ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 19
ಸಾರ
ಯುಧಿಷ್ಠಿರನು ದಾಂಪತ್ಯದಲ್ಲಿನ ಸಹಧರ್ಮದ ಕುರಿತು ಕೇಳಲು, ಭೀಷ್ಮನು ಅಷ್ಟಾವಕ್ರ ಮತ್ತು ದಿಕ್ಕುಗಳ ಸಂವಾದವನ್ನು ಉದಾಹರಿಸಿದುದು (1-10). ಅಷ್ಟಾವಕ್ರನು ವದಾನ್ಯನ ಮಗಳನ್ನು ಬಯಸಿ ಕೇಳಲು, ವದಾನ್ಯನು ಅವನಿಗೆ ಉತ್ತರ ದಿಕ್ಕಿನಲ್ಲಿ ರುದ್ರನ ಸ್ಥಾನವನ್ನು ದಾಟಿ ವನಪ್ರದೇಶದಲ್ಲಿರುವ ವೃದ್ಧ ತಪಸ್ವಿನಿಯನ್ನು ಪೂಜಿಸಿ ಬಂದರೆ ತನ್ನ ಮಗಳು ಅಷ್ಟಾವಕ್ರನಿಗೆ ವಿವಾಹದಲ್ಲಿ ದೊರೆಯುತ್ತಾಳೆ ಎಂದುದು (11-25).
13019001 ಯುಧಿಷ್ಠಿರ ಉವಾಚ।
13019001a ಯದಿದಂ ಸಹಧರ್ಮೇತಿ ಪ್ರೋಚ್ಯತೇ ಭರತರ್ಷಭ।
13019001c ಪಾಣಿಗ್ರಹಣಕಾಲೇ ತು ಸ್ತ್ರೀಣಾಮೇತತ್ಕಥಂ ಸ್ಮೃತಮ್।।
ಯುಧಿಷ್ಠಿರನು ಹೇಳಿದನು: “ಭರತರ್ಷಭ! ಪಾಣಿಗ್ರಹಣ ಕಾಲದಲ್ಲಿ ಸ್ತ್ರೀಯರ ವಿಷಯದಲ್ಲಿ “ಸಹಧರ್ಮ1” ಎಂದು ಹೇಳುತ್ತಾರೆ. ಇದು ಹೇಗೆ ಬಂದಿತು?
13019002a ಆರ್ಷ ಏಷ ಭವೇದ್ಧರ್ಮಃ ಪ್ರಾಜಾಪತ್ಯೋಽಥ ವಾಸುರಃ।
13019002c ಯದೇತತ್ಸಹಧರ್ಮೇತಿ ಪೂರ್ವಮುಕ್ತಂ ಮಹರ್ಷಿಭಿಃ।।
ಹಿಂದೆ ಮಹರ್ಷಿಗಳು ಈ ರೀತಿ “ಸಹಧರ್ಮ” ಎಂದು ಹೇಳಿರುವುದು ಆರ್ಷ ಧರ್ಮ2ವಾಗಿರಬಹುದು ಅಥವಾ ಸಂತಾನೋತ್ಪತ್ತಿ3ಗಾಗಿರಬಹುದು ಅಥವಾ ಅಸುರಧರ್ಮ4ವಾಗಿರಬಹುದು.
13019003a ಸಂದೇಹಃ ಸುಮಹಾನೇಷ ವಿರುದ್ಧ ಇತಿ ಮೇ ಮತಿಃ।
13019003c ಇಹ ಯಃ ಸಹಧರ್ಮೋ ವೈ ಪ್ರೇತ್ಯಾಯಂ ವಿಹಿತಃ ಕ್ವ ನು।।
ಇದರ ಕುರಿತು ನನ್ನಲ್ಲಿ ಮಹಾ ಸಂದೇಹವೇ ಉಂಟಾಗಿದೆ. “ಸಹಧರ್ಮ” ಎನ್ನುವುದು ವಿರುದ್ಧವಾದುದು ಎಂದು ನನಗನ್ನಿಸುತ್ತದೆ. ಇಲ್ಲಿರುವ ಸಹಧರ್ಮವು ಮರಣದ ನಂತರ ಎಲ್ಲಿರುತ್ತದೆ?
