003: ವಿಶ್ವಾಮಿತ್ರೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 3

ಸಾರ

ಬೇರೆ ದೇಹವನ್ನು ಧರಿಸದೆಯೇ ವಿಶ್ವಾಮಿತ್ರನಿಗೆ ಹೇಗೆ ಬ್ರಾಹ್ಮಣತ್ವವು ಪ್ರಾಪ್ತವಾಯಿತು ಎಂದು ಯುಧಿಷ್ಠಿರನು ಭೀಷ್ಮನನ್ನು ಪ್ರಶ್ನಿಸುವುದು (1-19).

13003001 ಯುಧಿಷ್ಠಿರ ಉವಾಚ।
13003001a ಬ್ರಾಹ್ಮಣ್ಯಂ ಯದಿ ದುಷ್ಪ್ರಾಪಂ ತ್ರಿಭಿರ್ವರ್ಣೈರ್ನರಾಧಿಪ।
13003001c ಕಥಂ ಪ್ರಾಪ್ತಂ ಮಹಾರಾಜ ಕ್ಷತ್ರಿಯೇಣ ಮಹಾತ್ಮನಾ।।
13003002a ವಿಶ್ವಾಮಿತ್ರೇಣ ಧರ್ಮಾತ್ಮನ್ಬ್ರಾಹ್ಮಣತ್ವಂ ನರರ್ಷಭ।
13003002c ಶ್ರೋತುಮಿಚ್ಚಾಮಿ ತತ್ತ್ವೇನ ತನ್ಮೇ ಬ್ರೂಹಿ ಪಿತಾಮಹ।।

ಯುಧಿಷ್ಠಿರನು ಹೇಳಿದನು: “ನರಾಧಿಪ! ಮಹಾರಾಜ! ಒಂದುವೇಳೆ ಕ್ಷತ್ರಿಯ-ವೈಶ್ಯ-ಶೂದ್ರ ಈ ಮೂರು ವರ್ಣದವರಿಗೆ ಬ್ರಾಹ್ಮಣ್ಯವನ್ನು ಪಡೆಯುವುದು ಅಸಾಧ್ಯವಾದರೆ ಮಹಾತ್ಮ ಕ್ಷತ್ರಿಯ ವಿಶ್ವಾಮಿತ್ರನು ಹೇಗೆ ಬ್ರಾಹ್ಮಣತ್ವವನ್ನು ಪಡೆದುಕೊಂಡನು? ಧರ್ಮಾತ್ಮನ್! ನರರ್ಷಭ! ಪಿತಾಮಹ! ಅದನ್ನು ಯಥಾರ್ಥವಾಗಿ ಕೇಳಬಯಸುತ್ತೇನೆ. ಅದನ್ನು ನನಗೆ ಹೇಳು.

13003003a ತೇನ ಹ್ಯಮಿತವೀರ್ಯೇಣ ವಸಿಷ್ಠಸ್ಯ ಮಹಾತ್ಮನಃ।
13003003c ಹತಂ ಪುತ್ರಶತಂ ಸದ್ಯಸ್ತಪಸಾ ಪ್ರಪಿತಾಮಹ।।

ಅವನ ಅಮಿತ ವೀರ್ಯದಿಂದ ನಮ್ಮ ಪ್ರಪಿತಾಮಹ ಮಹಾತ್ಮ ತಪೋನಿರತ ವಸಿಷ್ಠನ ನೂರು ಪುತ್ರರು ಹತರಾದರು!

13003004a ಯಾತುಧಾನಾಶ್ಚ ಬಹವೋ ರಾಕ್ಷಸಾಸ್ತಿಗ್ಮತೇಜಸಃ।
13003004c ಮನ್ಯುನಾವಿಷ್ಟದೇಹೇನ ಸೃಷ್ಟಾಃ ಕಾಲಾಂತಕೋಪಮಾಃ।।

ಕೋಪದಿಂದ ಆವಿಷ್ಟನಾದ ಆ ತಿಗ್ಮತೇಜಸ್ವಿಯು ಕಾಲಾಂತಕರಂತಿರುವ ಅನೇಕ ಯಾತುಧಾನ ರಾಕ್ಷಸರನ್ನು ಸೃಷ್ಟಿಸಿದನು.

