014: ಮೇಘವಾಹನಪರ್ವಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 14

ಸಾರ

ಶಂಭುವಿನ ನಾಮಗಳನ್ನು ಹೇಳಬೇಕೆಂದು ಯುಧಿಷ್ಠಿರನು ಭೀಷ್ಮನಲ್ಲಿ ಕೇಳಿಕೊಳ್ಳಲು, ಭೀಷ್ಮನು ಕೃಷ್ಣನಿಗೆ “ಯುಧಿಷ್ಠಿರನ ಪ್ರಶ್ನೆಗೆ ಉತ್ತರಿಸಲು ನೀನೇ ಸಮರ್ಥನಾಗಿರುವೆ!” ಎಂದುದು (1-5). ವಾಸುದೇವನು ಶಿವನ ನಾಮಗಳನ್ನು ಹೇಳಲು ಪ್ರಾರಂಭಿಸಿದುದು (6-10). ಜಾಂಬವತಿಯು ಕೃಷ್ಣನಲ್ಲಿ ಸಂತಾನವನ್ನು ಕೇಳಿದುದು (11-18). ಜಾಂಬವತಿಗೆ ಮಗನಾಗುವಂತೆ ಶಿವನ ಕುರಿತು ತಪಸ್ಸನ್ನು ಗೈಯಲು ಕೃಷ್ಣನು ಹಿಮಾಲಯವನ್ನು ಸೇರಿದುದು (19-26). ಹಿಮಾಲಯದಲ್ಲಿ ಕೃಷ್ಣನು ಕಂಡ ಉಪಮನ್ಯುವಿನ ಆಶ್ರಮದ ವರ್ಣನೆ (27-424). ಉಪಮನ್ಯುವು ಕೃಷ್ಣನಿಗೆ ಶಿವನ ಮಹಿಮೆಗಳನ್ನು ವರ್ಣಿಸಿದುದು (3-71). ಹಾಲಿಗಾಗಿ ಬಾಲಕ ಉಪಮನ್ಯುವು ಶಿವನ ಕುರಿತು ತಪಸ್ಸನ್ನಾಚರಿಸಿದುದು (72-87). ಶಿವನು ಶಕ್ರನ ರೂಪದಲ್ಲಿ ಪ್ರತ್ಯಕ್ಷನಾಗಲು ಉಪಮನ್ಯುವು ಶಕ್ರನಿಂದ ವರವನ್ನು ತಿರಸ್ಕರಿಸಿದುದು (88-106). ಉಪಮನ್ಯುವಿಗೆ ಸ್ವರೂಪದಲ್ಲಿ ಕಾಣಿಸಿಕೊಂಡು ಶಿವನ, ಅವನ ಪ್ರಮುಖ ಆಯುಧಗಳ ಮತ್ತು ಗಣಗಳ ವರ್ಣನೆ (107-149). ಉಪಮನ್ಯುವಿನಿಂದ ಶಿವಸ್ತುತಿ (150-166). ಶಿವನಿಂದ ಉಪಮನ್ಯುವಿಗೆ ವರದಾನ (167-199).

13014001 ಯುಧಿಷ್ಠಿರ ಉವಾಚ।
13014001a ಪಿತಾಮಹೇಶಾಯ ವಿಭೋ ನಾಮಾನ್ಯಾಚಕ್ಷ್ವ ಶಂಭವೇ।
13014001c ಬಭ್ರವೇ ವಿಶ್ವಮಾಯಾಯ ಮಹಾಭಾಗ್ಯಂ ಚ ತತ್ತ್ವತಃ।।

ಯುಧಿಷ್ಠಿರನು ಹೇಳಿದನು: “ವಿಭೋ! ಪಿತಾಮಹನಿಗೂ ಈಶನಾಗಿರುವ ಬಭ್ರು ವಿಶ್ವಮಾಯ ಮಹಾಭಾಗ್ಯ ಶಂಭುವಿನ ನಾಮಗಳನ್ನು ಹೇಳು!”

113014002 ಭೀಷ್ಮ ಉವಾಚ।
13014002a ಸುರಾಸುರಗುರೋ ದೇವ ವಿಷ್ಣೋ ತ್ವಂ ವಕ್ತುಮರ್ಹಸಿ।
13014002c ಶಿವಾಯ ವಿಶ್ವರೂಪಾಯ ಯನ್ಮಾಂ ಪೃಚ್ಚದ್ಯುಧಿಷ್ಠಿರಃ।।

ಭೀಷ್ಮನು ಹೇಳಿದನು: “ಸುರಾಸುರಗುರೋ! ದೇವ! ವಿಷ್ಣು! ವಿಶ್ವರೂಪ ಶಿವನ ಕುರಿತಾದ ಯುಧಿಷ್ಠಿರನ ಈ ಪ್ರಶ್ನೆಗೆ ನೀನೇ ಉತ್ತರಿಸಲು ಅರ್ಹನಾಗಿರುವೆ!

13014003a ನಾಮ್ನಾಂ ಸಹಸ್ರಂ ದೇವಸ್ಯ ತಂಡಿನಾ ಬ್ರಹ್ಮಯೋನಿನಾ।
13014003c ನಿವೇದಿತಂ ಬ್ರಹ್ಮಲೋಕೇ ಬ್ರಹ್ಮಣೋ ಯತ್ಪುರಾಭವತ್।।
13014004a ದ್ವೈಪಾಯನಪ್ರಭೃತಯಸ್ತಥೈವೇಮೇ ತಪೋಧನಾಃ।
13014004c ಋಷಯಃ ಸುವ್ರತಾ ದಾಂತಾಃ ಶೃಣ್ವಂತು ಗದತಸ್ತವ।।

ಹಿಂದೆ ಬ್ರಹ್ಮಲೋಕದಲ್ಲಿ ಬ್ರಹ್ಮನು ಬ್ರಹ್ಮಪುತ್ರ ತಂಡಿಗೆ ಹೇಳಿದ ಶಿವನ ಸಹಸ್ರನಾಮಗಳನ್ನು ಇಲ್ಲಿರುವ ದ್ವೈಪಾಯನನೇ ಮೊದಲಾದ ತಪೋಧನ ಜಿತೇಂದ್ರಿಯ ಋಷಿಗಳು ನಿನ್ನ ಧ್ವನಿಯಲ್ಲಿ ಕೇಳುವಂತಾಗಲಿ!

13014005a ಧ್ರುವಾಯ ನಂದಿನೇ ಹೋತ್ರೇ ಗೋಪ್ತ್ರೇ ವಿಶ್ವಸೃಜೇಽಗ್ನಯೇ।
13014005c ಮಹಾಭಾಗ್ಯಂ ವಿಭೋ ಬ್ರೂಹಿ ಮುಂಡಿನೇಽಥ ಕಪರ್ದಿನೇ।।

ವಿಭೋ! ಧ್ರುವ2, ನಂದಿ3, ಹೋತ್ರ, ಗೋಪ್ತ್ರ4, ವಿಶ್ವಸೃಜ, ಅಗ್ನಿ, ಮುಂಡಿನ5, ಮತ್ತು ಕಪರ್ದಿನ6ನ ಮಹಾಭಾಗ್ಯದ ಕುರಿತು ಹೇಳು!”

13014006 ವಾಸುದೇವ ಉವಾಚ।
13014006a ನ ಗತಿಃ ಕರ್ಮಣಾಂ ಶಕ್ಯಾ ವೇತ್ತುಮೀಶಸ್ಯ ತತ್ತ್ವತಃ।।

ವಾಸುದೇವನು ಹೇಳಿದನು: “ಈಶನ ಕರ್ಮಗಳ ಗತಿಯನ್ನು ತತ್ತ್ವತಃ ತಿಳಿದುಕೊಳ್ಳಲು ಸಾದ್ಯವೇ ಇಲ್ಲ.

13014007a ಹಿರಣ್ಯಗರ್ಭಪ್ರಮುಖಾ ದೇವಾಃ ಸೇಂದ್ರಾ ಮಹರ್ಷಯಃ।
13014007c ನ ವಿದುರ್ಯಸ್ಯ ನಿಧನಮಾದಿಂ ವಾ ಸೂಕ್ಷ್ಮದರ್ಶಿನಃ।
13014007e ಸ ಕಥಂ ನರಮಾತ್ರೇಣ ಶಕ್ಯೋ ಜ್ಞಾತುಂ ಸತಾಂ ಗತಿಃ।।

ಸೂಕ್ಷ್ಮದರ್ಶಿಗಳಾದ ಹಿರಣ್ಯಗರ್ಭ ಪ್ರಮುಖ ಇಂದ್ರಾದಿ ದೇವತೆಗಳಿಗೂ, ಮಹರ್ಷಿಗಳಿಗೂ ಯಾರ ಆದಿ-ನಿಧನಗಳು ತಿಳಿದಿಲ್ಲವೋ ಆ ಇರುವವನ ಗತಿಯನ್ನು ನರಮಾತ್ರನಿಗೆ ತಿಳಿಯಲು ಹೇಗೆ ಸಾಧ್ಯ?

13014008a ತಸ್ಯಾಹಮಸುರಘ್ನಸ್ಯ ಕಾಂಶ್ಚಿದ್ಭಗವತೋ ಗುಣಾನ್।
13014008c ಭವತಾಂ ಕೀರ್ತಯಿಷ್ಯಾಮಿ ವ್ರತೇಶಾಯ ಯಥಾತಥಮ್।।

ಆದುದರಿಂದ ಆ ಅಸುರಘ್ನ, ವ್ರತೇಶ, ಭಗವಂತನ ಕೆಲವೇ ಗುಣಗಳನ್ನು ಯಥಾತಥವಾಗಿ ನಿಮಗೆ ಹೇಳುತ್ತೇನೆ.””

13014009 ವೈಶಂಪಾಯನ ಉವಾಚ।
13014009a ಏವಮುಕ್ತ್ವಾ ತು ಭಗವಾನ್ಗುಣಾಂಸ್ತಸ್ಯ ಮಹಾತ್ಮನಃ।
13014009c ಉಪಸ್ಪೃಶ್ಯ ಶುಚಿರ್ಭೂತ್ವಾ ಕಥಯಾಮಾಸ ಧೀಮತಃ।।

ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ಭಗವಂತ ಧೀಮತನು ಆಚಮನ ಮಾಡಿ ಶುಚಿಯಾಗಿ ಆ ಮಹಾತ್ಮನ ಗುಣಗಳನ್ನು ಹೇಳಲು ತೊಡಗಿದನು.

13014010 ವಾಸುದೇವ ಉವಾಚ।
13014010a ಶುಶ್ರೂಷಧ್ವಂ ಬ್ರಾಹ್ಮಣೇಂದ್ರಾಸ್ತ್ವಂ ಚ ತಾತ ಯುಧಿಷ್ಠಿರ।
13014010c ತ್ವಂ ಚಾಪಗೇಯ ನಾಮಾನಿ ನಿಶಾಮಯ ಜಗತ್ಪತೇಃ।।
13014011a ಯದವಾಪ್ತಂ ಚ ಮೇ ಪೂರ್ವಂ ಸಾಂಬಹೇತೋಃ ಸುದುಷ್ಕರಮ್।
13014011c ಯಥಾ ಚ ಭಗವಾನ್ದೃಷ್ಟೋ ಮಯಾ ಪೂರ್ವಂ ಸಮಾಧಿನಾ।।

ವಾಸುದೇವನು ಹೇಳಿದನು: “ಬ್ರಾಹ್ಮಣೇಂದ್ರರೇ! ಅಯ್ಯಾ ಯುಧಿಷ್ಠಿರ! ಆಪಗೇಯ! ಹಿಂದೆ ನಾನು ಸಾಂಬನಿಗೋಸ್ಕರ ದುಷ್ಕರವಾದ ಜಗತ್ಪತಿಯ ನಾಮಗಳನ್ನು ಹೇಗೆ ಪಡೆದೆನೆನ್ನುವುದನ್ನೂ, ಹಿಂದೆ ಸಮಾಧಿಯ ಮೂಲಕ ಭಗವಂತನನ್ನು ಹೇಗೆ ಕಂಡೆನೆನ್ನುವುದನ್ನೂ ಕೇಳಿರಿ!

13014012a ಶಂಬರೇ ನಿಹತೇ ಪೂರ್ವಂ ರೌಕ್ಮಿಣೇಯೇನ ಧೀಮತಾ।
13014012c ಅತೀತೇ ದ್ವಾದಶೇ ವರ್ಷೇ ಜಾಂಬವತ್ಯಬ್ರವೀದ್ಧಿ ಮಾಮ್।।

ಹಿಂದೆ ಧೀಮತ ರೌಕ್ಮಿಣೇಯ ಪ್ರದ್ಯುಮ್ನನು ಶಂಬರನನ್ನು ಸಂಹರಿಸಿ ಹನ್ನೆರಡು ವರ್ಷಗಳು ಕಳೆಯಲು ಜಾಂಬವತಿಯು ನನಗೆ ಹೇಳಿದಳು.

13014013a ಪ್ರದ್ಯುಮ್ನಚಾರುದೇಷ್ಣಾದೀನ್ರುಕ್ಮಿಣ್ಯಾ ವೀಕ್ಷ್ಯ ಪುತ್ರಕಾನ್।
13014013c ಪುತ್ರಾರ್ಥಿನೀ ಮಾಮುಪೇತ್ಯ ವಾಕ್ಯಮಾಹ ಯುಧಿಷ್ಠಿರ।।

ಯುಧಿಷ್ಠಿರ! ಪ್ರದ್ಯುಮ್ನ, ಚಾರುದೇಷ್ಣ ಮೊದಲಾದ ರುಕ್ಮಿಣಿಯ ಪುತ್ರರನ್ನು ನೋಡಿ ಪುತ್ರಾರ್ಥಿನಿಯಾದ ಅವಳು ನನಗೆ ಈ ಮಾತನ್ನಾಡಿದಳು:

13014014a ಶೂರಂ ಬಲವತಾಂ ಶ್ರೇಷ್ಠಂ ಕಾಂತರೂಪಮಕಲ್ಮಷಮ್।
13014014c ಆತ್ಮತುಲ್ಯಂ ಮಮ ಸುತಂ ಪ್ರಯಚ್ಚಾಚ್ಯುತ ಮಾಚಿರಮ್।।

“ಅಚ್ಯುತ! ನಿನಗೆ ಸಮಾನನಾದ ಶೂರ, ಬಲವಂತರಲ್ಲಿ ಶ್ರೇಷ್ಠ, ಮನೋಹರ ರೂಪದ, ಅಕಲ್ಮಷನಾದ ಮಗನನ್ನು ನನಗೆ ಬೇಗನೇ ದಯಪಾಲಿಸು!

13014015a ನ ಹಿ ತೇಽಪ್ರಾಪ್ಯಮಸ್ತೀಹ ತ್ರಿಷು ಲೋಕೇಷು ಕಿಂ ಚನ।
13014015c ಲೋಕಾನ್ಸೃಜೇಸ್ತ್ವಮಪರಾನಿಚ್ಚನ್ಯದುಕುಲೋದ್ವಹ।।

ಯದುಕುಲೋದ್ವಹ! ಈ ಮೂರು ಲೋಕಗಳಲ್ಲಿ ನಿನಗೆ ದೊರಕದೇ ಇರುವುದು ಯಾವುದೂ ಇಲ್ಲ. ನೀನು ಇಚ್ಛಿಸಿದರೆ ಬೇರೆ ಲೋಕಗಳನ್ನೇ ಸೃಷ್ಟಿಸಬಲ್ಲೆ!

13014016a ತ್ವಯಾ ದ್ವಾದಶ ವರ್ಷಾಣಿ ವಾಯುಭೂತೇನ ಶುಷ್ಯತಾ।
13014016c ಆರಾಧ್ಯ ಪಶುಭರ್ತಾರಂ ರುಕ್ಮಿಣ್ಯಾ ಜನಿತಾಃ ಸುತಾಃ।।

ಹನ್ನೆರಡು ವರ್ಷಗಳ ಪರ್ಯಂತ ವಾಯುವಿನಿಂದ ಶರೀರವನ್ನು ಶೋಷಿಸಿ ಪಶುಭರ್ತಾರನನ್ನು ಆರಾಧಿಸಿ ರುಕ್ಮಿಣಿಯಲ್ಲಿ ಸುತರನ್ನು ಹುಟ್ಟಿಸಿದೆ!

13014017a ಚಾರುದೇಷ್ಣಃ ಸುಚಾರುಶ್ಚ ಚಾರುವೇಷೋ ಯಶೋಧರಃ।
13014017c ಚಾರುಶ್ರವಾಶ್ಚಾರುಯಶಾಃ ಪ್ರದ್ಯುಮ್ನಃ ಶಂಭುರೇವ ಚ।।
13014018a ಯಥಾ ತೇ ಜನಿತಾಃ ಪುತ್ರಾ ರುಕ್ಮಿಣ್ಯಾಶ್ಚಾರುವಿಕ್ರಮಾಃ।
13014018c ತಥಾ ಮಮಾಪಿ ತನಯಂ ಪ್ರಯಚ್ಚ ಬಲಶಾಲಿನಮ್।।

ಶಂಭುವಿನ ಅನುಗ್ರಹದಿಂದ ನಿನಗೆ ರುಕ್ಮಿಣಿಯಲ್ಲಿ ಸುಂದರರೂ ವಿಕ್ರಮಿಗಳೂ ಆದ ಚಾರುದೇಷ್ಣ, ಸುಚಾರು, ಚಾರುವೇಶ, ಯಶೋಧರ, ಚಾರುಶ್ರವ, ಚಾರುಯಶ ಮತ್ತು ಪ್ರದ್ಯುಮ್ನರೆಂಬ ಮಕ್ಕಳು ಹುಟ್ಟಿದಂತೆ ನನಗೂ ಕೂಡ ಬಲಶಾಲೀ ತನಯನನ್ನು ದಯಪಾಲಿಸು!”

13014019a ಇತ್ಯೇವಂ ಚೋದಿತೋ ದೇವ್ಯಾ ತಾಮವೋಚಂ ಸುಮಧ್ಯಮಾಮ್।
13014019c ಅನುಜಾನೀಹಿ ಮಾಂ ರಾಜ್ಞಿ ಕರಿಷ್ಯೇ ವಚನಂ ತವ।।

ದೇವಿಯಿಂದ ಈ ರೀತಿ ಪ್ರಚೋದಿತನಾದ ನಾನು ಆ ಸುಮಧ್ಯಮೆಗೆ “ರಾಣೀ! ನಿನ್ನ ವಚನವನ್ನು ನಡೆಸಿಕೊಡುತ್ತೇನೆ. ಅನುಮತಿಯನ್ನು ನೀಡು” ಎಂದೆನು.

13014019e ಸಾ ಚ ಮಾಮಬ್ರವೀದ್ಗಚ್ಚ ವಿಜಯಾಯ ಶಿವಾಯ ಚ।
13014020a ಬ್ರಹ್ಮಾ ಶಿವಃ ಕಾಶ್ಯಪಶ್ಚ ನದ್ಯೋ ದೇವಾ ಮನೋನುಗಾಃ।।
13014020c ಕ್ಷೇತ್ರೌಷಧ್ಯೋ ಯಜ್ಞವಾಹಾಚ್ಚಂದಾಂಸ್ಯ ಋಷಿಗಣಾ ಧರಾ।
13014021a ಸಮುದ್ರಾ ದಕ್ಷಿಣಾ ಸ್ತೋಭಾ ಋಕ್ಷಾಣಿ ಪಿತರೋ ಗ್ರಹಾಃ।।
13014021c ದೇವಪತ್ನ್ಯೋ ದೇವಕನ್ಯಾ ದೇವಮಾತರ ಏವ ಚ।
13014022a ಮನ್ವಂತರಾಣಿ ಗಾವಶ್ಚ ಚಂದ್ರಮಾಃ ಸವಿತಾ ಹರಿಃ।।
13014022c ಸಾವಿತ್ರೀ ಬ್ರಹ್ಮವಿದ್ಯಾ ಚ ಋತವೋ ವತ್ಸರಾಃ ಕ್ಷಪಾಃ।
13014023a ಕ್ಷಣಾ ಲವಾ ಮುಹೂರ್ತಾಶ್ಚ ನಿಮೇಷಾ ಯುಗಪರ್ಯಯಾಃ।।
13014023c ರಕ್ಷಂತು ಸರ್ವತ್ರ ಗತಂ ತ್ವಾಂ ಯಾದವ ಸುಖಾವಹಮ್।
13014023e ಅರಿಷ್ಟಂ ಗಚ್ಚ ಪಂಥಾನಮಪ್ರಮತ್ತೋ ಭವಾನಘ।।

ಅವಳಾದರೋ ನನಗೆ ಇಂತೆಂದಳು: “ಅನಘ! ಮಂಗಳ ಮತ್ತು ವಿಜಯವನ್ನು ಹೊಂದಲು ಹೋಗು! ಯಾದವ! ನನ್ನ ಸುಖಕ್ಕಾಗಿ ಎಲ್ಲಕಡೆ ಹೋಗುವ ನಿನ್ನನ್ನು ಬ್ರಹ್ಮ, ಶಿವ, ಕಾಶ್ಯಪ, ನದಿಗಳು, ಮನೋನುಕೂಲ ದೇವತೆಗಳು, ಕ್ಷೇತ್ರಗಳು, ಔಷಧಿಗಳು, ಮಂತ್ರಗಳು, ಚಂಧಸ್ಸುಗಳು, ಋಷಿಗಣಗಳು, ಭೂಮಿ, ಸಮುದ್ರ, ದಕ್ಷಿಣೆಗಳು, ಸಾಮಗಾನಗಳು, ನಕ್ಷತ್ರಗಳು, ಪಿತೃಗಳು, ಗ್ರಹಗಳು, ದೇವಪತ್ನಿಯರು, ದೇವಕನ್ಯೆಯರು, ದೇವಮಾತೆಯರು, ಮನ್ವಂತರಗಳು, ಗೋವುಗಳು, ಚಂದ್ರಮ, ಸೂರ್ಯ, ಹರಿ, ಸಾವಿತ್ರೀ, ಬ್ರಹ್ಮವಿದ್ಯೆ, ಋತುಗಳು, ಸಂವತ್ಸರಗಳು, ಕ್ಷಣಗಳು, ಲವಗಳು, ಮುಹೂರ್ತಗಳು, ನಿಮಿಷಗಳು ಮತ್ತು ಯುಗಗಳು ಸಂರಕ್ಷಿಸಲಿ! ನಿನ್ನ ಮಾರ್ಗದಲ್ಲಿ ಯಾವುದೇ ವಿಘ್ನಗಳು ಇಲ್ಲದಿರಲಿ! ಹೋಗು!”

13014024a ಏವಂ ಕೃತಸ್ವಸ್ತ್ಯಯನಸ್ತಯಾಹಂ ತಾಮಭ್ಯನುಜ್ಞಾಯ ಕಪೀಂದ್ರಪುತ್ರೀಮ್।
13014024c ಪಿತುಃ ಸಮೀಪೇ ನರಸತ್ತಮಸ್ಯ ಮಾತುಶ್ಚ ರಾಜ್ಞಶ್ಚ ತಥಾಹುಕಸ್ಯ।।

ಹೀಗೆ ಅವಳು ನನಗೆ ಸ್ವಸ್ತಿಯನ್ನು ಹೇಳಲು ಆ ಕರಡಿರಾಜಪುತ್ರಿಯ ಅನುಮತಿಯನ್ನು ಪಡೆದು ನನ್ನ ತಂದೆ ನರಸತ್ತಮ ವಸುದೇವ, ತಾಯಿ ದೇವಕಿ, ಮತ್ತು ರಾಜಾ ಆಹುಕ ಉಗ್ರಸೇನರ ಬಳಿ ಹೋದೆನು.

13014025a ತಮರ್ಥಮಾವೇದ್ಯ ಯದಬ್ರವೀನ್ಮಾಂ ವಿದ್ಯಾಧರೇಂದ್ರಸ್ಯ ಸುತಾ ಭೃಶಾರ್ತಾ।
13014025c ತಾನಭ್ಯನುಜ್ಞಾಯ ತದಾತಿದುಃಖಾದ್ ಗದಂ ತಥೈವಾತಿಬಲಂ ಚ ರಾಮಮ್।।

ಅತ್ಯಂತ ಆರ್ತಳಾದ ವಿದ್ಯಾಧರೇಂದ್ರನ ಮಗಳು ನನಗೆ ಹೇಳಿದುದನ್ನು ಅವರಿಗೆ ತಿಳಿಸಿ, ಅತಿ ದುಃಖದಿಂದ ಗದ ಮತ್ತು ಅತಿಬಲ ರಾಮರ ಅನುಜ್ಞೆಯನ್ನು ಪಡೆದೆನು.

