347: ಉಂಚವೃತ್ಯುಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 347

ಸಾರ

ನಾಗರಾಜನು ಮನೆಗೆ ಹಿಂದಿರುಗಿದುದು, ಪತ್ನಿಯೊಡನೆ ಧರ್ಮವಿಷಯದ ಮಾತುಕಥೆ ಮತ್ತು ಪತ್ನಿಯು ಬ್ರಾಹ್ಮಣನಿಗೆ ದರ್ಶನವನ್ನು ನೀಡಬೇಕೆಂದು ನಾಗರಾಜನನ್ನು ಉತ್ತಾಯಿಸಿದುದು (1-16).

12347001 ಭೀಷ್ಮ ಉವಾಚ।
12347001a ಅಥ ಕಾಲೇ ಬಹುತಿಥೇ ಪೂರ್ಣೇ ಪ್ರಾಪ್ತೋ ಭುಜಂಗಮಃ।
12347001c ದತ್ತಾಭ್ಯನುಜ್ಞಃ ಸ್ವಂ ವೇಶ್ಮ ಕೃತಕರ್ಮಾ ವಿವಸ್ವತಃ।।

ಭೀಷ್ಮನು ಹೇಳಿದನು: “ಬಹುದಿನಗಳ ಕಾಲವು ಪೂರ್ಣವಾಗಲು ಭುಜಂಗಮನು ತನ್ನ ಕೆಲಸವನ್ನು ಮುಗಿಸಿ ವಿವಸ್ವತನ ಅನುಜ್ಞೆಯನ್ನು ಪಡೆದು ತನ್ನ ಮನೆಗೆ ಹಿಂದಿರುಗಿದನು.

12347002a ತಂ ಭಾರ್ಯಾ ಸಮಭಿಕ್ರಾಮತ್ ಪಾದಶೌಚಾದಿಭಿರ್ಗುಣೈಃ।
12347002c ಉಪಪನ್ನಾಂ ಚ ತಾಂ ಸಾಧ್ವೀಂ ಪನ್ನಗಃ ಪರ್ಯಪೃಚ್ಚತ।।

ಪತ್ನಿಯು ಅವನನ್ನು ಎದುರುಗೊಂಡು ಪಾದಶೌಚಾದಿ ಸೇವೆಗಳಿಂದ ಅವನನ್ನು ಸ್ವಾಗತಿಸಲು ಪನ್ನಗನು ಆ ಸಾಧ್ವಿಯನ್ನು ಕೇಳಿದನು:

12347003a ಅಪಿ ತ್ವಮಸಿ ಕಲ್ಯಾಣಿ ದೇವತಾತಿಥಿಪೂಜನೇ।
12347003c ಪೂರ್ವಮುಕ್ತೇನ ವಿಧಿನಾ ಯುಕ್ತಾ ಯುಕ್ತೇನ ಮತ್ಸಮಮ್।।

“ಕಲ್ಯಾಣಿ! ನಾನು ಹಿಂದೆ ಹೇಳಿದಂತೆಯೇ ನೀನು ದೇವತಾತಿಥಿಪೂಜನದಲ್ಲಿ ವಿಧಿವತ್ತಾಗಿ ನಿರತಳಾಗಿರುವೆಯಲ್ಲವೇ?

12347004a ನ ಖಲ್ವಸ್ಯಕೃತಾರ್ಥೇನ ಸ್ತ್ರೀಬುದ್ಧ್ಯಾ ಮಾರ್ದವೀಕೃತಾ।
12347004c ಮದ್ವಿಯೋಗೇನ ಸುಶ್ರೋಣಿ ವಿಯುಕ್ತಾ ಧರ್ಮಸೇತುನಾ।।

ಸುಶ್ರೋಣಿ! ನಾನು ಇಲ್ಲವೆಂದು ನೀನು ಸ್ತ್ರೀಬುದ್ಧಿಯ ಕಾರಣದಿಂದ ಧರ್ಮಸೇತುವೆಯನ್ನು ಮುರಿದುಹಾಕಿಲ್ಲ ತಾನೇ?”

