ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 21
ಸಾರ
ದಿನವಿಡೀ ಸ್ನಾನ-ಭೋಜನಗಳಲ್ಲಿ ನಿರತನಾಗಿದ್ದ ಅಷ್ಟಾವಕ್ರನನ್ನು ರಾತ್ರಿ ಪುನಃ ವೃದ್ಧಸ್ತ್ರೀಯು ಮೈಥುನಕ್ಕೆ ಕರೆಯಲು, ಅವನು ನಿರಾಕರಿಸಿದುದು (1-19). ವೃದ್ಧ ಸ್ತ್ರೀಯು ಸರ್ವಾಭರಣಭೂಷಿತಳಾದ ಕನ್ಯೆಯಾದುದನ್ನು ನೋಡಿದ ಅಷ್ಟಾವಕ್ರನು ವಿಸ್ಮಿತನಾದುದು (20-24).
13021001 ಭೀಷ್ಮ ಉವಾಚ।
13021001a ಅಥ ಸಾ ಸ್ತ್ರೀ ತಮುಕ್ತ್ವಾ ತು ವಿಪ್ರಮೇವಂ ಭವತ್ವಿತಿ।
13021001c ತೈಲಂ ದಿವ್ಯಮುಪಾದಾಯ ಸ್ನಾನಶಾಟೀಮುಪಾನಯತ್।।
ಭೀಷ್ಮನು ಹೇಳಿದನು: “ವಿಪ್ರ! ಹಾಗೆಯೇ ಮಾಡುತ್ತೇನೆ!” ಎಂದು ಹೇಳಿ ಆ ಸ್ತ್ರೀಯು ಅವನಿಗೆ ದಿವ್ಯ ತೈಲವನ್ನೂ ಸ್ನಾನದ ಪಂಚೆಯನ್ನೂ ತಂದಳು.
13021002a ಅನುಜ್ಞಾತಾ ಚ ಮುನಿನಾ ಸಾ ಸ್ತ್ರೀ ತೇನ ಮಹಾತ್ಮನಾ।
13021002c ಅಥಾಸ್ಯ ತೈಲೇನಾಂಗಾನಿ ಸರ್ವಾಣ್ಯೇವಾಭ್ಯಮೃಕ್ಷಯತ್।।
ಮುನಿಯ ಅನುಜ್ಞೆಯಂತೆ ಆ ಸ್ತ್ರೀಯು ಮಹಾತ್ಮನ ಸರ್ವ ಅಂಗಗಳಿಗೂ ತೈಲವನ್ನು ಹಚ್ಚಿದಳು.
13021003a ಶನೈಶ್ಚೋತ್ಸಾದಿತಸ್ತತ್ರ ಸ್ನಾನಶಾಲಾಮುಪಾಗಮತ್।
13021003c ಭದ್ರಾಸನಂ ತತಶ್ಚಿತ್ರಂ ಋಷಿರನ್ವಾವಿಶನ್ನವಮ್।।
ಮೆಲ್ಲನೇ ಅವನು ಎದ್ದು ಸ್ನಾನಶಾಲೆಗೆ ಹೋಗಲು ಅಲ್ಲಿ ಋಷಿಯು ತನಗಾಗಿ ಸಿದ್ಧವಾಗಿದ್ದ ಭದ್ರಾಸನವನ್ನು ನೋಡಿದನು.
13021004a ಅಥೋಪವಿಷ್ಟಶ್ಚ ಯದಾ ತಸ್ಮಿನ್ಭದ್ರಾಸನೇ ತದಾ।
13021004c ಸ್ನಾಪಯಾಮಾಸ ಶನಕೈಸ್ತಮೃಷಿಂ ಸುಖಹಸ್ತವತ್।
13021004e ದಿವ್ಯಂ ಚ ವಿಧಿವಚ್ಚಕ್ರೇ ಸೋಪಚಾರಂ ಮುನೇಸ್ತದಾ।।
ಅವನು ಆ ಭದ್ರಾಸನದಲ್ಲಿ ಕುಳಿತುಕೊಳ್ಳಲು ಸ್ತ್ರೀಯು ತನ್ನ ಸುಖಸ್ಪರ್ಶಿ ಕರಗಳಿಂದ ಮೆಲ್ಲ ಮೆಲ್ಲನೇ ಋಷಿಗೆ ಸ್ನಾನಮಾಡಿಸಿದಳು. ಹೀಗೆ ಅವಳು ವಿಧಿವತ್ತಾಗಿ ಮುನಿಯ ದಿವ್ಯ ಉಪಚಾರವನ್ನು ಮಾಡಿದಳು.
