022: ಅಷ್ಟಾವಕ್ರಾದಿಕ್ಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 22

ಸಾರ

ಸ್ತ್ರೀಯು ತಾನು ಉತ್ತರ ದಿಶೆಯೆಂದೂ, ವದಾನ್ಯನ ಕೋರಿಕೆಯಂತೆ ತಾನು ಅಷ್ಟಾವಕ್ರನನ್ನು ಪರೀಕ್ಷಿಸಿದಳೆಂದು ಹೇಳಲು ಅಷ್ಟಾವಕ್ರನು ಅವಳ ಅನುಜ್ಞೆಯನ್ನು ಪಡೆದು ಹಿಂದಿರುಗಿದುದು (1-12). ವದಾನ್ಯನ ಕನ್ಯೆಯೊಡನೆ ವಿವಾಹವಾಗಿ ಅಷ್ಟಾವಕ್ರನು ಸಂತೋಷಹೊಂದಿದುದು (13-19).

13022001 ಯುಧಿಷ್ಠಿರ ಉವಾಚ।
13022001a ನ ಬಿಭೇತಿ ಕಥಂ ಸಾ ಸ್ತ್ರೀ ಶಾಪಸ್ಯ ಪರಮದ್ಯುತೇಃ।
13022001c ಕಥಂ ನಿವೃತ್ತೋ ಭಗವಾಂಸ್ತದ್ಭವಾನ್ಪ್ರಬ್ರವೀತು ಮೇ।।

ಯುಧಿಷ್ಠಿರನು ಹೇಳಿದನು: “ಸ್ತ್ರೀಯು ಆ ಪರಮದ್ಯುತಿಯ ಶಾಪಕ್ಕೆ ಹೇಗೆ ಭಯಪಡಲಿಲ್ಲ? ಭಗವಾನ್ ಅಷ್ಟಾವಕ್ರನಾದರೂ ಅಲ್ಲಿಂದ ಹೇಗೆ ಹಿಂದಿರುಗಿದನು ಎನ್ನುವುದನ್ನು ಹೇಳು.”

13022002 ಭೀಷ್ಮ ಉವಾಚ।
13022002a ಅಷ್ಟಾವಕ್ರೋಽನ್ವಪೃಚ್ಚತ್ತಾಂ ರೂಪಂ ವಿಕುರುಷೇ ಕಥಮ್।
13022002c ನ ಚಾನೃತಂ ತೇ ವಕ್ತವ್ಯಂ ಬ್ರೂಹಿ ಬ್ರಾಹ್ಮಣಕಾಮ್ಯಯಾ।।

ಭೀಷ್ಮನು ಹೇಳಿದನು: “ಅಷ್ಟಾವಕ್ರನು ಅವಳನ್ನು ಕೇಳಿದನು: “ನಿನ್ನ ರೂಪವನ್ನು ಹೇಗೆ ಬದಲಾಯಿಸಿಕೊಂಡೆ? ಬ್ರಾಹ್ಮಣನ ಇಚ್ಛೆಯಂತೆ ಸುಳ್ಳನ್ನು ಹೇಳಬೇಡ. ನಿಜವನ್ನು ಹೇಳು!”

13022003 ಸ್ತ್ರ್ಯುವಾಚ।
13022003a ದ್ಯಾವಾಪೃಥಿವೀಮಾತ್ರೈಷಾ ಕಾಮ್ಯಾ ಬ್ರಾಹ್ಮಣಸತ್ತಮ।
13022003c ಶೃಣುಷ್ವಾವಹಿತಃ ಸರ್ವಂ ಯದಿದಂ ಸತ್ಯವಿಕ್ರಮ।।

ಸ್ತ್ರೀಯು ಹೇಳಿದಳು: “ಬ್ರಾಹ್ಮಣಸತ್ತಮ! ಸತ್ಯವಿಕ್ರಮ! ದಿವಿಯಲ್ಲಾಗಲೀ ಪೃಥ್ವಿಯಲ್ಲಾಗಲೀ ಕಾಮವಿರುತ್ತದೆ. ಇದರ ಕುರಿತು ಎಲ್ಲವನ್ನೂ ವಿಹಿತನಾಗಿ ಕೇಳು.

