323: ನಾರಾಯಣೀಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 323

ಸಾರ

ಉಪರಿಚರನ ಯಜ್ಞದಲ್ಲಿ ಭಗವಂತನ ವಿಷಯದಲ್ಲಿ ಬೃಹಸ್ಪತಿಯ ಕೋಪ (1-14); ಏಕತನೇ ಮೊದಲಾದ ಋಷಿಗಳು ಶ್ವೇತದ್ವೀಪದ ಮತ್ತು ಭಗವಂತನ ಮಹಿಮೆಯನ್ನು ಹೇಳಿ ಬೃಹಸ್ಪತಿಯನ್ನು ಸಮಾಧಾನಗೊಳಿಸಿದುದು (15-57).

12323001 ಭೀಷ್ಮ ಉವಾಚ।
12323001a ತತೋಽತೀತೇ ಮಹಾಕಲ್ಪೇ ಉತ್ಪನ್ನೇಽಂಗಿರಸಃ ಸುತೇ।
12323001c ಬಭೂವುರ್ನಿರ್ವೃತಾ ದೇವಾ ಜಾತೇ ದೇವಪುರೋಹಿತೇ।।

ಭೀಷ್ಮನು ಹೇಳಿದನು: “ಹಿಂದಿನ ಮಹಾಕಲ್ಪದ ಪ್ರಾರಂಭದಲ್ಲಿ ಅಂಗಿರಸನಿಗೆ ಹುಟ್ಟಿದ ಮಗನು ದೇವಪುರೋಹಿತನಾದನು. ಅವನಿಂದ ದೇವತೆಗಳು ಪರಮಪ್ರೀತರಾದರು.

12323002a ಬೃಹದ್ಬ್ರಹ್ಮ ಮಹಚ್ಚೇತಿ ಶಬ್ದಾಃ ಪರ್ಯಾಯವಾಚಕಾಃ।
12323002c ಏಭಿಃ ಸಮನ್ವಿತೋ ರಾಜನ್ಗುಣೈರ್ವಿದ್ವಾನ್ಬೃಹಸ್ಪತಿಃ।।

ರಾಜನ್! ಬೃಹತ್, ಬ್ರಹ್ಮ ಮತ್ತು ಮಹತ್ ಎಂಬ ಪರ್ಯಾಯವಾಚಕ ಶಬ್ಧಗಳ ಸಮನ್ವಿತನಾದ ಬೃಹಸ್ಪತಿಯು ಈ ಗುಣಗಳಿಂದಲೂ ಸಮನ್ವಿತನಾಗಿದ್ದನು.

12323003a ತಸ್ಯ ಶಿಷ್ಯೋ ಬಭೂವಾಗ್ರ್ಯೋ ರಾಜೋಪರಿಚರೋ ವಸುಃ।
12323003c ಅಧೀತವಾಂಸ್ತದಾ ಶಾಸ್ತ್ರಂ ಸಮ್ಯಕ್ಚಿತ್ರಶಿಖಂಡಿಜಮ್।।

ರಾಜ ಉಪರಿಚರ ವಸುವ ಅವನ ಅಗ್ರ್ಯ ಶಿಷ್ಯನಾದನು. ಅವನು ಚಿತ್ರಶಿಖಂಡಿಗಳಿಂದ ಮಾಡಲ್ಪಟ್ಟಿದ್ದ ಪಂಚರಾತ್ರ ಶಾಸ್ತ್ರವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದ್ದನು.

12323004a ಸ ರಾಜಾ ಭಾವಿತಃ ಪೂರ್ವಂ ದೈವೇನ ವಿಧಿನಾ ವಸುಃ।
12323004c ಪಾಲಯಾಮಾಸ ಪೃಥಿವೀಂ ದಿವಮಾಖಂಡಲೋ ಯಥಾ।।

ಹಿಂದೆ ವಿಧಿ ದೈವವೇ ಭಾವಿಸಿದ್ದಂತೆ ರಾಜಾ ವಸುವು ಇಂದ್ರನು ದಿವಿಯನ್ನು ಹೇಗೋ ಹಾಗೆ ಪೃಥ್ವಿಯನ್ನು ಪಾಲಿಸತೊಡಗಿದನು.

12323005a ತಸ್ಯ ಯಜ್ಞೋ ಮಹಾನಾಸೀದಶ್ವಮೇಧೋ ಮಹಾತ್ಮನಃ।
12323005c ಬೃಹಸ್ಪತಿರುಪಾಧ್ಯಾಯಸ್ತತ್ರ ಹೋತಾ ಬಭೂವ ಹ।।

ಆ ಮಹಾತ್ಮನು ಒಂದು ಮಹಾ ಅಶ್ವಮೇಧ ಯಜ್ಞವನ್ನು ಮಾಡಿದನು. ಆ ಯಜ್ಞದಲ್ಲಿ ಉಪಾಧ್ಯಾಯ ಬೃಹಸ್ಪತಿಯು ಹೋತೃವಾಗಿದ್ದನು.

12323006a ಪ್ರಜಾಪತಿಸುತಾಶ್ಚಾತ್ರ ಸದಸ್ಯಾಸ್ತ್ವಭವಂಸ್ತ್ರಯಃ।
12323006c ಏಕತಶ್ಚ ದ್ವಿತಶ್ಚೈವ ತ್ರಿತಶ್ಚೈವ ಮಹರ್ಷಯಃ।।

ಆ ಯಜ್ಞದಲ್ಲಿ ಪ್ರಜಾಪತಿಯ ಮಕ್ಕಳಾದ ಏಕತ, ದ್ವಿತ ಮತ್ತು ತ್ರಿತ ಮಹರ್ಷಿಗಳು ಸದಸ್ಯರಾಗಿದ್ದರು.

12323007a ಧನುಷಾಕ್ಷೋಽಥ ರೈಭ್ಯಶ್ಚ ಅರ್ವಾವಸುಪರಾವಸೂ।
12323007c ಋಷಿರ್ಮೇಧಾತಿಥಿಶ್ಚೈವ ತಾಂಡ್ಯಶ್ಚೈವ ಮಹಾನೃಷಿಃ।।
12323008a ಋಷಿಃ ಶಕ್ತಿರ್ಮಹಾಭಾಗಸ್ತಥಾ ವೇದಶಿರಾಶ್ಚ ಯಃ।
12323008c ಕಪಿಲಶ್ಚ ಋಷಿಶ್ರೇಷ್ಠಃ ಶಾಲಿಹೋತ್ರಪಿತಾಮಹಃ।।
12323009a ಆದ್ಯಃ ಕಠಸ್ತೈತ್ತಿರಿಶ್ಚ ವೈಶಂಪಾಯನಪೂರ್ವಜಃ।
12323009c ಕಣ್ವೋಽಥ ದೇವಹೋತ್ರಶ್ಚ ಏತೇ ಷೋಡಶ ಕೀರ್ತಿತಾಃ।

ಇವರನ್ನೂ ಸೇರಿ ಒಟ್ಟು ಹದಿರಾರು ಋಷಿಗಳು – ಧನುಷಾಕ್ಷ, ರೈಭ್ಯ, ಅರಾವಸು, ಪರಾವಸು, ಋಷಿ ಮೇಧಾತಿಥಿ, ಮಹಾನೃಷಿ ತಾಂಡ್ಯ, ಋಷಿ ಶಕ್ತಿ, ಮಹಾಭಾಗ ವೇದಶಿರ, ಶಾಲಿಹೋತ್ರನ ಪಿತಾಮಹ ಋಷಿಶ್ರೇಷ್ಠ ಕಪಿಲ, ಆದ್ಯಕಠ, ವೈಶಂಪಾಯನನ ಪೂರ್ವಜ ತೈತ್ತಿರಿ, ಕಣ್ವ, ಮತ್ತು ದೇವಹೋತ್ರ – ಇವರು ಋತ್ವಿಜರಾಗಿದ್ದರು.

