023: ಬಹುಪ್ರಾಶ್ನಿಕಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 23

ಸಾರ

ಹವ್ಯ-ಕವ್ಯಗಳಿಗೆ ಮತ್ತು ದಾನಗಳಿಗೆ ಪಾತ್ರರಾದ ವಿಪ್ರರು ಯಾರೆನ್ನುವುದರ ವಿಷಯದ ಕುರಿತು ಯುಧಿಷ್ಠಿರ-ಭೀಷ್ಮರ ಸಂವಾದ (1-41).

13023001 ಯುಧಿಷ್ಠಿರ ಉವಾಚ।
13023001a ಕಿಮಾಹುರ್ಭರತಶ್ರೇಷ್ಠ ಪಾತ್ರಂ ವಿಪ್ರಾಃ ಸನಾತನಮ್।
13023001c ಬ್ರಾಹ್ಮಣಂ ಲಿಂಗಿನಂ ಚೈವ ಬ್ರಾಹ್ಮಣಂ ವಾಪ್ಯಲಿಂಗಿನಮ್।।

ಯುಧಿಷ್ಠಿರನು ಹೇಳಿದನು: “ಭರತಶ್ರೇಷ್ಠ! “ಪಾತ್ರರು” ಸನಾತನ ವಿಪ್ರರು ಎಂದು ಯಾರಿಗೆ ಹೇಳುತ್ತಾರೆ? ಚಿಹ್ನೆಗಳಿರುವ ಬ್ರಾಹ್ಮಣನನ್ನೋ ಅಥವಾ ಚಿಹ್ನೆಗಳಿಲ್ಲದಿರುವ ಬ್ರಾಹ್ಮಣನನ್ನೋ?1

13023002 ಭೀಷ್ಮ ಉವಾಚ।
13023002a ಸ್ವವೃತ್ತಿಮಭಿಪನ್ನಾಯ ಲಿಂಗಿನೇ ವೇತರಾಯ ವಾ।
13023002c ದೇಯಮಾಹುರ್ಮಹಾರಾಜ ಉಭಾವೇತೌ ತಪಸ್ವಿನೌ।।

ಭೀಷ್ಮನು ಹೇಳಿದನು: “ಮಹಾರಾಜ! ತಮ್ಮ ತಮ್ಮ ವೃತ್ತಿಯನ್ನು2 ಆಧರಿಸಿ ಚಿಹ್ನೆಗಳಿರುವ ಬ್ರಹ್ಮಚಾರಿ ಮತ್ತು ಚಿಹ್ನೆಗಳಿಲ್ಲದಿರುವ ಗೃಹಸ್ಥ ಇಬ್ಬರೂ ತಪಸ್ವಿಗಳೇ. ಇವರಿಬ್ಬರಿಗೂ ದಾನಮಾಡಬಹುದು ಎಂದು ಹೇಳುತ್ತಾರೆ.”

13023003 ಯುಧಿಷ್ಠಿರ ಉವಾಚ।
13023003a ಶ್ರದ್ಧಯಾ ಪರಯಾ ಪೂತೋ ಯಃ ಪ್ರಯಚ್ಚೇದ್ದ್ವಿಜಾತಯೇ।
13023003c ಹವ್ಯಂ ಕವ್ಯಂ ತಥಾ ದಾನಂ ಕೋ ದೋಷಃ ಸ್ಯಾತ್ಪಿತಾಮಹ।।

ಯುಧಿಷ್ಠಿರನು ಹೇಳಿದನು: “ಪಿತಾಮಹ! ಶ್ರದ್ಧೆಯಿಂದ ಪರಮ ಪೂತನಾದವನು ಬ್ರಾಹ್ಮಣರಿಗೆ ಹವ್ಯ, ಕವ್ಯ ಅಥವಾ ದಾನವನ್ನು ನೀಡಿದರೆ ಅವನಿಗೆ ಯಾವ ದೋಷವು ತಗಲುತ್ತದೆ?”

13023004 ಭೀಷ್ಮ ಉವಾಚ।
13023004a ಶ್ರದ್ಧಾಪೂತೋ ನರಸ್ತಾತ ದುರ್ದಾಂತೋಽಪಿ ನ ಸಂಶಯಃ।
13023004c ಪೂತೋ ಭವತಿ ಸರ್ವತ್ರ ಕಿಂ ಪುನಸ್ತ್ವಂ ಮಹೀಪತೇ।।

ಭೀಷ್ಮನು ಹೇಳಿದನು: “ಮಗೂ! ಜಿತೇಂದ್ರಿಯನಾಗಿರದಿದ್ದರೂ ಶ್ರದ್ಧೆಯಿರುವ ಮನುಷ್ಯನು ಪೂತನೆನ್ನುವುದರಲ್ಲಿ ಸಂಶಯವಿಲ್ಲ. ಇನ್ನು ಇವೆರಡೂ ರೀತಿಯಲ್ಲಿ ಪೂತನಾಗಿರುವ ನಿನ್ನ ವಿಷಯದಲ್ಲಿ ಹೇಳುವುದೇನಿದೆ?”

13023005 ಯುಧಿಷ್ಠಿರ ಉವಾಚ।
13023005a ನ ಬ್ರಾಹ್ಮಣಂ ಪರೀಕ್ಷೇತ ದೈವೇಷು ಸತತಂ ನರಃ।
13023005c ಕವ್ಯಪ್ರದಾನೇ ತು ಬುಧಾಃ ಪರೀಕ್ಷ್ಯಂ ಬ್ರಾಹ್ಮಣಂ ವಿದುಃ।।

ಯುಧಿಷ್ಠಿರನು ಹೇಳಿದನು: “ನರನು ದೇವಕಾರ್ಯಗಳಿಗೆ ಸತತವೂ ಬ್ರಾಹ್ಮಣನ ಪಾತ್ರತ್ವವನ್ನು ಪರೀಕ್ಷಿಸಬೇಕಾಗಿಲ್ಲವೆಂದು ಹೇಳುತ್ತಾರೆ. ಆದರೆ ಪಿತೃಕಾರ್ಯಗಳಲ್ಲಿ ಬ್ರಾಹ್ಮಣನ ಪಾತ್ರತ್ವವನ್ನು ಪರೀಕ್ಷಿಸಬೇಕೆಂದು ತಿಳಿದವರು ಹೇಳುತ್ತಾರೆ. ಇದು ಏಕೆ?3

