ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 25
ಸಾರ
ಬ್ರಾಹ್ಮಣನನ್ನು ಹಿಂಸಿಸದೇ ಇದ್ದರೂ ಬ್ರಹ್ಮಹತ್ಯಾದೋಷವು ಹೇಗೆ ಬರಬಹುದೆಂದು ಯುಧಿಷ್ಠಿರನು ಕೇಳಲು ಭೀಷ್ಮನು ತನ್ನ ಅದೇ ಪ್ರಶ್ನೆಗೆ ವ್ಯಾಸನು ಉತ್ತರಿಸಿದುದನ್ನು ಹೇಳಿದುದು (1-12).
13025001 ಯುಧಿಷ್ಠಿರ ಉವಾಚ।
13025001a ಇದಂ ಮೇ ತತ್ತ್ವತೋ ರಾಜನ್ವಕ್ತುಮರ್ಹಸಿ ಭಾರತ।
13025001c ಅಹಿಂಸಯಿತ್ವಾ ಕೇನೇಹ ಬ್ರಹ್ಮಹತ್ಯಾ ವಿಧೀಯತೇ।।
ಯುಧಿಷ್ಠಿರನು ಹೇಳಿದನು: “ರಾಜನ್! ಭಾರತ! ಬ್ರಾಹ್ಮಣನನ್ನು ಹಿಂಸಿಸದಿದ್ದರೂ ಯಾವುದರಿಂದ ಬ್ರಹ್ಮಹತ್ಯಾ ದೋಷವು ಉಂಟಾಗುತ್ತದೆ? ಇದರ ಕುರಿತು ತತ್ತ್ವತಃ ಹೇಳಬೇಕು.”
13025002 ಭೀಷ್ಮ ಉವಾಚ।
13025002a ವ್ಯಾಸಮಾಮಂತ್ರ್ಯ ರಾಜೇಂದ್ರ ಪುರಾ ಯತ್ಪೃಷ್ಟವಾನಹಮ್।
13025002c ತತ್ತೇಽಹಂ ಸಂಪ್ರವಕ್ಷ್ಯಾಮಿ ತದಿಹೈಕಮನಾಃ ಶೃಣು।।
ಭೀಷ್ಮನು ಹೇಳಿದನು: “ರಾಜೇಂದ್ರ! ಹಿಂದೆ ನಾನು ವ್ಯಾಸನನ್ನು ಆಮಂತ್ರಿಸಿ ಇದೇ ಪ್ರಶ್ನೆಯನ್ನು ಅವನಲ್ಲಿ ಕೇಳಿದ್ದೆನು. ಅದನ್ನೇ ನಾನು ಹೇಳುತ್ತೇನೆ. ಏಕಾಗ್ರಚಿತ್ತನಾಗಿ ಕೇಳು.
13025003a ಚತುರ್ಥಸ್ತ್ವಂ ವಸಿಷ್ಠಸ್ಯ ತತ್ತ್ವಮಾಖ್ಯಾಹಿ ಮೇ ಮುನೇ।
13025003c ಅಹಿಂಸಯಿತ್ವಾ ಕೇನೇಹ ಬ್ರಹ್ಮಹತ್ಯಾ ವಿಧೀಯತೇ।।
“ಮುನೇ! ನೀನು ವಸಿಷ್ಠನ ವಂಶದಲ್ಲಿ ನಾಲ್ಕನೆಯವನಾಗಿರುವೆ. ಬ್ರಾಹ್ಮಣನನ್ನು ಹಿಂಸಿಸದಿದ್ದರೂ ಯಾವುದರಿಂದ ಬ್ರಹ್ಮಹತ್ಯಾ ದೋಷವುಂಟಾಗುತ್ತದೆ ಎನ್ನುವುದನ್ನು ತತ್ತ್ವತಃ ನನಗೆ ಹೇಳು.”
