ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 337
ಸಾರ
ವ್ಯಾಸನ ಪೂರ್ವಜನ್ಮ ವೃತ್ತಾಂತ (1-69).
12337001 ಜನಮೇಜಯ ಉವಾಚ।
12337001a ಸಾಂಖ್ಯಂ ಯೋಗಂ ಪಂಚರಾತ್ರಂ ವೇದಾರಣ್ಯಕಮೇವ ಚ।
12337001c ಜ್ಞಾನಾನ್ಯೇತಾನಿ ಬ್ರಹ್ಮರ್ಷೇ ಲೋಕೇಷು ಪ್ರಚರಂತಿ ಹ।।
ಜನಮೇಜಯನು ಹೇಳಿದನು: “ಬ್ರಹ್ಮರ್ಷೇ! ಲೋಕಗಳಲ್ಲಿ ಸಾಂಖ್ಯ, ಯೋಗ, ಪಂಚರಾತ್ರ, ಮತ್ತು ಉಪನಿಷದ್ ಎಂಬ ಜ್ಞಾನಗಳು ಪ್ರಚಲಿತವಾಗಿವೆ.
12337002a ಕಿಮೇತಾನ್ಯೇಕನಿಷ್ಠಾನಿ ಪೃಥಘ್ನಿಷ್ಠಾನಿ ವಾ ಮುನೇ।
12337002c ಪ್ರಬ್ರೂಹಿ ವೈ ಮಯಾ ಪೃಷ್ಟಃ ಪ್ರವೃತ್ತಿಂ ಚ ಯಥಾಕ್ರಮಮ್।।
ಈ ನಾಲ್ಕೂ ಶಾಸ್ತ್ರಗಳೂ ಒಂದೇ ಲಕ್ಷ್ಯವನ್ನು ಕುರಿತು ಹೇಳುತ್ತವೆಯೇ ಅಥವಾ ಒಂದೊಂದಕ್ಕೂ ಪ್ರತ್ಯೇಕ ಪ್ರತ್ಯೇಕವಾದ ಗುರಿಗಳಿವೆಯೇ? ನನ್ನ ಈ ಪ್ರಶ್ನೆಗೆ ಉತ್ತರವನ್ನೂ ಪ್ರವೃತ್ತಿಮಾರ್ಗವನ್ನೂ ಯಥಾಕ್ರಮವಾಗಿ ಹೇಳಬೇಕು.”
12337003 ವೈಶಂಪಾಯನ ಉವಾಚ।
12337003a ಜಜ್ಞೇ ಬಹುಜ್ಞಂ ಪರಮತ್ಯುದಾರಂ ಯಂ ದ್ವೀಪಮಧ್ಯೇ ಸುತಮಾತ್ಮವಂತಮ್।
12337003c ಪರಾಶರಾದ್ಗಂಧವತೀ ಮಹರ್ಷಿಂ ತಸ್ಮೈ ನಮೋಽಜ್ಞಾನತಮೋನುದಾಯ।।
ವೈಶಂಪಾಯನನು ಹೇಳಿದನು: “ಬಹುಜ್ಞಾನೀ ಪರಮ ಉದಾರಿ ಪರಾಶರ-ಗಂಧವತಿಯರಿಗೆ ದ್ವೀಪಮಧ್ಯದಲ್ಲಿ ಹುಟ್ಟಿದ ಆತ್ಮವಂತ ಸುತ ಮಹರ್ಷಿ ಅಜ್ಞಾನತಮವನ್ನು ಹೋಗಲಾಡಿಸುವ ವ್ಯಾಸನಿಗೆ ನಾನು ನಮಸ್ಕರಿಸುತ್ತೇನೆ.
12337004a ಪಿತಾಮಹಾದ್ಯಂ ಪ್ರವದಂತಿ ಷಷ್ಠಂ ಮಹರ್ಷಿಮಾರ್ಷೇಯವಿಭೂತಿಯುಕ್ತಮ್।
12337004c ನಾರಾಯಣಸ್ಯಾಂಶಜಮೇಕಪುತ್ರಂ ದ್ವೈಪಾಯನಂ ವೇದಮಹಾನಿಧಾನಮ್।।
ಪಿತಾಮಹನಿಗೂ ಮೊದಲಿಗನಾದ ನಾರಾಯಣನಿಂದ ಆರನೆಯವನೆಂದು1 ಯಾರನ್ನು ಕರೆಯುತ್ತಾರೋ, ಋಷಿಗಳ ಐಶ್ವರ್ಯದಿಂದ ಕೂಡಿರುವ ಮಹರ್ಷಿ, ನಾರಾಯಣನ ಅಂಶಜ, ಪರಾಶರನ ಏಕಮಾತ್ರ ಪುತ್ರ ವೇದಗಳ ಮಹಾನಿಧಿ ದ್ವೈಪಾಯನನನ್ನು ನಮಸ್ಕರಿಸುತ್ತೇನೆ.
12337005a ತಮಾದಿಕಾಲೇಷು ಮಹಾವಿಭೂತಿರ್ ನಾರಾಯಣೋ ಬ್ರಹ್ಮಮಹಾನಿಧಾನಮ್।
12337005c ಸಸರ್ಜ ಪುತ್ರಾರ್ಥಮುದಾರತೇಜಾ ವ್ಯಾಸಂ ಮಹಾತ್ಮಾನಮಜಃ ಪುರಾಣಃ।।
ಆದಿಕಾಲದಲ್ಲಿ ಮಹಾವೈಭವಸಂಪನ್ನ ನಾರಾಯಣನು ಬ್ರಹ್ಮಮಹಾನಿಧಿಯಾದ ಉದಾರತೇಜಸ್ವೀ ಮಹಾತ್ಮಾ ಅಜ ಪುರಾಣ ವ್ಯಾಸನನ್ನು ಪುತ್ರನನ್ನಾಗಿ ಸೃಷ್ಟಿಸಿದನು.”
12337006 ಜನಮೇಜಯ ಉವಾಚ।
12337006a ತ್ವಯೈವ ಕಥಿತಃ ಪೂರ್ವಂ ಸಂಭವೋ ದ್ವಿಜಸತ್ತಮ।
12337006c ವಸಿಷ್ಠಸ್ಯ ಸುತಃ ಶಕ್ತಿಃ ಶಕ್ತೇಃ ಪುತ್ರಃ ಪರಾಶರಃ।।
12337007a ಪರಾಶರಸ್ಯ ದಾಯಾದಃ ಕೃಷ್ಣದ್ವೈಪಾಯನೋ ಮುನಿಃ।
12337007c ಭೂಯೋ ನಾರಾಯಣಸುತಂ ತ್ವಮೇವೈನಂ ಪ್ರಭಾಷಸೇ।।
ಜನಮೇಜಯನು ಹೇಳಿದನು: “ದ್ವಿಜಸತ್ತಮ! ನೀನೇ ಈ ಮೊದಲು ಹೇಳಿದ್ದೆ – ವಸಿಷ್ಠನ ಮಗ ಶಕ್ತಿ, ಶಕ್ತಿಯ ಪುತ್ರ ಪರಾಶರ ಮತ್ತು ಪರಾಶರನ ಮಗನಾಗಿ ಮುನಿ ಕೃಷ್ಣದ್ವೈಪಾಯನನು ಹುಟ್ಟಿದನು ಎಂದು. ಮತ್ತೆ ನೀನು ಈಗ ಅವನು ನಾರಾಯಣನ ಸುತನೆಂದೂ ಹೇಳುತ್ತಿರುವೆ!
12337008a ಕಿಮತಃ ಪೂರ್ವಜಂ ಜನ್ಮ ವ್ಯಾಸಸ್ಯಾಮಿತತೇಜಸಃ।
12337008c ಕಥಯಸ್ವೋತ್ತಮಮತೇ ಜನ್ಮ ನಾರಾಯಣೋದ್ಭವಮ್।।
ಉತ್ತಮ ಮತೇ! ಅಮಿತತೇಜಸ್ವೀ ವ್ಯಾಸನಿಗೆ ಹಿಂದೆ ಮತ್ತೊಂದು ಜನ್ಮವಿದ್ದಿತೇ? ನಾರಾಯಣನಿಂದ ಅವನ ಜನ್ಮವು ಯಾವಾಗ ಮತ್ತು ಹೇಗೆ ಆಯಿತು?”
