ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 2
ಸಾರ
“ಗೃಹಸ್ಥಧರ್ಮವನ್ನು ಆಶ್ರಯಿಸಿ ಮೃತ್ಯುವನ್ನು ಗೆದ್ದವರ್ಯಾರು?” ಎಂಬ ಯುಧಿಷ್ಠಿರನ ಪ್ರಶ್ನೆಗೆ ಭೀಷ್ಮನು ಸುದರ್ಶನನ ಉಪಾಖ್ಯಾನವನ್ನು ಉದಾಹರಿಸಿದುದು (1-95).
13002001 ಯುಧಿಷ್ಠಿರ ಉವಾಚ।
13002001a ಪಿತಾಮಹ ಮಹಾಪ್ರಾಜ್ಞ ಸರ್ವಶಾಸ್ತ್ರವಿಶಾರದ।
13002001c ಶ್ರುತಂ ಮೇ ಮಹದಾಖ್ಯಾನಮಿದಂ ಮತಿಮತಾಂ ವರ।।
ಯುಧಿಷ್ಠಿರನು ಹೇಳಿದನು: “ಪಿತಾಮಹ! ಮಹಾಪ್ರಾಜ್ಞ! ಸರ್ವಶಾಸ್ತ್ರವಿಶಾರದ! ಮತಿಮತರಲ್ಲಿ ಶ್ರೇಷ್ಠ! ಈ ಮಹಾ ಆಖ್ಯಾನವನ್ನು ಕೇಳಿದೆ.
13002002a ಭೂಯಸ್ತು ಶ್ರೋತುಮಿಚ್ಚಾಮಿ ಧರ್ಮಾರ್ಥಸಹಿತಂ ನೃಪ।
13002002c ಕಥ್ಯಮಾನಂ ತ್ವಯಾ ಕಿಂ ಚಿತ್ತನ್ಮೇ ವ್ಯಾಖ್ಯಾತುಮರ್ಹಸಿ।।
ನೃಪ! ಧರ್ಮಾರ್ಥಸಂಹಿತ ನಿನ್ನ ಮಾತುಗಳನ್ನು ಇನ್ನೂ ಕೇಳಬಯಸುತ್ತೇನೆ. ಬೇರೆ ಏನನ್ನಾದರೂ ಹೇಳು.
13002003a ಕೇನ ಮೃತ್ಯುರ್ಗೃಹಸ್ಥೇನ ಧರ್ಮಮಾಶ್ರಿತ್ಯ ನಿರ್ಜಿತಃ।
13002003c ಇತ್ಯೇತತ್ಸರ್ವಮಾಚಕ್ಷ್ವ ತತ್ತ್ವೇನ ಮಮ ಪಾರ್ಥಿವ।।
ಪಾರ್ಥಿವ! ಗೃಹಸ್ಥಧರ್ಮವನ್ನು ಆಶ್ರಯಿಸಿ ಮೃತ್ಯುವನ್ನು ಗೆದ್ದವರು ಯಾರು? ಇದರ ಕುರಿತು ಸರ್ವ ತತ್ತ್ವವನ್ನೂ ನನಗೆ ಹೇಳು.”
13002004 ಭೀಷ್ಮ ಉವಾಚ।
13002004a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
13002004c ಯಥಾ ಮೃತ್ಯುರ್ಗೃಹಸ್ಥೇನ ಧರ್ಮಮಾಶ್ರಿತ್ಯ ನಿರ್ಜಿತಃ।।
ಭೀಷ್ಮನು ಹೇಳಿದನು: “ಗೃಹಸ್ಥಧರ್ಮವನ್ನು ಆಶ್ರಯಿಸಿ ಮೃತ್ಯುವನ್ನು ಜಯಿಸಿದ ಕುರಿತು ಈ ಪುರಾತನ ಇತಿಹಾಸವನ್ನು ಉದಾಹರಿಸುತ್ತಾರೆ.
13002005a ಮನೋಃ ಪ್ರಜಾಪತೇ ರಾಜನ್ನಿಕ್ಷ್ವಾಕುರಭವತ್ಸುತಃ।
13002005c ತಸ್ಯ ಪುತ್ರಶತಂ ಜಜ್ಞೇ ನೃಪತೇಃ ಸೂರ್ಯವರ್ಚಸಃ।।
ರಾಜನ್! ಪ್ರಜಾಪತಿ ಮನುವಿಗೆ ಇಕ್ಷ್ವಾಕುವು ಸುತನಾದನು. ಆ ನೃಪತಿಗೆ ಸೂರ್ಯವರ್ಚಸ ನೂರು ಪುತ್ರರು ಜನಿಸಿದರು.
13002006a ದಶಮಸ್ತಸ್ಯ ಪುತ್ರಸ್ತು ದಶಾಶ್ವೋ ನಾಮ ಭಾರತ।
13002006c ಮಾಹಿಷ್ಮತ್ಯಾಮಭೂದ್ರಾಜಾ ಧರ್ಮಾತ್ಮಾ ಸತ್ಯವಿಕ್ರಮಃ।।
ಭಾರತ! ಅವರಲ್ಲಿ ಹತ್ತನೆಯ ಪುತ್ರನು ದಶಾಶ್ವ ಎಂಬ ಹೆಸರಿನವನು. ಆ ಧರ್ಮಾತ್ಮಾ ಸತ್ಯವಿಕ್ರಮನು ಮಾಹಿಷ್ಮತಿಗೆ ರಾಜನಾದನು.
13002007a ದಶಾಶ್ವಸ್ಯ ಸುತಸ್ತ್ವಾಸೀದ್ರಾಜಾ ಪರಮಧಾರ್ಮಿಕಃ।
13002007c ಸತ್ಯೇ ತಪಸಿ ದಾನೇ ಚ ಯಸ್ಯ ನಿತ್ಯಂ ರತಂ ಮನಃ।।
ದಶಾಶ್ವನ ಮಗನು ಪರಮಧಾರ್ಮಿಕ ರಾಜನಾಗಿದ್ದನು. ನಿತ್ಯವೂ ಅವನ ಮನಸ್ಸು ಸತ್ಯ, ತಪಸ್ಸು ಮತ್ತು ದಾನಗಳಲ್ಲಿ ನಿರತವಾಗಿತ್ತು.
13002008a ಮದಿರಾಶ್ವ ಇತಿ ಖ್ಯಾತಃ ಪೃಥಿವ್ಯಾಂ ಪೃಥಿವೀಪತಿಃ।
13002008c ಧನುರ್ವೇದೇ ಚ ವೇದೇ ಚ ನಿರತೋ ಯೋಽಭವತ್ಸದಾ।।
ಪೃಥ್ವಿಯಲ್ಲಿ ಮದಿರಾಶ್ವನೆಂದು ಖ್ಯಾತನಾದ ಆ ಪೃಥಿವೀಪತಿಯು ಸದಾ ಧನುರ್ವೇದ ಮತ್ತು ವೇದಗಳಲ್ಲಿ ನಿರತನಾಗಿದ್ದನು.
13002009a ಮದಿರಾಶ್ವಸ್ಯ ಪುತ್ರಸ್ತು ದ್ಯುತಿಮಾನ್ನಾಮ ಪಾರ್ಥಿವಃ।
13002009c ಮಹಾಭಾಗೋ ಮಹಾತೇಜಾ ಮಹಾಸತ್ತ್ವೋ ಮಹಾಬಲಃ।।
ಮದಿರಾಶ್ವನ ಪುತ್ರನಾದರೋ ದ್ಯುತಿ ಎಂಬ ಹೆಸರಿನ ಪಾರ್ಥಿವನು. ಅವನು ಮಹಾಭಾಗನೂ ಮಹಾತೇಜಸ್ವಿಯೂ ಮಹಾಸತ್ತ್ವಯುತನೂ ಮಹಾಬಲಶಾಲಿಯೂ ಆಗಿದ್ದನು.
13002010a ಪುತ್ರೋ ದ್ಯುತಿಮತಸ್ತ್ವಾಸೀತ್ಸುವೀರೋ ನಾಮ ಪಾರ್ಥಿವಃ।
13002010c ಧರ್ಮಾತ್ಮಾ ಕೋಶವಾಂಶ್ಚಾಪಿ ದೇವರಾಜ ಇವಾಪರಃ।।
ದ್ಯುತಿಮತನಿಗೆ ಪಾರ್ಥಿವ ಸುವೀರನೆಂಬ ಹೆಸರಿನ ಪುತ್ರನಿದ್ದನು. ಇನ್ನೊಬ್ಬ ದೇವರಾಜನಂತಿದ್ದ ಅವನು ಧರ್ಮಾತ್ಮನೂ ಕೋಶವಾನನೂ ಆಗಿದ್ದನು.
13002011a ಸುವೀರಸ್ಯ ತು ಪುತ್ರೋಽಭೂತ್ಸರ್ವಸಂಗ್ರಾಮದುರ್ಜಯಃ।
13002011c ದುರ್ಜಯೇತ್ಯಭಿವಿಖ್ಯಾತಃ ಸರ್ವಶಾಸ್ತ್ರವಿಶಾರದಃ।।
ಸುವೀರನ ಪುತ್ರನು ಸರ್ವಸಂಗ್ರಾಮ ದುರ್ಜಯನಾದ ಸರ್ವಶಾಸ್ತ್ರವಿಶಾರದನಾದ ದುರ್ಜಯ ಎಂಬ ಹೆಸರಿನಿಂದ ವಿಖ್ಯಾತನು.
13002012a ದುರ್ಜಯಸ್ಯೇಂದ್ರವಪುಷಃ ಪುತ್ರೋಽಗ್ನಿಸದೃಶದ್ಯುತಿಃ।
13002012c ದುರ್ಯೋಧನೋ ನಾಮ ಮಹಾನ್ರಾಜಾಸೀದ್ರಾಜಸತ್ತಮ।।
ರಾಜಸತ್ತಮ! ದುರ್ಜಯನಿಗೆ ಇಂದ್ರನಂಥಹ ಶರೀರವಿದ್ದ ಅಗ್ನಿಸದೃಶದ್ಯುತಿಯಾಗಿದ್ದ ದುರ್ಯೋಧನ ಎಂಬ ಹೆಸರಿನ ಮಹಾರಾಜನು ಪುತ್ರನಾದನು.
