ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 16
ಸಾರ
ಶಿವ-ಪಾರ್ವತಿಯರು ಕೃಷ್ಣನಿಗೆ ವರಗಳನ್ನಿತ್ತು ಅಂತರ್ಧಾನರಾದುದು (1-10). ಉಪಮನ್ಯುವು ಕೃಷ್ಣನಿಗೆ ತಂಡಿಕೃತ ಶಿವಸ್ತೋತ್ರವನ್ನು ಹೇಳಿದುದು (11-67). ಶಿವನಿಂದ ತಂಡಿ ಮುನಿಗೆ ವರದಾನ; ಉಪಮನ್ಯುವು ತಂಡಿಯು ಹೇಳಿದ ಶಿವನಾಮಗಳನ್ನು ಕೃಷ್ಣನಿಗೆ ಹೇಳಲು ಪ್ರಾರಂಭಿಸಿದುದು (68-75).
13016001 ಕೃಷ್ಣ ಉವಾಚ।
13016001a ಮೂರ್ಧ್ನಾ ನಿಪತ್ಯ ನಿಯತಸ್ತೇಜಃಸಂನಿಚಯೇ ತತಃ।
13016001c ಪರಮಂ ಹರ್ಷಮಾಗಮ್ಯ ಭಗವಂತಮಥಾಬ್ರುವಮ್।।
ಕೃಷ್ಣನು ಹೇಳಿದನು: “ಬಳಿಕ ನಾನು ನಿಯತನಾಗಿ ನೆತ್ತಿಯನ್ನು ತಗ್ಗಿಸಿ ಆ ತೇಜರಾಶಿಗೆ ನಮಸ್ಕರಿಸಿ ಪರಮಹರ್ಷಿತನಾಗಿ ಭಗವಂತನಿಗೆ ಹೇಳಿದೆನು:
13016002a ಧರ್ಮೇ ದೃಢತ್ವಂ ಯುಧಿ ಶತ್ರುಘಾತಂ ಯಶಸ್ತಥಾಗ್ರ್ಯಂ ಪರಮಂ ಬಲಂ ಚ।
13016002c ಯೋಗಪ್ರಿಯತ್ವಂ ತವ ಸಂನಿಕರ್ಷಂ ವೃಣೇ ಸುತಾನಾಂ ಚ ಶತಂ ಶತಾನಿ।।
“ಧರ್ಮದಲ್ಲಿ ದೃಢತ್ವವನ್ನೂ, ಯುದ್ಧದಲ್ಲಿ ಶತ್ರುನಾಶವನ್ನೂ, ಶ್ರೇಷ್ಠವಾದ ಯಶಸ್ಸು, ಪರಮ ಬಲ, ಯೋಗಬಲ, ಸರ್ವರಿಗೂ ಪ್ರಿಯನಾಗಿರುವಿಕೆ, ನಿನ್ನ ಸಂನ್ನಿಕರ್ಷತೆ, ಮತ್ತು ನೂರಾರು ಸುತರು – ಇವುಗಳನ್ನು ನಿನ್ನಿಂದ ಕೇಳುತ್ತೇನೆ.”
13016003a ಏವಮಸ್ತ್ವಿತಿ ತದ್ವಾಕ್ಯಂ ಮಯೋಕ್ತಃ ಪ್ರಾಹ ಶಂಕರಃ।।
ನಾನು ಹೇಳಿದುದಕ್ಕೆ “ಹಾಗೆಯೇ ಆಗಲಿ” ಎಂದು ಶಂಕರನು ಹೇಳಿದನು.
13016004a ತತೋ ಮಾಂ ಜಗತೋ ಮಾತಾ ಧರಣೀ ಸರ್ವಪಾವನೀ।
13016004c ಉವಾಚೋಮಾ ಪ್ರಣಿಹಿತಾ ಶರ್ವಾಣೀ ತಪಸಾಂ ನಿಧಿಃ।।
ಆಗ ಜಗನ್ಮಾತೆ, ಜಗದ್ಧರಣೀ, ಸರ್ವಪಾವನೀ, ತಾಪಸರ ನಿಧಿ, ಶರ್ವಾಣಿ ಉಮೆಯು ಏಕಾಗ್ರಳಾಗಿ ನನಗೆ ಹೇಳಿದಳು:
13016005a ದತ್ತೋ ಭಗವತಾ ಪುತ್ರಃ ಸಾಂಬೋ ನಾಮ ತವಾನಘ।
13016005c ಮತ್ತೋಽಪ್ಯಷ್ಟೌ ವರಾನಿಷ್ಟಾನ್ ಗೃಹಾಣ ತ್ವಂ ದದಾಮಿ ತೇ।
13016005e ಪ್ರಣಮ್ಯ ಶಿರಸಾ ಸಾ ಚ ಮಯೋಕ್ತಾ ಪಾಂಡುನಂದನ।।
“ಅನಘ! ಭಗವಂತನು ನಿನಗೆ ಸಾಂಬನೆಂಬ ಹೆಸರಿನ ಪುತ್ರನನ್ನು ನೀಡಿದ್ದಾನೆ. ನನ್ನಿಂದಲೂ ನಿನಗಿಷ್ಟವಾದ ಎಂಟು ವರಗಳನ್ನು ಕೇಳು. ನಿನಗೆ ಕೊಡುತ್ತೇನೆ.” ಪಾಂಡುನಂದನ! ಅವಳಿಗೆ ಶಿರಸಾ ನಮಸ್ಕರಿಸಿ ನಾನು ಹೇಳಿದೆನು:
13016006a ದ್ವಿಜೇಷ್ವಕೋಪಂ ಪಿತೃತಃ ಪ್ರಸಾದಂ ಶತಂ ಸುತಾನಾಮುಪಭೋಗಂ ಪರಂ ಚ।
13016006c ಕುಲೇ ಪ್ರೀತಿಂ ಮಾತೃತಶ್ಚ ಪ್ರಸಾದಂ ಶಮಪ್ರಾಪ್ತಿಂ ಪ್ರವೃಣೇ ಚಾಪಿ ದಾಕ್ಷ್ಯಮ್।।
“ದ್ವಿಜರಲ್ಲಿ ಅಕೋಪ, ತಂದೆಯ ಪ್ರಸಾದ, ನೂರು ಮಕ್ಕಳು, ಪರಮ ಉಪಭೋಗ, ಕುಲದಲ್ಲಿ ಪ್ರೀತಿ, ಮಾತೆಯ ಪ್ರಸಾದ, ಮನಃಶಾಂತಿ ಮತ್ತು ದಕ್ಷತೆ ಇವುಗಳನ್ನು ಬೇಡಿಕೊಳ್ಳುತ್ತೇನೆ.”
13016007 ದೇವ್ಯುವಾಚ।
13016007a ಏವಂ ಭವಿಷ್ಯತ್ಯಮರಪ್ರಭಾವ ನಾಹಂ ಮೃಷಾ ಜಾತು ವದೇ ಕದಾ ಚಿತ್।
13016007c ಭಾರ್ಯಾಸಹಸ್ರಾಣಿ ಚ ಷೋಡಶೈವ ತಾಸು ಪ್ರಿಯತ್ವಂ ಚ ತಥಾಕ್ಷಯತ್ವಮ್।।
ದೇವಿಯು ಹೇಳಿದಳು: “ಅಮರಪ್ರಭಾವ! ಇದು ಹೀಗೆಯೇ ಆಗುತ್ತದೆ. ನಾನು ಸುಳ್ಳನ್ನು ಎಂದೂ ಹೇಳಿಲ್ಲ. ನಿನಗೆ ಹದಿನಾರು ಸಾವಿರ ಭಾರ್ಯೆಯರಾಗುತ್ತಾರೆ. ನೀನು ಅವರೊಂದಿಗೆ ಅಕ್ಷಯ ಪ್ರೀತಿಯನ್ನು ಪಡೆಯುತ್ತೀಯೆ.
13016008a ಪ್ರೀತಿಂ ಚಾಗ್ರ್ಯಾಂ ಬಾಂಧವಾನಾಂ ಸಕಾಶಾದ್ ದದಾಮಿ ತೇ ವಪುಷಃ ಕಾಮ್ಯತಾಂ ಚ।
13016008c ಭೋಕ್ಷ್ಯಂತೇ ವೈ ಸಪ್ತತಿರ್ವೈ ಶತಾನಿ ಗೃಹೇ ತುಭ್ಯಮತಿಥೀನಾಂ ಚ ನಿತ್ಯಮ್।।
ಬಾಂಧವರು ನಿನ್ನನ್ನು ಬಹಳವಾಗಿ ಪ್ರೀತಿಸುತ್ತಾರೆ. ನಿನಗೆ ಕಮನೀಯ ರೂಪವನ್ನು ನೀಡುತ್ತೇನೆ. ನಿತ್ಯವೂ ನಿನ್ನ ಮನೆಯಲ್ಲಿ ಏಳು ಸಾವಿರ ಅತಿಥಿಗಳು ಭೋಜನ ಮಾಡುತ್ತಾರೆ.””
