ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 28
ಸಾರ
ಬ್ರಾಹ್ಮಣ್ಯವನ್ನು ಹೇಗೆ ಪಡೆಯುವುದೆಂಬ ಯುಧಿಷ್ಠಿರನ ಪ್ರಶ್ನೆಗೆ ಭೀಷ್ಮನು ಮತಂಗನ ಕಥೆಯನ್ನು ಉದಾಹರಿಸುತ್ತಾನೆ (1-6). ಓರ್ವ ಬ್ರಾಹ್ಮಣನ ಸಾಕುಮಗನಾಗಿ ಬ್ರಾಹ್ಮಣನೆಂದೇ ತಿಳಿದುಕೊಂಡಿದ್ದ ಮತಂಗನಿಗೆ ಕತ್ತೆಯೊಂದು “ನೀನು ಬ್ರಾಹ್ಮಣಿಯಲ್ಲಿ ಶೂದ್ರನಿಂದ ಹುಟ್ಟಿದ ಚಂಡಾಲ” ಎಂದು ಹೇಳಿದುದು (7-16). ಇದನ್ನು ಕೇಳಿದ ಮತಂಗನು ಬ್ರಾಹ್ಮಣ್ಯವನ್ನು ಪಡೆಯಲು ಮಹಾತಪಸ್ಸನ್ನಾಚಿರಿಸಿದುದು (17-22). ವರವನ್ನು ನೀಡಲು ಬಂದಿದ್ದ ಇಂದ್ರನು ಆ ವರವು ಚಂಡಾಲನಿಗೆ ಪ್ರಾಪ್ತಿಯಾಗುವುದಿಲ್ಲ ಎನ್ನುವುದು (23-28).
13028001 ಯುಧಿಷ್ಠಿರ ಉವಾಚ।
13028001a ಪ್ರಜ್ಞಾಶ್ರುತಾಭ್ಯಾಂ ವೃತ್ತೇನ ಶೀಲೇನ ಚ ಯಥಾ ಭವಾನ್।
13028001c ಗುಣೈಃ ಸಮುದಿತಃ ಸರ್ವೈರ್ವಯಸಾ ಚ ಸಮನ್ವಿತಃ।।
13028001e ತಸ್ಮಾದ್ಭವಂತಂ ಪೃಚ್ಚಾಮಿ ಧರ್ಮಂ ಧರ್ಮಭೃತಾಂ ವರ।।
ಯುಧಿಷ್ಠಿರನು ಹೇಳಿದನು: “ಧರ್ಮಭೃತರಲ್ಲಿ ಶ್ರೇಷ್ಠ! ನೀನು ಬುದ್ಧಿ, ವಿದ್ಯೆ, ಸದಾಚಾರ ಶೀಲ, ವಯಸ್ಸು ಮತ್ತು ಸರ್ವ ಗುಣಗಳಿಂದ ಸಮೃದ್ಧನಾಗಿರುವೆ. ಆದುದರಿಂದ ಧರ್ಮದ ಕುರಿತು ನಿನ್ನಲ್ಲಿ ಕೇಳುತ್ತೇನೆ.
13028002a ಕ್ಷತ್ರಿಯೋ ಯದಿ ವಾ ವೈಶ್ಯಃ ಶೂದ್ರೋ ವಾ ರಾಜಸತ್ತಮ।
13028002c ಬ್ರಾಹ್ಮಣ್ಯಂ ಪ್ರಾಪ್ನುಯಾತ್ಕೇನ ತನ್ಮೇ ವ್ಯಾಖ್ಯಾತುಮರ್ಹಸಿ।।
ರಾಜಸತ್ತಮ! ಒಂದು ವೇಳೆ ಕ್ಷತ್ರಿಯ ಅಥವಾ ವೈಶ್ಯ ಅಥವಾ ಶೂದ್ರನು ಬ್ರಾಹ್ಮಣ್ಯವನ್ನು ಪಡೆಯಬೇಕೆಂದರೆ ಅವರು ಹೇಗೆ ಅದನ್ನು ಪಡೆದುಕೊಳ್ಳಬಹುದು ಎನ್ನುವುದನ್ನು ನನಗೆ ಹೇಳಬೇಕು.