13019004a ಸ್ವರ್ಗೇ ಮೃತಾನಾಂ ಭವತಿ ಸಹಧರ್ಮಃ ಪಿತಾಮಹ।
13019004c ಪೂರ್ವಮೇಕಸ್ತು ಮ್ರಿಯತೇ ಕ್ವ ಚೈಕಸ್ತಿಷ್ಠತೇ ವದ।।
ಪಿತಾಮಹ! ಸಹಧರ್ಮದಲ್ಲಿದ್ದುಕೊಂಡಿರುವವರಿಗೆ ಮೃತರಾದ ನಂತರ ಸ್ವರ್ಗವು ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಾರೆ. ಪತಿ-ಪತ್ನಿಯರಲ್ಲಿ ಮೊದಲು ಒಬ್ಬರು ತೀರಿಕೊಂಡರೆ ಇಲ್ಲಿ ಏಕಾಂಗಿಯಾಗಿ ಉಳಿದಿರುವ ಇನ್ನೊಬ್ಬರಿಗೆ ಸಹಧರ್ಮವೆನ್ನುವುದು ಹೇಗೆ ಅನ್ವಯಿಸುತ್ತದೆ? ಈ ವಿಷಯದ ಕುರಿತು ಹೇಳು.
13019005a ನಾನಾಕರ್ಮಫಲೋಪೇತಾ ನಾನಾಕರ್ಮನಿವಾಸಿನಃ।
13019005c ನಾನಾನಿರಯನಿಷ್ಠಾಂತಾ ಮಾನುಷಾ ಬಹವೋ ಯದಾ।।
ಮನುಷ್ಯರು ನಾನಾ ಕರ್ಮಫಲಗಳನ್ನು ಪಡೆಯುತ್ತಿರುವಾಗ, ನಾನಾ ಕರ್ಮಗಳಲ್ಲಿ ತೊಡಗಿರುವಾಗ ಮತ್ತು ನಾನಾ ಅವಸ್ಥೆಗಳನ್ನು ಹೊಂದುವಾಗ ಸ್ತ್ರೀ-ಪುರುಷರಲ್ಲಿ ಸಹಧರ್ಮದ ನಿರ್ವಾಹವು ಹೇಗೆ ಸಾಧ್ಯವಾಗುತ್ತದೆ?
13019006a ಅನೃತಾಃ ಸ್ತ್ರಿಯ ಇತ್ಯೇವಂ ಸೂತ್ರಕಾರೋ ವ್ಯವಸ್ಯತಿ।
13019006c ಯದಾನೃತಾಃ ಸ್ತ್ರಿಯಸ್ತಾತ ಸಹಧರ್ಮಃ ಕುತಃ ಸ್ಮೃತಃ।।
ಸ್ತ್ರೀಯರು ಸುಳ್ಳುಹೇಳುವವರು ಎಂದು ಸೂತ್ರಕಾರರು ನಿಶ್ಚಯಿಸಿದ್ದಾರೆ5. ಅಯ್ಯಾ! ಸ್ತ್ರೀಯರು ಅನೃತರೆಂದಾದರೆ ಅವರೊಡನೆ ಸಹಧರ್ಮವು ಹೇಗೆ ಸಾಧ್ಯ?
