015: ಮೇಘವಾಹನಪರ್ವಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 15

ಸಾರ

ಉಪಮನ್ಯುವಿನಿಂದ ದೀಕ್ಷೆಯನ್ನು ಪಡೆದು ಕೃಷ್ಣನು ಶಿವನ ಕುರಿತು ತಪಸ್ಸನ್ನು ತಪಿಸಿದುದು (1-5). ಕೃಷ್ಣನಿಗೆ ಶಿವನ ದರ್ಶನ (6-29). ಕೃಷ್ಣನಿಂದ ಶಿವಸ್ತುತಿ (30-45) ಶಿವನು ಕೃಷ್ಣನಿಗೆ ವರವನ್ನಿತ್ತಿದುದು (46-51).

13015001 ಉಪಮನ್ಯುರುವಾಚ।
13015001a ಏತಾನ್ಸಹಸ್ರಶಶ್ಚಾನ್ಯಾನ್ಸಮನುಧ್ಯಾತವಾನ್ ಹರಃ।
13015001c ಕಸ್ಮಾತ್ಪ್ರಸಾದಂ ಭಗವಾನ್ನ ಕುರ್ಯಾತ್ತವ ಮಾಧವ।।

ಉಪಮನ್ಯುವು ಹೇಳಿದನು: “ಮಾಧವ! ಇಲ್ಲಿರುವ ಸಹಸ್ರ ಮುನಿಗಳನ್ನೂ ಭಗವಾನ್ ಹರನು ಚೆನ್ನಾಗಿ ಪರಿಶೀಲಿಸಿ ಅನುಗ್ರಹಿಸಿರುವನು. ನಿನ್ನ ಮೇಲೆ ಹೇಗೆ ಅವನು ಪ್ರಸನ್ನನಾಗುವುದಿಲ್ಲ?

13015002a ತ್ವಾದೃಶೇನ ಹಿ ದೇವಾನಾಂ ಶ್ಲಾಘನೀಯಃ ಸಮಾಗಮಃ।
13015002c ಬ್ರಹ್ಮಣ್ಯೇನಾನೃಶಂಸೇನ ಶ್ರದ್ದಧಾನೇನ ಚಾಪ್ಯುತ।
13015002e ಜಪ್ಯಂ ಚ ತೇ ಪ್ರದಾಸ್ಯಾಮಿ ಯೇನ ದ್ರಕ್ಷ್ಯಸಿ ಶಂಕರಮ್।।

ಬ್ರಹ್ಮಣ್ಯನೂ, ಕೋಮಲಸ್ವಭಾವದವನೂ, ಶ್ರದ್ದಧಾನನೂ ಆಗಿರುವ ನಿನ್ನೊಡನೆಯ ಸಮಾಗಮವು ದೇವತೆಗಳಿಗೂ ಶ್ಲಾಘನೀಯವೇ ಸರಿ! ನಿನಗೆ ಈ ಮಂತ್ರವನ್ನು ನೀಡುತ್ತೇನೆ. ಇದನ್ನು ಜಪಿಸಿ ನೀನು ಶಂಕರನನ್ನು ಕಾಣುತ್ತೀಯೆ!””

13015003 ಕೃಷ್ಣ ಉವಾಚ।
13015003a ಅಬ್ರುವಂ ತಮಹಂ ಬ್ರಹ್ಮಂಸ್ತ್ವತ್ಪ್ರಸಾದಾನ್ಮಹಾಮುನೇ।
13015003c ದ್ರಕ್ಷ್ಯೇ ದಿತಿಜಸಂಘಾನಾಂ ಮರ್ದನಂ ತ್ರಿದಶೇಶ್ವರಮ್।।

ಕೃಷ್ಣನು ಹೇಳಿದನು: “ಆಗ ನಾನು ಆ ಬ್ರಾಹ್ಮಣನಿಗೆ ಹೇಳಿದೆನು: “ಮಹಾಮುನೇ! ನಿನ್ನ ಅನುಗ್ರಹದಿಂದಲೇ ನಾನು ಆ ದಿತಿಜಸಂಘಗಳನ್ನು ಮರ್ದಿಸಿದ ತ್ರಿದಶೇಶ್ವರನನ್ನು ನೋಡಬಲ್ಲೆ.”

13015004a ದಿನೇಽಷ್ಟಮೇ ಚ ವಿಪ್ರೇಣ ದೀಕ್ಷಿತೋಽಹಂ ಯಥಾವಿಧಿ।
13015004c ದಂಡೀ ಮುಂಡೀ ಕುಶೀ ಚೀರೀ ಘೃತಾಕ್ತೋ ಮೇಖಲೀ ತಥಾ।।

ಎಂಟನೇ ದಿನದಂದು ನಾನು ವಿಪ್ರನಿಂದ ಯಥಾವಿಧಿಯಾಗಿ ಮುಂಡನ ಮಾಡಿಕೊಂಡು, ದಂಡವನ್ನು ಹಿಡಿದು, ಶರೀರಕ್ಕೆ ತುಪ್ಪವನ್ನು ಲೇಪಿಸಿಕೊಂಡು, ನಾರುಮಡಿಯನ್ನುಟ್ಟು, ಮೌಂಜಿಯನ್ನು ಧಾರಣೆಮಾಡಿ ದೀಕ್ಷಿತನಾದೆನು.

13015005a ಮಾಸಮೇಕಂ ಫಲಾಹಾರೋ ದ್ವಿತೀಯಂ ಸಲಿಲಾಶನಃ।
13015005c ತೃತೀಯಂ ಚ ಚತುರ್ಥಂ ಚ ಪಂಚಮಂ ಚಾನಿಲಾಶನಃ।।

ಮೊದಲನೆಯ ತಿಂಗಳು ಫಲಾಹಾರಿಯಾಗಿದ್ದೆ. ಎರಡನೆಯ ತಿಂಗಳು ಕೇವಲ ನೀರನ್ನು ಕುಡಿಯುತ್ತಿದ್ದೆ. ಮೂರು, ನಾಲ್ಕು ಮತ್ತು ಐದನೆಯ ತಿಂಗಳುಗಳಲ್ಲಿ ಕೇವಲ ಗಾಳಿಯನ್ನೇ ಸೇವಿಸುತ್ತಿದ್ದೆ.

