ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 27
ಸಾರ
ಭೀಷ್ಮನನ್ನು ಕಾಣಲು ಅನೇಕ ಮಹರ್ಷಿಗಳು ಆಗಮಿಸಿದುದು; ಯುಧಿಷ್ಠಿರನು ಅವರನ್ನು ಪೂಜಿಸಲು, ಮಾತುಕಥೆಗಳನ್ನಾಡಿ ಅವರು ಅಂತರ್ಧಾನರಾದುದು (1-12). ಅನಂತರ ಯುಧಿಷ್ಠಿರನು “ಯಾವ ದೇಶಗಳು, ಯಾವ ಜನಪದಗಳು, ಯಾವ ಆಶ್ರಮಗಳು ಮತ್ತು ಪರ್ವತಗಳು ಮತ್ತು ನದಿಗಳು ಪುಣ್ಯತಃ ಶ್ರೇಷ್ಠವಾದವುಗಳು ಮತ್ತು ತಿಳಿಯಲು ಯೋಗ್ಯವಾದವುಗಳು?” ಎಂದು ಭೀಷ್ಮನನ್ನು ಕೇಳಲು ಭೀಷ್ಮನು ಓರ್ವ ಸಿದ್ಧ ಮತ್ತು ಶಿಲಾವೃತ್ತಿಯಲ್ಲಿರುವವರ ಸಂವಾದವನ್ನು ಉದಾಹರಿಸಿ ಗಂಗೆಯ ಮಹಿಮೆಯನ್ನು ವರ್ಣಿಸುವುದು (13-105).
13027001 ವೈಶಂಪಾಯನ ಉವಾಚ।
13027001a ಬೃಹಸ್ಪತಿಸಮಂ ಬುದ್ಧ್ಯಾ ಕ್ಷಮಯಾ ಬ್ರಹ್ಮಣಃ ಸಮಮ್।
13027001c ಪರಾಕ್ರಮೇ ಶಕ್ರಸಮಮಾದಿತ್ಯಸಮತೇಜಸಮ್।।
13027002a ಗಾಂಗೇಯಮರ್ಜುನೇನಾಜೌ ನಿಹತಂ ಭೂರಿವರ್ಚಸಮ್।
13027002c ಭ್ರಾತೃಭಿಃ ಸಹಿತೋಽನ್ಯೈಶ್ಚ ಪರ್ಯುಪಾಸ್ತೇ ಯುಧಿಷ್ಠಿರಃ।।
13027003a ಶಯಾನಂ ವೀರಶಯನೇ ಕಾಲಾಕಾಂಕ್ಷಿಣಮಚ್ಯುತಮ್।
13027003c ಆಜಗ್ಮುರ್ಭರತಶ್ರೇಷ್ಠಂ ದ್ರಷ್ಟುಕಾಮಾ ಮಹರ್ಷಯಃ।।
ವೈಶಂಪಾಯನನು ಹೇಳಿದನು: “ಬುದ್ಧಿಯಲ್ಲಿ ಬೃಹಸ್ಪತಿಯ ಸಮನಾಗಿದ್ದ, ಕ್ಷಮೆಯಲ್ಲಿ ಬ್ರಹ್ಮನ ಸಮನಾಗಿದ್ದ, ಪರಾಕ್ರಮದಲ್ಲಿ ಶಕ್ರಸಮನಾಗಿದ್ದ, ಆದಿತ್ಯನ ಸಮ ತೇಜಸ್ಸಿದ್ದ, ಯುದ್ಧದಲ್ಲಿ ಅರ್ಜುನನಿಂದ ಹತನಾಗಿದ್ದ, ಭ್ರಾತೃಗಳು ಮತ್ತು ಅನ್ಯರೊಂದಿಗೆ ಯುಧಿಷ್ಠಿರನು ಸುತ್ತುವರೆದಿದ್ದ, ವೀರಶಯನದಲ್ಲಿ ಮಲಗಿ ಕಾಲವನ್ನು ನಿರೀಕ್ಷಿಸುತ್ತಿದ್ದ ಭೂರಿವರ್ಚಸ, ಅಚ್ಯುತ ಭರತಶ್ರೇಷ್ಠ ಭೀಷ್ಮನನ್ನು ನೋಡಲು ಮಹರ್ಷಿಗಳು ಆಗಮಿಸಿದರು.
13027004a ಅತ್ರಿರ್ವಸಿಷ್ಠೋಽಥ ಭೃಗುಃ ಪುಲಸ್ತ್ಯಃ ಪುಲಹಃ ಕ್ರತುಃ।
13027004c ಅಂಗಿರಾ ಗೌತಮೋಽಗಸ್ತ್ಯಃ ಸುಮತಿಃ ಸ್ವಾಯುರಾತ್ಮವಾನ್।।
13027005a ವಿಶ್ವಾಮಿತ್ರಃ ಸ್ಥೂಲಶಿರಾಃ ಸಂವರ್ತಃ ಪ್ರಮತಿರ್ದಮಃ।
13027005c ಉಶನಾ ಬೃಹಸ್ಪತಿರ್ವ್ಯಾಸಶ್ಚ್ಯವನಃ ಕಾಶ್ಯಪೋ ಧ್ರುವಃ।।
13027006a ದುರ್ವಾಸಾ ಜಮದಗ್ನಿಶ್ಚ ಮಾರ್ಕಂಡೇಯೋಽಥ ಗಾಲವಃ।
13027006c ಭರದ್ವಾಜಶ್ಚ ರೈಭ್ಯಶ್ಚ ಯವಕ್ರೀತಸ್ತ್ರಿತಸ್ತಥಾ।।
13027007a ಸ್ಥೂಲಾಕ್ಷಃ ಶಕಲಾಕ್ಷಶ್ಚ ಕಣ್ವೋ ಮೇಧಾತಿಥಿಃ ಕೃಶಃ।
13027007c ನಾರದಃ ಪರ್ವತಶ್ಚೈವ ಸುಧನ್ವಾಥೈಕತೋ ದ್ವಿತಃ।।
13027008a ನಿತಂಭೂರ್ಭುವನೋ ಧೌಮ್ಯಃ ಶತಾನಂದೋಽಕೃತವ್ರಣಃ।
13027008c ಜಾಮದಗ್ನ್ಯಸ್ತಥಾ ರಾಮಃ ಕಾಮ್ಯಶ್ಚೇತ್ಯೇವಮಾದಯಃ।
13027008E ಸಮಾಗತಾ ಮಹಾತ್ಮಾನೋ ಭೀಷ್ಮಂ ದ್ರಷ್ಟುಂ ಮಹರ್ಷಯಃ।।
ಅತ್ರಿ, ವಸಿಷ್ಠ, ಭೃಗು, ಪುಲಸ್ತ್ಯ, ಪುಲಹ, ಕ್ರತು, ಅಂಗಿರಾ, ಗೌತಮ, ಅಗಸ್ತ್ಯ, ಜಿತಮನಸ್ಕ ಸುಮತಿ, ವಿಶ್ವಾಮಿತ್ರ, ಸ್ಥೂಲಶಿರ, ಸಂವರ್ತ, ಪ್ರಮತಿ, ದಮ, ಉಶನಾ, ಬೃಹಸ್ಪತಿ, ವ್ಯಾಸ, ಚ್ಯವನ, ಕಾಶ್ಯಪ, ಧ್ರುವ, ದುರ್ವಾಸಾ, ಜಮದಗ್ನಿ, ಮಾರ್ಕಂಡೇಯ, ಗಾಲವ, ಭರದ್ವಾಜ, ರೈಭ್ಯ, ಯವಕ್ರೀತ, ತ್ರಿತ, ಸ್ಥೂಲಾಕ್ಷ, ಸಶಕಲಾಕ್ಷ, ಕಣ್ವ, ಮೇಧಾತಿಥಿ, ಕೃಶ, ನಾರದ, ಪರ್ವತ, ಸುಧನ್ವ, ಏಕತ, ದ್ವಿತ, ನಿತಂಭೂ, ಭುವನ, ಧೌಮ್ಯ, ಶತಾನಂದ, ಅಕೃತವ್ರಣ, ಜಾಮದಗ್ನಿ ರಾಮ, ಕಾಮ್ಯ ಮೊದಲಾದ ಮಹಾತ್ಮ ಮಹರ್ಷಿಗಳು ಭೀಷ್ಮನನ್ನು ನೋಡಲು ಸೇರಿದರು.
13027009a ತೇಷಾಂ ಮಹಾತ್ಮನಾಂ ಪೂಜಾಮಾಗತಾನಾಂ ಯುಧಿಷ್ಠಿರಃ।
13027009c ಭ್ರಾತೃಭಿಃ ಸಹಿತಶ್ಚಕ್ರೇ ಯಥಾವದನುಪೂರ್ವಶಃ।।
ಆಗಮಿಸಿದ ಆ ಮಹಾತ್ಮರನ್ನು ಯುಧಿಷ್ಠಿರನು ಭ್ರಾತೃಗಳ ಸಹಿತ ಯಥಾನುಕ್ರಮವಾಗಿ ಮತ್ತು ಯಥಾವಿಧಿಯಾಗಿ ಪೂಜಿಸಿದನು.
13027010a ತೇ ಪೂಜಿತಾಃ ಸುಖಾಸೀನಾಃ ಕಥಾಶ್ಚಕ್ರುರ್ಮಹರ್ಷಯಃ।
13027010c ಭೀಷ್ಮಾಶ್ರಿತಾಃ ಸುಮಧುರಾಃ ಸರ್ವೇಂದ್ರಿಯಮನೋಹರಾಃ।।
ಪೂಜಿತರಾಗಿ ಸುಖಾಸೀನರಾದ ಅ ಮಹರ್ಷಿಗಳು ಭೀಷ್ಮನ ಬಳಿಯಲ್ಲಿ ಸುಮಧುರವಾದ ಸರ್ವೇಂದ್ರಿಯಮನೋಹರವಾದ ಮಾತುಕಥೆಗಳನ್ನು ನಡೆಸಿದರು.
13027011a ಭೀಷ್ಮಸ್ತೇಷಾಂ ಕಥಾಃ ಶ್ರುತ್ವಾ ಋಷೀಣಾಂ ಭಾವಿತಾತ್ಮನಾಮ್।
13027011c ಮೇನೇ ದಿವಿಸ್ಥಮಾತ್ಮಾನಂ ತುಷ್ಟ್ಯಾ ಪರಮಯಾ ಯುತಃ।।
ಆ ಭಾವಿತಾತ್ಮ ಋಷಿಗಳ ಮಾತುಗಳನ್ನು ಕೇಳಿ ಪರಮ ತೃಪ್ತಿಯುತನಾದ ಭೀಷ್ಮನು ತಾನು ದಿವಿಯಲ್ಲಿಯೇ ಇದ್ದೇನೆಂದು ತಿಳಿದುಕೊಂಡನು.
13027012a ತತಸ್ತೇ ಭೀಷ್ಮಮಾಮಂತ್ರ್ಯ ಪಾಂಡವಾಂಶ್ಚ ಮಹರ್ಷಯಃ।
13027012c ಅಂತರ್ಧಾನಂ ಗತಾಃ ಸರ್ವೇ ಸರ್ವೇಷಾಮೇವ ಪಶ್ಯತಾಮ್।।
ಅನಂತರ ಆ ಮಹರ್ಷಿಗಳು ಎಲ್ಲರೂ ಭೀಷ್ಮ ಮತ್ತು ಪಾಂಡವರನ್ನು ಬೀಳ್ಕೊಂಡು ಎಲ್ಲರೂ ನೋಡುತ್ತಿದ್ದಂತೆಯೇ ಅಲ್ಲಿಯೇ ಅಂತರ್ಧಾನರಾದರು.
13027013a ತಾನೃಷೀನ್ಸುಮಹಾಭಾಗಾನಂತರ್ಧಾನಗತಾನಪಿ।
13027013c ಪಾಂಡವಾಸ್ತುಷ್ಟುವುಃ ಸರ್ವೇ ಪ್ರಣೇಮುಶ್ಚ ಮುಹುರ್ಮುಹುಃ।।
ಆ ಮಹಾಭಾಗ ಋಷಿಗಳು ಅಂತರ್ಧಾನರಾಗಿ ಹೋಗಿದ್ದರೂ ಪಾಂಡವರೆಲ್ಲರೂ ಅವರನ್ನು ಸ್ತುತಿಸುತ್ತಾ ಪುನಃ ಪುನಃ ನಮಸ್ಕರಿಸಿದರು.
13027014a ಪ್ರಸನ್ನಮನಸಃ ಸರ್ವೇ ಗಾಂಗೇಯಂ ಕುರುಸತ್ತಮಾಃ।
13027014c ಉಪತಸ್ಥುರ್ಯಥೋದ್ಯಂತಮಾದಿತ್ಯಂ ಮಂತ್ರಕೋವಿದಾಃ।।
ಉದಯಿಸುವ ಸೂರ್ಯನನ್ನು ಮಂತ್ರಕೋವಿದರು ಹೇಗೋ ಹಾಗೆ ಕುರುಸತ್ತಮರು ಎಲ್ಲರೂ ಗಾಂಗೇಯನನ್ನು ಸುತ್ತುವರೆದು ಕುಳಿತರು.