13003005a ಮಹಾನ್ಕುಶಿಕವಂಶಶ್ಚ ಬ್ರಹ್ಮರ್ಷಿಶತಸಂಕುಲಃ।
13003005c ಸ್ಥಾಪಿತೋ ನರಲೋಕೇಽಸ್ಮಿನ್ವಿದ್ವಾನ್ಬ್ರಾಹ್ಮಣಸಂಸ್ತುತಃ।।

ಅವನು ವಿದ್ವಾನ್ ಬ್ರಾಹ್ಮಣರು ಸ್ತುತಿಸುವ ನೂರಾರು ಬ್ರಹ್ಮರ್ಷಿಗಳಾದ ಮಹಾನ್ ಕುಶಿಕವಂಶವನ್ನು ನರಲೋಕದಲ್ಲಿ ಸ್ಥಾಪಿಸಿದನು.

13003006a ಋಚೀಕಸ್ಯಾತ್ಮಜಶ್ಚೈವ ಶುನಃಶೇಪೋ ಮಹಾತಪಾಃ।
13003006c ವಿಮೋಕ್ಷಿತೋ ಮಹಾಸತ್ರಾತ್ಪಶುತಾಮಭ್ಯುಪಾಗತಃ।।

ಆ ಮಹಾತಪಸ್ವಿಯು ಮಹಾಸತ್ರವೊಂದರಲ್ಲಿ ಯಜ್ಞಪಶುವಾಗಿ ತಂದಿದ್ದ ಋಚೀಕ1ನ ಮಗ ಶುನಃಶೇಪನನ್ನು ವಿಮೋಚನಗೊಳಿಸಿದನು.

13003007a ಹರಿಶ್ಚಂದ್ರಕ್ರತೌ ದೇವಾಂಸ್ತೋಷಯಿತ್ವಾತ್ಮತೇಜಸಾ।
13003007c ಪುತ್ರತಾಮನುಸಂಪ್ರಾಪ್ತೋ ವಿಶ್ವಾಮಿತ್ರಸ್ಯ ಧೀಮತಃ।।

ಹರಿಶ್ಚಂದ್ರನ ಕ್ರತುವಿನಲ್ಲಿ ತನ್ನ ಆತ್ಮತೇಜಸ್ಸಿನಿಂದ ದೇವತೆಗಳನ್ನು ತೃಪ್ತಿಪಡಿಸಿ ಧೀಮತ ವಿಶ್ವಾಮಿತ್ರನು ಶುನಃಶೇಪನನ್ನು ತನ್ನ ಪುತ್ರನನ್ನಾಗಿ ಮಾಡಿಕೊಂಡನು.

13003008a ನಾಭಿವಾದಯತೇ ಜ್ಯೇಷ್ಠಂ ದೇವರಾತಂ ನರಾಧಿಪ।
13003008c ಪುತ್ರಾಃ ಪಂಚಶತಾಶ್ಚಾಪಿ ಶಪ್ತಾಃ ಶ್ವಪಚತಾಂ ಗತಾಃ।।

ನರಾಧಿಪ! ದೇವರಾತನೆಂದು ಖ್ಯಾತನಾದ ಶುನಃಶೇಪನನ್ನು ವಿಶ್ವಾಮಿತ್ರನ ಜ್ಯೇಷ್ಠಪುತ್ರನೆಂದು ಅವನ ಐವತ್ತು ಪುತ್ರರು ನಮಸ್ಕರಿಸದೇ ಇರಲು ವಿಶ್ವಾಮಿತ್ರನ ಶಾಪದಿಂದ ಅವರು ಚಾಂಡಾಲತ್ವವನ್ನು ಪಡೆದುಕೊಂಡರು.