12337009 ವೈಶಂಪಾಯನ ಉವಾಚ।
12337009a ವೇದಾರ್ಥಾನ್ವೇತ್ತುಕಾಮಸ್ಯ ಧರ್ಮಿಷ್ಠಸ್ಯ ತಪೋನಿಧೇಃ।
12337009c ಗುರೋರ್ಮೇ ಜ್ಞಾನನಿಷ್ಠಸ್ಯ ಹಿಮವತ್ಪಾದ ಆಸತಃ।।
ವೈಶಂಪಾಯನನು ಹೇಳಿದನು: “ವೇದಾರ್ಥಗಳನ್ನು ತಿಳಿಯುವ ಇಚ್ಛೆಯುಳ್ಳವನಾಗಿದ್ದ ಧರ್ಮನಿಷ್ಠ ಜ್ಞಾನನಿಷ್ಠ ತಪೋನಿಧಿ ನನ್ನ ಗುರುವು ಹಿಮವತ್ಪರ್ವತದ ತಪ್ಪಲಿನಲ್ಲಿ ವಾಸಿಸುತ್ತಿದ್ದನು.
12337010a ಕೃತ್ವಾ ಭಾರತಮಾಖ್ಯಾನಂ ತಪಃಶ್ರಾಂತಸ್ಯ ಧೀಮತಃ।
12337010c ಶುಶ್ರೂಷಾಂ ತತ್ಪರಾ ರಾಜನ್ ಕೃತವಂತೋ ವಯಂ ತದಾ।।
ರಾಜನ್! ಮಹಾಭಾರತ ಆಖ್ಯಾನವನ್ನು ರಚಿಸಿ ತಪಸ್ಸಿನಿಂದ ಬಳಲಿದ್ದ ಆ ಧೀಮತನ ಶುಶ್ರೂಷೆಯಲ್ಲಿ ವಿದ್ಯೆಯನ್ನು ಕಲಿತು ಮುಗಿಸಿದ್ದ ನಾವು ತತ್ಪರರಾಗಿದ್ದೆವು.
12337011a ಸುಮಂತುರ್ಜೈಮಿನಿಶ್ಚೈವ ಪೈಲಶ್ಚ ಸುದೃಢವ್ರತಃ।
12337011c ಅಹಂ ಚತುರ್ಥಃ ಶಿಷ್ಯೋ ವೈ ಶುಕೋ ವ್ಯಾಸಾತ್ಮಜಸ್ತಥಾ।।
ಸುಮಂತು, ಜೈಮಿನಿ, ಸುದೃಢವ್ರತ ಪೈಲ, ನಾಲ್ಕನೆಯವನಾಗಿ ನಾನು ಮತ್ತು ವ್ಯಾಸನ ಮಗ ಶುಕ.
12337012a ಏಭಿಃ ಪರಿವೃತೋ ವ್ಯಾಸಃ ಶಿಷ್ಯೈಃ ಪಂಚಭಿರುತ್ತಮೈಃ।
12337012c ಶುಶುಭೇ ಹಿಮವತ್ಪಾದೇ ಭೂತೈರ್ಭೂತಪತಿರ್ಯಥಾ।।
ಈ ಐವರು ಉತ್ತಮ ಶಿಷ್ಯರಿಂದ ಪರಿವೃತನಾದ ವ್ಯಾಸನು ಹಿಮವತ್ಪರ್ವತದ ತಪ್ಪಲಿನಲ್ಲಿ ಭೂತಗಳಿಂದ ಸುತ್ತುವರೆಯಲ್ಪಟ್ಟ ಭೂತಪತಿಯಂತೆ ಶೋಭಿಸುತ್ತಿದ್ದನು.
12337013a ವೇದಾನಾವರ್ತಯನ್ಸಾಂಗಾನ್ಭಾರತಾರ್ಥಾಂಶ್ಚ ಸರ್ವಶಃ।
12337013c ತಮೇಕಮನಸಂ ದಾಂತಂ ಯುಕ್ತಾ ವಯಮುಪಾಸ್ಮಹೇ।।
ಷಡಂಗಯುಕ್ತ ವೇದಗಳನ್ನೂ ಮಹಾಭಾರತದ ಅರ್ಥಗಳನ್ನೂ ಆವರ್ತನೆಮಾಡುತ್ತಾ ದಾಂತ ಏಕಮನಸ್ಕ ಗುರುವನ್ನು ನಾವೆಲ್ಲರೂ ಉಪಾಸಿಸುತ್ತಿದ್ದೆವು.
12337014a ಕಥಾಂತರೇಽಥ ಕಸ್ಮಿಂಶ್ಚಿತ್ಪೃಷ್ಟೋಽಸ್ಮಾಭಿರ್ದ್ವಿಜೋತ್ತಮಃ।
12337014c ವೇದಾರ್ಥಾನ್ಭಾರತಾರ್ಥಾಂಶ್ಚ ಜನ್ಮ ನಾರಾಯಣಾತ್ತಥಾ।।
ವೇದಾರ್ಥಗಳನ್ನೂ ಭಾರತದ ಅರ್ಥಗಳನ್ನೂ ಕೇಳುತ್ತಿದ್ದಾಗ ಯಾವುದೋ ಒಂದು ಕಥೆಯ ಮಧ್ಯೆ ಆ ನಾರಾಯಣನಿಂದ ಅವನಿಗಾದ ಜನ್ಮದ ಕುರಿತು ಕೇಳಿದೆವು.
12337015a ಸ ಪೂರ್ವಮುಕ್ತ್ವಾ ವೇದಾರ್ಥಾನ್ಭಾರತಾರ್ಥಾಂಶ್ಚ ತತ್ತ್ವವಿತ್।
12337015c ನಾರಾಯಣಾದಿದಂ ಜನ್ಮ ವ್ಯಾಹರ್ತುಮುಪಚಕ್ರಮೇ।।
ಆ ತತ್ತ್ವವಿದುವು ವೇದಾರ್ಥಗಳನ್ನೂ ಭಾರತದ ಅರ್ಥಗಳನ್ನೂ ಮೊದಲು ಹೇಳಿ ನಂತರ ನಾರಾಯಣನಿಂದಾದ ಅವನ ಜನ್ಮದ ಕುರಿತು ಹೇಳಲು ಪ್ರಾರಂಭಿಸಿದನು.
12337016a ಶೃಣುಧ್ವಮಾಖ್ಯಾನವರಮೇತದಾರ್ಷೇಯಮುತ್ತಮಮ್।
12337016c ಆದಿಕಾಲೋದ್ಭವಂ ವಿಪ್ರಾಸ್ತಪಸಾಧಿಗತಂ ಮಯಾ।।
“ವಿಪ್ರರೇ! ಆದಿಕಾಲದಲ್ಲಿ ನಡೆದ ಋಷಿಸಂಬಂಧವಾದ ಈ ಉತ್ತಮ ಆಖ್ಯಾನವನ್ನು ಕೇಳಿ. ತಪಶ್ಚರಣೆಯಿಂದ ಈ ವಿಷಯವನ್ನು ನಾನು ತಿಳಿದುಕೊಂಡೆನು.
