012: ಭಂಗಸ್ವನೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 12

ಸಾರ

ಸ್ತ್ರೀ-ಪುರುಷರ ಸಂಭೋಗದಲ್ಲಿ ಯಾರ ಸುಖವು ಅಧಿಕವಾಗಿರುತ್ತದೆ? ಎಂಬ ಯುಧಿಷ್ಠಿರನ ಪ್ರಶ್ನೆಗೆ ಭೀಷ್ಮನು ಭಂಗಾಶ್ವನ ಕಥೆಯನ್ನು ಹೇಳಿ, ಇದರಲ್ಲಿ ಸ್ತ್ರೀಯ ಸುಖವೇ ಹೆಚ್ಚಿನದೆಂದು ತಿಳಿಸುವುದು (1-49).

13012001 ಯುಧಿಷ್ಠಿರ ಉವಾಚ।
13012001a ಸ್ತ್ರೀಪುಂಸಯೋಃ ಸಂಪ್ರಯೋಗೇ ಸ್ಪರ್ಶಃ ಕಸ್ಯಾಧಿಕೋ ಭವೇತ್।
13012001c ಏತನ್ಮೇ ಸಂಶಯಂ ರಾಜನ್ಯಥಾವದ್ವಕ್ತುಮರ್ಹಸಿ।।

ಯಧಿಷ್ಠಿರನು ಹೇಳಿದನು: “ರಾಜನ್! ಸ್ತ್ರೀ-ಪುರುಷರ ಸಂಭೋಗದಲ್ಲಿ ಯಾರ ಸುಖವು ಅಧಿಕವಾಗಿರುತ್ತದೆ? ನನ್ನ ಈ ಸಂಶಯದ ಕುರಿತು ಯಥಾವತ್ತಾಗಿ ಹೇಳಬೇಕು.”

13012002 ಭೀಷ್ಮ ಉವಾಚ।
13012002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
13012002c ಭಂಗಾಶ್ವನೇನ ಶಕ್ರಸ್ಯ ಯಥಾ ವೈರಮಭೂತ್ಪುರಾ।।

ಭೀಷ್ಮನು ಹೇಳಿದನು: “ಹಿಂದೆ ಭಂಗಾಶ್ವನೊಂದಿಗೆ ಶಕ್ರನ ವೈರವು ಹೇಗುಂಟಾಯಿತೆನ್ನುವ ಪುರಾತನ ಇತಿಹಾಸವನ್ನು ಈ ವಿಷಯದಲ್ಲಿ ಉದಾಹರಿಸುತ್ತಾರೆ.

13012003a ಪುರಾ ಭಂಗಾಶ್ವನೋ ನಾಮ ರಾಜರ್ಷಿರತಿಧಾರ್ಮಿಕಃ।
13012003c ಅಪುತ್ರಃ ಸ ನರವ್ಯಾಘ್ರ ಪುತ್ರಾರ್ಥಂ ಯಜ್ಞಮಾಹರತ್।।

ಹಿಂದೆ ಭಂಗಾಶ್ವನೆಂಬ ಹೆಸರಿನ ಅತಿ ಧಾರ್ಮಿಕ ರಾಜನಿದ್ದನು. ನರವ್ಯಾಘ್ರ! ಅಪುತ್ರನಾಗಿದ್ದ ಅವನು ಪುತ್ರನಿಗಾಗಿ ಯಜ್ಞವನ್ನು ಕೈಗೊಂಡನು.

13012004a ಅಗ್ನಿಷ್ಟುಂ ನಾಮ ರಾಜರ್ಷಿರಿಂದ್ರದ್ವಿಷ್ಟಂ ಮಹಾಬಲಃ।
13012004c ಪ್ರಾಯಶ್ಚಿತ್ತೇಷು ಮರ್ತ್ಯಾನಾಂ ಪುತ್ರಕಾಮಸ್ಯ ಚೇಷ್ಯತೇ।।

ಆ ಮಹಾಬಲ ರಾಜರ್ಷಿಯು ಮನುಷ್ಯರ ಪ್ರಾಯಶ್ಚಿತ್ತಕ್ಕೂ ಪುತ್ರನನ್ನು ಬಯಸುವವರಿಗೂ ಹೇಳಿರುವ, ಆದರೆ ಇಂದ್ರನಿಗೆ ವಿರುದ್ಧವಾದ, ಅಗ್ನಿಷ್ಟು ಎಂಬ ಹೆಸರಿನ ಯಾಗವನ್ನು ಮಾಡಿದನು.

13012005a ಇಂದ್ರೋ ಜ್ಞಾತ್ವಾ ತು ತಂ ಯಜ್ಞಂ ಮಹಾಭಾಗಃ ಸುರೇಶ್ವರಃ।
13012005c ಅಂತರಂ ತಸ್ಯ ರಾಜರ್ಷೇರನ್ವಿಚ್ಚನ್ನಿಯತಾತ್ಮನಃ।।

ಆ ಯಜ್ಞದ ಕುರಿತು ತಿಳಿದ ಮಹಾಭಾಗ ಸುರೇಶ್ವರ ಇಂದ್ರನು ಆ ನಿಯತಾತ್ಮ ರಾಜರ್ಷಿಯಲ್ಲಿ ನ್ಯೂನತೆಗಳನ್ನು ಹುಡುಕತೊಡಗಿದನು.

13012006a ಕಸ್ಯ ಚಿತ್ತ್ವಥ ಕಾಲಸ್ಯ ಮೃಗಯಾಮಟತೋ ನೃಪ।
13012006c ಇದಮಂತರಮಿತ್ಯೇವ ಶಕ್ರೋ ನೃಪಮಮೋಹಯತ್।।

ಕೆಲವು ಸಮಯದ ನಂತರ ನೃಪನು ಬೇಟೆಗಾಗಿ ತಿರುಗಾಡುತ್ತಿದ್ದಾಗ ಇದೇ ಸಮಯವೆಂದು ತಿಳಿದ ಶಕ್ರನು ನೃಪನನ್ನು ವಿಮೋಹಗೊಳಿಸಿದನು.