13014026a ಪ್ರಾಪ್ಯಾನುಜ್ಞಾಂ ಗುರುಜನಾದಹಂ ತಾರ್ಕ್ಷ್ಯಮಚಿಂತಯಮ್।
13014026c ಸೋಽವಹದ್ಧಿಮವಂತಂ ಮಾಂ ಪ್ರಾಪ್ಯ ಚೈನಂ ವ್ಯಸರ್ಜಯಮ್।।

ಗುರುಜನರ ಅನುಮತಿಯನ್ನು ಪಡೆದು ಗರುಡನನ್ನು ಸ್ಮರಿಸಿದೆನು. ಅವನನ್ನು ಏರಿ ಹಿಮವತ್ಪರ್ವತವನ್ನು ಸೇರಿ ಅವನಿಂದ ಬೀಳ್ಕೊಂಡೆನು.

13014027a ತತ್ರಾಹಮದ್ಭುತಾನ್ಭಾವಾನಪಶ್ಯಂ ಗಿರಿಸತ್ತಮೇ।
13014027c ಕ್ಷೇತ್ರಂ ಚ ತಪಸಾಂ ಶ್ರೇಷ್ಠಂ ಪಶ್ಯಾಮ್ಯಾಶ್ರಮಮುತ್ತಮಮ್।।

ಆ ಉತ್ತಮ ಗಿರಿಯಲ್ಲಿ ನಾನು ಅದ್ಭುತ ಭಾವಗಳನ್ನು ಕಂಡೆನು. ಶ್ರೇಷ್ಠ ತಪಸ್ವಿಗಳ ಉತ್ತಮ ಆಶ್ರಮ ಕ್ಷೇತ್ರಗಳನ್ನೂ ನೋಡಿದೆನು.

13014028a ದಿವ್ಯಂ ವೈಯಾಘ್ರಪದ್ಯಸ್ಯ ಉಪಮನ್ಯೋರ್ಮಹಾತ್ಮನಃ।
13014028c ಪೂಜಿತಂ ದೇವಗಂಧರ್ವೈರ್ಬ್ರಾಹ್ಮ್ಯಾ ಲಕ್ಷ್ಮ್ಯಾ ಸಮನ್ವಿತಮ್।।

ಅಲ್ಲಿಯೇ ವ್ಯಾಘ್ರಪದನ ಮಗ ಮಹಾತ್ಮ ಉಪಮನ್ಯುವಿನ ದಿವ್ಯ ಆಶ್ರಮವನ್ನೂ ನೋಡಿದೆನು. ದೇವಗಂಧರ್ವರಿಂದ ಪೂಜಿತವಾಗಿದ್ದ ಆ ಆಶ್ರಮವು ಬ್ರಾಹ್ಮೀ ಲಕ್ಷಣಗಳಿಂದ ಶೋಭಿಸುತ್ತಿತ್ತು.

13014029a ಧವಕಕುಭಕದಂಬನಾರಿಕೇಲೈಃ ಕುರಬಕಕೇತಕಜಂಬುಪಾಟಲಾಭಿಃ।
13014029c ವಟವರುಣಕವತ್ಸನಾಭಬಿಲ್ವೈಃ ಸರಲಕಪಿತ್ಥಪ್ರಿಯಾಲಸಾಲತಾಲೈಃ।।
13014030a ಬದರೀಕುಂದಪುನ್ನಾಗೈರಶೋಕಾಮ್ರಾತಿಮುಕ್ತಕೈಃ।
13014030c ಭಲ್ಲಾತಕೈರ್ಮಧೂಕೈಶ್ಚ ಚಂಪಕೈಃ ಪನಸೈಸ್ತಥಾ।।
13014031a ವನ್ಯೈರ್ಬಹುವಿಧೈರ್ವೃಕ್ಷೈಃ ಫಲಪುಷ್ಪಪ್ರದೈರ್ಯುತಮ್।
13014031c ಪುಷ್ಪಗುಲ್ಮಲತಾಕೀರ್ಣಂ ಕದಲೀಷಂಡಶೋಭಿತಮ್।।

ಧವ, ಕಕುಭ, ಕದಂಬ, ತೆಂಗು, ಕುರವಕ, ಕೇದಗೆ, ನೇರಳೆ, ಪಾಟಲ, ಆಲ, ವರುಣಕ, ವತ್ಸನಾಭ, ಬಿಲ್ವ, ಸರಲ, ಬೇಲ, ಪ್ರಿಯಾಲ, ಸಾಲ, ತಾಲ, ನೆಲ್ಲಿ, ಕುಂದ, ಪುನ್ನಾಗ, ಅಶೋಕ, ಮಾವು, ಅತಿಮುಕ್ತ, ಮಧೂಕ, ಕೋವಿದಾರ, ಸಂಪಿಗೆ, ಹಲಸು – ಇವೇ ಮೊದಲಾದ ಫಲ-ಪುಷ್ಪಗಳನ್ನೀಯುವ ಬಹುವಿಧದ ವನ್ಯ ವೃಕ್ಷಗಳಿಂದಲೂ, ಹೂಗೊಂಚಿನ ಪೊದೆ-ಬಳ್ಳಿಗಳಿಂದಲೂ, ಬಾಳೆಯ ಗಿಡಗಳಿಂದಲೂ ಆ ಅಶ್ರಮವು ಶೋಭಿಸುತ್ತಿತ್ತು.

13014032a ನಾನಾಶಕುನಿಸಂಭೋಜ್ಯೈಃ ಫಲೈರ್ವೃಕ್ಷೈರಲಂಕೃತಮ್।
13014032c ಯಥಾಸ್ಥಾನವಿನಿಕ್ಷಿಪ್ತೈರ್ಭೂಷಿತಂ ವನರಾಜಿಭಿಃ।।

ನಾನಾ ಪಕ್ಷಿಗಳಿಗೆ ತಿನ್ನಲು ಯೋಗ್ಯ ಫಲ-ವೃಕ್ಷಗಳಿಂದ ಅಲಂಕೃತವಾಗಿತ್ತು. ಯಥಾಸ್ಥಾನದಲ್ಲಿ ಬೆಳೆದ ವನರಾಜಿಗಳಿಂದ ಭೂಷಿತವಾಗಿತ್ತು.

13014033a ರುರುವಾರಣಶಾರ್ದೂಲಸಿಂಹದ್ವೀಪಿಸಮಾಕುಲಮ್।
13014033c ಕುರಂಗಬರ್ಹಿಣಾಕೀರ್ಣಂ ಮಾರ್ಜಾರಭುಜಗಾವೃತಮ್।
13014033e ಪೂಗೈಶ್ಚ ಮೃಗಜಾತೀನಾಂ ಮಹಿಷರ್ಕ್ಷನಿಷೇವಿತಮ್।।

ರುರು, ಆನೆ, ಹುಲಿ, ಸಿಂಹ, ಜಿಂಕೆಗಳಿಂದ ತುಂಬಿತ್ತು. ನವಿಲು, ಬೆಕ್ಕು, ಹಾವುಗಳಿಂದ ತುಂಬಿತ್ತು. ಕರಡಿ-ಕಾಡೆಮ್ಮೆಯೇ ಮೊದಲಾದ ಮೃಗಜಾತಿಗಳಿಂದ ಕೂಡಿತ್ತು.

13014034a ನಾನಾಪುಷ್ಪರಜೋಮಿಶ್ರೋ ಗಜದಾನಾಧಿವಾಸಿತಃ।
13014034c ದಿವ್ಯಸ್ತ್ರೀಗೀತಬಹುಲೋ ಮಾರುತೋಽತ್ರ ಸುಖೋ ವವೌ।।

ನಾನಾ ಪುಷ್ಪಗಳ ಕುಸುಮಗಳಿಂದ ಮತ್ತು ಆನೆಗಳ ಮದೋದಕಗಳ ಸುವಾಸನೆಯನ್ನು ಹೊತ್ತ ಮತ್ತು ದಿವ್ಯಸ್ತ್ರೀಗೀತಗಳ ಧ್ವನಿಗಳನ್ನು ಹೊತ್ತ ಸುಖ ಮಾರುತವು ಬೀಸುತ್ತಿತ್ತು.

13014035a ಧಾರಾನಿನಾದೈರ್ವಿಹಗಪ್ರಣಾದೈಃ ಶುಭೈಸ್ತಥಾ ಬೃಂಹಿತೈಃ ಕುಂಜರಾಣಾಮ್।
13014035c ಗೀತೈಸ್ತಥಾ ಕಿಂನರಾಣಾಮುದಾರೈಃ ಶುಭೈಃ ಸ್ವನೈಃ ಸಾಮಗಾನಾಂ ಚ ವೀರ।।

ವೀರ! ಹರಿಯುವ ನೀರಿನ ನಿನಾದ, ಪಕ್ಷಿಗಳ ಶುಭ ಇಂಚರ, ಆನೆಗಳ ಘೀಂಕಾರ, ಹಾಗೆಯೇ ಉದಾರ ಕಿನ್ನರರ ಗೀತೆಗಳು, ಶುಭ ಸಾಮಗಾನ ಸ್ವರಗಳಿಂದ ಆ ಆಶ್ರಮವು ತುಂಬಿತ್ತು.

13014036a ಅಚಿಂತ್ಯಂ ಮನಸಾಪ್ಯನ್ಯೈಃ ಸರೋಭಿಃ ಸಮಲಂಕೃತಮ್।
13014036c ವಿಶಾಲೈಶ್ಚಾಗ್ನಿಶರಣೈರ್ಭೂಷಿತಂ ಕುಶಸಂವೃತಮ್।।

ಅನ್ಯರ ಮನಸ್ಸಿಗೂ ಅಚಿಂತ್ಯವಾದ ಸರೋವರಗಳಿಂದ ಸಮಲಂಕೃತಗೊಂಡಿತ್ತು. ಕುಶಗಳು ಹರಡಿದ್ದ ವಿಶಾಲ ಅಗ್ನ್ಯಾಗಾರಗಳಿಂದ ಕೂಡಿತ್ತು.

13014037a ವಿಭೂಷಿತಂ ಪುಣ್ಯಪವಿತ್ರತೋಯಯಾ ಸದಾ ಚ ಜುಷ್ಟಂ ನೃಪ ಜಹ್ನುಕನ್ಯಯಾ।
13014037c ಮಹಾತ್ಮಭಿರ್ಧರ್ಮಭೃತಾಂ ವರಿಷ್ಠೈರ್ ಮಹರ್ಷಿಭಿರ್ಭೂಷಿತಮಗ್ನಿಕಲ್ಪೈಃ।।

ನೃಪ! ಸದಾ ಹರಿಯುತ್ತಿದ್ದ ಜಹ್ನುಕನ್ಯೆ ಗಂಗೆಯ ಪುಣ್ಯ ಪವಿತ್ರ ನೀರಿನಿಂದ ಅದು ವಿಭೂಷಿತವಾಗಿತ್ತು. ಅಗ್ನಿಕಲ್ಪರಾದ ಮಹಾತ್ಮ ಧರ್ಮಭೃತರಲ್ಲಿ ವರಿಷ್ಠ ಮಹರ್ಷಿಗಳಿಂದ ವಿಭೂಷಿತವಾಗಿತ್ತು.

13014038a ವಾಯ್ವಾಹಾರೈರಂಬುಪೈರ್ಜಪ್ಯನಿತ್ಯೈಃ ಸಂಪ್ರಕ್ಷಾಲೈರ್ಯತಿಭಿರ್ಧ್ಯಾನನಿತ್ಯೈಃ।
13014038c ಧೂಮಾಶನೈರೂಷ್ಮಪೈಃ ಕ್ಷೀರಪೈಶ್ಚ ವಿಭೂಷಿತಂ ಬ್ರಾಹ್ಮಣೇಂದ್ರೈಃ ಸಮಂತಾತ್।।

ಆ ಆಶ್ರಮವು ವಾಯುವನ್ನೇ ಆಹಾರವಾಗಿ ಸೇವಿಸುತ್ತಿದ್ದವರಿಂದಲೂ, ನೀರನ್ನು ಮಾತ್ರವೇ ಆಹಾರವಾಗಿ ಸೇವಿಸುತ್ತಿದ್ದವರಿಂದಲೂ, ನಿತ್ಯವೂ ಜಪಿಸುತ್ತಿದ್ದವರಿಂದಲೂ, ನಿತ್ಯವೂ ಧ್ಯಾನರತರಾದ ಯತಿಗಳಿಂದಲೂ, ಹೋಮಧೂಮಗಳನ್ನೇ ಆಹಾರವನ್ನಾಗಿ ಸೇವಿಸುತ್ತಿದ್ದವರಿಂದಲೂ, ಸೂರ್ಯನ ಕಿರಣಗಳನ್ನೇ ಕುಡಿದು ಜೀವಿಸುತ್ತಿದ್ದ, ಹಾಲನ್ನೇ ಕುಡಿದು ಜೀವಿಸುತ್ತಿದ್ದ ಬ್ರಾಹ್ಮಣರಿಂದ ವಿಭೂಷಿತವಾಗಿತ್ತು.

13014039a ಗೋಚಾರಿಣೋಽಥಾಶ್ಮಕುಟ್ಟಾ ದಂತೋಲೂಖಲಿನಸ್ತಥಾ।
13014039c ಮರೀಚಿಪಾಃ ಫೇನಪಾಶ್ಚ ತಥೈವ ಮೃಗಚಾರಿಣಃ।।

ಅಲ್ಲಿ ಗೋಸೇವೆಯಲ್ಲಿ ನಿರತರಾಗಿದ್ದವರೂ, ಕಲ್ಲಿನಿಂದ ಧಾನ್ಯವನ್ನು ಕುಟ್ಟಿ ತಿನ್ನುವವರೂ, ಹಲ್ಲಿನಿಂದಲೇ ಧಾನ್ಯವನ್ನು ಒಡೆದು ತಿನ್ನುವವರು, ಸೂರ್ಯನ ಕಿರಣಗಳನ್ನೇ ಕುಡಿದು ಜೀವಿಸುವವರು, ಹಾಲಿನ ನೊರೆಯನ್ನೇ ತಿಂದು ಜೀವಿಸುವವರು, ಮತ್ತು ಮೃಗಗಳ ಜೊತೆಯಲ್ಲಿಯೇ ವಾಸಿಸುವರು ಇದ್ದರು.

13014040a ಸುದುಃಖಾನ್ನಿಯಮಾಂಸ್ತಾಂಸ್ತಾನ್ವಹತಃ ಸುತಪೋನ್ವಿತಾನ್।
13014040c ಪಶ್ಯನ್ನುತ್ಫುಲ್ಲನಯನಃ ಪ್ರವೇಷ್ಟುಮುಪಚಕ್ರಮೇ।।

ಅತ್ಯಂತ ದುಃಖತರ ನಿಯಮಗಳನ್ನು ಪಾಲಿಸುತ್ತಿದ್ದ ಹಲವಾರು ತಪೋನ್ವಿತರನ್ನು ತೆರೆದ ಕಣ್ಣುಗಳಿಂದ ನೋಡುತ್ತಾ ಆ ಆಶ್ರಮವನ್ನು ಪ್ರವೇಶಿಸತೊಡಗಿದೆನು.

13014041a ಸುಪೂಜಿತಂ ದೇವಗಣೈರ್ಮಹಾತ್ಮಭಿಃ ಶಿವಾದಿಭಿರ್ಭಾರತ ಪುಣ್ಯಕರ್ಮಭಿಃ।
13014041c ರರಾಜ ತಚ್ಚಾಶ್ರಮಮಂಡಲಂ ಸದಾ ದಿವೀವ ರಾಜನ್ರವಿಮಂಡಲಂ ಯಥಾ।।

ಭಾರತ! ರಾಜನ್! ಮಹಾತ್ಮರಿಂದ ಪೂಜಿಸಲ್ಪಟ್ಟ ದೇವಗಣಗಳಿಂದಲೂ, ಶಿವನೇ ಮೊದಲಾದ ಪುಣ್ಯಕರ್ಮಿಗಳಿಂದಲೂ ಆ ಆಶ್ರಮಮಂಡಲವು ದಿವಿಯಲ್ಲಿರುವ ರವಿಮಂಡಲದಂತೆ ಸದಾ ರಾರಾಜಿಸುತ್ತಿತ್ತು.

13014042a ಕ್ರೀಡಂತಿ ಸರ್ಪೈರ್ನಕುಲಾ ಮೃಗೈರ್ವ್ಯಾಘ್ರಾಶ್ಚ ಮಿತ್ರವತ್।
13014042c ಪ್ರಭಾವಾದ್ದೀಪ್ತತಪಸಃ ಸಂನಿಕರ್ಷಗುಣಾನ್ವಿತಾಃ।।

ಗುಣಾನ್ವಿತ ದೀಪ್ತತಪಸ್ವಿಗಳ ಸಾನ್ನಿದ್ಯದಿಂದ ಪ್ರಭಾವಿತರಾಗಿ ಸರ್ಪಗಳು ಮುಂಗುಸಿಗಳೊಂದಿಗೂ, ಜಿಂಕೆಗಳೊಂದಿಗೆ ಹುಲಿಗಳೂ ಮಿತ್ರರರಂತೆ ಆಟವಾಡುತ್ತಿದ್ದವು.

13014043a ತತ್ರಾಶ್ರಮಪದೇ ಶ್ರೇಷ್ಠೇ ಸರ್ವಭೂತಮನೋರಮೇ।
13014043c ಸೇವಿತೇ ದ್ವಿಜಶಾರ್ದೂಲೈರ್ವೇದವೇದಾಂಗಪಾರಗೈಃ।।
13014044a ನಾನಾನಿಯಮವಿಖ್ಯಾತೈರೃಷಿಭಿಶ್ಚ ಮಹಾತ್ಮಭಿಃ।।
13014044c ಪ್ರವಿಶನ್ನೇವ ಚಾಪಶ್ಯಂ ಜಟಾಚೀರಧರಂ ಪ್ರಭುಮ್।
13014045a ತೇಜಸಾ ತಪಸಾ ಚೈವ ದೀಪ್ಯಮಾನಂ ಯಥಾನಲಮ್।।
13014045c ಶಿಷ್ಯಮಧ್ಯಗತಂ ಶಾಂತಂ ಯುವಾನಂ ಬ್ರಾಹ್ಮಣರ್ಷಭಮ್।
13014045e ಶಿರಸಾ ವಂದಮಾನಂ ಮಾಮುಪಮನ್ಯುರಭಾಷತ।।

ಸರ್ವಭೂತಗಳಿಗೂ ಮನೋರಮವಾಗಿದ್ದ, ವೇದವೇದಾಂಗ ಪಾರಂಗತ ದ್ವಿಜಶಾರ್ದೂಲರಿಂದ, ಮತ್ತು ನಾನಾ ನಿಯಮ ವಿಖ್ಯಾತ ಮಹಾತ್ಮ ಋಷಿಗಳಿಂದ ತುಂಬಿದ್ದ ಆ ಶ್ರೇಷ್ಠ ಆಶ್ರಮಪದವನ್ನು ಪ್ರವೇಶಿಸುತ್ತಿದ್ದಂತೆಯೇ ಅಲ್ಲಿ ಜಟಾಚೀರಗಳನ್ನು ಧರಿಸಿದ್ದ, ತಪಸ್ಸಿನ ತೇಜಸ್ಸಿನಿಂದ ಅಗ್ನಿಯಂತೆ ಬೆಳಗುತ್ತಿದ್ದ, ಶಿಷ್ಯರ ಮಧ್ಯದಲ್ಲಿದ್ದ, ಶಾಂತ, ಯುವಕ, ಪ್ರಭು ಬ್ರಾಹ್ಮಣರ್ಷಭನನ್ನು ಕಂಡೆನು. ಶಿರಸಾ ವಂದಿಸುತ್ತಿದ್ದ ನನಗೆ ಉಪಮನ್ಯುವು ಹೇಳಿದನು:

13014046a ಸ್ವಾಗತಂ ಪುಂಡರೀಕಾಕ್ಷ ಸಫಲಾನಿ ತಪಾಂಸಿ ನಃ।
13014046c ಯತ್ಪೂಜ್ಯಃ ಪೂಜಯಸಿ ನೋ ದ್ರಷ್ಟವ್ಯೋ ದ್ರಷ್ಟುಮಿಚ್ಚಸಿ।।

“ಪುಂಡರೀಕಾಕ್ಷ! ಸ್ವಾಗತ! ಪೂಜೆ ಮತ್ತು ದರ್ಶನಗಳಿಗೆ ಯೋಗ್ಯನಾದ ನೀನೇ ನನ್ನನ್ನು ಕಾಣಲು ಬಂದಿದ್ದೀಯೆ ಮತ್ತು ಪೂಜಿಸುತ್ತೀಯೆ ಎಂದರೆ ನನ್ನ ತಪಸ್ಸುಗಳು ಫಲಿಸಿದಂತೆಯೇ!”

13014047a ತಮಹಂ ಪ್ರಾಂಜಲಿರ್ಭೂತ್ವಾ ಮೃಗಪಕ್ಷಿಷ್ವಥಾಗ್ನಿಷು।
13014047c ಧರ್ಮೇ ಚ ಶಿಷ್ಯವರ್ಗೇ ಚ ಸಮಪೃಚ್ಚಮನಾಮಯಮ್।।

ಆಗ ಅಂಜಲೀ ಬದ್ಧನಾಗಿ ನಾನು ಮೃಗಪಕ್ಷಿಗಳ, ಅಗ್ನಿಹೋತ್ರ, ಧರ್ಮಾಚರಣೆ ಮತ್ತು ಶಿಷ್ಯವರ್ಗಗಳ ಕುಶಲವನ್ನು ವಿಚಾರಿಸಿದೆನು.

13014048a ತತೋ ಮಾಂ ಭಗವಾನಾಹ ಸಾಮ್ನಾ ಪರಮವಲ್ಗುನಾ।
13014048c ಲಪ್ಸ್ಯಸೇ ತನಯಂ ಕೃಷ್ಣ ಆತ್ಮತುಲ್ಯಮಸಂಶಯಮ್।।

ಆಗ ಆ ಭಗವಾನನು ಸಾಂತ್ವನ ಪೂರ್ವಕವಾದ ಈ ಸುಮಧುರ ಮಾತನ್ನಾಡಿದನು: “ಕೃಷ್ಣ! ನಿನಗೆ ಸಮನಾದ ಪುತ್ರನನ್ನು ಪಡೆಯುತ್ತೀಯೆ! ಇದರಲ್ಲಿ ಸಂಶಯವಿಲ್ಲ!

13014049a ತಪಃ ಸುಮಹದಾಸ್ಥಾಯ ತೋಷಯೇಶಾನಮೀಶ್ವರಮ್।
13014049c ಇಹ ದೇವಃ ಸಪತ್ನೀಕಃ ಸಮಾಕ್ರೀಡತ್ಯಧೋಕ್ಷಜ।।

ಅಧೋಕ್ಷಜ! ಮಹಾ ತಪಸ್ಸನ್ನಾಚರಿಸಿ ಈಶಾನ ಈಶ್ವರನನ್ನು ತೃಪ್ತಿಗೊಳಿಸು! ಸಪತ್ನೀಕನಾಗಿ ಇಲ್ಲಿ ಆ ದೇವನು ಕ್ರೀಡಿಸುತ್ತಿರುತ್ತಾನೆ.

13014050a ಇಹೈವ ದೇವತಾಶ್ರೇಷ್ಠಂ ದೇವಾಃ ಸರ್ಷಿಗಣಾಃ ಪುರಾ।
13014050c ತಪಸಾ ಬ್ರಹ್ಮಚರ್ಯೇಣ ಸತ್ಯೇನ ಚ ದಮೇನ ಚ।
13014050e ತೋಷಯಿತ್ವಾ ಶುಭಾನ್ಕಾಮಾನ್ಪ್ರಾಪ್ನುವಂಸ್ತೇ ಜನಾರ್ದನ।।

ಜನಾರ್ದನ! ಇಲ್ಲಿಯೇ ಹಿಂದೆ ಋಷಿಗಣಗಳೊಂದಿಗೆ ದೇವತೆಗಳು ತಪಸ್ಸು, ಬ್ರಹ್ಮಚರ್ಯ, ಸತ್ಯ ಮತ್ತು ದಮಗಳಿಂದ ಶಿವನನ್ನು ತೃಪ್ತಿಗೊಳಿಸಿ ಶುಭಕಾಮನೆಗಳನ್ನು ಪಡೆದಿದ್ದರು.

