ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 348
ಸಾರ
ಪತ್ನಿಯ ಧರ್ಮಯುಕ್ತ ಮಾತುಗಳನ್ನು ಕೇಳಿ ಅಭಿಮಾನ-ರೋಷಗಳನ್ನು ತೊರೆದ ನಾಗರಾಜನು ಬ್ರಾಹ್ಮಣನ ದರ್ಶನಮಾಡಲು ಹೊರಟಿದುದು (1-20).
12348001 ನಾಗ ಉವಾಚ।
12348001a ಅಥ ಬ್ರಾಹ್ಮಣರೂಪೇಣ ಕಂ ತಂ ಸಮನುಪಶ್ಯಸಿ।
12348001c ಮಾನುಷಂ ಕೇವಲಂ ವಿಪ್ರಂ ದೇವಂ ವಾಥ ಶುಚಿಸ್ಮಿತೇ।।
ನಾಗನು ಹೇಳಿದನು: “ಶುಚಿಸ್ಮಿತೇ! ಬ್ರಾಹ್ಮಣರೂಪದಲ್ಲಿದ್ದ ಯಾರನ್ನು ನೀನು ನೋಡಿದೆ? ಆ ವಿಪ್ರನು ಕೇವಲ ಮನುಷ್ಯನೇ ಅಥವಾ ದೇವತೆಯೇ?
12348002a ಕೋ ಹಿ ಮಾಂ ಮಾನುಷಃ ಶಕ್ತೋ ದ್ರಷ್ಟುಕಾಮೋ ಯಶಸ್ವಿನಿ।
12348002c ಸಂದರ್ಶನರುಚಿರ್ವಾಕ್ಯಮಾಜ್ಞಾಪೂರ್ವಂ ವದಿಷ್ಯತಿ।।
ಯಶಸ್ವಿನೀ! ಮನುಷ್ಯರಲ್ಲಿ ಯಾರು ತಾನೇ ನನ್ನನ್ನು ನೋಡಲು ಶಕ್ತನಾಗಿದ್ದಾನೆ? ಸಂದರ್ಶನವನ್ನು ಅಪೇಕ್ಷಿಸಿದ್ದರೂ ಯಾರು ತಾನೇ ತನ್ನಲ್ಲಿಗೇ ಬಂದು ದರ್ಶನವನ್ನೀಯಬೇಕೆಂದು ಆಜ್ಞಾಪೂರ್ವಕವಾಗಿ ಹೇಳಬಲ್ಲನು?
12348003a ಸುರಾಸುರಗಣಾನಾಂ ಚ ದೇವರ್ಷೀಣಾಂ ಚ ಭಾಮಿನಿ।
12348003c ನನು ನಾಗಾ ಮಹಾವೀರ್ಯಾಃ ಸೌರಸೇಯಾಸ್ತರಸ್ವಿನಃ।।
12348004a ವಂದನೀಯಾಶ್ಚ ವರದಾ ವಯಮಪ್ಯನುಯಾಯಿನಃ।
12348004c ಮನುಷ್ಯಾಣಾಂ ವಿಶೇಷೇಣ ಧನಾಧ್ಯಕ್ಷಾ ಇತಿ ಶ್ರುತಿಃ1।।
ಭಾಮಿನಿ! ಸುರಸೆಯ ವಂಶಜರಾದ ಮತ್ತು ಅತ್ಯಂತವೇಗಶಾಲಿಗಳಾದ ಮಹಾವೀರ್ಯ ನಾಗಗಳು ನಾವು ಸುರಾಸುರಗಣಗಳಿಗೂ ಮತ್ತು ದೇವರ್ಷಿಗಳಿಗೂ ಅಧಿಕರಲ್ಲವೇ? ನಾವು ವಂದನೀಯರು ಮತ್ತು ವರಗಳನ್ನೂ ನೀಡುವವರು. ವಿಶೇಷವಾಗಿ ನಮ್ಮನ್ನು ಅನುಸರಿಸುವ ಮನುಷ್ಯರಿಗೆ ನಾವು ಧನಾಧ್ಯಕ್ಷರೆಂದು ವಿಶ್ರುತರಾಗಿದ್ದೇವೆ.”