12323009e ಸಂಭೃತಾಃ ಸರ್ವಸಂಭಾರಾಸ್ತಸ್ಮಿನ್ರಾಜನ್ಮಹಾಕ್ರತೌ।।
12323010a ನ ತತ್ರ ಪಶುಘಾತೋಽಭೂತ್ಸ ರಾಜೈವಂ ಸ್ಥಿತೋಽಭವತ್।

ಆ ಮಹಾಕ್ರತುವಿನಲ್ಲಿ ಸರ್ವ ಸಾಮಗ್ರಿಗಳನ್ನೂ ಸಂಗ್ರಹಿಸಲಾಗಿತ್ತು. ಆದರೆ ಅದರಲ್ಲಿ ಪಶುಘಾತವಿರಲಿಲ್ಲ. ರಾಜನೇ ಹಾಗೆ ಮಾಡಿಸಿದ್ದನು.

12323010c ಅಹಿಂಸ್ರಃ ಶುಚಿರಕ್ಷುದ್ರೋ ನಿರಾಶೀಃ ಕರ್ಮಸಂಸ್ತುತಃ।
12323010e ಆರಣ್ಯಕಪದೋದ್ಗೀತಾ ಭಾಗಾಸ್ತತ್ರೋಪಕಲ್ಪಿತಾಃ।।

ಆ ಯಜ್ಞವು ಹಿಂಸೆಯಿಂದ ರಹಿತವಾಗಿತ್ತು. ಶುಚಿಯೂ, ಉದಾರವೂ, ಫಲಸಂಕಲ್ಪ ರಹಿತವೂ, ಕರ್ಮಸಂಸ್ತುತವೂ ಆಗಿತ್ತು. ಅರಣ್ಯದ ಕಂದ-ಮೂಲ-ಫಲಗಳೇ ದೇವತೆಗಳ ಹವಿರ್ಭಾಗಗಳಾಗಿ ಉಪಯೋಗಿಸಲ್ಪಟ್ಟಿದ್ದವು.

12323011a ಪ್ರೀತಸ್ತತೋಽಸ್ಯ ಭಗವಾನ್ದೇವದೇವಃ ಪುರಾತನಃ।
12323011c ಸಾಕ್ಷಾತ್ತಂ ದರ್ಶಯಾಮಾಸ ಸೋಽದೃಶ್ಯೋಽನ್ಯೇನ ಕೇನ ಚಿತ್।।

ಇದರಿಂದ ಪ್ರೀತನಾದ ಪುರಾತನ ಭಗವಾನ್ ದೇವದೇವನು ಅವನಿಗೆ ಸಾಕ್ಷಾತ್ತಾಗಿ ಕಾಣಿಸಿಕೊಂಡನು. ಅದರೆ ಇತರರಿಗೆ ಅವನು ಅದೃಶ್ಯನಾಗಿದ್ದನು.

12323012a ಸ್ವಯಂ ಭಾಗಮುಪಾಘ್ರಾಯ ಪುರೋಡಾಶಂ ಗೃಹೀತವಾನ್।
12323012c ಅದೃಶ್ಯೇನ ಹೃತೋ ಭಾಗೋ ದೇವೇನ ಹರಿಮೇಧಸಾ।।

ಹಯಗ್ರೀವಸ್ವರೂಪನಾಗಿದ್ದ ದೇವನು ಸ್ವಯಂ ಪುರೋಡಾಶವನ್ನು ಸ್ವೀಕರಿಸಿ ಆಘ್ರಾಣಿಸಿ ಹವಿರ್ಭಾಗವನ್ನು ಅಪಹರಿಸಿ ಅದೃಶ್ಯನಾದನು.

12323013a ಬೃಹಸ್ಪತಿಸ್ತತಃ ಕ್ರುದ್ಧಃ ಸ್ರುವಮುದ್ಯಮ್ಯ ವೇಗಿತಃ।
12323013c ಆಕಾಶಂ ಘ್ನನ್ಸ್ರುವಃ ಪಾತೈ ರೋಷಾದಶ್ರೂಣ್ಯವರ್ತಯತ್।।

ಇದ್ದಕ್ಕಿದ್ದ ಹಾಗೆಯೇ ಪುರೋಡಾಶವು ಮಾಯವಾದುದನ್ನು ನೋಡಿ ಕೃದ್ಧನಾದ ಬೃಹಸ್ಪತಿಯು ಸ್ರುಚವನ್ನೆತ್ತಿ ಅದರಿಂದ ವೇಗವಾಗಿ ಆಕಾಶದತ್ತ ಪ್ರಹರಿಸಿದನು. ರೋಷದಿಂದ ಅವನ ಕಣ್ಣುಗಳಿಂದ ಕಾದ ಕಂಬನಿಗಳು ಸುರಿಯುತ್ತಿದ್ದವು.

12323014a ಉವಾಚ ಚೋಪರಿಚರಂ ಮಯಾ ಭಾಗೋಽಯಮುದ್ಯತಃ।
12323014c ಗ್ರಾಹ್ಯಃ ಸ್ವಯಂ ಹಿ ದೇವೇನ ಮತ್ಪ್ರತ್ಯಕ್ಷಂ ನ ಸಂಶಯಃ।।

ಅವನು ಉಪರಿಚರನಿಗೆ ಹೇಳಿದನು: “ಹವಿರ್ಭಾಗವನ್ನು ನಾನು ಎತ್ತಿ ಹಿಡಿದುಕೊಂಡಿದ್ದೇನೆ. ಸ್ವಯಂ ದೇವನೇ ನನ್ನ ಸಮಕ್ಷಮದಲ್ಲಿ ಇದನ್ನು ಸ್ವೀಕರಿಸುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ!””

