ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 26
ಸಾರ
ಯುಧಿಷ್ಠಿರನು ತೀರ್ಥಗಳ ಕುರಿತು ಕೇಳಲು ಭೀಷ್ಮನು – ತೀರ್ಥಗಳಲ್ಲಿ ಸ್ನಾನಮಾಡುವುದರಿಂದ ಮರಣಾನಂತರದಲ್ಲಿ ಯಾವ ಫಲಗಳು ದೊರೆಯುತ್ತವೆ? ಎಂಬ ಗೌತಮನ ಪ್ರಶ್ನೆಗೆ ಅಂಗಿರಸನು ಉತ್ತರವಾಗಿ ಹೇಳಿದ ತೀರ್ಥವಂಶವನ್ನು ಹೇಳಿದುದು (1-66).
13026001 ಯುಧಿಷ್ಠಿರ ಉವಾಚ।
13026001a ತೀರ್ಥಾನಾಂ ದರ್ಶನಂ ಶ್ರೇಯಃ ಸ್ನಾನಂ ಚ ಭರತರ್ಷಭ।
13026001c ಶ್ರವಣಂ ಚ ಮಹಾಪ್ರಾಜ್ಞ ಶ್ರೋತುಮಿಚ್ಚಾಮಿ ತತ್ತ್ವತಃ।।
ಯುಧಿಷ್ಠಿರನು ಹೇಳಿದನು: “ಭರತರ್ಷಭ! ಮಹಾಪ್ರಾಜ್ಞ! ತೀರ್ಥಗಳ ದರ್ಶನ, ಅವುಗಳಲ್ಲಿ ಸ್ನಾನ ಮತ್ತು ಅವುಗಳ ಮಹಾತ್ಮ್ಯಶ್ರವಣಗಳು ಶ್ರೇಯಸ್ಕರವು. ಅದರ ಕುರಿತು ತತ್ತ್ವತಃ ಕೇಳಬಯಸುತ್ತೇನೆ.
13026002a ಪೃಥಿವ್ಯಾಂ ಯಾನಿ ತೀರ್ಥಾನಿ ಪುಣ್ಯಾನಿ ಭರತರ್ಷಭ।
13026002c ವಕ್ತುಮರ್ಹಸಿ ಮೇ ತಾನಿ ಶ್ರೋತಾಸ್ಮಿ ನಿಯತಃ ಪ್ರಭೋ।।
ಭರತರ್ಷಭ! ಪ್ರಭೋ! ಪೃಥ್ವಿಯಲ್ಲಿ ಯಾವ ಪುಣ್ಯ ತೀರ್ಥಗಳಿವೆಯೋ ಅವುಗಳ ಕುರಿತು ಹೇಳಬೇಕು. ನಿಯತನಾಗಿ ಕೇಳುತ್ತೇನೆ.”
13026003 ಭೀಷ್ಮ ಉವಾಚ।
13026003a ಇಮಮಂಗಿರಸಾ ಪ್ರೋಕ್ತಂ ತೀರ್ಥವಂಶಂ ಮಹಾದ್ಯುತೇ।
13026003c ಶ್ರೋತುಮರ್ಹಸಿ ಭದ್ರಂ ತೇ ಪ್ರಾಪ್ಸ್ಯಸೇ ಧರ್ಮಮುತ್ತಮಮ್।।
ಭೀಷ್ಮನು ಹೇಳಿದನು: “ಮಹಾದ್ಯುತೇ! ನಿನಗೆ ಮಂಗಳವಾಗಲಿ! ಅಂಗಿರಸನು ಹೇಳಿರುವ ಈ ತೀರ್ಥವಂಶವನ್ನು ನೀನು ಕೇಳಲು ಅರ್ಹನಾಗಿರುವೆ. ಇದರಿಂದ ಉತ್ತಮ ಧರ್ಮವನ್ನು ಹೊಂದುತ್ತೀಯೆ.
13026004a ತಪೋವನಗತಂ ವಿಪ್ರಮಭಿಗಮ್ಯ ಮಹಾಮುನಿಮ್।
13026004c ಪಪ್ರಚ್ಚಾಂಗಿರಸಂ ವೀರ ಗೌತಮಃ ಸಂಶಿತವ್ರತಃ।।
ವೀರ! ಸಂಶಿತವ್ರತ ಗೌತಮನು ತಪೋವನಕ್ಕೆ ಹೋಗಿ ಮಹಾಮುನಿ ವಿಪ್ರ ಅಂಗಿರಸನ ಬಳಿಸಾರಿ ಅವನಲ್ಲಿ ಕೇಳಿದನು:
13026005a ಅಸ್ತಿ ಮೇ ಭಗವನ್ಕಶ್ಚಿತ್ತೀರ್ಥೇಭ್ಯೋ ಧರ್ಮಸಂಶಯಃ।
13026005c ತತ್ಸರ್ವಂ ಶ್ರೋತುಮಿಚ್ಚಾಮಿ ತನ್ಮೇ ಶಂಸ ಮಹಾಮುನೇ।।
“ಮಹಾಮುನೇ! ಭಗವನ್! ತೀರ್ಥಗಳ ಕುರಿತು ನನ್ನಲ್ಲಿ ಕೆಲವು ಧರ್ಮಸಂಶಯಗಳಿವೆ. ಅವೆಲ್ಲವನ್ನೂ ಕೇಳಬಯಸುತ್ತೇನೆ. ಅದನ್ನು ನನಗೆ ಹೇಳು.
13026006a ಉಪಸ್ಪೃಶ್ಯ ಫಲಂ ಕಿಂ ಸ್ಯಾತ್ತೇಷು ತೀರ್ಥೇಷು ವೈ ಮುನೇ।
13026006c ಪ್ರೇತ್ಯಭಾವೇ ಮಹಾಪ್ರಾಜ್ಞ ತದ್ಯಥಾಸ್ತಿ ತಥಾ ವದ।।
ಮುನೇ! ಮಹಾಪ್ರಾಜ್ಞ! ಆ ತೀರ್ಥಗಳಲ್ಲಿ ಸ್ನಾನಮಾಡುವುದರಿಂದ ಮರಣಾನಂತರದಲ್ಲಿ ಯಾವ ಫಲಗಳು ದೊರೆಯುತ್ತವೆ? ಈ ವಿಷಯದ ಕುರಿತು ಇದ್ದಹಾಗೆ ಹೇಳು.”
13026007 ಅಂಗಿರಾ ಉವಾಚ।
13026007a ಸಪ್ತಾಹಂ ಚಂದ್ರಭಾಗಾಂ ವೈ ವಿತಸ್ತಾಮೂರ್ಮಿಮಾಲಿನೀಮ್।
13026007c ವಿಗಾಹ್ಯ ವೈ ನಿರಾಹಾರೋ ನಿರ್ಮಮೋ ಮುನಿವದ್ಭವೇತ್।।
ಅಂಗಿರಸನು ಹೇಳಿದನು: “ಚಂದ್ರಭಾಗಾ1 ಮತ್ತು ಅಲೆಗಳನ್ನೇ ಮಾಲೆಗಳನ್ನಾಗಿ ಧರಿಸಿರುವ ವಿತಸ್ತಾ2 ನದಿಗಳಲ್ಲಿ ಏಳು ದಿನಗಳು ನಿರಾಹಾರನಾಗಿ ಸ್ನಾನಮಾಡಿದರೆ ನಿರ್ಮಲ ಮುನಿಯಂತೆಯೇ ಆಗುತ್ತಾನೆ.