13015006a ಏಕಪಾದೇನ ತಿಷ್ಠಂಶ್ಚ ಊರ್ಧ್ವಬಾಹುರತಂದ್ರಿತಃ।
13015006c ತೇಜಃ ಸೂರ್ಯಸಹಸ್ರಸ್ಯ ಅಪಶ್ಯಂ ದಿವಿ ಭಾರತ।।

ಭಾರತ! ಒಂದೇ ಕಾಲಿನಮೇಲೆ ನಿಂತು ಬಾಹುಗಳನ್ನು ಮೇಲಕ್ಕೆತ್ತಿ ಆಲಸಿಕೆಯಿಲ್ಲದೇ ತಪಸ್ಸನ್ನಾಚರಿಸುತ್ತಿರಲು ದಿವಿಯಲ್ಲಿ ಸಹಸ್ರ ಸೂರ್ಯರ ತೇಜಸ್ಸನ್ನು ಕಂಡೆನು.

13015007a ತಸ್ಯ ಮಧ್ಯಗತಂ ಚಾಪಿ ತೇಜಸಃ ಪಾಂಡುನಂದನ।
13015007c ಇಂದ್ರಾಯುಧಪಿನದ್ಧಾಂಗಂ ವಿದ್ಯುನ್ಮಾಲಾಗವಾಕ್ಷಕಮ್।
13015007e ನೀಲಶೈಲಚಯಪ್ರಖ್ಯಂ ಬಲಾಕಾಭೂಷಿತಂ ಘನಮ್।।

ಪಾಂಡುನಂದನ! ಅದರ ಮಧ್ಯದಲ್ಲಿದ್ದ ತೇಜಸ್ಸಿನ ಸಮಸ್ತ ಅಂಗಗಳೂ ಕಾಮನ ಬಿಲ್ಲಿನಿಂದ ಸುತ್ತುವರೆಯಲ್ಪಟ್ಟಿದ್ದವು. ವಿದ್ಯುತ್ತಿನ ಮಾಲೆಯು ಅದರ ಗವಾಕ್ಷಿಯಾಗಿತ್ತು. ಅದು ನೀಲಶೈಲದಂತೆ ಪ್ರಕಾಶಿಸುತ್ತಿತ್ತು. ಬೆಳ್ಳಕ್ಕಿಗಳಿಂದ ತುಂಬಿದ ಘನ ಆಕಾಶದಂತೆ ಕಾಣುತ್ತಿತ್ತು.

13015008a ತಮಾಸ್ಥಿತಶ್ಚ ಭಗವಾನ್ದೇವ್ಯಾ ಸಹ ಮಹಾದ್ಯುತಿಃ।
13015008c ತಪಸಾ ತೇಜಸಾ ಕಾಂತ್ಯಾ ದೀಪ್ತಯಾ ಸಹ ಭಾರ್ಯಯಾ।।

ಅಲ್ಲಿ ದೇವಿಯ ಸಹಿತ ಭಗವಾನ್ ಮಹಾದ್ಯುತಿಯು ನಿಂತಿದ್ದನು. ಭಾರ್ಯೆಯೊಂದಿಗೆ ಅವನು ತಪಸ್ಸಿನ ತೇಜಸ್ಸು ಕಾಂತಿಗಳಿಂದ ಬೆಳಗುತ್ತಿದ್ದನು.

13015009a ರರಾಜ ಭಗವಾಂಸ್ತತ್ರ ದೇವ್ಯಾ ಸಹ ಮಹೇಶ್ವರಃ।
13015009c ಸೋಮೇನ ಸಹಿತಃ ಸೂರ್ಯೋ ಯಥಾ ಮೇಘಸ್ಥಿತಸ್ತಥಾ।।

ಅಲ್ಲಿ ದೇವಿಯ ಸಹಿತ ಭಗವಾನ್ ಮಹೇಶ್ವರನು ಮೇಘವನ್ನೇರಿದ ಸೂರ್ಯನು ಚಂದ್ರನೊಂದಿಗೆ ಹೇಗೋ ಹಾಗೆ ರಾರಾಜಿಸಿದನು.

13015010a ಸಂಹೃಷ್ಟರೋಮಾ ಕೌಂತೇಯ ವಿಸ್ಮಯೋತ್ಫುಲ್ಲಲೋಚನಃ।
13015010c ಅಪಶ್ಯಂ ದೇವಸಂಘಾನಾಂ ಗತಿಮಾರ್ತಿಹರಂ ಹರಮ್।।

ಕೌಂತೇಯ! ರೋಮಸಂಹೃಷ್ಟನಾಗಿ ವಿಸ್ಮಯದಿಂದ ಕಣ್ಣುಗಳನ್ನು ಅಗಲಿಸಿ ನಾನು ದೇವಸಂಘಗಳ ಗತಿ, ಆರ್ತಿಹರ ಹರನನ್ನು ಕಂಡೆನು.

13015011a ಕಿರೀಟಿನಂ ಗದಿನಂ ಶೂಲಪಾಣಿಂ ವ್ಯಾಘ್ರಾಜಿನಂ ಜಟಿಲಂ ದಂಡಪಾಣಿಮ್।
13015011c ಪಿನಾಕಿನಂ ವಜ್ರಿಣಂ ತೀಕ್ಷ್ಣದಂಷ್ಟ್ರಂ ಶುಭಾಂಗದಂ ವ್ಯಾಲಯಜ್ಞೋಪವೀತಮ್।।
13015012a ದಿವ್ಯಾಂ ಮಾಲಾಮುರಸಾನೇಕವರ್ಣಾಂ ಸಮುದ್ವಹಂತಂ ಗುಲ್ಫದೇಶಾವಲಂಬಾಮ್।
13015012c ಚಂದ್ರಂ ಯಥಾ ಪರಿವಿಷ್ಟಂ ಸಸಂಧ್ಯಂ ವರ್ಷಾತ್ಯಯೇ ತದ್ವದಪಶ್ಯಮೇನಮ್।।

