ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 24
ಸಾರ
ಪಿತೃ-ದೇವಕಾರ್ಯಗಳಲ್ಲಿ ಸುರರ್ಷಿಗಳು ಏನನ್ನು ವಿಹಿಸಿದ್ದಾರೆ ಎನ್ನುವ ಯುಧಿಷ್ಠಿರನ ಪ್ರಶ್ನೆಗೆ ಭೀಷ್ಮನು ದೇವ-ಪಿತೃಕಾರ್ಯಗಳಿಗೆ ಉತ್ತಮ ಕಾಲ, ಉಚಿತ ಆಹಾರಪದಾರ್ಥಗಳು (1-11), ದಾನಕ್ಕೆ ಅರ್ಹ ಬ್ರಾಹ್ಮಣನ ವರ್ಣನೆಗಳನ್ನು ಹೇಳಿ (12-23), ದೇವ-ಪಿತೃಕಾರ್ಯಗಳ ಇತರ ನಿಯಮಗಳನ್ನು ವರ್ಣಿಸಿದುದು (28-47). ದೇವ-ಪಿತೃಕಾರ್ಯಗಳಲ್ಲಿ ಯಾರಿಗೆ ಮಾಡಿದ ದಾನವು ಮಹಾಫಲವನ್ನು ಕೊಡುತ್ತದೆ ಎಂಬ ಯುಧಿಷ್ಠಿರನ ಪ್ರಶ್ನೆಗೆ ಭೀಷ್ಮನು ಉತ್ತರಿಸುವುದು (48-58). ಸ್ವರ್ಗ-ನರಕಗಾಮಿಗಳ ವರ್ಣನೆ (59-103).
13024001 ಯುಧಿಷ್ಠಿರ ಉವಾಚ।
13024001a ಶ್ರಾದ್ಧಕಾಲೇ ಚ ದೈವೇ ಚ ಧರ್ಮೇ ಚಾಪಿ ಪಿತಾಮಹ।
13024001c ಇಚ್ಚಾಮೀಹ ತ್ವಯಾಖ್ಯಾತಂ ವಿಹಿತಂ ಯತ್ಸುರರ್ಷಿಭಿಃ।।
ಯುಧಿಷ್ಠಿರನು ಹೇಳಿದನು: “ಪಿತಾಮಹ! ಶ್ರಾದ್ಧಕಾಲದಲ್ಲಿ, ದೇವ ಮತ್ತು ಧರ್ಮಕಾರ್ಯಗಳಲ್ಲಿ ಸುರರ್ಷಿಗಳು ಏನನ್ನು ವಿಹಿಸಿದ್ದಾರೆ? ಇದನ್ನು ನಿನ್ನಿಂದ ಕೇಳ ಬಯಸುತ್ತೇನೆ.”
13024002 ಭೀಷ್ಮ ಉವಾಚ।
13024002a ದೈವಂ ಪೂರ್ವಾಹ್ಣಿಕೇ ಕುರ್ಯಾದಪರಾಹ್ಣೇ ತು ಪೈತೃಕಮ್।
13024002c ಮಂಗಲಾಚಾರಸಂಪನ್ನಃ ಕೃತಶೌಚಃ ಪ್ರಯತ್ನವಾನ್।।
ಭೀಷ್ಮನು ಹೇಳಿದನು: “ಶೌಚಾದಿಗಳನ್ನು ಮುಗಿಸಿ ಮಂಗಲಾಚಾರಸಂಪನ್ನನಾಗಿ ಪ್ರಯತ್ನಪೂರ್ವಕವಾಗಿ ಪೂರ್ವಾಹ್ಣದಲ್ಲಿ ದೇವಕಾರ್ಯಗಳನ್ನೂ ಅಪರಾಹ್ಣದಲ್ಲಿ ಪಿತೃಕಾರ್ಯಗಳನ್ನೂ ಮಾಡಬೇಕು.
13024003a ಮನುಷ್ಯಾಣಾಂ ತು ಮಧ್ಯಾಹ್ನೇ ಪ್ರದದ್ಯಾದುಪಪತ್ತಿತಃ।
13024003c ಕಾಲಹೀನಂ ತು ಯದ್ದಾನಂ ತಂ ಭಾಗಂ ರಕ್ಷಸಾಂ ವಿದುಃ।।
ಮಧ್ಯಾಹ್ನದಲ್ಲಿ ಮನುಷ್ಯ ಅತಿಥಿಗಳನ್ನು ಸತ್ಕರಿಸಬೇಕು. ಅಕಾಲಗಳಲ್ಲಿ ಮಾಡುವ ಕರ್ಮಗಳು ರಾಕ್ಷಸರ ಪಾಲಿಗೆ ಸೇರುವುದೆಂದು ವಿದ್ವಾಂಸರು ತಿಳಿಯುತ್ತಾರೆ.
13024004a ಲಂಘಿತಂ ಚಾವಲೀಢಂ ಚ ಕಲಿಪೂರ್ವಂ ಚ ಯತ್ಕೃತಮ್।
13024004c ರಜಸ್ವಲಾಭಿರ್ದೃಷ್ಟಂ ಚ ತಂ ಭಾಗಂ ರಕ್ಷಸಾಂ ವಿದುಃ।।
ಕಾಲಿನಿಂದ ದಾಟಿದ ಆಹಾರಪದಾರ್ಥಗಳು, ರುಚಿನೋಡದ ಅಡುಗೆ, ಜಗಳವಾಡುತ್ತಾ ಮಾಡಿದ ಅಡುಗೆ, ರಜಸ್ವಲೆಯರ ದೃಷ್ಟಿಬಿದ್ದ ಅಡುಗೆ – ಇವುಗಳು ರಾಕ್ಷಸರ ಪಾಲಾಗುವುದೆಂದು ವಿದ್ವಾಂಸರು ತಿಳಿಯುತ್ತಾರೆ.
13024005a ಅವಘುಷ್ಟಂ ಚ ಯದ್ಭುಕ್ತಮವ್ರತೇನ ಚ ಭಾರತ।
13024005c ಪರಾಮೃಷ್ಟಂ ಶುನಾ ಚೈವ ತಂ ಭಾಗಂ ರಕ್ಷಸಾಂ ವಿದುಃ।।
ಭಾರತ! “ವ್ರತಭ್ರಷ್ಟನಾದವನು ಊಟಮಾಡಿಬಿಟ್ಟಿದ್ದಾನೆ!” ಎಂದು ಘೋಷಣೆಯಾದ ನಂತರ ಊಟಮಾಡದೇ ಬಿಟ್ಟಿದ್ದ ಅನ್ನ ಮತ್ತು ನಾಯಿಮುಟ್ಟಿದ ಅನ್ನ – ಇವುಗಳು ರಾಕ್ಷಸರ ಪಾಲಾಗುವುದೆಂದು ವಿದ್ವಾಂಸರು ತಿಳಿಯುತ್ತಾರೆ.
13024006a ಕೇಶಕೀಟಾವಪತಿತಂ ಕ್ಷುತಂ ಶ್ವಭಿರವೇಕ್ಷಿತಮ್।
13024006c ರುದಿತಂ ಚಾವಧೂತಂ ಚ ತಂ ಭಾಗಂ ರಕ್ಷಸಾಂ ವಿದುಃ।।
ಕೂದಲು-ಕೀಟಗಳು ಬಿದ್ದ ಅನ್ನ, ಆಕಳಿಕೆ-ಸೀನುಗಳಿಂದ ದೂಷಿತವಾದ ಅನ್ನ, ನಾಯಿಯ ಕಣ್ಣಿಗೆ ಬಿದ್ದ ಅನ್ನ, ಅಳುತ್ತಲೂ ಅಥವಾ ತಿರಸ್ಕಾರಪೂರ್ವಕವಾಗಿಯೂ ನೀಡಿದ ಅನ್ನ – ಇವುಗಳು ರಾಕ್ಷಸರ ಪಾಲಾಗುತ್ತವೆ ಎಂದು ವಿದ್ವಾಂಸರು ತಿಳಿಯುತ್ತಾರೆ.
13024007a ನಿರೋಂಕಾರೇಣ ಯದ್ಭುಕ್ತಂ ಸಶಸ್ತ್ರೇಣ ಚ ಭಾರತ।
13024007c ದುರಾತ್ಮನಾ ಚ ಯದ್ಭುಕ್ತಂ ತಂ ಭಾಗಂ ರಕ್ಷಸಾಂ ವಿದುಃ।।
ಭಾರತ! ಓಂಕಾರವನ್ನು ಉಚ್ಚರಿಸಿದೆಯೇ ಉಂಡು ಬಿಟ್ಟ ಅನ್ನ, ಶಸ್ತ್ರಧಾರಿಯು ಊಟಮಾಡಿ ಬಿಟ್ಟ ಅನ್ನ, ಮತ್ತು ದುರಾತ್ಮನು ಊಟಮಾಡಿ ಬಿಟ್ಟ ಅನ್ನ – ಇವುಗಳು ರಾಕ್ಷಸರ ಪಾಲಾಗುತ್ತವೆ ಎಂದು ವಿದ್ವಾಂಸರು ತಿಳಿಯುತ್ತಾರೆ.
13024008a ಪರೋಚ್ಚಿಷ್ಟಂ ಚ ಯದ್ಭುಕ್ತಂ ಪರಿಭುಕ್ತಂ ಚ ಯದ್ಭವೇತ್।
13024008c ದೈವೇ ಪಿತ್ರ್ಯೇ ಚ ಸತತಂ ತಂ ಭಾಗಂ ರಕ್ಷಸಾಂ ವಿದುಃ।।
ಇತರರು ತಿಂದು ಉಳಿದ ಮತ್ತು ತಾನೇ ತಿಂದು ಮಿಕ್ಕಿರುವವು ದೇವ-ಪಿತೃಕಾರ್ಯಗಳಿಗೆ ಬರದೇ ಸತತವೂ ರಾಕ್ಷಸರ ಪಾಲಾಗುತ್ತವೆ ಎಂದು ವಿದ್ವಾಂಸರು ತಿಳಿಯುತ್ತಾರೆ.
13024009a ಗರ್ಹಿತಂ ನಿಂದಿತಂ ಚೈವ ಪರಿವಿಷ್ಟಂ ಸಮನ್ಯುನಾ।
13024009c ದೈವಂ ವಾಪ್ಯಥ ವಾ ಪೈತ್ರ್ಯಂ ತಂ ಭಾಗಂ ರಕ್ಷಸಾಂ ವಿದುಃ।।
ಬೈಗಳುಗಳನ್ನು ಹೇಳುತ್ತಾ, ನಿಂದಿಸುತ್ತಾ, ಮತ್ತು ಕೋಪದಿಂದ ಸಿದ್ಧಪಡಿಸಿದ ಅಡುಗೆಯು ದೈವ ಅಥವಾ ಪಿತೃಕಾರ್ಯಗಳಿಗೆ ಬರದೇ ರಾಕ್ಷಸರ ಪಾಲಾಗುತ್ತವೆ ಎಂದು ವಿದ್ವಾಂಸರು ತಿಳಿಯುತ್ತಾರೆ.
13024010a ಮಂತ್ರಹೀನಂ ಕ್ರಿಯಾಹೀನಂ ಯಚ್ಚ್ರಾದ್ಧಂ ಪರಿವಿಷ್ಯತೇ।
13024010c ತ್ರಿಭಿರ್ವರ್ಣೈರ್ನರಶ್ರೇಷ್ಠ ತಂ ಭಾಗಂ ರಕ್ಷಸಾಂ ವಿದುಃ।।
ನರಶ್ರೇಷ್ಠ! ಮಂತ್ರಹೀನವೂ ಕ್ರಿಯಾಹೀನವೂ ಆದ ಅನ್ನವನ್ನು ಮೂರುವರ್ಣದವರು ಶ್ರಾದ್ಧದಲ್ಲಿ ಬಡಿಸಿದರೆ ಅದು ರಾಕ್ಷಸರ ಪಾಲಾಗುತ್ತದೆ ಎಂದು ವಿದ್ವಾಂಸರು ತಿಳಿಯುತ್ತಾರೆ.
13024011a ಆಜ್ಯಾಹುತಿಂ ವಿನಾ ಚೈವ ಯತ್ಕಿಂ ಚಿತ್ಪರಿವಿಷ್ಯತೇ।
13024011c ದುರಾಚಾರೈಶ್ಚ ಯದ್ಭುಕ್ತಂ ತಂ ಭಾಗಂ ರಕ್ಷಸಾಂ ವಿದುಃ।।
ಆಜ್ಯಾಹುತಿಯನ್ನು ಮಾಡದೇ ಬಡಿಸಿದ ಅನ್ನ ಮತ್ತು ದುರಾಚಾರಿಯು ಭುಂಜಿಸಿದ ಅನ್ನ ಇವು ರಾಕ್ಷಸರ ಪಾಲಾಗುತ್ತವೆ ಎಂದು ವಿದ್ವಾಂಸರು ತಿಳಿಯುತ್ತಾರೆ.
