343: ಉಂಚವೃತ್ಯುಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 343

ಸಾರ

ಅತಿಥಿಯು ನಾಗರಾಜ ಪದ್ಮನಾಭನ ಸದಾಚಾರ ಮತ್ತು ಸದ್ಗುಣಗಳನ್ನು ವರ್ಣಿಸಿ ಅವನ ಬಳಿ ಹೋಗೆಂದು ಬ್ರಾಹ್ಮಣನನ್ನು ಪ್ರೇರೇಪಿಸಿದುದು (1-11).

12343001 ಅತಿಥಿರುವಾಚ।
12343001a ಉಪದೇಶಂ ತು ತೇ ವಿಪ್ರ ಕರಿಷ್ಯೇಽಹಂ ಯಥಾಗಮಮ್।
12343001c ಗುರುಣಾ ಮೇ ಯಥಾಖ್ಯಾತಮರ್ಥತಸ್ತಚ್ಚ ಮೇ ಶೃಣು।।

ಅತಿಥಿಯು ಹೇಳಿದನು: “ವಿಪ್ರ! ನನ್ನ ಗುರುವು ಈ ವಿಷಯದಲ್ಲಿ ನನಗೆ ಯಾವ ತತ್ತ್ವಾರ್ಥಯುಕ್ತ ಮಾತುಗಳನ್ನು ಹೇಳಿದ್ದನೋ ಅದನ್ನೇ ನಿನಗೆ ಹೇಳುತ್ತೇನೆ. ಕೇಳು.

12343002a ಯತ್ರ ಪೂರ್ವಾಭಿಸರ್ಗೇಣ ಧರ್ಮಚಕ್ರಂ ಪ್ರವರ್ತಿತಮ್।
12343002c ನೈಮಿಷೇ ಗೋಮತೀತೀರೇ ತತ್ರ ನಾಗಾಹ್ವಯಂ ಪುರಮ್।।

ಎಲ್ಲಿ ಹಿಂದಿನ ಕಲ್ಪದಂತೆ ಧರ್ಮಚಕ್ರವು ಉರುಳಿತೋ ಆ ಗೋಮತಿ ತೀರದ ನೈಮಿಷದಲ್ಲಿ ನಾಗ ಎಂಬ ಪುರವಿದೆ.

12343003a ಸಮಗ್ರೈಸ್ತ್ರಿದಶೈಸ್ತತ್ರ ಇಷ್ಟಮಾಸೀದ್ದ್ವಿಜರ್ಷಭ।
12343003c ಯತ್ರೇಂದ್ರಾತಿಕ್ರಮಂ ಚಕ್ರೇ ಮಾಂಧಾತಾ ರಾಜಸತ್ತಮಃ।।

ದ್ವಿಜರ್ಷಭ! ಅಲ್ಲಿ ದೇವತೆಗಳೆಲ್ಲರೂ ಯಾಗವನ್ನು ಮಾಡಿದ್ದರು. ಅಲ್ಲಿಯೇ ರಾಜಸತ್ತಮ ಮಾಂಧಾತನೂ ಕೂಡ ಇಂದ್ರನನ್ನೂ ಮೀರಿಸಿ ಯಜ್ಞಮಾಡಿದ್ದನು.

12343004a ಕೃತಾಧಿವಾಸೋ ಧರ್ಮಾತ್ಮಾ ತತ್ರ ಚಕ್ಷುಃಶ್ರವಾ ಮಹಾನ್।
12343004c ಪದ್ಮನಾಭೋ ಮಹಾಭಾಗಃ ಪದ್ಮ ಇತ್ಯೇವ ವಿಶ್ರುತಃ।।

ಅಲ್ಲಿ ಪದ್ಮನಾಭ ಎನ್ನುವ ಮಹಾಭಾಗ ಧರ್ಮಾತ್ಮಾ ಮಹಾ ನಾಗನು ವಾಸಿಸುತ್ತಿದ್ದಾನೆ. ಅವನು ಪದ್ಮ ಎಂದೇ ವಿಶ್ರುತನಾಗಿದ್ದಾನೆ.

12343005a ಸ ವಾಚಾ ಕರ್ಮಣಾ ಚೈವ ಮನಸಾ ಚ ದ್ವಿಜರ್ಷಭ।
12343005c ಪ್ರಸಾದಯತಿ ಭೂತಾನಿ ತ್ರಿವಿಧೇ ವರ್ತ್ಮನಿ ಸ್ಥಿತಃ।।

ದ್ವಿಜರ್ಷಭ! ಅವನು ಮಾತು, ಕರ್ಮ ಮತ್ತು ಮನಸ್ಸುಗಳ ಮೂಲಕ ಕರ್ಮ, ಉಪಾಸನೆ ಮತ್ತು ಜ್ಞಾನ ಈ ಮೂರು ವಿಧದ ಮಾರ್ಗಗಳನ್ನೂ ಆಶ್ರಯಿಸಿ ಸರ್ವಭೂತಗಳನ್ನೂ ಪ್ರಸನ್ನಗೊಳಿಸಿದ್ದಾನೆ.

12343006a ಸಾಮ್ನಾ ದಾನೇನ ಭೇದೇನ ದಂಡೇನೇತಿ ಚತುರ್ವಿಧಮ್।
12343006c ವಿಷಮಸ್ಥಂ ಜನಂ ಸ್ವಂ ಚ ಚಕ್ಷುರ್ಧ್ಯಾನೇನ ರಕ್ಷತಿ।।

ಕುಮಾರ್ಗಿ ಜನರನ್ನು ಸಾಮ, ದಾನ, ಭೇದ ಮತ್ತು ದಂಡವೆನ್ನುವ ನಾಲ್ಕು ವಿಧದ ಉಪಾಯಗಳಿಂದ ಸನ್ಮಾರ್ಗಕ್ಕೆ ತರುತ್ತಾನೆ. ಧ್ಯಾನ ಚಕ್ಷುವಿನಿಂದ ರಕ್ಷಿಸುತ್ತಾನೆ.

