ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 1
ಸಾರ
ಭೀಷ್ಮಾದಿಗಳ ಸಂಹಾರಕ್ಕೆ ಕಾರಣನಾದ ತನಗೆ ಶಾಂತಿಯೆನ್ನುವುದೇ ಇಲ್ಲವಾಗಿದೆ ಎಂದು ದುಃಖಿತ ಯುಧಿಷ್ಠಿರನು ಹೇಳಲು (1-7) ಭೀಷ್ಮನು ಮೃತ್ಯು-ಗೌತಮ್ಯಾದಿಗಳ ಸಂವಾದವನ್ನು ಉದಾಹರಿಸಿ ತಮ್ಮದೇ ಕರ್ಮಗಳಿಗನುಸಾರವಾಗಿ ಕಾಲನ ವಶರಾಗಿ ಯುದ್ಧದಲ್ಲಿ ಪಾರ್ಥಿವರು ಮಡಿದರೆಂದೂ, ಅದಕ್ಕೆ ಯುಧಿಷ್ಠಿರನು ಕಾರಣನಲ್ಲವೆಂದು ಸಂತವಿಸಿದುದು (8-76).
13001001 ಯುಧಿಷ್ಠಿರ ಉವಾಚ।
13001001a ಶಮೋ ಬಹುವಿಧಾಕಾರಃ ಸೂಕ್ಷ್ಮ ಉಕ್ತಃ ಪಿತಾಮಹ।
13001001c ನ ಚ ಮೇ ಹೃದಯೇ ಶಾಂತಿರಸ್ತಿ ಕೃತ್ವೇದಮೀದೃಶಮ್।
ಯುಧಿಷ್ಠಿರನು ಹೇಳಿದನು: “ಪಿತಾಮಹ! ಸೂಕ್ಷ್ಮವಾದ ಶಾಂತಿಯ ಕುರಿತು ಬಹುವಿಧಾಕಾರವಾಗಿ ಹೇಳಿದ್ದೀಯೆ. ಆದರೆ ಇದನ್ನು ಮಾಡಿಯೂ ನನ್ನ ಹೃದಯಕ್ಕೆ ಶಾಂತಿಯು ಇಲ್ಲವಾಗಿದೆ.
13001002a ಅಸ್ಮಿನ್ನರ್ಥೇ ಬಹುವಿಧಾ ಶಾಂತಿರುಕ್ತಾ ತ್ವಯಾನಘ।
13001002c ಸ್ವಕೃತೇ ಕಾ ನು ಶಾಂತಿಃ ಸ್ಯಾಚ್ಚಮಾದ್ಬಹುವಿಧಾದಪಿ।।
ಅನಘ! ಇದರ ಸಲುವಾಗಿ ನೀನು ಬಹುವಿಧವಾಗಿ ಶಾಂತಿಯ ಕುರಿತು ಹೇಳಿರುವೆ. ಬಹುವಿಧಗಳಿಂದ ಶಾಂತಿಯನ್ನು ಪಡೆಯಬಹುದಾದರೂ ತಾನೇ ಮಾಡಿದ ಕರ್ಮಗಳಿಂದ ಯಾವ ಶಾಂತಿಯು ದೊರೆಯಬಲ್ಲದು?
13001003a ಶರಾಚಿತಶರೀರಂ ಹಿ ತೀವ್ರವ್ರಣಮುದೀಕ್ಷ್ಯ ಚ।
13001003c ಶಮಂ ನೋಪಲಭೇ ವೀರ ದುಷ್ಕೃತಾನ್ಯೇವ ಚಿಂತಯನ್।।
ವೀರ! ಶರಗಳಿಂದ ಚುಚ್ಚಲ್ಪಟ್ಟು ತೀವ್ರ ಗಾಯಗೊಂಡಿರುವ ನಿನ್ನನ್ನು ನೋಡಿ ನನ್ನ ದುಷ್ಕೃತಗಳ ಕುರಿತೇ ಚಿಂತಿಸುತ್ತಿರುವ ನನಗೆ ಶಾಂತಿಯು ದೊರೆಯದಾಗಿದೆ.
13001004a ರುಧಿರೇಣಾವಸಿಕ್ತಾಂಗಂ ಪ್ರಸ್ರವಂತಂ ಯಥಾಚಲಮ್।
13001004c ತ್ವಾಂ ದೃಷ್ಟ್ವಾ ಪುರುಷವ್ಯಾಘ್ರ ಸೀದೇ ವರ್ಷಾಸ್ವಿವಾಂಬುಜಮ್।।
ಪುರುಷವ್ಯಾಘ್ರ! ಗರಿಕಾದಿ ಧಾತುಗಳನ್ನು ಸುರಿಸುತ್ತಿರುವ ಪರ್ವತದಂತೆ ರಕ್ತದಿಂದ ತೋಯ್ದುಹೋಗಿರುವ ನಿನ್ನ ಅಂಗಾಂಗಗಳನ್ನು ನೋಡಿ ಮಳೆಯಲ್ಲಿ ಸಿಲುಕಿ ಮುದುಡಿಹೋಗುತ್ತಿರುವ ಕಮಲದಂತೆ ನಾನು ಮುದುಡಿದ್ದೇನೆ.
13001005a ಅತಃ ಕಷ್ಟತರಂ ಕಿಂ ನು ಮತ್ಕೃತೇ ಯತ್ಪಿತಾಮಹಃ।
13001005c ಇಮಾಮವಸ್ಥಾಂ ಗಮಿತಃ ಪ್ರತ್ಯಮಿತ್ರೈ ರಣಾಜಿರೇ।
13001005e ತಥೈವಾನ್ಯೇ ನೃಪತಯಃ ಸಹಪುತ್ರಾಃ ಸಬಾಂಧವಾಃ।।
ಪಿತಾಮಹ! ನನ್ನ ಸಲುವಾಗಿ ರಣಾಜಿರದಲ್ಲಿ ಶತ್ರುಗಳಿಂದ ನಿನಗೆ ಮತ್ತು ಪುತ್ರ-ಬಾಂಧವರೊಂದಿಗೆ ಅನ್ಯ ನೃಪತಿಗಳಿಗೆ ಈ ಅವಸ್ಥೆಯುಂಟಾಯಿತು ಎಂದರೆ ಇದಕ್ಕಿಂತಲೂ ಕಷ್ಟತರವಾದುದು ಬೇರೆ ಏನಿದೆ?
13001006a ವಯಂ ಹಿ ಧಾರ್ತರಾಷ್ಟ್ರಾಶ್ಚ ಕಾಲಮನ್ಯುವಶಾನುಗಾಃ।
13001006c ಕೃತ್ವೇದಂ ನಿಂದಿತಂ ಕರ್ಮ ಪ್ರಾಪ್ಸ್ಯಾಮಃ ಕಾಂ ಗತಿಂ ನೃಪ।।
ನೃಪ! ನಾವು ಮತ್ತು ಧಾರ್ತರಾಷ್ಟ್ರರು ಕಾಲ ಮತ್ತು ಕೋಪವಶಾನುಗರಾಗಿ ಈ ನಿಂದಿತ ಕರ್ಮವನ್ನು ಮಾಡಿದುದರಿಂದ ಯಾವ ಗತಿಯನ್ನು ಹೊಂದುತ್ತೇವೆಯೋ!
13001007a ಅಹಂ ತವ ಹ್ಯಂತಕರಃ ಸುಹೃದ್ವಧಕರಸ್ತಥಾ।
13001007c ನ ಶಾಂತಿಮಧಿಗಚ್ಚಾಮಿ ಪಶ್ಯಂಸ್ತ್ವಾಂ ದುಃಖಿತಂ ಕ್ಷಿತೌ।।
ನಾನೇ ನಿನ್ನ ಸಂಹಾರಕನು ಮತ್ತು ಹಾಗೆಯೇ ಸುಹೃದರನ್ನು ವಧಿಸಿದವನು. ಭೂಮಿಯ ಮೇಲೆ ದುಃಖಿತನಾಗಿ ಮಲಗಿರುವ ನಿನ್ನನ್ನು ನೋಡಿ ನನಗೆ ಶಾಂತಿಯೇ ದೊರೆಯುತ್ತಿಲ್ಲ.”
13001008 ಭೀಷ್ಮ ಉವಾಚ।
13001008a ಪರತಂತ್ರಂ ಕಥಂ ಹೇತುಮಾತ್ಮಾನಮನುಪಶ್ಯಸಿ।
13001008c ಕರ್ಮಣ್ಯಸ್ಮಿನ್ಮಹಾಭಾಗ ಸೂಕ್ಷ್ಮಂ ಹ್ಯೇತದತೀಂದ್ರಿಯಮ್।।
ಭೀಷ್ಮನು ಹೇಳಿದನು: “ಮಹಾಭಾಗ! ಪರತಂತ್ರನಾಗಿರುವ ನೀನು ಹೇಗೆ ತಾನೇ ನಿನ್ನನ್ನು ಇದಕ್ಕೆ ಕಾರಣನೆಂದು ಕಾಣುತ್ತಿದ್ದೀಯೆ? ಕರ್ಮವೇ ಇದಕ್ಕೆ ಸೂಕ್ಷ್ಮವೂ ಅತೀಂದ್ರಿಯವೂ ಆದ ಕಾರಣವು.
13001009a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
13001009c ಸಂವಾದಂ ಮೃತ್ಯುಗೌತಮ್ಯೋಃ ಕಾಲಲುಬ್ಧಕಪನ್ನಗೈಃ।।
ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ಈ ಮೃತ್ಯು-ಗೌತಮಿ-ಕಾಲ-ವ್ಯಾಧ ಮತ್ತು ಪನ್ನಗಗಳ ಸಂವಾದವನ್ನು ಉದಾಹರಿಸುತ್ತಾರೆ.
13001010a ಗೌತಮೀ ನಾಮ ಕೌಂತೇಯ ಸ್ಥವಿರಾ ಶಮಸಂಯುತಾ।
13001010c ಸರ್ಪೇಣ ದಷ್ಟಂ ಸ್ವಂ ಪುತ್ರಮಪಶ್ಯದ್ಗತಚೇತನಮ್।।
ಕೌಂತೇಯ! ಗೌತಮೀ ಎಂಬ ಹೆಸರಿನ ಶಾಂತಸ್ವಭಾವದ ವೃದ್ಧೆಯು ತನ್ನ ಪುತ್ರನು ಸರ್ಪದಿಂದ ಕಚ್ಚಲ್ಪಟ್ಟು ಮರಣಹೊಂದಿದುದನ್ನು ನೋಡಿದಳು.