13002013a ತಸ್ಯೇಂದ್ರಸಮವೀರ್ಯಸ್ಯ ಸಂಗ್ರಾಮೇಷ್ವನಿವರ್ತಿನಃ।
13002013c ವಿಷಯಶ್ಚ ಪ್ರಭಾವಶ್ಚ ತುಲ್ಯಮೇವಾಭ್ಯವರ್ತತ।।
ವೀರ್ಯದಲ್ಲಿ ಇಂದ್ರನ ಸಮನಾಗಿದ್ದ ಮತ್ತು ಸಂಗ್ರಾಮದಿಂದ ಹಿಮ್ಮೆಟ್ಟದಿದ್ದ ಅವನ ರಾಜ್ಯದ ಪ್ರಭಾವವು ಸರಿಸಾಟಿಯಿಲ್ಲದಂತೆ ಇದ್ದಿತ್ತು.
13002014a ರತ್ನೈರ್ಧನೈಶ್ಚ ಪಶುಭಿಃ ಸಸ್ಯೈಶ್ಚಾಪಿ ಪೃಥಗ್ವಿಧೈಃ।
13002014c ನಗರಂ ವಿಷಯಶ್ಚಾಸ್ಯ ಪ್ರತಿಪೂರ್ಣಂ ತದಾಭವತ್।।
ಅವನ ರಾಜ್ಯ ಮತ್ತು ನಗರಗಳು ನಾನಾವಿಧದ ರತ್ನ, ಧನ, ಪಶುಗಳು, ಸಸ್ಯಗಳಿಂದ ಪರಿಪೂರ್ಣವಾಗಿದ್ದವು.
13002015a ನ ತಸ್ಯ ವಿಷಯೇ ಚಾಭೂತ್ಕೃಪಣೋ ನಾಪಿ ದುರ್ಗತಃ।
13002015c ವ್ಯಾಧಿತೋ ವಾ ಕೃಶೋ ವಾಪಿ ತಸ್ಮಿನ್ನಾಭೂನ್ನರಃ ಕ್ವ ಚಿತ್।।
ಅವನ ರಾಜ್ಯದಲ್ಲಿ ಯಾವ ನರನೂ ಕೃಪಣನಾಗಲೀ ದುರ್ಗತನಾಗಲೀ ವ್ಯಾಧಿತನಾಗಲೀ ಕೃಶನಾಗಲೀ ಆಗಿರಲಿಲ್ಲ.
13002016a ಸುದಕ್ಷಿಣೋ ಮಧುರವಾಗನಸೂಯುರ್ಜಿತೇಂದ್ರಿಯಃ।
13002016c ಧರ್ಮಾತ್ಮಾ ಚಾನೃಶಂಸಶ್ಚ ವಿಕ್ರಾಂತೋಽಥಾವಿಕತ್ಥನಃ।।
ದುರ್ಯೋಧನನು ಉದಾರನೂ, ಮಧುರಭಾಷಿಯೂ, ಅನಸೂಯನೂ, ಜಿತೇಂದ್ರಿಯನೂ, ಧರ್ಮಾತ್ಮನೂ, ಅಕ್ರೂರಿಯೂ, ವಿಕ್ರಾಂತನೂ ಆಗಿದ್ದು ಅವನು ಆತ್ಮಪ್ರಶಂಸೆಯನ್ನು ಮಾಡಿಕೊಳ್ಳುತ್ತಿರಲಿಲ್ಲ.
13002017a ಯಜ್ವಾ ವದಾನ್ಯೋ ಮೇಧಾವೀ ಬ್ರಹ್ಮಣ್ಯಃ ಸತ್ಯಸಂಗರಃ।
13002017c ನ ಚಾವಮಂತಾ ದಾತಾ ಚ ವೇದವೇದಾಂಗಪಾರಗಃ।।
ಅವನು ಯಾಗಶೀಲನೂ, ಮೇಧಾವಿಯೂ, ಬ್ರಹ್ಮಣ್ಯನೂ, ಸತ್ಯಸಂಗರನೂ, ವೇದವೇದಾಂಗಪಾರಂಗತನೂ ದಾನಶೀಲನೂ ಆಗಿದ್ದು ಯಾರನ್ನೂ ಅಪಮಾನಿಸುತ್ತಿರಲಿಲ್ಲ.
13002018a ತಂ ನರ್ಮದಾ ದೇವನದೀ ಪುಣ್ಯಾ ಶೀತಜಲಾ ಶಿವಾ।
13002018c ಚಕಮೇ ಪುರುಷಶ್ರೇಷ್ಠಂ ಸ್ವೇನ ಭಾವೇನ ಭಾರತ।।
ಭಾರತ! ದೇವನದೀ ಪುಣ್ಯೆ ಶೀತಜಲಾ ಶಿವೆ ನರ್ಮದೆಯು ಆ ಪುರುಷಶ್ರೇಷ್ಠನನ್ನು ತನ್ನ ಬಯಕೆಯಂತೆಯೇ ವಿವಾಹವಾದಳು.
13002019a ತಸ್ಯ ಜಜ್ಞೇ ತದಾ ನದ್ಯಾಂ ಕನ್ಯಾ ರಾಜೀವಲೋಚನಾ।
13002019c ನಾಮ್ನಾ ಸುದರ್ಶನಾ ರಾಜನ್ರೂಪೇಣ ಚ ಸುದರ್ಶನಾ।।
ರಾಜನ್! ಅವನಿಗೆ ಆ ನದಿಯಲ್ಲಿ ರೂಪದಲ್ಲಿ ಸುಂದರಳಾಗಿದ್ದ ರಾಜೀವಲೋಚನೆ ಸುದರ್ಶನಾ ಎಂಬ ಕನ್ಯೆಯು ಜನಿಸಿದಳು.
13002020a ತಾದೃಗ್ರೂಪಾ ನ ನಾರೀಷು ಭೂತಪೂರ್ವಾ ಯುಧಿಷ್ಠಿರ।
13002020c ದುರ್ಯೋಧನಸುತಾ ಯಾದೃಗಭವದ್ವರವರ್ಣಿನೀ।।
ಯುಧಿಷ್ಠಿರ! ದುರ್ಯೋಧನಸುತೆ ಆ ವರವರ್ಣಿನಿಯು ಎಷ್ಟು ಸುಂದರಿಯಾಗಿದ್ದಳೆಂದರೆ ಅದಕ್ಕೆ ಹಿಂದೆ ನಾರಿಯರಲ್ಲಿ ಅಷ್ಟೊಂದು ರೂಪವತಿಯರು ಯಾರೂ ಇರಲಿಲ್ಲ.
13002021a ತಾಮಗ್ನಿಶ್ಚಕಮೇ ಸಾಕ್ಷಾದ್ರಾಜಕನ್ಯಾಂ ಸುದರ್ಶನಾಮ್।
13002021c ಭೂತ್ವಾ ಚ ಬ್ರಾಹ್ಮಣಃ ಸಾಕ್ಷಾದ್ವರಯಾಮಾಸ ತಂ ನೃಪಮ್।।
ರಾಜಕನ್ಯೆ ಸುದರ್ಶನೆಯನ್ನು ಸಾಕ್ಷಾದ್ ಅಗ್ನಿಯೇ ಬಯಸಿ ಬ್ರಾಹ್ಮಣನ ವೇಷಧರಿಸಿ ಸಾಕ್ಷಾದ್ ರಾಜನಲ್ಲಿ ಅವಳನ್ನು ವಿವಾಹದಲ್ಲಿ ಕೊಡುವಂತೆ ಕೇಳಿಕೊಂಡನು.
13002022a ದರಿದ್ರಶ್ಚಾಸವರ್ಣಶ್ಚ ಮಮಾಯಮಿತಿ ಪಾರ್ಥಿವಃ।
13002022c ನ ದಿತ್ಸತಿ ಸುತಾಂ ತಸ್ಮೈ ತಾಂ ವಿಪ್ರಾಯ ಸುದರ್ಶನಾಮ್।।
“ಇವನು ದರಿದ್ರ ಮತ್ತು ನನ್ನ ವರ್ಣಕ್ಕೆ ಸೇರಿದವನಲ್ಲ!” ಎಂದು ಪಾರ್ಥಿವನು ತನ್ನ ಸುತೆ ಸುದರ್ಶನೆಯನ್ನು ಆ ವಿಪ್ರನಿಗೆ ಕೊಡಲಿಲ್ಲ.
13002023a ತತೋಽಸ್ಯ ವಿತತೇ ಯಜ್ಞೇ ನಷ್ಟೋಽಭೂದ್ಧವ್ಯವಾಹನಃ।
13002023c ತತೋ ದುರ್ಯೋಧನೋ ರಾಜಾ ವಾಕ್ಯಮಾಹರ್ತ್ವಿಜಸ್ತದಾ।।
ಕುಪಿತನಾದ ಹವ್ಯವಾಹನನು ರಾಜನು ಮಾಡುತ್ತಿದ್ದ ಯಜ್ಞದಲ್ಲಿ ಅದೃಶ್ಯನಾಗಿ ಹೋದನು. ಆಗ ರಾಜಾ ದುರ್ಯೋಧನನು ಋತ್ವಿಜರಲ್ಲಿ ಕೇಳಿದನು:
13002024a ದುಷ್ಕೃತಂ ಮಮ ಕಿಂ ನು ಸ್ಯಾದ್ಭವತಾಂ ವಾ ದ್ವಿಜರ್ಷಭಾಃ।
13002024c ಯೇನ ನಾಶಂ ಜಗಾಮಾಗ್ನಿಃ ಕೃತಂ ಕುಪುರುಷೇಷ್ವಿವ।।
“ದ್ವಿಜರ್ಷಭರೇ! ನನ್ನಿಂದಾಗಲೀ ನಿಮ್ಮಿಂದಾಗಲೀ ಯಾವುದೇ ದುಷ್ಕೃತವು ನಡೆದುಹೋಗಿಲ್ಲ ತಾನೇ? ಕೆಟ್ಟಪುರುಷರಿಗೆ ಮಾಡಿದ ಉಪಕಾರವು ಹಾಳಾಗಿಹೋಗುವಂತೆ ಯಾವ ಕೃತ್ಯದಿಂದ ಈ ಅಗ್ನಿಯು ನಾಶವಾಗಿಹೋಯಿತು?