12343007a ತಮಭಿಕ್ರಮ್ಯ ವಿಧಿನಾ ಪ್ರಷ್ಟುಮರ್ಹಸಿ ಕಾಂಕ್ಷಿತಮ್।
12343007c ಸ ತೇ ಪರಮಕಂ ಧರ್ಮಂ ನಮಿಥ್ಯಾ ದರ್ಶಯಿಷ್ಯತಿ।।

ಅವನ ಬಳಿಸಾರಿ ನಿನಗಿಷ್ಟವಾದುದನ್ನು ವಿಧಿಪೂರ್ವಕವಾಗಿ ಕೇಳಬಹುದು. ಅವನು ನಿನಗೆ ಪರಮ ಧರ್ಮವನ್ನೇ ತೋರಿಸಿಕೊಡುತ್ತಾನೆ. ಮಿಥ್ಯಾಧರ್ಮವನ್ನಲ್ಲ.

12343008a ಸ ಹಿ ಸರ್ವಾತಿಥಿರ್ನಾಗೋ ಬುದ್ಧಿಶಾಸ್ತ್ರವಿಶಾರದಃ।
12343008c ಗುಣೈರನವಮೈರ್ಯುಕ್ತಃ ಸಮಸ್ತೈರಾಭಿಕಾಮಿಕೈಃ।।

ಆ ಬುದ್ಧಿಶಾಸ್ತ್ರವಿಶಾರದ ನಾಗನು ಸರ್ವ ಅತಿಥಿಗಳನ್ನೂ ಸತ್ಕರಿಸುತ್ತಾನೆ. ಅನುಪಮ ಗುಣಯುಕ್ತನೂ ಸಮಸ್ತರ ಪ್ರೀತಿಪಾತ್ರನೂ ಆಗಿದ್ದಾನೆ.

12343009a ಪ್ರಕೃತ್ಯಾ ನಿತ್ಯಸಲಿಲೋ ನಿತ್ಯಮಧ್ಯಯನೇ ರತಃ।
12343009c ತಪೋದಮಾಭ್ಯಾಂ ಸಂಯುಕ್ತೋ ವೃತ್ತೇನಾನವರೇಣ ಚ।।

ಸ್ವಭಾವದಲ್ಲಿ ಅವನು ನೀರಿನಂತೆ ನಿತ್ಯ ನಿರ್ಮಲನು. ನಿತ್ಯವೂ ಅಧ್ಯಯನದಲ್ಲಿ ನಿರತನಾಗಿರುವವನು. ತಪಸ್ಸು ಮತ್ತು ಇಂದ್ರಿಯನಿಗ್ರಹ ಸಂಯುಕ್ತನಾಗಿರುವವನು. ಉತ್ತಮವಾಗಿ ನಡೆದುಕೊಳ್ಳುವವನು.

12343010a ಯಜ್ವಾ ದಾನರುಚಿಃ ಕ್ಷಾಂತೋ ವೃತ್ತೇ ಚ ಪರಮೇ ಸ್ಥಿತಃ।
12343010c ಸತ್ಯವಾಗನಸೂಯುಶ್ಚ ಶೀಲವಾನಭಿಸಂಶ್ರಿತಃ।।

ಅವನು ಯಜ್ಞಶೀಲನು. ದಾನಿಗಳಲ್ಲಿ ಶ್ರೇಷ್ಠನು. ಕ್ಷಮಾಶೀಲನು. ಸದಾಚಾರಿಯು. ಸತ್ಯವಾನನು. ಅಸೂಯಾರಹಿತನು. ಶೀಲವಂತನು ಮತ್ತು ಜಿತೇಂದ್ರಿಯನು.

12343011a ಶೇಷಾನ್ನಭೋಕ್ತಾ ವಚನಾನುಕೂಲೋ ಹಿತಾರ್ಜವೋತ್ಕೃಷ್ಟಕೃತಾಕೃತಜ್ಞಃ।
12343011c ಅವೈರಕೃದ್ ಭೂತಹಿತೇ ನಿಯುಕ್ತೋ ಗಂಗಾಹ್ರದಾಂಭೋಽಭಿಜನೋಪಪನ್ನಃ।।

ಶೇಷಾನ್ನವನ್ನೇ ಅವನು ಉಣ್ಣುತ್ತಾನೆ. ಅನುಕೂಲಕರ ಮಾತುಗಳನ್ನೇ ಆಡುತ್ತಾನೆ. ಸರ್ವಹಿತನು. ಸರಳನು. ಉತ್ಕೃಷ್ಟ ಕರ್ಮಗಳು ಮತ್ತು ಅಕರ್ಮಗಳ ಕುರಿತು ತಿಳಿದವನು. ವೈರವಿಲ್ಲದವನು. ಸರ್ವಭೂತಗಳಿಗೂ ಹಿತನಾಗಿರುವವನು. ಗಂಗಾನದಿಯಂಥ ಪಾವನ ಕುಲದಲ್ಲಿ ಹುಟ್ಟಿದವನು.”

ಸಮಾಪ್ತಿ ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಉಂಚವೃತ್ಯುಪಾಖ್ಯಾನೇ ತ್ರಿಚತ್ವಾರಿಂಶಾಧಿಕತ್ರಿಶತತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಉಂಚವೃತ್ಯುಪಾಖ್ಯಾನ ಎನ್ನುವ ಮುನ್ನೂರಾನಲ್ವತ್ಮೂರನೇ ಅಧ್ಯಾಯವು.