13001011a ಅಥ ತಂ ಸ್ನಾಯುಪಾಶೇನ ಬದ್ಧ್ವಾ ಸರ್ಪಮಮರ್ಷಿತಃ।
13001011c ಲುಬ್ಧಕೋಽರ್ಜುನಕೋ ನಾಮ ಗೌತಮ್ಯಾಃ ಸಮುಪಾನಯತ್।।
ಆಗ ಕುಪಿತನಾದ ಅರ್ಜುನಕ ಎಂಬ ಹೆಸರಿನ ವ್ಯಾಧನು ಆ ಸರ್ಪವನ್ನು ನೆಣೆಯಿಂದ ಕಟ್ಟಿ ಅದನ್ನು ಗೌತಮಿಯ ಸಮೀಪಕ್ಕೆ ತಂದನು.
13001012a ತಾಂ ಚಾಬ್ರವೀದಯಂ ತೇ ಸ ಪುತ್ರಹಾ ಪನ್ನಗಾಧಮಃ।
13001012c ಬ್ರೂಹಿ ಕ್ಷಿಪ್ರಂ ಮಹಾಭಾಗೇ ವಧ್ಯತಾಂ ಕೇನ ಹೇತುನಾ।।
ಅವನು ಅವಳಿಗೆ ಹೀಗೆ ಹೇಳಿದನು: “ಮಹಾಭಾಗೇ! ಈ ನೀಚ ಸರ್ಪವೇ ನಿನ್ನ ಮಗನನ್ನು ಕೊಂದಿದೆ. ಇದನ್ನು ಹೇಗೆ ಕೊಲ್ಲಬೇಕೆಂದು ಬೇಗನೆ ಹೇಳು!
13001013a ಅಗ್ನೌ ಪ್ರಕ್ಷಿಪ್ಯತಾಮೇಷ ಚ್ಚಿದ್ಯತಾಂ ಖಂಡಶೋಽಪಿ ವಾ।
13001013c ನ ಹ್ಯಯಂ ಬಾಲಹಾ ಪಾಪಶ್ಚಿರಂ ಜೀವಿತುಮರ್ಹತಿ।।
ಇದನ್ನು ಬೆಂಕಿಯಲ್ಲಿ ಹಾಕಲೇ? ಅಥವಾ ತುಂಡುತುಂಡಾಗಿ ಕತ್ತರಿಸಲೇ? ಬಾಲಕನನ್ನು ಕೊಂದ ಈ ಪಾಪಿಯು ಹೆಚ್ಚುಕಾಲ ಬದುಕಿರಬಾರದು!”
13001014 ಗೌತಮ್ಯುವಾಚ।
13001014a ವಿಸೃಜೈನಮಬುದ್ಧಿಸ್ತ್ವಂ ನ ವಧ್ಯೋಽರ್ಜುನಕ ತ್ವಯಾ।
13001014c ಕೋ ಹ್ಯಾತ್ಮಾನಂ ಗುರುಂ ಕುರ್ಯಾತ್ಪ್ರಾಪ್ತವ್ಯೇ ಸತಿ ಚಿಂತಯನ್।।
ಗೌತಮಿಯು ಹೇಳಿದಳು: “ಅರ್ಜುನಕ! ಈ ಮೂಢಬುದ್ಧಿಯನ್ನು ತೊರೆ! ಇದನ್ನು ನೀನು ವಧಿಸಬೇಡ! ಯಾವುದು ಹೇಗೆ ನಡೆಯಬೇಕೋ ಅದು ಹಾಗೆಯೇ ನಡೆಯುತ್ತದೆ. ಇದನ್ನು ತಿಳಿಯದೇ ಯಾರು ತಾನೇ ತನ್ನನ್ನು ಪಾಪದಿಂದ ಭಾರವುಳ್ಳವನನ್ನಾಗಿ ಮಾಡಿಕೊಳ್ಳುತ್ತಾನೆ?
13001015a ಪ್ಲವಂತೇ ಧರ್ಮಲಘವೋ ಲೋಕೇಽಂಭಸಿ ಯಥಾ ಪ್ಲವಾಃ।
13001015c ಮಜ್ಜಂತಿ ಪಾಪಗುರವಃ ಶಸ್ತ್ರಂ ಸ್ಕನ್ನಮಿವೋದಕೇ।।
ಲೋಕದಲ್ಲಿ ಧರ್ಮದಿಂದ ಹಗುರವಾದವರು ಸಮುದ್ರದಲ್ಲಿನ ನೌಕೆಯಂತೆ ಈ ಭವಸಾಗರವನ್ನು ದಾಟುತ್ತಾರೆ. ಪಾಪದಿಂದ ಭಾರವಾಗಿರುವವರು ನೀರಿನಲ್ಲಿ ಶಸ್ತ್ರವು ಮುಳುಗಿಹೋಗುವಂತೆ ಬೇಗನೇ ಮುಳುಗಿಹೋಗುತ್ತಾರೆ.
13001016a ನ ಚಾಮೃತ್ಯುರ್ಭವಿತಾ ವೈ ಹತೇಽಸ್ಮಿನ್ ಕೋ ವಾತ್ಯಯಃ ಸ್ಯಾದಹತೇಽಸ್ಮಿನ್ಜನಸ್ಯ।
13001016c ಅಸ್ಯೋತ್ಸರ್ಗೇ ಪ್ರಾಣಯುಕ್ತಸ್ಯ ಜಂತೋರ್ ಮೃತ್ಯೋರ್ಲೋಕಂ ಕೋ ನು ಗಚ್ಚೇದನಂತಮ್।।
ಇದನ್ನು ಕೊಲ್ಲುವುದರಿಂದ ನನ್ನ ಮಗನು ಜೀವಿತನಾಗುವುದಿಲ್ಲ. ಇದು ಬದುಕಿದ್ದರೆ ನಿನಗಾಗುವ ಹಾನಿಯಾದರೂ ಏನು? ಪ್ರಾಣದಿಂದ ಈ ಸರ್ಪವನ್ನು ಬಿಟ್ಟುಬಿಟ್ಟರೆ ನಮ್ಮಲ್ಲಿ ಯಾರು ತಾನೇ ಅನಂತವಾದ ಮೃತ್ಯುಲೋಕಕ್ಕೆ ಹೋಗುತ್ತಾರೆ?”
13001017 ಲುಬ್ಧಕ ಉವಾಚ।
13001017a ಜಾನಾಮ್ಯೇವಂ ನೇಹ ಗುಣಾಗುಣಜ್ಞಾಃ ಸರ್ವೇ ನಿಯುಕ್ತಾ ಗುರವೋ ವೈ ಭವಂತಿ।
13001017c ಸ್ವಸ್ಥಸ್ಯೈತೇ ತೂಪದೇಶಾ ಭವಂತಿ ತಸ್ಮಾತ್ಕ್ಷುದ್ರಂ ಸರ್ಪಮೇನಂ ಹನಿಷ್ಯೇ।।
ವ್ಯಾಧನು ಹೇಳಿದನು: “ಗುಣಾಗುಣಗಳನ್ನು ತಿಳಿದಿರುವ ದೇವಿ! ಕಷ್ಟದಲ್ಲಿ ಎಲ್ಲರೂ ದುಃಖದಿಂದ ಭಾರವಾದ ಮನಸ್ಸುಳ್ಳವರಾಗುತ್ತಾರೆ ಎಂದು ತಿಳಿದಿದ್ದೇನೆ. ಇಂತಹ ಉಪದೇಶಗಳು ಸ್ವಸ್ಥಚಿತ್ತರಾದವರಿಗೆ ಮಾತ್ರ ಹಿಡಿಸುತ್ತವೆ. ನಿನ್ನ ದುಃಖದ ನಿವಾರಣೆಗಾಗಿಯೇ ಈ ಕ್ಷುದ್ರ ಸರ್ಪವನ್ನು ಕೊಲ್ಲುತ್ತೇನೆ.
13001018a ಸಮೀಪ್ಸಂತಃ ಕಾಲಯೋಗಂ ತ್ಯಜಂತಿ ಸದ್ಯಃ ಶುಚಂ ತ್ವರ್ಥವಿದಸ್ತ್ಯಜಂತಿ।
13001018c ಶ್ರೇಯಃ ಕ್ಷಯಃ ಶೋಚತಾಂ ನಿತ್ಯಶೋ ಹಿ ತಸ್ಮಾತ್ತ್ಯಾಜ್ಯಂ ಜಹಿ ಶೋಕಂ ಹತೇಽಸ್ಮಿನ್।।
ಶೋಕಿಸುವವರು ಕಾಲಯೋಗವನ್ನು ತ್ಯಜಿಸುತ್ತಾರೆ. ಅರ್ಥವಿದರು ಶುಚಿಯಾಗಿರುವುದನ್ನು ಸದ್ಯವೇ ತ್ಯಜಿಸುತ್ತಾರೆ. ನಿತ್ಯವೂ ಶೋಕಿಸುವವರಿಗೆ ಶ್ರೇಯಸ್ಸು ಕ್ಷೀಣವಾಗುತ್ತದೆ. ಆದುದರಿಂದ ಇದನ್ನು ಕೊಂದು ನಿನ್ನ ಶೋಕವನ್ನು ತೊರೆ.”
13001019 ಗೌತಮ್ಯುವಾಚ।
13001019a ನ ಚೈವಾರ್ತಿರ್ವಿದ್ಯತೇಽಸ್ಮದ್ವಿಧಾನಾಂ ಧರ್ಮಾರಾಮಃ ಸತತಂ ಸಜ್ಜನೋ ಹಿ।
13001019c ನಿತ್ಯಾಯಸ್ತೋ ಬಾಲಜನೋ ನ ಚಾಸ್ತಿ ಧರ್ಮೋ ಹ್ಯೇಷ ಪ್ರಭವಾಮ್ಯಸ್ಯ ನಾಹಮ್।।
ಗೌತಮಿಯು ಹೇಳಿದಳು: “ನಮ್ಮಂಥವರಿಗೆ ಯಾವುದೇ ಹಾನಿಗಳಿಂದ ಪೀಡೆಯೆನಿಸುವುದಿಲ್ಲ. ಸಜ್ಜನರು ಸತತವಾಗಿ ಧರ್ಮದಲ್ಲಿಯೇ ನಿರತರಾಗಿರುತ್ತಾರೆ. ಈ ಬಾಲಕನು ನಿತ್ಯವೂ ಇರುವವನಾಗಿರಲಿಲ್ಲ. ಧರ್ಮವೇ ಇವನನ್ನು ಹುಟ್ಟಿಸಿತು. ನಾನಲ್ಲ.
