333: ನಾರಾಯಣೀಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 333

ಸಾರ

ನರನಾರಾಯಣರು ನಾರದನಿಗೆ ವರಾಹಸ್ವಾಮಿಯು ಪಿತೃಪೂಜೆಯ ನಿಯಮವನ್ನು ಸ್ಥಾಪಿಸಿದುದರ ಕುರಿತು ಹೇಳಿದುದು (1-25).

12333001 ವೈಶಂಪಾಯನ ಉವಾಚ।
12333001a ಕಸ್ಯ ಚಿತ್ತ್ವಥ ಕಾಲಸ್ಯ ನಾರದಃ ಪರಮೇಷ್ಠಿಜಃ।
12333001c ದೈವಂ ಕೃತ್ವಾ ಯಥಾನ್ಯಾಯಂ ಪಿತ್ರ್ಯಂ ಚಕ್ರೇ ತತಃ ಪರಮ್।।

ವೈಶಂಪಾಯನನು ಹೇಳಿದನು: “ಒಮ್ಮೆ ಪರಮೇಷ್ಠಿಜ ನಾರದನು ಯಥಾನ್ಯಾಯವಾಗಿ ದೇವಕಾರ್ಯಗಳನ್ನು ಮಾಡಿ ಅನಂತರ ಪಿತೃಕಾರ್ಗಗಳನ್ನು ಪೂರೈಸಿದನು.

12333002a ತತಸ್ತಂ ವಚನಂ ಪ್ರಾಹ ಜ್ಯೇಷ್ಠೋ ಧರ್ಮಾತ್ಮಜಃ ಪ್ರಭುಃ।
12333002c ಕ ಇಜ್ಯತೇ ದ್ವಿಜಶ್ರೇಷ್ಠ ದೈವೇ ಪಿತ್ರ್ಯೇ ಚ ಕಲ್ಪಿತೇ।।

ಆಗ ಧರ್ಮಾತ್ಮಜ ಜ್ಯೇಷ್ಠ ಪ್ರಭುವು ಅವನಿಗೆ ಹೀಗೆ ಹೇಳಿದನು: “ದ್ವಿಜಶ್ರೇಷ್ಠ! ನೀನು ಕಲ್ಪಿಸಿರುವ ಈ ದೇವ-ಪಿತೃಕಾರ್ಯಗಳಲ್ಲಿ ಯಾರನ್ನು ಪೂಜಿಸುತ್ತೀಯೆ?

12333003a ತ್ವಯಾ ಮತಿಮತಾಂ ಶ್ರೇಷ್ಠ ತನ್ಮೇ ಶಂಸ ಯಥಾಗಮಮ್।
12333003c ಕಿಮೇತತ್ಕ್ರಿಯತೇ ಕರ್ಮ ಫಲಂ ಚಾಸ್ಯ ಕಿಮಿಷ್ಯತೇ।।

ಮತಿವಂತರಲ್ಲಿ ಶ್ರೇಷ್ಠ! ಈ ಕರ್ಮಗಳನ್ನು ಏಕೆ ಮಾಡಬೇಕು? ಇವುಗಳಿಂದ ಯಾವ ಫಲವು ದೊರಕುತ್ತದೆ? ಆಗಮಗಳಲ್ಲಿರುವಂತೆ ನನಗೆ ಹೇಳು.”

12333004 ನಾರದ ಉವಾಚ।
12333004a ತ್ವಯೈತತ್ಕಥಿತಂ ಪೂರ್ವಂ ದೈವಂ ಕರ್ತವ್ಯಮಿತ್ಯಪಿ।
12333004c ದೈವತಂ ಚ ಪರೋ ಯಜ್ಞಃ ಪರಮಾತ್ಮಾ ಸನಾತನಃ।।

ನಾರದನು ಹೇಳಿದನು: “ದೇವಕಾರ್ಯವನ್ನು ಮಾಡುವುದು ಪ್ರತಿಯೊಬ್ಬನ ಕರ್ತವ್ಯವೂ ಆಗಿದೆ ಎಂದು ಹಿಂದೆ ನೀನೇ ನನಗೆ ಹೇಳಿರುವೆ. ದೇವಕಾರ್ಯವು ಪರಮ ಯಜ್ಞ. ಆ ಯಜ್ಞವೇ ಸನಾತನ ಪರಮಾತ್ಮ ಸ್ವರೂಪ.

