ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 335
ಸಾರ
ಶ್ರೀಹರಿಯ ಹಯಗ್ರೀವಾವತಾರದ ಕಥೆ (1-72); ನಾರಾಯಣನ ಮಹಿಮೆ (73-89).
12335001 ಜನಮೇಜಯ ಉವಾಚ1।
12335001a ಶ್ರುತಂ ಭಗವತಸ್ತಸ್ಯ ಮಾಹಾತ್ಮ್ಯಂ ಪರಮಾತ್ಮನಃ।
12335001c ಜನ್ಮ ಧರ್ಮಗೃಹೇ ಚೈವ ನರನಾರಾಯಣಾತ್ಮಕಮ್।
12335001e ಮಹಾವರಾಹಸೃಷ್ಟಾ ಚ ಪಿಂಡೋತ್ಪತ್ತಿಃ ಪುರಾತನೀ।।
ಜನಮೇಜಯನು ಹೇಳಿದನು: “ನಿನ್ನಿಂದ ಆ ಪರಮಾತ್ಮನ ಮಹಾತ್ಮೆಯನ್ನು – ನರನಾರಾಯಣಾತ್ಮಕರಾಗಿ ಧರ್ಮನ ಮನೆಯಲ್ಲಿ ಅವನ ಜನ್ಮ, ಪುರಾತನ ಮಹಾವರಾಹನ ಸೃಷ್ಟಿ ಮತ್ತು ಪಿಂಡೋತ್ಪತ್ತಿ – ಇವುಗಳನ್ನು ಕೇಳಿದೆನು.
12335002a ಪ್ರವೃತ್ತೌ ಚ ನಿವೃತ್ತೌ ಚ ಯೋ ಯಥಾ ಪರಿಕಲ್ಪಿತಃ।
12335002c ಸ ತಥಾ ನಃ ಶ್ರುತೋ ಬ್ರಹ್ಮನ್ಕಥ್ಯಮಾನಸ್ತ್ವಯಾನಘ।।
ಬ್ರಹ್ಮನ್! ಅನಘ! ಪ್ರವೃತ್ತಿ-ನಿವೃತ್ತಿಗಳು ಹೇಗೆ ಪರಿಕಲ್ಪಿತವಾಗಿವೆಯೋ ಅದನ್ನೂ ಕೂಡ ನಿನ್ನಿಂದ ನಾವು ಕೇಳಿದೆವು.
12335003a ಯಚ್ಚ ತತ್ಕಥಿತಂ ಪೂರ್ವಂ ತ್ವಯಾ ಹಯಶಿರೋ ಮಹತ್।
12335003c ಹವ್ಯಕವ್ಯಭುಜೋ ವಿಷ್ಣೋರುದಕ್ಪೂರ್ವೇ ಮಹೋದಧೌ।
12335003e ತಚ್ಚ ದೃಷ್ಟಂ ಭಗವತಾ ಬ್ರಹ್ಮಣಾ ಪರಮೇಷ್ಠಿನಾ।।
ಈ ಮೊದಲು ನೀನು ಹವ್ಯಕವ್ಯಭುಜ ವಿಷ್ಣುವು ಹಿಂದೆ ಮಹೋದಧಿಯಿಂದ ಹಯಶಿರನಾಗಿ ಮೇಲೆ ಬಂದುದನ್ನು ಪರಮೇಷ್ಠಿ ಬ್ರಹ್ಮನು ನೋಡಿದನು ಎಂದು ಹೇಳಿದೆ.
12335004a ಕಿಂ ತದುತ್ಪಾದಿತಂ ಪೂರ್ವಂ ಹರಿಣಾ ಲೋಕಧಾರಿಣಾ।
12335004c ರೂಪಂ ಪ್ರಭಾವಮಹತಾಮಪೂರ್ವಂ ಧೀಮತಾಂ ವರ।।
ಧೀಮಂತರಲ್ಲಿ ಶ್ರೇಷ್ಠ! ಹಿಂದೆ ಲೋಕದಾರಿ ಹರಿಯು ಆ ಪರಮಾದ್ಭುತವಾದ ಪ್ರಭಾವಶಾಲಿಯಾದ ಅಪೂರ್ವವಾದ ರೂಪವನ್ನು ಏಕೆ ಸೃಷ್ಟಿಸಿದನು?
12335005a ದೃಷ್ಟ್ವಾ ಹಿ ವಿಬುಧಶ್ರೇಷ್ಠಮಪೂರ್ವಮಮಿತೌಜಸಮ್।
12335005c ತದಶ್ವಶಿರಸಂ ಪುಣ್ಯಂ ಬ್ರಹ್ಮಾ ಕಿಮಕರೋನ್ಮುನೇ।।
ಮುನೇ! ಆ ವಿಬುಧಶ್ರೇಷ್ಠ ಅಪೂರ್ವ ಅಮಿತೌಜಸ ಪುಣ್ಯ ಅಶ್ವಶಿರಸನನ್ನು ನೋಡಿ ಬ್ರಹ್ಮನು ಏನು ಮಾಡಿದನು?
12335006a ಏತನ್ನಃ ಸಂಶಯಂ ಬ್ರಹ್ಮನ್ಪುರಾಣಜ್ಞಾನಸಂಭವಮ್।
12335006c ಕಥಯಸ್ವೋತ್ತಮಮತೇ ಮಹಾಪುರುಷನಿರ್ಮಿತಮ್।
12335006e ಪಾವಿತಾಃ ಸ್ಮ ತ್ವಯಾ ಬ್ರಹ್ಮನ್ಪುಣ್ಯಾಂ ಕಥಯತಾ ಕಥಾಮ್।।
ಬ್ರಹ್ಮನ್! ಉತ್ತಮಮತೇ! ಇದು ನಮ್ಮ ಸಂದೇಹ! ಮಹಾಪುರುಷನಿರ್ಮಿತವಾದ ಪುರಾಣಜ್ಞಾನಸಂಭವವಾದ ಈ ಕಥೆಯನ್ನು ಹೇಳಬೇಕು. ಬ್ರಹ್ಮನ್! ನೀನು ಪುಣ್ಯ ಕಥೆಯನ್ನು ಹೇಳಿ ನಮ್ಮನ್ನು ಪವಿತ್ರರನ್ನಾಗಿ ಮಾಡು.”
12335007 ವೈಶಂಪಾಯನ ಉವಾಚ।
12335007a ಕಥಯಿಷ್ಯಾಮಿ ತೇ ಸರ್ವಂ ಪುರಾಣಂ ವೇದಸಂಮಿತಮ್।
12335007c ಜಗೌ ಯದ್ಭಗವಾನ್ವ್ಯಾಸೋ ರಾಜ್ಞೋ ಧರ್ಮಸುತಸ್ಯ ವೈ।।
ವೈಶಂಪಾಯನನು ಹೇಳಿದನು: “ವೇದಸಂಮಿತ ಪುರಾಣವೆಲ್ಲವನ್ನೂ ನಿನಗೆ ಹೇಳುತ್ತೇನೆ. ಒಮ್ಮೆ ಭಗವಾನ್ ವ್ಯಾಸನು ರಾಜಾ ಧರ್ಮಸುತನ ಬಳಿ ಹೋಗಿದ್ದನು.
12335008a ಶ್ರುತ್ವಾಶ್ವಶಿರಸೋ ಮೂರ್ತಿಂ ದೇವಸ್ಯ ಹರಿಮೇಧಸಃ।
12335008c ಉತ್ಪನ್ನಸಂಶಯೋ ರಾಜಾ ತಮೇವ ಸಮಚೋದಯತ್।।
ಹರಿಮೇಧಸ ದೇವನ ಅಶ್ವಶಿರಸ ಮೂರ್ತಿಯ ಕುರಿತು ಕೇಳಿ ಸಂಶಯತಾಳಿದ ರಾಜನು ಅವನನ್ನೇ ಪ್ರಶ್ನಿಸಿದ್ದನು.
12335009 ಯುಧಿಷ್ಠಿರ ಉವಾಚ।
12335009a ಯತ್ತದ್ದರ್ಶಿತವಾನ್ಬ್ರಹ್ಮಾ ದೇವಂ ಹಯಶಿರೋಧರಮ್।
12335009c ಕಿಮರ್ಥಂ ತತ್ಸಮಭವದ್ವಪುರ್ದೇವೋಪಕಲ್ಪಿತಮ್।।
ಯುಧಿಷ್ಠಿರನು ಹೇಳಿದನು: “ಹಯಶಿರವನ್ನು ಧರಿಸಿದ್ದ ದೇವನನ್ನು ಬ್ರಹ್ಮನು ನೋಡಿದನೆಂದು ನೀವು ಹೇಳಿದಿರಲ್ಲಾ ಆ ಅಪೂರ್ವ ರೂಪವನ್ನು ದೇವನು ಯಾವ ಕಾರಣದಿಂದ ಧರಿಸಿದ್ದನು?”
12335010 ವ್ಯಾಸ ಉವಾಚ।
12335010a ಯತ್ಕಿಂ ಚಿದಿಹ ಲೋಕೇ ವೈ ದೇಹಬದ್ಧಂ ವಿಶಾಂ ಪತೇ।
12335010c ಸರ್ವಂ ಪಂಚಭಿರಾವಿಷ್ಟಂ ಭೂತೈರೀಶ್ವರಬುದ್ಧಿಜೈಃ।।
ವ್ಯಾಸನು ಹೇಳಿದನು: “ವಿಶಾಂಪತೇ! ಈ ಲೋಕದಲ್ಲಿ ದೇಹಬದ್ಧವಾಗಿ ಏನೆಲ್ಲ ಇವೆಯೂ ಅವೆಲ್ಲವೂ ಈಶ್ವರನ ಬುದ್ಧಿಯಿಂದ ಹುಟ್ಟಿದ ಪಂಚಭೂತಗಳಿಂದ ಆವಿಷ್ಟಗೊಂಡಿವೆ.
