ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 330
ಸಾರ
ಶ್ರೀಕೃಷ್ಣನು ತನ್ನ ನಾಮಗಳ ಅರ್ಥಗಳನ್ನು ಅರ್ಜುನನಿಗೆ ತಿಳಿಸಿದುದು (1-79).
12330001 ಶ್ರೀಭಗವಾನುವಾಚ।
12330001a ಸೂರ್ಯಾಚಂದ್ರಮಸೌ ಶಶ್ವತ್ಕೇಶೈರ್ಮೇ ಅಂಶುಸಂಜ್ಞಿತೈಃ1।
12330001c ಬೋಧಯಂಸ್ತಾಪಯಂಶ್ಚೈವ ಜಗದುತ್ತಿಷ್ಠತಃ ಪೃಥಕ್।।
ಶ್ರೀ ಭಗವಂತನು ಹೇಳಿದನು: “ಸೂರ್ಯ-ಚಂದ್ರರ ಕಿರಣಗಳೇ ನನ್ನ ಕೇಶಗಳೆಂದು ಹೇಳಲ್ಪಟ್ಟಿವೆ. ಅವರಿಬ್ಬರೂ ಅನುಕ್ರಮವಾಗಿ ಜಗತ್ತನ್ನು ಎಚ್ಚರಗೊಳಿಸುತ್ತಾ ಮತ್ತು ಅದಕ್ಕೆ ತಾಪವನ್ನುಂಟುಮಾಡುತ್ತಾ ಪ್ರತ್ಯೇಕ ಪ್ರತ್ಯೇಕವಾಗಿ ಉದಯಿಸುತ್ತಾರೆ.
12330002a ಬೋಧನಾತ್ತಾಪನಾಚ್ಚೈವ ಜಗತೋ ಹರ್ಷಣಂ ಭವೇತ್।
12330002c ಅಗ್ನೀಷೋಮಕೃತೈರೇಭಿಃ ಕರ್ಮಭಿಃ ಪಾಂಡುನಂದನ।
12330002e ಹೃಷೀಕೇಶೋಽಹಮೀಶಾನೋ ವರದೋ ಲೋಕಭಾವನಃ।।
ಪಾಂಡುನಂದನ! ಅವರ ಭೋಧನ-ತಾಪನಗಳಿಂದ ಜಗತ್ತಿಗೆ ಹರ್ಷವುಂಟಾಗುತ್ತದೆ. ಅಗ್ನೀಷೋಮರು ಮಾಡುವ ಈ ಕರ್ಮಗಳಿಂದಲೇ ನಾನು ಈಶಾನನೂ, ವರದನೂ, ಲೋಕಭಾವನನೂ ಆದ ಹೃಷೀಕೇಶನಾಗಿದ್ದೇನೆ.
12330003a ಇಡೋಪಹೂತಯೋಗೇನ ಹರೇ ಭಾಗಂ ಕ್ರತುಷ್ವಹಮ್।
12330003c ವರ್ಣಶ್ಚ ಮೇ ಹರಿಶ್ರೇಷ್ಠಸ್ತಸ್ಮಾದ್ಧರಿರಹಂ ಸ್ಮೃತಃ।।
ಇಡೋಪಹೂತಯೋಗದಿಂದ ನಾನು ಕ್ರತುವಿನ ಭಾಗವನ್ನು ಪರಿಗ್ರಹಿಸುತ್ತೇನೆ. ನನ್ನ ವರ್ಣವು ಶ್ರೇಷ್ಠ ಹರಿನ್ಮಣಿಯಂತೆ (ಪಚ್ಚೆಮಣಿಯಂತೆ) ಇರುವುದರಿಂದಲೂ ನಾನು ’ಹರಿ’ ಎಂದು ಕರೆಯಲ್ಪಡುತ್ತೇನೆ.
12330004a ಧಾಮ ಸಾರೋ ಹಿ ಲೋಕಾನಾಮೃತಂ ಚೈವ ವಿಚಾರಿತಮ್।
12330004c ಋತಧಾಮಾ ತತೋ ವಿಪ್ರೈಃ ಸತ್ಯಶ್ಚಾಹಂ ಪ್ರಕೀರ್ತಿತಃ।।
“ಧಾಮ”ವು ಲೋಕಗಳ ಸಾರ. ”ಋತ”ವು ವಿಚಾರಿಸಿ ಕೈಗೊಂಡ ನಿರ್ಣಯ. ಆದುದರಿಂದ ವಿಪ್ರರು ನನ್ನನ್ನು ಋತಧಾಮನೆಂದೂ ಸತ್ಯನೆಂದೂ ವರ್ಣಿಸಿದ್ದಾರೆ.
12330005a ನಷ್ಟಾಂ ಚ ಧರಣೀಂ ಪೂರ್ವಮವಿಂದಂ ವೈ ಗುಹಾಗತಾಮ್।
12330005c ಗೋವಿಂದ ಇತಿ ಮಾಂ ದೇವಾ ವಾಗ್ಭಿಃ ಸಮಭಿತುಷ್ಟುವುಃ।।
ಹಿಂದೆ ಧರಣಿಯು ನಷ್ಟಳಾಗಿ ಗುಹಾಗತಳಾಗಿದ್ದಾಗ ಅವಳನ್ನು ಮೇಲೆತ್ತಿದುದರಿಂದ ದೇವತೆಗಳು ನನ್ನನ್ನು ಗೋವಿಂದ2 ಎಂದು ಸ್ತುತಿಸಿ ತೃಪ್ತಿಪಡಿಸಿದರು.
12330006a ಶಿಪಿವಿಷ್ಟೇತಿ ಚಾಖ್ಯಾಯಾಂ ಹೀನರೋಮಾ ಚ ಯೋ ಭವೇತ್।
12330006c ತೇನಾವಿಷ್ಟಂ ಹಿ ಯತ್ಕಿಂ ಚಿಚ್ಚಿಪಿವಿಷ್ಟಂ ಹಿ ತತ್ ಸ್ಮೃತಮ್।।
ಶಿಪಿವಿಷ್ಟನೆಂಬ ನನ್ನ ಹೆಸರು ಹೀನರೋಮ ಅರ್ಥಾತ್ ಅಂಶಗಳಿಲ್ಲದವನು; ಅವಯವಗಳಿಲ್ಲವನು-ಶಿಪಿ ಎಂದಾಗುತ್ತದೆ. ಅಂಥಹ ಶಿಪಿಯಿಂದ ಈ ಜಗತ್ತು ಆವಿಷ್ಟಗೊಂಡಿದೆ. ಆದುದರಿಂದಲೇ ನಾನು ಶಿಪಿವಿಷ್ಟ ಎಂದು ಪ್ರಸಿದ್ಧನಾಗಿದ್ದೇನೆ.
12330007a ಯಾಸ್ಕೋ ಮಾಮೃಷಿರವ್ಯಗ್ರೋ ನೈಕಯಜ್ಞೇಷು ಗೀತವಾನ್।
12330007c ಶಿಪಿವಿಷ್ಟ ಇತಿ ಹ್ಯಸ್ಮಾದ್ಗುಹ್ಯನಾಮಧರೋ ಹ್ಯಹಮ್।।
ಋಷಿ ಅವ್ಯಗ್ರ ಯಾಸ್ಕನು ಅನೇಕ ಯಜ್ಞಗಳಲ್ಲಿ ನನ್ನನ್ನು ಶಿಪಿವಿಷ್ಟ ಎಂಬ ನಾಮದಿಂದಲೇ ಸ್ತುತಿಸಿದ್ದಾನೆ. ಆ ಕಾರಣದಿಂದಲೂ ನಾನು ಆ ಗುಹ್ಯನಾಮವನ್ನು ಧರಿಸಿದ್ದೇನೆ.
12330008a ಸ್ತುತ್ವಾ ಮಾಂ ಶಿಪಿವಿಷ್ಟೇತಿ ಯಾಸ್ಕೋ ಋಷಿರುದಾರಧೀಃ।
12330008c ಮತ್ಪ್ರಸಾದಾದಧೋ ನಷ್ಟಂ ನಿರುಕ್ತಮಭಿಜಗ್ಮಿವಾನ್।।
ನನ್ನನ್ನು ಶಿಪಿವಿಷ್ಟ ಎಂದು ಸ್ತುತಿಸಿ ಉದಾರಧೀ ಋಷಿ ಯಾಸ್ಕನು ನನ್ನ ಪ್ರಸಾದದಿಂದ ನಷ್ಟವಾಗಿದ್ದ ನಿರುಕ್ತಶಾಸ್ತ್ರವನ್ನು ಪುನಃ ಪಡೆದುಕೊಂಡನು.
