007: ಕರ್ಮಫಲಿಕೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 7

ಸಾರ

ಯುಧಿಷ್ಠಿರನ ಪ್ರಶ್ನೆಗೆ ಭೀಷ್ಮನು ಶುಭಕರ್ಮಗಳ ಫಲಗಳ ಕುರಿತು ಹೇಳಿದುದು (1-29).

13007001 ಯುಧಿಷ್ಠಿರ ಉವಾಚ।
13007001a ಕರ್ಮಣಾಂ ಮೇ ಸಮಸ್ತಾನಾಂ ಶುಭಾನಾಂ ಭರತರ್ಷಭ।
13007001c ಫಲಾನಿ ಮಹತಾಂ ಶ್ರೇಷ್ಠ ಪ್ರಬ್ರೂಹಿ ಪರಿಪೃಚ್ಚತಃ।।

ಯುಧಿಷ್ಠಿರನು ಹೇಳಿದನು: “ಭರತರ್ಷಭ! ಮಹಾತ್ಮರಲ್ಲಿ ಶ್ರೇಷ್ಠ! ನಾನು ಕೇಳುವ ಶುಭ ಕರ್ಮಗಳ ಸಮಸ್ತ ಫಲಗಳ ಕುರಿತೂ ಹೇಳು.”

13007002 ಭೀಷ್ಮ ಉವಾಚ।
13007002a ರಹಸ್ಯಂ ಯದೃಷೀಣಾಂ ತು ತಚ್ಚೃಣುಷ್ವ ಯುಧಿಷ್ಠಿರ।
13007002c ಯಾ ಗತಿಃ ಪ್ರಾಪ್ಯತೇ ಯೇನ ಪ್ರೇತ್ಯಭಾವೇ ಚಿರೇಪ್ಸಿತಾ।।

ಭೀಷ್ಮನು ಹೇಳಿದನು: “ಯುಧಿಷ್ಠಿರ! ಮರಣಾನಂತರ ಬಹಳ ಕಾಲದಿಂದಲೂ ಅಪೇಕ್ಷಿಸುವ ಯಾವ ಗತಿಯು ದೊರೆಯುತ್ತದೆ ಎನ್ನುವುದು ಋಷಿಗಳಿಗೂ ರಹಸ್ಯವಾದುದು. ಅದನ್ನು ಕೇಳು.

13007003a ಯೇನ ಯೇನ ಶರೀರೇಣ ಯದ್ಯತ್ಕರ್ಮ ಕರೋತಿ ಯಃ।
13007003c ತೇನ ತೇನ ಶರೀರೇಣ ತತ್ತತ್ಫಲಮುಪಾಶ್ನುತೇ।।

ಯಾವ ಯಾವ ಶರೀರದಿಂದ ಯಾವ ಯಾವ ಕರ್ಮವನ್ನು ಮಾಡುತ್ತಾನೋ ಆಯಾ ಶರೀರಗಳಿಂದಲೇ ಅವುಗಳ ಫಲವನ್ನು ಅನುಭವಿಸಬೇಕಾಗುತ್ತದೆ.

13007004a ಯಸ್ಯಾಂ ಯಸ್ಯಾಮವಸ್ಥಾಯಾಂ ಯತ್ಕರೋತಿ ಶುಭಾಶುಭಮ್।
13007004c ತಸ್ಯಾಂ ತಸ್ಯಾಮವಸ್ಥಾಯಾಂ ಭುಂಕ್ತೇ ಜನ್ಮನಿ ಜನ್ಮನಿ।।

ಯಾವ ಯಾವ ಅವಸ್ಥೆಯಲ್ಲಿ1 ಯಾವ ಯಾವ ಶುಭಾಶುಭ ಕರ್ಮಗಳನ್ನು ಮಾಡುತ್ತೇವೆಯೋ ಆಯಾ ಅವಸ್ಥೆಯಲ್ಲಿಯೇ ಜನ್ಮ ಜನ್ಮಾಂತರಗಳಲ್ಲಿ ಅವುಗಳ ಫಲವನ್ನು ಅನುಭವಿಸುತ್ತೇವೆ.