13024012a ಯೇ ಭಾಗಾ ರಕ್ಷಸಾಂ ಪ್ರೋಕ್ತಾಸ್ತ ಉಕ್ತಾ ಭರತರ್ಷಭ।
13024012c ಅತ ಊರ್ಧ್ವಂ ವಿಸರ್ಗಸ್ಯ ಪರೀಕ್ಷಾಂ ಬ್ರಾಹ್ಮಣೇ ಶೃಣು।।
ಭರತರ್ಷಭ! ಯಾವ ಆಹಾರಗಳು ರಾಕ್ಷಸರ ಪಾಲಾಗುತ್ತವೆ ಎಂದು ಹೇಳಿದ್ದಾಯಿತು. ಇನ್ನು ಮುಂದೆ ದಾನಕ್ಕೆ ಅರ್ಹನಾದ ಬ್ರಾಹ್ಮಣನನ್ನು ಹೇಗೆ ಪರೀಕ್ಷಿಸಬೇಕು ಎನ್ನುವುದನ್ನು ಕೇಳು.
13024013a ಯಾವಂತಃ ಪತಿತಾ ವಿಪ್ರಾ ಜಡೋನ್ಮತ್ತಾಸ್ತಥೈವ ಚ।
13024013c ದೈವೇ ವಾಪ್ಯಥ ವಾ ಪಿತ್ರ್ಯೇ ರಾಜನ್ನಾರ್ಹಂತಿ ಕೇತನಮ್।।
ರಾಜನ್! ಪತಿತರಾಗಿರುವ, ಜಡರಾಗಿರುವ ಮತ್ತು ಉನ್ಮತ್ತರಾಗಿರುವ ವಿಪ್ರರನ್ನು ದೇವ ಅಥವಾ ಪಿತೃಕಾರ್ಯಗಳಿಗೆ ಆಮಂತ್ರಿಸಬಾರದು.
13024014a ಶ್ವಿತ್ರೀ ಕುಷ್ಠೀ ಚ ಕ್ಲೀಬಶ್ಚ ತಥಾ ಯಕ್ಷ್ಮಹತಶ್ಚ ಯಃ।
13024014c ಅಪಸ್ಮಾರೀ ಚ ಯಶ್ಚಾಂಧೋ ರಾಜನ್ನಾರ್ಹಂತಿ ಸತ್ಕೃತಿಮ್।।
ತೊನ್ನುರೋಗವಿರುವವನು, ನಪುಂಸಕ, ಕುಷ್ಟರೋಗಿ, ಕ್ಷಯರೋಗಿ, ಮೂರ್ಛೆರೋಗವಿರುವವನು, ಮತ್ತು ಕುರುಡ ಇವರು ದೇವ-ಪಿತೃ ಸತ್ಕಾರ್ಯಗಳಿಗೆ ಅರ್ಹರಲ್ಲ.
13024015a ಚಿಕಿತ್ಸಕಾ ದೇವಲಕಾ ವೃಥಾನಿಯಮಧಾರಿಣಃ।
13024015c ಸೋಮವಿಕ್ರಯಿಣಶ್ಚೈವ ಶ್ರಾದ್ಧೇ ನಾರ್ಹಂತಿ ಕೇತನಮ್।।
ಚಿಕಿತ್ಸಕರು, ದೇವಾಲಯದ ಅರ್ಚಕರು, ತೋರಿಕೆಗಿರುವ ನಿಯಮಧಾರಿಗಳು, ಮತ್ತು ಸೋಮವನ್ನು ವಿಕ್ರಯಿಸುವವರು ಶ್ರಾದ್ಧದ ಆಮಂತ್ರಣಕ್ಕೆ ಅರ್ಹರಲ್ಲ.
13024016a ಗಾಯನಾ ನರ್ತಕಾಶ್ಚೈವ ಪ್ಲವಕಾ ವಾದಕಾಸ್ತಥಾ।
13024016c ಕಥಕಾ ಯೋಧಕಾಶ್ಚೈವ ರಾಜನ್ನಾರ್ಹಂತಿ ಕೇತನಮ್।।
ರಾಜನ್! ಗಾಯಕರು, ನರ್ತಕರು, ಹಾರುವವರು, ವಾದಕರು, ಕಥಕರು, ಮತ್ತು ಯೋಧಕರು ಕೂಡ ಶ್ರಾದ್ಧದ ಆಮಂತ್ರಣಕ್ಕೆ ಅರ್ಹರಲ್ಲ.
13024017a ಹೋತಾರೋ ವೃಷಲಾನಾಂ ಚ ವೃಷಲಾಧ್ಯಾಪಕಾಸ್ತಥಾ।
13024017c ತಥಾ ವೃಷಲಶಿಷ್ಯಾಶ್ಚ ರಾಜನ್ನಾರ್ಹಂತಿ ಕೇತನಮ್।।
ರಾಜನ್! ಶೂದ್ರರ ಹೋತಾರ, ಶೂದ್ರರ ಅಧ್ಯಾಪಕ, ಮತ್ತು ಶೂದ್ರರ ಶಿಷ್ಯರೂ ಕೂಡ ಶ್ರಾದ್ಧದ ಆಮಂತ್ರಣಕ್ಕೆ ಅರ್ಹರಲ್ಲ.
13024018a ಅನುಯೋಕ್ತಾ ಚ ಯೋ ವಿಪ್ರೋ ಅನುಯುಕ್ತಶ್ಚ ಭಾರತ।
13024018c ನಾರ್ಹತಸ್ತಾವಪಿ ಶ್ರಾದ್ಧಂ ಬ್ರಹ್ಮವಿಕ್ರಯಿಣೌ ಹಿ ತೌ।।
ಭಾರತ! ವೇತನವನ್ನು ತೆಗೆದುಕೊಂಡು ವೇದವನ್ನು ಹೇಳಿಕೊಡುವ ಮತ್ತು ವೇತನವನ್ನು ಕೊಟ್ಟು ವೇದವನ್ನು ಕಲಿತುಕೊಳ್ಳುವ ಇಬ್ಬರೂ ಬ್ರಹ್ಮವಿಕ್ರಯಿಗಳೇ. ಆದುದರಿಂದ ಅವರಿಬ್ಬರೂ ಕೂಡ ಶ್ರಾದ್ಧದ ಆಮಂತ್ರಣಕ್ಕೆ ಅರ್ಹರಾಗುವುದಿಲ್ಲ.
13024019a ಅಗ್ರಣೀರ್ಯಃ ಕೃತಃ ಪೂರ್ವಂ ವರ್ಣಾವರಪರಿಗ್ರಹಃ।
13024019c ಬ್ರಾಹ್ಮಣಃ ಸರ್ವವಿದ್ಯೋಽಪಿ ರಾಜನ್ನಾರ್ಹತಿ ಕೇತನಮ್।।
ರಾಜನ್! ಮೊದಲು ಶ್ರೇಷ್ಠ ಬ್ರಾಹ್ಮಣನಾಗಿದ್ದುಕೊಂಡು ಅನಂತರ ನೀಚವರ್ಣದ ಸ್ತ್ರೀಯನ್ನು ವಿವಾಹವಾದ ಬ್ರಾಹ್ಮಣನು ಸರ್ವವಿದ್ಯಾವಂತನಾಗಿದ್ದರೂ ದೇವ-ಪಿತೃಕಾರ್ಯಗಳ ಆಮಂತ್ರಣಕ್ಕೆ ಅರ್ಹನಲ್ಲ.
13024020a ಅನಗ್ನಯಶ್ಚ ಯೇ ವಿಪ್ರಾ ಮೃತನಿರ್ಯಾತಕಾಶ್ಚ ಯೇ।
13024020c ಸ್ತೇನಾಶ್ಚ ಪತಿತಾಶ್ಚೈವ ರಾಜನ್ನಾರ್ಹಂತಿ ಕೇತನಮ್।।
ರಾಜನ್! ಅಗ್ನಿಯನ್ನು ಪೂಜಿಸದ ವಿಪ್ರರು, ಶವವನ್ನು ಹೊರುವವರು, ಸ್ತೇನರು1, ಮತ್ತು ಪತಿತರು2 ದೇವ-ಪಿತೃಕಾರ್ಯಗಳ ಆಮಂತ್ರಣಕ್ಕೆ ಯೋಗ್ಯರಲ್ಲ.
13024021a ಅಪರಿಜ್ಞಾತಪೂರ್ವಾಶ್ಚ ಗಣಪೂರ್ವಾಶ್ಚ ಭಾರತ।
13024021c ಪುತ್ರಿಕಾಪೂರ್ವಪುತ್ರಾಶ್ಚ ಶ್ರಾದ್ಧೇ ನಾರ್ಹಂತಿ ಕೇತನಮ್।।
ಭಾರತ! ಯಾರ ಪೂರ್ವಾಪರ ವಿಷಯಗಳು ತಿಳಿದಿಲ್ಲವೋ, ಯಾರು ಹಿಂದೆ ಸೇನೆಗಳಲ್ಲಿದ್ದರೋ ಅವರು ಮತ್ತು ಪುತ್ರಿಕಾಪೂರ್ವಪುತ್ರರೂ3 ಶ್ರಾದ್ಧದ ಆಮಂತ್ರಣಕ್ಕೆ ಅರ್ಹರಲ್ಲ.
13024022a ಋಣಕರ್ತಾ ಚ ಯೋ ರಾಜನ್ಯಶ್ಚ ವಾರ್ಧುಷಿಕೋ ದ್ವಿಜಃ।
13024022c ಪ್ರಾಣಿವಿಕ್ರಯವೃತ್ತಿಶ್ಚ ರಾಜನ್ನಾರ್ಹಂತಿ ಕೇತನಮ್।।
ರಾಜನ್! ಬಡ್ಡಿಗಾಗಿ ಹಣವನ್ನು ಕೊಡುವವನು, ವಾರ್ಧುಷಿಕ4 ನರನು, ಮತ್ತು ಪ್ರಾಣಿಗಳ ಕ್ರಯ-ವಿಕ್ರಯಗಳನ್ನು ಮಾಡುವವನು ಶ್ರಾದ್ಧದ ಆಮಂತ್ರಣಕ್ಕೆ ಅರ್ಹರಲ್ಲ.
13024023a ಸ್ತ್ರೀಪೂರ್ವಾಃ ಕಾಂಡಪೃಷ್ಠಾಶ್ಚ ಯಾವಂತೋ ಭರತರ್ಷಭ।
13024023c ಅಜಪಾ ಬ್ರಾಹ್ಮಣಾಶ್ಚೈವ ಶ್ರಾದ್ಧೇ ನಾರ್ಹಂತಿ ಕೇತನಮ್।।
ಭರತರ್ಷಭ! ಸ್ತ್ರೀಯರ ಅಡಿಯಾಳಾಗಿರುವ, ಶಸ್ತ್ರಾಸ್ತ್ರಗಳನ್ನು ತಯಾರಿಸುವ, ಮತ್ತು ಜಪಗಳನ್ನು ಮಾಡದಿರುವ ಬ್ರಾಹ್ಮಣರೂ ಕೂಡ ಶ್ರಾದ್ಧದ ಆಮಂತ್ರಣಕ್ಕೆ ಅರ್ಹರಲ್ಲ.
13024024a ಶ್ರಾದ್ಧೇ ದೈವೇ ಚ ನಿರ್ದಿಷ್ಟಾ ಬ್ರಾಹ್ಮಣಾ ಭರತರ್ಷಭ।
13024024c ದಾತುಃ ಪ್ರತಿಗ್ರಹೀತುಶ್ಚ ಶೃಣುಷ್ವಾನುಗ್ರಹಂ ಪುನಃ।।
ಭರತರ್ಷಭ! ಶ್ರಾದ್ಧ ಮತ್ತು ದೇವತಾಕಾರ್ಯಗಳಲ್ಲಿ ನಿರ್ದಿಷ್ಠರಾದ ಬ್ರಾಹ್ಮಣರ ಕುರಿತು ಹೇಳಿದ್ದೇನೆ. ಇನ್ನು ದಾನವನ್ನು ಕೊಡುವವನ ಮತ್ತು ಪ್ರತಿಗ್ರಹಿಸುವವನ ವಿಷಯವಾಗಿ ಕೇಳು.
