010: ಶೂದ್ರಮುನಿಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 10

ಸಾರ

ಮಿತ್ರಸೌಹಾರ್ದಭಾವದಿಂದ ಕೀಳುಜಾತಿಯವನಿಗೆ ಉಪದೇಶವನ್ನು ಮಾಡಿದರೆ ದೋಷವುಂಟಾಗುತ್ತದೆಯೇ ಎಂದು ಪ್ರಶ್ನಿಸಿದ ಯುಧಿಷ್ಠಿರನಿಗೆ ಭೀಷ್ಮನು ಹಿಂದೆ ಶೂದ್ರಮುನಿಗೆ ಓರ್ವ ಋಷಿಯು ಉಪದೇಶನೀಡಿದುದರಿಂದ ಪಡೆದುಕೊಂಡ ಕಷ್ಟಗಳ ಕಥೆಯನ್ನು ಹೇಳಿದುದು (1-70).

13010001 ಯುಧಿಷ್ಠಿರ ಉವಾಚ।
13010001a ಮಿತ್ರಸೌಹೃದಭಾವೇನ ಉಪದೇಶಂ ಕರೋತಿ ಯಃ।
13010001c ಜಾತ್ಯಾವರಸ್ಯ ರಾಜರ್ಷೇ ದೋಷಸ್ತಸ್ಯ ಭವೇನ್ನ ವಾ।।

ಯುಧಿಷ್ಠಿರನು ಹೇಳಿದನು: “ರಾಜರ್ಷೇ! ಮಿತ್ರಸೌಹಾರ್ದಭಾವದಿಂದ ಕೀಳುಜಾತಿಯವನಿಗೆ ಉಪದೇಶವನ್ನು ಮಾಡಿದರೆ ದೋಷವುಂಟಾಗುತ್ತದೆಯೇ ಅಥವಾ ಇಲ್ಲವೇ?

13010002a ಏತದಿಚ್ಚಾಮಿ ತತ್ತ್ವೇನ ವ್ಯಾಖ್ಯಾತುಂ ವೈ ಪಿತಾಮಹ।
13010002c ಸೂಕ್ಷ್ಮಾ ಗತಿರ್ಹಿ ಧರ್ಮಸ್ಯ ಯತ್ರ ಮುಹ್ಯಂತಿ ಮಾನವಾಃ।।

ಪಿತಾಮಹ! ನಾನು ಈ ವಿಷಯದಲ್ಲಿ ಯಥಾವತ್ತಾಗಿ ವಿಷದವಾಗಿ ತಿಳಿದುಕೊಳ್ಳಲು ಬಯಸುತ್ತೇನೆ. ಧರ್ಮದ ಗತಿಯು ಅತಿಸೂಕ್ಷ್ಮ. ಇಂತಹ ವಿಷಯಗಳಲ್ಲಿಯೇ ಮನುಷ್ಯರು ಸುಲಭವಾಗಿ ಮೋಹಗೊಳ್ಳುತ್ತಾರೆ.”

13010003 ಭೀಷ್ಮ ಉವಾಚ।
13010003a ಅತ್ರ ತೇ ವರ್ತಯಿಷ್ಯಾಮಿ ಶೃಣು ರಾಜನ್ಯಥಾಗಮಮ್।
13010003c ಋಷೀಣಾಂ ವದತಾಂ ಪೂರ್ವಂ ಶ್ರುತಮಾಸೀದ್ಯಥಾ ಮಯಾ।।

ಭೀಷ್ಮನು ಹೇಳಿದನು: “ರಾಜನ್! ಈ ವಿಷಯದಲ್ಲಿ ಹಿಂದೆ ಋಷಿಗಳು ಹೇಳಿದ್ದುದನನ್ನು ಕೇಳಿದ್ದೇನೆ. ಅದನ್ನೇ ನಿನಗೆ ಯಥಾಕ್ರಮವಾಗಿ ಹೇಳುತ್ತೇನೆ. ಕೇಳು.

13010004a ಉಪದೇಶೋ ನ ಕರ್ತವ್ಯೋ ಜಾತಿಹೀನಸ್ಯ ಕಸ್ಯ ಚಿತ್।
13010004c ಉಪದೇಶೇ ಮಹಾನ್ದೋಷ ಉಪಾಧ್ಯಾಯಸ್ಯ ಭಾಷ್ಯತೇ।।

ಜಾತಿಹೀನನು ಯಾರೇ ಆಗಿದ್ದರೂ ಅವನಿಗೆ ಉಪದೇಶವನ್ನು ಮಾಡಬಾರದು. ಅಂತಹ ಉಪದೇಶದಲ್ಲಿ ಉಪಾಧ್ಯಾಯನ ದೋಷವು ಹೆಚ್ಚಿನದೆಂದು ಹೇಳುತ್ತಾರೆ.

13010005a ನಿದರ್ಶನಮಿದಂ ರಾಜನ್ ಶೃಣು ಮೇ ಭರತರ್ಷಭ।
13010005c ದುರುಕ್ತವಚನೇ ರಾಜನ್ಯಥಾ ಪೂರ್ವಂ ಯುಧಿಷ್ಠಿರ।
13010005e ಬ್ರಹ್ಮಾಶ್ರಮಪದೇ ವೃತ್ತಂ ಪಾರ್ಶ್ವೇ ಹಿಮವತಃ ಶುಭೇ।।

ರಾಜನ್! ಭರತರ್ಷಭ! ಯುಧಿಷ್ಠಿರ! ಇದಕ್ಕೆ ಸಂಬಂದಿಸಿದ ಒಂದು ನಿದರ್ಶನವನ್ನು ಕೇಳು. ದುಃಖದಲ್ಲಿರುವವನಿಗೆ ಉಪದೇಶಿಸಿದ ಈ ಘಟನೆಯು ಶುಭ ಹಿಮವತ್ಪರ್ವದ ತಪ್ಪಲಿನಲ್ಲಿದ್ದ ಬ್ರಹ್ಮಾಶ್ರಮಪದದಲ್ಲಿ ನಡೆಯಿತು.

13010006a ತತ್ರಾಶ್ರಮಪದಂ ಪುಣ್ಯಂ ನಾನಾವೃಕ್ಷಗಣಾಯುತಮ್।
13010006c ಬಹುಗುಲ್ಮಲತಾಕೀರ್ಣಂ ಮೃಗದ್ವಿಜನಿಷೇವಿತಮ್।।

ನಾನಾವೃಕ್ಷಗಣಗಳಿಂದ ಮತ್ತು ಬಹುಗುಲ್ಮಲತಾಕೀರ್ಣಗಳಿಂದ ಕೂಡಿದ್ದ ಆ ಪುಣ್ಯ ಆಶ್ರಮಪದದಲ್ಲಿ ಮೃಗ-ಪಕ್ಷಿಗಳು ವಾಸಿಸುತ್ತಿದ್ದವು.

13010007a ಸಿದ್ಧಚಾರಣಸಂಘುಷ್ಟಂ ರಮ್ಯಂ ಪುಷ್ಪಿತಕಾನನಮ್।
13010007c ವ್ರತಿಭಿರ್ಬಹುಭಿಃ ಕೀರ್ಣಂ ತಾಪಸೈರುಪಶೋಭಿತಮ್।।

ಸಿದ್ಧಚಾರಣರ ಗುಂಪುಗಳಿದ್ದ ಆ ರಮ್ಯ ಪುಷ್ಪಿತ ಕಾನನವು ಅನೇಕ ವ್ರತಿಗಳು ಮತ್ತು ತಾಪಸರಿಂದ ಕೂಡಿ ಶೋಭಿಸುತ್ತಿತ್ತು.

13010008a ಬ್ರಾಹ್ಮಣೈಶ್ಚ ಮಹಾಭಾಗೈಃ ಸೂರ್ಯಜ್ವಲನಸಂನಿಭೈಃ।
13010008c ನಿಯಮವ್ರತಸಂಪನ್ನೈಃ ಸಮಾಕೀರ್ಣಂ ತಪಸ್ವಿಭಿಃ।
13010008e ದೀಕ್ಷಿತೈರ್ಭರತಶ್ರೇಷ್ಠ ಯತಾಹಾರೈಃ ಕೃತಾತ್ಮಭಿಃ।।

ಭರತಶ್ರೇಷ್ಠ! ಆ ಆಶ್ರಮಪದವು ಸೂರ್ಯಜ್ವಲನ ಸನ್ನಿಭರಾದ ಮಹಾಭಾಗ ಬ್ರಾಹ್ಮಣರಿಂದ, ವ್ರತ-ನಿಯಮ ಸಂಪನ್ನರಿಂದ, ತಪಸ್ವಿಗಳಿಂದ, ದೀಕ್ಷಿತರಿಂದ ಮತ್ತು ಯತಾಹಾರ ಕೃತಾತ್ಮರಿಂದ ತುಂಬಿತ್ತು.