13002025a ನ ಹ್ಯಲ್ಪಂ ದುಷ್ಕೃತಂ ನೋಽಸ್ತಿ ಯೇನಾಗ್ನಿರ್ನಾಶಮಾಗತಃ।
13002025c ಭವತಾಂ ವಾಥ ವಾ ಮಹ್ಯಂ ತತ್ತ್ವೇನೈತದ್ವಿಮೃಶ್ಯತಾಮ್।।
ಅಲ್ಪ ದುಷ್ಕೃತ್ಯಕಾಗಿ ಈ ಅಗ್ನಿಯು ನಾಶಹೊಂದಲಿಲ್ಲ. ನನ್ನಿಂದ ಅಥವಾ ನಿಮ್ಮಿಂದ ಏನಾದರೂ ದುಷ್ಕರ್ಮವು ನಡೆದುಹೋಯಿತೇ ಎಂದು ನೀವು ವಿಮರ್ಶಿಸಬೇಕು.”
13002026a ಏತದ್ರಾಜ್ಞೋ ವಚಃ ಶ್ರುತ್ವಾ ವಿಪ್ರಾಸ್ತೇ ಭರತರ್ಷಭ।
13002026c ನಿಯತಾ ವಾಗ್ಯತಾಶ್ಚೈವ ಪಾವಕಂ ಶರಣಂ ಯಯುಃ।।
ಭರತರ್ಷಭ! ರಾಜನ ಈ ಮಾತನ್ನು ಕೇಳಿ ವಿಪ್ರರು ನಿಯಮದಿಂದಲೂ ಮಂತ್ರಗಳಿಂದಲೂ ಪಾವಕನಿಗೆ ಶರಣು ಹೋದರು.
13002027a ತಾನ್ದರ್ಶಯಾಮಾಸ ತದಾ ಭಗವಾನ್ ಹವ್ಯವಾಹನಃ।
13002027c ಸ್ವಂ ರೂಪಂ ದೀಪ್ತಿಮತ್ಕೃತ್ವಾ ಶರದರ್ಕಸಮದ್ಯುತಿಃ।।
ಭಗವಾನ್ ಹವ್ಯವಾಹನನು ತನ್ನ ರೂಪವನ್ನು ಶರತ್ಕಾಲದ ಸೂರ್ಯನಂತೆ ದೀಪ್ತವನ್ನಾಗಿಸಿಕೊಂಡು ಬೆಳಗುತ್ತಾ ಅವರಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡನು.
13002028a ತತೋ ಮಹಾತ್ಮಾ ತಾನಾಹ ದಹನೋ ಬ್ರಾಹ್ಮಣರ್ಷಭಾನ್।
13002028c ವರಯಾಮ್ಯಾತ್ಮನೋಽರ್ಥಾಯ ದುರ್ಯೋಧನಸುತಾಮಿತಿ।।
ಮಹಾತ್ಮ ದಹನನು ಬ್ರಾಹ್ಮಣರ್ಷಭರಿಗೆ “ದುರ್ಯೋಧನನ ಸುತೆಯನ್ನು ನನಗಾಗಿ ನಾನು ವರಿಸಿದ್ದೇನೆ” ಎಂದನು.
13002029a ತತಸ್ತೇ ಕಾಲ್ಯಮುತ್ಥಾಯ ತಸ್ಮೈ ರಾಜ್ಞೇ ನ್ಯವೇದಯನ್।
13002029c ಬ್ರಾಹ್ಮಣಾ ವಿಸ್ಮಿತಾಃ ಸರ್ವೇ ಯದುಕ್ತಂ ಚಿತ್ರಭಾನುನಾ।।
ಚಿತ್ರಭಾನುವು ಹೇಳಿದುದನ್ನು ಕೇಳಿ ಬ್ರಾಹ್ಮಣರೆಲ್ಲರೂ ವಿಸ್ಮಿತರಾದರು. ಬೆಳಿಗ್ಗೆ ಎದ್ದು ಅವರು ಅದನ್ನು ರಾಜನಿಗೆ ನಿವೇದಿಸಿದರು.
13002030a ತತಃ ಸ ರಾಜಾ ತಚ್ಚ್ರುತ್ವಾ ವಚನಂ ಬ್ರಹ್ಮವಾದಿನಾಮ್।
13002030c ಅವಾಪ್ಯ ಪರಮಂ ಹರ್ಷಂ ತಥೇತಿ ಪ್ರಾಹ ಬುದ್ಧಿಮಾನ್।।
ಬ್ರಹ್ಮವಾದಿಗಳ ಆ ಮಾತನ್ನು ಕೇಳಿ ಬುದ್ಧಿಮಾನ್ ರಾಜನು ಪರಮ ಹರ್ಷವನ್ನು ತಾಳಿ “ಹಾಗೆಯೇ ಆಗಲಿ!” ಎಂದನು.
13002031a ಪ್ರಾಯಾಚತ ನೃಪಃ ಶುಲ್ಕಂ ಭಗವಂತಂ ವಿಭಾವಸುಮ್।
13002031c ನಿತ್ಯಂ ಸಾಂನಿಧ್ಯಮಿಹ ತೇ ಚಿತ್ರಭಾನೋ ಭವೇದಿತಿ।
13002031e ತಮಾಹ ಭಗವಾನಗ್ನಿರೇವಮಸ್ತ್ವಿತಿ ಪಾರ್ಥಿವಮ್।।
“ಚಿತ್ರಭಾನೋ! ನಿತ್ಯವೂ ಇಲ್ಲಿ ನಿನ್ನ ಸಾನ್ನಿಧ್ಯವು ಇರಲಿ!” ಎಂದು ನೃಪನು ಶುಲ್ಕವಾಗಿ ಭಗವಂತ ವಿಭಾವಸುವಿನಲ್ಲಿ ಯಾಚಿಸಿದನು. ಭಗವಾನ್ ಅಗ್ನಿಯೂ ಕೂಡ ಪಾರ್ಥಿವನಿಗೆ “ಹಾಗೆಯೇ ಆಗಲಿ” ಎಂದನು.
13002032a ತತಃ ಸಾಂನಿಧ್ಯಮಧ್ಯಾಪಿ ಮಾಹಿಷ್ಮತ್ಯಾಂ ವಿಭಾವಸೋಃ।
13002032c ದೃಷ್ಟಂ ಹಿ ಸಹದೇವೇನ ದಿಶೋ ವಿಜಯತಾ ತದಾ।।
ಮಾಹಿಷ್ಮತಿಯಲ್ಲಿ ಸಾನ್ನಿಧ್ಯನಾಗಿದ್ದ ವಿಭಾವಸುವನ್ನು ದಿಗ್ವಿಜಯದ ಸಮಯದಲ್ಲಿ ಸಹದೇವನು ಕಂಡಿದ್ದನಷ್ಟೇ!
13002033a ತತಸ್ತಾಂ ಸಮಲಂಕೃತ್ಯ ಕನ್ಯಾಮಹತವಾಸಸಮ್।
13002033c ದದೌ ದುರ್ಯೋಧನೋ ರಾಜಾ ಪಾವಕಾಯ ಮಹಾತ್ಮನೇ।।
ಆಗ ರಾಜಾ ದುರ್ಯೋಧನನು ಆ ಕನ್ಯೆಯನ್ನು ಮಹುಮೂಲ್ಯ ವಸ್ತ್ರಗಳಿಂದ ಸಮಲಂಕರಿಸಿ ಮಹಾತ್ಮ ಪಾವಕನಿಗೆ ನೀಡಿದನು.
13002034a ಪ್ರತಿಜಗ್ರಾಹ ಚಾಗ್ನಿಸ್ತಾಂ ರಾಜಪುತ್ರೀಂ ಸುದರ್ಶನಾಮ್।
13002034c ವಿಧಿನಾ ವೇದದೃಷ್ಟೇನ ವಸೋರ್ಧಾರಾಮಿವಾಧ್ವರೇ।।
ಅಗ್ನಿಯು ರಾಜಪುತ್ರಿ ಸುದರ್ಶನೆಯನ್ನು ವೇದದೃಷ್ಟ ವಿಧಿಗಳಿಂದ ಅಧ್ವರದಲ್ಲಿ ವಸೋರ್ಧಾರೆಯನ್ನು ಹೇಗೋ ಹಾಗೆ ಸ್ವೀಕರಿಸಿದನು.
13002035a ತಸ್ಯಾ ರೂಪೇಣ ಶೀಲೇನ ಕುಲೇನ ವಪುಷಾ ಶ್ರಿಯಾ।
13002035c ಅಭವತ್ಪ್ರೀತಿಮಾನಗ್ನಿರ್ಗರ್ಭಂ ತಸ್ಯಾಂ ಸಮಾದಧೇ।।
ಅವಳ ರೂಪ, ಶೀಲ, ಕುಲ ಮತ್ತು ಮುಖದ ಕಾಂತಿಯಿಂದ ಅತ್ಯಂತ ಪ್ರೀತಿಮಾನನಾದ ಅಗ್ನಿಯು ಅವಳಲ್ಲಿ ಗರ್ಭವನ್ನಿರಿಸಿದನು.
13002036a ತಸ್ಯಾಂ ಸಮಭವತ್ಪುತ್ರೋ ನಾಮ್ನಾಗ್ನೇಯಃ ಸುದರ್ಶನಃ।
13002036c ಶಿಶುರೇವಾಧ್ಯಗಾತ್ಸರ್ವಂ ಸ ಚ ಬ್ರಹ್ಮ ಸನಾತನಮ್।।
ಅವಳಲ್ಲಿ ಅಗ್ನಿಯ ಮಗ ಸುದರ್ಶನ ಎಂಬ ಹೆಸರಿನ ಪುತ್ರನು ಜನಿಸಿದನು. ಶಿಶುವಾಗಿದ್ದಾಗಲೇ ಅವನು ಸರ್ವ ಸನಾತನ ಬ್ರಹ್ಮ5ವನ್ನೂ ಅಧ್ಯಯನ ಮಾಡಿದನು.