13021005a ಸ ತೇನ ಸುಸುಖೋಷ್ಣೇನ ತಸ್ಯಾ ಹಸ್ತಸುಖೇನ ಚ।
13021005c ವ್ಯತೀತಾಂ ರಜನೀಂ ಕೃತ್ಸ್ನಾಂ ನಾಜಾನಾತ್ಸ ಮಹಾವ್ರತಃ।।
ಹಿತಕರವಾದ ಬಿಸಿನೀರಿನ ಅಭ್ಯಂಜನದಿಂದಲೂ ಮತ್ತು ಅವಳ ಕೈಯ ಸ್ಪರ್ಶಸುಖದಿಂದ ಆ ಮಹಾವ್ರತನಿಗೆ ರಾತ್ರಿಯಿಡೀ ಕಳೆದು ಹೋದದ್ದೇ ತಿಳಿಯಲಿಲ್ಲ.
13021006a ತತ ಉತ್ಥಾಯ ಸ ಮುನಿಸ್ತದಾ ಪರಮವಿಸ್ಮಿತಃ।
13021006c ಪೂರ್ವಸ್ಯಾಂ ದಿಶಿ ಸೂರ್ಯಂ ಚ ಸೋಽಪಶ್ಯದುದಿತಂ ದಿವಿ।।
ಆಗ ಪರಮವಿಸ್ಮಿತನಾದ ಮುನಿಯು ಮೇಲೆದ್ದು ಪೂರ್ವದಿಕ್ಕಿನ ಆಗಸದಲ್ಲಿ ಉದಯಿಸುತ್ತಿರುವ ಸೂರ್ಯನನ್ನು ನೋಡಿದನು.
13021007a ತಸ್ಯ ಬುದ್ಧಿರಿಯಂ ಕಿಂ ನು ಮೋಹಸ್ತತ್ತ್ವಮಿದಂ ಭವೇತ್।
13021007c ಅಥೋಪಾಸ್ಯ ಸಹಸ್ರಾಂಶುಂ ಕಿಂ ಕರೋಮೀತ್ಯುವಾಚ ತಾಮ್।।
ತಾನೇನಾದರೂ ಮೋಹಿತನಾಗಿರುವನೇ ಎಂಬ ಸಂಶಯವು ಅವನ ಬುದ್ಧಿಯಲ್ಲಿ ಮೂಡಿತು. “ಸಹಸ್ರಾಂಶು ಸೂರ್ಯನು ಈಗಾಗಲೇ ಉದಯಿಸಿಬಿಟ್ಟಿದ್ದಾನೆ! ನಾನು ಏನು ಮಾಡಲಿ?” ಎಂದು ಸ್ತ್ರೀಯನ್ನು ಕೇಳಿದನು.
13021008a ಸಾ ಚಾಮೃತರಸಪ್ರಖ್ಯಮೃಷೇರನ್ನಮುಪಾಹರತ್।
13021008c ತಸ್ಯ ಸ್ವಾದುತಯಾನ್ನಸ್ಯ ನ ಪ್ರಭೂತಂ ಚಕಾರ ಸಃ।
13021008e ವ್ಯಗಮಚ್ಚಾಪ್ಯಹಃಶೇಷಂ ತತಃ ಸಂಧ್ಯಾಗಮತ್ಪುನಃ।।
ಆಗ ಅವಳು ಋಷಿಗೆ ಅಮೃತರಸಯುಕ್ತ ಭೋಜನವನ್ನು ಬಡಿಸಿದಳು. ಸ್ವಾದಯುಕ್ತವಾದ ಅವಳ ಭೋಜನಕ್ಕೆ ಸಾಕು ಅಥವಾ ಬೇಡ ಎಂದು ಅವನಿಗೆ ಹೇಳಲಿಕ್ಕೇ ಆಗಲಿಲ್ಲ. ಹೀಗೆ ಊಟಮಾಡುತ್ತಿರುವಾಗಲೇ ಪುನಃ ಸಂಧ್ಯಾಕಾಲವು ಪ್ರಾಪ್ತವಾಯಿತು.