13023006 ಭೀಷ್ಮ ಉವಾಚ।
13023006a ನ ಬ್ರಾಹ್ಮಣಃ ಸಾಧಯತೇ ಹವ್ಯಂ ದೈವಾತ್ಪ್ರಸಿಧ್ಯತಿ।
13023006c ದೇವಪ್ರಸಾದಾದಿಜ್ಯಂತೇ ಯಜಮಾನಾ ನ ಸಂಶಯಃ।।

ಭೀಷ್ಮನು ಹೇಳಿದನು: “ದೇವಕಾರ್ಯಗಳಾದ ಯಜ್ಞ-ಯಾಗಾದಿಗಳಲ್ಲಿ ಸಿದ್ಧಿಯು ಬ್ರಾಹ್ಮಣನ ಅಧೀನವಾಗಿರುವುದಿಲ್ಲ4. ದೈವದ ಕೃಪೆಯಿದ್ದರೆ ಅವು ಸಿದ್ಧಿಸುತ್ತವೆ. ದೇವತೆಗಳ ಪ್ರಸಾದಿಂದಲೇ ಯಜಮಾನರು ಯಾಗಮಾಡುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ.

13023007a ಬ್ರಾಹ್ಮಣಾ ಭರತಶ್ರೇಷ್ಠ ಸತತಂ ಬ್ರಹ್ಮವಾದಿನಃ।
13023007c ಮಾರ್ಕಂಡೇಯಃ ಪುರಾ ಪ್ರಾಹ ಇಹ ಲೋಕೇಷು ಬುದ್ಧಿಮಾನ್।।

ಭರತಶ್ರೇಷ್ಠ! ಹಿಂದೆ ಬುದ್ಧಿಮಾನ್ ಮಾರ್ಕಂಡೇಯನು ಕವ್ಯವಿಧಿಗಳಲ್ಲಿ ಅರ್ಥಾತ್ ಪಿತೃಸಂಬಂಧೀ ಶ್ರಾದ್ಧಾದಿಗಳಲ್ಲಿ ವೇದವಿದ ಬ್ರಾಹ್ಮಣರನ್ನೇ ಆಮಂತ್ರಿಸಬೇಕೆಂದು ಹೇಳಿದ್ದಾನೆ5.”

13023008 ಯುಧಿಷ್ಠಿರ ಉವಾಚ।
13023008a ಅಪೂರ್ವೋಽಪ್ಯಥ ವಾ ವಿದ್ವಾನ್ಸಂಬಂಧೀ ವಾಥ ಯೋ ಭವೇತ್।
13023008c ತಪಸ್ವೀ ಯಜ್ಞಶೀಲೋ ವಾ ಕಥಂ ಪಾತ್ರಂ ಭವೇತ್ತು ಸಃ।।

ಯುಧಿಷ್ಠಿರನು ಹೇಳಿದನು: “ಅಪರಿಚಿತ, ವಿದ್ವಾಂಸ, ಸಂಬಂಧಿ, ತಪಸ್ವಿ, ಮತ್ತು ಯಜ್ಞಶೀಲ – ಇವರಲ್ಲಿ ಯಾರು ಯಾವ ವಿಧದ ಗುಣಗಳಿಂದ ಯುಕ್ತರಾಗಿದ್ದರೆ ಶ್ರಾದ್ಧಕ್ಕೆ ಮತ್ತು ದಾನಕ್ಕೆ ಉತ್ತಮಪಾತ್ರರೆನಿಸುತ್ತಾರೆ?”

13023009 ಭೀಷ್ಮ ಉವಾಚ।
13023009a ಕುಲೀನಃ ಕರ್ಮಕೃದ್ವೈದ್ಯಸ್ತಥಾ ಚಾಪ್ಯಾನೃಶಂಸ್ಯವಾನ್।
13023009c ಹ್ರೀಮಾನೃಜುಃ ಸತ್ಯವಾದೀ ಪಾತ್ರಂ ಪೂರ್ವೇ ಚ ತೇ ತ್ರಯಃ।।

ಭೀಷ್ಮನು ಹೇಳಿದನು: “ಸತ್ಕುಲಪ್ರಸೂತ, ಕರ್ಮಠ, ವೇದವಿದ, ದಯಾಳು, ಲಜ್ಜಾಶೀಲ, ಸರಳ, ಸತ್ಯನಿಷ್ಠ – ಈ ಎಲ್ಲ ಗುಣಗಳಿಂದ ಸಂಪನ್ನರಾಗಿರುವ ಅಪರಿಚಿತ, ವಿದ್ವಾಂಸ ಮತ್ತು ಸಂಬಂಧಿಗಳು ಶ್ರಾದ್ಧ ಮತ್ತು ದಾನಗಳಿಗೆ ಶ್ರೇಷ್ಠಪಾತ್ರರಾಗುತ್ತಾರೆ.

13023010a ತತ್ರೇದಂ ಶೃಣು ಮೇ ಪಾರ್ಥ ಚತುರ್ಣಾಂ ತೇಜಸಾಂ ಮತಮ್।
13023010c ಪೃಥಿವ್ಯಾಃ ಕಾಶ್ಯಪಸ್ಯಾಗ್ನೇರ್ಮಾರ್ಕಂಡೇಯಸ್ಯ ಚೈವ ಹಿ।।

ಪಾರ್ಥ! ಈ ವಿಷಯದಲ್ಲಿ ಪೃಥ್ವಿ, ಕಾಶ್ಯಪ, ಅಗ್ನಿ ಮತ್ತು ಮಾರ್ಕಂಡೇಯ ಈ ನಾಲ್ವರು ತೇಜಸ್ವಿಗಳ ಮತವೇನೆನ್ನುವುದನ್ನು ಹೇಳುತ್ತೇನೆ. ಕೇಳು.