12333005a ತತಸ್ತದ್ಭಾವಿತೋ ನಿತ್ಯಂ ಯಜೇ ವೈಕುಂಠಮವ್ಯಯಮ್।
12333005c ತಸ್ಮಾಚ್ಚ ಪ್ರಸೃತಃ ಪೂರ್ವಂ ಬ್ರಹ್ಮಾ ಲೋಕಪಿತಾಮಹಃ।।

ಅದರಿಂದಲೇ ಪ್ರಭಾವಿತನಾದ ನನು ನಿತ್ಯವೂ ಅವ್ಯಯ ವೈಕುಂಠನನ್ನು ಪೂಜಿಸುತ್ತೇನೆ. ಅವನಿಂದಲೇ ಪೂರ್ವದಲ್ಲಿ ಲೋಕಪಿತಾಮಹ ಬ್ರಹ್ಮನು ಹುಟ್ಟಿದನು.

12333006a ಮಮ ವೈ ಪಿತರಂ ಪ್ರೀತಃ ಪರಮೇಷ್ಠ್ಯಪ್ಯಜೀಜನತ್।
12333006c ಅಹಂ ಸಂಕಲ್ಪಜಸ್ತಸ್ಯ ಪುತ್ರಃ ಪ್ರಥಮಕಲ್ಪಿತಃ।।

ಪರಮೇಷ್ಠಿಯು ಪ್ರೀತನಾದ ನನ್ನ ತಂದೆ ಪ್ರಜಾಪತಿಯನು ಹುಟ್ಟಿಸಿದನು. ನಾನು ಅವನಿಗೆ ಸಂಕಲ್ಪದಿಂದಲೇ ಹುಟ್ಟಿದ ಮೊದಲ ಮಗನಾಗಿದ್ದೇನೆ.

12333007a ಯಜಾಮ್ಯಹಂ ಪಿತೃನ್ಸಾಧೋ ನಾರಾಯಣವಿಧೌ ಕೃತೇ।
12333007c ಏವಂ ಸ ಏವ ಭಗವಾನ್ಪಿತಾ ಮಾತಾ ಪಿತಾಮಹಃ।
12333007e ಇಜ್ಯತೇ ಪಿತೃಯಜ್ಞೇಷು ಮಯಾ ನಿತ್ಯಂ ಜಗತ್ಪತಿಃ।।

ನಾರಾಯಣನನ್ನು ಪೂಜಿಸಿದ ನಂತರ ನಾನು ಪಿತೃಗಳ ಪೂಜೆಯನ್ನು ಮಾಡುತ್ತೇನೆ. ಹೀಗೆ ಆ ಭಗವಂತನೇ ನನ್ನ ಪಿತ, ಮಾತಾ ಮತ್ತು ಪಿತಾಮಹನು. ನಿತ್ಯ ಪಿತೃಯಜ್ಞಗಳಲ್ಲಿಯೂ ನಾನು ಆ ಜಗತ್ಪತಿಯನ್ನೇ ಪೂಜಿಸುತ್ತೇನೆ.

12333008a ಶ್ರುತಿಶ್ಚಾಪ್ಯಪರಾ ದೇವ ಪುತ್ರಾನ್ ಹಿ ಪಿತರೋಽಯಜನ್।
12333008c ವೇದಶ್ರುತಿಃ ಪ್ರಣಷ್ಟಾ ಚ ಪುನರಧ್ಯಾಪಿತಾ ಸುತೈಃ।
12333008e ತತಸ್ತೇ ಮಂತ್ರದಾಃ ಪುತ್ರಾಃ ಪಿತೃತ್ವಮುಪಪೇದಿರೇ।।

ದೇವ! ಪಿತೃಗಳೇ ಪುತ್ರರನ್ನು ಪೂಜಿಸಿದರೆಂದು ಮತ್ತೊಂದು ಶ್ರುತಿಯು ಹೇಳುತ್ತದೆ. ವೇದಶ್ರುತಿಗಳು ನಾಶವಾದಾಗ ಸುತರೇ ಅದನ್ನು ಪುನಃ ಕಲಿತುಕೊಂಡರು. ಆಗ ಮಂತ್ರಗಳನ್ನು ಕಲಿತ ಪುತ್ರರೇ ಪಿತೃಗಳಿಗೆ ಅವುಗಳನ್ನು ಉಪದೇಶಿಸಿದರು.