13002037a ಅಥೌಘವಾನ್ನಾಮ ನೃಪೋ ನೃಗಸ್ಯಾಸೀತ್ಪಿತಾಮಹಃ।
13002037c ತಸ್ಯಾಪ್ಯೋಘವತೀ ಕನ್ಯಾ ಪುತ್ರಶ್ಚೌಘರಥೋಽಭವತ್।।
ಅದೇ ಕಾಲದಲ್ಲಿ ನೃಗನ ಪಿತಾಮಹ ಓಘವಾನ್ ಎಂಬ ಹೆಸರಿನ ರಾಜನಿದ್ದನು. ಅವನಿಗೆ ಓಘವತೀ ಎಂಬ ಕನ್ಯೆಯೂ ಓಘರಥನೆಂಬ ಪುತ್ರನೂ ಆದರು.
13002038a ತಾಮೋಘವಾನ್ದದೌ ತಸ್ಮೈ ಸ್ವಯಮೋಘವತೀಂ ಸುತಾಮ್।
13002038c ಸುದರ್ಶನಾಯ ವಿದುಷೇ ಭಾರ್ಯಾರ್ಥೇ ದೇವರೂಪಿಣೀಮ್।।
ಸ್ವಯಂ ಓಘವಾನನು ತನ್ನ ಸುತೆ ದೇವರೂಪಿಣೀ ಓಘವತಿಯನ್ನು ಸುದರ್ಶನನಿಗೆ ಪತ್ನಿಯನ್ನಾಗಿ ನೀಡಿದನು.
13002039a ಸ ಗೃಹಸ್ಥಾಶ್ರಮರತಸ್ತಯಾ ಸಹ ಸುದರ್ಶನಃ।
13002039c ಕುರುಕ್ಷೇತ್ರೇಽವಸದ್ರಾಜನ್ನೋಘವತ್ಯಾ ಸಮನ್ವಿತಃ।।
ರಾಜನ್! ಓಘವತಿಯನ್ನು ಕೂಡಿ ಗೃಹಸ್ಥಾಶ್ರಮನಿರತನಾದ ಸುದರ್ಶನನು ಕುರುಕ್ಷೇತ್ರದಲ್ಲಿ ವಾಸಿಸುತ್ತಿದ್ದನು.
13002040a ಗೃಹಸ್ಥಶ್ಚಾವಜೇಷ್ಯಾಮಿ ಮೃತ್ಯುಮಿತ್ಯೇವ ಸ ಪ್ರಭೋ।
13002040c ಪ್ರತಿಜ್ಞಾಮಕರೋದ್ಧೀಮಾನ್ದೀಪ್ತತೇಜಾ ವಿಶಾಂ ಪತೇ।।
ಪ್ರಭೋ! ವಿಶಾಂಪತೇ! ಗೃಹಸ್ಥಾಶ್ರಮದಲ್ಲಿದ್ದುಕೊಂಡು ಮೃತ್ಯುವನ್ನು ಜಯಿಸುತ್ತೇನೆ ಎಂಬ ಪ್ರತಿಜ್ಞೆಯನ್ನು ಆ ಧೀಮಾನ್ ದೀಪ್ತತೇಜಸ್ವಿಯು ಮಾಡಿದ್ದನು.
13002041a ತಾಮಥೌಘವತೀಂ ರಾಜನ್ಸ ಪಾವಕಸುತೋಽಬ್ರವೀತ್।
13002041c ಅತಿಥೇಃ ಪ್ರತಿಕೂಲಂ ತೇ ನ ಕರ್ತವ್ಯಂ ಕಥಂ ಚನ।।
ರಾಜನ್! ಆ ಪಾವಕಸುತನು ಓಘವತಿಗೆ ಹೇಳಿದನು: “ಅತಿಥಿಗಳಿಗೆ ಪ್ರತಿಕೂಲವಾಗುವಂಥಹುದನ್ನು ಎಂದೂ ನೀನು ಮಾಡಬಾರದು.
13002042a ಯೇನ ಯೇನ ಚ ತುಷ್ಯೇತ ನಿತ್ಯಮೇವ ತ್ವಯಾತಿಥಿಃ।
13002042c ಅಪ್ಯಾತ್ಮನಃ ಪ್ರದಾನೇನ ನ ತೇ ಕಾರ್ಯಾ ವಿಚಾರಣಾ।।
ಅತಿಥಿಯು ಯಾವುದರಿಂದ ತೃಪ್ತಿಹೊಂದುತ್ತಾನೋ ಅದನ್ನು ನಿತ್ಯವೂ ಅವನಿಗೆ ನೀಡಬೇಕು. ಒಂದು ವೇಳೆ ನಿನ್ನನ್ನು ನೀನು ಕೊಡಬೇಕಾಗಿ ಬಂದರೂ ಅದರಲ್ಲಿ ವಿಚಾರಮಾಡಬಾರದು.
13002043a ಏತದ್ವ್ರತಂ ಮಮ ಸದಾ ಹೃದಿ ಸಂಪರಿವರ್ತತೇ।
13002043c ಗೃಹಸ್ಥಾನಾಂ ಹಿ ಸುಶ್ರೋಣಿ ನಾತಿಥೇರ್ವಿದ್ಯತೇ ಪರಮ್।।
ಈ ವ್ರತವು ಸದಾ ನನ್ನ ಹೃದಯದಲ್ಲಿರುತ್ತದೆ. ಸುಶ್ರೋಣಿ! ಗೃಹಸ್ಥರಿಗೆ ಅತಿಥಿಯೇ ಎಲ್ಲಕ್ಕಿಂತ ಹೆಚ್ಚಿನವನು.
13002044a ಪ್ರಮಾಣಂ ಯದಿ ವಾಮೋರು ವಚಸ್ತೇ ಮಮ ಶೋಭನೇ।
13002044c ಇದಂ ವಚನಮವ್ಯಗ್ರಾ ಹೃದಿ ತ್ವಂ ಧಾರಯೇಃ ಸದಾ।।
ವಾಮೋರು! ಶೋಭನೇ! ನನ್ನ ಮಾತು ನಿನಗೆ ಪ್ರಮಾಣಯುಕ್ತವಾಗಿದ್ದರೆ ಈ ಮಾತನ್ನು ಅನನ್ಯ ಮನಸ್ಕಳಾಗಿ ಸದಾ ನಿನ್ನ ಹೃದಯದಲ್ಲಿ ಇಟ್ಟುಕೊಂಡಿರು.
13002045a ನಿಷ್ಕ್ರಾಂತೇ ಮಯಿ ಕಲ್ಯಾಣಿ ತಥಾ ಸಂನಿಹಿತೇಽನಘೇ।
13002045c ನಾತಿಥಿಸ್ತೇಽವಮಂತವ್ಯಃ ಪ್ರಮಾಣಂ ಯದ್ಯಹಂ ತವ।।
ಕಲ್ಯಾಣಿ! ಅನಘೇ! ಒಂದು ವೇಳೆ ನಾನು ಪ್ರಾಮಾಣಭೂತನೆಂದೆನಿಸಿದರೆ ನಾನು ಹೊರಗಿರಲಿ ಅಥವಾ ನಿನ್ನ ಜೊತೆಯೇ ಇರಲಿ ಅತಿಥಿಯನ್ನು ನೀನು ಅಪಮಾನಿಸಬಾರದು.”
13002046a ತಮಬ್ರವೀದೋಘವತೀ ಯತಾ ಮೂರ್ಧ್ನಿ ಕೃತಾಂಜಲಿಃ।
13002046c ನ ಮೇ ತ್ವದ್ವಚನಾತ್ಕಿಂ ಚಿದಕರ್ತವ್ಯಂ ಕಥಂ ಚನ।।
ಓಘವತಿಯು ತನ್ನ ನೆತ್ತಿಯ ಮೇಲೆ ಕೈಜೋಡಿಸಿ “ಎಂದೂ ನಾನು ನಿನ್ನ ಮಾತಿನಂತೆ ಮಾಡದೇ ಇರುವುದಿಲ್ಲ” ಎಂದು ಅವನಿಗೆ ಹೇಳಿದಳು.
13002047a ಜಿಗೀಷಮಾಣಂ ತು ಗೃಹೇ ತದಾ ಮೃತ್ಯುಃ ಸುದರ್ಶನಮ್।
13002047c ಪೃಷ್ಠತೋಽನ್ವಗಮದ್ರಾಜನ್ರಂಧ್ರಾನ್ವೇಷೀ ತದಾ ಸದಾ।।
ಸುದರ್ಶನನ ಗೃಹಸ್ಥಧರ್ಮವನ್ನು ಪರೀಕ್ಷಿಸಲು ಮೃತ್ಯುವು ಸದಾ ಅವನ ಹಿಂದೆಯೇ ಇದ್ದು ಅವನಲ್ಲುಂಟಾಗಬಹುದಾದ ನ್ಯೂನತೆಗಳನ್ನೇ ಹುಡುಕುತ್ತಿದ್ದನು.
13002048a ಇಧ್ಮಾರ್ಥಂ ತು ಗತೇ ತಸ್ಮಿನ್ನಗ್ನಿಪುತ್ರೇ ಸುದರ್ಶನೇ।
13002048c ಅತಿಥಿರ್ಬ್ರಾಹ್ಮಣಃ ಶ್ರೀಮಾಂಸ್ತಾಮಾಹೌಘವತೀಂ ತದಾ।।
ಅಗ್ನಿಪುತ್ರ ಸುದರ್ಶನನು ಸಮಿತ್ತಿಗಾಗಿ ಹೋಗಿರಲು ಶ್ರೀಮಾನ್ ಅತಿಥಿ ಬ್ರಾಹ್ಮಣನೊಬ್ಬನು ಓಘವತಿಯಲ್ಲಿ ಹೇಳಿದನು:
13002049a ಆತಿಥ್ಯಂ ದತ್ತಮಿಚ್ಚಾಮಿ ತ್ವಯಾದ್ಯ ವರವರ್ಣಿನಿ।
13002049c ಪ್ರಮಾಣಂ ಯದಿ ಧರ್ಮಸ್ತೇ ಗೃಹಸ್ಥಾಶ್ರಮಸಂಮತಃ।।
“ವರವರ್ಣಿನಿ! ಗೃಹಸ್ಥಾಶ್ರಮ ಸಮ್ಮತ ಧರ್ಮವು ನಿನಗೆ ಪ್ರಮಾಣಭೂತವಾಗಿದ್ದರೆ ನಿನ್ನಿಂದ ಇಂದು ಆತಿಥ್ಯವನ್ನು ಪಡೆಯಲು ಇಚ್ಛಿಸುತ್ತೇನೆ.”