13001020a ನ ಬ್ರಾಹ್ಮಣಾನಾಂ ಕೋಪೋಽಸ್ತಿ ಕುತಃ ಕೋಪಾಚ್ಚ ಯಾತನಾ।
13001020c ಮಾರ್ದವಾತ್ಕ್ಷಮ್ಯತಾಂ ಸಾಧೋ ಮುಚ್ಯತಾಮೇಷ ಪನ್ನಗಃ।।
ಬ್ರಾಹ್ಮಣರಿಗೆ ಕೋಪವೆಂಬುವುದಿರುವುದಿಲ್ಲ. ಹಾಗಿದ್ದಾಗ ಅವರು ಬೇರೆಯವರಿಗೆ ಕೋಪದ ಯಾತನೆಯನ್ನು ಹೇಗೆ ನೀಡಬಲ್ಲರು? ಸಾಧು! ಅದುದರಿಂದ ಮೃದುತ್ವದಿಂದ ಈ ಹಾವನ್ನು ಕ್ಷಮಿಸಿ ಬಿಟ್ಟುಬಿಡು!”
13001021 ಲುಬ್ಧಕ ಉವಾಚ।
13001021a ಹತ್ವಾ ಲಾಭಃ ಶ್ರೇಯ ಏವಾವ್ಯಯಂ ಸ್ಯಾತ್ ಸದ್ಯೋ ಲಾಭೋ ಬಲವದ್ಭಿಃ ಪ್ರಶಸ್ತಃ।
13001021c ಕಾಲಾಲ್ಲಾಭೋ ಯಸ್ತು ಸದ್ಯೋ ಭವೇತ ಹತೇ ಶ್ರೇಯಃ ಕುತ್ಸಿತೇ ತ್ವೀದೃಶೇ ಸ್ಯಾತ್।।
ವ್ಯಾಧನು ಹೇಳಿದನು: “ಇದನ್ನು ಕೊಲ್ಲುವುದರಿಂದ ಅವ್ಯಯ ಶ್ರೇಯಸ್ಸಿನ ಲಾಭವಾಗುತ್ತದೆ. ಬಲವಂತರಿಂದ ಪಡೆದ ಲಾಭವೇ ಪ್ರಶಸ್ತವಾದುದು. ಕಾಲದಿಂದ ದೊರೆಯುವ ಲಾಭವೇ ನಿಜವಾದ ಲಾಭವು. ಈ ಕುತ್ಸಿತ ಸರ್ಪವನ್ನು ಕೊಂದರೆ ನಿನಗೆ ಅಂಥಹ ಶ್ರೇಯಸ್ಸು ದೊರೆಯುತ್ತದೆ.”
13001022 ಗೌತಮ್ಯುವಾಚ।
13001022a ಕಾರ್ಥಪ್ರಾಪ್ತಿರ್ಗೃಹ್ಯ ಶತ್ರುಂ ನಿಹತ್ಯ ಕಾ ವಾ ಶಾಂತಿಃ ಪ್ರಾಪ್ಯ ಶತ್ರುಂ ನಮುಕ್ತ್ವಾ।
13001022c ಕಸ್ಮಾತ್ಸೌಮ್ಯ ಭುಜಗೇ ನ ಕ್ಷಮೇಯಂ ಮೋಕ್ಷಂ ವಾ ಕಿಂ ಕಾರಣಂ ನಾಸ್ಯ ಕುರ್ಯಾಮ್।।
ಗೌತಮಿಯು ಹೇಳಿದಳು: “ಶತ್ರುವನ್ನು ಬಂಧಿಸಿ ಕೊಲ್ಲುವುದರಿಂದ ಯಾವ ಲಾಭವು ದೊರೆಯುತ್ತದೆ? ಕೈಗೆ ಸಿಕ್ಕಿದ ಶತ್ರುವನ್ನು ಬಿಟ್ಟುಬಿಡದೇ ಇದ್ದರೆ ಯಾವ ಶಾಂತಿಯು ದೊರೆಯುತ್ತದೆ? ಸೌಮ್ಯ! ಯಾವ ಕಾರಣದಿಂದ ನಾನು ಈ ಹಾವನ್ನು ಕ್ಷಮಿಸಬಾರದು? ಅಥವಾ ಯಾವ ಕಾರಣಕ್ಕಾಗಿ ನಾನು ಇದರ ಬಿಡುಗಡೆಗೆ ಪ್ರಯತ್ನಿಸಬಾರದು?”
13001023 ಲುಬ್ಧಕ ಉವಾಚ।
13001023a ಅಸ್ಮಾದೇಕಸ್ಮಾದ್ಬಹವೋ ರಕ್ಷಿತವ್ಯಾ ನೈಕೋ ಬಹುಭ್ಯೋ ಗೌತಮಿ ರಕ್ಷಿತವ್ಯಃ।
13001023c ಕೃತಾಗಸಂ ಧರ್ಮವಿದಸ್ತ್ಯಜಂತಿ ಸರೀಸೃಪಂ ಪಾಪಮಿಮಂ ಜಹಿ ತ್ವಮ್।।
ವ್ಯಾಧನು ಹೇಳಿದನು: “ಗೌತಮಿ! ಇದೊಂದನ್ನು ಕೊಂದು ಅನೇಕ ಜೀವಗಳನ್ನು ರಕ್ಷಿಸಬಹುದು. ಅನೇಕ ಜೀವಿಗಳನ್ನು ಕೊಂದು ಒಂದೇ ಜೀವಿಯನ್ನು ರಕ್ಷಿಸಬಾರದು. ಅಪರಾಧಿಗಳನ್ನು ಧರ್ಮವಿದರು ತ್ಯಜಿಸುತ್ತಾರೆ. ನೀನೂ ಕೂಡ ಈ ಪಾಪಿ ಸರೀಸೃಪವನ್ನು ಸಂಹರಿಸು!”
13001024 ಗೌತಮ್ಯುವಾಚ।
13001024a ನಾಸ್ಮಿನ್ ಹತೇ ಪನ್ನಗೇ ಪುತ್ರಕೋ ಮೇ ಸಂಪ್ರಾಪ್ಸ್ಯತೇ ಲುಬ್ಧಕ ಜೀವಿತಂ ವೈ।
13001024c ಗುಣಂ ಚಾನ್ಯಂ ನಾಸ್ಯ ವಧೇ ಪ್ರಪಶ್ಯೇ ತಸ್ಮಾತ್ಸರ್ಪಂ ಲುಬ್ಧಕ ಮುಂಚ ಜೀವಮ್।।
ಗೌತಮಿಯು ಹೇಳಿದಳು: “ಲುಬ್ಧಕ! ಈ ಹಾವನ್ನು ಕೊಲ್ಲುವುದರಿಂದ ನನ್ನ ಪುತ್ರನು ಜೀವಿತನಾಗುತ್ತಾನೆ ಎನ್ನುವುದು ಸುಳ್ಳು! ಇದನ್ನು ವಧಿಸುವುದರಿಂದ ದೊರೆಯುವ ಅನ್ಯ ಲಾಭಗಳನ್ನೂ ನಾನು ಕಾಣುತ್ತಿಲ್ಲ. ಲುಬ್ಧಕ! ಆದುದರಿಂದ ಈ ಸರ್ಪವನ್ನು ಜೀವಂತ ಬಿಟ್ಟುಬಿಡು!”
13001025 ಲುಬ್ಧಕ ಉವಾಚ।
13001025a ವೃತ್ರಂ ಹತ್ವಾ ದೇವರಾಟ್ ಶ್ರೇಷ್ಠಭಾಗ್ವೈ ಯಜ್ಞಂ ಹತ್ವಾ ಭಾಗಮವಾಪ ಚೈವ।
13001025c ಶೂಲೀ ದೇವೋ ದೇವವೃತ್ತಂ ಕುರು ತ್ವಂ ಕ್ಷಿಪ್ರಂ ಸರ್ಪಂ ಜಹಿ ಮಾ ಭೂದ್ವಿಶಂಕಾ।।
ವ್ಯಾಧನು ಹೇಳಿದನು: “ವೃತ್ರನನ್ನು ಸಂಹರಿಸಿ ದೇವರಾಜನು ಶ್ರೇಷ್ಠತೆಗೆ ಭಾಗಿಯಾದನು. ದೇವ ಶೂಲಿಯು ಯಜ್ಞವನ್ನು ಸಂಹರಿಸಿ ಅದರ ಭಾಗವನ್ನು ಪಡೆದುಕೊಂಡನು. ನೀನೂ ಕೂಡ ದೇವತೆಗಳ ಈ ನಡತೆಯಂತೆ ಮಾಡು. ಶಂಕೆಗೊಳಗಾಗದೇ ಈ ಸರ್ಪವನ್ನು ಬೇಗನೇ ಕೊಲ್ಲು.””
13001026 ಭೀಷ್ಮ ಉವಾಚ।
13001026a ಅಸಕೃತ್ಪ್ರೋಚ್ಯಮಾನಾಪಿ ಗೌತಮೀ ಭುಜಗಂ ಪ್ರತಿ।
13001026c ಲುಬ್ಧಕೇನ ಮಹಾಭಾಗಾ ಪಾಪೇ ನೈವಾಕರೋನ್ಮತಿಮ್।।
ಭೀಷ್ಮನು ಹೇಳಿದನು: “ಭುಜಗದ ಕುರಿತು ಲುಬ್ಧಕನು ಎಷ್ಟೇ ಹೇಳಿದರೂ ಮಹಾಭಾಗೆ ಗೌತಮಿಯು ಪಾಪವನ್ನೆಸಗಲು ಮನಸ್ಸುಮಾಡಲಿಲ್ಲ.
