ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 20
ಸಾರ
ಅಷ್ಟಾವಕ್ರನು ಉತ್ತರ ದಿಶೆಯಲ್ಲಿ ಪ್ರಯಾಣಿಸುತ್ತಾ ಕುಬೇರನ ಭವನವನ್ನು ತಲುಪಿದುದು (1-7). ಕುಬೇರನ ಆತಿಥ್ಯವನ್ನು ಸ್ವೀಕರಿಸಿದುದು (8-27). ಅಲ್ಲಿಂದ ಹೊರಟು ಒಂದು ಮನೋರಮ ಆಶ್ರಮಪದವನ್ನು ತಲುಪಿದುದು (28-39). ಅಲ್ಲಿ ವೃದ್ಧ ಸ್ತ್ರೀಯೊಡನೆ ರಾತ್ರಿಯನ್ನು ಕಳೆದುದು (40-76).
13020001 ಅಷ್ಟಾವಕ್ರ ಉವಾಚ।
13020001a ತಥಾಸ್ತು ಸಾಧಯಿಷ್ಯಾಮಿ ತತ್ರ ಯಾಸ್ಯಾಮ್ಯಸಂಶಯಮ್।
13020001c ಯತ್ರ ತ್ವಂ ವದಸೇ ಸಾಧೋ ಭವಾನ್ಭವತು ಸತ್ಯವಾಕ್।।
ಅಷ್ಟಾವಕ್ರನು ಹೇಳಿದನು: “ಹಾಗೆಯೇ ಆಗಲಿ! ಈ ಕಾರ್ಯವನ್ನು ಸಾಧಿಸುತ್ತೇನೆ. ನೀನು ಎಲ್ಲಿಗೆಂದು ಹೇಳಿದ್ದೀಯೋ ಅಲ್ಲಿಗೆ ನಾನು ನಿಸ್ಸಂಶಯವಾಗಿಯೂ ಹೋಗುತ್ತೇನೆ. ಆದರೆ ನೀನು ಮಾತ್ರ ಸತ್ಯವಚನನಾಗಿರಬೇಕು.””
13020002 ಭೀಷ್ಮ ಉವಾಚ।
13020002a ತತೋಽಗಚ್ಚತ್ಸ ಭಗವಾನುತ್ತರಾಮುತ್ತಮಾಂ ದಿಶಮ್।
13020002c ಹಿಮವಂತಂ ಗಿರಿಶ್ರೇಷ್ಠಂ ಸಿದ್ಧಚಾರಣಸೇವಿತಮ್।।
ಭೀಷ್ಮನು ಹೇಳಿದನು: “ಬಳಿಕ ಭಗವಾನ್ ಅಷ್ಟಾವಕ್ರನು ಉತ್ತರ ದಿಶೆಯಲ್ಲಿ ಪ್ರಯಾಣಮಾಡುತ್ತಾ ಸಿದ್ಧಚಾರಣರು ಸೇವಿಸುವ ಗಿರಿಶ್ರೇಷ್ಠ ಹಿಮವತ್ಪರ್ವತವನ್ನು ತಲುಪಿದನು.
13020003a ಸ ಗತ್ವಾ ದ್ವಿಜಶಾರ್ದೂಲೋ ಹಿಮವಂತಂ ಮಹಾಗಿರಿಮ್।
13020003c ಅಭ್ಯಗಚ್ಚನ್ನದೀಂ ಪುಣ್ಯಾಂ ಬಾಹುದಾಂ ಧರ್ಮದಾಯಿನೀಮ್।।
ಮಹಾಗಿರಿ ಹಿಮಾಲಯಕ್ಕೆ ಹೋಗಿ ಆ ದ್ವಿಜಶಾರ್ದೂಲನು ಧರ್ಮದಾಯಿನೀ ಪುಣ್ಯ ನದಿ ಬಾಹುದಕ್ಕೆ ಹೋದನು.
13020004a ಅಶೋಕೇ ವಿಮಲೇ ತೀರ್ಥೇ ಸ್ನಾತ್ವಾ ತರ್ಪ್ಯ ಚ ದೇವತಾಃ।
13020004c ತತ್ರ ವಾಸಾಯ ಶಯನೇ ಕೌಶ್ಯೇ ಸುಖಮುವಾಸ ಹ।।
ಬಾಹುದದ ವಿಮಲ ಅಶೋಕ ತೀರ್ಥದಲ್ಲಿ ಸ್ನಾನಮಾಡಿ ದೇವತೆಗಳಿಗೆ ತರ್ಪಣಗಳನ್ನಿತ್ತು ದರ್ಬೆಯ ಹಾಸಿಗೆಯ ಮೇಲೆ ಸುಖವಾಗಿ ಮಲಗಿದನು.
13020005a ತತೋ ರಾತ್ರ್ಯಾಂ ವ್ಯತೀತಾಯಾಂ ಪ್ರಾತರುತ್ಥಾಯ ಸ ದ್ವಿಜಃ।
13020005c ಸ್ನಾತ್ವಾ ಪ್ರಾದುಶ್ಚಕಾರಾಗ್ನಿಂ ಹುತ್ವಾ ಚೈವ ವಿಧಾನತಃ।।
13020006a ರುದ್ರಾಣೀಕೂಪಮಾಸಾದ್ಯ ಹ್ರದೇ ತತ್ರ ಸಮಾಶ್ವಸತ್।
13020006c ವಿಶ್ರಾಂತಶ್ಚ ಸಮುತ್ಥಾಯ ಕೈಲಾಸಮಭಿತೋ ಯಯೌ।।
ರಾತ್ರಿಯನ್ನು ಕಳೆದ ನಂತರ ಬೆಳಿಗ್ಗೆ ಎದ್ದು ಆ ದ್ವಿಜನು ಅಶೋಕ ತೀರ್ಥದಲ್ಲಿಯೇ ಸ್ನಾನಮಾಡಿ, ವಿಧಾನತಃ ಅಗ್ನಿಯಲ್ಲಿ ಆಹುತಿಗಳನ್ನಿತ್ತು, ರುದ್ರಾಣೀಕೂಪಕ್ಕೆ ಹೋಗಿ ಆ ಸರೋವರದ ದಡದ ಮೇಲೆ ವಿಶ್ರಾಂತಿಪಡೆದನು. ವಿಶ್ರಾಂತನಾಗಿ ಮೇಲೆದ್ದು ಕೈಲಾಸದ ಕಡೆ ಹೊರಟನು.
13020007a ಸೋಽಪಶ್ಯತ್ಕಾಂಚನದ್ವಾರಂ ದೀಪ್ಯಮಾನಮಿವ ಶ್ರಿಯಾ।
13020007c ಮಂದಾಕಿನೀಂ ಚ ನಲಿನೀಂ ಧನದಸ್ಯ ಮಹಾತ್ಮನಃ।।
ಅಲ್ಲಿ ಅವನು ಮಹಾತ್ಮ ಧನದ ಕುಬೇರನ ಕಾಂತಿಯಿಂದ ಬೆಳಗುತ್ತಿದ್ದ ಕಾಂಚನ ದ್ವಾರವನ್ನೂ, ಕಮಲಗಳಿಂದ ತುಂಬಿದ್ದ ಮಂದಾಕಿನಿಯನ್ನೂ ನೋಡಿದನು.
13020008a ಅಥ ತೇ ರಾಕ್ಷಸಾಃ ಸರ್ವೇ ಯೇಽಭಿರಕ್ಷಂತಿ ಪದ್ಮಿನೀಮ್।
13020008c ಪ್ರತ್ಯುತ್ಥಿತಾ ಭಗವಂತಂ ಮಣಿಭದ್ರಪುರೋಗಮಾಃ।।
ಆಗ ಮಣಿಭದ್ರನ ನಾಯಕತ್ವದಲ್ಲಿ ಆ ಕಮಲಗಳ ಸರೋವರವನ್ನು ರಕ್ಷಿಸುತ್ತಿದ್ದ ರಾಕ್ಷಸರೆಲ್ಲರೂ ಮೇಲೆದ್ದು ಭಗವಾನ್ ಅಷ್ಟಾವಕ್ರನನ್ನು ವಂದಿಸಿದರು.
13020009a ಸ ತಾನ್ಪ್ರತ್ಯರ್ಚಯಾಮಾಸ ರಾಕ್ಷಸಾನ್ಭೀಮವಿಕ್ರಮಾನ್।
13020009c ನಿವೇದಯತ ಮಾಂ ಕ್ಷಿಪ್ರಂ ಧನದಾಯೇತಿ ಚಾಬ್ರವೀತ್।।
ಅಷ್ಟಾವಕ್ರನು ಆ ಭೀಮವಿಕ್ರಮ ರಾಕ್ಷಸರನ್ನು ಪ್ರತಿಯಾಗಿ ಅಭಿನಂದಿಸಿ “ಬೇಗನೇ ಧನದ ಕುಬೇರನಿಗೆ ಬರಲು ನಿವೇದಿಸಿ!” ಎಂದನು.