12348005 ನಾಗಭಾರ್ಯೋವಾಚ।
12348005a ಆರ್ಜವೇನಾಭಿಜಾನಾಮಿ ನಾಸೌ ದೇವೋಽನಿಲಾಶನ।
12348005c ಏಕಂ ತ್ವಸ್ಯ ವಿಜಾನಾಮಿ ಭಕ್ತಿಮಾನತಿರೋಷಣಃ।।
ನಾಗಭಾರ್ಯೆಯು ಹೇಳಿದಳು: “ಅತಿರೋಷಣ! ಅನಿಲಾಶನ! ಅವನಲ್ಲಿರುವ ಸರಳತೆಯಿಂದ ಅವನು ದೇವನಲ್ಲವೆಂದು ತಿಳಿದಿದ್ದೇನೆ. ಅವನು ನಿನ್ನ ಅತ್ಯಂತ ಭಕ್ತನು ಎಂಬ ಒಂದು ವಿಷಯವನ್ನು ತಿಳಿದುಕೊಂಡಿದ್ದೇನೆ.
12348006a ಸ ಹಿ ಕಾರ್ಯಾಂತರಾಕಾಂಕ್ಷೀ ಜಲೇಪ್ಸುಃ ಸ್ತೋಕಕೋ ಯಥಾ।
12348006c ವರ್ಷಂ ವರ್ಷಪ್ರಿಯಃ ಪಕ್ಷೀ ದರ್ಶನಂ ತವ ಕಾಂಕ್ಷತಿ।।
ಮಳೆಯನ್ನು ಪ್ರೀತಿಸುವ ಪಕ್ಷಿಯು ಮಳೆಗಾಗಿಯೇ ಕಾಯುವಂತೆ ಯಾವುದೋ ಕಾರ್ಯಸಿದ್ಧಿಗಾಗಿ ಅವನು ನಿನ್ನ ದರ್ಶನವನ್ನೇ ಪ್ರತೀಕ್ಷಿಸುತ್ತಿದ್ದಾನೆ.
12348007a ನ ಹಿ ತ್ವಾ ದೈವತಂ ಕಿಂ ಚಿದ್ವಿವಿಗ್ನಂ ಪ್ರತಿಪಾಲಯೇತ್।
12348007c ತುಲ್ಯೇ ಹ್ಯಭಿಜನೇ ಜಾತೋ ನ ಕಶ್ಚಿತ್ಪರ್ಯುಪಾಸತೇ2।।
ನೀನು ನಿನ್ನ ದೈವತ್ವವನ್ನು ತೊರೆದು ಯಾವ ವಿವಿಗ್ನತೆಯೂ ಇಲ್ಲದೇ ಇದನ್ನು ಪರಿಪಾಲಿಸಬೇಕು. ಉತ್ತಮ ಕುಲದಲ್ಲಿ ಹುಟ್ಟಿದ ನಿನ್ನ ಸಮನಾದವನು ಬೇರೆ ಯಾರೂ ಅತಿಥಿಯನ್ನು ಉಪೇಕ್ಷಿಸುವುದಿಲ್ಲ.
12348008a ತದ್ರೋಷಂ ಸಹಜಂ ತ್ಯಕ್ತ್ವಾ ತ್ವಮೇನಂ ದ್ರಷ್ಟುಮರ್ಹಸಿ।
12348008c ಆಶಾಚೇದೇನ ತಸ್ಯಾದ್ಯ ನಾತ್ಮಾನಂ ದಗ್ಧುಮರ್ಹಸಿ।।
ಸಹಜವಾಗಿರುವ ರೋಷವನ್ನು ತ್ಯಜಿಸಿ ನೀನು ಅವನನ್ನು ಕಾಣಬೇಕು. ಇಂದು ಅವನ ಆಸೆಯನ್ನು ಭಂಗಗೊಳಿಸಿ ನಿನ್ನನ್ನು ನೀನು ಸುಟ್ಟುಕೊಳ್ಳಬೇಡ.