12335011a ಈಶ್ವರೋ ಹಿ ಜಗತ್ಸ್ರಷ್ಟಾ ಪ್ರಭುರ್ನಾರಾಯಣೋ ವಿರಾಟ್।
12335011c ಭೂತಾಂತರಾತ್ಮಾ ವರದಃ ಸಗುಣೋ ನಿರ್ಗುಣೋಽಪಿ ಚ।
12335011e ಭೂತಪ್ರಲಯಮವ್ಯಕ್ತಂ ಶೃಣುಷ್ವ ನೃಪಸತ್ತಮ।।
ನೃಪಸತ್ತಮ! ಪ್ರಭು ನಾರಾಯಣ ಈಶ್ವರ ವಿರಾಟನೇ ಜಗತ್ತಿನ ಸೃಷ್ಟಾ. ಅವನೇ ಭೂತಗಳ ಅಂತರಾತ್ಮ, ವರದ, ಸಗುಣ ಮತ್ತು ನಿರ್ಗುಣನೂ ಕೂಡ. ಈಗ ಅವ್ಯಕ್ತದಲ್ಲಿ ಭೂತಗಳು ಲಯಹೊಂದಿದ ವಿಷಯದ ಕುರಿತು ಕೇಳು.
12335012a ಧರಣ್ಯಾಮಥ ಲೀನಾಯಾಮಪ್ಸು ಚೈಕಾರ್ಣವೇ ಪುರಾ।
12335012c ಜ್ಯೋತಿರ್ಭೂತೇ ಜಲೇ ಚಾಪಿ ಲೀನೇ ಜ್ಯೋತಿಷಿ ಚಾನಿಲೇ।।
12335013a ವಾಯೌ ಚಾಕಾಶಸಂಲೀನೇ ಆಕಾಶೇ ಚ ಮನೋನುಗೇ।
12335013c ವ್ಯಕ್ತೇ ಮನಸಿ ಸಂಲೀನೇ ವ್ಯಕ್ತೇ ಚಾವ್ಯಕ್ತತಾಂ ಗತೇ।।
12335014a ಅವ್ಯಕ್ತೇ ಪುರುಷಂ ಯಾತೇ ಪುಂಸಿ ಸರ್ವಗತೇಽಪಿ ಚ।
12335014c ತಮ ಏವಾಭವತ್ಸರ್ವಂ ನ ಪ್ರಾಜ್ಞಾಯತ ಕಿಂ ಚನ।।
ಹಿಂದೆ ಮಹಾಪ್ರಳಯವಾದಾಗ ಭೂಮಿಯು ನೀರಿನಲ್ಲಿ ನಯವಾಯಿತು. ಜಲವು ಜ್ಯೋತಿಯಲ್ಲಿಯೂ ಜ್ಯೋತಿಯು ವಾಯುವಿನಲ್ಲಿಯೂ, ವಾಯುವು ಆಕಾಶದಲ್ಲಿಯೂ, ಆಕಾಶವು ಮನಸ್ಸಿನಲ್ಲಿಯೂ, ಮನಸ್ಸು ವ್ಯಕ್ತದಲ್ಲಿಯೂ, ವ್ಯಕ್ತವು ಅವ್ಯಕ್ತದಲ್ಲಿಯೂ, ಅವ್ಯಕ್ತವು ಪುರುಷನಲ್ಲಿಯೂ, ಹೀಗೆ ಎಲ್ಲವೂ ಪುರುಷನಲ್ಲಿ ಲೀನವಾಗಿ ಹೋಯಿತು. ಆಗ ಎಲ್ಲೆಲ್ಲಿಯೂ ಕತ್ತಲೆಯು ತುಂಬಿತ್ತು. ಯಾವುದೂ ತಿಳಿಯುತ್ತಿರಲಿಲ್ಲ.
12335015a ತಮಸೋ ಬ್ರಹ್ಮ ಸಂಭೂತಂ ತಮೋಮೂಲಮೃತಾತ್ಮಕಮ್।
12335015c ತದ್ವಿಶ್ವಭಾವಸಂಜ್ಞಾಂತಂ ಪೌರುಷೀಂ ತನುಮಾಸ್ಥಿತಮ್।।
ಆ ತಮಸ್ಸಿನಿಂದ ಬ್ರಹ್ಮವು ಹುಟ್ಟಿತು. ತಮೋಮೂಲವಾದ ಅದು ಋತಾತ್ಮಕವಾದುದು. ಅದೇ ಪುರುಷನ ಶರೀರವನ್ನು ತಾಳಿ ವಿಶ್ವದ ಪ್ರಾದುರ್ಭಾವಕ್ಕೆ ಕಾರಣವಾಗುತ್ತದೆ.
12335016a ಸೋಽನಿರುದ್ಧ ಇತಿ ಪ್ರೋಕ್ತಸ್ತತ್ ಪ್ರಧಾನಂ ಪ್ರಚಕ್ಷತೇ।
12335016c ತದವ್ಯಕ್ತಮಿತಿ ಜ್ಞೇಯಂ ತ್ರಿಗುಣಂ ನೃಪಸತ್ತಮ।।
ನೃಪಸತ್ತಮ! ಅವನನ್ನು ಅನಿರುದ್ಧನೆಂದೆ ಹೇಳುತ್ತಾರೆ. ಅವನೇ ಪ್ರಧಾನನೆಂದೂ ಕರೆಯಲ್ಪಡುತ್ತಾನೆ. ತ್ರಿಗುಣಾತ್ಮನನಾದ ಅವ್ಯಕ್ತನೆಂದೂ ಅವನನ್ನು ತಿಳಿಯಬೇಕು.
12335017a ವಿದ್ಯಾಸಹಾಯವಾನ್ದೇವೋ ವಿಷ್ವಕ್ಸೇನೋ ಹರಿಃ ಪ್ರಭುಃ।
12335017c ಅಪ್ಸ್ವೇವ ಶಯನಂ ಚಕ್ರೇ ನಿದ್ರಾಯೋಗಮುಪಾಗತಃ।
ವಿದ್ಯೆಯ ಸಹಾಯದಿಂದ ವಿಷ್ವಕ್ಸೇನ ಹರಿ ಪ್ರಭುವು ನಿದ್ರಾಯೋಗವನ್ನು ಹೊಂದಿ ನೀರಿನಲ್ಲಿಯೇ ಮಲಗಿದನು.
12335017e ಜಗತಶ್ಚಿಂತಯನ್ಸೃಷ್ಟಿಂ ಚಿತ್ರಾಂ ಬಹುಗುಣೋದ್ಭವಾಮ್।।
12335018a ತಸ್ಯ ಚಿಂತಯತಃ ಸೃಷ್ಟಿಂ ಮಹಾನಾತ್ಮಗುಣಃ ಸ್ಮೃತಃ।
12335018c ಅಹಂಕಾರಸ್ತತೋ ಜಾತೋ ಬ್ರಹ್ಮಾ ಶುಭಚತುರ್ಮುಖಃ।
12335018e ಹಿರಣ್ಯಗರ್ಭೋ ಭಗವಾನ್ಸರ್ವಲೋಕಪಿತಾಮಹಃ।।
ಬಹುಗುಣಗಳಿಂದ ಕೂಡಿ ಉದ್ಭವಿಸುವ ಅದ್ಭುತ ಜಗತ್ತಿನ ಸೃಷ್ಟಿಯ ಕುರಿತು ಅವನು ಯೋಚಿಸುತ್ತಿದ್ದಾಗ ಅವನಿಗೆ ತನ್ನದೇ ಗುಣವಾದ ಮಹತ್ತತ್ತ್ವವೆಂಬ ಗುಣದ ಸ್ಮರಣೆಯಾಯಿತು. ಆಗ ಮಹತ್ತಿನಿಂದ ಅಹಂಕಾರವು ಹುಟ್ಟಿತು ಮತ್ತು ಅಹಂಕಾರದಿಂದ ಶುಭ ಚತುರ್ಮುಖ ಹಿರಣ್ಯಗರ್ಭ ಭಗವಾನ್ ಲೋಕಪಿತಾಮಹ ಬ್ರಹ್ಮನು ಹುಟ್ಟಿದನು.
12335019a ಪದ್ಮೇಽನಿರುದ್ಧಾತ್ಸಂಭೂತಸ್ತದಾ ಪದ್ಮನಿಭೇಕ್ಷಣಃ।
12335019c ಸಹಸ್ರಪತ್ರೇ ದ್ಯುತಿಮಾನುಪವಿಷ್ಟಃ ಸನಾತನಃ।।
12335020a ದದೃಶೇಽದ್ಭುತಸಂಕಾಶೇ ಲೋಕಾನಾಪೋಮಯಾನ್ಪ್ರಭುಃ।
12335020c ಸತ್ತ್ವಸ್ಥಃ ಪರಮೇಷ್ಠೀ ಸ ತತೋ ಭೂತಗಣಾನ್ ಸೃಜತ್।।
ಆ ಪದ್ಮನಿಭೇಕ್ಷಣನು ಪದ್ಮರೂಪಿ ಅನಿರುದ್ಧನಿಂದ ಹುಟ್ಟಿದನು. ಆ ದ್ಯುತಿಮಾನ್ ಸನಾತನನು ಸಹಸ್ರದಳದ ಪದ್ಮದಮೇಲೆ ಕುಳಿತಿದ್ದನು. ಅದ್ಭುತರೂಪವನ್ನು ಧರಿಸಿದ್ದ ಆ ಪ್ರಭುವು ಲೋಕಗಳೆಲ್ಲವೂ ಜಲಮಯವಾಗಿರುವುದನ್ನು ಕಂಡನು. ಬಳಿಕ ಸತ್ತ್ವಗುಣದಿಂದ ಆವಿರ್ಭುತನಾಗಿದ್ದ ಆ ಪರಮೇಷ್ಠಿಯು ಭೂತಗಣಗಳನ್ನು ಸೃಷ್ಟಿಸಲು ಪ್ರಾರಂಭಿಸಿದನು.
12335021a ಪೂರ್ವಮೇವ ಚ ಪದ್ಮಸ್ಯ ಪತ್ರೇ ಸೂರ್ಯಾಂಶುಸಪ್ರಭೇ।
12335021c ನಾರಾಯಣಕೃತೌ ಬಿಂದೂ ಅಪಾಮಾಸ್ತಾಂ ಗುಣೋತ್ತರೌ।।
ಸೂರ್ಯನಕಿರಣಗಳಂತೆ ಪ್ರಜ್ವಲಿಸುತ್ತಿದ್ದ ಆ ಪದ್ಮದ ಎಲೆಗಳ ಮೇಲೆ ಮೊದಲೇ ನಾರಾಯಣನು ಸೃಷ್ಟಿಸಿದ ರಜೋಗುಣ-ತಮೋಗುಣಪ್ರತೀಕಗಳಾದ ಎರಡು ನೀರಿನ ಬಿಂದುಗಳಿದ್ದವು.