13014051a ತೇಜಸಾಂ ತಪಸಾಂ ಚೈವ ನಿಧಿಃ ಸ ಭಗವಾನಿಹ।
13014051c ಶುಭಾಶುಭಾನ್ವಿತಾನ್ಭಾವಾನ್ವಿಸೃಜನ್ಸಂಕ್ಷಿಪನ್ನಪಿ।
13014051e ಆಸ್ತೇ ದೇವ್ಯಾ ಸಹಾಚಿಂತ್ಯೋ ಯಂ ಪ್ರಾರ್ಥಯಸಿ ಶತ್ರುಹನ್।।

ಶತ್ರುಹನ್! ಯಾರನ್ನು ನೀನು ಪ್ರಾರ್ಥಿಸುತ್ತೀಯೋ ಆ ಅಚಿಂತ್ಯ ಭಗವಂತನು ತೇಜಸ್ಸು ಮತ್ತು ತಪಸ್ಸುಗಳ ನಿಧಿಯು. ಇಲ್ಲಿ ಅವನು ಶುಭಾಶುಭ ಭಾವಗಳನ್ನು ಸೃಷ್ಟಿಸುತ್ತಾ ಮತ್ತು ನಾಶಗೊಳಿಸುತ್ತಾ ದೇವಿಯ ಸಹಿತ ಇದ್ದಾನೆ.

13014052a ಹಿರಣ್ಯಕಶಿಪುರ್ಯೋಽಭೂದ್ದಾನವೋ ಮೇರುಕಂಪನಃ।
13014052c ತೇನ ಸರ್ವಾಮರೈಶ್ವರ್ಯಂ ಶರ್ವಾತ್ಪ್ರಾಪ್ತಂ ಸಮಾರ್ಬುದಮ್।।

ಮೇರುವನ್ನೇ ಅಲ್ಲಾಡಿಸಬಲ್ಲ ಹಿರಣ್ಯಕಶಿಪುವೆಂಬ ಯಾವ ದಾನವನಿದ್ದನೋ ಅವನು ಶರ್ವನಿಂದಲೇ ಹತ್ತು ಕೋಟಿ ವರ್ಷಗಳ ಪರ್ಯಂತ ಅಮರರ ಸರ್ವ ಐಶ್ವರ್ಯಗಳನ್ನೂ ಪಡೆದುಕೊಂಡನು.

13014053a ತಸ್ಯೈವ ಪುತ್ರಪ್ರವರೋ ಮಂದರೋ ನಾಮ ವಿಶ್ರುತಃ।
13014053c ಮಹಾದೇವವರಾಶ್ಶಕ್ರಂ ವರ್ಷಾರ್ಬುದಮಯೋಧಯತ್।।

ಮಂದಾರನೆಂದು ವಿಶ್ರುತನಾಗಿದ್ದ ಅವನ ಶ್ರೇಷ್ಠ ಪುತ್ರನು ಮಹಾದೇವನ ವರದಿಂದ ಹತ್ತು ಕೋಟಿ ವರ್ಷಗಳ ಕಾಲ ಶಕ್ರನೊಡನೆ ಯುದ್ಧಮಾಡಿದನು.

13014054a ವಿಷ್ಣೋಶ್ಚಕ್ರಂ ಚ ತದ್ಘೋರಂ ವಜ್ರಮಾಖಂಡಲಸ್ಯ ಚ।
13014054c ಶೀರ್ಣಂ ಪುರಾಭವತ್ತಾತ ಗ್ರಹಸ್ಯಾಂಗೇಷು ಕೇಶವ।।

ಅಯ್ಯಾ ಕೇಶವ! ಹಿಂದೆ ವಿಷ್ಣುವಿನ ಚಕ್ರವೂ ಮತ್ತು ಘೋರ ವಜ್ರಾಯುಧವೂ ಆ ಗ್ರಹ ಮಂದಾರರಾಕ್ಷಸನ ಶರೀರದ ಮೇಲೆ ಬಿದ್ದು ಚೂರುಚೂರಾದವು.

13014055a ಅರ್ದ್ಯಮಾನಾಶ್ಚ ವಿಬುಧಾ ಗ್ರಹೇಣ ಸುಬಲೀಯಸಾ।
13014055c ಶಿವದತ್ತವರಾನ್ಜಘ್ನುರಸುರೇಂದ್ರಾನ್ಸುರಾ ಭೃಶಮ್।।

ಮಹಾಬಲಶಾಲಿಯಾಗಿದ್ದ ಗ್ರಹದಿಂದ ಅತ್ಯಂತ ಪೀಡಿತರಾಗಿದ್ದ ದೇವತೆಗಳು ಶಿವನು ಕೊಟ್ಟ ವರದಿಂದಲೇ ಆ ಅಸುರೇಂದ್ರರನ್ನು ಸಂಹರಿಸಿದರು.

13014056a ತುಷ್ಟೋ ವಿದ್ಯುತ್ಪ್ರಭಸ್ಯಾಪಿ ತ್ರಿಲೋಕೇಶ್ವರತಾಮದಾತ್।
13014056c ಶತಂ ವರ್ಷಸಹಸ್ರಾಣಾಂ ಸರ್ವಲೋಕೇಶ್ವರೋಽಭವತ್।
13014056e ಮಮೈವಾನುಚರೋ ನಿತ್ಯಂ ಭವಿತಾಸೀತಿ ಚಾಬ್ರವೀತ್।।

ವಿದ್ಯುತ್ಪ್ರಭನಿಂದ ಸಂತೃಪ್ತನಾಗಿ ಅವನಿಗೂ ತ್ರಿಲೋಕೇಶ್ವರತ್ವವನ್ನು ದಯಪಾಲಿಸಿದನು. ನೂರು ಸಾವಿರ ವರ್ಷಗಳ ವರೆಗೆ ಅವನು ಸರ್ವಲೋಕಗಳ ಈಶ್ವರನಾಗಿದ್ದನು. “ನಿತ್ಯವೂ ನನ್ನ ಅನುಚರನಾಗಿರು!” ಎಂದು ಅವನಿಗೆ ಹೇಳಿದ್ದನು.

13014057a ತಥಾ ಪುತ್ರಸಹಸ್ರಾಣಾಮಯುತಂ ಚ ದದೌ ಪ್ರಭುಃ।
13014057c ಕುಶದ್ವೀಪಂ ಚ ಸ ದದೌ ರಾಜ್ಯೇನ ಭಗವಾನಜಃ।।

ಹಾಗೆಯೇ ಪ್ರಭು ಅಜ ಭಗವಂತನು ಅವನಿಗೆ ಒಂದು ಕೋಟಿ ಪುತ್ರರನ್ನಿತ್ತು ರಾಜ್ಯವಾಗಿ ಕುಶದ್ವೀಪವನ್ನಿತ್ತನು.

13014058a ತಥಾ ಶತಮುಖೋ ನಾಮ ಧಾತ್ರಾ ಸೃಷ್ಟೋ ಮಹಾಸುರಃ।
13014058c ಯೇನ ವರ್ಷಶತಂ ಸಾಗ್ರಮಾತ್ಮಮಾಂಸೈರ್ಹುತೋಽನಲಃ।
13014058e ತಂ ಪ್ರಾಹ ಭಗವಾಂಸ್ತುಷ್ಟಃ ಕಿಂ ಕರೋಮೀತಿ ಶಂಕರಃ।।

ಹಾಗೆಯೇ ಧಾತ್ರನು ಶತಮುಖ ಎಂಬ ಹೆಸರಿನ ಮಹಾಸುರನನ್ನು ಸೃಷ್ಟಿಸಿದನು. ಅವನು ನೂರು ವರ್ಷಗಳ ಪರ್ಯಂತ ತನ್ನ ಮಾಂಸಗಳಿಂದಲೇ ಅಗ್ನಿಯಲ್ಲಿ ಆಹುತಿಯನ್ನಾಗಿತ್ತನು. ತುಷ್ಟನಾದ ಭಗವಾನ್ ಶಂಕರನು ಅವನಿಗೆ “ಏನು ಮಾಡಲಿ?” ಎಂದು ಕೇಳಿದನು.

13014059a ತಂ ವೈ ಶತಮುಖಃ ಪ್ರಾಹ ಯೋಗೋ ಭವತು ಮೇಽದ್ಭುತಃ।
13014059c ಬಲಂ ಚ ದೈವತಶ್ರೇಷ್ಠ ಶಾಶ್ವತಂ ಸಂಪ್ರಯಚ್ಚ ಮೇ।।

ಅವನಿಗೆ ಶತಮುಖನು “ನನಗೆ ಅದ್ಭುತ ಯೋಗವುಂಟಾಗಲಿ. ದೇವತಶ್ರೇಷ್ಠ! ಶಾಶ್ವತ ಬಲವನ್ನೂ ನನಗೆ ದಯಪಾಲಿಸು!” ಎಂದು ಕೇಳಿಕೊಂಡನು.

13014060a ಸ್ವಾಯಂಭುವಃ ಕ್ರತುಶ್ಚಾಪಿ ಪುತ್ರಾರ್ಥಮಭವತ್ಪುರಾ।
13014060c ಆವಿಶ್ಯ ಯೋಗೇನಾತ್ಮಾನಂ ತ್ರೀಣಿ ವರ್ಷಶತಾನ್ಯಪಿ।।

ಹಿಂದೆ ಸ್ವಯಂಭುವಿನ ಮಗ ಕ್ರತುವೂ ಕೂಡ ಪುತ್ರನಿಗಾಗಿ ಯೋಗದಿಂದ ಆತ್ಮವನ್ನು ಪ್ರವೇಶಿಸಿ ನೂರುನೂರು ವರ್ಷಗಳು ತಪಸ್ಸನ್ನಾಚರಿಸಿದ್ದನು.

13014061a ತಸ್ಯ ದೇವೋಽದದತ್ಪುತ್ರಾನ್ಸಹಸ್ರಂ ಕ್ರತುಸಂಮಿತಾನ್।
13014061c ಯೋಗೇಶ್ವರಂ ದೇವಗೀತಂ ವೇತ್ಥ ಕೃಷ್ಣ ನ ಸಂಶಯಃ।।

ದೇವನು ಅವನಿಗೆ ಕ್ರತುವಿನಂತೆಯೇ ಇದ್ದ ಸಹಸ್ರ ಪುತ್ರರನ್ನು ನೀಡಿದನು. ಕೃಷ್ಣ! ದೇವಗೀತ ಯೋಗೇಶ್ವರನನ್ನು ನೀನು ತಿಳಿದುಕೊಂಡಿರುವೆ ಎನ್ನುವುದರಲ್ಲಿ ಸಂಶಯವೇ ಇಲ್ಲ.

13014062a ವಾಲಖಿಲ್ಯಾ ಮಘವತಾ ಅವಜ್ಞಾತಾಃ ಪುರಾ ಕಿಲ।
13014062c ತೈಃ ಕ್ರುದ್ಧೈರ್ಭಗವಾನ್ರುದ್ರಸ್ತಪಸಾ ತೋಷಿತೋ ಹ್ಯಭೂತ್।।

ಹಿಂದೆ ವಾಲಖಿಲ್ಯರು ಮಘವತನಿಂದ ಅಪಮಾನಿತರಾಗಿದ್ದರಲ್ಲವೇ? ಅದರಿಂದ ಕ್ರುದ್ಧರಾದ ಅವರು ಭಗವಾನ್ ರುದ್ರನನ್ನು ತಪಸ್ಸಿನಿಂದ ತೃಪ್ತಿಪಡಿಸಿದ್ದರು.

13014063a ತಾಂಶ್ಚಾಪಿ ದೈವತಶ್ರೇಷ್ಠಃ ಪ್ರಾಹ ಪ್ರೀತೋ ಜಗತ್ಪತಿಃ।
13014063c ಸುಪರ್ಣಂ ಸೋಮಹರ್ತಾರಂ ತಪಸೋತ್ಪಾದಯಿಷ್ಯಥ।।

ಪ್ರೀತನಾದ ದೈವತಶ್ರೇಷ್ಠ ಜಗತ್ಪತಿಯು ಅವರಿಗೂ “ಅಮೃತವನ್ನು ಅಪಹರಿಸುವ ಸುಪರ್ಣನನ್ನು ತಪಸ್ಸಿನಿಂದ ಉತ್ಪಾದಿಸಿರಿ!” ಎಂದು ಹೇಳಿದ್ದನು.

13014064a ಮಹಾದೇವಸ್ಯ ರೋಷಾಚ್ಚ ಆಪೋ ನಷ್ಟಾಃ ಪುರಾಭವನ್।
13014064c ತಾಶ್ಚ ಸಪ್ತಕಪಾಲೇನ ದೇವೈರನ್ಯಾಃ ಪ್ರವರ್ತಿತಾಃ।।

ಮಹಾದೇವನ ರೋಷದಿಂದ ಹಿಂದೆ ನೀರು ನಾಶವಾಗಿತ್ತು. ಆಗ ದೇವತೆಗಳು ಸಪ್ತಕಪಾಲಗಳಿಂದ ಅನ್ಯ ನೀರನ್ನು ಸೃಷ್ಟಿಸಿದ್ದರು.

13014065a ಅತ್ರೇರ್ಭಾರ್ಯಾಪಿ ಭರ್ತಾರಂ ಸಂತ್ಯಜ್ಯ ಬ್ರಹ್ಮವಾದಿನೀ।
13014065c ನಾಹಂ ತಸ್ಯ ಮುನೇರ್ಭೂಯೋ ವಶಗಾ ಸ್ಯಾಂ ಕಥಂ ಚನ।
13014065e ಇತ್ಯುಕ್ತ್ವಾ ಸಾ ಮಹಾದೇವಮಗಚ್ಚಚ್ಚರಣಂ ಕಿಲ।।

ಅತ್ರಿಯ ಭಾರ್ಯೆ ಬ್ರಹ್ಮವಾದಿನಿಯೂ ಕೂಡ ಪತಿಯನ್ನು ತ್ಯಜಿಸಿ “ನಾನು ಪುನಃ ಆ ಮುನಿಯ ವಶಳಾಗುವುದಿಲ್ಲ” ಎಂದು ಹೇಳಿ ಮಹಾದೇವನ ಶರಣುಹೊಂದಿದ್ದಳಲ್ಲವೇ?

13014066a ನಿರಾಹಾರಾ ಭಯಾದತ್ರೇಸ್ತ್ರೀಣಿ ವರ್ಷಶತಾನ್ಯಪಿ।
13014066c ಅಶೇತ ಮುಸಲೇಷ್ವೇವ ಪ್ರಸಾದಾರ್ಥಂ ಭವಸ್ಯ ಸಾ।।
13014067a ತಾಮಬ್ರವೀದ್ಧಸನ್ದೇವೋ ಭವಿತಾ ವೈ ಸುತಸ್ತವ।
13014067c ವಂಶೇ ತವೈವ ನಾಮ್ನಾ ತು ಖ್ಯಾತಿಂ ಯಾಸ್ಯತಿ ಚೇಪ್ಸಿತಾಮ್।।

ಅತ್ರಿಯ ಭಯದಿಂದ ಅವಳು ಭವನ ಪ್ರಸಾದಾರ್ಥವಾಗಿ ನಿರಾಹಾರಿಯಾಗಿ ಮೂರುನೂರು ವರ್ಷ ಒನಕೆಯ ಮೇಲೆ ಮಲಗುತ್ತಿದ್ದಳು. ದೇವನು ನಸುನಕ್ಕು ಅವಳಿಗೆ “ನಿನಗೆ ಸುತನಾಗುತ್ತಾನೆ! ನಿನ್ನ ಮತ್ತು ವಂಶದ ಹೆಸರನ್ನು ಖ್ಯಾತಿಗೊಳಿಸಿ ಅವನು ತನ್ನ ಇಷ್ಟಗಳನ್ನು ಪಡೆದುಕೊಳ್ಳುತ್ತಾನೆ!” ಎಂದು ಹೇಳಿದನು.

13014068a ಶಾಕಲ್ಯಃ ಸಂಶಿತಾತ್ಮಾ ವೈ ನವ ವರ್ಷಶತಾನ್ಯಪಿ।
13014068c ಆರಾಧಯಾಮಾಸ ಭವಂ ಮನೋಯಜ್ಞೇನ ಕೇಶವ।।

ಕೇಶವ! ಸಂಶಿತಾತ್ಮ ಶಾಕಲ್ಯನು ಒಂಬತ್ತು ನೂರು ವರ್ಷಗಳು ಮನೋಯಜ್ಞದಿಂದ ಭವನನ್ನು ಆರಾಧಿಸಿದನು.

13014069a ತಂ ಚಾಹ ಭಗವಾಂಸ್ತುಷ್ಟೋ ಗ್ರಂಥಕಾರೋ ಭವಿಷ್ಯಸಿ।
13014069c ವತ್ಸಾಕ್ಷಯಾ ಚ ತೇ ಕೀರ್ತಿಸ್ತ್ರೈಲೋಕ್ಯೇ ವೈ ಭವಿಷ್ಯತಿ।
13014069e ಅಕ್ಷಯಂ ಚ ಕುಲಂ ತೇಽಸ್ತು ಮಹರ್ಷಿಭಿರಲಂಕೃತಮ್।।

ತುಷ್ಟನಾದ ಭಗವಂತನು ಅವನಿಗೆ “ವತ್ಸ! ಗ್ರಂಥಕಾರನಾಗುತ್ತೀಯೆ! ತ್ರೈಲೋಕ್ಯಗಳಲ್ಲಿ ನಿನ್ನ ಕೀರ್ತಿಯು ಅಕ್ಷಯವಾಗುತ್ತದೆ. ಮಹರ್ಷಿ! ನಿನ್ನ ಕುಲವೂ ಅಕ್ಷಯಕಾಲದವರೆಗೆ ಅಲಂಕೃತವಾಗಿರುತ್ತದೆ!” ಎಂದು ಹೇಳಿದ್ದನು.

13014070a ಸಾವರ್ಣಿಶ್ಚಾಪಿ ವಿಖ್ಯಾತ ಋಷಿರಾಸೀತ್ಕೃತೇ ಯುಗೇ।
13014070c ಇಹ ತೇನ ತಪಸ್ತಪ್ತಂ ಷಷ್ಟಿಂ ವರ್ಷಶತಾನ್ಯಥ।।

ಕೃತಯುಗದಲ್ಲಿ ಸಾವರ್ಣಿಯೆಂಬ ವಿಖ್ಯಾತ ಋಷಿಯಿದ್ದನು. ಅವನು ಇಲ್ಲಿ ಆರು ಸಾವಿರ ವರ್ಷಗಳು ಅವನ ಕುರಿತಾಗಿ ತಪಸ್ಸನ್ನು ತಪಿಸಿದ್ದನು.

13014071a ತಮಾಹ ಭಗವಾನ್ರುದ್ರಃ ಸಾಕ್ಷಾತ್ತುಷ್ಟೋಽಸ್ಮಿ ತೇಽನಘ।
13014071c ಗ್ರಂಥಕೃಲ್ಲೋಕವಿಖ್ಯಾತೋ ಭವಿತಾಸ್ಯಜರಾಮರಃ।।

ಅವನಿಗೆ ಭಗವಾನ್ ರುದ್ರನು ಸಾಕ್ಷಾತ್ತಾಗಿ “ಅನಘ! ನಿನ್ನಿಂದ ತೃಪ್ತನಾಗಿದ್ದೇನೆ! ಅಜರಾಮರನಾಗಿ ಲೋಕದಲ್ಲಿ ಗ್ರಂಥಕರ್ತೃವಾಗುತ್ತೀಯೆ!” ಎಂದು ಹೇಳಿದ್ದನು.

13014072a ಮಯಾಪಿ ಚ ಯಥಾ ದೃಷ್ಟೋ ದೇವದೇವಃ ಪುರಾ ವಿಭುಃ।
13014072c ಸಾಕ್ಷಾತ್ಪಶುಪತಿಸ್ತಾತ ತಚ್ಚಾಪಿ ಶೃಣು ಮಾಧವ।।

ಅಯ್ಯಾ! ಮಾಧವ! ಹಿಂದೆ ನಾನು ಕೂಡ ದೇವದೇವ ವಿಭು ಪಶುಪತಿಯನ್ನು ಸಾಕ್ಷಾತ್ತಾಗಿ ಹೇಗೆ ನೋಡಿದೆ ಎನ್ನುವುದನ್ನು ಕೇಳು.

13014073a ಯದರ್ಥಂ ಚ ಮಹಾದೇವಃ ಪ್ರಯತೇನ ಮಯಾ ಪುರಾ।
13014073c ಆರಾಧಿತೋ ಮಹಾತೇಜಾಸ್ತಚ್ಚಾಪಿ ಶೃಣು ವಿಸ್ತರಮ್।।

ಯಾವ ಕಾರಣಕ್ಕಾಗಿ ಹಿಂದೆ ನಾನು ಪ್ರಯತ್ನಪಟ್ಟು ಮಹಾದೇವ ಮಹಾತೇಜನನ್ನು ಆರಾಧಿಸಿದೆ ಎನ್ನುವುದನ್ನೂ ವಿಸ್ತಾರವಾಗಿ ಕೇಳು.

13014074a ಯದವಾಪ್ತಂ ಚ ಮೇ ಪೂರ್ವಂ ದೇವದೇವಾನ್ಮಹೇಶ್ವರಾತ್।
13014074c ತತ್ಸರ್ವಮಖಿಲೇನಾದ್ಯ ಕಥಯಿಷ್ಯಾಮಿ ತೇಽನಘ।।

ಅನಘ! ಹಿಂದೆ ದೇವದೇವ ಮಹೇಶ್ವರನಿಂದ ಏನನ್ನು ಪಡೆದುಕೊಂಡೆ ಎನ್ನುವ ಸರ್ವವನ್ನೂ ಸಂಪೂರ್ಣವಾಗಿ ನಿನಗೆ ಹೇಳುತ್ತೇನೆ.

13014075a ಪುರಾ ಕೃತಯುಗೇ ತಾತ ಋಷಿರಾಸೀನ್ಮಹಾಯಶಾಃ।
13014075c ವ್ಯಾಘ್ರಪಾದ ಇತಿ ಖ್ಯಾತೋ ವೇದವೇದಾಂಗಪಾರಗಃ।
13014075e ತಸ್ಯಾಹಮಭವಂ ಪುತ್ರೋ ಧೌಮ್ಯಶ್ಚಾಪಿ ಮಮಾನುಜಃ।।

ಅಯ್ಯಾ! ಹಿಂದೆ ಕೃತಯುಗದಲ್ಲಿ ವ್ಯಾಘ್ರಪಾದ ಎಂದು ಖ್ಯಾತನಾದ ವೇದವೇದಾಂಗಪಾರಂಗತ ಮಹಾಯಶಸ್ವಿ ಋಷಿಯಿದ್ದನು. ಅವನಿಗೆ ನಾನು ಪುತ್ರನಾಗಿ ಜನಿಸಿದೆನು. ಧೌಮ್ಯನೂ ಕೂಡ ನನ್ನ ಅನುಜ.

13014076a ಕಸ್ಯ ಚಿತ್ತ್ವಥ ಕಾಲಸ್ಯ ಧೌಮ್ಯೇನ ಸಹ ಮಾಧವ।
13014076c ಆಗಚ್ಚಮಾಶ್ರಮಂ ಕ್ರೀಡನ್ಮುನೀನಾಂ ಭಾವಿತಾತ್ಮನಾಮ್।।

ಮಾಧವ! ಕೆಲವು ಕಾಲದ ನಂತರ ನಾನು ಧೌಮ್ಯನೊಂದಿಗೆ ಆಟವಾಡುತ್ತಾ ಭಾವಿತಾತ್ಮ ಮುನಿಗಳ ಆಶ್ರಮಕ್ಕೆ ಬಂದೆನು.

13014077a ತತ್ರಾಪಿ ಚ ಮಯಾ ದೃಷ್ಟಾ ದುಹ್ಯಮಾನಾ ಪಯಸ್ವಿನೀ।
13014077c ಲಕ್ಷಿತಂ ಚ ಮಯಾ ಕ್ಷೀರಂ ಸ್ವಾದುತೋ ಹ್ಯಮೃತೋಪಮಮ್।।

ಅಲ್ಲಿ ನಾನು ಹಾಲುಸುರಿಸುತ್ತಿದ್ದ ಹಸುವನ್ನು ನೋಡಿದೆನು. ಅಮೃತೋಪಮ ರುಚಿಯಿದ್ದ ಹಾಲನ್ನೂ ನಾನು ನೋಡಿದೆನು.