13020010a ತೇ ರಾಕ್ಷಸಾಸ್ತದಾ ರಾಜನ್ಭಗವಂತಮಥಾಬ್ರುವನ್।
13020010c ಅಸೌ ವೈಶ್ರವಣೋ ರಾಜಾ ಸ್ವಯಮಾಯಾತಿ ತೇಽಂತಿಕಮ್।।
13020011a ವಿದಿತೋ ಭಗವಾನಸ್ಯ ಕಾರ್ಯಮಾಗಮನೇ ಚ ಯತ್।
13020011c ಪಶ್ಯೈನಂ ತ್ವಂ ಮಹಾಭಾಗಂ ಜ್ವಲಂತಮಿವ ತೇಜಸಾ।।
ರಾಜನ್! ಆಗ ಆ ರಾಕ್ಷಸರು ಭಗವಾನ್ ಅಷ್ಟಾವಕ್ರನಿಗೆ “ನೀನು ಆಗಮಿಸಿರುವ ಕಾರ್ಯದ ಕುರಿತು ಅವನಿಗೆ ತಿಳಿದಿದೆ. ತೇಜಸ್ಸಿನಿಂದ ಪ್ರಜ್ವಲಿಸುತ್ತಿರುವ ಮಹಾಭಾಗ ನಿನ್ನನ್ನು ನೋಡಲು ಸ್ವಯಂ ರಾಜ ವೈಶ್ರವಣನು ನಿನ್ನ ಬಳಿಯೇ ಬರುತ್ತಿದ್ದಾನೆ!” ಎಂದರು.
13020012a ತತೋ ವೈಶ್ರವಣೋಽಭ್ಯೇತ್ಯ ಅಷ್ಟಾವಕ್ರಮನಿಂದಿತಮ್।
13020012c ವಿಧಿವತ್ಕುಶಲಂ ಪೃಷ್ಟ್ವಾ ತತೋ ಬ್ರಹ್ಮರ್ಷಿಮಬ್ರವೀತ್।।
ಆಗ ವೈಶ್ರವಣ ಕುಬೇರನು ಅನಿಂದಿತ ಅಷ್ಟಾವಕ್ರನ ಬಳಿಸಾರಿ ವಿಧಿವತ್ತಾಗಿ ಕುಶಲವನ್ನು ಪ್ರಶ್ನಿಸಿ ಆ ಬ್ರಹ್ಮರ್ಷಿಗೆ ಹೇಳಿದನು:
13020013a ಸುಖಂ ಪ್ರಾಪ್ತೋ ಭವಾನ್ಕಚ್ಚಿತ್ಕಿಂ ವಾ ಮತ್ತಶ್ಚಿಕೀರ್ಷಸಿ।
13020013c ಬ್ರೂಹಿ ಸರ್ವಂ ಕರಿಷ್ಯಾಮಿ ಯನ್ಮಾಂ ತ್ವಂ ವಕ್ಷ್ಯಸಿ ದ್ವಿಜ।।
“ದ್ವಿಜ! ನೀನು ಸುಖದಿಂದಲೇ ಇಲ್ಲಿಗೆ ಆಗಮಿಸಿದೆಯಲ್ಲವೇ? ನನ್ನಿಂದ ಏನಾಗಬೇಕೆಂದು ಬಯಸುತ್ತೀಯೆ? ನಾನು ಏನು ಮಾಡಲಿ ಹೇಳು. ಎಲ್ಲವನ್ನೂ ನಾನು ಮಾಡುತ್ತೇನೆ.
13020014a ಭವನಂ ಪ್ರವಿಶ ತ್ವಂ ಮೇ ಯಥಾಕಾಮಂ ದ್ವಿಜೋತ್ತಮ।
13020014c ಸತ್ಕೃತಃ ಕೃತಕಾರ್ಯಶ್ಚ ಭವಾನ್ಯಾಸ್ಯತ್ಯವಿಘ್ನತಃ।।
ದ್ವಿಜೋತ್ತಮ! ಇಚ್ಛಾನುಸಾರ ನೀನು ನನ್ನ ಭವನವನ್ನು ಪ್ರವೇಶಿಸು. ಇಲ್ಲಿಯ ಸತ್ಕಾರಗಳನ್ನು ಸ್ವೀಕರಿಸಿ ಕೃತಕೃತ್ಯನಾಗಿ ಇಲ್ಲಿಂದ ಮುಂದೆ ನಿರ್ವಿಘ್ನವಾಗಿ ಪ್ರಯಾಣಿಸಬಹುದು.”
13020015a ಪ್ರಾವಿಶದ್ಭವನಂ ಸ್ವಂ ವೈ ಗೃಹೀತ್ವಾ ತಂ ದ್ವಿಜೋತ್ತಮಮ್।
13020015c ಆಸನಂ ಸ್ವಂ ದದೌ ಚೈವ ಪಾದ್ಯಮರ್ಘ್ಯಂ ತಥೈವ ಚ।।
ಹೀಗೆ ಹೇಳಿ ಕುಬೇರನು ಆ ದ್ವಿಜೋತ್ತಮನನ್ನು ಕರೆದುಕೊಂಡು ತನ್ನ ಭವನವನ್ನು ಪ್ರವೇಶಿಸಿದನು. ಅವನಿಗೆ ಪಾದ್ಯ-ಅರ್ಘ್ಯಗಳನ್ನಿತ್ತು ತನ್ನ ಆಸನವನ್ನೂ ನೀಡಿದನು.
13020016a ಅಥೋಪವಿಷ್ಟಯೋಸ್ತತ್ರ ಮಣಿಭದ್ರಪುರೋಗಮಾಃ।
13020016c ನಿಷೇದುಸ್ತತ್ರ ಕೌಬೇರಾ ಯಕ್ಷಗಂಧರ್ವರಾಕ್ಷಸಾಃ।।
ಅವರು ಅಲ್ಲಿ ಕುಳಿತುಕೊಳ್ಳಲು, ಮಣಿಭದ್ರನೇ ಮೊದಲಾದ ಕುಬೇರನ ಸೇವಕ ಯಕ್ಷ-ಗಂಧರ್ವ-ರಾಕ್ಷಸ ಗಣಗಳು ಕೆಳಗೆ ಕುಳಿತುಕೊಂಡರು.
13020017a ತತಸ್ತೇಷಾಂ ನಿಷಣ್ಣಾನಾಂ ಧನದೋ ವಾಕ್ಯಮಬ್ರವೀತ್।
13020017c ಭವಚ್ಚಂದಂ ಸಮಾಜ್ಞಾಯ ನೃತ್ಯೇರನ್ನಪ್ಸರೋಗಣಾಃ।।
13020018a ಆತಿಥ್ಯಂ ಪರಮಂ ಕಾರ್ಯಂ ಶುಶ್ರೂಷಾ ಭವತಸ್ತಥಾ।
13020018c ಸಂವರ್ತತಾಮಿತ್ಯುವಾಚ ಮುನಿರ್ಮಧುರಯಾ ಗಿರಾ।।
ಅವರು ಕುಳಿತುಕೊಳ್ಳಲು ಧನದನು ಈ ಮಾತನ್ನಾಡಿದನು: “ನಿನ್ನ ಅಭಿಪ್ರಾಯವನ್ನು ತಿಳಿದು ಅಪ್ಸರಗಣಗಳು ನರ್ತಿಸುತ್ತಾರೆ. ನಿನ್ನ ಆತಿಥ್ಯ ಮತ್ತು ಶುಶ್ರೂಷೆಯು ನಮಗೆ ಪರಮ ಕಾರ್ಯವಾಗಿದೆ.” ಆಗ ಮುನಿಯು ಮಧುರ ಸ್ವರದಲ್ಲಿ “ನಡೆಯಲಿ!” ಎಂದನು.