ಕಿರೀಟವನ್ನು ಧರಿಸಿದ್ದ, ಗದೆ-ಶೂಲಗಳನ್ನು ಹಿಡಿದಿದ್ದ, ವ್ಯಾಘ್ರಚರ್ಮವನ್ನು ಧರಿಸಿದ್ದ, ಜಟಾಜೂಟಧರ, ಕೈಯಲ್ಲಿ ದಂಡವನ್ನು ಹಿಡಿದಿದ್ದ, ಸರ್ಪವನ್ನೇ ಯಜ್ಞೋಪವೀತವನ್ನಾಗಿ ಧರಿಸಿದ್ದ, ಕಾಲುಗಳ ವರೆಗೂ ಇಳಿಬಿದ್ದಿದ್ದ ಅನೇಕವರ್ಣಗಳ ದಿವ್ಯ ಮಾಲೆಯನ್ನು ಧರಿಸಿದ್ದ, ಮಳೆಗಾಲದ ಅಂತ್ಯದಲ್ಲಿ ಸಂಧ್ಯೆಯಿಂದ ಪರಿವೃತನಾದ ಚಂದ್ರನಂತೆಯೇ ಕಾಣುತ್ತಿದ್ದ ಆ ಪಿನಾಕಿ, ವಜ್ರಿ, ತೀಕ್ಷ್ಣದಂಷ್ಟ್ರ, ಶುಭಾಂಗದನನ್ನು ನಾನು ನೋಡಿದೆನು.

13015013a ಪ್ರಮಥಾನಾಂ ಗಣೈಶ್ಚೈವ ಸಮಂತಾತ್ಪರಿವಾರಿತಮ್।
13015013c ಶರದೀವ ಸುದುಷ್ಪ್ರೇಕ್ಷ್ಯಂ ಪರಿವಿಷ್ಟಂ ದಿವಾಕರಮ್।।

ಎಲ್ಲ ಕಡೆ ಪ್ರಮಥ ಗಣಗಳಿಂದ ಪರಿವೃತನಾಗಿದ್ದ, ಶರದ್ಕಾಲದ ದಿವಾಕರನಂತೆ ನೋಡಲು ದುಃಸಾಧ್ಯನಾಗಿದ್ದ ಆ ಪರಿವಿಷ್ಟನನ್ನು ನೋಡಿದೆನು.

13015014a ಏಕಾದಶ ತಥಾ ಚೈನಂ ರುದ್ರಾಣಾಂ ವೃಷವಾಹನಮ್।
13015014c ಅಸ್ತುವನ್ನಿಯತಾತ್ಮಾನಃ ಕರ್ಮಭಿಃ ಶುಭಕರ್ಮಿಣಮ್।।

ಆ ಏಕಾದಶ ರುದ್ರರನ್ನೂ, ವೃಷಭವಾಹನನನ್ನೂ ಮತ್ತು ಶುಭಕರ್ಮಿಣಿಯನ್ನೂ ನಿಯತಾತ್ಮರು ಕರ್ಮಗಳಿಂದ ಸ್ತುತಿಸುತ್ತಿದ್ದರು.

13015015a ಆದಿತ್ಯಾ ವಸವಃ ಸಾಧ್ಯಾ ವಿಶ್ವೇದೇವಾಸ್ತಥಾಶ್ವಿನೌ।
13015015c ವಿಶ್ವಾಭಿಃ ಸ್ತುತಿಭಿರ್ದೇವಂ ವಿಶ್ವದೇವಂ ಸಮಸ್ತುವನ್।।

ಆದಿತ್ಯರು, ವಸುಗಳು, ಸಾಧ್ಯರು, ವಿಶ್ವೇದೇವರು, ಅಶ್ವಿನರು, ಮತ್ತು ವಿಶ್ವವೇ ಆ ದೇವ ವಿಶ್ವದೇವನನ್ನು ಸ್ತುತಿಗಳಿಂದ ನಮಸ್ಕರಿಸುತ್ತಿದ್ದರು.

13015016a ಶತಕ್ರತುಶ್ಚ ಭಗವಾನ್ವಿಷ್ಣುಶ್ಚಾದಿತಿನಂದನೌ।
13015016c ಬ್ರಹ್ಮಾ ರಥಂತರಂ ಸಾಮ ಈರಯಂತಿ ಭವಾಂತಿಕೇ।।

ಅದಿತಿನಂದನರಾದ ಶತಕ್ರತುವೂ, ಭಗವಾನ್ ವಿಷ್ಣುವೂ ಮತ್ತು ಬ್ರಹ್ಮನೂ ಭವನ ಬಳಿ ರಥಂತರ ಸಾಮವನ್ನು ಹಾಡುತ್ತಿದ್ದರು.

13015017a ಯೋಗೀಶ್ವರಾಃ ಸುಬಹವೋ ಯೋಗದಂ ಪಿತರಂ ಗುರುಮ್।
13015017c ಬ್ರಹ್ಮರ್ಷಯಶ್ಚ ಸಸುತಾಸ್ತಥಾ ದೇವರ್ಷಯಶ್ಚ ವೈ।।
13015018a ಪೃಥಿವೀ ಚಾಂತರಿಕ್ಷಂ ಚ ನಕ್ಷತ್ರಾಣಿ ಗ್ರಹಾಸ್ತಥಾ।
13015018c ಮಾಸಾರ್ಧಮಾಸಾ ಋತವೋ ರಾತ್ರ್ಯಃ ಸಂವತ್ಸರಾಃ ಕ್ಷಣಾಃ।।
13015019a ಮುಹೂರ್ತಾಶ್ಚ ನಿಮೇಷಾಶ್ಚ ತಥೈವ ಯುಗಪರ್ಯಯಾಃ।
13015019c ದಿವ್ಯಾ ರಾಜನ್ನಮಸ್ಯಂತಿ ವಿದ್ಯಾಃ ಸರ್ವಾ ದಿಶಸ್ತಥಾ।।

ರಾಜನ್! ಅನೇಕ ಯೋಗೀಶ್ವರರೂ, ಸುತರೊಂದಿಗೆ ಬ್ರಹ್ಮರ್ಷಿಗಳೂ, ದೇವರ್ಷಿಗಳು, ಪೃಥ್ವೀ, ಅಂತರಿಕ್ಷ, ನಕ್ಷತ್ರಗಳು, ಗ್ರಹಗಳು, ಮಾಸ, ಪಕ್ಷ, ಋತು, ರಾತ್ರಿ, ಸಂವತ್ಸರ, ಕ್ಷಣ, ಮುಹೂರ್ತ, ನಿಮಿಷಗಳೂ, ಹಾಗೆಯೇ ಯುಗಪರ್ಯಯಗಳೂ, ದಿವ್ಯ ವಿದ್ಯೆಗಳೂ ಆ ಯೋಗಪಿತೃ ಗುರುವನ್ನು ಎಲ್ಲ ದಿಕ್ಕುಗಳಲ್ಲಿಯೂ ನಮಸ್ಕರಿಸುತ್ತಿದ್ದರು.