13012007a ಏಕಾಶ್ವೇನ ಚ ರಾಜರ್ಷಿರ್ಭ್ರಾಂತ ಇಂದ್ರೇಣ ಮೋಹಿತಃ।
13012007c ನ ದಿಶೋಽವಿಂದತ ನೃಪಃ ಕ್ಷುತ್ಪಿಪಾಸಾರ್ದಿತಸ್ತದಾ।।

ಇಂದ್ರನಿಂದ ಮೋಹಿತನಾಗಿ ಭ್ರಾಂತಿಗೊಳಗಾದ ರಾಜರ್ಷಿಯು ಒಬ್ಬನೇ ಕುದುರೆಯ ಮೇಲೆ ಕುಳಿತು ಯಾವ ದಿಕ್ಕಿನಲ್ಲಿ ಹೋಗುತ್ತಿದ್ದಾನೆಂದು ತಿಳಿಯದೇ ಅಲೆದಾಡತೊಡಗಿದನು. ಆಗ ಅವನು ಹಸಿವು-ಬಾಯಾರಿಕೆಗಳಿಂದ ಬಳಲಿದನು.

13012008a ಇತಶ್ಚೇತಶ್ಚ ವೈ ಧಾವನ್ಶ್ರಮತೃಷ್ಣಾರ್ದಿತೋ ನೃಪಃ।
13012008c ಸರೋಽಪಶ್ಯತ್ಸುರುಚಿರಂ ಪೂರ್ಣಂ ಪರಮವಾರಿಣಾ।

ಇಲ್ಲಿಂದಲ್ಲಿಗೆ ಓಡಾಡುತ್ತಾ ಶ್ರಮ-ಬಾಯರಿಕೆಗಳಿಂದ ಬಳಲಿದ ನೃಪನು ಶುದ್ಧ ನೀರಿನಿಂದ ತುಂಬಿದ್ದ ಸುಂದರ ಸರೋವರವೊಂದನ್ನು ಕಂಡನು.

13012008e ಸೋಽವಗಾಹ್ಯ ಸರಸ್ತಾತ ಪಾಯಯಾಮಾಸ ವಾಜಿನಮ್।।
13012009a ಅಥ ಪೀತೋದಕಂ ಸೋಽಶ್ವಂ ವೃಕ್ಷೇ ಬದ್ಧ್ವಾ ನೃಪೋತ್ತಮಃ।
13012009c ಅವಗಾಹ್ಯ ತತಃ ಸ್ನಾತೋ ರಾಜಾ ಸ್ತ್ರೀತ್ವಮವಾಪ ಹ।।

ಮಗೂ! ಆ ನೃಪೋತ್ತಮನು ಕುದುರೆಯ ಮೈತೊಳೆದು ನೀರು ಕುಡಿಸಿ ಕುದುರೆಯನ್ನು ಒಂದು ಮರಕ್ಕೆ ಕಟ್ಟಿ, ತಾನೂ ಆ ಕೊಳದಲ್ಲಿ ಮುಳುಗಿ ಸ್ನಾನಮಾಡಿದನು. ಕೂಡಲೇ ಆ ರಾಜನು ಸ್ತ್ರೀಯಾದನು.

13012010a ಆತ್ಮಾನಂ ಸ್ತ್ರೀಕೃತಂ ದೃಷ್ಟ್ವಾ ವ್ರೀಡಿತೋ ನೃಪಸತ್ತಮಃ।
13012010c ಚಿಂತಾನುಗತಸರ್ವಾತ್ಮಾ ವ್ಯಾಕುಲೇಂದ್ರಿಯಚೇತನಃ।।

ತಾನು ಸ್ತ್ರೀಯಾದುದನ್ನು ನೋಡಿ ನಾಚಿಕೊಂಡ ಆ ಸರ್ವಾತ್ಮಾ ನೃಪಸತ್ತಮನು ಚಿಂತಾನುಗತನಾದನು. ಅವನ ಇಂದ್ರಿಯ-ಚೇತನಗಳು ವ್ಯಾಕುಲಗೊಂಡವು.

13012011a ಆರೋಹಿಷ್ಯೇ ಕಥಂ ತ್ವಶ್ವಂ ಕಥಂ ಯಾಸ್ಯಾಮಿ ವೈ ಪುರಮ್।
13012011c ಅಗ್ನಿಷ್ಟುಂ ನಾಮ ಇಷ್ಟಂ ಮೇ ಪುತ್ರಾಣಾಂ ಶತಮೌರಸಮ್।।

“ಕುದುರೆಯನ್ನು ಹೇಗೆ ಏರಬಲ್ಲೆ? ಪುರಕ್ಕೆ ಹೇಗೆ ಹೋಗಬಲ್ಲೆ? ಅಗ್ನಿಷ್ಟುವೆಂಬ ಯಾಗದಿಂದ ನನಗೆ ನೂರು ಔರಸ ಪುತ್ರರಾಗಿದ್ದಾರೆ.

13012012a ಜಾತಂ ಮಹಾಬಲಾನಾಂ ವೈ ತಾನ್ಪ್ರವಕ್ಷ್ಯಾಮಿ ಕಿಂ ತ್ವಹಮ್।
13012012c ದಾರೇಷು ಚಾಸ್ಮದೀಯೇಷು ಪೌರಜಾನಪದೇಷು ಚ।।

ಹೋಗಿ ಆ ಮಹಾಬಲರಿಗೆ ನಾನು ಏನೆಂದು ಹೇಳಲಿ? ಪತ್ನಿ, ನನ್ನವರು ಮತ್ತು ಪೌರ-ಜಾನಪದದವರಿಗೆ ಏನು ಹೇಳಲಿ?