13001027a ಈಷದುಚ್ಚ್ವಸಮಾನಸ್ತು ಕೃಚ್ಚ್ರಾತ್ಸಂಸ್ತಭ್ಯ ಪನ್ನಗಃ।
13001027c ಉತ್ಸಸರ್ಜ ಗಿರಂ ಮಂದಾಂ ಮಾನುಷೀಂ ಪಾಶಪೀಡಿತಃ।।
ಆಗ ಬಂಧನದಿಂದ ಪೀಡಿತಗೊಂಡು ನಿಧಾನವಾಗಿ ಉಸಿರಾಡುತ್ತಿದ್ದ ಆ ಸರ್ಪವು ಅತ್ಯಂತ ಕಷ್ಟದಿಂದ ಮಂದಸ್ವರದಲ್ಲಿ ಮನುಷ್ಯವಾಣಿಯಲ್ಲಿ ಹೇಳಿತು:
13001028a ಕೋ ನ್ವರ್ಜುನಕ ದೋಷೋಽತ್ರ ವಿದ್ಯತೇ ಮಮ ಬಾಲಿಶ।
13001028c ಅಸ್ವತಂತ್ರಂ ಹಿ ಮಾಂ ಮೃತ್ಯುರ್ವಿವಶಂ ಯದಚೂಚುದತ್।।
“ಬಾಲಿಶ ಅರ್ಜುನಕ! ಇದರಲ್ಲಿ ನನ್ನ ದೋಷವೇನಿದೆ? ನಾನಾದರೋ ಅಸ್ವತಂತ್ರನು. ಮೃತ್ಯುವೇ ನನ್ನನ್ನು ವಿವಶಗೊಳಿಸಿ ಈ ಕಾರ್ಯಕ್ಕೆ ಪ್ರೇರೇಪಿಸಿತು!
13001029a ತಸ್ಯಾಯಂ ವಚನಾದ್ದಷ್ಟೋ ನ ಕೋಪೇನ ನ ಕಾಮ್ಯಯಾ।
13001029c ತಸ್ಯ ತತ್ಕಿಲ್ಬಿಷಂ ಲುಬ್ಧ ವಿದ್ಯತೇ ಯದಿ ಕಿಲ್ಬಿಷಮ್।।
ಮೃತ್ಯುವಿನ ಮಾತಿನಂತೆಯೇ ನಾನು ಇವನನ್ನು ಕಚ್ಚಿದೆನು. ಕೋಪದಿಂದಲ್ಲ ಅಥವಾ ಕಾಮದಿಂದಲೂ ಅಲ್ಲ. ಲುಬ್ಧ! ಇದರಲ್ಲಿ ಪಾಪವೇನಾದರೂ ಇದ್ದರೆ ಅದು ಮೃತ್ಯುವಿನದ್ದು. ನನ್ನದಲ್ಲ ಎಂದು ತಿಳಿ!”
13001030 ಲುಬ್ಧಕ ಉವಾಚ।
13001030a ಯದ್ಯನ್ಯವಶಗೇನೇದಂ ಕೃತಂ ತೇ ಪನ್ನಗಾಶುಭಮ್।
13001030c ಕಾರಣಂ ವೈ ತ್ವಮಪ್ಯತ್ರ ತಸ್ಮಾತ್ತ್ವಮಪಿ ಕಿಲ್ಬಿಷೀ।।
ವ್ಯಾಧನು ಹೇಳಿದನು: “ಒಂದುವೇಳೆ ನೀನು ಅನ್ಯನ ಅಧೀನನಾಗಿ ಈ ಪಾಪವನ್ನು ಮಾಡಿದ್ದರೆ ನೀನೂ ಕೂಡ ಇದರ ಕಾರಣನಾಗುತ್ತೀಯೆ. ಆದುದರಿಂದ ನೀನೂ ಕೂಡ ಅಪರಾಧಿಯಾಗುತ್ತೀಯೆ!
13001031a ಮೃತ್ಪಾತ್ರಸ್ಯ ಕ್ರಿಯಾಯಾಂ ಹಿ ದಂಡಚಕ್ರಾದಯೋ ಯಥಾ।
13001031c ಕಾರಣತ್ವೇ ಪ್ರಕಲ್ಪ್ಯಂತೇ ತಥಾ ತ್ವಮಪಿ ಪನ್ನಗ।।
ಪನ್ನಗ! ಮಣ್ಣಿನ ಮಡಿಕೆಯನ್ನು ಮಾಡುವಾಗ ದಂಡ ಮತ್ತು ಚಕ್ರಾದಿಗಳ ಪಾತ್ರವು ಹೇಗೋ ಹಾಗೆ ಈ ಬಾಲಕನ ಮೃತ್ಯುವಿಗೆ ನೀನೂ ಕಾರಣನಾಗುತ್ತೀಯೆ.
13001032a ಕಿಲ್ಬಿಷೀ ಚಾಪಿ ಮೇ ವಧ್ಯಃ ಕಿಲ್ಬಿಷೀ ಚಾಸಿ ಪನ್ನಗ।
13001032c ಆತ್ಮಾನಂ ಕಾರಣಂ ಹ್ಯತ್ರ ತ್ವಮಾಖ್ಯಾಸಿ ಭುಜಂಗಮ।।
ಪನ್ನಗ! ಪಾಪಿ ಯಾರೇ ಇರಲಿ ನನ್ನ ಪಾಲಿಗೆ ಅವನು ವಧ್ಯ. ಭುಜಂಗಮ! ನೀನೂ ಅಪರಾಧಿಯಾಗಿರುವೆ. ಏಕೆಂದರೆ ಇವನ ವಧೆಗೆ ನಿನ್ನನ್ನು ನೀನೇ ಕಾರಣನೆಂದು ಹೇಳಿಕೊಂಡಿದ್ದೀಯೆ!”
13001033 ಸರ್ಪ ಉವಾಚ।
13001033a ಸರ್ವ ಏತೇ ಹ್ಯಸ್ವವಶಾ ದಂಡಚಕ್ರಾದಯೋ ಯಥಾ।
13001033c ತಥಾಹಮಪಿ ತಸ್ಮಾನ್ಮೇ ನೈಷ ಹೇತುರ್ಮತಸ್ತವ।।
ಸರ್ಪವು ಹೇಳಿತು: “ಮಣ್ಣಿನ ಮಡಿಕೆಯನ್ನು ತಯಾರಿಸುವಾಗ ದಂಡ-ಚಕ್ರಾದಿಗಳು ಹೇಗೆ ಕುಂಬಾರನ ಪರಾಧೀನರೋ1 ಹಾಗೆ ನಾನು ಕೂಡ ಇಲ್ಲಿ ಮೃತ್ಯುವಿನ ಪರಾಧೀನನಾಗಿದ್ದೇನೆ. ಆದುದರಿಂದ ನನ್ನನ್ನು ದೂಷಿಸುವುದು ಸರಿಯಲ್ಲ.
13001034a ಅಥ ವಾ ಮತಮೇತತ್ತೇ ತೇಽಪ್ಯನ್ಯೋನ್ಯಪ್ರಯೋಜಕಾಃ।
13001034c ಕಾರ್ಯಕಾರಣಸಂದೇಹೋ ಭವತ್ಯನ್ಯೋನ್ಯಚೋದನಾತ್।।
ಅಥವಾ ದಂಡ-ಚಕ್ರಗಳು ಅನ್ಯೋನ್ಯರ ಪ್ರಯೋಜಕರು ಎಂದು ನಿನ್ನ ಮತವಾದರೆ ಅನ್ಯೋನ್ಯರ ಪ್ರಚೋದನೆಯಿಂದ ಕಾರ್ಯ-ಕಾರಣಗಳಲ್ಲಿ ಸಂದೇಹವುಂಟಾಗುತ್ತದೆ2.
13001035a ಏವಂ ಸತಿ ನ ದೋಷೋ ಮೇ ನಾಸ್ಮಿ ವಧ್ಯೋ ನ ಕಿಲ್ಬಿಷೀ।
13001035c ಕಿಲ್ಬಿಷಂ ಸಮವಾಯೇ ಸ್ಯಾನ್ಮನ್ಯಸೇ ಯದಿ ಕಿಲ್ಬಿಷಮ್।।
ಈ ಸಂದರ್ಭದಲ್ಲಿ ನನ್ನ ದೋಷವೇನೂ ಇಲ್ಲ. ನಾನು ವಧ್ಯನಲ್ಲ. ನಾನು ಪಾಪಿಯೂ ಅಲ್ಲ. ನನ್ನನ್ನು ಪಾಪಿಯೆಂದು ಅಭಿಪ್ರಾಯಪಡುವೆಯಾದರೆ ಇವನ ಮೃತ್ಯುವಿಗೆ ಕಾರಣವಾದ ಎಲ್ಲ ಕಾರಣಸಮೂಹಗಳೂ ಪಾಪಿಗಳು ಎಂದಾಗುತ್ತವೆ.”
13001036 ಲುಬ್ಧಕ ಉವಾಚ।
13001036a ಕಾರಣಂ ಯದಿ ನ ಸ್ಯಾದ್ವೈ ನ ಕರ್ತಾ ಸ್ಯಾಸ್ತ್ವಮಪ್ಯುತ।
13001036c ವಿನಾಶೇ ಕಾರಣಂ ತ್ವಂ ಚ ತಸ್ಮಾದ್ವಧ್ಯೋಽಸಿ ಮೇ ಮತಃ।।
ವ್ಯಾಧನು ಹೇಳಿದನು: “ಒಂದು ವೇಳೆ ನೀನು ಈ ಅಪರಾಧದ ಕಾರಣನೂ ಅಲ್ಲ ಅಥವಾ ಕರ್ತನೂ ಅಲ್ಲ ಎಂದು ತಿಳಿದುಕೊಂಡರೂ ಈ ಬಾಲಕನ ವಿನಾಶವು ನಿನ್ನಿಂದಲೇ ಅಗಿದೆಯಲ್ಲವೇ? ಆದುದರಿಂದ ನೀನು ವಧ್ಯ ಎಂದು ನನ್ನ ಮತ.
13001037a ಅಸತ್ಯಪಿ ಕೃತೇ ಕಾರ್ಯೇ ನೇಹ ಪನ್ನಗ ಲಿಪ್ಯತೇ।
13001037c ತಸ್ಮಾನ್ನಾತ್ರೈವ ಹೇತುಃ ಸ್ಯಾದ್ವಧ್ಯಃ ಕಿಂ ಬಹು ಭಾಷಸೇ।।
ಪನ್ನಗ! ಕಾರ್ಯವನ್ನು ಮಾಡಿಯೂ ಕರ್ತನು ದೋಷಿಯಲ್ಲ ಎಂದಾದರೆ ಹೇಗೆ ತಾನೇ ದೋಷಿಯನ್ನು ವಧಿಸುತ್ತಾರೆ? ನೀನು ಅಧಿಕವಾಗಿ ಮಾತನಾಡುತ್ತಿದ್ದೀಯೆ!”