13028003a ತಪಸಾ ವಾ ಸುಮಹತಾ ಕರ್ಮಣಾ ವಾ ಶ್ರುತೇನ ವಾ।
13028003c ಬ್ರಾಹ್ಮಣ್ಯಮಥ ಚೇದಿಚ್ಚೇತ್ತನ್ಮೇ ಬ್ರೂಹಿ ಪಿತಾಮಹ।।
ತಪಸ್ಸಿನಿಂದ ಅಥವಾ ಮಹಾ ಕರ್ಮಗಳಿಂದ ಅಥವಾ ಶಾಸ್ತ್ರಜ್ಞಾನಗಳಿಂದ ಬ್ರಾಹ್ಮಣತ್ವವನ್ನು ಪಡೆಯಬಹುದೇ? ಅದನ್ನು ನನಗೆ ಹೇಳು ಪಿತಾಮಹ!”
13028004 ಭೀಷ್ಮ ಉವಾಚ।
13028004a ಬ್ರಾಹ್ಮಣ್ಯಂ ತಾತ ದುಷ್ಪ್ರಾಪಂ ವರ್ಣೈಃ ಕ್ಷತ್ರಾದಿಭಿಸ್ತ್ರಿಭಿಃ।
13028004c ಪರಂ ಹಿ ಸರ್ವಭೂತಾನಾಂ ಸ್ಥಾನಮೇತದ್ಯುಧಿಷ್ಠಿರ।।
ಭೀಷ್ಮನು ಹೇಳಿದನು: “ಮಗೂ ಯುಧಿಷ್ಠಿರ! ಕ್ಷತ್ರಿಯಾದಿ ಮೂರೂ ವರ್ಣದವರಿಗೆ ಬ್ರಾಹ್ಮಣ್ಯವು ದುಷ್ಪ್ರಾಪ್ಯವು. ಏಕೆಂದರೆ ಬ್ರಾಹ್ಮಣ್ಯತ್ವವು ಸರ್ವಭೂತಗಳಿಗೂ ಶ್ರೇಷ್ಠ ಸ್ಥಾನವು.
13028005a ಬಹ್ವೀಸ್ತು ಸಂಸರನ್ಯೋನೀರ್ಜಾಯಮಾನಃ ಪುನಃ ಪುನಃ।
13028005c ಪರ್ಯಾಯೇ ತಾತ ಕಸ್ಮಿಂಶ್ಚಿದ್ಬ್ರಾಹ್ಮಣೋ ನಾಮ ಜಾಯತೇ।।
ಮಗೂ! ಜೀವವು ಹಲವಾರು ಯೋನಿಗಳಲ್ಲಿ ಪುನಃ ಪುನಃ ಜನ್ಮವನ್ನು ತಾಳಿ ಯಾವುದೋ ಒಂದು ಕಾಲದಲ್ಲಿ ಬ್ರಾಹ್ಮಣಯೋನಿಯಲ್ಲಿ ಹುಟ್ಟುತ್ತದೆ.
13028006a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
13028006c ಮತಂಗಸ್ಯ ಚ ಸಂವಾದಂ ಗರ್ದಭ್ಯಾಶ್ಚ ಯುಧಿಷ್ಠಿರ।।
ಯುಧಿಷ್ಠಿರ! ಇದಕ್ಕೆ ಸಂಬಂಧಿಸಿ ಪುರಾತನ ಇತಿಹಾಸವಾಗಿರುವ ಮತಂಗ ಮತ್ತು ಒಂದು ಹೆಣ್ಣು ಕತ್ತೆಯ ನಡುವೆ ನಡೆದ ಸಂವಾದವನ್ನು ಉದಾಹರಿಸುತ್ತಾರೆ.