13023011 ಪೃಥಿವ್ಯುವಾಚ।
13023011a ಯಥಾ ಮಹಾರ್ಣವೇ ಕ್ಷಿಪ್ತಃ ಕ್ಷಿಪ್ರಂ ಲೋಷ್ಟೋ ವಿನಶ್ಯತಿ।
13023011c ತಥಾ ದುಶ್ಚರಿತಂ ಸರ್ವಂ ತ್ರಯ್ಯಾವೃತ್ತ್ಯಾ ವಿನಶ್ಯತಿ।।

ಪೃಥ್ವಿಯು ಹೇಳಿದಳು: “ಸಮುದ್ರದಲ್ಲಿ ಹಾಕಿದ ಮಣ್ಣುಹೆಂಟೆಯು ಹೇಗೆ ಅತಿ ಶೀಘ್ರವಾಗಿ ಕರಗಿ ವಿನಾಶಹೊಂದುತ್ತದೆಯೋ ಹಾಗೆ ಎಲ್ಲ ದುಶ್ಚರಿತಗಳೂ ಮೂರು ವೃತ್ತಿಗಳನ್ನು6 ಅವಲಂಬಿಸಿರುವ ಬ್ರಾಹ್ಮಣನಲ್ಲಿ ಮುಳುಗಿ ವಿನಾಶಹೊಂದುತ್ತವೆ.”

13023012 ಕಾಶ್ಯಪ ಉವಾಚ।
13023012a ಸರ್ವೇ ಚ ವೇದಾಃ ಸಹ ಷಡ್ಭಿರಂಗೈಃ ಸಾಂಖ್ಯಂ ಪುರಾಣಂ ಚ ಕುಲೇ ಚ ಜನ್ಮ।
13023012c ನೈತಾನಿ ಸರ್ವಾಣಿ ಗತಿರ್ಭವಂತಿ ಶೀಲವ್ಯಪೇತಸ್ಯ ನರಸ್ಯ ರಾಜನ್।।

ಕಾಶ್ಯಪನು ಹೇಳಿದನು: “ರಾಜನ್! ಶಿಕ್ಷಾ-ವ್ಯಾಕರಣಾದಿ ಆರು ಅಂಗಗಳೊಂದಿಗೆ ಎಲ್ಲ ವೇದಗಳು, ಸಾಂಖ್ಯ, ಪುರಾಣ ಮತ್ತು ಉತ್ತಮ ಕುಲದಲ್ಲಿ ಜನ್ಮ ಇವೆಲ್ಲವೂ ಶೀಲವಿಲ್ಲದ ಬ್ರಾಹ್ಮಣನಿಗೆ ಸದ್ಗತಿಯನ್ನು ಕೊಡಲಾರವು7.”

13023013 ಅಗ್ನಿರುವಾಚ।
13023013a ಅಧೀಯಾನಃ ಪಂಡಿತಂ ಮನ್ಯಮಾನೋ ಯೋ ವಿದ್ಯಯಾ ಹಂತಿ ಯಶಃ ಪರೇಷಾಮ್।
13023013c ಬ್ರಹ್ಮನ್ಸ ತೇನಾಚರತೇ ಬ್ರಹ್ಮಹತ್ಯಾಂ ಲೋಕಾಸ್ತಸ್ಯ ಹ್ಯಂತವಂತೋ ಭವಂತಿ।।

ಅಗ್ನಿಯು ಹೇಳಿದನು: “ಅಧ್ಯಯನ ಮಾಡಿ ತಾನೇ ಮಹಾ ಪಂಡಿತನೆಂದು ಭಾವಿಸಿಕೊಳ್ಳುವವನು ಮತ್ತು ತನ್ನ ಪಾಂಡಿತ್ಯದಿಂದ ಇತರರ ಯಶಸ್ಸನ್ನು ಅಪಹರಿಸುವವನು ಧರ್ಮದಿಂದ ಭ್ರಷ್ಟನಾಗುತ್ತಾನೆ. ಅಂತಹ ಬ್ರಾಹ್ಮಣನು ಬ್ರಹ್ಮಹತ್ಯೆಯನ್ನು ಮಾಡಿದಂತೆ. ಅವನು ಪಡೆಯುವ ಲೋಕಗಳು ಶಾಶ್ವತವಾಗಿರುವುದಿಲ್ಲ.”

13023014 ಮಾರ್ಕಂಡೇಯ ಉವಾಚ।
13023014a ಅಶ್ವಮೇಧಸಹಸ್ರಂ ಚ ಸತ್ಯಂ ಚ ತುಲಯಾ ಧೃತಮ್।
13023014c ನಾಭಿಜಾನಾಮಿ ಯದ್ಯಸ್ಯ ಸತ್ಯಸ್ಯಾರ್ಧಮವಾಪ್ನುಯಾತ್।।

ಮಾರ್ಕಂಡೇಯನು ಹೇಳಿದನು: “ಸಹಸ್ರ ಅಶ್ವಮೇಧಗಳ ಫಲ ಮತ್ತು ಸತ್ಯನಿಷ್ಟೆಯ ಫಲ ಇವುಗಳನ್ನು ತುಲನೆ ಮಾಡಿದರೆ ಸಹಸ್ರ ಅಶ್ವಮೇಧಗಳ ಫಲವು ತುಲನೆಯಲ್ಲಿ ಸತ್ಯದ ಅರ್ಧದಷ್ಟೂ ತೂಗುವುದೋ ಇಲ್ಲವೋ ತಿಳಿಯಲಾರೆನು!””

13023015 ಭೀಷ್ಮ ಉವಾಚ।
13023015a ಇತ್ಯುಕ್ತ್ವಾ ತೇ ಜಗ್ಮುರಾಶು ಚತ್ವಾರೋಽಮಿತತೇಜಸಃ।
13023015c ಪೃಥಿವೀ ಕಾಶ್ಯಪೋಽಗ್ನಿಶ್ಚ ಪ್ರಕೃಷ್ಟಾಯುಶ್ಚ ಭಾರ್ಗವಃ।।

ಭೀಷ್ಮನು ಹೇಳಿದನು: “ಈ ನಾಲ್ವರು ಅಮಿತತೇಜಸ್ವಿಗಳು – ಪೃಥ್ವೀ, ಕಾಶ್ಯಪ, ಅಗ್ನಿ ಮತ್ತು ದೀರ್ಘಾಯುಷಿ ಭಾರ್ಗವ ಮಾರ್ಕಂಡೇಯರು – ಹೀಗೆ ಹೇಳಿ ಹೊರಟುಹೋದರು.”