13014078a ತತಃ ಪಿಷ್ಟಂ ಸಮಾಲೋಡ್ಯ ತೋಯೇನ ಸಹ ಮಾಧವ।
13014078c ಆವಯೋಃ ಕ್ಷೀರಮಿತ್ಯೇವ ಪಾನಾರ್ಥಮುಪನೀಯತೇ।।

ಮಾಧವ! ಅನಂತರ ಹಿಟ್ಟನ್ನು ನೀರಿನಲ್ಲಿ ಕಲೆಸಿ ಅದೇ ಹಾಲೆಂದು ಕುಡಿಯಲು ನಮಗೆ ನೀಡಲಾಯಿತು.

13014079a ಅಥ ಗವ್ಯಂ ಪಯಸ್ತಾತ ಕದಾ ಚಿತ್ಪ್ರಾಶಿತಂ ಮಯಾ।
13014079c ತತಃ ಪಿಷ್ಟರಸಂ ತಾತ ನ ಮೇ ಪ್ರೀತಿಮುದಾವಹತ್।।

ಅಯ್ಯಾ! ಅದಕ್ಕೂ ಮೊದಲು ಯಾವಾಗಲೋ ಒಮ್ಮೆ ಹಸುವಿನ ಹಾಲನ್ನು ನಾನು ಕುಡಿದಿದ್ದೆನು. ಅಯ್ಯಾ! ಹಿಟ್ಟಿನ ಆ ರಸವು ನನಗೆ ಸಂತೋಷವನ್ನು ನೀಡಲಿಲ್ಲ.

13014080a ತತೋಽಹಮಬ್ರುವಂ ಬಾಲ್ಯಾಜ್ಜನನೀಮಾತ್ಮನಸ್ತದಾ।
13014080c ಕ್ಷೀರೋದನಸಮಾಯುಕ್ತಂ ಭೋಜನಂ ಚ ಪ್ರಯಚ್ಚ ಮೇ।।

ಆಗ ನಾನು ಬಾಲ್ಯತನದಿಂದ ನನ್ನ ತಾಯಿಗೆ “ಹಾಲನ್ನು ಸೇರಿಸಿ ಮಾಡಿದ ಭೋಜನವನ್ನು ನನಗೆ ನೀಡು!” ಎಂದು ಕೇಳಿಕೊಂಡೆನು.

13014081a ತತೋ ಮಾಮಬ್ರವೀನ್ಮಾತಾ ದುಃಖಶೋಕಸಮನ್ವಿತಾ।
13014081c ಪುತ್ರಸ್ನೇಹಾತ್ಪರಿಷ್ವಜ್ಯ ಮೂರ್ಧ್ನಿ ಚಾಘ್ರಾಯ ಮಾಧವ।।

ಮಾಧವ! ಆಗ ದುಃಖಶೋಕಸಮನ್ವಿತಳಾದ ಮಾತೆಯು ಪುತ್ರಸ್ನೇಹದಿಂದ ನನ್ನನ್ನು ಬಿಗಿದಪ್ಪಿ ನೆತ್ತಿಯನ್ನು ಮೂಸುತ್ತಾ ಹೇಳಿದಳು:

13014082a ಕುತಃ ಕ್ಷೀರೋದನಂ ವತ್ಸ ಮುನೀನಾಂ ಭಾವಿತಾತ್ಮನಾಮ್।
13014082c ವನೇ ನಿವಸತಾಂ ನಿತ್ಯಂ ಕಂದಮೂಲಫಲಾಶಿನಾಮ್।।

“ಮಗೂ! ವನದಲ್ಲಿ ನಿತ್ಯವೂ ಕಂದಮೂಲ ಫಲಗಳನ್ನು ತಿನ್ನುತ್ತಾ ವಾಸಿಸುತ್ತಿರುವ ಭಾವಿತಾತ್ಮ ಮುನಿಗಳಿಗೆ ಹಾಲೆಲ್ಲಿ ಸಿಗುತ್ತದೆ?

13014083a ಅಪ್ರಸಾದ್ಯ ವಿರೂಪಾಕ್ಷಂ ವರದಂ ಸ್ಥಾಣುಮವ್ಯಯಮ್।
13014083c ಕುತಃ ಕ್ಷೀರೋದನಂ ವತ್ಸ ಸುಖಾನಿ ವಸನಾನಿ ಚ।।

ವತ್ಸ! ವಿರೂಪಾಕ್ಷ ವರದ ಸ್ಥಾಣು ಅವ್ಯಯನನ್ನು ಪ್ರಸನ್ನಗೊಳಿಸದೇ ಕ್ಷೀರಾನ್ನ, ಸುಖಗಳು ಮತ್ತು ವಸ್ತ್ರಗಳು ಎಲ್ಲಿಂದ ದೊರೆಯುತ್ತವೆ?

13014084a ತಂ ಪ್ರಪದ್ಯ ಸದಾ ವತ್ಸ ಸರ್ವಭಾವೇನ ಶಂಕರಮ್।
13014084c ತತ್ಪ್ರಸಾದಾಚ್ಚ ಕಾಮೇಭ್ಯಃ ಫಲಂ ಪ್ರಾಪ್ಸ್ಯಸಿ ಪುತ್ರಕ।।

ವತ್ಸ! ಪುತ್ರಕ! ಸರ್ವಭಾವದಿಂದ ಸದಾ ಶಂಕರನನ್ನು ಸ್ತುತಿಸು. ಅವನ ಪ್ರಸಾದದಿಂದ ಬಯಸಿದ ಫಲವನ್ನು ಪಡೆಯುತ್ತೀಯೆ!”

13014085a ಜನನ್ಯಾಸ್ತದ್ವಚಃ ಶ್ರುತ್ವಾ ತದಾಪ್ರಭೃತಿ ಶತ್ರುಹನ್।
13014085c ಮಮ ಭಕ್ತಿರ್ಮಹಾದೇವೇ ನೈಷ್ಠಿಕೀ ಸಮಪದ್ಯತ।।

ಶತ್ರುಹನ್! ಜನನಿಯ ಆ ಮಾತನ್ನು ಕೇಳಿದಾಗಲಿಂದ ನನ್ನಲ್ಲಿ ಮಹಾದೇವನ ಮೇಲೆ ಅನನ್ಯ ಭಕ್ತಿಯುಂಟಾಯಿತು.

13014086a ತತೋಽಹಂ ತಪ ಆಸ್ಥಾಯ ತೋಷಯಾಮಾಸ ಶಂಕರಮ್।
13014086c ದಿವ್ಯಂ ವರ್ಷಸಹಸ್ರಂ ತು ಪಾದಾಂಗುಷ್ಠಾಗ್ರವಿಷ್ಠಿತಃ।।

ಆಗ ನಾನು ತಪಸ್ಸನ್ನಾರಿಸಿ ಶಂಕರನನ್ನು ತೃಪ್ತಿಗೊಳಿಸತೊಡಗಿದೆನು. ಒಂದು ಸಾವಿರ ದೇವವರ್ಷಗಳ ಪರ್ಯಂತ ಕಾಲಿನ ಅಂಗುಷ್ಠದ ಮೇಲೆ ನಿಂತುಕೊಂಡೆನು.

13014087a ಏಕಂ ವರ್ಷಶತಂ ಚೈವ ಫಲಾಹಾರಸ್ತದಾಭವಮ್।
13014087c ದ್ವಿತೀಯಂ ಶೀರ್ಣಪರ್ಣಾಶೀ ತೃತೀಯಂ ಚಾಂಬುಭೋಜನಃ।
13014087e ಶತಾನಿ ಸಪ್ತ ಚೈವಾಹಂ ವಾಯುಭಕ್ಷಸ್ತದಾಭವಮ್।।

ಮೊದಲನೆಯ ನೂರು ವರ್ಷಗಳನ್ನು ಫಲಾಹಾರದಲ್ಲಿಯೇ ಕಳೆದೆನು. ಎರಡನೆಯ ನೂರು ವರ್ಷಗಳಲ್ಲಿ ಒಣಗಿದ ಎಲೆಯನ್ನು ತಿನ್ನುತ್ತಿದ್ದೆನು. ಮೂರನೆಯ ನೂರು ವರ್ಷಗಳಲ್ಲಿ ಕೇವಲ ನೀರನ್ನು ಕುಡಿಯುತ್ತಿದ್ದೆನು. ಏಳು ನೂರು ವರ್ಷಗಳು ನಾನು ಕೇವಲ ವಾಯುಭಕ್ಷಕನಾಗಿದ್ದೆನು.

13014088a ತತಃ ಪ್ರೀತೋ ಮಹಾದೇವಃ ಸರ್ವಲೋಕೇಶ್ವರಃ ಪ್ರಭುಃ।
13014088c ಶಕ್ರರೂಪಂ ಸ ಕೃತ್ವಾ ತು ಸರ್ವೈರ್ದೇವಗಣೈರ್ವೃತಃ।
13014088e ಸಹಸ್ರಾಕ್ಷಸ್ತದಾ ಭೂತ್ವಾ ವಜ್ರಪಾಣಿರ್ಮಹಾಯಶಾಃ।।

ಅನಂತರ ಸರ್ವಲೋಕೇಶ್ವರ ಪ್ರಭು ಮಹಾದೇವನು ಸಹಸ್ರಾಕ್ಷ ವಜ್ರಪಾಣಿ ಮಹಾಯಶಸ್ವಿ ಶಕ್ರನ ರೂಪವನ್ನು ಮಾಡಿಕೊಂಡು ಸರ್ವ ದೇವಗಣಗಳಿಂದ ಆವೃತನಾಗಿ ಬಂದನು.

13014089a ಸುಧಾವದಾತಂ ರಕ್ತಾಕ್ಷಂ ಸ್ತಬ್ಧಕರ್ಣಂ ಮದೋತ್ಕಟಮ್।
13014089c ಆವೇಷ್ಟಿತಕರಂ ರೌದ್ರಂ ಚತುರ್ದಂಷ್ಟ್ರಂ ಮಹಾಗಜಮ್।।
13014090a ಸಮಾಸ್ಥಿತಶ್ಚ ಭಗವಾನ್ದೀಪ್ಯಮಾನಃ ಸ್ವತೇಜಸಾ।
13014090c ಆಜಗಾಮ ಕಿರೀಟೀ ತು ಹಾರಕೇಯೂರಭೂಷಿತಃ।।

ಸೊಂಡಿಲನ್ನು ಸುತ್ತಿಕೊಂಡಿದ್ದ, ಕೆಂಪು ಕಣ್ಣುಗಳ, ಸೆಟೆದು ನಿಂತ ಕಿವಿಗಳ, ಮದೋದಕವನ್ನು ಸುರಿಸುತ್ತಿದ್ದ, ರೌದ್ರ ನಾಲ್ಕು ಹಲ್ಲುಗಳಿದ್ದ ಬಿಳಿಯ ಮಹಾಗಜವನ್ನೇರಿ, ಸ್ವತೇಜಸ್ಸಿನಿಂದ ಬೆಳಗುತ್ತಾ, ಕಿರೀಟ-ಹಾರ-ಕೇಯೂರಗಳಿಂದ ಭೂಷಿತನಾಗಿ ಭಗವಂತನು ನನ್ನ ಬಳಿ ಆಗಮಿಸಿದನು.

13014091a ಪಾಂಡುರೇಣಾತಪತ್ರೇಣ ಧ್ರಿಯಮಾಣೇನ ಮೂರ್ಧನಿ।
13014091c ಸೇವ್ಯಮಾನೋಽಪ್ಸರೋಭಿಶ್ಚ ದಿವ್ಯಗಂಧರ್ವನಾದಿತಃ।।
13014092a ತತೋ ಮಾಮಾಹ ದೇವೇಂದ್ರಃ ಪ್ರೀತಸ್ತೇಽಹಂ ದ್ವಿಜೋತ್ತಮ।
13014092c ವರಂ ವೃಣೀಷ್ವ ಮತ್ತಸ್ತ್ವಂ ಯತ್ತೇ ಮನಸಿ ವರ್ತತೇ।।

ಅವನ ನೆತ್ತಿಯ ಮೇಲೆ ಶ್ವೇತಛತ್ರವು ಬೆಳಗುತ್ತಿತ್ತು. ಹಾಡುತ್ತಿದ್ದ ದಿವ್ಯ ಗಂಧರ್ವರಿಂದಲೂ ಅಪ್ಸರೆಯರಿಂದಲೂ ಸೇವಿಸಲ್ಪಟ್ಟ ಆ ದೇವೇಂದ್ರನು ನನಗೆ “ದ್ವಿಜೋತ್ತಮ! ನಿನ್ನ ಮೇಲೆ ನಾನು ಪ್ರೀತನಾಗಿದ್ದೇನೆ. ನಿನ್ನ ಮನಸ್ಸಿನಲ್ಲಿರುವ ವರವನ್ನು ಕೇಳು!” ಎಂದನು.

13014093a ಶಕ್ರಸ್ಯ ತು ವಚಃ ಶ್ರುತ್ವಾ ನಾಹಂ ಪ್ರೀತಮನಾಭವಮ್।
13014093c ಅಬ್ರುವಂ ಚ ತದಾ ಕೃಷ್ಣ ದೇವರಾಜಮಿದಂ ವಚಃ।।

ಶಕ್ರನ ಮಾತನ್ನು ಕೇಳಿ ನಾನು ಪ್ರೀತಮನಸ್ಕನಾಗಲಿಲ್ಲ. ಕೃಷ್ಣ! ಆಗ ದೇವರಾಜನಿಗೆ ಈ ಮಾತನ್ನಾಡಿದನು.

13014094a ನಾಹಂ ತ್ವತ್ತೋ ವರಂ ಕಾಂಕ್ಷೇ ನಾನ್ಯಸ್ಮಾದಪಿ ದೈವತಾತ್।
13014094c ಮಹಾದೇವಾದೃತೇ ಸೌಮ್ಯ ಸತ್ಯಮೇತದ್ಬ್ರವೀಮಿ ತೇ।।

“ಸೌಮ್ಯ! ಮಹಾದೇವನಲ್ಲದೇ ಬೇರೆ ಯಾವ ದೇವತೆಯಿಂದಲೂ ನಾನು ವರವನ್ನು ಬಯಸುತ್ತಿಲ್ಲ! ನಿನಗೆ ನಾನು ಈ ಸತ್ಯವನ್ನು ಹೇಳುತ್ತಿದ್ದೇನೆ.

13014095a ಪಶುಪತಿವಚನಾದ್ಭವಾಮಿ ಸದ್ಯಃ ಕೃಮಿರಥ ವಾ ತರುರಪ್ಯನೇಕಶಾಖಃ।
13014095c ಅಪಶುಪತಿವರಪ್ರಸಾದಜಾ ಮೇ ತ್ರಿಭುವನರಾಜ್ಯವಿಭೂತಿರಪ್ಯನಿಷ್ಟಾ।।

ಪಶುಪತಿಯು ಹೇಳಿದರೆ ಕೂಡಲೇ ನಾನು ಕ್ರಿಮಿಯಾಗುತ್ತೇನೆ ಅಥವಾ ಅನೇಕ ಶಾಖೆಗಳುಳ್ಳ ವೃಕ್ಷವಾಗುತ್ತೇನೆ. ಪಶುಪತಿಯ ವರಪ್ರಸಾದವಿಲ್ಲದೇ ದೊರಕಿದ ತ್ರಿಭುವನ ರಾಜ್ಯ ಐಶ್ವರ್ಯವೂ ನನಗೆ ಅನಿಷ್ಟವಾದುದು.

13014096a ಅಪಿ ಕೀಟಃ ಪತಂಗೋ ವಾ ಭವೇಯಂ ಶಂಕರಾಜ್ಞಯಾ।
13014096c ನ ತು ಶಕ್ರ ತ್ವಯಾ ದತ್ತಂ ತ್ರೈಲೋಕ್ಯಮಪಿ ಕಾಮಯೇ।।

ಶಂಕರನು ಆಜ್ಞೆಯಿತ್ತರೆ ಕೀಟವಾಗಲೀ ಪತಂಗವಾಗಲೀ ಆಗಬಲ್ಲೆನು. ಶಕ್ರ! ಆದರೆ ನೀನು ಕೊಟ್ಟ ತ್ರೈಲೋಕ್ಯವನ್ನೂ ನಾನು ಬಯಸುವುದಿಲ್ಲ.

13014097a ಯಾವಚ್ಚಶಾಂಕಶಕಲಾಮಲಬದ್ಧಮೌಲಿರ್ ನ ಪ್ರೀಯತೇ ಪಶುಪತಿರ್ಭಗವಾನ್ಮಮೇಶಃ।
13014097c ತಾವಜ್ಜರಾಮರಣಜನ್ಮಶತಾಭಿಘಾತೈರ್ ದುಃಖಾನಿ ದೇಹವಿಹಿತಾನಿ ಸಮುದ್ವಹಾಮಿ।।

ಎಲ್ಲಿಯವರೆಗೆ ನಿರ್ಮಲವೂ ಉಜ್ವಲವೂ ಆದ ಅರ್ಧಚಂದ್ರಮಯ ಕಿರೀಟವನ್ನು ಧರಿಸಿರುವ ನನ್ನ ಈಶ ಪಶುಪತಿಯು ನನ್ನ ಮೇಲೆ ಪ್ರೀತನಾಗುವುದಿಲ್ಲವೋ ಅಲ್ಲಿಯ ವರೆಗೆ ಈ ದೇಹವಿಹಿತವಾಗಿರುವ ಮುಪ್ಪು-ಮರಣ-ಜನ್ಮಗಳೆಂಬ ನೂರಾರು ಘಾತಿ-ದುಃಖಗಳನ್ನು ಸಹಿಸಿಕೊಂಡಿರುತ್ತೇನೆ.

13014098a ದಿವಸಕರಶಶಾಂಕವಹ್ನಿದೀಪ್ತಂ ತ್ರಿಭುವನಸಾರಮಪಾರಮಾದ್ಯಮೇಕಮ್।
13014098c ಅಜರಮಮರಮಪ್ರಸಾದ್ಯ ರುದ್ರಂ ಜಗತಿ ಪುಮಾನಿಹ ಕೋ ಲಭೇತ ಶಾಂತಿಮ್।।

ಸೂರ್ಯ-ಚಂದ್ರ-ಅಗ್ನಿಗಳಂತೆ ಬೆಳಗುತ್ತಿರುವ, ತ್ರಿಭುವನಗಳ ಸಾರವಾಗಿರುವ, ಅಪಾರನೂ, ಆದ್ಯನೂ, ಏಕನೂ, ಅಜರಾಮರನೂ ಆದ ರುದ್ರನನ್ನು ಪ್ರಸನ್ನಗೊಳಿಸದೇ ಈ ಜಗತ್ತಿನಲ್ಲಿ ಯಾವ ಪುರುಷನು ತಾನೇ ಶಾಂತಿಯನ್ನು ಪಡೆದಾನು?”

13014099 ಶಕ್ರ ಉವಾಚ।
13014099a ಕಃ ಪುನಸ್ತವ ಹೇತುರ್ವೈ ಈಶೇ ಕಾರಣಕಾರಣೇ।
13014099c ಯೇನ ದೇವಾದೃತೇಽನ್ಯಸ್ಮಾತ್ಪ್ರಸಾದಂ ನಾಭಿಕಾಂಕ್ಷಸಿ।।

ಶಕ್ರನು ಹೇಳಿದನು: “ಕಾರಣಕ್ಕೂ ಕಾರಣನಾಗಿರುವ ಈಶನಲ್ಲದೇ ಬೇರೆ ಯಾವ ದೇವನಿಂದಲೂ ಪ್ರಸಾದವನ್ನು ನೀನು ಬಯಸದೇ ಇರುವುದಕ್ಕೆ ಕಾರಣವೇನು?”

13014100 ಉಪಮನ್ಯುರುವಾಚ।
13014100a ಹೇತುಭಿರ್ವಾ ಕಿಮನ್ಯೈಸ್ತೇ ಈಶಃ ಕಾರಣಕಾರಣಮ್।
13014100c ನ ಶುಶ್ರುಮ ಯದನ್ಯಸ್ಯ ಲಿಂಗಮಭ್ಯರ್ಚ್ಯತೇ ಸುರೈಃ।।

ಉಪಮನ್ಯುವು ಹೇಳಿದನು: “ಈಶನು ಕಾರಣಗಳಿಗೂ ಕಾರಣನೆನ್ನುವುದಕ್ಕೆ ಬೇರೆ ಯಾವ ಕಾರಣಗಳನ್ನು ಕೊಡುವ ಅವಶ್ಯಕತೆಯಿದೆ? ಸುರರು ಇದೂವರೆಗೆ ಬೇರೆ ಯಾರ ಲಿಂಗವನ್ನೂ ಪೂಜಿಸಿರುವರೆನ್ನುವುದನ್ನು ನಾವು ಕೇಳಿಲ್ಲ!

13014101a ಕಸ್ಯಾನ್ಯಸ್ಯ ಸುರೈಃ ಸರ್ವೈರ್ಲಿಂಗಂ ಮುಕ್ತ್ವಾ ಮಹೇಶ್ವರಮ್।
13014101c ಅರ್ಚ್ಯತೇಽರ್ಚಿತಪೂರ್ವಂ ವಾ ಬ್ರೂಹಿ ಯದ್ಯಸ್ತಿ ತೇ ಶ್ರುತಿಃ।।

ಮಹೇಶ್ವರನ ಲಿಂಗವನ್ನು ಬಿಟ್ಟು ಬೇರೆ ಯಾರದ್ದಾದರೂ ಲಿಂಗವನ್ನು ಸರ್ವ ಸುರರೂ ಹಿಂದೆ ಅಥವಾ ಈಗ ಪೂಜಿಸುತ್ತಿದ್ದುದನ್ನು ನೀನು ಕೇಳಿದ್ದರೆ ಅದನ್ನು ನನಗೆ ಹೇಳು!

13014102a ಯಸ್ಯ ಬ್ರಹ್ಮಾ ಚ ವಿಷ್ಣುಶ್ಚ ತ್ವಂ ಚಾಪಿ ಸಹ ದೈವತೈಃ।
13014102c ಅರ್ಚಯಧ್ವಂ ಸದಾ ಲಿಂಗಂ ತಸ್ಮಾಚ್ಚ್ರೇಷ್ಠತಮೋ ಹಿ ಸಃ।।

ಯಾರ ಲಿಂಗವನ್ನು ಸದಾ ಬ್ರಹ್ಮ, ವಿಷ್ಣು, ಮತ್ತು ದೇವತೆಗಳೊಂದಿಗೆ ನೀನೂ ಕೂಡ ಅರ್ಚಿಸಿಕೊಂಡು ಬಂದಿದ್ದೀಯೋ ಅವನೇ ಶ್ರೇಷ್ಠತಮನು.

13014103a ತಸ್ಮಾದ್ವರಮಹಂ ಕಾಂಕ್ಷೇ ನಿಧನಂ ವಾಪಿ ಕೌಶಿಕ।
13014103c ಗಚ್ಚ ವಾ ತಿಷ್ಠ ವಾ ಶಕ್ರ ಯಥೇಷ್ಟಂ ಬಲಸೂದನ।।

ಕೌಶಿಕ! ಶಕ್ರ! ಬಲಸೂದನ! ಆದುದರಿಂದ ನಾನು ಅವನಿಂದಲೇ ವರವನ್ನಾಗಲೀ ನಿಧನವನ್ನಾಗಲೀ ಬಯಸಿದ್ದೇನೆ. ಯಥೇಷ್ಟವಾಗಿ ನೀನು ಇಲ್ಲಿಯೇ ನಿಲ್ಲು ಅಥವಾ ಹೊರಟುಹೋಗು!

13014104a ಕಾಮಮೇಷ ವರೋ ಮೇಽಸ್ತು ಶಾಪೋ ವಾಪಿ ಮಹೇಶ್ವರಾತ್।
13014104c ನ ಚಾನ್ಯಾಂ ದೇವತಾಂ ಕಾಂಕ್ಷೇ ಸರ್ವಕಾಮಫಲಾನ್ಯಪಿ।।

ಮಹೇಶ್ವರನಿಂದ ವರವಾಗಲೀ ಶಾಪವನ್ನಾಗಲೀ ಬಯಸುತ್ತೇನೆ. ಬೇರೆ ಯಾವ ದೇವತೆಯಿಂದಲೂ ಸರ್ವಕಾಮಗಳ ಫಲವನ್ನೂ ಬಯಸುವುದಿಲ್ಲ.”