13020019a ಅಥೋರ್ವರಾ ಮಿಶ್ರಕೇಶೀ ರಂಭಾ ಚೈವೋರ್ವಶೀ ತಥಾ।
13020019c ಅಲಂಬುಸಾ ಘೃತಾಚೀ ಚ ಚಿತ್ರಾ ಚಿತ್ರಾಂಗದಾ ರುಚಿಃ।।
13020020a ಮನೋಹರಾ ಸುಕೇಶೀ ಚ ಸುಮುಖೀ ಹಾಸಿನೀ ಪ್ರಭಾ।
13020020c ವಿದ್ಯುತಾ ಪ್ರಶಮಾ ದಾಂತಾ ವಿದ್ಯೋತಾ ರತಿರೇವ ಚ।।
13020021a ಏತಾಶ್ಚಾನ್ಯಾಶ್ಚ ವೈ ಬಹ್ವ್ಯಃ ಪ್ರನೃತ್ತಾಪ್ಸರಸಃ ಶುಭಾಃ।
13020021c ಅವಾದಯಂಶ್ಚ ಗಂಧರ್ವಾ ವಾದ್ಯಾನಿ ವಿವಿಧಾನಿ ಚ।।
ಕೂಡಲೇ ಉರ್ವರಾ, ಮಿಶ್ರಕೇಶೀ, ರಂಭಾ, ಊರ್ವಶೀ, ಅಲಂಬುಸಾ, ಘೃತಾಚೀ, ಚಿತ್ರಾ, ಚಿತ್ರಾಂಗದಾ, ರುಚಿ, ಮನೋಹರಾ, ಸುಕೇಶೀ, ಸುಮುಖೀ, ಹಾಸಿನೀ, ಪ್ರಭಾ, ವಿದ್ಯುತಾ, ಪ್ರಶಮಾ, ದಾಂತಾ, ವಿದ್ಯೋತಾ, ರತಿ ಮತ್ತು ಇನ್ನೂ ಅನ್ಯ ಅನೇಕ ಶುಭ ಅಪ್ಸರೆಯರು ನೃತ್ಯವನ್ನು ಪ್ರಾರಂಭಿಸಿದರು. ಗಂಧರ್ವರು ವಿವಿಧ ವಾದ್ಯಗಳನ್ನು ಬಾರಿಸುತ್ತಿದ್ದರು.
13020022a ಅಥ ಪ್ರವೃತ್ತೇ ಗಾಂಧರ್ವೇ ದಿವ್ಯೇ ಋಷಿರುಪಾವಸತ್।
13020022c ದಿವ್ಯಂ ಸಂವತ್ಸರಂ ತತ್ರ ರಮನ್ವೈ ಸುಮಹಾತಪಾಃ।।
ದಿವ್ಯ ನೃತ್ಯಗೀತೆಗಳು ನಡೆಯುತ್ತಿರಲು ಋಷಿಯು ಅಲ್ಲಿಯೇ ಕುಳಿತುಕೊಂಡನು. ಅಲ್ಲಿ ಆ ಮಹಾತಪಸ್ವಿಯು ರಮಿಸುತ್ತಿರಲು ಒಂದು ದಿವ್ಯ ಸಂವತ್ಸರವೇ ಕಳೆದುಹೋಯಿತು.
13020023a ತತೋ ವೈಶ್ರವಣೋ ರಾಜಾ ಭಗವಂತಮುವಾಚ ಹ।
13020023c ಸಾಗ್ರಃ ಸಂವತ್ಸರೋ ಯಾತಸ್ತವ ವಿಪ್ರೇಹ ಪಶ್ಯತಃ।।
ಆಗ ರಾಜಾ ವೈಶ್ರವಣನು ಭಗವಾನ್ ಅಷ್ಟಾವಕ್ರನಿಗೆ ಹೇಳಿದನು: “ನೀನು ಇದನ್ನು ನೋಡುತ್ತಿರುವಾಗಲೇ ಒಂದು ವರ್ಷಕ್ಕಿಂತಲೂ ಹೆಚ್ಚಾಗಿ ಹೋಯಿತು.
13020024a ಹಾರ್ಯೋಽಯಂ ವಿಷಯೋ ಬ್ರಹ್ಮನ್ಗಾಂಧರ್ವೋ ನಾಮ ನಾಮತಃ।
13020024c ಚಂದತೋ ವರ್ತತಾಂ ವಿಪ್ರ ಯಥಾ ವದತಿ ವಾ ಭವಾನ್।।
ಬ್ರಹ್ಮನ್! ಗಂಧರ್ವ ಎಂಬ ಹೆಸರಿನ ಇದರ ವಿಷಯವೇ ಹಾಗೆ. ನಿನಗೆ ಇಷ್ಟವಾದರೆ ಇದನ್ನು ಮುಂದುವರಿಸೋಣ. ನೀನು ಹೇಗೆ ಹೇಳುತ್ತೀಯೋ ಹಾಗೆ!
13020025a ಅತಿಥಿಃ ಪೂಜನೀಯಸ್ತ್ವಮಿದಂ ಚ ಭವತೋ ಗೃಹಮ್।
13020025c ಸರ್ವಮಾಜ್ಞಾಪ್ಯತಾಮಾಶು ಪರವಂತೋ ವಯಂ ತ್ವಯಿ।।
ನೀನು ನಮ್ಮ ಅತಿಥಿ ಮತ್ತು ಪೂಜನೀಯನಾಗಿರುವೆ. ಇದು ನಿನ್ನದೇ ಮನೆ. ನಾವೆಲ್ಲರೂ ನಿನ್ನ ವಶವರ್ತಿಗಳಾಗಿದ್ದೇವೆ. ಬೇಗನೇ ಆಜ್ಞಾಪಿಸು!”
13020026a ಅಥ ವೈಶ್ರವಣಂ ಪ್ರೀತೋ ಭಗವಾನ್ಪ್ರತ್ಯಭಾಷತ।
13020026c ಅರ್ಚಿತೋಽಸ್ಮಿ ಯಥಾನ್ಯಾಯಂ ಗಮಿಷ್ಯಾಮಿ ಧನೇಶ್ವರ।।
ಆಗ ಪ್ರೀತನಾದ ಭಗವಾನ್ ಅಷ್ಟಾವಕ್ರನು ವೈಶ್ರವಣನಿಗೆ ಹೇಳಿದನು: “ಧನೇಶ್ವರ! ಯಥಾನ್ಯಾಯವಾಗಿ ಪೂಜಿಸಲ್ಪಟ್ಟಿದ್ದೇನೆ. ನಾನಿನ್ನು ಹೊರಡುತ್ತೇನೆ.
13020027a ಪ್ರೀತೋಽಸ್ಮಿ ಸದೃಶಂ ಚೈವ ತವ ಸರ್ವಂ ಧನಾಧಿಪ।
13020027c ತವ ಪ್ರಸಾದಾದ್ಭಗವನ್ಮಹರ್ಷೇಶ್ಚ ಮಹಾತ್ಮನಃ।
13020027e ನಿಯೋಗಾದದ್ಯ ಯಾಸ್ಯಾಮಿ ವೃದ್ಧಿಮಾನೃದ್ಧಿಮಾನ್ಭವ।।
ಧನಾಧಿಪ! ಪ್ರೀತನಾಗಿದ್ದೇನೆ. ಎಲ್ಲವೂ ನಿನ್ನ ಘನತೆಗೆ ಸರಿಯಾಗಿಯೇ ಇವೆ. ಭಗವನ್! ನಿನ್ನ ಅನುಗ್ರಹವನ್ನು ಪಡೆದು ಮಹಾತ್ಮ ಮಹರ್ಷಿಯ ನಿಯೋಗದಂತೆ ಇಂದು ಹೊರಡುತ್ತೇನೆ. ವೃದ್ಧಿಮಾನನಾಗು! ವೃದ್ಧಿಮಾನನಾಗು!”
13020028a ಅಥ ನಿಷ್ಕ್ರಮ್ಯ ಭಗವಾನ್ಪ್ರಯಯಾವುತ್ತರಾಮುಖಃ।
13020028c ಕೈಲಾಸಂ ಮಂದರಂ ಹೈಮಂ ಸರ್ವಾನನುಚಚಾರ ಹ।।
ಅಲ್ಲಿಂದ ಹೊರಟು ಭಗವಾನ್ ಅಷ್ಟಾವಕ್ರನು ಉತ್ತರಾಭಿಮುಖವಾಗಿ ಪ್ರಯಾಣಿಸಿದನು. ಕೈಲಾಸ, ಮಂದರ ಮತ್ತು ಹಿಮವತ್ಪರ್ವತಗಳನ್ನು ದಾಟಿದನು.
13020029a ತಾನತೀತ್ಯ ಮಹಾಶೈಲಾನ್ಕೈರಾತಂ ಸ್ಥಾನಮುತ್ತಮಮ್।
13020029c ಪ್ರದಕ್ಷಿಣಂ ತತಶ್ಚಕ್ರೇ ಪ್ರಯತಃ ಶಿರಸಾ ನಮನ್।
13020029e ಧರಣೀಮವತೀರ್ಯಾಥ ಪೂತಾತ್ಮಾಸೌ ತದಾಭವತ್।।
ಆ ಮಹಾಶೈಲಗಳನ್ನು ದಾಟಿ ಅವನು ಕಿರಾತರೂಪೀ ಶಿವನ ಉತ್ತಮ ಸ್ಥಾನಕ್ಕೆ ಆಗಮಿಸಿದನು. ಪ್ರದಕ್ಷಿಣೆ ಮಾಡಿ ಶಿರಸಾ ವಂದಿಸಿ ಧರಣಿಗಿಳಿದ ಅವನು ಪೂತಾತ್ಮನಾದನು.
