ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 326
ಸಾರ
ಶ್ವೇತದ್ವೀಪದಲ್ಲಿ ನಾರದನಿಗೆ ಭಗವಂತನ ದರ್ಶನ (1-16); ಭಗವಂತನಿಂದ ವಾಸುದೇವ-ಸಂಕರ್ಷಣಾದಿ ವ್ಯೂಹರೂಪಗಳ ಪರಿಚಯ (17-27); ಭವಿಷ್ಯದಲ್ಲಿ ಆಗುವ ಅವತಾರಗಳ ಸೂಚನೆ (28-100); ಕಥಾಶ್ರವಣದ ಮಹಿಮೆ (101-124).
12326001 ಭೀಷ್ಮ ಉವಾಚ।
12326001a ಏವಂ ಸ್ತುತಃ ಸ ಭಗವಾನ್ಗುಹ್ಯೈಸ್ತಥ್ಯೈಶ್ಚ ನಾಮಭಿಃ।
12326001c ತಂ ಮುನಿಂ ದರ್ಶಯಾಮಾಸ ನಾರದಂ ವಿಶ್ವರೂಪಧೃಕ್।।
ಭೀಷ್ಮನು ಹೇಳಿದನು: “ಹೀಗೆ ಅವನು ಗುಹ್ಯ ಯಥಾರ್ಥ ನಾಮಗಳಿಂದ ಸ್ತುತಿಸಲು ವಿಶ್ವರೂಪಧರ ಭಗವಾನನು ನಾರದ ಮುನಿಗೆ ಕಾಣಿಸಿಕೊಂಡನು.
12326002a ಕಿಂ ಚಿಚ್ಚಂದ್ರವಿಶುದ್ಧಾತ್ಮಾ ಕಿಂ ಚಿಚ್ಚಂದ್ರಾದ್ವಿಶೇಷವಾನ್।
12326002c ಕೃಶಾನುವರ್ಣಃ ಕಿಂ ಚಿಚ್ಚ ಕಿಂ ಚಿದ್ಧಿಷ್ಣ್ಯಾಕೃತಿಃ ಪ್ರಭುಃ।।
ಆ ಪ್ರಭುವು ಕೆಲವೊಂದೆಡೆ ಚಂದ್ರನಂತೆಯೇ ವಿಶುದ್ಧಾತ್ಮನಾಗಿದ್ದರೆ ಇನ್ನು ಕೆಲವೆಡೆ ಚಂದ್ರನನ್ನೂ ಮೀರಿದ್ದನು. ಕೆಲವೆಡೆ ಅಗ್ನಿಯ ಬಣ್ಣವನ್ನು ಹೊಂದಿದ್ದರೆ ಇನ್ನು ಕೆಲವೆಡೆ ನಕ್ಷತ್ರದ ಛಾಯೆಯೂ ಇದ್ದಿತು.
12326003a ಶುಕಪತ್ರವರ್ಣಃ ಕಿಂ ಚಿಚ್ಚ ಕಿಂ ಚಿತ್ ಸ್ಫಟಿಕಸಪ್ರಭಃ।
12326003c ನೀಲಾಂಜನಚಯಪ್ರಖ್ಯೋ ಜಾತರೂಪಪ್ರಭಃ ಕ್ವ ಚಿತ್।।
ಕೆಲವೆಡೆ ಗಿಳಿಯ ಬಣ್ಣಗಳಿದ್ದರೆ ಕೆಲವೆಡೆ ಸ್ಪಟಿಕದ ಪ್ರಭೆಯಿತ್ತು. ಇನ್ನೂ ಕೆಲವೆಡೆ ನೀಲಾಂಜನದ ಕಪ್ಪಿನಿಂದ ಕೂಡಿದ್ದರೆ ಕೆಲವೆಡೆ ಬಂಗಾರದ ಪ್ರಭೆಯಿದ್ದಿತು.
12326004a ಪ್ರವಾಲಾಂಕುರವರ್ಣಶ್ಚ ಶ್ವೇತವರ್ಣಃ ಕ್ವ ಚಿದ್ಬಭೌ।
12326004c ಕ್ವ ಚಿತ್ಸುವರ್ಣವರ್ಣಾಭೋ ವೈಡೂರ್ಯಸದೃಶಃ ಕ್ವ ಚಿತ್।।
ಕೆಲವೆಡೆ ನೂತನ ಚಿಗುರುಗಳ ವರ್ಣಗಳಿದ್ದರೆ ಇನ್ನೂ ಕೆಲವೆಡೆ ಬಿಳಿಯ ಬಣ್ಣವಿದ್ದಿತು. ಕೆಲವೊಂದೆಡೆ ಸುವರ್ಣವರ್ಣರ್ಣವಿದ್ದರೆ ಕೆಲವು ಕಡೆ ವೈಡೂರ್ಯದಂತೆಯೇ ತೋರುತ್ತಿತ್ತು.
12326005a ನೀಲವೈಡೂರ್ಯಸದೃಶ ಇಂದ್ರನೀಲನಿಭಃ ಕ್ವ ಚಿತ್।
12326005c ಮಯೂರಗ್ರೀವವರ್ಣಾಭೋ ಮುಕ್ತಾಹಾರನಿಭಃ ಕ್ವ ಚಿತ್।।
ಅವನ ಕೆಲವು ಶರೀರಗಳು ನೀಲವೈಡೂರ್ಯಗಳಂತಿದ್ದರೆ ಇನ್ನು ಕೆಲವು ಇಂದ್ರನೀಲದಂತೆ ಹೊಳೆಯುತ್ತಿದ್ದವು. ಕೆಲವು ನವಿಲಿನ ಕುತ್ತಿಗೆಯ ಬಣ್ಣವನ್ನು ತಳೆದಿದ್ದರೆ ಇನ್ನು ಕೆಲವು ಮುತ್ತಿನ ಮಾಲೆಯಂತೆ ಕಾಂತಿಯುಕ್ತವಾಗಿದ್ದವು.
12326006a ಏತಾನ್ವರ್ಣಾನ್ಬಹುವಿಧಾನ್ರೂಪೇ ಬಿಭ್ರತ್ಸನಾತನಃ।
12326006c ಸಹಸ್ರನಯನಃ ಶ್ರೀಮಾನ್ ಶತಶೀರ್ಷಃ ಸಹಸ್ರಪಾತ್।।
ಈ ವರ್ಣಗಳಿಂದ ಬಹುವಿಧದ ರೂಪಗಳಲ್ಲಿ ಆ ಸನಾತನನು ಬೆಳಗುತ್ತಿದ್ದನ್ನು. ಅವನಿಗೆ ಸಹಸ್ರ ಕಣ್ಣುಗಳಿದ್ದವು. ನೂರು ತಲೆಗಳಿದ್ದವು. ಸಹಸ್ರ ಪಾದಗಳಿದ್ದವು.
12326007a ಸಹಸ್ರೋದರಬಾಹುಶ್ಚ ಅವ್ಯಕ್ತ ಇತಿ ಚ ಕ್ವ ಚಿತ್।
12326007c ಓಂಕಾರಮುದ್ಗಿರನ್ವಕ್ತ್ರಾತ್ಸಾವಿತ್ರೀಂ ಚ ತದನ್ವಯಾಮ್।।
ಸಹಸ್ರ ಹೊಟ್ಟೆಗಳು ಬಾಹುಗಳಿದ್ದ ಅವನು ಕೆಲವೆದೇ ಅವ್ಯಕ್ತನಾಗಿದ್ದನು. ಅವನ ಒಂದು ಮುಖದಿಂದ ಓಂಕಾರವೂ ಮತ್ತುಅ ದನ್ನು ಅನುಸರಿಸಿ ಸಾವಿತ್ತ್ರಿಯೂ ಹೊರಹೊಮ್ಮುತ್ತಿತ್ತು.
12326008a ಶೇಷೇಭ್ಯಶ್ಚೈವ ವಕ್ತ್ರೇಭ್ಯಶ್ಚತುರ್ವೇದೋದ್ಗತಂ ವಸು।
12326008c ಆರಣ್ಯಕಂ ಜಗೌ ದೇವೋ ಹರಿರ್ನಾರಾಯಣೋ ವಶೀ।।
ಎಲ್ಲವನ್ನೂ ತನ್ನ ವಶದಲ್ಲಿಟ್ಟುಕೊಂಡಿರುವ ದೇವ ಹರಿ ನಾರಾಯಣನು ಉಳಿದ ವಕ್ತ್ರಗಳಿಂದ ಚತುರ್ವೇದಗಳು ಮತ್ತು ಆರಣ್ಯಕಗಳನ್ನು ಪಠಿಸುತ್ತಿದ್ದನು.
12326009a ವೇದೀಂ ಕಮಂಡಲುಂ ದರ್ಭಾನ್ಮಣಿರೂಪಾನಥೋಪಲಾನ್।
12326009c ಅಜಿನಂ ದಂಡಕಾಷ್ಠಂ ಚ ಜ್ವಲಿತಂ ಚ ಹುತಾಶನಮ್।
12326009e ಧಾರಯಾಮಾಸ ದೇವೇಶೋ ಹಸ್ತೈರ್ಯಜ್ಞಪತಿಸ್ತದಾ।।
ಆ ದೇವೇಶ ಯಜ್ಞಪತಿಯು ಆಗ ತನ್ನಕೈ ಗಳಲ್ಲಿ ಯಜ್ಞವೇದಿಯನ್ನೂ, ಕಮಂಡಲುವನ್ನೂ, ದರ್ಭೆಗಳನ್ನೂ, ಮಣಿರತ್ನಗಳನ್ನೂ, ಮೃಗಚರ್ಮವನ್ನೂ, ಕಾಷ್ಠದಂಡವನ್ನೂ, ಪ್ರಜ್ವಲಿಸುತ್ತಿದ್ದ ಯಜ್ಞೇಶ್ವರನನ್ನು ಹಿಡಿದಿದ್ದನು.
12326010a ತಂ ಪ್ರಸನ್ನಂ ಪ್ರಸನ್ನಾತ್ಮಾ ನಾರದೋ ದ್ವಿಜಸತ್ತಮಃ।
12326010c ವಾಗ್ಯತಃ ಪ್ರಯತೋ ಭೂತ್ವಾ ವವಂದೇ ಪರಮೇಶ್ವರಮ್।
12326010e ತಮುವಾಚ ನತಂ ಮೂರ್ಧ್ನಾ ದೇವಾನಾಮಾದಿರವ್ಯಯಃ।।
ಆ ಪ್ರಸನ್ನ ಪರಮೇಶ್ವರನನ್ನು ಪ್ರಸನ್ನಾತ್ಮಾ ದ್ವಿಜಸತ್ತಮ ನಾರದನು ಮೌನದಿಂದಲೇ ತಲೆಬಾಗಿ ವಂದಿಸಿದನು. ಆಗ ಆದಿದೇವ ಅವ್ಯಯನು ತಲೆಬಾಗಿ ನಮಸ್ಕರಿಸುತ್ತಿದ್ದ ನಾರದನಿಗೆ ಹೇಳಿದನು:
12326011a ಏಕತಶ್ಚ ದ್ವಿತಶ್ಚೈವ ತ್ರಿತಶ್ಚೈವ ಮಹರ್ಷಯಃ।
12326011c ಇಮಂ ದೇಶಮನುಪ್ರಾಪ್ತಾ ಮಮ ದರ್ಶನಲಾಲಸಾಃ।।
“ಮಹರ್ಷಿಗಳಾದ ಏಕತ, ದ್ವಿತ ಮತ್ತು ತ್ರಿತರು ನನ್ನನ್ನು ನೋಡಲು ಬಯಸಿ ಈ ಪ್ರದೇಶವನ್ನು ತಲುಪಿದ್ದರು.
12326012a ನ ಚ ಮಾಂ ತೇ ದದೃಶಿರೇ ನ ಚ ದ್ರಕ್ಷ್ಯತಿ ಕಶ್ಚನ।
12326012c ಋತೇ ಹ್ಯೇಕಾಂತಿಕಶ್ರೇಷ್ಠಾತ್ತ್ವಂ ಚೈವೈಕಾಂತಿಕೋ ಮತಃ।।
ಆದರೆ ಅವರಿಗೆ ನಾನು ಕಾಣಿಸಲಿಲ್ಲ. ನನ್ನಲ್ಲಿ ಏಕಾಂತಿಕ ಭಕ್ತಿಯನ್ನಿಟ್ಟ ಶ್ರೇಷ್ಠರ ಹೊರತಾಗಿ ಯಾರೂ ನನ್ನನ್ನು ಕಾಣುವುದಿಲ್ಲ. ಆದರೆ ನೀನು ನನ್ನಲ್ಲಿ ಏಕಾಂತಿಕ ಭಕ್ತಿಯನ್ನಿಟ್ಟುರುವೆ ಎಂದು ತಿಳಿದಿದೆದೆ.
12326013a ಮಮೈತಾಸ್ತನವಃ ಶ್ರೇಷ್ಠಾ ಜಾತಾ ಧರ್ಮಗೃಹೇ ದ್ವಿಜ।
12326013c ತಾಸ್ತ್ವಂ ಭಜಸ್ವ ಸತತಂ ಸಾಧಯಸ್ವ ಯಥಾಗತಮ್।।
ದ್ವಿಜ! ಧರ್ಮನ ಮನೆಯಲ್ಲಿ ಹುಟ್ಟಿರುವ ಆ ಶ್ರೇಷ್ಠರು ನನ್ನದೇ ಶರೀರಗಳು. ಬಂದ ಹಾಗೆಯೇ ಹಿಂದಿರುಗಿ ಅವರನ್ನು ನೀನು ಸತತವೂ ಭಜಿಸಿ ಸಾಧಿಸು.
12326014a ವೃಣೀಷ್ವ ಚ ವರಂ ವಿಪ್ರ ಮತ್ತಸ್ತ್ವಂ ಯಮಿಹೇಚ್ಚಸಿ।
12326014c ಪ್ರಸನ್ನೋಽಹಂ ತವಾದ್ಯೇಹ ವಿಶ್ವಮೂರ್ತಿರಿಹಾವ್ಯಯಃ।।
ವಿಪ್ರ! ನನ್ನಿಂದ ಬಯಸುವ ವರವನ್ನು ಕೇಳು. ವಿಶ್ವಮೂರ್ತಿಯೂ ಅವ್ಯಯನೂ ಆದ ನಾನು ಇಂದು ನಿನ್ನಮೇಲೆ ಪ್ರಸನ್ನನಾಗಿದ್ದೇನೆ.”