13010009a ವೇದಾಧ್ಯಯನಘೋಷೈಶ್ಚ ನಾದಿತಂ ಭರತರ್ಷಭ।
13010009c ವಾಲಖಿಲ್ಯೈಶ್ಚ ಬಹುಭಿರ್ಯತಿಭಿಶ್ಚ ನಿಷೇವಿತಮ್।।

ಭರತರ್ಷಭ! ವೇದಾಧ್ಯಯನಘೋಷಗಳಿಂದ ನಿನಾದಿಸುತ್ತಿದ್ದ ಆ ಆಶ್ರಮಪದವು ವಾಲಖಿಲ್ಯರಿಂದ ಮತ್ತು ಅನೇಕ ಯತಿಗಳಿಂದ ಕೂಡಿತ್ತು.

13010010a ತತ್ರ ಕಶ್ಚಿತ್ಸಮುತ್ಸಾಹಂ ಕೃತ್ವಾ ಶೂದ್ರೋ ದಯಾನ್ವಿತಃ।
13010010c ಆಗತೋ ಹ್ಯಾಶ್ರಮಪದಂ ಪೂಜಿತಶ್ಚ ತಪಸ್ವಿಭಿಃ।।

ಯಾವನೋ ಒಬ್ಬ ದಯಾನ್ವಿತ ಶೂದ್ರನು ಆ ಆಶ್ರಮಪದಕ್ಕೆ ಆಗಮಿಸಲು, ತಪಸ್ವಿಗಳು ಅವನನ್ನು ಉತ್ಸಾಹದಿಂದ ಆದರಿಸಿ ಸತ್ಕರಿಸಿದರು.

13010011a ತಾಂಸ್ತು ದೃಷ್ಟ್ವಾ ಮುನಿಗಣಾನ್ದೇವಕಲ್ಪಾನ್ಮಹೌಜಸಃ।
13010011c ವಹತೋ ವಿವಿಧಾ ದೀಕ್ಷಾಃ ಸಂಪ್ರಹೃಷ್ಯತ ಭಾರತ।।

ಭಾರತ! ಮತ್ತು ವಿವಿಧ ದೀಕ್ಷೆಗಳನ್ನು ನಡೆಸುತ್ತಿದ್ದ ಆ ದೇವಕಲ್ಪ ಮಹೌಜಸ ಮುನಿಗಣಗಳನ್ನು ನೋಡಿ ಅವನಿಗೆ ಅತ್ಯಂತ ಸಂತೋಷವಾಯಿತು.

13010012a ಅಥಾಸ್ಯ ಬುದ್ಧಿರಭವತ್ತಪಸ್ಯೇ ಭರತರ್ಷಭ।
13010012c ತತೋಽಬ್ರವೀತ್ಕುಲಪತಿಂ ಪಾದೌ ಸಂಗೃಹ್ಯ ಭಾರತ।।

ಭರತರ್ಷಭ! ಭಾರತ! ಆಗ ಅವನಿಗೆ ತಪಸ್ಸನ್ನಾಚರಿಸುವ ಬುದ್ಧಿಯುಂಟಾಯಿತು. ಕುಲಪತಿಯ ಪಾದಗಳನ್ನು ಹಿಡಿದು ಅವನು ಹೇಳಿದನು:

13010013a ಭವತ್ಪ್ರಸಾದಾದಿಚ್ಚಾಮಿ ಧರ್ಮಂ ಚರ್ತುಂ ದ್ವಿಜರ್ಷಭ।
13010013c ತನ್ಮಾಂ ತ್ವಂ ಭಗವನ್ವಕ್ತುಂ ಪ್ರವ್ರಾಜಯಿತುಮರ್ಹಸಿ।।

“ದ್ವಿಜರ್ಷಭ! ನಿನ್ನ ಪ್ರಸಾದದಿಂದ ನಾನು ಧರ್ಮವನ್ನು ಆಚರಿಸಲು ಇಚ್ಛಿಸುತ್ತೇನೆ. ಭಗವನ್! ಆದುದರಿಂದ ನೀನು ನನಗೆ ಪ್ರವ್ರಾಜನನ್ನಾಗಿ ಮಾಡಬೇಕು.

13010014a ವರ್ಣಾವರೋಽಹಂ ಭಗವನ್ಶೂದ್ರೋ ಜಾತ್ಯಾಸ್ಮಿ ಸತ್ತಮ।
13010014c ಶುಶ್ರೂಷಾಂ ಕರ್ತುಮಿಚ್ಚಾಮಿ ಪ್ರಪನ್ನಾಯ ಪ್ರಸೀದ ಮೇ।।

ಸತ್ತಮ! ಭಗವನ್! ಕಡೆಯ ವರ್ಣದ ಶೂದ್ರನಾಗಿ ಹುಟ್ಟಿದ್ದೇನೆ. ಶುಶ್ರೂಷೆ ಮಾಡಲು ಬಯಸುತ್ತೇನೆ. ಶರಣಾಗತನಾಗಿರುವ ನನ್ನ ಮೇಲೆ ಕರುಣೆ ತೋರು.”

13010015 ಕುಲಪತಿರುವಾಚ।
13010015a ನ ಶಕ್ಯಮಿಹ ಶೂದ್ರೇಣ ಲಿಂಗಮಾಶ್ರಿತ್ಯ ವರ್ತಿತುಮ್।
13010015c ಆಸ್ಯತಾಂ ಯದಿ ತೇ ಬುದ್ಧಿಃ ಶುಶ್ರೂಷಾನಿರತೋ ಭವ।।

ಕುಲಪತಿಯು ಹೇಳಿದನು: “ಶೂದ್ರನಾದವನು ಪ್ರವ್ರಾಜನ ಚಿಹ್ನೆಯನ್ನು ಧರಿಸಿ ಇರಲು ಶಕ್ಯವಿಲ್ಲ. ಇಲ್ಲಿರಲು ನಿನ್ನ ಮನಸ್ಸಾದರೆ ಶುಶ್ರೂಷನಿರತನಾಗಿ ಇರು!””

13010016 ಭೀಷ್ಮ ಉವಾಚ।
13010016a ಏವಮುಕ್ತಸ್ತು ಮುನಿನಾ ಸ ಶೂದ್ರೋಽಚಿಂತಯನ್ನೃಪ।
13010016c ಕಥಮತ್ರ ಮಯಾ ಕಾರ್ಯಂ ಶ್ರದ್ಧಾ ಧರ್ಮೇ ಪರಾ ಚ ಮೇ।
13010016e ವಿಜ್ಞಾತಮೇವಂ ಭವತು ಕರಿಷ್ಯೇ ಪ್ರಿಯಮಾತ್ಮನಃ।।

ಭೀಷ್ಮನು ಹೇಳಿದನು: “ನೃಪ! ಮುನಿಯು ಹೀಗೆ ಹೇಳಲು ಶೂದ್ರನು ಯೋಚಿಸಿದನು: “ಧರ್ಮದ ಮೇಲಿರುವ ನನ್ನ ಪರಮಶ್ರದ್ಧೆಯನ್ನು ಹೇಗೆ ಕಾರ್ಯಗತಗೊಳಿಸಲಿ? ತಿಳಿಯಿತು! ನನಗೆ ಪ್ರಿಯವಾದುದನ್ನೇ ಮಾಡುತ್ತೇನೆ!”