13001038 ಸರ್ಪ ಉವಾಚ।
13001038a ಕಾರ್ಯಾಭಾವೇ ಕ್ರಿಯಾ ನ ಸ್ಯಾತ್ಸತ್ಯಸತ್ಯಪಿ ಕಾರಣೇ।
13001038c ತಸ್ಮಾತ್ತ್ವಮಸ್ಮಿನ್ ಹೇತೌ ಮೇ ವಾಚ್ಯೋ ಹೇತುರ್ವಿಶೇಷತಃ।।
ಸರ್ಪವು ಹೇಳಿತು: “ಕಾರಣವು ಇರಲಿ ಅಥವಾ ಇಲ್ಲದಿರಲಿ, ಕಾರ್ಯವು ಆಗಿಯೇ ಆಗುತ್ತದೆ3. ಅದುದರಿಂದ ಬಾಲಕನ ಸಾವಿಗೆ ನಾನು ವಿಶೇಷತಃ ಕಾರಣನೆಂದು ಹೇಳುವ ಕಾರಣವಿಲ್ಲ.
13001039a ಯದ್ಯಹಂ ಕಾರಣತ್ವೇನ ಮತೋ ಲುಬ್ಧಕ ತತ್ತ್ವತಃ।
13001039c ಅನ್ಯಃ ಪ್ರಯೋಗೇ ಸ್ಯಾದತ್ರ ಕಿಲ್ಬಿಷೀ ಜಂತುನಾಶನೇ।।
ಲುಬ್ಧಕ! ಒಂದುವೇಳೆ ತತ್ತ್ವತಃ ನಾನೇ ಕಾರಣನೆಂದು ನಿನ್ನ ಮತವಾಗಿದ್ದರೆ ಈ ಬಾಲಕನ ಮೃತ್ಯುವಿನಲ್ಲಿ ಅನ್ಯನು ನನ್ನನ್ನು ಪ್ರಯೋಗಿಸಿದ್ದಾನೆ ಎನ್ನುವುದನ್ನು ತಿಳಿದುಕೋ.”
13001040 ಲುಬ್ಧಕ ಉವಾಚ।
13001040a ವಧ್ಯಸ್ತ್ವಂ ಮಮ ದುರ್ಬುದ್ಧೇ ಬಾಲಘಾತೀ ನೃಶಂಸಕೃತ್।
13001040c ಭಾಷಸೇ ಕಿಂ ಬಹು ಪುನರ್ವಧ್ಯಃ ಸನ್ಪನ್ನಗಾಧಮ।।
ವ್ಯಾಧನು ಹೇಳಿದನು: “ದುರ್ಬುದ್ಧೇ! ಪನ್ನಗಾಧಮ! ಬಾಲಕನನ್ನು ಕೊಂದವನೇ! ಕ್ರೂರಕರ್ಮವನ್ನು ಮಾಡಿದವನೇ! ನನಗೆ ನೀನು ವಧ್ಯನಾಗಿರುವೆ. ಸಾಯಬಾರದೆಂದು ನೀನು ಬಹಳ ಮಾತನಾಡುತ್ತಿದ್ದೀಯೆಯಲ್ಲವೇ?”
13001041 ಸರ್ಪ ಉವಾಚ।
13001041a ಯಥಾ ಹವೀಂಷಿ ಜುಹ್ವಾನಾ ಮಖೇ ವೈ ಲುಬ್ಧಕರ್ತ್ವಿಜಃ।
13001041c ನ ಫಲಂ ಪ್ರಾಪ್ನುವಂತ್ಯತ್ರ ಪರಲೋಕೇ ತಥಾ ಹ್ಯಹಮ್।।
ಸರ್ಪವು ಹೇಳಿತು: “ಲುಬ್ಧಕ! ಯಜ್ಞದಲ್ಲಿ ಹವಿಸ್ಸುಗಳಿಂದ ಹೋಮಮಾಡುವ ಋತ್ವಿಜನಿಗೆ ಹೇಗೆ ಅದರ ಫಲವು ಇಲ್ಲಿ ಅಥವಾ ಪರಲೋಕದಲ್ಲಿ ದೊರಕುವುದಿಲ್ಲವೋ ಹಾಗೆ ನನಗೂ ಕೂಡ ಈ ಬಾಲಕ ಮೃತ್ಯುವಿನ ಫಲವಾಗಲೀ ಶಿಕ್ಷೆಯಾಗಲೀ ದೊರಕಬಾರದು.””
13001042 ಭೀಷ್ಮ ಉವಾಚ।
13001042a ತಥಾ ಬ್ರುವತಿ ತಸ್ಮಿಂಸ್ತು ಪನ್ನಗೇ ಮೃತ್ಯುಚೋದಿತೇ।
13001042c ಆಜಗಾಮ ತತೋ ಮೃತ್ಯುಃ ಪನ್ನಗಂ ಚಾಬ್ರವೀದಿದಮ್।।
ಭೀಷ್ಮನು ಹೇಳಿದನು: “ತಾನು ಮೃತ್ಯುವಿನಿಂದ ಚೋದಿತನಾಗಿ ಬಾಲಕನನ್ನು ಕಚ್ಚಿದೆ ಎಂದು ಸರ್ಪವು ನುಡಿಯುತ್ತಿರಲು ಅಲ್ಲಿಗೆ ಮೃತ್ಯುವೇ ಬಂದು ಸರ್ಪಕ್ಕೆ ಹೇಳಿದನು:
13001043a ಕಾಲೇನಾಹಂ ಪ್ರಣುದಿತಃ ಪನ್ನಗ ತ್ವಾಮಚೂಚುದಮ್।
13001043c ವಿನಾಶಹೇತುರ್ನಾಸ್ಯ ತ್ವಮಹಂ ವಾ ಪ್ರಾಣಿನಃ ಶಿಶೋಃ।।
“ಪನ್ನಗ! ಕಾಲನಿಂದ ಪ್ರೇರಿತನಾದ ನಾನು ನಿನ್ನನ್ನು ಪ್ರಚೋದಿಸಿದೆನು. ಈ ಶಿಶುವಿನ ಪ್ರಾಣವು ನಾಶವಾಗಲು ನೀನಾಗಲೀ ನಾನಾಗಲೀ ಕಾರಣರಲ್ಲ.
13001044a ಯಥಾ ವಾಯುರ್ಜಲಧರಾನ್ವಿಕರ್ಷತಿ ತತಸ್ತತಃ।
13001044c ತದ್ವಜ್ಜಲದವತ್ಸರ್ಪ ಕಾಲಸ್ಯಾಹಂ ವಶಾನುಗಃ।।
ಸರ್ಪವೇ! ಮೋಡಗಳನ್ನು ಅಲ್ಲಿಂದಿಲ್ಲಿಗೆ ಸೆಳೆದಾಡುವ ವಾಯುವಿನ ವಶದಲ್ಲಿ ಮೋಡಗಳು ಹೇಗೋ ಹಾಗೆ ನಾನು ಕಾಲನ ವಶಾನುಗನು.
13001045a ಸಾತ್ತ್ವಿಕಾ ರಾಜಸಾಶ್ಚೈವ ತಾಮಸಾ ಯೇ ಚ ಕೇ ಚನ।
13001045c ಭಾವಾಃ ಕಾಲಾತ್ಮಕಾಃ ಸರ್ವೇ ಪ್ರವರ್ತಂತೇ ಹಿ ಜಂತುಷು।।
ರಾಜಸಿಕ, ಸಾತ್ವಿಕ ಮತ್ತು ತಾಮಸ ಗುಣಗಳಿರುವ ಎಲ್ಲ ಜಂತುಗಳೂ ಕಾಲದಿಂದಲೇ ಹುಟ್ಟುತ್ತವೆ ಮತ್ತು ಕಾಲಾಧೀನವಾಗಿಯೇ ವರ್ತಿಸುತ್ತವೆ.
13001046a ಜಂಗಮಾಃ ಸ್ಥಾವರಾಶ್ಚೈವ ದಿವಿ ವಾ ಯದಿ ವಾ ಭುವಿ।
13001046c ಸರ್ವೇ ಕಾಲಾತ್ಮಕಾಃ ಸರ್ಪ ಕಾಲಾತ್ಮಕಮಿದಂ ಜಗತ್।।
ಸರ್ಪವೇ! ದಿವಿಯಲ್ಲಿರುವ ಅಥವಾ ಭುವಿಯಲ್ಲಿರುವ ಜಂಗಮ-ಸ್ಥಾವರಗಳೆಲ್ಲವೂ ಕಾಲಾತ್ಮಕವು. ಈ ಜಗತ್ತೇ ಕಾಲಾತ್ಮಕವು.
13001047a ಪ್ರವೃತ್ತಯಶ್ಚ ಯಾ ಲೋಕೇ ತಥೈವ ಚ ನಿವೃತ್ತಯಃ।
13001047c ತಾಸಾಂ ವಿಕೃತಯೋ ಯಾಶ್ಚ ಸರ್ವಂ ಕಾಲಾತ್ಮಕಂ ಸ್ಮೃತಮ್।।
ಈ ಲೋಕದಲ್ಲಿರುವ ಪ್ರವೃತ್ತಿಗಳು, ನಿವೃತ್ತಿಗಳು ಮತ್ತು ಅವುಗಳ ವಿಕೃತಗಳು ಎಲ್ಲವೂ ಕಾಲಾತ್ಮಕವೆಂದು ಹೇಳಲ್ಪಟ್ಟಿದೆ.