13003009a ತ್ರಿಶಂಕುರ್ಬಂಧುಸಂತ್ಯಕ್ತ ಇಕ್ಷ್ವಾಕುಃ ಪ್ರೀತಿಪೂರ್ವಕಮ್।
13003009c ಅವಾಕ್ಶಿರಾ ದಿವಂ ನೀತೋ ದಕ್ಷಿಣಾಮಾಶ್ರಿತೋ ದಿಶಮ್।।

ಬಂಧುಗಳಿಂದ ತ್ಯಕ್ತನಾಗಿ ದಕ್ಷಿಣದಿಕ್ಕಿನಲ್ಲಿ ತಲೆಕೆಳಗಾಗಿ ಬೀಳುತ್ತಿದ್ದ ಇಕ್ಷ್ವಾಕು ವಂಶಜ ತ್ರಿಜಂಕುವಿಗೆ ವಿಶ್ವಾಮಿತ್ರನೇ ಸ್ವರ್ಗವನ್ನು ನೀಡಿದನು.

13003010a ವಿಶ್ವಾಮಿತ್ರಸ್ಯ ವಿಪುಲಾ ನದೀ ರಾಜರ್ಷಿಸೇವಿತಾ।
13003010c ಕೌಶಿಕೀತಿ ಶಿವಾ ಪುಣ್ಯಾ ಬ್ರಹ್ಮರ್ಷಿಗಣಸೇವಿತಾ।।

ರಾಜರ್ಷಿಗಳಿಂದ ಮತ್ತು ಬ್ರಹ್ಮರ್ಷಿಗಣಗಳಿಂದ ಸೇವಿತ ಮಂಗಳೆ ಪುಣ್ಯೆ ಕೌಶಿಕೀ ಎಂಬ ವಿಪುಲ ನದಿಯು ವಿಶ್ವಾಮಿತ್ರನ ಪ್ರಭಾವದಿಂದಲೇ ಪ್ರಕಟವಾದಳು.

13003011a ತಪೋವಿಘ್ನಕರೀ ಚೈವ ಪಂಚಚೂಡಾ ಸುಸಂಮತಾ।
13003011c ರಂಭಾ ನಾಮಾಪ್ಸರಾಃ ಶಾಪಾದ್ಯಸ್ಯ ಶೈಲತ್ವಮಾಗತಾ।।

ಪಂಚಚೂಡಾ ಎಂದೂ ಕರೆಯಲ್ಪಡುವ ರಂಭಾ ನಾಮದ ಅಪ್ಸರೆಯು ತಪಸ್ಸನ್ನು ವಿಘ್ನಮಾಡಲು ಹೋದಾಗ ಇವನ ಶಾಪದಿಂದ ಕಲ್ಲಾದಳು.

13003012a ತಥೈವಾಸ್ಯ ಭಯಾದ್ಬದ್ಧ್ವಾ ವಸಿಷ್ಠಃ ಸಲಿಲೇ ಪುರಾ।
13003012c ಆತ್ಮಾನಂ ಮಜ್ಜಯಾಮಾಸ ವಿಪಾಶಃ ಪುನರುತ್ಥಿತಃ।।

ಹಿಂದೆ ವಸಿಷ್ಟನು ತನ್ನನ್ನು ತಾನೇ ಬಂಧಿಸಿಕೊಂಡು ನೀರಿನಲ್ಲಿ ಮುಳುಗಿದಾದ ವಿಶ್ವಾಮಿತ್ರನ ಭಯದಿಂದಲೇ ನದಿಯು ಅವನ ಬಂಧನಗಳನ್ನು ಕಳಚಿ ಮೇಲೆ ತೇಲಿಸಿತ್ತು.