12326015 ನಾರದ ಉವಾಚ।
12326015a ಅದ್ಯ ಮೇ ತಪಸೋ ದೇವ ಯಮಸ್ಯ ನಿಯಮಸ್ಯ ಚ।
12326015c ಸದ್ಯಃ ಫಲಮವಾಪ್ತಂ ವೈ ದೃಷ್ಟೋ ಯದ್ಭಗವಾನ್ಮಯಾ।।
ನಾರದನು ಹೇಳಿದನು: “ಭಗವನ್! ದೇವ! ಇಂದು ನನ್ನ ತಪಸ್ಸು, ಯಮ-ನಿಯಮಗಳ ಫಲವು ದೊರಕಿತು. ಈಗ ನಿನ್ನನ್ನು ನಾನು ನೋಡುತ್ತಿದ್ದೇನೆ.
12326016a ವರ ಏಷ ಮಮಾತ್ಯಂತಂ ದೃಷ್ಟಸ್ತ್ವಂ ಯತ್ಸನಾತನಃ।
12326016c ಭಗವಾನ್ವಿಶ್ವದೃಕ್ಸಿಂಹಃ ಸರ್ವಮೂರ್ತಿರ್ಮಹಾಪ್ರಭುಃ।।
ಸನಾತನ ಭಗವಾನ್ ವಿಶ್ವದೃಕ್ ಸಿಂಹ ಸರ್ವಮೂರ್ತಿ ಮಹಾಪ್ರಭು ನಿನ್ನನ್ನು ಕಂಡೆ ಎನ್ನುವುದೇ ನನ್ನ ಅತ್ಯಂತ ವರವಾಗಿದೆ.””
12326017 ಭೀಷ್ಮ ಉವಾಚ।
12326017a ಏವಂ ಸಂದರ್ಶಯಿತ್ವಾ ತು ನಾರದಂ ಪರಮೇಷ್ಠಿಜಮ್।
12326017c ಉವಾಚ ವಚನಂ ಭೂಯೋ ಗಚ್ಚ ನಾರದ ಮಾಚಿರಮ್।।
ಭೀಷ್ಮನು ಹೇಳಿದನು: “ಹೀಗೆ ಪರಮೇಷ್ಠಿಜ ನಾರದನಿಗೆ ಕಾಣಿಸಿಕೊಂಡು ಭಗವಂತನು ಪುನಃ ಹೇಳಿದನು: “ನಾರದ! ಕೂಡಲೇ ಹೋಗು.
12326018a ಇಮೇ ಹ್ಯನಿಂದ್ರಿಯಾಹಾರಾ ಮದ್ಭಕ್ತಾಶ್ಚಂದ್ರವರ್ಚಸಃ।
12326018c ಏಕಾಗ್ರಾಶ್ಚಿಂತಯೇಯುರ್ಮಾಂ ನೈಷಾಂ ವಿಘ್ನೋ ಭವೇದಿತಿ।।
ನನ್ನ ಭಕ್ತರಾಗಿರುವ ಈ ಚಂದ್ರವರ್ಚಸರು ಇಂದ್ರಿಯ ರಹಿತರೂ ನಿರಾಹಾರರೂ ಆಗಿದ್ದಾರೆ. ಇವರು ನನ್ನನ್ನೇ ಏಕಾಗ್ರರಾಗಿ ಧ್ಯಾನಿಸುತ್ತಿದ್ದಾರೆ. ಅವರ ಈ ಧ್ಯಾನಕ್ಕೆ ವಿಘ್ನವುಂಟಾಗಬಾರದು.
12326019a ಸಿದ್ಧಾಶ್ಚೈತೇ ಮಹಾಭಾಗಾಃ ಪುರಾ ಹ್ಯೇಕಾಂತಿನೋಽಭವನ್।
12326019c ತಮೋರಜೋವಿನಿರ್ಮುಕ್ತಾ ಮಾಂ ಪ್ರವೇಕ್ಷ್ಯಂತ್ಯಸಂಶಯಮ್।।
ಹಿಂದೆ ನನ್ನ ಏಕಾಂತ ಭಕ್ತರಾಗಿದ್ದ ಈ ಮಹಾಭಾಗರು ತಮೋ-ರಜ ಗುಣಗಳಿಂದ ವಿಮುಕ್ತರಾಗಿ ನಿಃಸಂಶಯವಾಗಿ ನನ್ನನ್ನು ಪ್ರವೇಶಿಸುತ್ತಾರೆ.
12326020a ನ ದೃಶ್ಯಶ್ಚಕ್ಷುಷಾ ಯೋಽಸೌ ನ ಸ್ಪೃಶ್ಯಃ ಸ್ಪರ್ಶನೇನ ಚ।
12326020c ನ ಘ್ರೇಯಶ್ಚೈವ ಗಂಧೇನ ರಸೇನ ಚ ವಿವರ್ಜಿತಃ।।
12326021a ಸತ್ತ್ವಂ ರಜಸ್ತಮಶ್ಚೈವ ನ ಗುಣಾಸ್ತಂ ಭಜಂತಿ ವೈ।
12326021c ಯಶ್ಚ ಸರ್ವಗತಃ ಸಾಕ್ಷೀ ಲೋಕಸ್ಯಾತ್ಮೇತಿ ಕಥ್ಯತೇ।।
ಯಾರನ್ನು ಕಣ್ಣುಗಳಿಂದ ನೋಡಲಿಕ್ಕಾಗುವುದಿಲ್ಲವೂ, ಯಾರನ್ನು ತ್ವಚೆಯಿಂದ ಸ್ಪರ್ಶಿಸಲಾಗುವುದಿಲ್ಲವೋ, ಯಾರನ್ನು ಘ್ರಾಣೇಂದ್ರಿಯದಿಂದ ಆಘ್ರಾಣಿಸಲು ಸಾಧ್ಯವಿಲ್ಲವೋ, ಯಾವನು ರಸನೇಂದ್ರಿಯದಿಂದ ಅತೀತನಾಗಿರುವನೋ, ಸತ್ತ್ವ-ರಜಸ್-ತಮೋಗುಣಗಳು ಯಾರ ಬಳಿಸಾರಲಾರವೋ ಮತ್ತು ಯಾರು ಸರ್ವದಲ್ಲಿಯೂ ಇದ್ದುಕೊಂಡು ಸಾಕ್ಷಿಯಾಗಿರುವನೋ ಅವನನ್ನೇ ಲೋಕದ ಆತ್ಮವೆಂದು ಹೇಳುತ್ತಾರೆ.
12326022a ಭೂತಗ್ರಾಮಶರೀರೇಷು ನಶ್ಯತ್ಸು ನ ವಿನಶ್ಯತಿ।
12326022c ಅಜೋ ನಿತ್ಯಃ ಶಾಶ್ವತಶ್ಚ ನಿರ್ಗುಣೋ ನಿಷ್ಕಲಸ್ತಥಾ।।
12326023a ದ್ವಿರ್ದ್ವಾದಶೇಭ್ಯಸ್ತತ್ತ್ವೇಭ್ಯಃ ಖ್ಯಾತೋ ಯಃ ಪಂಚವಿಂಶಕಃ।
12326023c ಪುರುಷೋ ನಿಷ್ಕ್ರಿಯಶ್ಚೈವ ಜ್ಞಾನದೃಶ್ಯಶ್ಚ ಕಥ್ಯತೇ।।
ಭೂತಗ್ರಾಮಗಳಿಂದ ಉಂಟಾಗಿರುವ ಶರೀರಗಳು ನಾಶಹೊಂದಿದರೂ ಯಾವುದು ವಿನಾಶವಾಗುವುದಿಲ್ಲವೋ ಆ ಅಜ, ನಿತ್ಯ, ಶಾಶ್ವತ, ನಿರ್ಗುಣ, ನಿಷ್ಕಲ, ಇಪ್ಪತ್ನಾಲ್ಕು ತತ್ತ್ವಗಳಿಗೂ ಅತೀತನಾಗಿರುವ ಇಪ್ಪತ್ತೈದನೆಯವನು ನಿಷ್ಕ್ರಿಯ ಪುರುಷ. ಅವನನ್ನು ಜ್ಞಾನದೃಷ್ಟಿಯಿಂದ ಮಾತ್ರ ಕಾಣಬಹುದು ಎಂದು ಹೇಳುತ್ತಾರೆ.
12326024a ಯಂ ಪ್ರವಿಶ್ಯ ಭವಂತೀಹ ಮುಕ್ತಾ ವೈ ದ್ವಿಜಸತ್ತಮ।
12326024c ಸ ವಾಸುದೇವೋ ವಿಜ್ಞೇಯಃ ಪರಮಾತ್ಮಾ ಸನಾತನಃ।।
ದ್ವಿಜಸತ್ತಮ! ಯಾರನ್ನು ಪ್ರವೇಶಿಸಿ ಮುಕ್ತರಾಗುತ್ತಾರೋ ಅವನೇ ವಾಸುದೇವ ಸನಾತನ ಪರಮಾತ್ಮನೆಂದು ತಿಳಿದುಕೊಳ್ಳಬೇಕು.
12326025a ಪಶ್ಯ ದೇವಸ್ಯ ಮಾಹಾತ್ಮ್ಯಂ ಮಹಿಮಾನಂ ಚ ನಾರದ।
12326025c ಶುಭಾಶುಭೈಃ ಕರ್ಮಭಿರ್ಯೋ ನ ಲಿಪ್ಯತಿ ಕದಾ ಚನ।।
ನಾರದ! ಯಾರನ್ನು ಶುಭಾಶುಭ ಕರ್ಮಗಳು ಎಂದೂ ಅಂಟಿಕೊಳ್ಳದಿರುವ ಆ ದೇವನ ಮಹಾತ್ಮೆ ಮಹಿಮೆಗಳನ್ನು ನೋಡು.
12326026a ಸತ್ತ್ವಂ ರಜಸ್ತಮಶ್ಚೈವ ಗುಣಾನೇತಾನ್ ಪ್ರಚಕ್ಷತೇ।
12326026c ಏತೇ ಸರ್ವಶರೀರೇಷು ತಿಷ್ಠಂತಿ ವಿಚರಂತಿ ಚ।।
ಸರ್ವ ಶರೀರಗಳಲ್ಲಿದ್ದುಕೊಂಡು ಚಲಿಸುವ ಸತ್ತ್ವ, ರಜಸ್ ಮತ್ತು ತಮಸ್ಸುಗಳನ್ನು ಗುಣಗಳೆಂದು ಹೇಳುತ್ತಾರೆ.
12326027a ಏತಾನ್ಗುಣಾಂಸ್ತು ಕ್ಷೇತ್ರಜ್ಞೋ ಭುಂಕ್ತೇ ನೈಭಿಃ ಸ ಭುಜ್ಯತೇ।
12326027c ನಿರ್ಗುಣೋ ಗುಣಭುಕ್ಚೈವ ಗುಣಸ್ರಷ್ಟಾ ಗುಣಾಧಿಕಃ।।
ಕ್ಷೇತ್ರಜ್ಞನು ಈ ಗುಣಗಳನ್ನು ಭುಂಜಿಸುವನೇ ಹೊರತು ಇವು ಎಂದೂ ಅವನನ್ನು ಅನುಭವಿಸುವುದಿಲ್ಲ. ಏಕೆಂದರೆ ಅವನು ನಿರ್ಗುಣನು. ಗುಣಗಳನ್ನು ಭೋಗಿಸುವವನು. ಗುಣಗಳನ್ನು ಸೃಷ್ಟಿಸಿದವನು. ಮತ್ತು ಗುಣಗಳಿಗಿಂತಲೂ ಅಧಿಕನಾದವನು.
12326028a ಜಗತ್ಪ್ರತಿಷ್ಠಾ ದೇವರ್ಷೇ ಪೃಥಿವ್ಯಪ್ಸು ಪ್ರಲೀಯತೇ।
12326028c ಜ್ಯೋತಿಷ್ಯಾಪಃ ಪ್ರಲೀಯಂತೇ ಜ್ಯೋತಿರ್ವಾಯೌ ಪ್ರಲೀಯತೇ।।
ದೇವರ್ಷೇ! ಜಗತ್ತು ಪ್ರತಿಷ್ಠವಾಗಿರುವ ಪೃಥಿವೀ ತತ್ತ್ವವು ಜಲತತ್ತ್ವದಲ್ಲಿ ಲೀನವಾಗುತ್ತದೆ. ಜಲತತ್ತ್ವವು ಜ್ಯೋತಿತತ್ತ್ವದಲ್ಲಿ ಲೀನವಾಗುತ್ತದೆ. ಮತ್ತು ಜ್ಯೋತಿತತ್ತ್ವವು ವಾಯುತತ್ತ್ವದಲ್ಲಿ ಲೀನವಾಗುತ್ತದೆ.
12326029a ಖೇ ವಾಯುಃ ಪ್ರಲಯಂ ಯಾತಿ ಮನಸ್ಯಾಕಾಶಮೇವ ಚ।
12326029c ಮನೋ ಹಿ ಪರಮಂ ಭೂತಂ ತದವ್ಯಕ್ತೇ ಪ್ರಲೀಯತೇ।।
ವಾಯುವು ಆಕಾಶದಲ್ಲಿ ಪ್ರಲಯವಾಗುತ್ತದೆ. ಆಕಾಶವು ಮನಸ್ಸಿನಲ್ಲಿ ಪ್ರಲಯವಾಗುತ್ತದೆ. ಪರಮ ಭೂತವಾದ ಮನಸ್ಸು ಅವ್ಯಕ್ತದಲ್ಲಿ ಪ್ರಲಯವಾಗುತ್ತದೆ.
12326030a ಅವ್ಯಕ್ತಂ ಪುರುಷೇ ಬ್ರಹ್ಮನ್ನಿಷ್ಕ್ರಿಯೇ ಸಂಪ್ರಲೀಯತೇ।
12326030c ನಾಸ್ತಿ ತಸ್ಮಾತ್ಪರತರಂ ಪುರುಷಾದ್ವೈ ಸನಾತನಾತ್।।
ಬ್ರಹ್ಮನ್! ಅವ್ಯಕ್ತವು ನಿಷ್ಕ್ರಿಯ ಪುರುಷನಲ್ಲಿ ಪ್ರಲಯವಾಗುತ್ತದೆ. ಸನಾತನ ಪುರುಷನಿಗಿಂತ ಉತ್ಕೃಷ್ಟವಾದುದು ಬೇರೆ ಯಾವುದೂ ಇಲ್ಲ.
