031: ವೀತಹವ್ಯೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 31

ಸಾರ

ಕ್ಷತ್ರಿಯನಾಗಿದ್ದರೂ ಬ್ರಾಹ್ಮಣನಾದ ವೀತಹವ್ಯನ ಕಥೆಯನ್ನು ಹೇಳುವಂತೆ ಯುಧಿಷ್ಠಿರನು ಭೀಷ್ಮನಲ್ಲಿ ಕೇಳಿದುದು (1-4). ಭೃಗುಮಹರ್ಷಿಯ ಪ್ರಸಾದದಿಂದ ಬ್ರಾಹ್ಮಣನಾದ ರಾಜಾ ವೀತಹವ್ಯನ ಕಥೆ (5-54). ವೀತಹವ್ಯನ ಮಗ ಗೃತ್ಸಮದನ ವಂಶಾವಳಿ (55-64).

13031001 ಯುಧಿಷ್ಠಿರ ಉವಾಚ।
13031001a ಶ್ರುತಂ ಮೇ ಮಹದಾಖ್ಯಾನಮೇತತ್ಕುರುಕುಲೋದ್ವಹ।
13031001c ಸುದುಷ್ಪ್ರಾಪಂ ಬ್ರವೀಷಿ ತ್ವಂ ಬ್ರಾಹ್ಮಣ್ಯಂ ವದತಾಂ ವರ।।

ಯುಧಿಷ್ಠಿರನು ಹೇಳಿದನು: “ಕುರುಕುಲೋದ್ವಹ! ಮಾತನಾಡುವವರಲ್ಲಿ ಶ್ರೇಷ್ಠ! ಬ್ರಾಹ್ಮಣ್ಯತ್ವವನ್ನು ಪಡೆಯುವುದು ಬಹಳ ಕಷ್ಟವೆಂದು ನೀನು ನನಗೆ ಹೇಳಿದ ಈ ಮಹದಾಖ್ಯಾನವನ್ನು ಕೇಳಿದೆ.

13031002a ವಿಶ್ವಾಮಿತ್ರೇಣ ಚ ಪುರಾ ಬ್ರಾಹ್ಮಣ್ಯಂ ಪ್ರಾಪ್ತಮಿತ್ಯುತ।
13031002c ಶ್ರೂಯತೇ ವದಸೇ ತಚ್ಚ ದುಷ್ಪ್ರಾಪಮಿತಿ ಸತ್ತಮ।।

ಸತ್ತಮ! ಆದರೆ ಹಿಂದೆ ನೀನು ವಿಶ್ವಾಮಿತ್ರನು ಬ್ರಾಹ್ಮಣ್ಯವನ್ನು ಪಡೆದುಕೊಂಡನು ಎಂದು ಹೇಳಿದ್ದೆ. ಬ್ರಾಹ್ಮಣ್ಯವನ್ನು ಪಡೆಯಲು ಸಾಧ್ಯವಿಲ್ಲ ಎಂದು ನೀನು ಹೇಳಿದುದನ್ನೂ ಕೇಳಿದೆ.

13031003a ವೀತಹವ್ಯಶ್ಚ ರಾಜರ್ಷಿಃ ಶ್ರುತೋ ಮೇ ವಿಪ್ರತಾಂ ಗತಃ।
13031003c ತದೇವ ತಾವದ್ಗಾಂಗೇಯ ಶ್ರೋತುಮಿಚ್ಚಾಮ್ಯಹಂ ವಿಭೋ।।

ವಿಭೋ! ಗಾಂಗೇಯ! ರಾಜರ್ಷಿ ವೀತಹವ್ಯನು ವಿಪ್ರತ್ವವನ್ನು ಪಡೆದನು ಎಂದು ಕೇಳಿದ್ದೇವೆ. ಅದರ ಕುರಿತು ಕೇಳಬಯಸುತ್ತೇನೆ.

13031004a ಸ ಕೇನ ಕರ್ಮಣಾ ಪ್ರಾಪ್ತೋ ಬ್ರಾಹ್ಮಣ್ಯಂ ರಾಜಸತ್ತಮ।
13031004c ವರೇಣ ತಪಸಾ ವಾಪಿ ತನ್ಮೇ ವ್ಯಾಖ್ಯಾತುಮರ್ಹತಿ।।

ರಾಜಸತ್ತಮ! ಅವನು ವರ ಅಥವಾ ತಪಸ್ಸು ಅಥವಾ ಯಾವ ಕರ್ಮದಿಂದ ಬ್ರಾಹ್ಮಣ್ಯತ್ವವನ್ನು ಪಡೆದುಕೊಂಡನು? ಅದನ್ನು ನನಗೆ ಹೇಳಬೇಕು?”

13031005 ಭೀಷ್ಮ ಉವಾಚ।
13031005a ಶೃಣು ರಾಜನ್ಯಥಾ ರಾಜಾ ವೀತಹವ್ಯೋ ಮಹಾಯಶಾಃ।
13031005c ಕ್ಷತ್ರಿಯಃ ಸನ್ಪುನಃ ಪ್ರಾಪ್ತೋ ಬ್ರಾಹ್ಮಣ್ಯಂ ಲೋಕಸತ್ಕೃತಮ್।।

ಭೀಷ್ಮನು ಹೇಳಿದನು: “ರಾಜನ್! ಮಹಾಯಶಸ್ವಿ ರಾಜಾ ವೀತಹವ್ಯನು ಕ್ಷತ್ರಿಯನಾಗಿದ್ದರೂ ಲೋಕಸತ್ಕೃತ ಬ್ರಾಹ್ಮಣ್ಯವನ್ನು ಹೇಗೆ ಪಡೆದನು ಎನ್ನುವುದನ್ನು ಕೇಳು.

13031006a ಮನೋರ್ಮಹಾತ್ಮನಸ್ತಾತ ಪ್ರಜಾಧರ್ಮೇಣ ಶಾಸತಃ।
13031006c ಬಭೂವ ಪುತ್ರೋ ಧರ್ಮಾತ್ಮಾ ಶರ್ಯಾತಿರಿತಿ ವಿಶ್ರುತಃ।।

ಮಗೂ! ಪ್ರಜೆಗಳನ್ನು ಧರ್ಮದಿಂದ ಆಳುತ್ತಿದ್ದ ಮಹಾತ್ಮ ಮನುವಿಗೆ ಧರ್ಮಾತ್ಮ ಶರ್ಯಾತಿಯೆಂಬ ಪುತ್ರನಾದನು.

13031007a ತಸ್ಯಾನ್ವವಾಯೇ ದ್ವೌ ರಾಜನ್ರಾಜಾನೌ ಸಂಬಭೂವತುಃ।
13031007c ಹೇಹಯಸ್ತಾಲಜಂಘಶ್ಚ ವತ್ಸೇಷು ಜಯತಾಂ ವರ।।

ವಿಜಯಿಗಳಲ್ಲಿ ಶ್ರೇಷ್ಠ! ರಾಜನ್! ಅವನ ಕುಲದ ವತ್ಸರಲ್ಲಿ ಇಬ್ಬರು ರಾಜರು ಆದರು: ಹೇಹಯ ಮತ್ತು ತಾಲಜಂಘ.

