ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 334
ಸಾರ
ನಾರಾಯಣೀಯ ಸಮಾಪ್ತಿ (1-17).
12334001 ವೈಶಂಪಾಯನ ಉವಾಚ।
12334001a ಶ್ರುತ್ವೈತನ್ನಾರದೋ ವಾಕ್ಯಂ ನರನಾರಾಯಣೇರಿತಮ್।
12334001c ಅತ್ಯಂತಭಕ್ತಿಮಾನ್ ದೇವೇ ಏಕಾಂತಿತ್ವಮುಪೇಯಿವಾನ್।।
ವೈಶಂಪಾಯನನು ಹೇಳಿದನು: “ನರನಾರಾಯಣರು ಹೇಳಿದ ಮಾತನ್ನು ಕೇಳಿ ಅತ್ಯಂತ ಭಕ್ತಿವಂತನಾದ ನಾರದನು ದೇವನಲ್ಲಿ ಏಕಾಂತಿತ್ವವನ್ನು ಹೊಂದಿದನು.
12334002a ಪ್ರೋಷ್ಯ ವರ್ಷಸಹಸ್ರಂ ತು ನರನಾರಾಯಣಾಶ್ರಮೇ।
12334002c ಶ್ರುತ್ವಾ ಭಗವದಾಖ್ಯಾನಂ ದೃಷ್ಟ್ವಾ ಚ ಹರಿಮವ್ಯಯಮ್।
12334002e ಹಿಮವಂತಂ ಜಗಾಮಾಶು ಯತ್ರಾಸ್ಯ ಸ್ವಕ ಆಶ್ರಮಃ।।
ನರನಾರಾಯಣಾಶ್ರಮದಲ್ಲಿ ಸಹಸ್ರವರ್ಷಗಳ ಪರ್ಯಂತ ಭಗವದಾಖ್ಯಾನವನ್ನು ಕೇಳಿ ಮತ್ತು ಅವ್ಯಯ ಹರಿಯನ್ನು ನೋಡಿ ನಾರದನು ತನ್ನದೇ ಆಶ್ರಮವಿದ್ದ ಹಿಮವತ್ಪರ್ವಕ್ಕೆ ತೆರಳಿದನು.
12334003a ತಾವಪಿ ಖ್ಯಾತತಪಸೌ ನರನಾರಾಯಣಾವೃಷೀ।
12334003c ತಸ್ಮಿನ್ನೇವಾಶ್ರಮೇ ರಮ್ಯೇ ತೇಪತುಸ್ತಪ ಉತ್ತಮಮ್।।
ಖ್ಯಾತತಪಸ್ವಿಗಳಾದ ನರನಾರಾಯಣ ಋಷಿಗಳೂ ಕೂಡ ಅದೇ ರಮ್ಯ ಆಶ್ರಮದಲ್ಲಿ ಉತ್ತಮ ತಪಸ್ಸನ್ನು ತಪಿಸಿದರು.
12334004a ತ್ವಮಪ್ಯಮಿತವಿಕ್ರಾಂತಃ ಪಾಂಡವಾನಾಂ ಕುಲೋದ್ವಹಃ।
12334004c ಪಾವಿತಾತ್ಮಾದ್ಯ ಸಂವೃತ್ತಃ ಶ್ರುತ್ವೇಮಾಮಾದಿತಃ ಕಥಾಮ್।।
ಅಮಿತವಿಕ್ರಾಂತನೂ ಪಾಂದವರ ಕುಲೋದ್ವಹನೂ ಆದ ನೀನೂ ಕೂಡ ಈ ಕಥೆಯನ್ನು ಮೊದಲಿನಿಂದಲೂ ಕೇಳಿ ಇಂದು ಪವಿತ್ರಾತ್ಮನಾಗಿದ್ದೀಯೆ.
12334005a ನೈವ ತಸ್ಯ ಪರೋ ಲೋಕೋ ನಾಯಂ ಪಾರ್ಥಿವಸತ್ತಮ।
12334005c ಕರ್ಮಣಾ ಮನಸಾ ವಾಚಾ ಯೋ ದ್ವಿಷ್ಯಾದ್ವಿಷ್ಣುಮವ್ಯಯಮ್।।
ಪಾರ್ಥಿವಸತ್ತಮ! ಕರ್ಮ, ಮನಸ್ಸು ಮತ್ತು ಮಾತುಗಳಿಂದ ಯಾರು ಅವ್ಯಯ ವಿಷ್ಣುವನ್ನು ದ್ವೇಷಿಸುತ್ತಾನೋ ಅವನಿಗೆ ಪರಲೋಕವೂ ಇಲ್ಲ; ಇಹಲೋಕದಲ್ಲಿಯೂ ಸುಖವಿಲ್ಲ.
