322: ನಾರಾಯಣೀಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 322

ಸಾರ

ನಾರದನು ಶ್ವೇತದ್ವೀಪವನ್ನು ನೋಡಿದುದು (1-7); ಅಲ್ಲಿಯ ನಿವಾಸಿಗಳ ಸ್ವರೂಪವರ್ಣನೆ (8-12); ಉಪರಿಚರ ವಸುವಿನ ಚರಿತ್ರೆ (13-25); ಪಾಂಚರಾತ್ರದ ಉತ್ಪತ್ತಿಯ ಪ್ರಸಂಗ (26-52).

12322001 ಭೀಷ್ಮ ಉವಾಚ।
12322001a ಸ ಏವಮುಕ್ತೋ ದ್ವಿಪದಾಂ ವರಿಷ್ಠೋ ನಾರಾಯಣೇನೋತ್ತಮಪೂರುಷೇಣ।
12322001c ಜಗಾದ ವಾಕ್ಯಂ ದ್ವಿಪದಾಂ ವರಿಷ್ಠಂ ನಾರಾಯಣಂ ಲೋಕಹಿತಾಧಿವಾಸಮ್।।

ಭೀಷ್ಮನು ಹೇಳಿದನು: “ಉತ್ತಮ ಪುರುಷ ನಾರಾಯಣನು ಹೀಗೆ ಹೇಳಲು ದ್ವಿಪದರಲ್ಲಿ ವರಿಷ್ಠ ನಾರದನು ಲೋಕಹಿತಾಧಿವಾಸ ದ್ವಿಪದರಲ್ಲಿ ವರಿಷ್ಠ ನಾರಾಯಣನಿಗೆ ಇಂತೆಂದನು:

12322002a ಯದರ್ಥಮಾತ್ಮಪ್ರಭವೇಹ ಜನ್ಮ ತವೋತ್ತಮಂ ಧರ್ಮಗೃಹೇ ಚತುರ್ಧಾ।
12322002c ತತ್ಸಾಧ್ಯತಾಂ ಲೋಕಹಿತಾರ್ಥಮದ್ಯ ಗಚ್ಚಾಮಿ ದ್ರಷ್ಟುಂ ಪ್ರಕೃತಿಂ ತವಾದ್ಯಾಮ್।।

“ನೀನು ಯಾವ ಉದ್ದೇಶಕ್ಕಾಗಿ ಧರ್ಮನ ಗೃಹದಲ್ಲಿ ನಾಲ್ಕು ರೂಪಗಳಿಂದ ಅವತರಿಸಿರುವೆಯೋ ಅದು ಸಿದ್ಧಿಯಾಗಲಿ. ಲೋಕಹಿತಾರ್ಥಕ್ಕಾಗಿ ಇಂದು ನಾನು ನಿನ್ನ ಮೂಲ ಪ್ರಕೃತಿಯನ್ನು ನೋಡಲು ಹೋಗುತ್ತೇನೆ.

12322003a ವೇದಾಃ ಸ್ವಧೀತಾ ಮಮ ಲೋಕನಾಥ ತಪ್ತಂ ತಪೋ ನಾನೃತಮುಕ್ತಪೂರ್ವಮ್।
12322003c ಪೂಜಾಂ ಗುರೂಣಾಂ ಸತತಂ ಕರೋಮಿ ಪರಸ್ಯ ಗುಹ್ಯಂ ನ ಚ ಭಿನ್ನಪೂರ್ವಮ್।।

ಲೋಕನಾಥ! ವೇದಗಳನ್ನು ಅಧ್ಯಯನ ಮಾಡಿದ್ದೇನೆ. ತಪಸ್ಸನ್ನೂ ತಪಿಸಿದ್ದೇನೆ. ಅನೃತವನ್ನು ಈ ಹಿಂದೆ ಎಂದೂ ಆಡಿಲ್ಲ. ಸತತವೂ ಗುರುಗಳ ಪೂಜೆಯನ್ನು ಮಾಡುತ್ತೇನೆ. ಇತರರ ರಹಸ್ಯವನ್ನು ಈ ಹಿಂದೆ ಎಂದೂ ಇತರರ ಎದಿರು ಬಹಿರಂಗಪಡಿಸಿಲ್ಲ.

12322004a ಗುಪ್ತಾನಿ ಚತ್ವಾರಿ ಯಥಾಗಮಂ ಮೇ ಶತ್ರೌ ಚ ಮಿತ್ರೇ ಚ ಸಮೋಽಸ್ಮಿ ನಿತ್ಯಮ್।
12322004c ತಂ ಚಾದಿದೇವಂ ಸತತಂ ಪ್ರಪನ್ನ ಏಕಾಂತಭಾವೇನ ವೃಣೋಮ್ಯಜಸ್ರಮ್।।
12322004e ಏಭಿರ್ವಿಶೇಷೈಃ ಪರಿಶುದ್ಧಸತ್ತ್ವಃ ಕಸ್ಮಾನ್ನ ಪಶ್ಯೇಯಮನಂತಮೀಶಮ್