13022004a ಉತ್ತರಾಂ ಮಾಂ ದಿಶಂ ವಿದ್ಧಿ ದೃಷ್ಟಂ ಸ್ತ್ರೀಚಾಪಲಂ ಚ ತೇ।
13022004c ಅವ್ಯುತ್ಥಾನೇನ ತೇ ಲೋಕಾ ಜಿತಾಃ ಸತ್ಯಪರಾಕ್ರಮ।।

ಸತ್ಯಪರಾಕ್ರಮ! ನಾನು ಉತ್ತರ ದಿಶೆಯೆಂದು ತಿಳಿ. ಸ್ತ್ರೀಯ ಚಪಲತೆಯನ್ನು ನೀನು ನೋಡಿರುವೆ. ಆದರೂ ಸ್ವೇಚ್ಛಾಚಾರಿಯಾಗದೇ ಇದ್ದೆಯಾದುದರಿಂದ ಪುಣ್ಯಲೋಕಗಳನ್ನು ನೀನು ಜಯಿಸಿರುವೆ.

13022005a ಜಿಜ್ಞಾಸೇಯಂ ಪ್ರಯುಕ್ತಾ ಮೇ ಸ್ಥಿರೀಕರ್ತುಂ ತವಾನಘ।
13022005c ಸ್ಥವಿರಾಣಾಮಪಿ ಸ್ತ್ರೀಣಾಂ ಬಾಧತೇ ಮೈಥುನಜ್ವರಃ।।

ಅನಘ! ನಿನ್ನ ಮನಸ್ಸನ್ನು ಸ್ಥಿರೀಕರಿಸುವ ಸಲುವಾಗಿ ನಾನೇ ಈ ಜಿಜ್ಞಾಸೆಯನ್ನು ಏರ್ಪಡಿಸಿದೆ. ವೃದ್ಧೆಯರಾದರೂ ಮೈಥುನಜ್ವರವು ಸ್ತ್ರೀಯರನ್ನು ಬಾಧಿಸುತ್ತದೆ.

13022006a ತುಷ್ಟಃ ಪಿತಾಮಹಸ್ತೇಽದ್ಯ ತಥಾ ದೇವಾಃ ಸವಾಸವಾಃ।
13022006c ಸ ತ್ವಂ ಯೇನ ಚ ಕಾರ್ಯೇಣ ಸಂಪ್ರಾಪ್ತೋ ಭಗವಾನಿಹ।।

ಇಂದು ಪಿತಾಮಹನು ನಿನ್ನ ಮೇಲೆ ಸಂತುಷ್ಟನಾಗಿದ್ದಾನೆ. ಹಾಗೆಯೇ ವಾಸವನೊಂದಿಗೆ ದೇವತೆಗಳೂ ಸಂತುಷ್ಟರಾಗಿದ್ದಾರೆ. ಭಗವಾನ್! ನೀನು ಯಾವ ಕಾರ್ಯದಿಂದ ಇಲ್ಲಿಗೆ ಬಂದಿದ್ದೆಯೋ ಅದು ಸಫಲವಾಗಿದೆ.

13022007a ಪ್ರೇಷಿತಸ್ತೇನ ವಿಪ್ರೇಣ ಕನ್ಯಾಪಿತ್ರಾ ದ್ವಿಜರ್ಷಭ।
13022007c ತವೋಪದೇಶಂ ಕರ್ತುಂ ವೈ ತಚ್ಚ ಸರ್ವಂ ಕೃತಂ ಮಯಾ।।

ದ್ವಿಜರ್ಷಭ! ನಿನಗೆ ಉಪದೇಶವನ್ನು ನೀಡಬೇಕೆಂದು ಕನ್ಯಾಪಿತ್ರ ವಿಪ್ರನು ನಿನ್ನನ್ನು ಇಲ್ಲಿಗೆ ಕಳುಹಿಸಿದ್ದನು. ನಾನು ಅವೆಲ್ಲವನ್ನೂ ಮಾಡಿದ್ದೇನೆ.