13031008a ಹೇಹಯಸ್ಯ ತು ಪುತ್ರಾಣಾಂ ದಶಸು ಸ್ತ್ರೀಷು ಭಾರತ।
13031008c ಶತಂ ಬಭೂವ ಪ್ರಖ್ಯಾತಂ ಶೂರಾಣಾಮನಿವರ್ತಿನಾಮ್।।

ಭಾರತ! ಹೇಹಯನ ಹತ್ತು ಪತ್ನಿಯರಲ್ಲಿ ಪ್ರತಿಯೊಬ್ಬರಿಗೂ ನೂರು ಪ್ರಖ್ಯಾತ, ಯುದ್ಧದಿಂದ ಹಿಂದಿರುಗದ ಶೂರ ಮಕ್ಕಳಾದರು.

13031009a ತುಲ್ಯರೂಪಪ್ರಭಾವಾಣಾಂ ವಿದುಷಾಂ ಯುದ್ಧಶಾಲಿನಾಮ್।
13031009c ಧನುರ್ವೇದೇ ಚ ವೇದೇ ಚ ಸರ್ವತ್ರೈವ ಕೃತಶ್ರಮಾಃ।।

ರೂಪ-ಪ್ರಭಾವಗಳಲ್ಲಿ ಒಂದೇ ಸಮನಾಗಿದ್ದ ಅವರು ವಿದುಷರೂ, ಯುದ್ಧಶಾಲಿಗಳೂ, ಧನುರ್ವೇದ, ವೇದ ಮತ್ತು ಎಲ್ಲವುಗಳಲ್ಲಿ ಪಾರಂಗತರಾಗಿದ್ದರು.

13031010a ಕಾಶಿಷ್ವಪಿ ನೃಪೋ ರಾಜನ್ದಿವೋದಾಸಪಿತಾಮಹಃ।
13031010c ಹರ್ಯಶ್ವ ಇತಿ ವಿಖ್ಯಾತೋ ಬಭೂವ ಜಯತಾಂ ವರಃ।।

ರಾಜನ್! ಕಾಶಿಯಲ್ಲಿ ಕೂಡ ದಿವೋದಾಸನ ಪಿತಾಮಹ ಹರ್ಯಶ್ವನೆಂದು ವಿಖ್ಯಾತನಾದ ವಿಜಯಿಗಳಲ್ಲಿ ಶ್ರೇಷ್ಠ ನೃಪನಿದ್ದನು.

13031011a ಸ ವೀತಹವ್ಯದಾಯಾದೈರಾಗತ್ಯ ಪುರುಷರ್ಷಭ।
13031011c ಗಂಗಾಯಮುನಯೋರ್ಮಧ್ಯೇ ಸಂಗ್ರಾಮೇ ವಿನಿಪಾತಿತಃ।।

ಪುರುಷರ್ಷಭ! ವೀತಹವ್ಯ (ಹೇಹಯ) ನ ಮಕ್ಕಳು ಅವನ ಮೇಲೆ ಯುದ್ಧಮಾಡಲು ಗಂಗಾ-ಯಮುನೆಯರ ಮಧ್ಯದಲ್ಲಿ ನಡೆದ ಆ ಸಂಗ್ರಾಮದಲ್ಲಿ ಹರ್ಯಶ್ವನು ಹತನಾದನು.

13031012a ತಂ ತು ಹತ್ವಾ ನರವರಂ ಹೇಹಯಾಸ್ತೇ ಮಹಾರಥಾಃ।
13031012c ಪ್ರತಿಜಗ್ಮುಃ ಪುರೀಂ ರಮ್ಯಾಂ ವತ್ಸಾನಾಮಕುತೋಭಯಾಃ।।

ಆ ನರವರನನ್ನು ಕೊಂದು ಮಹಾರಥ ಹೇಹಯರು ನಿರ್ಭಯರಾಗಿ ವತ್ಸರ ರಮ್ಯ ಪುರಿಗೆ ಹಿಂದಿರುಗಿದರು.

13031013a ಹರ್ಯಶ್ವಸ್ಯ ತು ದಾಯಾದಃ ಕಾಶಿರಾಜೋಽಭ್ಯಷಿಚ್ಯತ।
13031013c ಸುದೇವೋ ದೇವಸಂಕಾಶಃ ಸಾಕ್ಷಾದ್ಧರ್ಮ ಇವಾಪರಃ।।

ಹರ್ಯಶ್ವನ ಮಗನಾದರೋ ಕಾಶಿರಾಜನಾಗಿ ಅಭಿಷಿಕ್ತನಾದನು. ದೇವಸಂಕಾಶನಾದ ಆ ಸುದೇವನು ಸಾಕ್ಷಾತ್ ಇನ್ನೊಬ್ಬ ಧರ್ಮನೋ ಎಂಬಂತಿದ್ದನು.

13031014a ಸ ಪಾಲಯನ್ನೇವ ಮಹೀಂ ಧರ್ಮಾತ್ಮಾ ಕಾಶಿನಂದನಃ।
13031014c ತೈರ್ವೀತಹವ್ಯೈರಾಗತ್ಯ ಯುಧಿ ಸರ್ವೈರ್ವಿನಿರ್ಜಿತಃ।।

ಆ ಧರ್ಮಾತ್ಮಾ ಕಾಶಿನಂದನನು ಮಹಿಯನ್ನು ಪಾಲಿಸುತ್ತಿರಲು ವೀತಹವ್ಯನ ಎಲ್ಲ ಮಕ್ಕಳೂ ಯುದ್ಧದಲ್ಲಿ ಅವನನ್ನೂ ಸೋಲಿಸಿದರು.

13031015a ತಮಪ್ಯಾಜೌ ವಿನಿರ್ಜಿತ್ಯ ಪ್ರತಿಜಗ್ಮುರ್ಯಥಾಗತಮ್।
13031015c ಸೌದೇವಿಸ್ತ್ವಥ ಕಾಶೀಶೋ ದಿವೋದಾಸೋಽಭ್ಯಷಿಚ್ಯತ।।

ಅವನನ್ನು ಗೆದ್ದು ಅವರು ಯಥಾಗತರಾಗಿ ಹಿಂದಿರುಗಿದರು. ಆಗ ಸುದೇವನ ಮಗ ದಿವೋದಾಸನು ಕಾಶೀಶನಾಗಿ ಅಭಿಷಿಕ್ತನಾದನು.