12335022a ತಾವಪಶ್ಯತ್ಸ ಭಗವಾನನಾದಿನಿಧನೋಽಚ್ಯುತಃ।
12335022c ಏಕಸ್ತತ್ರಾಭವದ್ಬಿಂದುರ್ಮಧ್ವಾಭೋ ರುಚಿರಪ್ರಭಃ।।
12335023a ಸ ತಾಮಸೋ ಮಧುರ್ಜಾತಸ್ತದಾ ನಾರಾಯಣಾಜ್ಞಯಾ।
12335023c ಕಠಿನಸ್ತ್ವಪರೋ ಬಿಂದುಃ ಕೈಟಭೋ ರಾಜಸಸ್ತು ಸಃ।।
ಅನಾದಿನಿಧನ ಅಚ್ಯುತ ಭಗವಾನನು ಅವುಗಳನ್ನು ನೋಡಿದನು. ಆ ಎರಡು ಬಿಂದುಗಳಲ್ಲಿ ಜೇನುತುಪ್ಪದ ಕಾಂತಿಯಿಂದ ಕೂಡಿದ್ದ ತಮೋಗುಣದ ಒಂದು ಬಿಂದುವಿನಿಂದ ನಾರಾಯಣನ ಆಜ್ಞೆಯಿಂದ ಮಧುವು ಹುಟ್ಟಿದನು. ಅತ್ಯಂತ ಕಠಿಣವಾಗಿದ್ದ ಇನ್ನೊಂದು ರಾಜಸ ಗುಣದ ಬಿಂದುವಿನಿಂದ ಕೈಟಭನು ಹುಟ್ಟಿದನು.
12335024a ತಾವಭ್ಯಧಾವತಾಂ ಶ್ರೇಷ್ಠೌ ತಮೋರಜಗುಣಾನ್ವಿತೌ।
12335024c ಬಲವಂತೌ ಗದಾಹಸ್ತೌ ಪದ್ಮನಾಲಾನುಸಾರಿಣೌ।।
ತಮೋರಜಗುಣಾನ್ವಿತರಾದ ಆ ಇಬ್ಬರು ಶ್ರೇಷ್ಠ ಬಲವಂತರೂ ಗದೆಗಳನ್ನು ಹಿಡಿದು ಪದ್ಮದ ಕಾಂಡವನ್ನೇ ಅನುಸರಿಸಿ ಮೇಲೆ ಓಡಿ ಬಂದರು.
12335025a ದದೃಶಾತೇಽರವಿಂದಸ್ಥಂ ಬ್ರಹ್ಮಾಣಮಮಿತಪ್ರಭಮ್।
12335025c ಸೃಜಂತಂ ಪ್ರಥಮಂ ವೇದಾಂಶ್ಚತುರಶ್ಚಾರುವಿಗ್ರಹಾನ್।।
ಅವರು ಕಮಲದಮೇಲೆ ಕುಳಿತು ಪ್ರಥಮವಾಗಿ ಸುಂದರ ದೇಹಗಳುಳ್ಳ ನಾಲ್ಕು ವೇದಗಳನ್ನು ಸೃಷ್ಟಿಸುತ್ತಿದ್ದ ಅಮಿತಪ್ರಭ ಬ್ರಹ್ಮನನ್ನು ನೋಡಿದರು.
12335026a ತತೋ ವಿಗ್ರಹವಂತೌ ತೌ ವೇದಾನ್ ದೃಷ್ಟ್ವಾಸುರೋತ್ತಮೌ।
12335026c ಸಹಸಾ ಜಗೃಹತುರ್ವೇದಾನ್ ಬ್ರಹ್ಮಣಃ ಪಶ್ಯತಸ್ತದಾ।।
ಆಗ ವಿಶಾಲಕಾಯರಾಗಿದ್ದ ಆ ಅಸುರಶ್ರೇಷ್ಠರು ಬ್ರಹ್ಮನು ನೋಡುತ್ತಿದ್ದಂತೆಯೇ ಆ ವೇದಗಳನ್ನು ಒಮ್ಮೆಲೇ ಹಿಡಿದರು.
12335027a ಅಥ ತೌ ದಾನವಶ್ರೇಷ್ಠೌ ವೇದಾನ್ ಗೃಹ್ಯ ಸನಾತನಾನ್।
12335027c ರಸಾಂ ವಿವಿಶತುಸ್ತೂರ್ಣಮುದಕ್ಪೂರ್ವೇ ಮಹೋದಧೌ।।
ಆ ದಾನವಶ್ರೇಷ್ಠರು ಸನಾತನ ವೇದಗಳನ್ನು ಹಿಡಿದು ಶೀಘ್ರವಾಗಿ ಮಹಾದಧಿಯ ಈಶಾನ್ಯದಿಕ್ಕಿನಲ್ಲಿದ್ದ ಭೂಮಿಯನ್ನು ಪ್ರವೇಶಿಸಿದರು.
12335028a ತತೋ ಹೃತೇಷು ವೇದೇಷು ಬ್ರಹ್ಮಾ ಕಶ್ಮಲಮಾವಿಶತ್।
12335028c ತತೋ ವಚನಮೀಶಾನಂ ಪ್ರಾಹ ವೇದೈರ್ವಿನಾಕೃತಃ।।
ವೇದಗಳು ಹೀಗೆ ಅಪಹೃತವಾಗಲು ಖಿನ್ನನಾದ ಬ್ರಹ್ಮನು ವೇದಗಳಿಂದ ರಹಿತನಾಗಿ ಈಶಾನನಿಗೆ ಹೇಳಿದನು:
12335029a ವೇದಾ ಮೇ ಪರಮಂ ಚಕ್ಷುರ್ವೇದಾ ಮೇ ಪರಮಂ ಬಲಮ್।
12335029c ವೇದಾ ಮೇ ಪರಮಂ ಧಾಮ ವೇದಾ ಮೇ ಬ್ರಹ್ಮ ಚೋತ್ತಮಮ್।।
“ವೇದಗಳು ನನ್ನ ಪರಮ ಕಣ್ಣುಗಳು. ವೇದಗಳು ನನ್ನ ಪರಮ ಬಲ. ವೇದಗಳು ನನ್ನ ಪರಮ ಧಾಮ. ವೇದಗಳೇ ನನ್ನ ಉತ್ತಮ ಬ್ರಹ್ಮವು.
12335030a ಮಮ ವೇದಾ ಹೃತಾಃ ಸರ್ವೇ ದಾನವಾಭ್ಯಾಂ ಬಲಾದಿತಃ।
12335030c ಅಂಧಕಾರಾ ಹಿ ಮೇ ಲೋಕಾ ಜಾತಾ ವೇದೈರ್ವಿನಾಕೃತಾಃ।
12335030e ವೇದಾನೃತೇ ಹಿ ಕಿಂ ಕುರ್ಯಾಂ ಲೋಕಾನ್ವೈ ಸ್ರಷ್ಟುಮುದ್ಯತಃ।।
ನನ್ನ ವೇದಗಳೆಲ್ಲವನ್ನೂ ಬಲಾತ್ಕಾರದಿಂದ ಈ ದಾನವರಿಬ್ಬರೂ ಅಪಹರಿಸಿದ್ದಾರೆ. ವೇದಗಳಿಂದ ವಿಹೀನನಾದ ನನಗೆ ಲೋಕಗಳೆಲ್ಲವೂ ಅಂಧಕಾರಮಯವಾಗಿವೆ. ವೇದಗಳಿಲ್ಲದೇ ನಾನು ಹೇಗೆ ತಾನೇ ಲೋಕಗಳನ್ನು ಸೃಷ್ಟಿಸಲು ಪ್ರಾರಂಭಿಸಲಿ?
12335031a ಅಹೋ ಬತ ಮಹದ್ದುಃಖಂ ವೇದನಾಶನಜಂ ಮಮ।
12335031c ಪ್ರಾಪ್ತಂ ದುನೋತಿ ಹೃದಯಂ ತೀವ್ರಶೋಕಾಯ ರಂಧಯನ್।।
ಅಯ್ಯೋ! ವೇದಗಳ ನಾಶದಿಂದ ನನಗೆ ಮಹಾ ದುಃಖವೇ ಪ್ರಾಪ್ತವಾಗಿದೆ. ತೀವ್ರಶೋಕದಿಂದ ನನ್ನ ಹೃದಯವು ಪೀಡೆಗೊಳಗಾಗಿ ನೋಯುತ್ತಿದೆ.
12335032a ಕೋ ಹಿ ಶೋಕಾರ್ಣವೇ ಮಗ್ನಂ ಮಾಮಿತೋಽದ್ಯ ಸಮುದ್ಧರೇತ್।
12335032c ವೇದಾಂಸ್ತಾನಾನಯೇನ್ನಷ್ಟಾನ್ಕಸ್ಯ ಚಾಹಂ ಪ್ರಿಯೋ ಭವೇ।।
ಶೋಕಸಾಗರದಲ್ಲಿ ಮುಳುಗಿರುವ ನನ್ನನ್ನು ಇಂದು ಯಾರು ಉದ್ಧರಿಸುತ್ತಾರೆ? ನಷ್ಟವಾಗಿ ಹೋಗಿರುವ ನನ್ನ ವೇದಗಳನ್ನು ತಂದುಕೊಡುವಷ್ಟು ನಾನು ಯಾರಿಗೆ ಪ್ರಿಯನಾಗಿದ್ದೇನೆ?”