12330009a ನ ಹಿ ಜಾತೋ ನ ಜಾಯೇಽಹಂ ನ ಜನಿಷ್ಯೇ ಕದಾ ಚನ।
12330009c ಕ್ಷೇತ್ರಜ್ಞಃ ಸರ್ವಭೂತಾನಾಂ ತಸ್ಮಾದಹಮಜಃ ಸ್ಮೃತಃ।।
ನಾನು ಹಿಂದೆಂದೂ ಹುಟ್ಟಿದವನಲ್ಲ; ಈಗಲೂ ಹುಟ್ಟಿರುವುದಿಲ್ಲ; ಮುಂದೆ ಹುಟ್ಟುವುದೂ ಇಲ್ಲ. ನಾನು ಸರ್ವಭೂತಗಳ ಕ್ಷೇತ್ರಜ್ಞ. ಆದುದರಿಂದ ನನ್ನನ್ನು ಅಜ ಎಂದೂ ಕರೆಯುತ್ತಾರೆ.
12330010a ನೋಕ್ತಪೂರ್ವಂ ಮಯಾ ಕ್ಷುದ್ರಮಶ್ಲೀಲಂ ವಾ ಕದಾ ಚನ।
12330010c ಋತಾ ಬ್ರಹ್ಮಸುತಾ ಸಾ ಮೇ ಸತ್ಯಾ ದೇವೀ ಸರಸ್ವತೀ।।
ಯಾವಾಗಲೂ ನಾನು ಕ್ಷುದ್ರ ಅಥವಾ ಅಶ್ಲೀಲ ಮಾತನಾಡಿಲ್ಲ. ಋತಾ, ಬ್ರಹ್ಮಸುತಾ, ಸತ್ಯಾ ದೇವೀ ಸರಸ್ವತಿಯೇ ನನ್ನ ವಾಣಿಯು.
12330011a ಸಚ್ಚಾಸಚ್ಚೈವ ಕೌಂತೇಯ ಮಯಾವೇಶಿತಮಾತ್ಮನಿ।
12330011c ಪೌಷ್ಕರೇ ಬ್ರಹ್ಮಸದನೇ ಸತ್ಯಂ ಮಾಮೃಷಯೋ ವಿದುಃ।।
ಕೌಂತೇಯ! ಸತ್ತು ಮತ್ತು ಅಸತ್ತುಗಳು ನನ್ನಲ್ಲಿಯೇ ನೆಲೆಸಿವೆ. ಆದುದರಿಂದ ಪುಷ್ಕರದ ಬ್ರಹ್ಮಸದನದಲ್ಲಿ ಋಷಿಗಳು ನನ್ನನ್ನು ಸತ್ಯ ಎಂದು ತಿಳಿದಿದ್ದಾರೆ.
12330012a ಸತ್ತ್ವಾನ್ನ ಚ್ಯುತಪೂರ್ವೋಽಹಂ ಸತ್ತ್ವಂ ವೈ ವಿದ್ಧಿ ಮತ್ಕೃತಮ್।
12330012c ಜನ್ಮನೀಹಾಭವತ್ಸತ್ತ್ವಂ ಪೌರ್ವಿಕಂ ಮೇ ಧನಂಜಯ।।
ಯಾವಾಗಲೂ ನಾನು ಸತ್ತ್ವದಿಂದ ಚ್ಯುತನಾಗಿಲ್ಲ. ಸತ್ತ್ವವನ್ನು ನಾನೇ ಮಾಡಿದ್ದುದು ಎಂದು ತಿಳಿದುಕೋ. ಧನಂಜಯ! ಹಿಂದಿನ ನನ್ನ ಆ ಸತ್ತ್ವವು ಈ ಜನ್ಮದಲ್ಲಿಯೂ ನನ್ನಲ್ಲಿದೆ.
12330013a ನಿರಾಶೀಃಕರ್ಮಸಂಯುಕ್ತಂ ಸಾತ್ವತಂ ಮಾಂ ಪ್ರಕಲ್ಪಯ।
12330013c ಸಾತ್ವತಜ್ಞಾನದೃಷ್ಟೋಽಹಂ ಸಾತ್ವತಃ ಸಾತ್ವತಾಂ ಪತಿಃ।।
ನಿರಾಶೀ ಕರ್ಮಸಂಯುಕ್ತನಾಗಿರುವ ಸಾತ್ವತನೆಂದು ನನ್ನನ್ನು ತಿಳಿ. ಸಾತ್ವತಜ್ಞಾನವನ್ನು ತೋರಿಸಿಕೊಡುವವನು ನಾನು. ಸಾತ್ವತ. ಸಾತ್ವತರ ಪತಿ.
12330014a ಕೃಷಾಮಿ ಮೇದಿನೀಂ ಪಾರ್ಥ ಭೂತ್ವಾ ಕಾರ್ಷ್ಣಾಯಸೋ ಮಹಾನ್।
12330014c ಕೃಷ್ಣೋ ವರ್ಣಶ್ಚ ಮೇ ಯಸ್ಮಾತ್ತಸ್ಮಾತ್ ಕೃಷ್ಣೋಽಹಮರ್ಜುನ।।
ಪಾರ್ಥ! ಕಬ್ಬಿಣದ ಮಹಾ ನೇಗಿಲಾಗಿ ನಾನು ಮೇದಿನಿಯನ್ನು ಹೂಳುತ್ತೇನೆ. ನನ್ನ ಬಣ್ಣವೂ ಕೃಷ್ಣವರ್ಣ. ಅರ್ಜುನ! ಈ ಕಾರಣಗಳಿಂದ ನಾನು ಕೃಷ್ಣನಾಗಿದ್ದೇನೆ.
12330015a ಮಯಾ ಸಂಶ್ಲೇಷಿತಾ ಭೂಮಿರದ್ಭಿರ್ವ್ಯೋಮ ಚ ವಾಯುನಾ।
12330015c ವಾಯುಶ್ಚ ತೇಜಸಾ ಸಾರ್ಧಂ ವೈಕುಂಠತ್ವಂ ತತೋ ಮಮ।।
ನಾನೇ ಭೂಮಿಯನ್ನು ನೀರಿನಿಂದಲೂ, ವ್ಯೋಮವನ್ನು ವಾಯುವಿನಿಂದಲೂ, ವಾಯುವನ್ನು ತೇಜಸ್ಸಿನೊಂದಿಗೂ ಸೇರಿಸಿದ್ದೇನೆ. ಆದು ನನ್ನ ವೈಕುಂಠತ್ವ3.
12330016a ನಿರ್ವಾಣಂ ಪರಮಂ ಸೌಖ್ಯಂ4 ಧರ್ಮೋಽಸೌ ಪರ ಉಚ್ಯತೇ।
12330016c ತಸ್ಮಾನ್ನ ಚ್ಯುತಪೂರ್ವೋಽಹಮಚ್ಯುತಸ್ತೇನ ಕರ್ಮಣಾ।।
ಪರಮ ಶಾಂತಿಮಯ ಸೌಖ್ಯವೇ ಪರಮಧರ್ಮ ಎನ್ನುತ್ತಾರೆ. ಆ ಪರಮ ಧರ್ಮದಿಂದ ನಾನು ಎಂದೂ ಚ್ಯುತನಾಗಿಲ್ಲ. ನನ್ನ ಆ ಕರ್ಮದಿಂದ ನಾನು ಅಚ್ಯುತ.
12330017a ಪೃಥಿವೀನಭಸೀ ಚೋಭೇ ವಿಶ್ರುತೇ ವಿಶ್ವಲೌಕಿಕೇ5।
12330017c ತಯೋಃ ಸಂಧಾರಣಾರ್ಥಂ ಹಿ ಮಾಮಧೋಕ್ಷಜಮಂಜಸಾ।।
ಪೃಥ್ವಿ ಆಕಾಶಗಳು ವಿಶ್ವಲೌಕಿಕಗಳೆಂದು ಪ್ರಸಿದ್ಧವಾಗಿವೆ. ಅವೆರಡನ್ನೂ ನಾನು ಧರಿಸಿರುವುದರಿಂದ ನನ್ನನ್ನು ಅಧೋಕ್ಷಜನೆಂದು ಕರೆಯುತ್ತಾರೆ.
12330018a ನಿರುಕ್ತಂ ವೇದವಿದುಷೋ ಯೇ ಚ ಶಬ್ದಾರ್ಥಚಿಂತಕಾಃ।
12330018c ತೇ ಮಾಂ ಗಾಯಂತಿ ಪ್ರಾಗ್ವಂಶೇ ಅಧೋಕ್ಷಜ ಇತಿ ಸ್ಥಿತಿಃ।।
ಶಬ್ದಾರ್ಥಚಿಂತಕ ವೇದವಿದುಷರು ಪ್ರಾಗ್ವಂಶದಲ್ಲಿ6 ಕಲೆತು ಅಧೋಕ್ಷಜ7 ಎಂಬ ಹೆಸರಿನ ಮೂಲಕ ನನ್ನ ಮಹಿಮೆಯನ್ನು ಕೊಂಡಾಡುತ್ತಾರೆ.
