349: ಉಂಚವೃತ್ಯುಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 349

ಸಾರ

ನಾಗರಾಜ ಮತ್ತು ಬ್ರಾಹ್ಮಣರ ಭೇಟಿ ಮತ್ತು ಮಾತುಕಥೆ (1-16).

12349001 ಭೀಷ್ಮ ಉವಾಚ।
12349001a ಸ ಪನ್ನಗಪತಿಸ್ತತ್ರ ಪ್ರಯಯೌ ಬ್ರಾಹ್ಮಣಂ ಪ್ರತಿ।
12349001c ತಮೇವ ಮನಸಾ ಧ್ಯಾಯನ್ ಕಾರ್ಯವತ್ತಾಂ ವಿಚಾರಯನ್।।

ಭೀಷ್ಮನು ಹೇಳಿದನು: “ಅವನು ಯಾವ ಕಾರ್ಯಕ್ಕಾಗಿ ಬಂದಿರಬಹುದೆಂದು ಮನಸ್ಸಿನಲ್ಲಿಯೇ ಧ್ಯಾನಿಸಿ ವಿಚಾರಿಸುತ್ತಾ ಆ ಪನ್ನಗಪತಿಯು ಬ್ರಾಹ್ಮಣನಿದ್ದಲ್ಲಿಗೆ ಹೋದನು.

12349002a ತಮಭಿಕ್ರಮ್ಯ ನಾಗೇಂದ್ರೋ ಮತಿಮಾನ್ಸ ನರೇಶ್ವರ।
12349002c ಪ್ರೋವಾಚ ಮಧುರಂ ವಾಕ್ಯಂ ಪ್ರಕೃತ್ಯಾ ಧರ್ಮವತ್ಸಲಃ।।

ನರೇಶ್ವರ! ಸ್ವಭಾವತಃ ಧರ್ಮವತ್ಸಲನಾಗಿದ್ದ ಆ ಮತಿಮಂತ ನಾಗೇಂದ್ರನು ಅವನನ್ನು ಸಮೀಪಿಸಿ ಈ ಮಧುರ ಮಾತನ್ನಾಡಿದನು:

12349003a ಭೋ ಭೋ ಕ್ಷಾಮ್ಯಾಭಿಭಾಷೇ ತ್ವಾಂ ನ ರೋಷಂ ಕರ್ತುಮರ್ಹಸಿ।
12349003c ಇಹ ತ್ವಮಭಿಸಂಪ್ರಾಪ್ತಃ ಕಸ್ಯಾರ್ಥೇ ಕಿಂ ಪ್ರಯೋಜನಮ್।।

“ಭೋ ಭೋ! ನಿನ್ನೊಡನೆ ಮಾತನಾಡುತ್ತಿರುವ ನನ್ನನ್ನು ಕ್ಷಮಿಸು. ರೋಷಗೊಳ್ಳಬೇಡ. ನೀನು ಯಾರ ಸಲುವಾಗಿ ಮತ್ತು ಯಾವ ಪ್ರಯೋಜನಕ್ಕಾಗಿ ಇಲ್ಲಿಗೆ ಆಗಮಿಸಿರುವೆ?

12349004a ಆಭಿಮುಖ್ಯಾದಭಿಕ್ರಮ್ಯ ಸ್ನೇಹಾತ್ ಪೃಚ್ಚಾಮಿ ತೇ ದ್ವಿಜ।
12349004c ವಿವಿಕ್ತೇ ಗೋಮತೀತೀರೇ ಕಿಂ ವಾ ತ್ವಂ ಪರ್ಯುಪಾಸಸೇ।।

ದ್ವಿಜ! ನಿನ್ನ ಸಮ್ಮುಖದಲ್ಲಿ ನಿಂತು ಸ್ನೇಹದಿಂದ ನಿನ್ನನ್ನು ಕೇಳುತ್ತಿದ್ದೇನೆ. ಗೋಮತೀ ತೀರದಲ್ಲಿ ಏಕಾಂಗಿಯಾಗಿ ಯಾರನ್ನು ಉಪಾಸಿಸುತ್ತಿರುವೆ?”