12335033a ಇತ್ಯೇವಂ ಭಾಷಮಾಣಸ್ಯ ಬ್ರಹ್ಮಣೋ ನೃಪಸತ್ತಮ।
12335033c ಹರೇಃ ಸ್ತೋತ್ರಾರ್ಥಮುದ್ಭೂತಾ ಬುದ್ಧಿರ್ಬುದ್ಧಿಮತಾಂ ವರ।
12335033e ತತೋ ಜಗೌ ಪರಂ ಜಪ್ಯಂ ಸಾಂಜಲಿಪ್ರಗ್ರಹಃ ಪ್ರಭುಃ।।
ನೃಪಸತ್ತಮ! ಬುದ್ಧಿವಂತರಲ್ಲಿ ಶ್ರೇಷ್ಠ! ಬ್ರಹ್ಮನು ಹೀಗೆ ಮಾತನಾಡುತ್ತಿರುವಾಗ ಅವನಿಗೆ ಹರಿಯನ್ನು ಸ್ತುತಿಸಬೇಕೆಂಬ ಬುದ್ಧಿಯುಂಟಾಯಿತು. ಆಗ ಪ್ರಭುವು ಕೈಮುಗಿದು ಪರಮ ಜಪ್ಯವಾದ ಸ್ತೋತ್ರದಿಂದ ಸ್ತುತಿಸಲು ಉಪಕ್ರಮಿಸಿದನು.
12335034a ನಮಸ್ತೇ ಬ್ರಹ್ಮಹೃದಯ ನಮಸ್ತೇ ಮಮ ಪೂರ್ವಜ।
12335034c ಲೋಕಾದ್ಯ ಭುವನಶ್ರೇಷ್ಠ ಸಾಂಖ್ಯಯೋಗನಿಧೇ ವಿಭೋ।।
“ಬ್ರಹ್ಮಹೃದಯ! ನಿನಗೆ ನಮಸ್ಕಾರ! ನನ್ನ ಪೂರ್ವಜ! ನಿನಗೆ ನಮಸ್ಕಾರ! ಲೋಕಗಳ ಆದಿಯೇ! ಭುವನಶ್ರೇಷ್ಠ! ಸಾಂಖ್ಯಯೋಗನಿಧೇ! ವಿಭೋ! ನಿನಗೆ ನಮಸ್ಕಾರ!
12335035a ವ್ಯಕ್ತಾವ್ಯಕ್ತಕರಾಚಿಂತ್ಯ ಕ್ಷೇಮಂ ಪಂಥಾನಮಾಸ್ಥಿತ।
12335035c ವಿಶ್ವಭುಕ್ಸರ್ವಭೂತಾನಾಮಂತರಾತ್ಮನ್ನಯೋನಿಜ।।
12335036a ಅಹಂ ಪ್ರಸಾದಜಸ್ತುಭ್ಯಂ ಲೋಕಧಾಮ್ನೇ ಸ್ವಯಂಭುವೇ।
12335036c ತ್ವತ್ತೋ ಮೇ ಮಾನಸಂ ಜನ್ಮ ಪ್ರಥಮಂ ದ್ವಿಜಪೂಜಿತಮ್।।
ವ್ಯಕ್ತಾವ್ಯಕ್ತಗಳ ಕರ್ತೃವೇ! ಅಚಿಂತ್ಯ! ಕ್ಷೇಮಮಾರ್ಗವನ್ನು ಆಶ್ರಯಿಸಿರುವವನೇ! ವಿಶ್ಚಭುಕ್! ಸರ್ವಭೂತಗಳ ಅಂತರಾತ್ಮಾ! ಅಯೋನಿಜ! ನಾನು ನಿನ್ನ ಪ್ರಸಾದದಿಂದಲೇ ಹುಟ್ಟಿದ್ದೇನೆ. ಲೋಕಧಾಮ್ನ! ಸ್ವಯಂಭುವ! ನಿನ್ನ ಮನಸ್ಸಿನಿಂದಲೇ ಪ್ರಥಮವಾಗಿ ದ್ವಿಜರಿಂದ ಪೂಜಿತನಾದ ನನ್ನ ಜನ್ಮವಾಯಿತು.
12335037a ಚಾಕ್ಷುಷಂ ವೈ ದ್ವಿತೀಯಂ ಮೇ ಜನ್ಮ ಚಾಸೀತ್ಪುರಾತನಮ್।
12335037c ತ್ವತ್ಪ್ರಸಾದಾಚ್ಚ ಮೇ ಜನ್ಮ ತೃತೀಯಂ ವಾಚಿಕಂ ಮಹತ್।।
ನಿನ್ನ ಕಣ್ಣುಗಳಿಂದ ನನ್ನ ಪುರಾತನ ಎರಡನೆಯ ಜನ್ಮವಾಯಿತು. ನಿನ್ನ ಪ್ರಸಾದದಿಂದಲೇ ನಿನ್ನ ವಾಕ್ಕಿನಿಂದ ಮಹತ್ತರವಾದ ನನ್ನ ಮೂರನೆಯ ಜನ್ಮವಾಯಿತು.
12335038a ತ್ವತ್ತಃ ಶ್ರವಣಜಂ ಚಾಪಿ ಚತುರ್ಥಂ ಜನ್ಮ ಮೇ ವಿಭೋ।
12335038c ನಾಸಿಕ್ಯಂ ಚಾಪಿ ಮೇ ಜನ್ಮ ತ್ವತ್ತಃ ಪಂಚಮಮುಚ್ಯತೇ।।
ವಿಭೋ! ನಿನ್ನ ಕಿವಿಗಳಿಂದ ಹುಟ್ಟಿ ನನ್ನ ನಾಲ್ಕನೆಯ ಜನ್ಮವನ್ನು ಪಡೆದುಕೊಂಡೆನು. ನಿನ್ನ ನಾಸಿಕನಿಂದ ಆದ ನನ್ನ ಜನ್ಮವು ಐದನೆಯದು ಎಂದು ಹೇಳುತ್ತಾರೆ.
12335039a ಅಂಡಜಂ ಚಾಪಿ ಮೇ ಜನ್ಮ ತ್ವತ್ತಃ ಷಷ್ಠಂ ವಿನಿರ್ಮಿತಮ್।
12335039c ಇದಂ ಚ ಸಪ್ತಮಂ ಜನ್ಮ ಪದ್ಮಜಂ ಮೇಽಮಿತಪ್ರಭ।।
ಅಮಿತಪ್ರಭ! ನಿನ್ನ ಅಂಡದಿಂದ ಕೂಡ ನನ್ನ ಜನ್ಮವಾಯಿತು. ಅದು ನನ್ನ ಆರನೆಯ ಜನ್ಮ. ನಿನ್ನ ಪದ್ಮದಿಂದ ಹುಟ್ಟಿದಇ ದು ನನ್ನ ಏಳನೆಯ ಜನ್ಮ.
12335040a ಸರ್ಗೇ ಸರ್ಗೇ ಹ್ಯಹಂ ಪುತ್ರಸ್ತವ ತ್ರಿಗುಣವರ್ಜಿತಃ।
12335040c ಪ್ರಥಿತಃ ಪುಂಡರೀಕಾಕ್ಷ ಪ್ರಧಾನಗುಣಕಲ್ಪಿತಃ।।
ತ್ರಿಗುಣವರ್ಜಿತ! ಸೃಷ್ಟಿ-ಸೃಷ್ಟಿಯಲ್ಲಿಯೂ ನಾನು ನಿನ್ನ ಮಗನಾಗಿಯೇ ಹುಟ್ಟುತ್ತೇನೆ. ಪುಂಡರೀಕಾಕ್ಷ! ನಾನು ಪ್ರಧಾನಗುಣಕಲ್ಪಿತನೆಂದು ಪ್ರಥಿತನಾಗಿದ್ದೇನೆ.
12335041a ತ್ವಮೀಶ್ವರಸ್ವಭಾವಶ್ಚ ಸ್ವಯಂಭೂಃ ಪುರುಷೋತ್ತಮಃ।
12335041c ತ್ವಯಾ ವಿನಿರ್ಮಿತೋಽಹಂ ವೈ ವೇದಚಕ್ಷುರ್ವಯೋತಿಗಃ।।
ನೀನು ಈಶ್ವರ! ನೀನೇ ಸ್ವಭಾವವು. ಸ್ವಯಂಭೂ. ಪುರುಷೋತ್ತಮ. ವೇದಗಳನ್ನೇ ಕಣ್ಣುಗಳನ್ನಾಗುಳ್ಳ ನಾನು ನಿನ್ನಿಂದಲೇ ನಿರ್ಮಿತನಾಗಿದ್ದೇನೆ.
12335042a ತೇ ಮೇ ವೇದಾ ಹೃತಾಶ್ಚಕ್ಷುರಂಧೋ ಜಾತೋಽಸ್ಮಿ ಜಾಗೃಹಿ।
12335042c ದದಸ್ವ ಚಕ್ಷುಷೀ ಮಹ್ಯಂ ಪ್ರಿಯೋಽಹಂ ತೇ ಪ್ರಿಯೋಽಸಿ ಮೇ।।
ನನ್ನ ಕಣ್ಣುಗಳಾಗಿದ್ದ ವೇದಗಳು ಅಪಹೃತವಾದುದರಿಂದ ನಾನು ಅಂಧನಾಗಿಬಿಟ್ಟಿದ್ದೇನೆ. ಎದ್ದೇಳು! ನನ್ನ ಕಣ್ಣುಗಳನ್ನು ನೀಡು. ನಾನು ನಿನ್ನ ಪ್ರಿಯನಾಗಿದ್ದೇನೆ. ನೀನೂ ಕೂಡ ನನ್ನ ಪ್ರಿಯನಾಗಿದ್ದೀಯೆ.”
12335043a ಏವಂ ಸ್ತುತಃ ಸ ಭಗವಾನ್ಪುರುಷಃ ಸರ್ವತೋಮುಖಃ।
12335043c ಜಹೌ ನಿದ್ರಾಮಥ ತದಾ ವೇದಕಾರ್ಯಾರ್ಥಮುದ್ಯತಃ।
12335043e ಐಶ್ವರೇಣ ಪ್ರಯೋಗೇಣ ದ್ವಿತೀಯಾಂ ತನುಮಾಸ್ಥಿತಃ।।
ಅವನು ಹೀಗೆ ಸ್ತುತಿಸಲು ಸರ್ವತೋಮುಖ ಭಗವಾನ್ ಪುರುಷನು ನಿದ್ರೆಯಿಂದ ಎಚ್ಚೆತ್ತು ವೇದಕಾರ್ಯಕ್ಕೆ ಉದ್ಯುಕ್ತನಾದನು. ತನ್ನ ಯೋಗೈಶ್ವರ್ಯದಿಂದ ಎರಡನೆಯ ದೇಹವನ್ನು ಧರಿಸಿದನು.
