340: ಉಂಚವೃತ್ಯುಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 340

ಸಾರ

ನಾರದನು ಇಂದ್ರನಿಗೆ ಉಂಚವೃತ್ತಿಯ ಬ್ರಾಹ್ಮಣನ ಕಥೆಯನ್ನು ಹೇಳಲು ಪ್ರಾರಂಭಿಸಿದುದು (1-11).

12340001 ಯುಧಿಷ್ಠಿರ ಉವಾಚ।
12340001a ಧರ್ಮಾಃ ಪಿತಾಮಹೇನೋಕ್ತಾ ಮೋಕ್ಷಧರ್ಮಾಶ್ರಿತಾಃ ಶುಭಾಃ।
12340001c ಧರ್ಮಮಾಶ್ರಮಿಣಾಂ ಶ್ರೇಷ್ಠಂ ವಕ್ತುಮರ್ಹತಿ ಮೇ ಭವಾನ್।।

ಯುಧಿಷ್ಠಿರನು ಹೇಳಿದನು: “ಪಿತಾಮಹ! ಮೋಕ್ಷಧರ್ಮಾಶ್ರಿತ ಶುಭ ಧರ್ಮಗಳ ಕುಳಿತು ಹೇಳಿದ್ದೀಯೆ. ಶ್ರೇಷ್ಠ ಆಶ್ರಮಧರ್ಮವನ್ನು ಅನುಸರಿಸುವವರ ಕುರಿತು ನನಗೆ ಹೇಳಬೇಕು.”

12340002 ಭೀಷ್ಮ ಉವಾಚ।
12340002a ಸರ್ವತ್ರ ವಿಹಿತೋ ಧರ್ಮಃ ಸ್ವರ್ಗ್ಯಃ ಸತ್ಯಫಲೋದಯಃ1
12340002c ಬಹುದ್ವಾರಸ್ಯ ಧರ್ಮಸ್ಯ ನೇಹಾಸ್ತಿ ವಿಫಲಾ ಕ್ರಿಯಾ।।

ಭೀಷ್ಮನು ಹೇಳಿದನು: “ಎಲ್ಲ ಆಶ್ರಮಿಗಳಿಗೂ ಇಂತಹುದೇ ಎಂಬ ಸ್ವರ್ಗ ಮತ್ತು ಸತ್ಯ ಫಲವನ್ನು ನೀಡುವ ಧರ್ಮಗಳು ವಿಹಿತವಾಗಿವೆ. ಅನೇಕ ದ್ವಾರಗಳಿರುವ ಧರ್ಮದಿಂದ ಮಾಡಿದ ಕ್ರಿಯೆಗಳ್ಯಾವುವೂ ವಿಫಲವಾಗುವುದಿಲ್ಲ.

12340003a ಯಸ್ಮಿನ್ಯಸ್ಮಿಂಸ್ತು ವಿಷಯೇ ಯೋ ಯೋ ಯಾತಿ ವಿನಿಶ್ಚಯಮ್।
12340003c ಸ ತಮೇವಾಭಿಜಾನಾತಿ ನಾನ್ಯಂ ಭರತಸತ್ತಮ।।

ಯಾರ್ಯಾರಿಗೆ ಯಾವ ಯಾವ ವಿಷಯದ ಮೇಲೆ ನಿಶ್ಚಯ ಬುದ್ಧಿಯಿರುವುದೋ ಅದೇ ವಿಷಯವನ್ನು ಅವನು ಪರಮಶ್ರೇಷ್ಠವೆಂದು ಭಾವಿಸುತ್ತಾನೆ. ಭರತಸತ್ತಮ! ಇತರ ಧರ್ಮಗಳಿಗೆ ಅವನು ಅಷ್ಟೊಂದು ಮಾನ್ಯತೆಯನ್ನು ಕೊಡುವುದಿಲ್ಲ.