12330019a ಶಬ್ದ ಏಕಮತೈರೇಷ ವ್ಯಾಹೃತಃ ಪರಮರ್ಷಿಭಿಃ।
12330019c ನಾನ್ಯೋ ಹ್ಯಧೋಕ್ಷಜೋ ಲೋಕೇ ಋತೇ ನಾರಾಯಣಂ ಪ್ರಭುಮ್।।
ಪರಮಋಷಿಗಳು ಅಧೋಕ್ಷಜ ಶಬ್ದವನ್ನು ಮೂರು ಪ್ರತ್ಯೇಕಪದಗಳ ಸಮುದಾಯವೆನ್ನುತ್ತಾರೆ. ಅ-ಧೋಕ್ಷ-ಜ. ಅ ಎಂದರೆ ಲಯಸ್ಥಾನ. ಧೋಕ್ಷ ಎಂದರೆ ಪಾಲನಸ್ಥಾನ. ಜ ಎಂದರೆ ಉತ್ಪತ್ತಿ ಸ್ಥಾನ. ಸೃಷ್ಟಿ-ಸ್ಥಿತಿ-ಲಯಗಳಿಗೆ ಆಶ್ರಯನಾಗಿರುವವನು ಲೋಕದಲ್ಲಿ ನಾರಾಯಣನ ಹೊರತಾಗಿ ಬೇರೆ ಯಾರೂ ಇಲ್ಲ. ಆದುದರಿಂದ ಅಧೋಕ್ಷಜ ಎಂಬ ಹೆಸರು ಪ್ರಭು ನಾರಾಯಣನಿಗೆ ಹೊರತಾಗಿ ಬೇರೆ ಯಾರಿಗೂ ಇಲ್ಲ.
12330020a ಘೃತಂ ಮಮಾರ್ಚಿಷೋ ಲೋಕೇ ಜಂತೂನಾಂ ಪ್ರಾಣಧಾರಣಮ್।
12330020c ಘೃತಾರ್ಚಿರಹಮವ್ಯಗ್ರೈರ್ವೇದಜ್ಞೈಃ ಪರಿಕೀರ್ತಿತಃ।।
ಲೋಕದಲ್ಲಿ ಜಂತುಗಳ ಪ್ರಾಣಧಾರಣೆಮಾಡುವ ಘೃತವು ನನ್ನ ಜ್ವಾಲೆಯೇ ಆಗಿದೆ. ಆದುದರಿಂದ ಅವ್ಯಗ್ರ ವೇದಜ್ಞರು ನನ್ನನ್ನು ಘೃತಾರ್ಚಿ ಎಂದು ಸ್ತೋತ್ರಮಾಡುತ್ತಾರೆ.
12330021a ತ್ರಯೋ ಹಿ ಧಾತವಃ ಖ್ಯಾತಾಃ ಕರ್ಮಜಾ ಇತಿ ಚ ಸ್ಮೃತಾಃ।
12330021c ಪಿತ್ತಂ ಶ್ಲೇಷ್ಮಾ ಚ ವಾಯುಶ್ಚ ಏಷ ಸಂಘಾತ ಉಚ್ಯತೇ।।
12330022a ಏತೈಶ್ಚ ಧಾರ್ಯತೇ ಜಂತುರೇತೈಃ ಕ್ಷೀಣೈಶ್ಚ ಕ್ಷೀಯತೇ।
12330022c ಆಯುರ್ವೇದವಿದಸ್ತಸ್ಮಾತ್ತ್ರಿಧಾತುಂ ಮಾಂ ಪ್ರಚಕ್ಷತೇ।।
ಕರ್ಮಗಳಿಂದ ಹುಟ್ಟಿದ ಮೂರು ಧಾತುಗಳು ಖ್ಯಾತವಾಗಿವೆ: ಪಿತ್ತ, ಕಫ ಮತ್ತು ವಾತ. ಈ ಮೂರು ಧಾತುಗಳ ಸಮುದಾಯವನ್ನು ತ್ರಿಧಾತು ಎನ್ನುತ್ತಾರೆ. ಜಂತುವು ಇವುಗಳಿಂದಲೇ ಜೀವಿಸಿರುತ್ತದೆ. ಇವು ಕ್ಷೀಣಿಸಲು ಪ್ರಾಣಿಯೂ ಕ್ಷೀಣಿಸುತ್ತದೆ. ಆದುದರಿಂದ ಆಯುರ್ವೇದವಿದರು ನನ್ನನ್ನು ತ್ರಿಧಾತು ಎಂದು ಹೇಳುತ್ತಾರೆ.
12330023a ವೃಷೋ ಹಿ ಭಗವಾನ್ಧರ್ಮಃ ಖ್ಯಾತೋ ಲೋಕೇಷು ಭಾರತ।
12330023c ನೈಘಂಟುಕಪದಾಖ್ಯಾತಂ ವಿದ್ಧಿ ಮಾಂ ವೃಷಮುತ್ತಮಮ್।।
ಭಾರತ! ಭಗವಾನ್ ಧರ್ಮನು ಲೋಕಗಳಲ್ಲಿ ವೃಷ ಎಂದು ಖ್ಯಾತನಾಗಿದ್ದಾನೆ. ಶಬ್ದಕೋಶದಲ್ಲಿ ಹೇಳಿರುವಂತೆ ನನ್ನನ್ನು ಉತ್ತಮ ವೃಷ ಎಂದು ತಿಳಿ.
12330024a ಕಪಿರ್ವರಾಹಃ ಶ್ರೇಷ್ಠಶ್ಚ ಧರ್ಮಶ್ಚ ವೃಷ ಉಚ್ಯತೇ।
12330024c ತಸ್ಮಾದ್ವೃಷಾಕಪಿಂ ಪ್ರಾಹ ಕಶ್ಯಪೋ ಮಾಂ ಪ್ರಜಾಪತಿಃ।।
ಕಪಿ ಎಂದರೆ ವರಾಹ ಮತ್ತು ಶ್ರೇಷ್ಠ. ಧರ್ಮವನ್ನು ವೃಷ ಎಂದು ಕರೆಯುತ್ತಾರೆ. ಆದುದರಿಂದ ಪ್ರಜಾಪತಿ ಕಶ್ಯಪನು ನನ್ನನ್ನು ವೃಷಾಕಪಿ ಎಂದು ಕರೆದನು.
12330025a ನ ಚಾದಿಂ ನ ಮಧ್ಯಂ ತಥಾ ನೈವ ಚಾಂತಂ ಕದಾ ಚಿದ್ವಿದಂತೇ ಸುರಾಶ್ಚಾಸುರಾಶ್ಚ।
12330025c ಅನಾದ್ಯೋ ಹ್ಯಮಧ್ಯಸ್ತಥಾ ಚಾಪ್ಯನಂತಃ ಪ್ರಗೀತೋಽಹಮೀಶೋ ವಿಭುರ್ಲೋಕಸಾಕ್ಷೀ।।
ಸುರಾಸುರರಾಗಲೀ ಯಾರೂ ಎಂದೂ ನನ್ನ ಆದಿ, ಮಧ್ಯ ಮತ್ತು ಅಂತ್ಯಗಳನ್ನು ತಿಳಿದಿಲ್ಲ. ಆದುದರಿಂದ ನಾನು ಅನಾದಿ, ಅಮಧ್ಯ ಮತ್ತು ಅನಂತನೆಂದು ಸ್ತುತಿಸಲ್ಪಡುತ್ತೇನೆ. ನಾನು ಈಶ. ವಿಭು. ಮತ್ತು ಲೋಕಸಾಕ್ಷೀ.
12330026a ಶುಚೀನಿ ಶ್ರವಣೀಯಾನಿ ಶೃಣೋಮೀಹ ಧನಂಜಯ।
12330026c ನ ಚ ಪಾಪಾನಿ ಗೃಹ್ಣಾಮಿ ತತೋಽಹಂ ವೈ ಶುಚಿಶ್ರವಾಃ।।
ಧನಂಜಯ! ಶುಚಿಯಾದ ಮತ್ತು ಕೇಳಲು ಯೋಗ್ಯವಾದ ಮಾತುಗಳನ್ನೇ ಕೇಳುತ್ತೇನೆ. ಪಾಪಪೂರ್ಣ ಮಾತುಗಳನ್ನು ಗ್ರಹಿಸುವುದಿಲ್ಲ. ಆದುದರಿಂದ ನಾನು ಶುಚಿಶ್ರವನು.
12330027a ಏಕಶೃಂಗಃ ಪುರಾ ಭೂತ್ವಾ ವರಾಹೋ ದಿವ್ಯದರ್ಶನಃ।
12330027c ಇಮಾಮುದ್ಧೃತವಾನ್ಭೂಮಿಮೇಕಶೃಂಗಸ್ತತೋ ಹ್ಯಹಮ್।।
ಹಿಂದೆ ನಾನು ಏಕಶೃಂಗನಾದ ದಿವ್ಯದರ್ಶನ ವರಾಹನಾಗಿ ಈ ಭೂಮಿಯನ್ನು ಮೇಲೆತ್ತಿದ್ದೆ. ಆದುದರಿಂದ ನಾನು ಏಕಶೃಂಗ.