13031016a ದಿವೋದಾಸಸ್ತು ವಿಜ್ಞಾಯ ವೀರ್ಯಂ ತೇಷಾಂ ಮಹಾತ್ಮನಾಮ್।
13031016c ವಾರಾಣಸೀಂ ಮಹಾತೇಜಾ ನಿರ್ಮಮೇ ಶಕ್ರಶಾಸನಾತ್।।

ಮಹಾತೇಜಸ್ವೀ ದಿವೋದಾಸನಾದರೋ ಆ ಮಹಾತ್ಮ ವೀತಹವ್ಯನ ಮಕ್ಕಳ ವೀರ್ಯದ ಕುರಿತು ತಿಳಿದುಕೊಂಡು ಶಕ್ರನ ಶಾಸನದಂತೆ ವಾರಾಣಸೀ ಪುರವನ್ನು ನಿರ್ಮಿಸಿದನು.

13031017a ವಿಪ್ರಕ್ಷತ್ರಿಯಸಂಬಾಧಾಂ ವೈಶ್ಯಶೂದ್ರಸಮಾಕುಲಾಮ್।
13031017c ನೈಕದ್ರವ್ಯೋಚ್ಚಯವತೀಂ ಸಮೃದ್ಧವಿಪಣಾಪಣಾಮ್।।

ವಿಪ್ರ-ಕ್ಷತ್ರಿಯರ ಮತ್ತು ವೈಶ್ಯ-ಶೂದ್ರರ ಸಮಾಕುಲವಾಗಿದ್ದ ಆ ಪುರಿಯ ಭಂಡಾರಗಳಲ್ಲಿ ನಾನಾವಿಧದ ದ್ರವ್ಯಗಳು ತುಂಬಿದ್ದವು. ಅಂಗಡಿ-ಮುಂಗಟ್ಟುಗಳು ಸಮೃದ್ಧವಾಗಿದ್ದವು.

13031018a ಗಂಗಾಯಾ ಉತ್ತರೇ ಕೂಲೇ ವಪ್ರಾಂತೇ ರಾಜಸತ್ತಮ।
13031018c ಗೋಮತ್ಯಾ ದಕ್ಷಿಣೇ ಚೈವ ಶಕ್ರಸ್ಯೇವಾಮರಾವತೀಮ್।।

ರಾಜಸತ್ತಮ! ಶಕ್ರನ ಅಮರಾವತಿಯಂತೆಯೇ ಇದ್ದ ವಾರಣಾಸಿಯು ಗಂಗೆಯ ಉತ್ತರ ತೀರದಿಂದ ಹಿಡಿದು ಗೋಮತಿಯ ದಕ್ಷಿಣ ತೀರದ ವರೆಗೂ ವ್ಯಾಪಿಸಿತ್ತು.

13031019a ತತ್ರ ತಂ ರಾಜಶಾರ್ದೂಲಂ ನಿವಸಂತಂ ಮಹೀಪತಿಮ್।
13031019c ಆಗತ್ಯ ಹೇಹಯಾ ಭೂಯಃ ಪರ್ಯಧಾವಂತ ಭಾರತ।।

ಭಾರತ! ಅಲ್ಲಿ ವಾಸಿಸುತ್ತಿದ್ದ ಮಹೀಪತಿ ರಾಜಶಾರ್ದೂಲನನ್ನು ಹೇಹಯರು ಪುನಃ ಬಂದು ಆಕ್ರಮಣಿಸಿದರು.

13031020a ಸ ನಿಷ್ಪತ್ಯ ದದೌ ಯುದ್ಧಂ ತೇಭ್ಯೋ ರಾಜಾ ಮಹಾಬಲಃ।
13031020c ದೇವಾಸುರಸಮಂ ಘೋರಂ ದಿವೋದಾಸೋ ಮಹಾದ್ಯುತಿಃ।।

ಮಹಾಬಲ ಮಹಾದ್ಯುತಿ ರಾಜಾ ದಿವೋದಾಸನು ಹೊರಬಂದು ಅವರಿಗೆ ದೇವಾಸುರಸಮ ಘೋರ ಯುದ್ಧವನ್ನೇ ನೀಡಿದನು.

13031021a ಸ ತು ಯುದ್ಧೇ ಮಹಾರಾಜ ದಿನಾನಾಂ ದಶತೀರ್ದಶ।
13031021c ಹತವಾಹನಭೂಯಿಷ್ಠಸ್ತತೋ ದೈನ್ಯಮುಪಾಗಮತ್।।

ಮಹಾರಾಜ! ನೂರು ದಿನಗಳು ಸತತವಾಗಿ ನಡೆದ ಆ ಯುದ್ಧದಲ್ಲಿ ದಿವೋದಾಸನು ವಾಹನಗಳನ್ನು ಕಳೆದುಕೊಂಡು ದೈನ್ಯಾವಸ್ಥೆಗೆ ಬಂದನು.

13031022a ಹತಯೋಧಸ್ತತೋ ರಾಜನ್ ಕ್ಷೀಣಕೋಶಶ್ಚ ಭೂಮಿಪಃ।
13031022c ದಿವೋದಾಸಃ ಪುರೀಂ ಹಿತ್ವಾ ಪಲಾಯನಪರೋಽಭವತ್।।

ರಾಜನ್! ಯೋಧರನ್ನು ಕಳೆದುಕೊಂಡ ಮತ್ತು ಕೋಶವನ್ನೂ ಬರಿದುಮಾಡಿಕೊಂಡ ಭೂಮಿಪ ದಿವೋದಾಸನು ವಾರಣಾಸೀ ಪುರಿಯನ್ನು ತ್ಯಜಿಸಿ ಪಲಾಯನಪರನಾದನು.

13031023a ಸ ತ್ವಾಶ್ರಮಮುಪಾಗಮ್ಯ ಭರದ್ವಾಜಸ್ಯ ಧೀಮತಃ।
13031023c ಜಗಾಮ ಶರಣಂ ರಾಜಾ ಕೃತಾಂಜಲಿರರಿಂದಮ।।

ಅರಿಂದಮ! ಆ ರಾಜನು ಧೀಮತ ಭರದ್ವಾಜನ ಆಶ್ರಮಕ್ಕೆ ಬಂದು ಕೈಮುಗಿದು ಶರಣು ಹೊಕ್ಕನು.

113031024 ರಾಜೋವಾಚ।
13031024a ಭಗವನ್ವೈತಹವ್ಯೈರ್ಮೇ ಯುದ್ಧೇ ವಂಶಃ ಪ್ರಣಾಶಿತಃ।
13031024c ಅಹಮೇಕಃ ಪರಿದ್ಯೂನೋ ಭವಂತಂ ಶರಣಂ ಗತಃ।।

ರಾಜನು ಹೇಳಿದನು: “ಭಗವನ್! ವೀತಹವ್ಯನ ಮಕ್ಕಳು ಯುದ್ಧದಲ್ಲಿ ನನ್ನ ವಂಶವನ್ನು ನಾಶಮಾಡಿದರು. ನಾನೊಬ್ಬನೇ ಉಳಿದುಕೊಂಡು ನಿಮ್ಮ ಶರಣು ಬಂದಿದ್ದೇನೆ.