12326031a ನಿತ್ಯಂ ಹಿ ನಾಸ್ತಿ ಜಗತಿ ಭೂತಂ ಸ್ಥಾವರಜಂಗಮಮ್।
12326031c ಋತೇ ತಮೇಕಂ ಪುರುಷಂ ವಾಸುದೇವಂ ಸನಾತನಮ್।
12326031e ಸರ್ವಭೂತಾತ್ಮಭೂತೋ ಹಿ ವಾಸುದೇವೋ ಮಹಾಬಲಃ।।
ಆ ಸನಾತನ ಪುರುಷ ವಾಸುದೇವನನ್ನು ಬಿಟ್ಟರೆ ಈ ಜಗತ್ತಿನಲ್ಲಿ ನಿತ್ಯವಾಗಿರುವ ಯಾವ ಸ್ಥಾವರ ಜಂಗಮ ಭೂತವೂ ಇಲ್ಲ. ಮಹಾಬಲ ವಾಸುದೇವನು ಸರ್ವಭೂತಗಳಲ್ಲಿಯೂ ಇರುವ ಆತ್ಮಭೂತ.
12326032a ಪೃಥಿವೀ ವಾಯುರಾಕಾಶಮಾಪೋ ಜ್ಯೋತಿಶ್ಚ ಪಂಚಮಮ್।
12326032c ತೇ ಸಮೇತಾ ಮಹಾತ್ಮಾನಃ ಶರೀರಮಿತಿ ಸಂಜ್ಞಿತಮ್।।
ಪೃಥ್ವಿ, ವಾಯು, ಆಕಾಶ, ಆಪ ಮತ್ತು ಐದನೆಯದಾಗಿ ಜ್ಯೋತಿ ಈ ಮಹಾಭೂತಗಳು ಸೇರಿಕೊಂಡಾಗ ಶರೀರವಾಗುತ್ತದೆ.
12326033a ತದಾವಿಶತಿ ಯೋ ಬ್ರಹ್ಮನ್ನದೃಶ್ಯೋ ಲಘುವಿಕ್ರಮಃ।
12326033c ಉತ್ಪನ್ನ ಏವ ಭವತಿ ಶರೀರಂ ಚೇಷ್ಟಯನ್ ಪ್ರಭುಃ।।
ಬ್ರಹ್ಮನ್! ಆಗ ಅದನ್ನು ಅದೃಶ್ಯ ಲಘುವಿಕ್ರಮ ಪ್ರಭುವು ಉತ್ಪನ್ನ ಶರೀರವನ್ನು ಪ್ರವೇಶಿಸಿ, ಚಲಿಸುವಂತೆ ಮಾಡುತ್ತಾನೆ.
12326034a ನ ವಿನಾ ಧಾತುಸಂಘಾತಂ ಶರೀರಂ ಭವತಿ ಕ್ವ ಚಿತ್।
12326034c ನ ಚ ಜೀವಂ ವಿನಾ ಬ್ರಹ್ಮನ್ ಧಾತವಶ್ಚೇಷ್ಟಯಂತ್ಯುತ।।
ಧಾತುಗಳಾದ ಪಂಚಭೂತಗಳ ಸಮಾಗಮವಿಲ್ಲದೇ ಯಾವ ಶರೀರವೂ ಉತ್ಪನ್ನವಾಗುವುದಿಲ್ಲ. ಬ್ರಹ್ಮನ್! ಜೀವವಿಲ್ಲದೇ ಈ ಪಂಚಭೂತಗಳು ಚಲಿಸುವುದೂ ಇಲ್ಲ.
12326035a ಸ ಜೀವಃ ಪರಿಸಂಖ್ಯಾತಃ ಶೇಷಃ ಸಂಕರ್ಷಣಃ ಪ್ರಭುಃ।
12326035c ತಸ್ಮಾತ್ಸನತ್ಕುಮಾರತ್ವಂ ಯೋ ಲಭೇತ ಸ್ವಕರ್ಮಣಾ।।
ಆ ಜೀವವನ್ನು ಶೇಷ ಅಥವಾ ಪ್ರಭು ಸಂಕರ್ಷಣ ಎಂದು ಕರೆಯುತ್ತಾರೆ. ತನ್ನ ಕರ್ಮಗಳಿಂದ ಸಂಕರ್ಷಣನು ಸನತ್ಕುಮಾರತ್ವವನ್ನು ಪಡೆದುಕೊಳ್ಳುತ್ತಾನೆ.
12326036a ಯಸ್ಮಿಂಶ್ಚ ಸರ್ವಭೂತಾನಿ ಪ್ರಲಯಂ ಯಾಂತಿ ಸಂಕ್ಷಯೇ।
12326036c ಸ ಮನಃ ಸರ್ವಭೂತಾನಾಂ ಪ್ರದ್ಯುಮ್ನಃ ಪರಿಪಠ್ಯತೇ।।
ಸಂಕ್ಷಯದಲ್ಲಿ ಸರ್ವಭೂತಗಳೂ ಯಾವುದರಲ್ಲಿ ಪ್ರಲಯಹೊಂದುತ್ತವೆಯೋ ಅದೇ ಸರ್ವಭೂತಗಳ ಮನಸ್ಸು. ಅದನ್ನು ಪ್ರದ್ಯುಮ್ನ ಎಂದು ಕರೆಯುತ್ತಾರೆ.
12326037a ತಸ್ಮಾತ್ಪ್ರಸೂತೋ ಯಃ ಕರ್ತಾ ಕಾರ್ಯಂ ಕಾರಣಮೇವ ಚ।
12326037c ಯಸ್ಮಾತ್ಸರ್ವಂ ಪ್ರಭವತಿ ಜಗತ್ ಸ್ಥಾವರಜಂಗಮಮ್।
12326037e ಸೋಽನಿರುದ್ಧಃ ಸ ಈಶಾನೋ ವ್ಯಕ್ತಿಃ ಸಾ ಸರ್ವಕರ್ಮಸು।।
ಪ್ರದ್ಯುಮ್ನನಿಂದ ಹುಟ್ಟಿದವನು ಕರ್ತ, ಕಾರ್ಯ ಮತ್ತು ಕಾರಣ ಕೂಡ/ ಅವನಿಂದ ಜಗತ್ತಿನ ಸ್ಥಾವರಜಂಗಮಗಳೆಲ್ಲವೂ ಹುಟ್ಟಿಕೊಳ್ಳುತ್ತವೆ. ಸರ್ವಕರ್ಮಗಳಲ್ಲಿ ವ್ಯಕ್ತಿಯಾಗಿರುವವನೇ ಈಶಾನ ಅಥವಾ ಅನಿರುದ್ಧ.
12326038a ಯೋ ವಾಸುದೇವೋ ಭಗವಾನ್ ಕ್ಷೇತ್ರಜ್ಞೋ ನಿರ್ಗುಣಾತ್ಮಕಃ।
12326038c ಜ್ಞೇಯಃ ಸ ಏವ ಭಗವಾನ್ಜೀವಃ ಸಂಕರ್ಷಣಃ ಪ್ರಭುಃ।।
ನಿರ್ಗುಣಾತ್ಮಕನಾದ ಭಗವಾನ್ ಕ್ಷೇತ್ರಜ್ಞನು ವಾಸುದೇವ ಮತ್ತು ಜೀವವೇ ಪ್ರಭು ಭಗವಾನ್ ಸಂಕರ್ಷಣ ಎಂದು ತಿಳಿ.
12326039a ಸಂಕರ್ಷಣಾಚ್ಚ ಪ್ರದ್ಯುಮ್ನೋ ಮನೋಭೂತಃ ಸ ಉಚ್ಯತೇ।
12326039c ಪ್ರದ್ಯುಮ್ನಾದ್ಯೋಽನಿರುದ್ಧಸ್ತು ಸೋಽಹಂಕಾರೋ ಮಹೇಶ್ವರಃ।।
ಸಂಕರ್ಷಣನಿಂದಾದ ಪ್ರದ್ಯುಮ್ನನನ್ನು ಮನೋಭೂತ ಎಂದು ಹೇಳುತ್ತಾರೆ. ಪ್ರದ್ಯುಮ್ನನಿಂದಾದ ಅನಿರುದ್ಧನಾದರೋ ಅಹಂಕಾರ ಮಹೇಶ್ವರನು.
12326040a ಮತ್ತಃ ಸರ್ವಂ ಸಂಭವತಿ ಜಗತ್ ಸ್ಥಾವರಜಂಗಮಮ್।
12326040c ಅಕ್ಷರಂ ಚ ಕ್ಷರಂ ಚೈವ ಸಚ್ಚಾಸಚ್ಚೈವ ನಾರದ।।
ನಾರದ! ಸಕಲ ಜಗತ್ತೂ, ಸ್ಥಾವರಜಂಗಮಗಳೂ, ಜೀವ-ಪ್ರಕೃತಿ, ಸತ್-ಅಸತ್ ಎಲ್ಲವೂ ನನ್ನಿಂದಲೇ ಹುಟ್ಟುತ್ತವೆ.
12326041a ಮಾಂ ಪ್ರವಿಶ್ಯ ಭವಂತೀಹ ಮುಕ್ತಾ ಭಕ್ತಾಸ್ತು ಯೇ ಮಮ।
12326041c ಅಹಂ ಹಿ ಪುರುಷೋ ಜ್ಞೇಯೋ ನಿಷ್ಕ್ರಿಯಃ ಪಂಚವಿಂಶಕಃ।।
ನನ್ನ ಭಕ್ತರು ನನ್ನನ್ನು ಪ್ರವೇಶಿಸಿ ಮುಕ್ತರಾಗುತ್ತಾರೆ. ನಾನೇ ಆ ತಿಳಿಯಬೇಕಾಗಿರುವ ಇಪ್ಪತ್ತೈದನೆಯವನಾದ ನಿಷ್ಕ್ರಿಯ ಪುರುಷ.
12326042a ನಿರ್ಗುಣೋ ನಿಷ್ಕಲಶ್ಚೈವ ನಿರ್ದ್ವಂದ್ವೋ ನಿಷ್ಪರಿಗ್ರಹಃ।
12326042c ಏತತ್ತ್ವಯಾ ನ ವಿಜ್ಞೇಯಂ ರೂಪವಾನಿತಿ ದೃಶ್ಯತೇ।
12326042e ಇಚ್ಚನ್ಮುಹೂರ್ತಾನ್ನಶ್ಯೇಯಮೀಶೋಽಹಂ ಜಗತೋ ಗುರುಃ।।
ನಾನು ನಿರ್ಗುಣ. ನಿಷ್ಕಲ, ನಿರ್ದ್ವಂದ್ವ. ಮತ್ತು ನಿಷ್ಪರಿಗ್ರಹ. ನಿನಗೆ ಕಾಣಿಸಿಕೊಂಡ ಮಾತ್ರಕ್ಕೆ ನಾನು ರೂಪವನ್ನು ಪಡೆದವನು ಎಂದು ತಿಳಿಯಬಾರದು. ಇಚ್ಛಿಸಿದರೆ ಮುಹೂರ್ತಮಾತ್ರದಲ್ಲಿ ಅದೃಶ್ಯನಾಗಬಲ್ಲ ನಾನು ಈಶ. ಜಗತ್ತಿನ ಗುರು.
12326043a ಮಾಯಾ ಹ್ಯೇಷಾ ಮಯಾ ಸೃಷ್ಟಾ ಯನ್ಮಾಂ ಪಶ್ಯಸಿ ನಾರದ।
12326043c ಸರ್ವಭೂತಗುಣೈರ್ಯುಕ್ತಂ ನೈವಂ ತ್ವಂ ಜ್ಞಾತುಮರ್ಹಸಿ।
12326043e ಮಯೈತತ್ಕಥಿತಂ ಸಮ್ಯಕ್ತವ ಮೂರ್ತಿಚತುಷ್ಟಯಮ್।।
ನಾರದ! ಯಾವ ನನ್ನ ವಿಶ್ವರೂಪವನ್ನು ನೀನು ಕಾಣುತ್ತಿದ್ದೀಯೋ ಅದು ನನ್ನಿಂದಲೇ ಸೃಷ್ಟಿಸಲ್ಪಟ್ಟ ಮಾಯೆ. ನಾನು ಸರ್ವಭೂತಗುಣಗಳಿಂದಲೂ ಕೂಡಿರುವೆನೆಂದು ನೀನು ನನ್ನನ್ನು ತಿಳಿದುಕೊಳ್ಳಬಾರದು. ನಾನು ನಿನಗೆ ನಾಲ್ಕು ಮೂರ್ತಿಗಳ ಕುರಿತಾಗಿ ಎಲ್ಲವನ್ನೂ ಹೇಳಿದ್ದೇನೆ.
12326044a ಸಿದ್ಧಾ ಹ್ಯೇತೇ ಮಹಾಭಾಗಾ ನರಾ ಹ್ಯೇಕಾಂತಿನೋಽಭವನ್।
12326044c ತಮೋರಜೋಭ್ಯಾಂ ನಿರ್ಮುಕ್ತಾಃ ಪ್ರವೇಕ್ಷ್ಯಂತಿ ಚ ಮಾಂ ಮುನೇ।।
ಮುನೇ! ಶ್ವೇತದ್ವೀಪದ ಮಹಾಭಾಗ ನರರು ನನ್ನಲ್ಲಿಯೇ ಅನನ್ಯಭಕ್ತಿಯನ್ನಿಟ್ಟುಕೊಂಡ ಸಿದ್ಧರು. ತಮ-ರಜೋಗುಣಗಳಿಂದ ವಿಮುಕ್ತರಾಗ ಅವರು ನನ್ನನ್ನೇ ಪ್ರವೇಶಿಸುತ್ತಾರೆ.
12326045a ಅಹಂ ಕರ್ತಾ ಚ ಕಾರ್ಯಂ ಚ ಕಾರಣಂ ಚಾಪಿ ನಾರದ।
12326045c ಅಹಂ ಹಿ ಜೀವಸಂಜ್ಞೋ ವೈ ಮಯಿ ಜೀವಃ ಸಮಾಹಿತಃ।
12326045e ಮೈವಂ ತೇ ಬುದ್ಧಿರತ್ರಾಭೂದ್ದೃಷ್ಟೋ ಜೀವೋ ಮಯೇತಿ ಚ।।
ನಾರದ! ನಾನೇ ಕರ್ತ. ಕಾರ್ಯ, ಮತ್ತು ಕಾರಣನೂ ಕೂಡ. ನಾನು ಜೀವ ಎಂಬ ಹೆಸರಿನಿಂದಲೂ ಕರೆಯಲ್ಪಡುತ್ತೇನೆ. ನನ್ನಲ್ಲಿಯೇ ಜೀವವು ನೆಲೆಸಿದೆ. ಆದರೆ ಜೀವನನ್ನು ನೋಡಿಬಿಟ್ಟೆನೆಂಬ ಬುದ್ಧಿಯು ಮಾತ್ರ ನಿನಗೆ ಉಂಟಾಗದಿರಲಿ.