13015020a ಸನತ್ಕುಮಾರೋ ವೇದಾಶ್ಚ ಇತಿಹಾಸಾಸ್ತಥೈವ ಚ।
13015020c ಮರೀಚಿರಂಗಿರಾ ಅತ್ರಿಃ ಪುಲಸ್ತ್ಯಃ ಪುಲಹಃ ಕ್ರತುಃ।।
13015021a ಮನವಃ ಸಪ್ತಸೋಮಶ್ಚ ಅಥರ್ವಾ ಸಬೃಹಸ್ಪತಿಃ।
13015021c ಭೃಗುರ್ದಕ್ಷಃ ಕಶ್ಯಪಶ್ಚ ವಸಿಷ್ಠಃ ಕಾಶ್ಯ ಏವ ಚ।।
3015022a ಚಂದಾಂಸಿ ದೀಕ್ಷಾ ಯಜ್ಞಾಶ್ಚ ದಕ್ಷಿಣಾಃ ಪಾವಕೋ ಹವಿಃ।
13015022c ಯಜ್ಞೋಪಗಾನಿ ದ್ರವ್ಯಾಣಿ ಮೂರ್ತಿಮಂತಿ ಯುಧಿಷ್ಠಿರ।।

ಯುಧಿಷ್ಠಿರ! ಸನತ್ಕುಮಾರರು, ವೇದಗಳು, ಇತಿಹಾಸಗಳು, ಮರೀಚಿ, ಅಂಗೀರಸ, ಅತ್ರಿ, ಪುಲಸ್ತ್ಯ, ಪುಲಹ, ಕ್ರತು, ಮನುಗಳು, ಸಪ್ತಸೋಮರು, ಅಥರ್ವ, ಬೃಹಸ್ಪತಿ, ಭೃಗು, ದಕ್ಷ, ಕಶ್ಯಪ, ವಸಿಷ್ಠ, ಕಾಶ್ಯ, ಚಂಧಗಳು, ದೀಕ್ಷೆ, ಯಜ್ಞಗಳು, ದಕ್ಷಿಣೆಗಳು, ಪಾವಕ, ಹವಿಸ್ಸು, ಯಜ್ಞೋಪ ದ್ರವ್ಯಗಳು ಅಲ್ಲಿ ಮೂರ್ತಿಮತ್ತರಾಗಿದ್ದರು.

13015023a ಪ್ರಜಾನಾಂ ಪತಯಃ ಸರ್ವೇ ಸರಿತಃ ಪನ್ನಗಾ ನಗಾಃ।
13015023c ದೇವಾನಾಂ ಮಾತರಃ ಸರ್ವಾ ದೇವಪತ್ನ್ಯಃ ಸಕನ್ಯಕಾಃ।।
13015024a ಸಹಸ್ರಾಣಿ ಮುನೀನಾಂ ಚ ಅಯುತಾನ್ಯರ್ಬುದಾನಿ ಚ।
13015024c ನಮಸ್ಯಂತಿ ಪ್ರಭುಂ ಶಾಂತಂ ಪರ್ವತಾಃ ಸಾಗರಾ ದಿಶಃ।।

ಪ್ರಜಾಪತಿಗಳೆಲ್ಲರೂ, ನದಿಗಳು, ಪನ್ನಗಗಳು, ಆನೆಗಳು, ದೇವಮಾತರರೆಲ್ಲರೂ, ಕನ್ಯೆಯರೊಂದಿಗೆ ದೇವಪತ್ನಿಯರು, ಸಹಸ್ರಾರು ಸಾವಿರ ಅರ್ಬುದ ಮುನಿಗಳು, ಪರ್ವತಗಳು, ಸಾಗರಗಳು, ದಿಕ್ಕುಗಳು ಆ ಪ್ರಭು ಶಾಂತನನ್ನು ನಮಸ್ಕರಿಸುತ್ತಿದ್ದರು.

13015025a ಗಂಧರ್ವಾಪ್ಸರಸಶ್ಚೈವ ಗೀತವಾದಿತ್ರಕೋವಿದಾಃ।
13015025c ದಿವ್ಯತಾನೇನ ಗಾಯಂತಃ ಸ್ತುವಂತಿ ಭವಮದ್ಭುತಮ್।
13015025e ವಿದ್ಯಾಧರಾ ದಾನವಾಶ್ಚ ಗುಹ್ಯಕಾ ರಾಕ್ಷಸಾಸ್ತಥಾ।।

ಗೀತವಾದಿತ್ರ ಕೋವಿದರಾದ ಗಂಧರ್ವರು, ಅಪ್ಸರೆಯರು, ವಿದ್ಯಾಧರರು, ದಾನವರು, ಗುಹ್ಯಕರು, ರಾಕ್ಷಸರು ದಿವ್ಯತಾನದಿಂದ ಹಾಡುತ್ತಾ ಆ ಅದ್ಭುತ ಭವನನ್ನು ಸ್ತುತಿಸುತ್ತಿದ್ದರು.

13015026a ಸರ್ವಾಣಿ ಚೈವ ಭೂತಾನಿ ಸ್ಥಾವರಾಣಿ ಚರಾಣಿ ಚ।
13015026c ನಮಸ್ಯಂತಿ ಮಹಾರಾಜ ವಾಙ್ಮನಃಕರ್ಮಭಿರ್ವಿಭುಮ್।
13015026e ಪುರಸ್ತಾದ್ವಿಷ್ಠಿತಃ ಶರ್ವೋ ಮಮಾಸೀತ್ತ್ರಿದಶೇಶ್ವರಃ।।

ಮಹಾರಾಜ! ಸ್ಥಾವರ-ಚರ ಸರ್ವ ಭೂತಗಳೂ ವಾಕ್-ಮನಸ್ಸು ಮತ್ತು ಕರ್ಮಗಳಿಂದ ವಿಭುವನ್ನು ನಮಸ್ಕರಿಸುತ್ತವೆ. ತ್ರಿದಶೇಶ್ವರ ಶರ್ವನು ನನ್ನ ಎದುರಿಗೇ ನಿಂತಿದ್ದನು.