13024025a ಚೀರ್ಣವ್ರತಾ ಗುಣೈರ್ಯುಕ್ತಾ ಭವೇಯುರ್ಯೇಽಪಿ ಕರ್ಷಕಾಃ।
13024025c ಸಾವಿತ್ರೀಜ್ಞಾಃ ಕ್ರಿಯಾವಂತಸ್ತೇ ರಾಜನ್ಕೇತನಕ್ಷಮಾಃ।।
ರಾಜನ್! ನಿಯಮ-ವ್ರತಾನುಷ್ಠಾನಗಳನ್ನು ಮಾಡುವ, ಸದ್ಗುಣಯುಕ್ತರೂ, ಸಾವಿತ್ರಿಯನ್ನು ತಿಳಿದವರೂ, ಕ್ರಿಯಾವಂತರೂ ಆದ ಬ್ರಾಹ್ಮಣರು ಕೃಷಿಕರಾಗಿದ್ದರೂ ಶ್ರಾದ್ಧದ ಆಮಂತ್ರಣಕ್ಕೆ ಯೋಗ್ಯರಾಗುತ್ತಾರೆ.
13024026a ಕ್ಷಾತ್ರಧರ್ಮಿಣಮಪ್ಯಾಜೌ ಕೇತಯೇತ್ಕುಲಜಂ ದ್ವಿಜಮ್।
13024026c ನ ತ್ವೇವ ವಣಿಜಂ ತಾತ ಶ್ರಾದ್ಧೇಷು ಪರಿಕಲ್ಪಯೇತ್।।
ಅಯ್ಯಾ! ಸತ್ಕುಲದಲ್ಲಿ ಜನಿಸಿದ ದ್ವಿಜನು ಕ್ಷಾತ್ರಧರ್ಮವನ್ನು ಅನುಸರಿಸುತ್ತಿದ್ದರೆ ಅವನನ್ನು ಶ್ರಾದ್ಧದಲ್ಲಿ ಆಹ್ವಾನಿಸಬಹುದು. ಆದರೆ ಅವನು ವಣಿಜವೃತ್ತಿಯಲ್ಲಿದ್ದರೆ ಶ್ರಾದ್ಧಕ್ಕೆ ಕರೆಯಬಾರದು.
13024027a ಅಗ್ನಿಹೋತ್ರೀ ಚ ಯೋ ವಿಪ್ರೋ ಗ್ರಾಮವಾಸೀ ಚ ಯೋ ಭವೇತ್।
13024027c ಅಸ್ತೇನಶ್ಚಾತಿಥಿಜ್ಞಶ್ಚ ಸ ರಾಜನ್ಕೇತನಕ್ಷಮಃ।।
ರಾಜನ್! ಅಗ್ನಿಹೋತ್ರಿಯೂ, ಗ್ರಾಮವಾಸೀ ವಿಪ್ರನೂ, ಕಳ್ಳನಲ್ಲದವನೂ, ಮತ್ತು ಅತಿಥಿಸತ್ಕಾರಗಳನ್ನು ತಿಳಿದವನೂ ಶ್ರಾದ್ಧಕರ್ಮಗಳ ಆಮಂತ್ರಣಕ್ಕೆ ಯೋಗ್ಯನಾಗಿರುತ್ತಾನೆ.
13024028a ಸಾವಿತ್ರೀಂ ಜಪತೇ ಯಸ್ತು ತ್ರಿಕಾಲಂ ಭರತರ್ಷಭ।
13024028c ಭಿಕ್ಷಾವೃತ್ತಿಃ ಕ್ರಿಯಾವಾಂಶ್ಚ ಸ ರಾಜನ್ಕೇತನಕ್ಷಮಃ।।
ಭರತರ್ಷಭ! ತ್ರಿಕಾಲವೂ ಸಾವಿತ್ರಿಯನ್ನು ಜಪಿಸಿ ಭಿಕ್ಷಾವೃತ್ತಿಯನ್ನು ಮಾಡುತ್ತಿರುವವನು ಶ್ರಾದ್ಧಕರ್ಮಗಳ ಆಮಂತ್ರಣಕ್ಕೆ ಅರ್ಹನು.
13024029a ಉದಿತಾಸ್ತಮಿತೋ ಯಶ್ಚ ತಥೈವಾಸ್ತಮಿತೋದಿತಃ।
13024029c ಅಹಿಂಸ್ರಶ್ಚಾಲ್ಪದೋಷಶ್ಚ ಸ ರಾಜನ್ಕೇತನಕ್ಷಮಃ।।
ರಾಜನ್! ಅಭಿವೃದ್ಧಿಸ್ಥಾನದಲ್ಲಿದ್ದು ಅವನತಿಯನ್ನು ಹೊಂದುತ್ತಿರುವ ಅಥವಾ ಅವನತಿಯ ಸ್ಥಾನದಲ್ಲಿದ್ದು ಅಭಿವೃದ್ಧಿಯನ್ನು ಹೊಂದುತ್ತಿರುವ ಅಹಿಂಸಕ ಅಲ್ಪದೋಷನು ಶ್ರಾದ್ಧದ ಆಮಂತ್ರಣಕ್ಕೆ ಯೋಗ್ಯನು.
13024030a ಅಕಲ್ಕಕೋ ಹ್ಯತರ್ಕಶ್ಚ ಬ್ರಾಹ್ಮಣೋ ಭರತರ್ಷಭ।
13024030c ಸಸಂಜ್ಞೋ ಭೈಕ್ಷ್ಯವೃತ್ತಿಶ್ಚ ಸ ರಾಜನ್ಕೇತನಕ್ಷಮಃ।।
ಭರತರ್ಷಭ! ರಾಜನ್! ದಂಬರಹಿತನೂ, ತರ್ಕಮಾಡದವನೂ, ಸಸಂಜ್ಞನೂ ಮತ್ತು ಭಿಕ್ಷಾವೃತ್ತಿಯಲ್ಲಿರುವನೂ ಆದ ಬ್ರಾಹ್ಮಣನು ಶ್ರಾದ್ಧದ ಆಮಂತ್ರಣಕ್ಕೆ ಯೋಗ್ಯನು.
13024031a ಅವ್ರತೀ ಕಿತವಃ ಸ್ತೇನಃ ಪ್ರಾಣಿವಿಕ್ರಯ್ಯಥೋ ವಣಿಕ್।
13024031c ಪಶ್ಚಾಚ್ಚ ಪೀತವಾನ್ಸೋಮಂ ಸ ರಾಜನ್ಕೇತನಕ್ಷಮಃ।।
ರಾಜನ್! ವ್ರತಿಯಲ್ಲದ, ಜೂಜುಗಾರ, ಕಳ್ಳ, ಪ್ರಾಣಿಗಳನ್ನು ವಿಕ್ರಯಕ್ಕೆ ಮಾರುವ ಬ್ರಾಹ್ಮಣನು ನಂತರ ಸೋಮವನ್ನು ಕುಡಿದಿದ್ದರೆ ಅವನು ಶ್ರಾದ್ಧದ ಆಮಂತ್ರಣಕ್ಕೆ ಯೋಗ್ಯನು.
13024032a ಅರ್ಜಯಿತ್ವಾ ಧನಂ ಪೂರ್ವಂ ದಾರುಣೈಃ ಕೃಷಿಕರ್ಮಭಿಃ।
13024032c ಭವೇತ್ಸರ್ವಾತಿಥಿಃ ಪಶ್ಚಾತ್ಸ ರಾಜನ್ಕೇತನಕ್ಷಮಃ।।
ರಾಜನ್! ಹಿಂದೆ ದಾರುಣ ಕೃಷಿಕರ್ಮಗಳಿಂದ ಧನವನ್ನು ಗಳಿಸಿ ನಂತರ ಸರ್ವ ಅತಿಥಿಗಳನ್ನೂ ಸತ್ಕರಿಸುವ ಬ್ರಾಹ್ಮಣನು ಶ್ರಾದ್ಧದ ಆಮಂತ್ರಣಕ್ಕೆ ಯೋಗ್ಯನು.
13024033a ಬ್ರಹ್ಮವಿಕ್ರಯನಿರ್ದಿಷ್ಟಂ ಸ್ತ್ರಿಯಾ ಯಚ್ಚಾರ್ಜಿತಂ ಧನಮ್।
13024033c ಅದೇಯಂ ಪಿತೃದೇವೇಭ್ಯೋ ಯಚ್ಚ ಕ್ಲೈಬ್ಯಾದುಪಾರ್ಜಿತಮ್।।
ವೇದವನ್ನು ವಿಕ್ರಯಿಸಿ ಗಳಿಸಿದ, ಸ್ತ್ರೀಯು ಸಂಪಾದಿಸಿದ ಮತ್ತು ಹೇಡಿತನದಿಂದ ಸಂಪಾದಿಸಿದ ಧನವನ್ನು ಪಿತೃ-ದೇವತಾ ಕಾರ್ಯಗಳಲ್ಲಿ ದಾನನೀಡಬಾರದು.
13024034a ಕ್ರಿಯಮಾಣೇಽಪವರ್ಗೇ ತು ಯೋ ದ್ವಿಜೋ ಭರತರ್ಷಭ।
13024034c ನ ವ್ಯಾಹರತಿ ಯದ್ಯುಕ್ತಂ ತಸ್ಯಾಧರ್ಮೋ ಗವಾನೃತಮ್।।
ಭರತರ್ಷಭ! ಶ್ರಾದ್ಧಕರ್ಮವನ್ನು ಮಾಡಿಸುವಾಗ ಮತ್ತು ಸಮಾಪ್ತಗೊಳಿಸುವಾಗ ದ್ವಿಜನು ತತ್ಕಾಲೋಚಿತ ವಾಕ್ಯಗಳನ್ನು ಹೇಳದಿದ್ದರೆ ಅವನಿಗೆ ಗೋವಿನ ವಿಷಯದಲ್ಲಿ ಸುಳ್ಳುಹೇಳಿದ ಪಾಪವು ದೊರೆಯುತ್ತದೆ.
13024035a ಶ್ರಾದ್ಧಸ್ಯ ಬ್ರಾಹ್ಮಣಃ ಕಾಲಃ ಪ್ರಾಪ್ತಂ ದಧಿ ಘೃತಂ ತಥಾ।
13024035c ಸೋಮಕ್ಷಯಶ್ಚ ಮಾಂಸಂ ಚ ಯದಾರಣ್ಯಂ ಯುಧಿಷ್ಠಿರ।।
ಯುಧಿಷ್ಠಿರ! ಯಾವ ದಿನ ಸತ್ಪಾತ್ರ ಬ್ರಾಹ್ಮಣ, ಮೊಸರು, ತುಪ್ಪ ಮತ್ತು ಅಮವಾಸ್ಯೆ, ಮತ್ತು ಅರಣ್ಯಮೃಗದ ಮಾಂಸ ಇವು ಪ್ರಾಪ್ತವಾಗುವವೋ ಅದೇ ಶ್ರಾದ್ಧಕ್ಕೆ ಪ್ರಶಸ್ತ ಕಾಲವು.
13024036a ಶ್ರಾದ್ಧಾಪವರ್ಗೇ ವಿಪ್ರಸ್ಯ ಸ್ವಧಾ ವೈ ಸ್ವದಿತಾ ಭವೇತ್।
13024036c ಕ್ಷತ್ರಿಯಸ್ಯಾಪ್ಯಥೋ ಬ್ರೂಯಾತ್ಪ್ರೀಯಂತಾಂ ಪಿತರಸ್ತ್ವಿತಿ।।
ಬ್ರಾಹ್ಮಣನ ಶ್ರಾದ್ಧವು ಮುಗಿಯುವಲ್ಲಿ “ಅಸ್ತು ಸ್ವಧಾ” ಎಂದು ಹೇಳಿದರೆ ಮತ್ತು ಕ್ಷತ್ರಿಯನ ಶ್ರಾದ್ಧವು ಮುಗಿಯುವಾಗ “ಪಿತರಃ ಪ್ರೀಯಂತಾಂ” ಎಂದು ಹೇಳಿದರೆ ಪಿತೃಗಳು ಸಂತೃಪ್ತರಾಗುತ್ತಾರೆ.