13003013a ತದಾಪ್ರಭೃತಿ ಪುಣ್ಯಾ ಹಿ ವಿಪಾಶಾಭೂನ್ಮಹಾನದೀ।
13003013c ವಿಖ್ಯಾತಾ ಕರ್ಮಣಾ ತೇನ ವಸಿಷ್ಠಸ್ಯ ಮಹಾತ್ಮನಃ।।

ಮಹಾತ್ಮ ವಸಿಷ್ಠನ ಆ ಕರ್ಮದಿಂದಾಗಿ ಅಂದಿನಿಂದ ಆ ಮಹಾನದಿಯು ವಿಪಾಶಾ ಎಂಬ ಹೆಸರಿನ ಪುಣ್ಯ ನದಿಯಾಯಿತು.

13003014a ವಾಗ್ಭಿಶ್ಚ ಭಗವಾನ್ಯೇನ ದೇವಸೇನಾಗ್ರಗಃ ಪ್ರಭುಃ।
13003014c ಸ್ತುತಃ ಪ್ರೀತಮನಾಶ್ಚಾಸೀಚ್ಚಾಪಾಚ್ಚೈನಮಮೋಚಯತ್।।

ಇವನ ವಾಣಿಗಳಿಂದ ಸ್ತುತನಾಗಿ ಪ್ರೀತನಾದ ದೇವಾಸೇನಾಗ್ರಗ ಪ್ರಭು ಭಗವಾನ್ ಇಂದ್ರನು ಇವನನ್ನು ಶಾಪಗಳಿಂದ ವಿಮೋಚನಗೊಳಿಸಿದನು2.

13003015a ಧ್ರುವಸ್ಯೌತ್ತಾನಪಾದಸ್ಯ ಬ್ರಹ್ಮರ್ಷೀಣಾಂ ತಥೈವ ಚ।
13003015c ಮಧ್ಯೇ ಜ್ವಲತಿ ಯೋ ನಿತ್ಯಮುದೀಚೀಮಾಶ್ರಿತೋ ದಿಶಮ್।।

ನಿತ್ಯವೂ ಇವನು ಉತ್ತರ ದಿಶೆಯಲ್ಲಿ ಉತ್ತಾನಪಾದನ ಮಗ ಧ್ರುವ ಮತ್ತು ಸಪ್ತ ಬ್ರಹ್ಮರ್ಷಿಗಳ ಮಧ್ಯೆ ತಾರಾರೂಪದಲ್ಲಿ ಪ್ರಜ್ವಲಿಸುತ್ತಾನೆ.

13003016a ತಸ್ಯೈತಾನಿ ಚ ಕರ್ಮಾಣಿ ತಥಾನ್ಯಾನಿ ಚ ಕೌರವ।
13003016c ಕ್ಷತ್ರಿಯಸ್ಯೇತ್ಯತೋ ಜಾತಮಿದಂ ಕೌತೂಹಲಂ ಮಮ।।

ಕೌರವ! ಕ್ಷತ್ರಿಯಕುಲದಲ್ಲಿ ಹುಟ್ಟಿದ್ದರೂ ವಿಶ್ವಾಮಿತ್ರನು ಇವೆಲ್ಲ ಮತ್ತು ಹಾಗೆಯೇ ಇತರ ಕರ್ಮಗಳನ್ನೂ ಮಾಡಿದ್ದಾನೆ ಎಂದರೆ ನನ್ನಲ್ಲಿ ಕುತೂಹಲವುಂಟಾಗಿದೆ.

13003017a ಕಿಮೇತದಿತಿ ತತ್ತ್ವೇನ ಪ್ರಬ್ರೂಹಿ ಭರತರ್ಷಭ।
13003017c ದೇಹಾಂತರಮನಾಸಾದ್ಯ ಕಥಂ ಸ ಬ್ರಾಹ್ಮಣೋಽಭವತ್।।

ಭರತರ್ಷಭ! ಇದು ಏನು? ತತ್ತ್ವವಾಗಿ ಹೇಳು. ದೇಹಾಂತರಗೊಳ್ಳದೇ ಅವನು ಹೇಗೆ ಬ್ರಾಹ್ಮಣನಾದನು?