13023016 ಯುಧಿಷ್ಠಿರ ಉವಾಚ।
13023016a ಯದಿದಂ ಬ್ರಾಹ್ಮಣಾ ಲೋಕೇ ವ್ರತಿನೋ ಭುಂಜತೇ ಹವಿಃ।
13023016c ಭುಕ್ತಂ ಬ್ರಾಹ್ಮಣಕಾಮಾಯ ಕಥಂ ತತ್ಸುಕೃತಂ ಭವೇತ್।।

ಯುಧಿಷ್ಠಿರನು ಹೇಳಿದನು: “ಒಂದು ವೇಳೆ ಲೋಕದಲ್ಲಿ ಬ್ರಹ್ಮಚರ್ಯವ್ರತದಲ್ಲಿರುವ ಬ್ರಾಹ್ಮಣನು ಶ್ರಾದ್ಧದ ಹವಿಷ್ಟಾನ್ನವನ್ನು ಭುಂಜಿಸಿದರೆ ಶ್ರೇಷ್ಠ ಬ್ರಾಹ್ಮಣನಿಗೆಂದು ಉದ್ದೇಶಿಸಿದ ಆ ಶ್ರಾದ್ಧದ ಭೋಜನವು ಹೇಗೆ ಸಫಲವಾಗುತ್ತದೆ?”

13023017 ಭೀಷ್ಮ ಉವಾಚ।
13023017a ಆದಿಷ್ಟಿನೋ ಯೇ ರಾಜೇಂದ್ರ ಬ್ರಾಹ್ಮಣಾ ವೇದಪಾರಗಾಃ।
13023017c ಭುಂಜತೇ ಬ್ರಹ್ಮಕಾಮಾಯ ವ್ರತಲುಪ್ತಾ ಭವಂತಿ ತೇ।।

ಭೀಷ್ಮನು ಹೇಳಿದನು: “ರಾಜೇಂದ್ರ! ವೇದಪಾರಗರಾದ ಆದಿಷ್ಟಿ8 ಬ್ರಾಹ್ಮಣರು ಶ್ರೇಷ್ಠಬ್ರಾಹ್ಮಣರಿಗೆಂದಿರುವ ಶ್ರಾದ್ಧಭೋಜನವನ್ನು ಭುಂಜಿಸಿದರೆ ಅವರ ವ್ರತದಲ್ಲಿ ಲೋಪವುಂಟಾಗುತ್ತದೆ9.”

13023018 ಯುಧಿಷ್ಠಿರ ಉವಾಚ।
13023018a ಅನೇಕಾಂತಂ ಬಹುದ್ವಾರಂ ಧರ್ಮಮಾಹುರ್ಮನೀಷಿಣಃ।
13023018c ಕಿಂ ನಿಶ್ಚಿತಂ ಭವೇತ್ತತ್ರ ತನ್ಮೇ ಬ್ರೂಹಿ ಪಿತಾಮಹ।।

ಯುಧಿಷ್ಠಿರನು ಹೇಳಿದನು: “ಪಿತಾಮಹ! ಧರ್ಮದ ಸಾಧನೆಗಳಿಗೂ ಮತ್ತು ಫಲಗಳಿಗೂ ಬಹುದ್ವಾರಗಳಿವೆಯೆಂದು ಮನೀಷಿಣರು ಹೇಳುತ್ತಾರೆ. ಈ ವಿಷಯದಲ್ಲಿ ನಿಶ್ಚಿತವಾದದ್ದು ಏನು ಎನ್ನುವುದನ್ನು ನನಗೆ ಹೇಳು.”

13023019 ಭೀಷ್ಮ ಉವಾಚ।
13023019a ಅಹಿಂಸಾ ಸತ್ಯಮಕ್ರೋಧ ಆನೃಶಂಸ್ಯಂ ದಮಸ್ತಥಾ।
13023019c ಆರ್ಜವಂ ಚೈವ ರಾಜೇಂದ್ರ ನಿಶ್ಚಿತಂ ಧರ್ಮಲಕ್ಷಣಮ್।।

ಭೀಷ್ಮನು ಹೇಳಿದನು: “ರಾಜೇಂದ್ರ! ಅಹಿಂಸೆ, ಸತ್ಯ, ಅಕ್ರೋಧ, ದಯೆ, ದಮ, ಸರಳತೆ – ಇವು ಧರ್ಮದ ನಿಶ್ಚಿತ ಲಕ್ಷಣಗಳು.

13023020a ಯೇ ತು ಧರ್ಮಂ ಪ್ರಶಂಸಂತಶ್ಚರಂತಿ ಪೃಥಿವೀಮಿಮಾಮ್।
13023020c ಅನಾಚರಂತಸ್ತದ್ಧರ್ಮಂ ಸಂಕರೇ ನಿರತಾಃ ಪ್ರಭೋ।।

ಪ್ರಭೋ! ಧರ್ಮವನ್ನು ಪ್ರಶಂಸಿಸುತ್ತಾ, ಅದರೆ ಅದೇ ಧರ್ಮವನ್ನು ಆಚರಿಸದೇ ಈ ಭೂಮಿಯಲ್ಲಿ ತಿರುಗಾಡುವವರು ಧರ್ಮಸಂಕರದಲ್ಲಿ ನಿರತರಾಗುತ್ತಾರೆ.

13023021a ತೇಭ್ಯೋ ರತ್ನಂ ಹಿರಣ್ಯಂ ವಾ ಗಾಮಶ್ವಾನ್ವಾ ದದಾತಿ ಯಃ।
13023021c ದಶ ವರ್ಷಾಣಿ ವಿಷ್ಠಾಂ ಸ ಭುಂಕ್ತೇ ನಿರಯಮಾಶ್ರಿತಃ।।

ಅವರಿಗೆ ರತ್ನ, ಹಿರಣ್ಯ, ಗೋವು ಅಥವಾ ಅಶ್ವಗಳನ್ನು ದಾನಮಾಡುವವನು ಹತ್ತುವರ್ಷಗಳು ನರಕದಲ್ಲಿದ್ದು ಅಮೇಧ್ಯವನ್ನು ತಿನ್ನುತ್ತಾನೆ.