13026008a ಕಾಶ್ಮೀರಮಂಡಲೇ ನದ್ಯೋ ಯಾಃ ಪತಂತಿ ಮಹಾನದಮ್।
13026008c ತಾ ನದೀಃ ಸಿಂಧುಮಾಸಾದ್ಯ ಶೀಲವಾನ್ಸ್ವರ್ಗಮಾಪ್ನುಯಾತ್।।
ಕಾಶ್ಮೀರಮಂಡಲದಲ್ಲಿರುವ ಯಾವ ನದಿಗಳು ಮಹಾನದಿ ಸಿಂಧುವನ್ನು ಸೇರುವವೋ ಆ ನದಿಗಳಲ್ಲಿ ಮತ್ತು ಸಿಂಧುವಿನಲ್ಲಿ ಸ್ನಾನಮಾಡಿದ ಶೀಲವಂತನು ಸ್ವರ್ಗವನ್ನು ಪಡೆಯುತ್ತಾನೆ.
13026009a ಪುಷ್ಕರಂ ಚ ಪ್ರಭಾಸಂ ಚ ನೈಮಿಷಂ ಸಾಗರೋದಕಮ್।
13026009c ದೇವಿಕಾಮಿಂದ್ರಮಾರ್ಗಂ ಚ ಸ್ವರ್ಣಬಿಂದುಂ ವಿಗಾಹ್ಯ ಚ।
13026009e ವಿಬೋಧ್ಯತೇ ವಿಮಾನಸ್ಥಃ ಸೋಽಪ್ಸರೋಭಿರಭಿಷ್ಟುತಃ।।
ಪುಷ್ಕರ, ಪ್ರಭಾಸ, ನೈಮಿಷ, ಸಮುದ್ರ, ದೇವಿಕಾ, ಇಂದ್ರಮಾರ್ಗ ಮತ್ತು ಸ್ವರ್ಣಬಿಂದುಗಳಲ್ಲಿ ಸ್ನಾನಮಾಡಿದವನು ವಿಮಾನಸ್ಥನಾಗಿ ಅಪ್ಸರೆಯರಿಂದ ಸ್ತುತಿಸಲ್ಪಟ್ಟು ಸ್ವರ್ಗಕ್ಕೆ ಹೋಗುತ್ತಾನೆ.
13026010a ಹಿರಣ್ಯಬಿಂದುಂ ವಿಕ್ಷೋಭ್ಯ ಪ್ರಯತಶ್ಚಾಭಿವಾದ್ಯ ತಮ್।
13026010c ಕುಶೇಶಯಂ ಚ ದೇವತ್ವಂ ಪೂಯತೇ ತಸ್ಯ ಕಿಲ್ಬಿಷಮ್।।
ಪ್ರಯತಾತ್ಮನಾಗಿದ್ದುಕೊಂಡು ಹಿರಣ್ಯಬಿಂದುವಿನಲ್ಲಿ ಸ್ನಾನಮಾಡಿ ಅಲ್ಲಿದ್ದ ದೇವತೆ ಕುಶೇಶಯನನ್ನು ಪೂಜಿಸಿದವನ ಪಾಪಗಳು ದೂರವಾಗುತ್ತವೆ.
13026011a ಇಂದ್ರತೋಯಾಂ ಸಮಾಸಾದ್ಯ ಗಂಧಮಾದನಸಂನಿಧೌ।
13026011c ಕರತೋಯಾಂ ಕುರಂಗೇಷು ತ್ರಿರಾತ್ರೋಪೋಷಿತೋ ನರಃ।
13026011e ಅಶ್ವಮೇಧಮವಾಪ್ನೋತಿ ವಿಗಾಹ್ಯ ನಿಯತಃ ಶುಚಿಃ।।
ಗಂಧಮಾದನದ ಬಳಿಯಲ್ಲಿರುವ ಇಂದ್ರತೋಯಕ್ಕೆ ಹೋಗಿ ಮತ್ತು ಕುರಂಗದಲ್ಲಿರುವ ಕರತೋಯಾ ನದಿಗೆ ಹೋಗಿ ಅಲ್ಲಿ ನಿಯತನಾಗಿ ಶುಚಿಯಾಗಿ ಸ್ನಾನಮಾಡಿ ಮೂರುರಾತ್ರಿಗಳು ಉಪವಾಸದಲ್ಲಿರುವವನು ಅಶ್ವಮೇಧಯಾಗದ ಫಲವನ್ನು ಪಡೆಯುತ್ತಾನೆ.
13026012a ಗಂಗಾದ್ವಾರೇ ಕುಶಾವರ್ತೇ ಬಿಲ್ವಕೇ ನೇಮಿಪರ್ವತೇ।
13026012c ತಥಾ ಕನಖಲೇ ಸ್ನಾತ್ವಾ ಧೂತಪಾಪ್ಮಾ ದಿವಂ ವ್ರಜೇತ್।।
ಗಂಗಾದ್ವಾರ, ಕುಶಾವರ್ತ, ನೇಮಿಪರ್ವತದಲ್ಲಿರುವ ಬಿಲ್ವಕ ಮತ್ತು ಕನಖಲಗಳಲ್ಲಿ ಸ್ನಾನಮಾಡಿದವನು ಪಾಪಗಳನ್ನು ಕಳೆದುಕೊಂಡು ದಿವಕ್ಕೆ ಹೋಗುತ್ತಾನೆ.
13026013a ಅಪಾಂ ಹ್ರದ ಉಪಸ್ಪೃಶ್ಯ ವಾಜಪೇಯಫಲಂ ಲಭೇತ್।
13026013c ಬ್ರಹ್ಮಚಾರೀ ಜಿತಕ್ರೋಧಃ ಸತ್ಯಸಂಧಸ್ತ್ವಹಿಂಸಕಃ।।
ಅಪಾಂಹ್ರದದಲ್ಲಿ ಸ್ನಾನಮಾಡಿದ ಬ್ರಹ್ಮಚಾರಿ ಜಿತಕ್ರೋಧ ಸತ್ಯಸಂಧ ಅಹಿಂಸಕನಿಗೆ ವಾಜಪೇಯದ ಫಲವು ದೊರೆಯುತ್ತದೆ.
13026014a ಯತ್ರ ಭಾಗೀರಥೀ ಗಂಗಾ ಭಜತೇ ದಿಶಮುತ್ತರಾಮ್।
13026014c ಮಹೇಶ್ವರಸ್ಯ ನಿಷ್ಠಾನೇ3 ಯೋ ನರಸ್ತ್ವಭಿಷಿಚ್ಯತೇ।
13026014e ಏಕಮಾಸಂ ನಿರಾಹಾರಃ ಸ್ವಯಂ ಪಶ್ಯತಿ ದೇವತಾಃ।।
ಭಾಗೀರಥಿಯು ಬೀಳುವ ಉತ್ತರದಿಕ್ಕಿನಲ್ಲಿರುವ ಮಹೇಶ್ವರನ ಸನ್ನಿಧಾನದಲ್ಲಿ ಯಾವ ನರನು ಸ್ನಾನಮಾಡಿ ಒಂದು ಮಾಸ ನಿರಾಹಾರನಾಗಿರುತ್ತಾನೋ ಅವನು ಸ್ವಯಂ ಮಹಾದೇವನನ್ನು ಕಾಣುತ್ತಾನೆ.
13026015a ಸಪ್ತಗಂಗೇ ತ್ರಿಗಂಗೇ ಚ ಇಂದ್ರಮಾರ್ಗೇ ಚ ತರ್ಪಯನ್।
13026015c ಸುಧಾಂ ವೈ ಲಭತೇ ಭೋಕ್ತುಂ ಯೋ ನರೋ ಜಾಯತೇ ಪುನಃ।।
ಸಪ್ತಗಂಗೆ, ತ್ರಿಗಂಗೆ ಮತ್ತು ಇಂದ್ರಮಾರ್ಗಗಳಲ್ಲಿ ತರ್ಪಣಗಳನ್ನಿತ್ತ ನರನು ಪುನಃ ಹುಟ್ಟಿದರೆ ಭುಂಜಿಸಲು ಅಮೃತವನ್ನೇ ಪಡೆಯುತ್ತಾನೆ.