13019007a ಅನೃತಾಃ ಸ್ತ್ರಿಯ ಇತ್ಯೇವಂ ವೇದೇಷ್ವಪಿ ಹಿ ಪಠ್ಯತೇ।
13019007c ಧರ್ಮೋಽಯಂ ಪೌರ್ವಿಕೀ ಸಂಜ್ಞಾ ಉಪಚಾರಃ ಕ್ರಿಯಾವಿಧಿಃ।।
ಸ್ತ್ರೀಯರು ಅಸತ್ಯರು ಎಂದು ವೇದಗಳೂ ಹೇಳುತ್ತವೆ. ಈ ಸಹಧರ್ಮ ಎನ್ನುವುದು ಔಪಚಾರಿಕವಾಗಿ ದಾಂಪತ್ಯಕ್ಕೆ ಕೊಟ್ಟಿರುವ ಸಂಜ್ಞೆಯೇ ಹೊರತು ಅದರಲ್ಲಿ ಧರ್ಮದ ಅಂಶವ್ಯಾವುದೂ ಇಲ್ಲ.
13019008a ಗಹ್ವರಂ ಪ್ರತಿಭಾತ್ಯೇತನ್ಮಮ ಚಿಂತಯತೋಽನಿಶಮ್।
13019008c ನಿಃಸಂದೇಹಮಿದಂ ಸರ್ವಂ ಪಿತಾಮಹ ಯಥಾ ಶ್ರುತಿಃ।।
ಪಿತಾಮಹ! ಯಾವಾಗಲೂ ಚಿಂತಿಸುತ್ತಿರುವ ಈ ವಿಷಯವು ಇನ್ನೂ ಗಹನವಾಗುತ್ತಾ ಹೋಗುವುದೇ ಹೊರತು ಸಮಸ್ಯೆಗೆ ಪರಿಹಾರ ದೊರಕುತ್ತಿಲ್ಲ. ಆದುದರಿಂದ ಈ ವಿಷಯದಲ್ಲಿ ಶ್ರುತಿಯ ಅಭಿಮತವು ಹೇಗಿದೆಯೋ ಹಾಗೆ ಎಲ್ಲವನ್ನೂ ಹೇಳಿ ನನ್ನ ಈ ಸಂದೇಹವನ್ನು ದೂರಗೊಳಿಸು!
13019009a ಯದೇತದ್ಯಾದೃಶಂ ಚೈತದ್ಯಥಾ ಚೈತತ್ಪ್ರವರ್ತಿತಮ್।
13019009c ನಿಖಿಲೇನ ಮಹಾಪ್ರಾಜ್ಞ ಭವಾನೇತದ್ಬ್ರವೀತು ಮೇ।।
ಮಹಾಪ್ರಾಜ್ಞ! ಈ ಸಹಧರ್ಮವೆನ್ನುವುದು ಎಂದಿನಿಂದ ಪ್ರಚಲಿತವಾಗಿದೆ? ಯಾವರೀತಿಯಲ್ಲಿ ಆಚಾರಕ್ಕೆ ಬಂದಿತು? ಇವುಗಳನ್ನು ಸಂಪೂರ್ಣವಾಗಿ ನನಗೆ ಹೇಳಬೇಕು!”
13019010 ಭೀಷ್ಮ ಉವಾಚ।
13019010a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
13019010c ಅಷ್ಟಾವಕ್ರಸ್ಯ ಸಂವಾದಂ ದಿಶಯಾ ಸಹ ಭಾರತ।।
ಭೀಷ್ಮನು ಹೇಳಿದನು: “ಭಾರತ! ಇದರ ಸಂಬಂಧವಾಗಿ ದಿಕ್ಕುಗಳೊಡನೆ ಅಷ್ಟಾವಕ್ರನ ಸಂವಾದದ ಈ ಪುರಾತನ ಇತಿಹಾಸವನ್ನು ಉದಾಹರಿಸುತ್ತಾರೆ.
13019011a ನಿವೇಷ್ಟುಕಾಮಸ್ತು ಪುರಾ ಅಷ್ಟಾವಕ್ರೋ ಮಹಾತಪಾಃ।
13019011c ಋಷೇರಥ ವದಾನ್ಯಸ್ಯ ಕನ್ಯಾಂ ವವ್ರೇ ಮಹಾತ್ಮನಃ।।
ಹಿಂದೆ ವಿವಾಹವಾಗಲು ಬಯಸಿ ಮಹಾತಪಸ್ವಿ ಮಹಾತ್ಮ ಅಷ್ಟಾವಕ್ರನು ಋಷಿ ವದಾನ್ಯನ ಕನ್ಯೆಯನ್ನು ಕೇಳಿದನು.