13016009 ವಾಸುದೇವ ಉವಾಚ।
13016009a ಏವಂ ದತ್ತ್ವಾ ವರಾನ್ದೇವೋ ಮಮ ದೇವೀ ಚ ಭಾರತ।
13016009c ಅಂತರ್ಹಿತಃ ಕ್ಷಣೇ ತಸ್ಮಿನ್ಸಗಣೋ ಭೀಮಪೂರ್ವಜ।।
ವಾಸುದೇವನು ಹೇಳಿದನು: “ಭಾರತ! ಭೀಮಪೂರ್ವಜ! ಹೀಗೆ ನನಗೆ ವರಗಳನ್ನಿತ್ತು ದೇವ ಮತ್ತು ದೇವಿಯರು ಗಣಗಳೊಂದಿಗೆ ಕ್ಷಣದಲ್ಲಿಯೇ ಅಂತರ್ಧಾನರಾದರು.
13016010a ಏತದತ್ಯದ್ಭುತಂ ಸರ್ವಂ ಬ್ರಾಹ್ಮಣಾಯಾತಿತೇಜಸೇ।
13016010c ಉಪಮನ್ಯವೇ ಮಯಾ ಕೃತ್ಸ್ನಮಾಖ್ಯಾತಂ ಕೌರವೋತ್ತಮ।।
ಕೌರವೋತ್ತಮ! ಈ ಅತ್ಯದ್ಭುತವೆಲ್ಲವನ್ನೂ ನಾನು ಅತಿತೇಜಸ್ವಿ ಬ್ರಾಹ್ಮಣ ಉಪಮನ್ಯುವಿಗೆ ಸಂಪೂರ್ಣವಾಗಿ ವರದಿಮಾಡಿದೆನು.
13016011a ನಮಸ್ಕೃತ್ವಾ ತು ಸ ಪ್ರಾಹ ದೇವದೇವಾಯ ಸುವ್ರತ।
13016011c ನಾಸ್ತಿ ಶರ್ವಸಮೋ ದಾನೇ ನಾಸ್ತಿ ಶರ್ವಸಮೋ ರಣೇ।
13016011e ನಾಸ್ತಿ ಶರ್ವಸಮೋ ದೇವೋ ನಾಸ್ತಿ ಶರ್ವಸಮಾ ಗತಿಃ।।
ಆ ಸುವ್ರತನು ದೇವದೇವನಿಗೆ ನಮಸ್ಕರಿಸಿ ಹೇಳಿದನು: “ಶರ್ವನ ಸಮನಾದ ದಾನಿಯಿಲ್ಲ. ರಣದಲ್ಲಿ ಶರ್ವನ ಸಮನಾದವರಿಲ್ಲ. ಶರ್ವಸಮನಾದ ದೇವನಿಲ್ಲ. ಶರ್ವಸಮನಾದ ಗತಿಯಿಲ್ಲ.
13016012a ಋಷಿರಾಸೀತ್ಕೃತೇ ತಾತ ತಂಡಿರಿತ್ಯೇವ ವಿಶ್ರುತಃ।
13016012c ದಶ ವರ್ಷಸಹಸ್ರಾಣಿ ತೇನ ದೇವಃ ಸಮಾಧಿನಾ।
13016012e ಆರಾಧಿತೋಽಭೂದ್ಭಕ್ತೇನ ತಸ್ಯೋದರ್ಕಂ ನಿಶಾಮಯ।।
ಅಯ್ಯಾ! ಕೃತಯುಗದಲ್ಲಿ ತಂಡಿ ಎಂದು ವಿಶ್ರುತನಾದ ಋಷಿಯಿದ್ದನು. ಅವನು ಹತ್ತುಸಾವಿರ ವರ್ಷಗಳು ದೇವನನ್ನು ತಪಿಸಿದನು. ಭಕ್ತನಿಂದ ಆರಾಧಿತಗೊಂಡ ಶಿವನು ಅವನಿಗೆ ಯಾವ ಫಲವನ್ನಿತ್ತನೆನ್ನುವುದನ್ನು ಕೇಳು.
13016013a ಸ ದೃಷ್ಟವಾನ್ಮಹಾದೇವಮಸ್ತೌಷೀಚ್ಚ ಸ್ತವೈರ್ವಿಭುಮ್।
13016013c ಪವಿತ್ರಾಣಾಂ ಪವಿತ್ರಸ್ತ್ವಂ ಗತಿರ್ಗತಿಮತಾಂ ವರ।
13016013 e ಅತ್ಯುಗ್ರಂ ತೇಜಸಾಂ ತೇಜಸ್ತಪಸಾಂ ಪರಮಂ ತಪಃ।।
ಅವನು ಮಹಾದೇವನನ್ನು ಕಂಡನು. ನಾನಾವಿಧದ ಸ್ತೋತ್ರಗಳಿಂದ ವಿಭುವನ್ನು ಸ್ತುತಿಸಿದನು. “ಪವಿತ್ರರಲ್ಲಿ ಪವಿತ್ರನು ನೀನು. ಗತಿಮಂತರ ಶ್ರೇಷ್ಠ ಗತಿಯು ನೀನು. ತೇಜಸ್ಸುಗಳಲ್ಲಿಯೇ ಅತ್ಯುಗ್ರ ತೇಜಸ್ಸುಳ್ಳವನು ನೀನು. ತಪಸ್ವಿಗಳ ಪರಮ ತಪಸ್ಸು ನೀನು.
13016014a ವಿಶ್ವಾವಸುಹಿರಣ್ಯಾಕ್ಷಪುರುಹೂತನಮಸ್ಕೃತ।
13016014c ಭೂರಿಕಲ್ಯಾಣದ ವಿಭೋ ಪುರುಸತ್ಯ ನಮೋಽಸ್ತು ತೇ।।
ವಿಶ್ವಾವಸು! ಹಿರಣ್ಯಾಕ್ಷ! ಪುರುಹೂತ! ನಮಸ್ಕೃತ! ಭೂರಿಕಲ್ಯಾಣದ! ವಿಭೋ! ಪುರುಸತ್ಯ! ನಿನಗೆ ನಮಸ್ಕಾರ!
13016015a ಜಾತೀಮರಣಭೀರೂಣಾಂ ಯತೀನಾಂ ಯತತಾಂ ವಿಭೋ।
13016015c ನಿರ್ವಾಣದ ಸಹಸ್ರಾಂಶೋ ನಮಸ್ತೇಽಸ್ತು ಸುಖಾಶ್ರಯ।।
ಹುಟ್ಟು-ಸಾವುಗಳಿಗೆ ಭಯಪಟ್ಟು ಅವುಗಳಿಂದ ಮುಕ್ತರಾಗಲು ಪ್ರಯತ್ನಿಸುವ ಯತಿಗಳಿಗೆ ಮೋಕ್ಷವನ್ನು ದಯಪಾಲಿಸುವ ವಿಭೋ! ಸಹಸ್ರಕಿರಣ! ಸುಖಾಶ್ರಯ! ನಿನಗೆ ನಮಸ್ಕಾರ!
13016016a ಬ್ರಹ್ಮಾ ಶತಕ್ರತುರ್ವಿಷ್ಣುರ್ವಿಶ್ವೇದೇವಾ ಮಹರ್ಷಯಃ।
13016016c ನ ವಿದುಸ್ತ್ವಾಂ ತು ತತ್ತ್ವೇನ ಕುತೋ ವೇತ್ಸ್ಯಾಮಹೇ ವಯಮ್।।
ಬ್ರಹ್ಮ, ಶತಕ್ರತು, ವಿಷ್ಣು, ವಿಶ್ವೇದೇವರು ಮತ್ತು ಮಹರ್ಷಿಗಳೇ ನಿನ್ನನ್ನು ತತ್ತ್ವತಃ ತಿಳಿಯಲಾರರು. ಇನ್ನು ನಾನು ಹೇಗೆ ನಿನ್ನನ್ನು ಅರಿಯಬಲ್ಲೆ?