13015027a ಪುರಸ್ತಾದ್ವಿಷ್ಠಿತಂ ದೃಷ್ಟ್ವಾ ಮಮೇಶಾನಂ ಚ ಭಾರತ।
13015027c ಸಪ್ರಜಾಪತಿಶಕ್ರಾಂತಂ ಜಗನ್ಮಾಮಭ್ಯುದೈಕ್ಷತ।।

ಭಾರತ! ನನ್ನ ಎದುರಿಗಿದ್ದ ಈಶಾನನನ್ನು ನೋಡಿ ಪ್ರಜಾಪತಿಯಿಂದ ಮೊದಲ್ಗೊಂಡ ಶಕ್ರನವರೆಗೆ ಎಲ್ಲರೂ ನನ್ನನ್ನೇ ನೋಡತೊಡಗಿದರು.

13015028a ಈಕ್ಷಿತುಂ ಚ ಮಹಾದೇವಂ ನ ಮೇ ಶಕ್ತಿರಭೂತ್ತದಾ।
13015028c ತತೋ ಮಾಮಬ್ರವೀದ್ದೇವಃ ಪಶ್ಯ ಕೃಷ್ಣ ವದಸ್ವ ಚ।।

ಮಹಾದೇವನನ್ನು ವೀಕ್ಷಿಸಲು ನನ್ನಲ್ಲಿ ಶಕ್ತಿಯೇ ಇಲ್ಲವಾಗಿತ್ತು. ಆಗ ದೇವನು “ಕೃಷ್ಣ! ನನ್ನನ್ನು ನೋಡು ಮತ್ತು ಮಾತನಾಡು!” ಎಂದು ನನಗೆ ಹೇಳಿದನು.

13015029a ಶಿರಸಾ ವಂದಿತೇ ದೇವೇ ದೇವೀ ಪ್ರೀತಾ ಉಮಾಭವತ್।
13015029c ತತೋಽಹಮಸ್ತುವಂ ಸ್ಥಾಣುಂ ಸ್ತುತಂ ಬ್ರಹ್ಮಾದಿಭಿಃ ಸುರೈಃ।।

ದೇವನಿಗೆ ನಾನು ಶಿರಸಾ ವಂದಿಸಲು ದೇವೀ ಉಮೆಯು ಪ್ರೀತಳಾದಳು. ಬ್ರಹ್ಮಾದಿ ಸುರರಿಂದ ಸ್ತುತಿಸಲ್ಪಡುತ್ತಿದ್ದ ಸ್ಥಾಣುವನ್ನು ನಾನೂ ಸ್ತುತಿಸಿದೆನು.

13015030a ನಮೋಽಸ್ತು ತೇ ಶಾಶ್ವತ ಸರ್ವಯೋನೇ ಬ್ರಹ್ಮಾಧಿಪಂ ತ್ವಾಮೃಷಯೋ ವದಂತಿ।
13015030c ತಪಶ್ಚ ಸತ್ತ್ವಂ ಚ ರಜಸ್ತಮಶ್ಚ ತ್ವಾಮೇವ ಸತ್ಯಂ ಚ ವದಂತಿ ಸಂತಃ।।

“ಶಾಶ್ವತ! ಸರ್ವಯೋನೇ! ನಿನಗೆ ನಮಸ್ಕಾರ! ಋಷಿಗಳು ನಿನ್ನನ್ನು ಬ್ರಹ್ಮಾಧಿಪನೆಂದು ಕರೆಯುತ್ತಾರೆ. ಸಂತರು ನೀನೇ ತಪಸ್ಸು, ಸತ್ತ್ವ, ರಜ, ತಮಸ್ಸು ಮತ್ತು ಸತ್ಯ ಎಂದು ಹೇಳುತ್ತಾರೆ.

13015031a ತ್ವಂ ವೈ ಬ್ರಹ್ಮಾ ಚ ರುದ್ರಶ್ಚ ವರುಣೋಽಗ್ನಿರ್ಮನುರ್ಭವಃ।
13015031c ಧಾತಾ ತ್ವಷ್ಟಾ ವಿಧಾತಾ ಚ ತ್ವಂ ಪ್ರಭುಃ ಸರ್ವತೋಮುಖಃ।।

ನೀನೇ ಬ್ರಹ್ಮ, ರುದ್ರ, ವರುಣ, ಅಗ್ನಿ, ಮನು, ಭವ, ಧಾತಾ, ತ್ವಷ್ಟಾ, ವಿಧಾತಾ. ಮತ್ತು ನೀನೇ ಸರ್ವತೋಮುಖ ಪ್ರಭು.

13015032a ತ್ವತ್ತೋ ಜಾತಾನಿ ಭೂತಾನಿ ಸ್ಥಾವರಾಣಿ ಚರಾಣಿ ಚ।
13015032c ತ್ವಮಾದಿಃ ಸರ್ವಭೂತಾನಾಂ ಸಂಹಾರಶ್ಚ ತ್ವಮೇವ ಹಿ।।

ಸ್ಥಾವರ-ಚರ ಭೂತಗಳು ನಿನ್ನಿಂದಲೇ ಹುಟ್ಟುತ್ತವೆ. ನೀನೇ ಸರ್ವಭೂತಗಳ ಆದಿ. ಅವುಗಳ ಸಂಹಾರಕನೂ ನೀನೇ.

13015033a ಯೇ ಚೇಂದ್ರಿಯಾರ್ಥಾಶ್ಚ ಮನಶ್ಚ ಕೃತ್ಸ್ನಂ ಯೇ ವಾಯವಃ ಸಪ್ತ ತಥೈವ ಚಾಗ್ನಿಃ।
13015033c ಯೇ ವಾ ದಿವಿಸ್ಥಾ ದೇವತಾಶ್ಚಾಪಿ ಪುಂಸಾಂ ತಸ್ಮಾತ್ಪರಂ ತ್ವಾಮೃಷಯೋ ವದಂತಿ।।

ಇರುವ ಇಂದ್ರಿಯಗಳು, ಅರ್ಥಗಳು, ಮನಸ್ಸು ಎಲ್ಲವೂ, ಹಾಗೆಯೇ ಸಪ್ತವಾಯುಗಳು, ಸಪ್ತಾಗ್ನಿಗಳು, ದಿವಿಯಲ್ಲಿರುವ ದೇವತಾ ಪುರುಷರಿಗೂ ಮೀರಿದವನು ನೀನು ಎಂದು ಋಷಿಗಳು ಹೇಳುತ್ತಾರೆ.

