ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 336
ಸಾರ
ಸಾತ್ವತಧರ್ಮದ ಉಪದೇಶ ಪರಂಪರೆ (1-50); ಭಗವಂತನಲ್ಲಿ ಅನನ್ಯ ಭಕ್ತಿಯ ಮಹಿಮೆ (51-82).
12336001 ಜನಮೇಜಯ ಉವಾಚ।
12336001a ಅಹೋ ಹ್ಯೇಕಾಂತಿನಃ ಸರ್ವಾನ್ಪ್ರೀಣಾತಿ ಭಗವಾನ್ ಹರಿಃ।
12336001c ವಿಧಿಪ್ರಯುಕ್ತಾಂ ಪೂಜಾಂ ಚ ಗೃಹ್ಣಾತಿ ಭಗವಾನ್ಸ್ವಯಮ್।।
ಜನಮೇಜಯನು ಹೇಳಿದನು: “ಇದೇನಾಶ್ಚರ್ಯ! ಭಗವಾನ್ ಹರಿಯು ಸರ್ವ ಏಕಾಂತಿಗಳ ವಿಷಯದಲ್ಲಿಯೂ ಪ್ರಸನ್ನನಾಗಿರುತ್ತಾನೆ. ಅವರು ವಿಧಿಪ್ರಯುಕ್ತವಾಗಿ ಮಾಡು ಪೂಜೆಗಳನ್ನು ಭಗವಂತನೇ ಸ್ವತಃ ಸ್ವೀಕರಿಸುತ್ತಾನೆ.
12336002a ಯೇ ತು ದಗ್ಧೇಂಧನಾ ಲೋಕೇ ಪುಣ್ಯಪಾಪವಿವರ್ಜಿತಾಃ।
12336002c ತೇಷಾಂ ತ್ವಯಾಭಿನಿರ್ದಿಷ್ಟಾ ಪಾರಂಪರ್ಯಾಗತಾ ಗತಿಃ।।
ಲೋಕದಲ್ಲಿ ಯಾರು ಸುಟ್ಟುಹೋದ ಕಟ್ಟಿಗೆಯಂತೆ ಪುಣ್ಯಪಾಪ ವಿವರ್ಜಿತರಾಗಿದ್ದಾರೋ ಅವರಿಗೆ ಪರಂಪರಾಗತವಾಗಿ ಯಾವ ಗತಿಯು ದೊರಕುವುದೆಂಬುದನ್ನು ನೀನು ನಿರ್ದಿಷ್ಟವಾಗಿ ಹೇಳಿರುವೆ.
12336003a ಚತುರ್ಥ್ಯಾಂ ಚೈವ ತೇ ಗತ್ಯಾಂ ಗಚ್ಚಂತಿ ಪುರುಷೋತ್ತಮಮ್।
12336003c ಏಕಾಂತಿನಸ್ತು ಪುರುಷಾ ಗಚ್ಚಂತಿ ಪರಮಂ ಪದಮ್।।
ನಾಲ್ಕು ಗತಿಗಳಲ್ಲಿ ಹೋಗುವವರೂ ನಾಲ್ಕನೆಯ ಗತಿಯಲ್ಲಿ ಪುರುಷೋತ್ತಮನನ್ನು ಸೇರುತ್ತಾರೆ1. ಏಕಾಂತಿನ ಪುರುಷರು ನೇರವಾಗಿ ಪರಮ ಪದವನ್ನು ಹೊಂದುತ್ತಾರೆ.
12336004a ನೂನಮೇಕಾಂತಧರ್ಮೋಽಯಂ ಶ್ರೇಷ್ಠೋ ನಾರಾಯಣಪ್ರಿಯಃ।
12336004c ಅಗತ್ವಾ ಗತಯಸ್ತಿಸ್ರೋ ಯದ್ಗಚ್ಚಂತ್ಯವ್ಯಯಂ ಹರಿಮ್।।
ನಿಶ್ಚಯವಾಗಿಯೂ ಈ ಏಕಾಂತ ಧರ್ಮವು ಶ್ರೇಷ್ಠವಾದುದು. ನಾರಾಯಣನಿಗೆ ಪ್ರಿಯವಾದುದು. ಈ ಧರ್ಮವನ್ನಾಶ್ರಯಿಸಿದವರು ಅನಿರುದ್ಧ-ಪ್ರದ್ಯುಮ್ನ-ಸಂಕರ್ಷಣರ ಗತಿಯನ್ನು ಹೊಂದದೆಯೇ ನೇರವಾಗಿ ಅವ್ಯಯ ಹರಿಯನ್ನು ಹೊಂದುತ್ತಾರೆ.
12336005a ಸಹೋಪನಿಷದಾನ್ವೇದಾನ್ಯೇ ವಿಪ್ರಾಃ ಸಮ್ಯಗಾಸ್ಥಿತಾಃ।
12336005c ಪಠಂತಿ ವಿಧಿಮಾಸ್ಥಾಯ ಯೇ ಚಾಪಿ ಯತಿಧರ್ಮಿಣಃ।।
12336006a ತೇಭ್ಯೋ ವಿಶಿಷ್ಟಾಂ ಜಾನಾಮಿ ಗತಿಮೇಕಾಂತಿನಾಂ ನೃಣಾಮ್।
ಉಪನಿಷತ್ತುಗಳಿಂದ ಕೂಡಿರುವ ವೇದಗಳನ್ನೇ ಪರಮಾಶ್ರಯವೆಂದು ಭಾವಿಸಿ ವಿಧಿಪೂರ್ವಕವಾಗಿ ಅಧ್ಯಯನ ಮಾಡುವ ಬ್ರಾಹ್ಮಣರಿಗೆ ಮತ್ತು ಯತಿಧರ್ಮವನ್ನು ಆಶ್ರಯಿಸಿರುವವರಿಗೆ ಪ್ರಾಪ್ತವಾಗುವ ಸದ್ಗತಿಗಿಂತಲೂ ವಿಶಿಷ್ಟವಾದ ಗನಿಯು ಏಕಾಂತಿನ ಮನುಷ್ಯರಿಗೆ ದೊರೆಯುತ್ತದೆ ಎಂದು ತಿಳಿಯುತ್ತೇನೆ.
12336006c ಕೇನೈಷ ಧರ್ಮಃ ಕಥಿತೋ ದೇವೇನ ಋಷಿಣಾಪಿ ವಾ।।
12336007a ಏಕಾಂತಿನಾಂ ಚ ಕಾ ಚರ್ಯಾ ಕದಾ ಚೋತ್ಪಾದಿತಾ ವಿಭೋ।
12336007c ಏತನ್ಮೇ ಸಂಶಯಂ ಚಿಂಧಿ ಪರಂ ಕೌತೂಹಲಂ ಹಿ ಮೇ।।
ವಿಭೋ! ಈ ಧರ್ಮವನ್ನು ಯಾವ ದೇವತೆ ಅಥವಾ ಋಷಿಯು ಮೊದಲು ಉಪದೇಶಿಸಿದರು? ಏಕಾಂತಿನರ ಜೀವನವಿಧಾನವು ಹೇಗಿರುತ್ತದೆ? ಈ ಅನನ್ಯ ಭಕ್ತಿ ಧರ್ಮವು ಎಂದಿನಿಂದ ಪ್ರಚಲಿತವಾಯಿತು? ನನ್ನ ಈ ಸಂಶಯವನ್ನು ಹೋಗಲಾಡಿಸು. ಇದರ ಕುರಿತು ನನಗೆ ಪರಮ ಕುತೂಹಲವುಂಟಾಗಿದೆ.”
12336008 ವೈಶಂಪಾಯನ ಉವಾಚ।
12336008a ಸಮುಪೋಢೇಷ್ವನೀಕೇಷು ಕುರುಪಾಂಡವಯೋರ್ಮೃಧೇ।
12336008c ಅರ್ಜುನೇ ವಿಮನಸ್ಕೇ ಚ ಗೀತಾ ಭಗವತಾ ಸ್ವಯಮ್।।
ವೈಶಂಪಾಯನನು ಹೇಳಿದನು: “ಕುರು-ಪಾಂಡವರ ಯುದ್ಧದಲ್ಲಿ ಎರಡು ಸೇನೆಗಳೂ ಯುದ್ಧಕ್ಕೆ ಸಜ್ಜಾಗಿ ಎದುರು-ಬದುರಾಗಿ ನಿಂತಿದ್ದಾಗ ಅರ್ಜುನನು ವಿಮನಸ್ಕನಾದನು. ಆಗ ಸ್ವಯಂ ಭಗವಂತನು ಇದನ್ನು ಗೀತೆಯ ರೂಪದಲ್ಲಿ ಹೇಳಿದನು.
12336009a ಆಗತಿಶ್ಚ ಗತಿಶ್ಚೈವ ಪೂರ್ವಂ ತೇ ಕಥಿತಾ ಮಯಾ।
12336009c ಗಹನೋ ಹ್ಯೇಷ ಧರ್ಮೋ ವೈ ದುರ್ವಿಜ್ಞೇಯೋಽಕೃತಾತ್ಮಭಿಃ।।
ಇದಕ್ಕೂ ಮೊದಲು ನಾನು ನಿನಗೆ ಅಗತಿ (ನಿವೃತ್ತಿ) ಮತ್ತು ಗತಿ (ಪ್ರವೃತ್ತಿ) ಧರ್ಮಗಳ ಕುರಿತು ಹೇಳಿದ್ದೇನೆ. ಈ ಏಕಾಂತಿನ ಧರ್ಮವು ಅತಿಗಹನವಾದುದು ಮತ್ತು ಜಿತೇಂದ್ರಿಯರಲ್ಲವರಿಗೆ ಇದನ್ನು ತಿಳಿದುಕೊಳ್ಳಲು ಅಸಾಧ್ಯವು.