12333009a ನೂನಂ ಪುರೈತದ್ವಿದಿತಂ ಯುವಯೋರ್ಭಾವಿತಾತ್ಮನೋಃ।
12333009c ಪುತ್ರಾಶ್ಚ ಪಿತರಶ್ಚೈವ ಪರಸ್ಪರಮಪೂಜಯನ್।।

ಭಾವಿತಾತ್ಮರಾದ ನಿಮಗೆ ಹಿಂದೆ ಪುತ್ರರು ಮತ್ತು ಪಿತೃಗಳು ಪರಸ್ಪರರನ್ನು ಪೂಜಿಸಿದರು ಎಂಬ ವಿಷಯವು ತಿಳಿದಿದೆಯಲ್ಲವೇ?

12333010a ತ್ರೀನ್ಪಿಂಡಾನ್ನ್ಯಸ್ಯ ವೈ ಪೃಥ್ವ್ಯಾಂ ಪೂರ್ವಂ ದತ್ತ್ವಾ ಕುಶಾನಿತಿ।
12333010c ಕಥಂ ತು ಪಿಂಡಸಂಜ್ಞಾಂ ತೇ ಪಿತರೋ ಲೇಭಿರೇ ಪುರಾ।।

ಹಿಂದೆ ನೆಲದ ಮೇಲೆ ದರ್ಭೆಗಳನ್ನು ಹಾಸಿ ಅವುಗಳ ಮೇಲೆ ಮೂರು ಪಿಂಡಗಳನ್ನಿತ್ತು ಪೂಜಿಸುವುದರ ಕಾರಣವೇನು? ಹಿಂದೆ ಪಿತೃಗಳು ಪಿಂಡಸಂಜ್ಞೆಯನ್ನು ಹೇಗೆ ಪಡೆದುಕೊಂಡರು?”

12333011 ನರನಾರಾಯಣಾವೂಚತುಃ।
12333011a ಇಮಾಂ ಹಿ ಧರಣೀಂ ಪೂರ್ವಂ ನಷ್ಟಾಂ ಸಾಗರಮೇಖಲಾಮ್।
12333011c ಗೋವಿಂದ ಉಜ್ಜಹಾರಾಶು ವಾರಾಹಂ ರೂಪಮಾಶ್ರಿತಃ।।

ನರನಾರಾಯಣರು ಹೇಳಿದರು: “ಹಿಂದೆ ಸಾಗರಮೇಖಲೆ ಧರಣಿಯು ನಷ್ಟವಾದಾಗ ಗೋವಿಂದನು ವರಾಹ ರೂಪವನ್ನು ತಾಳಿ ಬಹಳ ಬೇಗ ಮೇಲೆತ್ತಿದನು.

12333012a ಸ್ಥಾಪಯಿತ್ವಾ ತು ಧರಣೀಂ ಸ್ವೇ ಸ್ಥಾನೇ ಪುರುಷೋತ್ತಮಃ।
12333012c ಜಲಕರ್ದಮಲಿಪ್ತಾಂಗೋ ಲೋಕಕಾರ್ಯಾರ್ಥಮುದ್ಯತಃ।।

ಆ ಪುರುಷೋತ್ತಮನು ಧರಣಿಯನ್ನು ಅದರ ಸ್ಥಾನದಲ್ಲಿ ಸ್ಥಾಪಿಸಿ ನೀರು-ಕೆಸರುಗಳಿಂದ ಲಿಪ್ತಾಂಗನಾಗಿ ಲೋಕಕಾರ್ಯವನ್ನು ಪ್ರಾರಂಭಿಸಿದನು.