13024037a ಅಪವರ್ಗೇ ತು ವೈಶ್ಯಸ್ಯ ಶ್ರಾದ್ಧಕರ್ಮಣಿ ಭಾರತ।
13024037c ಅಕ್ಷಯ್ಯಮಭಿಧಾತವ್ಯಂ ಸ್ವಸ್ತಿ ಶೂದ್ರಸ್ಯ ಭಾರತ।।
ಭಾರತ! ವೈಶ್ಯನ ಶ್ರಾದ್ಧಕರ್ಮವು ಮುಗಿದಲ್ಲಿ “ಶ್ರಾದ್ಧಂ ಅಕ್ಷಯ್ಯಮಸ್ತು” ಎನ್ನಬೇಕು. ಭಾರತ! ಶೂದ್ರನ ಶ್ರಾದ್ಧಕರ್ಮವು ಮುಗಿದಲ್ಲಿ “ಸ್ವಸ್ತಿ” ಎಂದು ಹೇಳಬೇಕು.
13024038a ಪುಣ್ಯಾಹವಾಚನಂ ದೈವೇ ಬ್ರಾಹ್ಮಣಸ್ಯ ವಿಧೀಯತೇ।
13024038c ಏತದೇವ ನಿರೋಂಕಾರಂ ಕ್ಷತ್ರಿಯಸ್ಯ ವಿಧೀಯತೇ।
13024038e ವೈಶ್ಯಸ್ಯ ಚೈವ ವಕ್ತವ್ಯಂ ಪ್ರೀಯಂತಾಂ ದೇವತಾ ಇತಿ।।
ದೇವಕಾರ್ಯಗಳಲ್ಲಿ ಬ್ರಾಹ್ಮಣನ ಮನೆಯಲ್ಲಿ ಓಂಕಾರಸಹಿತ5 ಪುಣ್ಯಾಹವಾಚನವನ್ನೂ ಕ್ಷತ್ರಿಯನ ಮನೆಯಲ್ಲಿ ಓಂಕಾರರಹಿತವಾದ6 ಪುಣ್ಯಾಹವಾಚನವನ್ನೂ ಮಾಡಬೇಕು ಎಂದು ಹೇಳುತ್ತಾರೆ. ವೈಶ್ಯನ ಮನೆಯಲ್ಲಿ “ಪ್ರೀಯಂತಾಂ ದೇವತಾಃ” ಎಂದು ಹೇಳಬೇಕು.
13024039a ಕರ್ಮಣಾಮಾನುಪೂರ್ವೀಂ ಚ ವಿಧಿಪೂರ್ವಕೃತಂ ಶೃಣು।
13024039c ಜಾತಕರ್ಮಾದಿಕಾನ್ಸರ್ವಾಂಸ್ತ್ರಿಷು ವರ್ಣೇಷು ಭಾರತ।
13024039e ಬ್ರಹ್ಮಕ್ಷತ್ರೇ ಹಿ ಮಂತ್ರೋಕ್ತಾ ವೈಶ್ಯಸ್ಯ ಚ ಯುಧಿಷ್ಠಿರ।।
ಕ್ರಮೇಣವಾಗಿ ವಿಧಿಪೂರ್ವಕವಾಗಿ ಮಾಡಬೇಕಾದ ಕರ್ಮಗಳ ಕುರಿತು ಕೇಳು. ಭಾರತ! ಯುಧಿಷ್ಠಿರ! ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ – ಈ ಮೂರು ವರ್ಣಗಳವರಿಗೆ ಜಾತಕರ್ಮಾದಿ ಸರ್ವ ಕರ್ಮಗಳೂ ಮಂತ್ರಗಳನ್ನೂ ಹೇಳಿಯೇ ಅಗಬೇಕು.
13024040a ವಿಪ್ರಸ್ಯ ರಶನಾ ಮೌಂಜೀ ಮೌರ್ವೀ ರಾಜನ್ಯಗಾಮಿನೀ।
13024040c ಬಾಲ್ವಜೀತ್ಯೇವ ವೈಶ್ಯಸ್ಯ ಧರ್ಮ ಏಷ ಯುಧಿಷ್ಠಿರ।।
ಯುಧಿಷ್ಠಿರ! ವಿಪ್ರನ ಉಡಿದಾರವು (ಮೇಖಲೆಯು) ಮುಂಜದ ಹುಲ್ಲಿನ, ಕ್ಷತ್ರಿಯನ ಜನಿವಾರವು ಮೂರ್ವಾ ಹುಲ್ಲಿನ ಮತ್ತು ವೈಶ್ಯನ ಜನಿವಾರವು ಕರಡೀ ಹುಲ್ಲಿನದ್ದಾಗಿರಬೇಕು. ಇದು ಧರ್ಮ.
13024041a ದಾತುಃ ಪ್ರತಿಗ್ರಹೀತುಶ್ಚ ಧರ್ಮಾಧರ್ಮಾವಿಮೌ ಶೃಣು।
13024041c ಬ್ರಾಹ್ಮಣಸ್ಯಾನೃತೇಽಧರ್ಮಃ ಪ್ರೋಕ್ತಃ ಪಾತಕಸಂಜ್ಞಿತಃ।
13024041e ಚತುರ್ಗುಣಃ ಕ್ಷತ್ರಿಯಸ್ಯ ವೈಶ್ಯಸ್ಯಾಷ್ಟಗುಣಃ ಸ್ಮೃತಃ।।
ದಾನಮಾಡುವವನ ಮತ್ತು ದಾನಸ್ವೀಕರಿಸುವವನ ಧರ್ಮ-ಅಧರ್ಮಗಳ ಕುರಿತು ಕೇಳು. ಬ್ರಾಹ್ಮಣನು ಸುಳ್ಳನ್ನಾಡುವುದು ಅಧರ್ಮ. ಪಾತಕವೆಂದೂ ಹೇಳುತ್ತಾರೆ. ಕ್ಷತ್ರಿಯನು ಸುಳ್ಳುಹೇಳಿದರೆ ಬ್ರಾಹ್ಮಣನು ಸುಳ್ಳುಹೇಳಿದುದರ ಪಾಪದ ನಾಲ್ಕನೇ ಒಂದು ಭಾಗದಷ್ಟು ಕಡಿಮೆ ಪಾಪವನ್ನು ಪಡೆದುಕೊಳ್ಳುತ್ತಾನೆ. ಅದೇ ವೈಶ್ಯನು ಸುಳ್ಳುಹೇಳಿದರೆ ಬ್ರಾಹ್ಮಣನ ಸುಳ್ಳಿಗೆ ದೊರೆಯುವ ಪಾಪದ ಎಂಟನೇ ಒಂದು ಭಾಗದಷ್ಟು ಕಡಿಮೆ ಪಾಪವನ್ನು ಪಡೆದುಕೊಳ್ಳುತ್ತಾನೆ.
13024042a ನಾನ್ಯತ್ರ ಬ್ರಾಹ್ಮಣೋಽಶ್ನೀಯಾತ್ಪೂರ್ವಂ ವಿಪ್ರೇಣ ಕೇತಿತಃ।
13024042c ಯವೀಯಾನ್ಪಶುಹಿಂಸಾಯಾಂ ತುಲ್ಯಧರ್ಮೋ ಭವೇತ್ಸ ಹಿ।।
ಶ್ರಾದ್ಧಕ್ಕೆ ಮೊದಲು ಆಮಂತ್ರಣವಿತ್ತ ಬ್ರಾಹ್ಮಣನ ಮನೆಯಲ್ಲಿಯೇ ಊಟಮಾಡಬೇಕು. ಶ್ರಾದ್ಧಕ್ಕೆ ತಪ್ಪಿಸಿಕೊಳ್ಳುವ ಬ್ರಾಹ್ಮಣನಿಗೆ ಪಶುಹಿಂಸೆಯ ಪಾಪವು ದೊರೆಯುತ್ತದೆ.
13024043a ಅಥ ರಾಜನ್ಯವೈಶ್ಯಾಭ್ಯಾಂ ಯದ್ಯಶ್ನೀಯಾತ್ತು ಕೇತಿತಃ।
13024043c ಯವೀಯಾನ್ಪಶುಹಿಂಸಾಯಾಂ ಭಾಗಾರ್ಧಂ ಸಮವಾಪ್ನುಯಾತ್।।
ಕ್ಷತ್ರಿಯ ಅಥವಾ ವೈಶ್ಯರಿಂದ ಆಮಂತ್ರಿಸಲ್ಪಟ್ಟ ಬ್ರಾಹ್ಮಣನು ಶ್ರಾದ್ಧಕ್ಕೆ ತಪ್ಪಿಸಿಕೊಂಡರೆ ಅವನಿಗೆ ಪಶುಹಿಂಸೆಯ ಪಾಪದ ಅರ್ಧಭಾಗವು ದೊರೆಯುತ್ತದೆ.
13024044a ದೈವಂ ವಾಪ್ಯಥ ವಾ ಪಿತ್ರ್ಯಂ ಯೋಽಶ್ನೀಯಾದ್ಬ್ರಾಹ್ಮಣಾದಿಷು।
13024044c ಅಸ್ನಾತೋ ಬ್ರಾಹ್ಮಣೋ ರಾಜಂಸ್ತಸ್ಯಾಧರ್ಮೋ ಗವಾನೃತಮ್।।
ರಾಜನ್! ಬ್ರಾಹ್ಮಣಾದಿ ವರ್ಣದವರ ದೈವ-ಪಿತೃಕಾರ್ಯಗಳಲ್ಲಿ ಸ್ನಾನಮಾಡದೆಯೇ ಊಟಮಾಡುವ ಬ್ರಾಹ್ಮಣನಿಗೆ ಗೋವಿನ ವಿಷಯದಲ್ಲಿ ಸುಳ್ಳುಹೇಳಿದ ಪಾಪವು ಬರುತ್ತದೆ.
13024045a ಆಶೌಚೋ ಬ್ರಾಹ್ಮಣೋ ರಾಜನ್ಯೋಽಶ್ನೀಯಾದ್ಬ್ರಾಹ್ಮಣಾದಿಷು।
13024045c ಜ್ಞಾನಪೂರ್ವಮಥೋ ಲೋಭಾತ್ತಸ್ಯಾಧರ್ಮೋ ಗವಾನೃತಮ್।।
ರಾಜನ್! ಬ್ರಾಹ್ಮಣಾದಿ ವರ್ಣದವರ ದೈವ-ಪಿತೃಕಾರ್ಯಗಳಲ್ಲಿ ತಾನು ಅಶೌಚನೆಂದು ಮೊದಲೇ ತಿಳಿದಿದ್ದರೂ ಲೋಭದಿಂದ ಊಟಮಾಡುವವನಿಗೆ ಗೋವಿನ ವಿಷಯದಲ್ಲಿ ಸುಳ್ಳು ಹೇಳಿದ ಪಾಪವು ಬರುತ್ತದೆ.
13024046a ಅನ್ನೇನಾನ್ನಂ ಚ ಯೋ ಲಿಪ್ಸೇತ್ಕರ್ಮಾರ್ಥಂ ಚೈವ ಭಾರತ।
13024046c ಆಮಂತ್ರಯತಿ ರಾಜೇಂದ್ರ ತಸ್ಯಾಧರ್ಮೋಽನೃತಂ ಸ್ಮೃತಮ್।।
ಭಾರತ! ರಾಜೇಂದ್ರ! ಶ್ರಾದ್ಧಕರ್ಮಕ್ಕಾಗಿ ಇತರರಿಂದ ಹಣವನ್ನು ಸಂಗ್ರಹಿಸಿ ಬ್ರಾಹ್ಮಣರನ್ನು ಆಮಂತ್ರಿಸುವವನು ಸುಳ್ಳುಹೇಳಿದ ಮಹಾಪಾಪವನ್ನು ಹೊಂದುತ್ತಾನೆ.
13024047a ಅವೇದವ್ರತಚಾರಿತ್ರಾಸ್ತ್ರಿಭಿರ್ವರ್ಣೈರ್ಯುಧಿಷ್ಠಿರ।
13024047c ಮಂತ್ರವತ್ಪರಿವಿಷ್ಯಂತೇ ತೇಷ್ವಧರ್ಮೋ ಗವಾನೃತಮ್।।
ಯುಧಿಷ್ಠಿರ! ವೇದಗಳನ್ನರಿಯದ ಮತ್ತು ವ್ರತಿಚಾರಿಗಳಲ್ಲದವರನ್ನು ಶ್ರಾದ್ಧದಲ್ಲಿ ಮಂತ್ರವತ್ತಾಗಿ ಅನ್ನನೀಡುವ ತ್ರಿವರ್ಣದವರಿಗೆ ಗೋವಿನ ವಿಷಯದಲ್ಲಿ ಸುಳ್ಳನ್ನು ಹೇಳಿದ ಪಾಪವು ಬರುತ್ತದೆ.”
