324: ನಾರಾಯಣೀಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 324

ಸಾರ

ಯಜ್ಞದಲ್ಲಿ ಹವಿಸ್ಸಾಗಿ ಉಪಯೋಗಿಸಬೇಕಾದ ’ಅಜ”ದ ಶಬ್ಧಾರ್ಥವು “ಧಾನ್ಯಬೀಜ” ಎಂದೇ ಹೊರತು ಆಡಲ್ಲ ಎಂಬ ವಿಷಯವನ್ನು ತಿಳಿದಿದ್ದರೂ ಪಕ್ಷಪಾತವನ್ನು ತೋರಿದ ಕಾರಣ ಉಪರಿಚರವಸುವು ಸ್ವರ್ಗದಿಂದ ಭ್ರಷ್ಟನಾದುದು (1-16); ಭಗವಂತನ ಕೃಪೆಯಿಂದ ಪುನಃ ಸ್ವಸ್ಥಾನವನ್ನು ಸೇರಿದುದು (17-39).

12324001 ಯುಧಿಷ್ಠಿರ ಉವಾಚ।
12324001a ಯದಾ ಭಕ್ತೋ ಭಗವತ ಆಸೀದ್ರಾಜಾ ಮಹಾವಸುಃ।
12324001c ಕಿಮರ್ಥಂ ಸ ಪರಿಭ್ರಷ್ಟೋ ವಿವೇಶ ವಿವರಂ ಭುವಃ।।

ಯುಧಿಷ್ಠಿರನು ಹೇಳಿದನು: “ಮಹ ವಸುವು ಭಗವಂತ ಭಕ್ತನಾಗಿದ್ದರೂ ಕೂಡ ಯಾವ ಕಾರಣಕ್ಕಾಗಿ ಪರಿಭ್ರಷ್ಟನಾಗಿ ಭೂಮಿಯ ಬಿಲವನ್ನು ಸೇರಿದನು?”

12324002 ಭೀಷ್ಮ ಉವಾಚ।
12324002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
12324002c ಋಷೀಣಾಂ ಚೈವ ಸಂವಾದಂ ತ್ರಿದಶಾನಾಂ ಚ ಭಾರತ।।

ಭೀಷ್ಮನು ಹೇಳಿದನು: “ಭಾರತ! ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ಋಷಿಗಳ ಮತ್ತು ತ್ರಿದಶರ ಸಂವಾದವನ್ನು ಉದಾಹರಿಸುತ್ತಾರೆ.

12324003a ಅಜೇನ ಯಷ್ಟವ್ಯಮಿತಿ ದೇವಾಃ ಪ್ರಾಹುರ್ದ್ವಿಜೋತ್ತಮಾನ್।
12324003c ಸ ಚ ಚಾಗೋ ಹ್ಯಜೋ ಜ್ಞೇಯೋ ನಾನ್ಯಃ ಪಶುರಿತಿ ಸ್ಥಿತಿಃ।।

ಆಡಿನಿಂದ ಯಜ್ಞಮಾಡಬೇಕು ಎಂದು ದೇವತೆಗಳು ದ್ವಿಜೋತ್ತಮರಿಗೆ ಹೇಳುತ್ತಿದ್ದರು. ಅಜ ಎಂದರೆ ಪಶು ಆಡು. ಬೇರೆ ಯಾವುದೂ ಅಲ್ಲ ಎಂದು ಅವರ ಮತವಾಗಿತ್ತು.

12324004 ಋಷಯ ಊಚುಃ।
12324004a ಬೀಜೈರ್ಯಜ್ಞೇಷು ಯಷ್ಟವ್ಯಮಿತಿ ವೈ ವೈದಿಕೀ ಶ್ರುತಿಃ।
12324004c ಅಜಸಂಜ್ಞಾನಿ ಬೀಜಾನಿ ಚಾಗಂ ನ ಘ್ನಂತುಮರ್ಹಥ।।

ಋಷಿಗಳು ಹೇಳಿದರು: “ಬೀಜಗಳಿಂದ ಯಜ್ಞಗಳಲ್ಲಿ ಆಹುತಿಯನ್ನು ನೀಡಬೇಕೆಂದು ವೈದಿಕೀ ಶ್ರುತಿಯಿದೆ. ಅಜ ಎಂದರೆ ಬೀಜಗಳು. ಆದುದರಿಂದ ಆಡನ್ನು ಕೊಲ್ಲಬಾರದು.

