ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 11
ಸಾರ
ಎಂತಹ ಪುರುಷನಲ್ಲಿ ಅಥವಾ ಸ್ತ್ರೀಯಲ್ಲಿ ಶ್ರೀಯು ನಿತ್ಯವೂ ವಾಸಿಸುತ್ತಾಳೆ ಎಂಬ ಯುಧಿಷ್ಠಿರನ ಪ್ರಶ್ನೆಗೆ ಭೀಷ್ಮನು ಶ್ರೀ ಮತ್ತು ರುಕ್ಮಿಣಿಯರ ಸಂವಾದವನ್ನು ತಿಳಿಸುವುದು (1-20).
13011001 ಯುಧಿಷ್ಠಿರ ಉವಾಚ।
13011001a ಕೀದೃಶೇ ಪುರುಷೇ ತಾತ ಸ್ತ್ರೀಷು ವಾ ಭರತರ್ಷಭ।
13011001c ಶ್ರೀಃ ಪದ್ಮಾ ವಸತೇ ನಿತ್ಯಂ ತನ್ಮೇ ಬ್ರೂಹಿ ಪಿತಾಮಹ।।
ಯುಧಿಷ್ಠಿರನು ಹೇಳಿದನು: “ಭರತರ್ಷಭ! ಪಿತಾಮಹ! ತಾತ! ಎಂತಹ ಪುರುಷನಲ್ಲಿ ಅಥವಾ ಸ್ತ್ರೀಯಲ್ಲಿ ಪದ್ಮಿನಿ ಶ್ರೀಯು ನಿತ್ಯವೂ ವಾಸಿಸುತ್ತಾಳೆ ಎನ್ನುವುದನ್ನು ನನಗೆ ಹೇಳು.”
13011002 ಭೀಷ್ಮ ಉವಾಚ।
13011002a ಅತ್ರ ತೇ ವರ್ತಯಿಷ್ಯಾಮಿ ಯಥಾದೃಷ್ಟಂ ಯಥಾಶ್ರುತಮ್।
13011002c ರುಕ್ಮಿಣೀ ದೇವಕೀಪುತ್ರಸಂನಿಧೌ ಪರ್ಯಪೃಚ್ಚತ।।
ಭೀಷ್ಮನು ಹೇಳಿದನು: “ಇದರ ಕುರಿತು ನೋಡಿದಹಾಗೆ ಮತ್ತು ಕೇಳಿದಹಾಗೆ ದೇವಕೀಪುತ್ರನ ಸನ್ನಿಧಿಯಲ್ಲಿ ರುಕ್ಮಿಣಿಯು ಲಕ್ಷ್ಮಿಯನ್ನು ಕೇಳಿದುದನ್ನು ಹೇಳುತ್ತೇನೆ.
13011003a ನಾರಾಯಣಸ್ಯಾಂಕಗತಾಂ ಜ್ವಲಂತೀಂ ದೃಷ್ಟ್ವಾ ಶ್ರಿಯಂ ಪದ್ಮಸಮಾನವಕ್ತ್ರಾಮ್।
13011003c ಕೌತೂಹಲಾದ್ವಿಸ್ಮಿತಚಾರುನೇತ್ರಾ ಪಪ್ರಚ್ಚ ಮಾತಾ ಮಕರಧ್ವಜಸ್ಯ।।
ವಿಸ್ಮಿತ ಚಾರುನೇತ್ರೆ, ಮಕರಧ್ವಜ ಪ್ರದ್ಯುಮ್ನನ ತಾಯಿ ರುಕ್ಮಿಣಿಯು ನಾರಾಯಣನ ತೊಡೆಯಮೇಲೆ ಕುಳಿತಿದ್ದ, ಪದ್ಮಸಮಾನ ಮುಖವಿದ್ದ ಪ್ರಜ್ವಲಿಸುತ್ತಿದ್ದ ಶ್ರೀಯನ್ನು ನೋಡಿ ಕುತೂಹಲದಿಂದ ಕೇಳಿದಳು:
13011004a ಕಾನೀಹ ಭೂತಾನ್ಯುಪಸೇವಸೇ ತ್ವಂ ಸಂತಿಷ್ಠತೀ ಕಾನಿ ನ ಸೇವಸೇ ತ್ವಮ್।
13011004c ತಾನಿ ತ್ರಿಲೋಕೇಶ್ವರಭೂತಕಾಂತೇ ತತ್ತ್ವೇನ ಮೇ ಬ್ರೂಹಿ ಮಹರ್ಷಿಕನ್ಯೇ।।
“ಮಹರ್ಷಿಕನ್ಯೇ! ತ್ರಿಲೋಕೇಶ್ವರಭೂತಕಾಂತೇ! ನೀನು ಯಾವ ಭೂತಗಳನ್ನು ಉಪಸೇವಿಸುತ್ತೀಯೆ? ಎಲ್ಲಿ ನೀನು ಸ್ಥಿರವಾಗಿ ನಿಲ್ಲುವೆ? ಹೇಗಿರುವವರನ್ನು ಸೇವಿಸುವೆ? ತತ್ತ್ವತಃ ಅದನ್ನು ನನಗೆ ಹೇಳು.”