13010017a ಗತ್ವಾಶ್ರಮಪದಾದ್ದೂರಮುಟಜಂ ಕೃತವಾಂಸ್ತು ಸಃ।
13010017c ತತ್ರ ವೇದಿಂ ಚ ಭೂಮಿಂ ಚ ದೇವತಾಯತನಾನಿ ಚ।
13010017e ನಿವೇಶ್ಯ ಭರತಶ್ರೇಷ್ಠ ನಿಯಮಸ್ಥೋಽಭವತ್ಸುಖಮ್।।

ಆ ಆಶ್ರಮಪದದಿಂದ ದೂರ ಹೋಗಿ ಅಲ್ಲೊಂದು ಗುಡಿಸಲನ್ನು ಕಟ್ಟಿಕೊಂಡನು. ಅಲ್ಲಿ ವೇದಿಯನ್ನೂ, ವಾಸಸ್ಥಳವನ್ನೂ, ದೇವಾಲಯವನ್ನೂ ಕಲ್ಪಿಸಿಕೊಂಡು ನಿಯಮಸ್ಥನಾಗಿ ವಾಸಿಸಿ ಸುಖದಿಂದ ಇರತೊಡಗಿದನು.

13010018a ಅಭಿಷೇಕಾಂಶ್ಚ ನಿಯಮಾನ್ದೇವತಾಯತನೇಷು ಚ।
13010018c ಬಲಿಂ ಚ ಕೃತ್ವಾ ಹುತ್ವಾ ಚ ದೇವತಾಂ ಚಾಪ್ಯಪೂಜಯತ್।।

ನಿಯಮದಿಂದ ಸ್ನಾನಮಾಡಿ ದೇವತಾಸ್ಥಾನದಲ್ಲಿ ಬಲಿಯನ್ನಿತ್ತು, ಹೋಮಮಾಡಿ ದೇವತೆಗಳನ್ನು ಪೂಜಿಸುತ್ತಿದ್ದನು.

13010019a ಸಂಕಲ್ಪನಿಯಮೋಪೇತಃ ಫಲಾಹಾರೋ ಜಿತೇಂದ್ರಿಯಃ।
13010019c ನಿತ್ಯಂ ಸಂನಿಹಿತಾಭಿಶ್ಚ ಓಷಧೀಭಿಃ ಫಲೈಸ್ತಥಾ।।
13010020a ಅತಿಥೀನ್ಪೂಜಯಾಮಾಸ ಯಥಾವತ್ಸಮುಪಾಗತಾನ್।
13010020c ಏವಂ ಹಿ ಸುಮಹಾನ್ಕಾಲೋ ವ್ಯತ್ಯಕ್ರಾಮತ್ಸ ತಸ್ಯ ವೈ।।

ಸಂಕಲ್ಪನಿಯಮಗಳಿಂದ ಕೂಡಿ ಫಲಾಹಾರನೂ ಜಿತೇಂದ್ರಿಯನೂ ಆಗಿದ್ದ ಅವನು ನಿತ್ಯವೂ ಅಲ್ಲಿಗೆ ಆಗಮಿಸುತ್ತಿದ್ದ ಅತಿಥಿಗಳನ್ನು ಹತ್ತಿರದಲ್ಲಿಯೇ ದೊರಕುತ್ತಿದ್ದ ಮೂಲಿಕೆಗಳು ಮತ್ತು ಹಣ್ಣುಗಳಿಂದ ಸತ್ಕರಿಸುತ್ತಿದ್ದನು. ಹೀಗೆ ಅವನು ಬಹಳ ಸಮಯವನ್ನು ಕಳೆದನು.

13010021a ಅಥಾಸ್ಯ ಮುನಿರಾಗಚ್ಚತ್ಸಂಗತ್ಯಾ ವೈ ತಮಾಶ್ರಮಮ್।
13010021c ಸಂಪೂಜ್ಯ ಸ್ವಾಗತೇನರ್ಷಿಂ ವಿಧಿವತ್ಪರ್ಯತೋಷಯತ್।।

ಒಮ್ಮೆ ಸತ್ಸಂಗವನ್ನು ಬಯಸಿ ಅವನ ಆಶ್ರಮಕ್ಕೆ ಓರ್ವ ಮುನಿಯು ಆಗಮಿಸಿದನು. ಅವನನ್ನು ಆ ಋಷಿಯನ್ನು ವಿಥಿವತ್ತಾಗಿ ಸ್ವಾಗತಿಸಿ ಪೂಜಿಸಿ ಸಂತುಷ್ಟಗೊಳಿಸಿದನು.

13010022a ಅನುಕೂಲಾಃ ಕಥಾಃ ಕೃತ್ವಾ ಯಥಾವತ್ಪರ್ಯಪೃಚ್ಚತ।
13010022c ಋಷಿಃ ಪರಮತೇಜಸ್ವೀ ಧರ್ಮಾತ್ಮಾ ಸಂಯತೇಂದ್ರಿಯಃ।।

ಅನುಕೂಲಕರ ಮಾತುಗಳನ್ನಾಡುತ್ತಾ ಆ ಪರಮತೇಜಸ್ವೀ ಧರ್ಮಾತ್ಮಾ ಸಂಯತೇಂದ್ರಿಯ ಋಷಿಯು ಯಥಾವತ್ತಾಗಿ ಹೊರಟುಹೋದನು.

13010023a ಏವಂ ಸ ಬಹುಶಸ್ತಸ್ಯ ಶೂದ್ರಸ್ಯ ಭರತರ್ಷಭ।
13010023c ಸೋಽಗಚ್ಚದಾಶ್ರಮಮೃಷಿಃ ಶೂದ್ರಂ ದ್ರಷ್ಟುಂ ನರರ್ಷಭ।।

ನರರ್ಷಭ! ಭರತರ್ಷಭ! ಹೀಗೆ ಅನೇಕಬಾರಿ ಶೂದ್ರನನ್ನು ನೋಡಲು ಆ ಋಷಿಯು ಅವನ ಆಶ್ರಮಕ್ಕೆ ಹೋದನು.

13010024a ಅಥ ತಂ ತಾಪಸಂ ಶೂದ್ರಃ ಸೋಽಬ್ರವೀದ್ಭರತರ್ಷಭ।
13010024c ಪಿತೃಕಾರ್ಯಂ ಕರಿಷ್ಯಾಮಿ ತತ್ರ ಮೇಽನುಗ್ರಹಂ ಕುರು।।

ಭರತರ್ಷಭ! ಒಮ್ಮೆ ಆ ಶೂದ್ರನು ತಾಪಸನಿಗೆ ಹೇಳಿದನು: “ಪಿತೃಕಾರ್ಯವನ್ನು ಮಾಡುತ್ತೇನೆ. ಅದಕ್ಕೆ ನನಗೆ ಅನುಗ್ರಹಿಸು.”

13010025a ಬಾಢಮಿತ್ಯೇವ ತಂ ವಿಪ್ರ ಉವಾಚ ಭರತರ್ಷಭ।
13010025c ಶುಚಿರ್ಭೂತ್ವಾ ಸ ಶೂದ್ರಸ್ತು ತಸ್ಯರ್ಷೇಃ ಪಾದ್ಯಮಾನಯತ್।।

ಭರತರ್ಷಭ! ವಿಪ್ರನು ಹಾಗೆಯೇ ಆಗಲೆಂದು ಹೇಳಿದನು. ಶೂದ್ರನಾದರೋ ಶುಚಿಯಾಗಿ ಆ ಋಷಿಗೆ ಪಾದ್ಯವನ್ನು ತಂದನು.

13010026a ಅಥ ದರ್ಭಾಂಶ್ಚ ವನ್ಯಾಶ್ಚ ಓಷಧೀರ್ಭರತರ್ಷಭ।
13010026c ಪವಿತ್ರಮಾಸನಂ ಚೈವ ಬೃಸೀಂ ಚ ಸಮುಪಾನಯತ್।।

ಭರತರ್ಷಭ! ಅನಂತರ ಅವನು ದರ್ಭೆಗಳನ್ನೂ, ವನ್ಯ ಮೂಲಿಕಗಳನ್ನೂ, ಪವಿತ್ರ ಆಸನವನ್ನೂ, ಚಾಪೆಯನ್ನೂ ತಂದನು.