ಆಗಮ ಶಾಸ್ತ್ರಗಳಿಗನುಗುಣವಾಗಿ ನಾನು ನಾಲ್ಕನ್ನು ರಕ್ಷಿಸಿಕೊಂಡಿದ್ದೇನೆ. ನಿತ್ಯವೂ ನನಗೆ ಶತ್ರು ಮತ್ತು ಮಿತ್ರರು ಒಂದೇ. ಆ ಆದಿದೇವನನ್ನು ಸತತವೂ ಪ್ರಪನ್ನಗೊಳಿಸುತ್ತಾ ಏಕಾಂತಭಾವದಿಂದ ಅವನನ್ನು ಭಜಿಸುತ್ತೇನೆ. ಈ ರೀತಿ ವಿಶೇಷವಾಗಿ ಪರಿಶುದ್ಧ ಸತ್ತ್ವನಾಗಿರುವ ನಾನು ಆ ಅನಂತ ಈಶನನ್ನು ಏಕೆ ಕಾಣಲಾರೆನು?”

12322005a ತತ್ಪಾರಮೇಷ್ಠ್ಯಸ್ಯ ವಚೋ ನಿಶಮ್ಯ ನಾರಾಯಣಃ ಸಾತ್ವತಧರ್ಮಗೋಪ್ತಾ।
12322005c ಗಚ್ಚೇತಿ ತಂ ನಾರದಮುಕ್ತವಾನ್ಸ ಸಂಪೂಜಯಿತ್ವಾತ್ಮವಿಧಿಕ್ರಿಯಾಭಿಃ।।

ಪರಮೇಷ್ಠಿಯ ಮಗ ನಾರದನ ವಚನವನ್ನು ಕೇಳಿ ಸಾತ್ವತಧರ್ಮರಕ್ಷಕ ನಾರಾಯಣನು ನಾರದನನ್ನು ಆತ್ಮವಿಧಿಕ್ರಿಯೆಗಳಿಂದ ಸಂಪೂಜಿಸಿ ಹೋಗಲು ಹೇಳಿದನು.

12322006a ತತೋ ವಿಸೃಷ್ಟಃ ಪರಮೇಷ್ಠಿಪುತ್ರಃ ಸೋಽಭ್ಯರ್ಚಯಿತ್ವಾ ತಮೃಷಿಂ ಪುರಾಣಮ್।
12322006c ಖಮುತ್ಪಪಾತೋತ್ತಮವೇಗಯುಕ್ತಸ್ ತತೋಽಧಿಮೇರೌ ಸಹಸಾ ನಿಲಿಲ್ಯೇ।।

ಅನಂತರ ಪರಮೇಷ್ಠಿಪುತ್ರ ನಾರದನು ಆ ಪುರಾಣ ಋಷಿಯನ್ನು ಅರ್ಚಿಸಿ ಬೀಳ್ಕೊಂಡು ಉತ್ತಮ ವೇಗಯುಕ್ತನಾಗಿ ಆಕಾಶದಿಂದ ಹಾರಿ ಮೇರುಪರ್ವತಕ್ಕೆ ಹೋಗಿ ಅಲ್ಲಿಯೇ ಅಂತರ್ಧಾನನಾದನು.

12322007a ತತ್ರಾವತಸ್ಥೇ ಚ ಮುನಿರ್ಮುಹೂರ್ತಮ್ ಏಕಾಂತಮಾಸಾದ್ಯ ಗಿರೇಃ ಸ ಶೃಂಗೇ।
12322007c ಆಲೋಕಯನ್ನುತ್ತರಪಶ್ಚಿಮೇನ ದದರ್ಶ ಚಾತ್ಯದ್ಭುತರೂಪಯುಕ್ತಮ್।।

ಆ ಗಿರಿಶೃಂಗದ ಏಕಾಂತವನ್ನು ಸೇರಿ ಒಂದು ಮುಹೂರ್ತಕಾಲ ಅಲ್ಲಿಯೇ ವಿಶ್ರಾಂತಿಗೈಯುತ್ತಾ ವಾಯುವ್ಯ ದಿಕ್ಕಿನಲ್ಲಿ ಒಂದು ಅದ್ಭುತರೂಪವನ್ನು ಕಂಡನು.

12322008a ಕ್ಷೀರೋದಧೇರುತ್ತರತೋ ಹಿ ದ್ವೀಪಃ ಶ್ವೇತಃ ಸ ನಾಮ್ನಾ ಪ್ರಥಿತೋ ವಿಶಾಲಃ।
12322008c ಮೇರೋಃ ಸಹಸ್ರೈಃ ಸ ಹಿ ಯೋಜನಾನಾಂ ದ್ವಾತ್ರಿಂಶತೋರ್ಧ್ವಂ ಕವಿಭಿರ್ನಿರುಕ್ತಃ।।

ಕ್ಷೀರಸಾಗರದ ಉತ್ತರದಲ್ಲಿದ್ದ ಶ್ವೇತದ್ವೀಪವೆಂದು ಪ್ರಸಿದ್ಧವಾಗಿದ್ದ ವಿಶಾಲ ಪ್ರದೇಶವು ಗೋಚರಿಸಿತು. ಅದು ಮೇರು ಪರ್ವತಕ್ಕಿಂತಲೂ ಮೂವತ್ತೆರಡು ಸಾವಿರ ಯೋಜನೆಗಳ ಎತ್ತರದಲ್ಲಿತ್ತು.

