350: ಉಂಚವೃತ್ಯುಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 350

ಸಾರ

ಬ್ರಾಹ್ಮಣನು ಕೇಳಲು ನಾಗರಾಜನು ಸೂರ್ಯಮಂಡಲದ ಆಶ್ಚರ್ಯಜನಿಕ ಘಟನೆಗಳನ್ನು ವರ್ಣಿಸಿದುದು (1-15).

12350001 ಬ್ರಾಹ್ಮಣ ಉವಾಚ।
12350001a ವಿವಸ್ವತೋ ಗಚ್ಚತಿ ಪರ್ಯಯೇಣ ವೋಢುಂ ಭವಾಂಸ್ತಂ ರಥಮೇಕಚಕ್ರಮ್।
12350001c ಆಶ್ಚರ್ಯಭೂತಂ ಯದಿ ತತ್ರ ಕಿಂ ಚಿದ್ ದೃಷ್ಟಂ ತ್ವಯಾ ಶಂಸಿತುಮರ್ಹಸಿ ತ್ವಮ್।।

ಬ್ರಾಹ್ಮಣನು ಹೇಳಿದನು: “ನೀನು ವಿವಸ್ವತನ ಏಕಚಕ್ರರಥವನ್ನು ಹೊರಲು ಸರದಿಯ ಪ್ರಕಾರ ಹೋಗುತ್ತೀಯೆ. ಅಲ್ಲೇನಾದರೂ ನೀನು ಯಾವುದಾದರೂ ಆಶ್ಚಯಕರ ಸಂಗತಿಯನ್ನು ನೋಡಿದ್ದಾದರೆ ಅದನ್ನು ನನಗೆ ಹೇಳಬೇಕು.”

12350002 ನಾಗ ಉವಾಚ।
112350002a ಯಸ್ಯ ರಶ್ಮಿಸಹಸ್ರೇಷು ಶಾಖಾಸ್ವಿವ ವಿಹಂಗಮಾಃ।
12350002c ವಸಂತ್ಯಾಶ್ರಿತ್ಯ ಮುನಯಃ ಸಂಸಿದ್ಧಾ ದೈವತೈಃ ಸಹ।।

ನಾಗನು ಹೇಳಿದನು: “ಪಕ್ಷಿಗಳು ವೃಕ್ಷಶಾಖೆಗಳಲ್ಲಿ ಹೇಗೋ ಹಾಗೆ ಸೂರ್ಯನ ಸಹಸ್ರಾರು ರಶ್ಮಿಗಳಲ್ಲಿ ದೇವತೆಗಳೊಂದಿಗೆ ಸಂಸಿದ್ಧ ಮುನಿಗಳು ಆಶ್ರಯಪಡೆದು ವಾಸಿಸಿದ್ದಾರೆ.

12350003a ಯತೋ ವಾಯುರ್ವಿನಿಃಸೃತ್ಯ ಸೂರ್ಯರಶ್ಮ್ಯಾಶ್ರಿತೋ ಮಹಾನ್।
12350003c ವಿಜೃಂಭತ್ಯಂಬರೇ ವಿಪ್ರ ಕಿಮಾಶ್ಚರ್ಯತರಂ ತತಃ।।

ವಿಪ್ರ! ಸೂರ್ಯನನ್ನು ಆಶ್ರಯಿಸಿರುವ ಮಹಾವಾಯುವು ಅವನ ರಶ್ಮಿಗಳಿಂದ ಹೊರಬಂದು ಅಂಬರದಲ್ಲಿ ವಿಜೃಂಭಿಸುತ್ತಾನೆ ಎಂದರೆ ಅದಕ್ಕಿಂತಲೂ ಹೆಚ್ಚಿನ ಆಶ್ಚರ್ಯವಾದುದಾದರೂ ಏನಿದೆ?

