008: ಪೂಜ್ಯವರ್ಣನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 8

ಸಾರ

“ನೀನು ಯಾರಂತಾಗಲು ಬಯಸುತ್ತೀಯೆ? ಯಾರನ್ನು ಪೂಜಿಸುತ್ತೀಯೆ?” ಎಂದು ಯುಧಿಷ್ಠಿರನು ಕೇಳಲು ಭೀಷ್ಮನು ತಾನು ಬ್ರಾಹ್ಮಣರಂತಾಗಲು ಬಯಸುತ್ತೇನೆ ಮತ್ತು ಬ್ರಾಹ್ಮಣರನ್ನು ಪೂಜಿಸುತ್ತೇನೆ ಎನ್ನುವುದು (1-28).

13008001 ಯುಧಿಷ್ಠಿರ ಉವಾಚ।
13008001a ಕೇ ಪೂಜ್ಯಾಃ ಕೇ ನಮಸ್ಕಾರ್ಯಾಃ ಕಾನ್ನಮಸ್ಯಸಿ ಭಾರತ।
13008001c ಏತನ್ಮೇ ಸರ್ವಮಾಚಕ್ಷ್ವ ಯೇಷಾಂ ಸ್ಪೃಹಯಸೇ ನೃಪ।।

ಯುಧಿಷ್ಠಿರನು ಹೇಳಿದನು: “ಭಾರತ! ನೃಪ! ಯಾರು ಪೂಜ್ಯರು? ಯಾರು ನಮಸ್ಕಾರ್ಯರು? ನೀನು ಯಾರನ್ನು ನಮಸ್ಕರಿಸುತ್ತೀಯೆ? ನೀನು ಯಾರಂತೆ ಆಗಬೇಕೆಂದು ಆಶಿಸುವೆ? ಇವೆಲ್ಲವನ್ನೂ ನನಗೆ ಹೇಳು.

13008002a ಉತ್ತಮಾಪದ್ಗತಸ್ಯಾಪಿ ಯತ್ರ ತೇ ವರ್ತತೇ ಮನಃ।
13008002c ಮನುಷ್ಯಲೋಕೇ ಸರ್ವಸ್ಮಿನ್ಯದಮುತ್ರೇಹ ಚಾಪ್ಯುತ।।

ಈಗ ನೀನು ಉತ್ತಮ ಆಪತ್ತಿನಲ್ಲಿರುವಾಗಲೂ ನಿನ್ನ ಮನಸ್ಸು ಯಾರ ಕುರಿತು ಚಿಂತಿಸುತ್ತದೆ? ಈ ಸಮಸ್ತ ಮನುಷ್ಯಲೋಕದಲ್ಲಿ ಮತ್ತು ಪರಲೋಕದಲ್ಲಿ ಯಾವುದು ಹಿತವನ್ನುಂಟುಮಾಡುತ್ತದೆ?”

13008003 ಭೀಷ್ಮ ಉವಾಚ।
13008003a ಸ್ಪೃಹಯಾಮಿ ದ್ವಿಜಾತೀನಾಂ ಯೇಷಾಂ ಬ್ರಹ್ಮ ಪರಂ ಧನಮ್।
13008003c ಯೇಷಾಂ ಸ್ವಪ್ರತ್ಯಯಃ ಸ್ವರ್ಗಸ್ತಪಃಸ್ವಾಧ್ಯಾಯಸಾಧನಃ।।

ಭೀಷ್ಮನು ಹೇಳಿದನು: “ಬ್ರಹ್ಮವೇ ಪರಮ ಧನವಾಗಿರುವ, ಸ್ವರ್ಗವು ಸ್ವಾಧೀನವಾಗಿರುವ ಮತ್ತು ಸ್ವಾಧ್ಯಾಯಸಾಧನವೇ ತಪಸ್ಸಾಗಿರುವ ಬ್ರಾಹ್ಮಣನಂತೆ ಆಗಲು ಆಶಿಸುತ್ತೇನೆ.