13031025a ಶಿಷ್ಯಸ್ನೇಹೇನ ಭಗವನ್ಸ ಮಾಂ ರಕ್ಷಿತುಮರ್ಹಸಿ।
13031025c ನಿಃಶೇಷೋ ಹಿ ಕೃತೋ ವಂಶೋ ಮಮ ತೈಃ ಪಾಪಕರ್ಮಭಿಃ।।

ಭಗವನ್! ಶಿಷ್ಯಸ್ನೇಹದಿಂದ ನನ್ನನ್ನು ರಕ್ಷಿಸಬೇಕು. ಆ ಪಾಪಕರ್ಮಿಗಳು ನನ್ನ ವಂಶವನ್ನೇ ನಿಃಶೇಷವನ್ನಾಗಿ ಮಾಡಿಬಿಟ್ಟರು!”

13031026a ತಮುವಾಚ ಮಹಾಭಾಗೋ ಭರದ್ವಾಜಃ ಪ್ರತಾಪವಾನ್।
13031026c ನ ಭೇತವ್ಯಂ ನ ಭೇತವ್ಯಂ ಸೌದೇವ ವ್ಯೇತು ತೇ ಭಯಮ್।।

ಅವನಿಗೆ ಮಹಾಭಾಗ ಪ್ರತಾಪವಾನ್ ಭರದ್ವಾಜನು ಹೇಳಿದನು: “ಸೌದೇವ! ಹೆದರಬೇಡ! ಹೆದರಬೇಡ! ನಿನ್ನ ಭಯವನ್ನು ಕಳೆದುಕೋ!

13031027a ಅಹಮಿಷ್ಟಿಂ ಕರೋಮ್ಯದ್ಯ ಪುತ್ರಾರ್ಥಂ ತೇ ವಿಶಾಂ ಪತೇ।
13031027c ವೈತಹವ್ಯಸಹಸ್ರಾಣಿ ಯಥಾ ತ್ವಂ ಪ್ರಸಹಿಷ್ಯಸಿ।।

ವಿಶಾಂಪತೇ! ನಾನು ನಿನ್ನ ಪುತ್ರನಿಗಾಗಿ ಇಂದು ಇಷ್ಟಿಯನ್ನು ಮಾಡುತ್ತೇನೆ. ಅವನಿಂದ ನೀನು ವೀತಹವ್ಯನ ಸಹಸ್ರ ಪುತ್ರರನ್ನು ಸಂಹರಿಸುತ್ತೀಯೆ.”

13031028a ತತ ಇಷ್ಟಿಂ ಚಕಾರರ್ಷಿಸ್ತಸ್ಯ ವೈ ಪುತ್ರಕಾಮಿಕೀಮ್।
13031028c ಅಥಾಸ್ಯ ತನಯೋ ಜಜ್ಞೇ ಪ್ರತರ್ದನ ಇತಿ ಶ್ರುತಃ।।

ಆಗ ಆ ಋಷಿಯು ಅವನಿಗೆ ಪುತ್ರಕಾಮೇಷ್ಟಿಯನ್ನು ಮಾಡಿಸಿದನು. ಅದರಿಂದ ಅವನಿಗೆ ಪ್ರತರ್ದನ ಎಂದು ವಿಖ್ಯಾತ ಮಗನು ಜನಿಸಿದನು.

13031029a ಸ ಜಾತಮಾತ್ರೋ ವವೃಧೇ ಸಮಾಃ ಸದ್ಯಸ್ತ್ರಯೋದಶ।
13031029c ವೇದಂ ಚಾಧಿಜಗೇ ಕೃತ್ಸ್ನಂ ಧನುರ್ವೇದಂ ಚ ಭಾರತ।।

ಹುಟ್ಟಿದ ಕೂಡಲೇ ಅವನು ಹದಿಮೂರು ವರ್ಷದವನಾಗಿ ಬೆಳೆದನು. ಭಾರತ! ಹುಟ್ಟುತ್ತಲೇ ಅವನಿಗೆ ಸರ್ವ ವೇದಗಳೂ ಧನುರ್ವೇದವೂ ಅಧಿಗತವಾದವು.

13031030a ಯೋಗೇನ ಚ ಸಮಾವಿಷ್ಟೋ ಭರದ್ವಾಜೇನ ಧೀಮತಾ।
13031030c ತೇಜೋ ಲೌಕ್ಯಂ ಸ ಸಂಗೃಹ್ಯ ತಸ್ಮಿನ್ದೇಶೇ ಸಮಾವಿಶತ್।।

ಧೀಮತ ಭರದ್ವಾಜನು ಅವನನ್ನು ಯೋಗಶಕ್ತಿಯಿಂದಲೂ ಸಂಪನ್ನನನ್ನಾಗಿ ಮಾಡಿದನು. ಅವನ ಶರೀರದಲ್ಲಿ ಜಗತ್ತಿನ ತೇಜಸ್ಸುಗಳನ್ನೂ ಸಮಾವೇಶಗೊಳಿಸಿದನು.

13031031a ತತಃ ಸ ಕವಚೀ ಧನ್ವೀ ಬಾಣೀ ದೀಪ್ತ ಇವಾನಲಃ।
13031031c ಪ್ರಯಯೌ ಸ ಧನುರ್ಧುನ್ವನ್ವಿವರ್ಷುರಿವ ತೋಯದಃ।।

ಅನಂತರ ಕವಚ-ಧನುಸ್ಸು-ಬಾಣಗಳನ್ನು ಧರಿಸಿ ಅಗ್ನಿಯಂತೆ ಬೆಳಗುತ್ತಿದ್ದ ಅವನು ಮಳೆಸುರಿಸುವ ಮೋಡದಂತೆ ಧನುಸ್ಸನ್ನು ಟೇಂಕರಿಸುತ್ತಾ ಹೊರಟನು.

13031032a ತಂ ದೃಷ್ಟ್ವಾ ಪರಮಂ ಹರ್ಷಂ ಸುದೇವತನಯೋ ಯಯೌ।
13031032c ಮೇನೇ ಚ ಮನಸಾ ದಗ್ಧಾನ್ವೈತಹವ್ಯಾನ್ಸ ಪಾರ್ಥಿವಃ।।

ಅವನನ್ನು ನೋಡಿ ಸುದೇವತನಯನು ಪರಮ ಹರ್ಷಿತನಾದನು. ಆ ಪಾರ್ಥಿವನು ವೀತಹವ್ಯನ ಮಕ್ಕಳು ಸುಟ್ಟುಹೋದರೆಂದೇ ಮನಸ್ಸಿನಲ್ಲಿ ಅಂದುಕೊಂಡನು.