13001048a ಆದಿತ್ಯಶ್ಚಂದ್ರಮಾ ವಿಷ್ಣುರಾಪೋ ವಾಯುಃ ಶತಕ್ರತುಃ।
13001048c ಅಗ್ನಿಃ ಖಂ ಪೃಥಿವೀ ಮಿತ್ರ ಓಷಧ್ಯೋ ವಸವಸ್ತಥಾ।।
13001049a ಸರಿತಃ ಸಾಗರಾಶ್ಚೈವ ಭಾವಾಭಾವೌ ಚ ಪನ್ನಗ।
13001049c ಸರ್ವೇ ಕಾಲೇನ ಸೃಜ್ಯಂತೇ ಹ್ರಿಯಂತೇ ಚ ತಥಾ ಪುನಃ।।
ಪನ್ನಗ! ಆದಿತ್ಯ, ಚಂದ್ರಮ, ವಿಷ್ಣು, ಆಪ, ವಾಯು, ಶತಕ್ರತು, ಅಗ್ನಿ, ಆಕಾಶ, ಪೃಥ್ವಿ, ಮಿತ್ರ, ಔಷಧಗಳು, ವಸುಗಳು, ಸರಿತ, ಸಾಗರ, ಸೃಷ್ಟಿ ಮತ್ತು ಪ್ರಳಯ ಇವೆಲ್ಲವೂ ಕಾಲನಿಂದಲೇ ಸೃಷ್ಟಿಸಲ್ಪಡುತ್ತವೆ ಮತ್ತು ಅವನಿಂದಲೇ ಹಿಂದೆ ಸೆಳೆಯಲ್ಪಡುತ್ತವೆ.
13001050a ಏವಂ ಜ್ಞಾತ್ವಾ ಕಥಂ ಮಾಂ ತ್ವಂ ಸದೋಷಂ ಸರ್ಪ ಮನ್ಯಸೇ।
13001050c ಅಥ ಚೈವಂಗತೇ ದೋಷೋ ಮಯಿ ತ್ವಮಪಿ ದೋಷವಾನ್।।
ಸರ್ಪವೇ! ಇದನ್ನು ತಿಳಿದು ನೀನು ನನ್ನನ್ನು ಹೇಗೆ ದೋಷಯುಕ್ತನೆಂದು ಹೇಳುತ್ತೀಯೆ? ಒಂದು ವೇಳೆ ದೋಷವು ನನ್ನಲ್ಲಿದೆ ಎಂದಾದರೆ ನೀನೂ ಕೂಡ ದೋಷಯುಕ್ತನಾಗುತ್ತೀಯೆ.”
13001051 ಸರ್ಪ ಉವಾಚ।
13001051a ನಿರ್ದೋಷಂ ದೋಷವಂತಂ ವಾ ನ ತ್ವಾ ಮೃತ್ಯೋ ಬ್ರವೀಮ್ಯಹಮ್।
13001051c ತ್ವಯಾಹಂ ಚೋದಿತ ಇತಿ ಬ್ರವೀಮ್ಯೇತಾವದೇವ ತು।।
ಸರ್ಪವು ಹೇಳಿತು: “ಮೃತ್ಯುವೇ! ನಿನ್ನನ್ನು ನಿರ್ದೋಷೀ ಅಥವಾ ದೂಷಿತನೆಂದು ನಾನು ಹೇಳುತ್ತಿಲ್ಲ. ನಿನ್ನಿಂದ ನಾನು ಪ್ರಚೋದಿತಗೊಂಡೆ ಎಂದು ಮಾತ್ರ ಹೇಳುತ್ತಿದ್ದೇನೆ.
13001052a ಯದಿ ಕಾಲೇ ತು ದೋಷೋಽಸ್ತಿ ಯದಿ ತತ್ರಾಪಿ ನೇಷ್ಯತೇ।
13001052c ದೋಷೋ ನೈವ ಪರೀಕ್ಷ್ಯೋ ಮೇ ನ ಹ್ಯತ್ರಾಧಿಕೃತಾ ವಯಮ್।।
ಇದರಲ್ಲಿ ಕಾಲನ ದೋಷವಿರಬಹುದು ಅಥವಾ ಇಲ್ಲದೆಯೂ ಇರಬಹುದು. ಆದರೂ ಇಲ್ಲಿ ದೋಷಿಯು ಯಾರೆಂದು ನಾನು ಪರೀಕ್ಷಿಸುತ್ತಿಲ್ಲ. ಹಾಗೆ ಮಾಡಲು ನನಗೆ ಅಧಿಕಾರವೂ ಇಲ್ಲ.
13001053a ನಿರ್ಮೋಕ್ಷಸ್ತ್ವಸ್ಯ ದೋಷಸ್ಯ ಮಯಾ ಕಾರ್ಯೋ ಯಥಾ ತಥಾ।
13001053c ಮೃತ್ಯೋ ವಿದೋಷಃ ಸ್ಯಾಮೇವ ಯಥಾ ತನ್ಮೇ ಪ್ರಯೋಜನಮ್।।
ನನ್ನನ್ನು ಈ ದೋಷದಿಂದ ಹೇಗೆ ಬಿಡುಗಡೆಗೊಳಿಸಿಕೊಳ್ಳಬೇಕು ಎನ್ನುವುದೇ ನನ್ನ ಕಾರ್ಯವಾಗಿದೆ. ಮೃತ್ಯುವಿನ ದೋಷವೂ ಇಲ್ಲವೆಂದರೆ ಅದು ನನಗೆ ಪ್ರಯೋಜನವೇ ಆಯಿತು.””
13001054 ಭೀಷ್ಮ ಉವಾಚ।
13001054a ಸರ್ಪೋಽಥಾರ್ಜುನಕಂ ಪ್ರಾಹ ಶ್ರುತಂ ತೇ ಮೃತ್ಯುಭಾಷಿತಮ್।
13001054c ನಾನಾಗಸಂ ಮಾಂ ಪಾಶೇನ ಸಂತಾಪಯಿತುಮರ್ಹಸಿ।।
ಭೀಷ್ಮನು ಹೇಳಿದನು: “ಆಗ ಸರ್ಪವು ಅರ್ಜುನಕನಿಗೆ ಹೇಳಿತು: “ಮೃತ್ಯುವು ಆಡಿತ ಮಾತನ್ನು ನೀನು ಕೇಳಿರುವೆ. ಈಗಲಾದರೂ ನಿರಪರಾಧಿಯಾದ ನನ್ನನ್ನು ಕಟ್ಟಿ ಸಂತಾಪಗೊಳಿಸುವುದು ಸರಿಯಲ್ಲ.”
13001055 ಲುಬ್ಧಕ ಉವಾಚ।
13001055a ಮೃತ್ಯೋಃ ಶ್ರುತಂ ಮೇ ವಚನಂ ತವ ಚೈವ ಭುಜಂಗಮ।
13001055c ನೈವ ತಾವದ್ವಿದೋಷತ್ವಂ ಭವತಿ ತ್ವಯಿ ಪನ್ನಗ।।
ವ್ಯಾಧನು ಹೇಳಿದನು: “ಭುಜಂಗಮ! ನಿನ್ನ ಮತ್ತು ಮೃತ್ಯುವಿನ ಮಾತುಗಳನ್ನು ಕೇಳಿದೆ. ಪನ್ನಗ! ಆದರೆ ಇಷ್ಟರಿಂದಲೇ ನೀನು ದೋಷಿಯಲ್ಲವೆಂದು ಸಿದ್ಧವಾಗುವುದಿಲ್ಲ.
13001056a ಮೃತ್ಯುಸ್ತ್ವಂ ಚೈವ ಹೇತುರ್ಹಿ ಜಂತೋರಸ್ಯ ವಿನಾಶನೇ।
13001056c ಉಭಯಂ ಕಾರಣಂ ಮನ್ಯೇ ನ ಕಾರಣಮಕಾರಣಮ್।।
ಈ ಬಾಲಕನ ವಿನಾಶದಲ್ಲಿ ನೀನು ಮತ್ತು ಮೃತ್ಯು ಇಬ್ಬರೂ ಕಾರಣಗಳಾಗಿರುವಿರಿ. ನಿಮ್ಮಿಬ್ಬರನ್ನೂ ಕಾರಣರೆಂದು ತಿಳಿಯುತ್ತೇನೆ. ಕಾರಣವಲ್ಲದುದನ್ನು ಕಾರಣವೆಂದು ತಿಳಿಯುವುದಿಲ್ಲ.
13001057a ಧಿಗ್ಮೃತ್ಯುಂ ಚ ದುರಾತ್ಮಾನಂ ಕ್ರೂರಂ ದುಃಖಕರಂ ಸತಾಮ್।
13001057c ತ್ವಾಂ ಚೈವಾಹಂ ವಧಿಷ್ಯಾಮಿ ಪಾಪಂ ಪಾಪಸ್ಯ ಕಾರಣಮ್।।
ಸಂತರಿಗೆ ದುಃಖವನ್ನುಂಟುಮಾಡುವ ಕ್ರೂರ ದುರಾತ್ಮ ಮೃತ್ಯುವಿಗೆ ಧಿಕ್ಕಾರ! ಈ ಪಾಪಕ್ಕೆ ಕಾರಣನಾದ ಪಾಪಿ ನಿನ್ನನ್ನೂ ನಾನು ವಧಿಸುತ್ತೇನೆ.”
13001058 ಮೃತ್ಯುರುವಾಚ।
13001058a ವಿವಶೌ ಕಾಲವಶಗಾವಾವಾಂ ತದ್ದಿಷ್ಟಕಾರಿಣೌ।
13001058c ನಾವಾಂ ದೋಷೇಣ ಗಂತವ್ಯೌ ಯದಿ ಸಮ್ಯಕ್ಪ್ರಪಶ್ಯಸಿ।।
ಮೃತ್ಯುವು ಹೇಳಿದನು: “ನಾವಿಬ್ಬರೂ ಅಸ್ವತಂತ್ರರು. ಕಾಲನ ವಶದಲ್ಲಿರುವವರು. ಅವನ ಇಷ್ಟದಂತೆ ಮಾಡುವವರು. ಇದನ್ನು ನೀನು ಚೆನ್ನಾಗಿ ಪರಿಶೀಲಿಸಿದ್ದೇ ಆದರೆ ನಮ್ಮಿಬ್ಬರಲ್ಲಿ ಯಾರನ್ನೂ ಅಪರಾಧಿಯೆಂದು ನೀನು ಭಾವಿಸುವುದಿಲ್ಲ.”