13002050a ಇತ್ಯುಕ್ತಾ ತೇನ ವಿಪ್ರೇಣ ರಾಜಪುತ್ರೀ ಯಶಸ್ವಿನೀ।
13002050c ವಿಧಿನಾ ಪ್ರತಿಜಗ್ರಾಹ ವೇದೋಕ್ತೇನ ವಿಶಾಂ ಪತೇ।।
ವಿಶಾಂಪತೇ! ಆ ವಿಪ್ರನು ಹೀಗೆ ಹೇಳಲು ಯಶಸ್ವಿನೀ ರಾಜಪುತ್ರಿಯು ವೇದೋಕ್ತ ವಿಧಿಗಳಿಂದ ಅವನನ್ನು ಸ್ವಾಗತಿಸಿದಳು.
13002051a ಆಸನಂ ಚೈವ ಪಾದ್ಯಂ ಚ ತಸ್ಮೈ ದತ್ತ್ವಾ ದ್ವಿಜಾತಯೇ।
13002051c ಪ್ರೋವಾಚೌಘವತೀ ವಿಪ್ರಂ ಕೇನಾರ್ಥಃ ಕಿಂ ದದಾಮಿ ತೇ।।
ದ್ವಿಜಾತಿಯವನಿಗೆ ಆಸನ, ಪಾದ್ಯಗಳನ್ನಿತ್ತು ಓಘವತಿಯು ವಿಪ್ರನಿಗೆ “ನಿನಗೆ ಏನನ್ನು ಕೊಡಲಿ?” ಎಂದು ಕೇಳಿದಳು.
13002052a ತಾಮಬ್ರವೀತ್ತತೋ ವಿಪ್ರೋ ರಾಜಪುತ್ರೀಂ ಸುದರ್ಶನಾಮ್।
13002052c ತ್ವಯಾ ಮಮಾರ್ಥಃ ಕಲ್ಯಾಣಿ ನಿರ್ವಿಶಂಕೇ ತದಾಚರ।।
ಆ ರಾಜಪುತ್ರಿ ಸುಂದರಿಗೆ ವಿಪ್ರನು ಹೇಳಿದನು: “ಕಲ್ಯಾಣೀ! ನೀನು ನನಗಾಗಿ ನಿರ್ವಿಶಂಕಳಾಗಿ ಈ ಕಾರ್ಯವನ್ನು ಮಾಡಿಕೊಡು.
13002053a ಯದಿ ಪ್ರಮಾಣಂ ಧರ್ಮಸ್ತೇ ಗೃಹಸ್ಥಾಶ್ರಮಸಂಮತಃ।
13002053c ಪ್ರದಾನೇನಾತ್ಮನೋ ರಾಜ್ಞಿ ಕರ್ತುಮರ್ಹಸಿ ಮೇ ಪ್ರಿಯಮ್।।
ಒಂದು ವೇಳೆ ಗೃಹಸ್ಥಾಶ್ರಮ ಸಮ್ಮತ ಧರ್ಮದ ಪ್ರಮಾಣವು ನಿನ್ನಲ್ಲಿದ್ದರೆ ನಿನ್ನನ್ನು ನೀನು ನನಗೆ ಕೊಡು. ರಾಜ್ಞಿ! ನನ್ನನ್ನು ಪ್ರೀತಿಸು!”
13002054a ತಥಾ ಸಂಚಂದ್ಯಮಾನೋಽನ್ಯೈರೀಪ್ಸಿತೈರ್ನೃಪಕನ್ಯಯಾ।
13002054c ನಾನ್ಯಮಾತ್ಮಪ್ರದಾನಾತ್ಸ ತಸ್ಯಾ ವವ್ರೇ ವರಂ ದ್ವಿಜಃ।।
ಆ ನೃಪಕನ್ಯೆಯು ಬೇರೆ ಯಾವುದನ್ನಾದರೂ ಇಚ್ಛಿಸು ಎಂದು ಎಷ್ಟೇ ಕೇಳಿಕೊಂಡರೂ ಆತ್ಮಪ್ರದಾನವಲ್ಲದೇ ಬೇರೆ ಯಾವುದನ್ನೂ ಅವಳಿಂದ ಆ ದ್ವಿಜನು ಕೇಳಲಿಲ್ಲ.
13002055a ಸಾ ತು ರಾಜಸುತಾ ಸ್ಮೃತ್ವಾ ಭರ್ತುರ್ವಚನಮಾದಿತಃ।
13002055c ತಥೇತಿ ಲಜ್ಜಮಾನಾ ಸಾ ತಮುವಾಚ ದ್ವಿಜರ್ಷಭಮ್।।
ಆ ರಾಜಸುತೆಯಾದರೋ ಮೊದಲೇ ಹೇಳಿದ್ದ ಪತಿಯ ವಚನವನ್ನು ನೆನಪಿಸಿಕೊಂಡು ಲಜ್ಜಿತಳಾಗಿ ದ್ವಿಜರ್ಷಭನಿಗೆ “ಹಾಗೆಯೇ ಆಗಲಿ!” ಎಂದಳು.
13002056a ತತೋ ರಹಃ ಸ ವಿಪ್ರರ್ಷಿಃ ಸಾ ಚೈವೋಪವಿವೇಶ ಹ।
13002056c ಸಂಸ್ಮೃತ್ಯ ಭರ್ತುರ್ವಚನಂ ಗೃಹಸ್ಥಾಶ್ರಮಕಾಂಕ್ಷಿಣಃ।।
ಗೃಹಸ್ಥಾಶ್ರಮದಲ್ಲಿ ಆಸಕ್ತನಾಗಿದ್ದ ಪತಿಯ ಮಾತನ್ನು ಗೌರವಿಸಿ ಅವಳು ಒಪ್ಪಿಕೊಂಡಳು. ಆಗ ವಿಪ್ರರ್ಷಿಯು ನಸುನಗುತ್ತಾ ಅವಳೊಡನೆ ಮನೆಯನ್ನು ಪ್ರವೇಶಿಸಿದನು.
13002057a ಅಥೇಧ್ಮಾನ್ಸಮುಪಾದಾಯ ಸ ಪಾವಕಿರುಪಾಗಮತ್।
13002057c ಮೃತ್ಯುನಾ ರೌದ್ರಭಾವೇನ ನಿತ್ಯಂ ಬಂಧುರಿವಾನ್ವಿತಃ।।
ಅಷ್ಟರಲ್ಲಿ ಸಮಿತ್ತುಗಳನ್ನು ಎತ್ತಿಕೊಂಡು ಪಾವಕಿಯು ಹಿಂದಿರುಗಿದನು. ನಿತ್ಯದಂತೆ ರೌದ್ರಭಾವದ ಮೃತ್ಯುವು ಅವನ ಬಂಧುವಿನಂತೆ ಹಿಂಬಾಲಿಸಿ ಬಂದನು.
13002058a ತತಸ್ತ್ವಾಶ್ರಮಮಾಗಮ್ಯ ಸ ಪಾವಕಸುತಸ್ತದಾ।
13002058c ತಾಮಾಜುಹಾವೌಘವತೀಂ ಕ್ವಾಸಿ ಯಾತೇತಿ ಚಾಸಕೃತ್।।
ಆಶ್ರಮಕ್ಕೆ ಬಂದು ಪಾವಕಸುತನು “ಓಘವತೀ! ಎಲ್ಲಿದ್ದೀಯೆ?” ಎಂದು ಕೂಗಿ ಕರೆದನು.
13002059a ತಸ್ಮೈ ಪ್ರತಿವಚಃ ಸಾ ತು ಭರ್ತ್ರೇ ನ ಪ್ರದದೌ ತದಾ।
13002059c ಕರಾಭ್ಯಾಂ ತೇನ ವಿಪ್ರೇಣ ಸ್ಪೃಷ್ಟಾ ಭರ್ತೃವ್ರತಾ ಸತೀ।।
ಆಗ ಆ ವಿಪ್ರನ ಕೈಗಳಿಂದ ಮುಟ್ಟಲ್ಪಟ್ಟ ಪತಿವ್ರತೆ ಸತಿಯು ಪತಿಗೆ ಪ್ರತ್ಯುತ್ತರವನ್ನು ನೀಡಲಿಲ್ಲ.
13002060a ಉಚ್ಚಿಷ್ಟಾಸ್ಮೀತಿ ಮನ್ವಾನಾ ಲಜ್ಜಿತಾ ಭರ್ತುರೇವ ಚ।
13002060c ತೂಷ್ಣೀಂಭೂತಾಭವತ್ಸಾಧ್ವೀ ನ ಚೋವಾಚಾಥ ಕಿಂ ಚನ।।
ತಾನು ಉಚ್ಚಿಷ್ಟಳಾಗಿಬಿಟ್ಟೆ ಎಂದು ಲಜ್ಜಿತಳಾದ ಆ ಸಾಧ್ವಿಯು ಸುಮ್ಮನಾಗಿದ್ದು ಪತಿಗೆ ಏನನ್ನೂ ಹೇಳಲಿಲ್ಲ.