12336010a ಸಂಮಿತಃ ಸಾಮವೇದೇನ ಪುರೈವಾದಿಯುಗೇ ಕೃತಃ।
12336010c ಧಾರ್ಯತೇ ಸ್ವಯಮೀಶೇನ ರಾಜನ್ನಾರಾಯಣೇನ ಹ।।
ಈ ಏಕಾಂತಿನ ಧರ್ಮವು ಸಾಮವೇದಕ್ಕೆ ಸಮನಾಗಿದ್ದು ಹಿಂದೆ ಆದಿಯುಗ ಕೃತಯುಗದಲ್ಲಿಯೇ ಪ್ರಾರಂಭವಾಯಿತು. ರಾಜನ್! ಇದನ್ನು ಆಗ ಸ್ವಯಂ ಈಶ ನಾರಾಯಣನೇ ಧರಿಸಿದ್ದನು.
12336011a ಏತಮರ್ಥಂ ಮಹಾರಾಜ ಪೃಷ್ಟಃ ಪಾರ್ಥೇನ ನಾರದಃ।
12336011c ಋಷಿಮಧ್ಯೇ ಮಹಾಭಾಗಃ ಶೃಣ್ವತೋಃ ಕೃಷ್ಣಭೀಷ್ಮಯೋಃ।।
ಮಹಾರಾಜ! ಇದೇ ವಿಷಯದ ಕುರಿತು ಋಷಿಗಳ ಮಧ್ಯದಲ್ಲಿ ಕೃಷ್ಣ ಮತ್ತು ಭೀಷ್ಮರ ಸಮ್ಮುಖದಲ್ಲಿಯೇ ಪಾರ್ಥ ಯುಧಿಷ್ಠಿರನು ನಾರದಲ್ಲಿ ಕೇಳಿದ್ದನು.
12336012a ಗುರುಣಾ ಚ ಮಮಾಪ್ಯೇಷ ಕಥಿತೋ ನೃಪಸತ್ತಮ।
12336012c ಯಥಾ ತು ಕಥಿತಸ್ತತ್ರ ನಾರದೇನ ತಥಾ ಶೃಣು।।
ನೃಪಸತ್ತಮ! ಆಗ ನಾರದನು ಹೇಳಿದುದನ್ನು ನನ್ನ ಗುರುವು ನನಗೂ ಹೇಳಿದ್ದರು. ಅದನ್ನು ಕೇಳು.
12336013a ಯದಾಸೀನ್ಮಾನಸಂ ಜನ್ಮ ನಾರಾಯಣಮುಖೋದ್ಗತಮ್।
12336013c ಬ್ರಹ್ಮಣಃ ಪೃಥಿವೀಪಾಲ ತದಾ ನಾರಾಯಣಃ ಸ್ವಯಮ್।
12336013e ತೇನ ಧರ್ಮೇಣ ಕೃತವಾನ್ದೈವಂ ಪಿತ್ರ್ಯಂ ಚ ಭಾರತ।।
ಪೃಥಿವೀಪಾಲ! ಯಾವಾಗ ನಾರಾಯಣನ ಮುಖದಿಂದ ಬ್ರಹ್ಮನ ಮಾನಸ ಜನ್ಮವಾಯಿತೋ ಆಗಲೇ ಸ್ವಯಂ ನಾರಾಯಣನು ಬ್ರಹ್ಮನಿಗೆ ಇದನ್ನು ಉಪದೇಶಿಸಿದನು. ಭಾರತ! ಅದೇ ಧರ್ಮದಿಂದಲೇ ನಾರಾಯಣನು ದೇವ-ಪಿತೃಕಾರ್ಯಗಳನ್ನು ನಡೆಸುತ್ತಿದ್ದನು.
12336014a ಫೇನಪಾ ಋಷಯಶ್ಚೈವ ತಂ ಧರ್ಮಂ ಪ್ರತಿಪೇದಿರೇ।
12336014c ವೈಖಾನಸಾಃ ಫೇನಪೇಭ್ಯೋ ಧರ್ಮಮೇತಂ ಪ್ರಪೇದಿರೇ।
12336014e ವೈಖಾನಸೇಭ್ಯಃ ಸೋಮಸ್ತು ತತಃ ಸೋಽಂತರ್ದಧೇ ಪುನಃ।।
ಅನಂತರ ಫೇನಪ ಋಷಿಗಳು ಅವನಿಂದ ಆ ಧರ್ಮವನ್ನು ಪಡೆದುಕೊಂಡರು. ಫೇನಪರಿಂದ ವೈಖಾನಸರು ಆ ಧರ್ಮವನ್ನು ಪಡೆದುಕೊಂಡರು. ವೈಖಾನಸರಿಂದ ಸೋಮನು ಆ ಧರ್ಮವನ್ನು ಪಡೆದುಕೊಂಡನು. ಅನಂತರ ಅದು ಪುನಃ ಲುಪ್ತವಾಗಿ ಹೋಯಿತು.
12336015a ಯದಾಸೀಚ್ಚಾಕ್ಷುಷಂ ಜನ್ಮ ದ್ವಿತೀಯಂ ಬ್ರಹ್ಮಣೋ ನೃಪ।
12336015c ತದಾ ಪಿತಾಮಹಾತ್ಸೋಮಾದೇತಂ ಧರ್ಮಮಜಾನತ।
12336015e ನಾರಾಯಣಾತ್ಮಕಂ ರಾಜನ್ರುದ್ರಾಯ ಪ್ರದದೌ ಚ ಸಃ।।
ನೃಪ! ನಾರಾಯಣನ ಕಣ್ಣುಗಳಿಂದ ಬ್ರಹ್ಮನ ಎರಡನೇ ಜನ್ಮವಾದಾಗ ಪಿತಾಮಹನು ಈ ಧರ್ಮವನ್ನು ಸೋಮನಿಂದ ತಿಳಿದುಕೊಂಡನು. ರಾಜನ್! ಅನಂತರ ಅವನು ಈ ನಾರಾಯಣಾತ್ಮಕ ಧರ್ಮವನ್ನು ರುದ್ರನಿಗೆ ಉಪದೇಶಿಸಿದನು.
12336016a ತತೋ ಯೋಗಸ್ಥಿತೋ ರುದ್ರಃ ಪುರಾ ಕೃತಯುಗೇ ನೃಪ।
12336016c ವಾಲಖಿಲ್ಯಾನೃಷೀನ್ಸರ್ವಾನ್ಧರ್ಮಮೇತಮಪಾಠಯತ್।
12336016e ಅಂತರ್ದಧೇ ತತೋ ಭೂಯಸ್ತಸ್ಯ ದೇವಸ್ಯ ಮಾಯಯಾ।।
ನೃಪ! ಹಿಂದೆ ಕೃತಯುಗದಲ್ಲಿ ಯೋಗಸ್ಥಿತ ರುದ್ರನು ಈ ಧರ್ಮವನ್ನು ವಾಲಖಿಲ್ಯಋಷಿಗಳೆಲ್ಲರಿಗೂ ಉಪದೇಶಿಸಿದನು. ಆಗ ಆ ದೇವನ ಮಾಯೆಯಿಂದ ಪುನಃ ಅದು ಅಂತರ್ಧಾನವಾಯಿತು.
12336017a ತೃತೀಯಂ ಬ್ರಹ್ಮಣೋ ಜನ್ಮ ಯದಾಸೀದ್ವಾಚಿಕಂ ಮಹತ್।
12336017c ತತ್ರೈಷ ಧರ್ಮಃ ಸಂಭೂತಃ ಸ್ವಯಂ ನಾರಾಯಣಾನ್ನೃಪ।।
ನೃಪ! ನಾರಾಯಣನ ವಾಣಿಯಿಂದ ಬ್ರಹ್ಮನ ಮಹತ್ತರವಾದ ಮೂರನೆಯ ಜನ್ಮವಾದಾಗ ಈ ಧರ್ಮವು ಸ್ವಯಂ ನಾರಾಯಣನಿಂದಲೇ ಪ್ರಕಟವಾಯಿತು.
12336018a ಸುಪರ್ಣೋ ನಾಮ ತಮೃಷಿಃ ಪ್ರಾಪ್ತವಾನ್ಪುರುಷೋತ್ತಮಾತ್।
12336018c ತಪಸಾ ವೈ ಸುತಪ್ತೇನ ದಮೇನ ನಿಯಮೇನ ಚ।।
ಸುಪರ್ಣನೆಂಬ ಋಷಿಯು ಇದನ್ನು ದಮ-ನಿಯಮಗಳಿಂದ ಉತ್ತಮ ತಪಸ್ಸನ್ನು ತಪಿಸಿ ಪುರುಷೋತ್ತಮನಿಂದ ಇದನ್ನು ಪಡೆದುಕೊಂಡನು.
12336019a ತ್ರಿಃ ಪರಿಕ್ರಾಂತವಾನೇತತ್ಸುಪರ್ಣೋ ಧರ್ಮಮುತ್ತಮಮ್।
12336019c ಯಸ್ಮಾತ್ತಸ್ಮಾದ್ವ್ರತಂ ಹ್ಯೇತತ್ತ್ರಿಸೌಪರ್ಣಮಿಹೋಚ್ಯತೇ।।
ಸುಪರ್ಣನು ಆ ಉತ್ತಮ ಧರ್ಮವನ್ನು ಪ್ರತಿದಿನವೂ ಮೂರು ಬಾರಿ ಪಾರಾಯಣಮಾಡುತ್ತಿದ್ದನು. ಇದರಿಂದ ಆ ವ್ರತವನ್ನು ತ್ರಿಸೌಪರ್ಣವೆಂದೂ ಕರೆಯುತ್ತಾರೆ.