13015034a ವೇದಾ ಯಜ್ಞಾಶ್ಚ ಸೋಮಶ್ಚ ದಕ್ಷಿಣಾ ಪಾವಕೋ ಹವಿಃ।
13015034c ಯಜ್ಞೋಪಗಂ ಚ ಯತ್ಕಿಂ ಚಿದ್ಭಗವಾಂಸ್ತದಸಂಶಯಮ್।।

ವೇದಗಳು, ಯಜ್ಞಗಳು, ಸೋಮ, ದಕ್ಷಿಣೆಗಳು, ಪಾವಕ, ಹವಿಸ್ಸು, ಯಜ್ಞಕ್ಕೆ ಸಂಬಂಧಿಸಿದ ಯಾವುದೆಲ್ಲ ಇವೆಯೋ ಅವೆಲ್ಲವೂ ನೀನೇ ಎನ್ನುವುದರಲ್ಲಿ ಸಂಶಯವಿಲ್ಲ.

13015035a ಇಷ್ಟಂ ದತ್ತಮಧೀತಂ ಚ ವ್ರತಾನಿ ನಿಯಮಾಶ್ಚ ಯೇ।
13015035c ಹ್ರೀಃ ಕೀರ್ತಿಃ ಶ್ರೀರ್ದ್ಯುತಿಸ್ತುಷ್ಟಿಃ ಸಿದ್ಧಿಶ್ಚೈವ ತ್ವದರ್ಪಣಾ।।

ಇಷ್ಟಿ, ದಾನ, ಅಧ್ಯಯನ, ವ್ರತ, ನಿಯಮಗಳು, ಲಜ್ಜೆ, ಕೀರ್ತಿ, ಶ್ರೀ, ದ್ಯುತಿ, ತುಷ್ಟಿ ಮತ್ತು ಸಿದ್ಧಿಗಳು ಕೂಡ ನಿನ್ನ ಅರ್ಪಣೆಗಳು.

13015036a ಕಾಮಃ ಕ್ರೋಧೋ ಭಯಂ ಲೋಭೋ ಮದಃ ಸ್ತಂಭೋಽಥ ಮತ್ಸರಃ।
13015036c ಆಧಯೋ ವ್ಯಾಧಯಶ್ಚೈವ ಭಗವಂಸ್ತನಯಾಸ್ತವ।।

ಕಾಮ, ಕ್ರೋಧ, ಭಯ, ಲೋಭ, ಮದ, ಸ್ತಂಭ, ಮತ್ಸರ, ಆಧಿ ಮತ್ತು ವ್ಯಾಧಿಗಳು ನಿನ್ನ ಶರೀರಗಳೇ ಆಗಿವೆ.

13015037a ಕೃತಿರ್ವಿಕಾರಃ ಪ್ರಲಯಃ ಪ್ರಧಾನಂ ಪ್ರಭವೋಽವ್ಯಯಃ।
13015037c ಮನಸಃ ಪರಮಾ ಯೋನಿಃ ಸ್ವಭಾವಶ್ಚಾಪಿ ಶಾಶ್ವತಃ।
13015037e ಅವ್ಯಕ್ತಃ ಪಾವನ ವಿಭೋ ಸಹಸ್ರಾಂಶೋ ಹಿರಣ್ಮಯಃ।।

ನೀನು ಕೃತಿ. ವಿಕಾರ. ಪ್ರಲಯ. ಪ್ರಧಾನ. ಅವ್ಯಯ ಬೀಜ. ಮನಸ್ಸಿನ ಪರಮ ಯೋನಿಯು ನೀನು. ಶಾಶ್ವತವೇ ನಿನ್ನ ಸ್ವಭಾವ.

13015038a ಆದಿರ್ಗುಣಾನಾಂ ಸರ್ವೇಷಾಂ ಭವಾನ್ವೈ ಜೀವನಾಶ್ರಯಃ।
13015038c ಮಹಾನಾತ್ಮಾ ಮತಿರ್ಬ್ರಹ್ಮಾ ವಿಶ್ವಃ ಶಂಭುಃ ಸ್ವಯಂಭುವಃ।।

ಎಲ್ಲ ಗುಣಗಳ ಆದಿಯೂ ನೀನೇ. ಜೀವನಾಶ್ರಯನೂ ನೀನೇ. ನೀನೇ ಮಹಾತ್ಮರ ಮತಿ, ಬ್ರಹ್ಮ, ವಿಶ್ವ, ಶಂಭು ಮತ್ತು ಸ್ವಯಂಭು.

13015039a ಬುದ್ಧಿಃ ಪ್ರಜ್ಞೋಪಲಬ್ಧಿಶ್ಚ ಸಂವಿತ್ಖ್ಯಾತಿರ್ಧೃತಿಃ ಸ್ಮೃತಿಃ।
13015039c ಪರ್ಯಾಯವಾಚಕೈಃ ಶಬ್ದೈರ್ಮಹಾನಾತ್ಮಾ ವಿಭಾವ್ಯಸೇ।।

ಬುದ್ಧಿ, ಪ್ರಜ್ಞೆ, ಉಪಲಬ್ಧಿ, ಸಂವಿತ್, ಖ್ಯಾತಿ, ಧೃತಿ, ಸ್ಮೃತಿ – ಈ ಪರ್ಯಾಯ ವಾಚಕ ಶಬ್ಧಗಳಿಂದ ಮಹಾನ್ ಆತ್ಮನಾದ ನೀನು ತಿಳಿಯಲ್ಪಡುತ್ತೀಯೆ.

