ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 9
ಸಾರ
“ಬ್ರಾಹ್ಮಣರಿಗೆ ಕೊಡುತ್ತೇನೆಂದು ಹೇಳಿ ಕೊಡದೇ ಇದ್ದವರಿಗೆ ಏನಾಗುತ್ತದೆ?” ಎಂಬ ಯುಧಿಷ್ಠಿರನ ಪ್ರಶ್ನೆಗೆ ಭೀಷ್ಮನು ನರಿ ಮತ್ತು ಕಪಿಯ ಸಂವಾದವನ್ನು ಉದಾಹರಿಸಿ, ಅಂಥವರು ಅಶುಭ ಯೋನಿಗಳಲ್ಲಿ ಜನ್ಮತಾಳುತ್ತಾರೆ ಎನ್ನುವುದು (1-24).
13009001 ಯುಧಿಷ್ಠಿರ ಉವಾಚ।
13009001a ಬ್ರಾಹ್ಮಣಾನಾಂ ತು ಯೇ ಲೋಕೇ ಪ್ರತಿಶ್ರುತ್ಯ ಪಿತಾಮಹ।
13009001c ನ ಪ್ರಯಚ್ಚಂತಿ ಮೋಹಾತ್ತೇ ಕೇ ಭವಂತಿ ಮಹಾಮತೇ।।
ಯುಧಿಷ್ಠಿರನು ಹೇಳಿದನು: “ಪಿತಾಮಹ! ಮಹಾಮತೇ! ಲೋಕದಲ್ಲಿ ಬ್ರಾಹ್ಮಣರಿಗೆ ಕೊಡುತ್ತೇನೆಂದು ಹೇಳಿ ಮೋಹದಿಂದ ಕೊಡದೇ ಇದ್ದರೆ ಅಂಥವರಿಗೆ ಏನಾಗುತ್ತದೆ?
13009002a ಏತನ್ಮೇ ತತ್ತ್ವತೋ ಬ್ರೂಹಿ ಧರ್ಮಂ ಧರ್ಮಭೃತಾಂ ವರ।
13009002c ಪ್ರತಿಶ್ರುತ್ಯ ದುರಾತ್ಮಾನೋ ನ ಪ್ರಯಚ್ಚಂತಿ ಯೇ ನರಾಃ।।
ಧರ್ಮಭೃತರಲ್ಲಿ ಶ್ರೇಷ್ಠ! ಕೊಡುತ್ತೇನೆಂದು ಹೇಳಿ ಕೊಡದೇ ಇರುವ ದುರಾತ್ಮ ನರರಿಗಾಗುವುದರ ಕುರಿತು ತತ್ತ್ವತಃ ಹೇಳು.”
13009003 ಭೀಷ್ಮ ಉವಾಚ।
13009003a ಯೋ ನ ದದ್ಯಾತ್ಪ್ರತಿಶ್ರುತ್ಯ ಸ್ವಲ್ಪಂ ವಾ ಯದಿ ವಾ ಬಹು।
13009003c ಆಶಾಸ್ತಸ್ಯ ಹತಾಃ ಸರ್ವಾಃ ಕ್ಲೀಬಸ್ಯೇವ ಪ್ರಜಾಫಲಮ್।।
ಭೀಷ್ಮನು ಹೇಳಿದನು: “ಸ್ವಲ್ಪವಾಗಲೀ ಅಧಿಕವಾಗಲೀ – ಕೊಡುತ್ತೇನೆಂದು ಹೇಳಿ ಕೊಡದೇ ಇರುವವನ ಆಶಯಗಳು ನಪುಂಸಕನಿಗೆ ಸಂತಾನದ ಆಶೆಯಂತೆ – ಎಲ್ಲವೂ ನಿಷ್ಫಲವಾಗುತ್ತವೆ.
13009004a ಯಾಂ ರಾತ್ರಿಂ ಜಾಯತೇ ಪಾಪೋ ಯಾಂ ಚ ರಾತ್ರಿಂ ವಿನಶ್ಯತಿ।
13009004c ಏತಸ್ಮಿನ್ನಂತರೇ ಯದ್ಯತ್ಸುಕೃತಂ ತಸ್ಯ ಭಾರತ।
13009004e ಯಚ್ಚ ತಸ್ಯ ಹುತಂ ಕಿಂ ಚಿತ್ಸರ್ವಂ ತಸ್ಯೋಪಹನ್ಯತೇ।।
ಭಾರತ! ಆ ಪಾಪಿಯು ಹುಟ್ಟಿದ ರಾತ್ರಿಯಿಂದ ಹಿಡಿದು ಮರಣಹೊಂದುವ ರಾತ್ರಿಯವರೆಗೆ ಏನೆಲ್ಲ ಮಾಡಿರುತ್ತಾನೋ, ಏನನ್ನಾದರೂ ಹೋಮ-ದಾನ-ತಪಸ್ಸುಗಳನ್ನು ಮಾಡಿದ್ದರೂ – ಅವೆಲ್ಲವೂ ನಷ್ಟವಾಗಿಹೋಗುತ್ತವೆ.