13019012a ಸುಪ್ರಭಾಂ ನಾಮ ವೈ ನಾಮ್ನಾ ರೂಪೇಣಾಪ್ರತಿಮಾಂ ಭುವಿ।
13019012c ಗುಣಪ್ರಬರ್ಹಾಂ ಶೀಲೇನ ಸಾಧ್ವೀಂ ಚಾರಿತ್ರಶೋಭನಾಮ್।।
ಸುಪ್ರಭಾ ಎಂಬ ಹೆಸರಿದ್ದ ಅವಳು ರೂಪದಲ್ಲಿ ಭೂಮಿಯಲ್ಲಿಯೇ ಅಪ್ರತಿಮಳಾಗಿದ್ದಳು. ಅವಳು ಗುಣ-ಪ್ರಭಾವ-ಶೀಲ ಮತ್ತು ಚಾರಿತ್ರ್ಯಗಳಿಂದ ಸುಶೋಭಿತಳಾಗಿದ್ದಳು.
13019013a ಸಾ ತಸ್ಯ ದೃಷ್ಟ್ವೈವ ಮನೋ ಜಹಾರ ಶುಭಲೋಚನಾ।
13019013c ವನರಾಜೀ ಯಥಾ ಚಿತ್ರಾ ವಸಂತೇ ಕುಸುಮಾಚಿತಾ।।
ವಸಂತದಲ್ಲಿ ಬಣ್ಣ ಬಣ್ಣದ ಕುಸುಮಗಳಿಂದ ತುಂಬಿದ ವನರಾಜಿಯು ಚಿತ್ತವನ್ನು ಹೇಗೋ ಹಾಗೆ ನೋಡಿದೊಡನೆಯೇ ಆ ಶುಭಲೋಚನೆಯು ಅವನ ಮನಸ್ಸನ್ನು ಕದ್ದಳು.
13019014a ಋಷಿಸ್ತಮಾಹ ದೇಯಾ ಮೇ ಸುತಾ ತುಭ್ಯಂ ಶೃಣುಷ್ವ ಮೇ।
13019014c ಗಚ್ಚ ತಾವದ್ದಿಶಂ ಪುಣ್ಯಾಮುತ್ತರಾಂ ದ್ರಕ್ಷ್ಯಸೇ ತತಃ।।
ಆ ಋಷಿಯು ಅವನಿಗೆ ಹೇಳಿದನು: “ನಿನಗೆ ನಾನು ನನ್ನ ಮಗಳನ್ನು ಕೊಡುತ್ತೇನೆ. ಆದರೆ ನನ್ನ ಮಾತನ್ನು ಕೇಳು. ಪುಣ್ಯ ಉತ್ತರ ದಿಶೆಯಲ್ಲಿ ಹೋಗು! ಅಲ್ಲಿ ನಿನಗೆ ಅವಳು ದೊರೆಯುತ್ತಾಳೆ!”
13019015 ಅಷ್ಟಾವಕ್ರ ಉವಾಚ।
13019015a ಕಿಂ ದ್ರಷ್ಟವ್ಯಂ ಮಯಾ ತತ್ರ ವಕ್ತುಮರ್ಹತಿ ಮೇ ಭವಾನ್।
13019015c ತಥೇದಾನೀಂ ಮಯಾ ಕಾರ್ಯಂ ಯಥಾ ವಕ್ಷ್ಯತಿ ಮಾಂ ಭವಾನ್।।
ಅಷ್ಟಾವಕ್ರನು ಹೇಳಿದನು: “ಅಲ್ಲಿ ನಾನು ಯಾರನ್ನು ನೋಡಬೇಕು ಎಂದು ನನಗೆ ಹೇಳು! ನಾನು ಈ ಕಾರ್ಯವನ್ನು ಹೇಗೆ ಮಾಡಬೇಕು ಎನ್ನುವುದನ್ನು ಹೇಳು!”