12348009a ಆಶಯಾ ತ್ವಭಿಪನ್ನಾನಾಮಕೃತ್ವಾಶ್ರುಪ್ರಮಾರ್ಜನಮ್।
12348009c ರಾಜಾ ವಾ ರಾಜಪುತ್ರೋ ವಾ ಭ್ರೂಣಹತ್ಯೈವ ಯುಜ್ಯತೇ।।
ಯಾವುದೋ ಆಸೆಯನ್ನಿಟ್ಟುಕೊಂಡು ಮೊರೆಹೊಕ್ಕವರ ಕಣ್ಣೀರನ್ನೊರೆಸಿ ಸಂತೈಸಿದದಿದ್ದರೆ ಅವನು ರಾಜನೇ ಆಗಿರಲಿ ಅಥವಾ ರಾಜಪುತ್ರನೇ ಆಗಿರಲಿ ಅವನಿಗೆ ಭ್ರೂಣಹತ್ಯಾದೋಷವು ತಗಲುತ್ತದೆ.
12348010a ಮೌನಾಜ್ಜ್ಞಾನಫಲಾವಾಪ್ತಿರ್ದಾನೇನ ಚ ಯಶೋ ಮಹತ್।
12348010c ವಾಗ್ಮಿತ್ವಂ ಸತ್ಯವಾಕ್ಯೇನ ಪರತ್ರ ಚ ಮಹೀಯತೇ।।
ಮೌನದಿಂದ ಜ್ಞಾನಪ್ರಾಪ್ತಿಯಾಗುತ್ತದೆ. ದಾನದಿಂದ ಮಹಾ ಯಶಸ್ಸು ದೊರೆಯುತ್ತದೆ. ಸತ್ಯವಾಕ್ಯದಿಂದ ವಾಗ್ಮಿತ್ವವು ದೊರೆಯುತ್ತದೆ ಮತ್ತು ಅವನು ಪರಲೋಕದಲ್ಲಿಯೂ ಖ್ಯಾತನಾಗುತ್ತಾನೆ.
12348011a ಭೂಮಿಪ್ರದಾನೇನ ಗತಿಂ ಲಭತ್ಯಾಶ್ರಮಸಂಮಿತಾಮ್।
12348011c ನಷ್ಟಸ್ಯಾರ್ಥಸ್ಯ3 ಸಂಪ್ರಾಪ್ತಿಂ ಕೃತ್ವಾ ಫಲಮುಪಾಶ್ನುತೇ।।
ಭೂದಾನವನ್ನು ಮಾಡುವುದರಿಂದ ಆಶ್ರಮಸಂಮಿತರ ಗತಿಯು ದೊರೆಯುತ್ತದೆ. ಧನವನ್ನು ಕಳೆದುಕೊಂಡವನಿಗೆ ಧನವನ್ನು ಒದಗಿಸುವುದರಿಂದ ಮಹಾಫಲವನ್ನು ಹೊಂದುತ್ತಾನೆ.
12348012a ಅಭಿಪ್ರೇತಾಮಸಂಕ್ಲಿಷ್ಟಾಂ ಕೃತ್ವಾಕಾಮವತೀಂ ಕ್ರಿಯಾಮ್।
12348012c ನ ಯಾತಿ ನಿರಯಂ ಕಶ್ಚಿದಿತಿ ಧರ್ಮವಿದೋ ವಿದುಃ4।।
ತನಗಿಷ್ಟವಾದ ಪಾಪದ ಸೋಂಕಿಲ್ಲದ ಅಕಾಮಕಾರ್ಯವನ್ನು ಮಾಡಿದವನು ಯಾರೇ ಆಗಿರಲಿ ನರಕಕ್ಕೆ ಹೋಗುವುದಿಲ್ಲವೆಂದು ಧರ್ಮವಿದುಗಳು ತಿಳಿದಿದ್ದಾರೆ.”
12348013 ನಾಗ ಉವಾಚ।
12348013a ಅಭಿಮಾನೇನ ಮಾನೋ ಮೇ ಜಾತಿದೋಷೇಣ ವೈ ಮಹಾನ್।
12348013c ರೋಷಃ ಸಂಕಲ್ಪಜಃ ಸಾಧ್ವಿ ದಗ್ಧೋ ವಾಚಾಗ್ನಿನಾ ತ್ವಯಾ।।
ನಾಗನು ಹೇಳಿದನು: “ಸಾಧ್ವಿ! ನಾನು ಅಭಿಮಾನಿಯೆಂದು ತಿಳಿದುಕೊಳ್ಳಬೇಡ. ಜಾತಿದೋಷದಿಂದಾಗಿ ನನ್ನಲ್ಲಿ ಅತಿಯಾದ ಕೋಪವಿದೆ. ಸಂಕಲ್ಪದಿಂದ ಹುಟ್ಟಿದ ಅದೂ ಕೂಡ ನಿನ್ನ ಮಾತಿನ ಅಗ್ನಿಯಿಂದ ಸುಟ್ಟುಹೋಯಿತು.