13010027a ಅಥ ದಕ್ಷಿಣಮಾವೃತ್ಯ ಬೃಸೀಂ ಪರಮಶೀರ್ಷಿಕಾಮ್।
13010027c ಕೃತಾಮನ್ಯಾಯತೋ ದೃಷ್ಟ್ವಾ ತತಸ್ತಮೃಷಿರಬ್ರವೀತ್।।

ಋಷಿಯು ಕುಳಿತುಕೊಳ್ಳಲು ಚಾಪೆಯನ್ನು ದಕ್ಷಿಣದಿಕ್ಕಿಗೆ ಅಭಿಮುಖವಾಗಿ ಹಾಕಿ, ಆಸನ ಕೂರ್ಚವನ್ನು ಪಶ್ಚಿಮಾಗ್ರವಾಗಿ ಹಾಕಿದನು. ಅದನ್ನು ನೋಡಿ ಋಷಿಯು ಹೇಳಿದನು:

13010028a ಕುರುಷ್ವೈತಾಂ ಪೂರ್ವಶೀರ್ಷಾಂ ಭವ ಚೋದಙ್ಮುಖಃ ಶುಚಿಃ।
13010028c ಸ ಚ ತತ್ಕೃತವಾನ್ಶೂದ್ರಃ ಸರ್ವಂ ಯದೃಷಿರಬ್ರವೀತ್।।

“ಈ ಆಸನ ಕೂರ್ಚವನ್ನು ಪೂರ್ವಾಗ್ರವಾಗಿ ಮಾಡು. ನೀನು ಶುಚಿಯಾಗಿ ಉತ್ತರಾಭಿಮುಖವಾಗಿ ಕುಳಿತುಕೋ!” ಋಷಿಯು ಹೇಳಿದಂತೆಯೇ ಶೂದ್ರನು ಎಲ್ಲವನ್ನೂ ಮಾಡಿದನು.

13010029a ಯಥೋಪದಿಷ್ಟಂ ಮೇಧಾವೀ ದರ್ಭಾದೀಂಸ್ತಾನ್ಯಥಾತಥಮ್।
13010029c ಹವ್ಯಕವ್ಯವಿಧಿಂ ಕೃತ್ಸ್ನಮುಕ್ತಂ ತೇನ ತಪಸ್ವಿನಾ।।

ಉಪದೇಶಿಸಲ್ಪಟ್ಟಂತೆ ಆ ಮೇಧಾವಿಯು ದರ್ಭಾದಿಗಳನ್ನು ಹೇಗೆ ಬಳಸಬೇಕೋ ಹಾಗೆ ಬಳಸಿದನು. ಆ ತಪಸ್ವಿಯು ಹೇಳಿದಂತೆಯೇ ಹವ್ಯಕವ್ಯವಿಧಿಗಳೆಲ್ಲವನ್ನೂ ಮಾಡಿದನು.

13010030a ಋಷಿಣಾ ಪಿತೃಕಾರ್ಯೇ ಚ ಸ ಚ ಧರ್ಮಪಥೇ ಸ್ಥಿತಃ।
13010030c ಪಿತೃಕಾರ್ಯೇ ಕೃತೇ ಚಾಪಿ ವಿಸೃಷ್ಟಃ ಸ ಜಗಾಮ ಹ।।

ಋಷಿಯ ನಿರ್ದೇಶನದಂತೆಯೇ ಧರ್ಮಪಥದಲ್ಲಿ ನಿಂತು ಅವನು ಪಿತೃಕಾರ್ಯಗಳನ್ನು ಮುಗಿಸಿದ ನಂತರ, ಋಷಿಯು ಹೊರಟುಹೋದನು.

13010031a ಅಥ ದೀರ್ಘಸ್ಯ ಕಾಲಸ್ಯ ಸ ತಪ್ಯನ್ಶೂದ್ರತಾಪಸಃ।
13010031c ವನೇ ಪಂಚತ್ವಮಗಮತ್ಸುಕೃತೇನ ಚ ತೇನ ವೈ।
13010031e ಅಜಾಯತ ಮಹಾರಾಜರಾಜವಂಶೇ ಮಹಾದ್ಯುತಿಃ।।

ದೀರ್ಘಕಾಲದವರೆಗೆ ತಪಸ್ಸನ್ನು ತಪಿಸಿ ಆ ಶೂದ್ರತಪಸ್ವಿಯು ವನದಲ್ಲಿಯೇ ಪಂಚತ್ವವನ್ನು ಹೊಂದಿದನು. ಮಹಾರಾಜ! ಅವನ ಕರ್ಮಫಲಗಳಿಂದಾಗಿ ಅವನು ರಾಜವಂಶದಲ್ಲಿ ಮಹಾದ್ಯುತಿಯಾಗಿ ಜನಿಸಿದನು.

13010032a ತಥೈವ ಸ ಋಷಿಸ್ತಾತ ಕಾಲಧರ್ಮಮವಾಪ್ಯ ಹ।
13010032c ಪುರೋಹಿತಕುಲೇ ವಿಪ್ರ ಆಜಾತೋ ಭರತರ್ಷಭ।।

ಭರತರ್ಷಭ! ಮಗೂ! ಹಾಗೆಯೇ ಆ ಋಷಿಯೂ ಕಾಲಧರ್ಮವನ್ನು ಹೊಂದಿ ಪುರೋಹಿತಕುಲದಲ್ಲಿ ವಿಪ್ರನಾಗಿ ಜನಿಸಿದನು.

13010033a ಏವಂ ತೌ ತತ್ರ ಸಂಭೂತಾವುಭೌ ಶೂದ್ರಮುನೀ ತದಾ।
13010033c ಕ್ರಮೇಣ ವರ್ಧಿತೌ ಚಾಪಿ ವಿದ್ಯಾಸು ಕುಶಲಾವುಭೌ।।

ಹೀಗೆ ಶೂದ್ರಮುನಿ ಮತ್ತು ಋಷಿ ಇಬ್ಬರೂ ಹಾಗೆ ಹುಟ್ಟಿ ಕ್ರಮೇಣ ಬೆಳೆದರು. ಇಬ್ಬರೂ ವಿದ್ಯೆಗಳಲ್ಲಿ ಕುಶಲರಾಗಿದ್ದರು.

13010034a ಅಥರ್ವವೇದೇ ವೇದೇ ಚ ಬಭೂವರ್ಷಿಃ ಸುನಿಶ್ಚಿತಃ।
13010034c ಕಲ್ಪಪ್ರಯೋಗೇ ಚೋತ್ಪನ್ನೇ ಜ್ಯೋತಿಷೇ ಚ ಪರಂ ಗತಃ।
13010034e ಸಖ್ಯೇ ಚಾಪಿ ಪರಾ ಪ್ರೀತಿಸ್ತಯೋಶ್ಚಾಪಿ ವ್ಯವರ್ಧತ।।

ಪುರೋಹಿತಕುಲದಲ್ಲಿ ಹುಟ್ಟಿದ ಋಷಿಯು ವೇದಗಳಲ್ಲಿ, ಅದರಲ್ಲೂ ವಿಶೇಷವಾಗಿ ಅಥರ್ವವೇದದಲ್ಲಿ, ಪೂರ್ಣ ಪಾಂಡಿತ್ಯವನ್ನು ಪಡೆದಿದ್ದನು. ಕಲ್ಪ ಪ್ರಯೋಗ ಮತ್ತು ಜ್ಯೋತಿಃಶಾಸ್ತ್ರಗಳಲ್ಲಿ ಪಾರಂಗತನಾಗಿದ್ದನು. ಸಾಂಖ್ಯಶಾಸ್ತ್ರದಲ್ಲಿಯೂ ಅವನಿಗೆ ವಿಶೇಷ ಆಸಕ್ತಿಯಿದ್ದಿತು.

13010035a ಪಿತರ್ಯುಪರತೇ ಚಾಪಿ ಕೃತಶೌಚಃ ಸ ಭಾರತ।
13010035c ಅಭಿಷಿಕ್ತಃ ಪ್ರಕೃತಿಭೀ ರಾಜಪುತ್ರಃ ಸ ಪಾರ್ಥಿವಃ।
13010035e ಅಭಿಷಿಕ್ತೇನ ಸ ಋಷಿರಭಿಷಿಕ್ತಃ ಪುರೋಹಿತಃ।।

ಭಾರತ! ತಂದೆಯು ಮರಣಹೊಂದಲು ಶೌಚಗಳು ಮುಗಿದನಂತರ ಆ ರಾಜಪುತ್ರನು ಪ್ರಜೆಗಳಿಂದ ಪಾರ್ಥಿವನಾಗಿ ಅಭಿಷಿಕ್ತನಾದನು. ಅವನು ಅಭಿಷಿಕ್ತನಾದಾಗಲೇ ಋಷಿಯೂ ಅವನ ಪುರೋಹಿತನಾಗಿ ಅಭಿಷಿಕ್ತನಾದನು.