112323015a ಉದ್ಯತಾ ಯಜ್ಞಭಾಗಾ ಹಿ ಸಾಕ್ಷಾತ್ಪ್ರಾಪ್ತಾಃ ಸುರೈರಿಹ।
12323015c ಕಿಮರ್ಥಮಿಹ ನ ಪ್ರಾಪ್ತೋ ದರ್ಶನಂ ಸ ಹರಿರ್ವಿಭುಃ।।

ಯುದಿಷ್ಠಿರನು ಹೇಳಿದನು: “ಎಲ್ಲ ದೇವತೆಗಳೂ ಪ್ರತ್ಯಕ್ಷವಾಗಿಯೇ ಬಂದು ತಮ್ಮ ತಮ್ಮ ಹವಿರ್ಭಾಗಗಳನ್ನು ಸ್ವೀಕರಿಸುತ್ತಿದ್ದಾಗ ವಿಭು ಶ್ರೀಹರಿಯು ಹವಿಸ್ಸನ್ನು ಸ್ವೀಕರಿಸಲು ಅಲ್ಲಿಗೆ ಬಂದಿದ್ದರೂ ಎಲ್ಲರಿಗೂ ದರ್ಶನವನ್ನೇಕೆ ಕೊಡಲಿಲ್ಲ?”

212323016a ತತಃ ಸ ತಂ ಸಮುದ್ಧೂತಂ ಭೂಮಿಪಾಲೋ ಮಹಾನ್ವಸುಃ।
12323016c ಪ್ರಸಾದಯಾಮಾಸ ಮುನಿಂ ಸದಸ್ಯಾಸ್ತೇ ಚ ಸರ್ವಶಃ।।

ಭೀಷ್ಮನು ಹೇಳಿದನು: “ಹಾಗೆ ಸಿಟ್ಟಿನಿಂದ ಉರಿದೆದ್ದಿದ್ದ ಮುನಿಯನ್ನು ಭೂಮಿಪಾಲ ಮಹಾನ್ ವಸು ಮತ್ತು ಸದಸ್ಯರು ಎಲ್ಲರೀತಿಗಳಲ್ಲಿಯೂ ಸಮಾಧಾನಗೊಳಿಸತೊಡಗಿದರು.

12323017a ಊಚುಶ್ಚೈನಮಸಂಭ್ರಾಂತಾ ನ ರೋಷಂ ಕರ್ತುಮರ್ಹಸಿ।
12323017c ನೈಷ ಧರ್ಮಃ ಕೃತಯುಗೇ ಯಸ್ತ್ವಂ ರೋಷಮಚೀಕೃಥಾಃ।।

ಅವರು ಅವನಿಗೆ ಹೇಳಿದರು: “ನೀನು ಹೀಗೆ ಸಂಭ್ರಾಂತಗೊಂಡು ರೋಷ ಮಾಡಬಾರದು. ನಿನ್ನ ಈ ರೋಷವು ಕೃತಯುಗದ ಧರ್ಮವಲ್ಲ.

12323018a ಅರೋಷಣೋ ಹ್ಯಸೌ ದೇವೋ ಯಸ್ಯ ಭಾಗೋಽಯಮುದ್ಯತಃ।
12323018c ನ ಸ ಶಕ್ಯಸ್ತ್ವಯಾ ದ್ರಷ್ಟುಮಸ್ಮಾಭಿರ್ವಾ ಬೃಹಸ್ಪತೇ।
12323018e ಯಸ್ಯ ಪ್ರಸಾದಂ ಕುರುತೇ ಸ ವೈ ತಂ ದ್ರಷ್ಟುಮರ್ಹತಿ।।

ನೀನು ಎತ್ತಿ ಹಿಡಿದಿರುವ ಈ ಹವಿರ್ಭಾಗವು ಯಾವ ದೇವನಿಗಾಗಿದೆಯೋ ಅವನಲ್ಲಿ ರೋಷವೆನ್ನುವುದಿಲ್ಲ. ಬೃಹಸ್ಪತೇ! ಅವನನ್ನು ನೋಡಲು ನಿನಗಾಗಲೀ ನಮಗಾಗಲೀ ಶಕ್ಯವಿಲ್ಲ. ಯಾರು ಅವನನ್ನು ಪ್ರಸನ್ನಗೊಳಿಸುತ್ತಾನೋ ಅವನೇ ಅವನನ್ನು ನೋಡಲು ಸಾಧ್ಯ.”

12323019 ಏಕತದ್ವಿತತ್ರಿತಾ ಊಚುಃ।
12323019a ವಯಂ ಹಿ ಬ್ರಹ್ಮಣಃ ಪುತ್ರಾ ಮಾನಸಾಃ ಪರಿಕೀರ್ತಿತಾಃ।
12323019c ಗತಾ ನಿಃಶ್ರೇಯಸಾರ್ಥಂ ಹಿ ಕದಾ ಚಿದ್ದಿಶಮುತ್ತರಾಮ್।।

ಏಕತ-ದ್ವಿತ-ತ್ರಿತರು ಹೇಳಿದರು: “ಬ್ರಹ್ಮನ ಮಾನಸ ಪುತ್ರರೆಂದು ವಿಖ್ಯಾತರಾದ ನಾವು ಒಮ್ಮೆ ನಮ್ಮ ಶ್ರೇಯಃಪ್ರಾಪ್ತಿಗಾಗಿ ಉತ್ತರ ದಿಕ್ಕಿಗೆ ಹೋದೆವು.

12323020a ತಪ್ತ್ವಾ ವರ್ಷಸಹಸ್ರಾಣಿ ಚತ್ವಾರಿ ತಪ ಉತ್ತಮಮ್।
12323020c ಏಕಪಾದಸ್ಥಿತಾಃ ಸಮ್ಯಕ್ಕಾಷ್ಠಭೂತಾಃ ಸಮಾಹಿತಾಃ।।
12323021a ಮೇರೋರುತ್ತರಭಾಗೇ ತು ಕ್ಷೀರೋದಸ್ಯಾನುಕೂಲತಃ।
12323021c ಸ ದೇಶೋ ಯತ್ರ ನಸ್ತಪ್ತಂ ತಪಃ ಪರಮದಾರುಣಮ್।
12323021e ಕಥಂ ಪಶ್ಯೇಮಹಿ ವಯಂ ದೇವಂ ನಾರಾಯಣಂ ತ್ವಿತಿ।।

ನಾವು ದೇವ ನಾರಾಯಣನನ್ನು ಹೇಗೆ ನೋಡಬಲ್ಲೆವು? ಎಂದು ಮೇರುವಿನ ಉತ್ತರ ಭಾಗದಲ್ಲಿದ್ದ ಕ್ಷೀರಸಾಗರದ ತೀರ ಪ್ರದೇಶದಲ್ಲಿ ನಾಲ್ಕು ಸಾವಿರ ವರ್ಷಗಳ ಪರ್ಯಂತ ಸಮಾಹಿತರಾಗಿ, ಕಾಷ್ಠರಾಗಿ ಒಂದೇ ಪಾದರಾಗಿ ನಿಂತುಕೊಂಡು ಪರಮ ದಾರುಣವಾದ ಉತ್ತಮ ತಪವನ್ನು ತಪಿಸಿದೆವು.