12330028a ತಥೈವಾಸಂ ತ್ರಿಕಕುದೋ ವಾರಾಹಂ ರೂಪಮಾಸ್ಥಿತಃ।
12330028c ತ್ರಿಕಕುತ್ತೇನ ವಿಖ್ಯಾತಃ ಶರೀರಸ್ಯ ತು ಮಾಪನಾತ್।।
ಹಾಗೆಯೇ ನಾನು ವರಾಹರೂಪಿಯಾಗಿದ್ದಾಗ ಮೂರು ಹಿಳಲುಗಳನ್ನು ಹೊಂದಿದ್ದೆನು. ಶರೀರವನ್ನು ಅಳೆಯುವಾಗ ನಾನು ತ್ರಿಕಕುತ್ ಎಂದು ವಿಖ್ಯಾತನಾದೆನು.
12330029a ವಿರಿಂಚ ಇತಿ ಯಃ ಪ್ರೋಕ್ತಃ ಕಪಿಲಜ್ಞಾನಚಿಂತಕೈಃ।
12330029c ಸ ಪ್ರಜಾಪತಿರೇವಾಹಂ ಚೇತನಾತ್ಸರ್ವಲೋಕಕೃತ್।।
ಕಪಿಲಜ್ಞಾನಚಿಂತಕರು ಯಾರನ್ನು ವಿರಿಂಚ ಎಂದು ಹೇಳಿದ್ದಾರೋ ಆ ಪ್ರಜಾಪತಿ, ಸರ್ವಲೋಕೃತ್ ಚೇತನವು ನಾನೇ.
12330030a ವಿದ್ಯಾಸಹಾಯವಂತಂ ಮಾಮಾದಿತ್ಯಸ್ಥಂ ಸನಾತನಮ್।
12330030c ಕಪಿಲಂ ಪ್ರಾಹುರಾಚಾರ್ಯಾಃ ಸಾಂಖ್ಯಾ ನಿಶ್ಚಿತನಿಶ್ಚಯಾಃ।।
ಸಾಂಖ್ಯಗಳನ್ನು ನಿಶ್ಚಿತವಾಗಿ ನಿಶ್ಚಯಿಸುವ ಆಚಾರ್ಯರು ಆದಿತ್ಯನಲ್ಲಿರುವ ವಿದ್ಯೆಯ ಸಹಾಯವನ್ನು ಪಡೆದಿರುವ ನನ್ನನ್ನು ಸನಾತನ ಕಪಿಲ ಎಂದು ಕರೆಯುತ್ತಾರೆ.
12330031a ಹಿರಣ್ಯಗರ್ಭೋ ದ್ಯುತಿಮಾನೇಷ ಯಶ್ಚಂದಸಿ ಸ್ತುತಃ।
12330031c ಯೋಗೈಃ ಸಂಪೂಜ್ಯತೇ ನಿತ್ಯಂ ಸ ಏವಾಹಂ ವಿಭುಃ ಸ್ಮೃತಃ।।
ಯಾರನ್ನು ದ್ಯುತಿಮಾನ್ ಹಿರಣ್ಯಗರ್ಭನೆಂದು ಚಂದಗಳು ಸ್ತುತಿಸುತ್ತವೆಯೋ ಮತ್ತು ಯೋಗಿಗಳು ನಿತ್ಯವೂ ಪೂಜಿಸುತ್ತಾರೋ ಆ ವಿಭುವು ನಾನೇ ಆಗಿದ್ದೇನೆ.
12330032a ಏಕವಿಂಶತಿಶಾಖಂ8 ಚ ಋಗ್ವೇದಂ ಮಾಂ ಪ್ರಚಕ್ಷತೇ।
12330032c ಸಹಸ್ರಶಾಖಂ ಯತ್ಸಾಮ ಯೇ ವೈ ವೇದವಿದೋ ಜನಾಃ।
12330032e ಗಾಯಂತ್ಯಾರಣ್ಯಕೇ ವಿಪ್ರಾ ಮದ್ಭಕ್ತಾಸ್ತೇಽಪಿ ದುರ್ಲಭಾಃ।।
ಇಪ್ಪತ್ತೊಂದು ಶಾಖೆಗಳಿರುವ ಋಗ್ವೇದವು ನಾನು ಎನ್ನುತ್ತಾರೆ. ಸಹಸ್ರಶಾಖೆಗಳಿರುವ ಸಾಮವನ್ನೂ ನಾನೇ ಎಂದು ವೇದವಿದ ಜನರು ತಿಳಿದಿದ್ದಾರೆ. ನನ್ನ ಭಕ್ತರಾದ ದುರ್ಲಭ ವಿಪ್ರರು ನನ್ನನ್ನು ಅರಣ್ಯಕಗಳಲ್ಲಿ ಸ್ತೋತ್ರಮಾಡುತ್ತಾರೆ.
12330033a ಷಟ್ಪಂಚಾಶತಮಷ್ಟೌ ಚ ಸಪ್ತತ್ರಿಂಶತಮಿತ್ಯುತ।
12330033c ಯಸ್ಮಿನ್ಶಾಖಾ ಯಜುರ್ವೇದೇ ಸೋಽಹಮಾಧ್ವರ್ಯವೇ ಸ್ಮೃತಃ।।
ಐವತ್ತಾರು, ಎಂಟು ಮತ್ತು ಮೂವತ್ತೇಳು – ಒಟ್ಟು ನೂರಾಒಂದು ಶಾಖೆಗಳಿರುವ ಅಧ್ವರ್ಯಶಾಖೆ ಯಜುರ್ವೇದದಲ್ಲಿಯೂ ನಾನೇ ಸ್ತುತಿಸಲ್ಪಟ್ಟಿದ್ದೇನೆ.
12330034a ಪಂಚಕಲ್ಪಮಥರ್ವಾಣಂ ಕೃತ್ಯಾಭಿಃ ಪರಿಬೃಂಹಿತಮ್।
12330034c ಕಲ್ಪಯಂತಿ ಹಿ ಮಾಂ ವಿಪ್ರಾ ಅಥರ್ವಾಣವಿದಸ್ತಥಾ।।
ಅಥರ್ವವೇದವಿದು ವಿಪ್ರರು ಪಂಚಕಲ್ಪ ಕೃತ್ಯಗಳಿಂದ ಕೂಡಿರುವ ಅಥರ್ವವೇದವೂ ನಾನೇ ಎಂದು ತಿಳಿದಿದ್ದಾರೆ.
12330035a ಶಾಖಾಭೇದಾಶ್ಚ ಯೇ ಕೇ ಚಿದ್ಯಾಶ್ಚ ಶಾಖಾಸು ಗೀತಯಃ।
12330035c ಸ್ವರವರ್ಣಸಮುಚ್ಚಾರಾಃ ಸರ್ವಾಂಸ್ತಾನ್ವಿದ್ಧಿ ಮತ್ಕೃತಾನ್।।
ವೇದಗಳಲ್ಲಿರುವ ಶಾಖಭೇದಗಳನ್ನೂ ಶಾಖೆಗಳಲ್ಲಿರುವ ಗೀತೆಗಳನ್ನೂ, ಗೀತೆಗಳಲ್ಲಿರುವ ಸ್ವರ-ವರ್ಣ-ಉಚ್ಚಾರಣಗಳನ್ನು ಎಲ್ಲವನ್ನೂ ನಾನೇ ರಚಿಸಿದ್ದೇನೆ ಎಂದು ತಿಳಿ.
12330036a ಯತ್ತದ್ಧಯಶಿರಃ ಪಾರ್ಥ ಸಮುದೇತಿ ವರಪ್ರದಮ್।
12330036c ಸೋಽಹಮೇವೋತ್ತರೇ ಭಾಗೇ ಕ್ರಮಾಕ್ಷರವಿಭಾಗವಿತ್।।
ಪಾರ್ಥ! ವರಪ್ರದ ಹಯಶಿರನಾಗಿ ಅವತರಿಸಿದ ನಾನೇ ಸಂಹಿತೆಯ ಉತ್ತರಭಾಗದಲ್ಲಿ ಕ್ರಮಾಕ್ಷರವಿಭಾಗವನ್ನು ತಿಳಿದವನಾಗಿದ್ದೇನೆ.
12330037a ರಾಮಾದೇಶಿತಮಾರ್ಗೇಣ9 ಮತ್ಪ್ರಸಾದಾನ್ಮಹಾತ್ಮನಾ।
12330037c ಪಾಂಚಾಲೇನ ಕ್ರಮಃ ಪ್ರಾಪ್ತಸ್ತಸ್ಮಾದ್ಭೂತಾತ್ಸನಾತನಾತ್।
ರಾಮನು ಉಪದೇಶಿಸಿದ ಮಾರ್ಗದ ಮೂಲಕ ನನ್ನನ್ನು ಆರಾಧಿಸಿ ಸನಾತನ ಮಹಾಭೂತನೆಂದು ಖ್ಯಾತನಾದ ನನ್ನ ಅನುಗ್ರಹದಿಂದ ಮಹಾತ್ಮ ಪಾಂಚಾಲನು ವೇದಗಳ ಕ್ರಮಪಾಠವನ್ನು ಪಡೆದುಕೊಂಡನು.