12336020a ಋಗ್ವೇದಪಾಠಪಠಿತಂ ವ್ರತಮೇತದ್ಧಿ ದುಶ್ಚರಮ್।
12336020c ಸುಪರ್ಣಾಚ್ಚಾಪ್ಯಧಿಗತೋ ಧರ್ಮ ಏಷ ಸನಾತನಃ।।
12336021a ವಾಯುನಾ ದ್ವಿಪದಾಂ ಶ್ರೇಷ್ಠ ಪ್ರಥಿತೋ ಜಗದಾಯುಷಾ।
ಈ ದುಶ್ಚರ ವ್ರತವು ಋಗ್ವೇದಪಾಠದಲ್ಲಿ ಸ್ಪಷ್ಟವಾಗಿ ಹೇಳಲ್ಪಟ್ಟಿದೆ. ದ್ವಿಪದರಲ್ಲಿ ಶ್ರೇಷ್ಠ! ಜಗತ್ತಿಗೆ ಪ್ರಾಣಸ್ವರೂಪನಾದ ವಾಯುವು ಸುಪರ್ಣನಿಂದ ಈ ಸನಾತನ ಧರ್ಮವನ್ನು ಪಡೆದುಕೊಂಡನು.
12336021c ವಾಯೋಃ ಸಕಾಶಾತ್ ಪ್ರಾಪ್ತಶ್ಚ ಋಷಿಭಿರ್ವಿಘಸಾಶಿಭಿಃ।।
12336022a ತೇಭ್ಯೋ ಮಹೋದಧಿಶ್ಚೈನಂ ಪ್ರಾಪ್ತವಾನ್ಧರ್ಮಮುತ್ತಮಮ್।
12336022c ತತಃ ಸೋಽಂತರ್ದಧೇ ಭೂಯೋ ನಾರಾಯಣಸಮಾಹಿತಃ।।
ವಿಘಸವನ್ನು ತಿಂದು ಜೀವಿಸುತ್ತಿದ್ದ ಋಷಿಗಳು ಈ ಏಕಾಂತಧರ್ಮವನ್ನು ವಾಯುವಿನಿಂದ ಪಡೆದುಕೊಂಡರು. ಅವರಿಂದ ಈ ಉತ್ತಮ ಧರ್ಮವನ್ನು ಮಹೋದಧಿಯು ಪಡೆದುಕೊಂಡನು. ಅನಂತರ ಪುನಃ ಈ ಧರ್ಮವು ಲುಪ್ತವಾಗಿ ನಾರಾಯಣನಲ್ಲಿ ಸೇರಿಹೋಯಿತು.
12336023a ಯದಾ ಭೂಯಃ ಶ್ರವಣಜಾ ಸೃಷ್ಟಿರಾಸೀನ್ಮಹಾತ್ಮನಃ।
12336023c ಬ್ರಹ್ಮಣಃ ಪುರುಷವ್ಯಾಘ್ರ ತತ್ರ ಕೀರ್ತಯತಃ ಶೃಣು।।
ಯಾವಾಗ ಬ್ರಹ್ಮನ ನಾಲ್ಕನೆಯ ಜನ್ಮವು ಶ್ರೀಮನ್ನಾರಾಯಣನ ಕಿವಿಯಿಂದಾಯಿತೋ ಆಗ ಈ ಧರ್ಮವು ಪುನಃ ಪ್ರಾದುರ್ಭವಿಸಿತು. ಪುರುಷವ್ಯಾಘ್ರ! ಅದರ ಕುರಿತು ಹೇಳುತ್ತೇನೆ. ಕೇಳು.
12336024a ಜಗತ್ ಸ್ರಷ್ಟುಮನಾ ದೇವೋ ಹರಿರ್ನಾರಾಯಣಃ ಸ್ವಯಮ್।
12336024c ಚಿಂತಯಾಮಾಸ ಪುರುಷಂ ಜಗತ್ಸರ್ಗಕರಂ ಪ್ರಭುಃ।।
ಜಗತ್ತನ್ನು ಸೃಷ್ಟಿಸಲು ಯೋಚಿಸಿದ ಸ್ವಯಂ ದೇವ ಹರಿ ನಾರಾಯಣ ಪ್ರಭುವು ಜಗತ್ತನ್ನು ಸೃಷ್ಟಿಸಬಲ್ಲ ಪುರುಷನನ್ನು ಸ್ಮರಿಸಿದನು.
12336025a ಅಥ ಚಿಂತಯತಸ್ತಸ್ಯ ಕರ್ಣಾಭ್ಯಾಂ ಪುರುಷಃ ಸೃತಃ।
12336025c ಪ್ರಜಾಸರ್ಗಕರೋ ಬ್ರಹ್ಮಾ ತಮುವಾಚ ಜಗತ್ಪತಿಃ।।
ಹಾಗೆ ಯೋಚಿಸುತ್ತಿರುವಾಗ ಅವನ ಕಿವಿಗಳಿಂದ ಹೊರಬಂದ ಪುರುಷ ಪ್ರಜೆಗಳ ಸೃಷ್ಟಿಕರ್ತ ಬ್ರಹ್ಮನಿಗೆ ಜಗತ್ಪತಿಯು ಹೇಳಿದನು:
12336026a ಸೃಜ ಪ್ರಜಾಃ ಪುತ್ರ ಸರ್ವಾ ಮುಖತಃ ಪಾದತಸ್ತಥಾ।
12336026c ಶ್ರೇಯಸ್ತವ ವಿಧಾಸ್ಯಾಮಿ ಬಲಂ ತೇಜಶ್ಚ ಸುವ್ರತ।।
“ಪುತ್ರ! ಸುವ್ರತ! ಮುಖದಿಂದಲೂ ಪಾದಗಳಿಂದಲೂ ಎಲ್ಲ ಪ್ರಜೆಗಳನ್ನೂ ಸೃಷ್ಟಿಸು. ನಾನು ನಿನಗೆ ಶ್ರೇಯಸ್ಸನ್ನುಂಟುಮಾಡುತ್ತೇನೆ. ನಿನ್ನ ಬಲ-ತೇಜಸ್ಸುಗಳನ್ನು ವೃದ್ಧಿಗೊಳಿಸುತ್ತೇನೆ.
12336027a ಧರ್ಮಂ ಚ ಮತ್ತೋ ಗೃಹ್ಣೀಷ್ವ ಸಾತ್ವತಂ ನಾಮ ನಾಮತಃ।
12336027c ತೇನ ಸರ್ವಂ ಕೃತಯುಗಂ ಸ್ಥಾಪಯಸ್ವ ಯಥಾವಿಧಿ2।।
ಸಾತ್ವತ ಎಂಬ ಹೆಸರಿನ ಈ ಧರ್ಮವನ್ನೂ ನನ್ನಿಂದ ಸ್ವೀಕರಿಸು. ಇದರಿಂದ ಯಥಾವಿಧಿಯಾಗಿ ಕೃತಯುಗದ ಎಲ್ಲವನ್ನೂ ಸ್ಥಾಪಿಸು.”
12336028a ತತೋ ಬ್ರಹ್ಮಾ ನಮಶ್ಚಕ್ರೇ ದೇವಾಯ ಹರಿಮೇಧಸೇ।
12336028c ಧರ್ಮಂ ಚಾಗ್ರ್ಯಂ ಸ ಜಗ್ರಾಹ ಸರಹಸ್ಯಂ ಸಸಂಗ್ರಹಮ್।
12336028e ಆರಣ್ಯಕೇನ ಸಹಿತಂ ನಾರಾಯಣಮುಖೋದ್ಗತಮ್।।
ಅನಂತರ ಬ್ರಹ್ಮನು ಹರಿಮೇಧಸ ದೇವನಿಗೆ ನಮಸ್ಕರಿಸಿ ನಾರಾಯಣನ ಮುಖದಿಂದ ಹೊರಟ ಆರಣ್ಯಕ ಸಹಿತವಾದ ಆ ಉತ್ತಮ ಧರ್ಮವನ್ನು ರಹಸ್ಯಗಳು ಮತ್ತು ಸಂಗ್ರಹಗಳೊಂದಿಗೆ ಪಡೆದುಕೊಂಡನು.
12336029a ಉಪದಿಶ್ಯ ತತೋ ಧರ್ಮಂ ಬ್ರಹ್ಮಣೇಽಮಿತತೇಜಸೇ।।
12336029c ತಂ ಕಾರ್ತಯುಗಧರ್ಮಾಣಂ ನಿರಾಶೀಃಕರ್ಮಸಂಜ್ಞಿತಮ್।
12336029e ಜಗಾಮ ತಮಸಃ ಪಾರಂ ಯತ್ರಾವ್ಯಕ್ತಂ ವ್ಯವಸ್ಥಿತಮ್।।
ಕೃತಯುಗಧರ್ಮವಾದ ನಿಷ್ಕಾಮಕರ್ಮಯೋಗವೆಂದು ಕರೆಯಲ್ಪಡುವ ಆ ಧರ್ಮವನ್ನು ಅಮಿತತೇಜಸ್ವೀ ಬ್ರಹ್ಮನಿಗೆ ಉಪದೇಶಿಸಿ ನಾರಾಯಣನು ಅಜ್ಞಾನಾಂಧಕಾರದ ಆಚೆ ಅವ್ಯಕ್ತವಿರುವಲ್ಲಿಗೆ ಹೊರಟು ಹೋದನು.
12336030a ತತೋಽಥ ವರದೋ ದೇವೋ ಬ್ರಹ್ಮಲೋಕಪಿತಾಮಹಃ।
12336030c ಅಸೃಜತ್ಸ ತದಾ ಲೋಕಾನ್ಕೃತ್ಸ್ನಾನ್ ಸ್ಥಾವರಜಂಗಮಾನ್।।
ಅನಂತರ ವರದ ಲೋಕಪಿತಾಮಹ ಬ್ರಹ್ಮದೇವನು ಸ್ಥಾವರಜಂಗಮಗಳಿಂದ ಕೂಡಿದ ಸಂಪೂರ್ಣ ಲೋಕಗಳನ್ನು ಸೃಷ್ಟಿಸಿದನು.