13023022a ಮೇದಾನಾಂ ಪುಲ್ಕಸಾನಾಂ ಚ ತಥೈವಾಂತಾವಸಾಯಿನಾಮ್।
13023022c ಕೃತಂ ಕರ್ಮಾಕೃತಂ ಚಾಪಿ ರಾಗಮೋಹೇನ ಜಲ್ಪತಾಮ್।।

ಕರ್ಮಗಳನ್ನು ಮಾಡಲಿ ಅಥವಾ ಮಾಡದೇ ಇರಲಿ ಆದರೆ ರಾಗ-ಮೋಹಗಳಿಂದ ತಾವೇ ಶ್ರೇಷ್ಠರೆಂದು ಆತ್ಮಪ್ರಶಂಸೆ ಮಾಡಿಕೊಳ್ಳುವವರು ಸತ್ತಹಸುವಿನ ಮಾಂಸವನ್ನು ತಿನ್ನುವವರ, ಬ್ರಹ್ಮದ್ವೇಷಿಗಳ ಮತ್ತು ಚಮ್ಮಾರರ ಯೋನಿಗಳಲ್ಲಿ ಜನಿಸುತ್ತಾರೆ.

13023023a ವೈಶ್ವದೇವಂ ಚ ಯೇ ಮೂಢಾ ವಿಪ್ರಾಯ ಬ್ರಹ್ಮಚಾರಿಣೇ।
13023023c ದದತೀಹ ನ ರಾಜೇಂದ್ರ ತೇ ಲೋಕಾನ್ಭುಂಜತೇಽಶುಭಾನ್।।

ರಾಜೇಂದ್ರ! ಬ್ರಹ್ಮಚಾರಿಣೀ ವಿಪ್ರರಿಗೆ ವೈಶ್ವದೇವದ ಅನ್ನವನ್ನು ಕೊಡದ ಮೂಢನು ಅಶುಭ ಲೋಕಗಳನ್ನು ಅನುಭವಿಸುತ್ತಾನೆ.”

13023024 ಯುಧಿಷ್ಠಿರ ಉವಾಚ।
13023024a ಕಿಂ ಪರಂ ಬ್ರಹ್ಮಚರ್ಯಸ್ಯ ಕಿಂ ಪರಂ ಧರ್ಮಲಕ್ಷಣಮ್।
13023024c ಕಿಂ ಚ ಶ್ರೇಷ್ಠತಮಂ ಶೌಚಂ ತನ್ಮೇ ಬ್ರೂಹಿ ಪಿತಾಮಹ।।

ಯುಧಿಷ್ಠಿರನು ಹೇಳಿದನು: “ಪಿತಾಮಹ! ಪರಮ ಬ್ರಹ್ಮಚರ್ಯವು ಯಾವುದು? ಪರಮ ಧರ್ಮಲಕ್ಷಣವು ಯಾವುದು? ಎಲ್ಲಕ್ಕಿಂತಲೂ ಶ್ರೇಷ್ಠ ಶೌಚವು ಯಾವುದು? ಅದನ್ನು ನನಗೆ ಹೇಳು.”

13023025 ಭೀಷ್ಮ ಉವಾಚ।
13023025a ಬ್ರಹ್ಮಚರ್ಯಂ ಪರಂ ತಾತ ಮಧುಮಾಂಸಸ್ಯ ವರ್ಜನಮ್।
13023025c ಮರ್ಯಾದಾಯಾಂ ಸ್ಥಿತೋ ಧರ್ಮಃ ಶಮಃ ಶೌಚಸ್ಯ ಲಕ್ಷಣಮ್।।

ಭೀಷ್ಮನು ಹೇಳಿದನು: “ಮಗೂ! ಮಧು-ಮಾಂಸಗಳ ವರ್ಜನೆಯೇ ಪರಮ ಬ್ರಹ್ಮಚರ್ಯವು. ಮರ್ಯಾದೆಗಳೊಳಗೆ ಇರುವುದೇ ಧರ್ಮ. ಮನಸ್ಸು-ಇಂದ್ರಿಯಗಳ ಸಂಯಮ ಶಮವೇ ಶೌಚದ ಲಕ್ಷಣ.”

13023026 ಯುಧಿಷ್ಠಿರ ಉವಾಚ।
13023026a ಕಸ್ಮಿನ್ಕಾಲೇ ಚರೇದ್ಧರ್ಮಂ ಕಸ್ಮಿನ್ಕಾಲೇಽರ್ಥಮಾಚರೇತ್।
13023026c ಕಸ್ಮಿನ್ಕಾಲೇ ಸುಖೀ ಚ ಸ್ಯಾತ್ತನ್ಮೇ ಬ್ರೂಹಿ ಪಿತಾಮಹ।।

ಯುಧಿಷ್ಠಿರನು ಹೇಳಿದನು: “ಪಿತಾಮಹ! ಯಾವಕಾಲದಲ್ಲಿ ಧರ್ಮವನ್ನು ಆಚರಿಸಬೇಕು? ಯಾವ ಕಾಲದಲ್ಲಿ ಅರ್ಥವನ್ನು ಸಂಗ್ರಹಿಸಬೇಕು? ಯಾವ ಕಾಲದಲ್ಲಿ ಸುಖವನ್ನು ಬಯಸಬೇಕು? ಅದನ್ನು ನನಗೆ ಹೇಳು.”

13023027 ಭೀಷ್ಮ ಉವಾಚ।
13023027a ಕಾಲ್ಯಮರ್ಥಂ ನಿಷೇವೇತ ತತೋ ಧರ್ಮಮನಂತರಮ್।
13023027c ಪಶ್ಚಾತ್ಕಾಮಂ ನಿಷೇವೇತ ನ ಚ ಗಚ್ಚೇತ್ಪ್ರಸಂಗಿತಾಮ್।।

ಭೀಷ್ಮನು ಹೇಳಿದನು: “ಪೂರ್ವಾಹ್ಣದಲ್ಲಿ ಧನವನ್ನು ಸಂಗ್ರಹಿಸಬೇಕು. ಅನಂತರ ಧರ್ಮಾಚರಣೆಯನ್ನು ಮಾಡಬೇಕು. ಬಳಿಕ ಸುಖಪಡಬೇಕು. ಆದರೆ ಸುಖಕ್ಕೇ ಅಂಟಿಕೊಂಡಿರಬಾರದು.