13007005a ನ ನಶ್ಯತಿ ಕೃತಂ ಕರ್ಮ ಸದಾ ಪಂಚೇಂದ್ರಿಯೈರಿಹ।
13007005c ತೇ ಹ್ಯಸ್ಯ ಸಾಕ್ಷಿಣೋ ನಿತ್ಯಂ ಷಷ್ಠ ಆತ್ಮಾ ತಥೈವ ಚ।।

ಪಂಚೇಂದ್ರಿಯಗಳಿಂದ ಮಾಡಿದ ಕರ್ಮವು ಎಂದೂ ನಾಶವಾಗುವುದಿಲ್ಲ. ಐದು ಇಂದ್ರಿಯಗಳು ಮತ್ತು ಆರನೆಯದಾಗಿ ಆತ್ಮ – ಇವು ಕರ್ಮಗಳ ನಿತ್ಯ ಸಾಕ್ಷಿಗಳಾಗಿರುತ್ತವೆ.

13007006a ಚಕ್ಷುರ್ದದ್ಯಾನ್ಮನೋ ದದ್ಯಾದ್ವಾಚಂ ದದ್ಯಾಚ್ಚ ಸೂನೃತಾಮ್।
13007006c ಅನುವ್ರಜೇದುಪಾಸೀತ ಸ ಯಜ್ಞಃ ಪಂಚದಕ್ಷಿಣಃ।।

ಮನೆಗೆ ಬಂದ ಅತಿಥಿಯನ್ನು ಪ್ರಸನ್ನ ದೃಷ್ಟಿಯಿಂದ ನೋಡುವುದು, ಮನಃಪೂರ್ವಕವಾಗಿ ಸೇವೆ ಸಲ್ಲಿಸುವುದು, ಸುಮಧುರ ಮಾತನ್ನಾಡುವುದು, ಮನೆಯಲ್ಲಿ ಇರುವವರೆಗೆ ಸೇವಾನಿರತನಾಗಿರುವುದು, ಮತ್ತು ಹಿಂದಿರುಗುವಾಗ ಅವನನ್ನೇ ಅನುಸರಿಸಿ ಸ್ವಲ್ಪದೂರದವರೆಗೆ ಹೋಗುವುದು – ಈ ಐದು ಕರ್ಮಗಳೂ ಗೃಹಸ್ಥನಾದವನಿಗೆ ಪಂಚದಕ್ಷಿಣ ಯುಕ್ತವಾದ ಯಜ್ಞದಂತೆ.

13007007a ಯೋ ದದ್ಯಾದಪರಿಕ್ಲಿಷ್ಟಮನ್ನಮಧ್ವನಿ ವರ್ತತೇ।
13007007c ಶ್ರಾಂತಾಯಾದೃಷ್ಟಪೂರ್ವಾಯ ತಸ್ಯ ಪುಣ್ಯಫಲಂ ಮಹತ್।।

ಹಿಂದೆಂದೂ ನೋಡಿರದ ಬಳಲಿದ ಅಪರಿಚಿತನಿಗೆ ಮನಸ್ಸಿಗೆ ನೋವಾಗದ ರೀತಿಯಲ್ಲಿ ಸುಲಭವಾಗಿ ತಿನ್ನಬಹುದಾದ ಆಹಾರವನ್ನು ನೀಡುವವನಿಗೆ ಮಹಾ ಪುಣ್ಯಫಲವು ದೊರೆಯುತ್ತದೆ.

13007008a ಸ್ಥಂಡಿಲೇ ಶಯಮಾನಾನಾಂ ಗೃಹಾಣಿ ಶಯನಾನಿ ಚ।
13007008c ಚೀರವಲ್ಕಲಸಂವೀತೇ ವಾಸಾಂಸ್ಯಾಭರಣಾನಿ ಚ।।

ನೆಲದ ಮೇಲೆ ಮಲಗುವವನಿಗೆ ಮನೆ-ಶಯನಗಳೂ, ಚೀರವಲ್ಕಲವನ್ನು ಧರಿಸುವವನಿಗೆ ವಸ್ತ್ರ-ಆಭರಣಗಳೂ ದೊರೆಯುತ್ತವೆ.