12337017a ಪ್ರಾಪ್ತೇ ಪ್ರಜಾವಿಸರ್ಗೇ ವೈ ಸಪ್ತಮೇ ಪದ್ಮಸಂಭವೇ।
12337017c ನಾರಾಯಣೋ ಮಹಾಯೋಗೀ ಶುಭಾಶುಭವಿವರ್ಜಿತಃ।।
12337018a ಸಸೃಜೇ ನಾಭಿತಃ ಪುತ್ರಂ ಬ್ರಹ್ಮಾಣಮಮಿತಪ್ರಭಮ್।
12337018c ತತಃ ಸ ಪ್ರಾದುರಭವದಥೈನಂ ವಾಕ್ಯಮಬ್ರವೀತ್।।
ಏಳನೆಯ ಬಾರಿ ಪ್ರಜಾಸೃಷ್ಟಿಯ ಕಾಲವು ಪ್ರಾಪ್ತವಾದಾಗ ಶುಭಾಶುಭವಿವರ್ಜಿತ ಮಹಾಯೋಗೀ ನಾರಾಯಣನು ತನ್ನ ನಾಭಿಕಮಲದಿಂದ ಅಮಿತಪ್ರಭೆಯ ಪುತ್ರ ಬ್ರಹ್ಮನನ್ನು ಹುಟ್ಟಿಸಿದನು. ಅವನು ಹುಟ್ಟಿದನಂತರ ಈ ಮಾತನ್ನಾಡಿದನು:
12337019a ಮಮ ತ್ವಂ ನಾಭಿತೋ ಜಾತಃ ಪ್ರಜಾಸರ್ಗಕರಃ ಪ್ರಭುಃ।
12337019c ಸೃಜ ಪ್ರಜಾಸ್ತ್ವಂ ವಿವಿಧಾ ಬ್ರಹ್ಮನ್ ಸಜಡಪಂಡಿತಾಃ।।
“ಪ್ರಜೆಗಳನ್ನು ಸೃಷ್ಟಿಸುವ ಪ್ರಭು ನೀನು ನನ್ನ ನಾಭಿಯಿಂದ ಹುಟ್ಟಿರುವೆ. ಬ್ರಹ್ಮನ್! ನೀನು ಜಡ ಮತ್ತು ಪಂಡಿತ ಪ್ರಜೆಗಳನ್ನು ಸೃಷ್ಟಿಸು!”
12337020a ಸ ಏವಮುಕ್ತೋ ವಿಮುಖಶ್ಚಿಂತಾವ್ಯಾಕುಲಮಾನಸಃ।
12337020c ಪ್ರಣಮ್ಯ ವರದಂ ದೇವಮುವಾಚ ಹರಿಮೀಶ್ವರಮ್।।
ಅವನು ಹೀಗೆ ಹೇಳಲು ಬ್ರಹ್ಮನು ಚಿಂತಾವ್ಯಾಕುಲ ಮಾನಸನಾಗಿ ವಿಮುಖನಾಗಿ ನಮಸ್ಕರಿಸಿ ವರದ ದೇವ ಹರಿ ಈಶ್ವರನಿಗೆ ಹೇಳಿದನು:
12337021a ಕಾ ಶಕ್ತಿರ್ಮಮ ದೇವೇಶ ಪ್ರಜಾಃ ಸ್ರಷ್ಟುಂ ನಮೋಽಸ್ತು ತೇ।
12337021c ಅಪ್ರಜ್ಞಾವಾನಹಂ ದೇವ ವಿಧತ್ಸ್ವ ಯದನಂತರಮ್।।
“ದೇವೇಶ! ನಿನಗೆ ನಮಸ್ಕರಿಸುತ್ತೇನೆ. ಪ್ರಜೆಗಳನ್ನು ಸೃಷ್ಟಿಸಲು ನನ್ನಲ್ಲಿ ಯಾವ ಶಕ್ತಿಯಿದೆ? ನಾನು ಅಪ್ರಜ್ಞಾವಾನನು. ದೇವ! ಮುಂದೆ ನಾನೇನು ಮಾಡಬೇಕೆಂದು ನೀನೇ ಹೇಳು.”
12337022a ಸ ಏವಮುಕ್ತೋ ಭಗವಾನ್ ಭೂತ್ವಾಥಾಂತರ್ಹಿತಸ್ತತಃ।
12337022c ಚಿಂತಯಾಮಾಸ ದೇವೇಶೋ ಬುದ್ಧಿಂ ಬುದ್ಧಿಮತಾಂ ವರಃ।।
ಅವನು ಹೀಗೆ ಹೇಳಲು ಬುದ್ಧಿವಂತರಲ್ಲಿ ಶ್ರೇಷ್ಠ ಭಗವಾನ್ ದೇವೇಶನು ಅಂತರ್ಹಿತನಾಗಿ ಬುದ್ಧಿಯ ಕುರಿತು ಚಿಂತಿಸಿದನು.
12337023a ಸ್ವರೂಪಿಣೀ ತತೋ ಬುದ್ಧಿರುಪತಸ್ಥೇ ಹರಿಂ ಪ್ರಭುಮ್।
12337023c ಯೋಗೇನ ಚೈನಾಂ ನಿರ್ಯೋಗಃ ಸ್ವಯಂ ನಿಯುಯುಜೇ ತದಾ।।
ಆಗ ಬುದ್ಧಿಯು ಶರೀರವನ್ನು ಧರಿಸಿ ಪ್ರಭು ಹರಿಯ ಬಳಿ ನಿಂತುಕೊಂಡಳು. ನಿರ್ಯೋಗನಾದ ಅವನು ಸ್ವಯಂ ತಾನೇ ಅವಳನ್ನು ಯೋಗದಿಂದ ಸಂಯೋಜಿಸಿದನು.
12337024a ಸ ತಾಮೈಶ್ವರ್ಯಯೋಗಸ್ಥಾಂ ಬುದ್ಧಿಂ ಶಕ್ತಿಮತೀಂ ಸತೀಮ್।
12337024c ಉವಾಚ ವಚನಂ ದೇವೋ ಬುದ್ಧಿಂ ವೈ ಪ್ರಭುರವ್ಯಯಃ।।
ಪ್ರಭು ಅವ್ಯಯ ದೇವನು ಹಾಗೆ ಯೋಗೈಶ್ವರ್ಯಯುಕ್ತಳಾಗಿದ್ದ ಶಕ್ತಿಮತೀ ಸತೀ ಬುದ್ಧಿಗೆ ಈ ಮಾತನ್ನಾಡಿದನು:
12337025a ಬ್ರಹ್ಮಾಣಂ ಪ್ರವಿಶಸ್ವೇತಿ ಲೋಕಸೃಷ್ಟ್ಯರ್ಥಸಿದ್ಧಯೇ।
12337025c ತತಸ್ತಮೀಶ್ವರಾದಿಷ್ಟಾ ಬುದ್ಧಿಃ ಕ್ಷಿಪ್ರಂ ವಿವೇಶ ಸಾ।।
“ಲೋಕಸೃಷ್ಟಿಗಾಗಿ ನೀನು ಬ್ರಹ್ಮನನ್ನು ಪ್ರವೇಶಿಸು!” ಈಶ್ವರನ ಆದೇಶದಂತೆ ಆ ಬುದ್ಧಿಯು ಕ್ಷಿಪ್ರವಾಗಿ ಬ್ರಹ್ಮನನ್ನು ಪ್ರವೇಶಿಸಿದಳು.
12337026a ಅಥೈನಂ ಬುದ್ಧಿಸಂಯುಕ್ತಂ ಪುನಃ ಸ ದದೃಶೇ ಹರಿಃ।
12337026c ಭೂಯಶ್ಚೈನಂ ವಚಃ ಪ್ರಾಹ ಸೃಜೇಮಾ ವಿವಿಧಾಃ ಪ್ರಜಾಃ।।
ಆಗ ಬುದ್ಧಿಸಂಯುಕ್ತನಾದ ಬ್ರಹ್ಮನನ್ನು ಹರಿಯು ಪುನಃ ನೋಡಿದನು ಮತ್ತು “ವಿವಿಧ ಪ್ರಜೆಗಳನ್ನು ಸೃಷ್ಟಿಸು!” ಎಂದು ಪುನಃ ಹೇಳಿದನು.
12337027a ಏವಮುಕ್ತ್ವಾ ಸ ಭಗವಾಂಸ್ತತ್ರೈವಾಂತರಧೀಯತ।
12337027c ಪ್ರಾಪ ಚೈವ ಮುಹೂರ್ತೇನ ಸ್ವಸ್ಥಾನಂ ದೇವಸಂಜ್ಞಿತಮ್।।
ಹೀಗೆ ಹೇಳಿ ಭಗವಾನನು ಅಲ್ಲಿಯೇ ಅಂತರ್ಧಾನನಾದನು ಮತ್ತು ಮುಹೂರ್ತಮಾತ್ರದಲ್ಲಿಯೇ ದೇವಸಂಜ್ಞಿತವಾದ ಸ್ವಸ್ಥಾನಕ್ಕೆ ತೆರಳಿದನು.