13011005a ಏವಂ ತದಾ ಶ್ರೀರಭಿಭಾಷ್ಯಮಾಣಾ ದೇವ್ಯಾ ಸಮಕ್ಷಂ ಗರುಡಧ್ವಜಸ್ಯ।
13011005c ಉವಾಚ ವಾಕ್ಯಂ ಮಧುರಾಭಿಧಾನಂ ಮನೋಹರಂ ಚಂದ್ರಮುಖೀ ಪ್ರಸನ್ನಾ।।
ದೇವಿಯು ಹೀಗೆಂದು ಪ್ರಶ್ನಿಸಲು ಚಂದ್ರಮುಖೀ ಶ್ರೀಯು ಪ್ರಸನ್ನಳಾಗಿ ಗರುಡಧ್ವಜನ ಸಮಕ್ಷಮದಲ್ಲಿ ಮಧುರವಾದ ಮತ್ತು ಮನೋಹರವಾದ ಈ ಮಾತನ್ನಾಡಿದಳು:
13011006a ವಸಾಮಿ ಸತ್ಯೇ ಸುಭಗೇ ಪ್ರಗಲ್ಭೇ ದಕ್ಷೇ ನರೇ ಕರ್ಮಣಿ ವರ್ತಮಾನೇ।
113011006c ನಾಕರ್ಮಶೀಲೇ ಪುರುಷೇ ವಸಾಮಿ ನ ನಾಸ್ತಿಕೇ ಸಾಂಕರಿಕೇ ಕೃತಘ್ನೇ। 13011006e ನ ಭಿನ್ನವೃತ್ತೇ ನ ನೃಶಂಸವೃತ್ತೇ ನ ಚಾಪಿ ಚೌರೇ ನ ಗುರುಷ್ವಸೂಯೇ।।
ಸುಭಗೇ! ಸತ್ಯವಂತನಲ್ಲಿಯೂ, ಧೈರ್ಯದಿಂದ ಚೆನ್ನಾಗಿ ಮಾತನಾಡುವವನಲ್ಲಿಯೂ, ಕಾರ್ಯಕುಶಲನಲ್ಲಿಯೂ, ಕಾರ್ಯದಲ್ಲಿಯೇ ಯಾವಾಗಲೂ ನಿರತನಾಗಿರುವವನಲ್ಲಿಯೂ ನಾನು ವಾಸಮಾಡುತ್ತೇನೆ. ಕಾರ್ಯಶೀಲನಲ್ಲದವನಲ್ಲಿಯೂ, ನಾಸ್ತಿಕನಲ್ಲಿಯೂ, ವರ್ಣಸಂಕರವುಳ್ಳವನಲ್ಲಿಯೂ, ಪಡೆದುಕೊಂಡ ಉಪಕಾರವನ್ನು ಸ್ಮರಿಸದೇಇರುವವನಲ್ಲಿಯೂ, ದುರಾಚಾರಿಯಲ್ಲಿಯೂ, ಕ್ರೂರಿಯಲ್ಲಿಯೂ, ಕಳ್ಳನಲ್ಲಿಯೂ ಮತ್ತು ಗುರುಜನರಲ್ಲಿ ದೋಷದೃಷ್ಟಿಯಿರುವವನಲ್ಲಿಯೂ ನಾನು ವಾಸಮಾಡುವುದಿಲ್ಲ.