13012013a ಮೃದುತ್ವಂ ಚ ತನುತ್ವಂ ಚ ವಿಕ್ಲವತ್ವಂ ತಥೈವ ಚ।
13012013c ಸ್ತ್ರೀಗುಣಾ ಋಷಿಭಿಃ ಪ್ರೋಕ್ತಾ ಧರ್ಮತತ್ತ್ವಾರ್ಥದರ್ಶಿಭಿಃ।
13012013e ವ್ಯಾಯಾಮಃ ಕರ್ಕಶತ್ವಂ ಚ ವೀರ್ಯಂ ಚ ಪುರುಷೇ ಗುಣಾಃ।।

ಧರ್ಮತತ್ವಾರ್ಥದರ್ಶಿ ಋಷಿಗಳು ಮೃದುತ್ವ, ಕೃಶತ್ವ ಮತ್ತು ಚಂಚಲತೆಗಳು ಸ್ತ್ರೀಯರ ಗುಣಗಳೆಂದೂ ವ್ಯಾಯಾಮ, ಕರ್ಕಶತ್ವ ಮತ್ತು ವೀರ್ಯಗಳು ಪುರುಷನ ಗುಣಗಳೆಂದೂ ಹೇಳಿದ್ದಾರೆ.

13012014a ಪೌರುಷಂ ವಿಪ್ರನಷ್ಟಂ ಮೇ ಸ್ತ್ರೀತ್ವಂ ಕೇನಾಪಿ ಮೇಽಭವತ್।
13012014c ಸ್ತ್ರೀಭಾವಾತ್ಕಥಮಶ್ವಂ ತು ಪುನರಾರೋಢುಮುತ್ಸಹೇ।।

ಯಾವುದೋ ಕಾರಣದಿಂದ ಪುರುಷತ್ವವು ನಷ್ಟವಾಗಿ ನನಗೆ ಸ್ತ್ರೀತ್ವವು ಪ್ರಾಪ್ತವಾಗಿದೆ. ಸ್ತ್ರೀಯಾಗಿರುವ ನಾನು ಹೇಗೆ ಈ ಕುದುರೆಯನ್ನು ಪುನಃ ಏರಬಲ್ಲೆನು?”

13012015a ಮಹತಾ ತ್ವಥ ಖೇದೇನ ಆರುಹ್ಯಾಶ್ವಂ ನರಾಧಿಪಃ।
13012015c ಪುನರಾಯಾತ್ಪುರಂ ತಾತ ಸ್ತ್ರೀಭೂತೋ ನೃಪಸತ್ತಮ।।

ಮಗೂ! ನೃಪಸತ್ತಮ! ಸ್ತ್ರೀಯಾಗಿದ್ದ ಆ ನರಾಧಿಪನು ಮಹಾಖೇದದಿಂದ ಪುನಃ ಕುದುರೆಯನ್ನೇರಿ ತನ್ನ ಪುರಕ್ಕೆ ಆಗಮಿಸಿದನು.

13012016a ಪುತ್ರಾ ದಾರಾಶ್ಚ ಭೃತ್ಯಾಶ್ಚ ಪೌರಜಾನಪದಾಶ್ಚ ತೇ।
13012016c ಕಿಂ ನ್ವಿದಂ ತ್ವಿತಿ ವಿಜ್ಞಾಯ ವಿಸ್ಮಯಂ ಪರಮಂ ಗತಾಃ।।

ಅವನ ಪುತ್ರರು, ಪತ್ನಿಯರು, ಸೇವಕರು ಮತ್ತು ಪೌರ-ಜಾನಪದ ಜನರು “ಇದೇನಾಯಿತು?” ಎಂದು ತಿಳಿಯದೇ ಪರಮ ವಿಸ್ಮಿತರಾದರು.

13012017a ಅಥೋವಾಚ ಸ ರಾಜರ್ಷಿಃ ಸ್ತ್ರೀಭೂತೋ ವದತಾಂ ವರಃ।
13012017c ಮೃಗಯಾಮಸ್ಮಿ ನಿರ್ಯಾತೋ ಬಲೈಃ ಪರಿವೃತೋ ದೃಢಮ್।
13012017e ಉದ್ಭ್ರಾಂತಃ ಪ್ರಾವಿಶಂ ಘೋರಾಮಟವೀಂ ದೈವಮೋಹಿತಃ।।

ಸ್ತ್ರೀಯಾಗಿದ್ದ ಆ ಮಾತನಾಡುವವರಲ್ಲಿ ಶ್ರೇಷ್ಠ ರಾಜರ್ಷಿಯು ಹೇಳಿದನು: “ದೃಢ ಸೇನೆಯಿಂದ ಸುತ್ತುವರೆಯಲ್ಪಟ್ಟ ನಾನು ಬೇಟೆಗೆಂದು ಹೊರಟೆ. ದೈವಮೋಹಿತನಾಗಿ ನಾನು ಘೋರ ಅರಣ್ಯವನ್ನು ಪ್ರವೇಶಿಸಿ ಭ್ರಾಂತನಾದೆನು.

13012018a ಅಟವ್ಯಾಂ ಚ ಸುಘೋರಾಯಾಂ ತೃಷ್ಣಾರ್ತೋ ನಷ್ಟಚೇತನಃ।
13012018c ಸರಃ ಸುರುಚಿರಪ್ರಖ್ಯಮಪಶ್ಯಂ ಪಕ್ಷಿಭಿರ್ವೃತಮ್।।

ಆ ಘೋರ ಅರಣ್ಯದಲ್ಲಿ ಬಾಯಾರಿಕೆಯಿಂದ ಪೀಡಿತನಾಗಿ ಚೇತನವನ್ನೇ ಕಳೆದುಕೊಂಡಿದ್ದ ನಾನು ಪಕ್ಷಿಗಳಿಂದ ತುಂಬಿದ್ದ ಸುಂದರ ಸರೋವರವೊಂದನ್ನು ಕಂಡೆನು.

13012019a ತತ್ರಾವಗಾಢಃ ಸ್ತ್ರೀಭೂತೋ ವ್ಯಕ್ತಂ ದೈವಾನ್ನ ಸಂಶಯಃ।
13012019c ಅತೃಪ್ತ ಇವ ಪುತ್ರಾಣಾಂ ದಾರಾಣಾಂ ಚ ಧನಸ್ಯ ಚ।।

ಅದರಲ್ಲಿ ಮುಳುಗಿದೊಡನೆಯೇ ನಾನು ಸ್ತ್ರೀಯಾದೆನು. ಇದು ದೈವವೆಂದೇ ವ್ಯಕ್ತವಾಗುತ್ತದೆ. ಇದರಲ್ಲಿ ಸಂಶಯವಿಲ್ಲ.” ಆಗ ಅವನ ಪುತ್ರರು, ಪತ್ನಿಯರು ಮತ್ತು ಜನರು ಅವನ ವರದಿಯಿಂದ ಅತೃಪ್ತರಾದವರಂತೆ ತೋರಿದರು.