12335044a ಸುನಾಸಿಕೇನ ಕಾಯೇನ ಭೂತ್ವಾ ಚಂದ್ರಪ್ರಭಸ್ತದಾ।
12335044c ಕೃತ್ವಾ ಹಯಶಿರಃ ಶುಭ್ರಂ ವೇದಾನಾಮಾಲಯಂ ಪ್ರಭುಃ।।
ಅವನ ಶರೀರವು ಚಂದ್ರಪ್ರಭೆಯಿಂದ ಬೆಳಗುತ್ತಿತ್ತು. ಸುಂದರ ನಾಸಿಕದ ಶುಭ್ರ ಹಯದ ಶಿರವನ್ನು ಧರಿಸಿದ ಆ ಪ್ರಭುವು ವೇದಗಳ ಆಲಯದಂತಿದ್ದನು.
12335045a ತಸ್ಯ ಮೂರ್ಧಾ ಸಮಭವದ್ದ್ಯೌಃ ಸನಕ್ಷತ್ರತಾರಕಾ।
12335045c ಕೇಶಾಶ್ಚಾಸ್ಯಾಭವನ್ದೀರ್ಘಾ ರವೇರಂಶುಸಮಪ್ರಭಾಃ।।
ನಕ್ಷತ್ರ-ತಾರೆಗಳಿಂದ ಕೂಡಿದ ಸ್ವರ್ಗಲೋಕವೇ ಅವನ ನೆತ್ತಿಯಾಗಿತ್ತು. ಅವನ ಕೂದಲುಗಳು ನೀಳವಾಗಿಯೂ ಸೂರ್ಯನ ರಶ್ಮಿಯಂತೆ ಪ್ರಭಾಯುಕ್ತವೂ ಆಗಿದ್ದವು.
12335046a ಕರ್ಣಾವಾಕಾಶಪಾತಾಲೇ ಲಲಾಟಂ ಭೂತಧಾರಿಣೀ।
12335046c ಗಂಗಾ ಸರಸ್ವತೀ ಪುಣ್ಯಾ2 ಭ್ರುವಾವಾಸ್ತಾಂ ಮಹಾನದೀ।।
ಆಕಾಶ-ಪಾತಾಳಗಳು ಅವನ ಕಿವಿಗಳಾಗಿದ್ದವು. ಭೂತಧಾರಿಣೀ ಭೂಮಿಯೇ ಅವನ ಹಣೆಯಾಗಿತ್ತು. ಮಹಾನದೀ ಪುಣ್ಯ ಗಂಗಾ-ಸರಸ್ವತಿಯರು ಅವನ ಹುಬ್ಬಾಗಿದ್ದವು.
12335047a ಚಕ್ಷುಷೀ ಸೋಮಸೂರ್ಯೌ ತೇ ನಾಸಾ ಸಂಧ್ಯಾ ಪುನಃ ಸ್ಮೃತಾ।
12335047c ಓಂಕಾರಸ್ತ್ವಥ ಸಂಸ್ಕಾರೋ ವಿದ್ಯುಜ್ಜಿಹ್ವಾ ಚ ನಿರ್ಮಿತಾ।।
ಸೋಮ-ಸೂರ್ಯರೇ ಅವನ ಕಣ್ಣುಗಳಾಗಿದ್ದವು. ಸಂಧ್ಯಾಕಾಲವು ನಾಸಿಕವಾಗಿತ್ತು. ಓಕಾರವು ಆಭರಣವಾಗಿತ್ತು. ವಿದ್ಯುತ್ತೇ ನಾಲಿಗೆಯಾಗಿತ್ತು.
12335048a ದಂತಾಶ್ಚ ಪಿತರೋ ರಾಜನ್ಸೋಮಪಾ ಇತಿ ವಿಶ್ರುತಾಃ।
12335048c ಗೋಲೋಕೋ ಬ್ರಹ್ಮಲೋಕಶ್ಚ ಓಷ್ಠಾವಾಸ್ತಾಂ ಮಹಾತ್ಮನಃ।
12335048e ಗ್ರೀವಾ ಚಾಸ್ಯಾಭವದ್ರಾಜನ್ಕಾಲರಾತ್ರಿರ್ಗುಣೋತ್ತರಾ।।
ರಾಜನ್! ಸೋಮಪರೆಂದು ವಿಶ್ರುತರಾದ ಪಿತೃಗಳು ಅವನ ಹಲ್ಲುಗಳಾಗಿದ್ದರು. ಗೋಲೋಕ-ಬ್ರಹ್ಮಲೋಕಗಳು ಆ ಮಹಾತ್ಮನ ತುಟಿಗಳಾಗಿದ್ದವು. ರಾಜನ್! ತಮೋಗುಣಮಯವಾದ ಕಾಲರಾತ್ರಿಯೇ ಅವನ ಕುತ್ತಿಗೆಯಾಗಿತ್ತು.
12335049a ಏತದ್ಧಯಶಿರಃ ಕೃತ್ವಾ ನಾನಾಮೂರ್ತಿಭಿರಾವೃತಮ್।
12335049c ಅಂತರ್ದಧೇ ಸ ವಿಶ್ವೇಶೋ ವಿವೇಶ ಚ ರಸಾಂ ಪ್ರಭುಃ।।
ಹೀಗೆ ನಾನಾಮೂರ್ತಿಗಳಿಂದ ಸಂಘಟಿತವಾದ ಹಯಶಿರನ ಆಕೃತಿಯನ್ನು ಹೊಂದಿದ ವಿಶ್ವೇಶ ಪ್ರಭುವು ರಸಾತಳವನ್ನು ಪ್ರವೇಶಿಸಿ ಅದೃಶ್ಯನಾದನು.
12335050a ರಸಾಂ ಪುನಃ ಪ್ರವಿಷ್ಟಶ್ಚ ಯೋಗಂ ಪರಮಮಾಸ್ಥಿತಃ।
12335050c ಶೈಕ್ಷಂ ಸ್ವರಂ ಸಮಾಸ್ಥಾಯ ಓಮಿತಿ ಪ್ರಾಸೃಜತ್ಸ್ವರಮ್।।
ಪರಮಯೋಗವನ್ನು ಆಶ್ರಯಿಸಿ ಅವನು ರಸಾತಳವನ್ನು ಪ್ರವೇಶಿಸಿ ಓಂಕಾರದೊಂದಿಗೆ ಶಿಕ್ಷ ಸ್ವರದಲ್ಲಿ ಸಾಮವೇದವನ್ನು ಹಾಡತೊಡಗಿದನು.
12335051a ಸ ಸ್ವರಃ ಸಾನುನಾದೀ ಚ ಸರ್ವಗಃ ಸ್ನಿಗ್ಧ ಏವ ಚ।
12335051c ಬಭೂವಾಂತರ್ಮಹೀಭೂತಃ ಸರ್ವಭೂತಗುಣೋದಿತಃ।।
ಸರ್ವತ್ರ ಪ್ರತಿಧ್ವನಿಸುತ್ತಿದ್ದ ಆ ಮನೋಹರ ಸಾಮಗಾನ ಸ್ವರವು ಸಮಸ್ತ ಪ್ರಾಣಿಗಳಿಗೂ ಗುಣಗಳನ್ನು ಉದ್ಭೋದಿಸುತ್ತಾ ಭೂಮಿಯ ಕೆಳಭಾಗದಲ್ಲಿದ್ದ ರಸಾತಳದಲ್ಲಿ ವ್ಯಾಪಿಸಿತು.
12335052a ತತಸ್ತಾವಸುರೌ ಕೃತ್ವಾ ವೇದಾನ್ಸಮಯಬಂಧನಾನ್।
12335052c ರಸಾತಲೇ ವಿನಿಕ್ಷಿಪ್ಯ ಯತಃ ಶಬ್ದಸ್ತತೋ ದ್ರುತೌ।।
ಆಗ ಆ ಅಸುರರು ವೇದಗಳನ್ನು ಕಾಲಪಾಶಗಳಿಂದ ಬಂಧಿಸಿ ರಸಾತಳದಲ್ಲಿ ಬಚ್ಚಿಟ್ಟು ಸಾಮಗಾನದ ಶಬ್ಧವು ಕೇಳಿಬರುತ್ತಿದ್ದ ಕಡೆ ಧಾವಿಸಿದರು.
12335053a ಏತಸ್ಮಿನ್ನಂತರೇ ರಾಜನ್ದೇವೋ ಹಯಶಿರೋಧರಃ।
12335053c ಜಗ್ರಾಹ ವೇದಾನಖಿಲಾನ್ರಸಾತಲಗತಾನ್ ಹರಿಃ।
12335053e ಪ್ರಾದಾಚ್ಚ ಬ್ರಹ್ಮಣೇ ಭೂಯಸ್ತತಃ ಸ್ವಾಂ ಪ್ರಕೃತಿಂ ಗತಃ।।
ರಾಜನ್! ಈ ಮಧ್ಯದಲ್ಲಿ ದೇವ ಹಯಶಿರೋಧರ ಹರಿಯು ರಸಾತಳದಲ್ಲಿದ್ದ ಅಖಿಲ ವೇದಗಳನ್ನೂ ತೆಗೆದುಕೊಂಡು ಬ್ರಹ್ಮನಿಗೆ ಕೊಟ್ಟು ಪುನಃ ತನ್ನ ಮೂಲ ಪ್ರಕೃತಿಯನ್ನೇ ಹೊಂದಿದನು.
12335054a ಸ್ಥಾಪಯಿತ್ವಾ ಹಯಶಿರ ಉದಕ್ಪೂರ್ವೇ ಮಹೋದಧೌ।
12335054c ವೇದಾನಾಮಾಲಯಶ್ಚಾಪಿ ಬಭೂವಾಶ್ವಶಿರಾಸ್ತತಃ।।
ಮಹೋದಧಿಯ ಈಶಾನ್ಯಭಾಗದಲ್ಲಿ ವೇದಗಳಿಗೆ ಆಲಯನಾದ ಹಯಶಿರನನ್ನು ಸ್ಥಾಪಿಸಿ ಅಂದಿನಿಂದ ಅವನು ಅಶ್ವಶಿರನೆಂಬ ಹೆಸರಿನಿಂದ ವಿಖ್ಯಾತನಾದನು.