13011007a ಯೇ ಚಾಲ್ಪತೇಜೋಬಲಸತ್ತ್ವಸಾರಾ ಹೃಷ್ಯಂತಿ ಕುಪ್ಯಂತಿ ಚ ಯತ್ರ ತತ್ರ।
13011007c ನ ದೇವಿ ತಿಷ್ಠಾಮಿ ತಥಾವಿಧೇಷು ನರೇಷು ಸಂಸುಪ್ತಮನೋರಥೇಷು।।
ದೇವೀ! ಯಾರು ತೇಜಸ್ಸು, ಬಲ, ಸತ್ತ್ವ ಮತ್ತು ಸಾರಗಳಲ್ಲಿ ಹೀನರಾಗಿರುವರೋ, ಎಲ್ಲೆಂದರಲ್ಲಿ ಸಂತೋಷಪಡುವರೋ ಅಥವಾ ಕೋಪಗೊಳ್ಳುವರೋ, ಮತ್ತು ಮನೋರಥಗಳನ್ನು ಯಾರು ಗುಪ್ತವಾಗಿಟ್ಟುಕೊಂಡಿರುವರೋ ಅಂತಹ ನರರಲ್ಲಿ ನಾನು ನಿಲ್ಲುವುದಿಲ್ಲ.
13011008a ಯಶ್ಚಾತ್ಮನಿ ಪ್ರಾರ್ಥಯತೇ ನ ಕಿಂ ಚಿದ್ ಯಶ್ಚ ಸ್ವಭಾವೋಪಹತಾಂತರಾತ್ಮಾ।
13011008c ತೇಷ್ವಲ್ಪಸಂತೋಷರತೇಷು ನಿತ್ಯಂ ನರೇಷು ನಾಹಂ ನಿವಸಾಮಿ ದೇವಿ।।
ದೇವೀ! ಯಾರು ತಮಗಾಗಿ ಯಾವುದನ್ನೂ ಇಚ್ಛಿಸುವುದೇ ಇಲ್ಲವೋ, ಅಂತರಾತ್ಮನನ್ನು ನೋಯಿಸುವುದೇ ಯಾರ ಸ್ವಭಾವವಾಗಿರುವುದೋ, ಅಂತಹ ಅಲ್ಪತೃಪ್ತ ಪುರುಷರಲ್ಲಿ ನಾನು ಪೂರ್ಣಮನಸ್ಸಿನಿಂದ ವಾಸಿಸುವುದಿಲ್ಲ.
13011009a ವಸಾಮಿ ಧರ್ಮಶೀಲೇಷು ಧರ್ಮಜ್ಞೇಷು ಮಹಾತ್ಮಸು।
13011009c ವೃದ್ಧಸೇವಿಷು ದಾಂತೇಷು ಸತ್ತ್ವಜ್ಞೇಷು ಮಹಾತ್ಮಸು।।
ನಾನು ಧರ್ಮಶೀಲರಲ್ಲಿ, ಧರ್ಮಜ್ಞರಲ್ಲಿ, ಮಹಾತ್ಮರಲ್ಲಿ, ವೃದ್ಧರ ಸೇವೆಮಾಡುವವರಲ್ಲಿ, ದಾಂತರಲ್ಲಿ, ಮತ್ತು ಮಹಾತ್ಮ ಸತ್ತ್ವಜ್ಞರಲ್ಲಿ ವಾಸಿಸುತ್ತೇನೆ.