13012020a ಉವಾಚ ಪುತ್ರಾಂಶ್ಚ ತತಃ ಸ್ತ್ರೀಭೂತಃ ಪಾರ್ಥಿವೋತ್ತಮಃ।
13012020c ಸಂಪ್ರೀತ್ಯಾ ಭುಜ್ಯತಾಂ ರಾಜ್ಯಂ ವನಂ ಯಾಸ್ಯಾಮಿ ಪುತ್ರಕಾಃ।
13012020e ಅಭಿಷಿಚ್ಯ ಸ ಪುತ್ರಾಣಾಂ ಶತಂ ರಾಜಾ ವನಂ ಗತಃ।।

ಆಗ ಸ್ತ್ರೀಯಾಗಿದ್ದ ಪಾರ್ಥಿವೋತ್ತಮನು “ಪುತ್ರರೇ! ಸಂತೋಷದಿಂದ ರಾಜ್ಯವನ್ನು ಭೋಗಿಸಿ. ನಾನು ವನಕ್ಕೆ ತೆರಳುತ್ತೇನೆ!” ಎಂದು ಪುತ್ರರಿಗೆ ಹೇಳಿದನು. ತನ್ನ ನೂರು ಪುತ್ರರನ್ನು ರಾಜ್ಯದಲ್ಲಿ ಅಭಿಷೇಕಿಸಿ ರಾಜನು ವನವನ್ನು ಸೇರಿದನು.

13012021a ತಾಮಾಶ್ರಮೇ ಸ್ತ್ರಿಯಂ ತಾತ ತಾಪಸೋಽಭ್ಯವಪದ್ಯತ।
13012021c ತಾಪಸೇನಾಸ್ಯ ಪುತ್ರಾಣಾಮಾಶ್ರಮೇಽಪ್ಯಭವಚ್ಚತಮ್।।

ಮಗೂ! ಆ ಸ್ತ್ರೀಯು ತಪಸ್ವಿಯೋರ್ವನ ಆಶ್ರಮಕ್ಕೆ ಹೋಗಿ ಅಲ್ಲಿಯೇ ಇರತೊಡಗಿದಳು. ತಾಪಸಿಯಿಂದ ಅವಳು ಆ ಆಶ್ರಮದಲ್ಲಿಯೂ ನೂರು ಪುತ್ರರನ್ನು ಪಡೆದಳು.

13012022a ಅಥ ಸಾ ತಾನ್ಸುತಾನ್ಗೃಹ್ಯ ಪೂರ್ವಪುತ್ರಾನಭಾಷತ।
13012022c ಪುರುಷತ್ವೇ ಸುತಾ ಯೂಯಂ ಸ್ತ್ರೀತ್ವೇ ಚೇಮೇ ಶತಂ ಸುತಾಃ।।

ಅವಳು ಆ ಮಕ್ಕಳನ್ನು ಕರೆದುಕೊಂಡು ಹೋಗಿ ಮೊದಲೇ ತನಗೆ ಹುಟ್ಟಿದ್ದ ಪುತ್ರರಿಗೆ ಹೇಳಿದಳು: “ನಾನು ಪುರುಷನಾಗಿದ್ದಾಗ ನನಗೆ ಹುಟ್ಟಿದ ಮಕ್ಕಳು ನೀವು. ಈ ನೂರು ಮಕ್ಕಳು ನಾನು ಸ್ತ್ರೀಯಾಗಿರುವಾಗ ಹುಟ್ಟಿರುವವರು.

13012023a ಏಕತ್ರ ಭುಜ್ಯತಾಂ ರಾಜ್ಯಂ ಭ್ರಾತೃಭಾವೇನ ಪುತ್ರಕಾಃ।
13012023c ಸಹಿತಾ ಭ್ರಾತರಸ್ತೇಽಥ ರಾಜ್ಯಂ ಬುಭುಜಿರೇ ತದಾ।।

ಮಕ್ಕಳೇ! ಒಂದಾಗಿ ಭ್ರಾತೃಭಾವದಿಂದ ರಾಜ್ಯವನ್ನು ಭೋಗಿಸಿ!” ಅನಂತರ ಆ ಸಹೋದರರೆಲ್ಲರೂ ಒಂದಾಗಿ ರಾಜ್ಯವನ್ನು ಭೋಗಿಸಿದರು.

13012024a ತಾನ್ದೃಷ್ಟ್ವಾ ಭ್ರಾತೃಭಾವೇನ ಭುಂಜಾನಾನ್ರಾಜ್ಯಮುತ್ತಮಮ್।
13012024c ಚಿಂತಯಾಮಾಸ ದೇವೇಂದ್ರೋ ಮನ್ಯುನಾಭಿಪರಿಪ್ಲುತಃ।
13012024e ಉಪಕಾರೋಽಸ್ಯ ರಾಜರ್ಷೇಃ ಕೃತೋ ನಾಪಕೃತಂ ಮಯಾ।।

ಭ್ರಾತೃಭಾವದಿಂದ ಉತ್ತಮವಾದ ರಾಜ್ಯವನ್ನು ಭೋಗಿಸುತ್ತಿದ್ದ ಅವರನ್ನು ನೋಡಿ ಕೋಪದಿಂದ ಆವೇಶಗೊಂಡ ದೇವೇಂದ್ರನು “ನಾನು ಈ ರಾಜರ್ಷಿಗೆ ಉಪಕಾರವನ್ನೆಸಗಿದ್ದೇನೆಯೇ ವಿನಃ ನಾನು ಮಾಡಿದುದರಿಂದ ಇವನಿಗೆ ಅಪಕಾರವೇನೂ ಆಗಲಿಲ್ಲವಲ್ಲ!” ಎಂದು ಚಿಂತಿಸಿದನು.