13010036a ಸ ತಂ ಪುರೋಧಾಯ ಸುಖಮವಸದ್ಭರತರ್ಷಭ।
13010036c ರಾಜ್ಯಂ ಶಶಾಸ ಧರ್ಮೇಣ ಪ್ರಜಾಶ್ಚ ಪರಿಪಾಲಯನ್।।

ಭರತರ್ಷಭ! ಅವನನ್ನು ಪುರೋಹಿತನನ್ನಾಗಿ ಪಡೆದು ರಾಜನು ಸುಖವಾಗಿದ್ದನು. ಧರ್ಮದಿಂದ ರಾಜ್ಯವನ್ನಾಳಿದನು ಮತ್ತು ಪ್ರಜೆಗಳನ್ನು ಪರಿಪಾಲಿಸಿದನು.

13010037a ಪುಣ್ಯಾಹವಾಚನೇ ನಿತ್ಯಂ ಧರ್ಮಕಾರ್ಯೇಷು ಚಾಸಕೃತ್।
13010037c ಉತ್ಸ್ಮಯನ್ಪ್ರಾಹಸಚ್ಚಾಪಿ ದೃಷ್ಟ್ವಾ ರಾಜಾ ಪುರೋಹಿತಮ್।
13010037e ಏವಂ ಸ ಬಹುಶೋ ರಾಜನ್ಪುರೋಧಸಮುಪಾಹಸತ್।।

ನಿತ್ಯವೂ ಪುಣ್ಯಾಹವಾಚನ ಮತ್ತು ಧರ್ಮಕಾರ್ಯಗಳನ್ನು ನಡೆಸುತ್ತಿರುವಾಗ ರಾಜನು ಪುರೋಹಿತನನ್ನು ನೋಡಿ ನಸುನಗುತ್ತಿದ್ದನು ಮತ್ತು ಹಲವು ಬಾರಿ ಜೋರಾಗಿ ನಗುತ್ತಿದ್ದನು ಕೂಡ. ಹೀಗೆ ರಾಜನು ಪುರೋಹಿತನ ಅಪಹಾಸ್ಯಮಾಡುತ್ತಿದ್ದನು.

13010038a ಲಕ್ಷಯಿತ್ವಾ ಪುರೋಧಾಸ್ತು ಬಹುಶಸ್ತಂ ನರಾಧಿಪಮ್।
13010038c ಉತ್ಸ್ಮಯಂತಂ ಚ ಸತತಂ ದೃಷ್ಟ್ವಾಸೌ ಮನ್ಯುಮಾನಭೂತ್।।

ನರಾಧಿಪನು ಸತತವೂ ನಸುನಗುವುದನ್ನು ನೋಡಿ ಪುರೋಹಿತನಿಗೆ ಕೋಪವುಂಟಾಯಿತು. ಆದರೆ ರಾಜನ ಮುಂದೆ ಕೋಪವನ್ನು ಪ್ರಕಟಗೊಳಿಸಲಾಗುತ್ತಿರಲಿಲ್ಲ.

13010039a ಅಥ ಶೂನ್ಯೇ ಪುರೋಧಾಸ್ತು ಸಹ ರಾಜ್ಞಾ ಸಮಾಗತಃ।
13010039c ಕಥಾಭಿರನುಕೂಲಾಭೀ ರಾಜಾನಮಭಿರಾಮಯತ್।।

ಒಮ್ಮೆ ಪುರೋಹಿತನು ರಾಜನನ್ನು ಏಕಾಂತದಲ್ಲಿ ಭೇಟಿಯಾದನು. ಅನುಕೂಲಕರ ಮಾತುಗಳಿಂದ ರಾಜನನ್ನು ಸಂತುಷ್ಟಗೊಳಿಸಿದನು.

13010040a ತತೋಽಬ್ರವೀನ್ನರೇಂದ್ರಂ ಸ ಪುರೋಧಾ ಭರತರ್ಷಭ।
13010040c ವರಮಿಚ್ಚಾಮ್ಯಹಂ ತ್ವೇಕಂ ತ್ವಯಾ ದತ್ತಂ ಮಹಾದ್ಯುತೇ।।

ಭರತರ್ಷಭ! ಆಗ ಪುರೋಹಿತನು ನರೇಂದ್ರನಿಗೆ ಹೇಳಿದನು: “ಮಹಾದ್ಯುತೇ! ನಿನ್ನಿಂದ ಒಂದು ವರವನ್ನು ಪಡೆದುಕೊಳ್ಳಲು ಬಯಸುತ್ತೇನೆ.”

13010041 ರಾಜೋವಾಚ।
13010041a ವರಾಣಾಂ ತೇ ಶತಂ ದದ್ಯಾಂ ಕಿಮುತೈಕಂ ದ್ವಿಜೋತ್ತಮ।
13010041c ಸ್ನೇಹಾಚ್ಚ ಬಹುಮಾನಾಚ್ಚ ನಾಸ್ತ್ಯದೇಯಂ ಹಿ ಮೇ ತವ।।

ರಾಜನು ಹೇಳಿದನು: “ದ್ವಿಜೋತ್ತಮ! ಒಂದೇ ವರವೇಕೆ? ನೂರು ವರಗಳನ್ನಾದರೂ ಕೊಡಬಲ್ಲೆ. ನಿನ್ನ ಮೇಲಿನ ಸ್ನೇಹದಿಂದಾಗಿ ನನಗೆ ನಿನಗೆ ಕೊಡಬಾರದೆನ್ನುವ ವಸ್ತುವೇ ಇಲ್ಲವಾಗಿದೆ.”

13010042 ಪುರೋಹಿತ ಉವಾಚ।
13010042a ಏಕಂ ವೈ ವರಮಿಚ್ಚಾಮಿ ಯದಿ ತುಷ್ಟೋಽಸಿ ಪಾರ್ಥಿವ।
13010042c ಯದ್ದದಾಸಿ ಮಹಾರಾಜ ಸತ್ಯಂ ತದ್ವದ ಮಾನೃತಮ್।।

ಪುರೋಹಿತನು ಹೇಳಿದನು: “ಪಾರ್ಥಿವ! ನೀನು ಸಂತುಷ್ಟನಾಗಿದ್ದರೆ ಒಂದೇ ವರವನ್ನು ಬಯಸುತ್ತೇನೆ. ಮಹಾರಾಜ! ಅದನ್ನು ಕೊಡುತ್ತೇನೆ ಎನ್ನುವ ಸತ್ಯವನ್ನು ನುಡಿ. ಸುಳ್ಳನ್ನಾಡಬೇಡ!””

13010043 ಭೀಷ್ಮ ಉವಾಚ।
13010043a ಬಾಢಮಿತ್ಯೇವ ತಂ ರಾಜಾ ಪ್ರತ್ಯುವಾಚ ಯುಧಿಷ್ಠಿರ।
13010043c ಯದಿ ಜ್ಞಾಸ್ಯಾಮಿ ವಕ್ಷ್ಯಾಮಿ ಅಜಾನನ್ನ ತು ಸಂವದೇ।।

ಭೀಷ್ಮನು ಹೇಳಿದನು: “ಯುಧಿಷ್ಠಿರ! ಹಾಗೆಯೇ ಆಗಲಿ ಎಂದು ರಾಜನು ಉತ್ತರಿಸಿದನು. “ನನಗೆ ತಿಳಿದಿದ್ದರೆ ಹೇಳುತ್ತೇನೆ. ತಿಳಿಯದೇ ಇದ್ದರೆ ಹೇಳುವುದಿಲ್ಲ.”