13027015a ಪ್ರಭಾವಾತ್ತಪಸಸ್ತೇಷಾಮೃಷೀಣಾಂ ವೀಕ್ಷ್ಯ ಪಾಂಡವಾಃ।
13027015c ಪ್ರಕಾಶಂತೋ ದಿಶಃ ಸರ್ವಾ ವಿಸ್ಮಯಂ ಪರಮಂ ಯಯುಃ।।
ಸರ್ವ ದಿಕ್ಕುಗಳನ್ನೂ ಪ್ರಕಾಶಿಸಿದ ಆ ಋಷಿಗಳ ತಪಸ್ಸಿನ ಪ್ರಭಾವವನ್ನು ನೋಡಿದ ಪಾಂಡವರೆಲ್ಲರೂ ಪರಮ ವಿಸ್ಮಿತರಾದರು.
13027016a ಮಹಾಭಾಗ್ಯಂ ಪರಂ ತೇಷಾಮೃಷೀಣಾಮನುಚಿಂತ್ಯ ತೇ।
13027016c ಪಾಂಡವಾಃ ಸಹ ಭೀಷ್ಮೇಣ ಕಥಾಶ್ಚಕ್ರುಸ್ತದಾಶ್ರಯಾಃ।।
ಆ ಋಷಿಗಳ ಪರಮ ಮಹಾಭಾಗ್ಯದ ಕುರಿತು ಯೋಚಿಸುತ್ತಾ ಪಾಂಡವರು ಅವರ ಕುರಿತೇ ಭೀಷ್ಮನೊಂದಿಗೆ ಮಾತನಾಡ ತೊಡಗಿದರು.
13027017a ಕಥಾಂತೇ ಶಿರಸಾ ಪಾದೌ ಸ್ಪೃಷ್ಟ್ವಾ ಭೀಷ್ಮಸ್ಯ ಪಾಂಡವಃ।
13027017c ಧರ್ಮ್ಯಂ ಧರ್ಮಸುತಃ ಪ್ರಶ್ನಂ ಪರ್ಯಪೃಚ್ಚದ್ಯುಧಿಷ್ಠಿರಃ।।
ಮಾತುಕಥೆಯ ಕೊನೆಯಲ್ಲಿ ಧರ್ಮಸುತ ಪಾಂಡವ ಯುಧಿಷ್ಠಿರನು ಶಿರದಿಂದ ಭೀಷ್ಮನ ಪಾದಗಳನ್ನು ಸ್ಪರ್ಷಿಸಿ ಧರ್ಮಯುತವಾದ ಈ ಪ್ರಶ್ನೆಯನ್ನು ಕೇಳಿದನು:
13027018a ಕೇ ದೇಶಾಃ ಕೇ ಜನಪದಾ ಆಶ್ರಮಾಃ ಕೇ ಚ ಪರ್ವತಾಃ।
13027018c ಪ್ರಕೃಷ್ಟಾಃ ಪುಣ್ಯತಃ ಕಾಶ್ಚ ಜ್ಞೇಯಾ ನದ್ಯಃ ಪಿತಾಮಹ।।
“ಪಿತಾಮಹ! ಯಾವ ದೇಶಗಳು, ಯಾವ ಜನಪದಗಳು, ಯಾವ ಆಶ್ರಮಗಳು ಮತ್ತು ಪರ್ವತಗಳು ಮತ್ತು ನದಿಗಳು ಪುಣ್ಯತಃ ಶ್ರೇಷ್ಠವಾದವುಗಳು ಮತ್ತು ತಿಳಿಯಲು ಯೋಗ್ಯವಾದವುಗಳು?”
13027019 ಭೀಷ್ಮ ಉವಾಚ।
13027019a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
13027019c ಶಿಲೋಂಚವೃತ್ತೇಃ ಸಂವಾದಂ ಸಿದ್ಧಸ್ಯ ಚ ಯುಧಿಷ್ಠಿರ।।
ಭೀಷ್ಮನು ಹೇಳಿದನು: “ಯುಧಿಷ್ಠಿರ! ಇದರ ಕುರಿತು ಪುರಾತನ ಇತಿಹಾಸವಾದ ಶಿಲೋಂಚವೃತ್ತಿಯವನು ಮತ್ತು ಸಿದ್ಧನ ನಡುವೆ ನಡೆದ ಸಂವಾದವನ್ನು ಉದಾಹರಿಸುತ್ತಾರೆ.
13027020a ಇಮಾಂ ಕಶ್ಚಿತ್ಪರಿಕ್ರಮ್ಯ ಪೃಥಿವೀಂ ಶೈಲಭೂಷಿತಾಮ್।
13027020c ಅಸಕೃದ್ದ್ವಿಪದಾಂ ಶ್ರೇಷ್ಠಃ ಶ್ರೇಷ್ಠಸ್ಯ ಗೃಹಮೇಧಿನಃ।।
ಪರ್ವತಗಳಿಂದ ಅಲಂಕೃತಳಾಗಿರುವ ಈ ಭೂಮಿಯನ್ನು ಅದೆಷ್ಟೋ ಬಾರಿ ತಿರುಗುತ್ತಿದ್ದ ಓರ್ವ ಮಾನವ ಶ್ರೇಷ್ಠನು ಶ್ರೇಷ್ಠ ಗೃಹಸ್ಥನ ಮನೆಗೆ ಆಗಮಿಸಿದನು.
13027021a ಶಿಲವೃತ್ತೇರ್ಗೃಹಂ ಪ್ರಾಪ್ತಃ ಸ ತೇನ ವಿಧಿನಾರ್ಚಿತಃ।
13027021c ಕೃತಕೃತ್ಯ ಉಪಾತಿಷ್ಠತ್ಸಿದ್ಧಂ ತಮತಿಥಿಂ ತದಾ।।
ತನ್ನ ಮನೆಗೆ ಬಂದ ಆ ಅತಿಥಿ ಸಿದ್ಧನನ್ನು ಶಿಲವೃತ್ತಿಯಲ್ಲಿರುವವನು ವಿಧಿವತ್ತಾಗಿ ಅರ್ಚಿಸಿ, ಕೃತಕೃತ್ಯನಾಗಿ ಅವನ ಬಳಿ ನಿಂತುಕೊಂಡನು.
13027022a ತೌ ಸಮೇತ್ಯ ಮಹಾತ್ಮಾನೌ ಸುಖಾಸೀನೌ ಕಥಾಃ ಶುಭಾಃ।
13027022c ಚಕ್ರತುರ್ವೇದಸಂಬದ್ಧಾಸ್ತಚ್ಚೇಷಕೃತಲಕ್ಷಣಾಃ।।
ಸುಖಾಸೀನರಾದ ಅವರಿಬ್ಬರು ಮಹಾತ್ಮರೂ ಒಟ್ಟಿಗೇ ವೇದ-ಉಪನಿಷತ್ತುಗಳ ಸಂಬಂಧದ ವಿಷಯಗಳ ಕುರಿತು ಮಾತನಾಡಿಕೊಳ್ಳುತ್ತಿದ್ದರು.
13027023a ಶಿಲವೃತ್ತಿಃ ಕಥಾಂತೇ ತು ಸಿದ್ಧಮಾಮಂತ್ರ್ಯ ಯತ್ನತಃ।
13027023c ಪ್ರಶ್ನಂ ಪಪ್ರಚ್ಚ ಮೇಧಾವೀ ಯನ್ಮಾಂ ತ್ವಂ ಪರಿಪೃಚ್ಚಸಿ।।
ಮಾತುಕಥೆಯ ಕೊನೆಯಲ್ಲಿ ಶಿಲವೃತ್ತಿಯವನು ಪ್ರಯತ್ನಪಟ್ಟು ಆ ಮೇಧಾವಿಯಲ್ಲಿ ನೀನು ನನ್ನನ್ನು ಕೇಳಿದ ಪ್ರಶ್ನೆಯನ್ನೇ ಕೇಳಿದನು.
13027024 ಶಿಲವೃತ್ತಿರುವಾಚ।
13027024a ಕೇ ದೇಶಾಃ ಕೇ ಜನಪದಾಃ ಕೇಽಽಶ್ರಮಾಃ ಕೇ ಚ ಪರ್ವತಾಃ।
13027024c ಪ್ರಕೃಷ್ಟಾಃ ಪುಣ್ಯತಃ ಕಾಶ್ಚ ಜ್ಞೇಯಾ ನದ್ಯಸ್ತದುಚ್ಯತಾಮ್।।
ಶಿಲವೃತ್ತಿಯವನು ಹೇಳಿದನು: “ಯಾವ ದೇಶಗಳು, ಯಾವ ಜನಪದಗಳು, ಯಾವ ಆಶ್ರಮಗಳು, ಯಾವ ಪರ್ವತಗಳು ಮತ್ತು ಯಾವ ನದಿಗಳು ಅಚ್ಯುತವೂ, ಪುಣ್ಯತಃ ಶ್ರೇಷ್ಠವೂ ಆಗಿವೆ ಮತ್ತು ತಿಳಿಯಲು ಶ್ರೇಷ್ಠವಾಗಿವೆ?”
13027025 ಸಿದ್ಧ ಉವಾಚ।
13027025a ತೇ ದೇಶಾಸ್ತೇ ಜನಪದಾಸ್ತೇಽಽಶ್ರಮಾಸ್ತೇ ಚ ಪರ್ವತಾಃ।
13027025c ಯೇಷಾಂ ಭಾಗೀರಥೀ ಗಂಗಾ ಮಧ್ಯೇನೈತಿ ಸರಿದ್ವರಾ।।
ಸಿದ್ಧನು ಹೇಳಿದನು: “ಅವು ಸರಿದ್ವರೆ ಭಾಗೀರಥೀ ಗಂಗೆಯು ಮಧ್ಯ ಹರಿಯುವ ದೇಶಗಳು, ಜನಪದಗಳು, ಆಶ್ರಮಗಳು ಮತ್ತು ಪರ್ವತಗಳು.
13027026a ತಪಸಾ ಬ್ರಹ್ಮಚರ್ಯೇಣ ಯಜ್ಞೈಸ್ತ್ಯಾಗೇನ ವಾ ಪುನಃ।
13027026c ಗತಿಂ ತಾಂ ನ ಲಭೇಜ್ಜಂತುರ್ಗಂಗಾಂ ಸಂಸೇವ್ಯ ಯಾಂ ಲಭೇತ್।।
ಗಂಗೆಯನ್ನು ಸೇವಿಸುವುದರಿಂದ ದೊರೆಯುವ ಗತಿಯು ತಪಸ್ಸು, ಬ್ರಹ್ಮಚರ್ಯ, ಯಜ್ಞಗಳು ಅಥವಾ ಮತ್ತು ತ್ಯಾಗದಿಂದಲೂ ದೊರೆಯುವುದಿಲ್ಲ.
13027027a ಸ್ಪೃಷ್ಟಾನಿ ಯೇಷಾಂ ಗಾಂಗೇಯೈಸ್ತೋಯೈರ್ಗಾತ್ರಾಣಿ ದೇಹಿನಾಮ್।
13027027c ನ್ಯಸ್ತಾನಿ ನ ಪುನಸ್ತೇಷಾಂ ತ್ಯಾಗಃ ಸ್ವರ್ಗಾದ್ವಿಧೀಯತೇ।।
ಯಾರ ಶರೀರಗಳು ಗಂಗೆಯ ನೀರನ್ನು ಮುಟ್ಟುತ್ತವೆಯೋ ಅಥವಾ ಮರಣಾನಂತಾರವಾದರೂ ಗಂಗೆಯಲ್ಲಿ ಹಾಕಲಾಗುತ್ತದೆಯೋ ಆ ದೇಹಿಗಳು ಸ್ವರ್ಗವನ್ನು ತ್ಯಜಿಸಬೇಕಾಗಿಲ್ಲ ಎಂದು ತಿಳಿದುಬರುತ್ತದೆ.
13027028a ಸರ್ವಾಣಿ ಯೇಷಾಂ ಗಾಂಗೇಯೈಸ್ತೋಯೈಃ ಕೃತ್ಯಾನಿ ದೇಹಿನಾಮ್।
13027028c ಗಾಂ ತ್ಯಕ್ತ್ವಾ ಮಾನವಾ ವಿಪ್ರ ದಿವಿ ತಿಷ್ಠಂತಿ ತೇಽಚಲಾಃ।।
ವಿಪ್ರ! ಎಲ್ಲ ಕಾರ್ಯಗಳನ್ನೂ ಗಂಗೆಯ ನೀರಿನಿಂದಲೇ ಮಾಡುವ ಮಾನವ ದೇಹಿಗಳು ಭೂಮಿಯನ್ನು ತ್ಯಜಿಸಿ ದಿವಿಯಲ್ಲಿ ಅಚಲರಾಗಿ ನಿಲ್ಲುತ್ತಾರೆ.
13027029a ಪೂರ್ವೇ ವಯಸಿ ಕರ್ಮಾಣಿ ಕೃತ್ವಾ ಪಾಪಾನಿ ಯೇ ನರಾಃ।
13027029c ಪಶ್ಚಾದ್ಗಂಗಾಂ ನಿಷೇವಂತೇ ತೇಽಪಿ ಯಾಂತ್ಯುತ್ತಮಾಂ ಗತಿಮ್।।
ಪೂರ್ವ ವಯಸ್ಸಿನಲ್ಲಿ ಪಾಪಕರ್ಮಗಳನ್ನು ಮಾಡಿದ ನರರು ನಂತರದಲ್ಲಿ ಗಂಗೆಯನ್ನು ಸೇವಿಸಿದರೆ ಅವರೂ ಕೂಡ ಉತ್ತಮ ಗತಿಯನ್ನು ಹೊಂದುತ್ತಾರೆ.