12324005a ನೈಷ ಧರ್ಮಃ ಸತಾಂ ದೇವಾ ಯತ್ರ ವಧ್ಯೇತ ವೈ ಪಶುಃ।
12324005c ಇದಂ ಕೃತಯುಗಂ ಶ್ರೇಷ್ಠಂ ಕಥಂ ವಧ್ಯೇತ ವೈ ಪಶುಃ।।

ದೇವತೆಗಳೇ! ಪಶುವನ್ನು ವಧಿಸುವುದು ಸತ್ಪುರುಷರ ಧರ್ಮವಲ್ಲ. ಶ್ರೇಷ್ಠವಾದ ಈ ಕೃತಯುಗದಲ್ಲಿ ಪಶುವನ್ನು ಹೇಗೆ ವಧಿಸಬೇಕು?””

12324006 ಭೀಷ್ಮ ಉವಾಚ।
12324006a ತೇಷಾಂ ಸಂವದತಾಮೇವಮೃಷೀಣಾಂ ವಿಬುಧೈಃ ಸಹ।
12324006c ಮಾರ್ಗಾಗತೋ ನೃಪಶ್ರೇಷ್ಠಸ್ತಂ ದೇಶಂ ಪ್ರಾಪ್ತವಾನ್ವಸುಃ।
12324006e ಅಂತರಿಕ್ಷಚರಃ ಶ್ರೀಮಾನ್ಸಮಗ್ರಬಲವಾಹನಃ।।

ಭೀಷ್ಮನು ಹೇಳಿದನು: “ಆ ಋಷಿಗಳು ವಿಬುಧರೊಂದಿಗೆ ಈ ರೀತಿ ಮಾತನಾಡುತ್ತಿರಲು ಸಮಗ್ರಬಲವಾಹನಾಗಿ ಅಂತರಿಕ್ಷಚರನಾಗಿ ಮಾರ್ಗದಲ್ಲಿ ಹೋಗುತ್ತಿದ್ದ ನೃಪಶ್ರೇಷ್ಠ ವಸುವು ಆ ಪ್ರದೇಶವನ್ನು ತಲುಪಿದನು.

12324007a ತಂ ದೃಷ್ಟ್ವಾ ಸಹಸಾಯಾಂತಂ ವಸುಂ ತೇ ತ್ವಂತರಿಕ್ಷಗಮ್।
12324007c ಊಚುರ್ದ್ವಿಜಾತಯೋ ದೇವಾನೇಷ ಚೇತ್ಸ್ಯತಿ ಸಂಶಯಮ್।।

ಒಮ್ಮೆಲೇ ಅಲ್ಲಿಗೆ ಬರುತ್ತಿದ್ದ ಅಂತರಿಕ್ಷಗ ವಸುವನ್ನು ನೋಡಿ ದ್ವಿಜಾತಯರು ದೇವತೆಗಳಿಗೆ “ಇವನು ಸಂಶಯವನ್ನು ಬಗೆಹರಿಸುತ್ತಾನೆ” ಎಂದು ಹೇಳಿದರು.

12324008a ಯಜ್ವಾ ದಾನಪತಿಃ ಶ್ರೇಷ್ಠಃ ಸರ್ವಭೂತಹಿತಪ್ರಿಯಃ।
12324008c ಕಥಂ ಸ್ವಿದನ್ಯಥಾ ಬ್ರೂಯಾದ್ವಾಕ್ಯಮೇಷ ಮಹಾನ್ವಸುಃ।।

“ಸರ್ವಭೂತಹಿತಪ್ರಿಯನಾದ ಯಜ್ಞಗಳನ್ನು ಮಾಡಿರುವ ದಾನಪತಿ ಶ್ರೇಷ್ಠನಾದ ಈ ಮಹಾನ್ ವಸುವು ಈ ವಾಕ್ಯಕ್ಕೆ ಅನ್ಯಥಾ ಹೇಗೆ ತಾನೇ ಹೇಳಬಲ್ಲನು?”

12324009a ಏವಂ ತೇ ಸಂವಿದಂ ಕೃತ್ವಾ ವಿಬುಧಾ ಋಷಯಸ್ತಥಾ।
12324009c ಅಪೃಚ್ಚನ್ಸಹಸಾಭ್ಯೇತ್ಯ ವಸುಂ ರಾಜಾನಮಂತಿಕಾತ್।।

ಹೀಗೆ ಒಪ್ಪಂದವನ್ನು ಮಾಡಿಕೊಂಡು ವಿಬುಧರು ಮತ್ತು ಋಷಿಗಳು ಕೂಡಲೇ ರಾಜ ವಸುವಿನ ಹತ್ತಿರಹೋಗಿ ಕೇಳಿದರು:

12324010a ಭೋ ರಾಜನ್ಕೇನ ಯಷ್ಟವ್ಯಮಜೇನಾಹೋ ಸ್ವಿದೌಷಧೈಃ।
12324010c ಏತನ್ನಃ ಸಂಶಯಂ ಚಿಂಧಿ ಪ್ರಮಾಣಂ ನೋ ಭವಾನ್ಮತಃ।।

“ಭೋ ರಾಜನ್! ಆಡು ಅಥವಾ ಧಾನ್ಯ ಯಾವುದರಿಂದ ಯಜ್ಞವನ್ನು ಮಾಡಬೇಕು? ನಮ್ಮ ಈ ಸಂಶಯವನ್ನು ನಿವಾರಿಸು. ನೀನು ಇದಕ್ಕೆ ಪ್ರಮಾಣನೆಂದು ನಮ್ಮ ಮತವಾಗಿದೆ.”

12324011a ಸ ತಾನ್ಕೃತಾಂಜಲಿರ್ಭೂತ್ವಾ ಪರಿಪಪ್ರಚ್ಚ ವೈ ವಸುಃ।
12324011c ಕಸ್ಯ ವಃ ಕೋ ಮತಃ ಪಕ್ಷೋ ಬ್ರೂತ ಸತ್ಯಂ ಸಮಾಗತಾಃ।।

ಆಗ ಅಂಜಲೀಬದ್ಧನಾಗಿ ವಸುವು ಅವರನ್ನು ಪ್ರಶ್ನಿಸಿದನು: “ನಿಮ್ಮಲ್ಲಿ ಯಾರಿಗೆ ಯಾರ ಮತವು ಅಪೇಕ್ಷಿತವಾಗಿದೆ ಎನ್ನುವುದನ್ನು ಸತ್ಯವಾಗಿ ಹೇಳಿರಿ.”

12324012 ಋಷಯ ಊಚುಃ।
12324012a ಧಾನ್ಯೈರ್ಯಷ್ಟವ್ಯಮಿತ್ಯೇಷ ಪಕ್ಷೋಽಸ್ಮಾಕಂ ನರಾಧಿಪ।
12324012c ದೇವಾನಾಂ ತು ಪಶುಃ ಪಕ್ಷೋ ಮತೋ ರಾಜನ್ವದಸ್ವ ನಃ।।

ಋಷಿಗಳು ಹೇಳಿದರು: “ನರಾಧಿಪ! ಧಾನದಿಂದ ಯಜ್ಞಮಾಡಬೇಕೆಂದು ನಮ್ಮ ಪಕ್ಷ. ದೇವತೆಗಳದ್ದಾದರೋ ಪಶು ಎನ್ನುವ ಪಕ್ಷ. ರಾಜನ್! ನಿನ್ನ ಮತವೇನೆಂದು ನಮಗೆ ಹೇಳು.””

12324013 ಭೀಷ್ಮ ಉವಾಚ।
12324013a ದೇವಾನಾಂ ತು ಮತಂ ಜ್ಞಾತ್ವಾ ವಸುನಾ ಪಕ್ಷಸಂಶ್ರಯಾತ್।
12324013c ಚಾಗೇನಾಜೇನ ಯಷ್ಟವ್ಯಮೇವಮುಕ್ತಂ ವಚಸ್ತದಾ।।

ಭೀಷ್ಮನು ಹೇಳಿದನು: “ದೇವತೆಗಳ ಮತವನ್ನು ತಿಳಿದು ಅವರ ಪಕ್ಷವನ್ನು ಸೇರಲು ಬಯಸಿ ವಸುವು ಅಜ ಅರ್ಥಾತ್ ಆಡಿನಿಂದಲೇ ಯಜ್ಞಮಾಡಬೇಕು ಎಂದು ಹೇಳಿಬಿಟ್ಟನು.

12324014a ಕುಪಿತಾಸ್ತೇ ತತಃ ಸರ್ವೇ ಮುನಯಃ ಸೂರ್ಯವರ್ಚಸಃ।
12324014c ಊಚುರ್ವಸುಂ ವಿಮಾನಸ್ಥಂ ದೇವಪಕ್ಷಾರ್ಥವಾದಿನಮ್।।

ಆಗ ಕುಪಿತರಾದ ಆ ಎಲ್ಲ ಸೂರ್ಯವರ್ಚಸ್ವೀ ಮುನಿಗಳು ದೇವಪಕ್ಷವನ್ನು ಅನುಮೋದಿಸಿ ಮಾತನಾಡಿದ ವಿಮಾನಸ್ಥನಿಗೆ ಹೇಳಿದರು:

12324015a ಸುರಪಕ್ಷೋ ಗೃಹೀತಸ್ತೇ ಯಸ್ಮಾತ್ತಸ್ಮಾದ್ದಿವಃ ಪತ।
12324015c ಅದ್ಯ ಪ್ರಭೃತಿ ತೇ ರಾಜನ್ನಾಕಾಶೇ ವಿಹತಾ ಗತಿಃ।
12324015e ಅಸ್ಮಚ್ಚಾಪಾಭಿಘಾತೇನ ಮಹೀಂ ಭಿತ್ತ್ವಾ ಪ್ರವೇಕ್ಷ್ಯಸಿ।।

“ಸುರಪಕ್ಷವನ್ನು ಎತ್ತಿಹಿಡಿದುದರಿಂದ ನೀನು ದಿವದಿಂದ ಬೀಳು. ರಾಜನ್! ಆಕಾಶಮಾರ್ಗದಲ್ಲಿ ಹಾರಾಡುತ್ತಿರುವ ನೀನು ಇಂದಿನಿಂದ ನಮ್ಮ ಶಾಪದ ಆಘಾತದಿಂದ ಭೂಮಿಯನ್ನು ಸೀಳಿ ಪ್ರವೇಶಿಸುವೆ.”

12324016a ತತಸ್ತಸ್ಮಿನ್ಮುಹೂರ್ತೇಽಥ ರಾಜೋಪರಿಚರಸ್ತದಾ।
12324016c ಅಧೋ ವೈ ಸಂಬಭೂವಾಶು ಭೂಮೇರ್ವಿವರಗೋ ನೃಪಃ।
12324016e ಸ್ಮೃತಿಸ್ತ್ವೇನಂ ನ ಪ್ರಜಹೌ ತದಾ ನಾರಾಯಣಾಜ್ಞಯಾ।।

ಆ ಮುಹೂರ್ತದಲ್ಲಿಯೇ ರಾಜ ಉಪರಿಚರನು ಅಧೋಮುಖನಾಗಿ ಬಿದ್ದು ಭೂಮಿಯ ಬಿಲವನ್ನು ಪ್ರವೇಶಿಸಿ ಪಾತಾಳಲೋಕಕ್ಕೆ ಹೋದನು. ಆದರೆ ನಾರಾಯಣನ ಅನುಗ್ರಹದಿಂದ ಅವನು ತನ್ನ ಸ್ಮೃತಿಯನ್ನು ಕಳೆದುಕೊಳ್ಳಲಿಲ್ಲ.

12324017a ದೇವಾಸ್ತು ಸಹಿತಾಃ ಸರ್ವೇ ವಸೋಃ ಶಾಪವಿಮೋಕ್ಷಣಮ್।
12324017c ಚಿಂತಯಾಮಾಸುರವ್ಯಗ್ರಾಃ ಸುಕೃತಂ ಹಿ ನೃಪಸ್ಯ ತತ್।।

ಅವ್ಯಗ್ರರಾದ ದೇವತೆಗಳೆಲ್ಲರೂ ವಸುವಿನ ಶಾಪವಿಮೋಚನೆಯ ಕುರಿತು ಯೋಚಿಸಿ ನೃಪನಿಗೆ ಸುಕೃತವನ್ನೆಸಗಲು ನಿಶ್ಚಯಿಸಿದರು.

12324018a ಅನೇನಾಸ್ಮತ್ಕೃತೇ ರಾಜ್ಞಾ ಶಾಪಃ ಪ್ರಾಪ್ತೋ ಮಹಾತ್ಮನಾ।
12324018c ಅಸ್ಯ ಪ್ರತಿಪ್ರಿಯಂ ಕಾರ್ಯಂ ಸಹಿತೈರ್ನೋ ದಿವೌಕಸಃ।।

“ನಮ್ಮ ಸಲುವಾಗಿ ಮಹಾತ್ಮ ರಾಜನು ಶಾಪವನ್ನು ಪಡೆದುಕೊಂಡನು. ದಿವೌಕಸರಾದ ನಾವು ಒಟ್ಟಾಗಿ ಅವನ ಪ್ರತಿ ಪ್ರಿಯಕಾರ್ಯವನ್ನು ಮಾಡಬೇಕು.”