13008004a ಯೇಷಾಂ ವೃದ್ಧಾಶ್ಚ ಬಾಲಾಶ್ಚ ಪಿತೃಪೈತಾಮಹೀಂ ಧುರಮ್।
13008004c ಉದ್ವಹಂತಿ ನ ಸೀದಂತಿ ತೇಷಾಂ ವೈ ಸ್ಪೃಹಯಾಮ್ಯಹಮ್।।

ಯಾರ ವಂಶದಲ್ಲಿ ವೃದ್ಧರಿಂದ ಹಿಡಿದು ಬಾಲಕರವರೆಗೂ ಪಿತೃಪಿತಾಮಹರ ಧರ್ಮಧುರವನ್ನು ಹೊತ್ತಿರುವರೋ ಮತ್ತು ಆ ಭಾರದಿಂದ ಕುಸಿಯುವುದಿಲ್ಲವೋ ಆ ಬ್ರಾಹ್ಮಣ ವಂಶದ ಸದಸ್ಯನಾಗಲು ಆಶಿಸುತ್ತೇನೆ.

13008005a ವಿದ್ಯಾಸ್ವಭಿವಿನೀತಾನಾಂ ದಾಂತಾನಾಂ ಮೃದುಭಾಷಿಣಾಮ್।
13008005c ಶ್ರುತವೃತ್ತೋಪಪನ್ನಾನಾಂ ಸದಾಕ್ಷರವಿದಾಂ ಸತಾಮ್।।

ವಿದ್ಯಾವಂತರಾಗಿದ್ದರೂ ವಿನೀತರಾಗಿರುವ, ಇಂದ್ರಿಯ ಸಂಯಮಿಗಳಾಗಿರುವ, ಮೃದುಭಾಷಿಗಳಾಗಿರುವ, ಶಾಸ್ತ್ರಜ್ಞಾನ ಮತ್ತು ಸದಾಚಾರಸಂಪನ್ನರಾಗಿರುವ, ಸದಾ ಅಕ್ಷರ ಬ್ರಹ್ಮನ ಕುರಿತು ತಿಳಿದಿರುವ ಸತ್ಪುರುಷರಂತೆ ಆಗಲು ಆಶಿಸುತ್ತೇನೆ.

13008006a ಸಂಸತ್ಸು ವದತಾಂ ಯೇಷಾಂ ಹಂಸಾನಾಮಿವ ಸಂಘಶಃ।
13008006c ಮಂಗಲ್ಯರೂಪಾ ರುಚಿರಾ ದಿವ್ಯಜೀಮೂತನಿಃಸ್ವನಾಃ।।
13008007a ಸಮ್ಯಗುಚ್ಚಾರಿತಾ ವಾಚಃ ಶ್ರೂಯಂತೇ ಹಿ ಯುಧಿಷ್ಠಿರ।
13008007c ಶುಶ್ರೂಷಮಾಣೇ ನೃಪತೌ ಪ್ರೇತ್ಯ ಚೇಹ ಸುಖಾವಹಾಃ।।

ಯುಧಿಷ್ಠಿರ! ಸಭೆಗಳಲ್ಲಿ ಹಂಸಪಕ್ಷಿಗಳ ಸಮೂಹದಂತೆ ಮಾತನಾಡುವ, ದಿವ್ಯ ಮೇಘಧ್ವನಿಯಲ್ಲಿ ಗಂಭೀರ ಶಬ್ಧದಿಂದ ಕೂಡಿ, ಮಂಗಲರೂಪದ ಸೊಗಸಾದ ಮತ್ತು ಸ್ಪಷ್ಟವಾಗಿ ಉಚ್ಚರಿಸಲ್ಪಟ್ಟ ಬ್ರಾಹ್ಮಣರ ಮಾತುಗಳು ಕೇಳಿಬರುತ್ತವೆ. ಏಕಾಗ್ರತೆಯಿಂದ ಕೇಳುವ ರಾಜನಿಗೆ ಅಂತಹ ದಿವ್ಯ ವಾಕ್ಕುಗಳು ಇಹ-ಪರಗಳೆರಡರಲ್ಲಿಯೂ ಸುಖವನ್ನುಂಟುಮಾಡುತ್ತವೆ.