13027030a ಸ್ನಾತಾನಾಂ ಶುಚಿಭಿಸ್ತೋಯೈರ್ಗಾಂಗೇಯೈಃ ಪ್ರಯತಾತ್ಮನಾಮ್।
13027030c ವ್ಯುಷ್ಟಿರ್ಭವತಿ ಯಾ ಪುಂಸಾಂ ನ ಸಾ ಕ್ರತುಶತೈರಪಿ।।
ಗಂಗೆಯ ಶುದ್ಧನೀರಿನಲ್ಲಿ ಸ್ನಾನಮಾಡಿದ ಪ್ರಯತಾತ್ಮ ಮನುಷ್ಯರ ಪುಣ್ಯವು ನೂರು ಕ್ರತುಗಳನ್ನು ಮಾಡಿದರೂ ವೃದ್ಧಿಯಾಗದಷ್ಟು ವೃದ್ಧಿಯಾಗುವುದು.
13027031a ಯಾವದಸ್ಥಿ ಮನುಷ್ಯಸ್ಯ ಗಂಗಾತೋಯೇಷು ತಿಷ್ಠತಿ।
13027031c ತಾವದ್ವರ್ಷಸಹಸ್ರಾಣಿ ಸ್ವರ್ಗಂ ಪ್ರಾಪ್ಯ ಮಹೀಯತೇ।।
ಗಂಗೆಯ ನೀರಿನಲ್ಲಿ ತನ್ನ ಅಸ್ತಿಯು ಎಲ್ಲಿಯವರೆಗೆ ಇರುವುದೋ ಆ ಸಹಸ್ರ ವರ್ಷಗಳ ಪರ್ಯಂತ ಆ ಮನುಷ್ಯನು ಸ್ವರ್ಗವನ್ನು ಪಡೆದು ವಿರಾಜಿಸುತ್ತಾನೆ.
13027032a ಅಪಹತ್ಯ ತಮಸ್ತೀವ್ರಂ ಯಥಾ ಭಾತ್ಯುದಯೇ ರವಿಃ।
13027032c ತಥಾಪಹತ್ಯ ಪಾಪ್ಮಾನಂ ಭಾತಿ ಗಂಗಾಜಲೋಕ್ಷಿತಃ।।
ಉದಯಿಸುವ ರವಿಯು ಹೇಗೆ ಕತ್ತಲೆಯನ್ನು ಧ್ವಂಸಿಸಿ ತೀವ್ರವಾಗಿ ವಿರಾಜಿಸುತ್ತಾನೋ ಹಾಗೆ ಗಂಗಾಜಲದಲ್ಲಿ ಸ್ನಾನಮಾಡಿದವನು ತನ್ನ ಪಾಪಗಳನ್ನು ನಾಶಗೊಳಿಸಿ ವಿರಾಜಿಸುತ್ತಾನೆ.
13027033a ವಿಸೋಮಾ ಇವ ಶರ್ವರ್ಯೋ ವಿಪುಷ್ಪಾಸ್ತರವೋ ಯಥಾ।
13027033c ತದ್ವದ್ದೇಶಾ ದಿಶಶ್ಚೈವ ಹೀನಾ ಗಂಗಾಜಲೈಃ ಶುಭೈಃ।।
ಶುಭ ಗಂಗಾ ಜಲವಿಲ್ಲದ ದಿಕ್ಕು-ಪ್ರದೇಶಗಳು ಚಂದ್ರನಿಲ್ಲದ ರಾತ್ರಿಯಿದ್ದಂತೆ ಅಥವಾ ಪುಷ್ಪಗಳಿಲ್ಲ ವೃಕ್ಷಗಳಂತೆ.
13027034a ವರ್ಣಾಶ್ರಮಾ ಯಥಾ ಸರ್ವೇ ಸ್ವಧರ್ಮಜ್ಞಾನವರ್ಜಿತಾಃ।
13027034c ಕ್ರತವಶ್ಚ ಯಥಾಸೋಮಾಸ್ತಥಾ ಗಂಗಾಂ ವಿನಾ ಜಗತ್।।
ಸ್ವಧರ್ಮಗಳ ಜ್ಞಾನಗಳಿಲ್ಲದೇ ವರ್ಣಾಶ್ರಮಗಳೆಲ್ಲವೂ ಹೇಗೋ, ಸೋಮವಿಲ್ಲದ ಕ್ರತುಗಳು ಹೇಗೋ ಹಾಗೆ ಗಂಗೆಯಿಲ್ಲದ ಈ ಜಗತ್ತು.
13027035a ಯಥಾ ಹೀನಂ ನಭೋಽರ್ಕೇಣ ಭೂಃ ಶೈಲೈಃ ಖಂ ಚ ವಾಯುನಾ।
13027035c ತಥಾ ದೇಶಾ ದಿಶಶ್ಚೈವ ಗಂಗಾಹೀನಾ ನ ಸಂಶಯಃ।।
ನಭವು ಅರ್ಕನಿಲ್ಲದಿದ್ದರೆ ಹೇಗೋ, ಭೂಮಿಯು ಶೈಲಗಳನ್ನು ಹೊತ್ತಿರದೇ ಇದ್ದಿದ್ದರೆ ಹೇಗೋ, ಅಥವಾ ಆಕಾಶವು ವಾಯುವಿಲ್ಲದೇ ಇದ್ದರೆ ಹೇಗೋ ಹಾಗೆ ಗಂಗೆಯಿಲ್ಲದ ದೇಶ-ದಿಕ್ಕುಗಳು.
13027036a ತ್ರಿಷು ಲೋಕೇಷು ಯೇ ಕೇ ಚಿತ್ಪ್ರಾಣಿನಃ ಸರ್ವ ಏವ ತೇ।
13027036c ತರ್ಪ್ಯಮಾಣಾಃ ಪರಾಂ ತೃಪ್ತಿಂ ಯಾಂತಿ ಗಂಗಾಜಲೈಃ ಶುಭೈಃ।।
ಶುಭ ಗಂಗಾಜಲದಿಂದ ತರ್ಪಣಗಳನ್ನು ಇತ್ತ ಮೂರು ಲೋಕಗಳಲ್ಲಿ ಏನೆಲ್ಲ ಪ್ರಾಣಿಗಳಿವೆಯೋ ಅವೆಲ್ಲವುಗಳೂ ಪರಮ ತೃಪ್ತಿಯನ್ನು ಹೊಂದುತ್ತವೆ1.
13027037a ಯಸ್ತು ಸೂರ್ಯೇಣ ನಿಷ್ಟಪ್ತಂ ಗಾಂಗೇಯಂ ಪಿಬತೇ ಜಲಮ್।
13027037c ಗವಾಂ ನಿರ್ಹಾರನಿರ್ಮುಕ್ತಾದ್ಯಾವಕಾತ್ತದ್ವಿಶಿಷ್ಯತೇ।।
ಸೂರ್ಯನ ಬಿಸಿಲಿನಿಂದ ಬಿಸಿಯಾದ ಗಂಗೆಯ ನೀರನ್ನು ಕುಡಿಯುವುದು ಗೋವುಗಳ ಸಗಣಿಯಿಂದ ಆರಿಸಿ ತೆಗೆದ ಗೋಧಿಕ ಕಾಳುಗಳನ್ನು ಬೇಯಿಸಿ ತಿನ್ನುವ ವ್ರತಕ್ಕಿಂತಲೂ2 ಅಧಿಕ ಫಲವನ್ನು ನೀಡುತ್ತದೆ.
13027038a ಇಂದುವ್ರತಸಹಸ್ರಂ ತು ಚರೇದ್ಯಃ ಕಾಯಶೋಧನಮ್।
13027038c ಪಿಬೇದ್ಯಶ್ಚಾಪಿ ಗಂಗಾಂಭಃ ಸಮೌ ಸ್ಯಾತಾಂ ನ ವಾ ಸಮೌ।।
ಸಾವಿರ ಇಂದುವ್ರತಗಳನ್ನು3 ಮಾಡಿದವರ ಮತ್ತು ಗಂಗೆಯ ನೀರನ್ನು ಕುಡಿದವರ ಕಾಯಶೋಧನವನ್ನು ತುಲನೆ ಮಾಡಿದರೆ ಎರಡೂ ಸಮವಾಗಿರಬಹುದು ಅಥವಾ ಗಂಗೆಯ ನೀರನ್ನು ಕುಡಿದವರ ಕಾಯಶೋಧನೆಯೇ ಅಧಿಕವಾಗಿರಬಹುದು.
13027039a ತಿಷ್ಠೇದ್ಯುಗಸಹಸ್ರಂ ತು ಪಾದೇನೈಕೇನ ಯಃ ಪುಮಾನ್।
13027039c ಮಾಸಮೇಕಂ ತು ಗಂಗಾಯಾಂ ಸಮೌ ಸ್ಯಾತಾಂ ನ ವಾ ಸಮೌ।।
ಸಾವಿರ ಯುಗಗಳ ಪರ್ಯಂತ ಒಂದೇ ಕಾಲಿನ ಮೇಲೆ ನಿಂತು ತಪಸ್ಸುಮಾಡಿದವನು ಮತ್ತು ಒಂದೇ ತಿಂಗಳು ಗಂಗಾತೀರದಲ್ಲಿ ತಪಸ್ಸುಮಾಡಿದವನು ಇಬ್ಬರೂ ಒಂದೇ ಸಮನಾಗಿರಬಹುದು ಅಥವಾ ಗಂಗೆಯ ತೀರದಲ್ಲಿ ತಪಸ್ಸುಮಾಡಿದವನೇ ಅಧಿಕವಾಗಿರಲೂ ಬಹುದು.
13027040a ಲಂಬೇತಾವಾಕ್ಶಿರಾ ಯಸ್ತು ಯುಗಾನಾಮಯುತಂ ಪುಮಾನ್।
13027040c ತಿಷ್ಠೇದ್ಯಥೇಷ್ಟಂ ಯಶ್ಚಾಪಿ ಗಂಗಾಯಾಂ ಸ ವಿಶಿಷ್ಯತೇ।।
ಹತ್ತು ಸಾವಿರ ವರ್ಷಗಳು ತಲೆಯನ್ನು ಕೆಳಗಿ ಮಾಡಿ ಮರದಲ್ಲಿ ನೇತಾಡುತ್ತಾ ತಪಸ್ಸುಮಾಡುವ ನರನಿಗಿಂತಲೂ ಬೇಕಾದಷ್ಟು ಕಾಲ ಗಂಗಾತೀರದಲ್ಲಿರುವವನು ವಿಶಿಷ್ಠನಾಗುತ್ತಾನೆ.
13027041a ಅಗ್ನೌ ಪ್ರಾಪ್ತಂ ಪ್ರಧೂಯೇತ ಯಥಾ ತೂಲಂ ದ್ವಿಜೋತ್ತಮ।
13027041c ತಥಾ ಗಂಗಾವಗಾಢಸ್ಯ ಸರ್ವಂ ಪಾಪಂ ಪ್ರಧೂಯತೇ।।
ದ್ವಿಜೋತ್ತಮ! ಅಗ್ನಿಯಲ್ಲಿ ಹಾಕಿದ ಹತ್ತಿಯ ರಾಶಿಯು ಹೇಗೆ ಭಸ್ಮವಾಗಿಹೋಗುತ್ತದೆಯೋ ಹಾಗೆ ಗಂಗೆಯಲ್ಲಿ ಮುಳುಗಿದವನ ಸರ್ವ ಪಾಪಗಳೂ ಭಸ್ಮವಾಗಿಹೋಗುತ್ತವೆ.
13027042a ಭೂತಾನಾಮಿಹ ಸರ್ವೇಷಾಂ ದುಃಖೋಪಹತಚೇತಸಾಮ್।
13027042c ಗತಿಮನ್ವೇಷಮಾಣಾನಾಂ ನ ಗಂಗಾಸದೃಶೀ ಗತಿಃ।।
ದುಃಖದಿಂದ ಹತಚೇತಸರಾಗಿ ಆಶ್ರಯವನ್ನು ಹುಡುಕುವ ಸರ್ವ ಭೂತಗಳಿಗೂ ಗಂಗೆಯಂಥಹ ಆಶ್ರಯವು ದೊರಕುವುದಿಲ್ಲ.
13027043a ಭವಂತಿ ನಿರ್ವಿಷಾಃ ಸರ್ಪಾ ಯಥಾ ತಾರ್ಕ್ಷ್ಯಸ್ಯ ದರ್ಶನಾತ್।
13027043c ಗಂಗಾಯಾ ದರ್ಶನಾತ್ತದ್ವತ್ಸರ್ವಪಾಪೈಃ ಪ್ರಮುಚ್ಯತೇ।।
ವತ್ಸ! ತಾರ್ಕ್ಷ್ಯ ಗರುಡನ ದರ್ಶನದಿಂದ ಸರ್ಪಗಳು ಹೇಗೆ ನಿರ್ವಿಷವಾಗುತ್ತವೆಯೋ ಹಾಗೆ ಗಂಗೆಯ ದರ್ಶನದಿಂದ ಮನುಷ್ಯನು ಸರ್ವ ಪಾಪಗಳಿಂದ ಮುಕ್ತನಾಗುತ್ತಾನೆ.