12330037e ಬಾಭ್ರವ್ಯಗೋತ್ರಃ ಸ ಬಭೌ ಪ್ರಥಮಃ ಕ್ರಮಪಾರಗಃ।।
12330038a ನಾರಾಯಣಾದ್ವರಂ ಲಬ್ಧ್ವಾ ಪ್ರಾಪ್ಯ ಯೋಗಮನುತ್ತಮಮ್।
12330038c ಕ್ರಮಂ ಪ್ರಣೀಯ ಶಿಕ್ಷಾಂ ಚ ಪ್ರಣಯಿತ್ವಾ ಸ ಗಾಲವಃ।।
ಬಾಭ್ರವ್ಯಗೋತ್ರದ ಗಾಲವನು ನಾರಾಯಣನಿಂದ ವರವನ್ನು ಪಡೆದು ಉತ್ತಮ ಯೋಗವನ್ನು ಹೊಂದಿ ವೇದಗಳ ಕ್ರಮವಿಭಾಗವನ್ನು ಮಾಡಿ ಶಿಕ್ಷೆಯನ್ನು ರಚಿಸಿ ಮೊಟ್ಟಮೊದಲನೆಯ ಕ್ರಮಪಾಠಿಯಾದನು.
12330039a ಕಂಡರೀಕೋಽಥ ರಾಜಾ ಚ ಬ್ರಹ್ಮದತ್ತಃ ಪ್ರತಾಪವಾನ್।
12330039c ಜಾತೀಮರಣಜಂ ದುಃಖಂ ಸ್ಮೃತ್ವಾ ಸ್ಮೃತ್ವಾ ಪುನಃ ಪುನಃ।
12330039e ಸಪ್ತಜಾತಿಷು ಮುಖ್ಯತ್ವಾದ್ಯೋಗಾನಾಂ ಸಂಪದಂ ಗತಃ।।
ಕಂಡರೀಕ ರಾಜಾ ಪ್ರತಾಪವಾನ್ ಬ್ರಹ್ಮದತ್ತನು ಏಳು ಜನ್ಮಗಳಲ್ಲಿ ಪುನಃ ಪುನಃ ಹುಟ್ಟು-ಮರಣಗಳಿಂದ ಉತ್ಪನ್ನ ದುಃಖವನ್ನು ಸ್ಮರಿಸಿಕೊಳ್ಳುತ್ತಾ ಯೋಗೈಶ್ವರ್ಯವನ್ನು ಪಡೆದುಕೊಂಡನು.
12330040a ಪುರಾಹಮಾತ್ಮಜಃ ಪಾರ್ಥ ಪ್ರಥಿತಃ ಕಾರಣಾಂತರೇ।
12330040c ಧರ್ಮಸ್ಯ ಕುರುಶಾರ್ದೂಲ ತತೋಽಹಂ ಧರ್ಮಜಃ ಸ್ಮೃತಃ।।
ಪಾರ್ಥ! ಕುರುಶಾರ್ದೂಲ! ಹಿಂದೆ ನಾನು ಕಾರಣಾಂತರದಿಂದ ಧರ್ಮನ ಪುತ್ರನೆಂದು ಪ್ರಥಿತನಾಗಿದ್ದೆನು. ಆದುದರಿಂದ ನನ್ನನ್ನು ಧರ್ಮಜ ಎಂದೂ ಕರೆಯುತ್ತಾರೆ.
12330041a ನರನಾರಾಯಣೌ ಪೂರ್ವಂ ತಪಸ್ತೇಪತುರವ್ಯಯಮ್।
12330041c ಧರ್ಮಯಾನಂ ಸಮಾರೂಢೌ ಪರ್ವತೇ ಗಂಧಮಾದನೇ।।
ಹಿಂದೆ ನರ-ನಾರಾಯಣರು ಧರ್ಮಯಾನವನ್ನು ಏರಿ ಗಂಧಮಾದನ ಪರ್ವತದಲ್ಲಿ ಅವ್ಯಯ ತಪಸ್ಸನ್ನು ತಪಿಸುತ್ತಿದ್ದರು.
12330042a ತತ್ಕಾಲಸಮಯಂ ಚೈವ ದಕ್ಷಯಜ್ಞೋ ಬಭೂವ ಹ।
12330042c ನ ಚೈವಾಕಲ್ಪಯದ್ಭಾಗಂ ದಕ್ಷೋ ರುದ್ರಸ್ಯ ಭಾರತ।।
ಭಾರತ! ಅದೇ ಸಮಯದಲ್ಲಿ ದಕ್ಷನ ಯಜ್ಞವೂ ನಡೆಯಿತು. ಅದರಲ್ಲಿ ದಕ್ಷನು ರುದ್ರನಿಗೆ ಯಜ್ಞಭಾಗವನ್ನು ಕಲ್ಪಿಸಲಿಲ್ಲ.
12330043a ತತೋ ದಧೀಚಿವಚನಾದ್ದಕ್ಷಯಜ್ಞಮಪಾಹರತ್।
12330043c ಸಸರ್ಜ ಶೂಲಂ ಕ್ರೋಧೇನ ಪ್ರಜ್ವಲಂತಂ ಮುಹುರ್ಮುಹುಃ।।
ಆಗ ದಧೀಚಿಯ ಮಾತಿನಂತೆ ರುದ್ರನು ದಕ್ಷಯಜ್ಞವನ್ನು ಧ್ವಂಸಗೊಳಿಸಲು ಕ್ರೋಧದಿಂದ ಪ್ರಜ್ವಲಿಸುತ್ತಿರುವ ಶೂಲವನ್ನು ಮತ್ತೆ ಮತ್ತೆ ಪ್ರಯೋಗಿಸಿದನು.
12330044a ತಚ್ಚೂಲಂ ಭಸ್ಮಸಾತ್ ಕೃತ್ವಾ ದಕ್ಷಯಜ್ಞಂ ಸವಿಸ್ತರಮ್।
12330044c ಆವಯೋಃ ಸಹಸಾಗಚ್ಚದ್ಬದರ್ಯಾಶ್ರಮಮಂತಿಕಾತ್।
12330044e ವೇಗೇನ ಮಹತಾ ಪಾರ್ಥ ಪತನ್ನಾರಾಯಣೋರಸಿ।।
ಆ ಶೂಲವು ವಿಸ್ತಾರವಾಗಿದ್ದ ದಕ್ಷಯಜ್ಞವನ್ನು ಸುಟ್ಟು ಭಸ್ಮವನ್ನಾಗಿ ಮಾಡಿ ಎಮ್ಮೆಲೇ ಬದರಿಕಾಶ್ರಮದಲ್ಲಿದ್ದ ನಮ್ಮ ಬಳಿಯೂ ಬಂದಿತು. ಪಾರ್ಥ! ಮಹಾ ವೇಗದಿಂದ ಬಂದ ಅದು ನಾರಾಯಣನ ಎದೆಯಲ್ಲಿ ನೆಟ್ಟಿತು.
12330045a ತತಃ ಸ್ವತೇಜಸಾವಿಷ್ಟಾಃ ಕೇಶಾ ನಾರಾಯಣಸ್ಯ ಹ।
12330045c ಬಭೂವುರ್ಮುಂಜವರ್ಣಾಸ್ತು ತತೋಽಹಂ ಮುಂಜಕೇಶವಾನ್।।
ಅದರ ತೇಜಸ್ಸಿನಿಂದ ಆವಿಷ್ಟವಾದ ನಾರಾಯಣನ ಕೂದಲುಗಳು ನೊಜೆಹುಲ್ಲಿನ ಬಣ್ಣವನ್ನು ಹೊಂದಿದವು. ಆಗ ನಾನು ಮುಂಜಕೇಶನಾದೆನು.
12330046a ತಚ್ಚ ಶೂಲಂ ವಿನಿರ್ಧೂತಂ ಹುಂಕಾರೇಣ ಮಹಾತ್ಮನಾ।
12330046c ಜಗಾಮ ಶಂಕರಕರಂ ನಾರಾಯಣಸಮಾಹತಮ್।।
ಮಹಾತ್ಮ ನಾರಾಯಣನ ಹುಂಕಾರದಿಂದ ಹೊರಬಂದು ನಾರಾಯಣನಿಂದ ಪುನಃ ಪ್ರಯೋಗಿಸಲ್ಪಟ್ಟು ಅದು ಶಂಕರನ ಕರವನ್ನು ಸೇರಿತು.
12330047a ಅಥ ರುದ್ರ ಉಪಾಧಾವತ್ತಾವೃಷೀ ತಪಸಾನ್ವಿತೌ।
12330047c ತತ ಏನಂ ಸಮುದ್ಧೂತಂ ಕಂಠೇ ಜಗ್ರಾಹ ಪಾಣಿನಾ।
12330047e ನಾರಾಯಣಃ ಸ ವಿಶ್ವಾತ್ಮಾ ತೇನಾಸ್ಯ ಶಿತಿಕಂಠತಾ।।
ಕೂಡಲೇ ರುದ್ರನು ತಪಸಾನ್ವಿತರಾದ ಆ ಋಷಿಗಳ ಬಳಿ ಧಾವಿಸಿ ಬಂದನು. ತಮ್ಮ ಮೇಲೆ ಬೀಳುತ್ತಿದ್ದ ಅವನ ಕಂಠವನ್ನು ವಿಶ್ವಾತ್ಮ ನಾರಾಯಣನು ತನ್ನ ಕೈಗಳಿಂದ ಹಿಡಿದನು. ಅದರಿಂದ ರುದ್ರನು ಶಿತಿಕಂಠನಾದನು.