12335055a ಅಥ ಕಿಂ ಚಿದಪಶ್ಯಂತೌ ದಾನವೌ ಮಧುಕೈಟಭೌ।
12335055c ಪುನರಾಜಗ್ಮತುಸ್ತತ್ರ ವೇಗಿತೌ ಪಶ್ಯತಾಂ ಚ ತೌ।
12335055e ಯತ್ರ ವೇದಾ ವಿನಿಕ್ಷಿಪ್ತಾಸ್ತತ್ ಸ್ಥಾನಂ ಶೂನ್ಯಮೇವ ಚ।।
ಇತ್ತಲಾಗಿ ದಾನವ ಮಧು-ಕೈಟಭರು ಏನನ್ನೂ ಕಾಣದೇ ವೇಗದಿಂದ ಎಲ್ಲಿ ಅವರು ವೇದಗಳನ್ನು ಅಡಗಿಸಿಟ್ಟಿದ್ದರೋ ಅಲ್ಲಿಗೆ ಬಂದು ಆ ಸ್ಥಾನವೂ ಶೂನ್ಯವಾಗಿದ್ದುದನ್ನು ನೋಡಿದರು.
12335056a ತತ ಉತ್ತಮಮಾಸ್ಥಾಯ ವೇಗಂ ಬಲವತಾಂ ವರೌ।
12335056c ಪುನರುತ್ತಸ್ಥತುಃ ಶೀಘ್ರಂ ರಸಾನಾಮಾಲಯಾತ್ತದಾ।
12335056e ದದೃಶಾತೇ ಚ ಪುರುಷಂ ತಮೇವಾದಿಕರಂ ಪ್ರಭುಮ್।।
12335057a ಶ್ವೇತಂ ಚಂದ್ರವಿಶುದ್ಧಾಭಮನಿರುದ್ಧತನೌ ಸ್ಥಿತಮ್।
12335057c ಭೂಯೋಽಪ್ಯಮಿತವಿಕ್ರಾಂತಂ ನಿದ್ರಾಯೋಗಮುಪಾಗತಮ್।।
ಆಗ ಆ ಬಲವಂತರಲ್ಲಿ ಶ್ರೇಷ್ಠರಿಬ್ಬರೂ ಉತ್ತಮ ವೇಗದಿಂದ ರಸಾತಲದಿಂದ ಹೊರಟು ಶೀಘ್ರವಾಗಿ ಮೇಲೆ ಬಂದರು. ಅಲ್ಲಿ ಅವರು ಚಂದ್ರನ ವಿಶುದ್ಧ ಕಾಂತಿಯಿಂದ ಕೂಡಿದ್ದ ಗೌರವರ್ಣನಾದ ಅನಿರುದ್ಧನ ರೂಪದಲ್ಲಿದ್ದ ಆದಿಕರ ಪ್ರಭು ಅಮಿತವಿಕ್ರಾಂತ ಪುರುಷನು ಯೋಗನಿದ್ರೆಯಲ್ಲಿರುವುದನ್ನು ನೋಡಿದರು.
12335058a ಆತ್ಮಪ್ರಮಾಣರಚಿತೇ ಅಪಾಮುಪರಿ ಕಲ್ಪಿತೇ।
12335058c ಶಯನೇ ನಾಗಭೋಗಾಢ್ಯೇ ಜ್ವಾಲಾಮಾಲಾಸಮಾವೃತೇ।।
12335059a ನಿಷ್ಕಲ್ಮಷೇಣ ಸತ್ತ್ವೇನ ಸಂಪನ್ನಂ ರುಚಿರಪ್ರಭಮ್।
12335059c ತಂ ದೃಷ್ಟ್ವಾ ದಾನವೇಂದ್ರೌ ತೌ ಮಹಾಹಾಸಮಮುಂಚತಾಮ್।।
ನೀರಿನ ಮೇಲೆ ತನ್ನ ಶರೀರದ ಪ್ರಮಾಣಕ್ಕನುಗುಣವಾಗಿ ಕಲ್ಪಿತವಾಗಿದ್ದ, ಜ್ವಾಲಾಮಾಲೆಗಳಿಂದ ಆವೃತ ನಾಗನ ಶರೀರರೂಪದ ಹಾಸಿಗೆಯಲ್ಲಿ ಮಲಗಿದ್ದ ನಿಷ್ಕಲ್ಮಷ ಸತ್ತ್ವದಿಂದ ಸಂಪನ್ನನಾಗಿದ್ದ ಸುಂದರ ಪ್ರಭೆಯಿಂದ ಪ್ರಕಾಶಿಸುತ್ತಿದ್ದ ಅವನನ್ನು ನೋಡಿ ಆ ಇಬ್ಬರು ದಾನವೇಂದ್ರರೂ ಅಟ್ಟಹಾಸದಿಂದ ನಗತೊಡಗಿದರು.
12335060a ಊಚತುಶ್ಚ ಸಮಾವಿಷ್ಟೌ ರಜಸಾ ತಮಸಾ ಚ ತೌ।
12335060c ಅಯಂ ಸ ಪುರುಷಃ ಶ್ವೇತಃ ಶೇತೇ ನಿದ್ರಾಮುಪಾಗತಃ।।
12335061a ಅನೇನ ನೂನಂ ವೇದಾನಾಂ ಕೃತಮಾಹರಣಂ ರಸಾತ್।
12335061c ಕಸ್ಯೈಷ ಕೋ ನು ಖಲ್ವೇಷ ಕಿಂ ಚ ಸ್ವಪಿತಿ ಭೋಗವಾನ್।।
ರಜೋ ಮತ್ತು ತಮೋಗುಣಗಳಿಂದ ಸಮಾವಿಷ್ಟರಾಗಿದ್ದ ಅವರಿಬ್ಬರೂ ಮಾತನಾಡಿಕೊಂಡರು: “ನಿದ್ರಾವಶನಾಗಿ ಮಲಗಿರುವ ಈ ಶ್ವೇತ ಪುರುಷನೇ ರಸಾತಲದಿಂದ ವೇದಗಳನ್ನು ಅಪಹರಿಸಿದನು. ಸರ್ಪಮೇಲೆ ಮಲಗಿರುವ ಇವನು ಯಾರ ಮಗನು? ಯಾರಿರಬಹುದು?”
12335062a ಇತ್ಯುಚ್ಚಾರಿತವಾಕ್ಯೌ ತೌ ಬೋಧಯಾಮಾಸತುರ್ಹರಿಮ್।
12335062c ಯುದ್ಧಾರ್ಥಿನೌ ತು ವಿಜ್ಞಾಯ ವಿಬುದ್ಧಃ ಪುರುಷೋತ್ತಮಃ।।
12335063a ನಿರೀಕ್ಷ್ಯ ಚಾಸುರೇಂದ್ರೌ ತೌ ತತೋ ಯುದ್ಧೇ ಮನೋ ದಧೇ।
ಹೀಗೆ ಮಾತನಾಡಿಕೊಳ್ಳುತ್ತಾ ಅವರಿಬ್ಬರೂ ಹರಿಯನ್ನು ಎಬ್ಬಿಸತೊಡಗಿದರು. ಎಚ್ಚೆದ್ದ ಪುರುಷೋತ್ತಮನು ಆ ಅಸುರೇಂದ್ರರಿಬ್ಬರನ್ನೂ ಅವರು ಯುದ್ಧಮಾಡುವ ಇಚ್ಛೆಯುಳ್ಳವರಾಗಿರುವರೆಂಬುದನ್ನು ತಿಳಿದು ತಾನೂ ಅವರೊಡನೆ ಯುದ್ಧಮಾಡಲು ನಿಶ್ಚಯಿಸಿದನು.
12335063c ಅಥ ಯುದ್ಧಂ ಸಮಭವತ್ತಯೋರ್ನಾರಾಯಣಸ್ಯ ಚ।।
12335064a ರಜಸ್ತಮೋವಿಷ್ಟತನೂ ತಾವುಭೌ ಮಧುಕೈಟಭೌ।
12335064c ಬ್ರಹ್ಮಣೋಪಚಿತಿಂ ಕುರ್ವನ್ ಜಘಾನ ಮಧುಸೂದನಃ।।
ಆಗ ಅವರಿಬ್ಬರೊಂದಿಗೆ ನಾರಾಯಣನ ಯುದ್ಧವು ನಡೆಯಿತು. ಬ್ರಹ್ಮನಿಗೆ ಅಭ್ಯುದಯವನ್ನುಂಟುಮಾಡುತ್ತಾ ಮಧುಸೂದನನು ರಜಸ್ಸು-ತಮೋಗುಣಗಳಿಂದ ವ್ಯಾಪ್ತ ಶರೀರಗಳನ್ನು ಪಡೆದಿದ್ದ ಆ ಮಧುಕೈಟಭರನ್ನು ಸಂಹರಿಸಿದನು.
12335065a ತತಸ್ತಯೋರ್ವಧೇನಾಶು ವೇದಾಪಹರಣೇನ ಚ।
12335065c ಶೋಕಾಪನಯನಂ ಚಕ್ರೇ ಬ್ರಹ್ಮಣಃ ಪುರುಷೋತ್ತಮಃ।।
ಹೀಗೆ ಅವರನ್ನು ವಧಿಸಿ ವೇದಗಳನ್ನು ತಂದುಕೊಟ್ಟು ಬ್ರಹ್ಮನ ಶೋಕವನ್ನು ಹೋಗಲಾಡಿಸಿದನು.
12335066a ತತಃ ಪರಿವೃತೋ ಬ್ರಹ್ಮಾ ಹತಾರಿರ್ವೇದಸತ್ಕೃತಃ।
12335066c ನಿರ್ಮಮೇ ಸ ತದಾ ಲೋಕಾನ್ಕೃತ್ಸ್ನಾನ್ಸ್ಥಾವರಜಂಗಮಾನ್।।
ಶತ್ರುಗಳು ಹತರಾಗಲು ವೇದಗಳಿಂದ ಪರಿವೃತನಾಗಿ ಸತ್ಕೃತನಾದ ಬ್ರಹ್ಮನು ಯುಕ್ತವಾದ ಸಕಲ ಲೋಕಗಳನ್ನೂ, ಸ್ಥಾವರ ಜಂಗಮಗಳನ್ನೂ ಸೃಷ್ಟಿಸಿದನು.