12348014a ನ ಚ ರೋಷಾದಹಂ ಸಾಧ್ವಿ ಪಶ್ಯೇಯಮಧಿಕಂ ತಮಃ।
12348014c ಯಸ್ಯ ವಕ್ತವ್ಯತಾಂ ಯಾಂತಿ ವಿಶೇಷೇಣ ಭುಜಂಗಮಾಃ।।
ಸಾಧ್ವಿ! ರೋಷಕ್ಕಿಂತಲೂ ಅಧಿಕ ತಮವನ್ನು ನಾನು ನೋಡಿಯೇ ಇಲ್ಲ. ಅದರಲ್ಲಿಯೂ ವಿಶೇಷವಾಗಿ ಭುಜಂಗಮರು ರೋಷಯುಕ್ತರು ಎಂಬ ಅಪವಾದವನ್ನು ಹೊಂದಿದ್ದಾರೆ.
12348015a ದೋಷಸ್ಯ5 ಹಿ ವಶಂ ಗತ್ವಾ ದಶಗ್ರೀವಃ ಪ್ರತಾಪವಾನ್।
12348015c ತಥಾ ಶಕ್ರಪ್ರತಿಸ್ಪರ್ಧೀ ಹತೋ ರಾಮೇಣ ಸಂಯುಗೇ।।
ಇದೇ ದೋಷಕ್ಕೆ ವಶನಾಗಿ ಶಕ್ರನೊಡನೆ ಸ್ಪರ್ಧಿಸುತ್ತಿದ್ದ ಪ್ರತಾಪವಾನ್ ದಶಗ್ರೀವನು ಯುದ್ಧದಲ್ಲಿ ರಾಮನಿಂದ ಹತನಾದನು.
12348016a ಅಂತಃಪುರಗತಂ ವತ್ಸಂ ಶ್ರುತ್ವಾ ರಾಮೇಣ ನಿರ್ಹೃತಮ್।
12348016c ಧರ್ಷಣಾದ್ರೋಷಸಂವಿಗ್ನಾಃ ಕಾರ್ತವೀರ್ಯಸುತಾ ಹತಾಃ।।
ಅಂತಃಪುರದಲ್ಲಿರಿಸಿದ್ದ ಕರುವನ್ನು ರಾಮನು ಅಪಹರಿಸಿಕೊಂಡು ಹೋದನೆಂದು ಕೇಳಿ ರೋಷಸಂವಿಂಗ್ನರಾಗಿ ಆಕ್ರಮಣಿಸಿದ ಕಾರ್ತವೀರ್ಯಸುತರು ಹತರಾದರು.
12348017a ಜಾಮದಗ್ನ್ಯೇನ ರಾಮೇಣ ಸಹಸ್ರನಯನೋಪಮಃ।
12348017c ಸಂಯುಗೇ ನಿಹತೋ ರೋಷಾತ್ಕಾರ್ತವೀರ್ಯೋ ಮಹಾಬಲಃ।।
ಸಹಸ್ರನಯನ ಇಂದ್ರನಿಗೆ ಸಮನಾಗಿದ್ದ ಜಾಮದಗ್ನಿ ರಾಮನ ರೋಷದಿಂದ ಮಹಾಬಲ ಮಹಾವೀರ್ಯನು ಯುದ್ಧದಲ್ಲಿ ಹತನಾದನು.