13003018a ಏತತ್ತತ್ತ್ವೇನ ಮೇ ರಾಜನ್ಸರ್ವಮಾಖ್ಯಾತುಮರ್ಹಸಿ।
13003018c ಮತಂಗಸ್ಯ ಯಥಾತತ್ತ್ವಂ ತಥೈವೈತದ್ಬ್ರವೀಹಿ ಮೇ।।

ರಾಜನ್! ಇದನ್ನು ಯಥಾರ್ಥರೂಪದಲ್ಲಿ ಹೇಳಬೇಕು. ಮತಂಗನ ವಿಷಯದಲ್ಲಿ ಏನಾಯಿತೋ ಅದು ವಿಶ್ವಾಮಿತ್ರನ ವಿಷಯದಲ್ಲಿ ನಡೆಯಲಿಲ್ಲ. ಅದರ ಕುರಿತು ಹೇಳಬೇಕು.

13003019a ಸ್ಥಾನೇ ಮತಂಗೋ ಬ್ರಾಹ್ಮಣ್ಯಂ ನಾಲಭದ್ಭರತರ್ಷಭ।
13003019c ಚಂಡಾಲಯೋನೌ ಜಾತೋ ಹಿ ಕಥಂ ಬ್ರಾಹ್ಮಣ್ಯಮಾಪ್ನುಯಾತ್।।

ಭರತರ್ಷಭ! ಚಂಡಾಲಯೋನಿಯಲ್ಲಿ ಜನಿಸಿದ್ದ ಮತಂಗನಿಗೆ ಬ್ರಾಹ್ಮಣ್ಯವು ದೊರೆಯಲಿಲ್ಲ. ಆದರೆ ವಿಶ್ವಾಮಿತ್ರನಿಗೆ ಹೇಗೆ ಬ್ರಾಹ್ಮಣ್ಯವು ದೊರೆಯಿತು?”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾ ಸನಪರ್ವಣಿ ದಾನಧರ್ಮ ಪರ್ವಣಿ ವಿಶ್ವಾಮಿತ್ರೋಪಾಖ್ಯಾನೇ ತೃತೀಯೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ವಿಶ್ವಾಮಿತ್ರೋಪಾಖ್ಯಾನ ಎನ್ನುವ ಮೂರನೇ ಅಧ್ಯಾಯವು.


  1. ಅಜೀಗರ್ತ . ↩︎

  2. ಒಮ್ಮೆ ವಿಶ್ವಾಮಿತ್ರನು ಶಾಪದಿಂದ ಶ್ವಪಚತ್ವವನ್ನು ಹೊಂದಿದ್ದ ತ್ರಿಶಂಕುವಿನಿಂದ ಯಜ್ಞವನ್ನು ಮಾಡಿಸುತ್ತಿದ್ದನು. ಅದನ್ನು ನೋಡಿ ವಸಿಷ್ಠನ ಮಕ್ಕಳು ಶ್ವಪಚನಿಗೆ ಯಜ್ಞಮಾಡಿಸುತ್ತಿರುವವನೂ ಶ್ವಪಚನಾಗಲಿ ಎಂದು ಶಾಪವನ್ನಿತ್ತರು. ಈ ಶಾಪದ ಪರಿಣಾಮವಾಗಿ ವಿಶ್ವಾಮಿತ್ರನು ಆಪತ್ಕಾಲದಲ್ಲಿ ನಾಯಿಯ ಮಾಂಸವನ್ನು ಬೇಯಿಸುತ್ತಿದ್ದನು. ಆಗ ಇಂದ್ರನು ಗಿಡುಗನ ರೂಪವನ್ನು ಧರಿಸಿ ಮಾಂಸವನ್ನು ಅಪಹರಿಸಿದನೆಂದೂ ಮತ್ತು ಅದರಿಂದ ವಿಶ್ವಾಮಿತ್ರನ ಶಾಪವಿಮೋಚನೆಯಾಯಿತೆಂಬ ಕಥೆಯಿದೆ. ↩︎