13024048 ಯುಧಿಷ್ಠಿರ ಉವಾಚ।
13024048a ಪಿತ್ರ್ಯಂ ವಾಪ್ಯಥ ವಾ ದೈವಂ ದೀಯತೇ ಯತ್ಪಿತಾಮಹ।
13024048c ಏತದಿಚ್ಚಾಮ್ಯಹಂ ಶ್ರೋತುಂ ದತ್ತಂ ಯೇಷು ಮಹಾಫಲಮ್।।
ಯುಧಿಷ್ಠಿರನು ಹೇಳಿದನು: “ಪಿತಾಮಹ! ಪಿತೃ ಅಥವಾ ದೇವಕಾರ್ಯಗಳಲ್ಲಿ ಯಾರಿಗೆ ನೀಡಿದ ದಾನವು ಮಹಾಫಲವನ್ನು ನೀಡುತ್ತದೆ? ಅದನ್ನು ಕೇಳಲು ಬಯಸುತ್ತೇನೆ.”
13024049 ಭೀಷ್ಮ ಉವಾಚ।
13024049a ಯೇಷಾಂ ದಾರಾಃ ಪ್ರತೀಕ್ಷಂತೇ ಸುವೃಷ್ಟಿಮಿವ ಕರ್ಷಕಾಃ।
13024049c ಉಚ್ಚೇಷಪರಿಶೇಷಂ ಹಿ ತಾನ್ಭೋಜಯ ಯುಧಿಷ್ಠಿರ।।
ಭೀಷ್ಮನು ಹೇಳಿದನು: “ಯುಧಿಷ್ಠಿರ! ಕೃಷಿಕರು ಮಳೆಯನ್ನು ಪ್ರತೀಕ್ಷಿಸುವಂತೆ ಪತಿಯು ಊಟಮಾಡಿದ ನಂತರ ಉಳಿದುದನ್ನು ಭೋಜಿಸಲು ಯಾರ ಪತ್ನಿಯರು ಕಾಯುತ್ತಿರುತ್ತಾರೋ ಅಂತಹ ಬ್ರಾಹ್ಮಣನಿಗೆ ಭೋಜನವನ್ನು ಮಾಡಿಸು.
13024050a ಚಾರಿತ್ರನಿಯತಾ ರಾಜನ್ಯೇ ಕೃಶಾಃ ಕೃಶವೃತ್ತಯಃ।
13024050c ಅರ್ಥಿನಶ್ಚೋಪಗಚ್ಚಂತಿ ತೇಷು ದತ್ತಂ ಮಹಾಫಲಮ್।।
ರಾಜನ್! ಚಾರಿತ್ರನಿಯತರಾಗಿರುವ, ವೃತ್ತಿಯನ್ನು ಕಳೆದುಕೊಂಡು ದುರ್ಬಲರಾಗಿ, ಧನವನ್ನು ಅರಸಿ ಬಂದವರಿಗೆ ಕೊಟ್ಟ ದಾನವು ಮಹಾಫಲವನ್ನು ನೀಡುತ್ತದೆ.
13024051a ತದ್ಭಕ್ತಾಸ್ತದ್ಗೃಹಾ ರಾಜಂಸ್ತದ್ಧನಾಸ್ತದಪಾಶ್ರಯಾಃ।
13024051c ಅರ್ಥಿನಶ್ಚ ಭವಂತ್ಯರ್ಥೇ ತೇಷು ದತ್ತಂ ಮಹಾಫಲಮ್।।
ರಾಜನ್! ಧನವನ್ನು ಅರಸಿ ಬಂದ ಸದಾಚಾರ ಭಕ್ತರು, ಸದಾಚಾರಗಳಿಗೆ ಮನೆಯಂತಿರುವವರು, ಸದಾಚಾರವನ್ನೇ ಧನವನ್ನಾಗಿ ಹೊಂದಿದವವರು, ಮತ್ತು ಸದಾಚಾರಗಳಿಗೆ ಆಶ್ರಯದಾತರಾದವರಿಗೆ ನೀಡಿದ ದಾನವು ಮಹಾಫಲವನ್ನು ನೀಡುತ್ತದೆ.
13024052a ತಸ್ಕರೇಭ್ಯಃ ಪರೇಭ್ಯೋ ವಾ ಯೇ ಭಯಾರ್ತಾ ಯುಧಿಷ್ಠಿರ।
13024052c ಅರ್ಥಿನೋ ಭೋಕ್ತುಮಿಚ್ಚಂತಿ ತೇಷು ದತ್ತಂ ಮಹಾಫಲಮ್।।
ಯುಧಿಷ್ಠಿರ! ಕಳ್ಳರ ಅಥವಾ ಶತ್ರುಗಳ ಭಯದಿಂದ ಪೀಡಿತರಾಗಿ ಆಹಾರವನ್ನು ಕೇಳಿಕೊಂಡು ಬಂದವರಿಗೆ ಕೊಟ್ಟ ದಾನವು ಮಹಾಫಲವನ್ನು ನೀಡುತ್ತದೆ.
13024053a ಅಕಲ್ಕಕಸ್ಯ ವಿಪ್ರಸ್ಯ ಭೈಕ್ಷೋತ್ಕರಕೃತಾತ್ಮನಃ।
13024053c ಬಟವೋ ಯಸ್ಯ ಭಿಕ್ಷಂತಿ ತೇಭ್ಯೋ ದತ್ತಂ ಮಹಾಫಲಮ್।।
ಭಿಕ್ಷವನ್ನು ಬೇಡಿ ಬಂದ, ಮಕ್ಕಳಂತೆ ಕಪಟವಿಲ್ಲದೇ ಬೇಡುವ ಕೃತಾತ್ಮನಿಗೆ ನೀಡಿದ ದಾನವು ಮಹಾಫಲವನ್ನು ಕೊಡುತ್ತದೆ.
13024054a ಹೃತಸ್ವಾ ಹೃತದಾರಾಶ್ಚ ಯೇ ವಿಪ್ರಾ ದೇಶಸಂಪ್ಲವೇ।
13024054c ಅರ್ಥಾರ್ಥಮಭಿಗಚ್ಚಂತಿ ತೇಭ್ಯೋ ದತ್ತಂ ಮಹಾಫಲಮ್।।
ದೇಶಸಂಪ್ಲವದಲ್ಲಿ ಐಶ್ವರ್ಯವನ್ನೂ ಭಾರ್ಯೆಯರನ್ನೂ ಕಳೆದುಕೊಂಡು ಧನವನ್ನು ಯಾಚಿಸಿ ಬಂದ ವಿಪ್ರರಿಗೆ ಕೊಟ್ಟ ದಾನವು ಮಹಾಫಲವನ್ನು ಕೊಡುತ್ತದೆ.
13024055a ವ್ರತಿನೋ ನಿಯಮಸ್ಥಾಶ್ಚ ಯೇ ವಿಪ್ರಾಃ ಶ್ರುತಸಂಮತಾಃ।
13024055c ತತ್ಸಮಾಪ್ತ್ಯರ್ಥಮಿಚ್ಚಂತಿ ತೇಷು ದತ್ತಂ ಮಹಾಫಲಮ್।।
ವ್ರತನಿಯಮಗಳನ್ನು ಪಾಲಿಸುತ್ತಾ ಅದರ ಸಮಾಪ್ತಿಯಲ್ಲಿ ಧನವನ್ನು ಬಯಸುವ ಶ್ರುತಸಮ್ಮತ ವಿಪ್ರರಿಗೆ ಕೊಟ್ಟ ದಾನವು ಮಹಾಫಲವನ್ನು ಕೊಡುತ್ತದೆ.
13024056a ಅವ್ಯುತ್ಕ್ರಾಂತಾಶ್ಚ ಧರ್ಮೇಷು ಪಾಷಂಡಸಮಯೇಷು ಚ।
13024056c ಕೃಶಪ್ರಾಣಾಃ ಕೃಶಧನಾಸ್ತೇಷು ದತ್ತಂ ಮಹಾಫಲಮ್।।
ಪ್ರಾಣಾಪಾಯದಲ್ಲಿರುವ ಮತ್ತು ಬಡವರಾಗಿರುವ ವಿಪ್ರರಿಗೆ, ಅವರು ಅವೈದಿಕವಾದ ಪಾಷಂಡಸಿದ್ಧಾಂತಧರ್ಮಗಳನ್ನು ಅನುಸರಿಸುತ್ತಿದ್ದರೂ, ನೀಡಿದ ದಾನವು ಮಹಾಫಲವನ್ನು ಕೊಡುತ್ತದೆ.
13024057a ಕೃತಸರ್ವಸ್ವಹರಣಾ ನಿರ್ದೋಷಾಃ ಪ್ರಭವಿಷ್ಣುಭಿಃ।
13024057c ಸ್ಪೃಹಯಂತಿ ಚ ಭುಕ್ತಾನ್ನಂ ತೇಷು ದತ್ತಂ ಮಹಾಫಲಮ್।।
ಸರ್ವಸ್ವವನ್ನೂ ಕಳೆದುಕೊಂಡ ನಿರ್ದೋಷರಿಗೆ ಅನ್ನವಿತ್ತವನನ್ನು ಹಾರೈಸುತ್ತಾರೆ. ಅಂಥವರಿಗೆ ಕೊಟ್ಟ ದಾನವು ಮಹಾಫಲವನ್ನು ಕೊಡುತ್ತದೆ.
13024058a ತಪಸ್ವಿನಸ್ತಪೋನಿಷ್ಠಾಸ್ತೇಷಾಂ ಭೈಕ್ಷಚರಾಶ್ಚ ಯೇ।
13024058c ಅರ್ಥಿನಃ ಕಿಂ ಚಿದಿಚ್ಚಂತಿ ತೇಷು ದತ್ತಂ ಮಹಾಫಲಮ್।।
ತಪೋನಿಷ್ಠರಾದ ತಪಸ್ವಿಗಳು, ತಪಸ್ವಿಗಳಿಗಾಗಿ ಭಿಕ್ಷೆಬೇಡುತ್ತಾ ಧನವನ್ನರಿಸಿ ಬಂದವರಿಗೆ ನೀಡುವ ದಾನವು ಮಹಾಫಲವನ್ನು ನೀಡುತ್ತದೆ.
13024059a ಮಹಾಫಲವಿಧಿರ್ದಾನೇ ಶ್ರುತಸ್ತೇ ಭರತರ್ಷಭ।
13024059c ನಿರಯಂ ಯೇನ ಗಚ್ಚಂತಿ ಸ್ವರ್ಗಂ ಚೈವ ಹಿ ತಚ್ಚೃಣು।।
ಭರತರ್ಷಭ! ಯಾರಿಗೆ ದಾನಮಾಡುವುದರಿಂದ ಮಹಾಫಲವು ದೊರೆಯುತ್ತದೆ ಎನ್ನುವುದನ್ನು ನಿನಗೆ ಹೇಳಿದೆ. ಈಗ ಯಾವುದರಿಂದ ನರಕ ಮತ್ತು ಯಾವುದರಿಂದ ಸ್ವರ್ಗಕ್ಕೆ ಹೋಗುತ್ತಾರೆನ್ನುವುದನ್ನು ಕೇಳು.
13024060a ಗುರ್ವರ್ಥಂ ವಾಭಯಾರ್ಥಂ ವಾ ವರ್ಜಯಿತ್ವಾ ಯುಧಿಷ್ಠಿರ।
13024060c ಯೇಽನೃತಂ ಕಥಯಂತಿ ಸ್ಮ ತೇ ವೈ ನಿರಯಗಾಮಿನಃ।।
ಯುಧಿಷ್ಠಿರ! ಗುರುವಿನ ಸಲುವಾಗಿ ಅಥವಾ ಭಯದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಹೇಳುವ ಸುಳ್ಳನ್ನು ಬಿಟ್ಟು ಬೇರೆ ಸಂದರ್ಭಗಳಲ್ಲಿ ಸುಳ್ಳನ್ನು ಹೇಳುವವನು ನರಕಕ್ಕೆ ಹೋಗುತ್ತಾನೆ.
13024061a ಪರದಾರಾಭಿಹರ್ತಾರಃ ಪರದಾರಾಭಿಮರ್ಶಿನಃ।
13024061c ಪರದಾರಪ್ರಯೋಕ್ತಾರಸ್ತೇ ವೈ ನಿರಯಗಾಮಿನಃ।।
ಪರಪತ್ನಿಯನ್ನು ಅಪಹರಿಸುವವರು, ಪರಪತ್ನಿಯರ ಸತೀತ್ವವನ್ನು ಕೆಡಿಸುವವರು, ಪರಪತ್ನಿಯರನ್ನು ಇತರರಿಗೆ ಕೊಡುವವರು ನರಕಗಾಮಿಗಳು.