13010044 ಪುರೋಹಿತ ಉವಾಚ।
13010044a ಪುಣ್ಯಾಹವಾಚನೇ ನಿತ್ಯಂ ಧರ್ಮಕೃತ್ಯೇಷು ಚಾಸಕೃತ್।
13010044c ಶಾಂತಿಹೋಮೇಷು ಚ ಸದಾ ಕಿಂ ತ್ವಂ ಹಸಸಿ ವೀಕ್ಷ್ಯ ಮಾಮ್।।

ಪುರೋಹಿತನು ಹೇಳಿದನು: “ನಿತ್ಯವೂ ಪುಣ್ಯಾಹವಾಚನ ಮತ್ತು ಶಾಂತಿಹೋಮ ಮೊದಲಾದ ಧರ್ಮಕಾರ್ಯಗಳನ್ನು ಮಾಡಿಸುವಾಗ, ಏಕೆ ನೀನು ಸದಾ ನನ್ನನ್ನು ನೋಡಿ ನಗುತ್ತಿರುತ್ತೀಯೆ?

13010045a ಸವ್ರೀಡಂ ವೈ ಭವತಿ ಹಿ ಮನೋ ಮೇ ಹಸತಾ ತ್ವಯಾ।
13010045c ಕಾಮಯಾ ಶಾಪಿತೋ ರಾಜನ್ನಾನ್ಯಥಾ ವಕ್ತುಮರ್ಹಸಿ।।

ನೀನು ನನ್ನ ಕುರಿತು ನಗುವಾಗ ನನ್ನ ಮನಸ್ಸಿಗೆ ತುಂಬಾ ನಾಚಿಕೆಯಾಗುತ್ತದೆ. ರಾಜನ್! ಆಣೆಯಿಟ್ಟು ಹೇಳುತ್ತಿದ್ದೇನೆ. ಅನ್ಯಥಾ ಹೇಳಬಾರದು.

13010046a ಭಾವ್ಯಂ ಹಿ ಕಾರಣೇನಾತ್ರ ನ ತೇ ಹಾಸ್ಯಮಕಾರಣಮ್।
13010046c ಕೌತೂಹಲಂ ಮೇ ಸುಭೃಶಂ ತತ್ತ್ವೇನ ಕಥಯಸ್ವ ಮೇ।।

ಇದಕ್ಕೆ ಯಾವುದೋ ಒಂದು ಕಾರಣವಿದೆ. ಅಕಾರಣವಾಗಿ ನೀನು ನನ್ನನ್ನು ಹಾಸ್ಯಮಾಡುತ್ತಿಲ್ಲ. ಇದರ ಕುರಿತು ನನಗೆ ತುಂಬಾ ಕುತೂಹಲವಾಗಿದೆ. ತತ್ತ್ವಯುತವಾಗಿ ನನಗೆ ಹೇಳು.”

13010047 ರಾಜೋವಾಚ।
13010047a ಏವಮುಕ್ತೇ ತ್ವಯಾ ವಿಪ್ರ ಯದವಾಚ್ಯಂ ಭವೇದಪಿ।
13010047c ಅವಶ್ಯಮೇವ ವಕ್ತವ್ಯಂ ಶೃಣುಷ್ವೈಕಮನಾ ದ್ವಿಜ।।

ರಾಜನು ಹೇಳಿದನು: “ವಿಪ್ರ! ದ್ವಿಜ! ನೀನು ಇದನ್ನು ಕೇಳಿದುದರಿಂದ ಹೇಳಬಾರದಾಗಿದ್ದರೂ ಅವಶ್ಯವಾಗಿ ಅದನ್ನು ಹೇಳಲೇ ಬೇಕಾಗಿದೆ. ಏಕಮನಸ್ಕನಾಗಿ ಕೇಳು.

13010048a ಪೂರ್ವದೇಹೇ ಯಥಾ ವೃತ್ತಂ ತನ್ನಿಬೋಧ ದ್ವಿಜೋತ್ತಮ।
13010048c ಜಾತಿಂ ಸ್ಮರಾಮ್ಯಹಂ ಬ್ರಹ್ಮನ್ನವಧಾನೇನ ಮೇ ಶೃಣು।।

ದ್ವಿಜೋತ್ತಮ! ಪೂರ್ವದೇಹದಲ್ಲಿ ಏನಾಯಿತು ಎನ್ನುವುದನ್ನು ಕೇಳು. ಬ್ರಹ್ಮನ್! ಪೂರ್ವಜನ್ಮವು ನನ್ನ ಸ್ಮರಣೆಯಲ್ಲಿದೆ. ಏಕಾಗ್ರಚಿತ್ತನಾಗಿ ನನ್ನನ್ನು ಕೇಳು.

13010049a ಶೂದ್ರೋಽಹಮಭವಂ ಪೂರ್ವಂ ತಾಪಸೋ ಭೃಶಸಂಯುತಃ।
13010049c ಋಷಿರುಗ್ರತಪಾಸ್ತ್ವಂ ಚ ತದಾಭೂರ್ದ್ವಿಜಸತ್ತಮ।।

ದ್ವಿಜಸತ್ತಮ! ಹಿಂದೆ ನಾನು ಶೂದ್ರನಾಗಿದ್ದೆ. ಮಹಾ ತಪಸ್ಸಿನಿಂದ ಕೂಡಿದ್ದೆ. ನೀನು ಆಗ ಉಗ್ರತಪಸ್ವಿ ಋಷಿಯಾಗಿದ್ದೆ.

13010050a ಪ್ರೀಯತಾ ಹಿ ತದಾ ಬ್ರಹ್ಮನ್ಮಮಾನುಗ್ರಹಬುದ್ಧಿನಾ।
13010050c ಪಿತೃಕಾರ್ಯೇ ತ್ವಯಾ ಪೂರ್ವಮುಪದೇಶಃ ಕೃತೋಽನಘ।
13010050e ಬೃಸ್ಯಾಂ ದರ್ಭೇಷು ಹವ್ಯೇ ಚ ಕವ್ಯೇ ಚ ಮುನಿಸತ್ತಮ।।

ಬ್ರಹ್ಮನ್! ಅನಘ! ಮುನಿಸತ್ತಮ! ಆಗ ಪ್ರೀತಿಯಿಂದ ನನ್ನ ಮೇಲಿನ ಅನುಗ್ರಹ ಬುದ್ಧಿಯಿಂದ ನೀನು ಹಿಂದೆ ಪಿತೃಕಾರ್ಯದಲ್ಲಿ ಚಾಪೆ, ದರ್ಭೆ ಮತ್ತು ಹವ್ಯ-ಕವ್ಯಗಳ ವಿಷಯಗಳಲ್ಲಿ ನನಗೆ ಉಪದೇಶಮಾಡಿದ್ದೆ.

13010051a ಏತೇನ ಕರ್ಮದೋಷೇಣ ಪುರೋಧಾಸ್ತ್ವಮಜಾಯಥಾಃ।
13010051c ಅಹಂ ರಾಜಾ ಚ ವಿಪ್ರೇಂದ್ರ ಪಶ್ಯ ಕಾಲಸ್ಯ ಪರ್ಯಯಮ್।
13010051e ಮತ್ಕೃತೇ ಹ್ಯುಪದೇಶೇನ ತ್ವಯಾ ಪ್ರಾಪ್ತಮಿದಂ ಫಲಮ್।।

ಈ ಕರ್ಮದೋಷದಿಂದ ನೀನು ಪುರೋಹಿತನಾಗಿ ಹುಟ್ಟಿದೆ. ವಿಪ್ರೇಂದ್ರ! ನಾನು ರಾಜನಾಗಿ ಹುಟ್ಟಿದೆ. ಕಾಲದ ಪರ್ಯಯವನ್ನು ನೋಡು! ನನಗೆ ಉಪದೇಶಮಾಡಿದುದರಿಂದ ನಿನಗೆ ಈ ಫಲವು ಪ್ರಾಪ್ತವಾಯಿತು.

13010052a ಏತಸ್ಮಾತ್ಕಾರಣಾದ್ಬ್ರಹ್ಮನ್ಪ್ರಹಸೇ ತ್ವಾಂ ದ್ವಿಜೋತ್ತಮ।
13010052c ನ ತ್ವಾಂ ಪರಿಭವನ್ಬ್ರಹ್ಮನ್ಪ್ರಹಸಾಮಿ ಗುರುರ್ಭವಾನ್।।

ಬ್ರಹ್ಮನ್! ದ್ವಿಜೋತ್ತಮ! ಈ ಕಾರಣದಿಂದಲೇ ನಾನು ನಿನ್ನನ್ನು ನೋಡಿ ನಗುತ್ತಿದ್ದೆ. ನಿನ್ನನ್ನು ಅಪಮಾನಗೊಳಿಸಲು ನಾನು ನಗುತ್ತಿರಲಿಲ್ಲ. ನೀನು ನನ್ನ ಗುರುವಾಗಿರುವೆ!