12336031a ತತಃ ಪ್ರಾವರ್ತತ ತದಾ ಆದೌ ಕೃತಯುಗಂ ಶುಭಮ್।
12336031c ತತೋ ಹಿ ಸಾತ್ವತೋ ಧರ್ಮೋ ವ್ಯಾಪ್ಯ ಲೋಕಾನವಸ್ಥಿತಃ।।
ಆದಿಯಲ್ಲಿ ಶುಭ ಕೃತಯುಗವು ಪ್ರಾರಂಭವಾಗಲು ಸಾತ್ವತ ಧರ್ಮವು ಲೋಕಗಳನ್ನು ವ್ಯಾಪಿಸಿ ಸ್ಥಾಪಿತಗೊಂಡಿತು.
12336032a ತೇನೈವಾದ್ಯೇನ ಧರ್ಮೇಣ ಬ್ರಹ್ಮಾ ಲೋಕವಿಸರ್ಗಕೃತ್।
12336032c ಪೂಜಯಾಮಾಸ ದೇವೇಶಂ ಹರಿಂ ನಾರಾಯಣಂ ಪ್ರಭುಮ್।।
ಆ ಧರ್ಮದಿಂದಲೇ ಲೋಕಸೃಷ್ಟಿಕರ್ತ ಬ್ರಹ್ಮನು ದೇವೇಶ ಹರಿ ನಾರಾಯಣ ಪ್ರಭುವನ್ನು ಮೊಟ್ಟಮೊದಲು ಪೂಜಿಸಿದನು.
12336033a ಧರ್ಮಪ್ರತಿಷ್ಠಾಹೇತೋಶ್ಚ ಮನುಂ ಸ್ವಾರೋಚಿಷಂ ತತಃ।
12336033c ಅಧ್ಯಾಪಯಾಮಾಸ ತದಾ ಲೋಕಾನಾಂ ಹಿತಕಾಮ್ಯಯಾ।।
ಧರ್ಮಪ್ರತಿಶಷ್ಠಾಪನೆಯ ಕಾರಣದಿಂದಲೂ ಮತ್ತು ಲೋಕಗಳ ಹಿತವನ್ನೂ ಬಯಸಿ ಬ್ರಹ್ಮನು ಅದನ್ನು ಸ್ವಾರೋಚಿಷ ಮನುವಿಗೆ ಉಪದೇಶಿಸಿದನು.
12336034a ತತಃ ಸ್ವಾರೋಚಿಷಃ ಪುತ್ರಂ ಸ್ವಯಂ ಶಂಖಪದಂ ನೃಪ।
12336034c ಅಧ್ಯಾಪಯತ್ ಪುರಾವ್ಯಗ್ರಃ ಸರ್ವಲೋಕಪತಿರ್ವಿಭುಃ।।
ನೃಪ! ಅನಂತರ ಸ್ವಯಂ ಅವ್ಯಗ್ರ ಸರ್ವಲೋಕಪತಿ ವಿಭು ಸ್ವಾರೋಚಿಷನು ಅದನ್ನು ಹಿಂದೆ ತನ್ನ ಪುತ್ರ ಶಂಖಪದನಿಗೆ ಉಪದೇಶಿಸಿದನು.
12336035a ತತಃ ಶಂಖಪದಶ್ಚಾಪಿ ಪುತ್ರಮಾತ್ಮಜಮೌರಸಮ್।
12336035c ದಿಶಾಪಾಲಂ ಸುಧರ್ಮಾಣಮಧ್ಯಾಪಯತ ಭಾರತ।
12336035e ತತಃ ಸೋಽಂತರ್ದಧೇ ಭೂಯಃ ಪ್ರಾಪ್ತೇ ತ್ರೇತಾಯುಗೇ ಪುನಃ।।
ಭಾರತ! ಅನಂತರ ಶಂಖಪದನು ತನ್ನ ಔರಸ ಪುತ್ರ ದಿಶಾಪಾಲ ಸುಧರ್ಮನಿಗೆ ಅಧ್ಯಯನ ಮಾಡಿಸಿದನು. ತ್ರೇತಾಯುಗವು ಪ್ರಾಪ್ತವಾಗಲು ಅದು ಪುನಃ ಅಂತರ್ಗತವಾಯಿತು.
12336036a ನಾಸಿಕ್ಯಜನ್ಮನಿ ಪುರಾ ಬ್ರಹ್ಮಣಃ ಪಾರ್ಥಿವೋತ್ತಮ।
12336036c ಧರ್ಮಮೇತಂ ಸ್ವಯಂ ದೇವೋ ಹರಿರ್ನಾರಾಯಣಃ ಪ್ರಭುಃ।
12336036e ಉಜ್ಜಗಾರಾರವಿಂದಾಕ್ಷೋ ಬ್ರಹ್ಮಣಃ ಪಶ್ಯತಸ್ತದಾ।।
ಪಾರ್ಥಿವೋತ್ತಮ! ಹಿಂದೆ ನಾರಾಯಣನ ನಾಸಿಕದಿಂದ ಬ್ರಹ್ಮನ ಜನ್ಮವಾದಾಗ ಈ ಧರ್ಮವನ್ನು ಸ್ವಯಂ ದೇವ ಹರಿ ನಾರಾಯಣ ಪ್ರಭು ಅರವಿಂದಾಕ್ಷನು ಬ್ರಹ್ಮನ ಸಮ್ಮುಖದಲ್ಲಿ ಹೇಳಿದನು.
12336037a ಸನತ್ಕುಮಾರೋ ಭಗವಾಂಸ್ತತಃ ಪ್ರಾಧೀತವಾನ್ನೃಪ।
12336037c ಸನತ್ಕುಮಾರಾದಪಿ ಚ ವೀರಣೋ ವೈ ಪ್ರಜಾಪತಿಃ।
12336037e ಕೃತಾದೌ ಕುರುಶಾರ್ದೂಲ ಧರ್ಮಮೇತಮಧೀತವಾನ್।।
ನೃಪ! ಭಗವಾನ್ ಸನತ್ಕುಮಾರನು ಅದನ್ನು ಬ್ರಹ್ಮನಿಂದ ಪಡೆದುಕೊಂದನು. ಕುರುಶಾರ್ದೂಲ! ಕೃತಯುಗದ ಆದಿಯಲ್ಲಿ ಈ ಧರ್ಮವನ್ನು ಸನತ್ಕುಮಾರನು ಪ್ರಜಾಪತಿ ವೀರಣನಿಗೆ ಅಧ್ಯಯನ ಮಾಡಿಸಿದನು.
12336038a ವೀರಣಶ್ಚಾಪ್ಯಧೀತ್ಯೈನಂ ರೌಚ್ಯಾಯ ಮನವೇ ದದೌ।
12336038c ರೌಚ್ಯಃ ಪುತ್ರಾಯ ಶುದ್ಧಾಯ ಸುವ್ರತಾಯ ಸುಮೇಧಸೇ।।
12336039a ಕುಕ್ಷಿನಾಮ್ನೇಽಥ ಪ್ರದದೌ ದಿಶಾಂ ಪಾಲಾಯ ಧರ್ಮಿಣೇ।
12336039c ತತಃ ಸೋಽಂತರ್ದಧೇ ಭೂಯೋ ನಾರಾಯಣಮುಖೋದ್ಗತಃ।।
ವೀರಣನಾದರೋ ದಿಅನ್ನು ಮನು ರುಚಿಗೆ ನೀಡಿದನು. ರುಚಿಯು ಇದನ್ನು ತನ್ನ ಪುತ್ರ ಶುದ್ಧ, ಸುವ್ರತ, ಸುಮೇಧಸ, ಕುಕ್ಷಿ ಎಂಬ ದಿಶಾಪಾಲ ಧರ್ಮಿಗೆ ನೀಡಿದನು. ನಾರಾಯಣನ ಮುಖದಿಂದ ಬಂದಿದ್ದ ಆ ಧರ್ಮವು ಪುನಃ ಅಂತರ್ಹಿತವಾಯಿತು.
12336040a ಅಂಡಜೇ ಜನ್ಮನಿ ಪುನರ್ಬ್ರಹ್ಮಣೇ ಹರಿಯೋನಯೇ।
12336040c ಏಷ ಧರ್ಮಃ ಸಮುದ್ಭೂತೋ ನಾರಾಯಣಮುಖಾತ್ಪುನಃ।।
12336041a ಗೃಹೀತೋ ಬ್ರಹ್ಮಣಾ ರಾಜನ್ ಪ್ರಯುಕ್ತಶ್ಚ ಯಥಾವಿಧಿ।
12336041c ಅಧ್ಯಾಪಿತಾಶ್ಚ ಮುನಯೋ ನಾಮ್ನಾ ಬರ್ಹಿಷದೋ ನೃಪ।
ಹರಿಯೋನಿಯ ಅಂಡದಿಂದ ಪುನಃ ಬ್ರಹ್ಮನ ಜನ್ಮವಾಗಲು ಈ ಧರ್ಮವು ನಾರಾಯಣನ ಮುಖದಿಂದ ಪುನಃ ಉದ್ಭವಿಸಿತು. ರಾಜನ್! ಯಥಾವಿಧಿಯಾಗಿ ಬ್ರಹ್ಮನು ಅದನ್ನು ಸ್ವೀಕರಿಸಿ ಅನುಷ್ಠಾನಕ್ಕೆ ತಂದುಕೊಂಡನು. ನೃಪ! ಬ್ರಹ್ಮನು ಅದನ್ನು ಬರ್ಹಿಷದರೆಂಬ ಮುನಿಗಳಿಗೆ ಉಪದೇಶಿಸಿದನು.