13009005a ಅತ್ರೈತದ್ವಚನಂ ಪ್ರಾಹುರ್ಧರ್ಮಶಾಸ್ತ್ರವಿದೋ ಜನಾಃ।
13009005c ನಿಶಮ್ಯ ಭರತಶ್ರೇಷ್ಠ ಬುದ್ಧ್ಯಾ ಪರಮಯುಕ್ತಯಾ।।
ಇದರ ಕುರಿತು ಧರ್ಮಶಾಸ್ತ್ರಗಳನ್ನು ತಿಳಿದ ಜನರು ಹೇಳುತ್ತಾರೆ. ಭರತಶ್ರೇಷ್ಠ! ಇದನ್ನು ಪರಮ ಬುದ್ಧಿಯುಕ್ತನಾಗಿ ಕೇಳು.
13009006a ಅಪಿ ಚೋದಾಹರಂತೀಮಂ ಧರ್ಮಶಾಸ್ತ್ರವಿದೋ ಜನಾಃ।
13009006c ಅಶ್ವಾನಾಂ ಶ್ಯಾಮಕರ್ಣಾನಾಂ ಸಹಸ್ರೇಣ ಸ ಮುಚ್ಯತೇ।।
ಧರ್ಮಶಾಸ್ತ್ರಗಳನ್ನು ತಿಳಿದ ಜನರು ಇದನ್ನೂ ಕೂಡ ಉದಾಹರಿಸುತ್ತಾರೆ: ಶ್ಯಾಮವರ್ಣದ ಕಿವಿಗಳಿರುವ ಸಹಸ್ರ ಅಶ್ವಗಳನ್ನು ದಾನಮಾಡುವುದರಿಂದ ಮಾತ್ರ ಅವನು ಪ್ರತಿಜ್ಞಾಭಂಗದ ಪಾಪದಿಂದ ವಿಮುಕ್ತನಾಗುತ್ತಾನೆ.
13009007a ಅತ್ರೈವೋದಾಹರಂತೀಮಮಿತಿಹಾಸಂ ಪುರಾತನಮ್।
13009007c ಸೃಗಾಲಸ್ಯ ಚ ಸಂವಾದಂ ವಾನರಸ್ಯ ಚ ಭಾರತ।।
ಭಾರತ! ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ನರಿ ಮತ್ತು ಕಪಿಯ ಸಂವಾದವನ್ನು ಉದಾಹರಿಸುತ್ತಾರೆ.
13009008a ತೌ ಸಖಾಯೌ ಪುರಾ ಹ್ಯಾಸ್ತಾಂ ಮಾನುಷತ್ವೇ ಪರಂತಪ।
13009008c ಅನ್ಯಾಂ ಯೋನಿಂ ಸಮಾಪನ್ನೌ ಸಾರ್ಗಾಲೀಂ ವಾನರೀಂ ತಥಾ।।
ಪರಂತಪ! ಹಿಂದೆ ಮನುಷ್ಯಜನ್ಮದಲ್ಲಿ ಸಖರಾಗಿದ್ದ ಇಬ್ಬರು ಇನ್ನೊಂದು ಜನ್ಮದಲ್ಲಿ ನರಿ ಮತ್ತು ಕಪಿಯ ಯೋನಿಗಳಲ್ಲಿ ಜನಿಸಿದರು.