13001059 ಲುಬ್ಧಕ ಉವಾಚ।
13001059a ಯುವಾಮುಭೌ ಕಾಲವಶೌ ಯದಿ ವೈ ಮೃತ್ಯುಪನ್ನಗೌ।
13001059c ಹರ್ಷಕ್ರೋಧೌ ಕಥಂ ಸ್ಯಾತಾಮೇತದಿಚ್ಚಾಮಿ ವೇದಿತುಮ್।।
ವ್ಯಾಧನು ಹೇಳಿದನು: “ಮೃತ್ಯು-ಪನ್ನಗಗಳೇ! ಒಂದುವೇಳೆ ನೀವಿಬ್ಬರೂ ಕಾಲವಶರಾಗಿದ್ದರೆ ಈ ವಿಷಯದಲ್ಲಿ ಹರ್ಷ-ಕ್ರೋಧಗಳು ಹೇಗೆ ಉಂಟಾಗುತ್ತಿವೆ4 ಎನ್ನುವುದನ್ನು ತಿಳಿಯಬಯಸುತ್ತೇನೆ.”
13001060 ಮೃತ್ಯುರುವಾಚ।
13001060a ಯಾಃ ಕಾಶ್ಚಿದಿಹ ಚೇಷ್ಟಾಃ ಸ್ಯುಃ ಸರ್ವಾಃ ಕಾಲಪ್ರಚೋದಿತಾಃ।
13001060c ಪೂರ್ವಮೇವೈತದುಕ್ತಂ ಹಿ ಮಯಾ ಲುಬ್ಧಕ ಕಾಲತಃ।।
ಮೃತ್ಯುವು ಹೇಳಿದನು: “ಲುಬ್ಧಕ! ಇಲ್ಲಿ ಏನೆಲ್ಲ ನಡೆಯುತ್ತದೆಯೋ ಅ ಸರ್ವವೂ ಕಾಲದಿಂದ ಪ್ರಚೋದಿತಗೊಳ್ಳುತ್ತವೆ. ಕಾಲದ ಕುರಿತು ಈ ಮೊದಲೇ ನಾನು ನಿನಗೆ ಹೇಳಿದ್ದೇನೆ.
13001061a ತಸ್ಮಾದುಭೌ ಕಾಲವಶಾವಾವಾಂ ತದ್ದಿಷ್ಟಕಾರಿಣೌ।
13001061c ನಾವಾಂ ದೋಷೇಣ ಗಂತವ್ಯೌ ತ್ವಯಾ ಲುಬ್ಧಕ ಕರ್ಹಿ ಚಿತ್।।
ಲುಬ್ಧಕ! ಆದುದರಿಂದ ನಾವಿಬ್ಬರೂ ಕಾಲನ ವಶವಾಗಿರುವೆವು. ಅವನ ಇಷ್ಟದಂತೆ ಮಾಡುವವರು. ಯಾವುದೇ ಕಾರಣಕ್ಕೂ ನಮ್ಮನ್ನು ದೋಷಿಗಳೆಂದು ತೀರ್ಮಾನಿಸಬಾರದು.””
13001062 ಭೀಷ್ಮ ಉವಾಚ।
13001062a ಅಥೋಪಗಮ್ಯ ಕಾಲಸ್ತು ತಸ್ಮಿನ್ಧರ್ಮಾರ್ಥಸಂಶಯೇ।
13001062c ಅಬ್ರವೀತ್ಪನ್ನಗಂ ಮೃತ್ಯುಂ ಲುಬ್ಧಮರ್ಜುನಕಂ ಚ ತಮ್।।
ಭೀಷ್ಮನು ಹೇಳಿದನು: “ಆ ಧರ್ಮಾರ್ಥಸಂಶಯವು ಉಂಟಾಗಿದ್ದಾಗ ಅಲ್ಲಿಗೆ ಕಾಲನೇ ಆಗಮಿಸಿ ಪನ್ನಗ, ಮೃತ್ಯು ಮತ್ತು ಅರ್ಜುನಕರಿಗೆ ಹೇಳಿದನು:
13001063 ಕಾಲ ಉವಾಚ।
13001063a ನೈವಾಹಂ ನಾಪ್ಯಯಂ ಮೃತ್ಯುರ್ನಾಯಂ ಲುಬ್ಧಕ ಪನ್ನಗಃ।
13001063c ಕಿಲ್ಬಿಷೀ ಜಂತುಮರಣೇ ನ ವಯಂ ಹಿ ಪ್ರಯೋಜಕಾಃ।।
ಕಾಲನು ಹೇಳಿದನು: “ಲುಬ್ಧಕ! ನಾನಾಗಲೀ, ಮೃತ್ಯುವಾಗಲೀ ಅಥವಾ ಪನ್ನಗವಾಗಲೀ ಈ ಬಾಲಕನ ಮರಣದ ವಿಷಯದಲ್ಲಿ ದೋಷಿಗಳಲ್ಲ. ನಾವು ಒಬ್ಬರಿಗೊಬ್ಬರು ಪ್ರಚೋದನೆಯನ್ನೂ ನೀಡಲಿಲ್ಲ.
13001064a ಅಕರೋದ್ಯದಯಂ ಕರ್ಮ ತನ್ನೋಽರ್ಜುನಕ ಚೋದಕಮ್।
13001064c ಪ್ರಣಾಶಹೇತುರ್ನಾನ್ಯೋಽಸ್ಯ ವಧ್ಯತೇಽಯಂ ಸ್ವಕರ್ಮಣಾ।।
ಅರ್ಜುನಕ! ಈ ಬಾಲಕನು ಮಾಡಿದ ಕರ್ಮವೇ ನಮ್ಮೆಲ್ಲರಿಗೂ ಪ್ರಚೋದಕವಾಗಿದೆ. ಈ ಬಾಲಕನ ವಿನಾಶಕ್ಕೆ ಬೇರೆ ಯಾರೂ ಕಾರಣರಲ್ಲ. ಸ್ವಕರ್ಮದಿಂದಲೇ ಅವನು ವಧಿಸಲ್ಪಟ್ಟಿದ್ದಾನೆ.
13001065a ಯದನೇನ ಕೃತಂ ಕರ್ಮ ತೇನಾಯಂ ನಿಧನಂ ಗತಃ।
13001065c ವಿನಾಶಹೇತುಃ ಕರ್ಮಾಸ್ಯ ಸರ್ವೇ ಕರ್ಮವಶಾ ವಯಮ್।।
ಇವನು ಯಾವ ಕರ್ಮಗಳನ್ನು ಮಾಡಿದ್ದನೋ ಅದಕ್ಕೆ ಅನುಸಾರವಾಗಿ ನಿಧನ ಹೊಂದಿದ್ದಾನೆ. ಅವನ ವಿನಾಶಕ್ಕೆ ಅವನ ಕರ್ಮಗಳೇ ಕಾರಣ. ನಾವೆಲ್ಲರೂ ನಮ್ಮ ಕರ್ಮಗಳ ವಶರಾಗಿದ್ದೇವೆ.
13001066a ಕರ್ಮದಾಯಾದವಾಽಲ್ಲೋಕಃ ಕರ್ಮಸಂಬಂಧಲಕ್ಷಣಃ।
13001066c ಕರ್ಮಾಣಿ ಚೋದಯಂತೀಹ ಯಥಾನ್ಯೋನ್ಯಂ ತಥಾ ವಯಮ್।।
ಪುತ್ರ-ಪೌತ್ರಾದಿಗಳಂತೆ ಕರ್ಮವು ಕರ್ತೃವನ್ನು ಸದಾ ಅನುಸರಿಸಿಕೊಂಡೇ ಬರುತ್ತದೆ. ಕರ್ಮವೇ ಸುಖ-ದುಃಖಾದಿಗಳ ಸಂಬಂಧಸೂಚಕವಾಗಿದೆ. ಲೋಕದಲ್ಲಿ ನಾವು ಅನ್ಯೋನ್ಯರನ್ನು ಹೇಗೆ ಪ್ರಚೋದಿಸುತ್ತಿರುತ್ತೀವೋ ಹಾಗೆ ಕರ್ಮಗಳೂ ನಮ್ಮನ್ನು ಪ್ರಚೋದಿಸುತ್ತಿರುತ್ತವೆ.
13001067a ಯಥಾ ಮೃತ್ಪಿಂಡತಃ ಕರ್ತಾ ಕುರುತೇ ಯದ್ಯದಿಚ್ಚತಿ।
13001067c ಏವಮಾತ್ಮಕೃತಂ ಕರ್ಮ ಮಾನವಃ ಪ್ರತಿಪದ್ಯತೇ।।
ಕುಂಬಾರನು ಹೇಗೆ ಮಣ್ಣಿನ ಮುದ್ದೆಯಿಂದ ತನಗಿಷ್ಟವಾದುದನ್ನು ಮಾಡಿಕೊಳ್ಳುವನೋ ಹಾಗೆ ಮಾನವನು ತಾನು ಮಾಡಿದ ಕರ್ಮಗಳಿಗನುಸಾರವಾಗಿ ಎಲ್ಲವನ್ನೂ ಪಡೆದುಕೊಳ್ಳುತ್ತಾನೆ.
13001068a ಯಥಾ ಚಾಯಾತಪೌ ನಿತ್ಯಂ ಸುಸಂಬದ್ಧೌ ನಿರಂತರಮ್।
13001068c ತಥಾ ಕರ್ಮ ಚ ಕರ್ತಾ ಚ ಸಂಬದ್ಧಾವಾತ್ಮಕರ್ಮಭಿಃ।।
ಬಿಸಿಲು-ನೆರಳುಗಳು ಹೇಗೆ ಒಂದಕ್ಕೊಂದು ಸೇರಿಕೊಂಡಿರುತ್ತವೆಯೋ ಹಾಗೆ ಕರ್ಮ ಮತ್ತು ಕರ್ತೃವು ಸೇರಿಕೊಂಡೇ ಇರುತ್ತಾರೆ. ಮನುಷ್ಯನು ತನ್ನ ಕರ್ಮಗಳಿಗೆ ಬದ್ಧನಾಗಿರುತ್ತಾನೆ.
13001069a ಏವಂ ನಾಹಂ ನ ವೈ ಮೃತ್ಯುರ್ನ ಸರ್ಪೋ ನ ತಥಾ ಭವಾನ್।
13001069c ನ ಚೇಯಂ ಬ್ರಾಹ್ಮಣೀ ವೃದ್ಧಾ ಶಿಶುರೇವಾತ್ರ ಕಾರಣಮ್।।
ಹೀಗೆ ನಾನಾಗಲೀ, ಮೃತ್ಯುವಾಗಲೀ, ಸರ್ಪವಾಗಲೀ, ನೀನಾಗಲೀ ಅಥವಾ ಈ ವೃದ್ಧ ಬ್ರಾಹ್ಮಣಿಯಾಗಲೀ ಈ ಶಿಶುವಿನ ಮೃತ್ಯುವಿಗೆ ಕಾರಣರಲ್ಲ.”