13014105a ಏವಮುಕ್ತ್ವಾ ತು ದೇವೇಂದ್ರಂ ದುಃಖಾದಾಕುಲಿತೇಂದ್ರಿಯಃ।
13014105c ನ ಪ್ರಸೀದತಿ ಮೇ ರುದ್ರಃ ಕಿಮೇತದಿತಿ ಚಿಂತಯನ್।
13014105e ಅಥಾಪಶ್ಯಂ ಕ್ಷಣೇನೈವ ತಮೇವೈರಾವತಂ ಪುನಃ।।
13014106a ಹಂಸಕುಂದೇಂದುಸದೃಶಂ ಮೃಣಾಲಕುಮುದಪ್ರಭಮ್।
13014106c ವೃಷರೂಪಧರಂ ಸಾಕ್ಷಾತ್ಕ್ಷೀರೋದಮಿವ ಸಾಗರಮ್।।

ದೇವೇಂದ್ರನಿಗೆ ಹೀಗೆ ಹೇಳಿ “ರುದ್ರನು ಏಕೆ ನನ್ನ ಮೇಲೆ ಪ್ರಸನ್ನನಾಗಲಿಲ್ಲ?” ಎಂದು ಚಿಂತಿಸುತ್ತಾ ದುಃಖದಿಂದ ವ್ಯಾಕುಲೇಂದ್ರಿಯನಾಗಿರಲು ಕ್ಷಣದಲ್ಲಿಯೇ ನಾನು ಆ ಐರಾವತವು ಪುನಃ ಹಂಸ ಮತ್ತು ಕೋಲುಮಲ್ಲಿಗೆಯ ಹೂವಿನಂತೆ ಬಿಳಿಯಾಗಿಯೂ, ಚಂದ್ರನ ಪ್ರಭೆಯುಳ್ಳದ್ದೂ ಸಾಕ್ಷಾತ್ ಕ್ಷೀರಸಾಗರದಂತೆಯೂ ಇದ್ದ ವೃಷಭನ ರೂಪವನ್ನು ಧರಿಸಿದ್ದುದನ್ನು ನೋಡಿದೆನು.

13014107a ಕೃಷ್ಣಪುಚ್ಚಂ ಮಹಾಕಾಯಂ ಮಧುಪಿಂಗಲಲೋಚನಮ್।
13014107c ಜಾಂಬೂನದೇನ ದಾಮ್ನಾ ಚ ಸರ್ವತಃ ಸಮಲಂಕೃತಮ್।।
13014108a ರಕ್ತಾಕ್ಷಂ ಸುಮಹಾನಾಸಂ ಸುಕರ್ಣಂ ಸುಕಟೀತಟಮ್।
13014108c ಸುಪಾರ್ಶ್ವಂ ವಿಪುಲಸ್ಕಂಧಂ ಸುರೂಪಂ ಚಾರುದರ್ಶನಮ್।।

ಆ ವೃಷಭದ ಬಾಲವು ಕಪ್ಪಾಗಿತ್ತು. ದೇಹವು ದೊಡ್ಡದಾಗಿತ್ತು. ಜೇನುತುಪ್ಪದ ಬಣ್ಣದ ಕಣ್ಣುಗಳಿದ್ದವು. ಸುತ್ತಲೂ ಬಂಗಾರದ ಸರಪಳಿಯಿಂದ ಅಲಂಕೃತಗೊಂಡಿತ್ತು. ಕೆಂಪು ಕಣ್ಣಿನ ಆ ವೃಷಭದ ಮೂಗು ಸುಂದರವಾಗಿತ್ತು. ಕಿವಿಗಳು ಸುಂದರವಾಗಿದ್ದವು. ಕಟಿಪ್ರದೇಶವು ಸುಂದರವಾಗಿತ್ತು. ಪಕ್ಕೆಗಳು ಸುಂದರವಾಗಿದ್ದವು. ಹೆಗಲು ವಿಶಾಲವಾಗಿತ್ತು. ನೋಡಲು ಅತ್ಯಂತ ಸುಂದರವಾಗಿತ್ತು.

13014109a ಕಕುದಂ ತಸ್ಯ ಚಾಭಾತಿ ಸ್ಕಂಧಮಾಪೂರ್ಯ ವಿಷ್ಠಿತಮ್।
13014109c ತುಷಾರಗಿರಿಕೂಟಾಭಂ ಸಿತಾಭ್ರಶಿಖರೋಪಮಮ್।।
13014110a ತಮಾಸ್ಥಿತಶ್ಚ ಭಗವಾನ್ದೇವದೇವಃ ಸಹೋಮಯಾ।
13014110c ಅಶೋಭತ ಮಹಾದೇವಃ ಪೌರ್ಣಮಾಸ್ಯಾಮಿವೋಡುರಾಟ್।।

ಅದರ ಹಿಳಿಲು ಹೆಗಲನ್ನು ಪೂರ್ತಿಯಾಗಿ ಆವರಿಸಿ ಮೇಲೆದ್ದು ಕಾಣುತ್ತಿತ್ತು. ಹಿಮವತ್ಪರ್ವತದ ಶಿಖರದಂತೆ ಪ್ರಕಾಶಿಸುತ್ತಿದ್ದ ಮತ್ತು ಬಿಳಿಯ ಮೋಡದ ಶಿಖರದಂತಿದ್ದ ಆ ವೃಷಭವನ್ನು ಏರಿದ್ದ ಉಮಾಸಹಿತನಾದ ಭಗವಾನ್ ದೇವದೇವ ಮಹಾದೇವನು ಪೂರ್ಣಿಮೆಯ ಚಂದ್ರನಂತೆ ಶೋಭಿಸುತ್ತಿದ್ದನು.

13014111a ತಸ್ಯ ತೇಜೋಭವೋ ವಹ್ನಿಃ ಸಮೇಘಃ ಸ್ತನಯಿತ್ನುಮಾನ್।
13014111c ಸಹಸ್ರಮಿವ ಸೂರ್ಯಾಣಾಂ ಸರ್ವಮಾವೃತ್ಯ ತಿಷ್ಠತಿ।।

ಅವನ ತೇಜಸ್ಸಿನಿಂದ ಹುಟ್ಟಿದ ಅಗ್ನಿಯು ಗುಡುಗುವ ಮೇಘಗಳ ಮಧ್ಯದಲ್ಲಿರುವ ಸಹಸ್ರಾರು ಸೂರ್ಯರಂತೆ ಕಾಣುತ್ತಿತ್ತು.

13014112a ಈಶ್ವರಃ ಸುಮಹಾತೇಜಾಃ ಸಂವರ್ತಕ ಇವಾನಲಃ।
13014112c ಯುಗಾಂತೇ ಸರ್ವಭೂತಾನಿ ದಿಧಕ್ಷುರಿವ ಚೋದ್ಯತಃ।।

ಮಹಾತೇಜಸ್ವೀ ಈಶ್ವರನು ಯುಗಾಂತದಲ್ಲಿ ಸರ್ವಭೂತಗಳನ್ನೂ ಭಸ್ಮಮಾಡುವ ಸಂವರ್ತಕಾಗ್ನಿಯಂತೆಯೇ ಪ್ರಜ್ವಲಿಸುತ್ತಿದ್ದನು.

13014113a ತೇಜಸಾ ತು ತದಾ ವ್ಯಾಪ್ತೇ ದುರ್ನಿರೀಕ್ಷ್ಯೇ ಸಮಂತತಃ।
13014113c ಪುನರುದ್ವಿಗ್ನಹೃದಯಃ ಕಿಮೇತದಿತಿ ಚಿಂತಯಮ್।।

ಸರ್ವತ್ರ ವ್ಯಾಪಿಸಿರುವ ಅವನ ತೇಜಸ್ಸಿನಿಂದಾಗಿ ಅವನನ್ನು ನೋಡಲೂ ಸಾಧ್ಯವಾಗುತ್ತಿರಲಿಲ್ಲ. ಇದೇನಿರಬಹುದು ಎಂದು ಪುನಃ ನನ್ನ ಹೃದಯವು ಉದ್ವಿಗ್ನಗೊಂಡು ಚಿಂತಿತನಾದೆನು.

13014114a ಮುಹೂರ್ತಮಿವ ತತ್ತೇಜೋ ವ್ಯಾಪ್ಯ ಸರ್ವಾ ದಿಶೋ ದಶ।
13014114c ಪ್ರಶಾಂತಂ ಚ ಕ್ಷಣೇನೈವ ದೇವದೇವಸ್ಯ ಮಾಯಯಾ।।

ಮುಹೂರ್ತಕಾಲ ಸರ್ವ ದಶ ದಿಕ್ಕುಗಳನ್ನೂ ವ್ಯಾಪಿಸಿ ಆ ತೇಜಸ್ಸು ದೇವದೇವನ ಮಾಯೆಯಿಂದ ಕ್ಷಣದಲ್ಲಿಯೇ ಪ್ರಶಾಂತವಾಯಿತು.

13014115a ಅಥಾಪಶ್ಯಂ ಸ್ಥಿತಂ ಸ್ಥಾಣುಂ ಭಗವಂತಂ ಮಹೇಶ್ವರಮ್।
13014115c ಸೌರಭೇಯಗತಂ ಸೌಮ್ಯಂ ವಿಧೂಮಮಿವ ಪಾವಕಮ್।
13014115e ಸಹಿತಂ ಚಾರುಸರ್ವಾಂಗ್ಯಾ ಪಾರ್ವತ್ಯಾ ಪರಮೇಶ್ವರಮ್।।

ಆಗ ನಾನು ಸರ್ವಾಂಗಸುಂದರಿ ಪಾರ್ವತಿಯೊಡನೆ ನಂದಿಯನ್ನೇರಿದ್ದ ಧೂಮರಹಿತ ಪಾವಕನಂತೆ ನಿಂತಿರುವ ಸ್ಥಾಣು ಭಗವಂತ ಮಹೇಶ್ವರ ಸೌಮ್ಯ ಪರಮೇಶ್ವರನನ್ನು ನೋಡಿದೆನು.

13014116a ನೀಲಕಂಠಂ ಮಹಾತ್ಮಾನಮಸಕ್ತಂ ತೇಜಸಾಂ ನಿಧಿಮ್।
13014116c ಅಷ್ಟಾದಶಭುಜಂ ಸ್ಥಾಣುಂ ಸರ್ವಾಭರಣಭೂಷಿತಮ್।।

ಸರ್ವಾಭರಣಭೂಷಿತನಾದ ಆ ನೀಲಕಂಠ, ಮಹಾತ್ಮ, ಅಸಕ್ತ, ತೇಜಸ್ಸಿನ ನಿಧಿ ಸ್ಥಾಣುವಿಗೆ ಹದಿನೆಂಟು ಭುಜಗಳಿದ್ದವು.

13014117a ಶುಕ್ಲಾಂಬರಧರಂ ದೇವಂ ಶುಕ್ಲಮಾಲ್ಯಾನುಲೇಪನಮ್।
13014117c ಶುಕ್ಲಧ್ವಜಮನಾಧೃಷ್ಯಂ ಶುಕ್ಲಯಜ್ಞೋಪವೀತಿನಮ್।।

ಬಿಳಿಯ ವಸ್ತ್ರವನ್ನು ಧರಿಸಿದ್ದ ಆ ದೇವನು ಬಿಳಿಯ ಮಾಲೆ-ಲೇಪನಗಳನ್ನು ಧರಿಸಿದ್ದನು. ಆ ಅನಧೃಷ್ಯನ ಧ್ವಜವು ಬಿಳಿಯದಾಗಿತ್ತು. ಬಿಳಿಯ ಯಜ್ಞೋಪವೀತವನ್ನು ಧರಿಸಿದ್ದನು.

13014118a ಗಾಯದ್ಭಿರ್ನೃತ್ಯಮಾನೈಶ್ಚ ಉತ್ಪತದ್ಭಿರಿತಸ್ತತಃ।
13014118c ವೃತಂ ಪಾರಿಷದೈರ್ದಿವ್ಯೈರಾತ್ಮತುಲ್ಯಪರಾಕ್ರಮೈಃ।।

ಹಾಡುತ್ತಾ ನೃತ್ಯಮಾಡುತ್ತಿದ್ದ, ಅಲ್ಲಿಂದಿಲ್ಲಿಗೆ ಹಾರಿ ಕುಣಿಯುತ್ತಿದ್ದ ತನ್ನಷ್ಟೇ ಪರಾಕ್ರಮವಿದ್ದ ದಿವ್ಯ ಪಾರಿಷದರಿಂದ ಅವನು ಆವೃತನಾಗಿದ್ದನು.

13014119a ಬಾಲೇಂದುಮುಕುಟಂ ಪಾಂಡುಂ ಶರಚ್ಚಂದ್ರಮಿವೋದಿತಮ್।
13014119c ತ್ರಿಭಿರ್ನೇತ್ರೈಃ ಕೃತೋದ್ದ್ಯೋತಂ ತ್ರಿಭಿಃ ಸೂರ್ಯೈರಿವೋದಿತೈಃ।।

ಅವನು ಬಾಲಚಂದ್ರನನ್ನೇ ಮುಕುಟವಾಗಿ ಧರಿಸಿದ್ದನು. ಶರತ್ಕಾಲದಲ್ಲಿ ಉದಯಿಸುವ ಚಂದ್ರನಂತೆ ಬಿಳಿಯಾಗಿದ್ದನು. ಉದಯಿಸುತ್ತಿರುವ ಮೂರು ಸೂರ್ಯರಂತೆ ಆವನ ಮೂರು ಕಣ್ಣುಗಳು ಪ್ರಕಾಶಿಸುತ್ತಿದ್ದವು.

13014120a ಅಶೋಭತ ಚ ದೇವಸ್ಯ ಮಾಲಾ ಗಾತ್ರೇ ಸಿತಪ್ರಭೇ।
13014120c ಜಾತರೂಪಮಯೈಃ ಪದ್ಮೈರ್ಗ್ರಥಿತಾ ರತ್ನಭೂಷಿತಾ।।

ದೇವನ ಪಾಂಡುರಪ್ರಭೆಯ ಶರೀರದಲ್ಲಿ ಸುವರ್ಣಮಯ ಕಮಲಗಳಿಂದ ಮತ್ತು ರತ್ನಗಳಿಂದ ವಿಭೂಷಿತ ಮಾಲೆಯು ಶೋಭಿಸುತ್ತಿತ್ತು.

13014121a ಮೂರ್ತಿಮಂತಿ ತಥಾಸ್ತ್ರಾಣಿ ಸರ್ವತೇಜೋಮಯಾನಿ ಚ।
13014121c ಮಯಾ ದೃಷ್ಟಾನಿ ಗೋವಿಂದ ಭವಸ್ಯಾಮಿತತೇಜಸಃ।।

ಗೋವಿಂದ! ಅಮಿತ ತೇಜಸ್ವಿ ಭವನ ಎಲ್ಲ ತೇಜೋಮಯ ಅಸ್ತ್ರಗಳೂ ಮೂರ್ತಿಮತ್ತಾಗಿ ನಿಂತಿರುವುದನ್ನು ನಾನು ನೋಡಿದೆನು.

13014122a ಇಂದ್ರಾಯುಧಸಹಸ್ರಾಭಂ ಧನುಸ್ತಸ್ಯ ಮಹಾತ್ಮನಃ।
13014122c ಪಿನಾಕಮಿತಿ ವಿಖ್ಯಾತಂ ಸ ಚ ವೈ ಪನ್ನಗೋ ಮಹಾನ್।।

ಸಹಸ್ರ ವಜ್ರಗಳಂತೆ ಹೊಳೆಯುತ್ತಿದ್ದ ಪಿನಾಕವೆಂದು ವಿಖ್ಯಾತವಾದ ಆ ಮಹಾತ್ಮನ ಮಹಾ ಧನುಸ್ಸು ಸರ್ಪರೂಪದಲ್ಲಿರುವುದನ್ನು ನೋಡಿದೆನು.

13014123a ಸಪ್ತಶೀರ್ಷೋ ಮಹಾಕಾಯಸ್ತೀಕ್ಷ್ಣದಂಷ್ಟ್ರೋ ವಿಷೋಲ್ಬಣಃ।
13014123c ಜ್ಯಾವೇಷ್ಟಿತಮಹಾಗ್ರೀವಃ ಸ್ಥಿತಃ ಪುರುಷವಿಗ್ರಹಃ।।

ನಿಂತಿದ್ದ ಆ ಏಳು ತಲೆಯ, ಮಹಾಕಾಯ, ತೀಕ್ಷ್ಣದಂಷ್ಟ್ರ, ವಿಷೋಲ್ಬಣ, ಪುರುಷವಿಗ್ರಹದ ಮಹಾಗ್ರೀವಕ್ಕೆ ಶಿಂಜನಿಯು ಬಿಗಿದಿತ್ತು.

13014124a ಶರಶ್ಚ ಸೂರ್ಯಸಂಕಾಶಃ ಕಾಲಾನಲಸಮದ್ಯುತಿಃ।
13014124c ಯತ್ತದಸ್ತ್ರಂ ಮಹಾಘೋರಂ ದಿವ್ಯಂ ಪಾಶುಪತಂ ಮಹತ್।।

ಸೂರ್ಯನಂತಿದ್ದ, ಕಾಲಾನಲನ ಪ್ರಕಾಶವನ್ನು ಹೊಂದಿದ್ದ ಅವನ ದಿವ್ಯ ಅಸ್ತ್ರ ಮಹಾ ಪಾಶುಪತ ಶರವು ಮಹಾಘೋರವಾಗಿದ್ದಿತು.

13014125a ಅದ್ವಿತೀಯಮನಿರ್ದೇಶ್ಯಂ ಸರ್ವಭೂತಭಯಾವಹಮ್।
13014125c ಸಸ್ಫುಲಿಂಗಂ ಮಹಾಕಾಯಂ ವಿಸೃಜಂತಮಿವಾನಲಮ್।।

ಅದ್ವಿತೀಯವೂ ಅನಿರ್ದೇಶ್ಯವೂ ಆದ ಆ ಪಾಶುಪತವು ಸರ್ವಭೂತಗಳಿಗೂ ಭಯವನ್ನುಂಟುಮಾಡುತ್ತಿತ್ತು. ಅತಿ ದೊಡ್ಡಗಾತ್ರದ ಪಾಶುಪತದಿಂದ ಅಗ್ನಿಯ ಕಿಡಿಗಳು ಹೊರಹೊಮ್ಮುತ್ತಿದ್ದವು.

13014126a ಏಕಪಾದಂ ಮಹಾದಂಷ್ಟ್ರಂ ಸಹಸ್ರಶಿರಸೋದರಮ್।
13014126c ಸಹಸ್ರಭುಜಜಿಹ್ವಾಕ್ಷಮುದ್ಗಿರಂತಮಿವಾನಲಮ್।।

ಸಹಸ್ರ ಶಿರ-ಉದರಗಳಿದ್ದ, ಸಹಸ್ರ ಭುಜ-ನಾಲಿಗೆ-ಕಣ್ಣುಗಳಿದ್ದ ಆ ಮಹಾದಂಷ್ಟ್ರ ಒಂದೇ ಕಾಲಿನ ಅಸ್ತ್ರವು ಅಗ್ನಿಯನ್ನು ಸುರಿಸುತ್ತಿತ್ತು.

13014127a ಬ್ರಾಹ್ಮಾನ್ನಾರಾಯಣಾದೈಂದ್ರಾದಾಗ್ನೇಯಾದಪಿ ವಾರುಣಾತ್।
13014127c ಯದ್ವಿಶಿಷ್ಟಂ ಮಹಾಬಾಹೋ ಸರ್ವಶಸ್ತ್ರವಿಘಾತನಮ್।।

ಮಹಾಬಾಹೋ! ಸರ್ವಶಸ್ತ್ರಗಳನ್ನೂ ನಾಶಗೊಳಿಸುವ ಆ ಪಾಶುಪತವು ಬ್ರಹ್ಮ, ನಾರಾಯಣ, ಇಂದ್ರ, ಅಗ್ನಿ ಮತ್ತು ವರುಣರ ಅಸ್ತ್ರಗಳನ್ನೂ ಮೀರಿಸುವಂತಿತ್ತು.

13014128a ಯೇನ ತತ್ತ್ರಿಪುರಂ ದಗ್ಧ್ವಾ ಕ್ಷಣಾದ್ಭಸ್ಮೀಕೃತಂ ಪುರಾ।
13014128c ಶರೇಣೈಕೇನ ಗೋವಿಂದ ಮಹಾದೇವೇನ ಲೀಲಯಾ।।

ಗೋವಿಂದ! ಹಿಂದೆ ಮಹಾದೇವನು ಲೀಲಾಜಾಲವಾಗಿ ಒಂದೇ ಶರದಿಂದ ಕ್ಷಣದಲ್ಲಿಯೇ ತ್ರಿಪುರವನ್ನು ಸುಟ್ಟುಹಾಕಿದ್ದನು.

13014129a ನಿರ್ದದಾಹ ಜಗತ್ಕೃತ್ಸ್ನಂ ತ್ರೈಲೋಕ್ಯಂ ಸಚರಾಚರಮ್।
13014129c ಮಹೇಶ್ವರಭುಜೋತ್ಸೃಷ್ಟಂ ನಿಮೇಷಾರ್ಧಾನ್ನ ಸಂಶಯಃ।।

ಮಹೇಶ್ವರನ ಭುಜದಿಂದ ಪ್ರಯೋಗಿಸಲ್ಪಟ್ಟ ಅದು ಸಂಪೂರ್ಣ ಜಗತ್ತನ್ನೂ, ಚರಾಚರಗಳೊಂದಿಗೆ ತ್ರೈಲೋಕ್ಯವನ್ನೂ ನಿಮಿಷಾರ್ಧದಲ್ಲಿ ಸುಟ್ಟುಬಿಡುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

13014130a ನಾವಧ್ಯೋ ಯಸ್ಯ ಲೋಕೇಽಸ್ಮಿನ್ಬ್ರಹ್ಮವಿಷ್ಣುಸುರೇಷ್ವಪಿ।
13014130c ತದಹಂ ದೃಷ್ಟವಾಂಸ್ತಾತ ಆಶ್ಚರ್ಯಾದ್ಭುತಮುತ್ತಮಮ್।।

ಅಯ್ಯಾ! ಯಾವ ಮಹಾಸ್ತ್ರಕ್ಕೆ ಈ ಲೋಕದಲ್ಲಿ ಅವಧ್ಯರಾದವರು ಯಾರೂ – ಬ್ರಹ್ಮ, ವಿಷ್ಣು, ಸುರರೂ ಕೂಡ – ಇಲ್ಲವೋ ಆ ಅದ್ಭುತ ಉತ್ತಮ ಅಸ್ತ್ರವನ್ನು ಆಶ್ಚರ್ಯದಿಂದ ನಾನು ನೋಡಿದೆನು.

13014131a ಗುಹ್ಯಮಸ್ತ್ರಂ ಪರಂ ಚಾಪಿ ತತ್ತುಲ್ಯಾಧಿಕಮೇವ ವಾ।
13014131c ಯತ್ತಚ್ಚೂಲಮಿತಿ ಖ್ಯಾತಂ ಸರ್ವಲೋಕೇಷು ಶೂಲಿನಃ।।

ಪಾಶುಪತಕ್ಕೂ ಗುಹ್ಯವಾದ, ಅದಕ್ಕೆ ಸಮನಾದ ಅಥವಾ ಅದಕ್ಕಿಂತಲೂ ಅಧಿಕವಾದ, ಮತ್ತು ಯಾವುದರಿಂದ ಅವನು ಶೂಲಿನ ಎಂದು ಸರ್ವಲೋಕಗಳಲ್ಲಿ ವಿಖ್ಯಾತನಾಗಿರುವನೋ ಆ ಶೂಲವನ್ನೂ ನಾನು ನೋಡಿದೆನು.