212350004a ಶುಕ್ರೋ ನಾಮಾಸಿತಃ ಪಾದೋ ಯಸ್ಯ ವಾರಿಧರೋಽಂಬರೇ।
12350004c ತೋಯಂ ಸೃಜತಿ ವರ್ಷಾಸು ಕಿಮಾಶ್ಚರ್ಯಮತಃ ಪರಮ್।।

ವರ್ಷಋತುವಿನಲ್ಲಿ ನೀರನ್ನು ಸೃಷ್ಟಿಸುವ ಶುಕ್ರ ಎಂಬ ಹೆಸರಿನ ನೀರನ್ನು ಹೊತ್ತ ಮೋಡವು ಅವನ ಪಾದವೇ ಆಗಿದೆ. ಅದಕ್ಕಿಂದಲೂ ಹೆಚ್ಚಿನ ಆಶ್ಚರ್ಯವು ಏನಿದೆ?

12350005a ಯೋಽಷ್ಟಮಾಸಾಂಸ್ತು ಶುಚಿನಾ ಕಿರಣೇನೋಜ್ಝಿತಂ ಪಯಃ।
12350005c ಪರ್ಯಾದತ್ತೇ ಪುನಃ ಕಾಲೇ ಕಿಮಾಶ್ಚರ್ಯಮತಃ ಪರಮ್।।

ಪುನಃ ಎಂಟು ತಿಂಗಳು ವಾರ್ಷಾಕಾಲದ ನೀರನ್ನು ಶುದ್ಧ ಕಿರಣಗಳಿಂದ ಸೂರ್ಯನು ಸಂಗ್ರಹಿಸುತ್ತಾನೆ. ಇದಕ್ಕಿಂತಲೂ ಆಶ್ಚರ್ಯವಾದುದು ಬೇರೆ ಏನಿದೆ?

12350006a ಯಸ್ಯ ತೇಜೋವಿಶೇಷೇಷು ನಿತ್ಯಮಾತ್ಮಾ ಪ್ರತಿಷ್ಠಿತಃ।
12350006c ಯತೋ ಬೀಜಂ ಮಹೀ ಚೇಯಂ ಧಾರ್ಯತೇ ಸಚರಾಚರಮ್।।
12350007a ಯತ್ರ ದೇವೋ ಮಹಾಬಾಹುಃ ಶಾಶ್ವತಃ ಪರಮೋಽಕ್ಷರಃ।
12350007c ಅನಾದಿನಿಧನೋ ವಿಪ್ರ ಕಿಮಾಶ್ಚರ್ಯಮತಃ ಪರಮ್।।

ಸೂರ್ಯನ ವಿಶೇಷ ತೇಜಸ್ಸಿನಲ್ಲಿ ನಿತ್ಯವೂ ಆತ್ಮನು ಪ್ರತಿಷ್ಠಿತನಾಗಿರುವನು. ಅವನಿಂದಲೇ ಬೀಜಗಳಾಗುತ್ತವೆ. ಅವನೇ ಸಚರಾಚರ ಮಹಿಯನ್ನು ಧರಿಸಿದ್ದಾನೆ. ವಿಪ್ರ! ಅವನೇ ದೇವ. ಮಹಾಬಾಹು. ಶಾಶ್ವತ, ಪರಮ ಅಕ್ಷರ ಮತ್ತು ಅನಾದಿನಿಧನ. ಇದಕ್ಕಿಂತಲೂ ಆಶ್ಚರ್ಯಕರವಾದುದು ಬೇರೆ ಏನಿದೆ?

12350008a ಆಶ್ಚರ್ಯಾಣಾಮಿವಾಶ್ಚರ್ಯಮಿದಮೇಕಂ ತು ಮೇ ಶೃಣು।
12350008c ವಿಮಲೇ ಯನ್ಮಯಾ ದೃಷ್ಟಮಂಬರೇ ಸೂರ್ಯಸಂಶ್ರಯಾತ್।।

ಸೂರ್ಯನ ಆಶ್ರಯವನ್ನು ಪಡೆದಿರುವಾಗ ನಿರ್ಮಲ ಅಂಬರದಲ್ಲಿ ಈ ಎಲ್ಲ ಆಶ್ಚರ್ಯಗಳಲ್ಲಿಯೇ ಅತ್ಯಂತ ಆಶ್ಚರ್ಯಕರ ವಿಷಯವೊಂದನ್ನು ನಾನು ನೋಡಿದೆ. ಅದರ ಕುರಿತು ಕೇಳು.