12340004a ಅಪಿ ಚ ತ್ವಂ ನರವ್ಯಾಘ್ರ ಶ್ರೋತುಮರ್ಹಸಿ ಮೇ ಕಥಾಮ್।
12340004c ಪುರಾ ಶಕ್ರಸ್ಯ ಕಥಿತಾಂ ನಾರದೇನ ಸುರರ್ಷಿಣಾ।।

ನರವ್ಯಾಘ್ರ! ಹಿಂದೆ ಸುರರ್ಷಿ ನಾರದನು ಶಕ್ರನಿಗೆ ಹೇಳಿದ ಆ ಕಥೆಯನ್ನು ಈಗ ನೀನೂ ಕೂಡ ಕೇಳಲು ಅರ್ಹನಾಗಿರುವೆ.

12340005a ಸುರರ್ಷಿರ್ನಾರದೋ ರಾಜನ್ಸಿದ್ಧಸ್ತ್ರೈಲೋಕ್ಯಸಂಮತಃ।
12340005c ಪರ್ಯೇತಿ ಕ್ರಮಶೋ ಲೋಕಾನ್ವಾಯುರವ್ಯಾಹತೋ ಯಥಾ।।

ರಾಜನ್! ತ್ರೈಲೋಕ್ಯ ಪೂಜಿತ ಸಿದ್ಧ ಸುರರ್ಷಿ ನಾರದನು ವಾಯುವು ಹೇಗೆ ಅವ್ಯಾಹಿತನಾಗಿ ಸಂಚರಿಸುತ್ತಾನೋ ಹಾಗೆ ಅಡತಡೆಯಿಲ್ಲದೇ ಸರ್ವತ್ರ ಅನುಕ್ರಮವಾಗಿ ಎಲ್ಲ ಲೋಕಗಳಲ್ಲಿಯೂ ಸಂಚರಿಸುತ್ತಿರುತ್ತಾನೆ.

12340006a ಸ ಕದಾ ಚಿನ್ಮಹೇಷ್ವಾಸ ದೇವರಾಜಾಲಯಂ ಗತಃ।
12340006c ಸತ್ಕೃತಶ್ಚ ಮಹೇಂದ್ರೇಣ ಪ್ರತ್ಯಾಸನ್ನಗತೋಽಭವತ್।।

ಮಹೇಷ್ವಾಸ! ಒಮ್ಮೆ ಅವನು ದೇವರಾಜಾಲಯಕ್ಕೆ ಹೋದನು. ಮಹೇಂದ್ರನಿಂದ ಸತ್ಕೃತನಾಗಿ ಅವನ ಹತ್ತಿರವೇ ಕುಳಿತುಕೊಂಡನು.

12340007a ತಂ ಕೃತಕ್ಷಣಮಾಸೀನಂ ಪರ್ಯಪೃಚ್ಚಚ್ಚಚೀಪತಿಃ।
12340007c ಬ್ರಹ್ಮರ್ಷೇ ಕಿಂ ಚಿದಾಶ್ಚರ್ಯಮಸ್ತಿ ದೃಷ್ಟಂ ತ್ವಯಾನಘ।।

ಅವನನ್ನು ಕುಳ್ಳಿರಿಸಿದ ನಂತರ ಶಚೀಪತಿಯು ನಾರದನನ್ನು ಕೇಳಿದನು: “ಬ್ರಹ್ಮರ್ಷೇ! ಅನಘ! ನೀನು ನೋಡಿದ ಆಶ್ಚರ್ಯವೇನಾದರೂ ಇದೆಯೇ?