13023028a ಬ್ರಾಹ್ಮಣಾಂಶ್ಚಾಭಿಮನ್ಯೇತ ಗುರೂಂಶ್ಚಾಪ್ಯಭಿಪೂಜಯೇತ್।
13023028c ಸರ್ವಭೂತಾನುಲೋಮಶ್ಚ ಮೃದುಶೀಲಃ ಪ್ರಿಯಂವದಃ।।

ಬ್ರಾಹ್ಮಣರನ್ನು ಗೌರವಿಸಬೇಕು. ಹಿರಿಯರನ್ನು ಪೂಜಿಸಬೇಕು. ಸರ್ವಭೂತಗಳಿಗೂ ಅನುಕೂಲನಾಗಿರಬೇಕು. ಮೃದುಶೀಲನೂ ಪ್ರಿಯಂವದನೂ ಆಗಿರಬೇಕು.

13023029a ಅಧಿಕಾರೇ ಯದನೃತಂ ರಾಜಗಾಮಿ ಚ ಪೈಶುನಮ್।
13023029c ಗುರೋಶ್ಚಾಲೀಕಕರಣಂ ಸಮಂ ತದ್ಬ್ರಹ್ಮಹತ್ಯಯಾ।।

ಅಧಿಕಾರದಲ್ಲಿದ್ದುಕೊಂಡು ಸುಳ್ಳುಹೇಳುವುದು, ರಾಜನಿಗೆ ಬೇರೊಬ್ಬರ ಮೇಲೆ ಚಾಡಿಹೇಳುವುದು, ಗುರುವಿನೊಂದಿಗೆ ಅಸತ್ಯವಾಗಿ ವ್ಯವಹರಿಸುವುದು ಇವು ಬ್ರಹ್ಮಹತ್ಯೆಗೆ ಸಮ.

13023030a ಪ್ರಹರೇನ್ನ ನರೇಂದ್ರೇಷು ನ ಗಾಂ ಹನ್ಯಾತ್ತಥೈವ ಚ।
13023030c ಭ್ರೂಣಹತ್ಯಾಸಮಂ ಚೈತದುಭಯಂ ಯೋ ನಿಷೇವತೇ।।

ರಾಜರಿಗೆ ಹೊಡೆಯಬಾರದು. ಗೋವುಗಳನ್ನು ಕೊಲ್ಲಬಾರದು. ಈ ಎರಡನ್ನೂ ಮಾಡುವವನು ಭ್ರೂಣಹತ್ಯೆಗೆ ಸಮನಾದ ಪಾಪವನ್ನು ಅನುಭವಿಸುವನು.

13023031a ನಾಗ್ನಿಂ ಪರಿತ್ಯಜೇಜ್ಜಾತು ನ ಚ ವೇದಾನ್ಪರಿತ್ಯಜೇತ್।
13023031c ನ ಚ ಬ್ರಾಹ್ಮಣಮಾಕ್ರೋಶೇತ್ಸಮಂ ತದ್ಬ್ರಹ್ಮಹತ್ಯಯಾ।।

ಅಗ್ನಿಕಾರ್ಯಗಳನ್ನು ಬಿಡಬಾರದು. ವೇದಾಧ್ಯಯನವನ್ನು ನಿಲ್ಲಿಸಬಾರದು. ಬ್ರಾಹ್ಮಣರನ್ನು ನಿಂದಿಸಬಾರದು. ಇವು ಬ್ರಹ್ಮಹತ್ಯೆಗೆ ಸಮ.”

13023032 ಯುಧಿಷ್ಠಿರ ಉವಾಚ।
13023032a ಕೀದೃಶಾಃ ಸಾಧವೋ ವಿಪ್ರಾಃ ಕೇಭ್ಯೋ ದತ್ತಂ ಮಹಾಫಲಮ್।
13023032c ಕೀದೃಶಾನಾಂ ಚ ಭೋಕ್ತವ್ಯಂ ತನ್ಮೇ ಬ್ರೂಹಿ ಪಿತಾಮಹ।।

ಯುಧಿಷ್ಠಿರನು ಹೇಳಿದನು: “ಪಿತಾಮಹ! ಸಾಧು ವಿಪ್ರರು ಹೇಗಿರುತ್ತಾರೆ? ಯಾರಿಗೆ ಕೊಟ್ಟ ದಾನವು ಹೆಚ್ಚಿನ ಫಲವನ್ನು ನೀಡುತ್ತದೆ? ಎಂಥವರಿಗೆ ಭೋಜನವನ್ನು ನೀಡಬೇಕು. ಅದನ್ನು ನನಗೆ ಹೇಳು.”

13023033 ಭೀಷ್ಮ ಉವಾಚ।
13023033a ಅಕ್ರೋಧನಾ ಧರ್ಮಪರಾಃ ಸತ್ಯನಿತ್ಯಾ ದಮೇ ರತಾಃ।
13023033c ತಾದೃಶಾಃ ಸಾಧವೋ ವಿಪ್ರಾಸ್ತೇಭ್ಯೋ ದತ್ತಂ ಮಹಾಫಲಮ್।।

ಭೀಷ್ಮನು ಹೇಳಿದನು: “ಕ್ರೋಧಗೊಳ್ಳದಿರುವ ಧರ್ಮಪರ ಸತ್ಯನಿತ್ಯ ಇಂದ್ರಿಯನಿಗ್ರಹಿ ವಿಪ್ರರು ಸಾಧುಗಳು. ಅವರಿಗೆ ಕೊಟ್ಟ ದಾನವು ಹೆಚ್ಚಿನ ಫಲವನ್ನು ನೀಡುತ್ತದೆ.