12324019a ಇತಿ ಬುದ್ಧ್ಯಾ ವ್ಯವಸ್ಯಾಶು ಗತ್ವಾ ನಿಶ್ಚಯಮೀಶ್ವರಾಃ।
12324019c ಊಚುಸ್ತಂ ಹೃಷ್ಟಮನಸೋ ರಾಜೋಪರಿಚರಂ ತದಾ।।

ಹೀಗೆ ಯೋಚಿಸಿ ಪಾತಾಳಕ್ಕೆ ಹೋಗಿ ಆ ಈಶ್ವರರು ಹೃಷ್ಟಮನಸ್ಕರಾಗಿ ರಾಜಾ ಉಪರಿಚರನಿಗೆ ಹೇಳಿದರು:

12324020a ಬ್ರಹ್ಮಣ್ಯದೇವಂ ತ್ವಂ ಭಕ್ತಃ ಸುರಾಸುರಗುರುಂ ಹರಿಮ್।
12324020c ಕಾಮಂ ಸ ತವ ತುಷ್ಟಾತ್ಮಾ ಕುರ್ಯಾಚ್ಚಾಪವಿಮೋಕ್ಷಣಮ್।।

“ನೀನು ಬ್ರಹ್ಮಣ್ಯದೇವ ಸುರಾಸುರಗುರು ಹರಿಯ ಭಕ್ತನಾಗಿರುವೆ. ತುಷ್ಟಾತ್ಮನಾದ ಅವನು ನಿನ್ನ ಶಾಪವಿಮೋಚನೆಯನ್ನು ಮಾಡಲು ಬಯಸಬಹುದು.

12324021a ಮಾನನಾ ತು ದ್ವಿಜಾತೀನಾಂ ಕರ್ತವ್ಯಾ ವೈ ಮಹಾತ್ಮನಾಮ್।
12324021c ಅವಶ್ಯಂ ತಪಸಾ ತೇಷಾಂ ಫಲಿತವ್ಯಂ ನೃಪೋತ್ತಮ।।
12324022a ಯತಸ್ತ್ವಂ ಸಹಸಾ ಭ್ರಷ್ಟ ಆಕಾಶಾನ್ಮೇದಿನೀತಲಮ್।

ನೃಪೋತ್ತಮ! ಮಹಾತ್ಮ ದ್ವಿಜಾತಿಯವರನ್ನು ಗೌರವಿಸಬೇಕು. ಅವರ ತಪಸ್ಸು ಅವಶ್ಯವಾಗಿ ಫಲಿಸುತ್ತದೆ. ಆದುದರಿಂದಲೇ ನೀನು ಕೂಡಲೇ ಆಕಾಶದಿಂದ ಭ್ರಷ್ಟನಾಗಿ ಮೇದಿನೀತಲವನ್ನು ಪ್ರವೇಶಿಸಿದೆ.

12324022c ಏಕಂ ತ್ವನುಗ್ರಹಂ ತುಭ್ಯಂ ದದ್ಮೋ ವೈ ನೃಪಸತ್ತಮ।।
12324023a ಯಾವತ್ತ್ವಂ ಶಾಪದೋಷೇಣ ಕಾಲಮಾಸಿಷ್ಯಸೇಽನಘ।
12324023c ಭೂಮೇರ್ವಿವರಗೋ ಭೂತ್ವಾ ತಾವಂತಂ ಕಾಲಮಾಪ್ಸ್ಯಸಿ।
12324023e ಯಜ್ಞೇಷು ಸುಹುತಾಂ ವಿಪ್ರೈರ್ವಸೋರ್ಧಾರಾಂ ಮಹಾತ್ಮಭಿಃ।।

ನೃಪಸತ್ತಮ! ಅನಘ! ನಾವು ನಿನಗೆ ಒಂದು ಅನುಗ್ರಹವನ್ನು ನೀಡುತ್ತೇವೆ. ಎಷ್ಟುಕಾಲದವರೆಗೆ ಶಾಪದೋಷದಿಂದ ನೀನು ಭೂಮಿಯ ಬಿಲವನ್ನು ಪ್ರವೇಶಿಸಿ ವಾಸಿಸುತ್ತೀಯೋ ಅಷ್ಟು ಕಾಲದ ವರೆಗೆ ಯಜ್ಞಗಳಲ್ಲಿ ಮಹಾತ್ಮ ವಿಪ್ರರು ನೀಡುವ ವಸೋರ್ಧಾರಾ ಎನ್ನುವ ಉತ್ತಮ ಆಹುತಿಯನ್ನು ನೀನು ಪಡೆದುಕೊಳ್ಳುತ್ತೀಯೆ.

