005: ಶುಕ್ರವಾಸವಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 5

ಸಾರ

ದಯಾಲು ಭಕ್ತಜನರ ಗುಣಗಳೇನೆಂದು ಕೇಳಲು ಯುಧಿಷ್ಠಿರನಿಗೆ ಭೀಷ್ಮನು ದಯಾಲು ಮತ್ತು ಭಕ್ತಿಯುತ ಗಿಳಿ-ಮರಗಳ ಕಥೆಯನ್ನು ಹೇಳಿದುದು (1-31).

13005001 ಯುಧಿಷ್ಠಿರ ಉವಾಚ।
13005001a ಆನೃಶಂಸಸ್ಯ ಧರ್ಮಸ್ಯ ಗುಣಾನ್ಭಕ್ತಜನಸ್ಯ ಚ।
13005001c ಶ್ರೋತುಮಿಚ್ಚಾಮಿ ಕಾರ್ತ್ಸ್ನ್ಯೇನ ತನ್ಮೇ ಬ್ರೂಹಿ ಪಿತಾಮಹ।।

ಯುಧಿಷ್ಠಿರನು ಹೇಳಿದನು: “ಪಿತಾಮಹ! ದಯಾಲು ಭಕ್ತಜನರ ಗುಣಗಳನ್ನು ಕೇಳಬಯಸುತ್ತೇನೆ. ಅದನ್ನು ಸಂಪೂರ್ಣವಾಗಿ ಹೇಳು.”

13005002 ಭೀಷ್ಮ ಉವಾಚ।
113005002a ವಿಷಯೇ ಕಾಶಿರಾಜಸ್ಯ ಗ್ರಾಮಾನ್ನಿಷ್ಕ್ರಮ್ಯ ಲುಬ್ಧಕಃ।
13005002c ಸವಿಷಂ ಕಾಂಡಮಾದಾಯ ಮೃಗಯಾಮಾಸ ವೈ ಮೃಗಮ್।।

ಭೀಷ್ಮನು ಹೇಳಿದನು: “ಕಾಶಿರಾಜನ ರಾಜ್ಯದ ಬೇಟೆಗಾರನೋರ್ವನು ವಿಷದಲ್ಲಿ ಅದ್ದಿದ ಬಾಣವನ್ನು ತೆಗೆದುಕೊಂಡು ಜಿಂಕೆಯನ್ನು ಬೇಟೆಯಾಡಲು ಗ್ರಾಮದಿಂದ ಹೊರಟನು.

13005003a ತತ್ರ ಚಾಮಿಷಲುಬ್ಧೇನ ಲುಬ್ಧಕೇನ ಮಹಾವನೇ।
13005003c ಅವಿದೂರೇ ಮೃಗಂ ದೃಷ್ಟ್ವಾ ಬಾಣಃ ಪ್ರತಿಸಮಾಹಿತಃ।।

ಅನತಿದೂರದಲ್ಲಿಯೇ ಆ ಮಹಾವನದಲ್ಲಿ ಮಾಂಸವನ್ನು ಬಯಸುತ್ತಿದ್ದ ವ್ಯಾಧನು ಜಿಂಕೆಯನ್ನು ನೋಡಿ ಬಾಣವನ್ನು ಪ್ರಯೋಗಿಸಿದನು.

13005004a ತೇನ ದುರ್ವಾರಿತಾಸ್ತ್ರೇಣ ನಿಮಿತ್ತಚಪಲೇಷುಣಾ।
13005004c ಮಹಾನ್ವನತರುರ್ವಿದ್ಧೋ ಮೃಗಂ ತತ್ರ ಜಿಘಾಂಸತಾ।।

ಜಿಂಕೆಯನ್ನು ಹೊಡೆಯಲೆಂದು ಬಿಟ್ಟ ಆ ಅಮೋಘ ಬಾಣವು ಗುರಿತಪ್ಪಿ ಅಲ್ಲಿದ್ದ ಒಂದು ಮಹಾ ವೃಕ್ಷಕ್ಕೆ ತಾಗಿತು.