13028007a ದ್ವಿಜಾತೇಃ ಕಸ್ಯ ಚಿತ್ತಾತ ತುಲ್ಯವರ್ಣಃ ಸುತಃ ಪ್ರಭುಃ।
13028007c ಮತಂಗೋ ನಾಮ ನಾಮ್ನಾಭೂತ್ಸರ್ವೈಃ ಸಮುದಿತೋ ಗುಣೈಃ।।
ಮಗೂ! ಓರ್ವ ಬ್ರಾಹ್ಮಣನಿಗೆ ಮತಂಗ ಎಂಬ ಹೆಸರಿನ ಸಾಕುಮಗನಿದ್ದನು. ಸರ್ವಗುಣಗಳಿಂದ ಸಮುದಿತನಾಗಿದ್ದ ಅವನನ್ನು ಬ್ರಾಹ್ಮಣನೆಂದೇ ಎಲ್ಲರೂ ಮನ್ನಿಸುತ್ತಿದ್ದರು.
13028008a ಸ ಯಜ್ಞಕಾರಃ ಕೌಂತೇಯ ಪಿತ್ರಾ ಸೃಷ್ಟಃ ಪರಂತಪ।
13028008c ಪ್ರಾಯಾದ್ಗರ್ದಭಯುಕ್ತೇನ ರಥೇನೇಹಾಶುಗಾಮಿನಾ।।
ಕೌಂತೇಯ! ಪರಂತಪ! ಒಮ್ಮೆ ತಂದೆಯ ಆಜ್ಞಾನುಸಾರವಾಗಿ ಅವನು ಯಜ್ಞಮಾಡಿಸಲು ಶೀಘ್ರವಾಗಿ ಹೋಗುವ ಕತ್ತೆಯನ್ನು ಕಟ್ಟಿದ ರಥದಲ್ಲಿ ಕುಳಿತು ಪಕ್ಕದ ಊರಿಗೆ ಹೊರಟನು.
13028009a ಸ ಬಾಲಂ ಗರ್ದಭಂ ರಾಜನ್ವಹಂತಂ ಮಾತುರಂತಿಕೇ।
13028009c ನಿರವಿಧ್ಯತ್ಪ್ರತೋದೇನ ನಾಸಿಕಾಯಾಂ ಪುನಃ ಪುನಃ।।
ರಾಜನ್! ಕತ್ತೆಯು ಇನ್ನೂ ಎಳೆಯದಾಗಿತ್ತು. ಆದುದರಿಂದ ಅದು ರಥವನ್ನು ತನ್ನ ತಾಯಿಯ ಕಡೆಯೇ ಎಳೆದುಕೊಂಡು ಹೋಗುತ್ತಿತ್ತು. ಮತಂಗನು ಚಾವಟಿಯಿಂದ ಅದರ ಮೂಗಿನ ಮೇಲೆ ಪುನಃ ಪುನಃ ಹೊಡೆಯುತ್ತಿದ್ದನು.
13028010a ತಂ ತು ತೀವ್ರವ್ರಣಂ ದೃಷ್ಟ್ವಾ ಗರ್ದಭೀ ಪುತ್ರಗೃದ್ಧಿನೀ।
13028010c ಉವಾಚ ಮಾ ಶುಚಃ ಪುತ್ರ ಚಂಡಾಲಸ್ತ್ವಾಧಿತಿಷ್ಠತಿ।।
ತನ್ನ ಮಗನಿಗೆ ಆಗಿದ್ದ ತೀವ್ರ ಗಾಯವನ್ನು ನೋಡಿ ತಾಯಿ ಕತ್ತೆಯು ಮಗನನ್ನು ಸಮಾಧಾನಗೊಳಿಸುತ್ತಾ ಹೇಳಿತು: “ಮಗೂ! ದುಃಖಿಸಬೇಡ! ಬಂಡಿಯಲ್ಲಿ ಚಾಂಡಾಲನು ಕುಳಿತಿದ್ದಾನೆ!
