನಾನು ನಮಸ್ಕರಿಸುತ್ತೇನೆ.
13032024a ನಿತ್ಯಮೇತಾನ್ನಮಸ್ಯಾಮಿ ಕೃಷ್ಣ ಲೋಕಕರಾನೃಷೀನ್।
13032024c ಲೋಕಜ್ಯೇಷ್ಠಾನ್ ಜ್ಞಾನನಿಷ್ಠಾಂಸ್ತಮೋಘ್ನಾಽಲ್ಲೋಕಭಾಸ್ಕರಾನ್।।
ಕೃಷ್ಣ! ಲೋಕಜ್ಯೇಷ್ಠರನ್ನೂ, ಅಜ್ಞಾನವೆಂಬ ತಮವನ್ನು ಕಳೆಯುವ ಲೋಕ ಭಾಸ್ಕರರಂತಿರುವ ಜ್ಞಾನನಿಷ್ಠರನ್ನೂ, ಲೋಕಕರ ಋಷಿಗಳನ್ನೂ ನಾನು ನಿತ್ಯವೂ ನಮಸ್ಕರಿಸುತ್ತೇನೆ.
13032025a ತಸ್ಮಾತ್ತ್ವಮಪಿ ವಾರ್ಷ್ಣೇಯ ದ್ವಿಜಾನ್ಪೂಜಯ ನಿತ್ಯದಾ।
13032025c ಪೂಜಿತಾಃ ಪೂಜನಾರ್ಹಾ ಹಿ ಸುಖಂ ದಾಸ್ಯಂತಿ ತೇಽನಘ।।
ಅನಘ! ವಾರ್ಷ್ಣೇಯ! ಆದುದರಿಂದ ನೀನೂ ಕೂಡ ನಿತ್ಯವೂ ದ್ವಿಜರನ್ನು ಪೂಜಿಸು. ಪೂಜಿಸಿದ ಪೂಜನಾರ್ಹರು ಸುಖವನ್ನು ಕರುಣಿಸುತ್ತಾರೆ.
13032026a ಅಸ್ಮಿಽಲ್ಲೋಕೇ ಸದಾ ಹ್ಯೇತೇ ಪರತ್ರ ಚ ಸುಖಪ್ರದಾಃ।
13032026c ತ ಏತೇ ಮಾನ್ಯಮಾನಾ ವೈ ಪ್ರದಾಸ್ಯಂತಿ ಸುಖಂ ತವ।।
ಇವರು ಲೋಕದಲ್ಲಿ ಸದಾ ಇತರರಿಗೆ ಸುಖವನ್ನು ನೀಡುತ್ತಾರೆ. ಗೌರವಿಸಿದ ನಿನಗೂ ಕೂಡ ಇವರು ಸುಖವನ್ನು ನೀಡುತ್ತಾರೆ.
13032027a ಯೇ ಸರ್ವಾತಿಥಯೋ ನಿತ್ಯಂ ಗೋಷು ಚ ಬ್ರಾಹ್ಮಣೇಷು ಚ।
13032027c ನಿತ್ಯಂ ಸತ್ಯೇ ಚ ನಿರತಾ ದುರ್ಗಾಣ್ಯತಿತರಂತಿ ತೇ।।
ಎಲ್ಲ ಅತಿಥಿಗಳು, ಗೋವುಗಳು ಮತ್ತು ಬ್ರಾಹ್ಮಣರಲ್ಲಿ ನಿತ್ಯವೂ ನಿರತರಾಗಿರುವವರು ಮತ್ತು ನಿತ್ಯವೂ ಸತ್ಯದಲ್ಲಿ ನಿರತರಾಗಿರುವವರು ಕಷ್ಟಗಳನ್ನು ದಾಟುತ್ತಾರೆ.
13032028a ನಿತ್ಯಂ ಶಮಪರಾ ಯೇ ಚ ತಥಾ ಯೇ ಚಾನಸೂಯಕಾಃ।
13032028c ನಿತ್ಯಂ ಸ್ವಾಧ್ಯಾಯಿನೋ ಯೇ ಚ ದುರ್ಗಾಣ್ಯತಿತರಂತಿ ತೇ।।
ನಿತ್ಯವೂ ಶಮಪರರಾಗಿರುವ ಮತ್ತು ಅನಸೂಯಕರಾಗಿರುವ ಇವರು ನಿತ್ಯವೂ ಸ್ವಾಧ್ಯಾಯಪರರಾಗಿದ್ದು ಕಷ್ಟಗಳನ್ನು ದಾಟುತ್ತಾರೆ.