12340008a ಯಥಾ ತ್ವಮಪಿ ವಿಪ್ರರ್ಷೇ ತ್ರೈಲೋಕ್ಯಂ ಸಚರಾಚರಮ್।
12340008c ಜಾತಕೌತೂಹಲೋ ನಿತ್ಯಂ ಸಿದ್ಧಶ್ಚರಸಿ ಸಾಕ್ಷಿವತ್।।

ವಿಪ್ರರ್ಷೇ! ನೀನು ಪ್ರಪಂಚದ ಆಗುಹೋಗುಗಳನ್ನು ಅಂತರ್ದೃಷ್ಟಿಯಿಂದಲೇ ಕಾಣುವ ಸಿದ್ಧನಾಗಿದ್ದರೂ ಕುತೂಹಲಕ್ಕಾಗಿ ಮೂರು ಲೋಕಗಳನ್ನು ಸಾಕ್ಷಿಯಂತೆ ಸುತ್ತುತ್ತಿರುತ್ತೀಯೆ.

12340009a ನ ಹ್ಯಸ್ತ್ಯವಿದಿತಂ ಲೋಕೇ ದೇವರ್ಷೇ ತವ ಕಿಂ ಚನ।
12340009c ಶ್ರುತಂ ವಾಪ್ಯನುಭೂತಂ ವಾ ದೃಷ್ಟಂ ವಾ ಕಥಯಸ್ವ ಮೇ।।

ದೇವರ್ಷೇ! ನಿನಗೆ ತಿಳಿಯದೇ ಇಲ್ಲದಿರುವುದು ಯಾವುದೂ ಇಲ್ಲ. ನೀನು ಯಾವುದಾದರೂ ಆಶ್ಚರ್ಯಕರ ವಿಷಯವನ್ನು ಕೇಳಿದ್ದರೆ ಅಥವಾ ಅನುಭವಿಸಿದ್ದರೆ ಅಥವಾ ಕಂಡಿದ್ದರೆ ಅದನ್ನು ನನಗೆ ಹೇಳು.”

12340010a ತಸ್ಮೈ ರಾಜನ್ಸುರೇಂದ್ರಾಯ ನಾರದೋ ವದತಾಂ ವರಃ।
12340010c ಆಸೀನಾಯೋಪಪನ್ನಾಯ ಪ್ರೋಕ್ತವಾನ್ವಿಪುಲಾಂ ಕಥಾಮ್।।

ರಾಜನ್! ಮಾತನಾಡುವವರಲ್ಲಿ ಶ್ರೇಷ್ಠ ನಾರದನು ಸಮೀಪದಲ್ಲಿಯೇ ಕುಳಿತಿದ್ದ ಸುರೆಂದ್ರನಿಗೆ ವಿಸ್ತಾರವಾದ ಈ ಕಥೆಯನ್ನು ಹೇಳಿದನು.

12340011a ಯಥಾ ಯೇನ ಚ ಕಲ್ಪೇನ ಸ ತಸ್ಮೈ ದ್ವಿಜಸತ್ತಮಃ।
12340011c ಕಥಾಂ ಕಥಿತವಾನ್ ಪೃಷ್ಟಸ್ತಥಾ ತ್ವಮಪಿ ಮೇ ಶೃಣು।।

ಯಾವ ಕಲ್ಪವನ್ನು ಅನುಸರಿಸಿ ಆ ದ್ವಿಜಸತ್ತಮನು ಅವನಿಗೆ ಈ ಕಥೆಯನ್ನು ಹೇಳಿದನೋ ಅದನ್ನೇ ಅನುಸರಿಸಿ ನಾನು ಆ ಕಥೆಯನ್ನು ನಿನಗೆ ಹೇಳುತ್ತೇನೆ. ಕೇಳು.”

ಸಮಾಪ್ತಿ ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಉಂಚವೃತ್ಯುಪಾಖ್ಯಾನೇ ಚತ್ವಾರಿಂಶಾಧಿಕತ್ರಿಶತತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಉಂಚವೃತ್ಯುಪಾಖ್ಯಾನ ಎನ್ನುವ ಮುನ್ನೂರಾನಲ್ವತ್ತನೇ ಅಧ್ಯಾಯವು.

  1. ಸತ್ಯಫಲಂ ಮಹತ್ (ಭಾರತ ದರ್ಶನ). ↩︎