13028011a ಬ್ರಾಹ್ಮಣೇ ದಾರುಣಂ ನಾಸ್ತಿ ಮೈತ್ರೋ ಬ್ರಾಹ್ಮಣ ಉಚ್ಯತೇ।
13028011c ಆಚಾರ್ಯಃ ಸರ್ವಭೂತಾನಾಂ ಶಾಸ್ತಾ ಕಿಂ ಪ್ರಹರಿಷ್ಯತಿ।।
ಬ್ರಾಹ್ಮಣನಲ್ಲಿ ಕ್ರೌರ್ಯವಿರುವುದಿಲ್ಲ. ಎಲ್ಲರ ಮೇಲೂ ಮಿತ್ರಭಾವವನ್ನು ಹೊಂದಿರುವವನೇ ಬ್ರಾಹ್ಮಣನೆಂದು ಹೇಳುತ್ತಾರೆ. ಸರ್ವಭೂತಗಳ ಮೇಲೂ ಶಾಸನಮಾಡುವ ಆಚಾರ್ಯನು ಹೇಗೆ ತಾನೇ ಹೊಡೆಯುತ್ತಾನೆ?
13028012a ಅಯಂ ತು ಪಾಪಪ್ರಕೃತಿರ್ಬಾಲೇ ನ ಕುರುತೇ ದಯಾಮ್।
13028012c ಸ್ವಯೋನಿಂ ಮಾನಯತ್ಯೇಷ ಭಾವೋ ಭಾವಂ ನಿಗಚ್ಚತಿ।।
ಇವನು ಪಾಪಪ್ರಕೃತಿಯುಳ್ಳವನಾಗಿರುವುದರಿಂದ ಬಾಲಕನಾದ ನಿನ್ನ ಮೇಲೆ ದಯೆಯನ್ನು ತೋರಿಸುತ್ತಿಲ್ಲ. ಇವನು ತನ್ನ ಯೋನಿಯಂತೆಯೇ ನಡೆದುಕೊಳ್ಳುತ್ತಿದ್ದಾನೆ. ಹುಟ್ಟಿನ ಸ್ವಭಾವವೇ ಯಾವಾಗಲೂ ಮನೋಭಾವವನ್ನು ನಿಯಂತ್ರಿಸುತ್ತದೆ.”
13028013a ಏತಚ್ಛ್ರುತ್ವಾ ಮತಂಗಸ್ತು ದಾರುಣಂ ರಾಸಭೀವಚಃ।
13028013c ಅವತೀರ್ಯ ರಥಾತ್ತೂರ್ಣಂ ರಾಸಭೀಂ ಪ್ರತ್ಯಭಾಷತ।।
ತಾಯಿಗತ್ತೆಯ ಆ ದಾರುಣ ಮಾತನ್ನು ಕೇಳಿ ಮತಂಗನು ಕೂಡಲೇ ರಥದಿಂದ ಇಳಿದು ರಾಸಭಿಗೆ ಉತ್ತರಿಸಿದನು:
13028014a ಬ್ರೂಹಿ ರಾಸಭಿ ಕಲ್ಯಾಣಿ ಮಾತಾ ಮೇ ಯೇನ ದೂಷಿತಾ।
13028014c ಕಥಂ ಮಾಂ ವೇತ್ಸಿ ಚಂಡಾಲಂ ಕ್ಷಿಪ್ರಂ ರಾಸಭಿ ಶಂಸ ಮೇ।।
“ಕಲ್ಯಾಣೀ ರಾಸಭಿಯೇ! ನನ್ನ ತಾಯಿಯನ್ನು ದೂಷಿಸುತ್ತಿರುವವಳೇ! ರಾಸಭಿ! ನನ್ನನ್ನು ಚಂಡಾಲನೆಂದು ಹೇಗೆ ತಿಳಿದಿರುವೆ? ಬೇಗನೇ ನನಗೆ ಹೇಳು!
13028015a ಕೇನ ಜಾತೋಽಸ್ಮಿ ಚಂಡಾಲೋ ಬ್ರಾಹ್ಮಣ್ಯಂ ಯೇನ ಮೇಽನಶತ್1।
13028015c ತತ್ತ್ವೇನೈತನ್ಮಹಾಪ್ರಾಜ್ಞೇ ಬ್ರೂಹಿ ಸರ್ವಮಶೇಷತಃ।।
ನಾನು ಚಂಡಾಲನೆಂದು ಯಾರಿಂದ ನಿನಗೆ ತಿಳಿಯಿತು? ಯಾವುದರಿಂದ ಬ್ರಾಹ್ಮಣ್ಯವು ನಾಶವಾಗುತ್ತದೆ? ಮಹಾಪ್ರಾಜ್ಞೆ! ಯಥಾವತ್ತಾಗಿ ಮತ್ತು ಸಂಪೂರ್ಣವಾಗಿ ಹೇಳು!”