13007009a ವಾಹನಾಸನಯಾನಾನಿ ಯೋಗಾತ್ಮನಿ ತಪೋಧನೇ।
13007009c ಅಗ್ನೀನುಪಶಯಾನಸ್ಯ ರಾಜಪೌರುಷಮುಚ್ಯತೇ।।

ಯೋಗಾತ್ಮನಾದ ತಪೋಧನನಿಗೆ ವಾಹನ-ಆಸನ-ಯಾನಗಳೂ, ಅಗ್ನಿಯನ್ನು ಉಪಾಸನೆ ಮಾಡುವ ರಾಜನಿಗೆ ಪೌರುಷವೂ ದೊರೆಯುತ್ತದೆಯೆಂದು ಹೇಳುತ್ತಾರೆ.

13007010a ರಸಾನಾಂ ಪ್ರತಿಸಂಹಾರೇ ಸೌಭಾಗ್ಯಮನುಗಚ್ಚತಿ।
13007010c ಆಮಿಷಪ್ರತಿಸಂಹಾರೇ ಪಶೂನ್ಪುತ್ರಾಂಶ್ಚ ವಿಂದತಿ।।

ಮದ್ಯ ಮೊದಲಾದ ರಸಗಳನ್ನು ತೊರೆಯುವುದರಿಂದ ಸೌಭಾಗ್ಯವು ದೊರೆಯುತ್ತದೆ. ಮಾಂಸವನ್ನು ತೊರೆಯುವುದರಿಂದ ಪಶು-ಪುತ್ರರು ದೊರೆಯುತ್ತಾರೆ.

13007011a ಅವಾಕ್ಶಿರಾಸ್ತು ಯೋ ಲಂಬೇದುದವಾಸಂ ಚ ಯೋ ವಸೇತ್।
13007011c ಸತತಂ ಚೈಕಶಾಯೀ ಯಃ ಸ ಲಭೇತೇಪ್ಸಿತಾಂ ಗತಿಮ್।।

ತಲೆಕೆಳಮಾಡಿ ತಪಸ್ಸನ್ನಾಚರಿಸುವ, ನೀರಿನಲ್ಲಿ ನಿಂತು ತಪಸ್ಸನ್ನಾಚರಿಸುವ ಮತ್ತು ಸತತವೂ ಏಕಾಂಗಿಯಾಗಿ ಮಲಗಿ ತಪಸ್ಸನ್ನಾಚರಿಸುವವನಿಗೆ ಬಯಸಿದ ಗತಿಯು ದೊರೆಯುತ್ತದೆ.

13007012a ಪಾದ್ಯಮಾಸನಮೇವಾಥ ದೀಪಮನ್ನಂ ಪ್ರತಿಶ್ರಯಮ್।
13007012c ದದ್ಯಾದತಿಥಿಪೂಜಾರ್ಥಂ ಸ ಯಜ್ಞಃ ಪಂಚದಕ್ಷಿಣಃ।।

ಪಾದ್ಯ, ಆಸನ, ದೀಪ, ಅನ್ನ ಮತ್ತು ಉಳಿಯಲು ಸ್ಥಳ - ಇವುಗಳನ್ನು ಅತಿಥಿಪೂಜೆಯಲ್ಲಿ ನೀಡುವುದು ಪಂಚದಕ್ಷಿಣೆಗಳ ಯಜ್ಞಕ್ಕೆ ಸಮಾನ.

13007013a ವೀರಾಸನಂ ವೀರಶಯ್ಯಾಂ ವೀರಸ್ಥಾನಮುಪಾಸತಃ।
13007013c ಅಕ್ಷಯಾಸ್ತಸ್ಯ ವೈ ಲೋಕಾಃ ಸರ್ವಕಾಮಗಮಾಸ್ತಥಾ।।

ವೀರಾಸನ, ವೀರಶಯನ ಮತ್ತು ವೀರಸ್ಥಾನಗಳಿಗೆ ಹೋಗುವವರಿಗೆ ಸರ್ವಕಾಮಗಳನ್ನೂ ಪಡೆಯುವ ಅಕ್ಷಯ ಲೋಕಗಳು ದೊರೆಯುತ್ತವೆ.