12337028a ತಾಂ ಚೈವ ಪ್ರಕೃತಿಂ ಪ್ರಾಪ್ಯ ಏಕೀಭಾವಗತೋಽಭವತ್।
12337028c ಅಥಾಸ್ಯ ಬುದ್ಧಿರಭವತ್ ಪುನರನ್ಯಾ ತದಾ ಕಿಲ।।
ಅಲ್ಲಿ ತನ್ನ ಮೂಲಪ್ರಕೃತಿಯನ್ನು ಹೊಂದಿ ಅವಳೊಡನೆ ಏಕೀಭೂತನಾದನು. ಅನಂತರ ಪುನಃ ಅವನ ಮನಸ್ಸಿನಲ್ಲಿ ಇನ್ನೊಂದು ವಿಚಾರವು ಹುಟ್ಟಿತು.
12337029a ಸೃಷ್ಟಾ ಇಮಾಃ ಪ್ರಜಾಃ ಸರ್ವಾ ಬ್ರಹ್ಮಣಾ ಪರಮೇಷ್ಠಿನಾ।
12337029c ದೈತ್ಯದಾನವಗಂಧರ್ವರಕ್ಷೋಗಣಸಮಾಕುಲಾಃ।
12337029e ಜಾತಾ ಹೀಯಂ ವಸುಮತೀ ಭಾರಾಕ್ರಾಂತಾ ತಪಸ್ವಿನೀ।।
“ಪರಮೇಷ್ಠಿ ಬ್ರಹ್ಮನು ದೈತ್ಯ, ದಾನವ, ಗಂಧರ್ವ, ರಾಕ್ಷಸ ಗಣ ಸಮಾಕುಲಗಳ ಈ ಎಲ್ಲ ಪ್ರಜೆಗಳನ್ನೂ ಸೃಷ್ಟಿಸಿದ್ದಾನೆ. ಆದರೆ ಇವರ ಭಾರದಿಂದ ತಪಸ್ವಿನೀ ವಸುಮತಿಯು ಪೀಡಿತಳಾಗಿದ್ದಾಳೆ.
12337030a ಬಹವೋ ಬಲಿನಃ ಪೃಥ್ವ್ಯಾಂ ದೈತ್ಯದಾನವರಾಕ್ಷಸಾಃ।
12337030c ಭವಿಷ್ಯಂತಿ ತಪೋಯುಕ್ತಾ ವರಾನ್ಪ್ರಾಪ್ಸ್ಯಂತಿ ಚೋತ್ತಮಾನ್।।
ಅನೇಕ ಬಲಶಾಲಿ ದೈತ್ಯ-ದಾನವ-ರಾಕ್ಷಸರು ಭೂಮಿಯ ಮೇಲೆ ಹುಟ್ಟುತ್ತಾರೆ. ಅವರು ತಪೋಯುಕ್ತರಾಗಿ ಉತ್ತಮ ವರಗಳನ್ನು ಪಡೆದುಕೊಳ್ಳುತ್ತಾರೆ.
12337031a ಅವಶ್ಯಮೇವ ತೈಃ ಸರ್ವೈರ್ವರದಾನೇನ ದರ್ಪಿತೈಃ।
12337031c ಬಾಧಿತವ್ಯಾಃ ಸುರಗಣಾ ಋಷಯಶ್ಚ ತಪೋಧನಾಃ।
12337031e ತತ್ರ ನ್ಯಾಯ್ಯಮಿದಂ ಕರ್ತುಂ ಭಾರಾವತರಣಂ ಮಯಾ।।
ವರದಾನಗಳಿಂದ ದರ್ಪಿತರಾದ ಅವರೆಲ್ಲರಿಂದ ಸುರಗಣಗಳೂ ಮತ್ತು ತಪೋಧನ ಋಷಿಗಳೂ ಅವಶ್ಯವಾಗಿ ಬಾಧೆಗೊಳಗಾಗುತ್ತಾರೆ. ಆದುದರಿಂದ ನಾನು ಅವತರಿಸಿ ಭಾರವನ್ನು ಕಡಿಮೆಮಾಡುವುದು ನ್ಯಾಯವಾದ ಕರ್ತವ್ಯವಾಗಿದೆ.
12337032a ಅಥ ನಾನಾಸಮುದ್ಭೂತೈರ್ವಸುಧಾಯಾಂ ಯಥಾಕ್ರಮಮ್।
12337032c ನಿಗ್ರಹೇಣ ಚ ಪಾಪಾನಾಂ ಸಾಧೂನಾಂ ಪ್ರಗ್ರಹೇಣ ಚ।।
12337033a ಇಮಾಂ ತಪಸ್ವಿನೀಂ ಸತ್ಯಾಂ ಧಾರಯಿಷ್ಯಾಮಿ ಮೇದಿನೀಮ್2।
ವಸುಧೆಯಲ್ಲಿ ಯಥಾಕ್ರಮವಾಗಿ ನಾನಾ ಅವತಾರಗಳನ್ನೆತ್ತಿ ಪಾಪಿಗಳನ್ನು ನಿಗ್ರಹಿಸಿ ಮತ್ತು ಸಾಧುಗಳನ್ನು ಅನುಗ್ರಹಿಸಿ ಈ ತಪಸ್ವಿನೀ ಸತ್ಯೆ ಮೇದಿನಿಯನ್ನು ಧರಿಸುತ್ತೇನೆ.
12337033c ಮಯಾ ಹ್ಯೇಷಾ ಹಿ ಧ್ರಿಯತೇ ಪಾತಾಲಸ್ಥೇನ ಭೋಗಿನಾ।।
12337034a ಮಯಾ ಧೃತಾ ಧಾರಯತಿ ಜಗದ್ಧಿ ಸಚರಾಚರಮ್।
12337034c ತಸ್ಮಾತ್ ಪೃಥ್ವ್ಯಾಃ ಪರಿತ್ರಾಣಂ ಕರಿಷ್ಯೇ ಸಂಭವಂ ಗತಃ।।
ಪಾತಾಲದಲ್ಲಿರುವ ನಾಗನಾಗಿ ನಾನು ಇವಳನ್ನು ಹೊರುತ್ತೇನೆ. ನನ್ನಿಂದ ಹೊರಲ್ಪಟ್ಟ ಇವಳು ಚರಾಚರಗಳೊಂದಿಗೆ ಜಗತ್ತನ್ನು ಧಾರಣೆಮಾಡುತ್ತಾಳೆ. ಆದುದರಿಂದ ನಾನು ಪೃಥ್ವಿಯಮೇಲೆ ಅವತರಿಸಿ ಅವಳನ್ನು ರಕ್ಷಿಸುತ್ತೇನೆ.”
12337035a ಏವಂ ಸ ಚಿಂತಯಿತ್ವಾ ತು ಭಗವಾನ್ ಮಧುಸೂದನಃ।
12337035c ರೂಪಾಣ್ಯನೇಕಾನ್ಯಸೃಜತ್ ಪ್ರಾದುರ್ಭಾವಭವಾಯ ಸಃ।।
12337036a ವಾರಾಹಂ ನಾರಸಿಂಹಂ ಚ ವಾಮನಂ ಮಾನುಷಂ ತಥಾ।
12337036c ಏಭಿರ್ಮಯಾ ನಿಹಂತವ್ಯಾ ದುರ್ವಿನೀತಾಃ ಸುರಾರಯಃ।।
ಭಗವಾನ್ ಮಧುಸೂದನನನು ಹೀಗೆ ಯೋಚಿಸಿ ವರಾಹ, ನಾರಸಿಂಹ, ವಾಮನ ಮತ್ತು ಮನುಷ್ಯ ಹೀಗೆ ಅನೇಕ ರೂಪಗಳನ್ನು ಸೃಷ್ಟಿಸಿ “ಇವುಗಳಿಂದ ಸುರರ ದುರ್ವಿನೀತ ಶತ್ರುಗಳನ್ನು ಸಂಹರಿಸುತ್ತೇನೆ” ಎಂದು ಅವತರಿಸಿದನು.