12323022a ತತೋ ವ್ರತಸ್ಯಾವಭೃಥೇ ವಾಗುವಾಚಾಶರೀರಿಣೀ।
12323022c ಸುತಪ್ತಂ ವಸ್ತಪೋ ವಿಪ್ರಾಃ ಪ್ರಸನ್ನೇನಾಂತರಾತ್ಮನಾ।।

ವ್ರತದ ಅವಭೃಥಸಮಯದಲ್ಲಿ ಅಶರೀರವಾಣಿಯೊಂದು ನುಡಿಯಿತು: “ವಿಪ್ರರೇ! ಅಂತರಾತ್ಮದಲ್ಲಿ ಪ್ರಸನ್ನರಾಗಿದ್ದುಕೊಂಡು ಉತ್ತಮ ತಪವನ್ನೇ ಪತಿಸಿದ್ದೀರಿ!

12323023a ಯೂಯಂ ಜಿಜ್ಞಾಸವೋ ಭಕ್ತಾಃ ಕಥಂ ದ್ರಕ್ಷ್ಯಥ ತಂ ಪ್ರಭುಮ್।
12323023c ಕ್ಷೀರೋದಧೇರುತ್ತರತಃ ಶ್ವೇತದ್ವೀಪೋ ಮಹಾಪ್ರಭಃ।।

ಭಕ್ತರಾದ ನೀವು ಅವನನ್ನು ತಿಳಿದುಕೊಳ್ಳುವ ಬಯಕೆಯನ್ನಿಟ್ಟುಕೊಂಡಿರುವಿರಿ. ಅವನನ್ನು ನೀವು ಹೇಗೆ ಕಾಣಬಹುದು ಎನ್ನುವುದನ್ನು ಹೇಳುತ್ತೇನೆ. ಕ್ಷೀರಸಾಗರದ ಉತ್ತರದಲ್ಲಿ ಮಹಾಪ್ರಭೆಯ ಶ್ವೇತದ್ವೀಪವಿದೆ.

12323024a ತತ್ರ ನಾರಾಯಣಪರಾ ಮಾನವಾಶ್ಚಂದ್ರವರ್ಚಸಃ।
12323024c ಏಕಾಂತಭಾವೋಪಗತಾಸ್ತೇ ಭಕ್ತಾಃ ಪುರುಷೋತ್ತಮಮ್।।
12323025a ತೇ ಸಹಸ್ರಾರ್ಚಿಷಂ ದೇವಂ ಪ್ರವಿಶಂತಿ ಸನಾತನಮ್।

ಅಲ್ಲಿ ನಾರಾಯಣನನ್ನು ಕಾಣುವ ಚಂದ್ರವರ್ಚಸ ಮಾನವರು ಇದ್ದಾರೆ. ನಾರಾಯಣನಲ್ಲಿಯೇ ಅನನ್ಯ ಭಕ್ತಿಯನ್ನಿಟ್ಟಿರುವ ಪರಮಭಕ್ತರಾದ ಅವರು ಸನಾತನ ದೇವ ಸಹಸ್ರಾರ್ಚಿಯನ್ನು ಪ್ರವೇಶಿಸುತ್ತಾರೆ.

12323025c ಅತೀಂದ್ರಿಯಾ ನಿರಾಹಾರಾ ಅನಿಷ್ಪಂದಾಃ ಸುಗಂಧಿನಃ।।
12323026a ಏಕಾಂತಿನಸ್ತೇ ಪುರುಷಾಃ ಶ್ವೇತದ್ವೀಪನಿವಾಸಿನಃ।
12323026c ಗಚ್ಚಧ್ವಂ ತತ್ರ ಮುನಯಸ್ತತ್ರಾತ್ಮಾ ಮೇ ಪ್ರಕಾಶಿತಃ।।

ಅತೀಂದ್ರಿಯರೂ, ನಿರಾಹಾರರೂ, ನಿಶ್ಚೇಷ್ಟರೂ ಸುಗಂಧಿತರೂ ಆದ ಶ್ವೇತದ್ವೀಪವಾಸಿ ಪುರುಷರು ನನ್ನಲ್ಲಿಯೇ ಅನನ್ಯ ಭಕ್ತಿಯನ್ನಿಟ್ಟುರುವರು. ಅವರ ಬಳಿ ಹೋಗಿ. ಅಲ್ಲಿ ನನ್ನ ಆತ್ಮವು ಪ್ರಕಾಶಿತಗೊಂಡಿದೆ.”

12323027a ಅಥ ಶ್ರುತ್ವಾ ವಯಂ ಸರ್ವೇ ವಾಚಂ ತಾಮಶರೀರಿಣೀಮ್।
12323027c ಯಥಾಖ್ಯಾತೇನ ಮಾರ್ಗೇಣ ತಂ ದೇಶಂ ಪ್ರತಿಪೇದಿರೇ।।

ಆ ಅಶರೀರ ವಾಣಿಯನ್ನು ಕೇಳಿ ನಾವೆಲ್ಲರೂ ಅದು ಹೇಳಿದ ಮಾರ್ಗದಲ್ಲಿ ಆ ಪ್ರದೇಶವನ್ನು ತಲುಪಿದೆವು.

12323028a ಪ್ರಾಪ್ಯ ಶ್ವೇತಂ ಮಹಾದ್ವೀಪಂ ತಚ್ಚಿತ್ತಾಸ್ತದ್ದಿದೃಕ್ಷವಃ।
12323028c ತತೋ ನೋ ದೃಷ್ಟಿವಿಷಯಸ್ತದಾ ಪ್ರತಿಹತೋಽಭವತ್।।
12323029a ನ ಚ ಪಶ್ಯಾಮ ಪುರುಷಂ ತತ್ತೇಜೋಹೃತದರ್ಶನಾಃ।

ಅವನನ್ನು ಕಾಣುವುದನ್ನೇ ಉದ್ದೇಶವನ್ನಾಗಿಟ್ಟುಕೊಂಡು ನಾವು ಆ ಶ್ವೇತಮಹಾದ್ವೀಪವನ್ನು ತಲುಪಿದಾಗ ಆ ಪ್ರದೇಶದಲ್ಲಿದ್ದ ಪ್ರಭೆಯಿಂದ ನಮ್ಮ ದೃಷ್ಟಿಯು ಕುರುಡಾಯಿತು. ಆ ತೇಜಸ್ಸಿನಿಂದ ಕುರುಡರಾದ ನಾವು ಆ ಪುರುಷನನ್ನು ನೋಡಲಾರರಾದೆವು.