13016017a ತ್ವತ್ತಃ ಪ್ರವರ್ತತೇ ಕಾಲಸ್ತ್ವಯಿ ಕಾಲಶ್ಚ ಲೀಯತೇ।
13016017c ಕಾಲಾಖ್ಯಃ ಪುರುಷಾಖ್ಯಶ್ಚ ಬ್ರಹ್ಮಾಖ್ಯಶ್ಚ ತ್ವಮೇವ ಹಿ।।
ಕಾಲವು ನಿನ್ನಿಂದಲೇ ಹುಟ್ಟುತ್ತದೆ ಮತ್ತು ಕಾಲವು ನಿನ್ನಲ್ಲಿಯೇ ಲೀನವಾಗುತ್ತದೆ. ಕಾಲ, ಪುರುಷ ಮತ್ತು ಬ್ರಹ್ಮ ಈ ಮೂರು ಹೆಸರುಗಳೂ ನಿನ್ನವೇ ಆಗಿವೆ.
13016018a ತನವಸ್ತೇ ಸ್ಮೃತಾಸ್ತಿಸ್ರಃ ಪುರಾಣಜ್ಞೈಃ ಸುರರ್ಷಿಭಿಃ।
13016018c ಅಧಿಪೌರುಷಮಧ್ಯಾತ್ಮಮಧಿಭೂತಾಧಿದೈವತಮ್।
13016018e ಅಧಿಲೋಕ್ಯಾಧಿವಿಜ್ಞಾನಮಧಿಯಜ್ಞಸ್ತ್ವಮೇವ ಹಿ।।
ಪುರಾಣಜ್ಞ ಸುರರ್ಷಿಗಳು ನಿನ್ನನ್ನು ಈ ಮೂರು – ಕಾಲ, ಪುರುಷ ಮತ್ತ ಬ್ರಹ್ಮ – ನಿನ್ನವೇ ಶರೀರಗಳೆಂದು ಹೇಳುತ್ತಾರೆ. ಅಧಿಪೌರುಷ, ಆಧ್ಯಾತ್ಮ, ಅಧಿಭೂತ, ಅಧಿದೈವತ, ಅಧಿಲೋಕ, ಅಧಿವಿಜ್ಞಾನ, ಅಧಿಯಜ್ಞ ಇವೆಲ್ಲವೂ ನೀನೇ ಆಗಿರುವೆ.
13016019a ತ್ವಾಂ ವಿದಿತ್ವಾತ್ಮದೇಹಸ್ಥಂ ದುರ್ವಿದಂ ದೈವತೈರಪಿ।
13016019c ವಿದ್ವಾಂಸೋ ಯಾಂತಿ ನಿರ್ಮುಕ್ತಾಃ ಪರಂ ಭಾವಮನಾಮಯಮ್।।
ದೇವತೆಗಳಿಗೂ ತಿಳಿಯಲು ಕಷ್ಟಕರವಾದ ನಿನ್ನನ್ನು ದೇಹಸ್ಥನಾಗಿರುವ ಆತ್ಮನೆಂದು ತಿಳಿದ ವಿದ್ವಾಂಸರು ನಿರ್ಮುಕ್ತರಾಗಿ ಅನಾಮಯ ಪರಮ ಭಾವವನ್ನು ಹೊಂದುತ್ತಾರೆ,
13016020a ಅನಿಚ್ಚತಸ್ತವ ವಿಭೋ ಜನ್ಮಮೃತ್ಯುರನೇಕತಃ।
13016020c ದ್ವಾರಂ ತ್ವಂ ಸ್ವರ್ಗಮೋಕ್ಷಾಣಾಮಾಕ್ಷೇಪ್ತಾ ತ್ವಂ ದದಾಸಿ ಚ।।
ವಿಭೋ! ನಿನ್ನ ಇಚ್ಛೆಯಿಲ್ಲದಿದ್ದರೆ ಜೀವಗಳು ಅನೇಕ ಜನ್ಮ-ಮೃತ್ಯುಗಳಿಗೆ ಸಿಲುಕಿಕೊಂಡಿರುತ್ತವೆ. ಸ್ವರ್ಗ-ಮೋಕ್ಷಗಳೆರಡಕ್ಕೂ ನೀನು ದ್ವಾರವಾಗಿರುವೆ. ಇವೆರಡನ್ನೂ ನೀನು ಆಕ್ಷೇಪಿಸಬಲ್ಲೆ ಅಥವಾ ನೀಡಬಲ್ಲೆ.
13016021a ತ್ವಮೇವ ಮೋಕ್ಷಃ ಸ್ವರ್ಗಶ್ಚ ಕಾಮಃ ಕ್ರೋಧಸ್ತ್ವಮೇವ ಹಿ।
13016021c ಸತ್ತ್ವಂ ರಜಸ್ತಮಶ್ಚೈವ ಅಧಶ್ಚೋರ್ಧ್ವಂ ತ್ವಮೇವ ಹಿ।।
ನೀನೇ ಮೋಕ್ಷ ಮತ್ತು ಸ್ವರ್ಗ. ಕಾಮ-ಕ್ರೋಧಗಳೂ ನೀನೇ. ಸತ್ವ-ರಜಸ್-ತಮಸ್ಸುಗಳೂ ನೀನೇ. ನೀನೇ ಕೆಳಗೆ ಮತ್ತು ಮೇಲೆ.
13016022a ಬ್ರಹ್ಮಾ ವಿಷ್ಣುಶ್ಚ ರುದ್ರಶ್ಚ ಸ್ಕಂದೇಂದ್ರೌ ಸವಿತಾ ಯಮಃ।
13016022c ವರುಣೇಂದೂ ಮನುರ್ಧಾತಾ ವಿಧಾತಾ ತ್ವಂ ಧನೇಶ್ವರಃ।।
ನೀನು ಬ್ರಹ್ಮ, ವಿಷ್ಣು, ರುದ್ರ, ಸ್ಕಂದ, ಇಂದ್ರ, ಸೂರ್ಯ, ಯಮ, ವರುಣ, ಚಂದ್ರ, ಮನು, ಧಾತಾ, ವಿಧಾತಾ, ಮತ್ತು ಧನೇಶ್ವರ.
13016023a ಭೂರ್ವಾಯುರ್ಜ್ಯೋತಿರಾಪಶ್ಚ ವಾಗ್ಬುದ್ಧಿಸ್ತ್ವಂ ಮತಿರ್ಮನಃ। 1 13016023c ಕರ್ಮ ಸತ್ಯಾನೃತೇ ಚೋಭೇ ತ್ವಮೇವಾಸ್ತಿ ಚ ನಾಸ್ತಿ ಚ।।
ಭೂಮಿ, ವಾಯು, ಜ್ಯೋತಿ, ಆಪ, ವಾಕ್, ಬುದ್ಧಿ, ಮತಿ, ಮನ, ಮತ್ತು ಕರ್ಮಗಳು ನೀನೇ. ಸತ್ಯ-ಸುಳ್ಳುಗಳೆರಡೂ ನೀನೆ. ಅಸ್ತಿ ಮತ್ತು ನಾಸ್ತಿ (ಇರುವಿಕೆ ಮತ್ತು ಇಲ್ಲದಿರುವಿಕೆ) ಇವೆರಡೂ ನೀನೇ ಆಗಿರುವೆ.
13016024a ಇಂದ್ರಿಯಾಣೀಂದ್ರಿಯಾರ್ಥಾಶ್ಚ ತತ್ಪರಂ ಪ್ರಕೃತೇರ್ಧ್ರುವಮ್।
13016024c ವಿಶ್ವಾವಿಶ್ವಪರೋ ಭಾವಶ್ಚಿಂತ್ಯಾಚಿಂತ್ಯಸ್ತ್ವಮೇವ ಹಿ।।
ಇಂದ್ರಿಯಗಳೂ, ಇಂದ್ರಿಯಗಳ ವಿಷಯಗಳೂ, ಪ್ರಕೃತಿಯೂ ಮತ್ತು ಅದರ ಆಚೆಯಿರುವ ಧ್ರುವವೂ ನೀನೇ ಆಗಿರುವೆ. ವಿಶ್ವ ಮತ್ತು ವಿಶ್ವದ ಆಚೆಯಿರುವವನೂ, ಚಿಂತ್ಯ, ಅಚಿಂತ್ಯನೂ ನೀನೇ ಆಗಿರುವೆ.
13016025a ಯಚ್ಚೈತತ್ಪರಮಂ ಬ್ರಹ್ಮ ಯಚ್ಚ ತತ್ಪರಮಂ ಪದಮ್।
13016025c ಯಾ ಗತಿಃ ಸಾಂಖ್ಯಯೋಗಾನಾಂ ಸ ಭವಾನ್ನಾತ್ರ ಸಂಶಯಃ।।
ಯಾವ ಪರಮ ಬ್ರಹ್ಮವಿದೆಯೋ, ಯಾವ ಪರಮ ಪದವಿಯಿದೆಯೋ, ಸಾಂಖ್ಯಯೋಗಿಗಳ ಯಾವ ಮಾರ್ಗವಿರುವುದೋ ಅವು ನೀನೇ ಎನ್ನವುದರಲ್ಲಿ ಸಂಶಯವಿಲ್ಲ.