13009009a ತತಃ ಪರಾಸೂನ್ಖಾದಂತಂ ಸೃಗಾಲಂ ವಾನರೋಽಬ್ರವೀತ್।
13009009c ಶ್ಮಶಾನಮಧ್ಯೇ ಸಂಪ್ರೇಕ್ಷ್ಯ ಪೂರ್ವಜಾತಿಮನುಸ್ಮರನ್।।
ಆಗ ಶ್ಮಶಾನಮಧ್ಯದಲ್ಲಿ ಶವಗಳನ್ನು ತಿನ್ನುತ್ತಿದ್ದ ನರಿಯನ್ನು ನೋಡಿ ಪೂರ್ವಜನ್ಮವನ್ನು ಸ್ಮರಿಸಿಕೊಂಡು ಕಪಿಯು ಹೇಳಿತು:
13009010a ಕಿಂ ತ್ವಯಾ ಪಾಪಕಂ ಕರ್ಮ ಕೃತಂ ಪೂರ್ವಂ ಸುದಾರುಣಮ್।
13009010c ಯಸ್ತ್ವಂ ಶ್ಮಶಾನೇ ಮೃತಕಾನ್ಪೂತಿಕಾನತ್ಸಿ ಕುತ್ಸಿತಾನ್।।
“ಶ್ಮಶಾನದಲ್ಲಿ ಈ ರೀತಿ ಕೊಳೆಯುತ್ತಿರುವ ಮೃತಶರೀರಗಳನ್ನು ತಿನ್ನುತ್ತಿರುವ ನೀನು ಹಿಂದಿನ ಜನ್ಮದಲ್ಲಿ ಯಾವ ಸುದಾರುಣ ಪಾಪಕರ್ಮವನ್ನು ಮಾಡಿದ್ದೆ?”
13009011a ಏವಮುಕ್ತಃ ಪ್ರತ್ಯುವಾಚ ಸೃಗಾಲೋ ವಾನರಂ ತದಾ।
13009011c ಬ್ರಾಹ್ಮಣಸ್ಯ ಪ್ರತಿಶ್ರುತ್ಯ ನ ಮಯಾ ತದುಪಾಕೃತಮ್।।
ಇದನ್ನು ಕೇಳಿ ನರಿಯು ಕಪಿಗೆ ಹೇಳಿತು: “ಬ್ರಾಹ್ಮಣನಿಗೆ ಕೊಡುತ್ತೇನೆಂದು ಹೇಳಿ ಅದರಂತೆ ನಾನು ಮಾಡಲಿಲ್ಲ.
13009012a ತತ್ಕೃತೇ ಪಾಪಿಕಾಂ ಯೋನಿಮಾಪನ್ನೋಽಸ್ಮಿ ಪ್ಲವಂಗಮ।
13009012c ತಸ್ಮಾದೇವಂವಿಧಂ ಭಕ್ಷ್ಯಂ ಭಕ್ಷಯಾಮಿ ಬುಭುಕ್ಷಿತಃ।।
ಕಪಿಯೇ! ಅದನ್ನು ಮಾಡಿದುದಕ್ಕಾಗಿ ನಾನು ಈ ಪಾಪಿ ಯೋನಿಯಲ್ಲಿ ಜನಿಸಿದ್ದೇನೆ. ಆದುದರಿಂದಲೇ ಹಸಿದ ನಾನು ಈ ವಿಧದ ಆಹಾರವನ್ನು ತಿನ್ನುತ್ತಿದ್ದೇನೆ.”
13009013a ಇತ್ಯೇತದ್ಬ್ರುವತೋ ರಾಜನ್ಬ್ರಾಹ್ಮಣಸ್ಯ ಮಯಾ ಶ್ರುತಮ್।
13009013c ಕಥಾಂ ಕಥಯತಃ ಪುಣ್ಯಾಂ ಧರ್ಮಜ್ಞಸ್ಯ ಪುರಾತನೀಮ್।।
ರಾಜನ್! ಪುರಾತನ ಪುಣ್ಯ ಕಥೆಗಳನ್ನು ಹೇಳುತ್ತಿದ್ದ ಬ್ರಾಹ್ಮಣನಿಂದ ನಾನು ಇದನ್ನು ಕೇಳಿದೆನು.
13009014a ಶ್ರುತಂ ಚಾಪಿ ಮಯಾ ಭೂಯಃ ಕೃಷ್ಣಸ್ಯಾಪಿ ವಿಶಾಂ ಪತೇ।
13009014c ಕಥಾಂ ಕಥಯತಃ ಪೂರ್ವಂ ಬ್ರಾಹ್ಮಣಂ ಪ್ರತಿ ಪಾಂಡವ।।
ವಿಶಾಂಪತೇ! ಪಾಂಡವ! ಅಲ್ಲದೇ ಇದೇ ಕಥೆಯನ್ನು ಹಿಂದೆ ಕೃಷ್ಣನು ಬ್ರಾಹ್ಮಣನೊಬ್ಬನಿಗೆ ಹೇಳುತ್ತಿರುವಾಗಲೂ ಕೇಳಿದ್ದೆ.