13008008a ಯೇ ಚಾಪಿ ತೇಷಾಂ ಶ್ರೋತಾರಃ ಸದಾ ಸದಸಿ ಸಂಮತಾಃ।
13008008c ವಿಜ್ಞಾನಗುಣಸಂಪನ್ನಾಸ್ತೇಷಾಂ ಚ ಸ್ಪೃಹಯಾಮ್ಯಹಮ್।।

ಸದಾ ಯಾರು ಅಂತಹ ಮಹಾತ್ಮರ ವಾಣಿಯನ್ನು ಕೇಳುತ್ತಾರೋ ಅವರೂ ವಿಜ್ಞಾನಗುಣಸಂಪನ್ನರಾಗಿ ಸನ್ಮಾನಿತರಾಗುತ್ತಾರೆ. ನಾನೂ ಅವರಂತೆ ಆಗಲು ಬಯಸುತ್ತೇನೆ.

13008009a ಸುಸಂಸ್ಕೃತಾನಿ ಪ್ರಯತಾಃ ಶುಚೀನಿ ಗುಣವಂತಿ ಚ।
13008009c ದದತ್ಯನ್ನಾನಿ ತೃಪ್ತ್ಯರ್ಥಂ ಬ್ರಾಹ್ಮಣೇಭ್ಯೋ ಯುಧಿಷ್ಠಿರ।
13008009e ಯೇ ಚಾಪಿ ಸತತಂ ರಾಜಂಸ್ತೇಷಾಂ ಚ ಸ್ಪೃಹಯಾಮ್ಯಹಮ್।।

ಯುಧಿಷ್ಠಿರ! ರಾಜನ್! ಬ್ರಾಹ್ಮಣರ ತೃಪ್ತಿಗಾಗಿ ಸತತವೂ ಪ್ರಯತ್ನಪಟ್ಟು ಚೆನ್ನಾಗಿ ತಯಾರಿಸಿದ ಶುಚಿಯಾದ ಮತ್ತು ಗುಣಯುಕ್ತವಾದ ಆಹಾರವನ್ನು ನೀಡುವಂಥವರಂತೆ ಆಗಲು ಆಶಿಸುತ್ತೇನೆ.

13008010a ಶಕ್ಯಂ ಹ್ಯೇವಾಹವೇ ಯೋದ್ಧುಂ ನ ದಾತುಮನಸೂಯಿತಮ್।
13008010c ಶೂರಾ ವೀರಾಶ್ಚ ಶತಶಃ ಸಂತಿ ಲೋಕೇ ಯುಧಿಷ್ಠಿರ।
13008010e ತೇಷಾಂ ಸಂಖ್ಯಾಯಮಾನಾನಾಂ ದಾನಶೂರೋ ವಿಶಿಷ್ಯತೇ।।

ಯುದ್ಧದಲ್ಲಿ ಹೋರಾಡಬಹುದು. ಆದರೆ ಅಸೂಯೆಪಡದೇ ದಾನವನ್ನು ನೀಡುವುದು ಕಷ್ಟ. ಲೋಕದಲ್ಲಿ ನೂರಾರು ಶೂರರು ವೀರರು ಇದ್ದಾರೆ. ಆದರೆ ಅವರ ಅಳತೆಮಾಡಿದರೆ ದಾನಶೂರರೇ ಹೆಚ್ಚಿನವರಾಗುತ್ತಾರೆ.

13008011a ಧನ್ಯಃ ಸ್ಯಾಂ ಯದ್ಯಹಂ ಭೂಯಃ ಸೌಮ್ಯ ಬ್ರಾಹ್ಮಣಕೋಽಪಿ ವಾ।
13008011c ಕುಲೇ ಜಾತೋ ಧರ್ಮಗತಿಸ್ತಪೋವಿದ್ಯಾಪರಾಯಣಃ।।

ಸೌಮ್ಯ! ಒಂದು ವೇಳೆ ನಾನೇನಾದರೋ ಮುಂದೆ ಬ್ರಾಹ್ಮಣಕುಲದಲ್ಲಿ ಹುಟ್ಟಿ ಧರ್ಮಮಾರ್ಗದಲ್ಲಿದ್ದುಕೊಂಡು ತಪಸ್ಸು ಮತ್ತು ವಿದ್ಯಾಪರಾಯಣನಾದರೆ ಧನ್ಯನಾದೆ ಎಂದುಕೊಳ್ಳುತ್ತೇನೆ.