12323029c ತತೋ ನಃ ಪ್ರಾದುರಭವದ್ವಿಜ್ಞಾನಂ ದೇವಯೋಗಜಮ್।।
12323030a ನ ಕಿಲಾತಪ್ತತಪಸಾ ಶಕ್ಯತೇ ದ್ರಷ್ಟುಮಂಜಸಾ।

ಆಗ ನಮಗೆ ನಮ್ಮ ಕಣ್ಣುಗಳಿಂದ ಇವನನ್ನು ನೋಡಲು ತಪಸ್ಸನ್ನು ತಪಿಸಿದವರಿಗೆ ಮಾತ್ರ ಶಕ್ಯವೆಲ್ಲವೇ ಎಂಬ ದೇವಯೋಗದಿಂದುಂಟಾದ ವಿಜ್ಞಾನವು ನನ್ನಲ್ಲಿ ಹುಟ್ಟಿಕೊಂಡಿತು.

12323030c ತತಃ ಪುನರ್ವರ್ಷಶತಂ ತಪ್ತ್ವಾ ತಾತ್ಕಾಲಿಕಂ ಮಹತ್।।
12323031a ವ್ರತಾವಸಾನೇ ಸುಶುಭಾನ್ನರಾನ್ದದೃಶಿರೇ ವಯಮ್।

ಅಲ್ಲಿಯೇ ಪುನಃ ನೂರು ವರ್ಷಗಳು ತಪಸ್ಸನ್ನು ತಪಿಸಿ ಆ ವ್ರತಾವಸಾನದಲ್ಲಿ ನಾವು ಆ ಸುಶುಭ ನರರನ್ನು ಕಂಡೆವು.

12323031c ಶ್ವೇತಾಂಶ್ಚಂದ್ರಪ್ರತೀಕಾಶಾನ್ಸರ್ವಲಕ್ಷಣಲಕ್ಷಿತಾನ್।।
12323032a ನಿತ್ಯಾಂಜಲಿಕೃತಾನ್ಬ್ರಹ್ಮ ಜಪತಃ ಪ್ರಾಗುದಙ್ಮುಖಾನ್।
12323032c ಮಾನಸೋ ನಾಮ ಸ ಜಪೋ ಜಪ್ಯತೇ ತೈರ್ಮಹಾತ್ಮಭಿಃ।

ಶ್ವೇತವರ್ಣದರೂ ಚಂದ್ರಸದೃಶರೂ, ಸರ್ವಲಕ್ಷಣಗಳಿಂದಲೂ ತುಂಬಿದ್ದ ಅವರು ನಿತ್ಯವೂ ಅಂಜಲೀಕೃತರಾಗಿ ಈಶಾನ್ಯದಿಕ್ಕಿಗೆ ಮುಖಮಾಡಿ ಬ್ರಹ್ಮಜಪವನ್ನು ಮಾಡುತ್ತಿದ್ದರು. ಆ ಮಹಾತ್ಮರು ಮಾನಸ ಎಂಬ ಹೆಸರಿನ ಜಪವನ್ನು ಜಪಿಸುತ್ತಿದ್ದರು.

12323032e ತೇನೈಕಾಗ್ರಮನಸ್ತ್ವೇನ ಪ್ರೀತೋ ಭವತಿ ವೈ ಹರಿಃ।।
12323033a ಯಾ ಭವೇನ್ಮುನಿಶಾರ್ದೂಲ ಭಾಃ ಸೂರ್ಯಸ್ಯ ಯುಗಕ್ಷಯೇ।
12323033c ಏಕೈಕಸ್ಯ ಪ್ರಭಾ ತಾದೃಕ್ಸಾಭವನ್ಮಾನವಸ್ಯ ಹ।।

ಅವರ ಏಕಾಗ್ರಮನಸ್ಸಿನಿಂದ ಹರಿಯು ಪ್ರೀತನಾಗುತ್ತಿದ್ದನು. ಮುನಿಶಾರ್ದೂಲ! ಶ್ವೇತದ್ವೀಪದಲ್ಲಿದ್ದ ಪ್ರತಿಯೊಬ್ಬ ಮಾನವನಲ್ಲಿಯೂ ಯುಕ್ಷಯದ ಸೂರ್ಯನ ಪ್ರಭೆಯಿತ್ತು.

12323034a ತೇಜೋನಿವಾಸಃ ಸ ದ್ವೀಪ ಇತಿ ವೈ ಮೇನಿರೇ ವಯಮ್।
12323034c ನ ತತ್ರಾಭ್ಯಧಿಕಃ ಕಶ್ಚಿತ್ಸರ್ವೇ ತೇ ಸಮತೇಜಸಃ।।

ಆ ದ್ವೀಪವು ತೇಜಸ್ಸಿನ ನಿವಾಸ ಎಂದೇ ನಾವು ತಿಳಿದುಕೊಂಡೆವು. ಅಲ್ಲಿ ಯಾರಿಗೂ ಹೆಚ್ಚು ಅಥವಾ ಕಡಿಮೆ ಪ್ರಭೆಯಿರಲಿಲ್ಲ. ಎಲ್ಲರೂ ಸವತೇಜಸರಾಗಿದ್ದರು.

12323035a ಅಥ ಸೂರ್ಯಸಹಸ್ರಸ್ಯ ಪ್ರಭಾಂ ಯುಗಪದುತ್ಥಿತಾಮ್।
12323035c ಸಹಸಾ ದೃಷ್ಟವಂತಃ ಸ್ಮ ಪುನರೇವ ಬೃಹಸ್ಪತೇ।।

ಬೃಹಸ್ಪತೇ! ಆಗ ಪುನಃ ನಾವು ಸಹಸ್ರಸೂರ್ಯರೂ ಒಂದೇ ಸಮನೆ ಉದಯಿಸುತ್ತಿದ್ದಂತಹ ಪ್ರಭೆಯನ್ನು ನೋಡಿದೆವು.

12323036a ಸಹಿತಾಶ್ಚಾಭ್ಯಧಾವಂತ ತತಸ್ತೇ ಮಾನವಾ ದ್ರುತಮ್।
12323036c ಕೃತಾಂಜಲಿಪುಟಾ ಹೃಷ್ಟಾ ನಮ ಇತ್ಯೇವ ವಾದಿನಃ।।

ಶ್ವೇತದ್ವೀಪವಾಸೀ ಮಾನವರು ಒಂದಾಗಿ ಕೃತಾಂಜಲಿಪುಟರಾಗಿ, ಸಂತೋಷದಿಂದ ನಮ ಇತಿ ಎಂದು ಹೇಳುತ್ತಾ ಆ ಪ್ರಭೆಯೆಡೆಗೆ ಓಡಿ ಹೋಗುತ್ತಿದ್ದರು.

12323037a ತತೋಽಭಿವದತಾಂ ತೇಷಾಮಶ್ರೌಷ್ಮ ವಿಪುಲಂ ಧ್ವನಿಮ್।
12323037c ಬಲಿಃ ಕಿಲೋಪಹ್ರಿಯತೇ ತಸ್ಯ ದೇವಸ್ಯ ತೈರ್ನರೈಃ।।

ನಮಸ್ಕರಿಸುವಾಗ ಅವರ ವಿಪುಲ ಧ್ವನಿಯನ್ನು ಕೇಳಿದೆವು. ಅ ನರರು ಆ ದೇವನಿಗೆ ಬಲಿಗಳನ್ನು ನೀಡುತ್ತಿದ್ದರು.