13026016a ಮಹಾಶ್ರಮ ಉಪಸ್ಪೃಶ್ಯ ಯೋಽಗ್ನಿಹೋತ್ರಪರಃ ಶುಚಿಃ।
13026016c ಏಕಮಾಸಂ ನಿರಾಹಾರಃ ಸಿದ್ಧಿಂ ಮಾಸೇನ ಸ ವ್ರಜೇತ್।।
ಮಹಾಶ್ರಮದಲ್ಲಿ ಸ್ನಾನಮಾಡಿ ಅಗ್ನಿಹೋತ್ರಪರನಾಗಿಯೂ ಶುಚಿಯಾಗಿಯೂ ಇದ್ದು ಒಂದು ಮಾಸ ನಿರಾಹಾರನಾಗಿರುವವನಿಗೆ ಒಂದೇ ಮಾಸದಲ್ಲಿ ಸಿದ್ಧಿಯಾಗುತ್ತದೆ.
13026017a ಮಹಾಹ್ರದ ಉಪಸ್ಪೃಶ್ಯ ಭೃಗುತುಂಗೇ ತ್ವಲೋಲುಪಃ।
13026017c ತ್ರಿರಾತ್ರೋಪೋಷಿತೋ ಭೂತ್ವಾ ಮುಚ್ಯತೇ ಬ್ರಹ್ಮಹತ್ಯಯಾ।।
ಭೃಗುತುಂಗದಲ್ಲಿರುವ ಮಹಾಹ್ರದದಲ್ಲಿ ಸ್ನಾನಮಾಡಿ ಅಲೋಲುಪನಾಗಿ ಮೂರು ರಾತ್ರಿ ಉಪವಾಸದಲ್ಲಿರುವವನು ಬ್ರಹ್ಮಹತ್ಯಾದೋಷದಿಂದ ಮುಕ್ತನಾಗುತ್ತಾನೆ.
13026018a ಕನ್ಯಾಕೂಪ ಉಪಸ್ಪೃಶ್ಯ ಬಲಾಕಾಯಾಂ ಕೃತೋದಕಃ।
13026018c ದೇವೇಷು ಕೀರ್ತಿಂ ಲಭತೇ ಯಶಸಾ ಚ ವಿರಾಜತೇ।।
ಕನ್ಯಾಕೂಪದಲ್ಲಿ ಸ್ನಾನಮಾಡಿ ಬಲಾಕೆಯಲ್ಲಿ ಉದಕ ಕ್ರಿಯೆಗಳನ್ನು ಮಾಡುವವನು ದೇವತೆಗಳಲ್ಲಿಯೂ ಕೀರ್ತಿಯನ್ನು ಪಡೆದು ಯಶಸ್ಸಿನಿಂದ ವಿರಾಜಿಸುತ್ತಾನೆ.
13026019a ದೇಶಕಾಲ ಉಪಸ್ಪೃಶ್ಯ4 ತಥಾ ಸುಂದರಿಕಾಹ್ರದೇ।
13026019c ಅಶ್ವಿಭ್ಯಾಂ ರೂಪವರ್ಚಸ್ಯಂ ಪ್ರೇತ್ಯ ವೈ ಲಭತೇ ನರಃ।।
ದೇಶಕಾಲ ಮತ್ತು ಸುಂದರಿಕಾಹ್ರದಗಳಲ್ಲಿ ಸ್ನಾನಮಾಡಿದ ನರನು ಮರಣಾನಂತರ ಅಶ್ವಿನಿಯರ ರೂಪವರ್ಚಸ್ಸುಗಳನ್ನು ಪಡೆಯುತ್ತಾನೆ.
13026020a ಮಹಾಗಂಗಾಮುಪಸ್ಪೃಶ್ಯ ಕೃತ್ತಿಕಾಂಗಾರಕೇ ತಥಾ।
13026020c ಪಕ್ಷಮೇಕಂ ನಿರಾಹಾರಃ ಸ್ವರ್ಗಮಾಪ್ನೋತಿ ನಿರ್ಮಲಃ।।
ಮಹಾಗಂಗೆ, ಮತ್ತು ಕೃತ್ತಿಕ-ಅಂಗಾರಕಗಳಲ್ಲಿ ಸ್ನಾನಮಾಡಿ ಒಂದು ಪಕ್ಷ ನಿರಾಹಾರನಾಗಿದ್ದ ನಿರ್ಮಲನು ಸ್ವರ್ಗವನ್ನು ಪಡೆಯುತ್ತಾನೆ.
13026021a ವೈಮಾನಿಕ ಉಪಸ್ಪೃಶ್ಯ ಕಿಂಕಿಣೀಕಾಶ್ರಮೇ ತಥಾ।
13026021c ನಿವಾಸೇಽಪ್ಸರಸಾಂ ದಿವ್ಯೇ ಕಾಮಚಾರೀ ಮಹೀಯತೇ।।
ವೈಮಾನಿಕ ಮತ್ತು ಕಿಂಕಿಣೀಕಾಶ್ರಮಗಳಲ್ಲಿ ಸ್ನಾನಮಾಡಿದವನು ದಿವ್ಯ ಅಪ್ಸರೆಯರ ನಿವಾಸಗಳಲ್ಲಿ ಕಾಮಚಾರಿಯಾಗಿ ಮೆರೆಯುತ್ತಾನೆ.
13026022a ಕಾಲಿಕಾಶ್ರಮಮಾಸಾದ್ಯ ವಿಪಾಶಾಯಾಂ ಕೃತೋದಕಃ।
13026022c ಬ್ರಹ್ಮಚಾರೀ ಜಿತಕ್ರೋಧಸ್ತ್ರಿರಾತ್ರಾನ್ಮುಚ್ಯತೇ ಭವಾತ್।।
ಕಾಲಿಕಾಶ್ರಮಕ್ಕೆ ಹೋಗಿ ವಿಪಾಶಾದಲ್ಲಿ ಮೂರು ರಾತ್ರಿಗಳು ಉದಕಕ್ರಿಯೆಗಳನ್ನು ಮಾಡುವ ಬ್ರಹ್ಮಚಾರೀ ಜಿತಕ್ರೋಧನು ಭವಬಂಧನದಿಂದ ಮುಕ್ತನಾಗುತ್ತಾನೆ.
13026023a ಆಶ್ರಮೇ ಕೃತ್ತಿಕಾನಾಂ ತು ಸ್ನಾತ್ವಾ ಯಸ್ತರ್ಪಯೇತ್ಪಿತೄನ್।
13026023c ತೋಷಯಿತ್ವಾ ಮಹಾದೇವಂ ನಿರ್ಮಲಃ ಸ್ವರ್ಗಮಾಪ್ನುಯಾತ್।।
ಕೃತ್ತಿಕರ ಆಶ್ರಮದಲ್ಲಿ ಸ್ನಾನಮಾಡಿ ಪಿತೃಗಳಿಗೆ ತರ್ಪಣಗಳನ್ನು ನೀಡುವ ನಿರ್ಮಲನು ಮಹಾದೇವನನ್ನು ಸಂತುಷ್ಟಗೊಳಿಸಿ ಸ್ವರ್ಗವನ್ನು ಪಡೆಯುತ್ತಾನೆ.
13026024a ಮಹಾಪುರ ಉಪಸ್ಪೃಶ್ಯ ತ್ರಿರಾತ್ರೋಪೋಷಿತೋ ನರಃ।
13026024c ತ್ರಸಾನಾಂ ಸ್ಥಾವರಾಣಾಂ ಚ ದ್ವಿಪದಾನಾಂ ಭಯಂ ತ್ಯಜೇತ್।।
ಮಹಾಪುರದಲ್ಲಿ ಸ್ನಾನಮಾಡಿ ಮೂರು ರಾತ್ರಿ ಉಪವಾಸದಿಂದಿರುವ ನರನು ಚರಾಚರಗಳಿಂದಲೂ ಮತ್ತು ಮನುಷ್ಯರಿಂದಲೂ ಉಂಟಾಗುವ ಭಯವನ್ನು ತೊರೆಯುತ್ತಾನೆ.