12336042a ಬರ್ಹಿಷದ್ಭ್ಯಶ್ಚ ಸಂಕ್ರಾಂತಃ ಸಾಮವೇದಾಂತಗಂ ದ್ವಿಜಮ್।
12336042c ಜ್ಯೇಷ್ಠಂ ನಾಮ್ನಾಭಿವಿಖ್ಯಾತಂ ಜ್ಯೇಷ್ಠಸಾಮವ್ರತೋ ಹರಿಃ।।
12336043a ಜ್ಯೇಷ್ಠಾಚ್ಚಾಪ್ಯನುಸಂಕ್ರಾಂತೋ ರಾಜಾನಮವಿಕಂಪನಮ್।
12336043c ಅಂತರ್ದಧೇ ತತೋ ರಾಜನ್ನೇಷ ಧರ್ಮಃ ಪ್ರಭೋರ್ಹರೇಃ।।
ಬರ್ಹಿಷದರು ಅದನ್ನು ಸಾಮವೇದಪಾರಂಗತ ಜ್ಯೇಷ್ಠ ಎಂಬ ಹೆಸರಿನ ದ್ವಿಜನಿಗೆ ಉಪದೇಶಿಸಿದರು. ವನು ಜ್ಯೇಷ್ಠಸಾಮವ್ರತ ಹರಿಯೆಂದು ವಿಖ್ಯಾತನಾದನು. ಜ್ಯೇಷ್ಠನು ಅದನ್ನು ರಾಜಾ ಅವಿಕಂಪನನಿಗೆ ಉಪದೇಶಿಸಿದನು. ರಾಜನ್! ಪುನಃ ಪ್ರಭು ಹರಿಯ ಈ ಧರ್ಮವು ಅಂತರ್ಗತವಾಯಿತು.
12336044a ಯದಿದಂ ಸಪ್ತಮಂ ಜನ್ಮ ಪದ್ಮಜಂ ಬ್ರಹ್ಮಣೋ ನೃಪ।
12336044c ತತ್ರೈಷ ಧರ್ಮಃ ಕಥಿತಃ ಸ್ವಯಂ ನಾರಾಯಣೇನ ಹಿ।।
12336045a ಪಿತಾಮಹಾಯ ಶುದ್ಧಾಯ ಯುಗಾದೌ ಲೋಕಧಾರಿಣೇ।
12336045c ಪಿತಾಮಹಶ್ಚ ದಕ್ಷಾಯ ಧರ್ಮಮೇತಂ ಪುರಾ ದದೌ।।
ನೃಪ! ಪದ್ಮದಿಂದ ಹುಟ್ಟಿದ ಬ್ರಹ್ಮನ ಈ ಏಳನೆಯ ಜನ್ಮದಲ್ಲಿ ಸ್ವಯಂ ನಾರಾಯಣನು ಈ ಧರ್ಮವನ್ನು ಶುದ್ಧ ಪಿತಾಮಹ ಲೋಕಧಾರಿಣೀ ಬ್ರಹ್ಮನಿಗೆ ಯುಗಾದಿಯಲ್ಲಿ ಹೇಳಿದನು. ಹಿಂದೆ ಪಿತಾಮಹನು ಈ ಧರ್ಮವನ್ನು ದಕ್ಷನಿಗೆ ನೀಡಿದನು.
12336046a ತತೋ ಜ್ಯೇಷ್ಠೇ ತು ದೌಹಿತ್ರೇ ಪ್ರಾದಾದ್ದಕ್ಷೋ ನೃಪೋತ್ತಮ।
12336046c ಆದಿತ್ಯೇ ಸವಿತುರ್ಜ್ಯೇಷ್ಠೇ ವಿವಸ್ವಾನ್ ಜಗೃಹೇ ತತಃ।।
ನೃಪೋತ್ತಮ! ಅನಂತರ ದಕ್ಷನು ತನ್ನ ಮಗಳ ಜ್ಯೇಷ್ಠ ಮಗ, ಸವಿತುವಿನ ಅಣ್ಣ ಆದಿತ್ಯನಿಗೆ ಉಪದೇಶಿಸಿದನು. ಅನಂತರ ಅವನಿಂದ ವಿವಸ್ವಂತನು ಅದನ್ನು ಪಡೆದುಕೊಂಡನು.
12336047a ತ್ರೇತಾಯುಗಾದೌ ಚ ಪುನರ್ವಿವಸ್ವಾನ್ಮನವೇ ದದೌ।
12336047c ಮನುಶ್ಚ ಲೋಕಭೂತ್ಯರ್ಥಂ ಸುತಾಯೇಕ್ಷ್ವಾಕವೇ ದದೌ3।।
ತ್ರೇತಾಯುಗದ ಆದಿಯಲ್ಲಿ ವಿವಸ್ವಾನನು ಇದನ್ನು ಪುನಃ ಮನುವಿಗೆ ನೀಡಿದನು. ಲೋಕಕಲ್ಯಾಣಕ್ಕಾಗಿ ಮನುವು ಇದನ್ನು ತನ್ನ ಮಗ ಇಕ್ಷ್ವಾಕುವಿಗೆ ನೀಡಿದನು.
12336048a ಇಕ್ಷ್ವಾಕುಣಾ ಚ ಕಥಿತೋ ವ್ಯಾಪ್ಯ ಲೋಕಾನವಸ್ಥಿತಃ।
12336048c ಗಮಿಷ್ಯತಿ ಕ್ಷಯಾಂತೇ ಚ ಪುನರ್ನಾರಾಯಣಂ ನೃಪ।।
ಇಕ್ಷ್ವಾಕುವಿಗೆ ಉಪದೇಶಿಸಿದ ಈ ಧರ್ಮವು ಲೋಕಗಳಲ್ಲಿ ವ್ಯಾಪ್ತವಾಗಿ ಪ್ರತಿಷ್ಠಿತಗೊಂಡಿದೆ. ನೃಪ! ಅಂತ್ಯದಲ್ಲಿ ಇದು ಪುನಃ ನಾರಾಯಣನನ್ನೇ ಸೇರುತ್ತದೆ.
12336049a ವ್ರತಿನಾಂ ಚಾಪಿ ಯೋ ಧರ್ಮಃ ಸ ತೇ ಪೂರ್ವಂ ನೃಪೋತ್ತಮ।
12336049c ಕಥಿತೋ ಹರಿಗೀತಾಸು ಸಮಾಸವಿಧಿಕಲ್ಪಿತಃ।।
ನೃಪೋತ್ತಮ! ಏಕಾಂತವ್ರತಿಗಳ ಧರ್ಮವು ಏನು ಎನ್ನುವುದನ್ನು ಮೊದಲೇ ನಿನಗೆ ಹರಿಗೀತೆಯಲ್ಲಿ ಸಂಕ್ಷಿಪ್ತವಾಗಿ ಹೇಳಿದ್ದೇನೆ.
12336050a ನಾರದೇನ ತು ಸಂಪ್ರಾಪ್ತಃ ಸರಹಸ್ಯಃ ಸಸಂಗ್ರಹಃ।
12336050c ಏಷ ಧರ್ಮೋ ಜಗನ್ನಾಥಾತ್ಸಾಕ್ಷಾನ್ನಾರಾಯಣಾನ್ನೃಪ।।
ನೃಪ! ನಾರದನು ರಹಸ್ಯ ಸಂಗ್ರಹಗಳೊಂದಿಗೆ ಈ ಧರ್ಮವನ್ನು ಸಾಕ್ಷಾತ್ ಜಗನ್ನಾಥ ನಾರಾಯಣನಿಂದ ಪಡೆದುಕೊಂಡನು.
12336051a ಏವಮೇಷ ಮಹಾನ್ ಧರ್ಮ ಆದ್ಯೋ ರಾಜನ್ಸನಾತನಃ।
12336051c ದುರ್ವಿಜ್ಞೇಯೋ ದುಷ್ಕರಶ್ಚ ಸಾತ್ವತೈರ್ಧಾರ್ಯತೇ ಸದಾ।।
ರಾಜನ್! ಈ ಸನಾತನ ಮಹಾನ್ ಧರ್ವವೇ ಮೊದಲ ಧರ್ಮ. ಸಾತ್ವತರಿಂದ ಸದಾ ಆಚರಿಸಲ್ಪಡುವ ಈ ಧರ್ಮವನ್ನು ತಿಳಿದುಕೊಳ್ಳುವುದು ಕಷ್ಟ ಮತ್ತು ಆಚರಿಸುವುದು ಕಷ್ಟ.
12336052a ಧರ್ಮಜ್ಞಾನೇನ ಚೈತೇನ ಸುಪ್ರಯುಕ್ತೇನ ಕರ್ಮಣಾ।
12336052c ಅಹಿಂಸಾಧರ್ಮಯುಕ್ತೇನ ಪ್ರೀಯತೇ ಹರಿರೀಶ್ವರಃ।।
ಅಹಿಂಸಾಧರ್ಮಯುಕ್ತವಾದ ಈ ಧರ್ಮವನ್ನು ತಿಳಿದುಕೊಂಡು ಕಾರ್ಯತಃ ಆಚರಣೆಗೆ ತರುವುದರಿಂದ ಈಶ್ವರ ಹರಿಯು ಪ್ರೀತನಾಗುತ್ತಾನೆ.
12336053a ಏಕವ್ಯೂಹವಿಭಾಗೋ ವಾ ಕ್ವ ಚಿದ್ದ್ವಿವ್ಯೂಹಸಂಜ್ಞಿತಃ।
12336053c ತ್ರಿವ್ಯೂಹಶ್ಚಾಪಿ ಸಂಖ್ಯಾತಶ್ಚತುರ್ವ್ಯೂಹಶ್ಚ ದೃಶ್ಯತೇ।।
ಕೆಲವರು ಏಕವ್ಯೂಹವನ್ನಿಟ್ಟುಕೊಂಡು ವಾಸುದೇವನೊಬ್ಬನನ್ನೇ ಉಪಾಸನೆ ಮಾಡುವುದನ್ನು ನೋಡುತ್ತೇವೆ. ಕೆಲವರು ಎರಡು ವ್ಯೂಹಗಳಲ್ಲಿ ವಾಸುದೇವ-ಸಂಕರ್ಷಣರನ್ನು, ಇನ್ನು ಕೆಲವರು ಮೂರು ವ್ಯೂಹಗಳಲ್ಲಿ ವಾಸುದೇವ-ಸಂಕರ್ಷಣ-ಪ್ರದ್ಯುಮ್ನರನ್ನು ಮತ್ತು ಇನ್ನೂ ಕೆಲವರು ನಾಲ್ಕು ವ್ಯೂಹಗಳಲ್ಲಿ ವಾಸುದೇವ-ಸಂಕರ್ಷಣ-ಪ್ರದ್ಯುಮ್ನ-ಅನಿರುದ್ಧರನ್ನು ಉಪಾಸನೆ ಮಾಡುತ್ತಾರೆ.