13012025a ತತೋ ಬ್ರಾಹ್ಮಣರೂಪೇಣ ದೇವರಾಜಃ ಶತಕ್ರತುಃ।
13012025c ಭೇದಯಾಮಾಸ ತಾನ್ಗತ್ವಾ ನಗರಂ ವೈ ನೃಪಾತ್ಮಜಾನ್।।

ಆಗ ಶತ್ರಕ್ರತು ದೇವರಾಜನು ಬ್ರಾಹ್ಮಣರೂಪದಲ್ಲಿ ಆ ನಗರಕ್ಕೆ ಹೋಗಿ ನೃಪಾತ್ಮಜರಲ್ಲಿ ಭೇದವನ್ನುಂಟುಮಾಡತೊಡಗಿದನು.

13012026a ಭ್ರಾತೄಣಾಂ ನಾಸ್ತಿ ಸೌಭ್ರಾತ್ರಂ ಯೇಽಪ್ಯೇಕಸ್ಯ ಪಿತುಃ ಸುತಾಃ।
13012026c ರಾಜ್ಯಹೇತೋರ್ವಿವದಿತಾಃ ಕಶ್ಯಪಸ್ಯ ಸುರಾಸುರಾಃ।।

“ಒಂದೇ ತಂದೆಯ ಮಕ್ಕಳಾದರೂ ಭ್ರಾತೃಗಳಲ್ಲಿ ಸೌಭ್ರಾತೃತ್ವವು ಇರುವುದಿಲ್ಲ. ಕಶ್ಯಪನ ಮಕ್ಕಳಾದ ಸುರಾಸುರರು ರಾಜ್ಯದ ಕಾರಣಕ್ಕಾಗಿ ಕಲಹಮಾಡುತ್ತಲೇ ಇದ್ದಾರೆ!

13012027a ಯೂಯಂ ಭಂಗಾಶ್ವನಾಪತ್ಯಾಸ್ತಾಪಸಸ್ಯೇತರೇ ಸುತಾಃ।
13012027c ಕಶ್ಯಪಸ್ಯ ಸುರಾಶ್ಚೈವ ಅಸುರಾಶ್ಚ ಸುತಾಸ್ತಥಾ।
13012027e ಯುಷ್ಮಾಕಂ ಪೈತೃಕಂ ರಾಜ್ಯಂ ಭುಜ್ಯತೇ ತಾಪಸಾತ್ಮಜೈಃ।।

ನೀವಾದರೋ ಭಂಗಾಶ್ವನನ ಮಕ್ಕಳು. ಇತರರು ತಾಪಸಿಯ ಮಕ್ಕಳು. ಸುರರೂ ಮತ್ತು ಅಸುರರೂ ಕಶ್ಯಪನದೇ ಮಕ್ಕಳು. ನಿಮ್ಮ ತಂದೆಯ ರಾಜ್ಯವನ್ನು ನೀವು ತಾಪಸಿಯ ಮಕ್ಕಳೊಂದಿಗೆ ಭೋಗಿಸುತ್ತಿದ್ದೀರಿ!”

13012028a ಇಂದ್ರೇಣ ಭೇದಿತಾಸ್ತೇ ತು ಯುದ್ಧೇಽನ್ಯೋನ್ಯಮಪಾತಯನ್।
13012028c ತಚ್ಚ್ರುತ್ವಾ ತಾಪಸೀ ಚಾಪಿ ಸಂತಪ್ತಾ ಪ್ರರುರೋದ ಹ।।

ಇಂದ್ರನಿಂದ ಹೀಗೆ ಭೇದಿತರಾದ ಅವರು ಯುದ್ಧದಲ್ಲಿ ಅನ್ಯೋನ್ಯರನ್ನು ಕೆಳಗುರುಳಿಸಿದರು. ಅತನ್ನು ಕೇಳಿದ ತಾಪಸಿಯು ಸಂತಪ್ತಳಾಗಿ ರೋದಿಸಿದಳು.

13012029a ಬ್ರಾಹ್ಮಣಚ್ಚದ್ಮನಾಭ್ಯೇತ್ಯ ತಾಮಿಂದ್ರೋಽಥಾನ್ವಪೃಚ್ಚತ।
13012029c ಕೇನ ದುಃಖೇನ ಸಂತಪ್ತಾ ರೋದಿಷಿ ತ್ವಂ ವರಾನನೇ।।

ಆಗ ಬ್ರಾಹ್ಮಣನ ವೇಶದಲ್ಲಿದ್ದ ಇಂದ್ರನು ಅವಳ ಬಳಿಸಾರಿ “ವರಾನನೇ! ಯಾವ ದುಃಖದಿಂದ ಸಂತಪ್ತಳಾಗಿ ನೀನು ರೋದಿಸುತ್ತಿರುವೆ?” ಎಂದು ಕೇಳಿದನು.

13012030a ಬ್ರಾಹ್ಮಣಂ ತು ತತೋ ದೃಷ್ಟ್ವಾ ಸಾ ಸ್ತ್ರೀ ಕರುಣಮಬ್ರವೀತ್।
13012030c ಪುತ್ರಾಣಾಂ ದ್ವೇ ಶತೇ ಬ್ರಹ್ಮನ್ಕಾಲೇನ ವಿನಿಪಾತಿತೇ।।

ಕರುಣೆಯಿಂದಿದ್ದ ಆ ಬ್ರಾಹ್ಮಣನನ್ನು ನೋಡಿ ಸ್ತ್ರೀಯು ಹೇಳಿದಳು: “ಬ್ರಹ್ಮನ್! ಕಾಲವು ನನ್ನ ಈ ಇನ್ನೂರು ಮಕ್ಕಳನ್ನು ನಾಶಮಾಡಿಬಿಟ್ಟಿತು!

13012031a ಅಹಂ ರಾಜಾಭವಂ ವಿಪ್ರ ತತ್ರ ಪುತ್ರಶತಂ ಮಯಾ।
13012031c ಸಮುತ್ಪನ್ನಂ ಸುರೂಪಾಣಾಂ ವಿಕ್ರಾಂತಾನಾಂ ದ್ವಿಜೋತ್ತಮ।।

ದ್ವಿಜೋತ್ತಮ! ನಾನು ರಾಜನಾಗಿದ್ದೆ. ಆಗ ನನಗೆ ನೂರು ಸುಂದರ ವಿಕ್ರಾಂತ ಮಕ್ಕಳು ಜನಿಸಿದರು.