13027044a ಅಪ್ರತಿಷ್ಠಾಶ್ಚ ಯೇ ಕೇ ಚಿದಧರ್ಮಶರಣಾಶ್ಚ ಯೇ।
13027044c ತೇಷಾಂ ಪ್ರತಿಷ್ಠಾ ಗಂಗೇಹ ಶರಣಂ ಶರ್ಮ ವರ್ಮ ಚ।।
ಯಾವುದೋ ಅಧರ್ಮವನ್ನಾಶ್ರಯಿಸಿ ಯಾರಿಗೆ ಯಾವರೀತಿಯ ಆಧಾರವೂ ಇಲ್ಲವೋ ಅವರಿಗೂ ಗಂಗೆಯು ಬೆಂಬಲವಾಗುತ್ತಾಳೆ, ಶರಣ್ಯಳಾಗುತ್ತಾಳೆ, ಸುಖಕರಳಾಗುತ್ತಾಳೆ ಮತ್ತು ರಕ್ಷಕಳಾಗುತ್ತಾಳೆ.
13027045a ಪ್ರಕೃಷ್ಟೈರಶುಭೈರ್ಗ್ರಸ್ತಾನನೇಕೈಃ ಪುರುಷಾಧಮಾನ್।
13027045c ಪತತೋ ನರಕೇ ಗಂಗಾ ಸಂಶ್ರಿತಾನ್ಪ್ರೇತ್ಯ ತಾರಯೇತ್।।
ಅಧಿಕವಾದ ಅಶುಭ ಅನೇಕ ಪಾಪಗಳನ್ನು ಮಾಡಿ ನರಕಕ್ಕೆ ಬೀಳುತ್ತಿರುವ ಪುರುಷಾಧಮರು ಗಂಗೆಯನ್ನು ಆಶ್ರಯಿಸಿದರೆ ಮರಣಾನಂತರ ಅವರೂ ಕೂಡ ನರಕದಿಂದ ಪಾರಾಗುತ್ತಾರೆ.
13027046a ತೇ ಸಂವಿಭಕ್ತಾ ಮುನಿಭಿರ್ನೂನಂ ದೇವೈಃ ಸವಾಸವೈಃ।
13027046c ಯೇಽಭಿಗಚ್ಚಂತಿ ಸತತಂ ಗಂಗಾಮಭಿಗತಾಂ ಸುರೈಃ।।
ಮತಿಮತರಲ್ಲಿ ಶ್ರೇಷ್ಠ! ಸತತವೂ ಗಂಗೆಗೆ ಹೋಗುವವರು ನಿಶ್ಚಯವಾಗಿಯೂ ಮುನಿಗಳೊಂದಿಗೆ ಮತ್ತು ಇಂದ್ರಸಹಿತ ಸುರರೊಂದಿಗೆ ಸ್ವರ್ಗಸುಖಕ್ಕೆ ಪಾಲುದಾರರಾಗುತ್ತಾರೆ.
13027047a ವಿನಯಾಚಾರಹೀನಾಶ್ಚ ಅಶಿವಾಶ್ಚ ನರಾಧಮಾಃ।
13027047c ತೇ ಭವಂತಿ ಶಿವಾ ವಿಪ್ರ ಯೇ ವೈ ಗಂಗಾಂ ಸಮಾಶ್ರಿತಾಃ।।
ವಿಪ್ರ! ವಿನಯಾಚಾರ ಹೀನ ಅಶುಭ ನರಾಧಮರೂ ಗಂಗೆಯನ್ನು ಆಶ್ರಯಿಸಿದರೆ ಕಲ್ಯಾಣಸ್ವರೂಪರಾಗುತ್ತಾರೆ.
13027048a ಯಥಾ ಸುರಾಣಾಮಮೃತಂ ಪಿತೄಣಾಂ ಚ ಯಥಾ ಸ್ವಧಾ।
13027048c ಸುಧಾ ಯಥಾ ಚ ನಾಗಾನಾಂ ತಥಾ ಗಂಗಾಜಲಂ ನೃಣಾಮ್।।
ಸುರರಿಗೆ ಅಮೃತವು ಹೇಗೋ, ಪಿತೃಗಳಿಗೆ ಸ್ವಧೆಯು ಹೇಗೋ ಮತ್ತು ನಾಗಗಳಿಗೆ ಸುಧೆಯು ಹೇಗೋ ಹಾಗೆ ನರರಿಗೆ ಗಂಗಾಜಲವು.
13027049a ಉಪಾಸತೇ ಯಥಾ ಬಾಲಾ ಮಾತರಂ ಕ್ಷುಧಯಾರ್ದಿತಾಃ।
13027049c ಶ್ರೇಯಸ್ಕಾಮಾಸ್ತಥಾ ಗಂಗಾಮುಪಾಸಂತೀಹ ದೇಹಿನಃ।।
ಹಸಿವೆಯಿಂದ ಬಳಲಿದ ಬಾಲಕರು ಮಾತೆಯನ್ನು ಹೇಗೆ ಉಪಾಸಿಸುತ್ತಾರೋ ಹಾಗೆ ಶ್ರೇಯಸ್ಸನ್ನು ಬಯಸುವ ದೇಹಿಗಳು ಗಂಗೆಯನ್ನು ಉಪಾಸಿಸುತ್ತಾರೆ.
13027050a ಸ್ವಾಯಂಭುವಂ ಯಥಾ ಸ್ಥಾನಂ ಸರ್ವೇಷಾಂ ಶ್ರೇಷ್ಠಮುಚ್ಯತೇ।
13027050c ಸ್ನಾತಾನಾಂ ಸರಿತಾಂ ಶ್ರೇಷ್ಠಾ ಗಂಗಾ ತದ್ವದಿಹೋಚ್ಯತೇ।।
ಸರ್ವಲೋಕಗಳಲ್ಲಿ ಬ್ರಹ್ಮಲೋಕವು ಶ್ರೇಷ್ಠವೆಂದು ಹೇಳುವಂತೆ ಸ್ನಾನಮಾಡಿದವರಿಗೆ ಸರಿತಶ್ರೇಷ್ಠೆ ಗಂಗೆಯು ಶ್ರೇಷ್ಠವೆಂದು ಹೇಳುತ್ತಾರೆ.
13027051a ಯಥೋಪಜೀವಿನಾಂ ಧೇನುರ್ದೇವಾದೀನಾಂ ಧರಾ ಸ್ಮೃತಾ।
13027051c ತಥೋಪಜೀವಿನಾಂ ಗಂಗಾ ಸರ್ವಪ್ರಾಣಭೃತಾಮಿಹ।।
ದೇವತೆಗಳಿಗೆ ಧೇನು ಧರೆಯು ಹೇಗೆ ಆಶ್ರಯಭೂತವೂ ಹಾಗೆ ಸರ್ವಪ್ರಾಣಿಗಳನ್ನು ಧರಿಸಿರುವ ಗಂಗೆಯು ಅವುಗಳಿಗೆ ಆಶ್ರಯವು.
13027052a ದೇವಾಃ ಸೋಮಾರ್ಕಸಂಸ್ಥಾನಿ ಯಥಾ ಸತ್ರಾದಿಭಿರ್ಮಖೈಃ।
13027052c ಅಮೃತಾನ್ಯುಪಜೀವಂತಿ ತಥಾ ಗಂಗಾಜಲಂ ನರಾಃ।।
ಸತ್ರಾದಿಗಳ ಮುಖೇನ ದೇವತೆಗಳು ಹೇಗೆ ಸೂರ್ಯ-ಚಂದ್ರರಲ್ಲಿರುವ ಅಮೃತವನ್ನು ಸೇವಿಸಿ ಉಪಜೀವಿಸುತ್ತಾರೋ ಹಾಗೆ ನರರು ಗಂಗಾಜಲದ ಅಮೃತದಿಂದ ಉಪಜೀವಿಸುತ್ತಾರೆ.
13027053a ಜಾಹ್ನವೀಪುಲಿನೋತ್ಥಾಭಿಃ ಸಿಕತಾಭಿಃ ಸಮುಕ್ಷಿತಃ।
13027053c ಮನ್ಯತೇ ಪುರುಷೋಽಽತ್ಮಾನಂ ದಿವಿಷ್ಠಮಿವ ಶೋಭಿತಮ್।।
ಜಾಹ್ನವಿಯ ತೀರದಲ್ಲಿ ಗಾಳಿಯಿಂದ ಮೇಲೆದ್ದ ಮರಳು ಸೋಕಿದರೂ ಪುರುಷರು ತಮ್ಮನ್ನು ಶೋಭಿಸುವ ದೇವತೆಗಳೆಂದೇ ತಿಳಿದುಕೊಳ್ಳುತ್ತಾರೆ.
13027054a ಜಾಹ್ನವೀತೀರಸಂಭೂತಾಂ ಮೃದಂ ಮೂರ್ಧ್ನಾ ಬಿಭರ್ತಿ ಯಃ।
13027054c ಬಿಭರ್ತಿ ರೂಪಂ ಸೋಽರ್ಕಸ್ಯ ತಮೋನಾಶಾತ್ಸುನಿರ್ಮಲಮ್।।
ಜಾಹ್ನವೀ ತೀರದ ಮಣ್ಣನ್ನು ತನ್ನ ತಲೆಗೆ ಹಾಕಿಕೊಳ್ಳುವವನು ತಮವನ್ನು ನಾಶಪಡಿಸುವ ನಿರ್ಮಲ ಸೂರ್ಯನ ರೂಪದಿಂದ ಬೆಳಗುತ್ತಾನೆ.
13027055a ಗಂಗೋರ್ಮಿಭಿರಥೋ ದಿಗ್ಧಃ ಪುರುಷಂ ಪವನೋ ಯದಾ।
13027055c ಸ್ಪೃಶತೇ ಸೋಽಪಿ ಪಾಪ್ಮಾನಂ ಸದ್ಯ ಏವಾಪಮಾರ್ಜತಿ।।
ಗಂಗೆಯ ಅಲೆಗಳಿಂದ ತೋಯ್ದ ಗಾಳಿಯು ಪುರುಷನನ್ನು ಸ್ಪರ್ಷಿಸುತ್ತಲೇ ಅವನ ಪಾಪಗಳು ಕೂಡಲೇ ಕಳೆದುಹೋಗುತ್ತವೆ.
13027056a ವ್ಯಸನೈರಭಿತಪ್ತಸ್ಯ ನರಸ್ಯ ವಿನಶಿಷ್ಯತಃ।
13027056c ಗಂಗಾದರ್ಶನಜಾ ಪ್ರೀತಿರ್ವ್ಯಸನಾನ್ಯಪಕರ್ಷತಿ।।
ವ್ಯಸನಗಳಿಂದ ಪೀಡಿತನಾಗಿ ನಾಶವಾಗುತ್ತಿರುವ ಮನುಷ್ಯನು ಗಂಗಾನದಿಯ ದರ್ಶನದಿಂದ ವ್ಯಸನಗಳನ್ನು ಕಳೆದುಕೊಂಡು ಪ್ರೀತಮನಸ್ಕನಾಗುತ್ತಾನೆ.
13027057a ಹಂಸಾರಾವೈಃ ಕೋಕರವೈ ರವೈರನ್ಯೈಶ್ಚ ಪಕ್ಷಿಣಾಮ್।
13027057c ಪಸ್ಪರ್ಧ ಗಂಗಾ ಗಂಧರ್ವಾನ್ಪುಲಿನೈಶ್ಚ ಶಿಲೋಚ್ಚಯಾನ್।।
ಹಂಸಗಳ ಕೂಗು, ಕೋಕಿಲಗಳ ಕೂಗು ಮತ್ತು ಅನ್ಯ ಪಕ್ಷಿಗಳ ಕೂಗಿನಿಂದ ಗಂಗೆಯು ಗಂಧರ್ವರೊಂದಿಗೆ ಸ್ಪರ್ಧಿಸುತ್ತಾಳೆ. ಗಂಗೆಯ ಮರಳೂ ಕೂಡ ಪರ್ವತಗಳೊಂದಿಗೆ ಸ್ಪರ್ಧಿಸುತ್ತದೆ.
13027058a ಹಂಸಾದಿಭಿಃ ಸುಬಹುಭಿರ್ವಿವಿಧೈಃ ಪಕ್ಷಿಭಿರ್ವೃತಾಮ್।
13027058c ಗಂಗಾಂ ಗೋಕುಲಸಂಬಾಧಾಂ ದೃಷ್ಟ್ವಾ ಸ್ವರ್ಗೋಽಪಿ ವಿಸ್ಮೃತಃ।।
ಹಂಸಾದಿ ಬಹುವಿಧದ ಪಕ್ಷಿಗಳಿಂದ ಮತ್ತು ಗೋವುಗಳಿಂದ ತುಂಬಿರುವ ಗಂಗೆಯನ್ನು ನೋಡಿದರೆ ಸ್ವರ್ಗವೂ ಮರೆತುಹೋಗುತ್ತದೆ.