12349005 ಬ್ರಾಹ್ಮಣ ಉವಾಚ।
12349005a ಧರ್ಮಾರಣ್ಯಂ ಹಿ ಮಾಂ ವಿದ್ಧಿ ನಾಗಂ ದ್ರಷ್ಟುಮಿಹಾಗತಮ್।
12349005c ಪದ್ಮನಾಭಂ ದ್ವಿಜಶ್ರೇಷ್ಠಂ ತತ್ರ ಮೇ ಕಾರ್ಯಮಾಹಿತಮ್।।

ಬ್ರಾಹ್ಮಣನು ಹೇಳಿದನು: “ನನ್ನನ್ನು ಧರ್ಮಾರಣ್ಯನೆಂದು ತಿಳಿ. ಪದ್ಮನಾಭನೆಂಬ ದ್ವಿಜಶ್ರೇಷ್ಠ ನಾಗನನ್ನು ನೋಡಲು ಇಲ್ಲಿಗೆ ಬಂದಿದ್ದೇನೆ. ಅವನಲ್ಲಿ ನನಗೆ ಸ್ವಲ್ಪ ಕೆಲಸವಿದೆ.

12349006a ತಸ್ಯ ಚಾಹಮಸಾಂನಿಧ್ಯಂ ಶ್ರುತವಾನಸ್ಮಿ ತಂ ಗತಮ್।
12349006c ಸ್ವಜನಂ ತಂ ಪ್ರತೀಕ್ಷಾಮಿ ಪರ್ಜನ್ಯಮಿವ ಕರ್ಷಕಃ।।

ಅವನು ಇಲ್ಲಿಲ್ಲವೆಂದೂ ಹೊರಗೆ ಹೋಗಿದ್ದಾನೆಂದೂ ಅವನ ಸ್ವಜನರಿಂದ ತಿಳಿದುಕೊಂಡೆ. ಕೃಷಿಕನು ಮಳೆಯನ್ನು ಹೇಗೋ ಹಾಗೆ ಅವನ ಪ್ರತೀಕ್ಷೆಯಲ್ಲಿದ್ದೇನೆ.

12349007a ತಸ್ಯ ಚಾಕ್ಲೇಶಕರಣಂ ಸ್ವಸ್ತಿಕಾರಸಮಾಹಿತಮ್।
12349007c ವರ್ತಯಾಮ್ಯಯುತಂ ಬ್ರಹ್ಮ ಯೋಗಯುಕ್ತೋ ನಿರಾಮಯಃ।।

ಅವನಿಗೆ ಯಾವ ವಿಧದ ಕ್ಲೇಶವೂ ಉಂಟಾಗದೇ ಕುಶಲನಾಗಿ ಹಿಂದಿರುಗಲೆಂದು ನಾನು ನಿರಾಮಯನಾಗಿ ಯೋಗಯುಕ್ತನಾಗಿ ವೇದಪಾರಾಯಣವನ್ನು ಮಾಡುತ್ತಿದ್ದೇನೆ.”

12349008 ನಾಗ ಉವಾಚ।
12349008a ಅಹೋ ಕಲ್ಯಾಣವೃತ್ತಸ್ತ್ವಂ ಸಾಧು ಸಜ್ಜನವತ್ಸಲಃ।
12349008c ಶ್ರವಾಢ್ಯಸ್ತ್ವಂ1 ಮಹಾಭಾಗ ಪರಂ ಸ್ನೇಹೇನ ಪಶ್ಯಸಿ।।

ನಾಗನು ಹೇಳಿದನು: “ನಿನ್ನ ಆಚರಣೆಯು ಕಲ್ಯಾಣಮಯವಾಗಿದೆ. ನೀನು ಸಾಧು ಮತ್ತು ಸಜ್ಜನವತ್ಸಲನು. ಮಹಾಭಾಗ! ಯಾವುದೇ ಕಾರಣದಿಂದಲೂ ನೀನು ನಿಂದನೀಯನಲ್ಲ. ಇತರರನ್ನು ನೀನು ಪರಮ ಸ್ನೇಹದಿಂದ ಕಾಣುತ್ತಿದ್ದೀಯೆ.