12326046a ಅಹಂ ಸರ್ವತ್ರಗೋ ಬ್ರಹ್ಮನ್ಭೂತಗ್ರಾಮಾಂತರಾತ್ಮಕಃ।
12326046c ಭೂತಗ್ರಾಮಶರೀರೇಷು ನಶ್ಯತ್ಸು ನ ನಶಾಮ್ಯಹಮ್।।
ಬ್ರಹ್ಮನ್! ನಾನು ಸರ್ವವ್ಯಾಪಿ. ಭೂತಗ್ರಾಮಗಳ ಅಂತರಾತ್ಮಕನು. ಭೂತಗ್ರಾಮಗಳ ಶರೀರಗಳು ನಶಿಸಿದರೂ ನಾನು ನಾಶವಾಗುವುದಿಲ್ಲ.
12326047a ಹಿರಣ್ಯಗರ್ಭೋ ಲೋಕಾದಿಶ್ಚತುರ್ವಕ್ತ್ರೋ ನಿರುಕ್ತಗಃ।
12326047c ಬ್ರಹ್ಮಾ ಸನಾತನೋ ದೇವೋ ಮಮ ಬಹ್ವರ್ಥಚಿಂತಕಃ।।
ಲೋಕಗಳ ಆದಿ ಚತುರ್ಮುಖ ಅನಿರ್ವಚನೀಯ ಸನಾತನ ದೇವ ಬ್ರಹ್ಮನೇ ಹಿರಣ್ಯಗರ್ಭ. ಅವನು ನನ್ನ ಅನೇಕ ಕಾರ್ಯಗಳನ್ನು ಚಿಂತಿಸುತ್ತಿರುತ್ತಾನೆ.
12326048a ಪಶ್ಯೈಕಾದಶ ಮೇ ರುದ್ರಾನ್ದಕ್ಷಿಣಂ ಪಾರ್ಶ್ವಮಾಸ್ಥಿತಾನ್।
12326048c ದ್ವಾದಶೈವ ತಥಾದಿತ್ಯಾನ್ವಾಮಂ ಪಾರ್ಶ್ವಂ ಸಮಾಸ್ಥಿತಾನ್।।
ನನ್ನ ಬಲಭಾಗದಲ್ಲಿ ಉಪಸ್ಥಿತರಾಗಿರುವ ಏಕಾದಶ ರುದ್ರರನ್ನು ನೋಡು. ಹಾಗೆಯೇ ನನ್ನ ಎಡಭಾಗದಲ್ಲಿ ಸಮಾಸ್ಥಿತರಾಗಿರುವ ದ್ವಾದಶ ಆದಿತ್ಯರನ್ನು ನೋಡು.
12326049a ಅಗ್ರತಶ್ಚೈವ ಮೇ ಪಶ್ಯ ವಸೂನಷ್ಟೌ ಸುರೋತ್ತಮಾನ್।
12326049c ನಾಸತ್ಯಂ ಚೈವ ದಸ್ರಂ ಚ ಭಿಷಜೌ ಪಶ್ಯ ಪೃಷ್ಠತಃ।।
ಸುರೋತ್ತಮರಾದ ಅಷ್ಟವಸುಗಳು ನನ್ನ ಮುಂದೆ ಇರುವುದನ್ನು ನೋಡು. ನನ್ನ ಹಿಂಭಾಗದಲ್ಲಿರುವ ನಾಸತ್ಯ ಮತ್ತು ದಸ್ರರೆಂಬ ವೈದ್ಯರನ್ನು ನೋಡು.
12326050a ಸರ್ವಾನ್ಪ್ರಜಾಪತೀನ್ಪಶ್ಯ ಪಶ್ಯ ಸಪ್ತ ಋಷೀನಪಿ।
12326050c ವೇದಾನ್ಯಜ್ಞಾಂಶ್ಚ ಶತಶಃ ಪಶ್ಯಾಮೃತಮಥೌಷಧೀಃ।।
ಸರ್ವಪ್ರಜಾಪತಿಗಳನ್ನೂ, ಸಪ್ತ ಋಷಿಗಳನ್ನೂ, ವೇದಗಳು, ಯಜ್ಞಗಳು ಮತ್ತು ನೂರಾರು ಅಮೃತ ಔಷಧಿಗಳನ್ನು ನೋಡು.
12326051a ತಪಾಂಸಿ ನಿಯಮಾಂಶ್ಚೈವ ಯಮಾನಪಿ ಪೃಥಗ್ವಿಧಾನ್।
12326051c ತಥಾಷ್ಟಗುಣಮೈಶ್ವರ್ಯಮೇಕಸ್ಥಂ ಪಶ್ಯ ಮೂರ್ತಿಮತ್।।
ತಪಸ್ಸುಗಳನ್ನೂ, ನಾನಾ ವಿಧದ ಯಮ-ನಿಯಮಗಳನ್ನೂ, ಅಷ್ಟಗುಣೈಶ್ವರ್ಯಗಳೂ ಒಂದೇ ಮೂರ್ತಿಮತ್ತಾಗಿ ನಿಂತಿರುವುದನ್ನು ನೋಡು.
12326052a ಶ್ರಿಯಂ ಲಕ್ಷ್ಮೀಂ ಚ ಕೀರ್ತಿಂ ಚ ಪೃಥಿವೀಂ ಚ ಕಕುದ್ಮಿನೀಮ್।
12326052c ವೇದಾನಾಂ ಮಾತರಂ ಪಶ್ಯ ಮತ್ಸ್ಥಾಂ ದೇವೀಂ ಸರಸ್ವತೀಮ್।।
ನನ್ನಲ್ಲಿ ನೆಲೆಸಿರುವ ಶ್ರೀ, ಲಕ್ಷ್ಮೀ, ಕೀರ್ತಿ, ಪರ್ವತಗಳಿಂದ ಕೂಡಿರುವ ಪೃಥ್ವಿ, ವೇದಗಳ ಮಾತೆ ದೇವೀ ಸರಸ್ವತಿ ಇವರನ್ನು ನೋಡು.
12326053a ಧ್ರುವಂ ಚ ಜ್ಯೋತಿಷಾಂ ಶ್ರೇಷ್ಠಂ ಪಶ್ಯ ನಾರದ ಖೇಚರಮ್।
12326053c ಅಂಭೋಧರಾನ್ಸಮುದ್ರಾಂಶ್ಚ ಸರಾಂಸಿ ಸರಿತಸ್ತಥಾ।।
ನಾರದ! ನಕ್ಷತ್ರಗಳಲ್ಲಿ ಶ್ರೇಷ್ಠ ಕೇಚರ ಧ್ರುವನನ್ನು ನೋಡು. ಮೇಘಗಲೂ, ಸಮುದ್ರಗಳೂ, ಸರೋವರಗಳೂ ಮತ್ತು ಹಾಗೆಯೇ ನದಿಗಳನ್ನೂ ನೋಡು.
12326054a ಮೂರ್ತಿಮಂತಃ ಪಿತೃಗಣಾಂಶ್ಚತುರಃ ಪಶ್ಯ ಸತ್ತಮ।
12326054c ತ್ರೀಂಶ್ಚೈವೇಮಾನ್ಗುಣಾನ್ಪಶ್ಯ ಮತ್ಸ್ಥಾನ್ಮೂರ್ತಿವಿವರ್ಜಿತಾನ್।।
ಸತ್ತಮ! ನಾಲ್ಕು ಪ್ರಕಾರದ ಪಿತೃಗಣಗಳು ಮೂರ್ತಿಮಂತರಾಗಿರುವುದನ್ನು ನೋಡು. ಶರೀರಗಳಿಲ್ಲದಿರುವ ಮೂರು ಗುಣಗಳು ಮೂರ್ತಿಮತ್ತಾಗಿ ನನ್ನಲ್ಲಿರುವುದನ್ನು ನೋಡು.
12326055a ದೇವಕಾರ್ಯಾದಪಿ ಮುನೇ ಪಿತೃಕಾರ್ಯಂ ವಿಶಿಷ್ಯತೇ।
12326055c ದೇವಾನಾಂ ಚ ಪಿತೃಣಾಂ ಚ ಪಿತಾ ಹ್ಯೇಕೋಽಹಮಾದಿತಃ।।
ಮುನೇ! ದೇವಕಾರಕ್ಕಿಂತಲೂ ಪಿತೃಕಾರ್ಯವು ಶ್ರೇಷ್ಠವಾದುದು. ದೇವತೆಗಳಿಗೂ ಮತ್ತು ಪಿತೃಗಳಿಗೂ ನಾನೊಬ್ಬನೇ ಏಕಮಾತ್ರ ಪಿತೃಅಗಿದ್ದೇನೆ.
12326056a ಅಹಂ ಹಯಶಿರೋ ಭೂತ್ವಾ ಸಮುದ್ರೇ ಪಶ್ಚಿಮೋತ್ತರೇ।
12326056c ಪಿಬಾಮಿ ಸುಹುತಂ ಹವ್ಯಂ ಕವ್ಯಂ ಚ ಶ್ರದ್ಧಯಾನ್ವಿತಮ್।।
ನಾನು ಹಯಗ್ರೀವರೂಪವನ್ನು ಧರಿಸಿ ಸಮುದ್ರದ ವಾಯುವ್ಯದಿಕ್ಕಿನಲ್ಲಿದ್ದುಕೊಂಡು ಶದ್ಧಯಾನ್ವಿತರಾಗಿ ಉತ್ತಮ ಹೋಮಮಾಡಿದ ಹವ್ಯ ಕವ್ಯಗಳನ್ನು ಕುಡಿಯುತ್ತೇನೆ.
12326057a ಮಯಾ ಸೃಷ್ಟಃ ಪುರಾ ಬ್ರಹ್ಮಾ ಮದ್ಯಜ್ಞಮಯಜತ್ಸ್ವಯಮ್।
12326057c ತತಸ್ತಸ್ಮೈ ವರಾನ್ಪ್ರೀತೋ ದದಾವಹಮನುತ್ತಮಾನ್।।
ಹಿಂದೆ ನನ್ನಿಂದಲೇ ಸೃಷ್ಟನಾದ ಬ್ರಹ್ಮನು ನನಗಾಗಿ ನನ್ನದೇ ಯಜ್ಞವನ್ನು ಮಾಡಿದನು. ಅದರಿಂದ ಪ್ರೀತನಾದ ನಾನು ಅವನಿಗೆ ಈ ಅನುತ್ತಮ ವರಗಳನ್ನಿತ್ತೆನು:
12326058a ಮತ್ಪುತ್ರತ್ವಂ ಚ ಕಲ್ಪಾದೌ ಲೋಕಾಧ್ಯಕ್ಷತ್ವಮೇವ ಚ।
12326058c ಅಹಂಕಾರಕೃತಂ ಚೈವ ನಾಮ ಪರ್ಯಾಯವಾಚಕಮ್।।
“ಪ್ರತಿಯೊಂದು ಕಲ್ಪದ ಆದಿಯಲ್ಲಿಯೂ ನೀನು ನನ್ನ ಪುತ್ರನಾಗಿಯೇ ಹುಟ್ಟುತ್ತೀಯೆ. ಪ್ರತಿಯೊಂದು ಕಲ್ಪದಲ್ಲಿಯೂ ನಿನಗೇ ಲೋಕಾಧ್ಯಕ್ಷತ್ವವು ದೊರೆಯುತ್ತದೆ. “ಅಹಂಕಾರ ಕರ್ತಾ” ಎನ್ನುವ ಪರ್ಯಾಯ ನಾಮವೂ ನಿನಗಾಗುತ್ತದೆ.
12326059a ತ್ವಯಾ ಕೃತಾಂ ಚ ಮರ್ಯಾದಾಂ ನಾತಿಕ್ರಾಮ್ಯತಿ ಕಶ್ಚನ।
12326059c ತ್ವಂ ಚೈವ ವರದೋ ಬ್ರಹ್ಮನ್ವರೇಪ್ಸೂನಾಂ ಭವಿಷ್ಯಸಿ।।
ನೀನು ಮಾಡಿತ್ತ ಮರ್ಯಾದೆಗಳನ್ನು ಯಾರೂ ಅತಿಕ್ರಮಿಸುವುದಿಲ್ಲ. ಬ್ರಹ್ಮನ್! ನೀನು ವರಗಳನ್ನು ಬಯಸುವವರಿಗೆ ವರದನೂ ಆಗುತ್ತೀಯೆ.
12326060a ಸುರಾಸುರಗಣಾನಾಂ ಚ ಋಷೀಣಾಂ ಚ ತಪೋಧನ।
12326060c ಪಿತೃಣಾಂ ಚ ಮಹಾಭಾಗ ಸತತಂ ಸಂಶಿತವ್ರತ।
12326060e ವಿವಿಧಾನಾಂ ಚ ಭೂತಾನಾಂ ತ್ವಮುಪಾಸ್ಯೋ ಭವಿಷ್ಯಸಿ।।
ತಪೋಧನ! ಮಹಾಭಾಗ! ಸತತ ಸಂಶಿತವ್ರತ! ಸುರಾಸುರಗಣಗಳ, ಋಷಿಗಳ, ಪಿತೃಗಳ ಮತ್ತು ವಿವಿಧ ಭೂತಗಳ ಉಪಾಸ್ಯನಾಗುತ್ತೀಯೆ.
12326061a ಪ್ರಾದುರ್ಭಾವಗತಶ್ಚಾಹಂ ಸುರಕಾರ್ಯೇಷು ನಿತ್ಯದಾ।
12326061c ಅನುಶಾಸ್ಯಸ್ತ್ವಯಾ ಬ್ರಹ್ಮನ್ನಿಯೋಜ್ಯಶ್ಚ ಸುತೋ ಯಥಾ।।
ಸುರಕಾರ್ಯಗಳಿಗಾಗಿ ನಾನು ನಿತ್ಯವೂ ಪ್ರಾದುರ್ಭವಿಸುತ್ತಿರುತ್ತೇನೆ. ಬ್ರಹ್ಮನ್! ಆಗ ನಾನು ನಿನ್ನ ಅನುಶಾಸನದಲ್ಲಿರುತ್ತೇನೆ. ಆಗ ಮಗನನ್ನು ಹೇಗೋ ಹಾಗೆ ನೀನು ನನ್ನನ್ನು ನಿಯೋಜಿಸಿಕೊಳ್ಳಬಹುದು.”