12333013a ಪ್ರಾಪ್ತೇ ಚಾಹ್ನಿಕಕಾಲೇ ಸ ಮಧ್ಯಂದಿನಗತೇ ರವೌ।
12333013c ದಂಷ್ಟ್ರಾವಿಲಗ್ನಾನ್ಮೃತ್ಪಿಂಡಾನ್ವಿಧೂಯ ಸಹಸಾ ಪ್ರಭುಃ।
12333013e ಸ್ಥಾಪಯಾಮಾಸ ವೈ ಪೃಥ್ವ್ಯಾಂ ಕುಶಾನಾಸ್ತೀರ್ಯ ನಾರದ।।

ನಾರದ! ಸೂರ್ಯನು ಹಗಲಿನ ಮಧ್ಯಭಾಗಕ್ಕೆ ಬಂದು ಮಧ್ಯಾಹ್ನಿಕದ ಕಾಲವು ಪ್ರಾಪ್ತವಾಗಲು ಪ್ರಭು ವರಾಹನು ತನ್ನ ಕೋರೆದಾಡೆಗಳಿಗೆ ಮೆತ್ತಿದ್ದ ಮಣ್ಣಿನಿಂದ ಮೂರು ಪಿಂಡಗಳನ್ನು ಮಾಡಿ, ನೆಲದ ಮೇಲೆ ದರ್ಬೆಗಳನ್ನು ಹಾಸಿ ಅದರ ಮೇಲೆ ಆ ಮೂರು ಪಿಂಡಗಳನ್ನು ಸ್ಥಾಪಿಸಿದನು.

12333014a ಸ ತೇಷ್ವಾತ್ಮಾನಮುದ್ದಿಶ್ಯ ಪಿತ್ರ್ಯಂ ಚಕ್ರೇ ಯಥಾವಿಧಿ।
12333014c ಸಂಕಲ್ಪಯಿತ್ವಾ ತ್ರೀನ್ಪಿಂಡಾನ್ ಸ್ವೇನೈವ ವಿಧಿನಾ ಪ್ರಭುಃ।।
12333015a ಆತ್ಮಗಾತ್ರೋಷ್ಮಸಂಭೂತೈಃ ಸ್ನೇಹಗರ್ಭೈಸ್ತಿಲೈರಪಿ।
12333015c ಪ್ರೋಕ್ಷ್ಯಾಪವರ್ಗಂ ದೇವೇಶಃ ಪ್ರಾಙ್ಮುಖಃ ಕೃತವಾನ್ಸ್ವಯಮ್।।
12333016a ಮರ್ಯಾದಾಸ್ಥಾಪನಾರ್ಥಂ ಚ ತತೋ ವಚನಮುಕ್ತವಾನ್।

ಅನಂತರ ಅವನು ತನ್ನನ್ನೇ ಉದ್ದೇಶಿಸಿ ಯಥಾವಿಧಿಯಾಗಿ ಪಿತೃಕಾರ್ಯವನ್ನು ನಡೆಸಿದನು. ಪ್ರಭುವು ತನ್ನದೇ ವಿಧಿಯಿಂದ ಸಂಕಲ್ಪಮಾಡಿ ತನ್ನ ಶರೀರಶಾಖದಿಂದ ಹುಟ್ಟಿದ ಎಣ್ಣೆಯಿಂದ ಕೂಡಿದ ಎಳ್ಳುಗಳಿಂದ ಮೂರು ಪಿಂಡಗಳನ್ನೂ ಅಪ್ರದಕ್ಷಿಣವಾಗಿ ಪ್ರೋಕ್ಷಿಸಿದನು. ಇದರ ಕುರಿತು ಒಂದು ನಿಯಮವನ್ನು ಸ್ಥಾಪಿಸುವ ಸಲುವಾಗಿ ದೇವೇಶನು ಪೂರ್ವಾಭಿಮುಖವಾಗಿ ಕುಳಿದು ಈ ಮಾತುಗಳನ್ನಾಡಿದನು:

12333016c ಅಹಂ ಹಿ ಪಿತರಃ ಸ್ರಷ್ಟುಮುದ್ಯತೋ ಲೋಕಕೃತ್ ಸ್ವಯಮ್।।
12333017a ತಸ್ಯ ಚಿಂತಯತಃ ಸದ್ಯಃ ಪಿತೃಕಾರ್ಯವಿಧಿಂ ಪರಮ್।
12333017c ದಂಷ್ಟ್ರಾಭ್ಯಾಂ ಪ್ರವಿನಿರ್ಧೂತಾ ಮಮೈತೇ ದಕ್ಷಿಣಾಂ ದಿಶಮ್।
12333017e ಆಶ್ರಿತಾ ಧರಣೀಂ ಪಿಂಡಾಸ್ತಸ್ಮಾತ್ಪಿತರ ಏವ ತೇ।।