13010053a ವಿಪರ್ಯಯೇಣ ಮೇ ಮನ್ಯುಸ್ತೇನ ಸಂತಪ್ಯತೇ ಮನಃ।
13010053c ಜಾತಿಂ ಸ್ಮರಾಮ್ಯಹಂ ತುಭ್ಯಮತಸ್ತ್ವಾಂ ಪ್ರಹಸಾಮಿ ವೈ।।

ಈ ವೈಪರೀತ್ಯದಿಂದಾಗಿ ನನ್ನ ಮನಸ್ಸಿಗೆ ಖೇದವುಂಟಾಗಿದೆ. ಪರಿತಾಪವುಂಟಾಗುತ್ತಿದೆ. ನಮ್ಮ ಹಿಂದಿನ ಜನ್ಮವನ್ನು ಸ್ಮರಿಸಿಕೊಂಡು ನಿನ್ನನ್ನು ನೋಡಿದಾಗಲೆಲ್ಲಾ ನಗುತ್ತೇನೆ.

13010054a ಏವಂ ತವೋಗ್ರಂ ಹಿ ತಪ ಉಪದೇಶೇನ ನಾಶಿತಮ್।
13010054c ಪುರೋಹಿತತ್ವಮುತ್ಸೃಜ್ಯ ಯತಸ್ವ ತ್ವಂ ಪುನರ್ಭವೇ।।

ಆ ಉಪದೇಶದಿಂದ ನಿನ್ನ ಉಗ್ರ ತಪಸ್ಸು ನಾಶವಾಯಿತು. ಆದುದರಿಂದ ಈ ಪುರೋಹಿತತ್ವವನ್ನು ತೊರೆದು ಶ್ರೇಷ್ಠ ಜನ್ಮವನ್ನು ಪಡೆಯಲು ಪುನಃ ಪ್ರಯತ್ನಿಸು.

13010055a ಇತಸ್ತ್ವಮಧಮಾಮನ್ಯಾಂ ಮಾ ಯೋನಿಂ ಪ್ರಾಪ್ಸ್ಯಸೇ ದ್ವಿಜ।
13010055c ಗೃಹ್ಯತಾಂ ದ್ರವಿಣಂ ವಿಪ್ರ ಪೂತಾತ್ಮಾ ಭವ ಸತ್ತಮ।।

ದ್ವಿಜ! ಸತ್ತಮ! ಇನ್ನು ಮುಂದಾದರೂ ನಿನಗೆ ಅನ್ಯ ಯೋನಿಯು ಪ್ರಾಪ್ತವಾಗದಿರಲಿ. ವಿಪ್ರ! ಬೇಕಾದಷ್ಟು ಧನವನ್ನು ತೆಗೆದುಕೋ! ಪೂತಾತ್ಮನಾಗು!””

13010056 ಭೀಷ್ಮ ಉವಾಚ।
13010056a ತತೋ ವಿಸೃಷ್ಟೋ ರಾಜ್ಞಾ ತು ವಿಪ್ರೋ ದಾನಾನ್ಯನೇಕಶಃ।
13010056c ಬ್ರಾಹ್ಮಣೇಭ್ಯೋ ದದೌ ವಿತ್ತಂ ಭೂಮಿಂ ಗ್ರಾಮಾಂಶ್ಚ ಸರ್ವಶಃ।।

ಭೀಷ್ಮನು ಹೇಳಿದನು: “ರಾಜನಿಂದ ಕಳುಹಿಸಲ್ಪಟ್ಟ ಆ ವಿಪ್ರನು ಅನೇಕ ಬ್ರಾಹ್ಮಣರಿಗೆ ವಿತ್ತ, ಭೂಮಿ, ಗ್ರಾಮ ಮತ್ತು ಸರ್ವವನ್ನೂ ದಾನಗಳನ್ನಾಗಿತ್ತನು.

13010057a ಕೃಚ್ಚ್ರಾಣಿ ಚೀರ್ತ್ವಾ ಚ ತತೋ ಯಥೋಕ್ತಾನಿ ದ್ವಿಜೋತ್ತಮಃ।
13010057c ತೀರ್ಥಾನಿ ಚಾಭಿಗತ್ವಾ ವೈ ದಾನಾನಿ ವಿವಿಧಾನಿ ಚ।।

ಆ ದ್ವಿಜೋತ್ತಮನು ಬ್ರಾಹ್ಮಣರಿಗೆ ಹೇಳಿದಂತಹ ಕೃಚ್ಚ್ರಾದಿ ವ್ರತಗಳನ್ನು ಮಾಡಿ ತೀರ್ಥಗಳಿಗೆ ಹೋಗಿ ವಿವಿಧ ದಾನಗಳನ್ನಿತ್ತನು.

13010058a ದತ್ತ್ವಾ ಗಾಶ್ಚೈವ ವಿಪ್ರಾಣಾಂ ಪೂತಾತ್ಮಾ ಸೋಽಭವದ್ದ್ವಿಜಃ।
13010058c ತಮೇವ ಚಾಶ್ರಮಂ ಗತ್ವಾ ಚಚಾರ ವಿಪುಲಂ ತಪಃ।।

ಆ ದ್ವಿಜನು ಗೋವುಗಳನ್ನೂ ವಿಪ್ರರಿಗೆ ನೀಡಿ ಪೂತಾತ್ಮನಾಗಿ ಅದೇ ಆಶ್ರಮಕ್ಕೆ ಹೋಗಿ ವಿಪುಲ ತಪಸ್ಸನ್ನು ಆಚರಿಸಿದನು.

13010059a ತತಃ ಸಿದ್ಧಿಂ ಪರಾಂ ಪ್ರಾಪ್ತೋ ಬ್ರಾಹ್ಮಣೋ ರಾಜಸತ್ತಮ।
13010059c ಸಂಮತಶ್ಚಾಭವತ್ತೇಷಾಮಾಶ್ರಮೇಽ’ಶ್ರಮವಾಸಿನಾಮ್।।

ರಾಜಸತ್ತಮ! ಅನಂತರ ಆ ಬ್ರಾಹ್ಮಣನು ಪರಮ ಸಿದ್ಧಿಯನ್ನು ಪಡೆದನು. ಆ ಆಶ್ರಮದಲ್ಲಿ ಆಶ್ರಮವಾಸಿಗಳ ಮಾನನೀಯನೂ ಆದನು.

13010060a ಏವಂ ಪ್ರಾಪ್ತೋ ಮಹತ್ಕೃಚ್ಚ್ರಮೃಷಿಃ ಸ ನೃಪಸತ್ತಮ।
13010060c ಬ್ರಾಹ್ಮಣೇನ ನ ವಕ್ತವ್ಯಂ ತಸ್ಮಾದ್ವರ್ಣಾವರೇ ಜನೇ।।

ನೃಪಸತ್ತಮ! ಹೀಗೆ ಆ ಋಷಿಯು ಮಹಾ ಕಷ್ಟವನ್ನು ಅನುಭವಿಸಿದನು. ಆದುದರಿಂದ ಬ್ರಾಹ್ಮಣನು ಕೆಳವರ್ಣದ ಜನರಿಗೆ ಉಪದೇಶಿಸಬಾರದು.

13010061a ವರ್ಜಯೇದುಪದೇಶಂ ಚ ಸದೈವ ಬ್ರಾಹ್ಮಣೋ ನೃಪ।
13010061c ಉಪದೇಶಂ ಹಿ ಕುರ್ವಾಣೋ ದ್ವಿಜಃ ಕೃಚ್ಚ್ರಮವಾಪ್ನುಯಾತ್।।

ನೃಪ! ಯಾವಾಗಲೂ ಉಪದೇಶಮಾಡುವುದನ್ನು ಬ್ರಾಹ್ಮಣನು ವರ್ಜಿಸಬೇಕು. ಏಕೆಂದರೆ ಉಪದೇಶ ಮಾಡುವ ದ್ವಿಜನು ಕಷ್ಟಗಳನ್ನು ಪಡೆದುಕೊಳ್ಳುತ್ತಾನೆ.