12322009a ಅತೀಂದ್ರಿಯಾಶ್ಚಾನಶನಾಶ್ಚ ತತ್ರ ನಿಷ್ಪಂದಹೀನಾಃ ಸುಸುಗಂಧಿನಶ್ಚ।
12322009c ಶ್ವೇತಾಃ ಪುಮಾಂಸೋ ಗತಸರ್ವಪಾಪಾಶ್ ಚಕ್ಷುರ್ಮುಷಃ ಪಾಪಕೃತಾಂ ನರಾಣಾಮ್।।

ಅಲ್ಲಿರುವವರು ಅತೀಂದ್ರಿಯರೂ, ನಿರಾಹಾರಿಗಳೂ, ಚಲನೆಯಿಲ್ಲದವರೂ, ಜ್ಞಾನಸಂಪನ್ನರೂ, ಸುವಾಸನೆಯುಳ್ಳವರೂ ಆಗಿದ್ದರು. ಅಲ್ಲಿದ್ದವರು ಶ್ವೇತವರ್ಣದವರೂ, ಸರ್ವಪಾಪಗಳಿಂದ ವಿಮುಕ್ತರೂ, ಪಾಪಿ ನರರ ದೃಷ್ಟಿಯನ್ನು ಅಪಹರಿಸುವವರೂ ಆಗಿದ್ದರು.

12322010a ವಜ್ರಾಸ್ಥಿಕಾಯಾಃ ಸಮಮಾನೋನ್ಮಾನಾ ದಿವ್ಯಾನ್ವಯರೂಪಾಃ1 ಶುಭಸಾರೋಪೇತಾಃ।
12322010c ಚತ್ರಾಕೃತಿಶೀರ್ಷಾ ಮೇಘೌಘನಿನಾದಾಃ ಸತ್ಪುಷ್ಕರಚತುಷ್ಕಾ2 ರಾಜೀವಶತಪಾದಾಃ।।

ವಜ್ರದ ಅಸ್ಥಿ-ಕಾಯಗಳನ್ನು ಹೊಂದಿದ್ದ ಅವರು ಮಾನಾಪಮಾನಗಳನ್ನು ಸಮನಾಗಿ ಕಾಣುತ್ತಿದ್ದವರಾಗಿದ್ದರು. ದಿವ್ಯಾನ್ವಯ ರೂಪರೂಪಗಳುಳ್ಳವರೂ, ಶುಭಬಲಸಂಪನ್ನರೂ ಆಗಿದ್ದರು. ಅವರ ಶಿರಗಳು ಚತ್ರದ ಆಕೃತಿಯಲ್ಲಿದ್ದವು. ಅವರ ಸ್ವರಗಳ ಮೇಘಗಳ ಧ್ವನಿಯಂತಿದ್ದವು. ನಾಲ್ಕು ಸುಂದರ ಪುಷ್ಕರಗಳಿದ್ದ ಅವರ ಪಾದಗಳು ಕಮಲದಳಗಳನ್ನು ಹೋಲುತ್ತಿದ್ದವು.

12322011a ಷಷ್ಟ್ಯಾ ದಂತೈರ್ಯುಕ್ತಾಃ ಶುಕ್ಲೈರ್ ಅಷ್ಟಾಭಿರ್ದಂಷ್ಟ್ರಾಭಿರ್ಯೇ।
12322011c ಜಿಹ್ವಾಭಿರ್ಯೇ ವಿಷ್ವಗ್ವಕ್ತ್ರಂ ಲೇಲಿಹ್ಯಂತೇ ಸೂರ್ಯಪ್ರಖ್ಯಮ್।।

ಅರವತ್ತು ಹಲ್ಲುಗಳನ್ನೂ, ಬಿಳಿಯ ಎಂಟು ಕೋರೆದಾಡೆಗಳನ್ನೂ ಹೊಂದಿದ್ದರು. ಸೂರ್ಯನ ಕಾಂತಿಯಿಂದ ಕೂಡಿದ್ದರು. ವಿಶ್ವವೇ ಮುಖವಾಗಿದ್ದ ಕಾಲನನ್ನು ನಾಲಿಗೆಯಿಂದ ನೆಕ್ಕುತ್ತಿದ್ದರು.

12322012a ಭಕ್ತ್ಯಾ ದೇವಂ ವಿಶ್ವೋತ್ಪನ್ನಂ ಯಸ್ಮಾತ್ಸರ್ವೇ ಲೋಕಾಃ ಸೂತಾಃ।
12322012c ವೇದಾ ಧರ್ಮಾ ಮುನಯಃ ಶಾಂತಾ ದೇವಾಃ ಸರ್ವೇ ತಸ್ಯ ವಿಸರ್ಗಾಃ।।

ವಿಶ್ವದ ಉತ್ಪನ್ನನ್ನಾಗಿದ್ದ, ಯಾರಿಂದ ಸರ್ವ ಲೋಕಗಳೂ, ವೇದಗಳೂ, ಧರ್ಮಗಳೂ, ಶಾಂತ ಮುನಿಗಳೂ, ಮತ್ತು ಸರ್ವ ದೇವತೆಗಳೂ ಹುಟ್ಟಿರುವರೋ ಆ ದೇವನನ್ನು ಅವರು ಭಕ್ತಿಯಿಂದ ಧರಿಸಿದ್ದರು.”