13007014a ಧನಂ ಲಭೇತ ದಾನೇನ ಮೌನೇನಾಜ್ಞಾಂ ವಿಶಾಂ ಪತೇ।
13007014c ಉಪಭೋಗಾಂಶ್ಚ ತಪಸಾ ಬ್ರಹ್ಮಚರ್ಯೇಣ ಜೀವಿತಮ್।।

ವಿಶಾಂಪತೇ! ದಾನಮಾಡುವುದರಿಂದ ಧನವನ್ನೂ, ಮೌನಿಯಾಗಿರುವುದರಿಂದ ಇತರರಿಗೆ ಆಜ್ಞೆಯನ್ನು ನೀಡುವ ಅವಕಾಶವನ್ನೂ, ತಪಸ್ಸಿನಿಂದ ಉಪಭೋಗಗಳನ್ನೂ ಮತ್ತು ಬ್ರಹ್ಮಚರ್ಯದಿಂದ ಜೀವಿತವನ್ನೂ ಪಡೆದುಕೊಳ್ಳಬಹುದು.

13007015a ರೂಪಮೈಶ್ವರ್ಯಮಾರೋಗ್ಯಮಹಿಂಸಾಫಲಮಶ್ನುತೇ।
13007015c ಫಲಮೂಲಾಶಿನಾಂ ರಾಜ್ಯಂ ಸ್ವರ್ಗಃ ಪರ್ಣಾಶಿನಾಂ ತಥಾ।।

ಅಹಿಂಸಾಧರ್ಮದಿಂದ ರೂಪ, ಐಶ್ವರ್ಯ, ಮತ್ತು ಆರೋಗ್ಯಗಳು ಫಲವಾಗಿ ದೊರೆಯುತ್ತವೆ. ಫಲ-ಮೂಲಗಳನ್ನು ತಿನ್ನುವವರಿಗೆ ರಾಜ್ಯವೂ, ಎಲೆಗಳನ್ನು ಮಾತ್ರ ತಿನ್ನುವವರಿಗೆ ಸ್ವರ್ಗವೂ ದೊರೆಯುತ್ತವೆ.

13007016a ಪ್ರಾಯೋಪವೇಶನಾದ್ರಾಜನ್ ಸರ್ವತ್ರ ಸುಖಮುಚ್ಯತೇ।
13007016c ಸ್ವರ್ಗಂ ಸತ್ಯೇನ ಲಭತೇ ದೀಕ್ಷಯಾ ಕುಲಮುತ್ತಮಮ್।।

ರಾಜನ್! ಪ್ರಾಯೋಪವೇಶವನ್ನು ಮಾಡುವುದರಿಂದ ಸರ್ವತ್ರ ಸುಖವು ದೊರೆಯುತ್ತದೆ. ಸತ್ಯದಿಂದ ಸ್ವರ್ಗವೂ ಮತ್ತು ವ್ರತಧಾರಣೆಯಿಂದ ಉತ್ತಮ ಕುಲವೂ ದೊರೆಯುತ್ತವೆ.

13007017a ಗವಾಢ್ಯಃ ಶಾಕದೀಕ್ಷಾಯಾಂ ಸ್ವರ್ಗಗಾಮೀ ತೃಣಾಶನಃ।
13007017c ಸ್ತ್ರಿಯಸ್ತ್ರಿಷವಣಂ ಸ್ನಾತ್ವಾ ವಾಯುಂ ಪೀತ್ವಾ ಕ್ರತುಂ ಲಭೇತ್।।

ಶಾಕಾಹಾರಿಯಾದನು ಗೋಸಮೃದ್ಧಿಯನ್ನು ಹೊಂದುತ್ತಾನೆ. ಹುಲ್ಲನ್ನೇ ತಿನ್ನುವವನು ಸ್ವರ್ಗಕ್ಕೆ ಹೋಗುತ್ತಾನೆ. ದಿನದ ಮೂರು ಕಾಲಗಳಲ್ಲಿ ಸ್ನಾನಮಾಡುವವನು ಸ್ತ್ರೀಸೌಖ್ಯವನ್ನು ಪಡೆಯುತ್ತಾನೆ. ವಾಯುಭಕ್ಷಕನಾಗಿರುವವನಿಗೆ ಯಜ್ಞದ ಫಲವು ದೊರೆಯುತ್ತದೆ.