13012032a ಕದಾ ಚಿನ್ಮೃಗಯಾಂ ಯಾತ ಉದ್ಭ್ರಾಂತೋ ಗಹನೇ ವನೇ।
13012032c ಅವಗಾಢಶ್ಚ ಸರಸಿ ಸ್ತ್ರೀಭೂತೋ ಬ್ರಾಹ್ಮಣೋತ್ತಮ।
13012032e ಪುತ್ರಾನ್ರಾಜ್ಯೇ ಪ್ರತಿಷ್ಠಾಪ್ಯ ವನಮಸ್ಮಿ ತತೋ ಗತಃ।।

ಬ್ರಾಹ್ಮಣೋತ್ತಮ! ಒಮ್ಮೆ ಬೇಟೆಗೆಂದು ಹೋದಾಗ ನಾನು ಗಹನ ವನದಲ್ಲಿ ತಿರುಗಾಡುತ್ತಿದ್ದಾಗ ಸರೋವರವೊಂದರಲ್ಲಿ ಮುಳುಗಲು ಸ್ತ್ರೀಯಾದೆನು. ಅನಂತರ ಪುತ್ರರನ್ನು ರಾಜ್ಯದಲ್ಲಿ ಪ್ರತಿಷ್ಠಾಪಿಸಿ ವನಕ್ಕೆ ತೆರಳಿದೆನು.

13012033a ಸ್ತ್ರಿಯಾಶ್ಚ ಮೇ ಪುತ್ರಶತಂ ತಾಪಸೇನ ಮಹಾತ್ಮನಾ।
13012033c ಆಶ್ರಮೇ ಜನಿತಂ ಬ್ರಹ್ಮನ್ನೀತಾಸ್ತೇ ನಗರಂ ಮಯಾ।।

ಬ್ರಹ್ಮನ್! ಸ್ತ್ರೀಯಾಗಿದ್ದ ನನಗೆ ಮಹಾತ್ಮ ತಾಪಸನಿಂದ ನೂರು ಪುತ್ರರು ಜನಿಸಿದರು. ಆಶ್ರಮದಲ್ಲಿ ಜನಿಸಿದ ಅವರನ್ನು ನಗರಕ್ಕೆ ಕರೆದುಕೊಂಡು ಹೋದೆ.

13012034a ತೇಷಾಂ ಚ ವೈರಮುತ್ಪನ್ನಂ ಕಾಲಯೋಗೇನ ವೈ ದ್ವಿಜ।
13012034c ಏತಶ್ಚೋಚಾಮಿ ವಿಪ್ರೇಂದ್ರ ದೈವೇನಾಭಿಪರಿಪ್ಲುತಾ।।

ದ್ವಿಜ! ವಿಪ್ರೇಂದ್ರ! ಕಾಲಯೋಗದಿಂದ ಅವರಲ್ಲಿ ವೈರತ್ವವುಂಟಾಯಿತು. ದೈವದಿಂದುಂಟಾದ ಈ ದುಃಖದಲ್ಲಿ ಮುಳುಗಿಹೋಗಿದ್ದೇನೆ!”

13012035a ಇಂದ್ರಸ್ತಾಂ ದುಃಖಿತಾಂ ದೃಷ್ಟ್ವಾ ಅಬ್ರವೀತ್ಪರುಷಂ ವಚಃ।
13012035c ಪುರಾ ಸುದುಃಸಹಂ ಭದ್ರೇ ಮಮ ದುಃಖಂ ತ್ವಯಾ ಕೃತಮ್।।

ದುಃಖಿತಳಾಗಿದ್ದ ಅವಳನ್ನು ನೋಡಿ ಇಂದ್ರನು ಕಠೋರವಾದ ಈ ಮಾತನ್ನಾಡಿದನು: “ಭದ್ರೇ! ಹಿಂದೆ ನೀನು ನನಗೆ ಸಹಿಸಲಸಾಧ್ಯ ದುಃಖವನ್ನುಂಟು ಮಾಡಿದ್ದೆ!

13012036a ಇಂದ್ರದ್ವಿಷ್ಟೇನ ಯಜತಾ ಮಾಮನಾದೃತ್ಯ ದುರ್ಮತೇ।
13012036c ಇಂದ್ರೋಽಹಮಸ್ಮಿ ದುರ್ಬುದ್ಧೇ ವೈರಂ ತೇ ಯಾತಿತಂ ಮಯಾ।।

ದುರ್ಮತೇ! ಇಂದ್ರನಿಗೆ ವಿರುದ್ಧವಾದ ಯಜ್ಞವನ್ನು ಯಾಜಿಸಿ ನನ್ನನ್ನು ಅನಾದರಿಸಿದೆ. ದುರ್ಬುದ್ಧೇ! ನಾನು ಇಂದ್ರ! ನಿನ್ನ ಮೇಲಿನ ನನ್ನ ವೈರವನ್ನು ತೀರಿಸಿಕೊಂಡೆ!”

13012037a ಇಂದ್ರಂ ತು ದೃಷ್ಟ್ವಾ ರಾಜರ್ಷಿಃ ಪಾದಯೋಃ ಶಿರಸಾ ಗತಃ।
13012037c ಪ್ರಸೀದ ತ್ರಿದಶಶ್ರೇಷ್ಠ ಪುತ್ರಕಾಮೇನ ಸ ಕ್ರತುಃ।
13012037e ಇಷ್ಟಸ್ತ್ರಿದಶಶಾರ್ದೂಲ ತತ್ರ ಮೇ ಕ್ಷಂತುಮರ್ಹಸಿ।।

ಇಂದ್ರನನ್ನು ನೋಡಿ ರಾಜರ್ಷಿಯು ಅವನ ಪಾದಗಳಿಗೆ ಶಿರವನ್ನಿಟ್ಟು “ತ್ರಿದಶಶ್ರೇಷ್ಠ! ಪ್ರಸೀದನಾಗು! ಪುತ್ರಕಾಮನಾಗಿ ಆ ಕ್ರತುವನ್ನು ಮಾಡಿದೆನು. ತ್ರಿದಶಶಾರ್ದೂಲ! ಆ ಯಾಗಮಾಡಿದುದಕ್ಕೆ ನನ್ನನ್ನು ಕ್ಷಮಿಸಬೇಕು!”