13020030a ಸ ತಂ ಪ್ರದಕ್ಷಿಣಂ ಕೃತ್ವಾ ತ್ರಿಃ ಶೈಲಂ ಚೋತ್ತರಾಮುಖಃ।
13020030c ಸಮೇನ ಭೂಮಿಭಾಗೇನ ಯಯೌ ಪ್ರೀತಿಪುರಸ್ಕೃತಃ।।
ಆ ಶೈಲಕ್ಕೆ ಮೂರು ಪ್ರದಕ್ಷಿಣೆಗಳನ್ನು ಹಾಕಿ ಉತ್ತರಾಭಿಮುಖನಾಗಿ ಹೊರಟು ಪ್ರೀತಿಪುರಸ್ಕೃತನಾಗಿ ಸಮಭೂಮಿ ಪ್ರದೇಶಕ್ಕೆ ಬಂದನು.
13020031a ತತೋಽಪರಂ ವನೋದ್ದೇಶಂ ರಮಣೀಯಮಪಶ್ಯತ।
13020031c ಸರ್ವರ್ತುಭಿರ್ಮೂಲಫಲೈಃ ಪಕ್ಷಿಭಿಶ್ಚ ಸಮನ್ವಿತಮ್।
13020031e ರಮಣೀಯೈರ್ವನೋದ್ದೇಶೈಸ್ತತ್ರ ತತ್ರ ವಿಭೂಷಿತಮ್।।
ಅನಂತರ ಅಲ್ಲಿ ಇನ್ನೊಂದು ರಮಣೀಯ ವನಪ್ರದೇಶವನ್ನು ಕಂಡನು. ಅದು ಸರ್ವಋತುಗಳ ಫಲ-ಮೂಲಗಳಿಂದ ಮತ್ತು ಪಕ್ಷಿಗಳಿಂದ ತುಂಬಿತ್ತು. ಅಲ್ಲಲ್ಲಿ ವಿಭೂಷಿತವಾಗಿ ರಮಣೀಯ ವನೋದ್ದೇಶಗಳನ್ನು ನೋಡಿದನು.
13020032a ತತ್ರಾಶ್ರಮಪದಂ ದಿವ್ಯಂ ದದರ್ಶ ಭಗವಾನಥ।
13020032c ಶೈಲಾಂಶ್ಚ ವಿವಿಧಾಕಾರಾನ್ಕಾಂಚನಾನ್ರತ್ನಭೂಷಿತಾನ್।
13020032e ಮಣಿಭೂಮೌ ನಿವಿಷ್ಟಾಶ್ಚ ಪುಷ್ಕರಿಣ್ಯಸ್ತಥೈವ ಚ।।
ಅಲ್ಲಿ ಆ ಭಗವಾನನು ವಿವಿಧಾಕಾರದ ಕಾಂಚನ-ರತ್ನಭೂಷಿತ ಶೈಲಗಳನ್ನೂ, ಮಣಿಮಯ ಭೂಮಿಯನ್ನೂ, ದಿವ್ಯ ಸರೋವರಗಳ ಮಧ್ಯೆ ಇದ್ದ ಒಂದು ದಿವ್ಯ ಆಶ್ರಮಪದವನ್ನೂ ಕಂಡನು.
13020033a ಅನ್ಯಾನ್ಯಪಿ ಸುರಮ್ಯಾಣಿ ದದರ್ಶ ಸುಬಹೂನ್ಯಥ।
13020033c ಭೃಶಂ ತಸ್ಯ ಮನೋ ರೇಮೇ ಮಹರ್ಷೇರ್ಭಾವಿತಾತ್ಮನಃ।।
ಅನ್ಯ ಅನೇಕ ಸುರಮ್ಯ ದೃಶ್ಯಗಳನ್ನು ಕಂಡ ಆ ಭಾವಿತಾತ್ಮ ಮಹರ್ಷಿಯ ಮನಸ್ಸು ಅತ್ಯಂತ ಆಹ್ಲಾದಗೊಂಡಿತು.
13020034a ಸ ತತ್ರ ಕಾಂಚನಂ ದಿವ್ಯಂ ಸರ್ವರತ್ನಮಯಂ ಗೃಹಮ್।
13020034c ದದರ್ಶಾದ್ಭುತಸಂಕಾಶಂ ಧನದಸ್ಯ ಗೃಹಾದ್ವರಮ್।।
ಅಲ್ಲಿ ಅವನು ಸರ್ವರತ್ನಮಯ ದಿವ್ಯ ಕಾಂಚನ ಗೃಹವನ್ನು ನೋಡಿದನು. ಅದು ಧನದನ ಭವನಕ್ಕಿಂತಲೂ ಅದ್ಭುತವಾಗಿತ್ತು.
13020035a ಮಹಾಂತೋ ಯತ್ರ ವಿವಿಧಾಃ ಪ್ರಾಸಾದಾಃ ಪರ್ವತೋಪಮಾಃ।
13020035c ವಿಮಾನಾನಿ ಚ ರಮ್ಯಾಣಿ ರತ್ನಾನಿ ವಿವಿಧಾನಿ ಚ।।
ಅಲ್ಲಿ ಪರ್ವತೋಪಮ ವಿವಿಧ ಪ್ರಾಸಾದಗಳಿದ್ದವು. ವಿಮಾನಗಳೂ, ವಿವಿಧ ರಮ್ಯ ರತ್ನಗಳೂ ಇದ್ದವು.
13020036a ಮಂದಾರಪುಷ್ಪೈಃ ಸಂಕೀರ್ಣಾ ತಥಾ ಮಂದಾಕಿನೀ ನದೀ।
13020036c ಸ್ವಯಂಪ್ರಭಾಶ್ಚ ಮಣಯೋ ವಜ್ರೈರ್ಭೂಮಿಶ್ಚ ಭೂಷಿತಾ।।
ಅಲ್ಲಿ ಹರಿಯುತ್ತಿದ್ದ ಮಂದಾಕಿನೀ ನದಿಯು ಮಂದಾರಪುಷ್ಪಗಳಿಂದ ತುಂಬಿತ್ತು ಮತ್ತು ಭೂಮಿಯು ಸ್ವಯಂ ಪ್ರಭೆಯ ಮಣಿ-ವಜ್ರಗಳಿಂದ ಭೂಷಿತವಾಗಿತ್ತು.
13020037a ನಾನಾವಿಧೈಶ್ಚ ಭವನೈರ್ವಿಚಿತ್ರಮಣಿತೋರಣೈಃ।
13020037c ಮುಕ್ತಾಜಾಲಪರಿಕ್ಷಿಪ್ತೈರ್ಮಣಿರತ್ನವಿಭೂಷಿತೈಃ।
13020037e ಮನೋದೃಷ್ಟಿಹರೈ ರಮ್ಯೈಃ ಸರ್ವತಃ ಸಂವೃತಂ ಶುಭೈಃ।।
ಆ ಆಶ್ರಮ ಪದದ ಎಲ್ಲೆಡೆಯಲ್ಲಿಯೂ ಮನೋದೃಷ್ಟಿಗಳನ್ನು ಅಪಹರಿಸುವ ನಾನಾವಿಧದ ರಮ್ಯ ಶುಭ ಭವನಗಳಿದ್ದವು. ಆ ಭವನಗಳಿಗೆ ವಿಚಿತ್ರ ಮಣಿ ತೋರಣಗಳಿದ್ದವು. ಮುತ್ತಿನ ಗುಚ್ಚುಗಳಿಂದ ಹಾಗೂ ಮಣಿ-ರತ್ನಗಳಿಂದ ಅಲಂಕರಿಸ್ಪಟ್ಟಿದ್ದವು.
13020038a ಋಷಿಃ ಸಮಂತತೋಽಪಶ್ಯತ್ತತ್ರ ತತ್ರ ಮನೋರಮಮ್।
13020038c ತತೋಽಭವತ್ತಸ್ಯ ಚಿಂತಾ ಕ್ವ ಮೇ ವಾಸೋ ಭವೇದಿತಿ।।
ಸುತ್ತಲೂ ಅಲ್ಲಲ್ಲಿ ಮನೋರಮ ದೃಶ್ಯಗಳನ್ನು ನೋಡಿದ ಋಷಿಗೆ “ನಾನು ಇಲ್ಲಿ ವಾಸಿಸಬಹುದೇ?” ಎಂಬ ಯೋಚನೆಯು ಉಂಟಾಯಿತು.