13024062a ಯೇ ಪರಸ್ವಾಪಹರ್ತಾರಃ ಪರಸ್ವಾನಾಂ ಚ ನಾಶಕಾಃ।
13024062c ಸೂಚಕಾಶ್ಚ ಪರೇಷಾಂ ಯೇ ತೇ ವೈ ನಿರಯಗಾಮಿನಃ।।
ಪರರ ಐಶ್ವರ್ಯವನ್ನು ಅಪಹರಿಸುವವರು, ಪರರ ಐಶ್ವರ್ಯವನ್ನು ನಾಶಗೊಳಿಸುವವರು, ಪರರ ಕುರಿತು ಇನ್ನೊಬ್ಬರಿಗೆ ಸೂಚನೆಕೊಡುವವರು ನರಕಗಾಮಿಗಳು.
13024063a ಪ್ರಪಾಣಾಂ ಚ ಸಭಾನಾಂ ಚ ಸಂಕ್ರಮಾಣಾಂ ಚ ಭಾರತ।
13024063c ಅಗಾರಾಣಾಂ ಚ ಭೇತ್ತಾರೋ ನರಾ ನಿರಯಗಾಮಿನಃ।।
ಭಾರತ! ಅರವಟ್ಟಿಗೆಗಳನ್ನು, ಸಭೆಗಳನ್ನು, ಸೇತುವೆಗಳನ್ನು ಮತ್ತು ಮನೆಗಳನ್ನು ಧ್ವಂಸಮಾಡುವ ನರರು ಶೋಚನೀಯ ನರಕಕ್ಕೆ ಹೋಗುತ್ತಾರೆ.
13024064a ಅನಾಥಾಂ ಪ್ರಮದಾಂ ಬಾಲಾಂ ವೃದ್ಧಾಂ ಭೀತಾಂ ತಪಸ್ವಿನೀಮ್।
13024064c ವಂಚಯಂತಿ ನರಾ ಯೇ ಚ ತೇ ವೈ ನಿರಯಗಾಮಿನಃ।।
ಅನಾಥ ತರುಣಿಯನ್ನು, ಬಾಲಕಿಯನ್ನು, ವೃದ್ಧಳನ್ನು, ಭೀತತಪಸ್ವಿನಿಯನ್ನು ವಂಚಿಸುವ ನರರು ನರಕಕ್ಕೆ ಹೋಗುತ್ತಾರೆ.
13024065a ವೃತ್ತಿಚ್ಚೇದಂ ಗೃಹಚ್ಚೇದಂ ದಾರಚ್ಚೇದಂ ಚ ಭಾರತ।
13024065c ಮಿತ್ರಚ್ಚೇದಂ ತಥಾಶಾಯಾಸ್ತೇ ವೈ ನಿರಯಗಾಮಿನಃ।।
ಇತರರ ವೃತ್ತಿಯನ್ನು ನಾಶಗೊಳಿಸುವವರು, ಮನೆಯನ್ನು ನಾಶಗೊಳಿಸುವವರು, ಪತಿ-ಪತ್ನಿಯರನ್ನು ದೂರಪಡಿಸುವವರು, ವಿತ್ರರನ್ನು ಬೇರ್ಪಡಿಸುವವರು ನರಕಕ್ಕೆ ಹೋಗುತ್ತಾರೆ.
13024066a ಸೂಚಕಾಃ ಸಂಧಿಭೇತ್ತಾರಃ ಪರವೃತ್ತ್ಯುಪಜೀವಕಾಃ।
13024066c ಅಕೃತಜ್ಞಾಶ್ಚ ಮಿತ್ರಾಣಾಂ ತೇ ವೈ ನಿರಯಗಾಮಿನಃ।।
ಚಾಡಿಹೇಳುವವರು, ಸಂಧಿಯನ್ನು ಮುರಿಯುವವರು, ಪರವೃತ್ತಿಯನ್ನು ಅವಲಂಬಿಸಿ ಜೀವನ ನಡೆಸುವವರು, ಮತ್ತು ಮಿತ್ರರಿಗೆ ಕೃತಜ್ಞನಲ್ಲದವರು ನರಕಕ್ಕೆ ಹೋಗುತ್ತಾರೆ.
13024067a ಪಾಷಂಡಾ ದೂಷಕಾಶ್ಚೈವ ಸಮಯಾನಾಂ ಚ ದೂಷಕಾಃ।
13024067c ಯೇ ಪ್ರತ್ಯವಸಿತಾಶ್ಚೈವ ತೇ ವೈ ನಿರಯಗಾಮಿನಃ।।
ಪಾಷಂಡರು, ದೂಷಕರು, ಒಪ್ಪಂದಗಳನ್ನು ದೂಷಿಸುವವರು ಹಾಗೂ ಸನ್ಯಾಸವನ್ನು ಸ್ವೀಕರಿಸಿ ನಂತರ ಗೃಹಸ್ಥಾಶ್ರಮವನ್ನು ಸೇರುವವರು ನರಕಕ್ಕೆ ಹೋಗುತ್ತಾರೆ.
13024068a ಕೃತಾಶಂ ಕೃತನಿರ್ವೇಶಂ ಕೃತಭಕ್ತಂ ಕೃತಶ್ರಮಮ್।
13024068c ಭೇದೈರ್ಯೇ ವ್ಯಪಕರ್ಷಂತಿ ತೇ ವೈ ನಿರಯಗಾಮಿನಃ।।
ಆಸೆಹುಟ್ಟಿಸಿ, ಇಷ್ಟೊಂದು ಕೊಡುತ್ತೇನೆ ಎಂದು ಹೇಳಿ, ಭಕ್ತನಂತೆ ಶ್ರಮಿಸಿ ದುಡಿದ ಸೇವಕನಿಗೆ ನಂತರದಲ್ಲಿ ಮೋಸದಿಂದ ತೆಗೆದುಹಾಕುವವನು ನರಕಕ್ಕೆ ಹೋಗುತ್ತಾನೆ.
13024069a ಪರ್ಯಶ್ನಂತಿ ಚ ಯೇ ದಾರಾನಗ್ನಿಭೃತ್ಯಾತಿಥೀಂಸ್ತಥಾ।
13024069c ಉತ್ಸನ್ನಪಿತೃದೇವೇಜ್ಯಾಸ್ತೇ ವೈ ನಿರಯಗಾಮಿನಃ।।
ಪಿತೃದೇವಾತಾಕಾರ್ಯಗಳನ್ನು ಮಾಡದೇ, ಅತಿಥಿಗಳನ್ನು ಸತ್ಕರಿಸಿದೇ, ಪತ್ನಿ-ಸೇವಕರನ್ನು ಬಿಟ್ಟು ತಾನೊಬ್ಬನೇ ಊಟಮಾಡುವವನು ನರಕಕ್ಕೆ ಹೋಗುತ್ತಾನೆ.
13024070a ವೇದವಿಕ್ರಯಿಣಶ್ಚೈವ ವೇದಾನಾಂ ಚೈವ ದೂಷಕಾಃ।
13024070c ವೇದಾನಾಂ ಲೇಖಕಾಶ್ಚೈವ ತೇ ವೈ ನಿರಯಗಾಮಿನಃ।।
ವೇದವನ್ನು ವಿಕ್ರಯಿಸುವವರು, ವೇದಗಳನ್ನು ದೂಷಿಸುವವರು ಮತ್ತು ವೇದಗಳನ್ನು ಬರೆಯುವವರೂ ಕೂಡ ನರಕಕ್ಕೆ ಹೋಗುತ್ತಾರೆ.
13024071a ಚಾತುರಾಶ್ರಮ್ಯಬಾಹ್ಯಾಶ್ಚ ಶ್ರುತಿಬಾಹ್ಯಾಶ್ಚ ಯೇ ನರಾಃ।
13024071c ವಿಕರ್ಮಭಿಶ್ಚ ಜೀವಂತಿ ತೇ ವೈ ನಿರಯಗಾಮಿನಃ।।
ನಾಲ್ಕು ಆಶ್ರಮಗಳ ಹೊರತಾದ ಮತ್ತು ಶ್ರುತಿಗಳಿಗೂ ಹೊರತಾದ ಕರ್ಮಗಳಿಂದ ಜೀವನ ನಡೆಸುವ ನರರು ನರಕಕ್ಕೆ ಹೋಗುತ್ತಾರೆ.
13024072a ಕೇಶವಿಕ್ರಯಿಕಾ ರಾಜನ್ವಿಷವಿಕ್ರಯಿಕಾಶ್ಚ ಯೇ।
13024072c ಕ್ಷೀರವಿಕ್ರಯಿಕಾಶ್ಚೈವ ತೇ ವೈ ನಿರಯಗಾಮಿನಃ।।
ರಾಜನ್! ಕೂದಲನ್ನು ಮಾರುವ, ವಿಷವನ್ನು ಮಾರುವ ಮತ್ತು ಹಾಲನ್ನು ಮಾರುವವರು ನರಕಗಾಮಿಗಳು.
13024073a ಬ್ರಾಹ್ಮಣಾನಾಂ ಗವಾಂ ಚೈವ ಕನ್ಯಾನಾಂ ಚ ಯುಧಿಷ್ಠಿರ।
13024073c ಯೇಽಂತರಂ ಯಾಂತಿ ಕಾರ್ಯೇಷು ತೇ ವೈ ನಿರಯಗಾಮಿನಃ।।
ಯುಧಿಷ್ಠಿರ! ಬ್ರಾಹ್ಮಣರಿಗೂ, ಗೋವುಗಳಿಗೂ ಮತ್ತು ಕನ್ಯೆಯರ ಕಾರ್ಯಗಳಲ್ಲಿ ವಿಘ್ನಗಳನ್ನುಂಟುಮಾಡುವವನು ನರಕಕ್ಕೆ ಹೋಗುತ್ತಾನೆ.
13024074a ಶಸ್ತ್ರವಿಕ್ರಯಕಾಶ್ಚೈವ ಕರ್ತಾರಶ್ಚ ಯುಧಿಷ್ಠಿರ।
13024074c ಶಲ್ಯಾನಾಂ ಧನುಷಾಂ ಚೈವ ತೇ ವೈ ನಿರಯಗಾಮಿನಃ।।
ಯುಧಿಷ್ಠಿರ! ಶಸ್ತ್ರಗಳನ್ನು ಮಾರುವ, ಹಾಗೂ ಈಟಿ, ಧನುಸ್ಸು ಮುಂತಾದ ಶಸ್ತ್ರಗಳನ್ನು ತಯಾರಿಸುವವನು ನರಕಕ್ಕೆ ಹೋಗುತ್ತಾನೆ.
13024075a ಶಲ್ಯೈರ್ವಾ ಶಂಕುಭಿರ್ವಾಪಿ ಶ್ವಭ್ರೈರ್ವಾ ಭರತರ್ಷಭ।
13024075c ಯೇ ಮಾರ್ಗಮನುರುಂಧಂತಿ ತೇ ವೈ ನಿರಯಗಾಮಿನಃ।।
ಭರತರ್ಷಭ! ಮುಳ್ಳು, ಕಲ್ಲು ಅಥವಾ ಹಳ್ಳಗಳನ್ನು ತೋಡಿ ಮಾರ್ಗವನ್ನು ತಡೆಯುವವನು ನರಕಕ್ಕೆ ಹೋಗುತ್ತಾನೆ.
13024076a ಉಪಾಧ್ಯಾಯಾಂಶ್ಚ ಭೃತ್ಯಾಂಶ್ಚ ಭಕ್ತಾಂಶ್ಚ ಭರತರ್ಷಭ।
13024076c ಯೇ ತ್ಯಜಂತ್ಯಸಮರ್ಥಾಂಸ್ತಾಂಸ್ತೇ ವೈ ನಿರಯಗಾಮಿನಃ।।
ಭರತರ್ಷಭ! ಯಾವ ಕಾರಣವೂ ಇಲ್ಲದೇ ಯಾರು ಉಪಾಧ್ಯಾಯರನ್ನು, ಸೇವಕರನ್ನು ಮತ್ತು ಭಕ್ತರನ್ನು ತ್ಯಜಿಸುತ್ತಾರೋ ಅವರು ನರಕಕ್ಕೆ ಹೋಗುತ್ತಾರೆ.