13022008a ಕ್ಷೇಮೀ ಗಮಿಷ್ಯಸಿ ಗೃಹಾನ್ಶ್ರಮಶ್ಚ ನ ಭವಿಷ್ಯತಿ।
13022008c ಕನ್ಯಾಂ ಪ್ರಾಪ್ಸ್ಯಸಿ ತಾಂ ವಿಪ್ರ ಪುತ್ರಿಣೀ ಚ ಭವಿಷ್ಯತಿ।।

ಕ್ಷೇಮದಿಂದ ನೀನು ನಿನ್ನ ಮನೆಗೆ ಹಿಂದಿರುಗುತ್ತೀಯೆ. ನಿನಗೆ ಶ್ರಮವೂ ಉಂಟಾಗುವುದಿಲ್ಲ. ವಿಪ್ರ! ಆ ಕನ್ಯೆಯನ್ನು ಪಡೆದುಕೊಳ್ಳುತ್ತೀಯೆ ಮತ್ತು ಅವಳು ಪುತ್ರವತಿಯೂ ಆಗುತ್ತಾಳೆ.

13022009a ಕಾಮ್ಯಯಾ ಪೃಷ್ಟವಾಂಸ್ತ್ವಂ ಮಾಂ ತತೋ ವ್ಯಾಹೃತಮುತ್ತರಮ್।
13022009c ಅನತಿಕ್ರಮಣೀಯೈಷಾ ಕೃತ್ಸ್ನೈರ್ಲೋಕೈಸ್ತ್ರಿಭಿಃ ಸದಾ।।

ತಿಳಿಯಬೇಕೆಂದು ಬಯಸಿ ನೀನು ನನ್ನನ್ನು ಕೇಳಿದ್ದೀಯೆ. ನಾನು ಅದಕ್ಕೆ ಉತ್ತರಿಸಿದ್ದೇನೆ. ಸದಾ ಈ ಮೂರು ಲೋಕಗಳಲ್ಲಿಯೂ ಬ್ರಾಹ್ಮಣನ ಆದೇಶವನ್ನು ಅನತಿಕ್ರಮಿಸಬಾರದು.

13022010a ಗಚ್ಚಸ್ವ ಸುಕೃತಂ ಕೃತ್ವಾ ಕಿಂ ವಾನ್ಯಚ್ಛ್ರೋತುಮಿಚ್ಚಸಿ।
13022010c ಯಾವದ್ಬ್ರವೀಮಿ ವಿಪ್ರರ್ಷೇ ಅಷ್ಟಾವಕ್ರ ಯಥಾತಥಮ್।।

ಉತ್ತಮವಾದುದನ್ನೇ ಮಾಡಿರುವೆ. ಹೋಗು. ಅಥವಾ ಬೇರೆ ಎನನ್ನಾದರೂ ಕೇಳಬಯಸುತ್ತೀಯಾ? ವಿಪ್ರರ್ಷೇ! ಅಷ್ಟಾವಕ್ರ! ಯಥಾವತ್ತಾಗಿ ನಾನು ನಿನಗೆ ಹೇಳುತ್ತೇನೆ.