13026025a ದೇವದಾರುವನೇ ಸ್ನಾತ್ವಾ ಧೂತಪಾಪ್ಮಾ ಕೃತೋದಕಃ।
13026025c ದೇವಲೋಕಮವಾಪ್ನೋತಿ ಸಪ್ತರಾತ್ರೋಷಿತಃ ಶುಚಿಃ।।
ದೇವದಾರುವನದಲ್ಲಿ ಸ್ನಾನಮಾಡಿ ಪಾಪಗಳನ್ನು ತೊಳೆದುಕೊಂಡು ಉದಕಕ್ರಿಯೆಗಳನ್ನು ಮಾಡಿ ಏಳು ರಾತ್ರಿಗಳು ಉಪವಾಸದಿಂದಿರುವ ಶುಚಿಯು ದೇವಲೋಕವನ್ನು ಪಡೆಯುತ್ತಾನೆ.
13026026a ಕೌಶಂತೇ5 ಚ ಕುಶಸ್ತಂಬೇ ದ್ರೋಣಶರ್ಮಪದೇ ತಥಾ।
13026026c ಆಪಃಪ್ರಪತನೇ ಸ್ನಾತಃ ಸೇವ್ಯತೇ ಸೋಽಪ್ಸರೋಗಣೈಃ।।
ಕೌಶಾಂತ, ಕುಶಸ್ತಂಬ ಮತ್ತು ದ್ರೋಣಶರ್ಮಪದಗಳಲ್ಲಿ ಧುಮುಕುವ ಜಲಪಾತಗಳಲ್ಲಿ ಸ್ನಾನಮಾಡಿದವನನ್ನು ಅಪ್ಸರಗಣಗಳು ಸೇವಿಸುತ್ತವೆ.
13026027a ಚಿತ್ರಕೂಟೇ ಜನಸ್ಥಾನೇ ತಥಾ ಮಂದಾಕಿನೀಜಲೇ।
13026027c ವಿಗಾಹ್ಯ ವೈ ನಿರಾಹಾರೋ ರಾಜಲಕ್ಷ್ಮೀಂ ನಿಗಚ್ಚತಿ।।
ಚಿತ್ರಕೂಟ, ಜನಸ್ಥಾನ ಮತ್ತು ಮಂದಾಕಿನೀ ಜಲಗಳಲ್ಲಿ ನಿರಾಹಾರನಾಗಿದ್ದುಕೊಂಡು ಸ್ನಾನಮಾಡಿದವನು ರಾಜಲಕ್ಷ್ಮಿಯನ್ನು ಪಡೆಯುತ್ತಾನೆ.
13026028a ಶ್ಯಾಮಾಯಾಸ್ತ್ವಾಶ್ರಮಂ ಗತ್ವಾ ಉಷ್ಯ ಚೈವಾಭಿಷಿಚ್ಯ ಚ।
13026028c ತ್ರೀಂಸ್ತ್ರಿರಾತ್ರಾನ್ಸ ಸಂಧಾಯ ಗಂಧರ್ವನಗರೇ ವಸೇತ್6।।
ಶ್ಯಾಮಾಶ್ರಮಕ್ಕೆ ಹೋಗಿ ಅಲ್ಲಿ ಉಳಿದು ಸ್ನಾನಮಾಡಿ ಮೂರು ರಾತ್ರಿಗಳು ಕಳೆದವನು ಗಂಧರ್ವನಗರದಲ್ಲಿ ವಾಸಿಸುತ್ತಾನೆ.
13026029a ರಮಣ್ಯಾಂ ಚ ಉಪಸ್ಪೃಶ್ಯ ತಥಾ ವೈ ಗಂಧತಾರಿಕೇ।
13026029c ಏಕಮಾಸಂ ನಿರಾಹಾರಸ್ತ್ವಂತರ್ಧಾನಫಲಂ ಲಭೇತ್।।
ರಮಣಿ ಮತ್ತು ಗಂಧತಾರಿಕೆಗಳಲ್ಲಿ ಸ್ನಾನಮಾಡಿ ಒಂದು ತಿಂಗಳು ನಿರಾಹಾರನಾಗಿರುವವನಿಗೆ ಅಂತರ್ಧಾನಫಲವು ದೊರೆಯುತ್ತದೆ.
13026030a ಕೌಶಿಕೀದ್ವಾರಮಾಸಾದ್ಯ ವಾಯುಭಕ್ಷಸ್ತ್ವಲೋಲುಪಃ।
13026030c ಏಕವಿಂಶತಿರಾತ್ರೇಣ ಸ್ವರ್ಗಮಾರೋಹತೇ ನರಃ।।
ಕೌಶಿಕೀದ್ವಾರಕ್ಕೆ ಹೋಗಿ ವಾಯುಭಕ್ಷಕನಾಗಿ ಅಲೋಲುಪನಾಗಿರುವ ನರನು ಇಪ್ಪತ್ತೊಂದು ರಾತ್ರಿಗಳಲ್ಲಿ ಸ್ವರ್ಗವನ್ನೇರುತ್ತಾನೆ.
13026031a ಮತಂಗವಾಪ್ಯಾಂ ಯಃ ಸ್ನಾಯಾದೇಕರಾತ್ರೇಣ ಸಿಧ್ಯತಿ।
13026031c ವಿಗಾಹತಿ ಹ್ಯನಾಲಂಬಮಂಧಕಂ ವೈ ಸನಾತನಮ್।।
13026032a ನೈಮಿಷೇ ಸ್ವರ್ಗತೀರ್ಥೇ ಚ ಉಪಸ್ಪೃಶ್ಯ ಜಿತೇಂದ್ರಿಯಃ।
13026032c ಫಲಂ ಪುರುಷಮೇಧಸ್ಯ ಲಭೇನ್ಮಾಸಂ ಕೃತೋದಕಃ।।
ಮತಂಗವಾಪಿಯಲ್ಲಿ ಸ್ನಾನಮಾಡುವುದರಿಂದ ಒಂದೇ ರಾತ್ರಿಯಲ್ಲಿ ಸಿದ್ಧಿಯಾಗುತ್ತದೆ. ಅನಾಲಂಬ, ಅಂಧಕ, ಸನಾತನ ಮತ್ತು ನೈಮಿಷಾರಣ್ಯದ ಸ್ವರ್ಗತೀರ್ಥಗಳಲ್ಲಿ ಒಂದು ತಿಂಗಳು ಸ್ನಾನಮಾಡಿ ಉದಕಕ್ರಿಯೆಗಳನ್ನು ಮಾಡಿದ ಜಿತೇಂದ್ರಿಯನಿಗೆ ಪುರುಷಮೇಧದ ಫಲವು ದೊರಕುತ್ತದೆ.
13026033a ಗಂಗಾಹ್ರದ ಉಪಸ್ಪೃಶ್ಯ ತಥಾ ಚೈವೋತ್ಪಲಾವನೇ।
13026033c ಅಶ್ವಮೇಧಮವಾಪ್ನೋತಿ ತತ್ರ ಮಾಸಂ ಕೃತೋದಕಃ।।
ಗಂಗಾಹ್ರದ ಮತ್ತು ಉತ್ಪಲಾವನಗಳಲ್ಲಿ ಒಂದು ತಿಂಗಳು ಸ್ನಾನಮಾಡಿ ಉದಕಕ್ರಿಯೆಗಳನ್ನು ಮಾಡಿದವನಿಗೆ ಅಶ್ವಮೇಧದ ಫಲವು ದೊರಕುತ್ತದೆ.