13016026a ನೂನಮದ್ಯ ಕೃತಾರ್ಥಾಃ ಸ್ಮ ನೂನಂ ಪ್ರಾಪ್ತಾಃ ಸತಾಂ ಗತಿಮ್।
13016026c ಯಾಂ ಗತಿಂ ಪ್ರಾಪ್ನುವಂತೀಹ ಜ್ಞಾನನಿರ್ಮಲಬುದ್ಧಯಃ।।
ನಿರ್ಮಲ ಬುದ್ಧಿಯ ಜ್ಞಾನದಿಂದ ಪಡೆಯುವ ಗತಿಯನ್ನು ನಾವು ಇಂದು ಪಡೆದುಕೊಂಡೆವು. ಇಂದು ನಾವು ಕೃತಾರ್ಥರಾದೆವು. ಸತ್ಯವಂತರ ಗತಿಯನ್ನು ಪಡೆದುಕೊಂಡೆವು.
13016027a ಅಹೋ ಮೂಢಾಃ ಸ್ಮ ಸುಚಿರಮಿಮಂ ಕಾಲಮಚೇತಸಃ।
13016027c ಯನ್ನ ವಿದ್ಮಃ ಪರಂ ದೇವಂ ಶಾಶ್ವತಂ ಯಂ ವಿದುರ್ಬುಧಾಃ।।
ಅಹೋ! ಬಹಳಕಾಲ ಅಚೇತಸರಾಗಿ ಮೂಢರಾಗಿ ಇದ್ದುಬಿಟ್ಟಿದ್ದೆವು! ಯಾರನ್ನು ವಿದ್ವಾಂಸರು ಪರಮ ದೇವನೆಂದೂ ಶಾಶ್ವತನೆಂದೂ ತಿಳಿದಿದ್ದರೋ ಅವನನ್ನು ನಾವು ತಿಳಿದುಕೊಳ್ಳಲಿಲ್ಲ.
13016028a ಸೋಽಯಮಾಸಾದಿತಃ ಸಾಕ್ಷಾದ್ಬಹುಭಿರ್ಜನ್ಮಭಿರ್ಮಯಾ।
13016028c ಭಕ್ತಾನುಗ್ರಹಕೃದ್ದೇವೋ ಯಂ ಜ್ಞಾತ್ವಾಮೃತಮಶ್ನುತೇ।।
ಅನೇಕ ಜನ್ಮಗಳಲ್ಲಿ ಮಾಡಿದ ಪ್ರಯತ್ನದಿಂದ ನಿನ್ನನ್ನು ಸಾಕ್ಷಾತ್ ಕಂಡೆನು. ದೇವ! ನೀನು ಭಕ್ತರಿಗೆ ಅನುಗ್ರಹಿಸುವವನು. ನಿನ್ನನ್ನು ತಿಳಿದರೆ ಅಮೃತವನ್ನು ಕುಡಿದಂತೆ.
13016029a ದೇವಾಸುರಮನುಷ್ಯಾಣಾಂ ಯಚ್ಚ ಗುಹ್ಯಂ ಸನಾತನಮ್।
13016029c ಗುಹಾಯಾಂ ನಿಹಿತಂ ಬ್ರಹ್ಮ ದುರ್ವಿಜ್ಞೇಯಂ ಸುರೈರಪಿ।।
13016030a ಸ ಏಷ ಭಗವಾನ್ದೇವಃ ಸರ್ವಕೃತ್ಸರ್ವತೋಮುಖಃ।
13016030c ಸರ್ವಾತ್ಮಾ ಸರ್ವದರ್ಶೀ ಚ ಸರ್ವಗಃ ಸರ್ವವೇದಿತಾ।।
ದೇವಾಸುರಮನುಷ್ಯರಿಗೂ ಗುಹ್ಯನಾಗಿರುವ, ಸನಾತನನಾಗಿರುವ, ಗುಹೆಗಳಲ್ಲಿ ಅಡಗಿರುವ ಬ್ರಹ್ಮ, ಸುರರಿಂದಲೂ ತಿಳಿಯಲು ಕಷ್ಟಸಾಧ್ಯನಾದ ಅವನೇ ಈ ಭಗವನ್ ದೇವನು. ಎಲ್ಲವನ್ನೂ ಮಾಡುವವನು ಮತ್ತು ಸರ್ವತೋಮುಖನಾಗಿರುವವನು. ಇವನು ಸರ್ವರ ಆತ್ಮ. ಸರ್ವವನ್ನೂ ಕಾಣುವವನು. ಸರ್ವಕಡೆಗಳಲ್ಲಿಯೂ ಹೋಗುವವನು. ಸರ್ವವನ್ನೂ ತಿಳಿದಿರುವವನು.
13016031a ಪ್ರಾಣಕೃತ್ಪ್ರಾಣಭೃತ್ಪ್ರಾಣೀ ಪ್ರಾಣದಃ ಪ್ರಾಣಿನಾಂ ಗತಿಃ।
13016031c ದೇಹಕೃದ್ದೇಹಭೃದ್ದೇಹೀ ದೇಹಭುಗ್ದೇಹಿನಾಂ ಗತಿಃ।।
13016032a ಅಧ್ಯಾತ್ಮಗತಿನಿಷ್ಠಾನಾಂ ಧ್ಯಾನಿನಾಮಾತ್ಮವೇದಿನಾಮ್।
13016032c ಅಪುನರ್ಮಾರಕಾಮಾನಾಂ ಯಾ ಗತಿಃ ಸೋಽಯಮೀಶ್ವರಃ।।
ಇವನೇ ಪ್ರಾಣಗಳ ಕರ್ತೃ. ಪ್ರಾಣಗಳನ್ನು ಪಾಲಿಸುವವನೂ ಇವನೇ. ಇವನೇ ಪ್ರಾಣ. ಪ್ರಾಣದ, ಪ್ರಾಣಿಗಳ ಗತಿ. ಇವನೇ ದೇಹಗಳ ಕರ್ತೃ. ದೇಹಗಳನ್ನು ಪೊರೆಯುವವನು. ದೇಹಗಳಲ್ಲಿರುವವನು. ದೇಹಗಳನ್ನು ಭೋಗಿಸುವವನು. ಮತ್ತು ದೇಹಿಗಳ ಗತಿ. ನಿಷ್ಠರ, ಧ್ಯಾನಿಗಳ ಮತ್ತು ಆತ್ಮವೇದಿಗಳ ಆಧ್ಯಾತ್ಮ ಗತಿಯೂ ಇವನೇ. ಪುನರ್ಜನ್ಮವನ್ನು ಬಯಸದವರು ಹೋಗುವ ಮಾರ್ಗದ ಈಶ್ವರನೂ ಇವನೇ.
13016033a ಅಯಂ ಚ ಸರ್ವಭೂತಾನಾಂ ಶುಭಾಶುಭಗತಿಪ್ರದಃ।
13016033c ಅಯಂ ಚ ಜನ್ಮಮರಣೇ ವಿದಧ್ಯಾತ್ಸರ್ವಜಂತುಷು।।
ಸರ್ವಭೂತಗಳಿಗೆ ಶುಭಾಶುಭಗತಿಗಳನ್ನು ನೀಡುವವನು ಇವನೇ. ಸರ್ವಜಂತುಗಳಿಗೂ ಜನ್ಮ-ಮರಣಗಳನ್ನು ನೀಡುವವನೂ ಇವನೇ.
13016034a ಅಯಂ ಚ ಸಿದ್ಧಿಕಾಮಾನಾಮೃಷೀಣಾಂ ಸಿದ್ಧಿದಃ ಪ್ರಭುಃ।
13016034c ಅಯಂ ಚ ಮೋಕ್ಷಕಾಮಾನಾಂ ದ್ವಿಜಾನಾಂ ಮೋಕ್ಷದಃ ಪ್ರಭುಃ।।
ಇವನೇ ಸಿದ್ಧಿಯನ್ನು ಬಯಸುವ ಋಷಿಗಳಿಗೆ ಸಿದ್ಧಿಯನ್ನು ಕೊಡುವ ಪ್ರಭುವು. ಇವನೇ ಮೋಕ್ಷವನ್ನು ಬಯಸುವ ದ್ವಿಜರಿಗೆ ಮೋಕ್ಷವನ್ನು ಕೊಡುವ ಪ್ರಭುವು.