12336054a ಹರಿರೇವ ಹಿ ಕ್ಷೇತ್ರಜ್ಞೋ ನಿರ್ಮಮೋ ನಿಷ್ಕಲಸ್ತಥಾ।
12336054c ಜೀವಶ್ಚ ಸರ್ವಭೂತೇಷು ಪಂಚಭೂತಗುಣಾತಿಗಃ।।
ಹರಿಯೇ ಕ್ಷೇತ್ರಜ್ಞನು. ನಿರ್ಮಮನು ಮತ್ತು ನಿಷ್ಕಲನು. ಪಂಚಭೂತಗಳ ಗುಣಾತೀತನಾಗಿ ಸರ್ವಪ್ರಾಣಿಗಳಲ್ಲಿಯೂ ಇರುವ ಜೀವಾತ್ಮನು ಕೂಡ.
12336055a ಮನಶ್ಚ ಪ್ರಥಿತಂ ರಾಜನ್ ಪಂಚೇಂದ್ರಿಯಸಮೀರಣಮ್।
12336055c ಏಷ ಲೋಕನಿಧಿರ್ಧೀಮಾನೇಷ4 ಲೋಕವಿಸರ್ಗಕೃತ್।।
ರಾಜನ್! ಪಂಚೇಂದ್ರಿಯಗಳ ಪ್ರೇರಕವೆಂದು ಪ್ರಥಿತವಾದ ಮನಸ್ಸೂ ಕೂಡ ಹರಿಯೇ ಆಗಿದ್ದಾನೆ. ಆ ಧೀಮಂತನೇ ಲೋಕನಿಧಿಯೂ ಸೃಷ್ಟಿಕರ್ತನೂ ಆಗಿದ್ದಾನೆ.
12336056a ಅಕರ್ತಾ ಚೈವ ಕರ್ತಾ ಚ ಕಾರ್ಯಂ ಕಾರಣಮೇವ ಚ।
12336056c ಯಥೇಚ್ಚತಿ ತಥಾ ರಾಜನ್ ಕ್ರೀಡತೇ ಪುರುಷೋಽವ್ಯಯಃ।।
ರಾಜನ್! ಈ ಅವ್ಯಯ ಪುರುಷನು ಕರ್ತಾ ಮತ್ತು ಅಕರ್ತಾ. ಕಾರ್ಯ ಮತ್ತು ಕಾರಣ. ಅವನು ಇಷ್ಟಬಂದಂತೆ ಆಡುತ್ತಿರುತ್ತಾನೆ.
12336057a ಏಷ ಏಕಾಂತಿಧರ್ಮಸ್ತೇ ಕೀರ್ತಿತೋ ನೃಪಸತ್ತಮ।
12336057c ಮಯಾ ಗುರುಪ್ರಸಾದೇನ ದುರ್ವಿಜ್ಞೇಯೋಽಕೃತಾತ್ಮಭಿಃ।
12336057e ಏಕಾಂತಿನೋ ಹಿ ಪುರುಷಾ ದುರ್ಲಭಾ ಬಹವೋ ನೃಪ।।
ನೃಪಸತ್ತಮ! ಇದೋ ನಾನು ಏಕಾಂತಿಧರ್ಮದ ಕುರಿತು ನಿನಗೆ ಹೇಳಿದ್ದೇನೆ. ಅಕೃತಾತ್ಮರಿಗೆ ತಿಳಿಯಲಸಾಧ್ಯವಾದ ಇದನ್ನು ನಾನು ಗುರುವಿನ ಪ್ರಸಾದದಿಂದ ಪಡೆದುಕೊಂಡೆನು. ನೃಪ! ಏಕಾಂತಿನ ಪುರುಷರು ದುರ್ಲಭರು.
12336058a ಯದ್ಯೇಕಾಂತಿಭಿರಾಕೀರ್ಣಂ ಜಗತ್ ಸ್ಯಾತ್ಕುರುನಂದನ।
12336058c ಅಹಿಂಸಕೈರಾತ್ಮವಿದ್ಭಿಃ ಸರ್ವಭೂತಹಿತೇ ರತೈಃ।
12336058e ಭವೇತ್ ಕೃತಯುಗಪ್ರಾಪ್ತಿರಾಶೀಃಕರ್ಮವಿವರ್ಜಿತೈಃ।।
ಕುರುನಂದನ! ಒಂದು ವೇಳೆ ಈ ಜಗತ್ತು ಅಹಿಸಂಕರಾದ ಆತ್ಮಜ್ಞಾನಿಗಳಾದ ಮತ್ತು ಸರ್ವಭೂತಹಿತರತರಾದ ಕಾಮ-ಕರ್ಮವಿವರ್ಜಿತರಾದ ಏಕಾಂತಿಗಳಿಂದ ತುಂಬಿಹೋಗಿದ್ದರೆ ಕೃತಯುಗವು ಪ್ರಾಪ್ತವಾಗುತ್ತಿತ್ತು.
12336059a ಏವಂ ಸ ಭಗವಾನ್ ವ್ಯಾಸೋ ಗುರುರ್ಮಮ ವಿಶಾಂ ಪತೇ।
12336059c ಕಥಯಾಮಾಸ ಧರ್ಮಜ್ಞೋ ಧರ್ಮರಾಜ್ಞೇ ದ್ವಿಜೋತ್ತಮಃ।।
12336060a ಋಷೀಣಾಂ ಸಂನಿಧೌ ರಾಜನ್ ಶೃಣ್ವತೋಃ ಕೃಷ್ಣಭೀಷ್ಮಯೋಃ।
ವಿಶಾಂಪತೇ! ರಾಜನ್! ಹೀಗೆ ನನ್ನ ಗುರು ದ್ವಿಜೋತ್ತಮ ಧರ್ಮಜ್ಞ ಭಗವಾನ್ ವ್ಯಾಸನು ಧರ್ಮರಾಜನಿಗೆ , ಋಷಿಗಳ ಸನ್ನಿಧಿಯಲ್ಲಿ, ಕೃಷ್ಣ-ಭೀಷ್ಮರು ಕೇಳುತ್ತಿರುವಾಗ, ಹೇಳಿದನು.
12336060c ತಸ್ಯಾಪ್ಯಕಥಯತ್ಪೂರ್ವಂ ನಾರದಃ ಸುಮಹಾತಪಾಃ।।
12336061a ದೇವಂ ಪರಮಕಂ ಬ್ರಹ್ಮ ಶ್ವೇತಂ ಚಂದ್ರಾಭಮಚ್ಯುತಮ್।
12336061c ಯತ್ರ ಚೈಕಾಂತಿನೋ ಯಾಂತಿ ನಾರಾಯಣಪರಾಯಣಾಃ।।
ಅದಕ್ಕೂ ಮೊದಲು ಮಹಾತಪಸ್ವೀ ನಾರದನು ಅವನಿಗೆ ಇದನ್ನು ಹೇಳಿದ್ದನು. ನಾರಾಯಣ ಪರಾಯಣರಾದ ಏಕಾಂತಿಗಳು ಪರಮ ಬ್ರಹ್ಮ ದೇವ ಶ್ವೇತ ಚಂದ್ರನಂತೆ ಹೊಳೆಯುತ್ತಿರುವ ಅಚ್ಯುತನನ್ನು ಸೇರುತ್ತಾರೆ.”
12336062 ಜನಮೇಜಯ ಉವಾಚ।
12336062a ಏವಂ ಬಹುವಿಧಂ ಧರ್ಮಂ ಪ್ರತಿಬುದ್ಧೈರ್ನಿಷೇವಿತಮ್।
12336062c ನ ಕುರ್ವಂತಿ ಕಥಂ ವಿಪ್ರಾ ಅನ್ಯೇ ನಾನಾವ್ರತೇ ಸ್ಥಿತಾಃ।।
ಜನಮೇಜಯನು ಹೇಳಿದನು: ’ಜ್ಞಾನಿಗಳು ಆಚರಿಸುವ ಬಹುವಿಧದ ಗುಣಗಳಿಂದ ಯುಕ್ತವಾಗಿರುವ ಈ ಧರ್ಮವನ್ನು ನಾನಾ ವ್ರತಗಳನ್ನು ಆಚರಿಸುವ ಅನ್ಯ ವಿಪ್ರರು ಏಕೆ ಆಚರಿಸುವುದಿಲ್ಲ?”
12336063 ವೈಶಂಪಾಯನ ಉವಾಚ।
12336063a ತಿಸ್ರಃ ಪ್ರಕೃತಯೋ ರಾಜನ್ ದೇಹಬಂಧೇಷು ನಿರ್ಮಿತಾಃ।
12336063c ಸಾತ್ತ್ವಿಕೀ ರಾಜಸೀ ಚೈವ ತಾಮಸೀ ಚೇತಿ ಭಾರತ।।
ವೈಶಂಪಾಯನನು ಹೇಳಿದನು: “ರಾಜನ್! ಭಾರತ! ದೇಹಬಂಧಿಗಳಲ್ಲಿ ಸಾತ್ತ್ವಿಕೀ, ರಾಜಸೀ ಮತ್ತು ತಾಮಸಿಗಳೆಂಬ ಮೂರು ಪ್ರಕೃತಿಗಳು ನಿರ್ಮಿತವಾಗಿವೆ.