13005005a ಸ ತೀಕ್ಷ್ಣವಿಷದಿಗ್ಧೇನ ಶರೇಣಾತಿಬಲಾತ್ಕೃತಃ।
13005005c ಉತ್ಸೃಜ್ಯ ಫಲಪತ್ರಾಣಿ ಪಾದಪಃ ಶೋಷಮಾಗತಃ।।

ಬಲವಾಗಿ ಪ್ರಯೋಗಿಸಲ್ಪಟ್ಟ ಆ ತೀಕ್ಷ್ಣ ವಿಷಪೂರಿತ ಬಾಣದ ಹೊಡೆತದಿಂದಾಗಿ ಎಲೆ-ಹಣ್ಣುಗಳು ಉದುರಿ ಆ ಮರವು ಒಣಗಿ ಹೋಯಿತು.

13005006a ತಸ್ಮಿನ್ವೃಕ್ಷೇ ತಥಾಭೂತೇ ಕೋಟರೇಷು ಚಿರೋಷಿತಃ।
13005006c ನ ಜಹಾತಿ ಶುಕೋ ವಾಸಂ ತಸ್ಯ ಭಕ್ತ್ಯಾ ವನಸ್ಪತೇಃ।।

ಆದರೆ ಮರದ ಕೊಟರೆಯಲ್ಲಿ ಬಹುಕಾಲದಿಂದ ವಾಸಿಸುತ್ತಿದ್ದ ಗಿಳಿಯೊಂದು ಮಾತ್ರ ಅ ವೃಕ್ಷದ ಮೇಲಿನ ಭಕ್ತಿಯಿಂದಾಗಿ ಅದನ್ನು ಬಿಟ್ಟು ಹೋಗಲಿಲ್ಲ.

13005007a ನಿಷ್ಪ್ರಚಾರೋ ನಿರಾಹಾರೋ ಗ್ಲಾನಃ ಶಿಥಿಲವಾಗಪಿ।
13005007c ಕೃತಜ್ಞಃ ಸಹ ವೃಕ್ಷೇಣ ಧರ್ಮಾತ್ಮಾ ಸ ವ್ಯಶುಷ್ಯತ।।

ಮಾಡಿದ ಉಪಕಾರವನ್ನು ಸ್ಮರಿಸುವ ಆ ಕೃತಜ್ಞ ಮತ್ತು ಧರ್ಮಾತ್ಮಾ ಗಿಳಿಯು ಎಲ್ಲಿಯೂ ಸಂಚರಿಸಲೂ ಹೋಗುತ್ತಿರಲಿಲ್ಲ. ಆಹಾರವನ್ನೂ ತಿನ್ನುತ್ತಿರಲಿಲ್ಲ. ಅದರಿಂದ ಅದು ಬಹಳವಾಗಿ ಆಯಾಸಗೊಂಡು, ಅದರ ಧ್ವನಿಯೂ ಕುಸಿದು ಹೋಗಿತ್ತು. ವಾಸಿಸುತ್ತಿದ್ದ ಆ ಮರದಂತೆ ತಾನೂ ಒಣಗಿಹೋಯಿತು.

13005008a ತಮುದಾರಂ ಮಹಾಸತ್ತ್ವಮತಿಮಾನುಷಚೇಷ್ಟಿತಮ್।
13005008c ಸಮದುಃಖಸುಖಂ ಜ್ಞಾತ್ವಾ ವಿಸ್ಮಿತಃ ಪಾಕಶಾಸನಃ।।

ಉದಾರಬುದ್ಧಿಯ, ಮಹಾ ಸತ್ತ್ವಯುತವಾದ, ಅತಿಮಾನುಷವಾಗಿ ವರ್ತಿಸುತ್ತಿದ್ದ, ದುಃಖ-ಸುಖಗಳನ್ನು ಸಮನಾಗಿ ಕಾಣುತ್ತಿದ್ದ ಆ ಗಿಳಿಯ ಕುರಿತು ತಿಳಿದ ಪಾಕಶಾಸನನು ವಿಸ್ಮಿತನಾದನು.