13025004a ಇತಿ ಪೃಷ್ಟೋ ಮಹಾರಾಜ ಪರಾಶರಶರೀರಜಃ।
13025004c ಅಬ್ರವೀನ್ನಿಪುಣೋ ಧರ್ಮೇ ನಿಃಸಂಶಯಮನುತ್ತಮಮ್।।
ಮಹಾರಾಜ! ಹೀಗೆ ಕೇಳಲು ಪರಾಶರಶರೀರಜ ನಿಪುಣನು ನಿಃಸಂಶಯವೂ ಅನುತ್ತಮವೂ ಆದ ಧರ್ಮವನ್ನು ಹೇಳಿದನು.
13025005a ಬ್ರಾಹ್ಮಣಂ ಸ್ವಯಮಾಹೂಯ ಭಿಕ್ಷಾರ್ಥೇ ಕೃಶವೃತ್ತಿನಮ್।
13025005c ಬ್ರೂಯಾನ್ನಾಸ್ತೀತಿ ಯಃ ಪಶ್ಚಾತ್ತಂ ವಿದ್ಯಾದ್ಬ್ರಹ್ಮಘಾತಿನಮ್।।
“ಕೃಶವೃತ್ತಿಯಲ್ಲಿರುವ ಬ್ರಾಹ್ಮಣನನ್ನು ಸ್ವಯಂ ತಾನೇ ಭಿಕ್ಷೆಗೆಂದು ಆಹ್ವಾನಿಸಿ ಅವನು ಬಂದ ನಂತರ “ಇಲ್ಲ” ಎಂದು ಹೇಳುವವನು ಬ್ರಹ್ಮಘಾತಿಯೆಂದು ತಿಳಿಯಬೇಕು.
13025006a ಮಧ್ಯಸ್ಥಸ್ಯೇಹ ವಿಪ್ರಸ್ಯ ಯೋಽನೂಚಾನಸ್ಯ ಭಾರತ।
13025006c ವೃತ್ತಿಂ ಹರತಿ ದುರ್ಬುದ್ಧಿಸ್ತಂ ವಿದ್ಯಾದ್ಬ್ರಹ್ಮಘಾತಿನಮ್।।
ಭಾರತ! ಯಾರ ತಂಟೆಗೂ ಹೋಗದೇ ಮಧ್ಯಸ್ಥನಾಗಿ ತನ್ನ ವೃತ್ತಿಯಲ್ಲಿರುವ ವಿದ್ವಾಂಸ ಬ್ರಾಹ್ಮಣನ ವೃತ್ತಿಯನ್ನು ಅಪಹರಿಸುವ ದುರ್ಬುದ್ಧಿಯು ಬ್ರಹ್ಮಘಾತಿಯೆಂದು ತಿಳಿಯಬೇಕು.
13025007a ಗೋಕುಲಸ್ಯ ತೃಷಾರ್ತಸ್ಯ ಜಲಾರ್ಥೇ ವಸುಧಾಧಿಪ।
13025007c ಉತ್ಪಾದಯತಿ ಯೋ ವಿಘ್ನಂ ತಂ ವಿದ್ಯಾದ್ಬ್ರಹ್ಮಘಾತಿನಮ್।।
ವಸುಧಾಧಿಪ! ಬಾಯಾರಿದ ಹಸುಗಳಿಗೆ ನೀರನ್ನು ಕುಡಿಸುವುದರಲ್ಲಿ ವಿಘ್ನವನ್ನುಂಟುಮಾಡುವವನನ್ನು ಬ್ರಹ್ಮಘಾತಿಯೆಂದು ತಿಳಿಯಬೇಕು.
13025008a ಯಃ ಪ್ರವೃತ್ತಾಂ ಶ್ರುತಿಂ ಸಮ್ಯಕ್ಶಾಸ್ತ್ರಂ ವಾ ಮುನಿಭಿಃ ಕೃತಮ್।
13025008c ದೂಷಯತ್ಯನಭಿಜ್ಞಾಯ ತಂ ವಿದ್ಯಾದ್ಬ್ರಹ್ಮಘಾತಿನಮ್।।
ಪ್ರವೃತ್ತವಾಗಿರುವ ಶ್ರುತಿ, ಅಥವಾ ಮುನಿಗಳು ಮಾಡಿಟ್ಟಿರುವ ಸಂಪೂರ್ಣ ಶಾಸ್ತ್ರವನ್ನು ಅಧ್ಯಯನ ಮಾಡದೇ ಅದನ್ನು ಯಾರು ದೂಷಿಸುತ್ತಾರೋ ಅವರು ಬ್ರಹ್ಮಘಾತಿಗಳೆಂದು ತಿಳಿಯಬೇಕು.