13031033a ತತಸ್ತಂ ಯೌವರಾಜ್ಯೇನ ಸ್ಥಾಪಯಿತ್ವಾ ಪ್ರತರ್ದನಮ್।
13031033c ಕೃತಕೃತ್ಯಂ ತದಾತ್ಮಾನಂ ಸ ರಾಜಾ ಅಭ್ಯನಂದತ।।

ಪ್ರತರ್ದನನನ್ನು ಯುವರಾಜನನ್ನಾಗಿ ಸ್ಥಾಪಿಸಿ ಆ ರಾಜನು ತನ್ನನ್ನು ತಾನೇ ಕೃತಕೃತ್ಯನಾದೆನೆಂದು ಅಭಿನಂದಿಸಿಕೊಂಡನು.

13031034a ತತಸ್ತು ವೈತಹವ್ಯಾನಾಂ ವಧಾಯ ಸ ಮಹೀಪತಿಃ।
13031034c ಪುತ್ರಂ ಪ್ರಸ್ಥಾಪಯಾಮಾಸ ಪ್ರತರ್ದನಮರಿಂದಮಮ್।।

ಅನಂತರ ಆ ಮಹೀಪತಿಯು ವೀತಹವ್ಯನ ಮಕ್ಕಳ ವಧೆಗಾಗಿ ಅರಿಂದಮ ಪುತ್ರ ಪ್ರತರ್ದನನನ್ನು ಹೊರಡಿಸಿದನು.

13031035a ಸರಥಃ ಸ ತು ಸಂತೀರ್ಯ ಗಂಗಾಮಾಶು ಪರಾಕ್ರಮೀ।
13031035c ಪ್ರಯಯೌ ವೀತಹವ್ಯಾನಾಂ ಪುರೀಂ ಪರಪುರಂಜಯಃ।।

ಪರಾಕ್ರಮೀ ಪರಪುರಂಜಯ ಪ್ರತರ್ದನನು ರಥಾರೂಡನಾಗಿಯೇ ಗಂಗೆಯನ್ನು ದಾಟಿ ವೀತಹವ್ಯರ ಪುರಿಗೆ ಹೋದನು.

13031036a ವೈತಹವ್ಯಾಸ್ತು ಸಂಶ್ರುತ್ಯ ರಥಘೋಷಂ ಸಮುದ್ಧತಮ್।
13031036c ನಿರ್ಯಯುರ್ನಗರಾಕಾರೈ ರಥೈಃ ಪರರಥಾರುಜೈಃ।।

ಮೇಲೆದ್ದು ಕೇಳಿಬರುತ್ತಿದ್ದ ಆ ರಥಘೋಷವನ್ನು ಕೇಳಿ ವೀತಹವ್ಯನ ಮಕ್ಕಳು, ಶತ್ರುರಥಗಳನ್ನು ನಾಶಪಡಿಸುವ ನಗರಾಕಾರದ ರಥಗಳಲ್ಲಿ ಕುಳಿತು ಹೊರಬಂದರು.

13031037a ನಿಷ್ಕ್ರಮ್ಯ ತೇ ನರವ್ಯಾಘ್ರಾ ದಂಶಿತಾಶ್ಚಿತ್ರಯೋಧಿನಃ।
13031037c ಪ್ರತರ್ದನಂ ಸಮಾಜಘ್ನುಃ ಶರವರ್ಷೈರುದಾಯುಧಾಃ।।

ಕವಚಧಾರಿಗಳೂ ಚಿತ್ರಯೋಧಿಗಳೂ ಆಗಿದ್ದ ಆ ನರವ್ಯಾಘ್ರರು ನಗರದಿಂದ ಹೊರಬಂದು ಶರವರ್ಶಗಳಿಂದಲೂ ಇತರ ಆಯುಧಗಳಿಂದಲೂ ಆಕ್ರಮಣಿಸಿದರು.

13031038a ಅಸ್ತ್ರೈಶ್ಚ ವಿವಿಧಾಕಾರೈ ರಥೌಘೈಶ್ಚ ಯುಧಿಷ್ಠಿರ।
13031038c ಅಭ್ಯವರ್ಷಂತ ರಾಜಾನಂ ಹಿಮವಂತಮಿವಾಂಬುದಾಃ।।

ಯುಧಿಷ್ಠಿರ! ವಿವಿಧಾಕಾರದ ಅಸ್ತ್ರಗಳಿಂದ ಮತ್ತು ರಥೌಘಗಳಿಂದ ಹಿಮವಂತನನ್ನು ಮೋಡಗಳು ಹೇಗೋ ಹಾಗೆ ರಾಜನ ಮೇಲೆ ಸುರಿಸಿದರು.

13031039a ಅಸ್ತ್ರೈರಸ್ತ್ರಾಣಿ ಸಂವಾರ್ಯ ತೇಷಾಂ ರಾಜಾ ಪ್ರತರ್ದನಃ।
13031039c ಜಘಾನ ತಾನ್ಮಹಾತೇಜಾ ವಜ್ರಾನಲಸಮೈಃ ಶರೈಃ।।

ಅವರ ಅಸ್ತ್ರಗಳನ್ನು ಅಸ್ತ್ರಗಳಿಂದಲೇ ತಡೆದು ರಾಜಾ ಪ್ರತರ್ದನನು ವಜ್ರಾನಲಸಮ ಶರಗಳಿಂದ ಆ ಮಹಾತೇಜಸ್ವಿಗಳನ್ನು ಸಂಹರಿಸಿದನು.

13031040a ಕೃತ್ತೋತ್ತಮಾಂಗಾಸ್ತೇ ರಾಜನ್ಭಲ್ಲೈಃ ಶತಸಹಸ್ರಶಃ।
13031040c ಅಪತನ್ರುಧಿರಾರ್ದ್ರಾಂಗಾ ನಿಕೃತ್ತಾ ಇವ ಕಿಂಶುಕಾಃ।।

ಭಲ್ಲೆಗಳಿಂದ ಅವರ ಶಿರಗಳು ನೂರಾರು ಸಹಸ್ರಾರು ಚೂರುಗಳಾಗಿ ರಕ್ತಸಿಕ್ತಗೊಂಡು ಕಿಂಶುಕ ಪುಷ್ಪಗಳಂತೆ ಉದುರಿದವು.

13031041a ಹತೇಷು ತೇಷು ಸರ್ವೇಷು ವೀತಹವ್ಯಃ ಸುತೇಷ್ವಥ।
13031041c ಪ್ರಾದ್ರವನ್ನಗರಂ ಹಿತ್ವಾ ಭೃಗೋರಾಶ್ರಮಮಪ್ಯುತ।।

ತನ್ನ ಮಕ್ಕಳೆಲ್ಲರೂ ಹತರಾಗಲು ವೀತಹವ್ಯನು ನಗರವನ್ನು ತೊರೆದು ಓಡಿಹೋಗಿ ಭೃಗುವಿನ ಆಶ್ರಮವನ್ನು ತಲುಪಿದನು.