12349009a ಅಹಂ ಸ ನಾಗೋ ವಿಪ್ರರ್ಷೇ ಯಥಾ ಮಾಂ ವಿಂದತೇ ಭವಾನ್।
12349009c ಆಜ್ಞಾಪಯ ಯಥಾ ಸ್ವೈರಂ ಕಿಂ ಕರೋಮಿ ಪ್ರಿಯಂ ತವ।।

ವಿಪ್ರರ್ಷೇ! ಯಾರನ್ನು ನೀನು ಕಾಯುತ್ತಿದ್ದೀಯೋ ಆ ನಾಗನೇ ನಾನು. ನಿನಗೆ ಪ್ರಿಯವಾದ ಏನನ್ನು ಮಾಡಲಿ? ಆಜ್ಞಾಪಿಸು.

12349010a ಭವಂತಂ ಸ್ವಜನಾದಸ್ಮಿ ಸಂಪ್ರಾಪ್ತಂ ಶ್ರುತವಾನಿಹ।
12349010c ಅತಸ್ತ್ವಾಂ ಸ್ವಯಮೇವಾಹಂ ದ್ರಷ್ಟುಮಭ್ಯಾಗತೋ ದ್ವಿಜ।।

ದ್ವಿಜ! ಸ್ವಜನರ ಮೂಲಕ ನಿನ್ನ ಆಗಮನದ ಕುರಿತು ಕೇಳಿದೆ. ಆದುದರಿಂದ ನಾನಾಗಿಯೇ ನಿನ್ನನ್ನು ಸಂದರ್ಶಿಸಲು ಬಂದಿದ್ದೇನೆ.

12349011a ಸಂಪ್ರಾಪ್ತಶ್ಚ ಭವಾನದ್ಯ ಕೃತಾರ್ಥಃ ಪ್ರತಿಯಾಸ್ಯತಿ।
12349011c ವಿಸ್ರಬ್ಧೋ ಮಾಂ ದ್ವಿಜಶ್ರೇಷ್ಠ ವಿಷಯೇ ಯೋಕ್ತುಮರ್ಹಸಿ।।

ಇಲ್ಲಿಗೆ ಬಂದಿರುವ ನೀನು ಇಂದು ಕೃತಾರ್ಥನಾಗಿಯೇ ಹಿಂದಿರುಗುತ್ತೀಯೆ. ದ್ವಿಜಶ್ರೇಷ್ಠ! ಸಂದೇಹವಿಲ್ಲದೇ ವಿಷಯವನ್ನು ನನ್ನಲ್ಲಿ ಹೇಳಬೇಕು.

12349012a ವಯಂ ಹಿ ಭವತಾ ಸರ್ವೇ ಗುಣಕ್ರೀತಾ ವಿಶೇಷತಃ।
12349012c ಯಸ್ತ್ವಮಾತ್ಮಹಿತಂ ತ್ಯಕ್ತ್ವಾ ಮಾಮೇವೇಹಾನುರುಧ್ಯಸೇ।।

ಆತ್ಮಹಿತವನ್ನೂ ಪರಿತ್ಯಜಿಸಿ ನನ್ನ ಕಲ್ಯಾಣವನ್ನೇ ಚಿಂತಿಸುತ್ತಿರುವ ನೀನು ನನ್ನನ್ನೂ ನನ್ನ ಬಂಧುಗಳನ್ನೂ ನಿನ್ನ ವಿಶೇಷ ಗುಣಗಳಿಂದ ಕೊಂಡುಕೊಂಡುಬಿಟ್ಟಿರುವೆ.”

12349013 ಬ್ರಾಹ್ಮಣ ಉವಾಚ।
12349013a ಆಗತೋಽಹಂ ಮಹಾಭಾಗ ತವ ದರ್ಶನಲಾಲಸಃ।
12349013c ಕಂ ಚಿದರ್ಥಮನರ್ಥಜ್ಞಃ ಪ್ರಷ್ಟುಕಾಮೋ ಭುಜಂಗಮ।।

ಬ್ರಾಹ್ಮಣನು ಹೇಳಿದನು: “ಭುಜಂಗಮ! ಮಹಾಭಾಗ! ನಿನ್ನ ದರ್ಶನಲಾಲಸನಾಗಿ ನಾನು ಇಲ್ಲಿಗೆ ಬಂದಿದ್ದೇನೆ. ನನಗೆ ತಿಳಿಯದೇ ಇರುವ ಒಂದು ವಿಷಯವನ್ನು ಕೇಳಲು ಬಯಸಿದ್ದೇನೆ.