12348018a ತದೇಷ ತಪಸಾಂ ಶತ್ರುಃ ಶ್ರೇಯಸಶ್ಚ ನಿಪಾತನಃ।
12348018c ನಿಗೃಹೀತೋ ಮಯಾ ರೋಷಃ ಶ್ರುತ್ವೈವ ವಚನಂ ತವ।।
ಅಂತಹ ರೋಷವು ತಪಸ್ಸಿನ ಶತ್ರುವು. ಶ್ರೇಯಸ್ಸಿನಿಂದ ಭ್ರಷ್ಟಗೊಳಿಸುತ್ತದೆ. ನಿನ್ನ ಮಾತನ್ನು ಕೇಳಿ ನಾನು ನನ್ನ ರೋಷವನ್ನು ನಿಯಂತ್ರಿಸಿಕೊಂಡಿದ್ದೇನೆ.
12348019a ಆತ್ಮಾನಂ ಚ ವಿಶೇಷೇಣ ಪ್ರಶಂಸಾಮ್ಯನಪಾಯಿನಿ।
12348019c ಯಸ್ಯ ಮೇ ತ್ವಂ ವಿಶಾಲಾಕ್ಷಿ ಭಾರ್ಯಾ ಸರ್ವಗುಣಾನ್ವಿತಾ।।
ಸಹಭಾಗಿಣಿ! ವಿಶಾಲಾಕ್ಷಿ! ಸರ್ವಗುಣಾನ್ವಿತಳಾದ ನಿನ್ನನ್ನು ಭಾರ್ಯೆಯನ್ನಾಗಿ ಪಡೆದಿರುವ ನನ್ನನ್ನೇ ನಾನು ವಿಶೇಷವಾಗಿ ಪ್ರಶಂಸಿಸಿಕೊಳ್ಳುತ್ತೇನೆ.
12348020a ಏಷ ತತ್ರೈವ ಗಚ್ಚಾಮಿ ಯತ್ರ ತಿಷ್ಠತ್ಯಸೌ ದ್ವಿಜಃ।
12348020c ಸರ್ವಥಾ ಚೋಕ್ತವಾನ್ವಾಕ್ಯಂ ನಾಕೃತಾರ್ಥಃ ಪ್ರಯಾಸ್ಯತಿ।।
ಇಗೋ! ಆ ದ್ವಿಜನು ಎಲ್ಲಿ ಇರುವನೋ ಅಲ್ಲಿಗೇ ಹೋಗುತ್ತೇನೆ. ಅವನು ಸರ್ವಥಾ ಕೃತಾರ್ಥನಾಗಿಯೇ ಇಲ್ಲಿಂದ ಹೋಗುತ್ತಾನೆಂದು ಹೇಳುತ್ತೇನೆ.””
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಉಂಚವೃತ್ಯುಪಾಖ್ಯಾನೇ ಅಷ್ಟಚತ್ವಾರಿಂಶಾಧಿಕತ್ರಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಉಂಚವೃತ್ಯುಪಾಖ್ಯಾನ ಎನ್ನುವ ಮುನ್ನೂರಾನಲ್ವತ್ತೆಂಟನೇ ಅಧ್ಯಾಯವು.
-
ನಾವೇಕ್ಷ್ಯಾ ಇತಿ ಮೇ ಮತಿಃ। (ಭಾರತದರ್ಶನ). ↩︎
-
ಹಿತ್ವಾ ತ್ವದ್ದರ್ಶನಂ ಕಂಚಿದ್ವಿಘ್ನಂ ನ ಪ್ರತಿಪಾಲಯೇತ್। ತುಲೋಽಪ್ಯಭಿಜನೇ ಜಾತೋ ನ ಕಶ್ಚಿತ್ಪರ್ಯುಪಾಸತೇ।। (ಭಾರತದರ್ಶನ). ↩︎
-
ನ್ಯಾಯ್ಯಸ್ಯಾರ್ಥಸ್ಯ (ಭಾರತದರ್ಶನ). ↩︎
-
ಅಭಿಪ್ರೇತಾಮಸಂಶ್ಲಿಷ್ಟಾಂ ಕೃತ್ವಾ ಚಾತ್ಮಹಿತಂ ಕ್ರಿಯಾಮ್। ನ ಯಾತಿ ನಿರಯಂ ಕಶ್ಚಿದಿತಿ ಧರ್ಮವಿದೋ ವಿದುಃ।। (ಭಾರತದರ್ಶನ). ↩︎
-
ರೋಷಸ್ಯ (ಭಾರತದರ್ಶನ). ↩︎