13001070a ತಸ್ಮಿಂಸ್ತಥಾ ಬ್ರುವಾಣೇ ತು ಬ್ರಾಹ್ಮಣೀ ಗೌತಮೀ ನೃಪ।
13001070c ಸ್ವಕರ್ಮಪ್ರತ್ಯಯಾಽಲ್ಲೋಕಾನ್ಮತ್ವಾರ್ಜುನಕಮಬ್ರವೀತ್।।
ನೃಪ! ಅವನು ಹೀಗೆ ಹೇಳಲು ಬ್ರಾಹ್ಮಣೀ ಗೌತಮಿಯು ಸ್ವಕರ್ಮದಿಂದಲೇ ಲೋಕವು ನಡೆಯುತ್ತದೆಯೆಂದು ತಿಳಿದು ಅರ್ಜುನಕನಿಗೆ ಹೇಳಿದಳು:
13001071a ನೈವ ಕಾಲೋ ನ ಭುಜಗೋ ನ ಮೃತ್ಯುರಿಹ ಕಾರಣಮ್।
13001071c ಸ್ವಕರ್ಮಭಿರಯಂ ಬಾಲಃ ಕಾಲೇನ ನಿಧನಂ ಗತಃ।।
“ಕಾಲನಾಗಲೀ, ಸರ್ಪವಾಗಲೀ ಅಥವಾ ಮೃತ್ಯುವಾಗಲೀ ಇದಕ್ಕೆ ಕಾರಣರಲ್ಲ. ಸ್ವಕರ್ಮದಿಂದಲೇ ಈ ಬಾಲಕನು ಕಾಲನಿಂದ ಮೃತನಾಗಿದ್ದಾನೆ.
13001072a ಮಯಾ ಚ ತತ್ಕೃತಂ ಕರ್ಮ ಯೇನಾಯಂ ಮೇ ಮೃತಃ ಸುತಃ।
13001072c ಯಾತು ಕಾಲಸ್ತಥಾ ಮೃತ್ಯುರ್ಮುಂಚಾರ್ಜುನಕ ಪನ್ನಗಮ್।।
ನಾನೂ ಕೂಡ ಅಂಥಹ ಕರ್ಮವನ್ನು ಮಾಡಿದ್ದುದರಿಂದ ಈ ನನ್ನ ಮಗನು ಮೃತನಾದನು. ಕಾಲ ಮತ್ತು ಮೃತ್ಯುಗಳು ಹೊರಟುಹೋಗಲಿ. ಅರ್ಜುನಕ! ಈ ಹಾವನ್ನು ಬಿಟ್ಟುಬಿಡು!””
13001073 ಭೀಷ್ಮ ಉವಾಚ।
13001073a ತತೋ ಯಥಾಗತಂ ಜಗ್ಮುರ್ಮೃತ್ಯುಃ ಕಾಲೋಽಥ ಪನ್ನಗಃ।
13001073c ಅಭೂದ್ವಿರೋಷೋಽರ್ಜುನಕೋ ವಿಶೋಕಾ ಚೈವ ಗೌತಮೀ।।
ಭೀಷ್ಮನು ಹೇಳಿದನು: “ಅನಂತರ ಮೃತ್ಯು, ಕಾಲ ಮತ್ತು ಪನ್ನಗಗಳು ಹೇಗೆ ಬಂದಿದ್ದರೋ ಹಾಗೆ ಹೊರಟುಹೋದರು. ಅರ್ಜುನಕನು ವಿರೋಷಗೊಂಡನು. ಹಾಗೆಯೇ ಗೌತಮಿಯೂ ಶೋಕವನ್ನು ತೊರೆದಳು.
13001074a ಏತಚ್ಚ್ರುತ್ವಾ ಶಮಂ ಗಚ್ಚ ಮಾ ಭೂಶ್ಚಿಂತಾಪರೋ ನೃಪ।
13001074c ಸ್ವಕರ್ಮಪ್ರತ್ಯಯಾಽಲ್ಲೋಕಾಂಸ್ತ್ರೀನ್ವಿದ್ಧಿ ಮನುಜರ್ಷಭ।।
ನೃಪ! ಮನುಜರ್ಷಭ! ಇದನ್ನು ಕೇಳಿ ಶಾಂತಿಯನ್ನು ಹೊಂದು. ಇನ್ನೂ ಚಿಂತಾಪರನಾಗಬೇಡ. ಸ್ವಕರ್ಮದಿಂದ ಎಲ್ಲರೂ ಲೋಕಗಳನ್ನು ಪಡೆಯುತ್ತಾರೆ ಎನ್ನುವುದನ್ನು ತಿಳಿದುಕೋ.
13001075a ನ ತು ತ್ವಯಾ ಕೃತಂ ಪಾರ್ಥ ನಾಪಿ ದುರ್ಯೋಧನೇನ ವೈ।
13001075c ಕಾಲೇನ ತತ್ಕೃತಂ ವಿದ್ಧಿ ವಿಹತಾ ಯೇನ ಪಾರ್ಥಿವಾಃ।।
ಪಾರ್ಥ! ಇದನ್ನು ನೀನಾಗಲೀ ದುರ್ಯೋಧನನಾಗಲೀ ಮಾಡಲಿಲ್ಲ. ಈ ಪಾರ್ಥಿವರು ಅವರ ಕರ್ಮಗಳಿಗನುಸಾರವಾಗಿ ಕಾಲದಿಂದಲೇ ಹತರಾದರೆಂದು ತಿಳಿ.””
13001076 ವೈಶಂಪಾಯನ ಉವಾಚ।
13001076a ಇತ್ಯೇತದ್ವಚನಂ ಶ್ರುತ್ವಾ ಬಭೂವ ವಿಗತಜ್ವರಃ।
13001076c ಯುಧಿಷ್ಠಿರೋ ಮಹಾತೇಜಾಃ ಪಪ್ರಚ್ಚೇದಂ ಚ ಧರ್ಮವಿತ್।।
ವೈಶಂಪಾಯನನು ಹೇಳಿದನು: “ಈ ಮಾತನ್ನು ಕೇಳಿ ಮಹಾತೇಜಸ್ವಿ ಯುಧಿಷ್ಠಿರನು ವಿಗತಜ್ವರನಾದನು. ಆ ಧರ್ಮವಿದುವು ಪುನಃ ಪ್ರಶ್ನಿಸಿದನು.
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಗೌತಮೀಲುಬ್ಧಕವ್ಯಾಲಮೃತ್ಯುಕಾಲಸಂವಾದೇ ಪ್ರಥಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಗೌತಮೀಲುಬ್ಧಕವ್ಯಾಲಮೃತ್ಯುಕಾಲಸಂವಾದ ಎನ್ನುವ ಮೊದಲನೇ ಅಧ್ಯಾಯವು.
-
ದಂಡ ಮತ್ತು ಚಕ್ರಗಳು ಅಸ್ವತಂತ್ರ ವಸ್ತುಗಳು. ತಾವಾಗಿಯೇ ಯಾವ ಕಾರ್ಯಗಳನ್ನೂ ಮಾಡಲು ಹೋಗುವುದಿಲ್ಲ. ಕುಂಬಾರನು ತಿರುಗಿಸಿದಂತೆ ಅವು ತಿರುಗುತ್ತವೆ. ↩︎
-
ಪರಸ್ಪರ ಪ್ರಚೋದನೆಯಿರುವುದರಿಂದ ಇದರಲ್ಲಿ ಕಾರ್ಯವು ಯಾವುದು? ಕಾರಣವು ಯಾವುದು? ಕಾರ್ಯಕ್ಕೆ ಮುಖ್ಯ ಕಾರಣವ್ಯಾವುದು? ಎಂಬುದರಲ್ಲಿ ಸಂದೇಹವುಂಟಾಗುತ್ತದೆ. ↩︎
-
ಕೊಡಲಿಯನ್ನು ತೆಗೆದುಕೊಳ್ಳುವುದು, ಮೇಲಕ್ಕೆತ್ತುವುದು, ಮತ್ತು ಪ್ರಹರಿಸುವುದು ಇವೆಲ್ಲವೂ ಛೇದನಕ್ರಿಯೆಗೆ ಕಾರಣಗಳಾಗುತ್ತವೆ. ಎರಡು ರೆಂಬೆಗಳು ಪರಸ್ಪರ ಸಂಘರ್ಷಿಸಿ ಬೆಂಕಿಯು ಹುಟ್ಟಿ ವನವು ಸುಟ್ಟುಹೋದರೆ ರೆಂಬೆಗಳು ಸಂಘರ್ಷಿಸಲು ಅಗೋಚರವಾದ ಗಾಳಿಯೇ ಕರ್ತೃವೆನ್ನಬಹುದು. ಆದರೆ ಗಾಳಿಗೆ ರೆಂಬೆಗಳನ್ನು ಸಂಘರ್ಷಿಸುವ ಕಾರ್ಯವಿರಲಿಲ್ಲ ಅಥವಾ ವನವನ್ನು ಸುಡುವ ಉದ್ದೇಶವಿರಲಿಲ್ಲ. ಹಾಗೆಯೇ ನನಗೂ ಬಾಲಕನನ್ನು ಕಚ್ಚುವ ಕಾರ್ಯವೂ ಇರಲಿಲ್ಲ. ಉದ್ದೇಶವೂ ಇರಲಿಲ್ಲ. ↩︎
-
ತಟಸ್ಥನಾಗಿದ್ದು ಉಪಕಾರಿಯಾಗ ಬಯಸಿದ ನನ್ನ ಮೇಲೆ ಪ್ರೀತಿಯೂ ಅಪಕಾರಿಗಳಾದ ನಿಮ್ಮ ಮೇಲೆ ಕ್ರೋಧವೂ ಜನರಿಗೆ ಹೇಗೆ ಉಂಟಾಗುತ್ತಿದ್ದಿತು? ಎಲ್ಲವೂ ಕಾಲಾಧೀನವೆಂದೇ ಭಾವಿಸಿದರೆ ಲೋಕದಲ್ಲಿ ರಾಗ-ದ್ವೇಷಗಳಿಗೆ ಅವಕಾಶವೇ ಇರುತ್ತಿರಲಿಲ್ಲ. ↩︎