12350009a ಪುರಾ ಮಧ್ಯಾಹ್ನಸಮಯೇ ಲೋಕಾಂಸ್ತಪತಿ ಭಾಸ್ಕರೇ।
12350009c ಪ್ರತ್ಯಾದಿತ್ಯಪ್ರತೀಕಾಶಃ ಸರ್ವತಃ ಪ್ರತ್ಯದೃಶ್ಯತ।।

ಹಿಂದೊಮ್ಮೆ ಮಧ್ಯಾಹ್ನದ ಸಮಯದಲ್ಲಿ ಭಾಸ್ಕರನು ಲೋಕಗಳನ್ನು ಸುಡುತ್ತಿದ್ದಾಗ ಅವನಂತೆಯೇ ಪ್ರಕಾಶಿಸುತ್ತಿದ್ದ ಪುರುಷನು ಎಲ್ಲ ಕಡೆಗಳಿಂದಲೂ ಕಾಣಿಸತೊಡಗಿದನು.

12350010a ಸ ಲೋಕಾಂಸ್ತೇಜಸಾ ಸರ್ವಾನ್ಸ್ವಭಾಸಾ ನಿರ್ವಿಭಾಸಯನ್।
12350010c ಆದಿತ್ಯಾಭಿಮುಖೋಽಭ್ಯೇತಿ ಗಗನಂ ಪಾಟಯನ್ನಿವ।।

ತನ್ನ ತೇಜಸ್ಸಿನಿಂದ ಎಲ್ಲ ಲೋಕಗಳನ್ನೂ ಪ್ರಕಾಶಗೊಳಿಸುತ್ತಾ ಅವನು ಆಕಾಶವನ್ನೇ ಸೀಳಿ ಬಿಡುವನೋ ಎನ್ನುವಂತೆ ವೇಗವಾಗಿ ಸೂರ್ಯನಿಗೆ ಅಭಿಮುಖನಾಗಿಯೇ ಬಂದನು.

12350011a ಹುತಾಹುತಿರಿವ ಜ್ಯೋತಿರ್ವ್ಯಾಪ್ಯ ತೇಜೋಮರೀಚಿಭಿಃ।
12350011c ಅನಿರ್ದೇಶ್ಯೇನ ರೂಪೇಣ ದ್ವಿತೀಯ ಇವ ಭಾಸ್ಕರಃ।।

ಆಹುತಿಯಿಂದ ಪ್ರಜ್ವಲಿಸುವ ಅಗ್ನಿಯಂತೆ ತೇಜೋಮಯ ಕಿರಣಗಳಿಂದ ಜ್ಯೋತಿರ್ಮಂಡಲವನ್ನೇ ವ್ಯಾಪಿಸಿ ಅನಿರ್ವಚನೀಯ ರೂಪದಿಂದ ಎರಡನೇ ಭಾಸ್ಕರನಂತೆ ಅವನು ಹೊಳೆಯುತ್ತಿದ್ದನು.

12350012a ತಸ್ಯಾಭಿಗಮನಪ್ರಾಪ್ತೌ ಹಸ್ತೋ ದತ್ತೋ ವಿವಸ್ವತಾ।
12350012c ತೇನಾಪಿ ದಕ್ಷಿಣೋ ಹಸ್ತೋ ದತ್ತಃ ಪ್ರತ್ಯರ್ಚನಾರ್ಥಿನಾ।।

ಅವನು ತನ್ನ ಸಮೀಪಕ್ಕೆ ಬರಲು ವಿವಸ್ವತನು ತನ್ನ ಎರಡು ಕೈಗಳನ್ನು ಮುಂದಕ್ಕೆ ಚಾಚಿ ಅವನನ್ನು ಸ್ವಾಗತಿಸಿದನು. ಅವನೂ ಕೂಡ ಸೂರ್ಯನನ್ನು ಪ್ರತಿಸಮ್ಮಾನಿಸುವ ಸಲುವಾಗಿ ತನ್ನ ಬಲಗೈಯನ್ನು ಮುಂದಕ್ಕೆ ಚಾಚಿದನು.