12326062a ಏತಾಂಶ್ಚಾನ್ಯಾಂಶ್ಚ ರುಚಿರಾನ್ಬ್ರಹ್ಮಣೇಽಮಿತತೇಜಸೇ।
12326062c ಅಹಂ ದತ್ತ್ವಾ ವರಾನ್ಪ್ರೀತೋ ನಿವೃತ್ತಿಪರಮೋಽಭವಮ್।।
ಆ ಅಮಿತತೇಜಸ್ವಿ ಬ್ರಹ್ಮನಿಗೆ ಇವೇ ಮೊದಲಾದ ಅನ್ಯ ಸುಂದರ ಅನೇಕ ವರಗಳನ್ನು ವರಗಳನ್ನಿತ್ತು ಪ್ರೀತನಾಗಿ ಪರಮ ನಿವೃತ್ತನಾದೆನು.
12326063a ನಿರ್ವಾಣಂ ಸರ್ವಧರ್ಮಾಣಾಂ ನಿವೃತ್ತಿಃ ಪರಮಾ ಸ್ಮೃತಾ।
12326063c ತಸ್ಮಾನ್ನಿವೃತ್ತಿಮಾಪನ್ನಶ್ಚರೇತ್ಸರ್ವಾಂಗನಿರ್ವೃತಃ।।
ಸರ್ವಧರ್ಮಗಳಿಂದ ನಿವೃತ್ತಿಯನ್ನು ಹೊಂದುವುದೇ ಪರಮ ನಿವೃತ್ತಿಯೆಂದು ತಿಳಿಯಲ್ಪಟ್ಟಿದೆ. ಆದುದರಿಂದ ಸರ್ವಾಂಗನಿವೃತ್ತನಾಗಿ ನಿವೃತ್ತಿಯನ್ನು ಆಶ್ರಯಿಸಿ ಸಂಚರಿಸುತ್ತಿರಬೇಕು.
12326064a ವಿದ್ಯಾಸಹಾಯವಂತಂ ಮಾಮಾದಿತ್ಯಸ್ಥಂ ಸನಾತನಮ್।
12326064c ಕಪಿಲಂ ಪ್ರಾಹುರಾಚಾರ್ಯಾಃ ಸಾಂಖ್ಯನಿಶ್ಚಿತನಿಶ್ಚಯಾಃ।।
ಸಾಂಖ್ಯದ ನಿಶ್ಚಿತ-ನಿಶ್ಚಯಗಳನ್ನು ತಿಳಿದಿರುವ ಆಚಾರ್ಯರು ನಾನೇ ಆ ವಿದ್ಯಾಸಹಾಯವಂತ ಆದಿತ್ಯಸ್ಥ ಸನಾತನ ಕಪಿಲನೆಂದು ಹೇಳುತ್ತಾರೆ.
12326065a ಹಿರಣ್ಯಗರ್ಭೋ ಭಗವಾನೇಷ ಚಂದಸಿ ಸುಷ್ಟುತಃ।
12326065c ಸೋಽಹಂ ಯೋಗಗತಿರ್ಬ್ರಹ್ಮನ್ಯೋಗಶಾಸ್ತ್ರೇಷು ಶಬ್ದಿತಃ।।
ಬ್ರಹ್ಮನ್! ಚಂದಗಳಲ್ಲಿ ಸ್ತುತಿಸಲ್ಪಟ್ಟಿರುವ ಭಗವಾನ್ ಹಿರಣ್ಯಗರ್ಭನು ನಾನೇ. ಯೋಗಶಾಸ್ತ್ರಗಳಲ್ಲಿ ಶಬ್ದಿತನಾಗಿರುವ ಯೋಗಗತಿಯೂ ನಾನೇ.
12326066a ಏಷೋಽಹಂ ವ್ಯಕ್ತಿಮಾಗಮ್ಯ ತಿಷ್ಠಾಮಿ ದಿವಿ ಶಾಶ್ವತಃ।
12326066c ತತೋ ಯುಗಸಹಸ್ರಾಂತೇ ಸಂಹರಿಷ್ಯೇ ಜಗತ್ಪುನಃ।
12326066e ಕೃತ್ವಾತ್ಮಸ್ಥಾನಿ ಭೂತಾನಿ ಸ್ಥಾವರಾಣಿ ಚರಾಣಿ ಚ।।
ಶಾಶ್ವತನಾದ ನಾನು ಈಗ ವ್ಯಕ್ತರೂಪವನ್ನು ಧರಿಸಿ ದಿವಿಯಲ್ಲಿ ನಿಂತಿದ್ದೇನೆ. ಸಹಸ್ರ ಚತುರ್ಯುಗಗಳ ಅಂತ್ಯದಲ್ಲಿ ಪುನಃ ನಾನು ಸ್ಥಾವರ-ಜಂಗಮ ಭೂತಗಳೆಲ್ಲವನ್ನೂ ನನ್ನ ಆತ್ಮದಲ್ಲಿ ಇರಿಸಿಕೊಂಡು ಜಗತ್ತನ್ನು ಸಂಹರಿಸುತ್ತೇನೆ.
12326067a ಏಕಾಕೀ ವಿದ್ಯಯಾ ಸಾರ್ಧಂ ವಿಹರಿಷ್ಯೇ ದ್ವಿಜೋತ್ತಮ।
12326067c ತತೋ ಭೂಯೋ ಜಗತ್ಸರ್ವಂ ಕರಿಷ್ಯಾಮೀಹ ವಿದ್ಯಯಾ।।
ದ್ವಿಜೋತ್ತಮ! ಆಗ ವಿದ್ಯೆಯೊಡನೆ ಏಕಾಕಿಯಾಗಿ ವಿಹರಿಸುತ್ತಿರುತ್ತೇನೆ. ಅನಂತರ ಅದೇ ವಿದ್ಯೆಯಿಂದ ಪುನಃ ಸರ್ವ ಜಗತ್ತನ್ನೂ ಸೃಷ್ಟಿಸುತ್ತೇನೆ.
12326068a ಅಸ್ಮನ್ಮೂರ್ತಿಶ್ಚತುರ್ಥೀ ಯಾ ಸಾಸೃಜಚ್ಚೇಷಮವ್ಯಯಮ್।
12326068c ಸ ಹಿ ಸಂಕರ್ಷಣಃ ಪ್ರೋಕ್ತಃ ಪ್ರದ್ಯುಮ್ನಂ ಸೋಽಪ್ಯಜೀಜನತ್।।
ನನ್ನ ಈ ನಾಲ್ಕು ಮೂರ್ತಿಗಳಲ್ಲಿ ನಾಲ್ಕನೆಯವನಾದ ವಾಸುದೇವನು ಅವ್ಯಯ ಶೇಷನನ್ನು ಸೃಷ್ಟಿಸುತ್ತಾನೆ. ಅವನನ್ನೇ ಸಂಕರ್ಷಣ ಎಂದೂ ಕರೆಯುತ್ತಾರೆ. ಸಂಕರ್ಷಣನು ಪ್ರದ್ಯುಮ್ನನನ್ನು ಸೃಷ್ಟಿಸುತ್ತಾನೆ.
12326069a ಪ್ರದ್ಯುಮ್ನಾದನಿರುದ್ಧೋಽಹಂ ಸರ್ಗೋ ಮಮ ಪುನಃ ಪುನಃ।
12326069c ಅನಿರುದ್ಧಾತ್ತಥಾ ಬ್ರಹ್ಮಾ ತತ್ರಾದಿಕಮಲೋದ್ಭವಃ।।
ಪ್ರದ್ಯುಮ್ನನಿಂದ ಪುನಃ ನಾನೇ ಅನಿರುದ್ಧನಾಗಿ ಹುಟ್ಟುತೇನೆ. ಪುನಃ ಪುನಃ ಆಗುವ ಈ ಸೃಷ್ಟಿಯು ನನ್ನದೇ ಆಗಿದೆ. ಹಾಗೆಯೇ ಅನಿರುದ್ಧನಿಂದ ಕಮಲೋದ್ಭವ ಬ್ರಹ್ಮನು ಹುಟ್ಟುತ್ತಾನೆ.
12326070a ಬ್ರಹ್ಮಣಃ ಸರ್ವಭೂತಾನಿ ಚರಾಣಿ ಸ್ಥಾವರಾಣಿ ಚ।
12326070c ಏತಾಂ ಸೃಷ್ಟಿಂ ವಿಜಾನೀಹಿ ಕಲ್ಪಾದಿಷು ಪುನಃ ಪುನಃ।।
ಬ್ರಹ್ಮನಿಂದ ಚರ-ಸ್ಥಾವರ ಸರ್ವಭೂತಗಳೂ ಉತ್ಪನ್ನವಾಗುತ್ತವೆ. ಪ್ರತಿಯೊಂದು ಕಲ್ಪದ ಆದಿಯಲ್ಲಿಯೂ ಪುನಃ ಪುನಃ ಈ ರೀತಿಯ ಸೃಷ್ಟಿಯು ನಡೆಯುತ್ತಿರುತ್ತದೆ ಎನ್ನುವುದನ್ನು ತಿಳಿ.
12326071a ಯಥಾ ಸೂರ್ಯಸ್ಯ ಗಗನಾದುದಯಾಸ್ತಮಯಾವಿಹ।
12326071c ನಷ್ಟೌ ಪುನರ್ಬಲಾತ್ಕಾಲ ಆನಯತ್ಯಮಿತದ್ಯುತಿಃ।
12326071e ತಥಾ ಬಲಾದಹಂ ಪೃಥ್ವೀಂ ಸರ್ವಭೂತಹಿತಾಯ ವೈ।।
ಗಗನದಲ್ಲಿ ಸೂರ್ಯನ ಉದಯ-ಅಸ್ತಗಳು ಹೇಗೆ ಆಗುತ್ತವೆಯೋ ಹಾಗೆ ಮತ್ತು ಅಮಿತದ್ಯುತಿ ಕಾಲನು ಹೇಗೆ ಅಸ್ತನಾದ ಸೂರ್ಯನನ್ನು ಪುನಃ ಬಲದಿಂದ ಸೆಳೆದು ತರುತ್ತಾನೋ ಹಾಗೆ ಸರ್ವಭೂತಗಳ ಹಿತಕ್ಕಾಗಿ ನಾನು ನಶಿಸಿಹೋದ ಪೃಥ್ವಿನನ್ನು ಬಲದಿಂದ ಉದ್ಧರಿಸುತ್ತೇನೆ.
12326072a ಸತ್ತ್ವೈರಾಕ್ರಾಂತಸರ್ವಾಂಗಾಂ ನಷ್ಟಾಂ ಸಾಗರಮೇಖಲಾಮ್।
12326072c ಆನಯಿಷ್ಯಾಮಿ ಸ್ವಂ ಸ್ಥಾನಂ ವಾರಾಹಂ ರೂಪಮಾಸ್ಥಿತಃ।।
12326073a ಹಿರಣ್ಯಾಕ್ಷಂ ಹನಿಷ್ಯಾಮಿ ದೈತೇಯಂ ಬಲಗರ್ವಿತಮ್।
ಸಾಗರವನ್ನೇ ಒಡ್ಯಾಣವನ್ನಾಗಿ ಪಡೆದಿರುವ ಮತ್ತು ಸರ್ವ ಪ್ರಾಣಿಗಳಿಂದ ನಿಬಿಡವಾಗಿರುವ ಭೂಮಿಯು ನಷ್ಟವಾದಾಗ ನಾನು ವರಾಹ ರೂಪವನ್ನು ತಾಳಿ ಅದನ್ನು ಸ್ವಸ್ಥಾನಕ್ಕೆ ತರುತ್ತೇನೆ. ಬಲಗರ್ವಿತನಾದ ದೈತ್ಯ ಹಿರಣ್ಯಾಕ್ಷನನ್ನು ಸಂಹರಿಸುತ್ತೇನೆ.
12326073c ನಾರಸಿಂಹಂ ವಪುಃ ಕೃತ್ವಾ ಹಿರಣ್ಯಕಶಿಪುಂ ಪುನಃ।
12326073e ಸುರಕಾರ್ಯೇ ಹನಿಷ್ಯಾಮಿ ಯಜ್ಞಘ್ನಂ ದಿತಿನಂದನಮ್।।
ಪುನಃ ಸುರಕಾರ್ಯಕ್ಕಾಗಿ ನರಸಿಂಹನ ರೂಪವನ್ನು ತಾಳಿ ಯಜ್ಞಘ್ನ ದಿತಿನಂದನ ಹಿರಣ್ಯಕಶಿಪುವನ್ನು ಸಂಹರಿಸುತ್ತೇನೆ.
12326074a ವಿರೋಚನಸ್ಯ ಬಲವಾನ್ಬಲಿಃ ಪುತ್ರೋ ಮಹಾಸುರಃ।
12326074c ಭವಿಷ್ಯತಿ ಸ ಶಕ್ರಂ ಚ ಸ್ವರಾಜ್ಯಾಚ್ಚ್ಯಾವಯಿಷ್ಯತಿ।।
ವಿರೋಚನನ ಬಲವಾನ್ ಪುತ್ರ ಮಹಾಸುರ ಬಲಿಯು ಶಕ್ರನನ್ನು ಸ್ವರಾಜ್ಯದಿಂದ ಭ್ರಷ್ಟನನ್ನಾಗಿ ಮಾಡುತ್ತಾನೆ.
12326075a ತ್ರೈಲೋಕ್ಯೇಽಪಹೃತೇ ತೇನ ವಿಮುಖೇ ಚ ಶಚೀಪತೌ।
12326075c ಅದಿತ್ಯಾಂ ದ್ವಾದಶಃ ಪುತ್ರಃ ಸಂಭವಿಷ್ಯಾಮಿ ಕಶ್ಯಪಾತ್।।
ಬಲಿಯು ತ್ರೈಲೋಕ್ಯಗಳನ್ನು ಅಪಹರಿಸಲು ಮತ್ತು ಶಚೀಪತಿಯು ವಿಮುಖನಾಗಲು ನಾನು ಕಶ್ಯಪನಿಂದ ಅದಿತಿಯಲ್ಲಿ ಹನ್ನೆರಡನೆಯ ಪುತ್ರನಾಗಿ ಹುಟ್ಟುತ್ತೇನೆ.