13014132a ದಾರಯೇದ್ಯನ್ಮಹೀಂ ಕೃತ್ಸ್ನಾಂ ಶೋಷಯೇದ್ವಾ ಮಹೋದಧಿಮ್।
13014132c ಸಂಹರೇದ್ವಾ ಜಗತ್ಕೃತ್ಸ್ನಂ ವಿಸೃಷ್ಟಂ ಶೂಲಪಾಣಿನಾ।।

ಶೂಲಪಾಣಿಯಿಂದ ಪ್ರಯೋಗಿಸಲ್ಪಟ್ಟ ಆ ಶೂಲವು ಈ ಸಂಪೂರ್ಣ ಭೂಮಿಯನ್ನು ಸೀಳಬಲ್ಲದು. ಸಾಗರವನ್ನು ಬತ್ತಿಸಬಲ್ಲದು. ಮತ್ತು ಇಡೀ ಜಗತ್ತನ್ನೇ ಸಂಹರಿಸಬಲ್ಲದು.

13014133a ಯೌವನಾಶ್ವೋ ಹತೋ ಯೇನ ಮಾಂಧಾತಾ ಸಬಲಃ ಪುರಾ।
13014133c ಚಕ್ರವರ್ತೀ ಮಹಾತೇಜಾಸ್ತ್ರಿಲೋಕವಿಜಯೀ ನೃಪಃ।।
13014134a ಮಹಾಬಲೋ ಮಹಾವೀರ್ಯಃ ಶಕ್ರತುಲ್ಯಪರಾಕ್ರಮಃ।
13014134c ಕರಸ್ಥೇನೈವ ಗೋವಿಂದ ಲವಣಸ್ಯೇಹ ರಕ್ಷಸಃ।।

ಗೋವಿಂದ! ಹಿಂದೆ ರಾಕ್ಷಸ ಲವಣನ ಕೈಯಲ್ಲಿದ್ದ ಆ ಶೂಲದಿಂದಲೇ ಚಕ್ರವರ್ತೀ, ಮಹಾತೇಜಸ್ವೀ, ತ್ರಿಲೋಕವಿಜಯೀ, ಮಹಾಬಲಶಾಲೀ, ಮಹಾವೀರ್ಯವಂತ, ಪರಾಕ್ರಮದಲ್ಲಿ ಶಕ್ರನ ಸಮನಾಗಿದ್ದ ನೃಪ ಯುವನಾಶ್ವನ ಮಗ ಮಾಂಧಾತನು ಸೇನೆಯೊಂದಿಗೆ ಹತನಾಗಿದ್ದನು.

13014135a ತಚ್ಚೂಲಮತಿತೀಕ್ಷ್ಣಾಗ್ರಂ ಸುಭೀಮಂ ಲೋಮಹರ್ಷಣಮ್।
13014135c ತ್ರಿಶಿಖಾಂ ಭ್ರುಕುಟೀಂ ಕೃತ್ವಾ ತರ್ಜಮಾನಮಿವ ಸ್ಥಿತಮ್।।

ಅತಿ ತೀಕ್ಷ್ಣ ಮೊನೆಯಿದ್ದ, ಭಯಂಕರವಾಗಿದ್ದ, ರೋಮಾಂಚಕವಾಗಿದ್ದ ಆ ಶೂಲವು ತನ್ನ ಮೂರು ತುದಿಗಳನ್ನೇ ಗಂಟಿಕ್ಕಿಕೊಂಡು ಭಯಪಡಿಸುತ್ತಿರುವಂತೆ ನಿಂತಿತ್ತು.

13014136a ವಿಧೂಮಂ ಸಾರ್ಚಿಷಂ ಕೃಷ್ಣಂ ಕಾಲಸೂರ್ಯಮಿವೋದಿತಮ್।
13014136c ಸರ್ಪಹಸ್ತಮನಿರ್ದೇಶ್ಯಂ ಪಾಶಹಸ್ತಮಿವಾಂತಕಮ್।
13014136e ದೃಷ್ಟವಾನಸ್ಮಿ ಗೋವಿಂದ ತದಸ್ತ್ರಂ ರುದ್ರಸನ್ನಿಧೌ।।

ಗೋವಿಂದ! ಧೂಮರಹಿತ ಜ್ವಾಲೆಗಳಿದ್ದ, ಕಪ್ಪು ಬಣ್ಣದ, ಪ್ರಳಯಕಾಲದಲ್ಲಿ ಉದಯಿಸುತ್ತಿರುವ ಸೂರ್ಯನಂತಿದ್ದ, ಅನಿರ್ದೇಶ್ಯವಾಗಿದ್ದ, ಪಾಶವನ್ನು ಹಿಡಿದ ಯಮನಂತೆ ಕೈಯಲ್ಲಿ ಸರ್ಪವನ್ನು ಹಿಡಿದಿದ್ದ ಆ ಅಸ್ತ್ರವನ್ನು ನಾನು ರುದ್ರನ ಸನ್ನಿಧಿಯಲ್ಲಿ ನೋಡಿದೆನು.

13014137a ಪರಶುಸ್ತೀಕ್ಷ್ಣಧಾರಶ್ಚ ದತ್ತೋ ರಾಮಸ್ಯ ಯಃ ಪುರಾ।
13014137c ಮಹಾದೇವೇನ ತುಷ್ಟೇನ ಕ್ಷತ್ರಿಯಾಣಾಂ ಕ್ಷಯಂಕರಃ।
13014137e ಕಾರ್ತವೀರ್ಯೋ ಹತೋ ಯೇನ ಚಕ್ರವರ್ತೀ ಮಹಾಮೃಧೇ।।
13014138a ತ್ರಿಃಸಪ್ತಕೃತ್ವಃ ಪೃಥಿವೀ ಯೇನ ನಿಃಕ್ಷತ್ರಿಯಾ ಕೃತಾ।
13014138c ಜಾಮದಗ್ನ್ಯೇನ ಗೋವಿಂದ ರಾಮೇಣಾಕ್ಲಿಷ್ಟಕರ್ಮಣಾ।।
13014139a ದೀಪ್ತಧಾರಃ ಸುರೌದ್ರಾಸ್ಯಃ ಸರ್ಪಕಂಠಾಗ್ರವೇಷ್ಟಿತಃ।
13014139c ಅಭವಚ್ಚೂಲಿನೋಽಭ್ಯಾಶೇ ದೀಪ್ತವಹ್ನಿಶಿಖೋಪಮಃ।।

ಹಿಂದೆ ಮಹಾದೇವನು ತುಷ್ಟನಾಗಿ ಕ್ಷತ್ರಿಯರ ಕ್ಷಯಂಕರ ರಾಮನಿಗೆ ಕೊಟ್ಟಿದ್ದ ತೀಕ್ಷ್ಣಅಲಗಿನ ಪರಶುವನ್ನು ಶೂಲಪಾಣಿಯ ಪಕ್ಕದಲ್ಲಿರುವುದನ್ನು ನೋಡಿದೆನು. ಗೋವಿಂದ! ಅಕ್ಲಿಷ್ಟಕರ್ಮಿ ಜಾಮದಗ್ನಿಯು ಆ ಪರಶುವಿನಿಂದ ಮಹಾಯುದ್ಧದಲ್ಲಿ ಚಕ್ರವರ್ತಿ ಕಾರ್ತವೀರ್ಯನನ್ನು ಸಂಹರಿಸಿದ್ದನು ಮತ್ತು ಇಪ್ಪತ್ತೊಂದು ಬಾರಿ ಭೂಮಿಯನ್ನು ನಿಃಕ್ಷತ್ರಿಯರನ್ನಾಗಿ ಮಾಡಿದ್ದನು. ಅದರ ಅಲಗುಗಳು ಥಳಥಳಿಸುತ್ತಿದ್ದವು. ಅತಿರೌದ್ರವಾಗಿದ್ದ ಅದರ ಕಂಠದಲ್ಲಿ ಸರ್ಪವು ಸುತ್ತಿಕೊಂಡಿತ್ತು. ಉರಿಯುತ್ತಿರುವ ಬೆಂಕಿಯ ರಾಶಿಯಂತೆ ಕಾಣುತ್ತಿತ್ತು.

13014140a ಅಸಂಖ್ಯೇಯಾನಿ ಚಾಸ್ತ್ರಾಣಿ ತಸ್ಯ ದಿವ್ಯಾನಿ ಧೀಮತಃ।
13014140c ಪ್ರಾಧಾನ್ಯತೋ ಮಯೈತಾನಿ ಕೀರ್ತಿತಾನಿ ತವಾನಘ।।

ಅನಘ! ಆ ಧೀಮತನ ಬಳಿ ಅಸಂಖ್ಯ ದಿವ್ಯಾಸ್ತ್ರಗಳಿದ್ದವು. ಅವುಗಳಲ್ಲಿ ಪ್ರಧಾನವಾದವುಗಳನ್ನು ಮಾತ್ರ ನಿನಗೆ ವರ್ಣಿಸಿದ್ದೇನೆ.

13014141a ಸವ್ಯದೇಶೇ ತು ದೇವಸ್ಯ ಬ್ರಹ್ಮಾ ಲೋಕಪಿತಾಮಹಃ।
13014141c ದಿವ್ಯಂ ವಿಮಾನಮಾಸ್ಥಾಯ ಹಂಸಯುಕ್ತಂ ಮನೋಜವಮ್।।

ದೇವನ ಬಲಭಾಗದಲ್ಲಿ ಲೋಕಪಿತಾಮಹ ಬ್ರಹ್ಮನು ಮನೋವೇಗದ ಹಂಸಗಳನ್ನು ಕಟ್ಟಿದ್ದ ದಿವ್ಯ ವಿಮಾನದಲ್ಲಿ ಕುಳಿತಿದ್ದನು.

13014142a ವಾಮಪಾರ್ಶ್ವಗತಶ್ಚೈವ ತಥಾ ನಾರಾಯಣಃ ಸ್ಥಿತಃ।
13014142c ವೈನತೇಯಂ ಸಮಾಸ್ಥಾಯ ಶಂಖಚಕ್ರಗದಾಧರಃ।।

ಹಾಗೆಯೇ ಅವನ ಬಲಭಾಗದಲ್ಲಿ ವೈನತೇಯನನ್ನೇರಿ ಶಂಖ-ಚಕ್ರ-ಗದಾಧರ ನಾರಾಯಣನು ನಿಂತಿದ್ದನು.

13014143a ಸ್ಕಂದೋ ಮಯೂರಮಾಸ್ಥಾಯ ಸ್ಥಿತೋ ದೇವ್ಯಾಃ ಸಮೀಪತಃ।
13014143c ಶಕ್ತಿಂ ಕಂಠೇ ಸಮಾದಾಯ ದ್ವಿತೀಯ ಇವ ಪಾವಕಃ।।

ದೇವಿಯ ಸಮೀಪದಲ್ಲಿ ಸ್ಕಂದನು ಶಕ್ತಿಯನ್ನು ಕಂಠದಲ್ಲಿ ಧರಿಸಿ ಮಯೂರವನ್ನೇರಿ ಎರಡನೆಯ ಅಗ್ನಿಯೋ ಎಂಬಂತೆ ನಿಂತಿದ್ದನು.

13014144a ಪುರಸ್ತಾಚ್ಚೈವ ದೇವಸ್ಯ ನಂದಿಂ ಪಶ್ಯಾಮ್ಯವಸ್ಥಿತಮ್।
13014144c ಶೂಲಂ ವಿಷ್ಟಭ್ಯ ತಿಷ್ಠಂತಂ ದ್ವಿತೀಯಮಿವ ಶಂಕರಮ್।।

ದೇವನ ಎದುರಿಗೆ ಎರಡನೆಯ ಶಂಕರನೋ ಎನ್ನುವಂತೆ ಶೂಲವನ್ನು ಮೇಲೆತ್ತಿದ್ದ ನಂದಿಯು ನಿಂತಿರುವುದನ್ನು ನೋಡಿದೆನು.

13014145a ಸ್ವಾಯಂಭುವಾದ್ಯಾ ಮನವೋ ಭೃಗ್ವಾದ್ಯಾ ಋಷಯಸ್ತಥಾ।
13014145c ಶಕ್ರಾದ್ಯಾ ದೇವತಾಶ್ಚೈವ ಸರ್ವ ಏವ ಸಮಭ್ಯಯುಃ।।

ಸ್ವಾಯಂಭು ಮೊದಲಾದ ಮನುಗಳೂ, ಭೃಗುವೇ ಮೊದಲಾದ ಋಷಿಗಳೂ, ಶಕ್ರನೇ ಮೊದಲಾದ ದೇವತೆಗಳು ಎಲ್ಲರೂ ಅಲ್ಲಿಗೆ ಬಂದು ಸೇರಿದ್ದರು.

13014146a ತೇಽಭಿವಾದ್ಯ ಮಹಾತ್ಮಾನಂ ಪರಿವಾರ್ಯ ಸಮಂತತಃ।
13014146c ಅಸ್ತುವನ್ವಿವಿಧೈಃ ಸ್ತೋತ್ರೈರ್ಮಹಾದೇವಂ ಸುರಾಸ್ತದಾ।।

ಮಹಾತ್ಮ ಶಿವನನ್ನು ಸುತ್ತುವರೆದು ಅವನಿಗೆ ನಮಸ್ಕರಿಸಿ ಸುರರು ಮಹಾದೇವನನ್ನು ವಿವಿಧ ಸ್ತೋತ್ರಗಳಿಂದ ಸ್ತುತಿಸಿದರು.

13014147a ಬ್ರಹ್ಮಾ ಭವಂ ತದಾ ಸ್ತುನ್ವನ್ರಥಂತರಮುದೀರಯನ್।
13014147c ಜ್ಯೇಷ್ಠಸಾಮ್ನಾ ಚ ದೇವೇಶಂ ಜಗೌ ನಾರಾಯಣಸ್ತದಾ।
13014147e ಗೃಣನ್ ಶಕ್ರಃ ಪರಂ ಬ್ರಹ್ಮ ಶತರುದ್ರೀಯಮುತ್ತಮಮ್।।

ಬ್ರಹ್ಮನು ರಥಂತರಸಾಮದಿಂದ ಭವನನ್ನು ಸ್ತುತಿಸಿದನು. ನಾರಾಯಣನು ಜ್ಯೇಷ್ಠಸಾಮದಿಂದ ದೇವೇಶನನ್ನು ಸ್ತುತಿಸಿದನು. ಶಕ್ರನು ಶತರುದ್ರೀಯದಿಂದ ಆ ಪರಬ್ರಹ್ಮನನ್ನು ಸ್ತುತಿಸಿದನು.

13014148a ಬ್ರಹ್ಮಾ ನಾರಾಯಣಶ್ಚೈವ ದೇವರಾಜಶ್ಚ ಕೌಶಿಕಃ।
13014148c ಅಶೋಭಂತ ಮಹಾತ್ಮಾನಸ್ತ್ರಯಸ್ತ್ರಯ ಇವಾಗ್ನಯಃ।।

ಆಗ ಬ್ರಹ್ಮ, ನಾರಾಯಣ ಮತ್ತು ದೇವರಾಜ ಕೌಶಿಕ – ಈ ಮೂವರು ಮಹಾತ್ಮರು ಮೂರು ಅಗ್ನಿಗಳಂತೆ ಶೋಭಿಸುತ್ತಿದ್ದರು.

13014149a ತೇಷಾಂ ಮಧ್ಯಗತೋ ದೇವೋ ರರಾಜ ಭಗವಾನ್ ಶಿವಃ।
13014149c ಶರದ್ಘನವಿನಿರ್ಮುಕ್ತಃ ಪರಿವಿಷ್ಟ ಇವಾಂಶುಮಾನ್।
13014149e ತತೋಽಹಮಸ್ತುವಂ ದೇವಂ ಸ್ತವೇನಾನೇನ ಸುವ್ರತಮ್।।

ಅವರ ಮಧ್ಯದಲ್ಲಿದ್ದ ಭಗವಾನ್ ಶಿವನು ಮಳೆಗಾಲದ ಮೋಡಗಳಿಂದ ವಿಮುಕ್ತನಾದ ಸೂರ್ಯನಂತೆ ರಾರಾಜಿಸಿದನು. ಆಗ ನಾನು ಸುವ್ರತ ದೇವನನ್ನು ಈ ಸ್ತವದಿಂದ ಸ್ತುತಿಸಿದೆನು.

13014150a ನಮೋ ದೇವಾಧಿದೇವಾಯ ಮಹಾದೇವಾಯ ವೈ ನಮಃ।
13014150c ಶಕ್ರಾಯ ಶಕ್ರರೂಪಾಯ ಶಕ್ರವೇಷಧರಾಯ ಚ।।

“ದೇವಾಧಿದೇವನಿಗೆ ನಮಸ್ಕಾರ! ಮಹಾದೇವನಿಗೆ ನಮಸ್ಕಾರ! ಶಕ್ರರೂಪದ ಶಕ್ರವೇಷವನ್ನು ಧರಿಸಿದ ಶಕ್ರನಿಗೆ ನಮಸ್ಕಾರ!

13014151a ನಮಸ್ತೇ ವಜ್ರಹಸ್ತಾಯ ಪಿಂಗಲಾಯಾರುಣಾಯ ಚ।
13014151c ಪಿನಾಕಪಾಣಯೇ ನಿತ್ಯಂ ಖಡ್ಗಶೂಲಧರಾಯ ಚ।।

ಪಿಂಗಲ ಮತ್ತು ಅರುಣವರ್ಣದ ವಜ್ರಹಸ್ತ, ಪಿನಾಕಪಾಣೀ, ನಿತ್ಯ, ಖಡ್ಗಶೂಲಧರ – ನಿನಗೆ ನಮಸ್ಕಾರ!

13014152a ನಮಸ್ತೇ ಕೃಷ್ಣವಾಸಾಯ ಕೃಷ್ಣಕುಂಚಿತಮೂರ್ಧಜೇ।
13014152c ಕೃಷ್ಣಾಜಿನೋತ್ತರೀಯಾಯ ಕೃಷ್ಣಾಷ್ಟಮಿರತಾಯ ಚ।।

ಕಪ್ಪು ವಸ್ತ್ರವನ್ನು ಧರಿಸಿರುವ, ಕಪ್ಪು ಗುಂಗುರು ಕೂದಲುಳ್ಳ, ಕೃಷ್ಣಾಜಿನವನ್ನೇ ಉತ್ತರೀಯವನ್ನಾಗಿ ಹೊದ್ದಿರುವ, ಕೃಷ್ಣಾಷ್ಟಮೀ ವ್ರತರತನಾಗಿರುವ ನಿನಗೆ ನಮಸ್ಕಾರ!

13014153a ಶುಕ್ಲವರ್ಣಾಯ ಶುಕ್ಲಾಯ ಶುಕ್ಲಾಂಬರಧರಾಯ ಚ।
13014153c ಶುಕ್ಲಭಸ್ಮಾವಲಿಪ್ತಾಯ ಶುಕ್ಲಕರ್ಮರತಾಯ ಚ।।

ಶುಕ್ಲವರ್ಣನೇ, ಶುಕ್ಲನೇ, ಶುಕ್ಲಾಂಬರಧರನೇ, ಶುಕ್ಲಭಸ್ಮವನ್ನು ಲೇಪಿಸಿಕೊಂಡಿರುವವನೇ, ಶುದ್ಧಕರ್ಮರತನೇ ನಿನಗೆ ನಮಸ್ಕಾರ!

713014154a ತ್ವಂ ಬ್ರಹ್ಮಾ ಸರ್ವದೇವಾನಾಂ ರುದ್ರಾಣಾಂ ನೀಲಲೋಹಿತಃ।
13014154c ಆತ್ಮಾ ಚ ಸರ್ವಭೂತಾನಾಂ ಸಾಂಖ್ಯೇ ಪುರುಷ ಉಚ್ಯಸೇ।।

ನೀನು ಸರ್ವದೇವತೆಗಳ ಮತ್ತು ರುದ್ರರ ಬ್ರಹ್ಮ. ನೀಲಲೋಹಿತನಾದ ನೀನು ಸರ್ವಭೂತಗಳ ಆತ್ಮ. ಸಾಂಖ್ಯದಲ್ಲಿ ನಿನ್ನನ್ನು ಪುರುಷನೆಂದು ಕರೆಯುತ್ತಾರೆ.

13014155a ಋಷಭಸ್ತ್ವಂ ಪವಿತ್ರಾಣಾಂ ಯೋಗಿನಾಂ ನಿಷ್ಕಲಃ ಶಿವಃ।
13014155c ಆಶ್ರಮಾಣಾಂ ಗೃಹಸ್ಥಸ್ತ್ವಮೀಶ್ವರಾಣಾಂ ಮಹೇಶ್ವರಃ।
13014155e ಕುಬೇರಃ ಸರ್ವಯಕ್ಷಾಣಾಂ ಕ್ರತೂನಾಂ ವಿಷ್ಣುರುಚ್ಯಸೇ।।

ಋಷಭನು ನೀನು, ಪವಿತ್ರ ಯೋಗಿಗಳಲ್ಲಿ ನಿಷ್ಕಲನಾದ ಶಿವನು ನೀನು. ಗೃಹಸ್ಥಾಶ್ರಮಿಗಳ ಈಶ್ವರರ ಮಹೇಶ್ವರನು ನೀನು. ಸರ್ವಯಕ್ಷರಲ್ಲಿ ಕುಬೇರನು ನೀನು.

13014156a ಪರ್ವತಾನಾಂ ಮಹಾಮೇರುರ್ನಕ್ಷತ್ರಾಣಾಂ ಚ ಚಂದ್ರಮಾಃ।
13014156c ವಸಿಷ್ಠಸ್ತ್ವಮೃಷೀಣಾಂ ಚ ಗ್ರಹಾಣಾಂ ಸೂರ್ಯ ಉಚ್ಯಸೇ।।

ಕ್ರತುಗಳಲ್ಲಿ ನಿನ್ನನ್ನು ವಿಷ್ಣುವೆನ್ನುತ್ತಾರೆ. ಪರ್ವತಗಳಲ್ಲಿ ಮಹಾಮೇರುವೂ ಮತ್ತು ನಕ್ಷತ್ರಗಳಲ್ಲಿ ಚಂದ್ರಮನೂ ನೀನೇ. ಋಷಿಗಳಲ್ಲಿ ನೀನು ವಸಿಷ್ಠನೆಂದೂ ಗ್ರಹಗಳಲ್ಲಿ ಸೂರ್ಯನೆಂದೂ ಕರೆಯಲ್ಪಡುವೆ.

13014157a ಆರಣ್ಯಾನಾಂ ಪಶೂನಾಂ ಚ ಸಿಂಹಸ್ತ್ವಂ ಪರಮೇಶ್ವರಃ।
13014157c ಗ್ರಾಮ್ಯಾಣಾಂ ಗೋವೃಷಶ್ಚಾಸಿ ಭಗವಾಽಲ್ಲೋಕಪೂಜಿತಃ।।

ಪರಮೇಶ್ವರ! ಅರಣ್ಯದ ಪಶುಗಳಲ್ಲಿ ಸಿಂಹವು ನೀನು. ಭಗವನ್! ಗ್ರಾಮ್ಯಪಶುಗಳಲ್ಲಿ ನೀನು ಲೋಕಪೂಜಿತನಾದ ವೃಷಭನಾಗಿರುವೆ.

13014158a ಆದಿತ್ಯಾನಾಂ ಭವಾನ್ವಿಷ್ಣುರ್ವಸೂನಾಂ ಚೈವ ಪಾವಕಃ।
13014158c ಪಕ್ಷಿಣಾಂ ವೈನತೇಯಶ್ಚ ಅನಂತೋ ಭುಜಗೇಷು ಚ।।

ಆದಿತ್ಯರಲ್ಲಿ ನೀನು ವಿಷ್ಣುವೂ, ವಸುಗಳಲ್ಲಿ ಪಾವಕನೂ, ಪಕ್ಷಿಗಳಲ್ಲಿ ವೈನತೇಯನೂ, ಸರ್ಪಗಳಲ್ಲಿ ಅನಂತನೂ ಆಗಿರುವೆ.

13014159a ಸಾಮವೇದಶ್ಚ ವೇದಾನಾಂ ಯಜುಷಾಂ ಶತರುದ್ರಿಯಮ್।
13014159c ಸನತ್ಕುಮಾರೋ ಯೋಗೀನಾಂ ಸಾಂಖ್ಯಾನಾಂ ಕಪಿಲೋ ಹ್ಯಸಿ।।

ವೇದಗಳಲ್ಲಿ ಸಾಮವೇದವೂ, ಯಜಸ್ಸುಗಳಲ್ಲಿ ಶತರುದ್ರೀಯವೂ, ಯೋಗಿಗಳಲ್ಲಿ ಸನತ್ಕುಮಾರನೂ, ಸಾಂಖ್ಯರಲ್ಲಿ ಕಪಿಲನೂ ಆಗಿರುವೆ.