13010062a ಏಷಿತವ್ಯಂ ಸದಾ ವಾಚಾ ನೃಪೇಣ ದ್ವಿಜಸತ್ತಮಾತ್1
13010062c ನ ಪ್ರವಕ್ತವ್ಯಮಿಹ ಹಿ ಕಿಂ ಚಿದ್ವರ್ಣಾವರೇ ಜನೇ।।

ನೃಪನು ದ್ವಿಜಸತ್ತಮನ ಮಾತಿನ ಮೂಲಕ ಉಪದೇಶವನ್ನು ಪಡೆದುಕೊಳ್ಳಬಹುದು. ಆದರೆ ಕೆಳಗಿನ ಜಾತಿಯ ಜನರಿಗೆ ಅದನ್ನು ಹೇಳಿಕೊಡಬಾರದು.

13010063a ಬ್ರಾಹ್ಮಣಾಃ ಕ್ಷತ್ರಿಯಾ ವೈಶ್ಯಾಸ್ತ್ರಯೋ ವರ್ಣಾ ದ್ವಿಜಾತಯಃ।
13010063c ಏತೇಷು ಕಥಯನ್ರಾಜನ್ಬ್ರಾಹ್ಮಣೋ ನ ಪ್ರದುಷ್ಯತಿ।।

ರಾಜನ್! ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ – ಈ ಮೂರು ವರ್ಣದವರು ದ್ವಿಜಾತಿಗಳು. ಇವರೊಂದಿಗೆ ಮಾತನಾಡುವುದರಿಂದ ಬ್ರಾಹ್ಮಣನು ಪ್ರದೂಷಿತನಾಗುವುದಿಲ್ಲ.

13010064a ತಸ್ಮಾತ್ಸದ್ಭಿರ್ನ ವಕ್ತವ್ಯಂ ಕಸ್ಯ ಚಿತ್ಕಿಂ ಚಿದಗ್ರತಃ।
13010064c ಸೂಕ್ಷ್ಮಾ ಗತಿರ್ಹಿ ಧರ್ಮಸ್ಯ ದುರ್ಜ್ಞೇಯಾ ಹ್ಯಕೃತಾತ್ಮಭಿಃ।।

ಆದುದರಿಂದ ಸಾಧುಜನರು ಯಾರೊಡನೆಯಾದರೂ ಮಾತನಾಡಲು ಮುಂದಾಗಬಾರದು. ಧರ್ಮದ ಗತಿಯು ಸೂಕ್ಷ್ಮ. ಅಕೃತಾತ್ಮರಿಗೆ ಇದು ಸುಲಭವಾಗಿ ತಿಳಿಯುವುದಿಲ್ಲ.

13010065a ತಸ್ಮಾನ್ಮೌನಾನಿ ಮುನಯೋ ದೀಕ್ಷಾಂ ಕುರ್ವಂತಿ ಚಾದೃತಾಃ।
13010065c ದುರುಕ್ತಸ್ಯ ಭಯಾದ್ರಾಜನ್ನಾನುಭಾಷಂತಿ ಕಿಂ ಚನ।।

ರಾಜನ್! ಆದುದರಿಂದ ಮುನಿಗಳು ಮೌನದಿಂದ ದೀಕ್ಷೆಗಳನ್ನು ನಡೆಸುತ್ತಾರೆ. ಅನುಚಿತ ಮಾತುಗಳು ಹೊರಬೀಳಬಹುದೆಂಬ ಭಯದಿಂದ ಅವರು ಯಾರೊಡನೆಯೂ ಮಾತನ್ನಾಡುವುದಿಲ್ಲ.

13010066a ಧಾರ್ಮಿಕಾ ಗುಣಸಂಪನ್ನಾಃ ಸತ್ಯಾರ್ಜವಪರಾಯಣಾಃ।
13010066c ದುರುಕ್ತವಾಚಾಭಿಹತಾಃ ಪ್ರಾಪ್ನುವಂತೀಹ ದುಷ್ಕೃತಮ್।।

ಧಾರ್ಮಿಕರು, ಗುಣಸಂಪನ್ನರು, ಸತ್ಯ-ಸರಳತೆಗಳನ್ನು ಪರಿಪಾಲಿಸುವವರು ಅನುಚಿತ ಮಾತಗಳನ್ನಾಡುವುದರಿಂದ ಪಾಪವನ್ನು ಪಡೆದುಕೊಳ್ಳುತ್ತಾರೆ.

13010067a ಉಪದೇಶೋ ನ ಕರ್ತವ್ಯಃ ಕದಾ ಚಿದಪಿ ಕಸ್ಯ ಚಿತ್।
13010067c ಉಪದೇಶಾದ್ಧಿ ತತ್ಪಾಪಂ ಬ್ರಾಹ್ಮಣಃ ಸಮವಾಪ್ನುಯಾತ್।।

ಬ್ರಾಹ್ಮಣನು ಯಾವಾಗಲೂ ಯಾರಿಗೂ ಉಪದೇಶವನ್ನು ಮಾಡಬಾರದು. ಉಪದೇಶಮಾಡುವುದರಿಂದ ಶಿಷ್ಯನ ಪಾಪವನ್ನು ಅವನು ಪಡೆದುಕೊಳ್ಳುತ್ತಾನೆ.

13010068a ವಿಮೃಶ್ಯ ತಸ್ಮಾತ್ಪ್ರಾಜ್ಞೇನ ವಕ್ತವ್ಯಂ ಧರ್ಮಮಿಚ್ಚತಾ।
13010068c ಸತ್ಯಾನೃತೇನ ಹಿ ಕೃತ ಉಪದೇಶೋ ಹಿನಸ್ತಿ ವೈ।।

ಆದುದರಿಂದ ಧರ್ಮವನ್ನು ಬಯಸುವವನು ಪ್ರಜ್ಞೆಯಿಂದ ವಿಮರ್ಶಿಸಿ ಹೇಳಬೇಕು. ಸತ್ಯ-ಅನೃತಗಳನ್ನು ಕೂಡಿಸಿ ಮಾಡಿದ ಉಪದೇಶವು ಅವನನ್ನೇ ನಾಶಗೊಳಿಸುತ್ತದೆ.

13010069a ವಕ್ತವ್ಯಮಿಹ ಪೃಷ್ಟೇನ ವಿನಿಶ್ಚಿತ್ಯ ವಿಪರ್ಯಯಮ್।
13010069c ಸ ಚೋಪದೇಶಃ ಕರ್ತವ್ಯೋ ಯೇನ ಧರ್ಮಮವಾಪ್ನುಯಾತ್।।

ಕೇಳಿದಾಗ ವಿಪರ್ಯಾಸಗಳನ್ನು ವಿಮರ್ಶಿಸಿ ಉಪದೇಶಿಸಬೇಕು. ಅದರಿಂದ ಪುಣ್ಯವು ಲಭಿಸುತ್ತದೆ.

13010070a ಏತತ್ತೇ ಸರ್ವಮಾಖ್ಯಾತಮುಪದೇಶೇ ಕೃತೇ ಸತಿ।
13010070c ಮಹಾನ್ ಕ್ಲೇಶೋ ಹಿ ಭವತಿ ತಸ್ಮಾನ್ನೋಪದಿಶೇತ್ಕ್ವ ಚಿತ್।।

ಉಪದೇಶದ ಸಂಬಂಧವಾಗಿ ನಾನು ಎಲ್ಲವನ್ನೂ ನಿನಗೆ ಹೇಳಿದ್ದೇನೆ. ಉಪದೇಶಮಾಡುವುದರಿಂದ ಮಹಾಕ್ಲೇಶವುಂಟಾಗುತ್ತದೆ. ಆದುದರಿಂದ ಯಾರಿಗೂ ಉಪದೇಶಮಾಡಬಾರದು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಶೂದ್ರಮುನಿಸಂವಾದೇ ದಶಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಶೂದ್ರಮುನಿಸಂವಾದ ಎನ್ನುವ ಹತ್ತನೇ ಅಧ್ಯಾಯವು.


  1. ನೇಷಿತವ್ಯಂ ಸದಾ ವಾಚಾ ದ್ವಿಜೇನ ನೃಪಸತ್ತಮ। (ಗೀತಾ ಪ್ರೆಸ್). ↩︎