13031042a ಯಯೌ ಭೃಗುಂ ಚ ಶರಣಂ ವೀತಹವ್ಯೋ ನರಾಧಿಪಃ।
13031042c ಅಭಯಂ ಚ ದದೌ ತಸ್ಮೈ ರಾಜ್ಞೇ ರಾಜನ್ಭೃಗುಸ್ತಥಾ।
13031042e ತತೋ ದದಾವಾಸನಂ ಚ ತಸ್ಮೈ ಶಿಷ್ಯೋ ಭೃಗೋಸ್ತದಾ।।

ರಾಜನ್! ನರಾಧಿಪ ವೀತಹವ್ಯನು ಭೃಗುವಿನ ಶರಣು ಹೊಕ್ಕನು. ಭೃಗುವು ಆಗ ಆ ರಾಜನಿಗೆ ಅಭಯವನ್ನಿತ್ತನು. ಭೃಗುವು ಅವನನ್ನು ಶಿಷ್ಯನನ್ನಾಗಿಸಿಕೊಂಡು ಅಲ್ಲಿಯೇ ಆಶ್ರಯವನ್ನಿತ್ತನು.

13031043a ಅಥಾನುಪದಮೇವಾಶು ತತ್ರಾಗಚ್ಚತ್ಪ್ರತರ್ದನಃ।
13031043c ಸ ಪ್ರಾಪ್ಯ ಚಾಶ್ರಮಪದಂ ದಿವೋದಾಸಾತ್ಮಜೋಽಬ್ರವೀತ್।।

ಅವನನ್ನೇ ಹಿಂಬಾಲಿಸಿ ಬಂದ ಪ್ರತರ್ದನನು ಅಲ್ಲಿಗೆ ಹೋದನು. ಆಶ್ರಮಪದವನ್ನು ತಲುಪಿ ದಿವೋದಾಸನ ಮಗನು ಕೂಗಿ ಕೇಳಿದನು:

13031044a ಭೋ ಭೋಃ ಕೇಽತ್ರಾಶ್ರಮೇ ಸಂತಿ ಭೃಗೋಃ ಶಿಷ್ಯಾ ಮಹಾತ್ಮನಃ।
13031044c ದ್ರಷ್ಟುಮಿಚ್ಚೇ ಮುನಿಮಹಂ ತಸ್ಯಾಚಕ್ಷತ ಮಾಮಿತಿ।।

“ಭೋ! ಭೋ! ಈ ಆಶ್ರಮದಲ್ಲಿ ಮಹಾತ್ಮ ಭೃಗುವಿನ ಶಿಷ್ಯರು ಯಾರಿದ್ದೀರಿ? ನಾನು ಮುನಿಯನ್ನು ನೋಡಲು ಇಚ್ಛಿಸುತ್ತೇನೆ. ನಾನೆಂದು ಅವನಿಗೆ ಹೇಳಿರಿ!”

13031045a ಸ ತಂ ವಿದಿತ್ವಾ ತು ಭೃಗುರ್ನಿಶ್ಚಕ್ರಾಮಾಶ್ರಮಾತ್ತದಾ।
13031045c ಪೂಜಯಾಮಾಸ ಚ ತತೋ ವಿಧಿನಾ ಪರಮೇಣ ಹ।।

ಅವನು ಬಂದಿದ್ದಾನೆಂದು ತಿಳಿದ ಭೃಗುವು ಆಶ್ರಮದಿಂದ ಹೊರಬಂದು ಅವನನ್ನು ಪರಮ ವಿಧಿಯಿಂದ ಪೂಜಿಸಿದನು.

13031046a ಉವಾಚ ಚೈನಂ ರಾಜೇಂದ್ರ ಕಿಂ ಕಾರ್ಯಮಿತಿ ಪಾರ್ಥಿವಮ್।
13031046c ಸ ಚೋವಾಚ ನೃಪಸ್ತಸ್ಮೈ ಯದಾಗಮನಕಾರಣಮ್।।

ಮತ್ತು “ರಾಜೇಂದ್ರ! ಏನು ಕಾರ್ಯವಿದೆ?” ಎಂದು ಪಾರ್ಥಿವನನ್ನು ಕೇಳಿದನು. ಆಗ ನೃಪನು ಅವನಿಗೆ ಬಂದಿರುವ ಕಾರಣವನ್ನು ಹೇಳಿದನು:

13031047a ಅಯಂ ಬ್ರಹ್ಮನ್ನಿತೋ ರಾಜಾ ವೀತಹವ್ಯೋ ವಿಸರ್ಜ್ಯತಾಮ್।
13031047c ಅಸ್ಯ ಪುತ್ರೈರ್ಹಿ ಮೇ ಬ್ರಹ್ಮನ್ಕೃತ್ಸ್ನೋ ವಂಶಃ ಪ್ರಣಾಶಿತಃ।
13031047e ಉತ್ಸಾದಿತಶ್ಚ ವಿಷಯಃ ಕಾಶೀನಾಂ ರತ್ನಸಂಚಯಃ।।

“ಬ್ರಹ್ಮನ್! ಇಲ್ಲಿಗೆ ಆಗಮಿಸಿರುವ ರಾಜಾ ವೀತಹವ್ಯನನ್ನು ಹೊರಹಾಕಿರಿ. ಬ್ರಹ್ಮನ್! ಇವನ ಪುತ್ರರೇ ನನ್ನ ವಂಶವೆಲ್ಲವನ್ನೂ ನಾಶಪಡಿಸಿದರು. ಕಾಶೀ ರಾಜ್ಯ ಮತ್ತು ರತ್ನಸಂಚಯಗಳೆಲ್ಲವೂ ಇವರಿಂದ ಧ್ವಂಸವಾಯಿತು.

13031048a ಏತಸ್ಯ ವೀರ್ಯದೃಪ್ತಸ್ಯ ಹತಂ ಪುತ್ರಶತಂ ಮಯಾ।
13031048c ಅಸ್ಯೇದಾನೀಂ ವಧಾದ್ಬ್ರಹ್ಮನ್ಭವಿಷ್ಯಾಮ್ಯನೃಣಃ ಪಿತುಃ।।

ಬ್ರಹ್ಮನ್! ಇವನ ಬಲದರ್ಪಿತ ನೂರು ಮಕ್ಕಳನ್ನು ನಾನೀಗಲೇ ಸಂಹರಿಸಿದ್ದೇನೆ. ಇವನನ್ನೂ ಸಂಹರಿಸಿದರೆ ನನ್ನ ತಂದೆಯ ಋಣದಿಂದ ಮುಕ್ತನಾಗುತ್ತೇನೆ.”