“ನಾನೇ ಎಲ್ಲ ಲೋಕಗಳ ಸೃಷ್ಟಿಕರ್ತ ಪಿತ. ಪರಮ ವಿತೃಕಾರ್ಯವಿಧಿಯನ್ನು ಚಿಂತಿಸಿತ್ತಿದ್ದಾಗ ನನ್ನ ಕೋರೆ ದಾಡೆಗಳಿಂದ ಮೂರು ಪಿಂಡಗಳು ದಕ್ಷಿಣದಿಕ್ಕಿನೆಡೆಗೆ ಭೂಮಿಯ ಮೇಲೆ ಬಿದ್ದವು. ಆದುದರಿಂದ ಈ ಮೂರು ಪಿಂಡಗಳೂ ಪಿತೃಸ್ವರೂಪಗಳೇ ಆಗಿವೆ.

12333018a ತ್ರಯೋ ಮೂರ್ತಿವಿಹೀನಾ ವೈ ಪಿಂಡಮೂರ್ತಿಧರಾಸ್ತ್ವಿಮೇ।
12333018c ಭವಂತು ಪಿತರೋ ಲೋಕೇ ಮಯಾ ಸೃಷ್ಟಾಃ ಸನಾತನಾಃ।।

ಮೂರ್ತಿವಿಹೀನರಾದ ಪಿತೃಗಳು ನಾನು ಮಾಡಿದ ಈ ಮೂರು ಪಿಂಡಗಳ ರೂಪವನ್ನು ಧರಿಸಿದ್ದಾರೆ. ನಾನು ಸೃಷ್ಟಿಸಿದ ಇವರು ಲೋಕದಲ್ಲಿ ಸನಾತನ ಪಿತೃಗಳು ಎಂದೆನಿಸಿಕೊಳ್ಳಲಿ.

12333019a ಪಿತಾ ಪಿತಾಮಹಶ್ಚೈವ ತಥೈವ ಪ್ರಪಿತಾಮಹಃ।
12333019c ಅಹಮೇವಾತ್ರ ವಿಜ್ಞೇಯಸ್ತ್ರಿಷು ಪಿಂಡೇಷು ಸಂಸ್ಥಿತಃ।।

ಈ ಮೂರು ಪಿಂಡಗಳಲ್ಲಿಯೂ ಪಿತ, ಪಿತಾಮಹ ಮತ್ತು ಪ್ರಪಿತಾಮಹನಾಗಿ ನಾನೇ ಇರುತ್ತೇನೆ ಎಂದು ತಿಳಿಯಬೇಕು.

12333020a ನಾಸ್ತಿ ಮತ್ತೋಽಧಿಕಃ ಕಶ್ಚಿತ್ಕೋ ವಾಭ್ಯರ್ಚ್ಯೋ ಮಯಾ ಸ್ವಯಮ್।
12333020c ಕೋ ವಾ ಮಮ ಪಿತಾ ಲೋಕೇ ಅಹಮೇವ ಪಿತಾಮಹಃ।।
12333021a ಪಿತಾಮಹಪಿತಾ ಚೈವ ಅಹಮೇವಾತ್ರ ಕಾರಣಮ್।

ನನಗಿಂತಲೂ ಅಧಿಕನಾದವನು ಯಾರೂ ಇಲ್ಲ. ನನ್ನಿಂದಲೇ ಪೂಜಿಸಲ್ಪಡುವವನು ಯಾರಿದ್ದಾನೆ? ಈ ಲೋಕದಲ್ಲಿ ನನ್ನ ಪಿತನಾರು? ನಾನೇ ಪಿತಾಮಹ. ಪಿತಾಮಹನ ಪಿತನೂ ನಾನೇ. ನಾನೇ ಎಲ್ಲವಕ್ಕೂ ಕಾರಣನು.”

12333021c ಇತ್ಯೇವಮುಕ್ತ್ವಾ ವಚನಂ ದೇವದೇವೋ ವೃಷಾಕಪಿಃ।।
12333022a ವರಾಹಪರ್ವತೇ ವಿಪ್ರ ದತ್ತ್ವಾ ಪಿಂಡಾನ್ಸವಿಸ್ತರಾನ್।
12333022c ಆತ್ಮಾನಂ ಪೂಜಯಿತ್ವೈವ ತತ್ರೈವಾದರ್ಶನಂ ಗತಃ।।

ವಿಪ್ರ! ಈ ಮಾತನ್ನು ಹೇಳಿ ದೇವದೇವ ವೃಷಾಕಪಿಯು ವರಾಹಪರ್ವತದ ಮೇಲೆ ವಿಸ್ತಾರ ಪಿಂಡಗಳನ್ನು ನೀಡಿ ತನ್ನನ್ನೇ ಪೂಜಿಸಿಕೊಂಡು ಅಲ್ಲಿಯೇ ಅಂತರ್ಧಾನನಾದನು.