13027059a ನ ಸಾ ಪ್ರೀತಿರ್ದಿವಿಷ್ಠಸ್ಯ ಸರ್ವಕಾಮಾನುಪಾಶ್ನತಃ।
13027059c ಅಭವದ್ಯಾ ಪರಾ ಪ್ರೀತಿರ್ಗಂಗಾಯಾಃ ಪುಲಿನೇ ನೃಣಾಮ್।।
ಗಂಗೆಯ ಮರಳುದಿಣ್ಣೆಗಳಲ್ಲಿ ವಾಸಿಸುವನಿಗೆ ಉಂಟಾಗುವ ಅನಿರ್ವಚನೀಯ ಆನಂದವು ಸ್ವರ್ಗದಲ್ಲಿಯೇ ಇದ್ದು ಸರ್ವಕಾಮನೆಗಳನ್ನು ಉಪಭೋಗಿಸುವವನಿಗೂ ಪ್ರಾಪ್ತವಾಗುವುದಿಲ್ಲ.
13027060a ವಾಙ್ಮನಃಕರ್ಮಜೈರ್ಗ್ರಸ್ತಃ ಪಾಪೈರಪಿ ಪುಮಾನಿಹ।
13027060c ವೀಕ್ಷ್ಯ ಗಂಗಾಂ ಭವೇತ್ಪೂತಸ್ತತ್ರ ಮೇ ನಾಸ್ತಿ ಸಂಶಯಃ।।
ಮಾತು, ಮನಸ್ಸು ಮತ್ತು ಕರ್ಮಗಳಿಂದ ಪಾಪಗಳನ್ನೆಸಗಿದ ಪುರುಷನೂ ಕೂಡ ಗಂಗೆಯನ್ನು ನೋಡಿ ಪವಿತ್ರನಾಗುತ್ತಾನೆ ಎನ್ನುವುದರಲ್ಲಿ ನನಗೆ ಸಂಶಯವೇ ಇಲ್ಲ.
13027061a ಸಪ್ತಾವರಾನ್ಸಪ್ತ ಪರಾನ್ಪಿತೄಂಸ್ತೇಭ್ಯಶ್ಚ ಯೇ ಪರೇ।
13027061c ಪುಮಾಂಸ್ತಾರಯತೇ ಗಂಗಾಂ ವೀಕ್ಷ್ಯ ಸ್ಪೃಷ್ಟ್ವಾವಗಾಹ್ಯ ಚ।।
ಗಂಗೆಯನ್ನು ನೋಡುವವನು, ಸ್ಪರ್ಷಿಸುವವನು ಮತ್ತು ಅದರಲ್ಲಿ ಸ್ನಾನಮಾಡುವ ಪುರುಷನು ತನ್ನನ್ನಲ್ಲದೇ ತನ್ನ ಹಿಂದಿನ ಏಳು ಪೀಳಿಗೆಯವರನ್ನೂ ಮುಂದಿನ ಏಳು ಪೀಳಿಗೆಯವರನ್ನೂ ಉದ್ಧರಿಸುತ್ತಾನೆ.
13027062a ಶ್ರುತಾಭಿಲಷಿತಾ ದೃಷ್ಟಾ ಸ್ಪೃಷ್ಟಾ ಪೀತಾವಗಾಹಿತಾ।
13027062c ಗಂಗಾ ತಾರಯತೇ ನೃಣಾಮುಭೌ ವಂಶೌ ವಿಶೇಷತಃ।।
ಗಂಗೆಯ ಕುರಿತು ಕೇಳಿ, ನೋಡಲು ಅಭಿಲಾಷಿಸಿ, ನೋಡಿ, ಮುಟ್ಟಿ, ಕುಡಿದು ಮತ್ತು ಸ್ನಾನಮಾಡಿದ ಮನುಷ್ಯನು ತನ್ನ ತಂದೆ-ತಾಯಿಗಳ ಎರಡೂ ವಂಶಗಳನ್ನೂ ವಿಶೇಷವಾಗಿ ಉದ್ಧರಿಸುತ್ತಾನೆ.
13027063a ದರ್ಶನಾತ್ಸ್ಪರ್ಶನಾತ್ಪಾನಾತ್ತಥಾ ಗಂಗೇತಿ ಕೀರ್ತನಾತ್।
13027063c ಪುನಾತ್ಯಪುಣ್ಯಾನ್ಪುರುಷಾನ್ ಶತಶೋಽಥ ಸಹಸ್ರಶಃ।।
ಗಂಗೆಯು ತನ್ನ ದರ್ಶನದಿಂದ, ಸ್ಪರ್ಶದಿಂದ, ಪಾನದಿಂದ ಮತ್ತು ಗಂಗೆಯೆಂದು ಭಜಿಸುವುದರಿಂದ ನೂರಾರು ಸಹಸ್ರಾರು ಪಾಪಾತ್ಮ ಪುರುಷರನ್ನು ಪುನೀತರನ್ನಾಗಿ ಮಾಡುತ್ತಾಳೆ.
13027064a ಯ ಇಚ್ಚೇತ್ಸಫಲಂ ಜನ್ಮ ಜೀವಿತಂ ಶ್ರುತಮೇವ ಚ।
13027064c ಸ ಪಿತೄಂಸ್ತರ್ಪಯೇದ್ಗಂಗಾಮಭಿಗಮ್ಯ ಸುರಾಂಸ್ತಥಾ।।
ತನ್ನ ಜನ್ಮ, ಜೀವಿತ ಮತ್ತು ವಿದ್ಯೆಯು ಸಫಲವಾಗಬೇಕೆಂದು ಇಚ್ಛಿಸುವವನು ಗಂಗೆಗೆ ಹೋಗಿ ಪಿತೃಗಳಿಗೂ ದೇವತೆಗಳಿಗೂ ತರ್ಪಣಗಳನ್ನು ನೀಡಬೇಕು.
13027065a ನ ಸುತೈರ್ನ ಚ ವಿತ್ತೇನ ಕರ್ಮಣಾ ನ ಚ ತತ್ಫಲಮ್।
13027065c ಪ್ರಾಪ್ನುಯಾತ್ಪುರುಷೋಽತ್ಯಂತಂ ಗಂಗಾಂ ಪ್ರಾಪ್ಯ ಯದಾಪ್ನುಯಾತ್।।
ಗಂಗೆಯನ್ನು ತಲುಪಿ ಪಡೆಯುವ ಅತ್ಯಂತ ಫಲವನ್ನು ಮನುಷ್ಯನು ಮಕ್ಕಳಿಂದಲೂ, ವಿತ್ತದಿಂದಲೂ ಅಥವ ಕರ್ಮಗಳಿಂದಲೂ ಪಡೆಯುವುದಿಲ್ಲ.
13027066a ಜಾತ್ಯಂಧೈರಿಹ ತುಲ್ಯಾಸ್ತೇ ಮೃತೈಃ ಪಂಗುಭಿರೇವ ಚ।
13027066c ಸಮರ್ಥಾ ಯೇ ನ ಪಶ್ಯಂತಿ ಗಂಗಾಂ ಪುಣ್ಯಜಲಾಂ ಶಿವಾಮ್।।
ಸಮರ್ಥರಾಗಿದ್ದರೂ ಶಿವೆ ಗಂಗೆಯ ಪುಣ್ಯಜಲವನ್ನು ಕಾಣದವರು ಹುಟ್ಟು ಕುರುಡರಿಗೆ, ಹುಟ್ಟು ಹೆಳವರಿಗೆ ಮತ್ತು ಸತ್ತವರಿಗೆ ಸಮಾನರು.
13027067a ಭೂತಭವ್ಯಭವಿಷ್ಯಜ್ಞೈರ್ಮಹರ್ಷಿಭಿರುಪಸ್ಥಿತಾಮ್।
13027067c ದೇವೈಃ ಸೇಂದ್ರೈಶ್ಚ ಕೋ ಗಂಗಾಂ ನೋಪಸೇವೇತ ಮಾನವಃ।।
ಭೂತ-ವರ್ತಮಾನ-ಭವಿಷ್ಯಗಳನ್ನು ತಿಳಿದಿರುವ ಮಹರ್ಷಿಗಳೂ ಮತ್ತು ಇಂದ್ರನೊಂದಿಗೆ ದೇವತೆಗಳೂ ಪೂಜಿಸುವ ಗಂಗೆಯನ್ನು ಯಾವ ಮಾನವನು ತಾನೇ ಪೂಜಿಸುವುದಿಲ್ಲ?
13027068a ವಾನಪ್ರಸ್ಥೈರ್ಗೃಹಸ್ಥೈಶ್ಚ ಯತಿಭಿರ್ಬ್ರಹ್ಮಚಾರಿಭಿಃ।
13027068c ವಿದ್ಯಾವದ್ಭಿಃ ಶ್ರಿತಾಂ ಗಂಗಾಂ ಪುಮಾನ್ಕೋ ನಾಮ ನಾಶ್ರಯೇತ್।।
ವಾನಪ್ರಸ್ಥರು, ಗೃಹಸ್ಥರು, ಯತಿಗಳು, ಬ್ರಹ್ಮಚಾರಿಗಳು ಮತ್ತು ವಿದ್ಯಾವಂತರೂ ಆಶ್ರಯಿಸುವ ಗಂಗೆಯನ್ನು ಯಾವ ಪುರುಷನು ತಾನೇ ಆಶ್ರಯಿಸುವುದಿಲ್ಲ?
13027069a ಉತ್ಕ್ರಾಮದ್ಭಿಶ್ಚ ಯಃ ಪ್ರಾಣೈಃ ಪ್ರಯತಃ ಶಿಷ್ಟಸಂಮತಃ।
13027069c ಚಿಂತಯೇನ್ಮನಸಾ ಗಂಗಾಂ ಸ ಗತಿಂ ಪರಮಾಂ ಲಭೇತ್।।
ಶಿಷ್ಟಸಂಮತನೂ ಸಂಯಮಚಿತ್ತನೂ ಆದವನು ಪ್ರಾಣಗಳು ಹೋಗುತ್ತಿರುವ ಸಮಯದಲ್ಲಿಯಾದರೂ ಮನಸ್ಸಿನಲ್ಲಿ ಗಂಗೆಯನ್ನು ಸ್ಮರಿಸಿದ್ದೇ ಆದರೆ ಅವನು ಪರಮ ಗತಿಯನ್ನು ಪಡೆಯುತ್ತಾನೆ.
13027070a ನ ಭಯೇಭ್ಯೋ ಭಯಂ ತಸ್ಯ ನ ಪಾಪೇಭ್ಯೋ ನ ರಾಜತಃ।
13027070c ಆ ದೇಹಪತನಾದ್ಗಂಗಾಮುಪಾಸ್ತೇ ಯಃ ಪುಮಾನಿಹ।।
ಆಜೀವಪರ್ಯಂತವಾಗಿ ಗಂಗೆಯ ಉಪಾಸನೆಮಾಡುವ ಮನುಷ್ಯನಿಗೆ ಭಯದಿಂದ ಭಯವೂ, ಪಾಪಗಳಿಂದ ಭಯವೂ ಮತ್ತು ರಾಜನಿಂದ ಭಯವೂ ಇರುವುದಿಲ್ಲ.
13027071a ಗಗನಾದ್ಯಾಂ ಮಹಾಪುಣ್ಯಾಂ ಪತಂತೀಂ ವೈ ಮಹೇಶ್ವರಃ।
13027071c ದಧಾರ ಶಿರಸಾ ದೇವೀಂ ತಾಮೇವ ದಿವಿ ಸೇವತೇ।।
ಗಗನದಿಂದ ಬೀಳುತ್ತಿದ್ದ ಆ ಮಹಾಪುಣ್ಯೆ ಗಂಗೆಯನ್ನು ಮಹೇಶ್ವರನು ಶಿರಸಾ ಧರಿಸಿದನು. ಅದೇ ದೇವಿಯನ್ನು ದಿವಿಯಲ್ಲಿ ಸುರರು ಸೇವಿಸುತ್ತಾರೆ.
13027072a ಅಲಂಕೃತಾಸ್ತ್ರಯೋ ಲೋಕಾಃ ಪಥಿಭಿರ್ವಿಮಲೈಸ್ತ್ರಿಭಿಃ।
13027072c ಯಸ್ತು ತಸ್ಯಾ ಜಲಂ ಸೇವೇತ್ಕೃತಕೃತ್ಯಃ ಪುಮಾನ್ಭವೇತ್।।
ಮೂರು ನಿರ್ಮಲ ಮಾರ್ಗಗಳ ಮೂಲಕ ಸ್ವರ್ಗ-ಭೂಮಿ-ಪಾತಾಳಗಳೆಂಬ ಮೂರು ಲೋಕಗಳಿಗೂ ಅಲಂಕಾರಪ್ರಾಯಳಾದ ಗಂಗೆಯ ಜಲವನ್ನು ಸೇವಿಸುವ ಪುರುಷನು ಕೃತಕೃತ್ಯನಾಗುತ್ತಾನೆ.