13007018a ಸಲಿಲಾಶೀ ಭವೇದ್ಯಶ್ಚ ಸದಾಗ್ನಿಃ ಸಂಸ್ಕೃತೋ ದ್ವಿಜಃ।
13007018c ಮರುಂ ಸಾಧಯತೋ ರಾಜ್ಯಂ ನಾಕಪೃಷ್ಠಮನಾಶಕೇ।।

ನೀರನ್ನೇ ಸೇವಿಸುವವನು ಸದಾ ಅಗ್ನಿಯನ್ನು ಪೂಜಿಸುವ ಉತ್ತಮ ದ್ವಿಜನಾಗುತ್ತಾನೆ. ಮಂತ್ರಸಾಧಕನು ರಾಜ್ಯವನ್ನು ಪಡೆದುಕೊಳ್ಳುತ್ತಾನೆ. ನಿರಾಹಾರಿಯಾದವನು ಸ್ವರ್ಗವನ್ನು ಹೊಂದುತ್ತಾನೆ.

13007019a ಉಪವಾಸಂ ಚ ದೀಕ್ಷಾಂ ಚ ಅಭಿಷೇಕಂ ಚ ಪಾರ್ಥಿವ।
13007019c ಕೃತ್ವಾ ದ್ವಾದಶವರ್ಷಾಣಿ ವೀರಸ್ಥಾನಾದ್ವಿಶಿಷ್ಯತೇ।।

ಪಾರ್ಥಿವ! ಹನ್ನೆರಡು ವರ್ಷಗಳ ಉಪವಾಸ ದೀಕ್ಷೆಯನ್ನು ಕೈಗೊಂಡು ತೀರ್ಥಗಳಲ್ಲಿ ಮೀಯುವವನಿಗೆ ವೀರರ ಸ್ಥಾನವು ದೊರೆಯುತ್ತದೆ.

13007020a ಅಧೀತ್ಯ ಸರ್ವವೇದಾನ್ವೈ ಸದ್ಯೋ ದುಃಖಾತ್ಪ್ರಮುಚ್ಯತೇ।
13007020c ಮಾನಸಂ ಹಿ ಚರನ್ಧರ್ಮಂ ಸ್ವರ್ಗಲೋಕಮವಾಪ್ನುಯಾತ್।।

ಸರ್ವವೇದಗಳನ್ನು ಅಧ್ಯಯನಮಾಡಿದವನು ಸದ್ಯದ ದುಃಖಗಳಿಂದ ಮುಕ್ತನಾಗುತ್ತಾನೆ. ಮಾನಸಧರ್ಮವನ್ನು ಪಾಲಿಸುವವನು ಸ್ವರ್ಗಲೋಕವನ್ನು ಪಡೆದುಕೊಳ್ಳುತ್ತಾನೆ.

13007021a ಯಾ ದುಸ್ತ್ಯಜಾ ದುರ್ಮತಿಭಿರ್ಯಾ ನ ಜೀರ್ಯತಿ ಜೀರ್ಯತಃ।
13007021c ಯೋಽಸೌ ಪ್ರಾಣಾಂತಿಕೋ ರೋಗಸ್ತಾಂ ತೃಷ್ಣಾಂ ತ್ಯಜತಃ ಸುಖಮ್।।

ದುಷ್ಟಬುದ್ಧಿಗಳಿಂದ ತ್ಯಜಿಸಲು ಸಾಧ್ಯವಾಗಿರದ, ಮುದುಕನಾದರೂ ಜೀರ್ಣವಾಗದೇ ಇರುವ, ಪ್ರಾಣಾಂತಿಕ ರೋಗರೂಪವಾಗಿರುವ ತೃಷ್ಣೆಯನ್ನು ತ್ಯಜಿಸಿದವನು ಸುಖಿಯಾಗುತ್ತಾನೆ.