13016035a ಭೂರಾದ್ಯಾನ್ಸರ್ವಭುವನಾನುತ್ಪಾದ್ಯ ಸದಿವೌಕಸಃ।
13016035c ವಿಭರ್ತಿ ದೇವಸ್ತನುಭಿರಷ್ಟಾಭಿಶ್ಚ ದದಾತಿ ಚ।।
ದಿವೌಕಸರೊಂದಿಗೆ ಭೂಮಿಯೇ ಮೊದಲಾದ ಸರ್ವ ಭುವನಗಳನ್ನು ಸೃಷ್ಟಿಸಿ ದೇವನು ತನ್ನ ಎಂಟು ಶರೀರಗಳಿಂದ2 ಈ ಭುವನಗಳ ಪಾಲನೆ-ಪೋಷಣೆಗಳನ್ನು ಮಾಡುತ್ತಾನೆ.
13016036a ಅತಃ ಪ್ರವರ್ತತೇ ಸರ್ವಮಸ್ಮಿನ್ಸರ್ವಂ ಪ್ರತಿಷ್ಠಿತಮ್।
13016036c ಅಸ್ಮಿಂಶ್ಚ ಪ್ರಲಯಂ ಯಾತಿ ಅಯಮೇಕಃ ಸನಾತನಃ।।
ಇವನಿಂದಲೇ ಇಲ್ಲವೂ ಪ್ರಾರಂಭವಾಗುತ್ತವೆ. ಇವನಲ್ಲಿಯೇ ಎಲ್ಲವೂ ಪ್ರತಿಷ್ಠಿತವಾಗಿವೆ. ಇವನಲ್ಲಿಯೇ ಎಲ್ಲವೂ ಲಯಗೊಳ್ಳುತ್ತವೆ. ಇವನೊಬ್ಬನೇ ಸನಾತನನು.
13016037a ಅಯಂ ಸ ಸತ್ಯಕಾಮಾನಾಂ ಸತ್ಯಲೋಕಃ ಪರಃ ಸತಾಮ್।
13016037c ಅಪವರ್ಗಶ್ಚ ಮುಕ್ತಾನಾಂ ಕೈವಲ್ಯಂ ಚಾತ್ಮವಾದಿನಾಮ್।।
ಸತ್ಯನಿಷ್ಠೆಯಲ್ಲಿಯೇ ಇರಲು ಬಯಸುವವರಿಗೆ ಇವನು ಶ್ರೇಷ್ಠ ಸತ್ಯಲೋಕವಾಗಿದ್ದಾನೆ. ಮೋಕ್ಷಿಗಳಿಗೆ ಅಪವರ್ಗನೂ ಆತ್ಮವಾದಿಗಳಿಗೆ ಕೈವಲ್ಯನೂ ಇವನೇ ಆಗಿದ್ದಾನೆ.
13016038a ಅಯಂ ಬ್ರಹ್ಮಾದಿಭಿಃ ಸಿದ್ಧೈರ್ಗುಹಾಯಾಂ ಗೋಪಿತಃ ಪ್ರಭುಃ।
13016038c ದೇವಾಸುರಮನುಷ್ಯಾಣಾಂ ನ ಪ್ರಕಾಶೋ ಭವೇದಿತಿ।।
ಈ ಪ್ರಭುವು ದೇವಾಸುರಮನುಷ್ಯರಿಗೆ ಕಾಣಬಾರದೆಂದು ಇವನನ್ನು ಬ್ರಹ್ಮಾದಿ ಸಿದ್ಧರು ತಮ್ಮ ಹೃದಯಗುಹೆಗಳಲ್ಲಿ ಅಡಗಿಸಿಕೊಂಡಿರುತ್ತಾರೆ.
13016039a ತಂ ತ್ವಾಂ ದೇವಾಸುರನರಾಸ್ತತ್ತ್ವೇನ ನ ವಿದುರ್ಭವಮ್।
13016039c ಮೋಹಿತಾಃ ಖಲ್ವನೇನೈವ ಹೃಚ್ಚಯೇನ ಪ್ರವೇಶಿತಾಃ।।
ಹೃದಯದ ಗುಹೆಯನ್ನು ಪ್ರವೇಶಿಸಿರುವ ಭವ ನಿನ್ನನ್ನು ಮೋಹಿತರಾದ ದೇವಾಸುರನರರು ತತ್ತ್ವತಃ ತಿಳಿಯಲಾರರು.
13016040a ಯೇ ಚೈನಂ ಸಂಪ್ರಪದ್ಯಂತೇ ಭಕ್ತಿಯೋಗೇನ ಭಾರತ।
13016040c ತೇಷಾಮೇವಾತ್ಮನಾತ್ಮಾನಂ ದರ್ಶಯತ್ಯೇಷ ಹೃಚ್ಚಯಃ।।
ಭಾರತ! ಭಕ್ತಿಯೋಗದಿಂದ ಇವನನ್ನು ಪಡೆಯುತ್ತಾರೆ. ಹೃದಯದಲ್ಲಿ ಅಡಗಿರುವ ಇವನು ಅವರ ಆತ್ಮಗಳಿಗೆ ಮಾತ್ರ ತನ್ನನ್ನು ಕಾಣಿಸಿಕೊಳ್ಳುತ್ತಾನೆ.
13016041a ಯಂ ಜ್ಞಾತ್ವಾ ನ ಪುನರ್ಜನ್ಮ ಮರಣಂ ಚಾಪಿ ವಿದ್ಯತೇ।
13016041c ಯಂ ವಿದಿತ್ವಾ ಪರಂ ವೇದ್ಯಂ ವೇದಿತವ್ಯಂ ನ ವಿದ್ಯತೇ।।
13016042a ಯಂ ಲಬ್ಧ್ವಾ ಪರಮಂ ಲಾಭಂ ಮನ್ಯತೇ ನಾಧಿಕಂ ಪುನಃ।
13016042c ಪ್ರಾಣಸೂಕ್ಷ್ಮಾಂ ಪರಾಂ ಪ್ರಾಪ್ತಿಮಾಗಚ್ಚತ್ಯಕ್ಷಯಾವಹಾಮ್।।
13016043a ಯಂ ಸಾಂಖ್ಯಾ ಗುಣತತ್ತ್ವಜ್ಞಾಃ ಸಾಂಖ್ಯಶಾಸ್ತ್ರವಿಶಾರದಾಃ।
13016043c ಸೂಕ್ಷ್ಮಜ್ಞಾನರತಾಃ ಪೂರ್ವಂ ಜ್ಞಾತ್ವಾ ಮುಚ್ಯಂತಿ ಬಂಧನೈಃ।।
13016044a ಯಂ ಚ ವೇದವಿದೋ ವೇದ್ಯಂ ವೇದಾಂತೇಷು ಪ್ರತಿಷ್ಠಿತಮ್।
13016044c ಪ್ರಾಣಾಯಾಮಪರಾ ನಿತ್ಯಂ ಯಂ ವಿಶಂತಿ ಜಪಂತಿ ಚ।।
13016045a ಅಯಂ ಸ ದೇವಯಾನಾನಾಮಾದಿತ್ಯೋ ದ್ವಾರಮುಚ್ಯತೇ।
13016045c ಅಯಂ ಚ ಪಿತೃಯಾನಾನಾಂ ಚಂದ್ರಮಾ ದ್ವಾರಮುಚ್ಯತೇ।।
ಯಾರನ್ನು ಅರಿತರೆ ಪುನರ್ಜನ್ಮ ಮರಣಗಳುಂಟಾಗುವುದಿಲ್ಲವೋ; ಪರಮವೇದ್ಯನಾದ ಯಾರನ್ನು ಅರಿತರೆ ಅರಿಯಬೇಕಾದ ಬೇರೆ ಯಾವುದೂ ಇರುವುದಿಲ್ಲವೋ; ಯಾವ ಪರಮತತ್ತ್ವದ ಲಾಭವನ್ನು ಪಡೆದು ಬೇರೆ ಯಾವ ಲಾಭವೂ ಅಧಿಕವೆನಿಸುವುದಿಲ್ಲವೋ; ವಿದ್ವಾಂಸನಾದವನು ಯಾವ ಪರಮ ಪ್ರಾಣವೂ, ಸೂಕ್ಷ್ಮವೂ, ಅಕ್ಷಯವೂ ಆದುದನ್ನು ಪಡೆದುಕೊಳ್ಳುತ್ತಾನೋ; ಯಾರನ್ನು ತಿಳಿದು ಸಾಂಖ್ಯಗುಣತತ್ತ್ವಜ್ಞರು, ಸಾಂಖ್ಯವಿಶಾರದರು ಮತ್ತು ಸೂಕ್ಷ್ಮಜ್ಞಾನರತರು ಮೊದಲು ಅರಿತುಕೊಂಡು ಬಂಧನಗಳಿಂದ ಮುಕ್ತರಾಗುತ್ತಾರೋ; ಯಾವ ವೇದವಿದು ವೇದ್ಯ, ವೇದಾಂತಗಳಲ್ಲಿ ಪ್ರತಿಷ್ಠಿತನಾದವನನ್ನು ಪ್ರಾಣಾಯಾಮವೇ ಮೊದಲಾದವುಗಳಿಂದ ನಿತ್ಯವೂ ಪ್ರವೇಶಿಸಿ ಜಪಿಸುವರೋ, ಈ ದೇವಯಾನಗಳನ್ನು ಆದಿತ್ಯದ್ವಾರವೆಂದು ಕರೆಯುತ್ತಾರೆ. ಈ ಪಿತೃಯಾನವನ್ನು ಚಂದ್ರನ ದ್ವಾರವೆಂದು ಕರೆಯುತ್ತಾರೆ.