13005009a ತತಶ್ಚಿಂತಾಮುಪಗತಃ ಶಕ್ರಃ ಕಥಮಯಂ ದ್ವಿಜಃ।
13005009c ತಿರ್ಯಗ್ಯೋನಾವಸಂಭಾವ್ಯಮಾನೃಶಂಸ್ಯಂ ಸಮಾಸ್ಥಿತಃ।।

“ತಿರ್ಯಗ್ಯೋನಿಯಲ್ಲಿ ಹುಟ್ಟಿದ ಈ ಪಕ್ಷಿಯು ಹೇಗೆ ತಾನೆ ದಯಾಭಾವವನ್ನು ತಾಳಿಕೊಂಡಿದೆ?” ಎಂದು ಶಕ್ರನು ಯೋಚಿಸತೊಡಗಿದನು.

13005010a ಅಥ ವಾ ನಾತ್ರ ಚಿತ್ರಂ ಹೀತ್ಯಭವದ್ವಾಸವಸ್ಯ ತು।
13005010c ಪ್ರಾಣಿನಾಮಿಹ ಸರ್ವೇಷಾಂ ಸರ್ವಂ ಸರ್ವತ್ರ ದೃಶ್ಯತೇ।।

“ಅಥವಾ ಎಲ್ಲ ಪ್ರಾಣಿಗಳಲ್ಲಿಯೂ ಎಲ್ಲ ಭಾವಗಳೂ ಕಾಣಿಸಿಕೊಳ್ಳುತ್ತವೆ. ಇದು ಅಸಂಭವವೇನಲ್ಲ!” ಎಂದು ಯೋಚಿಸಿಯೂ ಅವನು ಸಮಾಧಾನಪಟ್ಟುಕೊಂಡನು.

13005011a ತತೋ ಬ್ರಾಹ್ಮಣವೇಷೇಣ ಮಾನುಷಂ ರೂಪಮಾಸ್ಥಿತಃ।
13005011c ಅವತೀರ್ಯ ಮಹೀಂ ಶಕ್ರಸ್ತಂ ಪಕ್ಷಿಣಮುವಾಚ ಹ।।

ಆಗ ಮನುಷ್ಯನ ರೂಪವನ್ನು ತಳೆದು ಬ್ರಾಹ್ಮಣವೇಷದಲ್ಲಿ ಭೂಮಿಗೆ ಇಳಿದು ಶಕ್ರನು ಆ ಪಕ್ಷಿಗೆ ಹೇಳಿದನು:

13005012a ಶುಕ ಭೋಃ ಪಕ್ಷಿಣಾಂ ಶ್ರೇಷ್ಠ ದಾಕ್ಷೇಯೀ ಸುಪ್ರಜಾಸ್ತ್ವಯಾ।
13005012c ಪೃಚ್ಚೇ ತ್ವಾ ಶುಷ್ಕಮೇತಂ ವೈ ಕಸ್ಮಾನ್ನ ತ್ಯಜಸಿ ದ್ರುಮಮ್।।

“ಪಕ್ಷಿಗಳಲ್ಲಿಯೇ ಶ್ರೇಷ್ಠ ಗಿಳಿಯೇ! ನಿನ್ನಂತಹ ಸಂತಾನವನ್ನು ಪಡೆದು ದಾಕ್ಷಾಯಣೀ ಶುಕಿಯು ಶ್ರೇಷ್ಠಳಾದಳು! ನಿನ್ನಲ್ಲಿ ಒಂದು ಕೇಳಬೇಕೆಂದಿದ್ದೇನೆ – ಒಣಗಿ ಹೋಗಿದ್ದರೂ ಈ ಮರವನ್ನು ನೀನು ಏಕೆ ತ್ಯಜಿಸುತ್ತಿಲ್ಲ?”

13005013a ಅಥ ಪೃಷ್ಟಃ ಶುಕಃ ಪ್ರಾಹ ಮೂರ್ಧ್ನಾ ಸಮಭಿವಾದ್ಯ ತಮ್।
13005013c ಸ್ವಾಗತಂ ದೇವರಾಜಾಯ ವಿಜ್ಞಾತಸ್ತಪಸಾ ಮಯಾ।।

ಹಾಗೆ ಕೇಳಲು ಗಿಳಿಯು ತಲೆಬಾಗಿ ಅವನಿಗೆ ನಮಸ್ಕರಿಸಿ ಹೇಳಿತು: “ದೇವರಾಜನಿಗೆ ಸ್ವಾಗತ! ತಪಸ್ಸಿನ ಪ್ರಭಾವದಿಂದ ನೀನು ಯಾರೆಂದು ನನಗೆ ತಿಳಿಯಿತು.”