12337037a ಅಥ ಭೂಯೋ ಜಗತ್ಸ್ರಷ್ಟಾ ಭೋಃಶಬ್ದೇನಾನುನಾದಯನ್।
12337037c ಸರಸ್ವತೀಮುಚ್ಚಚಾರ ತತ್ರ ಸಾರಸ್ವತೋಽಭವತ್।।
ಅನಂತರ ಜಗತ್ಸ್ರಷ್ಟನು “ಭೋಃ” ಎಂಬ ಶಬ್ದದಿಂದ ಪ್ರತಿಧ್ವನಿಯನ್ನುಂಟುಮಾಡುತ್ತಾ ಸರಸ್ವತಿಯನ್ನು ಕರೆದನು. ಆಗ ಸಾರಸ್ವತನ ಆವಿರ್ಭಾವವಾಯಿತು.
12337038a ಅಪಾಂತರತಮಾ ನಾಮ ಸುತೋ ವಾಕ್ಸಂಭವೋ ವಿಭೋಃ।
12337038c ಭೂತಭವ್ಯಭವಿಷ್ಯಜ್ಞಃ ಸತ್ಯವಾದೀ ದೃಢವ್ರತಃ।।
ವಿಭುವಿನ ವಾಕ್ಸಂಭವನಾದ ಅವನ ಸುತನ ಹೆಸರು ಅಪಾಂತರತಮಾ ಎಂದಾಯಿತು. ಆ ಸತ್ಯವಾದೀ ದೃಢವ್ರತನು ಭೂತ-ಭವ್ಯ-ಭವಿಷ್ಯಗಳನ್ನು ತಿಳಿದವನಾಗಿದ್ದನು.
12337039a ತಮುವಾಚ ನತಂ ಮೂರ್ಧ್ನಾ ದೇವಾನಾಮಾದಿರವ್ಯಯಃ।
12337039c ವೇದಾಖ್ಯಾನೇ ಶ್ರುತಿಃ ಕಾರ್ಯಾ ತ್ವಯಾ ಮತಿಮತಾಂ ವರ।
12337039e ತಸ್ಮಾತ್ಕುರು ಯಥಾಜ್ಞಪ್ತಂ ಮಯೈತದ್ವಚನಂ ಮುನೇ।।
ತಲೆಬಾಗಿ ನಮಸ್ಕರಿಸಿದ ಅವನಿಗೆ ದೇವತೆಗಳ ಆದಿ ಅವ್ಯಯನು ಹೇಳಿದನು: “ಬುದ್ಧಿವಂತರಲ್ಲಿ ಶ್ರೇಷ್ಠ! ವೇದಗಳನ್ನು ವ್ಯಾಖ್ಯಾನಿಸಲು ನಿನ್ನಿಂದ ಶ್ರುತಿಗಳ ಕಾರ್ಯವಾಗಬೇಕು. ಆದುದರಿಂದ ಮುನೇ! ನಾನು ಹೇಗೆ ಆಜ್ಞಾಪಿಸುತ್ತೇನೋ ಹಾಗೆ ಮಾಡು. ನನ್ನ ಮಾತಿನಂತೆಯೇ ಮಾಡು.”
12337040a ತೇನ ಭಿನ್ನಾಸ್ತದಾ ವೇದಾ ಮನೋಃ ಸ್ವಾಯಂಭುವೇಽಂತರೇ।
12337040c ತತಸ್ತುತೋಷ ಭಗವಾನ್ ಹರಿಸ್ತೇನಾಸ್ಯ ಕರ್ಮಣಾ।
12337040e ತಪಸಾ ಚ ಸುತಪ್ತೇನ ಯಮೇನ ನಿಯಮೇನ ಚ।।
ಅಪಾಂತರತಮನು ಸ್ವಾಯಂಭುವ ಮನ್ವಂತರದಲ್ಲಿ ವೇದಗಳನ್ನು ವಿಂಗಡಿಸಿ ಚೆನ್ನಾಗಿ ತಪಿಸಿದ ತಪಸ್ಸಿನಿಂದ ಮತ್ತು ಯಮ-ನಿಯಮಗಳೇ ಮೊದಲಾದ ತನ್ನ ಕರ್ಮಗಳಿಂದ ಭಗವಾನ್ ಹರಿಯನ್ನು ಮೆಚ್ಚಿಸಿದನು.
12337041 ಶ್ರೀಭಗವಾನುವಾಚ।
12337041a ಮನ್ವಂತರೇಷು ಪುತ್ರ ತ್ವಮೇವಂ ಲೋಕಪ್ರವರ್ತಕಃ।
12337041c ಭವಿಷ್ಯಸ್ಯಚಲೋ ಬ್ರಹ್ಮನ್ನಪ್ರಧೃಷ್ಯಶ್ಚ ನಿತ್ಯಶಃ।।
ಶ್ರೀಭಗವಂತನು ಹೇಳಿದನು: “ಪುತ್ರ! ಮನ್ವಂತರಗಳಲ್ಲಿ ನೀನು ಲೋಕಪ್ರವರ್ತಕನಾಗು. ಬ್ರಹ್ಮನ್! ಭವಿಷ್ಯದಲ್ಲಿ ನೀನು ನಿತ್ಯವೂ ಅಚಲನೂ ಅಜೇಯನೂ ಆಗುವೆ.
12337042a ಪುನಸ್ತಿಷ್ಯೇ ಚ ಸಂಪ್ರಾಪ್ತೇ ಕುರವೋ ನಾಮ ಭಾರತಾಃ।
12337042c ಭವಿಷ್ಯಂತಿ ಮಹಾತ್ಮಾನೋ ರಾಜಾನಃ ಪ್ರಥಿತಾ ಭುವಿ।।
ದ್ವಾಪರ-ಕಲಿಗಳ ಸಂಧಿಕಾಲವು ಪ್ರಾಪ್ತವಾದಾಗ ಕುರುಗಳೆಂಬ ಭಾರತರು ಆಗುತ್ತಾರೆ. ಆ ಮಹಾತ್ಮ ರಾಜರು ಭುವಿಯಲ್ಲಿ ಪ್ರಥಿತರಾಗುತ್ತಾರೆ.
12337043a ತೇಷಾಂ ತ್ವತ್ತಃ ಪ್ರಸೂತಾನಾಂ ಕುಲಭೇದೋ ಭವಿಷ್ಯತಿ।
12337043c ಪರಸ್ಪರವಿನಾಶಾರ್ಥಂ ತ್ವಾಮೃತೇ ದ್ವಿಜಸತ್ತಮ।।
ದ್ವಿಜಸತ್ತಮ! ನಿನ್ನಿಂದಲೇ ಪ್ರಸೂತರಾಗುವ ಅವರಲ್ಲಿ, ನಿನ್ನನ್ನು ಬಿಟ್ಟು ಪರಸ್ಪರ ವಿನಾಶರಾಗುವ, ಕುಲಭೇದವು ಉಂಟಾಗುತ್ತದೆ.
12337044a ತತ್ರಾಪ್ಯನೇಕಧಾ ವೇದಾನ್ ಭೇತ್ಸ್ಯಸೇ ತಪಸಾನ್ವಿತಃ।
12337044c ಕೃಷ್ಣೇ ಯುಗೇ ಚ ಸಂಪ್ರಾಪ್ತೇ ಕೃಷ್ಣವರ್ಣೋ ಭವಿಷ್ಯಸಿ।।
ಆಗಲೂ ಕೂಡ ತಪಸಾನ್ವಿತನಾದ ನೀನು ವೇದಗಳನ್ನು ಅನೇಕಭಾಗಗಳನ್ನಾಗಿ ವಿಂಗಡಿಸುವೆ. ಕೃಷ್ಣಯುಗವು ಪ್ರಾಪ್ತವಾಗಲು ನೀನು ಕೃಷ್ಣವರ್ಣನಾಗುತ್ತೀಯೆ.