13011010a ಸ್ತ್ರೀಷು ಕ್ಷಾಂತಾಸು ದಾಂತಾಸು ದೇವದ್ವಿಜಪರಾಸು ಚ।
13011010c ವಸಾಮಿ ಸತ್ಯಶೀಲಾಸು ಸ್ವಭಾವನಿರತಾಸು ಚ।।
ಸ್ತ್ರೀಯರಲ್ಲಿ, ಕ್ಷಮಾಶೀಲರಲ್ಲಿ, ದಾಂತರಲ್ಲಿ, ದೇವ-ದ್ವಿಜಪರರಲ್ಲಿ, ಸತ್ಯಶೀಲರಲ್ಲಿ ಮತ್ತು ಸ್ವಭಾವನಿರತರಲ್ಲಿ ನಾನು ವಾಸಿಸುತ್ತೇನೆ.
213011011a ಪ್ರಕೀರ್ಣಭಾಂಡಾಮನವೇಕ್ಷ್ಯಕಾರಿಣೀಂ ಸದಾ ಚ ಭರ್ತುಃ ಪ್ರತಿಕೂಲವಾದಿನೀಮ್।
13011011c ಪರಸ್ಯ ವೇಶ್ಮಾಭಿರತಾಮಲಜ್ಜಾಮ್ ಏವಂವಿಧಾಂ ಸ್ತ್ರೀಂ ಪರಿವರ್ಜಯಾಮಿ।।
ಮನೆಯಲ್ಲಿ ಸುತ್ತಲೂ ಬಿದ್ದಿರುವ ಪಾತ್ರೆ-ಪದಾರ್ಥಗಳನ್ನು ಸರಿಯಾದ ಸ್ಥಳಗಳಲ್ಲಿ ಇಡದೇ ಇರುವವಳನ್ನೂ, ವಿವೇಚಿಸದೇ ಕಾರ್ಯಮಾಡುವವಳನ್ನೂ, ಯಾವಾಗಲೂ ಪತಿಗೆ ಪ್ರತಿಕೂಲವಾಗಿ ಮಾತನಾಡುವವಳನ್ನೂ, ಇತರರ ಮನೆಬಾಗಿಲಿನಲ್ಲಿಯೇ ಇರಲು ಆಸಕ್ತಳಾಗಿರುವವಳನ್ನೂ, ನಾಚಿಕೆ ಬಿಟ್ಟವಳನ್ನೂ ನಾನು ಪರಿತ್ಯಾಗಮಾಡುತ್ತೇನೆ.
13011012a ಲೋಲಾಮಚೋಕ್ಷಾಮವಲೇಹಿನೀಂ ಚ ವ್ಯಪೇತಧೈರ್ಯಾಂ ಕಲಹಪ್ರಿಯಾಂ ಚ।
13011012c ನಿದ್ರಾಭಿಭೂತಾಂ ಸತತಂ ಶಯಾನಾಮ್ ಏವಂವಿಧಾಂ ಸ್ತ್ರೀಂ ಪರಿವರ್ಜಯಾಮಿ।।
ದಯಾರಹಿತಳೂ, ಪಾಪಿಯೂ, ಕುರೂಪಿಯೂ, ಧೈರ್ಯವಿಲ್ಲದವಳೂ, ಜಗಳಗಂಟಿಯೂ, ತೂಕಡಿಸುವವಳೂ ಮತ್ತು ಯಾವಾಗಲೂ ಮಲಗಿರುವವಳನ್ನು ನಾನು ಪರಿತ್ಯಜಿಸುತ್ತೇನೆ.