13027073a ದಿವಿ ಜ್ಯೋತಿರ್ಯಥಾದಿತ್ಯಃ ಪಿತೄಣಾಂ ಚೈವ ಚಂದ್ರಮಾಃ।
13027073c ದೇವೇಶಶ್ಚ ಯಥಾ ನೄಣಾಂ ಗಂಗೇಹ ಸರಿತಾಂ ತಥಾ।।
ದಿವಿಯಲ್ಲಿ ನಕ್ಷತ್ರಗಳಲ್ಲಿ ಆದಿತ್ಯನು ಹೇಗೋ, ಪಿತೃಗಳಲ್ಲಿ ಚಂದ್ರಮನು ಹೇಗೋ ಮತ್ತು ಮಾನವರಲ್ಲಿ ರಾಜನು ಹೇಗೋ ಹಾಗೆ ನದಿಗಳಲ್ಲಿ ಗಂಗೆಯು ಶ್ರೇಷ್ಠಳು.
13027074a ಮಾತ್ರಾ ಪಿತ್ರಾ ಸುತೈರ್ದಾರೈರ್ವಿಯುಕ್ತಸ್ಯ ಧನೇನ ವಾ।
13027074c ನ ಭವೇದ್ಧಿ ತಥಾ ದುಃಖಂ ಯಥಾ ಗಂಗಾವಿಯೋಗಜಮ್।।
ತಾಯಿ, ತಂದೆ, ಮಕ್ಕಳು, ಹೆಂಡತಿ ಅಥವಾ ಧನದ ವಿಯೋಗದಿಂದ ಉಂಟಾಗುವ ದುಃಖಕ್ಕಿಂತಲೂ ಗಂಗೆಯ ವಿಯೋಗದಿಂದ ಉಂಟಾಗುವು ದುಃಖವು ಹೆಚ್ಚಿನದು.
13027075a ನಾರಣ್ಯೈರ್ನೇಷ್ಟವಿಷಯೈರ್ನ ಸುತೈರ್ನ ಧನಾಗಮೈಃ।
13027075c ತಥಾ ಪ್ರಸಾದೋ ಭವತಿ ಗಂಗಾಂ ವೀಕ್ಷ್ಯ ಯಥಾ ನೃಣಾಮ್।।
ಹಾಗೆಯೇ ಗಂಗೆಯನ್ನು ನೋಡಿ ಮನುಷ್ಯರಿಗೆ ದೊರೆಯುವ ಪ್ರಸನ್ನತೆಯು ವನಗಳನ್ನು ನೋಡುವುದರಿಂದಾಗಲೀ, ವಿಷಯ ವಸ್ತುಗಳನ್ನು ನೋಡುವುದರಿಂದಾಗಲೀ, ಮಕ್ಕಳನ್ನು ಪಡೆಯುವುದರಿಂದಾಗಲೀ ಅಥವಾ ಧನಾಗಮನದಿಂದಾಗಲೀ ಉಂಟಾಗುವುದಿಲ್ಲ.
13027076a ಪೂರ್ಣಮಿಂದುಂ ಯಥಾ ದೃಷ್ಟ್ವಾ ನೃಣಾಂ ದೃಷ್ಟಿಃ ಪ್ರಸೀದತಿ।
13027076c ಗಂಗಾಂ ತ್ರಿಪಥಗಾಂ ದೃಷ್ಟ್ವಾ ತಥಾ ದೃಷ್ಟಿಃ ಪ್ರಸೀದತಿ।।
ಪೂರ್ಣಚಂದ್ರನನ್ನು ನೋಡಿದ ಮನುಷ್ಯರ ದೃಷ್ಟಿಯು ಹೇಗೆ ಪ್ರಸನ್ನಗೊಳ್ಳುತ್ತದೆಯೋ ಹಾಗೆ ತ್ರಿಪಥಗೆ ಗಂಗೆಯನ್ನು ನೋಡಿ ದೃಷ್ಟಿಯು ಪ್ರಸನ್ನಗೊಳ್ಳುತ್ತದೆ.
13027077a ತದ್ಭಾವಸ್ತದ್ಗತಮನಾಸ್ತನ್ನಿಷ್ಠಸ್ತತ್ಪರಾಯಣಃ।
13027077c ಗಂಗಾಂ ಯೋಽನುಗತೋ ಭಕ್ತ್ಯಾ ಸ ತಸ್ಯಾಃ ಪ್ರಿಯತಾಂ ವ್ರಜೇತ್।।
ಅವಳಲ್ಲಿಯೇ ನೆಟ್ಟಮನಸ್ಸುಳ್ಳವನಾಗಿ, ಭಕ್ತಿಯಿಂದ ಅವಳನ್ನೇ ಅನುಸರಿಸಿ ಹೋಗುತ್ತಾ ಅವಳನ್ನೇ ಆಶ್ರಯಿಸಿರುವವನು ಗಂಗೆಯ ಪೂರ್ಣಪ್ರೀತಿಗೆ ಪಾತ್ರನಾಗುತ್ತಾನೆ.
13027078a ಭೂಃಸ್ಥೈಃ ಖಸ್ಥೈರ್ದಿವಿಷ್ಠೈಶ್ಚ ಭೂತೈರುಚ್ಚಾವಚೈರಪಿ।
13027078c ಗಂಗಾ ವಿಗಾಹ್ಯಾ ಸತತಮೇತತ್ಕಾರ್ಯತಮಂ ಸತಾಮ್।।
ಭೂಮಿಯಲ್ಲಿರುವ, ಆಕಾಶದಲ್ಲಿರುವ ಮತ್ತು ದಿವಿಯಲ್ಲಿರುವ ಎಲ್ಲ ಬಗೆಯ ಪ್ರಾಣಿಗಳೂ ಸತತವೂ ಗಂಗೆಯಲ್ಲಿ ಮೀಯುತ್ತಿರಬೇಕು. ಸಂತರಿಗೆ ಈ ಕಾರ್ಯವು ಶ್ರೇಷ್ಠವಾದುದು.
13027079a ತ್ರಿಷು ಲೋಕೇಷು ಪುಣ್ಯತ್ವಾದ್ಗಂಗಾಯಾಃ ಪ್ರಥಿತಂ ಯಶಃ।
13027079c ಯತ್ಪುತ್ರಾನ್ಸಗರಸ್ಯೈಷಾ ಭಸ್ಮಾಖ್ಯಾನನಯದ್ದಿವಮ್।।
ಸುಟ್ಟು ಭಸ್ಮವಾಗಿದ್ದ ಸಗರನ ಪುತ್ರರನ್ನು ದಿವಿಗೆ ಕೊಂಡೊಯ್ದ ಗಂಗೆಯ ಪುಣ್ಯತ್ವ-ಯಶಸ್ಸುಗಳು ಮೂರು ಲೋಕಗಳಲ್ಲಿಯೂ ಪ್ರಥಿತವಾಗಿವೆ.
13027080a ವಾಯ್ವೀರಿತಾಭಿಃ ಸುಮಹಾಸ್ವನಾಭಿರ್ ದ್ರುತಾಭಿರತ್ಯರ್ಥಸಮುಚ್ಚ್ರಿತಾಭಿಃ।
13027080c ಗಂಗೋರ್ಮಿಭಿರ್ಭಾನುಮತೀಭಿರಿದ್ಧಃ ಸಹಸ್ರರಶ್ಮಿಪ್ರತಿಮೋ ವಿಭಾತಿ।।
ಗಾಳಿಬೀಸಿ ವೇಗದಿಂದ ಎತ್ತರಕ್ಕೆ ಏರುವ ಸುಮನೋಹರ ಕಾಂತಿಯುಕ್ತ ಗಂಗೆಯ ಅಲೆಗಳಿಂದ ಪಾಪಗಳನ್ನು ಕಳೆದುಕೊಂಡು ಪ್ರಕಾಶಮಾನರಾಗುವ ಮನುಷ್ಯರು ಪರಲೋಕದಲ್ಲಿ ಸೂರ್ಯಸದೃಶರಾಗಿ ಬೆಳಗುತ್ತಾರೆ.
13027081a ಪಯಸ್ವಿನೀಂ ಘೃತಿನೀಮತ್ಯುದಾರಾಂ ಸಮೃದ್ಧಿನೀಂ ವೇಗಿನೀಂ ದುರ್ವಿಗಾಹ್ಯಾಮ್।
13027081c ಗಂಗಾಂ ಗತ್ವಾ ಯೈಃ ಶರೀರಂ ವಿಸೃಷ್ಟಂ ಗತಾ ಧೀರಾಸ್ತೇ ವಿಬುಧೈಃ ಸಮತ್ವಮ್।।
ಹಾಲಿನಂತಿರುವ, ತುಪ್ಪದಂತೆ ಸ್ನಿಗ್ಧವಾದ, ಸಮೃದ್ಧಿನೀ ವೇಗಿನೀ ದಾಟಲಸಾಧ್ಯ ಗಂಗೆಗೆ ಹೋಗಿ ಶರೀರವನ್ನು ವಿಸರ್ಜಿಸಿದ ಧೀರರು ದೇವತೆಗಳ ಸಮತ್ವವನ್ನು ಪಡೆಯುತ್ತಾರೆ.
13027082a ಅಂಧಾನ್ಜಡಾನ್ದ್ರವ್ಯಹೀನಾಂಶ್ಚ ಗಂಗಾ ಯಶಸ್ವಿನೀ ಬೃಹತೀ ವಿಶ್ವರೂಪಾ।
13027082c ದೇವೈಃ ಸೇಂದ್ರೈರ್ಮುನಿಭಿರ್ಮಾನವೈಶ್ಚ ನಿಷೇವಿತಾ ಸರ್ವಕಾಮೈರ್ಯುನಕ್ತಿ।।
ಇಂದ್ರನೂ ಸೇರಿ ದೇವತೆಗಳಿಂದ, ಮುನಿಗಳಿಂದ ಮತ್ತು ಮಾನವರಿಂದ ಸೇವಿಸಲ್ಪಡುವ ಯಶಸ್ವಿನೀ, ಬೃಹತೀ, ವಿಶ್ವರೂಪಾ ಗಂಗೆಯು ಅಂಧರನ್ನೂ, ಜಡರನ್ನೂ ಮತ್ತು ಧನಹೀನರನ್ನೂ ತಾರತಮ್ಯವಿಲ್ಲದೇ ಸಕಲ ಕಾಮಗಳಿಂದ ಸಂಪನ್ನರಾಗಿಸುತ್ತಾಳೆ.
13027083a ಊರ್ಜಾವತೀಂ ಮಧುಮತೀಂ ಮಹಾಪುಣ್ಯಾಂ ತ್ರಿವರ್ತ್ಮಗಾಮ್।
13027083c ತ್ರಿಲೋಕಗೋಪ್ತ್ರೀಂ ಯೇ ಗಂಗಾಂ ಸಂಶ್ರಿತಾಸ್ತೇ ದಿವಂ ಗತಾಃ।।
ಉಕ್ಕಿಬರುವ, ಮಧುಮತೀ, ಮಹಾಪುಣ್ಯೆ, ತ್ರಿವರ್ತ್ಮಗಾಮಿ, ತ್ರಿಲೋಕರಕ್ಷಕಿ ಗಂಗೆಯನ್ನು ಆಶ್ರಯಿಸದವರು ದಿವಕ್ಕೆ ಹೋಗುತ್ತಾರೆ.
13027084a ಯೋ ವತ್ಸ್ಯತಿ ದ್ರಕ್ಷ್ಯತಿ ವಾಪಿ ಮರ್ತ್ಯಸ್ ತಸ್ಮೈ ಪ್ರಯಚ್ಚಂತಿ ಸುಖಾನಿ ದೇವಾಃ।
13027084c ತದ್ಭಾವಿತಾಃ ಸ್ಪರ್ಶನೇ ದರ್ಶನೇ ಯಸ್ ತಸ್ಮೈ ದೇವಾ ಗತಿಮಿಷ್ಟಾಂ ದಿಶಂತಿ।।
ಗಂಗೆಯಲ್ಲಿ ವಾಸಿಸುವ ಮತ್ತು ಗಂಗೆಯನ್ನು ನೋಡುವ ಮರ್ತ್ಯರಿಗೆ ದೇವತೆಗಳು ಸುಖಗಳನ್ನು ನೀಡುತ್ತಾರೆ. ಅವಳ ದರ್ಶನ ಮತ್ತು ಸ್ಪರ್ಶನ ಮಾಡಿದವರಿಗೆ ಅವಳಿಂದಲೇ ದೇವತ್ವವನ್ನು ಪಡೆದವರು ಇಷ್ಟಗತಿಯನ್ನು ದಯಪಾಲಿಸುತ್ತಾರೆ.
13027085a ದಕ್ಷಾಂ ಪೃಥ್ವೀಂ4 ಬೃಹತೀಂ ವಿಪ್ರಕೃಷ್ಟಾಂ ಶಿವಾಮೃತಾಂ ಸುರಸಾಂ ಸುಪ್ರಸನ್ನಾಮ್।
13027085c ವಿಭಾವರೀಂ ಸರ್ವಭೂತಪ್ರತಿಷ್ಠಾಂ ಗಂಗಾಂ ಗತಾ ಯೇ ತ್ರಿದಿವಂ ಗತಾಸ್ತೇ।।
ಸಮರ್ಥಳೂ, ಪೃಥ್ವೀ ಸಮಾನಳೂ, ಮಹಾಕಾಯಳೂ, ನದಿಗಳಲ್ಲಿಯೇ ಶ್ರೇಷ್ಠಳಾದ, ಮಂಗಳಮಯಿಯಾದ, ಅಮೃತಸಮಾನಳಾದ, ಸುರಸೆ, ಸುಪ್ರಸನ್ನೆ, ವಿಭಾವರೀ, ಸರ್ವಭೂತಪ್ರತಿಷ್ಠೆ ಗಂಗೆಗೆ ಹೋದವರು ತ್ರಿದಿವಕ್ಕೆ ಹೋಗುತ್ತಾರೆ.