12337045a ಧರ್ಮಾಣಾಂ ವಿವಿಧಾನಾಂ ಚ ಕರ್ತಾ ಜ್ಞಾನಕರಸ್ತಥಾ।
12337045c ಭವಿಷ್ಯಸಿ ತಪೋಯುಕ್ತೋ ನ ಚ ರಾಗಾದ್ವಿಮೋಕ್ಷ್ಯಸೇ।।
ವಿವಿಧ ಧರ್ಮಗಳ ಕರ್ತನಾಗುವೆ. ಜ್ಞಾನಕರನಾಗುವೆ. ತಪೋಯುಕ್ತನೂ ಆಗುವೆ. ಆದರೆ ರಾಗಾದಿಗಳಿಂದ ಮುಕ್ತನಾಗಿರುವುದಿಲ್ಲ.
12337046a ವೀತರಾಗಶ್ಚ ಪುತ್ರಸ್ತೇ ಪರಮಾತ್ಮಾ ಭವಿಷ್ಯತಿ।
12337046c ಮಹೇಶ್ವರಪ್ರಸಾದೇನ ನೈತದ್ವಚನಮನ್ಯಥಾ।।
ಮಹೇಶ್ವರನ ಪ್ರಸಾದದಿಂದ ನಿನ್ನ ಮಗನು ವೀತರಾಗನಾಗಿ ಪರಮಾತ್ಮನಾಗುತ್ತಾನೆ. ನನ್ನ ಈ ವಚನವು ಅನ್ಯಥಾ ಆಗುವುದಿಲ್ಲ.
12337047a ಯಂ ಮಾನಸಂ ವೈ ಪ್ರವದಂತಿ ಪುತ್ರಂ ಪಿತಾಮಹಸ್ಯೋತ್ತಮಬುದ್ಧಿಯುಕ್ತಮ್।
12337047c ವಸಿಷ್ಠಮಗ್ರ್ಯಂ ತಪಸೋ ನಿಧಾನಂ ಯಶ್ಚಾಪಿ ಸೂರ್ಯಂ ವ್ಯತಿರಿಚ್ಯ ಭಾತಿ।।
12337048a ತಸ್ಯಾನ್ವಯೇ ಚಾಪಿ ತತೋ ಮಹರ್ಷಿಃ ಪರಾಶರೋ ನಾಮ ಮಹಾಪ್ರಭಾವಃ।
12337048c ಪಿತಾ ಸ ತೇ ವೇದನಿಧಿರ್ವರಿಷ್ಠೋ ಮಹಾತಪಾ ವೈ ತಪಸೋ ನಿವಾಸಃ।
12337048e ಕಾನೀನಗರ್ಭಃ ಪಿತೃಕನ್ಯಕಾಯಾಂ ತಸ್ಮಾದೃಷೇಸ್ತ್ವಂ ಭವಿತಾ ಚ ಪುತ್ರಃ।।
ಯಾರನ್ನು ಪಿತಾಮಹನ ಮಾನಸಪುತ್ರನೆಂದು ಕರೆಯುತ್ತಾರೋ ಆ ಉತ್ತಮಬುದ್ಧಿಯುಕ್ತ, ಅಗ್ರ್ಯ, ತಪಸ್ಸಿನ ನಿಧಿ, ಸೂರ್ಯನಿಗೂ ಮೀರಿ ಪ್ರಕಾಶಿಸುವ ಮಹರ್ಷಿ ವಸಿಷ್ಠನ ಕುಲದಲ್ಲಿ ಪರಾಶರ ಎಂಬ ಹೆಸರಿನ ಮಹಾಪ್ರಭಾವನು ಹುಟ್ಟುತ್ತಾನೆ. ಆ ವೇದನಿಧಿ ವರಿಷ್ಠ ಮಹಾತಪಸ್ವಿಯು ನಿನ್ನ ಪಿತನಾಗುತ್ತಾನೆ. ಇನ್ನೂ ತಂದೆಯ ಮನೆಯಲ್ಲಿಯೇ ಇದ್ದ ಕನ್ಯೆಯೊಬ್ಬಳಲ್ಲಿ ನೀನು ಪುತ್ರನಾಗಿ ಹುಟ್ಟುವೆ ಮತ್ತು ಅದರ ಕಾರಣ ಕಾನೀನಗರ್ಭನೆಂದಾಗುವೆ.
12337049a ಭೂತಭವ್ಯಭವಿಷ್ಯಾಣಾಂ ಚಿನ್ನಸರ್ವಾರ್ಥಸಂಶಯಃ।
12337049c ಯೇ ಹ್ಯತಿಕ್ರಾಂತಕಾಃ ಪೂರ್ವಂ ಸಹಸ್ರಯುಗಪರ್ಯಯಾಃ।।
12337050a ತಾಂಶ್ಚ ಸರ್ವಾನ್ಮಯೋದ್ದಿಷ್ಟಾನ್ ದ್ರಕ್ಷ್ಯಸೇ ತಪಸಾನ್ವಿತಃ।
12337050c ಪುನರ್ದ್ರಕ್ಷ್ಯಸಿ ಚಾನೇಕಸಹಸ್ರಯುಗಪರ್ಯಯಾನ್।।
ಭೂತ-ಭವ್ಯ-ಭವಿಷ್ಯತ್ತುಗಳಲ್ಲಿ ನಿನಗೆ ಯಾವ ಸಂಶಯವೂ ಇರುವುದಿಲ್ಲ. ತಪಸಾನ್ವಿತನಾದ ನೀನು ಸಹಸ್ರಯುಗಗಳ ಹಿಂದೆಯೂ ನನ್ನ ಉದ್ದೇಶದಿಂದ ನಡೆದುಹೋದವುಗಳನ್ನು ಸ್ಪಷ್ಟವಾಗಿ ನೋಡುವೆ. ಮುಂದಿನ ಸಾವಿರ ಯುಗಗಳಲ್ಲಿ ನಡೆಯುವ ವಿಷಯಗಳನ್ನೂ ನೀನು ಸ್ಪಷ್ಟರೂಪದಿಂದ ಕಾಣುವೆ.
12337051a ಅನಾದಿನಿಧನಂ ಲೋಕೇ ಚಕ್ರಹಸ್ತಂ ಚ ಮಾಂ ಮುನೇ।
12337051c ಅನುಧ್ಯಾನಾನ್ಮಮ ಮುನೇ ನೈತದ್ವಚನಮನ್ಯಥಾ।।
ಮುನೇ! ನಿತ್ಯವೂ ನನ್ನನ್ನು ಧ್ಯಾನಮಾಡುವುದರಿಂದ ಅನಾದಿನಿಧನನಾದ ಚಕ್ರಪಾಣಿಯಾದ ನನ್ನನ್ನು ನೀನು ಕಾಣುತ್ತಿರುವೆ. ನನ್ನ ಈ ಮಾತು ಅನ್ಯಥಾ ಆಗುವುದಿಲ್ಲ.
312337052a ಶನೈಶ್ಚರಃ ಸೂರ್ಯಪುತ್ರೋ ಭವಿಷ್ಯತಿ ಮನುರ್ಮಹಾನ್।
12337052c ತಸ್ಮಿನ್ಮನ್ವಂತರೇ ಚೈವ ಸಪ್ತರ್ಷಿಗಣಪೂರ್ವಕಃ4।
12337052e ತ್ವಮೇವ ಭವಿತಾ ವತ್ಸ ಮತ್ಪ್ರಸಾದಾನ್ನ ಸಂಶಯಃ।।
ಭವಿಷ್ಯದಲ್ಲಿ ಸೂರ್ಯಪುತ್ರ ಶನೈಶ್ಚರನು ಮಹಾಮನುವಾಗುತ್ತಾನೆ. ವತ್ಸ! ನನ್ನ ಪ್ರಸಾದದಿಂದ ಅವನ ಮನ್ವಂತರದಲ್ಲಿ ನೀನು ಸಪ್ತರ್ಷಿಗಣಗಳಿಗೆ ಪ್ರಧಾನನಾಗುವೆ. ಇದರಲ್ಲಿ ಸಂಶಯವಿಲ್ಲ.””
12337053 ವ್ಯಾಸ ಉವಾಚ।
12337053a ಏವಂ ಸಾರಸ್ವತಮೃಷಿಮಪಾಂತರತಮಂ ತದಾ।
12337053c ಉಕ್ತ್ವಾ ವಚನಮೀಶಾನಃ ಸಾಧಯಸ್ವೇತ್ಯಥಾಬ್ರವೀತ್।।
ವ್ಯಾಸನು ಹೇಳಿದನು: “ಹೀಗೆ ಆ ಸಾರಸ್ವತ ಋಷಿ ಅಪಾಂತರತಮನಿಗೆ ಹೇಳಿ ಈಶಾನನು ಮುಂದಿನ ಕಾರ್ಯಗಳನ್ನು ಸಾಧಿಸಲು ಹೇಳಿದನು.