13031049a ತಮುವಾಚ ಕೃಪಾವಿಷ್ಟೋ ಭೃಗುರ್ಧರ್ಮಭೃತಾಂ ವರಃ।
13031049c ನೇಹಾಸ್ತಿ ಕ್ಷತ್ರಿಯಃ ಕಶ್ಚಿತ್ಸರ್ವೇ ಹೀಮೇ ದ್ವಿಜಾತಯಃ।।

ಆಗ ಕೃಪಾವಿಷ್ಟನಾದ ಧರ್ಮಭೃತರಲ್ಲಿ ಶ್ರೇಷ್ಠ ಭೃಗುವು ಅವನಿಗೆ ಹೇಳಿದನು: “ಇಲ್ಲಿ ಕ್ಷತ್ರಿಯರ್ಯಾರೂ ಇಲ್ಲ. ಇಲ್ಲಿರುವವರೆಲ್ಲರೂ ಬ್ರಾಹ್ಮಣರೇ ಆಗಿದ್ದಾರೆ!”

13031050a ಏವಂ ತು ವಚನಂ ಶ್ರುತ್ವಾ ಭೃಗೋಸ್ತಥ್ಯಂ ಪ್ರತರ್ದನಃ।
13031050c ಪಾದಾವುಪಸ್ಪೃಶ್ಯ ಶನೈಃ ಪ್ರಹಸನ್ವಾಕ್ಯಮಬ್ರವೀತ್।।

ಭೃಗುವಿನ ಆ ತಥ್ಯ ವಚನವನ್ನು ಕೇಳಿ ಪ್ರತರ್ದನನು ಮೆಲ್ಲನೇ ಅವನ ಪಾದಗಳನ್ನು ಮುಟ್ಟಿ ನಗುತ್ತಾ ಈ ಮಾತನ್ನಾಡಿದನು:

13031051a ಏವಮಪ್ಯಸ್ಮಿ ಭಗವನ್ ಕೃತಕೃತ್ಯೋ ನ ಸಂಶಯಃ।
13031051c ಯದೇಷ ರಾಜಾ ವೀರ್ಯೇಣ ಸ್ವಜಾತಿಂ ತ್ಯಾಜಿತೋ ಮಯಾ।।

“ಭಗವನ್! ಇದು ಹಾಗೆಯೇ ಆಗಿದ್ದರೆ ನಾನು ನಿಸ್ಸಂಶಯವಾಗಿಯೂ ಕೃತಕೃತ್ಯನಾಗಿದ್ದೇನೆ. ನನ್ನ ವೀರ್ಯದಿಂದ ಈ ರಾಜನು ತನ್ನ ಜಾತಿಯನ್ನೇ ತ್ಯಜಿಸುವಂತೆ ಮಾಡಿದೆನು!

13031052a ಅನುಜಾನೀಹಿ ಮಾಂ ಬ್ರಹ್ಮನ್ಧ್ಯಾಯಸ್ವ ಚ ಶಿವೇನ ಮಾಮ್।
13031052c ತ್ಯಾಜಿತೋ ಹಿ ಮಯಾ ಜಾತಿಮೇಷ ರಾಜಾ ಭೃಗೂದ್ವಹ।।

ಭೃಗೂದ್ವಹ! ಬ್ರಹ್ಮನ್! ನನಗೆ ಅನುಮತಿಯನ್ನು ನೀಡಿ ಮತ್ತು ಮಂಗಳವಾಗಲೆಂದು ಹರಸಿ. ನನ್ನಿಂದಾಗಿ ಈ ರಾಜನು ತನ್ನ ಜಾತಿಯನ್ನೇ ತೊರೆದಂತಾಯಿತು!”

13031053a ತತಸ್ತೇನಾಭ್ಯನುಜ್ಞಾತೋ ಯಯೌ ರಾಜಾ ಪ್ರತರ್ದನಃ।
13031053c ಯಥಾಗತಂ ಮಹಾರಾಜ ಮುಕ್ತ್ವಾ ವಿಷಮಿವೋರಗಃ।।

ಮಹಾರಾಜ! ಅನಂತರ ಅವನಿಂದ ಅನುಮತಿಯನ್ನು ಪಡೆದು ರಾಜಾ ಪ್ರತರ್ದನನು ವಿಷವನ್ನು ಕಕ್ಕಿದ ಹಾವಿನಂತೆ ಕ್ರೋಧವನ್ನು ತ್ಯಜಿಸಿ ಬಂದ ದಾರಿಯನ್ನೇ ಹಿಡಿದು ಹೊರಟುಹೋದನು.

13031054a ಭೃಗೋರ್ವಚನಮಾತ್ರೇಣ ಸ ಚ ಬ್ರಹ್ಮರ್ಷಿತಾಂ ಗತಃ।
13031054c ವೀತಹವ್ಯೋ ಮಹಾರಾಜ ಬ್ರಹ್ಮವಾದಿತ್ವಮೇವ ಚ।।

ಮಹಾರಾಜ! ಭೃಗುವಿನ ವಚನಮಾತ್ರದಿಂದ ವೀತಹವ್ಯನು ಬ್ರಹ್ಮರ್ಷಿಯಾದನು. ಬ್ರಹ್ಮವಾದಿಯೂ ಆದನು.

13031055a ತಸ್ಯ ಗೃತ್ಸಮದಃ ಪುತ್ರೋ ರೂಪೇಣೇಂದ್ರ ಇವಾಪರಃ।
13031055c ಶಕ್ರಸ್ತ್ವಮಿತಿ ಯೋ ದೈತ್ಯೈರ್ನಿಗೃಹೀತಃ ಕಿಲಾಭವತ್।।

ವೀತಹವ್ಯನಿಗೆ ಗೃತ್ಸಮದನೆಂಬ ಪುತ್ರನಾದನು. ಅವನು ಇನ್ನೊಬ್ಬ ಇಂದ್ರನಂತೆಯೇ ರೂಪವಂತನಾಗಿದ್ದನು. ಅವನು ಇಂದ್ರನೆಂದೇ ತಿಳಿದು ದೈತ್ಯರು ಅವನನ್ನು ಹಿಡಿದಿಟ್ಟಿದ್ದರಲ್ಲವೇ?

13031056a ಋಗ್ವೇದೇ ವರ್ತತೇ ಚಾಗ್ರ್ಯಾ ಶ್ರುತಿರತ್ರ ವಿಶಾಂ ಪತೇ।
13031056c ಯತ್ರ ಗೃತ್ಸಮದೋ ಬ್ರಹ್ಮನ್ಬ್ರಾಹ್ಮಣೈಃ ಸ ಮಹೀಯತೇ।।

ವಿಶಾಂಪತೇ! ಋಗ್ವೇದದಲ್ಲಿ ಇವನ ಕುರಿತು ಒಂದು ಶ್ರೇಷ್ಠ ಋಕ್ಕೇ ಇದೆ. ಇದರಂತೆ ಬ್ರಹ್ಮನ್ ಗೃತ್ಸಮದನು ಬ್ರಾಹ್ಮಣ್ಯದಿಂದ ಮೆರೆಯುತ್ತಿದ್ದನು.