13019016 ವದಾನ್ಯ ಉವಾಚ।
13019016a ಧನದಂ ಸಮತಿಕ್ರಮ್ಯ ಹಿಮವಂತಂ ತಥೈವ ಚ।
13019016c ರುದ್ರಸ್ಯಾಯತನಂ ದೃಷ್ಟ್ವಾ ಸಿದ್ಧಚಾರಣಸೇವಿತಮ್।।
ವದಾನ್ಯನು ಹೇಳಿದನು: “ಧನದ ಕುಬೇರನ ಪ್ರದೇಶವನ್ನೂ ಹಿಮತ್ಪರ್ವತವನ್ನೂ ದಾಟಿದ ನಂತರ ಸಿದ್ಧಚಾರಣರಿಂದ ಸೇವಿತವಾಗಿರುವ ರುದ್ರನ ಸ್ಥಾನವು ಕಾಣುತ್ತದೆ.
13019017a ಪ್ರಹೃಷ್ಟೈಃ ಪಾರ್ಷದೈರ್ಜುಷ್ಟಂ ನೃತ್ಯದ್ಭಿರ್ವಿವಿಧಾನನೈಃ।
13019017c ದಿವ್ಯಾಂಗರಾಗೈಃ ಪೈಶಾಚೈರ್ವನ್ಯೈರ್ನಾನಾವಿಧೈಸ್ತಥಾ।।
13019018a ಪಾಣಿತಾಲಸತಾಲೈಶ್ಚ ಶಮ್ಯಾತಾಲೈಃ ಸಮೈಸ್ತಥಾ।
13019018c ಸಂಪ್ರಹೃಷ್ಟೈಃ ಪ್ರನೃತ್ಯದ್ಭಿಃ ಶರ್ವಸ್ತತ್ರ ನಿಷೇವ್ಯತೇ।।
ಅಲ್ಲಿ ನಾನಾ ತರಹದ ಮುಖವುಳ್ಳ, ದಿವ್ಯ ಅಂಗಾಂಗಳುಳ್ಳ ಪಿಶಾಚಿ-ಭೂತ-ಬೇತಾಳಾದಿ ಶಿವನ ಪಾರ್ಷದರು ಸಂಹೃಷ್ಟರಾಗಿ ಉಲ್ಲಾಸದಿಂದ ನರ್ತನ ಮಾಡುತ್ತಾ, ಚಪ್ಪಾಳೆ-ಕಂಚಿನತಾಳ-ವಿದ್ಯುತ್ತಿನಂತೆ ಥಳಥಳಿಸುವ ತಾಳಗಳಿಗೆ ತಕ್ಕಂತೆ ನೃತ್ಯಮಾಡುತ್ತಾ ಶರ್ವನ ಸೇವೆಗೈಯುತ್ತಿರುತ್ತಾರೆ.
13019019a ಇಷ್ಟಂ ಕಿಲ ಗಿರೌ ಸ್ಥಾನಂ ತದ್ದಿವ್ಯಮನುಶುಶ್ರುಮ।
13019019c ನಿತ್ಯಂ ಸನ್ನಿಹಿತೋ ದೇವಸ್ತಥಾ ಪಾರಿಷದಾಃ ಶುಭಾಃ।।
ಗಿರಿಯ ಆ ದಿವ್ಯ ಸ್ಥಾನವು ಶಿವನಿಗೆ ಇಷ್ಟವಾದುದೆಂದು ಕೇಳಿದ್ದೇವಲ್ಲವೇ? ಅಲ್ಲಿ ನಿತ್ಯವೂ ದೇವನು ಶುಭ ಪಾರಿಷದರೊಂದಿಗೆ ಸನ್ನಿಹಿತನಾಗಿರುತ್ತಾನೆ.