13021009a ಅಥ ಸ್ತ್ರೀ ಭಗವಂತಂ ಸಾ ಸುಪ್ಯತಾಮಿತ್ಯಚೋದಯತ್।
13021009c ತತ್ರ ವೈ ಶಯನೇ ದಿವ್ಯೇ ತಸ್ಯ ತಸ್ಯಾಶ್ಚ ಕಲ್ಪಿತೇ।।
ಆಗ ಆ ಸ್ತ್ರೀಯು ಭಗವಂತನನ್ನು ಮಲಗಿಕೋ ಎಂದು ಪ್ರಚೋದಿಸಿದಳು. ಅಲ್ಲಿ ಅವನಿಗೆ ಮತ್ತು ಅವಳಿಗೆ ಪ್ರತ್ಯೇಕ ದಿವ್ಯ ಶಯನಗಳು ಸಿದ್ಧವಾಗಿದ್ದವು.
13021010 ಅಷ್ಟಾವಕ್ರ ಉವಾಚ।
13021010a ನ ಭದ್ರೇ ಪರದಾರೇಷು ಮನೋ ಮೇ ಸಂಪ್ರಸಜ್ಜತಿ।
13021010c ಉತ್ತಿಷ್ಠ ಭದ್ರೇ ಭದ್ರಂ ತೇ ಸ್ವಪ ವೈ ವಿರಮಸ್ವ ಚ।।
ಅಷ್ಟಾವಕ್ರನು ಹೇಳಿದನು: “ಭದ್ರೇ! ಪರಸತಿಯಲ್ಲಿ ನನ್ನ ಮನಸ್ಸು ಖಂಡಿತವಾಗಿಯೂ ಆಸಕ್ತವಾಗುವುದಿಲ್ಲ. ಭದ್ರೇ! ಏಳು. ನಿನಗೆ ಮಂಗಳವಾಗಲಿ. ನೀನೂ ಕೂಡ ಪಾಪಕರ್ಮದಿಂದ ವಿರತಳಾಗು!””
13021011 ಭೀಷ್ಮ ಉವಾಚ।
13021011a ಸಾ ತದಾ ತೇನ ವಿಪ್ರೇಣ ತಥಾ ಧೃತ್ಯಾ ನಿವರ್ತಿತಾ।
13021011c ಸ್ವತಂತ್ರಾಸ್ಮೀತ್ಯುವಾಚೈನಂ ನ ಧರ್ಮಚ್ಚಲಮಸ್ತಿ ತೇ।।
ಭೀಷ್ಮನು ಹೇಳಿದನು: “ಹಾಗೆ ವಿಪ್ರನು ಅವಳನ್ನು ತಡೆಯಲು ಧೈರ್ಯದಿಂದ ಅವಳು ಹೇಳಿದಳು: “ನಾನು ಸ್ವತಂತ್ರಳಾಗಿದ್ದೇನೆ. ಪರದಾರೆಯಲ್ಲ. ಇದರಿಂದ ನಿನಗೆ ಧರ್ಮಲೋಪದ ದೋಷವು ತಗಲುವುದಿಲ್ಲ!”
13021012 ಅಷ್ಟಾವಕ್ರ ಉವಾಚ।
13021012a ನಾಸ್ತಿ ಸ್ವತಂತ್ರತಾ ಸ್ತ್ರೀಣಾಮಸ್ವತಂತ್ರಾ ಹಿ ಯೋಷಿತಃ।
13021012c ಪ್ರಜಾಪತಿಮತಂ ಹ್ಯೇತನ್ನ ಸ್ತ್ರೀ ಸ್ವಾತಂತ್ರ್ಯಮರ್ಹತಿ।।
ಅಷ್ಟಾವಕ್ರನು ಹೇಳಿದನು: “ಸ್ತ್ರೀಯರಿಗೆ ಸ್ವಾತಂತ್ರ್ಯವಿಲ್ಲ. ಸ್ತ್ರೀಯರು ಯಾವಾಗಲೂ ಅಸ್ವತಂತ್ರರು. ಇದು ಪ್ರಜಾಪತಿಯ ಅಭಿಮತವೇ ಆಗಿದೆ. ಆದುದರಿಂದ ಸ್ತ್ರೀಯಾಗಿರುವವಳು ಎಂದೂ ಸ್ವತಂತ್ರಳಾಗಿರಲು ಅರ್ಹಳಲ್ಲ.”