13012038a ಪ್ರಣಿಪಾತೇನ ತಸ್ಯೇಂದ್ರಃ ಪರಿತುಷ್ಟೋ ವರಂ ದದೌ।
13012038c ಪುತ್ರಾ ವೈ ಕತಮೇ ರಾಜನ್ಜೀವಂತು ತವ ಶಂಸ ಮೇ।
13012038e ಸ್ತ್ರೀಭೂತಸ್ಯ ಹಿ ಯೇ ಜಾತಾಃ ಪುರುಷಸ್ಯಾಥ ಯೇಽಭವನ್।।

ಕಾಲಿಗೆ ಬಿದ್ದ ಅವನ ಮೇಲೆ ಪರಿತುಷ್ಟನಾದ ಇಂದ್ರನು ಅವನಿಗೆ ವರವನ್ನಿತ್ತನು: “ರಾಜನ್! ನಿನ್ನ ಯಾವ ಮಕ್ಕಳು ಜೀವಿತಗೊಳ್ಳಬೇಕೆನ್ನುವುದನ್ನು ಹೇಳು. ಸ್ತ್ರೀಯಾಗಿದ್ದಾಗ ನಿನಗಾದ ಮಕ್ಕಳೋ ಅಥವಾ ಪುರುಷನಾಗಿದ್ದಾಗ ಆದ ಮಕ್ಕಳೋ?”

13012039a ತಾಪಸೀ ತು ತತಃ ಶಕ್ರಮುವಾಚ ಪ್ರಯತಾಂಜಲಿಃ।
13012039c ಸ್ತ್ರೀಭೂತಸ್ಯ ಹಿ ಯೇ ಜಾತಾಸ್ತೇ ಮೇ ಜೀವಂತು ವಾಸವ।।

ಆಗ ಕೈಮುಗಿದು ತಲೆಬಾಗಿ ತಾಪಸಿಯು ಶಕ್ರನಿಗೆ ಹೇಳಿದಳು: “ವಾಸವ! ಸ್ತ್ರೀಯಾಗಿದ್ದಾಗ ಹುಟ್ಟಿದ ನನ್ನ ಮಕ್ಕಳು ಜೀವಿತಗೊಳ್ಳಲಿ!”

13012040a ಇಂದ್ರಸ್ತು ವಿಸ್ಮಿತೋ ಹೃಷ್ಟಃ ಸ್ತ್ರಿಯಂ ಪಪ್ರಚ್ಚ ತಾಂ ಪುನಃ।
13012040c ಪುರುಷೋತ್ಪಾದಿತಾ ಯೇ ತೇ ಕಥಂ ದ್ವೇಷ್ಯಾಃ ಸುತಾಸ್ತವ।।

ಹೃಷ್ಟ ಇಂದ್ರನಾದರೋ ವಿಸ್ಮಿತನಾಗಿ ಆ ಸ್ತ್ರೀಯನ್ನು ಪುನಃ ಕೇಳಿದನು: “ಪುರುಷನಾಗಿ ಹುಟ್ಟಿದ ಆ ನಿನ್ನ ಮಕ್ಕಳ ಮೇಲೆ ನಿನಗೆ ಹೇಗೆ ದ್ವೇಷವುಂಟಾಯಿತು?

13012041a ಸ್ತ್ರೀಭೂತಸ್ಯ ಹಿ ಯೇ ಜಾತಾಃ ಸ್ನೇಹಸ್ತೇಭ್ಯೋಽಧಿಕಃ ಕಥಮ್।
13012041c ಕಾರಣಂ ಶ್ರೋತುಮಿಚ್ಚಾಮಿ ತನ್ಮೇ ವಕ್ತುಮಿಹಾರ್ಹಸಿ।।

ಸ್ತ್ರೀಯಾಗಿದ್ದಾಗ ನಿನಗೆ ಹುಟ್ಟಿದ ಮಕ್ಕಳ ಮೇಲೆ ಅಧಿಕ ಸ್ನೇಹವು ಹೇಗಾಯಿತು? ಇದರ ಕಾರಣವನ್ನು ಕೇಳಲು ಬಯಸುತ್ತೇನೆ. ಅದನ್ನು ಹೇಳಬೇಕು.”

13012042 ಸ್ತ್ರ್ಯುವಾಚ।
13012042a ಸ್ತ್ರಿಯಾಸ್ತ್ವಭ್ಯಧಿಕಃ ಸ್ನೇಹೋ ನ ತಥಾ ಪುರುಷಸ್ಯ ವೈ।
13012042c ತಸ್ಮಾತ್ತೇ ಶಕ್ರ ಜೀವಂತು ಯೇ ಜಾತಾಃ ಸ್ತ್ರೀಕೃತಸ್ಯ ವೈ।।

ಸ್ತ್ರೀಯು ಹೇಳಿದಳು: “ಪುರುಷನಿಗಿಂತಲೂ ಸ್ತ್ರೀಗೆ ತನ್ನ ಮಕ್ಕಳ ಮೇಲೆ ಅಧಿಕ ಸ್ನೇಹವಿರುತ್ತದೆ. ಆದುದರಿಂದ ಶಕ್ರ! ನಾನು ಸ್ತ್ರೀಯಾಗಿದ್ದಾಗ ಹುಟ್ಟಿದ ಮಕ್ಕಳು ಬದುಕಿಕೊಳ್ಳಲಿ!””

13012043 ಭೀಷ್ಮ ಉವಾಚ।
13012043a ಏವಮುಕ್ತೇ ತತಸ್ತ್ವಿಂದ್ರಃ ಪ್ರೀತೋ ವಾಕ್ಯಮುವಾಚ ಹ।
13012043c ಸರ್ವ ಏವೇಹ ಜೀವಂತು ಪುತ್ರಾಸ್ತೇ ಸತ್ಯವಾದಿನಿ।।

ಭೀಷ್ಮನು ಹೇಳಿದನು: “ಅವಳು ಹೀಗೆ ಹೇಳಲು ಪ್ರೀತನಾದ ಇಂದ್ರನು ಇಂತೆಂದನು: “ಸತ್ಯವಾದಿನಿ! ನಿನ್ನ ಎಲ್ಲ ಮಕ್ಕಳೂ ಬದುಕಲಿ!