13028016 ಗರ್ದಭ್ಯುವಾಚ।
13028016a ಬ್ರಾಹ್ಮಣ್ಯಾಂ ವೃಷಲೇನ ತ್ವಂ ಮತ್ತಾಯಾಂ ನಾಪಿತೇನ ಹ।
13028016c ಜಾತಸ್ತ್ವಮಸಿ ಚಂಡಾಲೋ ಬ್ರಾಹ್ಮಣ್ಯಂ ತೇನ ತೇಽನಶತ್।।
ಗರ್ದಭಿಯು ಹೇಳಿದಳು: “ಬ್ರಾಹ್ಮಣಿಯಲ್ಲಿ ಶೂದ್ರ ಕ್ಷೌರಿಕನಿಂದ ನೀನು ಹುಟ್ಟಿರುವೆ. ಆದುದರಿಂದ ನೀನು ಹುಟ್ಟಿನಲ್ಲಿ ಚಂಡಾಲ2. ಇದರಿಂದಲೇ ನಿನ್ನ ಬ್ರಾಹ್ಮಣ್ಯವು ನಾಶವಾಯಿತು.”
13028017a ಏವಮುಕ್ತೋ ಮತಂಗಸ್ತು ಪ್ರತ್ಯುಪಾಯಾದ್ಗೃಹಂ ಪ್ರತಿ।
13028017c ತಮಾಗತಮಭಿಪ್ರೇಕ್ಷ್ಯ ಪಿತಾ ವಾಕ್ಯಮಥಾಬ್ರವೀತ್।।
ಇದನ್ನು ಕೇಳಿ ಮತಂಗನಾದರೋ ತನ್ನ ಮನೆಯಕಡೆ ಹೊರಟನು. ಅವನು ಬಂದಿರುವುದನ್ನು ನೋಡಿ ತಂದೆಯು ಹೇಳಿದನು:
13028018a ಮಯಾ ತ್ವಂ ಯಜ್ಞಸಂಸಿದ್ಧೌ ನಿಯುಕ್ತೋ ಗುರುಕರ್ಮಣಿ।
13028018c ಕಸ್ಮಾತ್ಪ್ರತಿನಿವೃತ್ತೋಽಸಿ ಕಚ್ಚಿನ್ನ ಕುಶಲಂ ತವ।।
“ನಾನು ನಿನ್ನನ್ನು ಯಜ್ಞದ ಗುರುಕಾರ್ಯದಲ್ಲಿ ನಿಯುಕ್ತಗೊಳಿಸಿದ್ದೆನು. ನೀನು ಏಕೆ ಹಿಂದಿರುಗಿ ಬಂದಿರುವೆ? ನೀನು ಕುಶಲವಾಗಿದ್ದೀಯೆ ತಾನೇ?”
13028019 ಮತಂಗ ಉವಾಚ।
13028019a ಅಯೋನಿರಗ್ರ್ಯಯೋನಿರ್ವಾ3 ಯಃ ಸ್ಯಾತ್ಸ ಕುಶಲೀ ಭವೇತ್।
13028019c ಕುಶಲಂ ತು ಕುತಸ್ತಸ್ಯ ಯಸ್ಯೇಯಂ ಜನನೀ ಪಿತಃ।।
ಮತಂಗನು ಹೇಳಿದನು: “ಚಂಡಾಲ ಯೋನಿಯಲ್ಲಿ ಹುಟ್ಟಿದವನು ಹೇಗೆ ಕುಶಲಿಯಾಗಿರಬಹುದು? ತಂದೆಯೇ! ಅಂಥಹ ತಾಯಿಯಲ್ಲಿ ಹುಟ್ಟಿದವನು ಹೇಗೆ ಕುಶಲಿಯಾಗಿರಬಹುದು?