12347005 ನಾಗಭಾರ್ಯೋವಾಚ।
12347005a ಶಿಷ್ಯಾಣಾಂ ಗುರುಶುಶ್ರೂಷಾ ವಿಪ್ರಾಣಾಂ ವೇದಪಾರಣಮ್।
12347005c ಭೃತ್ಯಾನಾಂ ಸ್ವಾಮಿವಚನಂ ರಾಜ್ಞಾಂ ಲೋಕಾನುಪಾಲನಮ್।।

ನಾಗಭಾರ್ಯೆಯು ಹೇಳಿದಳು: “ಶಿಷ್ಯರಿಗೆ ಗುರುಶುಶ್ರೂಷೆ, ವಿಪ್ರರಿಗೆ ವೇದಪಾರಾಯಣ, ಸೇವಕರಿಗೆ ಸ್ವಾಮಿವಚನವನ್ನು ಪಾಲಿಸುವುದು ಮತ್ತು ರಾಜರಿಗೆ ಲೋಕಪಾಲನೆಯು ಕರ್ತವ್ಯಗಳು.

12347006a ಸರ್ವಭೂತಪರಿತ್ರಾಣಂ ಕ್ಷತ್ರಧರ್ಮ ಇಹೋಚ್ಯತೇ।
12347006c ವೈಶ್ಯಾನಾಂ ಯಜ್ಞಸಂವೃತ್ತಿರಾತಿಥೇಯಸಮನ್ವಿತಾ।।

ಸರ್ವಭೂತಗಳನ್ನೂ ರಕ್ಷಿಸುವುದು ಕ್ಷತ್ರಧರ್ಮವೆಂದು ಹೇಳುತ್ತಾರೆ. ಅತಿಥಿಸತ್ಕಾರಗಳೊಂದಿಗೆ ಯಜ್ಞವನ್ನು ನಡೆಸುವುದು ವೈಶ್ಯರ ಧರ್ಮವಾಗಿದೆ.

12347007a ವಿಪ್ರಕ್ಷತ್ರಿಯವೈಶ್ಯಾನಾಂ ಶುಶ್ರೂಷಾ ಶೂದ್ರಕರ್ಮ ತತ್।
12347007c ಗೃಹಸ್ಥಧರ್ಮೋ ನಾಗೇಂದ್ರ ಸರ್ವಭೂತಹಿತೈಷಿತಾ।।

ವಿಪ್ರ-ಕ್ಷತ್ರಿಯ-ವೈಶ್ಯರ ಶುಶ್ರೂಷೆಯು ಶೂದ್ರಕರ್ಮವು. ನಾಗೇಂದ್ರ! ಸರ್ವಪ್ರಾಣಿಗಳಿಗೂ ಹಿತವನ್ನು ಬಯಸುವುದೇ ಗೃಹಸ್ಥಧರ್ಮವು.

12347008a ನಿಯತಾಹಾರತಾ ನಿತ್ಯಂ ವ್ರತಚರ್ಯಾ ಯಥಾಕ್ರಮಮ್।
12347008c ಧರ್ಮೋ ಹಿ ಧರ್ಮಸಂಬಂಧಾದಿಂದ್ರಿಯಾಣಾಂ ವಿಶೇಷಣಮ್।।

ನಿತ್ಯವೂ ನಿಯತಾಹಾರವನ್ನು ಸೇವಿಸಿ ಯಥಾಕ್ರಮವಾಗಿ ವ್ರತಚರ್ಯನಾಗಿರುವುದು ಎಲ್ಲರ ಧರ್ಮವೂ ಆಗಿದೆ. ಏಕೆಂದರೆ ವಿಶೇಷವಾಗಿ ಇಂದ್ರಿಯಗಳನ್ನು ಧರ್ಮಸಂಬಂಧದಲ್ಲಿರಿಸಿಕೊಳ್ಳಲು ಇದು ಸಾಧಕವಾಗಿದೆ.