12323038a ವಯಂ ತು ತೇಜಸಾ ತಸ್ಯ ಸಹಸಾ ಹೃತಚೇತಸಃ।
12323038c ನ ಕಿಂ ಚಿದಪಿ ಪಶ್ಯಾಮೋ ಹೃತದೃಷ್ಟಿಬಲೇಂದ್ರಿಯಾಃ।।

ಒಡನೆಯೇ ಅವನ ತೇಜಸ್ಸಿನಿಂದ ನಮ್ಮ ಚೇತನವು ಅಪಹೃತಗೊಳ್ಳಲು ದೃಷ್ಟಿ, ಬಲ ಮತ್ತು ಇಂದ್ರಿಯಗಳಿಂದ ಹೀನರಾಗಿದ್ದ ನಾವು ಏನನ್ನೂ ನೋಡಲಿಕ್ಕಾಗಲಿಲ್ಲ.

12323039a ಏಕಸ್ತು ಶಬ್ದೋಽವಿರತಃ ಶ್ರುತೋಽಸ್ಮಾಭಿರುದೀರಿತಃ।
12323039c ಜಿತಂ ತೇ ಪುಂಡರೀಕಾಕ್ಷ ನಮಸ್ತೇ ವಿಶ್ವಭಾವನ3।।
12323040a ನಮಸ್ತೇಽಸ್ತು ಹೃಷೀಕೇಶ ಮಹಾಪುರುಷಪೂರ್ವಜ।

ಅವರು ಕೂಗಿ ಹೇಳುತ್ತಿದ್ದ ಒಂದೇ ಒಂದು ಶಬ್ದವು ಅವಿರತವಾಗಿ ಕೇಳಿಬರುತ್ತಿತ್ತು: “ಪುಂಡರೀಕಾಕ್ಷ! ನಿನಗೆ ಜಯವಾಗಲಿ! ವಿಶ್ವಭಾವನ! ನಿನಗೆ ನಮಸ್ಕಾರ! ಹೃಷೀಕೇಶ! ಮಹಾಪುರುಷನ ಪೂರ್ವಜ! ನಿನಗೆ ನಮಸ್ಕಾರ!”

12323040c ಇತಿ ಶಬ್ದಃ ಶ್ರುತೋಽಸ್ಮಾಭಿಃ ಶಿಕ್ಷಾಕ್ಷರಸಮೀರಿತಃ।।
12323041a ಏತಸ್ಮಿನ್ನಂತರೇ ವಾಯುಃ ಸರ್ವಗಂಧವಹಃ ಶುಚಿಃ।
12323041c ದಿವ್ಯಾನ್ಯುವಾಹ ಪುಷ್ಪಾಣಿ ಕರ್ಮಣ್ಯಾಶ್ಚೌಷಧೀಸ್ತಥಾ।।

ಶಿಕ್ಷಾಕ್ಷರಸಮಾಯುಕ್ತವಾಗಿದ್ದ ಈ ಶಬ್ದವನ್ನು ನಾವು ಕೇಳಿದೆವು. ಇ ಮಧ್ಯದಲ್ಲಿ ಸರ್ವಗಂಧಗಳನ್ನೂ ಹೊತ್ತುತರುವ ಶುಚಿ ವಾಯುವು ದಿವ್ಯ ಪುಷ್ಪಗಳನ್ನೂ, ಕರ್ಮಣಿಗಳನ್ನೂ, ಔಷಧಿಗಳನ್ನೂ ಹೊತ್ತು ತಂದನು.

12323042a ತೈರಿಷ್ಟಃ ಪಂಚಕಾಲಜ್ಞೈರ್ಹರಿರೇಕಾಂತಿಭಿರ್ನರೈಃ।
12323042c ನೂನಂ ತತ್ರಾಗತೋ ದೇವೋ ಯಥಾ ತೈರ್ವಾಗುದೀರಿತಾ।
12323042e ವಯಂ ತ್ವೇನಂ ನ ಪಶ್ಯಾಮೋ ಮೋಹಿತಾಸ್ತಸ್ಯ ಮಾಯಯಾ।।

ಪಂಚಕಾಲಜ್ಞರಾದ ಹರಿಯಲ್ಲಿ ಅನನ್ಯ ಭಕ್ತಿಯುಳ್ಳವರಾಗಿದ್ದ ಆ ನರರು ಅವುಗಳಿಂದ ದೇವನನ್ನು ಜೋರಾಗಿ ಸ್ತುತಿಸುತ್ತಾ ಪೂಜಿಸಿದರು. ಆದರೆ ಅವನ ಮಾಯೆಯಿಂದಾಗಿ ನಾವು ಅವನನ್ನು ನೋಡಲಿಕ್ಕಾಗಲಿಲ್ಲ.

12323043a ಮಾರುತೇ ಸಂನಿವೃತ್ತೇ ಚ ಬಲೌ ಚ ಪ್ರತಿಪಾದಿತೇ।
12323043c ಚಿಂತಾವ್ಯಾಕುಲಿತಾತ್ಮಾನೋ ಜಾತಾಃ ಸ್ಮೋಽಂಗಿರಸಾಂ ವರ।।

ಆಂಗಿರಸರಲ್ಲಿ ಶ್ರೇಷ್ಠನೇ! ವಾಯುವು ನಿಲ್ಲಲು ಮತ್ತು ಬಲಿಗಳನ್ನು ಸಮರ್ಪಿಸಲು ನಾವು ಚಿಂತಾವ್ಯಾಕುಲರಾದೆವು.

12323044a ಮಾನವಾನಾಂ ಸಹಸ್ರೇಷು ತೇಷು ವೈ ಶುದ್ಧಯೋನಿಷು।
12323044c ಅಸ್ಮಾನ್ನ ಕಶ್ಚಿನ್ಮನಸಾ ಚಕ್ಷುಷಾ ವಾಪ್ಯಪೂಜಯತ್।।

ಅಲ್ಲಿದ್ದ ಸಹಾಸ್ರಾರು ಶುದ್ಧ ಯೋನಿ ಮಾನವರಲ್ಲಿ ಯಾರೂ ಕೂಡ ನಮ್ಮನ್ನು ಮನಸ್ಸಿನಿಂದಲೂ ಸ್ಮರಿಸಲಿಲ್ಲ ಮತ್ತು ಕಣ್ಣೆತ್ತಿಯೂ ನೋಡಲಿಲ್ಲ.