13020039a ಅಥ ದ್ವಾರಂ ಸಮಭಿತೋ ಗತ್ವಾ ಸ್ಥಿತ್ವಾ ತತೋಽಬ್ರವೀತ್।
13020039c ಅತಿಥಿಂ ಮಾಮನುಪ್ರಾಪ್ತಮನುಜಾನಂತು ಯೇಽತ್ರ ವೈ।।
ಕೂಡಲೇ ಅವನು ದ್ವಾರದ ಬಳಿಹೋಗಿ ನಿಂತು ಗಟ್ಟಿಯಾಗಿ “ಅತಿಥಿಯೋರ್ವನು ಬಂದಿರುವನೆಂದು ಇಲ್ಲಿರುವವರಿಗೆ ತಿಳಿಯಲಿ!” ಎಂದು ಕೂಗಿದನು.
13020040a ಅಥ ಕನ್ಯಾಪರಿವೃತಾ ಗೃಹಾತ್ತಸ್ಮಾದ್ವಿನಿಃಸೃತಾಃ।
13020040c ನಾನಾರೂಪಾಃ ಸಪ್ತ ವಿಭೋ ಕನ್ಯಾಃ ಸರ್ವಾ ಮನೋಹರಾಃ।।
ವಿಭೋ! ಕೂಡಲೇ ಆ ಭವನದಿಂದ ಹೊರಬಂದ ಏಳು ನಾನಾ ರೂಪದ ಏಳು, ಸರ್ವರೂ ಮನೋಹರ ಕನ್ಯೆಯರು, ಅವನನ್ನು ಸುತ್ತುವರೆದರು.
13020041a ಯಾಂ ಯಾಮಪಶ್ಯತ್ಕನ್ಯಾಂ ಸ ಸಾ ಸಾ ತಸ್ಯ ಮನೋಽಹರತ್।
13020041c ನಾಶಕ್ನುವದ್ಧಾರಯಿತುಂ ಮನೋಽಥಾಸ್ಯಾವಸೀದತಿ।।
ಅವನು ಯಾವ ಕನ್ಯೆಯನ್ನು ನೋಡುತ್ತಿದ್ದನೋ ಅವಳು ಅವನ ಮನಸ್ಸನ್ನು ಅಪಹರಿಸುತ್ತಿದ್ದಳು. ಅವರ ಕಡೆ ಹೋಗುತ್ತಿದ್ದ ತನ್ನ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಲು ಅವನಿಗೆ ಸಾಧ್ಯವಾಗಲಿಲ್ಲ.
13020042a ತತೋ ಧೃತಿಃ ಸಮುತ್ಪನ್ನಾ ತಸ್ಯ ವಿಪ್ರಸ್ಯ ಧೀಮತಃ।
13020042c ಅಥ ತಂ ಪ್ರಮದಾಃ ಪ್ರಾಹುರ್ಭಗವಾನ್ಪ್ರವಿಶತ್ವಿತಿ।।
ಆಗ ಆ ಧೀಮತ ವಿಪ್ರನಿಗೆ ಧೈರ್ಯವುಂಟಾಯಿತು. ಕೂಡಲೇ ಆ ಪ್ರಮದೆಯರು ಅವನಿಗೆ “ಭಗವಾನ್! ಭವನವನ್ನು ಪ್ರವೇಶಿಸು!” ಎಂದರು.
13020043a ಸ ಚ ತಾಸಾಂ ಸುರೂಪಾಣಾಂ ತಸ್ಯೈವ ಭವನಸ್ಯ ಚ।
13020043c ಕೌತೂಹಲಸಮಾವಿಷ್ಟಃ ಪ್ರವಿವೇಶ ಗೃಹಂ ದ್ವಿಜಃ।।
ಆ ಸುರೂಪಿಗಳ ಕುರಿತೂ ಮತ್ತು ಆ ಭವನದ ಕುರಿತೂ ಅತ್ಯಂತ ಕುತೂಹಲನಾಗಿದ್ದ ದ್ವಿಜನು ಭವನವನ್ನು ಪ್ರವೇಶಿಸಿದನು.
13020044a ತತ್ರಾಪಶ್ಯಜ್ಜರಾಯುಕ್ತಾಮರಜೋಂಬರಧಾರಿಣೀಮ್।
13020044c ವೃದ್ಧಾಂ ಪರ್ಯಂಕಮಾಸೀನಾಂ ಸರ್ವಾಭರಣಭೂಷಿತಾಮ್।।
ಅಲ್ಲಿ ಪರ್ಯಂಕದ ಮೇಲೆ ಕುಳಿತಿದ್ದ, ಶುಭ್ರವಸ್ತ್ರವನ್ನುಟ್ಟಿದ್ದ, ಸರ್ವಾಭರಣ ಭೂಷಿತಳಾಗಿದ್ದ ಮುಪ್ಪಿನಿಂದ ಜೀರ್ಣಳಾಗಿ ಹೋಗಿದ್ದ ವೃದ್ಧ ಸ್ತ್ರೀಯನ್ನು ಅವನು ನೋಡಿದನು.
13020045a ಸ್ವಸ್ತೀತಿ ಚಾಥ ತೇನೋಕ್ತಾ ಸಾ ಸ್ತ್ರೀ ಪ್ರತ್ಯವದತ್ತದಾ।
13020045c ಪ್ರತ್ಯುತ್ಥಾಯ ಚ ತಂ ವಿಪ್ರಮಾಸ್ಯತಾಮಿತ್ಯುವಾಚ ಹ।।
“ಮಂಗಳವಾಗಲಿ!” ಎಂದು ಅವನು ಅವಳಿಗೆ ಹೇಳಲು ಆ ಸ್ತ್ರೀಯು ಮೇಲೆದ್ದು “ಬರಬೇಕು!” ಎಂದು ವಿಪ್ರನಿಗೆ ಹೇಳಿದಳು.
13020046 ಅಷ್ಟಾವಕ್ರ ಉವಾಚ।
13020046a ಸರ್ವಾಃ ಸ್ವಾನಾಲಯಾನ್ಯಾಂತು ಏಕಾ ಮಾಮುಪತಿಷ್ಠತು।
13020046c ಸುಪ್ರಜ್ಞಾತಾ ಸುಪ್ರಶಾಂತಾ ಶೇಷಾ ಗಚ್ಚಂತು ಚ್ಚಂದತಃ।।
ಅಷ್ಟಾವಕ್ರನು ಹೇಳಿದನು: “ಇವರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ತೆರಳಲಿ. ಸುಪ್ರಜ್ಞಳಾದ ಸುಪ್ರಶಾಂತಳಾದ ಒಬ್ಬಳೇ ನನ್ನ ಬಳಿಯಲ್ಲಿರಲಿ. ಉಳಿದವರು ಅವರಿಗಿಷ್ಟವಾದಲ್ಲಿಗೆ ಹೋಗಲಿ!”
13020047a ತತಃ ಪ್ರದಕ್ಷಿಣೀಕೃತ್ಯ ಕನ್ಯಾಸ್ತಾಸ್ತಮೃಷಿಂ ತದಾ।
13020047c ನಿರಾಕ್ರಾಮನ್ಗೃಹಾತ್ತಸ್ಮಾತ್ಸಾ ವೃದ್ಧಾಥ ವ್ಯತಿಷ್ಠತ।।
ಆಗ ಆ ಕನ್ಯೆಯರು ಋಷಿಗೆ ಪ್ರದಕ್ಷಿಣೆ ನಮಸ್ಕಾರ ಮಾಡಿ ತಮ್ಮ ತಮ್ಮ ಮನೆಗಳಿಗೆ ತೆರಳಿದರು. ವೃದ್ಧೆಯು ಮಾತ್ರ ಅಲ್ಲಿ ಉಳಿದುಕೊಂಡಳು.
13020048a ಅಥ ತಾಂ ಸಂವಿಶನ್ಪ್ರಾಹ ಶಯನೇ ಭಾಸ್ವರೇ ತದಾ।
13020048c ತ್ವಯಾಪಿ ಸುಪ್ಯತಾಂ ಭದ್ರೇ ರಜನೀ ಹ್ಯತಿವರ್ತತೇ।।
ಹೊಳೆಯುತ್ತಿರುವ ಶಯನದಲ್ಲಿ ಮಲಗಿಕೊಂಡ ಅವನು ಅವಳಿಗೆ “ಭದ್ರೇ! ರಾತ್ರಿಯು ಕಳೆಯುತ್ತಿದೆ. ನೀನೂ ಕೂಡ ನಿದ್ರಿಸು!” ಎಂದನು.