12335067a ದತ್ತ್ವಾ ಪಿತಾಮಹಾಯಾಗ್ರ್ಯಾಂ ಬುದ್ಧಿಂ ಲೋಕವಿಸರ್ಗಿಕೀಮ್।
12335067c ತತ್ರೈವಾಂತರ್ದಧೇ ದೇವೋ ಯತ ಏವಾಗತೋ ಹರಿಃ।।
ಪಿತಾಮಹನಿಗೆ ಲೋಕಸೃಷ್ಟಿಗೆ ಶ್ರೇಷ್ಠ ಬುದ್ಧಿಯನ್ನು ದಯಪಾಲಿಸಿ ದೇವ ಹರಿಯು ಅಂತರ್ಗತನಾಗಿ ಎಲ್ಲಿಂದ ಬಂದಿದ್ದನೋ ಅಲ್ಲಿಗೆ ಹೊರಟುಹೋದನು.
12335068a ತೌ ದಾನವೌ ಹರಿರ್ಹತ್ವಾ ಕೃತ್ವಾ ಹಯಶಿರಸ್ತನುಮ್।
12335068c ಪುನಃ ಪ್ರವೃತ್ತಿಧರ್ಮಾರ್ಥಂ ತಾಮೇವ ವಿದಧೇ ತನುಮ್।।
ಹಯಶಿರನ ಶರೀರವನ್ನು ಧರಿಸಿ ಹರಿಯು ಆ ದಾನವರಿಬ್ಬರನ್ನೂ ಸಂಹರಿಸಿ ಪ್ರವೃತ್ತಿಧರ್ಮವನ್ನು ಸ್ಥಾಪಿಸಲು ಪುನಃ ಅದೇ ಹಯಗ್ರೀವನ ರೂಪವನ್ನು ತಾಳಿದನು.
12335069a ಏವಮೇಷ ಮಹಾಭಾಗೋ ಬಭೂವಾಶ್ವಶಿರಾ ಹರಿಃ।
12335069c ಪೌರಾಣಮೇತದಾಖ್ಯಾತಂ ರೂಪಂ ವರದಮೈಶ್ವರಮ್।।
ಹೀಗೆ ಮಹಾಭಾಗ ಹರಿಯು ಅಶ್ವಶಿರನಾದನು. ವರದಾಯಕವಾದ ಅವನ ಈ ಈಶ್ವರ ರೂಪವು ಪುರಾಣಗಳಲ್ಲಿ ಪ್ರಸಿದ್ಧವಾದುದು.
12335070a ಯೋ ಹ್ಯೇತದ್ಬ್ರಾಹ್ಮಣೋ ನಿತ್ಯಂ ಶೃಣುಯಾದ್ಧಾರಯೇತ ವಾ।
12335070c ನ ತಸ್ಯಾಧ್ಯಯನಂ ನಾಶಮುಪಗಚ್ಚೇತ್ಕದಾ ಚನ।।
ಯಾವ ಬ್ರಾಹ್ಮಣನು ನಿತ್ಯವೂ ಇದನ್ನು ಕೇಳುತ್ತಾನೋ ಅಥವಾ ಸ್ಮರಿಸಿಕೊಳ್ಳುತ್ತಾನೋ ಅವನ ಅಧ್ಯಯನವು ಎಂದೂ ನಾಶವಾಗುವುದಿಲ್ಲ.
12335071a ಆರಾಧ್ಯ ತಪಸೋಗ್ರೇಣ ದೇವಂ ಹಯಶಿರೋಧರಮ್।
12335071c ಪಾಂಚಾಲೇನ ಕ್ರಮಃ ಪ್ರಾಪ್ತೋ ರಾಮೇಣ3 ಪಥಿ ದೇಶಿತೇ।।
ಪಾಂಚಾಲದೇಶದ ಗಾಲವ ಮುನಿಯು ರಾಮನು ಉಪದೇಶಿಸಿದ ಮಾರ್ಗದಲ್ಲಿ ಹಯಗ್ರೀವನನ್ನು ಉಗ್ರ ತಪಸ್ಸಿನಿಂದ ಆರಾಧಿಸಿ ಕ್ರಮಪಾಠವನ್ನು ಪಡೆದುಕೊಂಡನು.
12335072a ಏತದ್ಧಯಶಿರೋ ರಾಜನ್ನಾಖ್ಯಾನಂ ತವ ಕೀರ್ತಿತಮ್।
12335072c ಪುರಾಣಂ ವೇದಸಮಿತಂ ಯನ್ಮಾಂ ತ್ವಂ ಪರಿಪೃಚ್ಚಸಿ।।
ರಾಜನ್! ನೀನು ನನ್ನಲ್ಲಿ ಕೇಳಿದ ಪುರಾಣವೇದಸಮಿತವಾದ ಹಯಶಿರನ ಆಖ್ಯಾನವಿದು.
12335073a ಯಾಂ ಯಾಮಿಚ್ಚೇತ್ತನುಂ ದೇವಃ ಕರ್ತುಂ ಕಾರ್ಯವಿಧೌ ಕ್ವ ಚಿತ್।
12335073c ತಾಂ ತಾಂ ಕುರ್ಯಾದ್ವಿಕುರ್ವಾಣಃ ಸ್ವಯಮಾತ್ಮಾನಮಾತ್ಮನಾ।।
ದೇವನು ಯಾವ ಯಾವ ಕಾರ್ಯಸಿದ್ಧಿಗೆ ಯಾವ ಯಾವ ಶರೀರವನ್ನು ಧರಿಸಲು ಇಚ್ಛಿಸುವನೋ ಆಯಾ ಕಾರ್ಯಗಳನ್ನು ಮಾಡುವ ಸಮಯದಲ್ಲಿ ನನಗಿಷ್ಟವಾದ ಆಯಾ ಶರೀರವನ್ನು ತನ್ನಿಂದಲೇ ಪ್ರಕಟಪಡಿಸುತ್ತಾನೆ.
12335074a ಏಷ ವೇದನಿಧಿಃ ಶ್ರೀಮಾನೇಷ ವೈ ತಪಸೋ ನಿಧಿಃ।
12335074c ಏಷ ಯೋಗಶ್ಚ ಸಾಂಖ್ಯಂ ಚ ಬ್ರಹ್ಮ ಚಾಗ್ರ್ಯಂ ಹರಿರ್ವಿಭುಃ।।
ಇವನೇ ವೇದನಿಧಿ. ಈ ಶ್ರೀಮಾನನೇ ತಪಸ್ಸಿನ ನಿಧಿ. ಇವನೇ ಯೋಗ, ಸಾಂಖ್ಯ, ಬ್ರಹ್ಮ, ಶ್ರೇಷ್ಠ ಹವಿಸ್ಸು ಮತ್ತು ವಿಭು.
12335075a ನಾರಾಯಣಪರಾ ವೇದಾ ಯಜ್ಞಾ ನಾರಾಯಣಾತ್ಮಕಾಃ।
12335075c ತಪೋ ನಾರಾಯಣಪರಂ ನಾರಾಯಣಪರಾ ಗತಿಃ।।
ವೇದಗಳೆಲ್ಲವೂ ನಾರಾಯಣಪರವಾಗಿಯೇ ಇವೆ. ಯಜ್ಞಗಳು ನಾರಾಯಣನ ಸ್ವರೂಪಗಳೇ ಆಗಿವೆ. ತಪಸ್ಸಿನ ಪರಮ ಫಲವೂ ನಾರಾಯಣನೇ. ನಾರಾಯಣನೇ ಪರಮ ಗತಿಯೂ ಆಗಿದ್ದಾನೆ.
12335076a ನಾರಾಯಣಪರಂ ಸತ್ಯಮೃತಂ ನಾರಾಯಣಾತ್ಮಕಮ್।
12335076c ನಾರಾಯಣಪರೋ ಧರ್ಮಃ ಪುನರಾವೃತ್ತಿದುರ್ಲಭಃ।।
ನಾರಾಯಣನೇ ಪರಮ ಸತ್ಯ. ಋತವು ನಾರಾಯಣಾತ್ಮಕವು. ಪುನರಾವೃತ್ತಿದುರ್ಲಭವಾದ ನಿವೃತ್ತಿ ಧರ್ಮವೂ ನಾರಾಯಣನೇ.
12335077a ಪ್ರವೃತ್ತಿಲಕ್ಷಣಶ್ಚೈವ ಧರ್ಮೋ ನಾರಾಯಣಾತ್ಮಕಃ।
12335077c ನಾರಾಯಣಾತ್ಮಕೋ ಗಂಧೋ ಭೂಮೌ ಶ್ರೇಷ್ಠತಮಃ ಸ್ಮೃತಃ।।
ಪ್ರವೃತ್ತಿಲಕ್ಷಣ ಧರ್ಮವೂ ಕೂಡ ನಾರಾಯಣಾತ್ಮಕವು. ಭೂಮಿಯ ಶ್ರೇಷ್ಠ ಗುಣವಾದ ಗಂಧವೂ ನಾರಾಯಣಾತ್ಮಕವೆಂದು ಹೇಳಲ್ಪಟ್ಟಿದೆ.
12335078a ಅಪಾಂ ಚೈವ ಗುಣೋ ರಾಜನ್ರಸೋ ನಾರಾಯಣಾತ್ಮಕಃ।
12335078c ಜ್ಯೋತಿಷಾಂ ಚ ಗುಣೋ ರೂಪಂ ಸ್ಮೃತಂ ನಾರಾಯಣಾತ್ಮಕಮ್।।
ರಾಜನ್! ಜಲದ ಗುಣವಾದ ರಸವೂ ನಾರಾಯಣಾತ್ಮಕವು. ಜ್ಯೋತಿಗಳ ಗುಣವಾದ ರೂಪವೂ ನಾರಾಯಣಾತ್ಮಕವೆಂದು ಹೇಳುತ್ತಾರೆ.