12324024a ಪ್ರಾಪ್ಸ್ಯಸೇಽಸ್ಮದನುಧ್ಯಾನಾನ್ಮಾ ಚ ತ್ವಾಂ ಗ್ಲಾನಿರಾಸ್ಪೃಶೇತ್।
12324024c ನ ಕ್ಷುತ್ಪಿಪಾಸೇ ರಾಜೇಂದ್ರ ಭೂಮೇಶ್ಚಿದ್ರೇ ಭವಿಷ್ಯತಃ।।

ರಾಜೇಂದ್ರ! ನಮ್ಮ ಅನುಧ್ಯಾನವನ್ನು ಮಾಡುವುದರಿಂದ ನೀನು ಅದನ್ನು ಪಡೆದುಕೊಂಡಾಗ ಆಯಾಸವು ನಿನ್ನನ್ನು ಮುಟ್ಟುವುದಿಲ್ಲ. ಭೂಮಿಯ ಬಿಲದಲ್ಲಿ ನಿನಗೆ ಹಸಿವು-ಬಾಯಾರಿಕೆಗಳೂ ಆಗುವುದಿಲ್ಲ.

12324025a ವಸೋರ್ಧಾರಾನುಪೀತತ್ವಾತ್ತೇಜಸಾಪ್ಯಾಯಿತೇನ ಚ।
12324025c ಸ ದೇವೋಽಸ್ಮದ್ವರಾತ್ಪ್ರೀತೋ ಬ್ರಹ್ಮಲೋಕಂ ಹಿ ನೇಷ್ಯತಿ।।

ನಮ್ಮ ವರದಿಂದ ವಸೋರ್ಧಾರವನ್ನು ಕುಡಿದು ತೇಜಸ್ಸಿನಿಂದ ಉಬ್ಬಿದ ನಿನ್ನನ್ನು ಪ್ರೀತನಾದ ದೇವನು ಬ್ರಹ್ಮಲೋಕಕ್ಕೆ ಕೊಂಡೊಯ್ಯುತ್ತಾನೆ.”

12324026a ಏವಂ ದತ್ತ್ವಾ ವರಂ ರಾಜ್ಞೇ ಸರ್ವೇ ತತ್ರ ದಿವೌಕಸಃ।
12324026c ಗತಾಃ ಸ್ವಭವನಂ ದೇವಾ ಋಷಯಶ್ಚ ತಪೋಧನಾಃ।।

ರಾಜನಿಗೆ ಈ ರೀತಿಯ ವರವನ್ನಿತ್ತು ಸರ್ವ ದಿವೌಕಸ ದೇವತೆಗಳೂ ತಪೋಧನ ಋಷಿಗಳು ಸ್ವಭವನಗಳಿಗೆ ತೆರಳಿದರು.

12324027a ಚಕ್ರೇ ಚ ಸತತಂ ಪೂಜಾಂ ವಿಷ್ವಕ್ಸೇನಾಯ ಭಾರತ।
12324027c ಜಪ್ಯಂ ಜಗೌ ಚ ಸತತಂ ನಾರಾಯಣಮುಖೋದ್ಗತಮ್।।

ಭಾರತ! ಉಪರಿಚರನು ಸತತವೂ ವಿಷ್ವಕ್ಸೇನನ ಪೂಜೆಯನ್ನು ಮಾಡಿದನು. ಮತ್ತು ಸತತವೂ ನಾರಾಯಣಮುಖೋದ್ಗತವಾದ ಜಪವನ್ನು ಜಪಿಸಿದನು.

12324028a ತತ್ರಾಪಿ ಪಂಚಭಿರ್ಯಜ್ಞೈಃ ಪಂಚಕಾಲಾನರಿಂದಮ।
12324028c ಅಯಜದ್ಧರಿಂ ಸುರಪತಿಂ ಭೂಮೇರ್ವಿವರಗೋಽಪಿ ಸನ್।।

ಅರಿಂದಮ! ಭೂಮಿಯ ಬಿಲದಲ್ಲಿದ್ದುಕೊಂಡೂ ಅವನು ಪಂಚಯಜ್ಞಗಳಿಂದ ಮತ್ತು ಪಂಚಕಾಲಗಳಿಂದ ಸುರಪತಿ ಹರಿಯನ್ನು ಯಜಿಸಿದನು.

12324029a ತತೋಽಸ್ಯ ತುಷ್ಟೋ ಭಗವಾನ್ಭಕ್ತ್ಯಾ ನಾರಾಯಣೋ ಹರಿಃ।
12324029c ಅನನ್ಯಭಕ್ತಸ್ಯ ಸತಸ್ತತ್ಪರಸ್ಯ ಜಿತಾತ್ಮನಃ।।

ಅನಂತರ ಆ ಅನನ್ಯಭಕ್ತನ, ಸತತವೂ ತನ್ನನ್ನೇ ಧ್ಯಾನಿಸುತ್ತಿದ್ದ ಆ ಜಿತಾತ್ಮನ ಭಕ್ತಿಯಿಂದ ಭಗವಾನ್ ಹರಿ ನಾರಾಯಣನು ತುಷ್ಟನಾದನು.