12322013 ಯುಧಿಷ್ಠಿರ ಉವಾಚ।
12322013a ಅತೀಂದ್ರಿಯಾ ನಿರಾಹಾರಾ ಅನಿಷ್ಪಂದಾಃ ಸುಗಂಧಿನಃ।
12322013c ಕಥಂ ತೇ ಪುರುಷಾ ಜಾತಾಃ ಕಾ ತೇಷಾಂ ಗತಿರುತ್ತಮಾ।।

ಯುಧಿಷ್ಠಿರನು ಹೇಳಿದನು: “ಅತೀಂದ್ರಿಯರೂ, ನಿರಾಹಾರರೂ, ಚಲನೆಯಿಲ್ಲದವರೂ, ಸುಗಂಧಿಗಳೂ ಆದ ಆ ಪುರುಷರು ಹೇಗೆ ಹುಟ್ಟಿದರು? ಅವರ ಉತ್ತಮ ಗತಿಯಾವುದು?

12322014a ಯೇ ವಿಮುಕ್ತಾ ಭವಂತೀಹ ನರಾ ಭರತಸತ್ತಮ।
12322014c ತೇಷಾಂ ಲಕ್ಷಣಮೇತದ್ಧಿ ಯಚ್ಚ್ವೇತದ್ವೀಪವಾಸಿನಾಮ್।।

ಭರತಸತ್ತಮ! ಈ ಲೋಕದಲ್ಲಿ ವಿಮುಕ್ತರಾದ ನರರಿಗೆ ಯಾವ ಲಕ್ಷಣಗಳಿವೆಯೆಂದು ತಿಳಿದಿದ್ದೇವೆಯೋ ಅವೇ ಲಕ್ಷಣಗಳು ಶ್ವೇತದ್ವೀಪನಿವಾಸಿಗಳಲ್ಲಿ ಇವೆಯೆಂದು ಹೇಳಿದೆ.

12322015a ತಸ್ಮಾನ್ಮೇ ಸಂಶಯಂ ಚಿಂಧಿ ಪರಂ ಕೌತೂಹಲಂ ಹಿ ಮೇ।
12322015c ತ್ವಂ ಹಿ ಸರ್ವಕಥಾರಾಮಸ್ತ್ವಾಂ ಚೈವೋಪಾಶ್ರಿತಾ ವಯಮ್।।

ಅದರ ಕುರಿತು ನನಗೆ ಸಂದೇಹವೂ ಕುತೂಹಲವೂ ಉಂಟಾಗಿದೆ. ಈ ನನ್ನ ಸಂಶಯವನ್ನು ನಿವಾರಿಸು. ನೀನು ಸರ್ವ ಕಥೆಗಳಿಗೂ ಉದ್ಯಾನವನದಂತಿರುವೆ. ನಾವು ನಿನ್ನನ್ನೇ ಆಶ್ರಯಿಸಿದ್ದೇವೆ.”

12322016 ಭೀಷ್ಮ ಉವಾಚ।
12322016a ವಿಸ್ತೀರ್ಣೈಷಾ ಕಥಾ ರಾಜನ್ ಶ್ರುತಾ ಮೇ ಪಿತೃಸಂನಿಧೌ।
12322016c ಸೈಷಾ ತವ ಹಿ ವಕ್ತವ್ಯಾ ಕಥಾಸಾರೋ ಹಿ ಸ ಸ್ಮೃತಃ।।

ಭೀಷ್ಮನು ಹೇಳಿದನು: “ರಾಜನ್! ಈ ಕಥೆಯು ಬಹಳ ವಿಸ್ತಾರವಾಗಿದೆ. ಇದನ್ನು ನನ್ನ ತಂದೆಯ ಬಳಿಯಿದ್ದಾಗ ಕೇಳಿದ್ದೆನು. ನಿನಗೆ ಹೇಳುವ ಈ ಕಥೆಯು ಕಥೆಗಳಲ್ಲಿಯೇ ಸಾರಭೂತವಾದುದೆಂದು ನಿಶ್ಚಯಿಸಲ್ಪಟ್ಟಿದೆ.

12322017a ರಾಜೋಪರಿಚರೋ ನಾಮ ಬಭೂವಾಧಿಪತಿರ್ಭುವಃ।
12322017c ಆಖಂಡಲಸಖಃ ಖ್ಯಾತೋ ಭಕ್ತೋ ನಾರಾಯಣಂ ಹರಿಮ್।।

ಉಪರಿಚರ ಎಂಬ ಹೆಸರಿನ ರಾಜನು ಇಡೀ ಭೂಮಂಡಲಕ್ಕೇ ಅಧಿಪತಿಯಾಗಿದ್ದನು. ಇಂದ್ರನ ಸಖನಾಗಿದ್ದ ಆ ಖ್ಯಾತನು ಹರಿ ನಾರಾಯಣನ ಭಕ್ತನಾಗಿದ್ದನು.