13002061a ಅಥ ತಾಂ ಪುನರೇವೇದಂ ಪ್ರೋವಾಚ ಸ ಸುದರ್ಶನಃ।
13002061c ಕ್ವ ಸಾ ಸಾಧ್ವೀ ಕ್ವ ಸಾ ಯಾತಾ ಗರೀಯಃ ಕಿಮತೋ ಮಮ।।
ಆಗ ಸುದರ್ಶನನು ಪುನಃ ಅವಳನ್ನು ಕರೆದು ಹೇಳಿದನು: “ಸಾಧ್ವೀ! ಎಲ್ಲಿರುವೆ? ನನಗಿಂತಲೂ ಹೆಚ್ಚಿನದು ಏನಿದೆ?
13002062a ಪತಿವ್ರತಾ ಸತ್ಯಶೀಲಾ ನಿತ್ಯಂ ಚೈವಾರ್ಜವೇ ರತಾ।
13002062c ಕಥಂ ನ ಪ್ರತ್ಯುದೇತ್ಯದ್ಯ ಸ್ಮಯಮಾನಾ ಯಥಾ ಪುರಾ।।
ನಿತ್ಯವೂ ನನ್ನ ಸೇವೆಯಲ್ಲಿಯೇ ನಿರತಳಾಗಿರುವ ಪತಿವ್ರತೆ ಸತ್ಯಶೀಲೆಯು ಇಂದು ಹೇಗೆ ನಗುತ್ತಾ ನನ್ನನ್ನು ಎದಿರುಗೊಳ್ಳುತ್ತಿಲ್ಲ?”
13002063a ಉಟಜಸ್ಥಸ್ತು ತಂ ವಿಪ್ರಃ ಪ್ರತ್ಯುವಾಚ ಸುದರ್ಶನಮ್।
13002063c ಅತಿಥಿಂ ವಿದ್ಧಿ ಸಂಪ್ರಾಪ್ತಂ ಪಾವಕೇ ಬ್ರಾಹ್ಮಣಂ ಚ ಮಾಮ್।।
ಒಳಗಿದ್ದ ವಿಪ್ರನು ಸುದರ್ಶನನಿಗೆ ಪ್ರತ್ಯುತ್ತರಿಸಿದನು: “ಪಾವಕೇ! ನಾನು ನಿನ್ನ ಮನೆಗೆ ಬಂದಿರುವ ಅತಿಥಿ ಬ್ರಾಹ್ಮಣನೆಂದು ತಿಳಿ.
13002064a ಅನಯಾ ಚಂದ್ಯಮಾನೋಽಹಂ ಭಾರ್ಯಯಾ ತವ ಸತ್ತಮ।
13002064c ತೈಸ್ತೈರತಿಥಿಸತ್ಕಾರೈರಾರ್ಜವೇಽಸ್ಯಾ ದೃಢಂ ಮನಃ।।
ಸತ್ತಮ! ಈ ನಿನ್ನ ಭಾರ್ಯೆಯು ಅತಿಥಿಸತ್ಕಾರದ ಮೂಲಕ ನನ್ನ ಇಚ್ಛೆಯನ್ನು ಪೂರೈಸುವುದಾಗಿ ಹೇಳಿದಳು. ಅಗ ದೃಢ ಮನಸ್ಸಿನಿಂದ ನಾನು ಇವಳನ್ನೇ ವರಿಸಿದೆ.
13002065a ಅನೇನ ವಿಧಿನಾ ಸೇಯಂ ಮಾಮರ್ಚತಿ ಶುಭಾನನಾ।
13002065c ಅನುರೂಪಂ ಯದತ್ರಾದ್ಯ ತದ್ಭವಾನ್ವಕ್ತುಮರ್ಹತಿ।।
ಈ ಶುಭಾನನೆಯು ವಿಧಿವತ್ತಾಗಿ ನನ್ನೊಡನಿದ್ದಾಳೆ. ಈ ಸಮಯದಲ್ಲಿ ನಿನಗೆ ಅನುರೂಪವಾಗಿ ಕಂಡದ್ದನ್ನು ಹೇಳಬಹುದು.”
13002066a ಕೂಟಮುದ್ಗರಹಸ್ತಸ್ತು ಮೃತ್ಯುಸ್ತಂ ವೈ ಸಮನ್ವಯಾತ್।
13002066c ಹೀನಪ್ರತಿಜ್ಞಮತ್ರೈನಂ ವಧಿಷ್ಯಾಮೀತಿ ಚಿಂತಯನ್।।
“ಈಗ ಪ್ರತಿಜ್ಞಾಹೀನನಾಗುವ ಇವನನ್ನು ವಧಿಸುತ್ತೇನೆ” ಎಂದು ಯೋಚಿಸಿ ಮೃತ್ಯುವು ಲೋಹದ ದಂಡವನ್ನು ಹಿಡಿದು ಅವನ ಹಿಂದೆಯೇ ನಿಂತಿದ್ದನು.
13002067a ಸುದರ್ಶನಸ್ತು ಮನಸಾ ಕರ್ಮಣಾ ಚಕ್ಷುಷಾ ಗಿರಾ।
13002067c ತ್ಯಕ್ತೇರ್ಷ್ಯಸ್ತ್ಯಕ್ತಮನ್ಯುಶ್ಚ ಸ್ಮಯಮಾನೋಽಬ್ರವೀದಿದಮ್।।
ಸುದರ್ಶನನಾದರೋ ಮನಸ್ಸು-ಕರ್ಮ-ಕಣ್ಣು ಮತ್ತು ಮಾತುಗಳಿಂದ ಈರ್ಷ್ಯೆ-ಕೋಪಗಳನ್ನು ತ್ಯಜಿಸಿ ಮುಗುಳ್ನಗುತ್ತಾ ಈ ಮಾತನ್ನಾಡಿದನು:
13002068a ಸುರತಂ ತೇಽಸ್ತು ವಿಪ್ರಾಗ್ರ್ಯ ಪ್ರೀತಿರ್ಹಿ ಪರಮಾ ಮಮ।
13002068c ಗೃಹಸ್ಥಸ್ಯ ಹಿ ಧರ್ಮೋಽಗ್ರ್ಯಃ ಸಂಪ್ರಾಪ್ತಾತಿಥಿಪೂಜನಮ್।।
“ವಿಪ್ರಾಗ್ರ್ಯ! ನಿನ್ನ ಸುರತೇಚ್ಛೆಯು ಪೂರ್ಣವಾಗಲಿ. ಇದರಿಂದ ನನಗೆ ಪರಮ ಸಂತೋಷವೇ ಆಗಿದೆ. ಆಗಮಿಸಿದ ಅತಿಥಿಯ ಪೂಜೆಯೇ ಗೃಹಸ್ಥನ ಅಗ್ರ ಧರ್ಮವಾಗಿದೆ.
13002069a ಅತಿಥಿಃ ಪೂಜಿತೋ ಯಸ್ಯ ಗೃಹಸ್ಥಸ್ಯ ತು ಗಚ್ಚತಿ।
13002069c ನಾನ್ಯಸ್ತಸ್ಮಾತ್ಪರೋ ಧರ್ಮ ಇತಿ ಪ್ರಾಹುರ್ಮನೀಷಿಣಃ।।
ಯಾರ ಮನೆಯಿಂದ ಪೂಜಿತನಾಗಿ ಅತಿಥಿಯು ಹೋಗುವನೋ ಅವನ ಧರ್ಮಕ್ಕಿಂತ ಹೆಚ್ಚಿನ ಧರ್ಮವು ಬೇರೆಯಿಲ್ಲ ಎಂದು ಮನೀಷಿಣರು ಹೇಳುತ್ತಾರೆ.
13002070a ಪ್ರಾಣಾ ಹಿ ಮಮ ದಾರಾಶ್ಚ ಯಚ್ಚಾನ್ಯದ್ವಿದ್ಯತೇ ವಸು।
13002070c ಅತಿಥಿಭ್ಯೋ ಮಯಾ ದೇಯಮಿತಿ ಮೇ ವ್ರತಮಾಹಿತಮ್।।
ನನ್ನ ಪ್ರಾಣ, ಪತ್ನಿ ಮತ್ತು ಸಂಪತ್ತು ಎಲ್ಲವನ್ನೂ ಹಿಂದು-ಮುಂದು ನೋಡದೇ ಅತಿಥಿಗಳಿಗೆ ಕೊಡಬೇಕೆಂಬುದು ನನ್ನ ವ್ರತವಾಗಿದೆ.
13002071a ನಿಃಸಂದಿಗ್ಧಂ ಮಯಾ ವಾಕ್ಯಮೇತತ್ತೇ ಸಮುದಾಹೃತಮ್।
13002071c ತೇನಾಹಂ ವಿಪ್ರ ಸತ್ಯೇನ ಸ್ವಯಮಾತ್ಮಾನಮಾಲಭೇ।।
ನಿನಗೆ ಹೇಳಿರುವ ಈ ಮಾತುಗಳನ್ನು ನಾನು ಸಂದಿಗ್ಧತೆಯಲ್ಲದೇ ಸಂತೋಷದಿಂದ ಹೇಳುತ್ತಿದ್ದೇನೆ. ವಿಪ್ರ! ಸ್ವಯಂ ನನ್ನ ಮೇಲೆ ಆಣೆಯಿಟ್ಟು ಈ ಸತ್ಯವನ್ನು ಹೇಳುತ್ತಿದ್ದೇನೆ.
13002072a ಪೃಥಿವೀ ವಾಯುರಾಕಾಶಮಾಪೋ ಜ್ಯೋತಿಶ್ಚ ಪಂಚಮಮ್।
13002072c ಬುದ್ಧಿರಾತ್ಮಾ ಮನಃ ಕಾಲೋ ದಿಶಶ್ಚೈವ ಗುಣಾ ದಶ।।
13002073a ನಿತ್ಯಮೇತೇ ಹಿ ಪಶ್ಯಂತಿ ದೇಹಿನಾಂ ದೇಹಸಂಶ್ರಿತಾಃ।
13002073c ಸುಕೃತಂ ದುಷ್ಕೃತಂ ಚಾಪಿ ಕರ್ಮ ಧರ್ಮಭೃತಾಂ ವರ।।
ಧರ್ಮಭೃತರಲ್ಲಿ ಶ್ರೇಷ್ಠ! ಪೃಥ್ವಿ, ವಾಯು, ಆಕಾಶ, ಆಪ, ಮತ್ತು ಐದನೆಯದಾದ ಜ್ಯೋತಿ, ಬುದ್ಧಿ, ಆತ್ಮ, ಮನಸ್ಸು, ಕಾಲ ಮತ್ತು ದಿಕ್ಕುಗಳು – ಈ ಹತ್ತು ಗುಣಗಳು ನಿತ್ಯವೂ ಪ್ರಾಣಿಗಳ ದೇಹದಲ್ಲಿದ್ದುಕೊಂಡು ಅವುಗಳು ಮಾಡುವ ಒಳ್ಳೆಯ ಅಥವಾ ಕೆಟ್ಟ ಕೆಲಸಗಳನ್ನು ನೋಡುತ್ತಾ ಇರುತ್ತವೆ.