13015040a ತ್ವಾಂ ಬುದ್ಧ್ವಾ ಬ್ರಾಹ್ಮಣೋ ವಿದ್ವಾನ್ನ ಪ್ರಮೋಹಂ ನಿಗಚ್ಚತಿ।
13015040c ಹೃದಯಂ ಸರ್ವಭೂತಾನಾಂ ಕ್ಷೇತ್ರಜ್ಞಸ್ತ್ವಮೃಷಿಷ್ಟುತಃ।।

ನಿನ್ನನ್ನು ತಿಳಿದುಕೊಂಡು ವಿದ್ವಾನ್ ಬ್ರಾಹ್ಮಣರು ಪ್ರಮೋಹಗೊಳ್ಳದೇ ಮುಂದುವರೆಯುತ್ತಾರೆ. ಋಷಿಗಳಿಂದ ಸ್ತುತನಾದ ನೀನು ಸರ್ವಭೂತಗಳ ಹೃದಯ. ಕ್ಷೇತ್ರಜ್ಞ.

13015041a ಸರ್ವತಃಪಾಣಿಪಾದಸ್ತ್ವಂ ಸರ್ವತೋಕ್ಷಿಶಿರೋಮುಖಃ।
13015041c ಸರ್ವತಃಶ್ರುತಿಮಾಽಲ್ಲೋಕೇ ಸರ್ವಮಾವೃತ್ಯ ತಿಷ್ಠಸಿ।।

ನಿನಗೆ ಎಲ್ಲ ಕಡೆಗಳಲ್ಲಿ ಕೈಗಳು, ಕಾಲುಗಳು, ಶಿರಸ್ಸುಗಳು ಮತ್ತು ಮುಖಗಳಿವೆ. ಲೋಕದಲ್ಲಿ ಎಲ್ಲವನ್ನೂ ಕೇಳುತ್ತಾ ಸರ್ವವನ್ನೂ ಆವರಿಸಿ ನಿಂತಿರುವೆ.

13015042a ಫಲಂ ತ್ವಮಸಿ ತಿಗ್ಮಾಂಶೋ ನಿಮೇಷಾದಿಷು ಕರ್ಮಸು।
13015042c ತ್ವಂ ವೈ ಪ್ರಭಾರ್ಚಿಃ ಪುರುಷಃ ಸರ್ವಸ್ಯ ಹೃದಿ ಸಂಸ್ಥಿತಃ।।
13015042e ಅಣಿಮಾ ಲಘಿಮಾ ಪ್ರಾಪ್ತಿರೀಶಾನೋ ಜ್ಯೋತಿರವ್ಯಯಃ।।

ತಿಗ್ಮಾಂಶುವೇ! ಕಣ್ಣು ಮುಚ್ಚಿ-ತೆರೆಯುವ ಎಲ್ಲ ಕರ್ಮಗಳಿಗೂ ನೀನು ಫಲವನ್ನು ನೀಡುತ್ತೀಯೆ. ನೀನು ಸರ್ವರ ಹೃದಯದಲ್ಲಿರುವ ಪ್ರಭೆಯನ್ನು ಸೂಸುವ ಪುರುಷನು. ಅಣಿಮಾ-ಲಘಿಮಾಗಳ ಪ್ರಾಪ್ತಿಯೂ ಈಶಾನನೂ ಅವ್ಯಯ ಜ್ಯೋತಿಯೂ ನೀನೇ.

13015043a ತ್ವಯಿ ಬುದ್ಧಿರ್ಮತಿರ್ಲೋಕಾಃ ಪ್ರಪನ್ನಾಃ ಸಂಶ್ರಿತಾಶ್ಚ ಯೇ।
13015043c ಧ್ಯಾನಿನೋ ನಿತ್ಯಯೋಗಾಶ್ಚ ಸತ್ಯಸಂಧಾ ಜಿತೇಂದ್ರಿಯಾಃ।।

ನಿನ್ನಲ್ಲಿ ಬುದ್ಧಿ, ಮತಿ ಮತ್ತು ಲೋಕಗಳು ಪ್ರಪನ್ನಗೊಂಡು ಆಶ್ರಯಿಸಿವೆ. ನಿನ್ನಲ್ಲಿಯೇ ಧ್ಯಾನಿಗಳೂ, ನಿತ್ಯಯೋಗಿಗಳೂ, ಸತ್ಯಸಂಧ ಜಿತೇಂದ್ರಿಯರೂ ಆಶ್ರಿತರಾಗಿದ್ದಾರೆ.

13015044a ಯಸ್ತ್ವಾಂ ಧ್ರುವಂ ವೇದಯತೇ ಗುಹಾಶಯಂ ಪ್ರಭುಂ ಪುರಾಣಂ ಪುರುಷಂ ವಿಶ್ವರೂಪಮ್।
13015044c ಹಿರಣ್ಮಯಂ ಬುದ್ಧಿಮತಾಂ ಪರಾಂ ಗತಿಂ ಸ ಬುದ್ಧಿಮಾನ್ಬುದ್ಧಿಮತೀತ್ಯ ತಿಷ್ಠತಿ।।

ಯಾರು ನಿನ್ನನ್ನು ಗುಹಾಶಯನಾಗಿರುವ ಧ್ರುವ, ಪ್ರಭು, ಪುರಾಣ, ಪುರುಷ, ವಿಶ್ವರೂಪ, ಹಿರಣ್ಮಯ, ಮತ್ತು ಬುದ್ಧಿವಂತರ ಪರಮಗತಿಯೆಂದು ತಿಳಿದುಕೊಳ್ಳುತ್ತಾನೋ ಆ ಬುದ್ಧಿವಂತನು ಬುದ್ಧಿಯನ್ನು ದಾಟಿ ನಿಲ್ಲುತ್ತಾನೆ.

13015045a ವಿದಿತ್ವಾ ಸಪ್ತ ಸೂಕ್ಷ್ಮಾಣಿ ಷಡಂಗಂ ತ್ವಾಂ ಚ ಮೂರ್ತಿತಃ।
13015045c ಪ್ರಧಾನವಿಧಿಯೋಗಸ್ಥಸ್ತ್ವಾಮೇವ ವಿಶತೇ ಬುಧಃ।।

ನಿನ್ನ ಸಪ್ತಸೂಕ್ಷ್ಮಗಳನ್ನೂ1, ಷಡಂಗಗಳನ್ನೂ2 ತಿಳಿದ ಬುಧನು ಪ್ರಧಾನವಿಧಿಯೋಗಸ್ಥನಾಗಿ ಮೂರ್ತಿತಃ ನಿನ್ನನ್ನೇ ಪ್ರವೇಶಿಸುತ್ತಾನೆ.”