12330048a ಅಥ ರುದ್ರವಿಘಾತಾರ್ಥಮಿಷೀಕಾಂ ಜಗೃಹೇ ನರಃ।
12330048c ಮಂತ್ರೈಶ್ಚ ಸಂಯುಯೋಜಾಶು ಸೋಽಭವತ್ಪರಶುರ್ಮಹಾನ್।।
ಕೂಡಲೇ ನರನು ರುದ್ರನನ್ನು ಪ್ರಹರಿಸಲು ಜಂಬುಹುಲ್ಲನ್ನು ಹಿಡಿದು ಮಂತ್ರಗಳಿಂದ ಅಭಿಮಂತ್ರಿಸಲು ಅದು ಮಹಾ ಪರಶುವಾಯಿತು.
12330049a ಕ್ಷಿಪ್ತಶ್ಚ ಸಹಸಾ ರುದ್ರೇ ಖಂಡನಂ ಪ್ರಾಪ್ತವಾಂಸ್ತದಾ।
12330049c ತತೋಽಹಂ ಖಂಡಪರಶುಃ ಸ್ಮೃತಃ ಪರಶುಖಂಡನಾತ್।।
ಎಸೆಯಲ್ಪಟ್ಟ ಆ ಪರಶುವನ್ನು ರುದ್ರನು ಖಂಡಿಸಿದನು. ಪರಶುಖಂಡನನಿಂದ ನಾನು ಖಂಡಪರಶುವಾದೆನು.”
12330050 ಅರ್ಜುನ ಉವಾಚ।
12330050a ಅಸ್ಮಿನ್ಯುದ್ಧೇ ತು ವಾರ್ಷ್ಣೇಯ ತ್ರೈಲೋಕ್ಯಮಥನೇ ತದಾ।
12330050c ಜಯಂ ಕಃ ಪ್ರಾಪ್ತವಾಂಸ್ತತ್ರ ಶಂಸೈತನ್ಮೇ ಜನಾರ್ದನ।।
ಅರ್ಜುನನು ಹೇಳಿದನು: “ವಾರ್ಷ್ಣೇಯ! ಜನಾರ್ದನ! ತ್ರೈಲೋಕ್ಯಗಳನ್ನು ಮಥಿಸುವಂಥಹ ಆ ಯುದ್ಧದಲ್ಲಿ ಜಯವು ಯಾರಿಗೆ ಪ್ರಾಪ್ತವಾಯಿತು ಎನ್ನುವುದನ್ನು ನನಗೆ ಹೇಳು.”
12330051 ಶ್ರೀಭಗವಾನುವಾಚ।
12330051a ತಯೋಃ ಸಂಲಗ್ನಯೋರ್ಯುದ್ಧೇ ರುದ್ರನಾರಾಯಣಾತ್ಮನೋಃ।
12330051c ಉದ್ವಿಗ್ನಾಃ ಸಹಸಾ ಕೃತ್ಸ್ನಾ ಲೋಕಾಃ ಸರ್ವೇಽಭವಂಸ್ತದಾ।।
ಶ್ರೀಭಗವಂತನು ಹೇಳಿದನು: “ರುದ್ರ-ನಾರಾಯಣರು ಇಬ್ಬರೂ ಯುದ್ಧದಲ್ಲಿ ತೊಡಗಿದಾಗ ಕೂಡಲೇ ಲೋಕಗಳೆಲ್ಲವೂ ಸಂಪೂರ್ಣವಾಗಿ ಉದ್ವಿಗ್ನಗೊಂಡವು.
12330052a ನಾಗೃಹ್ಣಾತ್ಪಾವಕಃ ಶುಭ್ರಂ ಮಖೇಷು ಸುಹುತಂ ಹವಿಃ।
12330052c ವೇದಾ ನ ಪ್ರತಿಭಾಂತಿ ಸ್ಮ ಋಷೀಣಾಂ ಭಾವಿತಾತ್ಮನಾಮ್।।
ಪಾವಕನು ಶುಭ್ರವಾದ ಆಹುತಿ ಹವಿಸ್ಸನ್ನು ಸ್ವೀಕರಿಸದಂತಾದನು. ಭಾವಿತಾತ್ಮ ಋಷಿಗಳಿಗೆ ವೇದಗಳು ಹೊಳೆಯಲಿಲ್ಲ.
12330053a ದೇವಾನ್ರಜಸ್ತಮಶ್ಚೈವ ಸಮಾವಿವಿಶತುಸ್ತದಾ।
12330053c ವಸುಧಾ ಸಂಚಕಂಪೇಽಥ ನಭಶ್ಚ ವಿಪಫಾಲ10 ಹ।।
ಆಗ ರಜ-ತಮಗಳು ದೇವತೆಗಳನ್ನು ಪ್ರವೇಶಿಸಿದವು. ವಸುಧೆಯು ಕಂಪಿಸಿತು ಮತ್ತು ನಭವು ಸೀಳಿತು.
12330054a ನಿಷ್ಪ್ರಭಾಣಿ ಚ ತೇಜಾಂಸಿ ಬ್ರಹ್ಮಾ ಚೈವಾಸನಾಚ್ಚ್ಯುತಃ।
12330054c ಅಗಾಚ್ಚೋಷಂ ಸಮುದ್ರಶ್ಚ ಹಿಮವಾಂಶ್ಚ ವ್ಯಶೀರ್ಯತ।।
ಗ್ರಹ-ನಕ್ಷತ್ರಗಳು ಪ್ರಭಾಹೀನವಾದವು. ಬ್ರಹ್ಮನು ಆಸನದಿಂದ ಕೆಳಕ್ಕೆ ಬಿದ್ದನು. ಸಮುದ್ರವು ಒಣಗತೊಡಗಿತು ಮತ್ತು ಹಿಮವತ್ಪರ್ವತವು ಸೀಳಿತು.
12330055a ತಸ್ಮಿನ್ನೇವಂ ಸಮುತ್ಪನ್ನೇ ನಿಮಿತ್ತೇ ಪಾಂಡುನಂದನ।
12330055c ಬ್ರಹ್ಮಾ ವೃತೋ ದೇವಗಣೈರೃಷಿಭಿಶ್ಚ ಮಹಾತ್ಮಭಿಃ।
12330055e ಆಜಗಾಮಾಶು ತಂ ದೇಶಂ ಯತ್ರ ಯುದ್ಧಮವರ್ತತ।।
ಪಾಂಡುನಂದನ! ಈ ರೀತಿಯ ನಿಮಿತ್ತಗಳು ಉಂಟಾಗಲು ಬ್ರಹ್ಮನು ಮಹಾತ್ಮ ಋಷಿಗಳಿಂದಲೂ ದೇವಗಣಗಳಿಂದಲೂ ಆವೃತನಾಗಿ ಎಲ್ಲಿ ಯುದ್ಧವು ನಡೆಯುತ್ತಿತ್ತೋ ಅಲ್ಲಿಗೆ ಆಗಮಿಸಿದನು.
12330056a ಸಾಂಜಲಿಪ್ರಗ್ರಹೋ ಭೂತ್ವಾ ಚತುರ್ವಕ್ತ್ರೋ ನಿರುಕ್ತಗಃ।
12330056c ಉವಾಚ ವಚನಂ ರುದ್ರಂ ಲೋಕಾನಾಮಸ್ತು ವೈ ಶಿವಮ್।
12330056e ನ್ಯಸ್ಯಾಯುಧಾನಿ ವಿಶ್ವೇಶ ಜಗತೋ ಹಿತಕಾಮ್ಯಯಾ।।
ನಿರುಕ್ತಗ ಚತುರ್ವಕ್ತ್ರನು ಕೈಗಳನ್ನು ಮುಗಿದು ಅಂಜಲೀಬದ್ಧನಾಗಿ ಲೋಕಗಳ ಶಿವ ರುದ್ರನಿಗೆ ಈ ಮಾತನ್ನಾಡಿದನು: “ವಿಶ್ವೇಶ! ಜಗತ್ತಿನ ಹಿತವನ್ನು ಬಯಸಿ ಆಯುಧಗಳನ್ನು ಕೆಳಗಿಡು!