13016046a ಏಷ ಕಾಲಗತಿಶ್ಚಿತ್ರಾ ಸಂವತ್ಸರಯುಗಾದಿಷು।
13016046c ಭಾವಾಭಾವೌ ತದಾತ್ವೇ ಚ ಅಯನೇ ದಕ್ಷಿಣೋತ್ತರೇ।।
ಇವನೇ ವಿಚಿತ್ರವಾದ ಸಂವತ್ಸರ-ಯುಗಾದಿಗಳ ಕಾಲಗತಿ. ಇವನಿಂದಲೇ ದಕ್ಷಿಣ-ಉತ್ತರ ಆಯನಗಳ ಭಾವಾಭಾವಗಳುಂಟಾಗುತ್ತವೆ.
13016047a ಏವಂ ಪ್ರಜಾಪತಿಃ ಪೂರ್ವಮಾರಾಧ್ಯ ಬಹುಭಿಃ ಸ್ತವೈಃ।
13016047c ವರಯಾಮಾಸ ಪುತ್ರತ್ವೇ ನೀಲಲೋಹಿತಸಂಜ್ಞಿತಮ್।।
ಹೀಗೆ ಪೂರ್ವದಲ್ಲಿ ಪ್ರಜಾಪತಿಯು ಅನೇಕ ಸ್ತವಗಳಿಂದ ನೀಲಲೋಹಿತನೆಂದು ಕರೆಯಲ್ಪಡುವ ಇವನನ್ನು ಆರಾಧಿಸಿ ಪುತ್ರರನ್ನು ಕೇಳಿಕೊಂಡನು.
13016048a ಋಗ್ಭಿರ್ಯಮನುಶಂಸಂತಿ ತಂತ್ರೇ ಕರ್ಮಣಿ ಬಹ್ವೃಚಃ।
13016048c ಯಜುರ್ಭಿರ್ಯಂ ತ್ರಿಧಾ ವೇದ್ಯಂ ಜುಹ್ವತ್ಯಧ್ವರ್ಯವೋಽಧ್ವರೇ।।
13016049a ಸಾಮಭಿರ್ಯಂ ಚ ಗಾಯಂತಿ ಸಾಮಗಾಃ ಶುದ್ಧಬುದ್ಧಯಃ।
13016049c ಯಜ್ಞಸ್ಯ ಪರಮಾ ಯೋನಿಃ ಪತಿಶ್ಚಾಯಂ ಪರಃ ಸ್ಮೃತಃ।।
ಋಗ್ವೇದಿಗಳು ಕರ್ಮತಂತ್ರಗಳಲ್ಲಿ ಯಾರನ್ನು ಋಗ್ವೇದಮಂತ್ರಗಳಿಂದ ಹೊಗಳುತ್ತಾರೋ, ಅಧ್ವರ್ಯುಗಳು ಅಧ್ವರಗಳಲ್ಲಿ ತ್ರಿವಿಧನೆಂದು ತಿಳಿದಿರುವ ಯಾರ ಕುರಿತು ಯಜುರ್ವೇದ ಮಂತ್ರಗಳಿಂದ ಹೋಮಮಾಡುವರೋ, ಶುದ್ಧಬುದ್ಧಿಯ ಸಾಮಗರು ಯಾರನ್ನು ಸಾಮವೇದದ ಮಂತ್ರಗಳಿಂದ ಹಾಡುತ್ತಾರೋ ಆ ಯಜ್ಞದ ಪರಮ ಯೋನಿಯೂ ಒಡೆಯನೂ ಈ ಪರಶಿವನೆಂದು ಸ್ಮೃತಿಗಳು ಸಾರುತ್ತವೆ.
13016050a ರಾತ್ರ್ಯಹಃಶ್ರೋತ್ರನಯನಃ ಪಕ್ಷಮಾಸಶಿರೋಭುಜಃ।
13016050c ಋತುವೀರ್ಯಸ್ತಪೋಧೈರ್ಯೋ ಹ್ಯಬ್ದಗುಹ್ಯೋರುಪಾದವಾನ್।।
ರಾತ್ರಿ-ಹಗಲುಗಳು ಇವನ ಕಣ್ಣು-ಕಿವಿಗಳು. ಪಕ್ಷ-ಮಾಸಗಳು ಇವನ ಶಿರೋಭುಜಗಳು. ಋತುವು ಇವನ ವೀರ್ಯ. ತಪಸ್ಸು ಇವನ ಧೈರ್ಯ. ವರ್ಷಗಳು ಇವನ ತೊಡೆ-ಪಾದಗಳು.
13016051a ಮೃತ್ಯುರ್ಯಮೋ ಹುತಾಶಶ್ಚ ಕಾಲಃ ಸಂಹಾರವೇಗವಾನ್।
13016051c ಕಾಲಸ್ಯ ಪರಮಾ ಯೋನಿಃ ಕಾಲಶ್ಚಾಯಂ ಸನಾತನಃ।।
ಮೃತ್ಯು, ಯಮ, ಅಗ್ನಿ, ಸಂಹಾರವೇಗೀ ಕಾಲ, ಕಾಲದ ಪರಮ ಯೋನಿಯಾದ ಸನಾತನ ಕಾಲಪುರುಷ – ಎಲ್ಲವೂ ಇವನೇ ಆಗಿದ್ದಾನೆ.
13016052a ಚಂದ್ರಾದಿತ್ಯೌ ಸನಕ್ಷತ್ರೌ ಸಗ್ರಹೌ ಸಹ ವಾಯುನಾ।
13016052c ಧ್ರುವಃ ಸಪ್ತರ್ಷಯಶ್ಚೈವ ಭುವನಾಃ ಸಪ್ತ ಏವ ಚ।।
13016053a ಪ್ರಧಾನಂ ಮಹದವ್ಯಕ್ತಂ ವಿಶೇಷಾಂತಂ ಸವೈಕೃತಮ್।
13016053c ಬ್ರಹ್ಮಾದಿ ಸ್ತಂಬಪರ್ಯಂತಂ ಭೂತಾದಿ ಸದಸಚ್ಚ ಯತ್।।
13016054a ಅಷ್ಟೌ ಪ್ರಕೃತಯಶ್ಚೈವ ಪ್ರಕೃತಿಭ್ಯಶ್ಚ ಯತ್ ಪರಮ್।
13016054c ಅಸ್ಯ ದೇವಸ್ಯ ಯದ್ ಭಾಗಂ ಕೃತ್ಸ್ನಂ ಸಂಪರಿವರ್ತತೇ।।
ನಕ್ಷತ್ರ-ಗ್ರಹ-ವಾಯುಗಳೊಂದಿಗೆ ಚಂದ್ರಾದಿತ್ಯರು, ಧ್ರುವ, ಸಪ್ತರ್ಷಿಗಳು, ಏಳು ಭುವನಗಳು, ಪ್ರಧಾನ, ಮಹತ್, ಅವ್ಯಕ್ತದಿಂದ ವಿಶೇಷದವರೆಗಿನ ಸೃಷ್ಟಿಗಳು, ಬ್ರಹ್ಮನಿಂದ ಸ್ತಂಭದವರೆಗೆ ಇರುವ ಎಲ್ಲ ಭೂತಗಳು, ಅಷ್ಟ ಪ್ರಕೃತಿಗಳು, ಪ್ರಕೃತಿಗಿಂತಲೂ ಆಚೆಯಿರುವ ಪುರುಷ – ಚಕ್ರದಂತೆ ತಿರುಗುತ್ತಿರುವ ಇವೆಲ್ಲವೂ ಮಹಾದೇವನ ಭಾಗಗಳು.