12335079a ನಾರಾಯಣಾತ್ಮಕಶ್ಚಾಪಿ ಸ್ಪರ್ಶೋ ವಾಯುಗುಣಃ ಸ್ಮೃತಃ।
12335079c ನಾರಾಯಣಾತ್ಮಕಶ್ಚಾಪಿ ಶಬ್ದ ಆಕಾಶಸಂಭವಃ।।
ವಾಯುವಿನ ಗುಣವಾದ ಸ್ಪರ್ಶವೂ ಕೂಡ ನಾರಾಯಣಾತ್ಮಕವೆಂದು ಹೇಳಲ್ಪಟ್ಟಿದೆ. ಆಕಾಶಸಂಭವವಾದ ಶಬ್ದವೂ ಕೂಡ ನಾರಾಯಣಾತ್ಮಕವು.
12335080a ಮನಶ್ಚಾಪಿ ತತೋ ಭೂತಮವ್ಯಕ್ತಗುಣಲಕ್ಷಣಮ್।
12335080c ನಾರಾಯಣಪರಃ ಕಾಲೋ ಜ್ಯೋತಿಷಾಮಯನಂ ಚ ಯತ್।।
ಅವ್ಯಕ್ತ ಗುಣಲಕ್ಷಣಗಳನನ್ನು ಹೊಂದಿರುವ ಮನಸ್ಸೆಂಬ ವಸ್ತುವೂ, ಕಾಲ ಮತ್ತು ನಕ್ಷತ್ರಮಂಡಲಗಳೂ ನಾರಾಯಣನನ್ನೇ ಆಶ್ರಯಿಸಿವೆ.
12335081a ನಾರಾಯಣಪರಾ ಕೀರ್ತಿಃ ಶ್ರೀಶ್ಚ ಲಕ್ಷ್ಮೀಶ್ಚ ದೇವತಾಃ।
12335081c ನಾರಾಯಣಪರಂ ಸಾಂಖ್ಯಂ ಯೋಗೋ ನಾರಾಯಣಾತ್ಮಕಃ।।
ಕೀರ್ತಿ, ಶ್ರೀ, ಲಕ್ಷ್ಮಿ ಮತ್ತು ದೇವತೆಗಳು ನಾರಾಯಣನನ್ನೇ ಆಶ್ರಯಿಸಿವೆ. ನಾರಾಯಣಪರವಾದ ಸಾಂಖ್ಯ ಯೋಗವೂ ನಾರಾಯಣಾತ್ಮಕವು.
12335082a ಕಾರಣಂ ಪುರುಷೋ ಯೇಷಾಂ ಪ್ರಧಾನಂ ಚಾಪಿ ಕಾರಣಮ್।
12335082c ಸ್ವಭಾವಶ್ಚೈವ ಕರ್ಮಾಣಿ ದೈವಂ ಯೇಷಾಂ ಚ ಕಾರಣಮ್।।
ಇವೆಲ್ಲವಕ್ಕೂ ಪುರುಷನು ಕಾರಣನು. ಪ್ರಧಾನವೂ ಕಾರಣವು. ಸ್ವಭಾವ-ಕರ್ಮಗಳೂ ಕಾರಣಗಳು. ಆದರೆ ಇವೆಲ್ಲವಕ್ಕೂ ದೇವ ನಾರಾಯಣನೇ ಕಾರಣನು.
412335083a ಪಂಚಕಾರಣಸಂಖ್ಯಾತೋ ನಿಷ್ಠಾ ಸರ್ವತ್ರ ವೈ ಹರಿಃ। 12335083c ತತ್ತ್ವಂ ಜಿಜ್ಞಾಸಮಾನಾನಾಂ ಹೇತುಭಿಃ ಸರ್ವತೋಮುಖೈಃ।।
12335084a ತತ್ತ್ವಮೇಕೋ ಮಹಾಯೋಗೀ ಹರಿರ್ನಾರಾಯಣಃ ಪ್ರಭುಃ।
ಐದು ಕಾರಣಗಳ ರೂಪದಲ್ಲಿ ಸರ್ವತ್ರ ಹರಿಯೇ ಇದ್ದಾನೆ. ಸರ್ವತೋಮುಖ ಕಾರಣಗಳಿಂದ ತತ್ತ್ವವನ್ನು ತಿಳಿಯಲು ಇಚ್ಛಿಸುವವರಿಗೆ ಮಹಾಯೋಗಿ ಪ್ರಭು ಹರಿ ನಾರಾಯಣನೇ ಜ್ಞೇಯನಾದ ಏಕೈಕ ಮಹಾತತ್ತ್ವವು.
12335084c ಸಬ್ರಹ್ಮಕಾನಾಂ ಲೋಕಾನಾಮೃಷೀಣಾಂ ಚ ಮಹಾತ್ಮನಾಮ್।।
12335085a ಸಾಂಖ್ಯಾನಾಂ ಯೋಗಿನಾಂ ಚಾಪಿ ಯತೀನಾಮಾತ್ಮವೇದಿನಾಮ್।
12335085c ಮನೀಷಿತಂ ವಿಜಾನಾತಿ ಕೇಶವೋ ನ ತು ತಸ್ಯ ತೇ।।
ಬ್ರಹ್ಮಾದಿ ದೇವತೆಗಳ, ಲೋಕಗಳ, ಮಹಾತ್ಮ ಋಷಿಗಳ, ಸಾಂಖ್ಯಯೋಗಿಗಳ, ಆತ್ಮವೇದೀ ಯತಿಗಳ ಅಂತರಂಗವನ್ನು ಕೇಶವನು ತಿಳಿದಿರುತ್ತಾನೆ. ಆದರೆ ಇವರಲ್ಲಿ ಯಾರೂ ಅವನ ಅಂತರಂಗವನ್ನು ತಿಳಿದಿಲ್ಲ.
12335086a ಯೇ ಕೇ ಚಿತ್ಸರ್ವಲೋಕೇಷು ದೈವಂ ಪಿತ್ರ್ಯಂ ಚ ಕುರ್ವತೇ।
12335086c ದಾನಾನಿ ಚ ಪ್ರಯಚ್ಚಂತಿ ತಪ್ಯಂತಿ ಚ ತಪೋ ಮಹತ್।।
12335087a ಸರ್ವೇಷಾಮಾಶ್ರಯೋ ವಿಷ್ಣುರೈಶ್ವರಂ ವಿಧಿಮಾಸ್ಥಿತಃ।
12335087c ಸರ್ವಭೂತಕೃತಾವಾಸೋ ವಾಸುದೇವೇತಿ ಚೋಚ್ಯತೇ।।
ಎಲ್ಲ ಲೋಕಗಳಲ್ಲಿ ಯಾವುದೇ ದೇವ ಮತ್ತು ಪಿತೃಕಾರ್ಯಗಳನ್ನು ಮಾಡುತ್ತಾರೋ, ದಾನಗಳನ್ನು ನೀಡಲಾಗುತ್ತದೆಯೋ, ಮಹಾ ತಪಸ್ಸನ್ನು ತಪಿಸಲಾಗುತ್ತದೆಯೋ, ಇವೆಲ್ಲವುಗಳ ಆಶ್ರಯನು ಓಗೈಶ್ವರ್ಯದಲ್ಲಿ ಸ್ಥಿತನಾಗಿರುವ ವಿಷ್ಣುವು. ಸರ್ವಭೂತಗಳಲ್ಲಿಯೂ ವಾಸಮಾಡುವುದರಿಂದ ಅವನನ್ನು ವಾಸುದೇವನೆಂದೂ ಕರೆಯುತ್ತಾರೆ.
12335088a ಅಯಂ ಹಿ ನಿತ್ಯಃ ಪರಮೋ ಮಹರ್ಷಿರ್ ಮಹಾವಿಭೂತಿರ್ಗುಣವಾನ್ನಿರ್ಗುಣಾಖ್ಯಃ।
12335088c ಗುಣೈಶ್ಚ ಸಂಯೋಗಮುಪೈತಿ ಶೀಘ್ರಂ ಕಾಲೋ ಯಥರ್ತಾವೃತುಸಂಪ್ರಯುಕ್ತಃ।।
ಈ ಪರಮ ಮಹರ್ಷಿಯು ನಿತ್ಯ. ಮಹಾ ವಿಭೂತಿಯುಳ್ಳವನೂ, ಗುಣವಂತನೂ ಮತ್ತು ನಿರ್ಗುಣನೆಂದೂ ಕರೆಯಲ್ಪಟ್ಟಿದ್ದಾನೆ. ಗುಣಗಳಿಂದ ರಹಿತವಾಗಿರುವ ಕಾಲವು ಹೇಗೆ ಋತುಗಳಿಗೆ ಸಂಬಂಧಿಸಿದ ಶೀತೋಷ್ಣಾದಿ ಗುಣಗಳಿಂದ ಶೀಘ್ರವಾಗಿ ಯುಕ್ತವಾಗುವುದೋ ಹಾಗೆ ಪರಮಾತ್ಮನು ನಿರ್ಗುಣನಾಗಿದ್ದರೂ ಸಮಯಗಳಲ್ಲಿ ಗುಣಗಳೊಡನೆ ಸಂಪರ್ಕಹೊಂದುತ್ತಾನೆ.
12335089a ನೈವಾಸ್ಯ ವಿಂದಂತಿ ಗತಿಂ ಮಹಾತ್ಮನೋ ನ ಚಾಗತಿಂ ಕಶ್ಚಿದಿಹಾನುಪಸ್ಯತಿ।
12335089c ಜ್ಞಾನಾತ್ಮಕಾಃ ಸಂಯಮಿನೋ ಮಹರ್ಷಯಃ ಪಶ್ಯಂತಿ ನಿತ್ಯಂ ಪುರುಷಂ ಗುಣಾಧಿಕಮ್।।
ಈ ಮಹಾತ್ಮನ ಗತಿಯನ್ನು ಯಾರೂ ತಿಳಿಯಲಾರರು. ಅವನ ಆಗಮನದ ವಿಷಯವನ್ನೂ ಯಾರೂ ಅರಿಯಲಾರರು. ಜ್ಞಾನಸ್ವರೂಪರಾಗಿರುವ ಮಹರ್ಷಿಗಳು ಮಾತ್ರ ಅನಂತಗುಣ ಸಂಪನ್ನ ನಿತ್ಯ ಆ ಪುರುಷನನ್ನು ನೋಡುತ್ತಾರೆ.”