12330057a ಯದಕ್ಷರಮಥಾವ್ಯಕ್ತಮೀಶಂ ಲೋಕಸ್ಯ ಭಾವನಮ್।
12330057c ಕೂಟಸ್ಥಂ ಕರ್ತೃನಿರ್ದ್ವಂದ್ವಮಕರ್ತೇತಿ ಚ ಯಂ ವಿದುಃ।।
12330058a ವ್ಯಕ್ತಿಭಾವಗತಸ್ಯಾಸ್ಯ ಏಕಾ ಮೂರ್ತಿರಿಯಂ ಶಿವಾ।
ಲೋಕದ ಸೃಷ್ಟಿಗೆ ಕಾರಣವಾದ ಅಕ್ಷರ ಮತ್ತು ಅವ್ಯಕ್ತದ ವ್ಯಕ್ತಿಭಾವಗತನಾಗಿರುವ ಏಕ ಮೂರ್ತಿಯು ಇವನು. ಈಶ, ಕೂಟಸ್ಥ, ಕರ್ತೃ, ನಿಂರ್ದ್ವಂದ್ವ ಮತ್ತು ಅಕರ್ತನೆಂದೂ ಇವನನ್ನು ತಿಳಿಯಲಾಗಿದೆ.
12330058c ನರೋ ನಾರಾಯಣಶ್ಚೈವ ಜಾತೌ ಧರ್ಮಕುಲೋದ್ವಹೌ।।
12330059a ತಪಸಾ ಮಹತಾ ಯುಕ್ತೌ ದೇವಶ್ರೇಷ್ಠೌ ಮಹಾವ್ರತೌ।
ಧರ್ಮನ ಕುಲದಲ್ಲಿ ಹುಟ್ಟಿರುವ ಈ ನರ-ನಾರಾಯಣರಿಬ್ಬರೂ ಮಹಾತಪಸ್ಸಿನಿಂದ ಯುಕ್ತರಾಗಿದ್ದಾರೆ. ದೇವಶ್ರೇಷ್ಠರೂ ಮಹಾವ್ರತರೂ ಆಗಿದ್ದಾರೆ.
12330059c ಅಹಂ ಪ್ರಸಾದಜಸ್ತಸ್ಯ ಕಸ್ಮಿಂಶ್ಚಿತ್ಕಾರಣಾಂತರೇ।
12330059e ತ್ವಂ ಚೈವ ಕ್ರೋಧಜಸ್ತಾತ ಪೂರ್ವಸರ್ಗೇ ಸನಾತನಃ।।
ಅಯ್ಯಾ! ಯಾವುದೋ ಕಾರಣದಿಂದ ನಾನು ಇವನ ಪ್ರಸಾದದಿಂದ ಹುಟ್ಟಿದ್ದೇನೆ. ಹಿಂದಿನ ಸೃಷ್ಟಿಯಲ್ಲಿ ಸನಾತನನಾದ ನೀನೂ ಕೂಡ ಇವನ ಕ್ರೋಧದಿಂದ ಹುಟ್ಟಿದ್ದೆ.
12330060a ಮಯಾ ಚ ಸಾರ್ಧಂ ವರದಂ ವಿಬುಧೈಶ್ಚ ಮಹರ್ಷಿಭಿಃ।
12330060c ಪ್ರಸಾದಯಾಶು ಲೋಕಾನಾಂ ಶಾಂತಿರ್ಭವತು ಮಾಚಿರಮ್।।
ನನ್ನೊಡನೆ ಮತ್ತು ವಿಬುಧರು-ಮಹರ್ಷಿಗಳೊಂದಿಗೆ ಕೂಡಲೇ ಈ ವರದನನ್ನು ಪ್ರಸನ್ನಗೊಳಿಸು. ಲೋಕಗಳಲ್ಲಿ ಶಾಂತಿಯು ನೆಲೆಸಲಿ.”
12330061a ಬ್ರಹ್ಮಣಾ ತ್ವೇವಮುಕ್ತಸ್ತು ರುದ್ರಃ ಕ್ರೋಧಾಗ್ನಿಮುತ್ಸೃಜನ್।
12330061c ಪ್ರಸಾದಯಾಮಾಸ ತತೋ ದೇವಂ ನಾರಾಯಣಂ ಪ್ರಭುಮ್।
12330061e ಶರಣಂ ಚ ಜಗಾಮಾದ್ಯಂ ವರೇಣ್ಯಂ ವರದಂ ಹರಿಮ್।।
ಬ್ರಹ್ಮನು ಹೀಗೆ ಹೇಳಲು ರುದ್ರನು ಕ್ರೋಧಾಗ್ನಿಯನ್ನು ಬಿಸುಟು ದೇವ ನಾರಾಯಣ ಪ್ರಭುವನ್ನು ಪ್ರಸನ್ನಗೊಳಿಸತೊಡಗಿದನು ಮತ್ತು ಆ ಆದ್ಯ, ವರೇಣ್ಯ, ವರದ ಹರಿಯ ಶರಣು ಹೊಕ್ಕನು.
12330062a ತತೋಽಥ ವರದೋ ದೇವೋ ಜಿತಕ್ರೋಧೋ ಜಿತೇಂದ್ರಿಯಃ।
12330062c ಪ್ರೀತಿಮಾನಭವತ್ತತ್ರ ರುದ್ರೇಣ ಸಹ ಸಂಗತಃ।।
ಅನಂತರ ವರದ ದೇವ ಜಿತಕ್ರೋಧ ಜಿತೇಂದ್ರಿಯ ನಾರಾಯಣನು ಪ್ರೀತಿಮಾನನಾಗಿ ರುದ್ರನೊಡನೆ ಸೇರಿದನು.
12330063a ಋಷಿಭಿರ್ಬ್ರಹ್ಮಣಾ ಚೈವ ವಿಬುಧೈಶ್ಚ ಸುಪೂಜಿತಃ।
12330063c ಉವಾಚ ದೇವಮೀಶಾನಮೀಶಃ ಸ ಜಗತೋ ಹರಿಃ।।
ಋಷಿಗಳಿಂದಲೂ, ಬ್ರಹ್ಮನಿಂದಲೂ ಮತ್ತು ವಿಬುಧರಿಂದಲೂ ಪೂಜಿತನಾದ ಜಗತ್ತಿನ ಈಶ ಹರಿಯು ದೇವ ಈಶಾನ ರುದ್ರನಿಗೆ ಹೇಳಿದನು:
12330064a ಯಸ್ತ್ವಾಂ ವೇತ್ತಿ ಸ ಮಾಂ ವೇತ್ತಿ ಯಸ್ತ್ವಾಮನು ಸ ಮಾಮನು।
12330064c ನಾವಯೋರಂತರಂ ಕಿಂ ಚಿನ್ಮಾ ತೇ ಭೂದ್ಬುದ್ಧಿರನ್ಯಥಾ।।
“ನಿನ್ನನ್ನು ಯಾರು ತಿಳಿಯುತ್ತಾರೋ ಅವರು ನನ್ನನ್ನೂ ತಿಳಿಯುತ್ತಾರೆ. ಯಾರು ನಿನ್ನನ್ನು ಅನುಸರಿಸುತ್ತಾರೋ ಅವರು ನನ್ನನ್ನೂ ಅನುಸರಿಸಿದಂತೆ. ನಮ್ಮಿಬ್ಬರಲ್ಲಿ ಯಾವುದೇ ಅಂತರವಿಲ್ಲ. ನಿನ್ನ ಮನಸ್ಸಿನಲ್ಲಿಯೂ ಇದಕ್ಕೆ ವಿಪರೀತವಾದ ವಿಚಾರವು ಸುಳಿಯದಿರಲಿ.
12330065a ಅದ್ಯ ಪ್ರಭೃತಿ ಶ್ರೀವತ್ಸಃ ಶೂಲಾಂಕೋಽಯಂ ಭವತ್ವಯಮ್।
12330065c ಮಮ ಪಾಣ್ಯಂಕಿತಶ್ಚಾಪಿ ಶ್ರೀಕಂಠಸ್ತ್ವಂ ಭವಿಷ್ಯಸಿ।।
ಇಂದಿನಿಂದ ನನ್ನ ವಕ್ಷದಲ್ಲಿ ಬಿದ್ದಿರುವ ನಿನ್ನ ಶೂಲದ ಚಿಹ್ನೆಯು ಶ್ರೀವತ್ಸ ಎಂಬ ಹೆಸರಿನಿಂದ ಪ್ರಸಿದ್ಧವಾಗಲಿ. ಹಾಗೆಯೇ ನನ್ನ ಹಸ್ತದ ಚಿಹ್ನೆಯನ್ನು ಕತ್ತಿನಲ್ಲಿ ಹೊಂದಿರುವ ನೀನು ಶ್ರೀಕಂಠನೆಂದಾಗುವೆ.”