12326076a ತತೋ ರಾಜ್ಯಂ ಪ್ರದಾಸ್ಯಾಮಿ ಶಕ್ರಾಯಾಮಿತತೇಜಸೇ।
12326076c ದೇವತಾಃ ಸ್ಥಾಪಯಿಷ್ಯಾಮಿ ಸ್ವೇಷು ಸ್ಥಾನೇಷು ನಾರದ।
12326076e ಬಲಿಂ ಚೈವ ಕರಿಷ್ಯಾಮಿ ಪಾತಾಲತಲವಾಸಿನಮ್।।
ನಾರದ! ಅನಂತರ ನಾನು ಅಮಿತತೇಜಸ್ವೀ ಶಕ್ರನಿಗೆ ರಾಜ್ಯವನ್ನು ಕೊಡಿಸುತ್ತೇನೆ. ಮತ್ತು ದೇವತೆಗಳನ್ನು ಅವರವರ ಸ್ಥಾನಗಳಲ್ಲಿ ಸ್ಥಾಪಿಸುತ್ತೇನೆ. ಬಲಿಯನ್ನೂ ಕೂಡ ಪಾತಾಲತಲವಾಸಿನಿಯನ್ನಾಗಿ ಮಾಡುತ್ತೇನೆ.
12326077a ತ್ರೇತಾಯುಗೇ ಭವಿಷ್ಯಾಮಿ ರಾಮೋ ಭೃಗುಕುಲೋದ್ವಹಃ।
12326077c ಕ್ಷತ್ರಂ ಚೋತ್ಸಾದಯಿಷ್ಯಾಮಿ ಸಮೃದ್ಧಬಲವಾಹನಮ್।।
ತ್ರೇತಾಯುಗದಲ್ಲಿ ನಾನು ಭೃಗುಕುಲೋದ್ವಹ ರಾಮನಾಗುತ್ತೇನೆ ಮತ್ತು ಬಲವಾಹನಗಳಿಂದ ಸಮೃದ್ಧವಾಗಿರುವ ಕ್ಷತ್ರಿಯರನ್ನು ಸಂಹರಿಸುತ್ತೇನೆ.
12326078a ಸಂಧೌ ತು ಸಮನುಪ್ರಾಪ್ತೇ ತ್ರೇತಾಯಾಂ ದ್ವಾಪರಸ್ಯ ಚ।
12326078c ರಾಮೋ ದಾಶರಥಿರ್ಭೂತ್ವಾ ಭವಿಷ್ಯಾಮಿ ಜಗತ್ಪತಿಃ।।
ತ್ರೇತ ಮತ್ತು ದ್ವಾಪರ ಯುಗಗಳ ಸಂಧಿಯಲ್ಲಿ ದಾಶರಥಿ ರಾಮನಾಗಿ ಜಗತ್ಪತಿಯಾಗುತ್ತೇನೆ.
12326079a ತ್ರಿತೋಪಘಾತಾದ್ವೈರೂಪ್ಯಮೇಕತೋಽಥ ದ್ವಿತಸ್ತಥಾ।
12326079c ಪ್ರಾಪ್ಸ್ಯತೋ ವಾನರತ್ವಂ ಹಿ ಪ್ರಜಾಪತಿಸುತಾವೃಷೀ।।
ಪ್ರಜಾಪತಿಯ ಮಕ್ಕಳಾದ ದ್ವಿತ ಮತ್ತು ಏಕತ ಎಂಬ ಋಷಿಗಳು ತ್ರಿತನಿಗೆ ದ್ರೋಹವನ್ನೆಸಗುವುದರಿಂದ ವೈರೂಪ್ಯವನ್ನು ಪಡೆದು ವಾನರತ್ವವನ್ನು ಹೊಂದುತ್ತಾರೆ.
12326080a ತಯೋರ್ಯೇ ತ್ವನ್ವಯೇ ಜಾತಾ ಭವಿಷ್ಯಂತಿ ವನೌಕಸಃ।
12326080c ತೇ ಸಹಾಯಾ ಭವಿಷ್ಯಂತಿ ಸುರಕಾರ್ಯೇ ಮಮ ದ್ವಿಜ।।
ದ್ವಿಜ! ಅವರಿಬ್ಬರ ಕುಲಗಳಲ್ಲಿ ಹುಟ್ಟಿದವರು ವನೌಕಸರಾಗುತ್ತಾರೆ. ಅವರು ಸುರಕಾರ್ಯದಲ್ಲಿ ನನ್ನ ಸಹಾಯಕರಾಗುತ್ತಾರೆ.
12326081a ತತೋ ರಕ್ಷಃಪತಿಂ ಘೋರಂ ಪುಲಸ್ತ್ಯಕುಲಪಾಂಸನಮ್।
12326081c ಹನಿಷ್ಯೇ ರಾವಣಂ ಸಂಖ್ಯೇ ಸಗಣಂ ಲೋಕಕಂಟಕಮ್।।
ಅನಂತರ ರಾಕ್ಷಸರಾಜ ಪುಲಸ್ತ್ಯನ ಕುಲಪಾಂಸನ ಲೋಕಕಂಟಕ ರಾವಣನನ್ನು ಅವನ ಗಣಗಳೊಂದಿಗೆ ಯುದ್ಧದಲ್ಲಿ ಸಂಹರಿಸುತ್ತೇನೆ.
12326082a ದ್ವಾಪರಸ್ಯ ಕಲೇಶ್ಚೈವ ಸಂಧೌ ಪರ್ಯವಸಾನಿಕೇ।
12326082c ಪ್ರಾದುರ್ಭಾವಃ ಕಂಸಹೇತೋರ್ಮಥುರಾಯಾಂ ಭವಿಷ್ಯತಿ।।
ದ್ವಾಪರ ಮತ್ತು ಕಲಿಯುಗಳ ಸಂಧಿಯಲ್ಲಿ, ದ್ವಾಪರದ ಅಂತ್ಯದಲ್ಲಿ, ಕಂಸನ ವಧೆಗಾಗಿ ಮಥುರೆಯಲ್ಲಿ ನನ್ನ ಪ್ರಾದುರ್ಭಾವವಾಗುತ್ತದೆ.
12326083a ತತ್ರಾಹಂ ದಾನವಾನ್ ಹತ್ವಾ ಸುಬಹೂನ್ದೇವಕಂಟಕಾನ್।
12326083c ಕುಶಸ್ಥಲೀಂ ಕರಿಷ್ಯಾಮಿ ನಿವಾಸಂ ದ್ವಾರಕಾಂ ಪುರೀಮ್।।
ಆಗ ನಾನು ಅನೇಕ ದೇವಕಂಟಕ ದಾನವರನ್ನು ಸಂಹರಿಸಿ ಕುಶಸ್ಥಲಿಯಲ್ಲಿ ದ್ವಾರಕಾ ಪುರಿಯಲ್ಲಿ ನನ್ನ ನಿವಾಸಸ್ಥಾನವನ್ನಾಗಿ ಮಾಡಿಕೊಳ್ಳುತ್ತೇನೆ.
12326084a ವಸಾನಸ್ತತ್ರ ವೈ ಪುರ್ಯಾಮದಿತೇರ್ವಿಪ್ರಿಯಂಕರಮ್।
12326084c ಹನಿಷ್ಯೇ ನರಕಂ ಭೌಮಂ ಮುರಂ ಪೀಠಂ ಚ ದಾನವಮ್।।
ಆ ಪುರಿಯಲ್ಲಿ ವಾಸಿಸುತ್ತಿರುವಾಗ ಅದಿತಿಗೆ ಅಪ್ರಿಯವಾದುದನ್ನು ಮಾಡುತ್ತಿರುವ ಭೂಮಿಪುತ್ರ ನರಕ, ಮುರ ಮತ್ತು ಪೀಠರೆಂಬ ದಾನವರನ್ನು ಸಂಹರಿಸುತ್ತೇನೆ.
12326085a ಪ್ರಾಗ್ಜ್ಯೋತಿಷಪುರಂ ರಮ್ಯಂ ನಾನಾಧನಸಮನ್ವಿತಮ್।
12326085c ಕುಶಸ್ಥಲೀಂ ನಯಿಷ್ಯಾಮಿ ಹತ್ವಾ ವೈ ದಾನವೋತ್ತಮಾನ್।।
ಆ ದಾನವೋತ್ತಮರನ್ನು ಸಂಹರಿಸಿ ನಾನಾಧನ ಸಮೃದ್ಧವಾದ ರಮ್ಯ ಪ್ರಾಗ್ಜ್ಯೋತಿಷಪುರವನ್ನೇ ಕುಶಸ್ಥಲಿಗೆ ತಂದುಬಿಡುತ್ತೇನೆ.
12326086a ಶಂಕರಂ ಚ ಮಹಾಸೇನಂ ಬಾಣಪ್ರಿಯಹಿತೈಷಿಣಮ್।
12326086c ಪರಾಜೇಷ್ಯಾಮ್ಯಥೋದ್ಯುಕ್ತೌ ದೇವಲೋಕನಮಸ್ಕೃತೌ।।
ನನ್ನೊಡನೆ ಯುದ್ಧಕ್ಕೆ ಬರುವ ಬಾಣಾಸುರನ ಪ್ರಿಯರೂ ಹಿತೈಷಿಗಳೂ ಆದ, ದೇವಲೋಕನಮಸ್ಕೃತರಾದ ಶಂಕರ ಮತ್ತು ಮಹಾಸೇನರನ್ನು ಪರಾಜಯಗೊಳಿಸುತ್ತೇನೆ.
12326087a ತತಃ ಸುತಂ ಬಲೇರ್ಜಿತ್ವಾ ಬಾಣಂ ಬಾಹುಸಹಸ್ರಿಣಮ್।
12326087c ವಿನಾಶಯಿಷ್ಯಾಮಿ ತತಃ ಸರ್ವಾನ್ಸೌಭನಿವಾಸಿನಃ।।
ಅನಂತರ ಬಲಿಯ ಪುತ್ರ ಸಹಸ್ರ ಬಾಹುಗಳ ಬಾಣನನ್ನು ಗೆದ್ದು ಸೌಭನಿವಾಸಿಗಳೆಲ್ಲರನ್ನೂ ನಾಶಗೊಳಿಸುತ್ತೇನೆ.
12326088a ಯಃ ಕಾಲಯವನಃ ಖ್ಯಾತೋ ಗರ್ಗತೇಜೋಭಿಸಂವೃತಃ।
12326088c ಭವಿಷ್ಯತಿ ವಧಸ್ತಸ್ಯ ಮತ್ತ ಏವ ದ್ವಿಜೋತ್ತಮ।।
ದ್ವಿಜೋತ್ತಮ! ಗರ್ಗನ ತೇಜಸ್ಸಿನಿಂದ ಕೂಡಿರುವ ಕಾಲಯವನನೆಂದು ಖ್ಯಾತನಾಗುವವನ ವಧೆಯೂ ನನ್ನಿಂದಲೇ ನಡೆಯುತ್ತದೆ.
12326089a ಜರಾಸಂಧಶ್ಚ ಬಲವಾನ್ಸರ್ವರಾಜವಿರೋಧಕಃ।
12326089c ಭವಿಷ್ಯತ್ಯಸುರಃ ಸ್ಫೀತೋ ಭೂಮಿಪಾಲೋ ಗಿರಿವ್ರಜೇ।
12326089e ಮಮ ಬುದ್ಧಿಪರಿಸ್ಪಂದಾದ್ವಧಸ್ತಸ್ಯ ಭವಿಷ್ಯತಿ।।
ಗಿರಿವ್ರಜದಲ್ಲಿ ಬಲವಾನ್ ಸರ್ವರಾಜರಿಗೆ ವಿರೋಧಕನಾದ ಸಮೃದ್ಧನಾದ ಅಸುರ ಭೂಮಿಪಾಲನಾಗುತ್ತಾನೆ. ನನ್ನ ಬುದ್ಧಿಕೌಶಲದಿಂದಲೇ ಅವನ ವಧೆಯೂ ಆಗುತ್ತದೆ.
12326090a ಸಮಾಗತೇಷು ಬಲಿಷು ಪೃಥಿವ್ಯಾಂ ಸರ್ವರಾಜಸು।
12326090c ವಾಸವಿಃ ಸುಸಹಾಯೋ ವೈ ಮಮ ಹ್ಯೇಕೋ ಭವಿಷ್ಯತಿ।।
ಪೃಥ್ವಿಯ ಸರ್ವರಾಜರೂ ಸೇನೆಗಳೊಂದಿಗೆ ಸೇರಿದಾಗ ವಾಸವಿಯೊಬ್ಬನೇ ನನ್ನ ಸುಸಾಹಾಯಕನಾಗುತ್ತಾನೆ.
12326091a ಏವಂ ಲೋಕಾ ವದಿಷ್ಯಂತಿ ನರನಾರಾಯಣಾವೃಷೀ।
12326091c ಉದ್ಯುಕ್ತೌ ದಹತಃ ಕ್ಷತ್ರಂ ಲೋಕಕಾರ್ಯಾರ್ಥಮೀಶ್ವರೌ।।
ಆಗ ಜನರೆಲ್ಲರೂ “ಲೋಕಹಿತಾರ್ಥಕ್ಕಾಗಿ ಮಹರ್ಷಿಗಳೂ ಈಶ್ವರರೂ ಳಾದ ನರ-ನಾರಯಣರು ಕ್ಷತ್ರಿಯರ ವಿನಾಶಕಾರ್ಯದಲ್ಲಿ ತೊಡಗಿರುವರು” ಎಂದು ಹೇಳುತ್ತಾರೆ.
12326092a ಕೃತ್ವಾ ಭಾರಾವತರಣಂ ವಸುಧಾಯಾ ಯಥೇಪ್ಸಿತಮ್।
12326092c ಸರ್ವಸಾತ್ವತಮುಖ್ಯಾನಾಂ ದ್ವಾರಕಾಯಾಶ್ಚ ಸತ್ತಮ।
12326092e ಕರಿಷ್ಯೇ ಪ್ರಲಯಂ ಘೋರಮಾತ್ಮಜ್ಞಾತಿವಿನಾಶನಮ್।।
ಸತ್ತಮ! ವಸುಧೆಯು ಬಯಸಿದಂತೆ ಅವಳ ಭಾರವನ್ನು ಕಡಿಮೆಮಾಡಿ ಸರ್ವಸಾತ್ವತಮುಖ್ಯರ ಮತ್ತು ದ್ವಾರಕೆಯ ಘೋರ ಸ್ವಬಂಧುವಿನಾಶರೂಪವಾದ ಘೋರಕರ್ಮವನ್ನು ಮಾಡುತ್ತೇನೆ.