13015046a ಏವಮುಕ್ತೇ ಮಯಾ ಪಾರ್ಥ ಭವೇ ಚಾರ್ತಿವಿನಾಶನೇ।
13015046c ಚರಾಚರಂ ಜಗತ್ಸರ್ವಂ ಸಿಂಹನಾದಮಥಾಕರೋತ್।।

ಪಾರ್ಥ! ಆರ್ತಿವಿನಾಶನ ಭವನಿಗೆ ನಾನು ಹೀಗೆ ಹೇಳಲು ಚರಾಚರಜಗತ್ಸರ್ವವೂ ಸಿಂಹನಾದಗೈಯಿತು.

13015047a ಸವಿಪ್ರಸಂಘಾಶ್ಚ ಸುರಾಸುರಾಶ್ಚ ನಾಗಾಃ ಪಿಶಾಚಾಃ ಪಿತರೋ ವಯಾಂಸಿ।
13015047c ರಕ್ಷೋಗಣಾ ಭೂತಗಣಾಶ್ಚ ಸರ್ವೇ ಮಹರ್ಷಯಶ್ಚೈವ ತಥಾ ಪ್ರಣೇಮುಃ।।

ವಿಪ್ರಸಂಘಗಳೂ, ಸುರಾಸುರರೂ, ನಾಗಗಳೂ, ಪಿಶಾಚರೂ, ಪಿತೃಗಳೂ, ಪಕ್ಷಿಗಳೂ, ರಾಕ್ಷಸಗಣಗಳೂ, ಭೂತಗಣಗಳೂ, ಸರ್ವ ಮಹರ್ಷಿಗಳೂ ಈಶ್ವರನನ್ನು ನಮಸ್ಕರಿದವು.

13015048a ಮಮ ಮೂರ್ಧ್ನಿ ಚ ದಿವ್ಯಾನಾಂ ಕುಸುಮಾನಾಂ ಸುಗಂಧಿನಾಮ್।
13015048c ರಾಶಯೋ ನಿಪತಂತಿ ಸ್ಮ ವಾಯುಶ್ಚ ಸುಸುಖೋ ವವೌ।।

ಸುಗಂಧಯುಕ್ತ ದಿವ್ಯ ಕುಸುಮಗಳ ರಾಶಿಗಳು ನನ್ನ ನೆತ್ತಿಯ ಮೇಲೆ ಸುರಿದವು. ಸುಖಾವಹ ಗಾಳಿಯು ಬೀಸಿತು.

13015049a ನಿರೀಕ್ಷ್ಯ ಭಗವಾನ್ದೇವೀಮುಮಾಂ ಮಾಂ ಚ ಜಗದ್ಧಿತಃ।
13015049c ಶತಕ್ರತುಂ ಚಾಭಿವೀಕ್ಷ್ಯ ಸ್ವಯಂ ಮಾಮಾಹ ಶಂಕರಃ।।

ಭಗವಾನ್ ಜಗದ್ಧಿತ ಶಂಕರನು ದೇವೀ ಉಮೆಯನ್ನೂ, ನನ್ನನ್ನೂ, ಶತಕ್ರತುವನ್ನೂ ವೀಕ್ಷಿಸಿ ಸ್ವಯಂ ನನಗೆ ಇಂತೆಂದನು:

13015050a ವಿದ್ಮಃ ಕೃಷ್ಣ ಪರಾಂ ಭಕ್ತಿಮಸ್ಮಾಸು ತವ ಶತ್ರುಹನ್।
13015050c ಕ್ರಿಯತಾಮಾತ್ಮನಃ ಶ್ರೇಯಃ ಪ್ರೀತಿರ್ಹಿ ಪರಮಾ ತ್ವಯಿ।।

“ಕೃಷ್ಣ! ಶತ್ರುಹನ್! ನಿನಗೆ ನಮ್ಮ ಮೇಲಿರುವ ಪರಮ ಭಕ್ತಿಯನ್ನು ತಿಳಿದಿದ್ದೇವೆ. ನಿನಗೆ ಶ್ರೇಯವಾದುದನ್ನು ಮಾಡಿಸಿಕೋ! ನಿನ್ನಮೇಲೆ ಪರಮ ಪ್ರೀತಿಯಿದೆ.

13015051a ವೃಣೀಷ್ವಾಷ್ಟೌ ವರಾನ್ಕೃಷ್ಣ ದಾತಾಸ್ಮಿ ತವ ಸತ್ತಮ।
3015051c ಬ್ರೂಹಿ ಯಾದವಶಾರ್ದೂಲ ಯಾನಿಚ್ಚಸಿ ಸುದುರ್ಲಭಾನ್।।

ಕೃಷ್ಣ! ಸತ್ತಮ! ಎಂಟು ವರಗಳನ್ನು ಕೇಳಿಕೋ! ನಿನಗೆ ನೀಡುತ್ತೇನೆ. ಯಾದವಶಾರ್ದೂಲ! ಸುದುರ್ಲಭವಾದ ಏನನ್ನು ಬಯಸುತ್ತೀಯೋ ಅದನ್ನು ಹೇಳು!””

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಮೇಘವಾಹನಪರ್ವಾಖ್ಯಾನೇ ಪಂಚದಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಮೇಘವಾಹನಪರ್ವಾಖ್ಯಾನ ಎನ್ನುವ ಹದಿನೈದನೇ ಅಧ್ಯಾಯವು.


  1. ಮಹತ್ತತ್ವ, ಅಹಂಕಾರ ಮತ್ತು ಪಂಚತನ್ಮಾತ್ರಗಳೇ ಮಹೇಶ್ವರನ ಏಳು ಸೂಕ್ಷ್ಮಗಳು. ↩︎

  2. ಸರ್ವಜ್ಞತೆ, ತೃಪ್ತಿ, ಅನಾದಿಬೋಧ, ಸ್ವತಂತ್ರತೆ, ಅಲುಪ್ತಶಕ್ತಿ, ಮತ್ತು ಅನಂತಶಕ್ತಿ ಇವು ಮಹೇಶ್ವರನ ಷಡಂಗಗಳು. ↩︎