12330066a ಏವಂ ಲಕ್ಷಣಮುತ್ಪಾದ್ಯ ಪರಸ್ಪರಕೃತಂ ತದಾ।
12330066c ಸಖ್ಯಂ ಚೈವಾತುಲಂ ಕೃತ್ವಾ ರುದ್ರೇಣ ಸಹಿತಾವೃಷೀ।
12330066e ತಪಸ್ತೇಪತುರವ್ಯಗ್ರೌ ವಿಸೃಜ್ಯ ತ್ರಿದಿವೌಕಸಃ।।
ಹೀಗೆ ಪರಸ್ಪರ ಶರೀರಗಳಲ್ಲಿ ಮಾಡಿಕೊಂಡಿದ್ದ ಗುರುತುಗಳಿಗೆ ಶುಭಲಕ್ಷಣಗಳ ಸ್ವರೂಪವನ್ನಿತ್ತು ನರ-ನಾರಾಯಣ ಋಷಿಗಳು ರುದ್ರನೊಂದಿಗೆ ಅತುಲ ಸಖ್ಯವನ್ನು ಮಾಡಿಕೊಂಡರು. ತ್ರಿದಿವೌಕಸರನ್ನು ಕಳುಹಿಸಿಕೊಟ್ಟೂ ಅವರು ಉಗ್ರ ತಪಸ್ಸನ್ನು ತಪಿಸಿದರು.
12330067a ಏಷ ತೇ ಕಥಿತಃ ಪಾರ್ಥ ನಾರಾಯಣಜಯೋ ಮೃಧೇ।
12330067c ನಾಮಾನಿ ಚೈವ ಗುಹ್ಯಾನಿ ನಿರುಕ್ತಾನಿ ಚ ಭಾರತ।
12330067e ಋಷಿಭಿಃ ಕಥಿತಾನೀಹ ಯಾನಿ ಸಂಕೀರ್ತಿತಾನಿ ತೇ।।
ಪಾರ್ಥ! ಹೀಗೆ ಯುದ್ಧದಲ್ಲಿ ನಾರಾಯಣನ ಜಯದ ಕುರಿತು ನಿನಗೆ ಹೇಳಿದ್ದೇನೆ. ನನ್ನ ಗುಹ್ಯ ನಾಮಗಳನ್ನೂ ಅವುಗಳ ಅರ್ಥಗಳನ್ನೂ ನಿನಗೆ ಹೇಳಿದ್ದೇನೆ. ಋಷಿಗಳು ಸ್ತುತಿಸಿದ ನಾಮಗಳನ್ನೂ ಹೇಳಿದ್ದೇನೆ.
12330068a ಏವಂ ಬಹುವಿಧೈ ರೂಪೈಶ್ಚರಾಮೀಹ ವಸುಂಧರಾಮ್।
12330068c ಬ್ರಹ್ಮಲೋಕಂ ಚ ಕೌಂತೇಯ ಗೋಲೋಕಂ ಚ ಸನಾತನಮ್।
12330068e ಮಯಾ ತ್ವಂ ರಕ್ಷಿತೋ ಯುದ್ಧೇ ಮಹಾಂತಂ ಪ್ರಾಪ್ತವಾನ್ಜಯಮ್।।
ಕೌಂತೇಯ! ಹೀಗೆ ಬಹುವಿಧದ ರೂಪಗಳಲ್ಲಿ ನಾನು ವಸುಂಧರೆಯಲ್ಲಿ, ಬ್ರಹ್ಮಲೋಕದಲ್ಲಿ ಮತ್ತು ಸನಾತನ ಗೋಲೋಕಗಳಲ್ಲಿ ಸಂಚರಿಸುತ್ತಿರುತ್ತೇನೆ. ನನ್ನಿಂದ ರಕ್ಷಿತನಾದ ನೀನು ಮಹಾಯುದ್ಧದಲ್ಲಿ ಜಯವನ್ನು ಗಳಿಸಿದ್ದೀಯೆ.
12330069a ಯಸ್ತು ತೇ ಸೋಽಗ್ರತೋ ಯಾತಿ ಯುದ್ಧೇ ಸಂಪ್ರತ್ಯುಪಸ್ಥಿತೇ।
12330069c ತಂ ವಿದ್ಧಿ ರುದ್ರಂ ಕೌಂತೇಯ ದೇವದೇವಂ ಕಪರ್ದಿನಮ್।।
ಕೌಂತೇಯ! ಯುದ್ಧದಲ್ಲಿ ಯಾರು ನಿನ್ನ ಮುಂಭಾಗದಲ್ಲಿ ಹೋಗುತ್ತಿದ್ದನೋ ಅವನೇ ರುದ್ರ, ದೇವದೇವ, ಕಪರ್ದಿನಿಯೆಂದು ತಿಳಿ.
12330070a ಕಾಲಃ ಸ ಏವ ಕಥಿತಃ ಕ್ರೋಧಜೇತಿ ಮಯಾ ತವ।
12330070c ನಿಹತಾಂಸ್ತೇನ ವೈ ಪೂರ್ವಂ ಹತವಾನಸಿ ವೈ ರಿಪೂನ್।।
ನನ್ನ ಕ್ರೋಧದಿಂದ ಹುಟ್ಟಿದ ಅವನನ್ನು ಕಾಲ ಎಂದೂ ಕರೆಯುತ್ತಾರೆ. ನೀನು ಯಾವ ಶತ್ರುಗಳನ್ನು ಸಂಹರಿಸಿದೆಯೋ ಅವರೆಲ್ಲರನ್ನೂ ಅದಕ್ಕೂ ಮೊದಲೇ ರುದ್ರನು ಸಂಹರಿಸಿದ್ದನು.
12330071a ಅಪ್ರಮೇಯಪ್ರಭಾವಂ ತಂ ದೇವದೇವಮುಮಾಪತಿಮ್।
12330071c ನಮಸ್ವ ದೇವಂ ಪ್ರಯತೋ ವಿಶ್ವೇಶಂ ಹರಮವ್ಯಯಮ್।।
ಆ ಅಪ್ರಮೇಯ ಪ್ರಭಾವೀ ದೇವದೇವ ಉಮಾಪತಿ ವಿಶ್ವೇಶ ಹರ ಅವ್ಯಯ ದೇವನನ್ನು ಪ್ರಯತನಾಗಿ ನಮಸ್ಕರಿಸು.””
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ನಾರಾಯಣೀಯೇ ತ್ರಿಂಶಾಧಿಕತ್ರಿಶತತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ನಾರಾಯಣೀಯ ಎನ್ನುವ ಮುನ್ನೂರಾಮೂವತ್ತನೇ ಅಧ್ಯಾಯವು.-
ಸೂರ್ಯಾಚಂದ್ರಮಸೌ ಚಕ್ಷುಃ ಕೇಶಾಶ್ಚೈವಾಂಶವಃ ಸ್ಮೃತಾಃ। (ಭಾರತ ದರ್ಶನ). ↩︎
-
ಗಾಂ ವಿಂದತ ಇತಿ ಗೋವಿಂದಃ। ↩︎
-
ವಿಗತಾ ಕುಂಠಾ ಪಂಚಾನಾಂ ಭೂತಾನಾಂ ಮೇಲನೇ ಅಸಾಮರ್ಥ್ಯಂ ಯಸ್ಯ ಸಃ ವಿಕುಂಠಃ=ವಿಕುಂಠ ಏವ ವೈಕುಂಠಃ (ಪಂಚಭೂತಗಳ ಸಂಯೋಜನೆಯಲ್ಲಿ ಅಸಾಮರ್ಥ್ಯವು ಯಾವನಿಗಿಲ್ಲವೋ ಅವನು ವಿಕುಂಠ. ಅವನೇ ವೈಕುಂಠ) – ನೀಲಕಂಠೀಯ ಭಾಷ್ಯ. ↩︎
-
ಬ್ರಹ್ಮ (ಭಾರತ ದರ್ಶನ). ↩︎
-
ವಿಶ್ವತೋಮುಖೇ (ಭಾರತ ದರ್ಶನ). ↩︎
-
ಯಜಮಾನ ಮತ್ತು ಋತ್ವಿಕ್ಕುಗಳು ಇರುವ ಮನೆ. ↩︎
-
ಅಧೋ ನ ಕ್ಷಿಯತೇ ಯಸ್ಮಾದ್ವದಂತನ್ಯೇ ಹ್ಯಧೋಕ್ಷಜಮ್ (ಯಾವನ ಅನುಗ್ರಹದಿಂದ ಜೀವರು ಅಧೋಗತಿಗೆ ಬಿದ್ದು ಹಾಳಾಗುವುದಿಲ್ಲವೋ ಅಂಥವನು ಅಧೋಕ್ಷಜನೆಂದು ಇತರ ವಿದ್ವಾಂಸರು ಅಧೋಕ್ಷಜ ಶಬ್ದಕ್ಕೆ ನಿರುಕ್ತವನ್ನು ಹೇಳಿರುತ್ತಾರೆ. ಅಕ್ಷಾನ್=ಇಂದ್ರಿಯಗಳನ್ನು ಅಧಃ=ಕೆಳಗೆ ತಳ್ಳಿ ಜಃ=ಅವತರಿಸಿರುವನು ಎಂದೂ ಅರ್ಥಮಾಡಬಹುದು. ↩︎
-
ಏಕವಿಂಶತಿಸಾಹಸ್ರಂ (ಭಾರತ ದರ್ಶನ). ↩︎
-
ವಾಮಾದೇಶಿತಮಾರ್ಗೇಣ (ಭಾರತ ದರ್ಶನ). ↩︎
-
ವಿಚಚಾಲ (ಭಾರತ ದರ್ಶನ). ↩︎