12333023a ಏತದರ್ಥಂ ಶುಭಮತೇ ಪಿತರಃ ಪಿಂಡಸಂಜ್ಞಿತಾಃ।
12333023c ಲಭಂತೇ ಸತತಂ ಪೂಜಾಂ ವೃಷಾಕಪಿವಚೋ ಯಥಾ।।

ಶುಭಮತೇ! ಪಿಂಡಸಂಜ್ಞಿತರಾದ ಪಿತೃಗಳ ಅರ್ಥವೇ ಇದು. ವೃಷಾಕಪಿಯ ವಚನದಂತೆ ಪಿತೃಗಳು ಸತತವೂ ಪೂಜಿಸಲ್ಪಡುತ್ತಾರೆ.

12333024a ಯೇ ಯಜಂತಿ ಪಿತೃನ್ದೇವಾನ್ಗುರೂಂಶ್ಚೈವಾತಿಥೀಂಸ್ತಥಾ।
12333024c ಗಾಶ್ಚೈವ ದ್ವಿಜಮುಖ್ಯಾಂಶ್ಚ ಪೃಥಿವೀಂ ಮಾತರಂ ತಥಾ।
12333024e ಕರ್ಮಣಾ ಮನಸಾ ವಾಚಾ ವಿಷ್ಣುಮೇವ ಯಜಂತಿ ತೇ।।

ಯಾರು ಕರ್ಮ, ಮನಸ್ಸು ಮತ್ತು ಮಾತುಗಳ ಮೂಲಕ ಪಿತೃಗಳನ್ನೂ, ದೇವತೆಗಳನ್ನೂ, ಗುರುಗಳನ್ನೂ, ಅತಿಥಿಗಳನ್ನೂ, ಗೋವುಗಳನ್ನು, ದ್ವಿಜಮುಖ್ಯರನ್ನೂ, ಪೃಥ್ವಿಯನ್ನೂ, ತಾಯಿಯನ್ನೂ ಆರಾಧಿಸುವರೋ ಅವರು ವಿಷ್ಣುವನ್ನೇ ಪೂಜಿಸಿದಂತೆ.

12333025a ಅಂತರ್ಗತಃ ಸ ಭಗವಾನ್ಸರ್ವಸತ್ತ್ವಶರೀರಗಃ।
12333025c ಸಮಃ ಸರ್ವೇಷು ಭೂತೇಷು ಈಶ್ವರಃ ಸುಖದುಃಖಯೋಃ।
12333025e ಮಹಾನ್ಮಹಾತ್ಮಾ ಸರ್ವಾತ್ಮಾ ನಾರಾಯಣ ಇತಿ ಶ್ರುತಃ।।

ಆ ಭಗವಾನನು ಸತ್ತ್ವನಾಗಿ ಸರ್ವ ಶರೀರಗಳಲ್ಲಿ ಅಂತರ್ಗತನಾಗಿದ್ದಾನೆ. ಸುಖದುಃಖಗಳಿಗೆ ಈಶ್ವರನಾದ ಅವನು ಸರ್ವಪ್ರಾಣಿಗಳಲ್ಲಿಯೂ ಸಮರೂಪಿಯಾಗಿದ್ದಾನೆ. ನಾರಾಯಣನು ಮಹಾನ್ ಮಹಾತ್ಮನೆಂದೂ ಸರ್ವಾತ್ಮನೆಂದು ಶ್ರುತಿಯು ಹೇಳುತ್ತದೆ.””

ಸಮಾಪ್ತಿ ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ನಾರಾಯಣೀಯೇ ತ್ರಿತ್ರಿಂಶಾಧಿಕತ್ರಿಶತತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ನಾರಾಯಣೀಯ ಎನ್ನುವ ಮುನ್ನೂರಾಮೂವತ್ಮೂರನೇ ಅಧ್ಯಾಯವು.