13014160a ಶಕ್ರೋಽಸಿ ಮರುತಾಂ ದೇವ ಪಿತೄಣಾಂ ಧರ್ಮರಾಡಸಿ।
13014160c ಬ್ರಹ್ಮಲೋಕಶ್ಚ ಲೋಕಾನಾಂ ಗತೀನಾಂ ಮೋಕ್ಷ ಉಚ್ಯಸೇ।।

ದೇವ! ಮರುತ್ತರಲ್ಲಿ ಶಕ್ರನೂ ಮತ್ತು ಪಿತೃಗಳಲ್ಲಿ ಧರ್ಮರಾಜನೂ ಆಗಿರುವೆ. ಲೋಕಗಳಲ್ಲಿ ಬ್ರಹ್ಮಲೋಕವೆಂದೂ, ಗತಿಗಳಲ್ಲಿ ಮೋಕ್ಷವೆಂದೂ ಕರೆಯಲ್ಪಟ್ಟಿರುವೆ.

13014161a ಕ್ಷೀರೋದಃ ಸಾಗರಾಣಾಂ ಚ ಶೈಲಾನಾಂ ಹಿಮವಾನ್ಗಿರಿಃ।
13014161c ವರ್ಣಾನಾಂ ಬ್ರಾಹ್ಮಣಶ್ಚಾಸಿ ವಿಪ್ರಾಣಾಂ ದೀಕ್ಷಿತೋ ದ್ವಿಜಃ।
13014161e ಆದಿಸ್ತ್ವಮಸಿ ಲೋಕಾನಾಂ ಸಂಹರ್ತಾ ಕಾಲ ಏವ ಚ।।

ಸಾಗರಗಳಲ್ಲಿ ಕ್ಷೀರಸಾಗರನೂ, ಶೈಲಗಳಲ್ಲಿ ಹಿಮವಾನ್ ಗಿರಿಯೂ, ವರ್ಣಗಳಲ್ಲಿ ಬ್ರಾಹ್ಮಣನೂ, ವಿಪ್ರರಲ್ಲಿ ದೀಕ್ಷಿತ ದ್ವಿಜನೂ, ಮತ್ತು ಲೋಕಗಳ ಆದಿ, ಸಂಹರ್ತ ಮತ್ತು ಕಾಲನೂ ನೀನೇ ಅಗಿರುವೆ.

13014162a ಯಚ್ಚಾನ್ಯದಪಿ ಲೋಕೇಷು ಸತ್ತ್ವಂ ತೇಜೋಧಿಕಂ ಸ್ಮೃತಮ್।
13014162c ತತ್ಸರ್ವಂ ಭಗವಾನೇವ ಇತಿ ಮೇ ನಿಶ್ಚಿತಾ ಮತಿಃ।।

ಭಗವಾನ್! ಲೋಕಗಳಲ್ಲಿ ಬೇರೆ ಯಾವುದಾದರೂ ಅಧಿಕ ಸತ್ತ್ವ ತೇಜಗಳಿಂದ ಕೂಡಿರುವುದಿದ್ದರೆ ಅವೆಲ್ಲವೂ ನೀನೇ ಎಂದು ನನಗನ್ನಿಸುತ್ತದೆ.

13014163a ನಮಸ್ತೇ ಭಗವನ್ದೇವ ನಮಸ್ತೇ ಭಕ್ತವತ್ಸಲ।
13014163c ಯೋಗೇಶ್ವರ ನಮಸ್ತೇಽಸ್ತು ನಮಸ್ತೇ ವಿಶ್ವಸಂಭವ।।

ಭಗವನ್! ದೇವ! ನಿನಗೆ ನಮಸ್ಕಾರ! ಭಕ್ತವತ್ಸಲ! ನಿನಗೆ ನಮಸ್ಕಾರ! ಯೋಗೇಶ್ವರ! ನಿನಗೆ ನಮಸ್ಕಾರ! ವಿಶ್ವಸಂಭವ! ನಿನಗೆ ನಮಸ್ಕಾರ!

13014164a ಪ್ರಸೀದ ಮಮ ಭಕ್ತಸ್ಯ ದೀನಸ್ಯ ಕೃಪಣಸ್ಯ ಚ।
13014164c ಅನೈಶ್ವರ್ಯೇಣ ಯುಕ್ತಸ್ಯ ಗತಿರ್ಭವ ಸನಾತನ।।

ದೀನನೂ ಕೃಪಣನೂ ಆದ ಈ ಭಕ್ತನ ಮೇಲೆ ಕೃಪೆದೋರು! ಅನ್ಯ ಐಶ್ವರ್ಯಗಳಿಂದ ಯುಕ್ತನಾಗಿರುವ ಸನಾತನ! ನೀನೇ ನನ್ನ ಗತಿಯಾಗು!

13014165a ಯಂ ಚಾಪರಾಧಂ ಕೃತವಾನಜ್ಞಾನಾತ್ಪರಮೇಶ್ವರ।
13014165c ಮದ್ಭಕ್ತ ಇತಿ ದೇವೇಶ ತತ್ಸರ್ವಂ ಕ್ಷಂತುಮರ್ಹಸಿ।।

ಪರಮೇಶ್ವರ! ದೇವೇಶ! ಅಜ್ಞಾನದಿಂದ ಮಾಡಿದ ಅಪರಾಧಗಳನ್ನು ನನ್ನ ಭಕ್ತ ಎಂದು ಅವೆಲ್ಲವನ್ನೂ ಕ್ಷಮಿಸಬೇಕು.

13014166a ಮೋಹಿತಶ್ಚಾಸ್ಮಿ ದೇವೇಶ ತುಭ್ಯಂ ರೂಪವಿಪರ್ಯಯಾತ್।
13014166c ತೇನ ನಾರ್ಘ್ಯಂ ಮಯಾ ದತ್ತಂ ಪಾದ್ಯಂ ಚಾಪಿ ಸುರೇಶ್ವರ।।

ದೇವೇಶ! ಸುರೇಶ್ವರ! ನಿನ್ನ ರೂಪ-ವಿಪರ್ಯಾಸಗಳಿಂದ ಮೋಹಿತನಾಗಿ ನಾನು ನಿನಗೆ ಅರ್ಘ್ಯ-ಪಾದ್ಯಗಳನ್ನು ನೀಡಲಿಲ್ಲ!”

13014167a ಏವಂ ಸ್ತುತ್ವಾಹಮೀಶಾನಂ ಪಾದ್ಯಮರ್ಘ್ಯಂ ಚ ಭಕ್ತಿತಃ।
13014167c ಕೃತಾಂಜಲಿಪುಟೋ ಭೂತ್ವಾ ಸರ್ವಂ ತಸ್ಮೈ ನ್ಯವೇದಯಮ್।।

ಹೀಗೆ ಆ ಈಶಾನನನ್ನು ಸ್ತುತಿಸಿ ನಾನು ಭಕ್ತಿಪೂರ್ವಕವಾಗಿ ಅವನಿಗೆ ಪಾದ್ಯ-ಅರ್ಘ್ಯಗಳನ್ನಿತ್ತು, ಕೈಮುಗಿದು, ಎಲ್ಲವನ್ನೂ ಅವನಿಗೆ ನಿವೇದಿಸಿದೆನು.

13014168a ತತಃ ಶೀತಾಂಬುಸಂಯುಕ್ತಾ ದಿವ್ಯಗಂಧಸಮನ್ವಿತಾ।
13014168c ಪುಷ್ಪವೃಷ್ಟಿಃ ಶುಭಾ ತಾತ ಪಪಾತ ಮಮ ಮೂರ್ಧನಿ।।

ಅಯ್ಯಾ! ಆಗ ಶೀತಲ ನೀರಿನಿಂದ ಕೂಡಿದ, ದಿವ್ಯಗಂಧಗಳಿಂದ ಸಮನ್ವಿತವಾದ ಶುಭ ಪುಷ್ಪವೃಷ್ಟಿಯು ನನ್ನ ನೆತ್ತಿಯ ಮೇಲೆ ಸುರಿಯಿತು.

13014169a ದುಂದುಭಿಶ್ಚ ತತೋ ದಿವ್ಯಸ್ತಾಡಿತೋ ದೇವಕಿಂಕರೈಃ।
13014169c ವವೌ ಚ ಮಾರುತಃ ಪುಣ್ಯಃ ಶುಚಿಗಂಧಃ ಸುಖಾವಹಃ।।

ಆಗ ದೇವಕಿಂಕರರು ದಿವ್ಯ ದುಂದುಭಿಗಳನ್ನು ಮೊಳಗಿಸಿದರು. ಸುಖವನ್ನೀಯುವ ಪುಣ್ಯ ಶುಚಿಗಂಧ ಮಾರುತವೂ ಬೀಸತೊಡಗಿತು.

13014170a ತತಃ ಪ್ರೀತೋ ಮಹಾದೇವಃ ಸಪತ್ನೀಕೋ ವೃಷಧ್ವಜಃ।
13014170c ಅಬ್ರವೀತ್ತ್ರಿದಶಾಂಸ್ತತ್ರ ಹರ್ಷಯನ್ನಿವ ಮಾಂ ತದಾ।।

ಆಗ ಪ್ರೀತನಾದ ಸಪತ್ನೀಕನಾದ ಮಹಾದೇವ ವೃಷಧ್ವಜನು ನನಗೆ ಹರ್ಷವನ್ನೀಯುತ್ತಾ ಅಲ್ಲಿದ್ದ ತ್ರಿದಶರಿಗೆ ಹೇಳಿದನು:

13014171a ಪಶ್ಯಧ್ವಂ ತ್ರಿದಶಾಃ ಸರ್ವೇ ಉಪಮನ್ಯೋರ್ಮಹಾತ್ಮನಃ।
13014171c ಮಯಿ ಭಕ್ತಿಂ ಪರಾಂ ದಿವ್ಯಾಮೇಕಭಾವಾದವಸ್ಥಿತಾಮ್।।

“ಸರ್ವ ತ್ರಿದಶರೇ! ನನ್ನಮೇಲಿನ ದಿವ್ಯ ಅಪ್ರತಿಮ ಭಕ್ತಿಯಿಂದ ಏಕಭಾವದಿಂದ ನಿಂತಿರುವ ಮಹಾತ್ಮ ಉಪಮನ್ಯುವನ್ನು ನೋಡಿರಿ!”

13014172a ಏವಮುಕ್ತಾಸ್ತತಃ ಕೃಷ್ಣ ಸುರಾಸ್ತೇ ಶೂಲಪಾಣಿನಾ।
13014172c ಊಚುಃ ಪ್ರಾಂಜಲಯಃ ಸರ್ವೇ ನಮಸ್ಕೃತ್ವಾ ವೃಷಧ್ವಜಮ್।।

ಕೃಷ್ಣ! ಶೂಲಪಾಣಿಯು ಹೀಗೆ ಹೇಳಲು ಸರ್ವ ಸುರರೂ ವೃಷಧ್ವಜನನ್ನು ಕೈಮುಗಿದು ನಮಸ್ಕರಿಸಿ ಹೇಳಿದರು:

13014173a ಭಗವನ್ದೇವದೇವೇಶ ಲೋಕನಾಥ ಜಗತ್ಪತೇ।
13014173c ಲಭತಾಂ ಸರ್ವಕಾಮೇಭ್ಯಃ ಫಲಂ ತ್ವತ್ತೋ ದ್ವಿಜೋತ್ತಮಃ।।

“ಭಗವನ್! ದೇವದೇವೇಶ! ಲೋಕನಾಥ! ಜಗತ್ಪತೇ! ನಿನ್ನಿಂದ ಈ ದ್ವಿಜೋತ್ತಮನು ತನ್ನ ಸರ್ವಕಾಮನೆಗಳ ಫಲವನ್ನೂ ಪಡೆದುಕೊಳ್ಳಲಿ!”

13014174a ಏವಮುಕ್ತಸ್ತತಃ ಶರ್ವಃ ಸುರೈರ್ಬ್ರಹ್ಮಾದಿಭಿಸ್ತಥಾ।
13014174c ಆಹ ಮಾಂ ಭಗವಾನೀಶಃ ಪ್ರಹಸನ್ನಿವ ಶಂಕರಃ।।

ಸುರ-ಬ್ರಹ್ಮಾದಿಗಳು ಹೀಗೆ ಹೇಳಲು ಶರ್ವ ಈಶ ಭಗವಾನ್ ಶಂಕರನು ನಸುನಗುತ್ತಾ ನನಗೆ ಹೇಳಿದನು:

13014175a ವತ್ಸೋಪಮನ್ಯೋ ಪ್ರೀತೋಽಸ್ಮಿ ಪಶ್ಯ ಮಾಂ ಮುನಿಪುಂಗವ।
13014175c ದೃಢಭಕ್ತೋಽಸಿ ವಿಪ್ರರ್ಷೇ ಮಯಾ ಜಿಜ್ಞಾಸಿತೋ ಹ್ಯಸಿ।।

“ವತ್ಸ! ಉಪಮನ್ಯು! ಮುನಿಪುಂಗವ! ವಿಪ್ರರ್ಷೇ! ಪ್ರೀತನಾಗಿದ್ದೇನೆ. ನನ್ನನ್ನು ನೋಡು! ನನ್ನಿಂದ ಪರೀಕ್ಷಿಸಲ್ಪಟ್ಟ ನೀನು ನನ್ನ ದೃಢಭಕ್ತನಾಗಿರುವೆ!

13014176a ಅನಯಾ ಚೈವ ಭಕ್ತ್ಯಾ ತೇ ಅತ್ಯರ್ಥಂ ಪ್ರೀತಿಮಾನಹಮ್।
13014176c ತಸ್ಮಾತ್ಸರ್ವಾನ್ದದಾಮ್ಯದ್ಯ ಕಾಮಾಂಸ್ತವ ಯಥೇಪ್ಶಿತಾನ್।।

ನಿನ್ನ ಈ ಅನನ್ಯ ಅತ್ಯರ್ಥ ಭಕ್ತಿಯಿಂದ ನಾನು ಪ್ರೀತನಾಗಿದ್ದೇನೆ. ಆದುದರಿಂದ ನೀನು ಬಯಸಿದ ಸರ್ವಕಾಮನೆಗಳನ್ನೂ ಇಂದು ನಾನು ನೀಡುತ್ತೇನೆ.”

13014177a ಏವಮುಕ್ತಸ್ಯ ಚೈವಾಥ ಮಹಾದೇವೇನ ಮೇ ವಿಭೋ।
13014177c ಹರ್ಷಾದಶ್ರೂಣ್ಯವರ್ತಂತ ಲೋಮಹರ್ಷಶ್ಚ ಜಾಯತೇ।।

ವಿಭೋ! ಮಹಾದೇವನು ಹೀಗೆ ಹೇಳಲು ಹರ್ಷದಿಂದ ನನ್ನ ಕಣ್ಣುಗಳಲ್ಲಿ ನೀರು ತುಂಬಿತು. ರೋಮಾಂಚನವಾಯಿತು.

13014178a ಅಬ್ರುವಂ ಚ ತದಾ ದೇವಂ ಹರ್ಷಗದ್ಗದಯಾ ಗಿರಾ।
13014178c ಜಾನುಭ್ಯಾಮವನಿಂ ಗತ್ವಾ ಪ್ರಣಮ್ಯ ಚ ಪುನಃ ಪುನಃ।।

ಆಗ ನೆಲದ ಮೇಲೆ ಮಂಡಿಯೂರಿ ಪುನಃ ಪುನಃ ನಮಸ್ಕರಿಸುತ್ತಾ ಹರ್ಷಗದ್ಗದ ಧ್ವನಿಯಲ್ಲಿ ಆ ದೇವನಿಗೆ ಹೇಳಿದೆನು:

13014179a ಅದ್ಯ ಜಾತೋ ಹ್ಯಹಂ ದೇವ ಅದ್ಯ ಮೇ ಸಫಲಂ ತಪಃ।
13014179c ಯನ್ಮೇ ಸಾಕ್ಷಾನ್ಮಹಾದೇವಃ ಪ್ರಸನ್ನಸ್ತಿಷ್ಠತೇಽಗ್ರತಃ।।

“ದೇವ! ಸಾಕ್ಷಾತ್ ಮಹಾದೇವನೇ ಪ್ರಸನ್ನನಾಗಿ ನನ್ನ ಮುಂದೆ ನಿಂತಿರುವನೆಂದರೆ ಇಂದೇ ನನ್ನ ಜನ್ಮವಾಯಿತು! ಇಂದು ನನ್ನ ತಪಸ್ಸು ಫಲಿಸಿತು!

13014180a ಯಂ ನ ಪಶ್ಯಂತಿ ಚಾರಾಧ್ಯ ದೇವಾ ಹ್ಯಮಿತವಿಕ್ರಮಮ್।
13014180c ತಮಹಂ ದೃಷ್ಟವಾನ್ದೇವಂ ಕೋಽನ್ಯೋ ಧನ್ಯತರೋ ಮಯಾ।।

ದೇವ! ಆರಾಧ್ಯದೇವ ಅಮಿತವಿಕ್ರಮನಾದ ನಿನ್ನನ್ನು ನಾನು ನೋಡುತ್ತಿದ್ದೇನೆಂದರೆ ನನಗಿಂತಲೂ ಅಧಿಕ ಧನ್ಯನು ಬೇರೆ ಯಾರಿದ್ದಾರೆ?

13014181a ಏವಂ ಧ್ಯಾಯಂತಿ ವಿದ್ವಾಂಸಃ ಪರಂ ತತ್ತ್ವಂ ಸನಾತನಮ್।
13014181c ಷಡ್ವಿಂಶಕಮಿತಿ ಖ್ಯಾತಂ ಯತ್ಪರಾತ್ಪರಮಕ್ಷರಮ್।।

ಪರಾತ್ಪರನೂ, ಅಕ್ಷರನೂ, ಷಡ್ವಿಂಶಕನೆಂದು ಖ್ಯಾತನೂ, ಸನಾತನನೂ ಆದ ಈ ಪರಮ ತತ್ತ್ವವನ್ನೇ ವಿದ್ವಾಂಸರು ಧ್ಯಾನಿಸುತ್ತಾರೆ.

13014182a ಸ ಏಷ ಭಗವಾನ್ದೇವಃ ಸರ್ವತತ್ತ್ವಾದಿರವ್ಯಯಃ।
13014182c ಸರ್ವತತ್ತ್ವವಿಧಾನಜ್ಞಃ ಪ್ರಧಾನಪುರುಷೇಶ್ವರಃ।।

ಅವನೇ ಭಗವಾನ್ ದೇವ! ಸರ್ವತತ್ತ್ವ. ಆದಿ ಮತ್ತು ಅವ್ಯಯ. ಸರ್ವತತ್ತ್ವವಿಧಾನಗಳನ್ನೂ ತಿಳಿದವನು! ಪ್ರಧಾನ ಪುರುಷ ಮತ್ತು ಈಶ್ವರ!

13014183a ಯೋಽಸೃಜದ್ದಕ್ಷಿಣಾದಂಗಾದ್ಬ್ರಹ್ಮಾಣಂ ಲೋಕಸಂಭವಮ್।
13014183c ವಾಮಪಾರ್ಶ್ವಾತ್ತಥಾ ವಿಷ್ಣುಂ ಲೋಕರಕ್ಷಾರ್ಥಮೀಶ್ವರಃ।
13014183e ಯುಗಾಂತೇ ಚೈವ ಸಂಪ್ರಾಪ್ತೇ ರುದ್ರಮಂಗಾತ್ಸೃಜತ್ಪ್ರಭುಃ।।

ತನ್ನ ಶರೀರದ ಬಲಭಾಗದಿಂದ ಲೋಕಸಂಭವ ಬ್ರಹ್ಮನನ್ನೂ ಎಡಭಾಗದಿಂದ ಲೋಕರಕ್ಷಣೆಗಾಗಿ ವಿಷ್ಣುವನ್ನೂ ಸೃಜಿಸಿದ ಈಶ್ವರ! ಪ್ರಭುವೇ! ಯುಗಾಂತದಲ್ಲಿ ನಿನ್ನ ಅಂಗದಿಂದಲೇ ನೀನು ರುದ್ರನನ್ನು ಸೃಷ್ಟಿಸುತ್ತೀಯೆ!

13014184a ಸ ರುದ್ರಃ ಸಂಹರನ್ ಕೃತ್ಸ್ನಂ ಜಗತ್ ಸ್ಥಾವರಜಂಗಮಮ್।
13014184c ಕಾಲೋ ಭೂತ್ವಾ ಮಹಾತೇಜಾಃ ಸಂವರ್ತಕ ಇವಾನಲಃ।।

ಆ ರುದ್ರನೇ ಸಂವರ್ತಕ ಎನ್ನುವ ಮಹಾತೇಜಸ್ವಿ ಅಗ್ನಿಯಾಗಿ ಸ್ಥಾವರಜಂಗಮ ಸಮೇತವಾದ ಈ ಜಗತ್ತನ್ನು ಸಂಪೂರ್ಣವಾಗಿ ಸಂಹರಿಸುತ್ತಾನೆ.

13014185a ಏಷ ದೇವೋ ಮಹಾದೇವೋ ಜಗತ್ಸೃಷ್ಟ್ವಾ ಚರಾಚರಮ್।
13014185c ಕಲ್ಪಾಂತೇ ಚೈವ ಸರ್ವೇಷಾಂ ಸ್ಮೃತಿಮಾಕ್ಷಿಪ್ಯ ತಿಷ್ಠತಿ।।

ಇದೇ ದೇವ ಮಹಾದೇವನು ಚರಾಚರ ಜಗತ್ತನ್ನು ಸೃಷ್ಟಿಸಿ ಕಲ್ಪಾಂತದಲ್ಲಿ ಎಲ್ಲವನ್ನೂ ನೆನಪನ್ನಾಗಿಸಿಕೊಂಡು ನಿಂತಿರುತ್ತಾನೆ.

13014186a ಸರ್ವಗಃ ಸರ್ವಭೂತಾತ್ಮಾ ಸರ್ವಭೂತಭವೋದ್ಭವಃ।
13014186c ಆಸ್ತೇ ಸರ್ವಗತೋ ನಿತ್ಯಮದೃಶ್ಯಃ ಸರ್ವದೈವತೈಃ।।

ಎಲ್ಲದರಲ್ಲಿ ಹರಿಯುವ, ಸರ್ವಭೂತಗಳಲ್ಲಿ ಆತ್ಮಸ್ವರೂಪನಾಗಿರುವ, ಸರ್ವಭೂತಗಳ ಹುಟ್ಟು-ವೃದ್ಧಿಗಳಿಗೆ ಕಾರಣನಾದ ನೀನು ಸರ್ವಗತನಾಗಿ ನಿತ್ಯವೂ ಸರ್ವದೇವತೆಗಳಲ್ಲಿ ಅದೃಶ್ಯನಾಗಿರುವೆ!

13014187a ಯದಿ ದೇಯೋ ವರೋ ಮಹ್ಯಂ ಯದಿ ತುಷ್ಟಶ್ಚ ಮೇ ಪ್ರಭುಃ।
13014187c ಭಕ್ತಿರ್ಭವತು ಮೇ ನಿತ್ಯಂ ಶಾಶ್ವತೀ ತ್ವಯಿ ಶಂಕರ।।

ಪ್ರಭು! ಶಂಕರ! ನೀನು ನನ್ನ ಮೇಲೆ ತುಷ್ಟನಾಗಿದ್ದರೆ ಮತ್ತು ನನಗೆ ವರವನ್ನು ಕೊಡುವುದಾದರೆ ನನಗೆ ನಿನ್ನ ಮೇಲೆ ನಿತ್ಯವೂ ಶಾಶ್ವತ ಭಕ್ತಿಯು ಇರಲಿ!

13014188a ಅತೀತಾನಾಗತಂ ಚೈವ ವರ್ತಮಾನಂ ಚ ಯದ್ವಿಭೋ।
13014188c ಜಾನೀಯಾಮಿತಿ ಮೇ ಬುದ್ಧಿಸ್ತ್ವತ್ಪ್ರಸಾದಾತ್ಸುರೋತ್ತಮ।।

ವಿಭೋ! ಸುರೋತ್ತಮ! ನಿನ್ನ ಪ್ರಸಾದದಿಂದ ಆಗಿಹೋಗಿರುವ, ಮುಂದೆ ಆಗಲಿರುವ ಮತ್ತು ವರ್ತಮಾನಗಳನ್ನು ನನ್ನ ಬುದ್ಧಿಯಿಂದ ತಿಳಿಯಬಯಸುತ್ತೇನೆ.