12347009a ಅಹಂ ಕಸ್ಯ ಕುತೋ ವಾಹಂ ಕಃ ಕೋ ಮೇ ಹ ಭವೇದಿತಿ।
12347009c ಪ್ರಯೋಜನಮತಿರ್ನಿತ್ಯಮೇವಂ ಮೋಕ್ಷಾಶ್ರಮೀ ಭವೇತ್।।

“ನಾನು ಯಾರವನು? ಎಲ್ಲಿಂದ ಬಂದಿದ್ದೇನೆ? ನನ್ನವರು ಯಾರಿದ್ದಾರೆ? ಈ ಜೀವನದ ಪ್ರಯೋಜನವೇನು?” ಇತ್ಯಾದಿ ವಿಷಯಗಳನ್ನು ಮೋಕ್ಷಾಶ್ರಮಿಯು ವಿಚಾರಮಾಡುತ್ತಾನೆ.

12347010a ಪತಿವ್ರತಾತ್ವಂ ಭಾರ್ಯಾಯಾಃ ಪರಮೋ ಧರ್ಮ ಉಚ್ಯತೇ।
12347010c ತವೋಪದೇಶಾನ್ನಾಗೇಂದ್ರ ತಚ್ಚ ತತ್ತ್ವೇನ ವೇದ್ಮಿ ವೈ।।

ನಾಗೇಂದ್ರ! ಪಾತಿವ್ರತ್ಯವೇ ಭಾರ್ಯೆಯರ ಪರಮ ಧರ್ಮವೆಂದು ಹೇಳಲಾಗಿದೆ. ನಿನ್ನ ಉಪದೇಶದಿಂದ ಅದನ್ನು ನಾನು ಯಥಾವತ್ತಾಗಿ ತಿಳಿದಿರುತ್ತೇನೆ.

12347011a ಸಾಹಂ ಧರ್ಮಂ ವಿಜಾನಂತೀ ಧರ್ಮನಿತ್ಯೇ ತ್ವಯಿ ಸ್ಥಿತೇ।
12347011c ಸತ್ಪಥಂ ಕಥಮುತ್ಸೃಜ್ಯ ಯಾಸ್ಯಾಮಿ ವಿಷಮೇ ಪಥಿ।।

ನಿತ್ಯವೂ ನೀನು ಧರ್ಮದಲ್ಲಿಯೇ ಇರುವಾಗ ಆ ಧರ್ಮವನ್ನು ತಿಳಿದುಕೊಂಡಿರುವ ನಾನು ಸನ್ಮಾರ್ಗವನ್ನು ಪರಿತ್ಯಜಿಸಿ ಹೇಗೆ ತಾನೇ ದುರ್ಮಾರ್ಗವನ್ನು ಅವಲಂಬಿಸುವೆನು?

12347012a ದೇವತಾನಾಂ ಮಹಾಭಾಗ ಧರ್ಮಚರ್ಯಾ ನ ಹೀಯತೇ।
12347012c ಅತಿಥೀನಾಂ ಚ ಸತ್ಕಾರೇ ನಿತ್ಯಯುಕ್ತಾಸ್ಮ್ಯತಂದ್ರಿತಾ।।

ಮಹಾಭಾಗ! ದೇವತೆಗಳ ಕುರಿತಾದ ಧರ್ಮಚರ್ಯೆಯಲ್ಲಿ ಯಾವ ಲೋಪವೂ ಉಂಟಾಗಿಲ್ಲ. ಅತಿಥಿಗಳ ಸತ್ಕಾರದಲ್ಲಿಯೂ ನಾನು ಆಲಸ್ಯವಿಲ್ಲದೇ ನಿತ್ಯವೂ ಯುಕ್ತಳಾಗಿದ್ದೇನೆ.