13028020a ಬ್ರಾಹ್ಮಣ್ಯಾಂ ವೃಷಲಾಜ್ಜಾತಂ ಪಿತರ್ವೇದಯತೀಹ ಮಾಮ್।
13028020c ಅಮಾನುಷೀ ಗರ್ದಭೀಯಂ ತಸ್ಮಾತ್ತಪ್ಸ್ಯೇ ತಪೋ ಮಹತ್।।
ತಂದೆಯೇ! ನಾನು ಶೂದ್ರನಿಂದ ಬ್ರಾಹ್ಮಣಿಯಲ್ಲಿ ಹುಟ್ಟಿದವನೆಂದು ಆ ಅಮಾನುಷೀ ಗಾರ್ದಭಿಯು ನನಗೆ ಹೇಳಿತು. ಆದುದರಿಂದ ನಾನು ಮಹಾ ತಪಸ್ಸನ್ನು ತಪಿಸುತ್ತೇನೆ.”
13028021a ಏವಮುಕ್ತ್ವಾ ಸ ಪಿತರಂ ಪ್ರತಸ್ಥೇ ಕೃತನಿಶ್ಚಯಃ।
13028021c ತತೋ ಗತ್ವಾ ಮಹಾರಣ್ಯಮತಪ್ಯತ ಮಹತ್ತಪಃ।।
ತಂದೆಗೆ ಹೀಗೆ ಹೇಳಿ ಆ ಕೃತನಿಶ್ಚಯಿಯು ಮಹಾರಣ್ಯಕ್ಕೆ ಹೋಗಿ ಮಹಾ ತಪಸ್ಸನ್ನು ತಪಿಸಿದನು.
13028022a ತತಃ ಸಂತಾಪಯಾಮಾಸ ವಿಬುಧಾಂಸ್ತಪಸಾನ್ವಿತಃ।
13028022c ಮತಂಗಃ ಸುಸುಖಂ ಪ್ರೇಪ್ಸುಃ ಸ್ಥಾನಂ ಸುಚರಿತಾದಪಿ।।
13028023a ತಂ ತಥಾ ತಪಸಾ ಯುಕ್ತಮುವಾಚ ಹರಿವಾಹನಃ।
ಇದೇ ಜನ್ಮದಲ್ಲಿಯೇ ಸುಲಭವಾಗಿ ಬ್ರಾಹ್ಮಣತ್ವವನ್ನು ಪಡೆಯಬೇಕೆಂಬ ಉದ್ದೇಶದಿಂದ ತಪಸ್ಸನ್ನಾಚರಿಸಿ ಜಗತ್ತನ್ನೇ ಸುಡುತ್ತಿದ್ದ ತಪಸಾನ್ವಿತ ಮಂತಗನಿಗೆ ಹರಿವಾಹನ ಇಂದ್ರನು ಹೇಳಿದನು:
13028023c ಮತಂಗ ತಪ್ಯಸೇ ಕಿಂ ತ್ವಂ ಭೋಗಾನುತ್ಸೃಜ್ಯ ಮಾನುಷಾನ್।।
13028024a ವರಂ ದದಾನಿ ತೇ ಹಂತ ವೃಣೀಷ್ವ ತ್ವಂ ಯದಿಚ್ಚಸಿ।
13028024c ಯಚ್ಚಾಪ್ಯವಾಪ್ಯಮನ್ಯತ್ತೇ ಸರ್ವಂ ಪ್ರಬ್ರೂಹಿ ಮಾಚಿರಮ್।।
“ಮತಂಗ! ಮನುಷ್ಯ ಭೋಗಗಳನ್ನು ಬಿಸುಟು ತಪಸ್ಸನ್ನೇಕೆ ತಪಿಸುತ್ತಿರುವೆ? ನಿಲ್ಲು! ನಿನಗೆ ವರವನ್ನು ನೀಡುತ್ತೇನೆ. ನಿನಗಿಷ್ಟವಾದುದನ್ನು ಕೇಳಿಕೋ! ಪಡೆಯಲು ಎಷ್ಟೇ ಅಸಾಧ್ಯವಾಗಿದ್ದರೂ ನೀನು ಬಯಸುವ ಎಲ್ಲವನ್ನೂ ಬೇಗನೇ ಹೇಳು!”