13007022a ಯಥಾ ಧೇನುಸಹಸ್ರೇಷು ವತ್ಸೋ ವಿಂದತಿ ಮಾತರಮ್।
13007022c ಏವಂ ಪೂರ್ವಕೃತಂ ಕರ್ಮ ಕರ್ತಾರಮನುಗಚ್ಚತಿ।।

ಸಾವಿರ ಹಸುಗಳ ಮಧ್ಯದಲ್ಲಿಯೂ ಕರುವು ಹೇಗೆ ತನ್ನ ತಾಯಿಯನ್ನೇ ಹೋಗಿ ಸೇರುವುದೋ ಹಾಗೆ ಹಿಂದೆ ಮಾಡಿದ ಕರ್ಮಫಲವು ತನ್ನ ಕರ್ತೃವನ್ನೇ ಅನುಸರಿಸಿ ಬರುತ್ತದೆ.

13007023a ಅಚೋದ್ಯಮಾನಾನಿ ಯಥಾ ಪುಷ್ಪಾಣಿ ಚ ಫಲಾನಿ ಚ।
13007023c ಸ್ವಕಾಲಂ ನಾತಿವರ್ತಂತೇ ತಥಾ ಕರ್ಮ ಪುರಾಕೃತಮ್।।

ಹಿಂದೆ ಮಾಡಿದ ಕರ್ಮಗಳು ಯಾರ ಪ್ರೇರಣೆಯೂ ಇಲ್ಲದೇ, ತಮ್ಮ ಕಾಲವನ್ನು ಅತಿಕ್ರಮಿಸದೇ, ಸರಿಯಾದ ಸಮಯದಲ್ಲಿ ಪುಷ್ಪ-ಫಲಗಳಂತೆ ಕಾಣಿಸಿಕೊಳ್ಳುತ್ತವೆ.

13007024a ಜೀರ್ಯಂತಿ ಜೀರ್ಯತಃ ಕೇಶಾ ದಂತಾ ಜೀರ್ಯಂತಿ ಜೀರ್ಯತಃ।
13007024c ಚಕ್ಷುಃಶ್ರೋತ್ರೇ ಚ ಜೀರ್ಯೇತೇ ತೃಷ್ಣೈಕಾ ತು ನ ಜೀರ್ಯತೇ।।

ಮನುಷ್ಯನು ವೃದ್ಧನಾದಂತೆ ಕೂದಲು ನೆರೆಯುತ್ತದೆ. ಹಲ್ಲುಗಳು ಜೀರ್ಣವಾಗುತ್ತವೆ. ಕಣ್ಣು-ಕಿವಿಗಳು ಜೀರ್ಣವಾಗುತ್ತವೆ. ಆದರೆ ತೃಷ್ಣೆಯು ಮಾತ್ರ ಜೀರ್ಣವಾಗುವುದಿಲ್ಲ.

13007025a ಯೇನ ಪ್ರೀಣಾತಿ ಪಿತರಂ ತೇನ ಪ್ರೀತಃ ಪ್ರಜಾಪತಿಃ।
13007025c ಪ್ರೀಣಾತಿ ಮಾತರಂ ಯೇನ ಪೃಥಿವೀ ತೇನ ಪೂಜಿತಾ।
13007025e ಯೇನ ಪ್ರೀಣಾತ್ಯುಪಾಧ್ಯಾಯಂ ತೇನ ಸ್ಯಾದ್ಬ್ರಹ್ಮ ಪೂಜಿತಮ್।।

ತಂದೆಯನ್ನು ಪ್ರೀತಿಸುವವನು ಪ್ರಜಾಪತಿಗೆ ಪ್ರೀತನಾಗುತ್ತಾನೆ. ತಾಯಿಯನ್ನು ಪ್ರೀತಿಸುವವನು ಭೂಮಿಗೆ ಪ್ರೀತನಾಗುತ್ತಾನೆ. ಉಪಾಧ್ಯಾಯನನ್ನು ಪ್ರೀತಿಸುವವನು ಬ್ರಹ್ಮನಿಂದ ಪೂಜಿತನಾಗುತ್ತಾನೆ.