13005014a ತತೋ ದಶಶತಾಕ್ಷೇಣ ಸಾಧು ಸಾಧ್ವಿತಿ ಭಾಷಿತಮ್।
13005014c ಅಹೋ ವಿಜ್ಞಾನಮಿತ್ಯೇವಂ ತಪಸಾ ಪೂಜಿತಸ್ತತಃ।।

ಆಗ ಸಹಸ್ರಾಕ್ಷನು “ಸಾಧು! ಸಾಧು! ತಪಸ್ಸಿನ ವಿಜ್ಞಾನವು ಎಂಥಹುದು! ” ಎಂದು ಪ್ರಶಂಸಿಸಿದನು.

13005015a ತಮೇವಂ ಶುಭಕರ್ಮಾಣಂ ಶುಕಂ ಪರಮಧಾರ್ಮಿಕಮ್।
13005015c ವಿಜಾನನ್ನಪಿ ತಾಂ ಪ್ರಾಪ್ತಿಂ ಪಪ್ರಚ್ಚ ಬಲಸೂದನಃ।।

ಆ ಗಿಳಿಯು ಪರಮ ಧಾರ್ಮಿಕ ಮತ್ತು ಶುಭಕರ್ಮಿ ಎಂದು ತಿಳಿದೂ ಬಲಸೂದನನು ಪುನಃ ಪ್ರಶ್ನಿಸಿದನು:

13005016a ನಿಷ್ಪತ್ರಮಫಲಂ ಶುಷ್ಕಮಶರಣ್ಯಂ ಪತತ್ರಿಣಾಮ್।
13005016c ಕಿಮರ್ಥಂ ಸೇವಸೇ ವೃಕ್ಷಂ ಯದಾ ಮಹದಿದಂ ವನಮ್।।

“ಈ ವನವು ಇಷ್ಟೊಂದು ದೊಡ್ಡದಾಗಿರುವಾಗ ಎಲೆಗಳಿಲ್ಲದ, ಫಲಗಳಿಲ್ಲದ ಮತ್ತು ಪಕ್ಷಿಗಳಿಗೆ ಆಶ್ರಯವನ್ನು ನೀಡಲಾರದ ಈ ವೃಕ್ಷವನ್ನು ನೀನು ಇನ್ನೂ ಏಕೆ ಸೇವಿಸುತ್ತಿದ್ದೀಯೆ?

13005017a ಅನ್ಯೇಽಪಿ ಬಹವೋ ವೃಕ್ಷಾಃ ಪತ್ರಸಂಚನ್ನಕೋಟರಾಃ।
13005017c ಶುಭಾಃ ಪರ್ಯಾಪ್ತಸಂಚಾರಾ ವಿದ್ಯಂತೇಽಸ್ಮಿನ್ಮಹಾವನೇ।।

ಎಲೆ ಮತ್ತು ಕೊಟರೆಗಳಿಂದ ತುಂಬಿರುವ ಮತ್ತು ಸಂಚಾರಕ್ಕೂ ಪರ್ಯಾಪ್ತವಾಗಿರುವ ಇನ್ನೂ ಅನೇಕ ಶುಭ ಮರಗಳು ಈ ಮಹಾವನದಲ್ಲಿ ಇವೆ.