13011013a ಸತ್ಯಾಸು ನಿತ್ಯಂ ಪ್ರಿಯದರ್ಶನಾಸು ಸೌಭಾಗ್ಯಯುಕ್ತಾಸು ಗುಣಾನ್ವಿತಾಸು।
13011013c ವಸಾಮಿ ನಾರೀಷು ಪತಿವ್ರತಾಸು ಕಲ್ಯಾಣಶೀಲಾಸು ವಿಭೂಷಿತಾಸು।।
ನಿತ್ಯವೂ ಸತ್ಯವನ್ನೇ ಹೇಳುವ, ಪ್ರಿಯದರ್ಶಿನಿಯರಾದ, ಸೌಭಾಗ್ಯವತಿಯರಾದ, ಗುಣಾನ್ವಿತರಾದ, ಪತಿವ್ರತೆಯರಾದ, ಕಲ್ಯಾಣಶೀಲರಾದ ಮತ್ತು ವಿಭೂಷಿತೆಯರಾದ ನಾರಿಯರಲ್ಲಿ ನಾನು ವಾಸಿಸುತ್ತೇನೆ.
13011014a ಯಾನೇಷು ಕನ್ಯಾಸು ವಿಭೂಷಣೇಷು ಯಜ್ಞೇಷು ಮೇಘೇಷು ಚ ವೃಷ್ಟಿಮತ್ಸು।
13011014c ವಸಾಮಿ ಫುಲ್ಲಾಸು ಚ ಪದ್ಮಿನೀಷು ನಕ್ಷತ್ರವೀಥೀಷು ಚ ಶಾರದೀಷು।।
ಯಾನಗಳಲ್ಲಿ, ಕನ್ಯೆಯರಲ್ಲಿ, ವಿಭೂಷಣಗಳಲ್ಲಿ, ಯಜ್ಞಗಳಲ್ಲಿ, ಮಳೆಸುರಿಸುವ ಮೇಘಗಳಲ್ಲಿ, ಅರಳಿದ ಕಮಲಗಳಲ್ಲಿ, ಶರತ್ಕಾಲದ ನಕ್ಷತ್ರಪಂಕ್ತಿಗಳಲ್ಲಿ ನಾನು ವಾಸಿಸುತ್ತೇನೆ.
13011015a ಶೈಲೇಷು ಗೋಷ್ಠೇಷು ತಥಾ ವನೇಷು ಸರಃಸು ಫುಲ್ಲೋತ್ಪಲಪಂಕಜೇಷು।
13011015c ನದೀಷು ಹಂಸಸ್ವನನಾದಿತಾಸು ಕ್ರೌಂಚಾವಘುಷ್ಟಸ್ವರಶೋಭಿತಾಸು।।
13011016a ವಿಸ್ತೀರ್ಣಕೂಲಹ್ರದಶೋಭಿತಾಸು ತಪಸ್ವಿಸಿದ್ಧದ್ವಿಜಸೇವಿತಾಸು।
13011016c ವಸಾಮಿ ನಿತ್ಯಂ ಸುಬಹೂದಕಾಸು ಸಿಂಹೈರ್ಗಜೈಶ್ಚಾಕುಲಿತೋದಕಾಸು।
ಶೈಲಗಳಲ್ಲಿ, ಗೋಶಾಲೆಗಳಲ್ಲಿ, ವನಗಳಲ್ಲಿ, ಅರಳಿದ ಕನ್ನೈದಿಲೆ-ಕಮಲಗಳಿಂದ ಕೂಡಿದ ಸರೋವರಗಳಲ್ಲಿ, ಹಂಸಸ್ವನನಾದದಿಂದ ಮತ್ತು ಕ್ರೌಂಚಪಕ್ಷಿಗಳ ಸ್ವರಗಳಿಂದ ಶೋಭಿತವಾದ ಹಾಗೂ ದಡಗಳಲ್ಲಿ ದಟ್ಟವಾಗಿ ಬೆಳೆದ ವೃಕ್ಷಗಳಿಂದ ಶೋಭಿಸುವ ನದಿಗಳಲ್ಲಿ, ತಪಸ್ವಿ-ಸಿದ್ಧ-ದ್ವಿಜರು ಸೇವಿಸುವ ಮತ್ತು ಸಿಂಹ-ಗಜಗಳಿಂದ ಅಲ್ಲೋಲಕಲ್ಲೋಲಗೊಳ್ಳುವ ಜಲಪೂರ್ಣ ನದಿಗಳಲ್ಲಿ ನಿತ್ಯವೂ ನಾನು ವಾಸಿಸುತ್ತೇನೆ.