12324030a ವರದೋ ಭಗವಾನ್ವಿಷ್ಣುಃ ಸಮೀಪಸ್ಥಂ ದ್ವಿಜೋತ್ತಮಮ್।
12324030c ಗರುತ್ಮಂತಂ ಮಹಾವೇಗಮಾಬಭಾಷೇ ಸ್ಮಯನ್ನಿವ।।

ಆಗ ವರದ ಭಗವಾನ್ ವಿಷ್ಣುವು ಸಮೀಪದಲ್ಲಿದ್ದ ಮಹಾವೇಗಶಾಲೀ ದ್ವಿಜೋತ್ತಮ ಗರುತ್ಮಂತನಿಗೆ ನಸುನಗುತ್ತಾ ಹೇಳಿದನು:

12324031a ದ್ವಿಜೋತ್ತಮ ಮಹಾಭಾಗ ಗಮ್ಯತಾಂ ವಚನಾನ್ಮಮ।
12324031c ಸಮ್ರಾಡ್ರಾಜಾ ವಸುರ್ನಾಮ ಧರ್ಮಾತ್ಮಾ ಮಾಂ ಸಮಾಶ್ರಿತಃ।।

“ದ್ವಿಜೋತ್ತಮ! ಮಹಾಭಾಗ! ನನ್ನ ವಚನದಂತೆ ನೀನು ನನ್ನನ್ನೇ ಆಶ್ರಯಿಸಿರುವ ಧರ್ಮಾತ್ಮಾ ವಸುವೆಂಬ ಸಾಮ್ರಾಟ್ ರಾಜನ ಬಳಿ ಹೋಗಬೇಕು.

12324032a ಬ್ರಾಹ್ಮಣಾನಾಂ ಪ್ರಕೋಪೇನ ಪ್ರವಿಷ್ಟೋ ವಸುಧಾತಲಮ್।
12324032c ಮಾನಿತಾಸ್ತೇ ತು ವಿಪ್ರೇಂದ್ರಾಸ್ತ್ವಂ ತು ಗಚ್ಚ ದ್ವಿಜೋತ್ತಮ।।

ಬ್ರಾಹ್ಮಣರ ಪ್ರಕೋಪದಿಂದ ಅವನು ವಸುಧಾತಲವನ್ನು ಪ್ರವೇಶಿಸಿದ್ದಾನೆ. ಅವನು ಆ ವಿಪ್ರೇಂದ್ರರನ್ನು ಗೌರವಿಸಿಯಾಯಿತು. ದ್ವಿಜೋತ್ತಮ! ನೀನು ಅವನ ಬಳಿ ಹೋಗು.

12324033a ಭೂಮೇರ್ವಿವರಸಂಗುಪ್ತಂ ಗರುಡೇಹ ಮಮಾಜ್ಞಯಾ।
12324033c ಅಧಶ್ಚರಂ ನೃಪಶ್ರೇಷ್ಠಂ ಖೇಚರಂ ಕುರು ಮಾಚಿರಮ್।।

ಗರುಡ! ನನ್ನ ಈ ಆಜ್ಞೆಯಂತೆ ಭೂಮಿಯ ಬಿಲದಲ್ಲಿ ಗುಪ್ತನಾಗಿ ಕೆಳಗೇ ಸಂಚರಿಸುತ್ತಿರುವ ಆ ನೃಪಶ್ರೇಷ್ಠನನ್ನು ಕೂಡಲೇ ಖೇಚರನನ್ನಾಗಿ ಮಾಡು!”

12324034a ಗರುತ್ಮಾನಥ ವಿಕ್ಷಿಪ್ಯ ಪಕ್ಷೌ ಮಾರುತವೇಗವಾನ್।
12324034c ವಿವೇಶ ವಿವರಂ ಭೂಮೇರ್ಯತ್ರಾಸ್ತೇ ವಾಗ್ಯತೋ ವಸುಃ।।

ಕೂಡಲೇ ಮಾರುತವೇಗವಾನ್ ಗರುತ್ಮಾನನು ತನ್ನ ರೆಕ್ಕೆಗಳನ್ನು ಹರಡಿ ವಸುವು ಇದ್ದ ಭೂಮಿಯ ಬಿಲವನ್ನು ಪ್ರವೇಶಿಸಿದನು.