12337054a ಸೋಽಹಂ ತಸ್ಯ ಪ್ರಸಾದೇನ ದೇವಸ್ಯ ಹರಿಮೇಧಸಃ।
12337054c ಅಪಾಂತರತಮಾ ನಾಮ ತತೋ ಜಾತೋಽಜ್ಞಯಾ ಹರೇಃ।
12337054e ಪುನಶ್ಚ ಜಾತೋ ವಿಖ್ಯಾತೋ ವಸಿಷ್ಠಕುಲನಂದನಃ।।
ಹೀಗೆ ನಾನು ಆ ದೇವ ಹರಿಮೇಧಸನ ಪ್ರಸಾದದಿಂದ ಅಪಾಂತರತಮ ಎಂಬ ಹೆಸರಿನಿಂದ ಹುಟ್ಟಿದೆನು. ಹರಿಯ ಆಜ್ಞೆಯಂತೆಯೇ ಪುನಃ ನಾನು ವಿಖ್ಯಾತ ವಸಿಷ್ಠನ ಕುಲದಲ್ಲಿ ಹುಟ್ಟಿದೆನು.
12337055a ತದೇತತ್ಕಥಿತಂ ಜನ್ಮ ಮಯಾ ಪೂರ್ವಕಮಾತ್ಮನಃ।
12337055c ನಾರಾಯಣಪ್ರಸಾದೇನ ತಥಾ ನಾರಾಯಣಾಂಶಜಮ್।।
ಹಿಂದೆ ನಾರಾಯಣನ ಕೃಪೆಯಿಂದ ನಾನು ನಾರಾಯಣಾಂಶದಿಂದ ಹುಟ್ಟಿದ್ದೆನು. ಇದೋ ನನ್ನ ಪೂರ್ವಜನ್ಮದ ಕುರಿತು ಹೇಳಿದ್ದೇನೆ.
12337056a ಮಯಾ ಹಿ ಸುಮಹತ್ತಪ್ತಂ ತಪಃ ಪರಮದಾರುಣಮ್।
12337056c ಪುರಾ ಮತಿಮತಾಂ ಶ್ರೇಷ್ಠಾಃ ಪರಮೇಣ ಸಮಾಧಿನಾ।।
ಮತಿವಂತರಲ್ಲಿ ಶ್ರೇಷ್ಠರೇ! ಹಿಂದೆ ನಾನು ಪರಮ ಸಮಾಧಿಯಿಂದ ಪರಮ ದಾರುಣವಾದ ಮಹಾತಪಸ್ಸನ್ನು ತಪಿಸಿದೆನು.
12337057a ಏತದ್ವಃ ಕಥಿತಂ ಸರ್ವಂ ಯನ್ಮಾಂ ಪೃಚ್ಚಥ ಪುತ್ರಕಾಃ।
12337057c ಪೂರ್ವಜನ್ಮ ಭವಿಷ್ಯಂ ಚ ಭಕ್ತಾನಾಂ ಸ್ನೇಹತೋ ಮಯಾ।।
ಪುತ್ರರೇ! ನನ್ನನ್ನು ಕೇಳಿದ ನನ್ನ ಪೂರ್ವಜನ್ಮ ಮತ್ತು ಭವಿಷ್ಯ ಎಲ್ಲವನ್ನೂ, ಭಕ್ತರ ಮೇಲಿನ ಸ್ನೇಹದಿಂದ, ನಿಮಗೆ ಹೇಳಿದ್ದೇನೆ.””
12337058 ವೈಶಂಪಾಯನ ಉವಾಚ।
12337058a ಏಷ ತೇ ಕಥಿತಃ ಪೂರ್ವಂ ಸಂಭವೋಽಸ್ಮದ್ಗುರೋರ್ನೃಪ।
12337058c ವ್ಯಾಸಸ್ಯಾಕ್ಲಿಷ್ಟಮನಸೋ ಯಥಾ ಪೃಷ್ಟಃ ಪುನಃ ಶೃಣು।।
ವೈಶಂಪಾಯನನು ಹೇಳಿದನು: “ನೃಪ! ನೀನು ನನಗೆ ಕೇಳಿದಂತೆ ನನ್ನ ಗುರು ಅಕ್ಲಿಷ್ಟಮನಸ್ಕ ವ್ಯಾಸನ ಪೂರ್ವಜನ್ಮದ ಕುರಿತು ಹೇಳಿದ್ದೇನೆ. ಇನ್ನೂ ಕೆಲವು ವಿಷಯಗಳಿವೆ. ಕೇಳು.
12337059a ಸಾಂಖ್ಯಂ ಯೋಗಂ ಪಂಚರಾತ್ರಂ ವೇದಾಃ ಪಾಶುಪತಂ ತಥಾ।
12337059c ಜ್ಞಾನಾನ್ಯೇತಾನಿ ರಾಜರ್ಷೇ ವಿದ್ಧಿ ನಾನಾಮತಾನಿ ವೈ।।
ರಾಜರ್ಷೇ! ಸಾಂಖ್ಯ, ಯೋಗ, ಪಂಚರಾತ್ರ, ವೇದಗಳು ಮತ್ತು ಪಾಶುಪತ – ಈ ಎಲ್ಲ ಜ್ಞಾನಗಳೂ ಒಂದೇ. ಆದರೆ ನಾನಾ ಅಭಿಪ್ರಾಯಗಳೆಂದು ತಿಳಿ.
12337060a ಸಾಂಖ್ಯಸ್ಯ ವಕ್ತಾ ಕಪಿಲಃ ಪರಮರ್ಷಿಃ ಸ ಉಚ್ಯತೇ।
12337060c ಹಿರಣ್ಯಗರ್ಭೋ ಯೋಗಸ್ಯ ವೇತ್ತಾ ನಾನ್ಯಃ ಪುರಾತನಃ।।
ಸಾಂಖ್ಯದ ವಕ್ತಾರನು ಕಪಿಲ. ಅವನು ಪರಮ ಋಷಿಯೆಂದು ಹೇಳುತ್ತಾರೆ. ಪುರಾತನ ಹಿರಣ್ಯಗರ್ಭನೇ ಯೋಗದ ವೇತಾರನು. ಬೇರೆ ಯಾರೂ ಅಲ್ಲ.
12337061a ಅಪಾಂತರತಮಾಶ್ಚೈವ ವೇದಾಚಾರ್ಯಃ ಸ ಉಚ್ಯತೇ।
12337061c ಪ್ರಾಚೀನಗರ್ಭಂ ತಮೃಷಿಂ ಪ್ರವದಂತೀಹ ಕೇ ಚನ।।
ಅಪಾಂತರತಮನನ್ನು ವೇದಾಚಾರ್ಯನೆಂದು ಹೇಳುತ್ತಾರೆ. ಕೆಲವರು ಆ ಋಷಿಯನ್ನು ಪ್ರಾಚೀನಗರ್ಭ ಎಂದೂ ಕರೆಯುತ್ತಾರೆ.
12337062a ಉಮಾಪತಿರ್ಭೂತಪತಿಃ ಶ್ರೀಕಂಠೋ ಬ್ರಹ್ಮಣಃ ಸುತಃ।
12337062c ಉಕ್ತವಾನಿದಮವ್ಯಗ್ರೋ ಜ್ಞಾನಂ ಪಾಶುಪತಂ ಶಿವಃ।।
ಬ್ರಹ್ಮನ ಪುತ್ರ ಉಮಾಪತಿ ಭೂತಪತಿ ಶ್ರೀಕಂಠ ಅವ್ಯಗ್ರ ಶಿವನು ಪಾಶುಪತ ಜ್ಞಾನವನ್ನು ನೀಡಿದನು.