13023034a ಅಮಾನಿನಃ ಸರ್ವಸಹಾ ದೃಷ್ಟಾರ್ಥಾ ವಿಜಿತೇಂದ್ರಿಯಾಃ।
13023034c ಸರ್ವಭೂತಹಿತಾ ಮೈತ್ರಾಸ್ತೇಭ್ಯೋ ದತ್ತಂ ಮಹಾಫಲಮ್।।

ದುರಭಿಮಾನಿಯಾಗಿರದ, ಸರ್ವವನ್ನೂ ಸಹಿಸಿಕೊಳ್ಳುವ, ಅರ್ಥವನ್ನು ಕಂಡುಕೊಂಡಿರುವ, ವಿಜಿತೇಂದ್ರಿಯರಾದ, ಸರ್ವಭೂತಗಳ ಹಿತಾಸಕ್ತರೂ ಮಿತ್ರರೂ ಆದವರಿಗೆ ಕೊಟ್ಟ ದಾನವು ಅಧಿಕ ಫಲವನ್ನು ನೀಡುತ್ತದೆ.

13023035a ಅಲುಬ್ಧಾಃ ಶುಚಯೋ ವೈದ್ಯಾ ಹ್ರೀಮಂತಃ ಸತ್ಯವಾದಿನಃ।
13023035c ಸ್ವಕರ್ಮನಿರತಾ ಯೇ ಚ ತೇಭ್ಯೋ ದತ್ತಂ ಮಹಾಫಲಮ್।।

ಲುಬ್ಧರಲ್ಲದ, ಶುಚಿಗಳಾದ, ವಿದ್ಯಾವಂತರಾದ, ಲಜ್ಜಾಸ್ವಭಾವದ, ಸತ್ಯವಾದಿಗಳೂ ಮತ್ತು ಸ್ವಕರ್ಮನಿರತರೂ ಆದವರಿಗೆ ಕೊಟ್ಟ ದಾನವು ಮಹಾಫಲವನ್ನು ನೀಡುತ್ತದೆ.

13023036a ಸಾಂಗಾಂಶ್ಚ ಚತುರೋ ವೇದಾನ್ಯೋಽಧೀಯೀತ ದ್ವಿಜರ್ಷಭಃ।
13023036c ಷಡ್ಭ್ಯೋ ನಿವೃತ್ತಃ ಕರ್ಮಭ್ಯಸ್ತಂ ಪಾತ್ರಮೃಷಯೋ ವಿದುಃ।।

ಅಂಗಗಳೊಂದಿಗೆ ನಾಲ್ಕೂ ವೇದಗಳನ್ನು ಅಧ್ಯಯನಮಾಡಿರುವ ಮತ್ತು ಷಟ್ಕರ್ಮ10ಗಳಲ್ಲಿ ನಿರತನಾಗಿರುವ ದ್ವಿಜರ್ಷಭನು ದಾನಗಳಿಗೆ ಪಾತ್ರನೆಂದು ಋಷಿಗಳು ತಿಳಿದುಕೊಂಡಿದ್ದಾರೆ.

13023037a ಯೇ ತ್ವೇವಂಗುಣಜಾತೀಯಾಸ್ತೇಭ್ಯೋ ದತ್ತಂ ಮಹಾಫಲಮ್।
13023037c ಸಹಸ್ರಗುಣಮಾಪ್ನೋತಿ ಗುಣಾರ್ಹಾಯ ಪ್ರದಾಯಕಃ।।

ಈ ಹಿಂದೆ ಹೇಳಿದ ಗುಣ-ಗುಂಪುಗಳಿರುವ ಗುಣಾರ್ಹನಿಗೆ ಕೊಡುವ ಮಹಾದಾನದ ಫಲವು ಸಹಸ್ರಪಟ್ಟಾಗುತ್ತದೆ.

13023038a ಪ್ರಜ್ಞಾಶ್ರುತಾಭ್ಯಾಂ ವೃತ್ತೇನ ಶೀಲೇನ ಚ ಸಮನ್ವಿತಃ।
13023038c ತಾರಯೇತ ಕುಲಂ ಕೃತ್ಸ್ನಮೇಕೋಽಪೀಹ ದ್ವಿಜರ್ಷಭಃ।।

ಉತ್ತಮ ಪ್ರಜ್ಞೆ, ಶಾಸ್ತ್ರಜ್ಞಾನ, ಸದಾಚಾರ ಮತ್ತು ಸೌಶೀಲ್ಯ – ಇವುಗಳಿಂದ ಸಂಪನ್ನನಾದ ಬ್ರಾಹ್ಮಣಶ್ರೇಷ್ಠನು ದಾನಕೊಟ್ಟವನ ಕುಲವನ್ನೇ ಉದ್ಧಾರಮಾಡುತ್ತಾನೆ.

13023039a ಗಾಮಶ್ವಂ ವಿತ್ತಮನ್ನಂ ವಾ ತದ್ವಿಧೇ ಪ್ರತಿಪಾದಯೇತ್।
13023039c ದ್ರವ್ಯಾಣಿ ಚಾನ್ಯಾನಿ ತಥಾ ಪ್ರೇತ್ಯಭಾವೇ ನ ಶೋಚತಿ।।

ಆಂಥಹವನಿಗೆ ಗೋವನ್ನಾಗಲೀ, ಕುದುರೆಯನ್ನಾಗಲೀ, ವಿತ್ತವನ್ನಾಗಲೀ ಅಥವಾ ಅನ್ಯ ದ್ರವ್ಯಗಳನ್ನಾಗಲೀ ನೀಡುವುದರಿಂದ ಮರಣಾನಂತರ ದುಃಖಪಡಬೇಕಾಗುವುದಿಲ್ಲ.

13023040a ತಾರಯೇತ ಕುಲಂ ಕೃತ್ಸ್ನಮೇಕೋಽಪೀಹ ದ್ವಿಜೋತ್ತಮಃ।
13023040c ಕಿಮಂಗ ಪುನರೇಕಂ ವೈ ತಸ್ಮಾತ್ಪಾತ್ರಂ ಸಮಾಚರೇತ್।।

ಅಂಥಹ ಒಬ್ಬ ದ್ವಿಜೋತ್ತಮನೇ ದಾನವನ್ನು ನೀಡಿದವನ ಕುಲ ಸರ್ವವನ್ನೂ ಉದ್ಧರಿಸುತ್ತಾನೆಂದ ಮೇಲೆ ಅಂಥಹ ಅನೇಕ ಬ್ರಾಹ್ಮಣರ ವಿಷಯದಲ್ಲಿ ಹೇಳುವುದೇನಿದೆ? ಆದುದರಿಂದ ಸತ್ಪಾತ್ರರನ್ನು ಹುಡುಕಿ ದಾನಮಾಡಬೇಕು.