13022011a ಋಷಿಣಾ ಪ್ರಸಾದಿತಾ ಚಾಸ್ಮಿ ತವ ಹೇತೋರ್ದ್ವಿಜರ್ಷಭ।
13022011c ತಸ್ಯ ಸಂಮಾನನಾರ್ಥಂ ಮೇ ತ್ವಯಿ ವಾಕ್ಯಂ ಪ್ರಭಾಷಿತಮ್।।

ದ್ವಿಜರ್ಷಭ! ನಿನ್ನ ಸಲುವಾಗಿಯೇ ಋಷಿ ವದಾನ್ಯನು ನನ್ನನ್ನು ಪ್ರಸನ್ನಗೊಳಿಸಿದ್ದನು. ಅವನನ್ನು ಗೌರವಿಸುವ ಸಲುವಾಗಿಯೇ ನಾನು ನಿನಗೆ ಎಲ್ಲ ವಿಷಯಗಳನ್ನೂ ಹೇಳಿದ್ದೇನೆ.”

13022012a ಶ್ರುತ್ವಾ ತು ವಚನಂ ತಸ್ಯಾಃ ಸ ವಿಪ್ರಃ ಪ್ರಾಂಜಲಿಃ ಸ್ಥಿತಃ।
13022012c ಅನುಜ್ಞಾತಸ್ತಯಾ ಚಾಪಿ ಸ್ವಗೃಹಂ ಪುನರಾವ್ರಜತ್।।

ಅವಳ ಆ ಮಾತನ್ನು ಕೇಳಿ ವಿಪ್ರನು ಕೈಮುಗಿದು ನಿಂತನು. ಅವಳಿಂದ ಅನುಜ್ಞೆಯನ್ನು ಪಡೆದು ಸ್ವಗೃಹಕ್ಕೆ ಮರಳಿದನು.

13022013a ಗೃಹಮಾಗಮ್ಯ ವಿಶ್ರಾಂತಃ ಸ್ವಜನಂ ಪ್ರತಿಪೂಜ್ಯ ಚ।
13022013c ಅಭ್ಯಗಚ್ಚತ ತಂ ವಿಪ್ರಂ ನ್ಯಾಯತಃ ಕುರುನಂದನ।।

ಕುರುನಂದನ! ಮನೆಗೆ ಬಂದು ವಿಶ್ರಾಂತಿಯನ್ನು ಪಡೆದು ಸ್ವಜನರನ್ನು ಪೂಜಿಸಿ ನ್ಯಾಯತಃ ವಿಪ್ರ ವದಾನ್ಯನಲ್ಲಿಗೆ ಹೋದನು.

13022014a ಪೃಷ್ಟಶ್ಚ ತೇನ ವಿಪ್ರೇಣ ದೃಷ್ಟಂ ತ್ವೇತನ್ನಿದರ್ಶನಮ್।
13022014c ಪ್ರಾಹ ವಿಪ್ರಂ ತದಾ ವಿಪ್ರಃ ಸುಪ್ರೀತೇನಾಂತರಾತ್ಮನಾ।।

ವಿಪ್ರ ವದಾನ್ಯನು ಕೇಳಲು ವಿಪ್ರ ಅಷ್ಟಾವಕ್ರನು ಪ್ರಸನ್ನಚಿತ್ತನಾಗಿ ತನ್ನ ಪ್ರಯಾಣಕಾಲದಲ್ಲಿ ತಾನು ನೋಡಿದುದೆಲ್ಲವನ್ನೂ ಸಮಗ್ರವಾಗಿ ಹೇಳಲು ಉಪಕ್ರಮಿಸಿದನು:

13022015a ಭವತಾಹಮನುಜ್ಞಾತಃ ಪ್ರಸ್ಥಿತೋ ಗಂಧಮಾದನಮ್।
13022015c ತಸ್ಯ ಚೋತ್ತರತೋ ದೇಶೇ ದೃಷ್ಟಂ ತದ್ದೈವತಂ ಮಹತ್।।

“ನಿನ್ನಿಂದ ಅನುಜ್ಞಾತನಾಗಿ ನಾನು ಗಂಧಮಾದನದ ಕಡೆ ಹೋದೆನು. ಅದರ ಉತ್ತರ ಪ್ರದೇಶದಲ್ಲಿ ನಾನು ಒಂದು ಮಹಾ ದೇವತೆಯನ್ನು ನೋಡಿದೆನು.