12347013a ಸಪ್ತಾಷ್ಟದಿವಸಾಸ್ತ್ವದ್ಯ ವಿಪ್ರಸ್ಯೇಹಾಗತಸ್ಯ ವೈ।
12347013c ಸ ಚ ಕಾರ್ಯಂ ನ ಮೇ ಖ್ಯಾತಿ ದರ್ಶನಂ ತವ ಕಾಂಕ್ಷತಿ।।

ಆದರೆ ಇಂದಿಗೆ ಹದಿನೈದು ದಿನಗಳ ಹಿಂದೆ ವಿಪ್ರನೋರ್ವನು ಇಲ್ಲಿಗೆ ಆಗಮಿಸಿದ್ದನು. ಅವನು ನನ್ನಲ್ಲಿ ಕಾರ್ಯವೇನೆಂದು ಹೇಳಲಿಲ್ಲ. ನಿನ್ನ ದರ್ಶನವನ್ನು ಅಪೇಕ್ಷಿಸಿದ್ದಾನೆ.

12347014a ಗೋಮತ್ಯಾಸ್ತ್ವೇಷ ಪುಲಿನೇ ತ್ವದ್ದರ್ಶನಸಮುತ್ಸುಕಃ।
12347014c ಆಸೀನೋಽ’ವರ್ತಯನ್ ಬ್ರಹ್ಮ ಬ್ರಾಹ್ಮಣಃ ಸಂಶಿತವ್ರತಃ।।

ಆ ಸಂಶಿತವ್ರತ ಬ್ರಾಹ್ಮಣನು ವೇದಪಾರಾಯಣನಾಗಿ ನಿನ್ನ ದರ್ಶನವನ್ನೇ ಕಾಯುತ್ತಾ ಗೋಮತೀ ತೀರದ ಮರಳುದಿಣ್ಣೆಯ ಮೇಲೆ ಕುಳಿತಿದ್ದಾನೆ.

12347015a ಅಹಂ ತ್ವನೇನ ನಾಗೇಂದ್ರ ಸಾಮಪೂರ್ವಂ ಸಮಾಹಿತಾ।
12347015c ಪ್ರಸ್ಥಾಪ್ಯೋ ಮತ್ಸಕಾಶಂ ಸ ಸಂಪ್ರಾಪ್ತೋ ಭುಜಗೋತ್ತಮಃ।।

ನಾಗೇಂದ್ರ! ಭುಜಗೋತ್ತಮನು ಬಂದೊಡನೆಯೇ ತನ್ನ ಬಳಿಗೆ ಕಳುಹಿಸಬೇಕೆಂಬ ಸತ್ಯಪ್ರತಿಜ್ಞೆಯನ್ನು ನನ್ನಿಂದ ಅವನು ಮಾಡಿಸಿಕೊಂಡಿದ್ದಾನೆ.

12347016a ಏತಚ್ಚ್ರುತ್ವಾ ಮಹಾಪ್ರಾಜ್ಞ ತತ್ರ ಗಂತುಂ ತ್ವಮರ್ಹಸಿ।
12347016c ದಾತುಮರ್ಹಸಿ ವಾ ತಸ್ಯ ದರ್ಶನಂ ದರ್ಶನಶ್ರವಃ।।

ಮಹಾಪ್ರಾಜ್ಞ! ಇದನ್ನು ಕೇಳಿ ನೀನು ಅಲ್ಲಿಗೆ ಹೋಗಬೇಕು. ಕಣ್ಣುಗಳನ್ನೇ ಕಿವಿಯಾಗುಳ್ಳವನೇ! ಅವನಿಗೆ ದರ್ಶನವನ್ನು ನೀಡಬೇಕು.”

ಸಮಾಪ್ತಿ ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಉಂಚವೃತ್ಯುಪಾಖ್ಯಾನೇ ಸಪ್ತಚತ್ವಾರಿಂಶಾಧಿಕತ್ರಿಶತತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಉಂಚವೃತ್ಯುಪಾಖ್ಯಾನ ಎನ್ನುವ ಮುನ್ನೂರಾನಲ್ವತ್ತೇಳನೇ ಅಧ್ಯಾಯವು.