13009015a ಏವಮೇವ ಚ ಮಾಂ ನಿತ್ಯಂ ಬ್ರಾಹ್ಮಣಾಃ ಸಂದಿಶಂತಿ ವೈ।
13009015c ಪ್ರತಿಶ್ರುತ್ಯ ಭವೇದ್ದೇಯಂ ನಾಶಾ ಕಾರ್ಯಾ ಹಿ ಬ್ರಾಹ್ಮಣೈಃ।।
ಬ್ರಾಹ್ಮಣರೂ ಕೂಡ ನಿತ್ಯವೂ ನನಗೆ ಇದನ್ನೇ ಉಪದೇಶಿಸುತ್ತಿದ್ದರು. ಬ್ರಾಹ್ಮಣರಿಗೆ ಕೊಡುತ್ತೇನೆಂದು ಹೇಳಿ ಕೊಡಲೇ ಬೇಕು. ಅವರಲ್ಲಿ ಆಶೆಯನ್ನು ಹುಟ್ಟಿಸಬಾರದು.
13009016a ಬ್ರಾಹ್ಮಣೋ ಹ್ಯಾಶಯಾ ಪೂರ್ವಂ ಕೃತಯಾ ಪೃಥಿವೀಪತೇ।
13009016c ಸುಸಮಿದ್ಧೋ ಯಥಾ ದೀಪ್ತಃ ಪಾವಕಸ್ತದ್ವಿಧಃ ಸ್ಮೃತಃ।।
ಪೃಥಿವೀಪತೇ! ಮೊದಲೇ ಹುಟ್ಟಿಸಿದ ಆಶೆಯಿಂದ ಬ್ರಾಹ್ಮಣನು ಕಾಷ್ಠಗಳಿಂದ ಪ್ರಜ್ವಲಿತನಾದ ಯಜ್ಞೇಶ್ವರನಂತೆ ಉದ್ದೀಪ್ತನಾಗುತ್ತಾನೆ.
13009017a ಯಂ ನಿರೀಕ್ಷೇತ ಸಂಕ್ರುದ್ಧ ಆಶಯಾ ಪೂರ್ವಜಾತಯಾ।
13009017c ಪ್ರದಹೇತ ಹಿ ತಂ ರಾಜನ್ಕಕ್ಷಮಕ್ಷಯ್ಯಭುಗ್ಯಥಾ।।
ರಾಜನ್! ಮೊದಲು ಅವನಲ್ಲಿ ಆಶೆಯನ್ನು ಹುಟ್ಟಿಸಿದವನನ್ನು ನೋಡಿಯೇ ಅಕ್ಷಯಭುಂಜಿಯಾದ ಅಗ್ನಿಯಂತೆ ಅವನನ್ನು ಸುಟ್ಟುಬಿಡುತ್ತಾನೆ.
13009018a ಸ ಏವ ಹಿ ಯದಾ ತುಷ್ಟೋ ವಚಸಾ ಪ್ರತಿನಂದತಿ।
13009018c ಭವತ್ಯಗದಸಂಕಾಶೋ ವಿಷಯೇ ತಸ್ಯ ಭಾರತ।।
ಭಾರತ! ಅದೇ ರೀತಿ ತುಷ್ಟನಾದವನು ಒಳ್ಳೆಯ ಮಾತುಗಳಿಂದ ರಾಜನನ್ನು ಪ್ರತಿನಂದಿಸುತ್ತಾನೆ. ಅವನ ರಾಜ್ಯದಲ್ಲಿ ಚಿಕಿತ್ಸಕನಂತೆ ಇರುತ್ತಾನೆ.
13009019a ಪುತ್ರಾನ್ಪೌತ್ರಾನ್ಪಶೂಂಶ್ಚೈವ ಬಾಂಧವಾನ್ಸಚಿವಾಂಸ್ತಥಾ।
13009019c ಪುರಂ ಜನಪದಂ ಚೈವ ಶಾಂತಿರಿಷ್ಟೇವ ಪುಷ್ಯತಿ।।
ಸಂತುಷ್ಟ ಬ್ರಾಹ್ಮಣನು ದಾನಿಯನ್ನೂ, ದಾನಿಯ ಪುತ್ರ-ಪೌತ್ರರನ್ನೂ, ಪಶುಗಳನ್ನೂ, ಬಾಂಧವರನ್ನೂ, ಸಚಿವರನ್ನೂ, ಪುರ-ಗ್ರಾಮ ಪ್ರದೇಶಗಳನ್ನೂ ಶಾಂತಿ-ಕ್ಷೇಮದಿಂದ ಪಾಲಿಸಬಲ್ಲನು.