12323045a ತೇಽಪಿ ಸ್ವಸ್ಥಾ ಮುನಿಗಣಾ ಏಕಭಾವಮನುವ್ರತಾಃ।
12323045c ನಾಸ್ಮಾಸು ದಧಿರೇ ಭಾವಂ ಬ್ರಹ್ಮಭಾವಮನುಷ್ಠಿತಾಃ।।

ಅನನ್ಯಭಾವದಿಂದ ಅನುವ್ರತರಾಗಿ ಬ್ರಹ್ಮಭಾವದಲ್ಲಿ ಅನುಷ್ಠಿತರಾಗಿ ಸ್ವಸ್ಥರಾಗಿದ್ದ ಆ ಮುನಿಗಣವು ನಮ್ಮನ್ನು ಗಮನಿಸಲೇ ಇಲ್ಲ.

12323046a ತತೋಽಸ್ಮಾನ್ಸುಪರಿಶ್ರಾಂತಾಂಸ್ತಪಸಾ ಚಾಪಿ ಕರ್ಶಿತಾನ್।
12323046c ಉವಾಚ ಖಸ್ಥಂ ಕಿಮಪಿ ಭೂತಂ ತತ್ರಾಶರೀರಕಮ್।।

ಆಗ ತಪಸ್ಸಿನಿಂದ ಪರಿಶ್ರಾಂತರಾಗಿದ್ದ ಮತ್ತು ಕೃಶರಾಗಿದ್ದ ನಮಗೆ ಆಕಾಶದಲ್ಲಿ ನಿಂತಿದ್ದ ಯಾವುದೋ ಒಂದು ಅಶರೀರಕ ಭೂತವು ಹೇಳಿತು:

12323047a ದೃಷ್ಟಾ ವಃ ಪುರುಷಾಃ ಶ್ವೇತಾಃ ಸರ್ವೇಂದ್ರಿಯವಿವರ್ಜಿತಾಃ।
12323047c ದೃಷ್ಟೋ ಭವತಿ ದೇವೇಶ ಏಭಿರ್ದೃಷ್ಟೈರ್ದ್ವಿಜೋತ್ತಮಾಃ।।

“ದ್ವಿಜೋತ್ತಮರೇ! ನೀವು ಸರ್ವೇಂದ್ರಿಯವರ್ಜಿತರಾದ ಶ್ವೇತದ್ವೀಪದ ಪುರುಷರನ್ನು ನೋಡಿದಿರಿ. ಇವರನ್ನು ನೋಡಿದುದರಿಂದ ನೀವು ದೇವೇಶನನ್ನು ನೋಡಿದಂತೆಯೇ ಆಯಿತು.

12323048a ಗಚ್ಚಧ್ವಂ ಮುನಯಃ ಸರ್ವೇ ಯಥಾಗತಮಿತೋಽಚಿರಾತ್।
12323048c ನ ಸ ಶಕ್ಯೋ ಅಭಕ್ತೇನ ದ್ರಷ್ಟುಂ ದೇವಃ ಕಥಂ ಚನ।।

ನೀವು ಎಲ್ಲ ಮುನಿಗಳೂ ಕೂಡಲೇ ಎಲ್ಲಿಂದ ಬಂದಿದ್ದಿರೋ ಅಲ್ಲಿಗೆ ಹೋಗಿ. ಭಕ್ತನಲ್ಲದವನು ದೇವನನ್ನು ನೋಡಲು ಎಂದೂ ಶಕ್ಯನಾಗುವುದಿಲ್ಲ.

12323049a ಕಾಮಂ ಕಾಲೇನ ಮಹತಾ ಏಕಾಂತಿತ್ವಂ ಸಮಾಗತೈಃ।
12323049c ಶಕ್ಯೋ ದ್ರಷ್ಟುಂ ಸ ಭಗವಾನ್ಪ್ರಭಾಮಂಡಲದುರ್ದೃಶಃ।।

ಮಹಾ ಕಾಲದವರೆಗೂ ಅನನ್ಯ ಭಕ್ತಿಯಿಂದ ನಾರಾಯಣನ ಉಪಾಸನೆಯನ್ನು ಮಾಡಿ ಏಕಾಂತಿತ್ವವನ್ನು ಹೊಂದಿದವರು ಮಾತ್ರ ಪ್ರಭಾಮಂಡಲಯುಕ್ತನಾಗಿ ನೋಡಲು ಅಸಾಧ್ಯನಾಗಿರುವ ಭಗವಂತನನ್ನು ನೋಡಲು ಶಕ್ಯರಾಗುತ್ತಾರೆ.

12323050a ಮಹತ್ಕಾರ್ಯಂ ತು ಕರ್ತವ್ಯಂ ಯುಷ್ಮಾಭಿರ್ದ್ವಿಜಸತ್ತಮಾಃ।
12323050c ಇತಃ ಕೃತಯುಗೇಽತೀತೇ ವಿಪರ್ಯಾಸಂ ಗತೇಽಪಿ ಚ।।

ದ್ವಿಜಸತ್ತಮರೇ! ನೀವು ಒಂದು ಮಹತ್ಕಾರವನ್ನು ಮಾಡಬೇಕು. ಈ ಕೃತಯುಗವು ಕಳೆಯಲು ಧರ್ಮದಲ್ಲಿ ವಿಪರ್ಯಾಸವುಂಟಾಗುತ್ತದೆ.

12323051a ವೈವಸ್ವತೇಽಂತರೇ ವಿಪ್ರಾಃ ಪ್ರಾಪ್ತೇ ತ್ರೇತಾಯುಗೇ ತತಃ।
12323051c ಸುರಾಣಾಂ ಕಾರ್ಯಸಿದ್ಧ್ಯರ್ಥಂ ಸಹಾಯಾ ವೈ ಭವಿಷ್ಯಥ।।

ವಿಪ್ರರೇ! ವೈವಸ್ವತ ಮನ್ವಂತರದಲ್ಲಿ ತ್ರೇತಾಯುಗವು ಪ್ರಾಪ್ತವಾದಾಗ ಸುರರ ಕಾರ್ಯಸಿದ್ಧಿಗಾಗಿ ನೀವು ಸಹಾಯಕರಾಗುತ್ತೀರಿ.”

12323052a ತತಸ್ತದದ್ಭುತಂ ವಾಕ್ಯಂ ನಿಶಮ್ಯೈವಂ ಸ್ಮ ಸೋಮಪ।
12323052c ತಸ್ಯ ಪ್ರಸಾದಾತ್ಪ್ರಾಪ್ತಾಃ ಸ್ಮೋ ದೇಶಮೀಪ್ಸಿತಮಂಜಸಾ।।

ಅಮೃತೋಪಮವಾದ ಆ ಅದ್ಭುತ ವಾಕ್ಯವನ್ನು ಕೇಳಿದೊಡನೆಯೇ ಅವನ ಪ್ರಸಾದದಿಂದ ಆಯಾಸ ಕಳೆದುಕೊಂಡವರಾಗಿ ನಮಗೆ ಅಭೀಷ್ತವಾದ ಸ್ಥಳವನ್ನು ಸೇರಿದೆವು.