13024077a ಅಪ್ರಾಪ್ತದಮಕಾಶ್ಚೈವ ನಾಸಾನಾಂ ವೇಧಕಾಸ್ತಥಾ।
13024077c ಬಂಧಕಾಶ್ಚ ಪಶೂನಾಂ ಯೇ ತೇ ವೈ ನಿರಯಗಾಮಿನಃ।।
ಎಳೆಯ ಪ್ರಾಣಿಯನ್ನು ಕೆಲಸಕ್ಕೆ ಹಚ್ಚಿ ದಂಡಿಸುವವನು, ಹಸುಗಳಿಗೆ ಮೂಗುದಾರವನ್ನು ಕಟ್ಟುವವನು, ಮತ್ತು ಪಶುಗಳನ್ನು ಬಂಧಿಸುವವನು ನರಕಕ್ಕೆ ಹೋಗುತ್ತಾನೆ.
13024078a ಅಗೋಪ್ತಾರಶ್ಚಲದ್ರವ್ಯಾ ಬಲಿಷಡ್ಭಾಗತತ್ಪರಾಃ।
13024078c ಸಮರ್ಥಾಶ್ಚಾಪ್ಯದಾತಾರಸ್ತೇ ವೈ ನಿರಯಗಾಮಿನಃ।।
ಪ್ರಜೆಗಳನ್ನು ರಕ್ಷಿಸದೇ ರಾಷ್ಟ್ರಾದಯದ ಆರನೇ ಒಂದು ಭಾಗವನ್ನು ತೆಗೆದುಕೊಳ್ಳುವವನು ಹಾಗೂ ಸಮರ್ಥನಾಗಿದ್ದರೂ ದಾನವನ್ನು ಕೊಡದೇ ಇರುವವನು ನರಕಕ್ಕೆ ಹೋಗುತ್ತಾನೆ.
13024079a ಕ್ಷಾಂತಾನ್ದಾಂತಾಂಸ್ತಥಾ ಪ್ರಾಜ್ಞಾನ್ದೀರ್ಘಕಾಲಂ ಸಹೋಷಿತಾನ್।
13024079c ತ್ಯಜಂತಿ ಕೃತಕೃತ್ಯಾ ಯೇ ತೇ ವೈ ನಿರಯಗಾಮಿನಃ।।
ಬಹಳಕಾಲದಿಂದಲೂ ಜೊತೆಯಲ್ಲಿಯೇ ಇದ್ದ ಕ್ಷಮಾಶೀಲ, ಜಿತೇಂದ್ರಿಯ ಪ್ರಾಜ್ಞನನ್ನು ಕೆಲಸವಾದ ಕೂಡಲೇ ತ್ಯಜಿಸುವವನು ನರಕಕ್ಕೆ ಹೋಗುತ್ತಾನೆ.
13024080a ಬಾಲಾನಾಮಥ ವೃದ್ಧಾನಾಂ ದಾಸಾನಾಂ ಚೈವ ಯೇ ನರಾಃ।
13024080c ಅದತ್ತ್ವಾ ಭಕ್ಷಯಂತ್ಯಗ್ರೇ ತೇ ವೈ ನಿರಯಗಾಮಿನಃ।।
ಬಾಲಕರಿಗೂ, ವೃದ್ಧರಿಗೂ, ಮತ್ತು ದಾಸರಿಗೂ ಕೊಡದೇ ಮೊದಲೇ ತಿನ್ನುವ ನರನು ನರಕಕ್ಕೆ ಹೋಗುತ್ತಾನೆ.
13024081a ಏತೇ ಪೂರ್ವರ್ಷಿಭಿರ್ದೃಷ್ಟಾಃ ಪ್ರೋಕ್ತಾ ನಿರಯಗಾಮಿನಃ।
13024081c ಭಾಗಿನಃ ಸ್ವರ್ಗಲೋಕಸ್ಯ ವಕ್ಷ್ಯಾಮಿ ಭರತರ್ಷಭ।।
ಋಷಿಗಳು ಕಂಡ ನರಕಕ್ಕೆ ಹೋಗುವವರ ಕುರಿತು ಇಲ್ಲಿಯವರೆಗೆ ಹೇಳಿದ್ದಾಯಿತು. ಈಗ ಭರತರ್ಷಭ! ಸ್ವರ್ಗಲೋಕದ ಭಾಗಿಗಳ ಕುರಿತು ಹೇಳುತ್ತೇನೆ.
13024082a ಸರ್ವೇಷ್ವೇವ ತು ಕಾರ್ಯೇಷು ದೈವಪೂರ್ವೇಷು ಭಾರತ।
13024082c ಹಂತಿ ಪುತ್ರಾನ್ಪಶೂನ್ಕೃತ್ಸ್ನಾನ್ಬ್ರಾಹ್ಮಣಾತಿಕ್ರಮಃ ಕೃತಃ।।
ಭಾರತ! ದೇವಕಾರ್ಯದಿಂದ ಮೊದಲ್ಗೊಂಡ ಸಮಸ್ತ ಕಾರ್ಯಗಳಲ್ಲಿಯೂ ಬ್ರಾಹ್ಮಣನನ್ನು ಅತಿಕ್ರಮಿಸಿ ಮಾಡಿದರೆ ಅವನ ಪುತ್ರರು-ಪಶುಗಳು ಎಲ್ಲವೂ ನಾಶವಾಗುತ್ತವೆ.
13024083a ದಾನೇನ ತಪಸಾ ಚೈವ ಸತ್ಯೇನ ಚ ಯುಧಿಷ್ಠಿರ।
13024083c ಯೇ ಧರ್ಮಮನುವರ್ತಂತೇ ತೇ ನರಾಃ ಸ್ವರ್ಗಗಾಮಿನಃ।।
ಯುಧಿಷ್ಠಿರ! ದಾನ, ತಪಸ್ಸು ಮತ್ತು ಸತ್ಯಗಳಿಂದ ಧರ್ಮವನ್ನು ಅನುಸರಿಸುವ ನರರು ಸ್ವರ್ಗಗಾಮಿಗಳು.
13024084a ಶುಶ್ರೂಷಾಭಿಸ್ತಪೋಭಿಶ್ಚ ಶ್ರುತಮಾದಾಯ ಭಾರತ।
13024084c ಯೇ ಪ್ರತಿಗ್ರಹನಿಃಸ್ನೇಹಾಸ್ತೇ ನರಾಃ ಸ್ವರ್ಗಗಾಮಿನಃ।।
ಭಾರತ! ಶುಶ್ರೂಷೆ ಮತ್ತು ತಪಸ್ಸುಗಳಿಂದ ವೇದವನ್ನು ಪಡೆದುಕೊಂಡು ದಾನಗಳ ಪ್ರತಿಗ್ರಹದ ಕುರಿತು ಆಸಕ್ತಿಯಿಲ್ಲದಿರುವ ನರರು ಸ್ವರ್ಗಕ್ಕೆ ಹೋಗುತ್ತಾರೆ.
13024085a ಭಯಾತ್ಪಾಪಾತ್ತಥಾಬಾಧಾದ್ದಾರಿದ್ರ್ಯಾದ್ವ್ಯಾಧಿಧರ್ಷಣಾತ್।
13024085c ಯತ್ಕೃತೇ ಪ್ರತಿಮುಚ್ಯಂತೇ ತೇ ನರಾಃ ಸ್ವರ್ಗಗಾಮಿನಃ।।
ಯಾರು ಇತರರನ್ನು ಭಯ, ಪಾಪ, ಬಾಧೆ, ದಾರಿದ್ರ್ಯ ಮತ್ತು ವ್ಯಾಧಿಗಳ ಸಂಕಟದಿಂದ ಪಾರುಗೊಳಿಸುತ್ತಾರೋ ಅಂಥಹ ನರರು ಸ್ವರ್ಗಗಾಮಿಗಳು.
13024086a ಕ್ಷಮಾವಂತಶ್ಚ ಧೀರಾಶ್ಚ ಧರ್ಮಕಾರ್ಯೇಷು ಚೋತ್ಥಿತಾಃ।
13024086c ಮಂಗಲಾಚಾರಯುಕ್ತಾಶ್ಚ ತೇ ನರಾಃ ಸ್ವರ್ಗಗಾಮಿನಃ।।
ಕ್ಷಮಾವಂತರೂ, ಧೀರರೂ, ಧರ್ಮಕಾರ್ಯಗಳಲ್ಲಿ ಮುಂದಾಗಿರುವರೂ, ಮತ್ತು ಮಂಗಲಾಚಾರಯುಕ್ತರೂ ಆಗಿರುವ ನರರು ಸ್ವರ್ಗಗಾಮಿಗಳು.
13024087a ನಿವೃತ್ತಾ ಮಧುಮಾಂಸೇಭ್ಯಃ ಪರದಾರೇಭ್ಯ ಏವ ಚ।
13024087c ನಿವೃತ್ತಾಶ್ಚೈವ ಮದ್ಯೇಭ್ಯಸ್ತೇ ನರಾಃ ಸ್ವರ್ಗಗಾಮಿನಃ।।
ಮಧು ಮತ್ತು ಮಾಂಸಗಳನ್ನು ತ್ಯಜಿಸಿದ, ಪರದಾರೆಯರಿಂದ ನಿವೃತ್ತರಾದ, ಮತ್ತು ಮದ್ಯದಿಂದ ದೂರವಿರುವ ನರರು ಸ್ವರ್ಗಗಾಮಿಗಳು.
13024088a ಆಶ್ರಮಾಣಾಂ ಚ ಕರ್ತಾರಃ ಕುಲಾನಾಂ ಚೈವ ಭಾರತ।
13024088c ದೇಶಾನಾಂ ನಗರಾಣಾಂ ಚ ತೇ ನರಾಃ ಸ್ವರ್ಗಗಾಮಿನಃ।।
ಆಶ್ರಮಗಳು, ಕುಲಗಳು, ದೇಶಗಳು ಮತ್ತು ನಗರಗಳನ್ನು ನಿರ್ಮಿಸಿದ ನರರು ಸ್ವರ್ಗಗಾಮಿಗಳು.
13024089a ವಸ್ತ್ರಾಭರಣದಾತಾರೋ ಭಕ್ಷಪಾನಾನ್ನದಾಸ್ತಥಾ।
13024089c ಕುಟುಂಬಾನಾಂ ಚ ದಾತಾರಸ್ತೇ ನರಾಃ ಸ್ವರ್ಗಗಾಮಿನಃ।।
ಕುಟುಂಬಗಳಿಗೆ ವಸ್ತ್ರಾಭರಣಗಳನ್ನು, ಭಕ್ಷ-ಪಾನ-ಅನ್ನಗಳನ್ನು ದಾನಮಾಡುವ ನರರು ಸ್ವರ್ಗಗಾಮಿಗಳು.
13024090a ಸರ್ವಹಿಂಸಾನಿವೃತ್ತಾಶ್ಚ ನರಾಃ ಸರ್ವಸಹಾಶ್ಚ ಯೇ।
13024090c ಸರ್ವಸ್ಯಾಶ್ರಯಭೂತಾಶ್ಚ ತೇ ನರಾಃ ಸ್ವರ್ಗಗಾಮಿನಃ।।
ಸರ್ವಹಿಂಸೆಗಳಿಂದ ನಿವೃತ್ತರಾದ, ಸರ್ವರಿಗೂ ಸಹಾಯಮಾಡುವ ನರರು, ಮತ್ತು ಸರ್ವರಿಗೂ ಆಶ್ರಯಭೂತರಾಗಿರುವ ನರರು ಸ್ವರ್ಗಗಾಮಿಗಳು.
13024091a ಮಾತರಂ ಪಿತರಂ ಚೈವ ಶುಶ್ರೂಷಂತಿ ಜಿತೇಂದ್ರಿಯಾಃ।
13024091c ಭ್ರಾತೄಣಾಂ ಚೈವ ಸಸ್ನೇಹಾಸ್ತೇ ನರಾಃ ಸ್ವರ್ಗಗಾಮಿನಃ।।
ಭ್ರಾತೃಗಳೊಂದಿಗೆ ಸ್ನೇಹದಿಂದಿದ್ದುಕೊಂಡು ಜಿತೇಂದ್ರಿಯರಾಗಿ ಮಾತಾ-ಪಿತೃಗಳ ಸೇವೆಯನ್ನು ಮಾಡುವ ನರರು ಸ್ವರ್ಗಗಾಮಿಗಳು.