13021013 ಸ್ತ್ರ್ಯುವಾಚ।
13021013a ಬಾಧತೇ ಮೈಥುನಂ ವಿಪ್ರ ಮಮ ಭಕ್ತಿಂ ಚ ಪಶ್ಯ ವೈ।
13021013c ಅಧರ್ಮಂ ಪ್ರಾಪ್ಸ್ಯಸೇ ವಿಪ್ರ ಯನ್ಮಾಂ ತ್ವಂ ನಾಭಿನಂದಸಿ।।
ಸ್ತ್ರೀಯು ಹೇಳಿದಳು: “ವಿಪ್ರ! ಮೈಥುನದ ಕಾಮವು ನನ್ನನ್ನು ಬಾಧಿಸುತ್ತಿದೆ. ನಿನ್ನಲ್ಲಿ ನನಗೆ ಎಷ್ಟು ಭಕ್ತಿಯಿದೆಯೆನ್ನುವುದನ್ನು ನೋಡು! ವಿಪ್ರ! ನನ್ನನ್ನು ಅಭಿನಂದಿಸದ ನೀನು ಅಧರ್ಮವನ್ನು ಹೊಂದುತ್ತೀಯೆ.”
13021014 ಅಷ್ಟಾವಕ್ರ ಉವಾಚ।
13021014a ಹರಂತಿ ದೋಷಜಾತಾನಿ ನರಂ ಜಾತಂ ಯಥೇಚ್ಚಕಮ್।
13021014c ಪ್ರಭವಾಮಿ ಸದಾ ಧೃತ್ಯಾ ಭದ್ರೇ ಸ್ವಂ ಶಯನಂ ವ್ರಜ।।
ಅಷ್ಟಾವಕ್ರನು ಹೇಳಿದನು: “ಭದ್ರೇ! ಸ್ವೇಚ್ಛಾಚಾರಿಯಾದ ಮನುಷ್ಯನನ್ನು ಪಾಪಗಳು ತಮ್ಮ ಕಡೆಗೇ ಸೆಳೆದುಕೊಳ್ಳುತ್ತವೆ. ಸದಾ ಧೈರ್ಯದಿಂದ ನನ್ನನ್ನು ನಾನು ಹತೋಟಿಯಲ್ಲಿಟ್ಟುಕೊಂಡಿದ್ದೇನೆ. ನಿನ್ನ ಹಾಸಿಗೆಗೆ ಹೋಗಿ ಮಲಗು!”
13021015 ಸ್ತ್ರ್ಯುವಾಚ।
13021015a ಶಿರಸಾ ಪ್ರಣಮೇ ವಿಪ್ರ ಪ್ರಸಾದಂ ಕರ್ತುಮರ್ಹಸಿ।
13021015c ಭೂಮೌ ನಿಪತಮಾನಾಯಾಃ ಶರಣಂ ಭವ ಮೇಽನಘ।।
ಸ್ತ್ರೀಯು ಹೇಳಿದಳು: “ವಿಪ್ರ! ಶಿರಸಾ ನಮಸ್ಕರಿಸುತ್ತಿದ್ದೇನೆ. ಪ್ರಸನ್ನನಾಗಬೇಕು. ಅನಘ! ಭೂಮಿಯ ಮೇಲೆ ಬಿದ್ದು ನಮಸ್ಕರಿಸುತ್ತಿರುವ ನನ್ನ ಶರಣ್ಯನಾಗು!
13021016a ಯದಿ ವಾ ದೋಷಜಾತಂ ತ್ವಂ ಪರದಾರೇಷು ಪಶ್ಯಸಿ।
13021016c ಆತ್ಮಾನಂ ಸ್ಪರ್ಶಯಾಮ್ಯದ್ಯ ಪಾಣಿಂ ಗೃಹ್ಣೀಷ್ವ ಮೇ ದ್ವಿಜ।।
ಪರಪತ್ನೀ ಸಮಾಗಮದಿಂದಾಗುವ ದೋಷವುಂಟಾಗುತ್ತದೆ ಎಂದು ನೀನು ಭಾವಿಸುವೆಯಾದರೆ ನನ್ನನ್ನು ನಾನೇ ನಿನಗೆ ದಾನವಾಗಿ ಕೊಟ್ಟುಕೊಳ್ಳುತ್ತಿದ್ದೇನೆ. ದ್ವಿಜ! ನನ್ನ ಪಾಣಿಗ್ರಹಣವನ್ನು ಮಾಡು!