13012044a ವರಂ ಚ ವೃಣು ರಾಜೇಂದ್ರ ಯಂ ತ್ವಮಿಚ್ಚಸಿ ಸುವ್ರತ।
13012044c ಪುರುಷತ್ವಮಥ ಸ್ತ್ರೀತ್ವಂ ಮತ್ತೋ ಯದಭಿಕಾಂಕ್ಷಸಿ।।

ರಾಜೇಂದ್ರ! ಸುವ್ರತ! ವರವನ್ನು ಕೇಳಿಕೋ! ಪುರುಷತ್ವ ಅಥವಾ ಸ್ತ್ರೀತ್ವ ಯಾವುದನ್ನು ಬಯಸುತ್ತೀಯೆ?”

13012045 ಸ್ತ್ರ್ಯುವಾಚ।
13012045a ಸ್ತ್ರೀತ್ವಮೇವ ವೃಣೇ ಶಕ್ರ ಪ್ರಸನ್ನೇ ತ್ವಯಿ ವಾಸವ।।

ಸ್ತ್ರೀಯು ಹೇಳಿದಳು: “ವಾಸವ! ಶಕ್ರ! ನೀನು ಪ್ರಸನ್ನನಾದರೆ ಸ್ತ್ರೀತ್ವವನ್ನೇ ಕೇಳಿಕೊಳ್ಳುತ್ತೇನೆ.”

13012046a ಏವಮುಕ್ತಸ್ತು ದೇವೇಂದ್ರಸ್ತಾಂ ಸ್ತ್ರಿಯಂ ಪ್ರತ್ಯುವಾಚ ಹ।
13012046c ಪುರುಷತ್ವಂ ಕಥಂ ತ್ಯಕ್ತ್ವಾ ಸ್ತ್ರೀತ್ವಂ ರೋಚಯಸೇ ವಿಭೋ।।

ಇದನ್ನು ಕೇಳಿದ ದೇವೇಂದ್ರನು ಆ ಸ್ತ್ರೀಗೆ ಪುನಃ ಹೇಳಿದನು: “ವಿಭೋ! ಪುರುಷತ್ವವನ್ನು ತ್ಯಜಿಸಿ ಸ್ತ್ರೀತ್ವವನ್ನು ಏಕೆ ಇಚ್ಛಿಸುವೆ?”

13012047a ಏವಮುಕ್ತಃ ಪ್ರತ್ಯುವಾಚ ಸ್ತ್ರೀಭೂತೋ ರಾಜಸತ್ತಮಃ।
13012047c ಸ್ತ್ರಿಯಾಃ ಪುರುಷಸಂಯೋಗೇ ಪ್ರೀತಿರಭ್ಯಧಿಕಾ ಸದಾ।
13012047e ಏತಸ್ಮಾತ್ಕಾರಣಾಚ್ಚಕ್ರ ಸ್ತ್ರೀತ್ವಮೇವ ವೃಣೋಮ್ಯಹಮ್।।

ಇದನ್ನು ಕೇಳಿದ ಸ್ತ್ರೀಯಾಗಿದ್ದ ರಾಜಸತ್ತಮನು ಉತ್ತರಿಸಿದನು: “ಪುರುಷಸಂಯೋಗದಿಂದ ಸದಾ ಸ್ತ್ರೀಗೇ ಅಧಿಕ ಸಂತೋಷವಾಗುತ್ತದೆ. ಶಕ್ರ! ಈ ಕಾರಣದಿಂದಲೇ ನಾನು ಸ್ತ್ರೀತ್ವವನ್ನು ಕೇಳಿಕೊಳ್ಳುತ್ತಿದ್ದೇನೆ.

13012048a ರಮೇ ಚೈವಾಧಿಕಂ ಸ್ತ್ರೀತ್ವೇ ಸತ್ಯಂ ವೈ ದೇವಸತ್ತಮ।
13012048c ಸ್ತ್ರೀಭಾವೇನ ಹಿ ತುಷ್ಟೋಽಸ್ಮಿ ಗಮ್ಯತಾಂ ತ್ರಿದಶಾಧಿಪ।।

ದೇವಸತ್ತಮ! ತ್ರಿದಶಾಧಿಪ! ಸ್ತ್ರೀಯಾಗಿಯೇ ನಾನು ಅಧಿಕವಾಗಿ ರಮಿಸಿದ್ದೇನೆ. ಸತ್ಯವನ್ನು ಹೇಳುತ್ತಿದ್ದೇನೆ. ಸ್ತ್ರೀಭಾವದಿಂದಲೇ ತುಷ್ಟನಾಗಿದ್ದೇನೆ. ನೀನಿನ್ನು ಹೋಗಬಹುದು.”

13012049a ಏವಮಸ್ತ್ವಿತಿ ಚೋಕ್ತ್ವಾ ತಾಮಾಪೃಚ್ಚ್ಯ ತ್ರಿದಿವಂ ಗತಃ।
13012049c ಏವಂ ಸ್ತ್ರಿಯಾ ಮಹಾರಾಜ ಅಧಿಕಾ ಪ್ರೀತಿರುಚ್ಯತೇ।।

ಅವಳ ಆ ಮಾತನ್ನು ಕೇಳಿ “ಹಾಗೆಯೇ ಆಗಲಿ!” ಎಂದು ಹೇಳಿ ಇಂದ್ರನು ತ್ರಿದಿವಕ್ಕೆ ತೆರಳಿದನು. ಮಹಾರಾಜ! ಹೀಗೆ ಸ್ತ್ರೀಗೇ ಅಧಿಕ ಸುಖವುಂಟಾಗುತ್ತದೆ ಎಂದು ಹೇಳುತ್ತಾರೆ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಭಂಗಸ್ವನೋಪಾಖ್ಯಾನೇ ದ್ವಾದಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಭಂಗಸ್ವನೋಪಾಖ್ಯಾನ ಎನ್ನುವ ಹನ್ನೆರಡನೇ ಅಧ್ಯಾಯವು.