12322018a ಧಾರ್ಮಿಕೋ ನಿತ್ಯಭಕ್ತಶ್ಚ ಪಿತೃನ್ನಿತ್ಯಮತಂದ್ರಿತಃ।
12322018c ಸಾಮ್ರಾಜ್ಯಂ ತೇನ ಸಂಪ್ರಾಪ್ತಂ ನಾರಾಯಣವರಾತ್ಪುರಾ।।

ಧಾರ್ಮಿಕನೂ ನಿತ್ಯಭಕ್ತನೂ ನಿತ್ಯವೂ ಆಲಸ್ಯವಿಲ್ಲದೇ ಪಿತೃಭಕ್ತನೂ ಆಗಿದ್ದ ಅವನು ಹಿಂದಿ ನಾರಾಯಣನ ವರದಿಂದ ಸಾಮ್ರಾಜ್ಯವನ್ನು ಪಡೆದುಕೊಂಡನು.

12322019a ಸಾತ್ವತಂ ವಿಧಿಮಾಸ್ಥಾಯ ಪ್ರಾಕ್ಸೂರ್ಯಮುಖನಿಃಸೃತಮ್।
12322019c ಪೂಜಯಾಮಾಸ ದೇವೇಶಂ ತಚ್ಚೇಷೇಣ ಪಿತಾಮಹಾನ್।।

ಮೊದಲು ಅವನು ಸೂರ್ಯನ ಮುಖದಿಂದ ಪ್ರಕಟವಾದ ಸಾತ್ವತ ವಿಧಿಯನ್ನು ಆಶ್ರಯಿಸಿ ದೇವೇಶನನ್ನು ಪೂಜಿಸುತ್ತಿದ್ದನು. ಅನಂತರ ಉಳಿದವುಗಳಿಂದ ಪಿತೃಗಳನ್ನು ಪೂಜಿಸುತ್ತಿದ್ದನು.

12322020a ಪಿತೃಶೇಷೇಣ ವಿಪ್ರಾಂಶ್ಚ ಸಂವಿಭಜ್ಯಾಶ್ರಿತಾಂಶ್ಚ ಸಃ।
12322020c ಶೇಷಾನ್ನಭುಕ್ಸತ್ಯಪರಃ ಸರ್ವಭೂತೇಷ್ವಹಿಂಸಕಃ।
12322020e ಸರ್ವಭಾವೇನ ಭಕ್ತಃ ಸ ದೇವದೇವಂ ಜನಾರ್ದನಮ್।।

ಪಿತೃಶೇಷದಿಂದ ವಿಪ್ರರಿಗೂ ಆಶ್ರಿತರಿಗೂ ಹಂಚಿಕೊಟ್ಟು ಉಳಿದ ಅನ್ನವನ್ನು ತಾನು ಭುಂಜಿಸುತ್ತಿದ್ದನು. ಆ ಸತ್ಯಪರನು ಸರ್ವಭೂತಗಳಿಗೂ ಅಹಿಂಸಕನಾಗಿದ್ದನು. ಆ ಭಕ್ತನು ಸರ್ವಭಾವದಿಂದ ದೇವದೇವ ಜನಾರ್ದನನನ್ನು ಪೂಜಿಸುತ್ತಿದ್ದನು.

12322021a ತಸ್ಯ ನಾರಾಯಣೇ ಭಕ್ತಿಂ ವಹತೋಽಮಿತ್ರಕರ್ಶನ।
12322021c ಏಕಶಯ್ಯಾಸನಂ ಶಕ್ರೋ ದತ್ತವಾನ್ದೇವರಾಟ್ಸ್ವಯಮ್।।

ಅಮಿತ್ರಕರ್ಶನ! ನಾರಾಯಣನಲ್ಲಿ ಅವನಿಗಿದ್ದ ಭಕ್ತಿಗೆ ಮೆಚ್ಚಿ ಸ್ವಯಂ ದೇವರಾಜ ಶಕ್ರನು ಅವನಿಗೆ ಏಕಶಯ್ಯಾಸನ3ವನ್ನಿತ್ತನು.

12322022a ಆತ್ಮಾ ರಾಜ್ಯಂ ಧನಂ ಚೈವ ಕಲತ್ರಂ ವಾಹನಾನಿ ಚ।
12322022c ಏತದ್ಭಗವತೇ ಸರ್ವಮಿತಿ ತತ್ಪ್ರೇಕ್ಷಿತಂ ಸದಾ।।

ಉಪರಿಚರನು ತಾನೂ, ರಾಜ್ಯವೂ, ಧನವೂ, ಕಲತ್ರ ವಾಹನಗಳೂ ಎಲ್ಲವೂ ಭಗವಂತನದ್ದೇ ಎಂದು ಭಾವಿಸಿ ಎಲ್ಲವನ್ನೂ ಅವನಿಗೇ ಸಮರ್ಪಿಸಿದ್ದನು.