13023041a ನಿಶಮ್ಯ ಚ ಗುಣೋಪೇತಂ ಬ್ರಾಹ್ಮಣಂ ಸಾಧುಸಂಮತಮ್।
13023041c ದೂರಾದಾನಾಯಯೇತ್ಕೃತ್ಯೇ ಸರ್ವತಶ್ಚಾಭಿಪೂಜಯೇತ್।।

ಬ್ರಾಹ್ಮಣನು ಗುಣೋಪೇತನೂ ಸಾಧುಸಮ್ಮತನೂ ಎನ್ನುವುದನ್ನು ಕೇಳಿ ಅವನು ದೂರದಲ್ಲಿದ್ದರೂ ಕರೆತರಿಸಿ ಸರ್ವತಃ ಪೂಜಿಸಬೇಕು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಬಹುಪ್ರಾಶ್ನಿಕೇ ತ್ರ್ಯೋವಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಬಹುಪ್ರಾಶ್ನಿಕ ಎನ್ನುವ ಇಪ್ಪತ್ಮೂರನೇ ಅಧ್ಯಾಯವು.


  1. ದಂಡ-ಕಮಂಡಲು ಮೊದಲಾದ ಚಿಹ್ನೆಗಳಿರುವ ಬ್ರಹ್ಮಚಾರಿಯನ್ನೋ ಅಥವಾ ಯಾವುದೇ ಚಿಹ್ನೆಗಳಿಲ್ಲದ ಗೃಹಸ್ಥನನ್ನೋ? (ಭಾರತ ದರ್ಶನ). ↩︎

  2. ಅಂದರೆ ಆಶ್ರಮಧರ್ಮವನ್ನು ಆಧರಿಸಿ (ಭಾರತ ದರ್ಶನ). ↩︎

  3. ಮನುಸ್ಮೃತಿಯಲ್ಲಿ ಈ ಅಭಿಪ್ರಾಯವಿದೆ: ನ ಬ್ರಾಹ್ಮಣಂ ಪರೀಕ್ಷೇತ ದೈವೇ ಕರ್ಮಣಿ ಧರ್ಮವಿತ್। ಪಿತ್ರ್ಯೇ ಕರ್ಮಣಿ ತು ಪ್ರಾಪ್ತೇ ಪರೀಕ್ಷೇತ ಪ್ರಯತ್ನತಃ।। (ಭಾರತ ದರ್ಶನ). ↩︎

  4. ಆದರೆ ಶ್ರಾದ್ಧಾದಿ ಪಿತೃಕರ್ಮಗಳಲ್ಲಿ ಸಿದ್ಧಿಯು ಬ್ರಾಹ್ಮಣನ ಅಧೀನವಾಗಿರುತ್ತದೆ. ↩︎

  5. ಶ್ರಾದ್ಧಾದಿಗಳ ಸಿದ್ಧಿಯು ಸತ್ಪಾತ್ರ ಬ್ರಾಹ್ಮಣರನ್ನೇ ಅವಲಂಬಿಸಿದೆ. (ಭಾರತ ದರ್ಶನ) ↩︎

  6. ಯಾಜನ, ಅಧ್ಯಾಪನ ಮತ್ತು ಪ್ರತಿಗ್ರಹ. (ಭಾರತ ದರ್ಶನ). ↩︎

  7. ಶೀಲವೇ ಎಲ್ಲಕ್ಕಿಂತ ಉತ್ತಮ ಗುಣವು. (ಭಾರತ ದರ್ಶನ) ↩︎

  8. ಹನ್ನೆರಡು ವರ್ಷಪರ್ಯಂತ ಬ್ರಹ್ಮಚರ್ಯವ್ರತಾನುಷ್ಟಾನದಲ್ಲಿರುವಂತೆ ಗುರುವಿನ ಆದೇಶವಾಗಿರುವವರು ಆದಿಷ್ಟಿಗಳು. (ಭಾರತ ದರ್ಶನ). ↩︎

  9. 16 ಮತ್ತು 17ನೇ ಶ್ಲೋಕಗಳಲ್ಲಿ ಬಳಸಿರುವ ವ್ರತಿನಃ ಮತ್ತು ಆದಿಷ್ಟಿನಃ ಎಂಬ ಪದಗಳಿಗೆ ಬ್ರಹ್ಮಚಾರಿಗಳು ಎಂದು ಅರ್ಥೈಸಿದ್ದಾರೆ. “ಬ್ರಹ್ಮಚಾರಿಗಳಿಗೆ ಶ್ರಾದ್ಧಭೋಜನವನ್ನು ನೀಡಬಹುದೇ?” ಎನ್ನುವ ಪ್ರಶ್ನೆಗೆ “ನೀಡಬಹುದು, ಆದರೆ ಅವರ ಬ್ರಹ್ಮಚರ್ಯವ್ರತಕ್ಕೆ ಲೋಪವಾಗುತ್ತದೆ” ಎಂಬ ಉತ್ತರವಿದೆ. ಸಾಂಪ್ರದಾಯಿಕವಾಗಿ ಶ್ರಾದ್ಧಕರ್ಮಗಳಿಗೆ ಬ್ರಹ್ಮಚಾರಿಗಳನ್ನು ಆಮಂತ್ರಿಸುವುದಿಲ್ಲ. (ಭಾರತ ದರ್ಶನ) ↩︎

  10. ಯಜನ-ಯಾಜನ, ಅಧ್ಯಯನ-ಅಧ್ಯಾಪನ ಮತ್ತು ದಾನ-ಪ್ರತಿಗ್ರಹಗಳೇ ಬ್ರಾಹ್ಮಣರ ಷಟ್ಕರ್ಮಗಳು. (ಭಾರತ ದರ್ಶನ) ↩︎