13011016e ಮತ್ತೇ ಗಜೇ ಗೋವೃಷಭೇ ನರೇಂದ್ರೇ ಸಿಂಹಾಸನೇ ಸತ್ಪುರುಷೇ ಚ ನಿತ್ಯಮ್।।
13011017a ಯಸ್ಮಿನ್ಗೃಹೇ ಹೂಯತೇ ಹವ್ಯವಾಹೋ ಗೋಬ್ರಾಹ್ಮಣಶ್ಚಾರ್ಚ್ಯತೇ ದೇವತಾಶ್ಚ।
13011017c ಕಾಲೇ ಚ ಪುಷ್ಪೈರ್ಬಲಯಃ ಕ್ರಿಯಂತೇ ತಸ್ಮಿನ್ಗೃಹೇ ನಿತ್ಯಮುಪೈಮಿ ವಾಸಮ್।।
ಮದಿಸಿದ ಆನೆಯಲ್ಲಿಯೂ, ಹೋರಿಯಲ್ಲಿಯೂ, ನರೇಂದ್ರನಲ್ಲಿಯೂ, ಸಿಂಹಾಸನದಲ್ಲಿಯೂ, ಸತ್ಪುರುಷನಲ್ಲಿಯೂ ನಾನು ನಿತ್ಯ ವಾಸಮಾಡುತ್ತೇನೆ. ಯಾರ ಮನೆಯಲ್ಲಿ ಹವ್ಯವಾಹನನಲ್ಲಿ ಹೋಮವು ನಡೆಯುತ್ತದೆಯೋ, ಗೋ-ಬ್ರಾಹ್ಮಣ-ದೇವತೆಗಳ ಅರ್ಚನೆಯು ನಡೆಯುತ್ತದೆಯೋ, ಕಾಲಗಳಲ್ಲಿ ದೇವತೆಗಳಿಗೆ ಪುಷ್ಪಬಲಿಯನ್ನು ನೀಡುತ್ತಾರೋ ಆ ಗೃಹದಲ್ಲಿ ನಾನು ನಿತ್ಯವೂ ವಾಸಮಾಡಿಕೊಂಡಿರುತ್ತೇನೆ.
13011018a ಸ್ವಾಧ್ಯಾಯನಿತ್ಯೇಷು ದ್ವಿಜೇಷು ನಿತ್ಯಂ ಕ್ಷತ್ರೇ ಚ ಧರ್ಮಾಭಿರತೇ ಸದೈವ।
13011018c ವೈಶ್ಯೇ ಚ ಕೃಷ್ಯಾಭಿರತೇ ವಸಾಮಿ ಶೂದ್ರೇ ಚ ಶುಶ್ರೂಷಣನಿತ್ಯಯುಕ್ತೇ।।
ನಿತ್ಯವೂ ಸ್ವಾಧ್ಯಾಯನಿರತರಾಗಿರುವ ದ್ವಿಜರಲ್ಲಿ, ಸದೈವ ಧರ್ಮಾಭಿರತನಾಗಿರುವ ಕ್ಷತ್ರಿಯನಲ್ಲಿ, ಕೃಷಿಯಲ್ಲಿ ನಿರತನಾಗಿರುವ ವೈಶ್ಯನಲ್ಲಿ ಮತ್ತು ನಿತ್ಯವೂ ಶುಶ್ರೂಷೆಯಲ್ಲಿ ನಿರತನಾಗಿರುವ ಶೂದ್ರನಲ್ಲಿ ನಾನು ನಿತ್ಯವೂ ವಾಸಿಸುತ್ತೇನೆ.