12322023a ಕಾಮ್ಯನೈಮಿತ್ತಿಕಾಜಸ್ರಂ ಯಜ್ಞಿಯಾಃ ಪರಮಕ್ರಿಯಾಃ।
12322023c ಸರ್ವಾಃ ಸಾತ್ವತಮಾಸ್ಥಾಯ ವಿಧಿಂ ಚಕ್ರೇ ಸಮಾಹಿತಃ।।

ಅವನು ಸಮಾಹಿತನಾಗಿ ಕಾಮ್ಯ, ನೈಮಿತ್ತಿಕ, ಹಾಗೂ ಯಜ್ಞವೇ ಮೊದಲಾದ ಪರಮ ಕ್ರಿಯೆಗಳು ಎಲ್ಲವನ್ನೂ ಸಾತ್ವತ ವಿಧಿಯನ್ನೇ ಬಳಸಿ ಮಾಡುತ್ತಿದ್ದನು.

12322024a ಪಂಚರಾತ್ರವಿದೋ ಮುಖ್ಯಾಸ್ತಸ್ಯ ಗೇಹೇ ಮಹಾತ್ಮನಃ।
12322024c ಪ್ರಾಯಣಂ ಭಗವತ್ಪ್ರೋಕ್ತಂ ಭುಂಜತೇ ಚಾಗ್ರಭೋಜನಮ್।।

ಆ ಮಹಾತ್ಮನ ಮನೆಯಲ್ಲಿ ಭಗವಂತನಿಗೆ ನಿವೇದಿಸಿದ ಪ್ರಸಾದವನ್ನು ಪಂಚರಾತ್ರಾಗಮದಲ್ಲಿ ನಿಷ್ಣಾತರಾದ ವಿಪ್ರಶ್ರೇಷ್ಠರು ಮೊದಲು ಭುಂಜಿಸುತ್ತಿದ್ದರು.

12322025a ತಸ್ಯ ಪ್ರಶಾಸತೋ ರಾಜ್ಯಂ ಧರ್ಮೇಣಾಮಿತ್ರಘಾತಿನಃ।
12322025c ನಾನೃತಾ ವಾಕ್ಸಮಭವನ್ಮನೋ ದುಷ್ಟಂ ನ ಚಾಭವತ್।
12322025e ನ ಚ ಕಾಯೇನ ಕೃತವಾನ್ಸ ಪಾಪಂ ಪರಮಣ್ವಪಿ।।

ಧರ್ಮದಿಂದ ರಾಜ್ಯವನ್ನು ಆಳುತ್ತಿದ್ದ ಆ ಅಮಿತ್ರಘಾತಿನಿಯ ಬಾಯಿಂದ ಅಸತ್ಯವಾದ ಮಾತು ಹೊರಡುತ್ತಿರಲಿಲ್ಲ. ಯು ಎಂದೂ ಸುಳ್ಳನ್ನು ಹೇಳಲಿಲ್ಲ. ಅವನ ಮನಸ್ಸು ದುಷ್ಟವಿಚಾರಗಳಲ್ಲಿ ತೊಡಗಿರಲಿಲ್ಲ. ಅವನು ತನ್ನ ಕಾಯದಿಂದ ಪರಮಾಣುವಿನಷ್ಟು ಸಣ್ಣ ಪಾಪವನ್ನೂ ಮಾಡಿರಲಿಲ್ಲ.

12322026a ಯೇ ಹಿ ತೇ ಮುನಯಃ ಖ್ಯಾತಾಃ ಸಪ್ತ ಚಿತ್ರಶಿಖಂಡಿನಃ।
12322026c ತೈರೇಕಮತಿಭಿರ್ಭೂತ್ವಾ ಯತ್ಪ್ರೋಕ್ತಂ ಶಾಸ್ತ್ರಮುತ್ತಮಮ್।।

ಚಿತ್ರಶಿಖಂಡಿಗಳೆಂದು ಖ್ಯಾತರಾದ ಏಳು ಮುನಿಗಳ ಒಂದೇ ಮತದಿಂದ ಈ ಉತ್ತಮ ಪಂಚರಾತ್ರ ಶಾಸ್ತ್ರವು ಹೇಳಲ್ಪಟ್ಟಿದೆ.

412322027a ಮರೀಚಿರತ್ರ್ಯಂಗಿರಸೌ ಪುಲಸ್ತ್ಯಃ ಪುಲಹಃ ಕ್ರತುಃ।
12322027c ವಸಿಷ್ಠಶ್ಚ ಮಹಾತೇಜಾ ಏತೇ ಚಿತ್ರಶಿಖಂಡಿನಃ।।

ಮರೀಚಿ, ಅತ್ರಿ, ಅಂಗಿರಸ, ಪುಲಸ್ತ್ಯ, ಪುಲಹ, ಕ್ರತು, ಮತ್ತು ಮಹಾತೇಜಸ್ವೀ ವಸಿಷ್ಠ – ಇವರೇ ಆ ಚಿತ್ರಶಿಖಂಡಿಗಳು.