13027086a ಖ್ಯಾತಿರ್ಯಸ್ಯಾಃ ಖಂ ದಿವಂ ಗಾಂ ಚ ನಿತ್ಯಂ ಪುರಾ ದಿಶೋ ವಿದಿಶಶ್ಚಾವತಸ್ಥೇ।
13027086c ತಸ್ಯಾ ಜಲಂ ಸೇವ್ಯ ಸರಿದ್ವರಾಯಾ ಮರ್ತ್ಯಾಃ ಸರ್ವೇ ಕೃತಕೃತ್ಯಾ ಭವಂತಿ।।
ಯಾರ ಖ್ಯಾತಿಯು ಆಕಾಶ, ಸ್ವರ್ಗ, ಭೂಮಿ, ದಿಕ್ಕು ಮತ್ತು ಉಪದಿಕ್ಕುಗಳಲ್ಲಿ ನಿತ್ಯವೂ ಪಸರಿಸಿದೆಯೋ ಆ ಸರಿದ್ವರೆಯ ಜಲವನ್ನು ಸೇವಿಸುವ ಮರ್ತ್ಯರೆಲ್ಲರೂ ಕೃತಕೃತ್ಯರಾಗುತ್ತಾರೆ.
13027087a ಇಯಂ ಗಂಗೇತಿ ನಿಯತಂ ಪ್ರತಿಷ್ಠಾ ಗುಹಸ್ಯ ರುಕ್ಮಸ್ಯ ಚ ಗರ್ಭಯೋಷಾ।
13027087c ಪ್ರಾತಸ್ತ್ರಿಮಾರ್ಗಾ ಘೃತವಹಾ ವಿಪಾಪ್ಮಾ ಗಂಗಾವತೀರ್ಣಾ ವಿಯತೋ ವಿಶ್ವತೋಯಾ।।
ಇವಳೇ ಗಂಗೆ ಎಂದು ನಿಯತನಾಗಿ ಅವಳ ತೀರದಲ್ಲಿ ವಾಸಿಸಿ ಪ್ರಾತಃಕಾಲದಲ್ಲಿ ತ್ರಿಮಾರ್ಗೆ, ತುಪ್ಪದಂತೆ ಹರಿಯುವ, ಪಾಪಗಳನ್ನು ತೊಳೆಯುವ, ವಿಶ್ವಕ್ಕೇ ಪಾನಯೋಗ್ಯಳಾದ ಗಂಗೆಯಲ್ಲಿ ಮಿಂದರೆ ಗುಹ ಮತ್ತು ರತ್ನಗಳನ್ನು ಧರಿಸಿದ ಗಂಗಾನದಿಯು ಪುರುಷಾರ್ಥಗಳನ್ನು ದಯಪಾಲಿಸುತ್ತಾಳೆ.
13027088a ಸುತಾವನೀಧ್ರಸ್ಯ ಹರಸ್ಯ ಭಾರ್ಯಾ ದಿವೋ ಭುವಶ್ಚಾಪಿ ಕಕ್ಷ್ಯಾನುರೂಪಾ।
13027088c ಭವ್ಯಾ ಪೃಥಿವ್ಯಾ ಭಾವಿನೀ ಭಾತಿ ರಾಜನ್ ಗಂಗಾ ಲೋಕಾನಾಂ ಪುಣ್ಯದಾ ವೈ ತ್ರಯಾಣಾಮ್।।
ಗಂಗೆಯು ಗಿರಿರಾಜ ಹಿಮಾಲಯನ ಮಗಳು. ಹರನ ಭಾರ್ಯೆ. ಸ್ವರ್ಗವನ್ನೂ ಭೂಮಿಯನ್ನೂ ತನ್ನಂತೆ ಪವಿತ್ರಗೊಳಿಸುವವಳು. ರಾಜನ್! ಸ್ವರ್ಗ-ಪೃಥ್ವಿಗಳಲ್ಲಿರುವವರಿಗೆ ಮಂಗಳವನ್ನುಂಟುಮಾಡುವಳು. ಗಂಗೆಯು ಮೂರು ಲೋಕಗಳಿಗೂ ಪುಣ್ಯದಾಯಕಳು.
13027089a ಮಧುಪ್ರವಾಹಾ ಘೃತರಾಗೋದ್ಧೃತಾಭಿರ್ ಮಹೋರ್ಮಿಭಿಃ ಶೋಭಿತಾ ಬ್ರಾಹ್ಮಣೈಶ್ಚ।
13027089c ದಿವಶ್ಚ್ಯುತಾ ಶಿರಸಾತ್ತಾ ಭವೇನ ಗಂಗಾವನೀಧ್ರಾಸ್ತ್ರಿದಿವಸ್ಯ ಮಾಲಾ।।
ಗಂಗೆಯ ಪ್ರವಾಹದಲ್ಲಿ ಮಧುವಿದೆ. ತುಪ್ಪದ ಧಾರೆಯಂತೆ ಅವಳು ಹರಿಯುತ್ತಾಳೆ. ಮಹಾ ಅಲೆಗಳಿಂದಲೂ ಬ್ರಾಹ್ಮಣರಿಂದಲೂ ಶೋಭಿಸುತ್ತಾಳೆ. ದಿವದಿಂದ ಬಿದ್ದ ಅವಳನ್ನು ಭವನು ಶಿರದಲ್ಲಿ ಹೊತ್ತನು. ಗಂಗೆಯು ತ್ರಿದಿವಗಳ ಮಾಲೆ.
13027090a ಯೋನಿರ್ವರಿಷ್ಠಾ ವಿರಜಾ ವಿತನ್ವೀ ಶುಷ್ಮಾ ಇರಾ5 ವಾರಿವಹಾ ಯಶೋದಾ।
13027090c ವಿಶ್ವಾವತೀ ಚಾಕೃತಿರಿಷ್ಟಿರಿದ್ಧಾ ಗಂಗೋಕ್ಷಿತಾನಾಂ ಭುವನಸ್ಯ ಪಂಥಾಃ।।
ಗಂಗಾಯೋನಿಯು ವರಿಷ್ಠವಾದುದು. ಅವಳು ರಜೋಗುಣ ರಹಿತಳು. ಅತ್ಯಂತ ಸೂಕ್ಷ್ಮಳು. ವೇಗ ಪ್ರವಾಹವುಳ್ಳವಳು. ಯಶಸ್ಸನ್ನು ನೀಡುವಳು. ಜಗತ್ತನ್ನೇ ರಕ್ಷಿಸುವವಳು. ಭಕ್ತರ ಅಭೀಷ್ಟಗಳನ್ನು ಈಡೇರಿಸುವವಳು. ತನ್ನಲ್ಲಿ ಸ್ನಾನಮಾಡಿದವರಿಗೆ ಸ್ವರ್ಗಮಾರ್ಗಸ್ವರೂಪಳು.
13027091a ಕ್ಷಾಂತ್ಯಾ ಮಹ್ಯಾ ಗೋಪನೇ ಧಾರಣೇ ಚ ದೀಪ್ತ್ಯಾ ಕೃಶಾನೋಸ್ತಪನಸ್ಯ ಚೈವ।
13027091c ತುಲ್ಯಾ ಗಂಗಾ ಸಂಮತಾ ಬ್ರಾಹ್ಮಣಾನಾಂ ಗುಹಸ್ಯ ಬ್ರಹ್ಮಣ್ಯತಯಾ ಚ ನಿತ್ಯಮ್।।
ಶಮೆಯಲ್ಲಿ, ರಕ್ಷಣೆಯಲ್ಲಿ ಮತ್ತು ಧರಿಸುವುದರಲ್ಲಿ ಗಂಗೆಯು ಪೃಥ್ವಿಯ ಸಮಾನಳು. ಕಾಂತಿಯಲ್ಲಿ ಅಗ್ನಿ ಮತ್ತು ಸೂರ್ಯರ ಸಮಾನಳು. ಪಾವಿತ್ರ್ಯದಲ್ಲಿ ಬ್ರಾಹ್ಮಣರಿಗೆ ಸಮ್ಮತಳು. ಬ್ರಾಹ್ಮಣಪ್ರಿಯೆಯಾದುದರಿಂದ ಗುಹನಿಗೂ ನಿತ್ಯವೂ ಪ್ರಿಯಳಾದವಳು.
13027092a ಋಷಿಷ್ಟುತಾಂ ವಿಷ್ಣುಪದೀಂ ಪುರಾಣೀಂ ಸುಪುಣ್ಯತೋಯಾಂ ಮನಸಾಪಿ ಲೋಕೇ।
13027092c ಸರ್ವಾತ್ಮನಾ ಜಾಹ್ನವೀಂ ಯೇ ಪ್ರಪನ್ನಾಸ್ ತೇ ಬ್ರಹ್ಮಣಃ ಸದನಂ ಸಂಪ್ರಯಾತಾಃ।।
ಋಷಿಗಳು ಸ್ತುತಿಸುವ, ವಿಷ್ಣುಪಾದೋದ್ಭವಳಾದ, ಸನಾತನಳಾದ, ಸುಪುಣ್ಯಜಲವುಳ್ಳ ಗಂಗೆಯನ್ನು ಮನಸ್ಸಿನಲ್ಲಿಯಾದರೂ ಯಾರು ಸರ್ವಾತ್ಮದಿಂದ ಶರಣುಹೊಂದುತ್ತಾರೋ ಅವರನ್ನು ಜಾಹ್ನವಿಯು ಬ್ರಹ್ಮಸದನಕ್ಕೆ ಕೊಂಡೊಯ್ಯುತ್ತಾಳೆ.
13027093a ಲೋಕಾನಿಮಾನ್ನಯತಿ ಯಾ ಜನನೀವ ಪುತ್ರಾನ್ ಸರ್ವಾತ್ಮನಾ ಸರ್ವಗುಣೋಪಪನ್ನಾ।
13027093c ಸ್ವಸ್ಥಾನಮಿಷ್ಟಮಿಹ ಬ್ರಾಹ್ಮಮಭೀಪ್ಸಮಾನೈರ್ ಗಂಗಾ ಸದೈವಾತ್ಮವಶೈರುಪಾಸ್ಯಾ।।
ಪುತ್ರರನ್ನು ಜನನಿಯು ಹೇಗೋ ಹಾಗೆ ಸರ್ವಗುಣೋಪಪನ್ನೆ ಗಂಗೆಯು ಸರ್ವಾತ್ಮನಾ ಈ ಲೋಕವನ್ನು ನಡೆಸಿಕೊಂಡು ಹೋಗುತ್ತಾಳೆ. ಆದುದರಿಂದ ಬ್ರಹ್ಮಲೋಕವನ್ನು ಬಯಸುವ ಮನುಷ್ಯರು ಸದೈವ ಆತ್ಮವಶರಾಗಿ ಗಂಗೆಯನ್ನು ಉಪಾಸಿಸಬೇಕು.
13027094a ಉಸ್ರಾಂ ಜುಷ್ಟಾಂ ಮಿಷತೀಂ ವಿಶ್ವತೋಯಾಮ್ ಇರಾಂ ವಜ್ರೀಂ ರೇವತೀಂ ಭೂಧರಾಣಾಮ್।
13027094c ಶಿಷ್ಟಾಶ್ರಯಾಮಮೃತಾಂ ಬ್ರಹ್ಮಕಾಂತಾಂ ಗಂಗಾಂ ಶ್ರಯೇದಾತ್ಮವಾನ್ಸಿದ್ಧಿಕಾಮಃ।।
ಸಿದ್ಧಿಯನ್ನು ಬಯಸುವವರು ಪ್ರವಾಹಯುಕ್ತಳಾದ, ಸ್ತುತ್ಯಳಾದ, ಎಲ್ಲಕ್ಕೂ ಸಾಕ್ಷೀಭೂತಳಾದ, ವಿಶ್ವಕ್ಕೇ ನೀರಾದ, ಸಮುದ್ರಗಾಮಿನೀ, ವಜ್ರೀ, ರೇವತೀ, ಭೂಧರಣೆ, ಶಿಷ್ಠರಿಗೆ ಆಶ್ರಯವನ್ನು ನೀಡುವ, ಅಮೃತಸ್ವರೂಪೀ, ಬ್ರಹ್ಮಕಾಂತೆ ಗಂಗೆಯನ್ನು ಆಶ್ರಯಿಸಬೇಕು.
13027095a ಪ್ರಸಾದ್ಯ ದೇವಾನ್ಸವಿಭೂನ್ಸಮಸ್ತಾನ್ ಭಗೀರಥಸ್ತಪಸೋಗ್ರೇಣ ಗಂಗಾಮ್।
13027095c ಗಾಮಾನಯತ್ತಾಮಭಿಗಮ್ಯ ಶಶ್ವನ್ ಪುಮಾನ್ಭಯಂ ನೇಹ ನಾಮುತ್ರ ವಿದ್ಯಾತ್।।
ಭಗೀರಥನು ಉಗ್ರತಪಸ್ಸಿನಿಂದ ಸಮಸ್ತ ದೇವತೆಗಳನ್ನೂ ಶಿವನನ್ನೂ ತೃಪ್ತಿಪಡಿಸಿ ಗಂಗೆಯನ್ನು ಈ ಭೂಮಿಗೆ ಕರೆತಂದನು. ಅಂಥಹ ಗಂಗೆಯನ್ನು ಆಶ್ರಯಿದವರಿಗೆ ಇಹದಲ್ಲಿಯಾಗಲೀ ಪರದಲ್ಲಿಯಾಗಲೀ ಭಯವೆಂಬುದು ಇರುವುದಿಲ್ಲ.