13021017a ನ ದೋಷೋ ಭವಿತಾ ಚೈವ ಸತ್ಯೇನೈತದ್ಬ್ರವೀಮ್ಯಹಮ್।
13021017c ಸ್ವತಂತ್ರಾಂ ಮಾಂ ವಿಜಾನೀಹಿ ಯೋಽಧರ್ಮಃ ಸೋಽಸ್ತು ವೈ ಮಯಿ।।
ಹೀಗೆ ಮಾಡುವುದರಿಂದ ನಿನಗೆ ಯಾವುದೇ ದೋಷವುಂಟಾಗುವುದಿಲ್ಲ. ಸತ್ಯವನ್ನೇ ಹೇಳುತ್ತಿದ್ದೇನೆ. ನಾನೋರ್ವಳು ಸ್ವತಂತ್ರಳೆಂದು ತಿಳಿದುಕೋ. ಇದರಿಂದ ಅಧರ್ಮವಾದರೂ ಅದು ನನ್ನ ಪಾಲಿಗಿರಲಿ!”
13021018 ಅಷ್ಟಾವಕ್ರ ಉವಾಚ।
13021018a ಸ್ವತಂತ್ರಾ ತ್ವಂ ಕಥಂ ಭದ್ರೇ ಬ್ರೂಹಿ ಕಾರಣಮತ್ರ ವೈ।
13021018c ನಾಸ್ತಿ ಲೋಕೇ ಹಿ ಕಾ ಚಿತ್ಸ್ತ್ರೀ ಯಾ ವೈ ಸ್ವಾತಂತ್ರ್ಯಮರ್ಹತಿ।।
ಅಷ್ಟಾವಕ್ರನು ಹೇಳಿದನು: “ಭದ್ರೇ! ನೀನು ಹೇಗೆ ಸ್ವತಂತ್ರಳೆನ್ನುವುದರ ಕಾರಣವನ್ನು ಹೇಳು. ಲೋಕದಲ್ಲಿ ಯಾವ ಸ್ತ್ರೀಯೂ ಸ್ವತಂತ್ರಳಾಗಿರಲು ಅರ್ಹಳಲ್ಲ.
13021019a ಪಿತಾ ರಕ್ಷತಿ ಕೌಮಾರೇ ಭರ್ತಾ ರಕ್ಷತಿ ಯೌವನೇ।
13021019c ಪುತ್ರಾಶ್ಚ ಸ್ಥವಿರೀಭಾವೇ ನ ಸ್ತ್ರೀ ಸ್ವಾತಂತ್ರ್ಯಮರ್ಹತಿ।।
ಕೌಮಾರ್ಯದಲ್ಲಿ ತಂದೆಯು ಅವಳನ್ನು ರಕ್ಷಿಸುತ್ತಾನೆ. ಯೌವನದಲ್ಲಿ ಪತಿಯು ಅವಳನ್ನು ರಕ್ಷಿಸುತ್ತಾನೆ. ವೃದ್ಧಾಪ್ಯದಲ್ಲಿ ಪುತ್ರರು ಅವಳನ್ನು ರಕ್ಷಿಸುತ್ತಾರೆ. ಸ್ತ್ರೀಯು ಸ್ವಾತಂತ್ರ್ಯಕ್ಕೆ ಅರ್ಹಳಲ್ಲ!”
13021020 ಸ್ತ್ರ್ಯುವಾಚ।
13021020a ಕೌಮಾರಂ ಬ್ರಹ್ಮಚರ್ಯಂ ಮೇ ಕನ್ಯೈವಾಸ್ಮಿ ನ ಸಂಶಯಃ।
13021020c ಕುರು ಮಾ ವಿಮತಿಂ ವಿಪ್ರ ಶ್ರದ್ಧಾಂ ವಿಜಹಿ ಮಾ ಮಮ।।
ಸ್ತ್ರೀಯು ಹೇಳಿದಳು: “ಬ್ರಹ್ಮಚರ್ಯದಲ್ಲಿರುವ ನಾನು ಕೌಮಾರ್ಯದಲ್ಲಿಯೇ ಇರುವ ಕನ್ಯೆ ಎನ್ನುವುದರಲ್ಲಿ ಸಂಶಯವಿಲ್ಲ. ವಿಪ್ರ! ನನ್ನನ್ನು ತಿರಸ್ಕರಿಸಬೇಡ. ನಿನ್ನಲ್ಲಿಟ್ಟಿರುವ ನನ್ನ ಶ್ರದ್ಧೆಯನ್ನು ನಾಶಗೊಳಿಸಬೇಡ!”