12322028a ಸಪ್ತ ಪ್ರಕೃತಯೋ ಹ್ಯೇತಾಸ್ತಥಾ ಸ್ವಾಯಂಭುವೋಽಷ್ಟಮಃ।
12322028c ಏತಾಭಿರ್ಧಾರ್ಯತೇ ಲೋಕಸ್ತಾಭ್ಯಃ ಶಾಸ್ತ್ರಂ ವಿನಿಃಸೃತಮ್।।

ಲೋಕಕ್ಕೇ ಕಾರಣೀಭೂತರಾದ ಮತ್ತು ಲೋಕಗಳನ್ನು ಧರಿಸಿರುವ ಈ ಸಪ್ತ ಋಷಿಗಳು ಮತ್ತು ಎಂಟನೆಯವನಾಗಿ ಸ್ವಾಯಂಭುವ ಮನು ಇವರಿಂದ ಪಂಚರಾತ್ರ ಶಾಸ್ತ್ರವು ಹೊರಹೊಮ್ಮಿತು.

12322029a ಏಕಾಗ್ರಮನಸೋ ದಾಂತಾ ಮುನಯಃ ಸಂಯಮೇ ರತಾಃ।
512322029c ಇದಂ ಶ್ರೇಯ ಇದಂ ಬ್ರಹ್ಮ ಇದಂ ಹಿತಮನುತ್ತಮಮ್।
12322029e ಲೋಕಾನ್ಸಂಚಿಂತ್ಯ ಮನಸಾ ತತಃ ಶಾಸ್ತ್ರಂ ಪ್ರಚಕ್ರಿರೇ।।

ಏಕಾಗ್ರಮನಸ್ಕರಾದ ಮತ್ತು ಸಂಯಮರತರಾದ ಈ ದಾಂತ ಮುನಿಗಳು ಇದು ಶ್ರೇಯ, ಇದು ಬ್ರಹ್ಮ, ಇದು ಅನುತ್ತಮ ಹಿತ ಎಂದು ಲೋಕಗಳ ಕುರಿತು ಮನಸಾ ಚಿಂತಿಸಿ ಪಂಚರಾತ್ರ ಶಾಸ್ತ್ರವನ್ನು ಪ್ರಕಟಿಸಿದರು.

12322030a ತತ್ರ ಧರ್ಮಾರ್ಥಕಾಮಾ ಹಿ ಮೋಕ್ಷಃ ಪಶ್ಚಾಚ್ಚ ಕೀರ್ತಿತಃ।
12322030c ಮರ್ಯಾದಾ ವಿವಿಧಾಶ್ಚೈವ ದಿವಿ ಭೂಮೌ ಚ ಸಂಸ್ಥಿತಾಃ।।

ಇದರಲ್ಲಿ ಧರ್ಮಾರ್ಥ ಕಾಮಗಳ ಕುರಿತೂ ನಂತರ ಮೋಕ್ಷದ ಕುರಿತೂ ವಿವರಿಸಿದ್ದಾರೆ. ಇದರಲ್ಲಿ ದಿವಿ-ಭೂಮಿಗಳಲ್ಲಿರುವ ವಿವಿಧ ಮರ್ಯಾದೆಗಳನ್ನೂ ಅಳವಡಿಸಿದ್ದಾರೆ.

12322031a ಆರಾಧ್ಯ ತಪಸಾ ದೇವಂ ಹರಿಂ ನಾರಾಯಣಂ ಪ್ರಭುಮ್।
12322031c ದಿವ್ಯಂ ವರ್ಷಸಹಸ್ರಂ ವೈ ಸರ್ವೇ ತೇ ಋಷಿಭಿಃ ಸಹ।।

ಆ ಎಲ್ಲ ಋಷಿಗಳೂ ಒಟ್ಟಾಗಿ ಸಹಸ್ರ ದಿವ್ಯ ವರ್ಷಗಳ ಪರ್ಯಂತ ತಪಸ್ಸಿನಿಂದ ಪ್ರಭು ದೇವ ಹರಿ ನಾರಾಯಣನನ್ನು ಆರಾಧಿಸಿದರು.

12322032a ನಾರಾಯಣಾನುಶಾಸ್ತಾ ಹಿ ತದಾ ದೇವೀ ಸರಸ್ವತೀ।
12322032c ವಿವೇಶ ತಾನೃಷೀನ್ಸರ್ವಾಽಲ್ಲೋಕಾನಾಂ ಹಿತಕಾಮ್ಯಯಾ।।

ಆಗ ನಾರಾಯಣನ ಆದೇಶದಂತೆ ದೇವೀ ಸರಸ್ವತಿಯು ಸರ್ವ ಲೋಕಗಳಿಗೆ ಹಿತವನ್ನುಂಟುಮಾಡಲು ಬಯಸಿ ಆ ಋಷಿಗಳನ್ನು ಪ್ರವೇಶಿಸಿದಳು.

12322033a ತತಃ ಪ್ರವರ್ತಿತಾ ಸಮ್ಯಕ್ತಪೋವಿದ್ಭಿರ್ದ್ವಿಜಾತಿಭಿಃ।
12322033c ಶಬ್ದೇ ಚಾರ್ಥೇ ಚ ಹೇತೌ ಚ ಏಷಾ ಪ್ರಥಮಸರ್ಗಜಾ।।

ಅನಂತರ ಆ ತಪಸ್ವೀ ಬ್ರಾಹ್ಮಣರು ಶಬ್ದ, ಅರ್ಥ ಮತ್ತು ಕಾರಣಳಿಂದ ಯುಕ್ತವಾದ ಆ ಶಾಸ್ತ್ರವನ್ನು ಲೋಕದಲ್ಲಿ ಪ್ರಚರಿಸಿದರು. ಇದು ಪ್ರಥಮಸೃಷ್ಟಿಯಲ್ಲಿಯೇ ರಚಿತಗೊಂಡಿತು.