13032029a ಸರ್ವಾನ್ದೇವಾನ್ನಮಸ್ಯಂತಿ ಯೇ ಚೈಕಂ ದೇವಮಾಶ್ರಿತಾಃ।
13032029c ಶ್ರದ್ದಧಾನಾಶ್ಚ ದಾಂತಾಶ್ಚ ದುರ್ಗಾಣ್ಯತಿತರಂತಿ ತೇ।।
ಸರ್ವ ದೇವರನ್ನೂ ನಮಸ್ಕರಿಸುವ, ಒಬ್ಬನೇ ದೇವನನ್ನು ಆಶ್ರಯಿಸಿರುವ, ಶ್ರದ್ಧಧಾನ ದಾಂತರು ಕಷ್ಟಗಳನ್ನು ದಾಟುತ್ತಾರೆ.
13032030a ತಥೈವ ವಿಪ್ರಪ್ರವರಾನ್ನಮಸ್ಕೃತ್ಯ ಯತವ್ರತಾನ್।
13032030c ಭವಂತಿ ಯೇ ದಾನರತಾ ದುರ್ಗಾಣ್ಯತಿತರಂತಿ ತೇ।।
ಹಾಗೆಯೇ ವಿಪ್ರಪ್ರವರರನ್ನು ಯತವ್ರತರನ್ನು ನಮಸ್ಕರಿಸಿ ದಾನರತರಾಗಿ ಇರುವವರು ಕಷ್ಟಗಳನ್ನು ದಾಟುತ್ತಾರೆ.
13032031a ಅಗ್ನೀನಾಧಾಯ ವಿಧಿವತ್ಪ್ರಯತಾ ಧಾರಯಂತಿ ಯೇ।
13032031c ಪ್ರಾಪ್ತಾಃ ಸೋಮಾಹುತಿಂ ಚೈವ ದುರ್ಗಾಣ್ಯತಿತರಂತಿ ತೇ।।
ಅಗ್ನಿಯನ್ನು ಆಧಾನದಿಂದ ಉತ್ಪತ್ತಿಮಾಡಿ, ಸದಾ ರಕ್ಷಿಸಿಕೊಂಡು ಸೋಮಾಹುತಿಯನ್ನು ನೀಡುವವರು ಕಷ್ಟಗಳನ್ನು ದಾಟುತ್ತಾರೆ.
13032032a ಮಾತಾಪಿತ್ರೋರ್ಗುರುಷು ಚ ಸಮ್ಯಗ್ವರ್ತಂತಿ ಯೇ ಸದಾ।
13032032c ಯಥಾ ತ್ವಂ ವೃಷ್ಣಿಶಾರ್ದೂಲೇತ್ಯುಕ್ತ್ವೈವಂ ವಿರರಾಮ ಸಃ।।
ವೃಷ್ಣಿಶಾರ್ದೂಲ! ನಿನ್ನಂತೆ ಮಾತಾಪಿತ್ರುಗಳು ಮತ್ತು ಗುರುಗಳ ಕುರಿತಾಗಿ ಸದಾ ಉತ್ತಮವಾಗಿ ನಡೆದುಕೊಳ್ಳುವವರೂ ಕಷ್ಟಗಳನ್ನು ದಾಟುತ್ತಾರೆ.” ಹೀಗೆ ಹೇಳಿ ನಾರದನು ಸುಮ್ಮನಾದನು.
13032033a ತಸ್ಮಾತ್ತ್ವಮಪಿ ಕೌಂತೇಯ ಪಿತೃದೇವದ್ವಿಜಾತಿಥೀನ್।
13032033c ಸಮ್ಯಕ್ಪೂಜಯ ಯೇನ ತ್ವಂ ಗತಿಮಿಷ್ಟಾಮವಾಪ್ಸ್ಯಸಿ।।
ಕೌಂತೇಯ! ನೀನೂ ಕೂಡ ಪಿತೃ-ದೇವ-ದ್ವಿಜ-ಅತಿಥಿಗಳನ್ನು ಚೆನ್ನಾಗಿ ಪೂಜಿಸುವುದರಿಂದ ಇಷ್ಟಗತಿಯನ್ನು ಪಡೆಯುತ್ತೀಯೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಕೃಷ್ಣನಾರದಸಂವಾದೇ ದ್ವಾತ್ರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಕೃಷ್ಣನಾರದಸಂವಾದ ಎನ್ನುವ ಮೂವತ್ತೆರಡನೇ ಅಧ್ಯಾಯವು.