13008012a ನ ಮೇ ತ್ವತ್ತಃ ಪ್ರಿಯತರೋ ಲೋಕೇಽಸ್ಮಿನ್ಪಾಂಡುನಂದನ।
13008012c ತ್ವತ್ತಶ್ಚ ಮೇ ಪ್ರಿಯತರಾ ಬ್ರಾಹ್ಮಣಾ ಭರತರ್ಷಭ।।

ಪಾಂಡುನಂದನ! ಭರತರ್ಷಭ! ಈ ಲೋಕದಲ್ಲಿ ನನಗೆ ನಿನಗಿಂತಲೂ ಹೆಚ್ಚು ಪ್ರಿಯರಾದವರು ಇಲ್ಲ. ಆದರೆ ನನಗೆ ಬ್ರಾಹ್ಮಣರು ನಿನಗಿಂತಲೂ ಹೆಚ್ಚು ಪ್ರಿಯರಾದವರು.

13008013a ಯಥಾ ಮಮ ಪ್ರಿಯತರಾಸ್ತ್ವತ್ತೋ ವಿಪ್ರಾಃ ಕುರೂದ್ವಹ।
13008013c ತೇನ ಸತ್ಯೇನ ಗಚ್ಚೇಯಂ ಲೋಕಾನ್ಯತ್ರ ಸ ಶಂತನುಃ।।

ಕುರೂದ್ವಹ! ವಿಪ್ರರು ನನಗೆ ನಿನಗಿಂತಲೂ ಪ್ರಿಯತಮರು ಎಂಬ ಈ ಸತ್ಯದಿಂದಲೇ ನಾನು ಶಂತನುವಿನ ಲೋಕಕ್ಕೆ ಹೋಗುತ್ತೇನೆ. ಇದರಲ್ಲಿ ಸಂಶಯವಿಲ್ಲ.

13008014a ನ ಮೇ ಪಿತಾ ಪ್ರಿಯತರೋ ಬ್ರಾಹ್ಮಣೇಭ್ಯಸ್ತಥಾಭವತ್।
13008014c ನ ಮೇ ಪಿತುಃ ಪಿತಾ ವಾಪಿ ಯೇ ಚಾನ್ಯೇಽಪಿ ಸುಹೃಜ್ಜನಾಃ।।

ನನ್ನ ತಂದೆಯೂ ಕೂಡ ನನಗೆ ಬ್ರಾಹ್ಮಣರಿಗಿಂತ ಪ್ರಿಯತಮನಾಗಿರಲಿಲ್ಲ. ನನ್ನ ತಂದೆಯ ತಂದೆಯೂ ಮತ್ತು ಅನ್ಯ ಸುಹೃಜ್ಜನರೂ ಬ್ರಾಹ್ಮಣರಿಗಿಂತ ಪ್ರಿಯತಮರಾಗಿರಲಿಲ್ಲ.

13008015a ನ ಹಿ ಮೇ ವೃಜಿನಂ ಕಿಂ ಚಿದ್ವಿದ್ಯತೇ ಬ್ರಾಹ್ಮಣೇಷ್ವಿಹ।
13008015c ಅಣು ವಾ ಯದಿ ವಾ ಸ್ಥೂಲಂ ವಿದಿತಂ ಸಾಧುಕರ್ಮಭಿಃ।।

ಸಾಧುಕರ್ಮಿ ಬ್ರಾಹ್ಮಣರ ಕುರಿತು ನನ್ನಿಂದ ಸೂಕ್ಷ್ಮವಾದ ಅಥವಾ ಸ್ಥೂಲವಾದ ಯಾವುದೇ ಅಪರಾಧವೂ ಆಗಿಲ್ಲ.

13008016a ಕರ್ಮಣಾ ಮನಸಾ ವಾಪಿ ವಾಚಾ ವಾಪಿ ಪರಂತಪ।
13008016c ಯನ್ಮೇ ಕೃತಂ ಬ್ರಾಹ್ಮಣೇಷು ತೇನಾದ್ಯ ನ ತಪಾಮ್ಯಹಮ್।।

ಪರಂತಪ! ಕರ್ಮದಿಂದ, ಮನಸ್ಸಿನಿಂದ ಮತ್ತು ಮಾತುಗಳಿಂದ ನಾನು ಬ್ರಾಹ್ಮಣರಿಗೆ ಯಾವ ಸೇವೆಯನ್ನು ಮಾಡಿರುವೆನೋ ಅದರ ಪ್ರಭಾವದಿಂದಲೇ ನಾನಿಂದು ಈ ಅವಸ್ಥೆಯಲ್ಲಿಯೂ ಸಂಕಟವನ್ನು ಅನುಭವಿಸುತ್ತಿಲ್ಲ.