13009020a ಏತದ್ಧಿ ಪರಮಂ ತೇಜೋ ಬ್ರಾಹ್ಮಣಸ್ಯೇಹ ದೃಶ್ಯತೇ।
13009020c ಸಹಸ್ರಕಿರಣಸ್ಯೇವ ಸವಿತುರ್ಧರಣೀತಲೇ।।
ಈ ರೀತಿ ಸಹಸ್ರಕಿರಣ ಸವಿತುವಿನ ತೇಜಸ್ಸಿನಂತೆ ಬ್ರಾಹ್ಮಣನ ಪರಮ ತೇಜಸ್ಸು ಭೂಮಿಯಲ್ಲಿ ಕಂಗೊಳಿಸುತ್ತದೆ.
13009021a ತಸ್ಮಾದ್ದಾತವ್ಯಮೇವೇಹ ಪ್ರತಿಶ್ರುತ್ಯ ಯುಧಿಷ್ಠಿರ।
13009021c ಯದೀಚ್ಚೇಚ್ಚೋಭನಾಂ ಜಾತಿಂ ಪ್ರಾಪ್ತುಂ ಭರತಸತ್ತಮ।।
ಯುಧಿಷ್ಠಿರ! ಭರತಸತ್ತಮ! ಆದುದರಿಂದ ಶುಭ ಜನ್ಮವನ್ನು ಪಡೆಯಲು ಬಯಸುವವನು ಕೊಡುತ್ತೇನೆಂದು ಹೇಳಿದುದನ್ನು ಕೊಡಬೇಕು.
13009022a ಬ್ರಾಹ್ಮಣಸ್ಯ ಹಿ ದತ್ತೇನ ಧ್ರುವಂ ಸ್ವರ್ಗೋ ಹ್ಯನುತ್ತಮಃ।
13009022c ಶಕ್ಯಂ ಪ್ರಾಪ್ತುಂ ವಿಶೇಷೇಣ ದಾನಂ ಹಿ ಮಹತೀ ಕ್ರಿಯಾ।।
ಬ್ರಾಹ್ಮಣನಿಗೆ ನೀಡಿದ ದಾನದಿಂದ ವಿಶೇಷವಾಗಿ ಅನುತ್ತಮ ಸ್ವರ್ಗವನ್ನು ನಿಶ್ಚಿತವಾಗಿ ಪಡೆಯಲು ಶಕ್ಯವಾಗುತ್ತದೆ. ದಾನವೇ ಮಹಾಕ್ರಿಯೆಯು.
13009023a ಇತೋ ದತ್ತೇನ ಜೀವಂತಿ ದೇವತಾಃ ಪಿತರಸ್ತಥಾ।
13009023c ತಸ್ಮಾದ್ದಾನಾನಿ ದೇಯಾನಿ ಬ್ರಾಹ್ಮಣೇಭ್ಯೋ ವಿಜಾನತಾ।।
ಈ ರೀತಿಯ ದಾನದಿಂದಲೇ ದೇವತೆಗಳು ಮತ್ತು ಪಿತೃಗಳು ಜೀವಿಸುತ್ತಾರೆ. ಆದುದರಿಂದ ಬ್ರಾಹ್ಮಣರಿಗೆ ದಾನಮಾಡಬೇಕು ಎಂದು ತಿಳಿದಿದ್ದಾರೆ.
13009024a ಮಹದ್ಧಿ ಭರತಶ್ರೇಷ್ಠ ಬ್ರಾಹ್ಮಣಸ್ತೀರ್ಥಮುಚ್ಯತೇ।
13009024c ವೇಲಾಯಾಂ ನ ತು ಕಸ್ಯಾಂ ಚಿದ್ಗಚ್ಚೇದ್ವಿಪ್ರೋ ಹ್ಯಪೂಜಿತಃ।।
ಭರತಶ್ರೇಷ್ಠ! ಬ್ರಾಹ್ಮಣನೇ ಮಹಾತೀರ್ಥ ಎಂದು ಹೇಳುತ್ತಾರೆ. ಯಾವುದೇ ಸಮದಲ್ಲಿಯೂ ಆಗಮಿಸಿದ ಬ್ರಾಹ್ಮಣನು ಸತ್ಕೃತನಾಗದೇ ಹಿಂದಿರುಗಿ ಹೋಗಬಾರದು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಸೃಗಾಲವಾನರಸಂವಾದೇ ನವಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಸೃಗಾಲವಾನರಸಂವಾದ ಎನ್ನುವ ಒಂಭತ್ತನೇ ಅಧ್ಯಾಯವು.