13005018a ಗತಾಯುಷಮಸಾಮರ್ಥ್ಯಂ ಕ್ಷೀಣಸಾರಂ ಹತಶ್ರಿಯಮ್।
13005018c ವಿಮೃಶ್ಯ ಪ್ರಜ್ಞಯಾ ಧೀರ ಜಹೀಮಂ ಹ್ಯಸ್ಥಿರಂ ದ್ರುಮಮ್।।

ಧೀರ! ಆಯಸ್ಸನ್ನು ಕಳೆದುಕೊಂಡಿರುವ, ಸಾಮರ್ಥ್ಯವನ್ನೂ ಕಳೆದುಕೊಂಡಿರುವ, ಸಾರವು ಕ್ಷೀಣಿಸಿರುವ, ಶ್ರೀಯನ್ನೂ ಕಳೆದುಕೊಂಡಿರುವ ಇದರ ಕುರಿತು ಪ್ರಜ್ಞೆಯನ್ನು ಬಳಸಿ ವಿಮರ್ಶಿಸಿ ಅಸ್ಥಿರವಾಗಿರುವ ಈ ಮರವನ್ನು ತೊರೆ!”

13005019a ತದುಪಶ್ರುತ್ಯ ಧರ್ಮಾತ್ಮಾ ಶುಕಃ ಶಕ್ರೇಣ ಭಾಷಿತಮ್।
13005019c ಸುದೀರ್ಘಮಭಿನಿಃಶ್ವಸ್ಯ ದೀನೋ ವಾಕ್ಯಮುವಾಚ ಹ।।

ಶಕ್ರನಾಡಿದ ಆ ಮಾತನ್ನು ಕೇಳಿ ಧರ್ಮಾತ್ಮ ಗಿಳಿಯು ದೀರ್ಘ ನಿಟ್ಟುಸಿರನ್ನು ಬಿಡುತ್ತಾ ದೀನನಾಗಿ ಈ ಮಾತನ್ನಾಡಿತು:

13005020a ಅನತಿಕ್ರಮಣೀಯಾನಿ ದೈವತಾನಿ ಶಚೀಪತೇ।
13005020c ಯತ್ರಾಭವಸ್ತತ್ರ ಭವಸ್ತನ್ನಿಬೋಧ ಸುರಾಧಿಪ।।

“ಶಚೀಪತೇ! ಸುರಾಧಿಪ! ದೇವತೆಗಳನ್ನು ಮೀರಿ ನಡೆಯಬಾರದು. ಈ ವಿಷಯದಲ್ಲಿ ನಾನು ಹೇಳುವುದನ್ನು ನೀನು ಕೇಳು.

13005021a ಅಸ್ಮಿನ್ನಹಂ ದ್ರುಮೇ ಜಾತಃ ಸಾಧುಭಿಶ್ಚ ಗುಣೈರ್ಯುತಃ।
13005021c ಬಾಲಭಾವೇ ಚ ಸಂಗುಪ್ತಃ ಶತ್ರುಭಿಶ್ಚ ನ ಧರ್ಷಿತಃ।।

ನಾನು ಈ ಮರದಲ್ಲಿಯೇ ಹುಟ್ಟಿದೆ. ಸಾಧು ಗುಣಗಳಿಂದ ಯುಕ್ತನಾಗಿ ಬೆಳೆದೆ. ತಂದೆಯು ಬಾಲಕನನ್ನು ಹೇಗೋ ಹಾಗೆ ಈ ಮರವು ನನ್ನನ್ನು ರಕ್ಷಿಸಿಕೊಂಡು ಬಂದಿದೆ. ಇಲ್ಲಿ ನನಗೆ ಶತ್ರುಗಳ ಪೀಡೆಯೂ ಆಗಲಿಲ್ಲ.

13005022a ಕಿಮನುಕ್ರೋಶವೈಫಲ್ಯಮುತ್ಪಾದಯಸಿ ಮೇಽನಘ।
13005022c ಆನೃಶಂಸ್ಯೇಽನುರಕ್ತಸ್ಯ ಭಕ್ತಸ್ಯಾನುಗತಸ್ಯ ಚ।।

ಅನಘ! ದೀನಭಾವದಿಂದ ಮತ್ತು ಈ ವೃಕ್ಷದ ಕುರಿತಾದ ಭಕ್ತಿ ಭಾವದಿಂದಾಗಿ ಇದನ್ನು ತೊರೆಯದೇ ಇರುವ ನನ್ನ ಈ ಅನುಕ್ರೋಶವನ್ನು ವಿಫಲಗೊಳಿಸಲು ಏಕೆ ಪ್ರಯತ್ನಿಸುತ್ತಿರುವೆ?