12336064a ದೇಹಬಂಧೇಷು ಪುರುಷಃ ಶ್ರೇಷ್ಠಃ ಕುರುಕುಲೋದ್ವಹ।
12336064c ಸಾತ್ತ್ವಿಕಃ ಪುರುಷವ್ಯಾಘ್ರ ಭವೇನ್ಮೋಕ್ಷಾರ್ಥನಿಶ್ಚಿತಃ।।
ಕುರುಕುಲೋದ್ವಹ! ಪುರುಷವ್ಯಾಘ್ರ! ದೇಹಬಂಧಿಗಳಲ್ಲಿ ಸಾತ್ತ್ವಿಕ ಪುರುಷನು ಶ್ರೇಷ್ಠನು. ಅವನೇ ಮೋಕ್ಷಕ್ಕೆ ಅರ್ಹನಾದವನೆಂದು ನಿಶ್ಚಿತವಾಗಿದೆ.
12336065a ಅತ್ರಾಪಿ ಸ ವಿಜಾನಾತಿ ಪುರುಷಂ ಬ್ರಹ್ಮವರ್ತಿನಮ್।
12336065c ನಾರಾಯಣಪರೋ ಮೋಕ್ಷಸ್ತತೋ ವೈ ಸಾತ್ತ್ವಿಕಃ ಸ್ಮೃತಃ।।
ಅಂಥವನು ಪುರುಷ ನಾರಾಯಣನೇ ಬ್ರಹ್ಮವರ್ತಿಯೆಂದೂ ನಾರಾಯಣನೇ ಮೋಕ್ಷವೆಂದೂ ತಿಳಿದಿರುತ್ತಾನೆ. ಆದುದರಿಂದ ಅವನು ಸಾತ್ತ್ವಿಕನೆಂದು ಕರೆಯಲ್ಪಡುತ್ತಾನೆ.
12336066a ಮನೀಷಿತಂ ಚ ಪ್ರಾಪ್ನೋತಿ ಚಿಂತಯನ್ಪುರುಷೋತ್ತಮಮ್।
12336066c ಏಕಾಂತಭಕ್ತಿಃ ಸತತಂ ನಾರಾಯಣಪರಾಯಣಃ।।
ಅಂಥಹ ಸಾತ್ತ್ವಿಕನು ಸದಾ ಪುರುಷೋತ್ತಮ ಹರಿಯನ್ನು ಧ್ಯಾನಮಾಡುತ್ತಾ ಬಯಸಿದುದನ್ನು ಪಡೆದುಕೊಳ್ಳುತ್ತಾನೆ. ನಾರಾಯಣನ ಸತತ ಪಾರಾಯಣವೇ ಏಕಾಂತಭಕ್ತಿ.
12336067a ಮನೀಷಿಣೋ ಹಿ ಯೇ ಕೇ ಚಿದ್ಯತಯೋ ಮೋಕ್ಷಕಾಂಕ್ಷಿಣಃ।
12336067c ತೇಷಾಂ ವೈ ಚಿನ್ನತೃಷ್ಣಾನಾಂ ಯೋಗಕ್ಷೇಮವಹೋ ಹರಿಃ।।
ತೃಷ್ಣೆಗಳನ್ನು ತೊರೆದು ಮೋಕ್ಷಾಕಾಂಕ್ಷಿಗಳಾದ ಎಷ್ಟೊಂದು ವಿದ್ವಾಂಸ ಯತಿಗಳು ಇರುವರೋ ಅವರೆಲ್ಲರ ಯೋಗಕ್ಷೇಮಗಳನ್ನು ಹರಿಯೇ ವಹಿಸಿಕೊಳ್ಳುತ್ತಾನೆ.
12336068a ಜಾಯಮಾನಂ ಹಿ ಪುರುಷಂ ಯಂ ಪಶ್ಯೇನ್ಮಧುಸೂದನಃ।
12336068c ಸಾತ್ತ್ವಿಕಸ್ತು ಸ ವಿಜ್ಞೇಯೋ ಭವೇನ್ಮೋಕ್ಷೇ ಚ ನಿಶ್ಚಿತಃ।।
ಹುಟ್ಟು-ಸಾವುಗಳ ಸುಳಿಯಲ್ಲಿ ಸಿಕ್ಕಿರುವ ಯಾವ ಪುರುಷನನ್ನು ಮಧುಸೂದನನು ಕೃಪಾದೃಷ್ಟಿಯಿಂದ ನೋಡುತ್ತಾನೋ ಅವನನ್ನೇ ಸಾತ್ತ್ವಿಕನೆಂದು ತಿಳಿಯಬೇಕು. ಅಂಥವನೇ ಮೋಕ್ಷಕ್ಕೂ ನಿಶ್ಚಿತ ಅಧಿಕಾರಿಯು.
12336069a ಸಾಂಖ್ಯಯೋಗೇನ ತುಲ್ಯೋ ಹಿ ಧರ್ಮ ಏಕಾಂತಸೇವಿತಃ।
12336069c ನಾರಾಯಣಾತ್ಮಕೇ ಮೋಕ್ಷೇ ತತೋ ಯಾಂತಿ ಪರಾಂ ಗತಿಮ್।।
ಏಕಾಂತಿಕ ಧರ್ಮಾಚರಣೆಯು ಸಾಂಖ್ಯಯೋಗಕ್ಕೆ ಸಮನಾಗಿದೆ. ಮೋಕ್ಷವು ನಾರಾಯಣಾತ್ಮಕ. ಆದುದರಿಂದ ಏಕಾಂತಿಕರು ಆ ಪರಮ ಗತಿಯನ್ನೇ ಹೊಂದುತ್ತಾರೆ.
12336070a ನಾರಾಯಣೇನ ದೃಷ್ಟಶ್ಚ ಪ್ರತಿಬುದ್ಧೋ ಭವೇತ್ಪುಮಾನ್।
12336070c ಏವಮಾತ್ಮೇಚ್ಚಯಾ ರಾಜನ್ ಪ್ರತಿಬುದ್ಧೋ ನ ಜಾಯತೇ।।
ನಾರಾಯಣನ ಕೃಪಾದೃಷ್ಟಿಯಿದ್ದರೆ ಸಾಕು ಪುರುಷನು ಜ್ಞಾನಿಯಾಗುತ್ತಾನೆ. ಜ್ಞಾನಿಯಾಗಬೇಕೆಂದು ಇಚ್ಛಿಸುವುದರಿಂದ ಮಾತ್ರವೇ ಯಾರೂ ಜ್ಞಾನಿಯಾಗುವುದಿಲ್ಲ.
12336071a ರಾಜಸೀ ತಾಮಸೀ ಚೈವ ವ್ಯಾಮಿಶ್ರೇ ಪ್ರಕೃತೀ ಸ್ಮೃತೇ।
12336071c ತದಾತ್ಮಕಂ ಹಿ ಪುರುಷಂ ಜಾಯಮಾನಂ ವಿಶಾಂ ಪತೇ।
12336071e ಪ್ರವೃತ್ತಿಲಕ್ಷಣೈರ್ಯುಕ್ತಂ ನಾವೇಕ್ಷತಿ ಹರಿಃ ಸ್ವಯಮ್।।
ವಿಶಾಂಪತೇ! ರಾಜಸೀ ಮತ್ತು ತಾಪಸೀ ಪ್ರಕೃತಿಗಳು ಮಿಶ್ರಪ್ರಕೃತಿಗಳೆಂದು ಹೇಳಲ್ಪಟ್ಟಿವೆ. ಅವುಗಳಿಂದ ಕೂಡಿ ಹುಟ್ಟಿದವನು ಸಾಮಾನ್ಯವಾಗಿ ಪ್ರವೃತ್ತಿಲಕ್ಷಣಗಳಿಂದಲೇ ಕೂಡಿರುತ್ತಾನೆ. ಸ್ವಯಂ ಹರಿಯು ಅವನನ್ನು ನೋಡುವುದೂ ಇಲ್ಲ.
12336072a ಪಶ್ಯತ್ಯೇನಂ ಜಾಯಮಾನಂ ಬ್ರಹ್ಮಾ ಲೋಕಪಿತಾಮಹಃ।
12336072c ರಜಸಾ ತಮಸಾ ಚೈವ ಮಾನುಷಂ ಸಮಭಿಪ್ಲುತಮ್।।
ರಜಸ್ತಮಸ್ಸು ಗುಣಗಳಿಂದ ಹುಟ್ಟಿದ ಮನುಷ್ಯನನ್ನು ಲೋಕಪಿತಾಮಹ ಬ್ರಹ್ಮನು ನೋಡಿಕೊಳ್ಳುತ್ತಾನೆ.
12336073a ಕಾಮಂ ದೇವಾಶ್ಚ ಋಷಯಃ ಸತ್ತ್ವಸ್ಥಾ ನೃಪಸತ್ತಮ।
12336073c ಹೀನಾಃ ಸತ್ತ್ವೇನ ಸೂಕ್ಷ್ಮೇಣ ತತೋ ವೈಕಾರಿಕಾಃ ಸ್ಮೃತಾಃ।।
ನೃಪಸತ್ತಮ! ದೇವತೆಗಳೂ ಮತ್ತು ಋಷಿಗಳೂ ಹೆಚ್ಚಾಗಿ ಸಾತ್ತ್ವಿಕಗುಣಯುಕ್ತರಾಗಿಯೇ ಇರುತ್ತಾರೆ. ಅಂಥವರು ಸೂಕ್ಷ್ಮ ಸತ್ತ್ವಗುಣದಿಂದ ವಿಹೀನರಾಗಿದ್ದರೆ ಅಂಥವರು ವೈಕಾರಿಕರೆಂದು ಕರೆಯಲ್ಪಡುತ್ತಾರೆ.”