13028025 ಮತಂಗ ಉವಾಚ।
13028025a ಬ್ರಾಹ್ಮಣ್ಯಂ ಕಾಮಯಾನೋಽಹಮಿದಮಾರಬ್ಧವಾಂಸ್ತಪಃ।
13028025c ಗಚ್ಚೇಯಂ ತದವಾಪ್ಯೇಹ ವರ ಏಷ ವೃತೋ ಮಯಾ।।
ಮತಂಗನು ಹೇಳಿದನು: “ಬ್ರಾಹ್ಮಣ್ಯವನ್ನು ಬಯಸಿಯೇ ನಾನು ಈ ತಪಸ್ಸನ್ನು ಆರಂಭಿಸಿದ್ದೇನೆ. ಆ ವರವನ್ನು ಪಡೆದೊಡನೆಯೇ ನಾನು ಹೊರಟುಹೋಗುತ್ತೇನೆ. ಇದೇ ನಾನು ನಿನ್ನಿಂದ ಬೇಡುವ ವರ!”
13028026a ಏತಚ್ಛ್ರುತ್ವಾ ತು ವಚನಂ ತಮುವಾಚ ಪುರಂದರಃ।
13028026c ಬ್ರಾಹ್ಮಣ್ಯಂ ಪ್ರಾರ್ಥಯಾನಸ್ತ್ವಮಪ್ರಾಪ್ಯಮಕೃತಾತ್ಮಭಿಃ।।
ಅವನ ಆ ಮಾತನ್ನು ಕೇಳಿ ಪುರಂದರನು ಹೇಳಿದನು: “ಅಕೃತಾತ್ಮರಿಗೂ ಅಪ್ರಾಪ್ತವಾದ ಬ್ರಾಹ್ಮಣ್ಯವನ್ನು ನೀನು ಪ್ರಾರ್ಥಿಸುತ್ತಿದ್ದೀಯೆ!
13028027a ಶ್ರೇಷ್ಠಂ ಯತ್ಸರ್ವಭೂತೇಷು ತಪೋ ಯನ್ನಾತಿವರ್ತತೇ।
13028027c ತದಗ್ರ್ಯಂ ಪ್ರಾರ್ಥಯಾನಸ್ತ್ವಮಚಿರಾದ್ವಿನಶಿಷ್ಯಸಿ।।
ಸರ್ವಭೂತಗಳಲ್ಲಿಯೇ ಶ್ರೇಷ್ಠವಾದುದು ತಪಸ್ಸಿನಿಂದ ದೊರೆಯುವುದಿಲ್ಲ. ಆ ಅಗ್ರ್ಯವನ್ನು ಪ್ರಾರ್ಥಿಸುತ್ತಿರುವೆಯಾದುದರಿಂದ ಬೇಗನೇ ನೀನು ವಿನಾಶಹೊಂದುತ್ತೀಯೆ!
13028028a ದೇವತಾಸುರಮರ್ತ್ಯೇಷು ಯತ್ಪವಿತ್ರಂ ಪರಂ ಸ್ಮೃತಮ್।
13028028c ಚಂಡಾಲಯೋನೌ ಜಾತೇನ ನ ತತ್ಪ್ರಾಪ್ಯಂ ಕಥಂ ಚನ।।
ದೇವತೆಗಳು, ಅಸುರರು ಮತ್ತು ಮನುಷ್ಯರು ಯಾವುದನ್ನು ಪರಮ ಪವಿತ್ರವೆಂದು ತಿಳಿದುಕೊಂಡಿದ್ದಾರೋ ಅದು ಚಂಡಾಲಯೋನಿಯಲ್ಲಿ ಹುಟ್ಟಿದವನಿಗೆ ಎಂದೂ ದೊರೆಯುವುದಿಲ್ಲ!””
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಇಂದ್ರಮತಂಗಸಂವಾದೇ ಅಷ್ಟಾವಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಇಂದ್ರಮತಂಗಸಂವಾದ ಎನ್ನುವ ಇಪ್ಪತ್ತೆಂಟನೇ ಅಧ್ಯಾಯವು.