13016055a ಏತತ್ಪರಮಮಾನಂದಂ ಯತ್ತಚ್ಚಾಶ್ವತಮೇವ ಚ।
13016055c ಏಷಾ ಗತಿರ್ವಿರಕ್ತಾನಾಮೇಷ ಭಾವಃ ಪರಃ ಸತಾಮ್।।
ಇವನೇ ಪರಮಾನಂದ. ಶಾಶ್ವತನು. ವಿರಕ್ತರ ಗತಿಯು ಇವನೇ. ಸತ್ಯವಂತರ ಪರಮ ಭಾವವೂ ಇವನೇ.
13016056a ಏತತ್ಪದಮನುದ್ವಿಗ್ನಮೇತದ್ಬ್ರಹ್ಮ ಸನಾತನಮ್।
13016056c ಶಾಸ್ತ್ರವೇದಾಂಗವಿದುಷಾಮೇತದ್ಧ್ಯಾನಂ ಪರಂ ಪದಮ್।।
ಇವನ ಪದವು ಅನುದ್ವಿಗ್ನವಾದುದು. ಇವನೇ ಸನಾತನ ಬ್ರಹ್ಮ. ಇವನೇ ಶಾಸ್ತ್ರವೇದಾಂಗವಿದುಷರು ಧ್ಯಾನಿಸುವ ಪರಮ ಪದ.
13016057a ಇಯಂ ಸಾ ಪರಮಾ ಕಾಷ್ಠಾ ಇಯಂ ಸಾ ಪರಮಾ ಕಲಾ।
13016057c ಇಯಂ ಸಾ ಪರಮಾ ಸಿದ್ಧಿರಿಯಂ ಸಾ ಪರಮಾ ಗತಿಃ।।
13016058a ಇಯಂ ಸಾ ಪರಮಾ ಶಾಂತಿರಿಯಂ ಸಾ ನಿರ್ವೃತಿಃ ಪರಾ।
13016058c ಯಂ ಪ್ರಾಪ್ಯ ಕೃತಕೃತ್ಯಾಃ ಸ್ಮ ಇತ್ಯಮನ್ಯಂತ ವೇಧಸಃ।।
ಇವನೇ ಆ ಪರಾಕಾಷ್ಠ. ಇವನೇ ಆ ಪರಮ ಕಲೆ. ಇವನೇ ಆ ಪರಮ ಸಿದ್ಧಿ. ಇವನೇ ಆ ಪರಮ ಗತಿ. ಇವನೇ ಆ ಪರಮ ಶಾಂತಿ. ಇವನೇ ಆ ಪರಮ ನಿರ್ವೃತ್ತಿ. ಯಾರನ್ನು ಪಡೆದು ವೇಧಸರು ಕೃತಕೃತ್ಯರಾದೆವೆಂದು ಮನ್ನಿಸುತ್ತಾರೋ ಅವನೇ ಇವನು.
13016059a ಇಯಂ ತುಷ್ಟಿರಿಯಂ ಸಿದ್ಧಿರಿಯಂ ಶ್ರುತಿರಿಯಂ ಸ್ಮೃತಿಃ।
13016059c ಅಧ್ಯಾತ್ಮಗತಿನಿಷ್ಠಾನಾಂ ವಿದುಷಾಂ ಪ್ರಾಪ್ತಿರವ್ಯಯಾ।।
ಇವನೇ ತುಷ್ಟಿ. ಇವನೇ ಸಿದ್ಧಿ. ಇವನೇ ಶ್ರುತಿ. ಇವನೇ ಸ್ಮೃತಿ. ಆಧ್ಯಾತ್ಮಗತಿನಿಷ್ಠ ವಿದುಷರು ಪಡೆಯುವ ಅವ್ಯಯನೇ ಇವನು.
13016060a ಯಜತಾಂ ಯಜ್ಞಕಾಮಾನಾಂ ಯಜ್ಞೈರ್ವಿಪುಲದಕ್ಷಿಣೈಃ।
13016060c ಯಾ ಗತಿರ್ದೈವತೈರ್ದಿವ್ಯಾ ಸಾ ಗತಿಸ್ತ್ವಂ ಸನಾತನ।।
ಯಜ್ಞಮಾಡಲು ಬಯಸಿ ವಿಪುಲದಕ್ಷಿಣೆಗಳಿಂದ ಯಾಗಮಾಡುವವರಿಗೆ ಯಾವ ದಿವ್ಯ ದೇವತೆಗಳ ಗತಿಯು ದೊರೆಯುತ್ತದೆಯೋ ಆ ಸನಾತನ ಗತಿಯೂ ನೀನೇ.
13016061a ಜಪ್ಯಹೋಮವ್ರತೈಃ ಕೃಚ್ಚ್ರೈರ್ನಿಯಮೈರ್ದೇಹಪಾತನೈಃ।
13016061c ತಪ್ಯತಾಂ ಯಾ ಗತಿರ್ದೇವ ವೈರಾಜೇ ಸಾ ಗತಿರ್ಭವಾನ್।।
ದೇವ! ಜಪ, ಹೋಮ, ವ್ರತ, ಕೃಚ್ಛ್ರ, ನಿಯಮ, ದೇಹಪಾತನಗಳ ಮೂಲಕ ತಪಸ್ಸನ್ನು ತಪಿಸಿ ಯಾವ ಗತಿಯನ್ನು ಪಡೆದು ವಿರಾಜಿಸುತ್ತಾರೋ ಆ ಗತಿಯೂ ನೀನೇ ಆಗಿರುವೆ.
13016062a ಕರ್ಮನ್ಯಾಸಕೃತಾನಾಂ ಚ ವಿರಕ್ತಾನಾಂ ತತಸ್ತತಃ।
13016062c ಯಾ ಗತಿರ್ಬ್ರಹ್ಮಭವನೇ ಸಾ ಗತಿಸ್ತ್ವಂ ಸನಾತನ।।
ಕರ್ಮನ್ಯಾಸಮಾಡಿ ವಿರಕ್ತರಾದವರು ಯಾವ ಬ್ರಹ್ಮಭವನದ ಗತಿಯನ್ನು ಪಡೆಯುತ್ತಾರೋ ಆ ಸನಾತನ ಗತಿಯೂ ನೀನೇ.
13016063a ಅಪುನರ್ಮಾರಕಾಮಾನಾಂ ವೈರಾಗ್ಯೇ ವರ್ತತಾಂ ಪರೇ।
13016063c ವಿಕೃತೀನಾಂ ಲಯಾನಾಂ ಚ ಸಾ ಗತಿಸ್ತ್ವಂ ಸನಾತನ।।
ಪುನಃ ಜನ್ಮ-ಮರಣಗಳನ್ನು ಅಪೇಕ್ಷಿಸದವರು ವಿಕೃತಿ-ಲಯಗಳನ್ನು ತಿಳಿದು ವೈರಾಗ್ಯದಿಂದ ವರ್ತಿಸುವವರ ಸನಾತನ ಗತಿಯೂ ನೀನೇ.
13016064a ಜ್ಞಾನವಿಜ್ಞಾನನಿಷ್ಠಾನಾಂ ನಿರುಪಾಖ್ಯಾ ನಿರಂಜನಾ।
13016064c ಕೈವಲ್ಯಾ ಯಾ ಗತಿರ್ದೇವ ಪರಮಾ ಸಾ ಗತಿರ್ಭವಾನ್।।
ದೇವ! ಜ್ಞಾನವಿಜ್ಞಾನನಿಷ್ಠರಿಗೆ ಯಾವ ಅನಿರ್ವಚನೀಯ, ಅಜ್ಞಾನಶೂನ್ಯ, ಕೈವಲ್ಯ ಗತಿಯು ಪ್ರಾಪ್ತವಾಗುವುದೋ ಆ ಪರಮ ಗತಿಯೂ ನೀನೇ.
13016065a ವೇದಶಾಸ್ತ್ರಪುರಾಣೋಕ್ತಾಃ ಪಂಚೈತಾ ಗತಯಃ ಸ್ಮೃತಾಃ।
13016065c ತ್ವತ್ಪ್ರಸಾದಾದ್ಧಿ ಲಭ್ಯಂತೇ ನ ಲಭ್ಯಂತೇಽನ್ಯಥಾ ವಿಭೋ।।
ವಿಭೋ! ವೇದಶಾಸ್ತ್ರಪುರಾಣಗಳಲ್ಲಿ ಹೇಳಿರುವ ಯಾವ ಐದು ಗತಿಗಳು ತಿಳಿದಿವೆಯೋ ಅವುಗಳು ನಿನ್ನ ಪ್ರಸಾದದಿಂದಲೇ ದೊರೆಯುತ್ತವೆ. ಅನ್ಯಥಾ ದೊರೆಯುವುದಿಲ್ಲ.”