13031057a ಸ ಬ್ರಹ್ಮಚಾರೀ ವಿಪ್ರರ್ಷಿಃ ಶ್ರೀಮಾನ್ ಗೃತ್ಸಮದೋಽಭವತ್।
13031057c ಪುತ್ರೋ ಗೃತ್ಸಮದಸ್ಯಾಪಿ ಸುಚೇತಾ ಅಭವದ್ದ್ವಿಜಃ।।

ಶ್ರೀಮಾನ್ ಗೃತ್ಸಮದನು ಬ್ರಹ್ಮಚಾರಿಯೂ ವಿಪ್ರರ್ಷಿಯೂ ಆಗಿದ್ದನು. ಗೃತ್ಸಮದನಿಗೆ ದ್ವಿಜ ಸುಚೇತನು ಪುತ್ರನಾದನು.

13031058a ವರ್ಚಾಃ ಸುತೇಜಸಃ ಪುತ್ರೋ ವಿಹವ್ಯಸ್ತಸ್ಯ ಚಾತ್ಮಜಃ।
13031058c ವಿಹವ್ಯಸ್ಯ ತು ಪುತ್ರಸ್ತು ವಿತತ್ಯಸ್ತಸ್ಯ ಚಾತ್ಮಜಃ।।

ಸುಚೇತನ ಮಗನು ಮಹಾತೇಜಸ್ವಿ ವರ್ಚಸನು. ವರ್ಚಸನ ಮಗನು ವಿಹವ್ಯನು. ವಿಹವ್ಯನ ಪುತ್ರನು ವಿತತ್ಯನು.

13031059a ವಿತತ್ಯಸ್ಯ ಸುತಃ ಸತ್ಯಃ ಸಂತಃ ಸತ್ಯಸ್ಯ ಚಾತ್ಮಜಃ।
13031059c ಶ್ರವಾಸ್ತಸ್ಯ ಸುತಶ್ಚರ್ಷಿಃ ಶ್ರವಸಶ್ಚಾಭವತ್ತಮಃ।।

ವಿತತ್ಯನ ಮಗನು ಸತ್ಯನು. ಸಂತನು ಸತ್ಯನ ಮಗನು. ಶ್ರವಾಸನು ಸಂತನ ಮಗನು. ತಮಸನು ಆ ಋಷಿಯ ಮಗನಾದನು.

13031060a ತಮಸಶ್ಚ ಪ್ರಕಾಶೋಽಭೂತ್ತನಯೋ ದ್ವಿಜಸತ್ತಮಃ।
13031060c ಪ್ರಕಾಶಸ್ಯ ಚ ವಾಗಿಂದ್ರೋ ಬಭೂವ ಜಯತಾಂ ವರಃ।।

ತಮಸನ ಮಗನು ದ್ವಿಜಸತ್ತಮ ಪ್ರಕಾಶನು. ಪ್ರಕಾಶನ ಮಗ ವಾಗೀಂದ್ರನು ಜಯಶಾಲಿಗಳಲ್ಲಿ ಶ್ರೇಷ್ಠನಾಗಿದ್ದನು.

13031061a ತಸ್ಯಾತ್ಮಜಶ್ಚ ಪ್ರಮತಿರ್ವೇದವೇದಾಂಗಪಾರಗಃ।
13031061c ಘೃತಾಚ್ಯಾಂ ತಸ್ಯ ಪುತ್ರಸ್ತು ರುರುರ್ನಾಮೋದಪದ್ಯತ।।

ವೇದವೇದಾಂಗ ಪಾರಂಗತ ಪ್ರಮತಿಯು ಅವನ ಮಗನು. ಘೃತಾಚಿಯಲ್ಲಿ ಅವನಿಗೆ ರುರು ಎಂಬ ಹೆಸರಿನ ಪುತ್ರನಾದನು.

13031062a ಪ್ರಮದ್ವರಾಯಾಂ ತು ರುರೋಃ ಪುತ್ರಃ ಸಮುದಪದ್ಯತ।
13031062c ಶುನಕೋ ನಾಮ ವಿಪ್ರರ್ಷಿರ್ಯಸ್ಯ ಪುತ್ರೋಽಥ ಶೌನಕಃ।।

ಪ್ರಮದ್ವರೆಯಲ್ಲಿ ರುರುವಿಗೆ ಶುನಕ ಎಂಬ ಹೆಸರಿನ ಪುತ್ರನಾದನು. ಆ ವಿಪ್ರರ್ಷಿಯ ಪುತ್ರನೇ ಶೌನಕನು.

13031063a ಏವಂ ವಿಪ್ರತ್ವಮಗಮದ್ವೀತಹವ್ಯೋ ನರಾಧಿಪಃ।
13031063c ಭೃಗೋಃ ಪ್ರಸಾದಾದ್ರಾಜೇಂದ್ರ ಕ್ಷತ್ರಿಯಃ ಕ್ಷತ್ರಿಯರ್ಷಭ।।

ರಾಜೇಂದ್ರ! ಕ್ಷತ್ರಿಯರ್ಷಭ! ಹೀಗೆ ಭೃಗುವಿನ ಪ್ರಸಾದದಿಂದ ನರಾಧಿಪ ವೀತಹವ್ಯನು ವಿಪ್ರತ್ವವನ್ನು ಪಡೆದುಕೊಂಡನು.

13031064a ತಥೈವ ಕಥಿತೋ ವಂಶೋ ಮಯಾ ಗಾರ್ತ್ಸಮದಸ್ತವ।
13031064c ವಿಸ್ತರೇಣ ಮಹಾರಾಜ ಕಿಮನ್ಯದನುಪೃಚ್ಚಸಿ।।

ಹಾಗೆಯೇ ಗಾರ್ತ್ಸಮದನ ವಂಶವನ್ನೂ ವಿಸ್ತಾರವಾಗಿ ಹೇಳಿದ್ದೇನೆ. ಮಹಾರಾಜ! ಬೇರೆ ಏನನ್ನು ಕೇಳಬಯಸುತ್ತೀಯೆ?”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ವೀತಹವ್ಯೋಪಖ್ಯಾನಂ ನಾಮ ಏಕತ್ರಿಂಶೋಽಧ್ಯಾಯಃ।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ವೀತಹವ್ಯೋಪಾಖ್ಯಾನ ಎನ್ನುವ ಮೂವತ್ತೊಂದನೇ ಅಧ್ಯಾಯವು.


  1. ಇದಕ್ಕೆ ಮೊದಲು ಈ ಅಧಿಕ ಶ್ಲೋಕವಿದೆ: ಭಾರದ್ವಾಜ ಉವಾಚ। ಕಿಮಾಗಮನಕೃತ್ಯಂ ತೇ ಸರ್ವಂ ಪ್ರಬ್ರೂಹಿ ಮೇ ನೃಪ। ಯತ್ತೇ ಪ್ರಿಯಂ ತತ್ಕರಿಷ್ಯೇ ನ ಮೇಽತ್ರಾಸ್ತಿ ವಿಚಾರಣಾ।। (ಭಾರತ ದರ್ಶನ). ↩︎