12323053a ಏವಂ ಸುತಪಸಾ ಚೈವ ಹವ್ಯಕವ್ಯೈಸ್ತಥೈವ ಚ।
12323053c ದೇವೋಽಸ್ಮಾಭಿರ್ನ ದೃಷ್ಟಃ ಸ ಕಥಂ ತ್ವಂ ದ್ರಷ್ಟುಮರ್ಹಸಿ।
12323053e ನಾರಾಯಣೋ ಮಹದ್ಭೂತಂ ವಿಶ್ವಸೃಗ್ಘವ್ಯಕವ್ಯಭುಕ್।।

ಹೀಗೆ ಮಹಾತಪಸ್ಸಿನಿಂದಲೂ ಮತ್ತು ಹವ್ಯಕವ್ಯಗಳಿಂದಲೂ ನಾವು ಆ ದೇವನನ್ನು ನೋಡಲಿಕ್ಕಾಗಲಿಲ್ಲ. ನೀನು ಹೇಗೆ ಅವನನ್ನು ನೋಡಬಲ್ಲೆ? ನಾರಾಯಣನು ಮಹಾಪುರುಷನು. ವಿಶ್ವವನ್ನೇ ಸೃಷ್ಟಿಸಿರುವವನು.””

12323054 ಭೀಷ್ಮ ಉವಾಚ।
12323054a ಏವಮೇಕತವಾಕ್ಯೇನ ದ್ವಿತತ್ರಿತಮತೇನ ಚ।
12323054c ಅನುನೀತಃ ಸದಸ್ಯೈಶ್ಚ ಬೃಹಸ್ಪತಿರುದಾರಧೀಃ।
12323054e ಸಮಾನೀಯ ತತೋ ಯಜ್ಞಂ ದೈವತಂ ಸಮಪೂಜಯತ್।।

ಭೀಷ್ಮನು ಹೇಳಿದನು: “ಈ ರೀತಿ ಏಕತ, ದ್ವಿತ ಮತ್ತು ತ್ರಿತರು ಒಂದೇ ಮತದಿಂದ ಹೇಳಿದ ಸದಸ್ಯರ ವಾಕ್ಯದಿಂದ ಸಂತೈಸಲ್ಪಟ್ಟ ಉದಾರಬುದ್ಧಿ ಬೃಹಸ್ಪತಿಯು ಯಜ್ಞವನ್ನು ಸಮಾಪ್ತಿಗೊಳಿಸಿ ದೇವನನ್ನು ಪೂಜಿಸಿದನು.

12323055a ಸಮಾಪ್ತಯಜ್ಞೋ ರಾಜಾಪಿ ಪ್ರಜಾಃ ಪಾಲಿತವಾನ್ವಸುಃ।
12323055c ಬ್ರಹ್ಮಶಾಪಾದ್ದಿವೋ ಭ್ರಷ್ಟಃ ಪ್ರವಿವೇಶ ಮಹೀಂ ತತಃ।।

ಯಜ್ಞವನ್ನು ಸಮಾಪ್ತಿಗೊಳಿಸಿದ ರಾಜಾ ವಸುವಾದರೋ ಪ್ರಜೆಗಳನ್ನು ಪಾಲಿಸಿದನು. ಅನಂತರ ಬ್ರಹ್ಮಶಾಪದಿಂದಾಗಿ ಅವನು ದಿವದಿಂದ ಭ್ರಷ್ಟನಾಗಿ ಮಹಿಯನ್ನು ಪ್ರವೇಶಿಸಿದನು.

12323056a ಅಂತರ್ಭೂಮಿಗತಶ್ಚೈವ ಸತತಂ ಧರ್ಮವತ್ಸಲಃ।
12323056c ನಾರಾಯಣಪರೋ ಭೂತ್ವಾ ನಾರಾಯಣಪದಂ ಜಗೌ।।

ಅಂತರ್ಭೂಮಿಯನ್ನು ಸೇರಿ ಅಲ್ಲಿಯೂ ಸತತವ್ವಾಗಿ ನಾರಾಯಣಪರನಾಗಿ ಆ ಧರ್ಮವತ್ಸಲನು ನಾರಾಯಣಪದವನ್ನು ಸೇರಿದನು.

12323057a ತಸ್ಯೈವ ಚ ಪ್ರಸಾದೇನ ಪುನರೇವೋತ್ಥಿತಸ್ತು ಸಃ।
12323057c ಮಹೀತಲಾದ್ಗತಃ ಸ್ಥಾನಂ ಬ್ರಹ್ಮಣಃ ಸಮನಂತರಮ್।
12323057e ಪರಾಂ ಗತಿಮನುಪ್ರಾಪ್ತ ಇತಿ ನೈಷ್ಠಿಕಮಂಜಸಾ।।

ಅವನ ಪ್ರಸಾದದಿಂದಲೇ ಅವನು ಪುನಃ ಮಹೀತಲದಿಂದ ಮೇಲೆದ್ದು ಬ್ರಹ್ಮಸ್ಥಾನವನ್ನು ಪಡೆದು ಅನಂತರ ನಿಷ್ಠಾವಂತರಿಗೆ ದೊರೆಯುವ ಪರಮ ಗತಿಯನ್ನು ಹೊಂದಿದನು.”

ಸಮಾಪ್ತಿ ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ನಾರಾಯಣೀಯೇ ತ್ರ್ಯವಿಂಶಾಧಿಕತ್ರಿಶತತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ನಾರಾಯಣೀಯ ಎನ್ನುವ ಮುನ್ನೂರಾಇಪ್ಪತ್ಮೂರನೇ ಅಧ್ಯಾಯವು.

  1. ಕೆಲವು ಸಂಪುಟಗಳಲ್ಲಿ ಇದಕ್ಕೆ ಮೊದಲು ಯುಧಿಷ್ಠಿರ ಉವಾಚ ಎಂದಿದೆ. ↩︎

  2. ಕೆಲವು ಸಂಪುಟಗಳಲ್ಲಿ ಇದಕ್ಕೆ ಮೊದಲು ಭೀಷ್ಮ ಉವಾಚ ಎಂದಿದೆ. ↩︎

  3. ಜಿತಂ ತೇ ಪುಂಡರೀಕಾಕ್ಷ ನಮಸ್ತೇ ವಿಶ್ವಭಾವನ। ಎಂದು ಪ್ರಾರಂಭವಾಗುವ ಆರು ಭಾಗಗಳಲ್ಲಿರುವ ದಿವ್ಯ ಸ್ತೋತ್ರವು ಪಾಂಚರಾತ್ರಾಗಮದಲ್ಲಿ ಬರುತ್ತದೆ. ಇದನ್ನು ಋಗ್ವೇದದ ಖಿಲಭಾಗವೆಂದು ಪೂರ್ವಸೂರಿಗಳು ಹೇಳುತ್ತಾರೆ. ಈ ಶ್ಲೋಕವು ವಿಷ್ಣುಪುರಾಣದ ಮಂಗಲಾಚರಣೆಯಲ್ಲಿಯೂ ಬರುತ್ತದೆ. ↩︎