13019020a ತತ್ರ ದೇವ್ಯಾ ತಪಸ್ತಪ್ತಂ ಶಂಕರಾರ್ಥಂ ಸುದುಶ್ಚರಮ್।
13019020c ಅತಸ್ತದಿಷ್ಟಂ ದೇವಸ್ಯ ತಥೋಮಾಯಾ ಇತಿ ಶ್ರುತಿಃ।।
ಅಲ್ಲಿಯೇ ಶಂಕರನ ಸಲುವಾಗಿ ದೇವಿಯು ಸುದುಶ್ಚರ ತಪಸ್ಸನ್ನು ತಪಿಸಿದಳು. ಆದುದರಿಂದ ಅದು ಉಮಾ ಮತ್ತು ದೇವನಿಗೆ ಇಷ್ಟವಾದುದೆಂದು ಕೇಳಿದ್ದೇವೆ.
13019021a ತತ್ರ ಕೂಪೋ ಮಹಾನ್ಪಾರ್ಶ್ವೇ ದೇವಸ್ಯೋತ್ತರತಸ್ತಥಾ।
13019021c ಋತವಃ ಕಾಲರಾತ್ರಿಶ್ಚ ಯೇ ದಿವ್ಯಾ ಯೇ ಚ ಮಾನುಷಾಃ।।
13019022a ಸರ್ವೇ ದೇವಮುಪಾಸಂತೇ ರೂಪಿಣಃ ಕಿಲ ತತ್ರ ಹ।
13019022c ತದತಿಕ್ರಮ್ಯ ಭವನಂ ತ್ವಯಾ ಯಾತವ್ಯಮೇವ ಹಿ।।
ಅದರ ಪೂರ್ವಭಾಗದಲ್ಲಿರುವ ಮಹಾಪಾರ್ಶ್ವವೆಂಬ ಪರ್ವತದಲ್ಲಿಯೂ ಮತ್ತು ಅದರ ಉತ್ತರ ಭಾಗದಲ್ಲಿಯೂ ಋತುಗಳು, ಕಾಲರಾತ್ರಿ, ಮತ್ತು ಮನುಷ್ಯ-ದೇವ ಭಾವಗಳು ಎಲ್ಲವೂ ಮೂರ್ತಿಮತ್ತಾಗಿ ದೇವನನ್ನು ಪೂಜಿಸುತ್ತವೆಯಲ್ಲವೇ? ಆ ಭವನವನ್ನೂ ದಾಟಿ ನೀನು ಮುಂದೆ ಹೋಗಬೇಕು.
13019023a ತತೋ ನೀಲಂ ವನೋದ್ದೇಶಂ ದ್ರಕ್ಷ್ಯಸೇ ಮೇಘಸನ್ನಿಭಮ್।
13019023c ರಮಣೀಯಂ ಮನೋಗ್ರಾಹಿ ತತ್ರ ದ್ರಕ್ಷ್ಯಸಿ ವೈ ಸ್ತ್ರಿಯಮ್।।
13019024a ತಪಸ್ವಿನೀಂ ಮಹಾಭಾಗಾಂ ವೃದ್ಧಾಂ ದೀಕ್ಷಾಮನುಷ್ಠಿತಾಮ್।
ಬಳಿಕ ನೀನು ಮೇಘಸದೃಶವಾದ ನೀಲವರ್ಣದ ರಮಣೀಯ ಮನೋಹರ ವನಪ್ರದೇಶವನ್ನು ಕಾಣುವೆ. ಅಲ್ಲಿ ಮಹಾಭಾಗೆ ದೀಕ್ಷಾಪರಾಯಣಿ ವೃದ್ಧ ತಪಸ್ವಿನಿ ಸ್ತ್ರೀಯನ್ನು ನೋಡುವೆ.