13021021 ಅಷ್ಟಾವಕ್ರ ಉವಾಚ।
13021021a ಯಥಾ ಮಮ ತಥಾ ತುಭ್ಯಂ ಯಥಾ ತವ ತಥಾ ಮಮ।
13021021c ಜಿಜ್ಞಾಸೇಯಮೃಷೇಸ್ತಸ್ಯ ವಿಘ್ನಃ ಸತ್ಯಂ ನು ಕಿಂ ಭವೇತ್।।
ಅಷ್ಟಾವಕ್ರನು ಹೇಳಿದನು: “ನನಗಾಗುತ್ತಿರುವುದೇ ನಿನಗೂ ಆಗುತ್ತಿದೆ. ನಿನಗಾಗುತ್ತಿರುವುದು ನನಗೂ ಆಗುತ್ತಿದೆ. ಆದರೆ ವದಾನ್ಯ ಋಷಿಯು ಹೇಳಿದುದರ ಕುರಿತು ವಿಚಾರಿಸುತ್ತಿದ್ದೇನೆ. ಆ ಸತ್ಯಕ್ಕೆ ವಿಘ್ನವು ಹೇಗಾಗುತ್ತದೆ?
13021022a ಆಶ್ಚರ್ಯಂ ಪರಮಂ ಹೀದಂ ಕಿಂ ನು ಶ್ರೇಯೋ ಹಿ ಮೇ ಭವೇತ್।
13021022c ದಿವ್ಯಾಭರಣವಸ್ತ್ರಾ ಹಿ ಕನ್ಯೇಯಂ ಮಾಮುಪಸ್ಥಿತಾ।।
ಇದೇನು ಪರಮಾಶ್ಚರ್ಯ? ಇದರಿಂದ ನನಗೆ ಶ್ರೇಯಸ್ಸೇ ಆಗುತ್ತದೆಯೇ? ದಿವ್ಯಾಭರಣವಸ್ತ್ರಗಳನ್ನು ಧರಿಸಿರುವ ಕನ್ಯೆಯು ನನ್ನ ಬಳಿ ನಿಂತಿದ್ದಾಳಲ್ಲ!
13021023a ಕಿಂ ತ್ವಸ್ಯಾಃ ಪರಮಂ ರೂಪಂ ಜೀರ್ಣಮಾಸೀತ್ಕಥಂ ಪುನಃ।
13021023c ಕನ್ಯಾರೂಪಮಿಹಾದ್ಯೈವ ಕಿಮಿಹಾತ್ರೋತ್ತರಂ ಭವೇತ್।।
ಇವಳ ಇಂಥಹ ಪರಮ ರೂಪವು ಮೊದಲು ಹೇಗೆ ಜೀರ್ಣವಾಗಿ ಹೋಗಿತ್ತು? ಪುನಃ ಕನ್ಯಾರೂಪವನ್ನು ಹೊಂದಿರುವ ಇವಳಿಗೆ ಏನು ಉತ್ತರವನ್ನು ನೀಡಲಿ?
13021024a ಯಥಾ ಪರಂ ಶಕ್ತಿಧೃತೇರ್ನ ವ್ಯುತ್ಥಾಸ್ಯೇ ಕಥಂ ಚನ।
13021024c ನ ರೋಚಯೇ ಹಿ ವ್ಯುತ್ಥಾನಂ ಧೃತ್ಯೈವಂ ಸಾಧಯಾಮ್ಯಹಮ್।।
ನನ್ನಲ್ಲಿರುವ ಪರಮ ಧೈರ್ಯದಿಂದ ಇವಳನ್ನು ಎದಿರುಸುತ್ತೇನೆ. ಹಿಂದೆ ವರಿಸಿದ್ದ ಮುನಿಕನ್ಯೆಯನ್ನೇ ನಾನು ಮದುವೆಯಾಗುತ್ತೇನೆ. ಇವಳು ಹೇಳಿದಂತೆ ಮಾಡಲು ಮನಸ್ಸಾಗುತ್ತಿಲ್ಲ. ಸತ್ಯದ ಆಧಾರದಿಂದಲೇ ಇದನ್ನು ನಾನು ಸಾಧಿಸುತ್ತೇನೆ.””
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಅಷ್ಟಾವಕ್ರಾದಿಕ್ಸಂವಾದೇ ಏಕವಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಅಷ್ಟಾವಕ್ರಾದಿಕ್ಸಂವಾದ ಎನ್ನುವ ಇಪ್ಪತ್ತೊಂದನೇ ಅಧ್ಯಾಯವು.