13027096a ಉದಾಹೃತಃ ಸರ್ವಥಾ ತೇ ಗುಣಾನಾಂ ಮಯೈಕದೇಶಃ ಪ್ರಸಮೀಕ್ಷ್ಯ ಬುದ್ಧ್ಯಾ।
13027096c ಶಕ್ತಿರ್ನ ಮೇ ಕಾ ಚಿದಿಹಾಸ್ತಿ ವಕ್ತುಂ ಗುಣಾನ್ಸರ್ವಾನ್ಪರಿಮಾತುಂ ತಥೈವ।।
ನನ್ನ ಬುದ್ಧಿಯಿಂದ ಸಂಪೂರ್ಣವಿಚಾರ ಮಾಡಿ ಗಂಗೆಯ ಅಪಾರಗುಣಗಳ ಒಂದಂಶವನ್ನು ಮಾತ್ರ ನಾನು ಉದಾಹರಿಸಿದ್ದೇನೆ. ಅವಳ ಸರ್ವಗುಣಗಳನ್ನೂ ಹೇಳುವ ಅಥವಾ ಅಳೆಯುವ ಶಕ್ತಿಯು ನನ್ನಲ್ಲಿಲ್ಲ.
13027097a ಮೇರೋಃ ಸಮುದ್ರಸ್ಯ ಚ ಸರ್ವರತ್ನೈಃ ಸಂಖ್ಯೋಪಲಾನಾಮುದಕಸ್ಯ ವಾಪಿ।
13027097c ವಕ್ತುಂ ಶಕ್ಯಂ ನೇಹ ಗಂಗಾಜಲಾನಾಂ ಗುಣಾಖ್ಯಾನಂ ಪರಿಮಾತುಂ ತಥೈವ।।
ಮೇರುವಿನಲ್ಲಿರುವ ಕಲ್ಲುಗಳನ್ನಾಗಲೀ, ಸರ್ವರತ್ನಗಳಿಂದ ಕೂಡಿರುವ ಸಮುದ್ರದ ಜಲಬಿಂದುಗಳನ್ನಾಗಲೀ ಎಣಿಸಬಹುದೇನೋ. ಆದರೆ ಗಂಗಾಜಲದ ಗುಣಗಳನ್ನು ಅಳೆಯಲು ಮತ್ತು ಅದರ ಕುರಿತು ಹೇಳಲು ಶಕ್ಯವಿಲ್ಲ.
13027098a ತಸ್ಮಾದಿಮಾನ್ಪರಯಾ ಶ್ರದ್ಧಯೋಕ್ತಾನ್ ಗುಣಾನ್ಸರ್ವಾನ್ಜಾಹ್ನವೀಜಾಂಸ್ತಥೈವ।
13027098c ಭಜೇದ್ವಾಚಾ ಮನಸಾ ಕರ್ಮಣಾ ಚ ಭಕ್ತ್ಯಾ ಯುಕ್ತಃ ಪರಯಾ ಶ್ರದ್ದಧಾನಃ।।
ಆದುದರಿಂದ ನಾನು ಹೇಳಿರುವ ಜಾಹ್ನವಿಯ ಸರ್ವ ಗುಣಗಳನ್ನು ಕೇಳಿ ಪರಮ ಶ್ರದ್ಧಾಯುಕ್ತನಾಗಿ, ಪರಮ ಭಕ್ತಿಯಿಂದ, ನಂಬಿಕೆಯನ್ನಿಟ್ಟು ವಾಚಾ, ಮನಸಾ ಮತ್ತು ಕರ್ಮಣಾ ಅವಳನ್ನು ಭಜಿಸಬೇಕು.
13027099a ಲೋಕಾನಿಮಾಂಸ್ತ್ರೀನ್ಯಶಸಾ ವಿತತ್ಯ ಸಿದ್ಧಿಂ ಪ್ರಾಪ್ಯ ಮಹತೀಂ ತಾಂ ದುರಾಪಾಮ್।
13027099c ಗಂಗಾಕೃತಾನಚಿರೇಣೈವ ಲೋಕಾನ್ ಯಥೇಷ್ಟಮಿಷ್ಟಾನ್ವಿಚರಿಷ್ಯಸಿ ತ್ವಮ್।।
ಅದರಿಂದ ನೀನು ಈ ಮೂರೂ ಲೋಕಗಳಲ್ಲಿಯೂ ನಿನ್ನ ಯಶಸ್ಸನ್ನು ಪಸರಿಸಿ ದುರ್ಲಭವಾದ ಮಹಾ ಸಿದ್ಧಿಯನ್ನು ಪಡೆಯುತ್ತೀಯೆ. ಬೇಗನೇ ಯಥೇಷ್ಟವಾದ ಲೋಕಗಳಲ್ಲಿ ಇಚ್ಛಾನುಸಾರವಾಗಿ ವಿಹರಿಸುವೆ.
13027100a ತವ ಮಮ ಚ ಗುಣೈರ್ಮಹಾನುಭಾವಾ ಜುಷತು ಮತಿಂ ಸತತಂ ಸ್ವಧರ್ಮಯುಕ್ತೈಃ।
13027100c ಅಭಿಗತಜನವತ್ಸಲಾ ಹಿ ಗಂಗಾ ಭಜತಿ ಯುನಕ್ತಿ ಸುಖೈಶ್ಚ ಭಕ್ತಿಮಂತಮ್।।
ಮಹಾನುಭಾವೆ ಗಂಗೆಯು ನನ್ನ ಮತ್ತು ನಿನ್ನ ಬುದ್ಧಿಗಳನ್ನು ಸ್ವಧರ್ಮಯುಕ್ತ ಗುಣಗಳಿಂದ ಸತತವೂ ತುಂಬಿಸಲಿ. ಗಂಗೆಯು ಭಕ್ತವತ್ಸಲಳು. ಭಕ್ತರನ್ನು ಸುಖಿಗಳನ್ನಾಗಿಸುತ್ತಾಳೆ.””
13027101 ಭೀಷ್ಮ ಉವಾಚ।
13027101a ಇತಿ ಪರಮಮತಿರ್ಗುಣಾನನೇಕಾನ್ ಶಿಲರತಯೇ ತ್ರಿಪಥಾನುಯೋಗರೂಪಾನ್।
13027101c ಬಹುವಿಧಮನುಶಾಸ್ಯ ತಥ್ಯರೂಪಾನ್ ಗಗನತಲಂ ದ್ಯುತಿಮಾನ್ವಿವೇಶ ಸಿದ್ಧಃ।।
ಭೀಷ್ಮನು ಹೇಳಿದನು: “ಹೀಗೆ ಆ ಪರಮಮತಿ ಸಿದ್ಧನು ತ್ರಿಪಥೆಯ ಅನುಯೋಗ ರೂಪ ಅನೇಕ ಗುಣಗಳ ಕುರಿತು ಶಿಲವೃತ್ತಿಯವನಿಗೆ ಹೇಳಿ ಬಹುವಿಧದ ಆಶ್ವಾಸನೆಗಳನ್ನಿತ್ತು ಗಗನವನ್ನೇರಿದನು.
13027102a ಶಿಲವೃತ್ತಿಸ್ತು ಸಿದ್ಧಸ್ಯ ವಾಕ್ಯೈಃ ಸಂಬೋಧಿತಸ್ತದಾ।
13027102c ಗಂಗಾಮುಪಾಸ್ಯ ವಿಧಿವತ್ಸಿದ್ಧಿಂ ಪ್ರಾಪ್ತಃ ಸುದುರ್ಲಭಾಮ್।।
ಶಿಲವೃತ್ತಿಯವನಾದರೋ ಸಿದ್ಧನ ವಾಕ್ಯಗಳಿಂದ ತಿಳಿದವನಾಗಿ ವಿಧಿವತ್ತಾಗಿ ಗಂಗೆಯನ್ನು ಉಪಾಸಿಸಿ ಸುದುರ್ಲಭ ಸಿದ್ಧಿಯನ್ನು ಪಡೆದನು.
13027103a ತಸ್ಮಾತ್ತ್ವಮಪಿ ಕೌಂತೇಯ ಭಕ್ತ್ಯಾ ಪರಮಯಾ ಯುತಃ।
13027103c ಗಂಗಾಮಭ್ಯೇಹಿ ಸತತಂ ಪ್ರಾಪ್ಸ್ಯಸೇ ಸಿದ್ಧಿಮುತ್ತಮಾಮ್।।
ಆದುದರಿಂದ ಕೌಂತೇಯ! ನೀನೂ ಕೂಡ ಪರಮ ಭಕ್ತಿಯುತನಾಗಿ ಗಂಗೆಯನ್ನು ಪೂಜಿಸು. ಸತತವೂ ಉತ್ತಮ ಸಿದ್ಧಿಯನ್ನು ಪಡೆಯುತ್ತೀಯೆ.””
13027104 ವೈಶಂಪಾಯನ ಉವಾಚ।
13027104a ಶ್ರುತ್ವೇತಿಹಾಸಂ ಭೀಷ್ಮೋಕ್ತಂ ಗಂಗಾಯಾಃ ಸ್ತವಸಂಯುತಮ್।
13027104c ಯುಧಿಷ್ಠಿರಃ ಪರಾಂ ಪ್ರೀತಿಮಗಚ್ಚದ್ಭ್ರಾತೃಭಿಃ ಸಹ।।
ವೈಶಂಪಾಯನನು ಹೇಳಿದನು: “ಭೀಷ್ಮನು ಹೇಳಿದ ಗಂಗೆಯ ಸ್ತವಸಂಯುತವಾದ ಇತಿಹಾಸವನ್ನು ಕೇಳಿ ಭ್ರಾತೃಗಳೊಂದಿಗೆ ಯುಧಿಷ್ಠಿರನು ಪರಮ ಪ್ರೀತನಾದನು.
13027105a ಇತಿಹಾಸಮಿಮಂ ಪುಣ್ಯಂ ಶೃಣುಯಾದ್ಯಃ ಪಠೇತ ವಾ।
13027105c ಗಂಗಾಯಾಃ ಸ್ತವಸಂಯುಕ್ತಂ ಸ ಮುಚ್ಯೇತ್ಸರ್ವಕಿಲ್ಬಿಷೈಃ।।
ಗಂಗೆಯ ಸ್ತವಸಂಯುಕ್ತವಾದ ಈ ಪುಣ್ಯ ಇತಿಹಾಸವನ್ನು ಕೇಳಿದವನು ಅಥವಾ ಓದಿದವನು ಸರ್ವಕಿಲ್ಬಿಷಗಳಿಂದ ಮುಕ್ತನಾಗುತ್ತಾನೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಗಂಗಾಮಹಾತ್ಮ್ಯಕಥನೇ ಸಪ್ತವಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಗಂಗಾಮಹಾತ್ಮ್ಯಕಥನ ಎನ್ನುವ ಇಪ್ಪತ್ತೇಳನೇ ಅಧ್ಯಾಯವು.
-
ಮೂರು ಲೋಕಗಳಲ್ಲಿರುವ ಯಾವುದೇ ಪ್ರಾಣಿಗಾಗಲೀ ಅವಸಾನ ಹೊಂದಿದ ನಂತರ ಗಂಗೆಯ ಶುಭಜಲದಲ್ಲಿ ಅವುಗಳ ಸಲುವಾಗಿ ತರ್ಪಣ ಮಾಡಿದರೆ ಆ ಪ್ರಾಣಿಗಳು ಯಾವುದೇ ಅವಸ್ಥೆಯಲ್ಲಿದ್ದರೂ ಮಹಾತೃಪ್ತಿಯನ್ನು ಹೊಂದುತ್ತವೆ (ಭಾರತ ದರ್ಶನ). ↩︎
-
ಇದು ಯಾವಕ ಎಂಬ ವ್ರತ. ವ್ರತಿಯು ಗೋವಿನ ಸಗಣಿಯಿಂದ ಗೋಧಿಕಾಳುಗಳನ್ನು ಆರಿಸಿ ತೆಗೆದು ಅದನ್ನೇ ಬೇಯಿಸಿ ತಿನ್ನುವುದೆಂಬ ವ್ರತ. (ಭಾರತ ದರ್ಶನ) ↩︎
-
ಒಂದು ಸಾವಿರ ಚಾಂದ್ರಾಯಣ ವ್ರತವನ್ನು ಮಾಡುವವರು ಎಂಬ ಅನುವಾದವೂ ಇದೆ (ಭಾರತ ದರ್ಶನ). ↩︎
-
ಪೃಶ್ನೀಂ ಅಂದರೆ ಅಮೃತಸಮಾನಳಾದ (ಭಾರತ ದರ್ಶನ). ↩︎
-
ಶಯ್ಯಾಚಿರಾ (ಭಾರತ ದರ್ಶನ). ↩︎