351: ಉಂಚವೃತ್ಯುಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 351

ಸಾರ

ಉಂಚ ಮತ್ತು ಶಿಲವೃತ್ತಿಯಿಂದ ಪುರುಷನು ಸಿದ್ಧನಾಗಿ ದಿವ್ಯಗತಿಯನ್ನು ಪಡೆದುದು (1-6).

12351001 ಸೂರ್ಯ ಉವಾಚ।
12351001a ನೈಷ ದೇವೋಽನಿಲಸಖೋ ನಾಸುರೋ ನ ಚ ಪನ್ನಗಃ।
12351001c ಉಂಚವೃತ್ತಿವ್ರತೇ ಸಿದ್ಧೋ ಮುನಿರೇಷ ದಿವಂ ಗತಃ।।

ಸೂರ್ಯನು ಹೇಳಿದನು: “ಇವನು ಅನಿಲಸಖ ಅಗ್ನಿದೇವನಲ್ಲ. ಅಸುರನೂ ಅಲ್ಲ. ಪನ್ನಗನೂ ಅಲ್ಲ. ಉಂಚವೃತ್ತಿವ್ರತದಿಂದ ಸಿದ್ಧಿಯನ್ನು ಪಡೆದ ಈ ಮುನಿಯು ನನ್ನ ಮೂಲಕವಾಗಿ ದಿವಕ್ಕೆ ಹೋದನು.

12351002a ಏಷ ಮೂಲಫಲಾಹಾರಃ ಶೀರ್ಣಪರ್ಣಾಶನಸ್ತಥಾ।
12351002c ಅಂಬ್ಭಕ್ಷೋ ವಾಯುಭಕ್ಷಶ್ಚ ಆಸೀದ್ವಿಪ್ರಃ ಸಮಾಹಿತಃ।।

ಈ ವಿಪ್ರನು ಕಂದ-ಮೂಲ-ಫಲಗಳನ್ನೇ ಆಹಾರವನ್ನಾಗಿ ತಿನ್ನುತ್ತಿದ್ದನು. ಒಣಗಿದ ಎಲೆಗಳನ್ನು ತಿನ್ನುತ್ತಿದ್ದನು. ಏಕಾಗ್ರಚಿತ್ತನಾಗಿ ಕೇವಲ ನೀರನ್ನೇ ಕುಡಿಯುತ್ತಾ ಮತ್ತು ಗಾಳಿಯನ್ನೇ ಸೇವಿಸುತ್ತಾ ಇರುತ್ತಿದ್ದನು.

12351003a ಋಚಶ್ಚಾನೇನ ವಿಪ್ರೇಣ ಸಂಹಿತಾಂತರಭಿಷ್ಟುತಾಃ।
12351003c ಸ್ವರ್ಗದ್ವಾರಕೃತೋದ್ಯೋಗೋ ಯೇನಾಸೌ ತ್ರಿದಿವಂ ಗತಃ।।

ಈ ವಿಪ್ರನು ಸಂಹಿತೆಯ ಮಂತ್ರಗಳ ಮೂಲಕ ಋಚನನ್ನು ಸ್ತೋತ್ರಮಾಡಿದನು. ಸ್ವರ್ಗಲೋಕವನ್ನು ಪಡೆಯಲು ಸತತವಾಗಿ ಪ್ರಯತ್ನಿಸಿ ಇವನು ಈಗ ಸ್ವರ್ಗಕ್ಕೆ ಹೋದನು.

12351004a ಅಸನ್ನಧೀರನಾಕಾಂಕ್ಷೀ ನಿತ್ಯಮುಂಚಶಿಲಾಶನಃ।
12351004c ಸರ್ವಭೂತಹಿತೇ ಯುಕ್ತ ಏಷ ವಿಪ್ರೋ ಭುಜಂಗಮ।।

ಭುಜಂಗಮ! ಈ ವಿಪ್ರನು ಅಧೀರನೂ ಅನಾಕಾಂಕ್ಷಿಯೂ ಆಗಿದ್ದನು. ನಿತ್ಯವೂ ಉಂಚಶಿಲವೃತ್ತಿ1ಯಿಂದ ಪ್ರಾಪ್ತವಾದ ಅನ್ನದಿಂದಲೇ ಜೀವನವನ್ನು ನಿರ್ವಹಿಸುತ್ತಿದ್ದನು. ಸರ್ವಭೂತಹಿತರತನಾಗಿದ್ದನು.

12351005a ನ ಹಿ ದೇವಾ ನ ಗಂಧರ್ವಾ ನಾಸುರಾ ನ ಚ ಪನ್ನಗಾಃ।
12351005c ಪ್ರಭವಂತೀಹ ಭೂತಾನಾಂ ಪ್ರಾಪ್ತಾನಾಂ ಪರಮಾಂ ಗತಿಮ್।।

ಇಂತಹ ಉಂಚವೃತ್ತಿವ್ರತಧಾರಿಗಳು ಪಡೆಯುವ ಉತ್ತಮ ಗತಿಯನ್ನು ದೇವತೆಗಳಾಗಲೀ, ಗಂಧರ್ವರಾಗಲೀ, ಅಸುರರಾಗಲೀ, ಪನ್ನಗರಾಗಲೀ ಪಡೆದುಕೊಳ್ಳಲಾರರು.””

12351006 ನಾಗ ಉವಾಚ।
12351006a ಏತದೇವಂವಿಧಂ ದೃಷ್ಟಮಾಶ್ಚರ್ಯಂ ತತ್ರ ಮೇ ದ್ವಿಜ।
12351006c ಸಂಸಿದ್ಧೋ ಮಾನುಷಃ ಕಾಯೋ ಯೋಽಸೌ ಸಿದ್ಧಗತಿಂ ಗತಃ।
12351006e ಸೂರ್ಯೇಣ ಸಹಿತೋ ಬ್ರಹ್ಮನ್ ಪೃಥಿವೀಂ ಪರಿವರ್ತತೇ।।

ನಾಗನು ಹೇಳಿದನು: “ದ್ವಿಜ! ಬ್ರಹ್ಮನ್! ಅಲ್ಲಿ ನಾನು ಈ ವಿಧವಾದ ಆಶ್ಚರ್ಯವನ್ನು ನೋಡಿದೆನು. ಆ ಸಂಸಿದ್ಧ ಮನುಷ್ಯನು ಸಿದ್ಧರ ಗತಿಯನ್ನು ಪಡೆದು ಸೂರ್ಯನೊಡನೆ ಸೇರಿಕೊಂಡು ಪೃಥ್ವಿಯನ್ನು ಸುತ್ತುತ್ತಿದ್ದಾನೆ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಉಂಚವೃತ್ಯುನಪಾಖ್ಯಾನೇ ಏಕಪಂಚಾಶದಧಿಕತ್ರಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಉಂಚವೃತ್ಯುಪಾಖ್ಯಾನ ಎನ್ನುವ ಮುನ್ನೂರಾಐವತ್ತೊಂದನೇ ಅಧ್ಯಾಯವು.


  1. ಹೊಲದ ಕೊಯಿಲಾದನಂತರ ಕೆಳಗೆ ಬಿದ್ದಿರುವ ಕಾಳುಗಳನ್ನೇ ಆರಿಸಿಕೊಂಡು ತಿನ್ನುವುದು (ಭಾರತ ದರ್ಶನ). ↩︎