13019024c ದ್ರಷ್ಟವ್ಯಾ ಸಾ ತ್ವಯಾ ತತ್ರ ಸಂಪೂಜ್ಯಾ ಚೈವ ಯತ್ನತಃ।।
13019025a ತಾಂ ದೃಷ್ಟ್ವಾ ವಿನಿವೃತ್ತಸ್ತ್ವಂ ತತಃ ಪಾಣಿಂ ಗ್ರಹೀಷ್ಯಸಿ।
13019025c ಯದ್ಯೇಷ ಸಮಯಃ ಸತ್ಯಃ ಸಾಧ್ಯತಾಂ ತತ್ರ ಗಮ್ಯತಾಮ್।।
ಅವಳನ್ನು ನೋಡಿ ನೀನು ಅಲ್ಲಿ ಪಯತ್ನಪೂರ್ವಕವಾಗಿ ಅವಳನ್ನು ಪೂಜಿಸಬೇಕು. ಅವಳನ್ನು ಸಂದರ್ಶಿಸಿ ಹಿಂದಿರುಗಿದ ನಂತರ ನೀನು ನನ್ನ ಮಗಳನ್ನು ಪಾಣಿಗ್ರಹಣ ಮಾಡಿಕೊಳ್ಳಬಹುದು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಅಷ್ಟಾವಕ್ರಾದಿಕ್ಸಂವಾದೇ ಏಕೋನವಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಅಷ್ಟಾವಕ್ರಾದಿಕ್ಸಂವಾದ ಎನ್ನುವ ಹತ್ತೊಂಭತ್ತನೇ ಅಧ್ಯಾಯವು.
-
“ಸಹೋಭೌ ಚರತಾಂ ಧರ್ಮಂ” ಎಂಬ ಮಂತ್ರವನ್ನು ವಿವಾಹಕಾಲದಲ್ಲಿ ಹೇಳುತ್ತಾರೆ (ಭಾರತ ದರ್ಶನ). ↩︎
-
ಋಷಿಗಳು ಈ ಪದವನ್ನು ವೇದಮಂತ್ರಗಳ ರೂಪವಾಗಿ ಹೇಳಿರಬಹುದು (ಭಾರತ ದರ್ಶನ). ↩︎
-
ಸಹಧರ್ಮವು – ನಾಪುತ್ರಸ್ಯ ಲೋಕೋಽಸ್ತಿ – ಎಂಬ ಸ್ಮೃತಿಯನ್ನು ಅವಲಂಬಿಸಿ ಪ್ರಜೋತ್ಪತ್ತಿಗಾಗಿಯೇ ಹೇಳಿದ್ದಿರಬಹುದು (ಭಾರತ ದರ್ಶನ). ↩︎
-
ಅಸುಷು ರಮತೇ ತೇಽಸುರಾಃ ತೇಷಾಮಯಂ ಅಸುರಃ – ಎಂಬ ವ್ಯುತ್ಪತ್ತಿಯಂತೆ ಅಸುರ ಶಬ್ಧಕ್ಕೆ ಇಂದ್ರಿಯಗಳೆಂಬ ಅರ್ಥವಿದೆ . ಸಹಧರ್ಮವೆಂಬ ಈ ಪದವು ಕೇವಲ ಇಂದ್ರಿಯ ತೃಪ್ತಿಗಾಗಿ ಹೇಳಲ್ಪಟ್ಟಿರಬಹುದು (ಭಾರತ ದರ್ಶನ). ↩︎
-
ಸ್ತ್ರೀಯರ ಸ್ವಭಾವಧರ್ಮವನ್ನು ವರ್ಣಿಸುವಾಗ ಸೂತ್ರಕಾರರು – ಅನೃತಂ ಸಾಹಸಂ ಮಾಯಾ ಮೂರ್ಖತ್ವಮತಿಲೋಭಿತಾ – ಎಂದು ಹೇಳಿದ್ದಾರೆ (ಭಾರತ ದರ್ಶನ). ↩︎