13026034a ಗಂಗಾಯಮುನಯೋಸ್ತೀರ್ಥೇ ತಥಾ ಕಾಲಂಜರೇ ಗಿರೌ। 7 13026034c ಷಷ್ಟಿಹ್ರದ ಉಪಸ್ಪೃಶ್ಯ ದಾನಂ ನಾನ್ಯದ್ವಿಶಿಷ್ಯತೇ।।
ಗಂಗಾ-ಯಮುನೆಯರ ತೀರ್ಥಗಳಲ್ಲಿ ಮತ್ತು ಕಾಲಂಜರ ಗಿರಿಯಲ್ಲಿನ ಷಷ್ಟಿಹ್ರದದಲ್ಲಿ ಸ್ನಾನಮಾಡಿದರೆ ಯಾವ ದಾನಕ್ಕಿಂತಲೂ ಹೆಚ್ಚಿನ ಪುಣ್ಯವು ದೊರೆಯುತ್ತದೆ.
13026035a ದಶ ತೀರ್ಥಸಹಸ್ರಾಣಿ ತಿಸ್ರಃ ಕೋಟ್ಯಸ್ತಥಾಪರಾಃ।
13026035c ಸಮಾಗಚ್ಚಂತಿ ಮಾಘ್ಯಾಂ ತು ಪ್ರಯಾಗೇ ಭರತರ್ಷಭ।।
ಭರತರ್ಷಭ! ಮಾಘಮಾಸದಲ್ಲಿ ಪ್ರಯಾಗದಲ್ಲಿ ಮೂರು ಕೋಟಿ ಹತ್ತು ಸಾವಿರಕ್ಕಿಂತಲೂ ಹೆಚ್ಚು ತೀರ್ಥಗಳು ಬಂದು ಸೇರುತ್ತವೆ.
13026036a ಮಾಘಮಾಸಂ ಪ್ರಯಾಗೇ ತು ನಿಯತಃ ಸಂಶಿತವ್ರತಃ।
13026036c ಸ್ನಾತ್ವಾ ತು ಭರತಶ್ರೇಷ್ಠ ನಿರ್ಮಲಃ ಸ್ವರ್ಗಮಾಪ್ನುಯಾತ್।।
ಭರತಶ್ರೇಷ್ಠ! ಮಾಘಮಾಸದಲ್ಲಿ ಪ್ರಯಾಗದಲ್ಲಿ ಸ್ನಾನಮಾಡಿದ ನಿಯತ, ಸಂಶಿತವ್ರತ ನಿರ್ಮಲನು ಸ್ವರ್ಗಕ್ಕೆ ಹೋಗುತ್ತಾನೆ.
13026037a ಮರುದ್ಗಣ ಉಪಸ್ಪೃಶ್ಯ ಪಿತೄಣಾಮಾಶ್ರಮೇ ಶುಚಿಃ।
13026037c ವೈವಸ್ವತಸ್ಯ ತೀರ್ಥೇ ಚ ತೀರ್ಥಭೂತೋ ಭವೇನ್ನರಃ।।
ಮರುದ್ಗಣದಲ್ಲಿ, ಪಿತೃಗಳ ಆಶ್ರಮದಲ್ಲಿ ಮತ್ತು ವೈವಸ್ವತ ತೀರ್ಥಗಳಲ್ಲಿ ಸ್ನಾನಮಾಡಿದ ಶುಚಿ ನರನು ತೀರ್ಥಭೂತನಾಗುತ್ತಾನೆ.
13026038a ತಥಾ ಬ್ರಹ್ಮಶಿರೋ ಗತ್ವಾ ಭಾಗೀರಥ್ಯಾಂ ಕೃತೋದಕಃ।
13026038c ಏಕಮಾಸಂ ನಿರಾಹಾರಃ ಸೋಮಲೋಕಮವಾಪ್ನುಯಾತ್।।
ಹಾಗೆಯೇ ಬ್ರಹ್ಮಶಿರಕ್ಕೆ ಹೋಗಿ ಭಾಗೀರಥಿಯಲ್ಲಿ ಉದಕ ಕ್ರಿಯೆಗಳನ್ನು ಮಾಡಿ ಒಂದು ತಿಂಗಳು ನಿರಾಹಾರಿಯಾಗಿರುವವನು ಸೋಮಲೋಕವನ್ನು ಪಡೆಯುತ್ತಾನೆ.
13026039a ಕಪೋತಕೇ ನರಃ ಸ್ನಾತ್ವಾ ಅಷ್ಟಾವಕ್ರೇ ಕೃತೋದಕಃ।
13026039c ದ್ವಾದಶಾಹಂ ನಿರಾಹಾರೋ ನರಮೇಧಫಲಂ ಲಭೇತ್।।
ಕಪೋತಕದಲ್ಲಿ ಸ್ನಾನಮಾಡಿ ಅಷ್ಟಾವಕ್ರದಲ್ಲಿ ಉದಕಕ್ರಿಯೆಗಳನ್ನು ಮಾಡಿ ಹನ್ನೆರಡು ದಿನ ನಿರಾಹಾರನಾಗಿರುವವನಿಗೆ ನರಮೇಧದ ಫಲವು ದೊರೆಯುತ್ತದೆ.
13026040a ಮುಂಜಪೃಷ್ಠಂ ಗಯಾಂ ಚೈವ ನಿರೃತಿಂ ದೇವಪರ್ವತಮ್।
13026040c ತೃತೀಯಾಂ ಕ್ರೌಂಚಪಾದೀಂ ಚ ಬ್ರಹ್ಮಹತ್ಯಾ ವಿಶುಧ್ಯತಿ।।
ಗಯೆಯಲ್ಲಿರುವ ಮುಂಜಪೃಷ್ಠ, ನಿರೃತಿಯಲ್ಲಿರುವ ದೇವಪರ್ವತ ಮತ್ತು ಮೂರನೆಯದಾದ ಕ್ರೌಂಚಪಾದೀ ತೀರ್ಥಗಳಲ್ಲಿ ಸ್ನಾನಮಾಡುವುದರಿಂದ ಬ್ರಹ್ಮಹತ್ಯಾದೋಷವನ್ನೂ ಕಳೆದುಕೊಂಡು ಶುದ್ಧನಾಗುತ್ತಾನೆ.
13026041a ಕಲಶ್ಯಾಂ ವಾಪ್ಯುಪಸ್ಪೃಶ್ಯ ವೇದ್ಯಾಂ ಚ ಬಹುಶೋಜಲಾಮ್।
13026041c ಅಗ್ನೇಃ ಪುರೇ ನರಃ ಸ್ನಾತ್ವಾ ವಿಶಾಲಾಯಾಂ ಕೃತೋದಕಃ।
13026041e ದೇವಹ್ರದ ಉಪಸ್ಪೃಶ್ಯ ಬ್ರಹ್ಮಭೂತೋ ವಿರಾಜತೇ।।
ಕಲಶದ ನೀರಿನಲ್ಲಿ ಸ್ನಾನಮಾಡಿದರೆ ಅನೇಕ ತೀರ್ಥಗಳಲ್ಲಿ ಸ್ನಾನಮಾಡಿದ ಫಲವು ದೊರೆಯುತ್ತದೆ. ಅಗ್ನಿಪುರದಲ್ಲಿನ ವಿಶಾಲಾತೀರ್ಥದಲ್ಲಿ ಸ್ನಾನಮಾಡಿ ಉದಕಕ್ರಿಯೆಗಳನ್ನು ಮಾಡಿದವನು ಮತ್ತು ದೇವಹ್ರದದಲ್ಲಿ ಸ್ನಾನಮಾಡಿದವನು ಬ್ರಹ್ಮಭೂತನಾಗಿ ವಿರಾಜಿಸುತ್ತಾನೆ.