13007026a ಸರ್ವೇ ತಸ್ಯಾದೃತಾ ಧರ್ಮಾ ಯಸ್ಯೈತೇ ತ್ರಯ ಆದೃತಾಃ।
13007026c ಅನಾದೃತಾಸ್ತು ಯಸ್ಯೈತೇ ಸರ್ವಾಸ್ತಸ್ಯಾಫಲಾಃ ಕ್ರಿಯಾಃ।।

ಈ ಮೂವರನ್ನೂ ಸದಾ ಆದರಿಸುವ ಮತ್ತು ಶುಶ್ರೂಷಾದಿಗಳಿಂದ ಪ್ರಸನ್ನ ಗೊಳಿಸುವವನು ಎಲ್ಲ ಧರ್ಮಗಳನ್ನೂ ಅನುಸರಿಸಿದಂತೆ. ಈ ಮೂವರನ್ನೂ ಅನಾದರಿಸುವವನ ಸಮಸ್ತ ಕ್ರಿಯೆಗಳೂ ಅಸಫಲವಾಗುತ್ತವೆ.””

13007027 ವೈಶಂಪಾಯನ ಉವಾಚ।
13007027a ಭೀಷ್ಮಸ್ಯ ತದ್ವಚಃ ಶ್ರುತ್ವಾ ವಿಸ್ಮಿತಾಃ ಕುರುಪುಂಗವಾಃ।
13007027c ಆಸನ್ಪ್ರಹೃಷ್ಟಮನಸಃ ಪ್ರೀತಿಮಂತೋಽಭವಂಸ್ತದಾ।।

ವೈಶಂಪಾಯನನು ಹೇಳಿದನು: “ಭೀಷ್ಮನ ಆ ಮಾತನ್ನು ಕೇಳಿ ಕುರುಪುಂಗವರು ವಿಸ್ಮಿತರಾದರು. ಅವರು ಹೃಷ್ಟಮನಸ್ಕರೂ ಪ್ರೀತಿಮಂತರೂ ಆದರು.

13007028a ಯನ್ಮಂತ್ರೇ ಭವತಿ ವೃಥಾ ಪ್ರಯುಜ್ಯಮಾನೇ ಯತ್ಸೋಮೇ ಭವತಿ ವೃಥಾಭಿಷೂಯಮಾಣೇ।
13007028c ಯಚ್ಚಾಗ್ನೌ ಭವತಿ ವೃಥಾಭಿಹೂಯಮಾನೇ ತತ್ಸರ್ವಂ ಭವತಿ ವೃಥಾಭಿಧೀಯಮಾನೇ।।

2“ವೃಥಾ ಮಂತ್ರಗಳನ್ನು ಪಠಿಸುವುದರಿಂದ ದೊರೆಯುವ ಪಾಪ, ವೃಥಾ ಸೋಮವನ್ನು ಹಿಂಡುವುದರಿಂದ ದೊರೆಯುವ ಪಾಪ ಮತ್ತು ಅಗ್ನಿಯಲ್ಲಿ ವೃಥಾ ಹೋಮಮಾಡುವುದರಿಂದ ಬರುವ ಪಾಪ ಇವೆಲ್ಲ ಪಾಪಗಳೂ ವೃಥಾ ಆಲಾಪಮಾಡುವವನಿಗೆ ದೊರೆಯುತ್ತವೆ.

13007029a ಇತ್ಯೇತದೃಷಿಣಾ ಪ್ರೋಕ್ತಮುಕ್ತವಾನಸ್ಮಿ ಯದ್ವಿಭೋ।
13007029c ಶುಭಾಶುಭಫಲಪ್ರಾಪ್ತೌ ಕಿಮತಃ ಶ್ರೋತುಮಿಚ್ಚಸಿ।।

ವಿಭೋ! ಋಷಿಗಳು ಹೇಳಿರುವ ಶುಭಾಶುಭಫಲಗಳ ಪ್ರಾಪ್ತಿಯನ್ನು ಹೇಳಿದ್ದಾಯಿತು. ಇನ್ನೂ ಏನನ್ನು ಕೇಳಲು ಬಯಸುತ್ತೀಯೆ?”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಕರ್ಮಫಲಿಕೋಪಾಖ್ಯಾನೇ ಸಪ್ತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಕರ್ಮಫಲಿಕೋಪಾಖ್ಯಾನ ಎನ್ನುವ ಏಳನೇ ಅಧ್ಯಾಯವು.


  1. ಬಾಲ್ಯ, ಯೌವನ, ವಾರ್ಧಕ್ಯಾದಿ ಅವಸ್ಥೆಗಳು. ↩︎

  2. ಇದು ಭೀಷ್ಮನು ಹೇಳಿದ ಮಾತು. ↩︎