13008017a ಬ್ರಹ್ಮಣ್ಯ ಇತಿ ಮಾಮಾಹುಸ್ತಯಾ ವಾಚಾಸ್ಮಿ ತೋಷಿತಃ।
13008017c ಏತದೇವ ಪವಿತ್ರೇಭ್ಯಃ ಸರ್ವೇಭ್ಯಃ ಪರಮಂ ಸ್ಮೃತಮ್।।

ನನ್ನನ್ನು ಬ್ರಹ್ಮಣ್ಯ ಎಂದು ಕರೆಯುತ್ತಾರೆ. ಈ ಮಾತಿನಿಂದ ನಾನು ಬಹಳ ತೃಪ್ತನಾಗಿದ್ದೇನೆ. ಏಕೆಂದರೆ ಬ್ರಾಹ್ಮಣರ ಸೇವೆಯೇ ಎಲ್ಲಕ್ಕಿಂತ ಪರಮ ಪವಿತ್ರವಾದುದೆಂದು ಹೇಳುತ್ತಾರೆ.

13008018a ಪಶ್ಯಾಮಿ ಲೋಕಾನಮಲಾನ್ ಶುಚೀನ್ಬ್ರಾಹ್ಮಣಯಾಯಿನಃ।
13008018c ತೇಷು ಮೇ ತಾತ ಗಂತವ್ಯಮಹ್ನಾಯ ಚ ಚಿರಾಯ ಚ।।

ಮಗೂ! ಶುಚೀ ಬ್ರಾಹ್ಮಣರ ಸೇವೆಯಲ್ಲಿ ನಿರತನಾದುದರಿಂದ ನನಗೆ ದೊರೆಯುವ ಅಮಲ ಲೋಕಗಳನ್ನು ಇಲ್ಲಿಂದಲೇ ನಾನು ನೋಡುತ್ತಿದ್ದೇನೆ. ಆ ಲೋಕಗಳಲ್ಲಿ ಚಿರವಾಗಿ ಇರಲು ಶೀಘ್ರವಾಗಿ ಅಲ್ಲಿಗೆ ಹೋಗ ಬಯಸುತ್ತೇನೆ.

13008019a ಯಥಾ ಪತ್ಯಾಶ್ರಯೋ ಧರ್ಮಃ ಸ್ತ್ರೀಣಾಂ ಲೋಕೇ ಯುಧಿಷ್ಠಿರ।
13008019c ಸ ದೇವಃ ಸಾ ಗತಿರ್ನಾನ್ಯಾ ಕ್ಷತ್ರಿಯಸ್ಯ ತಥಾ ದ್ವಿಜಾಃ।।

ಯುಧಿಷ್ಠಿರ! ಪತಿಯ ಅಶ್ರಯದಲ್ಲಿರುವುದೇ ಲೋಕದ ಸ್ತ್ರೀಯರಿಗೆ ಹೇಗೆ ಧರ್ಮವೋ ಹಾಗೆ ಕ್ಷತ್ರಿಯನಿಗೆ ದ್ವಿಜರನ್ನು ಆಶ್ರಯಿಸಿರುವುದೇ ಪರಮ ಧರ್ಮವು. ಕ್ಷತ್ರಿಯನಿಗೆ ಬ್ರಾಹ್ಮಣನೇ ದೇವ ಮತ್ತು ಗತಿ.