13026042a ಪುರಾಪವರ್ತನಂ ನಂದಾಂ ಮಹಾನಂದಾಂ ಚ ಸೇವ್ಯ ವೈ।
13026042c ನಂದನೇ ಸೇವ್ಯತೇ ದಾಂತಸ್ತ್ವಪ್ಸರೋಭಿರಹಿಂಸಕಃ।।
ಅವರ್ತನ, ನಂದಾ ಮತ್ತು ಮಹಾನಂದಗಳಲ್ಲಿ ಸ್ನಾನಮಾಡಿ ದಾಂತನಾಗಿರುವ ಅಹಿಂಸಕನು ನಂದನದಲ್ಲಿ ಅಪ್ಸರೆಯರಿಂದ ಸೇವಿಸಲ್ಪಡುತ್ತಾನೆ.
13026043a ಉರ್ವಶೀಕೃತ್ತಿಕಾಯೋಗೇ ಗತ್ವಾ ಯಃ ಸುಸಮಾಹಿತಃ।
13026043c ಲೌಹಿತ್ಯೇ ವಿಧಿವತ್ಸ್ನಾತ್ವಾ ಪುಂಡರೀಕಫಲಂ ಲಭೇತ್।।
ಕಾರ್ತೀಕ ಹುಣ್ಣಿಮೆಯಂದು ಕೃತ್ತಿಕಾ ಯೋಗದಲ್ಲಿ ಸುಸಮಾಹಿತನಾಗಿ ಉರ್ವಶೀ ತೀರ್ಥದಲ್ಲಿ ಸ್ನಾನಮಾಡಿದರೆ ಪುಂಡರೀಕಯಾಗದ ಫಲವು ದೊರೆಯುತ್ತದೆ.
13026044a ರಾಮಹ್ರದ ಉಪಸ್ಪೃಶ್ಯ ವಿಶಾಲಾಯಾಂ ಕೃತೋದಕಃ।
13026044c ದ್ವಾದಶಾಹಂ ನಿರಾಹಾರಃ ಕಲ್ಮಷಾದ್ವಿಪ್ರಮುಚ್ಯತೇ।।
ರಾಮಹ್ರದದಲ್ಲಿ ಸ್ನಾನಮಾಡಿ ವಿಶಾಲಾದಲ್ಲಿ ಉದಕ ಕ್ರಿಯೆಗಳನ್ನು ಮಾಡುತ್ತಾ ಹನ್ನೆರಡು ದಿನ ನಿರಾಹಾರಿಯಾಗಿರುವವನು ಪಾಪಗಳಿಂದ ಮುಕ್ತನಾಗುತ್ತಾನೆ.
13026045a ಮಹಾಹ್ರದ ಉಪಸ್ಪೃಶ್ಯ ಶುದ್ಧೇನ ಮನಸಾ ನರಃ।
13026045c ಏಕಮಾಸಂ ನಿರಾಹಾರೋ ಜಮದಗ್ನಿಗತಿಂ ಲಭೇತ್।।
ಶುದ್ಧಮನಸ್ಸಿನಿಂದ ಮಹಾಹ್ರದದಲ್ಲಿ ಸ್ನಾನಮಾಡಿ ಒಂದು ತಿಂಗಳು ನಿರಾಹಾರಿಯಾಗಿರುವವನು ಜಮದಗ್ನಿಗತಿಯನ್ನು ಪಡೆಯುತ್ತಾನೆ.
13026046a ವಿಂಧ್ಯೇ ಸಂತಾಪ್ಯ ಚಾತ್ಮಾನಂ ಸತ್ಯಸಂಧಸ್ತ್ವಹಿಂಸಕಃ।
13026046c ಷಣ್ಮಾಸಂ ಪದಮಾಸ್ಥಾಯ ಮಾಸೇನೈಕೇನ ಶುಧ್ಯತಿ।।
ವಿಂಧ್ಯದಲ್ಲಿ ವ್ರತಾದಿಗಳಿಂದ ಶರೀರವನ್ನು ಸಂತಾಪಗೊಳಿಸಿ ತಪಸ್ಸನ್ನು ಮಾಡುವವನು ಒಂದೇ ತಿಂಗಳಿನಲ್ಲಿ ಸಿದ್ಧಿಯನ್ನು ಪಡೆಯುತ್ತಾನೆ.
13026047a ನರ್ಮದಾಯಾಮುಪಸ್ಪೃಶ್ಯ ತಥಾ ಸೂರ್ಪಾರಕೋದಕೇ।
13026047c ಏಕಪಕ್ಷಂ ನಿರಾಹಾರೋ ರಾಜಪುತ್ರೋ ವಿಧೀಯತೇ।।
ನರ್ಮದೆಯಲ್ಲಿ ಮತ್ತು ಸೂರ್ಪಾರಕೋದಕದಲ್ಲಿ ಸ್ನಾನಮಾಡಿ ಒಂದು ಪಕ್ಷ ನಿರಾಹಾರಿಯಾಗಿರುವನು ರಾಜಪುತ್ರನಾಗುತ್ತಾನೆ.
13026048a ಜಂಬೂಮಾರ್ಗೇ ತ್ರಿಭಿರ್ಮಾಸೈಃ ಸಂಯತಃ ಸುಸಮಾಹಿತಃ।
13026048c ಅಹೋರಾತ್ರೇಣ ಚೈಕೇನ ಸಿದ್ಧಿಂ ಸಮಧಿಗಚ್ಚತಿ।।
ಜಂಬೂಮಾರ್ಗದಲ್ಲಿ ಸಂಯತನಾಗಿ ಸುಸಮಾಹಿತನಾಗಿ ಅನುದಿನವೂ ಸ್ನಾನಮಾಡುತ್ತಿದ್ದರೆ ಮೂರು ತಿಂಗಳುಗಳಲ್ಲಿಯೇ ಸಿದ್ಧಿಯನ್ನು ಪಡೆಯುತ್ತಾನೆ.
13026049a ಕೋಕಾಮುಖೇ ವಿಗಾಹ್ಯಾಪೋ ಗತ್ವಾ ಚಂಡಾಲಿಕಾಶ್ರಮಮ್।
13026049c ಶಾಕಭಕ್ಷಶ್ಚೀರವಾಸಾಃ ಕುಮಾರೀರ್ವಿಂದತೇ ದಶ।।
ಕೋಕಾಮುಖದಲ್ಲಿ ಸ್ನಾನಮಾಡಿ ಚಂಡಾಲಿಕಾಶ್ರಮಕ್ಕೆ ಹೋಗಿ ನಾರುಮಡಿಯನ್ನುಟ್ಟು ಶಾಕಾಹಾರಿಯಾಗಿರುವವನು ಕುಮಾರೀತೀರ್ಥದಲ್ಲಿ ಹತ್ತು ಬಾರಿ ಸ್ನಾನಮಾಡಿದ ಫಲವನ್ನು ಪಡೆಯುತ್ತಾನೆ.
13026050a ವೈವಸ್ವತಸ್ಯ ಸದನಂ ನ ಸ ಗಚ್ಚೇತ್ಕದಾ ಚನ।
13026050c ಯಸ್ಯ ಕನ್ಯಾಹ್ರದೇ ವಾಸೋ ದೇವಲೋಕಂ ಸ ಗಚ್ಚತಿ।।
ಅನಂತರ ಅವನು ಎಂದೂ ವೈವಸ್ವತ ಸದನಕ್ಕೆ ಹೋಗಬೇಕಾಗುವುದಿಲ್ಲ. ಕನ್ಯಾಹ್ರದದಲ್ಲಿ ವಾಸಿಸುವವನು ದೇವಲೋಕಕ್ಕೆ ಹೋಗುತ್ತಾನೆ.