13020049a ಸಂಲಾಪಾತ್ತೇನ ವಿಪ್ರೇಣ ತಥಾ ಸಾ ತತ್ರ ಭಾಷಿತಾ।
13020049c ದ್ವಿತೀಯೇ ಶಯನೇ ದಿವ್ಯೇ ಸಂವಿವೇಶ ಮಹಾಪ್ರಭೇ।।
ಸಲ್ಲಾಪಗಳು ನಡೆಯುತ್ತಿದ್ದಾಗ ವಿಪ್ರನು ಹೀಗೆ ಹೇಳಲು ಅವಳು ಮಹಾಪ್ರಭೆಯ ಇನ್ನೊಂದು ದಿವ್ಯ ಶಯನದಲ್ಲಿ ಮಲಗಿಕೊಂಡಳು.
13020050a ಅಥ ಸಾ ವೇಪಮಾನಾಂಗೀ ನಿಮಿತ್ತಂ ಶೀತಜಂ ತದಾ।
13020050c ವ್ಯಪದಿಶ್ಯ ಮಹರ್ಷೇರ್ವೈ ಶಯನಂ ಚಾಧ್ಯರೋಹತ।।
ಆಗ ಅವಳು ಛಳಿಯ ನಿಮಿತ್ತವನ್ನು ಮಾಡಿಕೊಂಡು ಮೈನಡುಗಿಸುತ್ತಾ ಆ ಮಹರ್ಷಿಯ ಶಯನವನ್ನು ಏರಿದಳು.
13020051a ಸ್ವಾಗತಂ ಸ್ವಾಗತೇನಾಸ್ತು ಭಗವಾಂಸ್ತಾಮಭಾಷತ।
13020051c ಸೋಪಾಗೂಹದ್ಭುಜಾಭ್ಯಾಂ ತು ಋಷಿಂ ಪ್ರೀತ್ಯಾ ನರರ್ಷಭ।।
ನರರ್ಷಭ! “ಸ್ವಾಗತ! ಸ್ವಾಗತ!” ಎಂದು ಭಗವಾನ್ ಅಷ್ಟಾವಕ್ರನು ಅವಳಿಗೆ ಹೇಳಲು ಅವಳು ಪ್ರೀತಿಯಿಂದ ತನ್ನೆರಡೂ ಭುಜಗಳಿಂದ ಅವನನ್ನು ಬಿಗಿದಪ್ಪಿ ಮಲಗಿಕೊಂಡಳು.
13020052a ನಿರ್ವಿಕಾರಮೃಷಿಂ ಚಾಪಿ ಕಾಷ್ಠಕುಡ್ಯೋಪಮಂ ತದಾ।
13020052c ದುಃಖಿತಾ ಪ್ರೇಕ್ಷ್ಯ ಸಂಜಲ್ಪಮಕಾರ್ಷೀದೃಷಿಣಾ ಸಹ।।
ಮರದ ತುಂಡಿನಂತೆ ಅಥವಾ ಗೋಡೆಯಂತೆ ಆ ಋಷಿಯು ನಿರ್ವಿಕಾರನಾಗಿರುವುದನ್ನು ನೋಡಿ ದುಃಖಿತಳಾಗಿ ಅವಳು ಋಷಿಯೊಡನೆ ಸರಸ-ಸಲ್ಲಾಪಗಳನ್ನು ಪ್ರಾರಂಭಿಸಿದಳು.
13020053a ಬ್ರಹ್ಮನ್ನ ಕಾಮಕಾರೋಽಸ್ತಿ ಸ್ತ್ರೀಣಾಂ ಪುರುಷತೋ ಧೃತಿಃ।
13020053c ಕಾಮೇನ ಮೋಹಿತಾ ಚಾಹಂ ತ್ವಾಂ ಭಜಂತೀಂ ಭಜಸ್ವ ಮಾಮ್।।
13020054a ಪ್ರಹೃಷ್ಟೋ ಭವ ವಿಪ್ರರ್ಷೇ ಸಮಾಗಚ್ಚ ಮಯಾ ಸಹ।
“ಬ್ರಹ್ಮನ್! ಕಾಮಕಾರ್ಯದ ಹೊರತಾಗಿ ಬೇರೆ ಯಾವುದರಲ್ಲಿಯೂ ಸ್ತ್ರೀಯರಿಗೆ ಪುರುಷರಿಗಿಂತಲೂ ಹೆಚ್ಚಿನ ಧೈರ್ಯವಿರುವುದಿಲ್ಲ. ಕಾಮಮೋಹಿತಳಾದ ನಾನು ನಿನ್ನನ್ನು ಬಯಸುತ್ತೇನೆ. ನೀನೂ ನನ್ನನ್ನು ಬಯಸು. ವಿಪ್ರರ್ಷೇ! ನನ್ನೊಡನೆ ಕೂಡಿ ಪ್ರಹೃಷ್ಟನಾಗು!
13020054c ಉಪಗೂಹ ಚ ಮಾಂ ವಿಪ್ರ ಕಾಮಾರ್ತಾಹಂ ಭೃಶಂ ತ್ವಯಿ।।
13020055a ಏತದ್ಧಿ ತವ ಧರ್ಮಾತ್ಮಂಸ್ತಪಸಃ ಪೂಜ್ಯತೇ ಫಲಮ್।
13020055c ಪ್ರಾರ್ಥಿತಂ ದರ್ಶನಾದೇವ ಭಜಮಾನಾಂ ಭಜಸ್ವ ಮಾಮ್।।
ನನ್ನನ್ನು ಆಲಂಗಿಸು. ವಿಪ್ರ! ನಾನು ನಿನ್ನಲ್ಲಿ ಅತ್ಯಂತ ಕಾಮಾರ್ತಳಾಗಿದ್ದೇನೆ. ಧರ್ಮಾತ್ಮನ್! ಇದೇ ನಿನ್ನ ತಪಸ್ಸಿನ ಪೂಜ್ಯ ಫಲವೆಂದು ತಿಳಿ. ನಿನ್ನನ್ನು ನೋಡಿದೊಡನೆಯೇ ನಾನು ನಿನ್ನಲ್ಲಿ ಅನುರಕ್ತಳಾಗಿದ್ದೇನೆ. ಈ ಸೇವಕಿಯನ್ನು ಪರಿಗ್ರಹಿಸು!
13020056a ಸದ್ಮ ಚೇದಂ ವನಂ ಚೇದಂ ಯಚ್ಚಾನ್ಯದಪಿ ಪಶ್ಯಸಿ।
13020056c ಪ್ರಭುತ್ವಂ ತವ ಸರ್ವತ್ರ ಮಯಿ ಚೈವ ನ ಸಂಶಯಃ।।
ನಾನು, ನನ್ನ ಈ ಭವನ, ವನ ಮತ್ತು ಏನೆಲ್ಲ ನೀನು ನೋಡುತ್ತೀಯೋ ಎಲ್ಲವಕ್ಕೂ ನೀನು ಪ್ರಭು ಎನ್ನುವುದರಲ್ಲಿ ಸಂಶಯವಿಲ್ಲ.
13020057a ಸರ್ವಾನ್ಕಾಮಾನ್ವಿಧಾಸ್ಯಾಮಿ ರಮಸ್ವ ಸಹಿತೋ ಮಯಾ।
13020057c ರಮಣೀಯೇ ವನೇ ವಿಪ್ರ ಸರ್ವಕಾಮಫಲಪ್ರದೇ।।
ವಿಪ್ರ! ಸರ್ವಕಾಮಗಳನ್ನೂ ಪೂರೈಸುತ್ತೇನೆ. ಸರ್ವಕಾಮಫಲಗಳನ್ನೂ ನೀಡುವ ಈ ರಮಣೀಯ ವನದಲ್ಲಿ ನನ್ನೊಡನೆ ರಮಿಸು.
13020058a ತ್ವದ್ವಶಾಹಂ ಭವಿಷ್ಯಾಮಿ ರಂಸ್ಯಸೇ ಚ ಮಯಾ ಸಹ।
13020058c ಸರ್ವಾನ್ಕಾಮಾನುಪಾಶ್ನಾನೋ ಯೇ ದಿವ್ಯಾ ಯೇ ಚ ಮಾನುಷಾಃ।।
ನಾನು ನಿನ್ನ ವಶಳಾಗುತ್ತೇನೆ. ಮತ್ತು ನನ್ನೊಡನೆ ನೀನು ರಮಿಸುತ್ತೀಯೆ. ದಿವ್ಯ ಮತ್ತು ಮಾನುಷ ಎಲ್ಲ ಕಾಮಗಳನ್ನೂ ಪಡೆದುಕೊಳ್ಳುತ್ತೀಯೆ.
13020059a ನಾತಃ ಪರಂ ಹಿ ನಾರೀಣಾಂ ಕಾರ್ಯಂ ಕಿಂ ಚನ ವಿದ್ಯತೇ।
13020059c ಯಥಾ ಪುರುಷಸಂಸರ್ಗಃ ಪರಮೇತದ್ಧಿ ನಃ ಫಲಮ್।।
ಸ್ತ್ರೀಯರಿಗೆ ಪುರುಷಸಂಸರ್ಗದಿಂದ ದೊರೆಯುವ ಪರಮ ಫಲಕ್ಕಿಂತ ಹೆಚ್ಚು ಪ್ರಿಯವಾದುದು ಬೇರೆ ಯಾವುದೂ ಇಲ್ಲ. ಅದೇ ನಮಗೆ ಸರ್ವೋತ್ತಮ ಫಲವಾಗಿದೆ.