12324035a ತತ ಏನಂ ಸಮುತ್ಕ್ಷಿಪ್ಯ ಸಹಸಾ ವಿನತಾಸುತಃ।
12324035c ಉತ್ಪಪಾತ ನಭಸ್ತೂರ್ಣಂ ತತ್ರ ಚೈನಮಮುಂಚತ।।

ವಿನತಾಸುತನು ಅಲ್ಲಿದ್ದ ರಾಜನನ್ನು ಮೇಲೆತ್ತಿಕೊಂಡು ಒಡನೆಯೇ ಆಕಾಶದ ಕಡೆ ಹಾರಿ ರಾಜನನ್ನು ಆಕಾಶದಲ್ಲಿಯೇ ಬಿಟ್ಟನು.

12324036a ತಸ್ಮಿನ್ಮುಹೂರ್ತೇ ಸಂಜಜ್ಞೇ ರಾಜೋಪರಿಚರಃ ಪುನಃ।
12324036c ಸಶರೀರೋ ಗತಶ್ಚೈವ ಬ್ರಹ್ಮಲೋಕಂ ನೃಪೋತ್ತಮಃ।।

ಅದೇ ಮುಹೂರ್ತದಲ್ಲಿ ರಾಜನು ಪುನಃ ಉಪರಿಚರನೆಂದಾದನು. ಆ ನೃಪೋತ್ತಮನು ಸಶರೀರಿಯಾಗಿಯೇ ಬ್ರಹ್ಮಲೋಕಕ್ಕೆ ಹೋದನು ಕೂಡ.

12324037a ಏವಂ ತೇನಾಪಿ ಕೌಂತೇಯ ವಾಗ್ದೋಷಾದ್ದೇವತಾಜ್ಞಯಾ।
12324037c ಪ್ರಾಪ್ತಾ ಗತಿರಯಜ್ವಾರ್ಹಾ ದ್ವಿಜಶಾಪಾನ್ಮಹಾತ್ಮನಾ।।

ಕೌಂತೇಯ! ಈ ರೀತಿ ದೇವತೆಗಳಿಗಾಗಿ ಮಾಡಿದ ವಾಗ್ದೋಷದಿಂದ ದ್ವಿಜರ ಶಾಪಕ್ಕೊಳಗಾಗಿ ಆ ಮಹಾತ್ಮನು ಅಧೋಗತಿಯನ್ನು ಹೊಂದಿದನು.

12324038a ಕೇವಲಂ ಪುರುಷಸ್ತೇನ ಸೇವಿತೋ ಹರಿರೀಶ್ವರಃ।
12324038c ತತಃ ಶೀಘ್ರಂ ಜಹೌ ಶಾಪಂ ಬ್ರಹ್ಮಲೋಕಮವಾಪ ಚ।।

ಕೇವಲ ಹರಿ ಈಶ್ವರ ಪುರುಷನನ್ನೇ ಅವನು ಪೂಜಿಸುತ್ತಿದ್ದುದರಿಂದ ಶೀಘ್ರವಾಗಿ ಅವನು ಶಾಪವನ್ನು ಕಳೆದುಕೊಂಡು ಬ್ರಹ್ಮಲೋಕವನ್ನು ಪಡೆದುಕೊಂಡನು.

12324039a ಏತತ್ತೇ ಸರ್ವಮಾಖ್ಯಾತಂ ತೇ ಭೂತಾ ಮಾನವಾ ಯಥಾ।
12324039c ನಾರದೋಽಪಿ ಯಥಾ ಶ್ವೇತಂ ದ್ವೀಪಂ ಸ ಗತವಾನೃಷಿಃ।
12324039e ತತ್ತೇ ಸರ್ವಂ ಪ್ರವಕ್ಷ್ಯಾಮಿ ಶೃಣುಷ್ವೈಕಮನಾ ನೃಪ।।

ನೃಪ! ಶ್ವೇತ ದ್ವೀಪದ ಮಾನವರು ಹೇಗೆ ಎನ್ನುವುದೆಲ್ಲವನ್ನೂ ನಿನಗೆ ಹೇಳಿಯಾಯಿತು. ಋಷಿ ನಾರದನೂ ಕೂಡ ಹೇಗೆ ಶ್ವೇತದ್ವೀಪವನ್ನು ಹೇಗೆ ತಲುಪಿದನು ಎನ್ನುವುದರ ಕುರಿತು ಎಲ್ಲವನ್ನೂ ಹೇಳುತ್ತೇನೆ. ಏಕಮನಸ್ಕನಾಗಿ ಕೇಳು.”

ಸಮಾಪ್ತಿ ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ನಾರಾಯಣೀಯೇ ಚತುರ್ವಿಂಶಾಧಿಕತ್ರಿಶತತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ನಾರಾಯಣೀಯ ಎನ್ನುವ ಮುನ್ನೂರಾಇಪ್ಪತ್ನಾಲ್ಕನೇ ಅಧ್ಯಾಯವು.