13002074a ಯಥೈಷಾ ನಾನೃತಾ ವಾಣೀ ಮಯಾದ್ಯ ಸಮುದಾಹೃತಾ।
13002074c ತೇನ ಸತ್ಯೇನ ಮಾಂ ದೇವಾಃ ಪಾಲಯಂತು ದಹಂತು ವಾ।।
ಇಂದು ನಾನು ಸಂತೋಷದಿಂದ ಆಡಿದ ಈ ಮಾತು ಸತ್ಯವಾಗಿದ್ದರೆ ದೇವತೆಗಳು ನನ್ನನ್ನು ಪರಿಪಾಲಿಸಲಿ ಅಥವಾ ಸುಳ್ಳಾಗಿದ್ದರೆ ದಹಿಸಲಿ.”
13002075a ತತೋ ನಾದಃ ಸಮಭವದ್ದಿಕ್ಷು ಸರ್ವಾಸು ಭಾರತ।
13002075c ಅಸಕೃತ್ಸತ್ಯಮಿತ್ಯೇವ ನೈತನ್ಮಿಥ್ಯೇತಿ ಸರ್ವಶಃ।।
ಭಾರತ! ಆಗ “ಇವನು ಸತ್ಯವನ್ನೇ ಹೇಳಿದ್ದಾನೆ. ಇದರಲ್ಲಿ ಸ್ವಲ್ಪವೂ ಸುಳ್ಳಿಲ್ಲ!” ಎಂದು ಎಲ್ಲ ದಿಕ್ಕುಗಳಿಂದ ಹಲವಾರು ನಾದಗಳು ಕೇಳಿಬಂದವು.
13002076a ಉಟಜಾತ್ತು ತತಸ್ತಸ್ಮಾನ್ನಿಶ್ಚಕ್ರಾಮ ಸ ವೈ ದ್ವಿಜಃ।
13002076c ವಪುಷಾ ಖಂ ಚ ಭೂಮಿಂ ಚ ವ್ಯಾಪ್ಯ ವಾಯುರಿವೋದ್ಯತಃ।।
13002077a ಸ್ವರೇಣ ವಿಪ್ರಃ ಶೈಕ್ಷೇಣ ತ್ರೀಽಲ್ಲೋಕಾನನುನಾದಯನ್।
13002077c ಉವಾಚ ಚೈನಂ ಧರ್ಮಜ್ಞಂ ಪೂರ್ವಮಾಮಂತ್ರ್ಯ ನಾಮತಃ।।
ಆಗ ಒಳಗಿದ್ದ ಆ ದ್ವಿಜನು ಹೊರಬಂದನು. ವಾಯುವಿನಂತೆಯೇ ಅವನು ತನ್ನ ಶರೀರದಿಂದ ಭೂಮ್ಯಾಕಾಶಗಳೆರಡನ್ನೂ ವ್ಯಾಪಿಸಿದ್ದನು. ಆ ವಿಪ್ರನು ಶಿಕ್ಷಾಸ್ವರದಲ್ಲಿ ಮೂರು ಲೋಕಗಳನ್ನೂ ಮೊಳಗಿಸುತ್ತಾ ಮೊದಲು ಧರ್ಮಜ್ಞ ಸುದರ್ಶನನ ಹೆಸರನ್ನು ಹೇಳಿ ಸಂಬೋಧಿಸಿ ಹೇಳಿದನು:
13002078a ಧರ್ಮೋಽಹಮಸ್ಮಿ ಭದ್ರಂ ತೇ ಜಿಜ್ಞಾಸಾರ್ಥಂ ತವಾನಘ।
13002078c ಪ್ರಾಪ್ತಃ ಸತ್ಯಂ ಚ ತೇ ಜ್ಞಾತ್ವಾ ಪ್ರೀತಿರ್ಮೇ ಪರಮಾ ತ್ವಯಿ।।
“ಅನಘ! ನಾನು ಧರ್ಮ! ನಿನಗೆ ಮಂಗಳವಾಗಲಿ! ನಿನ್ನನ್ನು ಪರೀಕ್ಷಿಸಲು ಬಂದಿದ್ದೆ. ನಿನ್ನ ಈ ಸತ್ಯವನ್ನು ತಿಳಿದು ನಿನ್ನ ಮೇಲೆ ಪರಮ ಪ್ರೀತನಾಗಿದ್ದೇನೆ.
13002079a ವಿಜಿತಶ್ಚ ತ್ವಯಾ ಮೃತ್ಯುರ್ಯೋಽಯಂ ತ್ವಾಮನುಗಚ್ಚತಿ।
13002079c ರಂಧ್ರಾನ್ವೇಷೀ ತವ ಸದಾ ತ್ವಯಾ ಧೃತ್ಯಾ ವಶೀಕೃತಃ।।
ನಿನ್ನಲ್ಲಿ ನ್ಯೂನತೆಯನ್ನು ಹುಡುಕುತ್ತಾ ನಿನ್ನ ಹಿಂದೆಯೇ ಬರುತ್ತಿರುವ ಮೃತ್ಯುವನ್ನು ನೀನು ಜಯಿಸಿದ್ದೀಯೆ. ಧೈರ್ಯದಿಂದ ಅವನನ್ನು ನೀನು ವಶಪಡಿಸಿಕೊಂಡಿರುವೆ.
13002080a ನ ಚಾಸ್ತಿ ಶಕ್ತಿಸ್ತ್ರೈಲೋಕ್ಯೇ ಕಸ್ಯ ಚಿತ್ಪುರುಷೋತ್ತಮ।
13002080c ಪತಿವ್ರತಾಮಿಮಾಂ ಸಾಧ್ವೀಂ ತವೋದ್ವೀಕ್ಷಿತುಮಪ್ಯುತ।।
ಪುರುಷೋತ್ತಮ! ಮೂರು ಲೋಕಗಳಲ್ಲಿ ಯಾರಿಗೇ ಆಗಲೀ ಪತಿವ್ರತೆಯಾಗಿರುವ ಈ ಸಾಧ್ವಿಯನ್ನು ಕಣ್ಣೆತ್ತಿ ನೋಡಲೂ ಕೂಡ ಶಕ್ತಿಯಿಲ್ಲ.
13002081a ರಕ್ಷಿತಾ ತ್ವದ್ಗುಣೈರೇಷಾ ಪತಿವ್ರತಗುಣೈಸ್ತಥಾ।
13002081c ಅಧೃಷ್ಯಾ ಯದಿಯಂ ಬ್ರೂಯಾತ್ತಥಾ ತನ್ನಾನ್ಯಥಾ ಭವೇತ್।।
ನಿನ್ನ ಗುಣಗಳು ಮತ್ತು ತನ್ನ ಪತಿವ್ರತಗುಣಗಳಿಂದ ರಕ್ಷಿತಳಾದ ಇವಳು ಏನನ್ನೇ ಹೇಳಿದರೂ ಅದು ಸತ್ಯವಾಗುತ್ತದೆ. ಅನ್ಯಥಾ ಆಗುವುದಿಲ್ಲ.
13002082a ಏಷಾ ಹಿ ತಪಸಾ ಸ್ವೇನ ಸಂಯುಕ್ತಾ ಬ್ರಹ್ಮವಾದಿನೀ।
13002082c ಪಾವನಾರ್ಥಂ ಚ ಲೋಕಸ್ಯ ಸರಿಚ್ಚ್ರೇಷ್ಠಾ ಭವಿಷ್ಯತಿ।।
ತನ್ನದೇ ತಪಸ್ಸಿನಿಂದ ಸಂಯುಕ್ತಳಾಗಿರುವ ಈ ಬ್ರಹ್ಮವಾದಿನಿಯು ಲೋಕವನ್ನು ಪಾವನಗೊಳಿಸಲೋಸುಗ ಶ್ರೇಷ್ಠ ನದಿಯಾಗುವಳು.
13002083a ಅರ್ಧೇನೌಘವತೀ ನಾಮ ತ್ವಾಮರ್ಧೇನಾನುಯಾಸ್ಯತಿ।
13002083c ಶರೀರೇಣ ಮಹಾಭಾಗಾ ಯೋಗೋ ಹ್ಯಸ್ಯಾ ವಶೇ ಸ್ಥಿತಃ।।
ಅರ್ಧ ಶರೀರದಿಂದ ಇವಳು ಓಘವತೀ ಎಂಬ ನದಿಯಾಗುತ್ತಾಳೆ. ಇನ್ನೊಂದು ಅರ್ಧದಿಂದ ನಿನ್ನ ಸೇವೆಗೈಯುತ್ತಾಳೆ. ಯೋಗವು ಈ ಮಹಾಭಾಗೆಯ ವಶದಲ್ಲಿರುತ್ತದೆ.
13002084a ಅನಯಾ ಸಹ ಲೋಕಾಂಶ್ಚ ಗಂತಾಸಿ ತಪಸಾರ್ಜಿತಾನ್।
13002084c ಯತ್ರ ನಾವೃತ್ತಿಮಭ್ಯೇತಿ ಶಾಶ್ವತಾಂಸ್ತಾನ್ಸನಾತನಾನ್।।
ಇವಳೊಂದಿಗೆ ನೀನು ಕೂಡ ತಪಸ್ಸಿನಿಂದ ಗಳಿಸಿದ ಈ ಪ್ರಪಂಚಕ್ಕೆ ಹಿಂದುರುಗಬೇಕಾಗದ ಶಾಶ್ವತ ಸನಾತನ ಲೋಕಗಳಿಗೆ ಹೋಗುತ್ತೀಯೆ.