13020060a ಆತ್ಮಚ್ಚಂದೇನ ವರ್ತಂತೇ ನಾರ್ಯೋ ಮನ್ಮಥಚೋದಿತಾಃ।
13020060c ನ ಚ ದಹ್ಯಂತಿ ಗಚ್ಚಂತ್ಯಃ ಸುತಪ್ತೈರಪಿ ಪಾಂಸುಭಿಃ।।
ಮನ್ಮಥನಿಂದ ಪ್ರೇರಿತ ನಾರಿಯರು ಸ್ವಚ್ಛಂದರಾಗಿ ವರ್ತಿಸುತ್ತಾರೆ. ಆಗ ಅವರು ಕಾದ ಧೂಳಿನಲ್ಲಿ ನಡೆದುಕೊಂಡು ಹೋದರೂ ಅದು ಅವರನ್ನು ಸುಡುವುದಿಲ್ಲ!”
13020061 ಅಷ್ಟಾವಕ್ರ ಉವಾಚ।
13020061a ಪರದಾರಾನಹಂ ಭದ್ರೇ ನ ಗಚ್ಚೇಯಂ ಕಥಂ ಚನ।
13020061c ದೂಷಿತಂ ಧರ್ಮಶಾಸ್ತ್ರೇಷು ಪರದಾರಾಭಿಮರ್ಶನಮ್।।
ಅಷ್ಟಾವಕ್ರನು ಹೇಳಿದನು: “ಭದ್ರೇ! ನಾನು ಎಂದೂ ಪರಪತ್ನಿಯರನ್ನು ಕೂಡುವುದಿಲ್ಲ. ಪರದಾರೆಯರ ಸಮಾಗಮವನ್ನು ಧರ್ಮಶಾಸ್ತ್ರಗಳು ದೂಷಿಸುತ್ತವೆ.
13020062a ಭದ್ರೇ ನಿವೇಷ್ಟುಕಾಮಂ ಮಾಂ ವಿದ್ಧಿ ಸತ್ಯೇನ ವೈ ಶಪೇ।
13020062c ವಿಷಯೇಷ್ವನಭಿಜ್ಞೋಽಹಂ ಧರ್ಮಾರ್ಥಂ ಕಿಲ ಸಂತತಿಃ।।
ಭದ್ರೇ! ಸತ್ಯದ ಮೇಲೆ ಆಣೆಯನ್ನಿಟ್ಟು ಹೇಳುತ್ತಿದ್ದೇನೆ. ನಾನು ಕಾಮಕ್ಕಾಗಿ ಏನನ್ನೂ ಮಾಡುವವನಲ್ಲವೆಂದು ತಿಳಿ. ವಿಷಯ ಸುಖಗಳನ್ನು ನಾನು ಅರಿಯೆ. ಕೇವಲ ಧರ್ಮಾರ್ಥಕ್ಕಾಗಿ ಸಂತತಿಯನ್ನು ಬಯಸುತ್ತೇನಲ್ಲವೇ?
13020063a ಏವಂ ಲೋಕಾನ್ಗಮಿಷ್ಯಾಮಿ ಪುತ್ರೈರಿತಿ ನ ಸಂಶಯಃ।
13020063c ಭದ್ರೇ ಧರ್ಮಂ ವಿಜಾನೀಷ್ವ ಜ್ಞಾತ್ವಾ ಚೋಪರಮಸ್ವ ಹ।।
ಹೀಗೆ ಪಡೆದ ಪುತ್ರರಿಂದಲೇ ನಾನು ಉತ್ತಮ ಲೋಕಗಳಿಗೆ ಹೋಗುತ್ತೇನೆ. ಭದ್ರೇ! ಧರ್ಮವನ್ನು ತಿಳಿದುಕೋ. ತಿಳಿದು ಈ ರೀತಿ ಮಾಡುವುದನ್ನು ನಿಲ್ಲಿಸು!”
13020064 ಸ್ತ್ರ್ಯುವಾಚ।
13020064a ನಾನಿಲೋಽಗ್ನಿರ್ನ ವರುಣೋ ನ ಚಾನ್ಯೇ ತ್ರಿದಶಾ ದ್ವಿಜ।
13020064c ಪ್ರಿಯಾಃ ಸ್ತ್ರೀಣಾಂ ಯಥಾ ಕಾಮೋ ರತಿಶೀಲಾ ಹಿ ಯೋಷಿತಃ।।
ಸ್ತ್ರೀಯು ಹೇಳಿದಳು: “ದ್ವಿಜ! ಸ್ತ್ರೀಯರಿಗೆ ವಾಯು, ಅಗ್ನಿ, ವರುಣ ಮತ್ತು ಅನ್ಯ ದೇವತೆಗಳೂ ಕಾಮದೇವನಷ್ಟು ಪ್ರಿಯರಲ್ಲ. ನಾರಿಯರು ಸ್ವಭಾವತಃ ರತಿಪ್ರಿಯರು.
13020065a ಸಹಸ್ರೈಕಾ ಯತಾ ನಾರೀ ಪ್ರಾಪ್ನೋತೀಹ ಕದಾ ಚನ।
13020065c ತಥಾ ಶತಸಹಸ್ರೇಷು ಯದಿ ಕಾ ಚಿತ್ಪತಿವ್ರತಾ।।
ಸಹಸ್ರ ಸ್ತ್ರೀಯರಲ್ಲಿ ಒಬ್ಬಳು ರತಿಸುಖದಲ್ಲಿ ಅನಾಸಕ್ತಳಾಗಿರಬಹುದು. ಹಾಗೆಯೇ ನೂರು ಸಾವಿರ ಸ್ತ್ರೀಯರಲ್ಲಿ ಒಬ್ಬಳು ಪತಿವ್ರತೆಯೂ ಆಗಿರಬಹುದು.
13020066a ನೈತಾ ಜಾನಂತಿ ಪಿತರಂ ನ ಕುಲಂ ನ ಚ ಮಾತರಮ್।
13020066c ನ ಭ್ರಾತೄನ್ನ ಚ ಭರ್ತಾರಂ ನ ಪುತ್ರಾನ್ನ ಚ ದೇವರಾನ್।।
ಕಾಮುಕ ಸ್ತ್ರೀಯರು ತಂದೆಯನ್ನೂ ಲೆಕ್ಕಿಸುವುದಿಲ್ಲ. ತಾಯಿಯನ್ನೂ ಲೆಕ್ಕಿಸುವುದಿಲ್ಲ. ಕುಲವನ್ನೂ ಲೆಕ್ಕಿಸುವುದಿಲ್ಲ. ಸಹೋದರರನ್ನಾಗಲೀ, ಪತಿಯನ್ನಾಗಲೀ, ಮಕ್ಕಳನ್ನಾಗಲೀ, ಬಾವ-ಮೈದುನರನ್ನಾಗಲೀ ಲೆಕ್ಕಿಸುವುದಿಲ್ಲ.
13020067a ಲೀಲಾಯಂತ್ಯಃ ಕುಲಂ ಘ್ನಂತಿ ಕೂಲಾನೀವ ಸರಿದ್ವರಾಃ।
13020067c ದೋಷಾಂಶ್ಚ ಮಂದಾನ್ಮಂದಾಸು ಪ್ರಜಾಪತಿರಭಾಷತ।।
ಪ್ರವಾಹದಲ್ಲಿರುವ ನದಿಗಳು ದಡವನ್ನು ಕೊಚ್ಚಿಕೊಂಡು ಹೋಗುವಂತೆ ಸ್ವೇಚ್ಛಾಚಾರೀ ನಾರಿಯರು ಕುಲಗಳನ್ನೇ ಹಾಳುಮಾಡಿಬಿಡುತ್ತಾರೆ. ಸ್ತ್ರೀಯರ ಈ ದೋಷಗಳನ್ನು ತಿಳಿದೇ ಬ್ರಹ್ಮನು ಈ ಮಾತುಗಳನ್ನು ಹೇಳಿದ್ದಾನೆ.””