13025009a ಆತ್ಮಜಾಂ ರೂಪಸಂಪನ್ನಾಂ ಮಹತೀಂ ಸದೃಶೇ ವರೇ।
13025009c ನ ಪ್ರಯಚ್ಚತಿ ಯಃ ಕನ್ಯಾಂ ತಂ ವಿದ್ಯಾದ್ಬ್ರಹ್ಮಘಾತಿನಮ್।।
ಬೆಳೆದಿರುವ ರೂಪಸಂಪನ್ನ ಮಗಳು ಕನ್ಯೆಯನ್ನು ಸದೃಶ ವರನಿಗೆ ಯಾರು ಕೊಡುವುದಿಲ್ಲವೋ ಅವನನ್ನು ಬ್ರಹ್ಮಘಾತಿಯೆಂದು ತಿಳಿಯಬೇಕು.
13025010a ಅಧರ್ಮನಿರತೋ ಮೂಢೋ ಮಿಥ್ಯಾ ಯೋ ವೈ ದ್ವಿಜಾತಿಷು।
13025010c ದದ್ಯಾನ್ಮರ್ಮಾತಿಗಂ ಶೋಕಂ ತಂ ವಿದ್ಯಾದ್ಬ್ರಹ್ಮಘಾತಿನಮ್।।
ದ್ವಿಜಾತಿಯವರಿಗೆ ಮರ್ಮಗಳನ್ನು ಬೇಧಿಸುವ ಶೋಕವನ್ನು ತರುವ ಅಧರ್ಮನಿರತ ಮೂಢ ಸುಳ್ಳುಗಾರನು ಬ್ರಹ್ಮಘಾತಿಯೆಂದು ತಿಳಿಯಬೇಕು.
13025011a ಚಕ್ಷುಷಾ ವಿಪ್ರಹೀನಸ್ಯ ಪಂಗುಲಸ್ಯ ಜಡಸ್ಯ ವಾ।
13025011c ಹರೇತ ಯೋ ವೈ ಸರ್ವಸ್ವಂ ತಂ ವಿದ್ಯಾದ್ಬ್ರಹ್ಮಘಾತಿನಮ್।।
ಕುರುಡ, ಕುಂಟ ಅಥವಾ ಮೂರ್ಖನ ಸರ್ವಸ್ವವನ್ನೂ ಅಪಹರಿಸುವವನು ಬ್ರಹ್ಮಘಾತಿಯೆಂದು ತಿಳಿಯಬೇಕು.
13025012a ಆಶ್ರಮೇ ವಾ ವನೇ ವಾ ಯೋ ಗ್ರಾಮೇ ವಾ ಯದಿ ವಾ ಪುರೇ।
13025012c ಅಗ್ನಿಂ ಸಮುತ್ಸೃಜೇನ್ಮೋಹಾತ್ತಂ ವಿದ್ಯಾದ್ಬ್ರಹ್ಮಘಾತಿನಮ್।।
ಮೋಹದಿಂದ ಯಾರು ಆಶ್ರಮ, ವನ, ಗ್ರಾಮ ಅಥವಾ ನಗರಕ್ಕೆ ಬೆಂಕಿಯನ್ನಿಡುತ್ತಾನೋ ಅವನು ಬ್ರಹ್ಮಘಾತಿಯೆಂದು ತಿಳಿಯಬೇಕು.””
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಬ್ರಹ್ಮಘ್ನಕಥನೇ ಪಂಚವಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಬ್ರಹ್ಮಘ್ನಕಥನ ಎನ್ನುವ ಇಪ್ಪತ್ತೈದನೇ ಅಧ್ಯಾಯವು.