13005023a ಅನುಕ್ರೋಶೋ ಹಿ ಸಾಧೂನಾಂ ಸುಮಹದ್ಧರ್ಮಲಕ್ಷಣಮ್।
13005023c ಅನುಕ್ರೋಶಶ್ಚ ಸಾಧೂನಾಂ ಸದಾ ಪ್ರೀತಿಂ ಪ್ರಯಚ್ಚತಿ।।

ಅನುಕ್ರೋಶವೇ ಸಾಧುಗಳ ಮಹಾ ಧರ್ಮಲಕ್ಷಣವಾಗಿದೆ. ಅನುಕ್ರೋಶವೇ ಸದಾ ಸಾಧುಗಳಿಗೆ ಸಂತಸವನ್ನುಂಟುಮಾಡುತ್ತದೆ.

13005024a ತ್ವಮೇವ ದೈವತೈಃ ಸರ್ವೈಃ ಪೃಚ್ಚ್ಯಸೇ ಧರ್ಮಸಂಶಯಾನ್।
13005024c ಅತಸ್ತ್ವಂ ದೇವ ದೇವಾನಾಮಾಧಿಪತ್ಯೇ ಪ್ರತಿಷ್ಠಿತಃ।।

ಧರ್ಮಸಂಶಯಗಳುಂಟಾದಾಗ ದೇವತೆಗಳೆಲ್ಲರೂ ನಿನ್ನನ್ನೇ ಕೇಳುತ್ತಾರೆ. ಆದುದರಿಂದ ದೇವ! ನೀನು ದೇವತೆಗಳ ಅಧಿಪತಿಯಾಗಿ ಪ್ರತಿಷ್ಠಿತನಾಗಿರುವೆ.

13005025a ನಾರ್ಹಸಿ ತ್ವಂ ಸಹಸ್ರಾಕ್ಷ ತ್ಯಾಜಯಿತ್ವೇಹ ಭಕ್ತಿತಃ।
13005025c ಸಮರ್ಥಮುಪಜೀವ್ಯೇಮಂ ತ್ಯಜೇಯಂ ಕಥಮದ್ಯ ವೈ।।

ಸಹಸ್ರಾಕ್ಷ! ನನ್ನ ಉಪಜೀವನವನ್ನು ಕೊಟ್ಟಿರುವ ಈ ಸಮರ್ಥ ವೃಕ್ಷದ ಮೇಲೆ ನನಗೆ ಭಕ್ತಿಯಿರುವಾಗ ಇದನ್ನು ತ್ಯಜಿಸು ಎಂದು ನೀನು ಹೇಗೆ ಹೇಳಬಲ್ಲೆ? ಇದು ಸರಿಯಲ್ಲ!”

13005026a ತಸ್ಯ ವಾಕ್ಯೇನ ಸೌಮ್ಯೇನ ಹರ್ಷಿತಃ ಪಾಕಶಾಸನಃ।
13005026c ಶುಕಂ ಪ್ರೋವಾಚ ಧರ್ಮಜ್ಞಮಾನೃಶಂಸ್ಯೇನ ತೋಷಿತಃ।।

ಅವನ ಸೌಮ್ಯ ಮಾತಿನಿಂದ ಹರ್ಷಿತನಾದ ಪಾಕಶಾಸನನು ಅವನ ದಯಾಲುತನದಿಂದ ಸಂತುಷ್ಟನಾಗಿ ಗಿಳಿಗೆ ಹೇಳಿದನು.

13005027a ವರಂ ವೃಣೀಷ್ವೇತಿ ತದಾ ಸ ಚ ವವ್ರೇ ವರಂ ಶುಕಃ।
13005027c ಆನೃಶಂಸ್ಯಪರೋ ನಿತ್ಯಂ ತಸ್ಯ ವೃಕ್ಷಸ್ಯ ಸಂಭವಮ್।।

“ವರವನ್ನು ಕೇಳಿಕೋ” ಎಂದು ಅವನು ಹೇಳಲು ಗಿಳಿಯು ನಿತ್ಯ ದಯಾಲುತನ ಮತ್ತು ಆ ವೃಕ್ಷದ ಪುನರ್ಜೀವನವನ್ನು ವರಗಳಾಗಿ ಕೇಳಿತು.