12334006a ಮಜ್ಜಂತಿ ಪಿತರಸ್ತಸ್ಯ ನರಕೇ ಶಾಶ್ವತೀಃ ಸಮಾಃ।
12334006c ಯೋ ದ್ವಿಷ್ಯಾದ್ವಿಬುಧಶ್ರೇಷ್ಠಂ ದೇವಂ ನಾರಾಯಣಂ ಹರಿಮ್।।
ವಿಬುಧಶ್ರೇಷ್ಠ ದೇವ ನಾರಾಯಣ ಹರಿಯನ್ನು ಯಾರು ದ್ವೇಷಿಸುತ್ತಾರೋ ಅವರ ಪಿತೃಗಳು ಶಾಶ್ವತ ವರ್ಷಗಳ ವರೆಗೆ ನರಕದಲ್ಲಿ ಮುಳುಗಿರುತ್ತಾರೆ.
12334007a ಕಥಂ ನಾಮ ಭವೇದ್ದ್ವೇಷ್ಯ ಆತ್ಮಾ ಲೋಕಸ್ಯ ಕಸ್ಯ ಚಿತ್।
12334007c ಆತ್ಮಾ ಹಿ ಪುರುಷವ್ಯಾಘ್ರ ಜ್ಞೇಯೋ ವಿಷ್ಣುರಿತಿ ಸ್ಥಿತಿಃ।।
ಲೋಕದಲ್ಲಿ ತಮ್ಮನ್ನು ತಾವೇ ಹೇಗೆ ದ್ವೇಷಿಸಿಯಾರು? ಪುರುಷವ್ಯಾಘ್ರ! ವಿಷ್ಣುವು ಲೋಕಕ್ಕೇ ಆತ್ಮನು ಎಂದು ತಿಳಿ.
12334008a ಯ ಏಷ ಗುರುರಸ್ಮಾಕಮೃಷಿರ್ಗಂಧವತೀಸುತಃ।
12334008c ತೇನೈತತ್ಕಥಿತಂ ತಾತ ಮಾಹಾತ್ಮ್ಯಂ ಪರಮಾತ್ಮನಃ।
12334008e ತಸ್ಮಾಚ್ಚ್ರುತಂ ಮಯಾ ಚೇದಂ ಕಥಿತಂ ಚ ತವಾನಘ।।
ಅನಘ! ಅಯ್ಯಾ! ನಮ್ಮ ಗುರು ಋಷಿ ಗಂಧವತೀಸುತನು ನಮಗೆ ಈ ಪರಮಾತ್ಮನ ಮಹಾತ್ಮ್ಯೆಯನ್ನು ಹೇಳಿದ್ದರು. ಅವನಿಂದ ಕೇಳಿದುದನ್ನು ನಾನು ನಿನಗೆ ಹೇಳಿದ್ದೇನೆ.
12334009a ಕೃಷ್ಣದ್ವೈಪಾಯನಂ ವ್ಯಾಸಂ ವಿದ್ಧಿ ನಾರಾಯಣಂ ಪ್ರಭುಮ್।
12334009c ಕೋ ಹ್ಯನ್ಯಃ ಪುರುಷವ್ಯಾಘ್ರ ಮಹಾಭಾರತಕೃದ್ಭವೇತ್।
12334009e ಧರ್ಮಾನ್ನಾನಾವಿಧಾಂಶ್ಚೈವ ಕೋ ಬ್ರೂಯಾತ್ತಮೃತೇ ಪ್ರಭುಮ್।।
ಕೃಷ್ಣದ್ವೈಪಾಯನ ವ್ಯಾಸನು ಪ್ರಭು ನಾರಾಯಣ ಎಂದು ತಿಳಿ. ಪುರುಷವ್ಯಾಘ್ರ! ಬೇರೆ ಯಾರು ತಾನೇ ಮಹಾಭಾರತವನ್ನು ರಚಿಸಬಹುದಾಗಿತ್ತು? ಆ ಪ್ರಭುವಿನ ಹೊರತಾಗಿ ಬೇರೆ ಯಾರು ತಾನೇ ನಾನಾವಿಧದ ಧರ್ಮಗಳ ಕುರಿತು ಹೇಳಬಹುದು?