12337063a ಪಂಚರಾತ್ರಸ್ಯ ಕೃತ್ಸ್ನಸ್ಯ ವೇತ್ತಾ ತು ಭಗವಾನ್ ಸ್ವಯಮ್।
12337063c ಸರ್ವೇಷು ಚ ನೃಪಶ್ರೇಷ್ಠ ಜ್ಞಾನೇಷ್ವೇತೇಷು ದೃಶ್ಯತೇ।।
ನೃಪಶ್ರೇಷ್ಠ! ಪಂಚರಾತ್ರವು ಸಂಪೂರ್ಣವಾಗಿ ಸ್ವಯಂ ಭಗವಾನನಿಗೆ ತಿಳಿದಿದೆ. ಈ ಸರ್ವ ಜ್ಞಾನಗಳೂ ಅವನಲ್ಲಿಯೇ ಇರುವುದು.
12337064a ಯಥಾಗಮಂ ಯಥಾಜ್ಞಾನಂ ನಿಷ್ಠಾ ನಾರಾಯಣಃ ಪ್ರಭುಃ।
12337064c ನ ಚೈನಮೇವಂ ಜಾನಂತಿ ತಮೋಭೂತಾ ವಿಶಾಂ ಪತೇ।।
ವಿಶಾಂಪತೇ! ಎಲ್ಲ ಅನುಭವಗಳೂ ಜ್ಞಾನಗಳೂ ಪ್ರಭು ನಾರಾಯಣನಲ್ಲಿಯೇ ನೆಲೆಸಿವೆ. ಅಜ್ಞಾನಾಂಧಕಾರದಲ್ಲಿರುವವರಿಗೆ ಇದು ತಿಳಿದಿರುವುದಿಲ್ಲ.
12337065a ತಮೇವ ಶಾಸ್ತ್ರಕರ್ತಾರಂ ಪ್ರವದಂತಿ ಮನೀಷಿಣಃ।
12337065c ನಿಷ್ಠಾಂ ನಾರಾಯಣಮೃಷಿಂ ನಾನ್ಯೋಽಸ್ತೀತಿ ಚ ವಾದಿನಃ5।।
ಜ್ಞಾನಿಗಳು ನಿಷ್ಠ ನಾರಾಯಣ ಋಷಿಯನ್ನೇ ಶಾಸ್ತ್ರಕರ್ತಾರನೆಂದು ಹೇಳುತ್ತಾರೆ. ಅನ್ಯರು ಯಾರೂ ಇಲ್ಲ ಎಂದು ಹೇಳುತ್ತಾರೆ.
12337066a ನಿಃಸಂಶಯೇಷು ಸರ್ವೇಷು ನಿತ್ಯಂ ವಸತಿ ವೈ ಹರಿಃ।
12337066c ಸಸಂಶಯಾನ್ ಹೇತುಬಲಾನ್ನಾಧ್ಯಾವಸತಿ ಮಾಧವಃ।।
ಸರ್ವ ವಿಷಯಗಳಲ್ಲಿ ನಿಃಸಂಶಯನಾಗಿರುವವನಲ್ಲಿ ನಿತ್ಯವೂ ಹರಿಯು ವಾಸಿಸುತ್ತಾನೆ. ಆದರೆ ಕುತರ್ಕಗಳಿಂದ ಸಂಶಯಾನ್ವಿತರಾದವರ ಹೃದಯದಲ್ಲಿ ಮಾಧವನು ಎಂದೂ ವಾಸಿಸುವುದಿಲ್ಲ.
12337067a ಪಂಚರಾತ್ರವಿದೋ ಯೇ ತು ಯಥಾಕ್ರಮಪರಾ ನೃಪ।
12337067c ಏಕಾಂತಭಾವೋಪಗತಾಸ್ತೇ ಹರಿಂ ಪ್ರವಿಶಂತಿ ವೈ।।
ನೃಪ! ಪಂಚರಾತ್ರವನ್ನು ತಿಳಿದುಕೊಂಡ ಯಾರು ಯಥಾಕ್ರಮವಾಗಿ ಏಕಾಂತಭಾವದಿಂದ ಹರಿಯನ್ನು ಆರಾಧಿಸುವರೋ ಅವರು ಹರಿಯನ್ನೇ ಪ್ರವೇಶಿಸುತ್ತಾರೆ.
12337068a ಸಾಂಖ್ಯಂ ಚ ಯೋಗಂ ಚ ಸನಾತನೇ ದ್ವೇ ವೇದಾಶ್ಚ ಸರ್ವೇ ನಿಖಿಲೇನ ರಾಜನ್।
12337068c ಸರ್ವೈಃ ಸಮಸ್ತೈರ್ ಋಷಿಭಿರ್ನಿರುಕ್ತೋ ನಾರಾಯಣೋ ವಿಶ್ವಮಿದಂ ಪುರಾಣಮ್।।
ರಾಜನ್! ಸಾಂಖ್ಯ, ಯೋಗ, ಪಂಚರಾತ್ರ ಮತ್ತು ಪಾಶುಪತಗಳೆಂಬ ಎರಡು ಸನಾತನ ಶಾಸ್ತ್ರಗಳು ಮತ್ತು ವೇದಗಳು ಇವೆಲ್ಲವೂ ಹಾಗೆಯೇ ಇಡೀ ವಿಶ್ವವೂ ಸಂಪೂರ್ಣವಾಗಿ ನಾರಾಯಣ ಸ್ವರೂಪವೇ ಎಂದು ಸರ್ವ ಋಷಿಗಳೂ ಹೇಳುತ್ತಾರೆ.
12337069a ಶುಭಾಶುಭಂ ಕರ್ಮ ಸಮೀರಿತಂ ಯತ್ ಪ್ರವರ್ತತೇ ಸರ್ವಲೋಕೇಷು ಕಿಂ ಚಿತ್।
12337069c ತಸ್ಮಾದೃಷೇಸ್ತದ್ ಭವತೀತಿ ವಿದ್ಯಾದ್ ದಿವ್ಯಂತರಿಕ್ಷೇ ಭುವಿ ಚಾಪ್ಸು ಚಾಪಿ।।
ದಿವಿ, ಅಂತರಿಕ್ಷ, ಭೂಮಿ ಮತ್ತು ನೀರು - ಈ ಎಲ್ಲ ಲೋಕಗಳಲ್ಲಿ ಯಾವ ಶುಭಾಶುಭಕರ್ಮಗಳು ನಡೆಯುತ್ತವೆಯೋ ಅವೆಲ್ಲವೂ ನಾರಾಯಣ ಋಷಿಯಿಂದಲೇ ನಡೆಯುತ್ತವೆ ಎನ್ನುವುದನ್ನು ತಿಳಿಯಬೇಕು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ದ್ವೈಪಾಯನೋತ್ಪತ್ತೌ ಸಪ್ತತ್ರಿಂಶಾಧಿಕತ್ರಿಶತತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ದ್ವೈಪಾಯನೋತ್ಪತ್ತಿ ಎನ್ನುವ ಮುನ್ನೂರಾಮೂವತ್ತೇಳನೇ ಅಧ್ಯಾಯವು.-
ನಾರಾಯಣ, ಬ್ರಹ್ಮ, ವಸಿಷ್ಠ, ಶಕ್ತಿ, ಪರಾಶರ, ವ್ಯಾಸ- ಈ ಕ್ರಮದಲ್ಲಿ ವ್ಯಾಸನು ನಾರಾಯಣನಿಗೆ ಆರನೆಯವನು (ಭಾರತ ದರ್ಶನ). ↩︎
-
ಇಯಂ ತಪಸ್ವಿನೀ ಸತ್ಯಾ ಧಾರಯಿಷ್ಯತಿ ಮೇದಿನೀ। (ಭಾರತ ದರ್ಶನ). ↩︎
-
ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ಭವಿಷ್ಯತಿ ಮಹಾಸತ್ತ್ವ ಖ್ಯಾತಿಶ್ಚಾಪ್ಯತುಲಾ ತವ। (ಭಾರತ ದರ್ಶನ). ↩︎
-
ಮನ್ವಾದಿಗಣಪೂರ್ವಕಃ (ಭಾರತದರ್ಶನ). ↩︎
-
ವಚೋ ಮಮ (ಭಾರತದರ್ಶನ). ↩︎