12349014a ಅಹಮಾತ್ಮಾನಮಾತ್ಮಸ್ಥೋ ಮಾರ್ಗಮಾಣೋಽತ್ಮನೋ ಹಿತಮ್2
12349014c ವಾಸಾರ್ಥಿನಂ ಮಹಾಪ್ರಾಜ್ಞ ಬಲವಂತಮುಪಾಸ್ಮಿ3 ಹ।।

ಮಹಾಪ್ರಾಜ್ಞ! ನಾನು ಆತ್ಮನನ್ನು ಆತ್ಮನಲ್ಲಿಯೇ ಸ್ಥಿರೀಕರಿಸಿ ಆತ್ಮಹಿತ ಮಾರ್ಗವನ್ನು ಅನುಸರಿಸಲು ಬಯಸುತ್ತೇನೆ. ಆದರೆ ಗೃಹಸ್ಥಾಶ್ರಮದಲ್ಲಿಯೇ ಇರುವ ಬಲವಾದ ಬಯಕೆಯನ್ನೂ ಹೊಂದಿದ್ದೇನೆ.

12349015a ಪ್ರಕಾಶಿತಸ್ತ್ವಂ ಸ್ವಗುಣೈರ್ಯಶೋಗರ್ಭಗಭಸ್ತಿಭಿಃ।
12349015c ಶಶಾಂಕಕರಸಂಸ್ಪರ್ಶೈರ್ಹೃದ್ಯೈರಾತ್ಮಪ್ರಕಾಶಿತೈಃ।।

ಚಂದ್ರನಂತೆ ಸುಖಸ್ಪರ್ಶಿಗಳಾದ ಯಶೋಗರ್ಭ ಕಿರಣಗಳಂಥಹ ಸ್ವಗುಣಗಳಿಂದ ಕೂಡಿದ್ದು ನೀನು ಆತ್ಮಪ್ರಕಾಶದಿಂದ ಪ್ರಕಾಶಿತನಾಗಿರುವೆ.

12349016a ತಸ್ಯ ಮೇ ಪ್ರಶ್ನಮುತ್ಪನ್ನಂ ಚಿಂಧಿ ತ್ವಮನಿಲಾಶನ।
12349016c ಪಶ್ಚಾತ್ಕಾರ್ಯಂ ವದಿಷ್ಯಾಮಿ ಶ್ರೋತುಮರ್ಹತಿ ಮೇ ಭವಾನ್।।

ಅನಿಲಾಶನ! ನನ್ನಲ್ಲಿ ಒಂದು ಪ್ರಶ್ನೆಯು ಉತ್ಪನ್ನವಾಗಿದೆ. ಅದನ್ನು ಹೋಗಲಾಡಿಸು. ಅನಂತರ ನಾನು ಬಂದ ಕಾರ್ಯದ ಕುರಿತು ಹೇಳುತ್ತೇನೆ. ಅದನ್ನು ನೀನು ಕೇಳಬೇಕು.”

ಸಮಾಪ್ತಿ ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಉಂಚವೃತ್ಯುಪಾಖ್ಯಾನೇ ಏಕೋನಪಂಚಾಶದಧಿಕತ್ರಿಶತತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಉಂಚವೃತ್ಯುಪಾಖ್ಯಾನ ಎನ್ನುವ ಮುನ್ನೂರಾನಲ್ವತ್ತೊಂಭತ್ತನೇ ಅಧ್ಯಾಯವು.

  1. ಅವಾಚ್ಯಸ್ತ್ವಂ (ಭಾರತದರ್ಶನ). ↩︎

  2. ಗತಿಮ್। (ಭಾರತದರ್ಶನ). ↩︎

  3. ಚಲಚ್ಚಿತ್ತಮುಪಾಸ್ಮಿ (ಭಾರತದರ್ಶನ). ↩︎