12326093a ಕರ್ಮಾಣ್ಯಪರಿಮೇಯಾನಿ ಚತುರ್ಮೂರ್ತಿಧರೋ ಹ್ಯಹಮ್।
12326093c ಕೃತ್ವಾ ಲೋಕಾನ್ಗಮಿಷ್ಯಾಮಿ ಸ್ವಾನಹಂ ಬ್ರಹ್ಮಸತ್ಕೃತಾನ್।।
ಚತುರ್ಮೂರ್ತಿಧನನಾದ ನಾನು ಈ ಅಪರಿಮೇಯ ಕರ್ಮಗಳನ್ನು ಮಾಡಿ ಬ್ರಹ್ಮನಿಂದ ಸತ್ಕೃತನಾಗಿ ನನ್ನದೇ ಲೋಕಕ್ಕೆ ಹಿಂದಿರುಗುತ್ತೇನೆ.
12326094a ಹಂಸೋ ಹಯಶಿರಾಶ್ಚೈವ ಪ್ರಾದುರ್ಭಾವಾ ದ್ವಿಜೋತ್ತಮ।
12326094c ಯದಾ ವೇದಶ್ರುತಿರ್ನಷ್ಟಾ ಮಯಾ ಪ್ರತ್ಯಾಹೃತಾ ತದಾ।
12326094e ಸವೇದಾಃ ಸಶ್ರುತೀಕಾಶ್ಚ ಕೃತಾಃ ಪೂರ್ವಂ ಕೃತೇ ಯುಗೇ।।
ದ್ವಿಜೋತ್ತಮ! ಹಂಸ ಮತ್ತು ಹಯಗ್ರೀವರಾಗಿಯೂ ನಾನು ಪ್ರಾದುರ್ಭವಿಸುತ್ತೇನೆ. ವೇದಶೃತಿಗಳ ನಷ್ಟವಾದಗಲೆಲ್ಲಾ ನಾನು ಅವುಗಳನ್ನು ಉದ್ಧರಿಸುತ್ತೇನೆ. ನಾನೇ ಹಿಂದೆ ಕೃತಯುಗದಲ್ಲಿ ವೇದಸಹಿತವಾದ ಶ್ರುತಿಗಳನ್ನು ಪ್ರಕಟಪಡಿಸಿದ್ದೆನು.
12326095a ಅತಿಕ್ರಾಂತಾಃ ಪುರಾಣೇಷು ಶ್ರುತಾಸ್ತೇ ಯದಿ ವಾ ಕ್ವ ಚಿತ್।
12326095c ಅತಿಕ್ರಾಂತಾಶ್ಚ ಬಹವಃ ಪ್ರಾದುರ್ಭಾವಾ ಮಮೋತ್ತಮಾಃ।
12326095e ಲೋಕಕಾರ್ಯಾಣಿ ಕೃತ್ವಾ ಚ ಪುನಃ ಸ್ವಾಂ ಪ್ರಕೃತಿಂ ಗತಾಃ।।
ಕೆಲವೊಮ್ಮೆ ನೀನು ಪುರಾಣಗಳಲ್ಲಿ ಮುಗಿದುಹೋಗಿರುವ ನನ್ನ ಅವತಾರಗಳ ಕುರಿತು ಕೇಳಿರಬಹುದು. ನನ್ನ ಅನೇಕ ಉತ್ತಮ ಅವತಾರಗಳು ಆಗಿ ಹೋಗಿವೆ. ಲೋಕಕಾರ್ಯಗಳನ್ನು ಪೂರೈಸಿ ಅವು ಪುನಃ ನನ್ನ ಪ್ರಕೃತಿಯನ್ನೇ ಸೇರಿವೆ.
12326096a ನ ಹ್ಯೇತದ್ಬ್ರಹ್ಮಣಾ ಪ್ರಾಪ್ತಮೀದೃಶಂ ಮಮ ದರ್ಶನಮ್।
12326096c ಯತ್ತ್ವಯಾ ಪ್ರಾಪ್ತಮದ್ಯೇಹ ಏಕಾಂತಗತಬುದ್ಧಿನಾ।।
ಅನನ್ಯಭಕ್ತಿಭಾವ ಬುದ್ಧಿಗಳಿಂದ ಕೂಡಿರುವ ನಿನಗೆ ಇಂದು ಯಾವ ವಿಶ್ವರೂಪದರ್ಶನವಾಗಿದೆಯೋ ಆ ದಿವ್ಯ ದರ್ಶನವು ಬ್ರಹ್ಮನಿಗೂ ಪ್ರಾಪ್ತವಾಗಿಲ್ಲ.
12326097a ಏತತ್ತೇ ಸರ್ವಮಾಖ್ಯಾತಂ ಬ್ರಹ್ಮನ್ಭಕ್ತಿಮತೋ ಮಯಾ।
12326097c ಪುರಾಣಂ ಚ ಭವಿಷ್ಯಂ ಚ ಸರಹಸ್ಯಂ ಚ ಸತ್ತಮ।।
ಬ್ರಹ್ಮನ್! ಸತ್ತಮ! ನನ್ನಲ್ಲಿ ಅನನ್ಯ ಭಕ್ತಿಯನ್ನಿಟ್ಟಿರುವ ನಿನಗೆ ರಹಸ್ಯಗಳೊಂದಿಗೆ ಹಿಂದಾದ ಮತ್ತು ಮುಂದೆ ನಡೆಯುವ ನನ್ನ ಅವತಾರಗಳ ಕುರಿತು ಎಲ್ಲವನ್ನೂ ಹೇಳಿದ್ದೇನೆ.”
12326098a ಏವಂ ಸ ಭಗವಾನ್ದೇವೋ ವಿಶ್ವಮೂರ್ತಿಧರೋಽವ್ಯಯಃ।
12326098c ಏತಾವದುಕ್ತ್ವಾ ವಚನಂ ತತ್ರೈವಾಂತರಧೀಯತ।।
ಹೀಗೆ ಹೇಳಿ ಆ ಭಗವಾನ್ ದೇವ ವಿಶ್ವಮೂರ್ತಿಧರ ಅವ್ಯಯನು ಅಲ್ಲಿಯೇ ಅಂತರ್ಧಾನನಾದನು.
12326099a ನಾರದೋಽಪಿ ಮಹಾತೇಜಾಃ ಪ್ರಾಪ್ಯಾನುಗ್ರಹಮೀಪ್ಸಿತಮ್।
12326099c ನರನಾರಾಯಣೌ ದ್ರಷ್ಟುಂ ಪ್ರಾದ್ರವದ್ಬದರಾಶ್ರಮಮ್।।
ಮಹತೇಜಸ್ವಿ ನಾರದನಾದರೋ ತಾನು ಬಯಸಿದ ಅನುಗ್ರಗವನ್ನು ಪಡೆದುಕೊಂಡು ನರ-ನಾರಾಯಣರನ್ನು ನೋಡಲು ಬದರಿಕಾಶ್ರಮಕ್ಕೆ ತೆರಳಿದನು.
12326100a ಇದಂ ಮಹೋಪನಿಷದಂ ಚತುರ್ವೇದಸಮನ್ವಿತಮ್।
12326100c ಸಾಂಖ್ಯಯೋಗಕೃತಂ ತೇನ ಪಂಚರಾತ್ರಾನುಶಬ್ದಿತಮ್।।
12326101a ನಾರಾಯಣಮುಖೋದ್ಗೀತಂ ನಾರದೋಽಶ್ರಾವಯತ್ ಪುನಃ।
12326101c ಬ್ರಹ್ಮಣಃ ಸದನೇ ತಾತ ಯಥಾ ದೃಷ್ಟಂ ಯಥಾ ಶ್ರುತಮ್।।
ಮಗೂ! ನಾರಾಯಣನ ಮುಖದಿಂದ ಹೊರಹೊಮ್ಮಿದ, ನಾಲ್ಕುವೇದಗಳಿಂದ ಕೂಡಿರುವ, ಸಾಂಖ್ಯಯೋಗ ಸಿದ್ಧಾಂತವನ್ನೊಳಗೊಂಡಿರುವ, ಪಂಚರಾತ್ರ ಎಂದು ಕರೆಯಲ್ಪಟ್ಟಿರುವ ಈ ಮಹೋಪನಿಷತ್ತನ್ನು ನಾರದನು ಬ್ರಹ್ಮಸದನದಲ್ಲಿ ಶ್ವೇತದ್ವೀಪದಲ್ಲಿ ತಾನು ಹೇಗೆ ನೋಡಿದನೋ ಮತ್ತು ಕೇಳಿದನೋ ಹಾಗೆಯೇ ಪುನಃ ಪ್ರವಚನಮಾಡಿದನು.”
12326102 ಯುಧಿಷ್ಠಿರ ಉವಾಚ।
12326102a ಏತದಾಶ್ಚರ್ಯಭೂತಂ ಹಿ ಮಾಹಾತ್ಮ್ಯಂ ತಸ್ಯ ಧೀಮತಃ।
12326102c ಕಿಂ ಬ್ರಹ್ಮಾ ನ ವಿಜಾನೀತೇ ಯತಃ ಶುಶ್ರಾವ ನಾರದಾತ್।।
ಯುಧಿಷ್ಠಿರನು ಹೇಳಿದನು: “ಧೀಮಂತ ನಾರಾಯಣನ ಈ ಮಹಾತ್ಮೆಯು ಅತ್ಯಾಶ್ಚರ್ಯಮಯವಾದುದು. ಬ್ರಹ್ಮನು ನಾರದನಿಂದ ಇದನ್ನು ಕೇಳಬೇಕಾದರೆ ಅವನಿಗೆ ಇದಕ್ಕೂ ಮೊದಲು ಈ ವಿಷಯವು ತಿಳಿದಿರಲಿಲ್ಲವೇ?
12326103a ಪಿತಾಮಹೋ ಹಿ ಭಗವಾಂಸ್ತಸ್ಮಾದ್ದೇವಾದನಂತರಃ।
12326103c ಕಥಂ ಸ ನ ವಿಜಾನೀಯಾತ್ಪ್ರಭಾವಮಮಿತೌಜಸಃ।।
ಭಗವಾನ್ ಪಿತಾಮಹನಾದರೋ ನಾರಾಯಣನಿಂದ ಹುಟ್ಟಿದವನು. ಅವನಿಗೆ ನಂತರದವನು. ಆ ಅಮಿತತೇಜಸ್ವಿಗೆ ನಾರಾಯಣನ ಪ್ರಭಾವವು ಹೇಗೆ ತಿಳಿದಿರಲಿಲ್ಲ?”
12326104 ಭೀಷ್ಮ ಉವಾಚ।
12326104a ಮಹಾಕಲ್ಪಸಹಸ್ರಾಣಿ ಮಹಾಕಲ್ಪಶತಾನಿ ಚ।
12326104c ಸಮತೀತಾನಿ ರಾಜೇಂದ್ರ ಸರ್ಗಾಶ್ಚ ಪ್ರಲಯಾಶ್ಚ ಹ।।
ಭೀಷ್ಮನು ಹೇಳಿದನು: “ರಾಜೇಂದ್ರ! ಇದೂವರೆಗೆ ನೂರಾರು ಸಹಸ್ರಾರು ಮಹಾಕಲ್ಪಗಳೂ ಸೃಷ್ಟಿ ಪ್ರಲಯಗಳೂ ಆಗಿ ಹೋಗಿವೆ.
12326105a ಸರ್ಗಸ್ಯಾದೌ ಸ್ಮೃತೋ ಬ್ರಹ್ಮಾ ಪ್ರಜಾಸರ್ಗಕರಃ ಪ್ರಭುಃ।
12326105c ಜಾನಾತಿ ದೇವಪ್ರವರಂ ಭೂಯಶ್ಚಾತೋಽಧಿಕಂ ನೃಪ।
12326105e ಪರಮಾತ್ಮಾನಮೀಶಾನಮಾತ್ಮನಃ ಪ್ರಭವಂ ತಥಾ।।
ನೃಪ! ಸೃಷ್ಟಿಯ ಆದಿಯಲ್ಲಿ ಪ್ರಭು ಬ್ರಹ್ಮನೇ ಪ್ರಜೆಗಳನ್ನು ಸೃಷ್ಟಿಮಾಡುವವನು ಎಂದು ಹೇಳಲ್ಪಟ್ಟಿದೆ. ತನ್ನ ಉತ್ಪತ್ತಿಗೆ ಕಾರಣಭೂತನಾದ ದೇವಶ್ರೇಷ್ಠ ಪರಮಾತ್ಮ ಈಶಾನ ನಾರಾಯಣನ ಮಹಾತ್ಮೆಯನ್ನು ಇದಕ್ಕಿಂತಲೂ ಅಧಿಕವಾಗಿಯೇ ತಿಳಿದಿರುತ್ತಾನೆ.
12326106a ಯೇ ತ್ವನ್ಯೇ ಬ್ರಹ್ಮಸದನೇ ಸಿದ್ಧಸಂಘಾಃ ಸಮಾಗತಾಃ।
12326106c ತೇಭ್ಯಸ್ತಚ್ಚ್ರಾವಯಾಮಾಸ ಪುರಾಣಂ ವೇದಸಂಮಿತಮ್।।
ಬ್ರಹ್ಮಸದನದಲ್ಲಿ ಬಂದು ಸೇರಿದ್ದ ಅನ್ಯ ಸಿದ್ಧಸಂಘಗಳಿಗೆ ಈ ವೇದಸಮ್ಮಿತ ಪುರಾಣವನ್ನು ಬ್ರಹ್ಮನು ನಾರದನ ಮೂಲಕ ಕೇಳಿಸಿದನು.