13011019a ನಾರಾಯಣೇ ತ್ವೇಕಮನಾ ವಸಾಮಿ ಸರ್ವೇಣ ಭಾವೇನ ಶರೀರಭೂತಾ।
13011019c ತಸ್ಮಿನ್ ಹಿ ಧರ್ಮಃ ಸುಮಹಾನ್ನಿವಿಷ್ಟೋ ಬ್ರಹ್ಮಣ್ಯತಾ ಚಾತ್ರ ತಥಾ ಪ್ರಿಯತ್ವಮ್।।
ಏಕಮನಸ್ಕಳಾಗಿ ಸರ್ವಭಾವದಿಂದ ಶರೀರವನ್ನು ತಾಳಿ ನಾನು ನಾರಾಯಣನಲ್ಲಿ ವಾಸಿಸುತ್ತೇನೆ. ಏಕೆಂದರೆ ಅವನಲ್ಲಿಯೇ ಮಹಾಧರ್ಮವು ಸನ್ನಿಹಿತವಾಗಿದೆ. ಅವನಲ್ಲಿ ಬ್ರಾಹ್ಮಣ್ಯತೆಯಿದೆ. ಅವನು ಸರ್ವರಿಗೂ ಪ್ರಿಯನಾದವನು.
13011020a ನಾಹಂ ಶರೀರೇಣ ವಸಾಮಿ ದೇವಿ ನೈವಂ ಮಯಾ ಶಕ್ಯಮಿಹಾಭಿಧಾತುಮ್।
13011020c ಯಸ್ಮಿಂಸ್ತು ಭಾವೇನ ವಸಾಮಿ ಪುಂಸಿ ಸ ವರ್ಧತೇ ಧರ್ಮಯಶೋರ್ಥಕಾಮೈಃ।।
ದೇವೀ! ನಾರಾಯಣನ ಹೊರತಾಗಿ ಬೇರೆ ಎಲ್ಲಿಯೂ ನಾನು ಶರೀರಿಯಾಗಿ ವಾಸಿಸುವುದಿಲ್ಲ. ಇದೇ ರೂಪದಲ್ಲಿ ನಾನು ಬೇರೆ ಯಾವ ಸ್ಥಳದಲ್ಲಿ ಇರಲೂ ಸಾಧ್ಯವಿಲ್ಲ. ನಾನು ಯಾವ ಪುರುಷನಲ್ಲಿ ಭಾವನಾ ಮಾತ್ರದಿಂದ ನೆಲೆಸಿರುವೆನೋ ಅವನು ಧರ್ಮ-ಯಶಸ್ಸು-ಕಾಮಗಳಿಂದ ವೃದ್ಧಿಸುತ್ತಾನೆ.””
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಶ್ರೀರುಕ್ಮಿಣೀಸಂವಾದೇ ಏಕದಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಶ್ರೀರುಕ್ಮಿಣೀಸಂವಾದ ಎನ್ನುವ ಹನ್ನೊಂದನೇ ಅಧ್ಯಾಯವು.
-
ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ಅಕ್ರೋಧನೇ ದೇವಪರೇ ಕೃತಜ್ಞೇ ಜಿತೇಂದ್ರಿಯೇ ನಿತ್ಯಮುದೀರ್ಣಸತ್ಯೇ। (ಭಾರತ ದರ್ಶನ). ↩︎
-
ಇದಕ್ಕೆ ಮೊದಲು ಈ ಅಧಿಕ ಶ್ಲೋಕಗಳಿವೆ: ಸ್ವಧರ್ಮಶೀಲೇಷು ಚ ಧರ್ಮವಿತ್ಸು ವೃದ್ಧೋಪಸೇವಾನಿರತೇ ಚ ದಾಂತೇ। ಕೃತಾತ್ಮನಿ ಕ್ಷಾಂತಿಪರೇ ಸಮರ್ಥೇ ಕ್ಷಾಂತಾಸು ದಾಂತಾಸು ತಥಾಬಲಾಸು। ಸತ್ಯಸ್ವಭಾವಾರ್ಜವಸಂಯುತಾಸು ವಸಾಮಿ ದೇವದ್ವಿಜಪೂಜಿಕಾಸು।। (ಭಾರತ ದರ್ಶನ). ↩︎