12334010a ವರ್ತತಾಂ ತೇ ಮಹಾಯಜ್ಞೋ ಯಥಾ ಸಂಕಲ್ಪಿತಸ್ತ್ವಯಾ।
12334010c ಸಂಕಲ್ಪಿತಾಶ್ವಮೇಧಸ್ತ್ವಂ ಶ್ರುತಧರ್ಮಶ್ಚ ತತ್ತ್ವತಃ।।
ನೀನು ಸಂಕಲ್ಪಿಸಿದಂತೆಯೇ ಈ ಮಹಾಯಜ್ಞವು ನಡೆಯಲಿ. ನೀನು ಅಶ್ವಮೇಧದ ಸಂಕಲ್ಪವನ್ನು ಮಾಡಿದ್ದೀಯೆ. ತತ್ತ್ವತಃ ಧರ್ಮವನ್ನೂ ಕೇಳಿ ತಿಳಿದುಕೊಂಡಿದ್ದೀಯೆ.””
112334011a ಏತತ್ತು ಮಹದಾಖ್ಯಾನಂ ಶ್ರುತ್ವಾ ಪಾರಿಕ್ಷಿತೋ ನೃಪಃ।
12334011c ತತೋ ಯಜ್ಞಸಮಾಪ್ತ್ಯರ್ಥಂ ಕ್ರಿಯಾಃ ಸರ್ವಾಃ ಸಮಾರಭತ್।।
ಈ ಮಹಾ ಆಖ್ಯಾನವನ್ನು ಕೇಳಿ ನೃಪ ಪಾರಿಕ್ಷಿತನು ಯಜ್ಞವನ್ನು ಸಮಾಪ್ತಗೊಳಿಸಲು ಎಲ್ಲ ಕ್ರಿಯೆಗಳನ್ನೂ ಪ್ರಾರಂಭಿಸಿದನು.
212334012a ನಾರಾಯಣೀಯಮಾಖ್ಯಾನಮೇತತ್ತೇ ಕಥಿತಂ ಮಯಾ।
12334012c ನಾರದೇನ ಪುರಾ ರಾಜನ್ಗುರವೇ ಮೇ ನಿವೇದಿತಮ್।
12334012e ಋಷೀಣಾಂ ಪಾಂಡವಾನಾಂ ಚ ಶೃಣ್ವತೋಃ ಕೃಷ್ಣಭೀಷ್ಮಯೋಃ।।
ವೈಶಂಪಾಯನನು ಹೇಳಿದನು: “ರಾಜನ್! ನಾನು ಹೇಳಿದ ಈ ನಾರಾಯಣೀಯ ಆಖ್ಯಾನವನ್ನು ಹಿಂದೆ ನಾರದನು ಋಷಿಗಳೂ, ಪಾಂಡವರೂ, ಕೃಷ್ಣ-ಭೀಷ್ಮರೂ ಕೇಳುತ್ತಿರುವಾಗ ನನ್ನ ಗುರು ವ್ಯಾಸನಿಗೆ ಹೇಳಿದ್ದನು.
12334013a ಸ ಹಿ ಪರಮಗುರುರ್ಭುವನಪತಿರ್ ಧರಣಿಧರಃ ಶಮನಿಯಮನಿಧಿಃ।
12334013c ಶ್ರುತಿವಿನಯನಿಧಿರ್ದ್ವಿಜಪರಮಹಿತಸ್ ತವ ಭವತು ಗತಿರ್ಹರಿರಮರಹಿತಃ।।
ಅವನೇ ಪರಮ ಗುರು. ಭುವನ ಪತಿ, ಧರಣೀಧರ. ಶಮನಿಯಮ ನಿಧಿ. ಶೃತಿವಿನಯ ನಿಧಿಯೂ ದ್ವಿಜರ ಪರಮ ಹಿತೈಷಿಯೂ ಅಮರರ ಹಿತೈಷಿಯೂ ಆದ ಹರಿಯು ನಿನಗೆ ಆಶ್ರಯನಾಗಲಿ.