13020068 ಭೀಷ್ಮ ಉವಾಚ।
13020068a ತತಃ ಸ ಋಷಿರೇಕಾಗ್ರಸ್ತಾಂ ಸ್ತ್ರಿಯಂ ಪ್ರತ್ಯಭಾಷತ।
13020068c ಆಸ್ಯತಾಂ ರುಚಿರಂ ಚಂದಃ ಕಿಂ ವಾ ಕಾರ್ಯಂ ಬ್ರವೀಹಿ ಮೇ।।
ಭೀಷ್ಮನು ಹೇಳಿದನು: “ಅನಂತರ ಋಷಿಯು ಏಕಾಗ್ರಚಿತ್ತನಾಗಿ ಸ್ತ್ರೀಗೆ ಉತ್ತರಿಸಿದನು: “ಸುಮ್ಮನಾಗು! ಕಾಮದಿಂದ ನೀನು ಮಾತನಾಡುತ್ತಿರುವೆ! ಈಗ ನಾನೇನು ಮಾಡಬೇಕೆಂದು ಹೇಳು!”
13020069a ಸಾ ಸ್ತ್ರೀ ಪ್ರೋವಾಚ ಭಗವನ್ದ್ರಕ್ಷ್ಯಸೇ ದೇಶಕಾಲತಃ।
13020069c ವಸ ತಾವನ್ಮಹಾಪ್ರಾಜ್ಞ ಕೃತಕೃತ್ಯೋ ಗಮಿಷ್ಯಸಿ।।
ಆ ಸ್ತ್ರೀಯು ಉತ್ತರಿಸಿದಳು: “ಭಗವನ್! ದೇಶಕಾಲಗಳಿಗನುಸಾರವಾಗಿ ನೀನೇ ಎಲ್ಲವನ್ನೂ ಕಾಣುತ್ತೀಯೆ. ಮಹಾಪ್ರಾಜ್ಞ! ಅಲ್ಲಿಯವರೆಗೆ ನೀನು ಇಲ್ಲಿಯೇ ಇರು. ಕೃತಕೃತ್ಯನಾಗುವೆ!”
13020070a ಬ್ರಹ್ಮರ್ಷಿಸ್ತಾಮಥೋವಾಚ ಸ ತಥೇತಿ ಯುಧಿಷ್ಠಿರ।
13020070c ವತ್ಸ್ಯೇಽಹಂ ಯಾವದುತ್ಸಾಹೋ ಭವತ್ಯಾ ನಾತ್ರ ಸಂಶಯಃ।।
ಯುಧಿಷ್ಠಿರ! ಆ ಬ್ರಹ್ಮರ್ಷಿಯು ಅವಳಿಗೆ “ಹಾಗೆಯೇ ಆಗಲಿ! ನಿನಗೆ ಉತ್ಸಾಹವಿರುವಲ್ಲಿಯವರೆಗೆ ನಾನು ಇಲ್ಲಿಯೇ ವಾಸಿಸುತ್ತೇನೆ. ಅದರಲ್ಲಿ ಸಂಶಯವಿರದಿರಲಿ!” ಎಂದನು.
13020071a ಅಥರ್ಷಿರಭಿಸಂಪ್ರೇಕ್ಷ್ಯ ಸ್ತ್ರಿಯಂ ತಾಂ ಜರಯಾನ್ವಿತಾಮ್।
13020071c ಚಿಂತಾಂ ಪರಮಿಕಾಂ ಭೇಜೇ ಸಂತಪ್ತ ಇವ ಚಾಭವತ್।।
ಆಗ ಮುಪ್ಪು ಆವರಿಸಿದ್ದ ಆ ಸ್ತ್ರೀಯನ್ನು ನೋಡಿ ಋಷಿಯಲ್ಲಿ ಪರಮ ಚಿಂತೆಯು ಹುಟ್ಟಿಕೊಂಡಿತು ಮತ್ತು ಅವನು ಸಂತಪ್ತನಾದನು ಕೂಡ.
13020072a ಯದ್ಯದಂಗಂ ಹಿ ಸೋಽಪಶ್ಯತ್ತಸ್ಯಾ ವಿಪ್ರರ್ಷಭಸ್ತದಾ।
13020072c ನಾರಮತ್ತತ್ರ ತತ್ರಾಸ್ಯ ದೃಷ್ಟೀ ರೂಪಪರಾಜಿತಾ।।
ಅವಳ ಯಾವ ಅಂಗವನ್ನು ಆ ವಿಪ್ರರ್ಷಿಯು ನೋಡಿದನೋ ಆ ಅಂಗದ ವಿಷಯದಲ್ಲಿ ಅವನಿಗೆ ಜಿಗುಪ್ಸೆಯುಂಟಾಗುತ್ತಿದ್ದಿತೇ ಹೊರತು ಅನುಕಂಪವಾಗುತ್ತಿರಲಿಲ್ಲ. ಆ ಅಂಗವನ್ನು ಪುನಃ ನೋಡ ಕೂಡದೆಂದು ವಿರಾಗವುಂಟಾಗುತ್ತಿದ್ದಿತೇ ಹೊರತು ಮತ್ತೊಮ್ಮೆ ನೋಡಬೇಕೆಂಬ ಅನುರಾಗವುಂಟಾಗುತ್ತಿರಲಿಲ್ಲ.
13020073a ದೇವತೇಯಂ ಗೃಹಸ್ಯಾಸ್ಯ ಶಾಪಾನ್ನೂನಂ ವಿರೂಪಿತಾ।
13020073c ಅಸ್ಯಾಶ್ಚ ಕಾರಣಂ ವೇತ್ತುಂ ನ ಯುಕ್ತಂ ಸಹಸಾ ಮಯಾ।।
“ಇವಳು ಈ ಗೃಹದ ದೇವತೆ! ಯಾವುದೋ ಶಾಪದಿಂದ ಇವಳು ವಿರೂಪಿಯಾಗಿರಬಹುದು. ಕೂಡಲೇ ಇದರ ಕಾರಣವನ್ನು ಕೇಳುವುದು ಸರಿಯಲ್ಲ.”
13020074a ಇತಿ ಚಿಂತಾವಿಷಕ್ತಸ್ಯ ತಮರ್ಥಂ ಜ್ಞಾತುಮಿಚ್ಚತಃ।
13020074c ವ್ಯಗಮತ್ತದಹಃಶೇಷಂ ಮನಸಾ ವ್ಯಾಕುಲೇನ ತು।।
ಹೀಗೆ ಯೋಚಿಸಿ ಅದರ ಅರ್ಥವನ್ನು ತಿಳಿದುಕೊಳ್ಳಲು ಬಯಸಿದ ಅವನ ಮನಸ್ಸು ವ್ಯಾಕುಲಗೊಂಡಿರಲು ಉಳಿದ ಹಗಲೆಲ್ಲವೂ ಕಳೆದುಹೋಯಿತು.
13020075a ಅಥ ಸಾ ಸ್ತ್ರೀ ತದೋವಾಚ ಭಗವನ್ಪಶ್ಯ ವೈ ರವೇಃ।
13020075c ರೂಪಂ ಸಂಧ್ಯಾಭ್ರಸಂಯುಕ್ತಂ ಕಿಮುಪಸ್ಥಾಪ್ಯತಾಂ ತವ।।
ಆಗ ಆ ಸ್ತ್ರೀಯು ಅವನಿಗೆ ಹೇಳಿದಳು: “ಭಗವನ್! ರಕ್ತಮಯವಾಗಿ ಕಾಣುತ್ತಿರುವ ಸಂಧ್ಯಾಕಾಲದ ಸೂರ್ಯನ ರೂಪವನ್ನು ನೋಡು! ಈಗ ಸಂಧ್ಯಾಕಾಲದ ವಿಧಿಗಾಗಿ ಯಾವ ಯಾವ ವಸ್ತುಗಳನ್ನು ತಂದುಕೊಡಲಿ?”
13020076a ಸ ಉವಾಚ ತದಾ ತಾಂ ಸ್ತ್ರೀಂ ಸ್ನಾನೋದಕಮಿಹಾನಯ।
13020076c ಉಪಾಸಿಷ್ಯೇ ತತಃ ಸಂಧ್ಯಾಂ ವಾಗ್ಯತೋ ನಿಯತೇಂದ್ರಿಯಃ।।
ಆಗ ಅವನು ಆ ಸ್ತ್ರೀಗೆ “ಸ್ನಾನಕ್ಕೆ ನೀರನ್ನು ತಂದುಕೊಡು. ಸ್ನಾನಮಾಡಿ ಮೌನಿಯಾಗಿ ಜಿತೇಂದ್ರಿಯನಾಗಿ ಸಂಧ್ಯೋಪಾಸನೆಯನ್ನು ಮಾಡುತ್ತೇನೆ.” ಎಂದು ಹೇಳಿದನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಅಷ್ಟಾವಕ್ರಾದಿಕ್ಸಂವಾದೇ ವಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಅಷ್ಟಾವಕ್ರಾದಿಕ್ಸಂವಾದ ಎನ್ನುವ ಇಪ್ಪತ್ತನೇ ಅಧ್ಯಾಯವು.