12350013a ತತೋ ಭಿತ್ತ್ವೈವ ಗಗನಂ ಪ್ರವಿಷ್ಟೋ ರವಿಮಂಡಲಮ್।
12350013c ಏಕೀಭೂತಂ ಚ ತತ್ತೇಜಃ ಕ್ಷಣೇನಾದಿತ್ಯತಾಂ ಗತಮ್।।

ಆಗ ಗಗನವನ್ನೇ ಭೇದಿಸಿ ಅವನು ರವಿಮಂಡಲವನ್ನು ಪ್ರವೇಶಿಸಿದನು. ಕ್ಷಣದಲ್ಲಿಯೇ ಆ ತೇಜಸ್ಸು ಆದಿತ್ಯನನ್ನು ಸೇರಿ ಏಕೀಭೂತವಾಯಿತು.

12350014a ತತ್ರ ನಃ ಸಂಶಯೋ ಜಾತಸ್ತಯೋಸ್ತೇಜಃಸಮಾಗಮೇ।
12350014c ಅನಯೋಃ ಕೋ ಭವೇತ್ಸೂರ್ಯೋ ರಥಸ್ಥೋ ಯೋಽಯಮಾಗತಃ।।

ಅವರ ತೇಜಸ್ಸುಗಳು ಹಾಗೆ ಒಂದಾಗಲು ನಮಗೆ ಸಂಶಯವುಂಟಾಯಿತು. ನಿಜವಾದ ಸೂರ್ಯನು ಯಾರು? ರಥದಲ್ಲಿ ಕುಳಿತಿರುವವನೇ ಅಥವಾ ಅವನಿಗೆ ಅಭಿಮುಖನಾಗಿ ಬಂದವನೇ?

12350015a ತೇ ವಯಂ ಜಾತಸಂದೇಹಾಃ ಪರ್ಯಪೃಚ್ಚಾಮಹೇ ರವಿಮ್।
12350015c ಕ ಏಷ ದಿವಮಾಕ್ರಮ್ಯ ಗತಃ ಸೂರ್ಯ ಇವಾಪರಃ।।

ಹಾಗೆ ಸಂದೇಹಗ್ರಸ್ತರಾದ ನಾವು ರವಿಯನ್ನು ಕೇಳಿದೆವು: “ಇನ್ನೊಬ್ಬ ಸೂರ್ಯನಂತೆಯೇ ದಿವವನ್ನು ಆಕ್ರಮಿಸಿ ಬಂದಿದ್ದವನು ಯಾರು?”

ಸಮಾಪ್ತಿ ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಉಂಚವೃತ್ಯುಪಾಖ್ಯಾನೇ ಪಂಚಾಶದಧಿಕತ್ರಿಶತತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಉಂಚವೃತ್ಯುಪಾಖ್ಯಾನ ಎನ್ನುವ ಮುನ್ನೂರಾಐವತ್ತನೇ ಅಧ್ಯಾಯವು.

  1. ಇದಕ್ಕೆ ಮೊದಲು ಈ ಒಂದು ಅಧಿಕಶ್ಲೋಕವಿದೆ: ಆಶ್ಚರ್ಯಾಣಾಮನೇಕಾನಾಂ ಪ್ರತಿಷ್ಠಾ ಭಗವಾನ್ರವಿಃ। ಯತೋ ಭೂತಾಃ ಪ್ರವರ್ತಂತೇ ಸರ್ವೇ ತ್ರೈಲೋಕ್ಯಸಮ್ಮತಾಃ।। (ಭಾರತದರ್ಶನ). ↩︎

  2. ಇದಕ್ಕೆ ಮೊದಲು ಈ ಎರಡು ಅಧಿಕಶ್ಲೋಕಗಳಿವೆ: ವಿಭಜ್ಯ ತಂ ತು ವಿಪ್ರರ್ಷೇ ಪ್ರಜಾನಾಂ ಹಿತಕಾಮ್ಯಯಾ। ತೋಯಂ ಸೃಜತಿ ವರ್ಷಾಸು ಕಿಮಾಶ್ಚರ್ಯಮತಃ ಪರಮ್।। ಯಸ್ಯ ಮಂಡಲಮಧ್ಯಸ್ಥೋ ಮಹಾತ್ಮಾ ಪರಮತ್ವಿಷಾ। ದೀಪ್ತಃ ಸಮೀಕ್ಷತೇ ಲೋಕಾನ್ಕಿಮಾಶ್ಚರ್ಯಮತಃ ಪರಮ್।। (ಭಾರತದರ್ಶನ). ↩︎