13008020a ಕ್ಷತ್ರಿಯಃ ಶತವರ್ಷೀ ಚ ದಶವರ್ಷೀ ಚ ಬ್ರಾಹ್ಮಣಃ।
13008020c ಪಿತಾಪುತ್ರೌ ಚ ವಿಜ್ಞೇಯೌ ತಯೋರ್ಹಿ ಬ್ರಾಹ್ಮಣಃ ಪಿತಾ।।

ನೂರು ವರ್ಷದ ಕ್ಷತ್ರಿಯ ಮತ್ತು ಹತ್ತು ವರ್ಷದ ಬ್ರಾಹ್ಮಣ – ಇಬ್ಬರನ್ನೂ ಪಿತ-ಪುತ್ರರೆಂದೇ ತಿಳಿಯಬೇಕು. ಅವರಿಬ್ಬರಲ್ಲಿ ಬ್ರಾಹ್ಮಣನು ಪಿತನೆಂದೆನಿಸಿಕೊಳ್ಳುತ್ತಾನೆ.

13008021a ನಾರೀ ತು ಪತ್ಯಭಾವೇ ವೈ ದೇವರಂ ಕುರುತೇ ಪತಿಮ್।
13008021c ಪೃಥಿವೀ ಬ್ರಾಹ್ಮಣಾಲಾಭೇ ಕ್ಷತ್ರಿಯಂ ಕುರುತೇ ಪತಿಮ್।।

ಪತಿಯು ತೀರಿಕೊಂಡರೆ ನಾರಿಯು ಪತಿಯ ಸಹೋದರನನ್ನು ಪತಿಯನ್ನಾಗಿ ಮಾಡಿಕೊಳ್ಳುವಂತೆ ಬ್ರಾಹ್ಮಣರು ಇಲ್ಲದಿರುವಾಗ ಪೃಥ್ವಿಯು ಕ್ಷತ್ರಿಯನನ್ನು ಪತಿಯನ್ನಾಗಿ ಮಾಡಿಕೊಳ್ಳುತ್ತಾಳೆ.

13008022a ಪುತ್ರವಚ್ಚ ತತೋ ರಕ್ಷ್ಯಾ ಉಪಾಸ್ಯಾ ಗುರುವಚ್ಚ ತೇ।
13008022c ಅಗ್ನಿವಚ್ಚೋಪಚರ್ಯಾ ವೈ ಬ್ರಾಹ್ಮಣಾಃ ಕುರುಸತ್ತಮ।।

ಕುರುಸತ್ತಮ! ಬ್ರಾಹ್ಮಣರನ್ನು ಪುತ್ರರಂತೆ ರಕ್ಷಿಸಬೇಕು. ಗುರುವಂತೆ ಉಪಾಸಿಸಬೇಕು. ಅಗ್ನಿಯಂತೆ ಉಪಚರಿಸಬೇಕು.

13008023a ಋಜೂನ್ಸತಃ ಸತ್ಯಶೀಲಾನ್ಸರ್ವಭೂತಹಿತೇ ರತಾನ್।
13008023c ಆಶೀವಿಷಾನಿವ ಕ್ರುದ್ಧಾನ್ದ್ವಿಜಾನುಪಚರೇತ್ಸದಾ।।

ಸರಳ ಸ್ವಭಾವದ, ಸತ್ಯಶೀಲ, ಸರ್ವಭೂತಗಳ ಹಿತದಲ್ಲಿಯೇ ನಿರತರಾದ, ಹಾವಿನ ವಿಷದಂಥಹ ಕೋಪವನ್ನು ತಾಳಬಲ್ಲ ಬ್ರಾಹ್ಮಣರನ್ನು ಎಚ್ಚರಿಕೆಯಿಂದ ಉಪಚರಿಸಬೇಕು.

13008024a ತೇಜಸಸ್ತಪಸಶ್ಚೈವ ನಿತ್ಯಂ ಬಿಭ್ಯೇದ್ಯುಧಿಷ್ಠಿರ।
13008024c ಉಭೇ ಚೈತೇ ಪರಿತ್ಯಾಜ್ಯೇ ತೇಜಶ್ಚೈವ ತಪಸ್ತಥಾ।।

ಯುಧಿಷ್ಠಿರ! ಅವರ ತೇಜಸ್ಸು ಮತ್ತು ತಪಸ್ಸುಗಳಿಗೆ ನಿತ್ಯವೂ ಹೆದರಬೇಕು. ಅವರ ತೇಜಸ್ಸು ಮತ್ತು ತಪಸ್ಸುಗಳಿಂದ ದೂರವಿರಬೇಕು.