12326107a ತೇಷಾಂ ಸಕಾಶಾತ್ಸೂರ್ಯಶ್ಚ ಶ್ರುತ್ವಾ ವೈ ಭಾವಿತಾತ್ಮನಾಮ್।
12326107c ಆತ್ಮಾನುಗಾಮಿನಾಂ ಬ್ರಹ್ಮ ಶ್ರಾವಯಾಮಾಸ ಭಾರತ।।
12326108a ಷಟ್ಷಷ್ಟಿರ್ಹಿ ಸಹಸ್ರಾಣಿ ಋಷೀಣಾಂ ಭಾವಿತಾತ್ಮನಾಮ್।
ಭಾರತ! ಭಾವಿತಾತ್ಮರಾದ ಆ ಸಿದ್ಧರ ಮೂಲಕ ಸೂರ್ಯನು ಇದನ್ನು ಕೇಳಿ ನಂತರ ತನ್ನನ್ನೇ ಅನುಸರಿಸಿ ಬರುತ್ತಿದ್ದ ಅರವತ್ತಾರು ಸಾವಿರ ಭಾವಿತಾತ್ಮ ಋಷಿಗಳಿಗೆ ಋಷಿಗಳಿಗೆ ಇದನ್ನು ಹೇಳಿದನು.
12326108c ಸೂರ್ಯಸ್ಯ ತಪತೋ ಲೋಕಾನ್ನಿರ್ಮಿತಾ ಯೇ ಪುರಃಸರಾಃ।
12326108e ತೇಷಾಮಕಥಯತ್ಸೂರ್ಯಃ ಸರ್ವೇಷಾಂ ಭಾವಿತಾತ್ಮನಾಮ್।।
ಸೂರ್ಯನ ಮುಂದೆ ಯಾರು ಹೋಗುತ್ತಿದ್ದರೋ ಆ ಎಲ್ಲ ಶುದ್ಧಾಂತಃಕರಣರಿಗೆ ಸೂರ್ಯನು ಈ ದಿವ್ಯ ಮಹಾತ್ಮೆಯನ್ನು ಹೇಳಿದನು.
12326109a ಸೂರ್ಯಾನುಗಾಮಿಭಿಸ್ತಾತ ಋಷಿಭಿಸ್ತೈರ್ಮಹಾತ್ಮಭಿಃ।
12326109c ಮೇರೌ ಸಮಾಗತಾ ದೇವಾಃ ಶ್ರಾವಿತಾಶ್ಚೇದಮುತ್ತಮಮ್।।
ಅಯ್ಯಾ! ಸೂರ್ಯನನ್ನೇ ಅನುಸರಿಸುವ ಆ ಮಹಾತ್ಮ ಋಷಿಗಳು ಈ ಉತ್ತಮ ವಿಷಯವನ್ನು ಮೇರುಪರ್ವತದಲ್ಲಿ ಸೇರಿದ್ದ ದೇವತೆಗಳಿಗೆ ಹೇಳಿದರು.
12326110a ದೇವಾನಾಂ ತು ಸಕಾಶಾದ್ವೈ ತತಃ ಶ್ರುತ್ವಾಸಿತೋ ದ್ವಿಜಃ।
12326110c ಶ್ರಾವಯಾಮಾಸ ರಾಜೇಂದ್ರ ಪಿತೃಣಾಂ ಮುನಿಸತ್ತಮಃ।।
ರಾಜೇಂದ್ರ! ದೇವತೆಗಳ ಬಳಿಯಿಂದ ಇದನ್ನು ದ್ವಿಜ ಅಸಿತನು ಕೇಳಿದನು. ಆ ಮುನಿಸತ್ತಮನು ಇದನ್ನು ಪಿತೃಗಳಿಗೆ ಹೇಳಿದನು.
12326111a ಮಮ ಚಾಪಿ ಪಿತಾ ತಾತ ಕಥಯಾಮಾಸ ಶಂತನುಃ।
12326111c ತತೋ ಮಯೈತಚ್ಚ್ರುತ್ವಾ ಚ ಕೀರ್ತಿತಂ ತವ ಭಾರತ।।
ಭಾರತ! ಅಯ್ಯಾ! ನನ್ನ ತಂದೆ ಶಂತನುವು ಇದನ್ನು ನನಗೆ ಹೇಳಿದನು. ನಾನು ಕೇಳಿದುದನ್ನು ನಿನಗೆ ಹೇಳಿದ್ದೇನೆ.
12326112a ಸುರೈರ್ವಾ ಮುನಿಭಿರ್ವಾಪಿ ಪುರಾಣಂ ಯೈರಿದಂ ಶ್ರುತಮ್।
12326112c ಸರ್ವೇ ತೇ ಪರಮಾತ್ಮಾನಂ ಪೂಜಯಂತಿ ಪುನಃ ಪುನಃ।।
ಸುರರಾಗಲೀ, ಮುನಿಗಳಾಗಲೀ ಯಾರ್ಯಾರು ಈ ಪುರಾಣವನ್ನು ಕೇಳಿದರೋ ಅವರೆಲ್ಲರೂ ಪುನಃ ಪುನಃ ಪರಮಾತ್ಮನನ್ನು ಪೂಜಿಸುತ್ತಾರೆ.
12326113a ಇದಮಾಖ್ಯಾನಮಾರ್ಷೇಯಂ ಪಾರಂಪರ್ಯಾಗತಂ ನೃಪ।
12326113c ನಾವಾಸುದೇವಭಕ್ತಾಯ ತ್ವಯಾ ದೇಯಂ ಕಥಂ ಚನ।।
ನೃಪ! ಈ ಆರ್ಷೇಯ ಆಖ್ಯಾನವು ಪಾರಂಪರಾಗತವಾಗಿ ಬಂದಿದೆ. ವಾಸುದೇವನ ಭಕ್ತರಲ್ಲದವರಿಗೆ ನೀನು ಎಂದೂ ಇದನ್ನು ಉಪದೇಶಿಸಬಾರದು.
12326114a ಮತ್ತೋಽನ್ಯಾನಿ ಚ ತೇ ರಾಜನ್ನುಪಾಖ್ಯಾನಶತಾನಿ ವೈ।
12326114c ಯಾನಿ ಶ್ರುತಾನಿ ಧರ್ಮ್ಯಾಣಿ ತೇಷಾಂ ಸಾರೋಽಯಮುದ್ಧೃತಃ।।
ರಾಜನ್! ನನ್ನಿಂದ ನೀನು ಯಾವ ಅನ್ಯ ನೂರಾರು ಆಖ್ಯಾನಗಳನ್ನು ಕೇಳಿರುವೆಯೋ ಅವುಗಳ ಧರ್ಮಸಾರವನ್ನು ಇದು ಎತ್ತಿ ಹೇಳುತ್ತದೆ.
12326115a ಸುರಾಸುರೈರ್ಯಥಾ ರಾಜನ್ನಿರ್ಮಥ್ಯಾಮೃತಮುದ್ಧೃತಮ್।
12326115c ಏವಮೇತತ್ಪುರಾ ವಿಪ್ರೈಃ ಕಥಾಮೃತಮಿಹೋದ್ಧೃತಮ್।।
ರಾಜನ್! ಸುರಾಸುರರು ಹೇಗೆ ಮಥಿಸಿ ಅಮೃತವನ್ನು ಮೇಲೆತ್ತಿದರೋ ಅದೇ ರೀತಿ ಹಿಂದೆ ವಿಪ್ರರು ಈ ಕಥಾಮೃತವನ್ನು ಮೇಲೆತ್ತಿದರು.
12326116a ಯಶ್ಚೇದಂ ಪಠತೇ ನಿತ್ಯಂ ಯಶ್ಚೇದಂ ಶೃಣುಯಾನ್ನರಃ।
12326116c ಏಕಾಂತಭಾವೋಪಗತ ಏಕಾಂತೇ ಸುಸಮಾಹಿತಃ।।
ನಿತ್ಯವೂ ಇದನ್ನು ಪಠಿಸುವ ಅಥವಾ ಕೇಳುವ ನರನು ಅನನ್ಯ ಭಕ್ತಿಯಿಂದ ಕೂಡಿದವನಾಗಿ ನಾರಾಯಣನೊಂದಿಗೆ ಏಕಾಂತಭಾವವನ್ನು ಹೊಂದುತ್ತಾನೆ.
12326117a ಪ್ರಾಪ್ಯ ಶ್ವೇತಂ ಮಹಾದ್ವೀಪಂ ಭೂತ್ವಾ ಚಂದ್ರಪ್ರಭೋ ನರಃ।
12326117c ಸ ಸಹಸ್ರಾರ್ಚಿಷಂ ದೇವಂ ಪ್ರವಿಶೇನ್ನಾತ್ರ ಸಂಶಯಃ।।
ಅವನು ಶ್ವೇತ ಮಹಾದ್ವೀಪವನ್ನು ತಲುಪಿ ಚಂದ್ರಪ್ರಭೆಯ ನರನಾಗಿ ಆ ಸಹಸ್ರಾರ್ಚಿಷ ದೇವನನ್ನು ಪ್ರವೇಶಿಸುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.
12326118a ಮುಚ್ಯೇದಾರ್ತಸ್ತಥಾ ರೋಗಾಚ್ಚ್ರುತ್ವೇಮಾಮಾದಿತಃ ಕಥಾಮ್।
12326118c ಜಿಜ್ಞಾಸುರ್ಲಭತೇ ಕಾಮಾನ್ಭಕ್ತೋ ಭಕ್ತಗತಿಂ ವ್ರಜೇತ್।।
ಈ ಕಥೆಯನ್ನು ಮೊದಲಿನಿಂದ ಕೇಳುವವನು ಸಂಕಷ್ಟದಿಂದ ಮತ್ತು ರೋಗಗಳಿಂದ ವಿಮುಕ್ತನಾಗುತ್ತಾನೆ. ಇದರ ಕುರಿತು ಜಿಜ್ಞಾಸೆಮಾಡುವವನು ಬಯಸಿದ್ದನ್ನು ಪಡೆದುಕೊಳ್ಳುತ್ತಾನೆ ಮತ್ತು ಭಕ್ತನು ಪರಮ ಗತಿಯನ್ನು ಹೊಂದುತ್ತಾನೆ.
12326119a ತ್ವಯಾಪಿ ಸತತಂ ರಾಜನ್ನಭ್ಯರ್ಚ್ಯಃ ಪುರುಷೋತ್ತಮಃ।
12326119c ಸ ಹಿ ಮಾತಾ ಪಿತಾ ಚೈವ ಕೃತ್ಸ್ನಸ್ಯ ಜಗತೋ ಗುರುಃ।।
ರಾಜನ್! ನೀನೂ ಕೂಡ ಸತತವೂ ಪುರುಷೋತ್ತಮನನ್ನು ಅರ್ಚಿಸು. ಅವನೇ ಸಂಪೂರ್ಣ ಜಗತ್ತಿನ ಮಾತಾ, ಪಿತಾ ಮತ್ತು ಗುರು ಕೂಡ.
12326120a ಬ್ರಹ್ಮಣ್ಯದೇವೋ ಭಗವಾನ್ಪ್ರೀಯತಾಂ ತೇ ಸನಾತನಃ।
12326120c ಯುಧಿಷ್ಠಿರ ಮಹಾಬಾಹೋ ಮಹಾಬಾಹುರ್ಜನಾರ್ದನಃ।।
ಯುಧಿಷ್ಠಿರ! ಮಹಾಬಾಹೋ! ಬ್ರಹ್ಮಣ್ಯ ದೇವ ಭಗವಾನ್ ಸನಾತನ ಮಹಾಬಾಹು ಜನಾರ್ದನನು ನಿನ್ನ ಮೇಲೆ ಪ್ರೀತನಾಗಲಿ.””
12326121 ವೈಶಂಪಾಯನ ಉವಾಚ।
12326121a ಶ್ರುತ್ವೈತದಾಖ್ಯಾನವರಂ ಧರ್ಮರಾಡ್ ಜನಮೇಜಯ।
12326121c ಭ್ರಾತರಶ್ಚಾಸ್ಯ ತೇ ಸರ್ವೇ ನಾರಾಯಣಪರಾಭವನ್।।
ವೈಶಂಪಾಯನನು ಹೇಳಿದನು: “ಜನಮೇಜಯ! ಈ ಶ್ರೇಷ್ಠ ಆಖ್ಯಾನವನ್ನು ಕೇಳಿ ಧರ್ಮರಾಜನು ಮತ್ತು ಅವನ ಎಲ್ಲ ಸಹೋದರರೂ ನಾರಾಯಣನ ಪರಮ ಭಕ್ತರಾದರು.
12326122a ಜಿತಂ ಭಗವತಾ ತೇನ ಪುರುಷೇಣೇತಿ ಭಾರತ।
12326122c ನಿತ್ಯಂ ಜಪ್ಯಪರಾ ಭೂತ್ವಾ ಸರಸ್ವತೀಮುದೀರಯನ್।।
ಭಾರತ! ನಿತ್ಯವೂ ಜಪದಲ್ಲಿಯೇ ನಿರತರಾಗಿ “ಆ ಭಗವಂತ ಪುರುಷನಿಂದ ಎಲ್ಲವೂ ಜಯಿಸಲ್ಪಟ್ಟಿದೆ” ಎಂಬ ಜಯವಾಣಿಯನ್ನು ಹೇಳುತ್ತಿದ್ದರು.
12326123a ಯೋ ಹ್ಯಸ್ಮಾಕಂ ಗುರುಃ ಶ್ರೇಷ್ಠಃ ಕೃಷ್ಣದ್ವೈಪಾಯನೋ ಮುನಿಃ।
12326123c ಸ ಜಗೌ ಪರಮಂ ಜಪ್ಯಂ ನಾರಾಯಣಮುದೀರಯನ್।।
ನನ್ನ ಪರಮ ಗುರುಗಳಾದ ಮುನಿ ಕೃಷ್ಣದ್ವೈಪಾಯನರೂ ಕೂಡ ನಿರಂತರವಾಗಿ ನಾರಾಯಣನ ಮಂತ್ರವನ್ನು ಜಪಿಸುತ್ತಿದ್ದರು.
12326124a ಗತ್ವಾಂತರಿಕ್ಷಾತ್ಸತತಂ ಕ್ಷೀರೋದಮಮೃತಾಶಯಮ್।
12326124c ಪೂಜಯಿತ್ವಾ ಚ ದೇವೇಶಂ ಪುನರಾಯಾತ್ಸ್ವಮಾಶ್ರಮಮ್।।
ಅವನು ಅಂತರಿಕ್ಷ ಮಾರ್ಗದಲ್ಲಿ ಅಮೃತಾಶಯ ಕ್ಷೀರಸಾಗರಕ್ಕೆ ಹೋಗಿ ದೇವೇಶನನ್ನು ಪೂಜಿಸಿ ಪುನಃ ಆಶ್ರಮಕ್ಕೆ ಬರುತ್ತಿದ್ದರು.”