13022016a ತಯಾ ಚಾಹಮನುಜ್ಞಾತೋ ಭವಾಂಶ್ಚಾಪಿ ಪ್ರಕೀರ್ತಿತಃ।
13022016c ಶ್ರಾವಿತಶ್ಚಾಪಿ ತದ್ವಾಕ್ಯಂ ಗೃಹಮಭ್ಯಾಗತಃ ಪ್ರಭೋ।।

ಪ್ರಭೋ! ಅವಳ ವಾಕ್ಯವನ್ನು ಕೇಳಿದೆ. ಅವಳು ನಿನ್ನ ಕುರಿತು ಕೂಡ ಹೇಳಿದಳು. ಅವಳ ಅನುಜ್ಞೆಯನ್ನು ಪಡೆದು ಮನೆಗೆ ಹಿಂದಿರುಗಿದ್ದೇನೆ.”

13022017a ತಮುವಾಚ ತತೋ ವಿಪ್ರಃ ಪ್ರತಿಗೃಹ್ಣೀಷ್ವ ಮೇ ಸುತಾಮ್।
13022017c ನಕ್ಷತ್ರತಿಥಿಸಂಯೋಗೇ ಪಾತ್ರಂ ಹಿ ಪರಮಂ ಭವಾನ್।।

ಆಗ ವಿಪ್ರನು ಅವನಿಗೆ “ನಕ್ಷತ್ರತಿಥಿಸಂಯೋಗದಲ್ಲಿ ನನ್ನ ಸುತೆಯನ್ನು ಸ್ವೀಕರಿಸು! ನೀನು ಇದಕ್ಕೆ ಪರಮ ಪಾತ್ರನಾಗಿದ್ದೀಯೆ!” ಎಂದನು.”

13022018 ಭೀಷ್ಮ ಉವಾಚ।
13022018a ಅಷ್ಟಾವಕ್ರಸ್ತಥೇತ್ಯುಕ್ತ್ವಾ ಪ್ರತಿಗೃಹ್ಯ ಚ ತಾಂ ಪ್ರಭೋ।
13022018c ಕನ್ಯಾಂ ಪರಮಧರ್ಮಾತ್ಮಾ ಪ್ರೀತಿಮಾಂಶ್ಚಾಭವತ್ತದಾ।।

ಭೀಷ್ಮನು ಹೇಳಿದನು: “ಪ್ರಭೋ! ಹಾಗೆಯೇ ಆಗಲೆಂದು ಹೇಳಿ ಅಷ್ಟಾವಕ್ರನು ಆ ಕನ್ಯೆಯನ್ನು ಸ್ವೀಕರಿಸಿ ಪರಮಧರ್ಮಾತ್ಮನೂ ಪ್ರೀತಿಮಾನನೂ ಆದನು.

13022019a ಕನ್ಯಾಂ ತಾಂ ಪ್ರತಿಗೃಹ್ಯೈವ ಭಾರ್ಯಾಂ ಪರಮಶೋಭನಾಮ್।
13022019c ಉವಾಸ ಮುದಿತಸ್ತತ್ರ ಆಶ್ರಮೇ ಸ್ವೇ ಗತಜ್ವರಃ।।

ಆ ಪರಮ ಶೋಭನೆ ಕನ್ಯೆಯನ್ನು ಸ್ವೀಕರಿಸಿ ಮುದಿತನಾಗಿ ನಿಶ್ಚಿಂತನಾಗಿ ತನ್ನ ಆಶ್ರಮದಲ್ಲಿ ವಾಸಿಸಿದನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಅಷ್ಟಾವಕ್ರಾದಿಕ್ಸಂವಾದೇ ದ್ವಾವಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಅಷ್ಟಾವಕ್ರಾದಿಕ್ಸಂವಾದ ಎನ್ನುವ ಇಪ್ಪತ್ತೆರಡನೇ ಅಧ್ಯಾಯವು.