13008025a ವ್ಯವಸಾಯಸ್ತಯೋಃ ಶೀಘ್ರಮುಭಯೋರೇವ ವಿದ್ಯತೇ।
13008025c ಹನ್ಯುಃ ಕ್ರುದ್ಧಾ ಮಹಾರಾಜ ಬ್ರಾಹ್ಮಣಾ ಯೇ ತಪಸ್ವಿನಃ।।

ಮಹಾರಾಜ! ಅವರ ತೇಜಸ್ಸು ಮತ್ತು ತಪಸ್ಸುಗಳೆರಡರ ಫಲವೂ ತೀವ್ರವಾಗಿಯೇ ಇರುತ್ತದೆ. ತಪಸ್ವೀ ಬ್ರಾಹ್ಮಣರು ಕ್ರುದ್ಧರಾದರೆ ನಾಶಪಡಿಸುತ್ತಾರೆ.

13008026a ಭೂಯಃ ಸ್ಯಾದುಭಯಂ ದತ್ತಂ ಬ್ರಾಹ್ಮಣಾದ್ಯದಕೋಪನಾತ್।
13008026c ಕುರ್ಯಾದುಭಯತಃಶೇಷಂ ದತ್ತಶೇಷಂ ನ ಶೇಷಯೇತ್।।

ಕೋಪರಹಿತ ಬ್ರಾಹ್ಮಣನು ತನ್ನ ತೇಜಸ್ಸು-ತಪಸ್ಸುಗಳನ್ನು ಇತರರ ಮೇಲೆ ಪ್ರಯೋಗಿಸಿದರೆ ಅವುಗಳ ತೀವ್ರತೆಯು ಸಹಿಸಲಸಾಧ್ಯವಾಗಿರುತ್ತದೆ. ಆದುದರಿಂದ ಇವೆರಡೂ ಅವನಲ್ಲಿಯೇ ಉಳಿಯುವಂತೆ ಮಾಡಬೇಕು.

13008027a ದಂಡಪಾಣಿರ್ಯಥಾ ಗೋಷು ಪಾಲೋ ನಿತ್ಯಂ ಸ್ಥಿರೋ ಭವೇತ್।
13008027c ಬ್ರಾಹ್ಮಣಾನ್ಬ್ರಹ್ಮ ಚ ತಥಾ ಕ್ಷತ್ರಿಯಃ ಪರಿಪಾಲಯೇತ್।।

ದಂಡವನ್ನು ಹಿಡಿದು ಗೋವುಗಳನ್ನು ಪಾಲಿಸುವಂತೆ ಕ್ಷತ್ರಿಯನು ದಂಡಪಾಣಿಯಾಗಿ ನಿತ್ಯವೂ ಸ್ಥಿರನಾಗಿದ್ದು ಬ್ರಾಹ್ಮಣರು ಮತ್ತು ವೇದವನ್ನು ಪರಿಪಾಲಿಸಬೇಕು.

13008028a ಪಿತೇವ ಪುತ್ರಾನ್ರಕ್ಷೇಥಾ ಬ್ರಾಹ್ಮಣಾನ್ಬ್ರಹ್ಮತೇಜಸಃ।
13008028c ಗೃಹೇ ಚೈಷಾಮವೇಕ್ಷೇಥಾಃ ಕಚ್ಚಿದಸ್ತೀಹ ಜೀವನಮ್।।

ತಂದೆಯು ಮಕ್ಕಳನ್ನು ಹೇಗೋ ಹಾಗೆ ಬ್ರಹ್ಮತೇಜಸ ಬ್ರಾಹ್ಮಣರನ್ನು ರಕ್ಷಿಸು. ಅವರ ಮನೆಗಳಲ್ಲಿ ಜೀವನ ನಿರ್ವಹಣೆಗೆ ಸಾಕಾಗುವಷ್ಟು ಇವೆಯೋ ಎನ್ನುವುದನ್ನು ಪರಿಶೀಲಿಸುತ್ತಿರು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಪೂಜ್ಯವರ್ಣನೇ ಅಷ್ಟೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಪೂಜ್ಯವರ್ಣನ ಎಂಟನೇ ಅಧ್ಯಾಯವು.