312334014a ತಪಸಾಂ ನಿಧಿಃ ಸುಮಹತಾಂ ಮಹತೋ ಯಶಸಶ್ಚ ಭಾಜನಮರಿಷ್ಟಕಹಾ।
12334014c ಏಕಾಂತಿನಾಂ ಶರಣದೋಽಭಯದೋ ಗತಿದೋಽಸ್ತು ವಃ ಸ ಮಖಭಾಗಹರಃ।।
ತಪಸ್ಸಿನ ನಿಧಿ, ಮಹತ್ತರವಾದವುಗಳಿಗಿಂತಲೂ ಮಹತ್ತರನಾದ, ಯಶೋವಂತ, ಅರಿಷ್ಟಗಳನ್ನು ಹೋಗಲಾಡಿಸುವ, ಏಕಾಂತಿಗಳ ಶರಣದ, ಅಭಯದಾಯಕ, ಮಖಭಾಗಹರನಾದ ಅವನು ನಿನಗೆ ಆಶ್ರಯನಾಗಲಿ.
12334015a ತ್ರಿಗುಣಾತಿಗಶ್ಚತುಷ್ಪಂಚಧರಃ4 ಪೂರ್ತೇಷ್ಟಯೋಶ್ಚ ಫಲಭಾಗಹರಃ।
12334015c ವಿದಧಾತಿ ನಿತ್ಯಮಜಿತೋಽತಿಬಲೋ ಗತಿಮಾತ್ಮಗಾಂ ಸುಕೃತಿನಾಮೃಷಿಣಾಮ್।।
ತ್ರಿಗುಣಾತಿಗನೂ, ತುಷ್ಪಂಚಧರನೂ, ಸಂಪೂರ್ಣವಾದ ಯಜ್ಞಗಳ ಫಲಭಾಗಹರನೂ, ನಿತ್ಯನೂ, ಅಜಿತನೂ, ಅತಿಬಲನೂ ಆದ ಆ ದೇವನು ಸುಕೃತ ಋಷಿಗಳಿಗೆ ಮತ್ತು ಆತ್ಮಗರಿಗೆ ಉತ್ತಮ ಗತಿಯನ್ನು ನೀಡುತ್ತಾನೆ.
12334016a ತಂ ಲೋಕಸಾಕ್ಷಿಣಮಜಂ ಪುರುಷಂ ರವಿವರ್ಣಮೀಶ್ವರಗತಿಂ ಬಹುಶಃ।
12334016c ಪ್ರಣಮಧ್ವಮೇಕಮತಯೋ ಯತಯಃ ಸಲಿಲೋದ್ಭವೋಽಪಿ ತಮೃಷಿಂ ಪ್ರಣತಃ।।
ಆ ಲೋಕಸಾಕ್ಷಿ, ಅಜ, ಪುರುಷ, ರವಿವರ್ಣ, ಈಶ್ವರ, ಅನೇಕ ಗತಿಗಳಲ್ಲಿ ಚಲಿಸುವವವನ್ನು ಒಂದೇ ಮನಸ್ಸಿನಿಂದ ಬಾರಿ ಬಾರಿ ನಮಸ್ಕರಿಸಿರಿ. ಸಲಿಲೋದ್ಭವ ಬ್ರಹ್ಮನೂ ಆ ನಾರಾಯಣ ಋಷಿಯನ್ನು ನಮಸ್ಕರಿಸುತ್ತಾನೆ.
12334017a ಸ ಹಿ ಲೋಕಯೋನಿರಮೃತಸ್ಯ ಪದಂ ಸೂಕ್ಷ್ಮಂ ಪುರಾಣಮಚಲಂ ಪರಮಮ್।
12334017c ತತ್ಸಾಂಖ್ಯಯೋಗಿಭಿರುದಾರಧೃತಂ ಬುದ್ಧ್ಯಾ ಯತಾತ್ಮಭಿರ್ವಿದಿತಂ ಸತತಮ್।।
ಅವನೇ ಲೋಕಯೋನಿ. ಅಮೃತ ಪದ. ಸೂಕ್ಷ್ಮ. ಪುರಾಣ. ಅಚಲ ಮತ್ತು ಪರಮ. ಜಿತಮನಸ್ಕರಾದ ಸಾಂಖ್ಯಯೋಗಿಗಳು ಅವನನ್ನು ಬುದ್ಧಿಯ ಮೂಲಕ ವರಿಸುತ್ತಾರೆ. ಅಂತಹ ಸನಾತನ ಶ್ರೀಹರಿಯನ್ನು ಸತತವೂ ನಮಸ್ಕರಿಸಿ.”