12336074 ಜನಮೇಜಯ ಉವಾಚ।
12336074a ಕಥಂ ವೈಕಾರಿಕೋ ಗಚ್ಚೇತ್ಪುರುಷಃ ಪುರುಷೋತ್ತಮಮ್5।
ಜನಮೇಜಯನು ಹೇಳಿದನು: “ವೈಕಾರಿಕ ಪುರುಷನು ಹೇಗೆ ಪುರುಷೋತ್ತಮನನ್ನು ಹೊಂದಬಹುದು?”
12336075 ವೈಶಂಪಾಯನ ಉವಾಚ।
12336075a ಸುಸೂಕ್ಷ್ಮಸತ್ತ್ವಸಂಯುಕ್ತಂ ಸಂಯುಕ್ತಂ ತ್ರಿಭಿರಕ್ಷರೈಃ।
12336075c ಪುರುಷಃ ಪುರುಷಂ ಗಚ್ಚೇನ್ನಿಷ್ಕ್ರಿಯಃ ಪಂಚವಿಂಶಕಮ್।।
ವೈಶಂಪಾಯನನು ಹೇಳಿದನು: “ಅತ್ಯಂತ ಸೂಕ್ಷ್ಮನಾದ ಸತ್ತ್ವಸಂಯುಕ್ತನಾದ, ಅ-ಉ-ಮ್ ಎಂಬ ಮೂರು ಅಕ್ಷರಗಳಿಂದ ಕೂಡಿದ ನಿಷ್ಕ್ರಿಯ ಪುರುಷನು ಇಪ್ಪತ್ತೈದನೆಯವನಾದ ಪುರುಷನನ್ನು ಸೇರುತ್ತಾನೆ.
12336076a ಏವಮೇಕಂ ಸಾಂಖ್ಯಯೋಗಂ ವೇದಾರಣ್ಯಕಮೇವ ಚ।
12336076c ಪರಸ್ಪರಾಂಗಾನ್ಯೇತಾನಿ ಪಂಚರಾತ್ರಂ ಚ ಕಥ್ಯತೇ।
12336076e ಏಷ ಏಕಾಂತಿನಾಂ ಧರ್ಮೋ ನಾರಾಯಣಪರಾತ್ಮಕಃ।।
ಹೀಗೆ ಸಾಂಖ್ಯಯೋಗ ಮತ್ತು ವೇದ-ಅರಣ್ಯಕಗಳು ಒಂದೇ. ಪರಸ್ಪರರ ಅಂಗಗಳು. ನಾರಾಯಣಪರಾತ್ಮಕವಾದ ಈ ಏಕಾಂತಿಗಳ ಧರ್ಮವನ್ನು ಪಂಚರಾತ್ರ ಎಂದೂ ಕರೆಯುತ್ತಾರೆ.
12336077a ಯಥಾ ಸಮುದ್ರಾತ್ ಪ್ರಸೃತಾ ಜಲೌಘಾಸ್ ತಮೇವ ರಾಜನ್ ಪುನರಾವಿಶಂತಿ।
12336077c ಇಮೇ ತಥಾ ಜ್ಞಾನಮಹಾಜಲೌಘಾ ನಾರಾಯಣಂ ವೈ ಪುನರಾವಿಶಂತಿ।।
ರಾಜನ್! ಹೇಗೆ ಸಮುದ್ರದಿಂದ ಮೇಲೆಹೋದ ನೀರಿನ ಮೋಡಗಳು ಪುನಃ ಸಮುದ್ರವನ್ನೇ ಸೇರುತ್ತವೆಯೋ ಹಾಗೆ ಜ್ಞಾನವೆಂಬ ಮಹಾ ಮೋಡಗಳು ನಾರಾಯಣನನ್ನೇ ಪುನಃ ಸೇರಿಕೊಳ್ಳುತ್ತವೆ.
12336078a ಏಷ ತೇ ಕಥಿತೋ ಧರ್ಮಃ ಸಾತ್ವತೋ ಯದುಬಾಂಧವ।
12336078c ಕುರುಷ್ವೈನಂ ಯಥಾನ್ಯಾಯಂ ಯದಿ ಶಕ್ನೋಷಿ ಭಾರತ।।
ಯದುಬಾಂಧವ! ಭಾರತ! ಇಗೋ ನಿನಗೆ ಸಾತ್ವತ ಧರ್ಮದ ಕುರಿತು ಹೇಳಿದ್ದೇನೆ. ಸಾದ್ಯವಾದರೆ ಯಥಾನ್ಯಾಯವಾಗಿ ಇದನ್ನು ಕಾರ್ಯಗತಗೊಳಿಸು.
12336079a ಏವಂ ಹಿ ಸುಮಹಾಭಾಗೋ ನಾರದೋ ಗುರವೇ ಮಮ।
12336079c ಶ್ವೇತಾನಾಂ ಯತಿನಾಮಾಹ ಏಕಾಂತಗತಿಮವ್ಯಯಾಮ್।।
ಹೀಗೆ ಮಹಾಭಾಗ ನಾರದನು ನನ್ನ ಗುರುವಿಗೆ ಶ್ವೇತದ್ವೀಪವಾಸಿ ಯತಿಗಳ ಅವ್ಯಯ ಏಕಾಂತಗತಿಯ ಕುರಿತು ಹೇಳಿದನು.
12336080a ವ್ಯಾಸಶ್ಚಾಕಥಯತ್ ಪ್ರೀತ್ಯಾ ಧರ್ಮಪುತ್ರಾಯ ಧೀಮತೇ।
12336080c ಸ ಏವಾಯಂ ಮಯಾ ತುಭ್ಯಮಾಖ್ಯಾತಃ ಪ್ರಸೃತೋ ಗುರೋಃ।।
ಧೀಮತ ವ್ಯಾಸನು ಪ್ರೀತಿಯಿಂದ ಇದನ್ನು ಧರ್ಮಪುತ್ರನಿಗೆ ಹೇಳಿದನು. ಗುರುವಿನಿಂದ ಹೊರಹೊಮ್ಮಿದ ಅದನ್ನೇ ನಾನು ನಿನಗೆ ಹೇಳಿದ್ದೇನೆ.
12336081a ಇತ್ಥಂ ಹಿ ದುಶ್ಚರೋ ಧರ್ಮ ಏಷ ಪಾರ್ಥಿವಸತ್ತಮ।
12336081c ಯಥೈವ ತ್ವಂ ತಥೈವಾನ್ಯೇ ನ ಭಜಂತಿ ವಿಮೋಹಿತಾಃ।।
ಪಾರ್ಥಿವಸತ್ತಮ! ಈ ಧರ್ಮವು ಆಚರಿಸಲು ಕಷ್ಟಸಾಧ್ಯವಾದುದು. ಈ ವಿಷಯದಲ್ಲಿ ನೀನು ಹೇಗೆ ವಿಮೋಹಿತನಾಗಿರುವೆಯೋ ಹಾಗೆ ಅನ್ಯರೂ ವಿಮೋಹಿತರಾಗುತ್ತಾರೆ.
12336082a ಕೃಷ್ಣ ಏವ ಹಿ ಲೋಕಾನಾಂ ಭಾವನೋ ಮೋಹನಸ್ತಥಾ।
12336082c ಸಂಹಾರಕಾರಕಶ್ಚೈವ ಕಾರಣಂ ಚ ವಿಶಾಂ ಪತೇ।।
ವಿಶಾಂಪತೇ! ಕೃಷ್ಣನೇ ಲೋಕಗಳ ಭಾವನ ಮತ್ತು ಮೋಹನ. ಅವನೇ ಸಂಹಾರಕಾರಕ ಮತ್ತು ಕಾರಣ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ನಾರಾಯಣೀಯೇ ಷಟ್ತ್ರಿಂಶಾಧಿಕತ್ರಿಶತತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ನಾರಾಯಣೀಯ ಎನ್ನುವ ಮುನ್ನೂರಾಮೂವತ್ತಾರನೇ ಅಧ್ಯಾಯವು.-
ಅನಿರುದ್ಧ-ಪ್ರದ್ಯುಮ್ನ-ಸಂಕರ್ಷಣರ ಮಾರ್ಗವನ್ನು ಸಾಧಿಸಿ ಕೊನೆಯಲ್ಲಿ ನಾಲ್ಕನೆಯವನಾದ ವಾಸುದೇವನ ಮಾರ್ಗವನ್ನು ಆಶ್ರಯಿಸುತ್ತಾರೆ. (ಭಾರತ ದರ್ಶನ) ↩︎
-
ಇದರ ನಂತರ ಈ ಒಂದು ಅಧಿಕ ಶ್ಲೋಕಾರ್ಧವಿದೆ: ತ್ವಂ ಕರ್ತಾ ಯುಗಧರ್ಮಾಣಾಂ ನಿರಾಶೀಃ ಕರ್ಮಸಂಜ್ಞಿತಮ್। (ಭಾರತ ದರ್ಶನ). ↩︎
-
ಇಮಂ ವಿವಸ್ವತೇ ಯೋಗಂ ಪ್ರೋಕ್ತವಾನಹಮವ್ಯಯಮ್। ವಿವಸ್ವಾನ್ಮನವೇ ಪ್ರಾಹ ಮನುರಿಕ್ಷ್ವಾಕವೇಽಬ್ರವೀತ್।। ಎಂಬ ಭಗವದ್ಗೀತೆಯ ನಾಲ್ಕನೇ ಅಧ್ಯಾಯದ ಮೊದಲನೆಯ ಶ್ಲೋಕವನ್ನು ಇಲ್ಲಿ ಸ್ಮರಿಸಿಕೊಳ್ಳಬೇಕು. (ಭಾರತ ದರ್ಶನ) ↩︎
-
ಲೋಕವಿಧಿರ್ಧೀಮಾನೇಷ (ಭಾರತ ದರ್ಶನ). ↩︎
-
ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ವದ ಸರ್ವಂ ಯಥಾದೃಷ್ಟಂ ಪ್ರವೃತ್ತಿಂ ಚ ಯಥಾಕ್ರಮಮ್। (ಭಾರತದರ್ಶನ). ↩︎