13026051a ಪ್ರಭಾಸೇ ತ್ವೇಕರಾತ್ರೇಣ ಅಮಾವಾಸ್ಯಾಂ ಸಮಾಹಿತಃ।
13026051c ಸಿಧ್ಯತೇಽತ್ರ ಮಹಾಬಾಹೋ ಯೋ ನರೋ ಜಾಯತೇ ಪುನಃ।।
ಮಹಾಬಾಹೋ! ಪ್ರಭಾಸದಲ್ಲಿ ಅಮವಾಸ್ಯೆಯಂದು ಸುಸಮಾಹಿತನಾಗಿರುವವನಿಗೆ ಒಂದು ರಾತ್ರಿಯಲ್ಲಿಯೇ ಸಿದ್ಧಿಯಾಗುತ್ತದೆ. ಅ ನರನು ಪುನಃ ಹುಟ್ಟಬೇಕಾಗಿಲ್ಲ.
13026052a ಉಜ್ಜಾನಕ ಉಪಸ್ಪೃಶ್ಯ ಆರ್ಷ್ಟಿಷೇಣಸ್ಯ ಚಾಶ್ರಮೇ।
13026052c ಪಿಂಗಾಯಾಶ್ಚಾಶ್ರಮೇ ಸ್ನಾತ್ವಾ ಸರ್ವಪಾಪೈಃ ಪ್ರಮುಚ್ಯತೇ।।
ಆರ್ಷ್ಟಿಷೇಣನ ಆಶ್ರಮದಲ್ಲಿ ಉಜ್ಜಾನಕದಲ್ಲಿ ಸ್ನಾನಮಾಡಿ ಪಿಂಗಾಶ್ರಮದಲ್ಲಿ ಸ್ನಾನಮಾಡಿದವನು ಸರ್ವಪಾಪಗಳಿಂದ ಮುಕ್ತನಾಗುತ್ತಾನೆ.
13026053a ಕುಲ್ಯಾಯಾಂ ಸಮುಪಸ್ಪೃಶ್ಯ ಜಪ್ತ್ವಾ ಚೈವಾಘಮರ್ಷಣಮ್।
13026053c ಅಶ್ವಮೇಧಮವಾಪ್ನೋತಿ ತ್ರಿರಾತ್ರೋಪೋಷಿತಃ ಶುಚಿಃ।।
ಅಘಮರ್ಷಣವನ್ನು ಜಪಿಸುತ್ತಾ ಕುಲ್ಯದಲ್ಲಿ ಸ್ನಾನಮಾಡಿ ಅಲ್ಲಿ ಮೂರುರಾತ್ರಿ ಉಪವಾಸದಿಂದಿರುವ ಶುಚಿಗೆ ಅಶ್ವಮೇಧದ ಫಲವು ದೊರೆಯುತ್ತದೆ.
13026054a ಪಿಂಡಾರಕ ಉಪಸ್ಪೃಶ್ಯ ಏಕರಾತ್ರೋಷಿತೋ ನರಃ।
13026054c ಅಗ್ನಿಷ್ಟೋಮಮವಾಪ್ನೋತಿ ಪ್ರಭಾತಾಂ ಶರ್ವರೀಂ ಶುಚಿಃ।।
ಪಿಂಡಾರಕದಲ್ಲಿ ಸ್ನಾನಮಾಡಿ ಒಂದು ರಾತ್ರಿ ಉಪವಾಸದಿಂದಿರುವ ಶುಚಿ ನರನು ರಾತ್ರಿಕಳೆದು ಪ್ರಭಾತವಾಗುತ್ತಲೇ ಅಗ್ನಿಷ್ಟೋಮಯಾಗದ ಫಲವನ್ನು ಪಡೆಯುತ್ತಾನೆ.
13026055a ತಥಾ ಬ್ರಹ್ಮಸರೋ ಗತ್ವಾ ಧರ್ಮಾರಣ್ಯೋಪಶೋಭಿತಮ್।
13026055c ಪುಂಡರೀಕಮವಾಪ್ನೋತಿ ಪ್ರಭಾತಾಂ ಶರ್ವರೀಂ ಶುಚಿಃ।।
ಹಾಗೆಯೇ ಧರ್ಮಾರಣ್ಯದಲ್ಲಿ ಶೋಭಿಸುವ ಬ್ರಹ್ಮಸರಕ್ಕೆ ಹೋದವನು ರಾತ್ರಿಕಳೆದು ಪ್ರಭಾತವಾಗುತ್ತಲೇ ಪುಂಡರೀಕ ಯಾಗದ ಫಲವನ್ನು ಪಡೆಯುತ್ತಾನೆ.
13026056a ಮೈನಾಕೇ ಪರ್ವತೇ ಸ್ನಾತ್ವಾ ತಥಾ ಸಂಧ್ಯಾಮುಪಾಸ್ಯ ಚ।
13026056c ಕಾಮಂ ಜಿತ್ವಾ ಚ ವೈ ಮಾಸಂ ಸರ್ವಮೇಧಫಲಂ ಲಭೇತ್।।
ಮೈನಾಕ ಪರ್ವತದಲ್ಲಿ ಸ್ನಾನಮಾಡಿ ಸಂಧ್ಯೋಪಾಸನೆಯನ್ನು ಮಾಡಿ ಕಾಮವನ್ನು ಗೆದ್ದ ಒಂದು ಮಾಸದಲ್ಲಿಯೇ ಸರ್ವಮೇಧಯಾಗದ ಫಲವು ದೊರೆಯುತ್ತದೆ.
13026057a ವಿಖ್ಯಾತೋ ಹಿಮವಾನ್ಪುಣ್ಯಃ ಶಂಕರಶ್ವಶುರೋ ಗಿರಿಃ।
13026057c ಆಕರಃ ಸರ್ವರತ್ನಾನಾಂ ಸಿದ್ಧಚಾರಣಸೇವಿತಃ।।
ಸರ್ವರತ್ನಗಳ ಆಕರವಾದ, ಸಿದ್ಧಚಾರಣ ಸೇವಿತವಾದ ಮತ್ತು ಶಂಕರನ ಮಾವನಾದ ಪುಣ್ಯ ಹಿಮವಾನ್ ಗಿರಿಯು ವಿಖ್ಯಾತವಾದುದು.
13026058a ಶರೀರಮುತ್ಸೃಜೇತ್ತತ್ರ ವಿಧಿಪೂರ್ವಮನಾಶಕೇ।
13026058c ಅಧ್ರುವಂ ಜೀವಿತಂ ಜ್ಞಾತ್ವಾ ಯೋ ವೈ ವೇದಾಂತಗೋ ದ್ವಿಜಃ।।
13026059a ಅಭ್ಯರ್ಚ್ಯ ದೇವತಾಸ್ತತ್ರ ನಮಸ್ಕೃತ್ಯ ಮುನೀಂಸ್ತಥಾ।
13026059c ತತಃ ಸಿದ್ಧೋ ದಿವಂ ಗಚ್ಚೇದ್ಬ್ರಹ್ಮಲೋಕಂ ಸನಾತನಮ್।।
ಜೀವಿತವು ಅನಿಶ್ಚಿತವೆಂದು ತಿಳಿದ ವೇದಾಂತಗ ದ್ವಿಜನು ಅಲ್ಲಿ ದೇವತೆಗಳನ್ನು ಅರ್ಚಿಸಿ, ಮುನಿಗಳನ್ನು ನಮಸ್ಕರಿಸಿ ವಿಧಿಪೂರ್ವಕವಾಗಿ ನಿರಾಹಾರಿಯಾಗಿದ್ದು ಶರೀರವನ್ನು ತೊರೆದರೆ ಸಿದ್ಧನಾಗಿ ಸನಾತನ ಬ್ರಹ್ಮಲೋಕಕ್ಕೆ ಹೋಗುತ್ತಾನೆ.