13002085a ಅನೇನ ಚೈವ ದೇಹೇನ ಲೋಕಾಂಸ್ತ್ವಮಭಿಪತ್ಸ್ಯಸೇ।
13002085c ನಿರ್ಜಿತಶ್ಚ ತ್ವಯಾ ಮೃತ್ಯುರೈಶ್ವರ್ಯಂ ಚ ತವೋತ್ತಮಮ್।।
ನಿನ್ನ ಈ ದೇಹದಿಂದಲೇ ನೀನು ಲೋಕಗಳಿಗೆ ಹೋಗುತ್ತೀಯೆ. ನೀನು ಮೃತ್ಯುವನ್ನು ಜಯಿಸಿದ್ದೀಯೆ. ಉತ್ತಮ ಐಶ್ವರ್ಯವು ನಿನ್ನದಾಗುತ್ತದೆ.
13002086a ಪಂಚ ಭೂತಾನ್ಯತಿಕ್ರಾಂತಃ ಸ್ವವೀರ್ಯಾಚ್ಚ ಮನೋಭವಃ।
13002086c ಗೃಹಸ್ಥಧರ್ಮೇಣಾನೇನ ಕಾಮಕ್ರೋಧೌ ಚ ತೇ ಜಿತೌ।।
ನೀನು ನಿನ್ನ ವೀರ್ಯಾತಿಶಯದಿಂದ ಪಂಚಭೂತಗಳನ್ನೂ ಅತಿಕ್ರಮಿಸಿ ಮನಸ್ಸಿನ ವೇಗದಲ್ಲಿ ಪ್ರಯಾಣಮಾಡಲೂ ಸಮರ್ಥನಾಗುವೆ. ಈ ಗೃಹಸ್ಥಧರ್ಮದಿಂದ ನೀನು ಕಾಮ-ಕ್ರೋಧಗಳನ್ನೂ ಜಯಿಸಿದ್ದೀಯೆ.
13002087a ಸ್ನೇಹೋ ರಾಗಶ್ಚ ತಂದ್ರೀ ಚ ಮೋಹೋ ದ್ರೋಹಶ್ಚ ಕೇವಲಃ।
13002087c ತವ ಶುಶ್ರೂಷಯಾ ರಾಜನ್ರಾಜಪುತ್ರ್ಯಾ ವಿನಿರ್ಜಿತಾಃ।।
ರಾಜನ್! ನಿನ್ನ ಶುಶ್ರೂಷೆಯಿಂದ ಈ ರಾಜಪುತ್ರಿಯು ಸ್ನೇಹ, ಅನುರಾಗ, ಆಲಸ್ಯ, ಮೋಹ ಮತ್ತು ದ್ರೋಹ ಇವೇ ಮೊದಲಾದವುಗಳನ್ನು ಗೆದ್ದಿದ್ದಾಳೆ.””
13002088 ಭೀಷ್ಮ ಉವಾಚ 13002088a ಶುಕ್ಲಾನಾಂ ತು ಸಹಸ್ರೇಣ ವಾಜಿನಾಂ ರಥಮುತ್ತಮಮ್।
13002088c ಯುಕ್ತಂ ಪ್ರಗೃಹ್ಯ ಭಗವಾನ್ವ್ಯವಸಾಯೋ ಜಗಾಮ ತಮ್।।
ಭೀಷ್ಮನು ಹೇಳಿದನು: “ಆಗ ಭಗವಾನನು ಸಹಸ್ರ ಕುದುರೆಗಳನ್ನು ಕಟ್ಟಿದ್ದ ಉತ್ತಮ ರಥದಲ್ಲಿ ಅವರಿಬ್ಬರನ್ನೂ ಕರೆದುಕೊಂಡು ಹೋದನು.
13002089a ಮೃತ್ಯುರಾತ್ಮಾ ಚ ಲೋಕಾಶ್ಚ ಜಿತಾ ಭೂತಾನಿ ಪಂಚ ಚ।
13002089c ಬುದ್ಧಿಃ ಕಾಲೋ ಮನೋ ವ್ಯೋಮ ಕಾಮಕ್ರೋಧೌ ತಥೈವ ಚ।।
ಹೀಗೆ ಸುದರ್ಶನನು ಮೃತ್ಯು, ಆತ್ಮ, ಲೋಕಗಳು. ಪಂಚಭೂತಗಳು, ಬುದ್ಧಿ, ಕಾಲ, ಮನಸ್ಸು, ಆಕಾಶ, ಮತ್ತು ಕಾಮ-ಕ್ರೋಧಗಳನ್ನೂ ಗೆದ್ದನು.
13002090a ತಸ್ಮಾದ್ಗೃಹಾಶ್ರಮಸ್ಥಸ್ಯ ನಾನ್ಯದ್ದೈವತಮಸ್ತಿ ವೈ।
13002090c ಋತೇಽತಿಥಿಂ ನರವ್ಯಾಘ್ರ ಮನಸೈತದ್ವಿಚಾರಯ।।
ನರವ್ಯಾಘ್ರ! ಆದುದರಿಂದ ಗೃಹಸ್ಥಾಶ್ರಮಸ್ಥನಿಗೆ ಅತಿಥಿಯನ್ನು ಬಿಟ್ಟು ಬೇರೆ ಯಾವ ದೈವವೂ ಇಲ್ಲ. ಇದರ ಕುರಿತು ಮನಸ್ಸಿನಲ್ಲಿ ವಿಚಾರಿಸಬೇಡ.
13002091a ಅತಿಥಿಃ ಪೂಜಿತೋ ಯಸ್ಯ ಧ್ಯಾಯತೇ ಮನಸಾ ಶುಭಮ್।
13002091c ನ ತತ್ಕ್ರತುಶತೇನಾಪಿ ತುಲ್ಯಮಾಹುರ್ಮನೀಷಿಣಃ।।
ಮನಸ್ಸಿನಲ್ಲಿ ಶುಭವನ್ನೇ ಧ್ಯಾನಿಸುತ್ತಾ ಮಾಡಿದ ಅತಿಥಿಪೂಜನೆಗೆ ನೂರು ಕ್ರತುಗಳೂ ಸಮವಲ್ಲ ಎಂದು ಮನೀಷಿಣರು ಹೇಳುತ್ತಾರೆ.
13002092a ಪಾತ್ರಂ ತ್ವತಿಥಿಮಾಸಾದ್ಯ ಶೀಲಾಢ್ಯಂ ಯೋ ನ ಪೂಜಯೇತ್।
13002092c ಸ ದತ್ತ್ವಾ ಸುಕೃತಂ ತಸ್ಯ ಕ್ಷಪಯೇತ ಹ್ಯನರ್ಚಿತಃ।।
ಗೃಹಸ್ಥನು ಸುಪಾತ್ರನೂ ಶೀಲವಂತನೂ ಆದ ಅತಿಥಿಯು ಬಂದಾಗ ಅವನನ್ನು ಪೂಜಿಸದಿದ್ದರೆ ಆ ಅತಿಥಿಯು ತಾನು ಮಾಡಿದ ಪಾಪಗಳನ್ನು ಗೃಹಸ್ಥನಿಗೆ ಕೊಟ್ಟು ಗೃಹಸ್ಥನ ಪುಣ್ಯಗಳನ್ನು ಪಡೆದುಕೊಂಡು ಹೋಗುತ್ತಾನೆ.
13002093a ಏತತ್ತೇ ಕಥಿತಂ ಪುತ್ರ ಮಯಾಖ್ಯಾನಮನುತ್ತಮಮ್।
13002093c ಯಥಾ ಹಿ ವಿಜಿತೋ ಮೃತ್ಯುರ್ಗೃಹಸ್ಥೇನ ಪುರಾಭವತ್।।
ಪುತ್ರ! ಹೀಗೆ ನಾನು ಹಿಂದೆ ನಡೆದಂತೆ ಗೃಹಸ್ಥನು ಮೃತ್ಯುವನ್ನು ಗೆದ್ದ ಈ ಅನುತ್ತಮ ಆಖ್ಯಾನವನ್ನು ಹೇಳಿದ್ದೇನೆ.
13002094a ಧನ್ಯಂ ಯಶಸ್ಯಮಾಯುಷ್ಯಮಿದಮಾಖ್ಯಾನಮುತ್ತಮಮ್।
13002094c ಬುಭೂಷತಾಭಿಮಂತವ್ಯಂ ಸರ್ವದುಶ್ಚರಿತಾಪಹಮ್।।
ಈ ಉತ್ತಮ ಆಖ್ಯಾನವು ಧನ, ಯಶಸ್ಸು, ಆಯುಷ್ಯಗಳನ್ನು ನೀಡುತ್ತದೆ. ಸಕಲ ದುಷ್ಕರ್ಮಗಳನ್ನೂ ನಾಶಪಡಿಸುತ್ತದೆ. ಏಳ್ಗೆಯನ್ನು ಬಯಸುವವನು ಇದನ್ನು ಕೇಳಬೇಕು.
13002095a ಯ ಇದಂ ಕಥಯೇದ್ವಿದ್ವಾನಹನ್ಯಹನಿ ಭಾರತ।
13002095c ಸುದರ್ಶನಸ್ಯ ಚರಿತಂ ಪುಣ್ಯಾಽಲ್ಲೋಕಾನವಾಪ್ನುಯಾತ್।।
ಭಾರತ! ಸುದರ್ಶನನ ಈ ಚರಿತೆಯನ್ನು ಪ್ರತಿದಿನವೂ ಹೇಳುವ ವಿದ್ವಾನನು ಪುಣ್ಯ ಲೋಕಗಳನ್ನು ಪಡೆಯುತ್ತಾನೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಸುದರ್ಶನೋಪಾಖ್ಯಾನೇ ದ್ವಿತೀಯೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಸುದರ್ಶನೋಪಾಖ್ಯಾನ ಎನ್ನುವ ಎರಡನೇ ಅಧ್ಯಾಯವು.