13014189a ಕ್ಷೀರೋದನಂ ಚ ಭುಂಜೀಯಾಮಕ್ಷಯಂ ಸಹ ಬಾಂಧವೈಃ।
13014189c ಆಶ್ರಮೇ ಚ ಸದಾ ಮಹ್ಯಂ ಸಾಂನಿಧ್ಯಂ ಪರಮಸ್ತು ತೇ।।

ಬಾಂಧವರೊಂದಿಗೆ ನಾನು ಅಕ್ಷಯವಾದ ಕ್ಷೀರಾನ್ನವನ್ನು ಭುಂಜಿಸುವಂತಾಗಲಿ! ನನ್ನ ಆಶ್ರಮದಲ್ಲಿ ಸದಾ ನಿನ್ನ ಪರಮ ಸಾನ್ನಿಧ್ಯವು ದೊರೆಯುವಂತಾಗಲಿ!”

13014190a ಏವಮುಕ್ತಃ ಸ ಮಾಂ ಪ್ರಾಹ ಭಗವಾಽಲ್ಲೋಕಪೂಜಿತಃ।
13014190c ಮಹೇಶ್ವರೋ ಮಹಾತೇಜಾಶ್ಚರಾಚರಗುರುಃ ಪ್ರಭುಃ।।

ಹಾಗೆ ಹೇಳಿದ ನನಗೆ ಭಗವಾನ್ ಲೋಕಪೂಜಿತ ಪ್ರಭು ಚರಾಚರಗುರು ಮಹಾತೇಜಸ್ವೀ ಮಹೇಶ್ವರನು ಹೇಳಿದನು:

13014191a ಅಜರಶ್ಚಾಮರಶ್ಚೈವ ಭವ ದುಃಖವಿವರ್ಜಿತಃ।
13014191c ಶೀಲವಾನ್ಗುಣಸಂಪನ್ನಃ ಸರ್ವಜ್ಞಃ ಪ್ರಿಯದರ್ಶನಃ।।

“ಅಜರಾಮರನಾಗಿ ನೀನು ದುಃಖವನ್ನು ಕಳೆದುಕೊಂಡು ಶೀಲವಂತನೂ, ಗುಣಸಂಪನ್ನನೂ, ಸರ್ವಜ್ಞನೂ, ಸುಂದರನೂ ಆಗುವೆ!

13014192a ಅಕ್ಷಯಂ ಯೌವನಂ ತೇಽಸ್ತು ತೇಜಶ್ಚೈವಾನಲೋಪಮಮ್।
13014192c ಕ್ಷೀರೋದಃ ಸಾಗರಶ್ಚೈವ ಯತ್ರ ಯತ್ರೇಚ್ಚಸೇ ಮುನೇ।।

ನಿನ್ನ ಯೌವನವು ಅಕ್ಷಯವಾಗಲಿ. ನಿನ್ನ ತೇಜಸ್ಸು ಅಗ್ನಿಯ ತೇಜಸ್ಸಿನಂತಾಗಲಿ. ಮುನೇ! ನೀನು ಬಯಸಿದಲ್ಲೆಲ್ಲಾ ಕ್ಷೀರಸಾಗರವೇ ನಿನಗೆ ದೊರಕಲಿ!

13014193a ತತ್ರ ತೇ ಭವಿತಾ ಕಾಮಂ ಸಾಂನಿಧ್ಯಂ ಪಯಸೋ ನಿಧೇಃ।
13014193c ಕ್ಷೀರೋದನಂ ಚ ಭುಂಕ್ಷ್ವ ತ್ವಮಮೃತೇನ ಸಮನ್ವಿತಮ್।।
13014194a ಬಂಧುಭಿಃ ಸಹಿತಃ ಕಲ್ಪಂ ತತೋ ಮಾಮುಪಯಾಸ್ಯಸಿ।
13014194c ಸಾನ್ನಿಧ್ಯಮಾಶ್ರಮೇ ನಿತ್ಯಂ ಕರಿಷ್ಯಾಮಿ ದ್ವಿಜೋತ್ತಮ।।

ಕ್ಷೀರಸಾಗರದ ಸಾನ್ನಿಧ್ಯದಲ್ಲಿ ನಿನ್ನ ಬಯಕೆಯಂತೆ ಅಮೃತಸಮಾನ ಕ್ಷೀರಾನ್ನವನ್ನು ನಿನ್ನ ಬಂಧುಗಳೊಡನೆ ಭುಂಜಿಸು! ಕಲ್ಪವು ಮುಗಿಯಲು ನೀನು ನನ್ನ ಬಳಿ ಬರುತ್ತೀಯೆ. ದ್ವಿಜೋತ್ತಮ! ನಿನ್ನ ಆಶ್ರಮದಲ್ಲಿ ನಿತ್ಯವೂ ನನ್ನ ಸಾನ್ನಿಧ್ಯವನ್ನು ಮಾಡಿಕೊಡುತ್ತೇನೆ.

13014195a ತಿಷ್ಠ ವತ್ಸ ಯಥಾಕಾಮಂ ನೋತ್ಕಂಠಾಂ ಕರ್ತುಮರ್ಹಸಿ।
13014195c ಸ್ಮೃತಃ ಸ್ಮೃತಶ್ಚ ತೇ ವಿಪ್ರ ಸದಾ ದಾಸ್ಯಾಮಿ ದರ್ಶನಮ್।।

ವತ್ಸ! ಎದ್ದೇಳು! ಬಯಸಿದಂತೆ ಇರು. ಉದ್ವೇಗಪಡಬೇಕಾಗಿಲ್ಲ. ವಿಪ್ರ! ಸದಾ ನೀನು ಸ್ಮರಿಸಿದಾಗಲೆಲ್ಲಾ ನಿನಗೆ ದರ್ಶನವನ್ನೀಯುತ್ತೇನೆ!”

13014196a ಏವಮುಕ್ತ್ವಾ ಸ ಭಗವಾನ್ಸೂರ್ಯಕೋಟಿಸಮಪ್ರಭಃ।
13014196c ಮಮೇಶಾನೋ ವರಂ ದತ್ತ್ವಾ ತತ್ರೈವಾಂತರಧೀಯತ।।

ಹೀಗೆ ಹೇಳಿ ಕೋಟಿಸೂರ್ಯಗಳ ಸಮನಾದ ಪ್ರಭೆಯಿದ್ದ ಆ ಈಶಾನ ಭಗವಂತನು ನನಗೆ ವರವನ್ನಿತ್ತು ಅಲ್ಲಿಯೇ ಅಂತರ್ಧಾನನಾದನು.

13014197a ಏವಂ ದೃಷ್ಟೋ ಮಯಾ ಕೃಷ್ಣ ದೇವದೇವಃ ಸಮಾಧಿನಾ।
13014197c ತದವಾಪ್ತಂ ಚ ಮೇ ಸರ್ವಂ ಯದುಕ್ತಂ ತೇನ ಧೀಮತಾ।।

ಕೃಷ್ಣ! ಹೀಗೆ ನಾನು ಸಮಾಧಿಯಿಂದ ಆ ದೇವದೇವನನ್ನು ನೋಡಿದೆನು. ಆ ಧೀಮಂತನು ನಿನಗೆ ನಾನು ಹೇಳಿದಂತೆ ಎಲ್ಲವನ್ನೂ ನನಗೆ ದಯಪಾಲಿಸಿದನು.

13014198a ಪ್ರತ್ಯಕ್ಷಂ ಚೈವ ತೇ ಕೃಷ್ಣ ಪಶ್ಯ ಸಿದ್ಧಾನ್ವ್ಯವಸ್ಥಿತಾನ್।
13014198c ಋಷೀನ್ವಿದ್ಯಾಧರಾನ್ಯಕ್ಷಾನ್ಗಂಧರ್ವಾಪ್ಸರಸಸ್ತಥಾ।।

ಕೃಷ್ಣ! ವ್ಯವಸ್ಥಿತರಾಗಿರುವ ಸಿದ್ಧರನ್ನೂ, ಋಷಿಗಳನ್ನೂ, ವಿದ್ಯಾಧರರನ್ನೂ, ಯಕ್ಷರನ್ನೂ, ಗಂಧರ್ವ-ಅಪ್ಸರೆಯರನ್ನೂ ಪ್ರತ್ಯಕ್ಷವಾಗಿ ನೋಡು!

13014199a ಪಶ್ಯ ವೃಕ್ಷಾನ್ಮನೋರಮ್ಯಾನ್ಸದಾ ಪುಷ್ಪಫಲಾನ್ವಿತಾನ್।।
13014199c ಸರ್ವರ್ತುಕುಸುಮೈರ್ಯುಕ್ತಾನ್ಸ್ನಿಗ್ಧಪತ್ರಾನ್ಸುಶಾಖಿನಃ।
13014199e ಸರ್ವಮೇತನ್ಮಹಾಬಾಹೋ ದಿವ್ಯಭಾವಸಮನ್ವಿತಮ್।।

ಮಹಾಬಾಹೋ! ಸದಾ ಪುಷ್ಪ-ಫಲಗಳಿಂದ ಕೂಡಿರುವ, ಸುಂದರ ಶಾಖೆಗಳಲ್ಲೆಲ್ಲಾ ಎಳೆಯ ಎಲೆಗಳು ಮತ್ತು ಕುಸುಮಗಳಿಂದ ಮನೋರಮ ವೃಕ್ಷಗಳನ್ನು ನೋಡು. ಇಲ್ಲಿ ಸರ್ವವೂ ದಿವ್ಯಭಾವಗಳಿಂದ ಕೂಡಿವೆ!”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಮೇಘವಾಹನಪರ್ವಾಖ್ಯಾನೇ ಚತುರ್ದಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಮೇಘವಾಹನಪರ್ವಾಖ್ಯಾನ ಎನ್ನುವ ಹದಿನಾಲ್ಕನೇ ಅಧ್ಯಾಯವು.


  1. ಇದಕ್ಕೆ ಮೊದಲು ಈ ಕೆಳಗಿನ ಶ್ಲೋಕಗಳಿವೆ: ಭೀಷ್ಮ ಉವಾಚ। ಅಶಕ್ತೋಽಹಂ ಗುಣಾನ್ವಕ್ತುಂ ಮಹಾದೇವಸ್ಯ ಧೀಮತಃ। ಯೋ ಹಿ ಸರ್ವಗತೋ ದೇವೋ ನ ಚ ಸರ್ವತ್ರ ದೃಶ್ಯತೇ।। ಬ್ರಹ್ಮವಿಷ್ಣುಸುರೇಶನಾಂ ಸ್ರಷ್ಟಾ ಚ ಪ್ರಭುರೇವ ಚ। ಬ್ರಹ್ಮಾದಯಃ ಪಿಶಾಚಾಂತಾ ಯಂ ಹಿ ದೇವಾ ಉಪಾಸತೇ।। ಪ್ರಕೃತೀನಾಂ ಪರತ್ವೇನ ಪುರಷಸ್ಯ ಚ ಯಃ ಪರಃ। ಚಿಂತ್ಯತೇ ಯೋ ಯೋಗವಿದ್ಭಿಋಷಿಭಿಸ್ತತ್ವದರ್ಶಭಿಃ। ಅಕ್ಷರಂ ಪರಮಂ ಬ್ರಹ್ಮ ಅಸಚ್ಚ ಸದಸಚ್ಚ ಯಃ।। ಪ್ರಕೃತಿಂ ಪುರುಷಂ ಚೈವ ಕ್ಷೋಭಯಿತ್ವಾ ಸ್ವತೇಜಸಾ। ಬ್ರಹ್ಮಾಣಮಸೃಜತ್ತಸ್ಮಾದ್ದೇವದೇವಃ ಪ್ರಜಾಪತಿಃ।। ಕೋ ಹಿ ಶಕ್ತೋ ಗುಣಾನ್ವಕ್ತುಂ ದೇವದೇವಸ್ಯ ಧೀಮತಃ। ಗರ್ಭಜನ್ಮಜರಾಯುಕ್ತೋ ಮರ್ತ್ಯೋ ಮೃತ್ಯುಸಮನ್ವಿತಃ।। ಕೋ ಹಿ ಶಕ್ತೋಭವಂ ಜ್ಞಾತುಂ ಬದ್ವಿಧಃ ಪರಮೇಶ್ವರಮ್। ಋತೇ ನಾರಾಯಣಾತ್ ಪುತ್ರ ಶಂಕಚಕ್ರಗದಾಧರಾತ್।। ಏಷ ವಿದ್ವಾನ್ ಗುಣಶ್ರೇಷ್ಠೋ ವಿಷ್ಣುಃ ಪರಮದುರ್ಜಯಃ। ದಿವ್ಯಚಕ್ಷುರ್ಮಹಾತೇಜಾ ವೀಕ್ಷತೇ ಯೋಗಚಕ್ಷುಷಾ।। ರುದ್ರಭಕ್ತ್ಯಾ ತು ಕೃಷ್ಣೇನ ಜಗದ್ವ್ಯಾಪ್ತಂ ಮಹಾತ್ಮನಾ। ತಂ ಪ್ರಸಾದ್ಯ ತದಾ ದೇವಂ ಬದರ್ಯಾಂ ಕಿಲ ಭಾರತ।। ಅರ್ಥಾತ್ ಪ್ರಿಯತರತ್ವಂ ಚ ಸರ್ವಲೋಕೇಷು ವೈ ತದಾ। ಪ್ರಾಪ್ತವಾನೇವ ರಾಜೇಂದ್ರ ಸುವರ್ಣಾಕ್ಷನ್ಮಹೇಶ್ವರಾತ್।। ಪೂರ್ಣಂ ವರ್ಷಸಹಸ್ರಂ ತು ತಪ್ತವಾನೇಷ ಮಾಧವಃ। ಪ್ರಸಾದ್ಯ ವರದಂ ದೇವಂ ಚರಾಚರಗುರುಂ ಶಿವಮ್।। ಯುಗೇ ಯುಗೇ ತು ಕೃಷ್ಣೇನ ತೋಷಿತೋ ವೈ ಮಹೇಶ್ವರಃ। ಭಕ್ತ್ಯಾ ಪರಮಯಾ ಚೈವ ಪ್ರೀತಶ್ಚೈವ ಮಹಾತ್ಮನಃ।। ಐಶ್ವರ್ಯಂ ಯಾದೃಶಂ ತಸ್ಯ ಜಗದ್ಯೋನೇರ್ಮಹಾತ್ಮನಃ। ತದಯಂ ದೃಷ್ಟವಾನ್ ಸಾಕ್ಷಾತ್ ಪುತ್ರಾರ್ಥೇ ಹರಿರಚ್ಯುತಃ।। ಯಸ್ಮಾತ್ ಪರತರಂ ಚೈವ ನಾನ್ಯಂ ಪಶ್ಯಾಮಿ ಭಾರತ। ವ್ಯಾಖ್ಯಾತುಂ ದೇವದೇವಸ್ಯ ಶಕ್ತೋ ನಾಮಾನ್ಯಶೇಷತಃ।। ಏಷ ಶಕ್ತೋ ಮಹಾಬಾಹುರ್ವಕ್ತುಂ ಬಗವತೋ ಗುಣಾನ್। ವಿಭೂತಿಂ ಚೈವ ಕಾರ್ತ್ಸ್ಯೇನ ಸತ್ಯಾಂ ಮಾಹೇಶ್ವರೀಂ ನೃಪ।। ವೈಶಂಪಾಯನ ಉವಾಚ। ಏವಮುಕ್ತ್ವಾ ತದಾ ಭೀಷ್ಮೋ ವಾಸುದೇವಂ ಮಹಾಯಶಾಃ। ಭವಮಾಹಾತ್ಮ್ಯಸಂಯುಕ್ತಮಿದಮಾಹ ಪಿತಾಮಹಃ।। (ಭಾರತ ದರ್ಶನ) ↩︎

  2. ಶಾಶ್ವತ . ↩︎

  3. ಆನಂದಮಯಿ . ↩︎

  4. ರಕ್ಷಕ . ↩︎

  5. ಚೂಡಾರಹಿತ, ಬೋಳು ಮಂಡೆಯ ↩︎

  6. ಜಟಾಜೂಟಧಾರಿ . ↩︎

  7. ಇದಕ್ಕೆ ಮೊದಲು ಈ ಕೆಳಗಿನ ಸ್ತೋತ್ರಶ್ಲೋಕಗಳಿವೆ: ನಮೋಽಸ್ತು ರಕ್ತವರ್ಣಾಯ ರಕ್ತಾಂಬರಧರಾಯ ಚ। ರಕ್ತಧ್ವಜಪತಾಕಾಯ ರಕ್ತಸ್ರಗನುಲೇಪಿನೇ।। ನಮೋಽಸ್ತು ಪೀತವರ್ಣಾಯ ಪೀತಾಂಬರಧರಾಯ ಚ। ನಮೋಽಸ್ತೂಚ್ಛಿತ್ರಚ್ಛತ್ರಾಯ ಕಿರೀಟವರಧಾರಿನೇ।। ಅರ್ಧಹಾರಾರ್ಧಕೇಯೂರ ಅರ್ಧಕುಂಡಲಕರ್ಣಿನೇ। ನಮಃ ಪವನವೇಗಾಯ ನಮೋ ದೇವಾಯ ವೈ ನಮಃ।। ಸುರೇಂದ್ರಾಯ ಮುನೀಂದ್ರಾಯ ಮಹೇಂದ್ರಾಯ ನಮೋಽಸ್ತು ತೇ। ನಮಃ ಪದ್ಮಾರ್ಧಮಾಲಾಯ ಉತ್ಪಲೈರ್ಮಿಶ್ರಿತಾಯ ಚ।। ಅರ್ಧಚಂದನ ಲಿಪ್ತಾಯ ಅರ್ಧಸ್ರಗನುಲೇಪಿನೇ। ನಮ ಆದಿತ್ಯವಕ್ತ್ರಾಯ ಆದಿತ್ಯನಯನಾಯ ಚ। ನಮ ಆದಿತ್ಯವರ್ಣಾಯ ಆದಿತ್ಯಪ್ರತಿಮಾಯ ಚ।। ನಮಃ ಸೋಮಾಯ ಸೌಮ್ಯಾಯ ಸೌಮ್ಯವಕ್ತ್ರಧರಾಯ ಚ। ಸೌಮ್ಯರೂಪಾಯ ಮುಖ್ಯಾಯ ಸೌಮ್ಯದಂಷ್ಟ್ರವಿಭೂಷಣೇ।। ನಮಃ ಶ್ಯಾಮಾಯ ಗೌರಾಯ ಅರ್ಧಪೀತಾರ್ಧಪಾಂಡವೇ। ನಾರೀನರಶರೀರಾಯ ಸ್ತ್ರೀಪುಂಸಾಯ ನಮೋಽಸ್ತು ತೇ।। ನಮೋ ವೃಷಭವಾಹಾಯ ಗಜೇಂದ್ರಗಮನಾಯ ಚ। ದುರ್ಗಮಾಯ ನಮಸ್ತುಭ್ಯಮಗಮ್ಯಗಮನಾಯ ಚ।। ನಮೋಽಸ್ತು ಗಣಗೀತಾಯ ಗಣವೃಂದರತಾಯ ಚ। ಗಣಾನುಯಾತಮಾರ್ಗಾಯ ಗಣನಿತ್ಯವ್ರತಾಯ ಚ।। ನಮಃ ಶ್ವೇತಾಭ್ರವರ್ಣಾಯ ಸಂಧ್ಯಾರಾಗಪ್ರಭಾಯ ಚ। ಅನುದ್ದಿಷ್ಟಾಭಿಧಾನಾಯ ಸ್ವರೂಪಯ ನಮೋಽಸ್ತು ತೇ।। ನಮೋ ರಕ್ತಾಗ್ರವಾಸಾಯ ರಕ್ತಸೂತ್ರಧರಾಯ ಚ। ರಕ್ತಮಾಲಾವಿಚಿತ್ರಾಯ ರಕ್ತಾಂಬರಧರಾಯ ಚ।। ಮಣಿಭೂಷಿತಮೂರ್ಧಾಯ ನಮಶ್ಚಂದ್ರಾರ್ಧಭೂಷಿಣೇ। ವಿಚಿತ್ರಮಣಿಮೂರ್ಧಾಯ ಕುಸುಮಾಷ್ಟಧರಾಯ ಚ।। ನಮೋಽಗ್ನಿಮುಖನೇತ್ರಾಯ ಸಹಸ್ರಶಶಿಲೋಚನೇ। ಅಗ್ನಿರೂಪಾಯ ಕಾಂತಾಯ ನಮೋಽಸ್ತು ಗಹನಾಯ ಚ।। ಖಚರಾಯ ನಮಸ್ತುಭ್ಯಂ ಗೋಚರಾಭಿರತಾಯ ಚ। ಭೂಚರಾಯ ಭುವನಾಯಾನಂತಾಯ ಶಿವಾಯ ಚ।। ನಮೋ ದಿಗ್ವಾಸಸೇ ನಿತ್ಯಮಧಿವಾಸಸುವಾಸಸೇ। ನಮೋಜಗನ್ನಿವಾಸಾಯ ಪ್ರತಿಪತ್ತಿಸುಖಾಯ ಚ।। ನಿತ್ಯಮುದ್ಬದ್ಧಮುಕುಟೇ ಮಹಾಕೇಯೂರಧಾರಿಣೇ। ಸರ್ಪಕಂಠೋಪಹಾರಾಯ ವಿಚಿತ್ರಾಭರಣಾಯ ಚ।। ನಮಸ್ತ್ರಿನೇತ್ರನೇತ್ರಾಯ ಸಹಸ್ರಶತಲೋಚನೇ। ಸ್ತ್ರೀಪುಂಸಾಯ ನಪುಂಸಾಯ ನಮಃ ಸಾಂಖ್ಯಾಯ ಯೋಗಿನೇ।। ಶಂಯೋರಭಿಸ್ರವಂತಾಯ ಅಥರ್ವಾಯ ನಮೋ ನಮಃ। ನಮಃ ಸರ್ವಾರ್ತಿನಾಶಾಯ ನಮಃ ಶೋಕಹರಾಯ ಚ।। ನಮೋ ಮೇಘನಿನಾದಾಯ ಬಹುಮಾಯಾಧರಾಯ ಚ। ಬೀಜಕ್ಷೇತ್ರಾಭಿಪಾಲಾಯ ಸ್ರಷ್ಟಾರಾಯ ನಮೋ ನಮಃ।। ನಮಃ ಸುರಾಸುರೇಶಾಯ ವಿಶ್ವೇಶಾಯ ನಮೋ ನಮಃ। ನಮಃ ಪವನವೇಗಾಯ ನಮಃ ಪವನರೂಪಿಣೇ।। ನಮಃ ಕಾಂಚನಮಾಲಾಯ ಗಿರಿಮಾಲಾಯ ವೈ ನಮಃ। ನಮಃ ಸುರಾರಿಮಾಲಾಯ ಚಂಡವೇಗಾಯ ವೈ ನಮಃ।। ಬ್ರಹ್ಮಶಿರೋಪಹರ್ತಾಯ ಮಹಿಷಘ್ನಾಯ ವೈ ನಮಃ। ನಮಃ ಸ್ತ್ರೀರೂಪಧಾರಾಯ ಯಜ್ಞ ವಿಧ್ವಂಸನಾಯ ಚ।। ನಮಸ್ತ್ರಿಪುರಹರ್ತಾಯ ಯಜ್ಞವಿಧ್ವಂಸನಾಯ ಚ। ನಮಃ ಕಾಮಾಂಗನಾಶಾಯ ಕಾಲದಂಡಧರಾಯ ಚ।। ನಮಃ ಸ್ಯಂದವಿಶಾಖಾಯ ಬ್ರಹ್ಮದಂಡಾಯ ವೈ ನಮಃ। ನಮೋ ಭವಾಯ ಶರ್ವಾಯ ವಿಶ್ವರೂಪಾಯ ವೈ ನಮಃ।। ಈಶಾನಾಯ ಭವಘ್ನಾಯ ನಮೋಽಸ್ತ್ವಂಧಕಘಾತಿನೇ। ನಮೋ ವಿಶ್ವಾಯ ಮಾಯಾಯ ಚಿಂತ್ಯಾಚಿಂತ್ಯಾಯ ವೈ ನಮಃ। ತ್ವಂ ನೋ ಗತಿಶ್ಚ ಶ್ರೇಷ್ಠಶ್ಚ ತ್ವಮೇವ ಹೃದಯಂ ತಥಾ।। (ಭಾರತ ದರ್ಶನ). ↩︎