13026060a ಕಾಮಂ ಕ್ರೋಧಂ ಚ ಲೋಭಂ ಚ ಯೋ ಜಿತ್ವಾ ತೀರ್ಥಮಾವಸೇತ್।
13026060c ನ ತೇನ ಕಿಂ ಚಿನ್ನ ಪ್ರಾಪ್ತಂ ತೀರ್ಥಾಭಿಗಮನಾದ್ಭವೇತ್।।
ಕಾಮ, ಕ್ರೋಧ, ಲೋಭಗಳನ್ನು ಜಯಿಸಿ ಅಲ್ಲಿರುವ ತೀರ್ಥಗಳಲ್ಲಿ ವಾಸಿಸುವವನಿಗೆ ತೀರ್ಥಯಾತ್ರೆಗಳಿಂದ ಪಡೆಯಬೇಕಾಗುವ ಯಾವ ಪುಣ್ಯವೂ ಬೇಕಾಗುವುದಿಲ್ಲ.
13026061a ಯಾನ್ಯಗಮ್ಯಾನಿ ತೀರ್ಥಾನಿ ದುರ್ಗಾಣಿ ವಿಷಮಾಣಿ ಚ।
13026061c ಮನಸಾ ತಾನಿ ಗಮ್ಯಾನಿ ಸರ್ವತೀರ್ಥಸಮಾಸತಃ।।
ಯಾವ ತೀರ್ಥಗಳಿಗೆ ಹೋಗಲಿಕ್ಕಾಗುವುದಿಲ್ಲವೋ, ದುರ್ಗಮವಾಗಿವೆಯೋ ಮತ್ತು ದಾರಿಯು ಕಷ್ಟಕರವಾಗಿರುವುದೋ ಅವುಗಳಿಗೆ ಮನಸ್ಸಿನಲ್ಲಿಯೇ ಹೋದರೂ ಸರ್ವತೀರ್ಥಗಳಿಗೆ ಹೋದಂತಾಗುತ್ತದೆ.
13026062a ಇದಂ ಮೇಧ್ಯಮಿದಂ ಧನ್ಯಮಿದಂ ಸ್ವರ್ಗ್ಯಮಿದಂ ಸುಖಮ್।
13026062c ಇದಂ ರಹಸ್ಯಂ ದೇವಾನಾಮಾಪ್ಲಾವ್ಯಾನಾಂ ಚ ಪಾವನಮ್।।
ಈ ತೀರ್ಥಗಳ ಮಹಾತ್ಮೆಯು ಧನ್ಯತೆಯನ್ನು ನೀಡುತ್ತದೆ. ಸ್ವರ್ಗಸುಖವನ್ನು ನೀಡುತ್ತದೆ. ದೇವತೆಗಳ ಈ ತೀರ್ಥಗಳ ರಹಸ್ಯವು ಪಾವನವಾದುದು.
13026063a ಇದಂ ದದ್ಯಾದ್ದ್ವಿಜಾತೀನಾಂ ಸಾಧೂನಾಮಾತ್ಮಜಸ್ಯ ವಾ।
13026063c ಸುಹೃದಾಂ ಚ ಜಪೇತ್ಕರ್ಣೇ ಶಿಷ್ಯಸ್ಯಾನುಗತಸ್ಯ ವಾ।।
ಇದನ್ನು ದ್ವಿಜಾತಿಯವರಿಗೂ, ಸಾಧುಗಳಿಗೂ, ಮಕ್ಕಳಿಗೂ, ಸುಹೃದಯರಿಗೂ, ಅನುಯಾಯಿ ಶಿಷ್ಯರಿಗೂ ಕಿವಿಯಲ್ಲಿ ಹೇಳಬೇಕು.”
13026064a ದತ್ತವಾನ್ಗೌತಮಸ್ಯೇದಮಂಗಿರಾ ವೈ ಮಹಾತಪಾಃ।
13026064c ಗುರುಭಿಃ ಸಮನುಜ್ಞಾತಃ ಕಾಶ್ಯಪೇನ ಚ ಧೀಮತಾ।।
ಮಹಾತಪಸ್ವಿ ಅಂಗಿರಸನು ಇದನ್ನು ಗೌತಮನಿಗೆ ಉಪದೇಶವನ್ನಾಗಿತ್ತನು. ಇದಕ್ಕೆ ಮೊದಲು ಗುರು ಧೀಮತ ಕಾಶ್ಯಪನಿಂದ ಇದನ್ನು ಪಡೆದುಕೊಂಡಿದ್ದನು.
13026065a ಮಹರ್ಷೀಣಾಮಿದಂ ಜಪ್ಯಂ ಪಾವನಾನಾಂ ತಥೋತ್ತಮಮ್।
13026065c ಜಪಂಶ್ಚಾಭ್ಯುತ್ಥಿತಃ ಶಶ್ವನ್ನಿರ್ಮಲಃ ಸ್ವರ್ಗಮಾಪ್ನುಯಾತ್।।
ಈ ಪಾವನತೀರ್ಥಗಳ ಆಖ್ಯಾನವು ಮಹರ್ಷಿಗಳಿಗೂ ಜಪಿಸಲು ಉತ್ತಮವಾಗಿದೆ. ಪ್ರಾತಃಕಾಲದಲ್ಲಿ ಇದನ್ನು ಜಪಿಸುವವನು ನಿರ್ಮಲ ಸ್ವರ್ಗವನ್ನು ಪಡೆಯುತ್ತಾನೆ.
13026066a ಇದಂ ಯಶ್ಚಾಪಿ ಶೃಣುಯಾದ್ರಹಸ್ಯಂ ತ್ವಂಗಿರೋಮತಮ್।
13026066c ಉತ್ತಮೇ ಚ ಕುಲೇ ಜನ್ಮ ಲಭೇಜ್ಜಾತಿಂ ಚ ಸಂಸ್ಮರೇತ್।।
ಅಂಗಿರಸನ ಈ ಮತದ ರಹಸ್ಯವನ್ನು ಕೇಳುವುದರಿಂದ ಉತ್ತಮ ಕುಲದಲ್ಲಿ ಜನ್ಮವೂ ಪೂರ್ವಜನ್ಮಗಳ ಸಂಸ್ಮರಣೆಯೂ ದೊರೆಯುತ್ತವೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಆಂಗಿರಸತೀರ್ಥಯಾತ್ರಾಯಾಂ ಷಡ್ವಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಆಂಗಿರಸತೀರ್ಥಯಾತ್ರಾ ಎನ್ನುವ ಇಪ್ಪತ್ತಾರನೇ ಅಧ್ಯಾಯವು.
-
ಚೀನಾಬ್ (ಭಾರತ ದರ್ಶನ). ↩︎
-
ಜೀಲಂ (ಭಾರತ ದರ್ಶನ). ↩︎
-
ತ್ರಿಸ್ಥಾನೇ ಎಂಬ ಪಾಠಾಂತರವಿದೆ (ಭಾರತ ದರ್ಶನ). ↩︎
-
ದೇವಿಕಾಯಾಮುಪಸ್ಪೃಶ್ಯ ಎಂಬ ಪಾಠಾಂತರವಿದೆ (ಭಾರತ ದರ್ಶನ). ↩︎
-
ಶರಸ್ತಂಭೇ (ಭಾರತ ದರ್ಶನ). ↩︎
-
ಏಕಪಕ್ಷಂ ನ್ರಾಹಾರಸ್ತಂರ್ಧಾನಫಲಂ ಲಭೇತ್। (ಭಾರತ ದರ್ಶನ). ↩︎
-
ಇದರ ನಂತರ ಈ ಒಂದು ಅಧಿಕ ಶ್ಲೋಕಾರ್ಧವಿದೆ: ದಶಾಶ್ವಮೇಧಾನಾಪ್ನೋತಿ ತತ್ರ ಮಾಸಂ ಕೃತೋದಕಃ।। (ಭಾರತ ದರ್ಶನ). ↩︎