13005028a ವಿದಿತ್ವಾ ಚ ದೃಢಾಂ ಶಕ್ರಸ್ತಾಂ ಶುಕೇ ಶೀಲಸಂಪದಮ್।
13005028c ಪ್ರೀತಃ ಕ್ಷಿಪ್ರಮಥೋ ವೃಕ್ಷಮಮೃತೇನಾವಸಿಕ್ತವಾನ್।।

ಅದರ ದೃಢತೆಯನ್ನೂ ಶೀಲಸಂಪತ್ತನ್ನೂ ತಿಳಿದು ಗಿಳಿಯ ಮೇಲೆ ಪ್ರೀತನಾದ ಇಂದ್ರನು ಕೂಡಲೇ ಆ ವೃಕ್ಷವನ್ನು ಅಮೃತದಿಂದ ಸಿಂಪಡಿಸಿದನು.

13005029a ತತಃ ಫಲಾನಿ ಪತ್ರಾಣಿ ಶಾಖಾಶ್ಚಾಪಿ ಮನೋರಮಾಃ।
13005029c ಶುಕಸ್ಯ ದೃಢಭಕ್ತಿತ್ವಾಚ್ಚ್ರೀಮತ್ತ್ವಂ ಚಾಪ ಸ ದ್ರುಮಃ।।

ಗಿಳಿಯ ದೃಢಭಕ್ತಿಯಿಂದಾಗಿ ಆ ಮರವು ಕೂಡಲೇ ಹಣ್ಣು, ಎಲೆ ಮತ್ತು ರೆಂಬೆಗಳಿಂದ ಕೂಡಿ ಮನೋರಮವಾಯಿತು.

13005030a ಶುಕಶ್ಚ ಕರ್ಮಣಾ ತೇನ ಆನೃಶಂಸ್ಯಕೃತೇನ ಹ।
13005030c ಆಯುಷೋಽಂತೇ ಮಹಾರಾಜ ಪ್ರಾಪ ಶಕ್ರಸಲೋಕತಾಮ್।।

ಮಹಾರಾಜ! ಕರ್ಮ ಮತ್ತು ದಯೆಯನ್ನು ತೋರಿದುದರಿಂದ ಆ ಗಿಳಿಯು ಆಯುಷ್ಯದ ಅಂತ್ಯದಲ್ಲಿ ಶಕ್ರನ ಲೋಕವನ್ನು ಪಡೆದುಕೊಂಡಿತು.

13005031a ಏವಮೇವ ಮನುಷ್ಯೇಂದ್ರ ಭಕ್ತಿಮಂತಂ ಸಮಾಶ್ರಿತಃ।
13005031c ಸರ್ವಾರ್ಥಸಿದ್ಧಿಂ ಲಭತೇ ಶುಕಂ ಪ್ರಾಪ್ಯ ಯಥಾ ದ್ರುಮಃ।।

ಮನುಷ್ಯೇಂದ್ರ! ಶುಕನಿಂದ ಆ ಮರವು ಹೇಗೋ ಹಾಗೆ ಭಕ್ತಿಮಂತರಿಗೆ ಆಶ್ರಯನೀಡುವುದರಿಂದ ಸರ್ವಾರ್ಥವೂ ಸಿದ್ಧಿಯಾಗುತ್ತದೆ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಶುಕವಾಸವಸಂವಾದೇ ಪಂಚಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಶುಕ್ರವಾಸವಸಂವಾದ ಎನ್ನುವ ಐದನೇ ಅಧ್ಯಾಯವು.


  1. ಈ ಶ್ಲೋಕಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್। ವಾಸವಸ್ಯ ಚ ಸಂವಾದಂ ಶುಕಸ್ಯ ಚ ಮಹಾತ್ಮನಃ।। (ಗೀತಾ ಪ್ರೆಸ್). ↩︎