13016066a ಇತಿ ತಂಡಿಸ್ತಪೋಯೋಗಾತ್ತುಷ್ಟಾವೇಶಾನಮವ್ಯಯಮ್।
13016066c ಜಗೌ ಚ ಪರಮಂ ಬ್ರಹ್ಮ ಯತ್ ಪುರಾ ಲೋಕಕೃಜ್ಜಗೌ।।
ಹೀಗೆ ತಂಡಿಯು ತಪೋಯೋಗಗಳಿಂದ ಈಶಾನ ಅವ್ಯಯನನ್ನು ತೃಪ್ತಿಗೊಳಿಸಿದನು. ಹಿಂದೆ ಲೋಕಕರ್ತೃ ಬ್ರಹ್ಮನು ಯಾವ ಪರಮಶಿವನ ಸ್ತೋತ್ರವನ್ನು ಮಾಡಿದ್ದನೋ ಅದೇ ಸ್ತೋತ್ರವನ್ನು ತಂಡಿಮುನಿಯು ಗಾನಮಾಡಿದನು.
13016067a ಬ್ರಹ್ಮಾ ಶತಕ್ರತುರ್ವಿಷ್ಣುರ್ವಿಶ್ವೇದೇವಾ ಮಹರ್ಷಯಃ।
13016067c ನ ವಿದುಸ್ತ್ವಾಮಿತಿ ತತಸ್ತುಷ್ಟಃ ಪ್ರೋವಾಚ ತಂ ಶಿವಃ।।
“ಬ್ರಹ್ಮ, ಶತಕ್ರತು, ವಿಷ್ಣು, ವಿಶ್ವೇದೇವರು ಮತ್ತು ಮಹರ್ಷಿಗಳು ನಿನ್ನನ್ನು ತಿಳಿಯರು!” ಎಂದನು. ಅದರಿಂದ ತುಷ್ಟನಾದ ಶಿವನು ಅವನಿಗೆ ಹೇಳಿದನು:
13016068a ಅಕ್ಷಯಶ್ಚಾವ್ಯಯಶ್ಚೈವ ಭವಿತಾ ದುಃಖವರ್ಜಿತಃ।
13016068c ಯಶಸ್ವೀ ತೇಜಸಾ ಯುಕ್ತೋ ದಿವ್ಯಜ್ಞಾನಸಮನ್ವಿತಃ।।
“ನೀನು ಅಕ್ಷಯನೂ, ಅವ್ಯಯನೂ, ದುಃಖವರ್ಜಿತನೂ ಆಗುವೆ. ತೇಜೋಯುಕ್ತನೂ, ಯಶಸ್ವಿಯೂ, ದಿವ್ಯಜ್ಞಾನಸಮನ್ವಿತನೂ ಆಗುವೆ.
13016069a ಋಷೀಣಾಮಭಿಗಮ್ಯಶ್ಚ ಸೂತ್ರಕರ್ತಾ ಸುತಸ್ತವ।
13016069c ಮತ್ಪ್ರಸಾದಾದ್ದ್ವಿಜಶ್ರೇಷ್ಠ ಭವಿಷ್ಯತಿ ನ ಸಂಶಯಃ।।
ದ್ವಿಜಶ್ರೇಷ್ಠ! ನನ್ನ ಪ್ರಸಾದದಿಂದ ಸೂತ್ರಕರ್ತನಾದ ಮಗನು ನಿನಗಾಗುತ್ತಾನೆ. ಋಷಿಗಳೂ ಅವನ ಬಳಿ ಹೋಗುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ.
13016070a ಕಂ ವಾ ಕಾಮಂ ದದಾಮ್ಯದ್ಯ ಬ್ರೂಹಿ ಯದ್ವತ್ಸ ಕಾಂಕ್ಷಸೇ।
13016070c ಪ್ರಾಂಜಲಿಃ ಸ ಉವಾಚೇದಂ ತ್ವಯಿ ಭಕ್ತಿರ್ದೃಢಾಸ್ತು ಮೇ।।
ವತ್ಸ! ಅಥವಾ ಬೇರೆ ಯಾವ ವರವನ್ನು ನೀಡಬೇಕು? ಇಂದು ನೀನು ಬಯಸಿದುದನ್ನು ಹೇಳು.” ಆಗ ಕೈಮುಗಿದು ತಂಡಿಯು “ನಿನ್ನಮೇಲಿನ ನನ್ನ ಭಕ್ತಿಯು ದೃಢವಾಗಿರಲಿ!” ಎಂದು ಕೇಳಿಕೊಂಡನು.
13016071a ಏವಂ ದತ್ತ್ವಾ ವರಂ ದೇವೋ ವಂದ್ಯಮಾನಃ ಸುರರ್ಷಿಭಿಃ।
13016071c ಸ್ತೂಯಮಾನಶ್ಚ ವಿಬುಧೈಸ್ತತ್ರೈವಾಂತರಧೀಯತ।।
ಹೀಗೆ ವರವನ್ನಿತ್ತು ದೇವನು, ಸುರರ್ಷಿಗಳು ನಮಸ್ಕರಿಸಲು ಮತ್ತು ವಿಬುಧರು ಸ್ತುತಿಸಲು, ಅಲ್ಲಿಯೇ ಅಂತರ್ಧಾನನಾದನು.
13016072a ಅಂತರ್ಹಿತೇ ಭಗವತಿ ಸಾನುಗೇ ಯಾದವೇಶ್ವರ।
13016072c ಋಷಿರಾಶ್ರಮಮಾಗಮ್ಯ ಮಮೈತತ್ಪ್ರೋಕ್ತವಾನಿಹ।।
ಯಾದವೇಶ್ವರ! ಭಗವಂತನು ಅನುಗರೊಂದಿಗೆ ಅಂತರ್ಹಿತನಾಗಲು ಆ ಋಷಿಯು ಆಶ್ರಮಕ್ಕೆ ಬಂದು ನನಗೆ ಇದನ್ನು ಹೇಳಿದನು.
13016073a ಯಾನಿ ಚ ಪ್ರಥಿತಾನ್ಯಾದೌ ತಂಡಿರಾಖ್ಯಾತವಾನ್ಮಮ।
13016073c ನಾಮಾನಿ ಮಾನವಶ್ರೇಷ್ಠ ತಾನಿ ತ್ವಂ ಶೃಣು ಸಿದ್ಧಯೇ।।
ಮಾನವಶ್ರೇಷ್ಠ! ಹಿಂದೆ ತಂಡಿಯು ನನಗೆ ಯಾವ ನಾಮಗಳನ್ನು ಹೇಳಿದ್ದನೋ ಅವುಗಳನ್ನು ನಿನ್ನ ಸಿದ್ಧಿಗೋಸ್ಕರವಾಗಿ ಹೇಳುತ್ತೇನೆ. ಕೇಳು.
13016074a ದಶ ನಾಮಸಹಸ್ರಾಣಿ ವೇದೇಷ್ವಾಹ ಪಿತಾಮಹಃ।
13016074c ಶರ್ವಸ್ಯ ಶಾಸ್ತ್ರೇಷು ತಥಾ ದಶ ನಾಮಶತಾನಿ ವೈ।।
ಪಿತಾಮಹನು ಶಿವನ ಹತ್ತು ಸಾವಿರನಾಮಗಳನ್ನು ಹೇಳಿದನು. ಶಾಸ್ತ್ರಗಳಲ್ಲಿ ಶರ್ವನ ಸಾವಿರ ನಾಮಗಳಿವೆ.
13016075a ಗುಹ್ಯಾನೀಮಾನಿ ನಾಮಾನಿ ತಂಡಿರ್ಭಗವತೋಽಚ್ಯುತ।
13016075c ದೇವಪ್ರಸಾದಾದ್ದೇವೇಶ ಪುರಾ ಪ್ರಾಹ ಮಹಾತ್ಮನೇ।।
ಅಚ್ಯುತ! ದೇವೇಶ! ಗುಹ್ಯವಾಗಿರುವ ಭಗವಂತನ ಈ ನಾಮಗಳನ್ನು ಮಹಾತ್ಮ ತಂಡಿಯು ಹಿಂದೆ ದೇವಪ್ರಸಾದದಿಂದ ನನಗೆ ಹೇಳಿದನು.””
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಮೇಘವಾಹನಪರ್ವಾಖ್ಯಾನೇ ಷೋಡಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಮೇಘವಾಹನಪರ್ವಾಖ್ಯಾನ ಎನ್ನುವ ಹದಿನಾರನೇ ಅಧ್ಯಾಯವು.