13024092a ಆಢ್ಯಾಶ್ಚ ಬಲವಂತಶ್ಚ ಯೌವನಸ್ಥಾಶ್ಚ ಭಾರತ।
13024092c ಯೇ ವೈ ಜಿತೇಂದ್ರಿಯಾ ಧೀರಾಸ್ತೇ ನರಾಃ ಸ್ವರ್ಗಗಾಮಿನಃ।।
ಧನವಂತರಾಗಿದ್ದುಕೊಂಡೂ, ಬಲವಂತರಾಗಿದ್ದುಕೊಂಡೂ, ಯೌವನಾವಸ್ಥೆಯಲ್ಲಿದ್ದುಕೊಂಡೂ ಜಿತೇಂದ್ರಿಯರಾಗಿರುವ ಧೀರ ನರರು ಸ್ವರ್ಗಗಾಮಿಗಳು.
13024093a ಅಪರಾದ್ಧೇಷು ಸಸ್ನೇಹಾ ಮೃದವೋ ಮಿತ್ರವತ್ಸಲಾಃ।
13024093c ಆರಾಧನಸುಖಾಶ್ಚಾಪಿ ತೇ ನರಾಃ ಸ್ವರ್ಗಗಾಮಿನಃ।।
ಅಪರಾಧಿಗಳೊಡನೆಯೂ ಸ್ನೇಹದಿಂದಿರುವ, ಮೃದುಸ್ವಭಾವದ, ಮಿತ್ರವತ್ಸಲ, ಇತರರ ಸೇವೆಯೇ ಸುಖವೆಂದು ತಿಳಿದಿರುವ ನರರು ಸ್ವರ್ಗಗಾಮಿಗಳು.
13024094a ಸಹಸ್ರಪರಿವೇಷ್ಟಾರಸ್ತಥೈವ ಚ ಸಹಸ್ರದಾಃ।
13024094c ತ್ರಾತಾರಶ್ಚ ಸಹಸ್ರಾಣಾಂ ಪುರುಷಾಃ ಸ್ವರ್ಗಗಾಮಿನಃ।।
ಸಾವಿರಾರು ಜನರಿಗೆ ಭೋಜನವನ್ನು ನೀಡುವ, ಸಹಸ್ರಾರು ಜನರಿಗೆ ದಾನವನ್ನು ನೀಡುವ ಮತ್ತು ಸಹಸ್ರಾರು ಜನರನ್ನು ಪರಿಪಾಲಿಸುವ ಪುರುಷರು ಸ್ವರ್ಗಗಾಮಿಗಳು.
13024095a ಸುವರ್ಣಸ್ಯ ಚ ದಾತಾರೋ ಗವಾಂ ಚ ಭರತರ್ಷಭ।
13024095c ಯಾನಾನಾಂ ವಾಹನಾನಾಂ ಚ ತೇ ನರಾಃ ಸ್ವರ್ಗಗಾಮಿನಃ।।
ಭರತರ್ಷಭ! ಸುವರ್ಣ, ಗೋವು, ಯಾನಗಳು ಮತ್ತು ವಾಹನಗಳನ್ನು ದಾನವನ್ನಾಗಿ ಕೊಡುವ ನರರು ಸ್ವರ್ಗಗಾಮಿಗಳು.
13024096a ವೈವಾಹಿಕಾನಾಂ ಕನ್ಯಾನಾಂ ಪ್ರೇಷ್ಯಾಣಾಂ ಚ ಯುಧಿಷ್ಠಿರ।
13024096c ದಾತಾರೋ ವಾಸಸಾಂ ಚೈವ ತೇ ನರಾಃ ಸ್ವರ್ಗಗಾಮಿನಃ।।
ಯುಧಿಷ್ಠಿರ! ವಿವಾಹವಾಗುವ ಕನ್ಯೆಗೆ ಆಭರಣಾದಿ ವಸ್ತುಗಳನ್ನೂ, ವಸ್ತ್ರಗಳನ್ನೂ ದಾನಮಾಡುವ ನರರು ಸ್ವರ್ಗಗಾಮಿಗಳು.
13024097a ವಿಹಾರಾವಸಥೋದ್ಯಾನಕೂಪಾರಾಮಸಭಾಪ್ರದಾಃ।
13024097c ವಪ್ರಾಣಾಂ ಚೈವ ಕರ್ತಾರಸ್ತೇ ನರಾಃ ಸ್ವರ್ಗಗಾಮಿನಃ।।
ಇತರರ ಹಿತಕ್ಕಾಗಿ ಆಶ್ರಮಗಳನ್ನೂ, ಮನೆಗಳನ್ನೂ, ಉದ್ಯಾನವನಗಳನ್ನೂ, ಅರವಟ್ಟಿಗೆಗಳನ್ನೂ ಮತ್ತು ದಾಟುಸೇತುವೆಗಳನ್ನು ನಿರ್ಮಿಸುವ ನರರು ಸ್ವರ್ಗಗಾಮಿಗಳು.
13024098a ನಿವೇಶನಾನಾಂ ಕ್ಷೇತ್ರಾಣಾಂ ವಸತೀನಾಂ ಚ ಭಾರತ।
13024098c ದಾತಾರಃ ಪ್ರಾರ್ಥಿತಾನಾಂ ಚ ತೇ ನರಾಃ ಸ್ವರ್ಗಗಾಮಿನಃ।।
ಭಾರತ! ಯಾಚಕರು ಕೇಳಿದ ಮನೆ, ಹೊಲ, ವಸತಿಗಳನ್ನು ದಾನಮಾಡುವ ನರರು ಸ್ವರ್ಗಗಾಮಿಗಳು.
13024099a ರಸಾನಾಮಥ ಬೀಜಾನಾಂ ಧಾನ್ಯಾನಾಂ ಚ ಯುಧಿಷ್ಠಿರ।
13024099c ಸ್ವಯಮುತ್ಪಾದ್ಯ ದಾತಾರಃ ಪುರುಷಾಃ ಸ್ವರ್ಗಗಾಮಿನಃ।।
ಯುಧಿಷ್ಠಿರ! ತಾವೇ ಬೆಳೆಸಿದ ಹಣ್ಣುಗಳು, ಬೀಜಗಳು ಮತ್ತು ಧಾನ್ಯಗಳನ್ನು ದಾನಮಾಡುವ ಪುರುಷರು ಸ್ವರ್ಗಗಾಮಿಗಳು.
13024100a ಯಸ್ಮಿನ್ಕಸ್ಮಿನ್ಕುಲೇ ಜಾತಾ ಬಹುಪುತ್ರಾಃ ಶತಾಯುಷಃ।
13024100c ಸಾನುಕ್ರೋಶಾ ಜಿತಕ್ರೋಧಾಃ ಪುರುಷಾಃ ಸ್ವರ್ಗಗಾಮಿನಃ।।
ಯಾವುದೇ ಕುಲದಲ್ಲಿ ಹುಟ್ಟಿರಲಿ, ಬಹುಪುತ್ರರೂ, ಶತಾಯುಷಿಗಳೂ, ಅನುಕ್ರೋಶವುಳ್ಳವರೂ, ಜಿತಕ್ರೋಧರೂ ಆದ ಪುರುಷರು ಸ್ವರ್ಗಗಾಮಿಗಳು.
13024101a ಏತದುಕ್ತಮಮುತ್ರಾರ್ಥಂ ದೈವಂ ಪಿತ್ರ್ಯಂ ಚ ಭಾರತ।
13024101c ಧರ್ಮಾಧರ್ಮೌ ಚ ದಾನಸ್ಯ ಯಥಾ ಪೂರ್ವರ್ಷಿಭಿಃ ಕೃತೌ।।
ಭಾರತ! ಹಿಂದೆ ಋಷಿಗಳು ಮಾಡಿಟ್ಟಂತ ಧರ್ಮ-ಅಧರ್ಮಗಳ ಕುರಿತೂ, ದಾನಗಳ ಕುರಿತೂ, ದೈವ-ಪಿತೃಕಾರ್ಯಗಳ ಕುರಿತೂ ವರ್ಣಿಸಿದ್ದೇನೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಸ್ವರ್ಗನರಕಗಾಮಿವರ್ಣನೇ ಚತುರ್ವಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಸ್ವರ್ಗನರಕಗಾಮಿವರ್ಣನ ಎನ್ನುವ ಇಪ್ಪತ್ನಾಲ್ಕನೇ ಅಧ್ಯಾಯವು.
-
ಯೇ ಚಾಪೇತಾಃ ಸ್ವಕರ್ಮಭ್ಯಃ ಸ್ತೇನಾಸ್ತೇ ಪರಿಕೀರ್ತಿತಾಃ। ಅರ್ಥಾತ್ ಯಾರು ಸ್ವವರ್ಣಾಶ್ರಮೋಕ್ತ ಕರ್ಮಗಳನ್ನು ಮಾಡುವುದಿಲ್ಲವೋ ಅವರು ಸ್ತೇನರು ಅಥವಾ ಕಳ್ಳರು ಎಂದು ಸ್ತೇನ ಶಬ್ಧಕ್ಕೆ ವ್ಯಾಖ್ಯಾನವಿದೆ. (ಭಾರತ ದರ್ಶನ) ↩︎
-
ಕರ್ಮಣಾ ದೇಹದೋಷೈಶ್ಚ ಯೋನಿತಶ್ಚೈವ ಕುತ್ಸಿತಾಃ। ಪತಿತಾಂಸ್ತಾನ್ವಿಜಾನೀಯಾನ್ಮಹಾಪಾತಕಿನಶ್ಚ ಯೇ।। ಅರ್ಥಾತ್ ಕರ್ಮದಿಂದಲೂ, ದೇಹದೋಷಗಳಿಂದಲೂ, ಕುತ್ಸಿತ ವಂಶದಲ್ಲಿ ಹುಟ್ಟಿರುವುದರಿಂದಲೂ, ಮನುಷ್ಯರು ಪತಿತರಾಗುತ್ತಾರೆ. ಮಹಾಪಾಪಗಳನ್ನು ಮಾಡುವುದರಿಂದಲೂ ಪತಿತರಾಗುತ್ತಾರೆ. (ಭಾರತ ದರ್ಶನ) ↩︎
-
ಇವಳಲ್ಲಿ ಹುಟ್ಟುವ ಪುತ್ರನು ನನ್ನ ಮಗನಾಗುತ್ತಾನೆ” ಎಂದು ಮಗಳನ್ನು ಮದುವೆಮಾಡಿಕೊಟ್ಟ ನಂತರ ಅವಳ ಮಗನನ್ನು ಪುತ್ರಿಕಾಪೂರ್ವಪುತ್ರ ಎನ್ನುತ್ತಾರೆ. (ಭಾರತ ದರ್ಶನ) ↩︎
-
ಸಮರ್ಧಂ ಧಾನ್ಯಮಾದಾಯ ಮಹಾರ್ಧಂ ಯಃ ಪ್ರಯಚ್ಛತಿ। ಸ ವೈ ವಾರ್ಧುಷಿಕೋ ನಾಮ ಹವ್ಯಕವ್ಯಬಹಿಷ್ಕೃತಃ।। ಅರ್ಥಾತ್ ಅರ್ಧಭಾಗ ಧಾನ್ಯವನ್ನು ತೆಗೆದುಕೊಂಡು ಪೂರ್ಣಭಾಗ ಧಾನ್ಯವನ್ನು ಹಿಂದಿರುಗಿ ಕೇಳುವವನು ವಾರ್ಧುಷಿಕನೆನಿಸಿಕೊಳ್ಳುತ್ತಾನೆ. ಅವನು ಹವ್ಯ-ಕವ್ಯಗಳ ಆಮಂತ್ರಣಕ್ಕೆ ಯೋಗ್ಯನಾಗುವುದಿಲ್ಲ. (ಭಾರತ ದರ್ಶನ) ↩︎
-
ಪುಣ್ಯಾಹಂ ಭವಂತೋ ಬ್ರುವಂತು ಎಂದು ಯಜಮಾನನು ಹೇಳಿದಾಗ ಬ್ರಾಹ್ಮಣರು ಓಂ ಪುಣ್ಯಾಹಂ ಓಂ ಪುಣ್ಯಾಹಂ ಎಂಬ ಪ್ರತಿವಚನವನ್ನು ಹೇಳಬೇಕು. (ಭಾರತ ದರ್ಶನ) ↩︎
-
ಪುಣ್ಯಾಹಂ ಭವಂತ್ ಬ್ರುವಂತು ಎಂದು ಯಜಮಾನನು ಹೇಳಿದಾಗ ಬ್ರಾಹ್ಮಣರು ಪುಣ್ಯಾಹಂ ಪುಣ್ಯಾಹಂ ಎಂಬ ಪ್ರತಿವಚನವನ್ನು ಹೇಳಬೇಕು. (ಭಾರತ ದರ್ಶನ) ↩︎