12322034a ಆದಾವೇವ ಹಿ ತಚ್ಚಾಸ್ತ್ರಮೋಂಕಾರಸ್ವರಭೂಷಿತಮ್।
12322034c ಋಷಿಭಿರ್ಭಾವಿತಂ ತತ್ರ ಯತ್ರ ಕಾರುಣಿಕೋ ಹ್ಯಸೌ।।

ಆದಿಯಲ್ಲಿಯೇ ಓಂಕಾರ ಸ್ವರವಿಭೂಷಿತಗೊಂಡು ಋಷಿಗಳಿಂದ ಅವಿರ್ಭಾವಗೊಂಡ ಅದರಲ್ಲಿ ಪರಮ ಕಾರಣಿಕ ಭಗವಂತನೇ ವಿರಾಜಮಾನನಾಗಿದ್ದನು.

12322035a ತತಃ ಪ್ರಸನ್ನೋ ಭಗವಾನನಿರ್ದಿಷ್ಟಶರೀರಗಃ।
12322035c ಋಷೀನುವಾಚ ತಾನ್ಸರ್ವಾನದೃಶ್ಯಃ ಪುರುಷೋತ್ತಮಃ।।

ಬಳಿಕ ಅನಿರ್ದಿಷ್ಟ ಶರೀರಗನಾದ ಭಗವಾನ್ ಪುರುಷೋತ್ತಮನು ಅದೃಶ್ಯನಾಗಿದ್ದುಕೊಂಡೇ ಆ ಋಷಿಗಳಿಗೆ ಹೇಳಿದನು:

12322036a ಕೃತಂ ಶತಸಹಸ್ರಂ ಹಿ ಶ್ಲೋಕಾನಾಮಿದಮುತ್ತಮಮ್।
12322036c ಲೋಕತಂತ್ರಸ್ಯ ಕೃತ್ಸ್ನಸ್ಯ ಯಸ್ಮಾದ್ಧರ್ಮಃ ಪ್ರವರ್ತತೇ।।

“ನೀವು ರಚಿಸಿರುವ ಈ ಒಂದು ಲಕ್ಷ ಶ್ಲೋಕಗಳು ಲೋಕತಂತ್ರಗಳೆಲ್ಲವನ್ನೂ ಒಳಗೊಂಡಿವೆ ಮತ್ತು ಇದರಿಂದ ಧರ್ಮವು ಪ್ರಚಲಿತವಾಗಿರುತ್ತದೆ.

12322037a ಪ್ರವೃತ್ತೌ ಚ ನಿವೃತ್ತೌ ಚ ಯೋನಿರೇತದ್ಭವಿಷ್ಯತಿ।
12322037c ಋಗ್ಯಜುಃಸಾಮಭಿರ್ಜುಷ್ಟಮಥರ್ವಾಂಗಿರಸೈಸ್ತಥಾ।।

ಇದು ಪ್ರವೃತ್ತಿ ಮತ್ತು ನಿವೃತ್ತಿಮಾರ್ಗಳ ಮತ್ತು ಋಗ್ಯಜುಃಸಾಮ ಅರ್ಥರ್ವಾಂಗಿರಸಗಳ ಮೂಲವಾಗಿದೆ.

12322038a ತಥಾ6 ಪ್ರಮಾಣಂ ಹಿ ಮಯಾ ಕೃತೋ ಬ್ರಹ್ಮಾ ಪ್ರಸಾದಜಃ।
12322038c ರುದ್ರಶ್ಚ ಕ್ರೋಧಜೋ ವಿಪ್ರಾ ಯೂಯಂ ಪ್ರಕೃತಯಸ್ತಥಾ।।
12322039a ಸೂರ್ಯಾಚಂದ್ರಮಸೌ ವಾಯುರ್ಭೂಮಿರಾಪೋಽಗ್ನಿರೇವ ಚ।
12322039c ಸರ್ವೇ ಚ ನಕ್ಷತ್ರಗಣಾ ಯಚ್ಚ ಭೂತಾಭಿಶಬ್ದಿತಮ್।।
12322040a ಅಧಿಕಾರೇಷು ವರ್ತಂತೇ ಯಥಾಸ್ವಂ ಬ್ರಹ್ಮವಾದಿನಃ।
12322040c ಸರ್ವೇ ಪ್ರಮಾಣಂ ಹಿ ಯಥಾ ತಥೈತಚ್ಚಾಸ್ತ್ರಮುತ್ತಮಮ್।।
12322041a ಭವಿಷ್ಯತಿ ಪ್ರಮಾಣಂ ವೈ ಏತನ್ಮದನುಶಾಸನಮ್।

ವಿಪ್ರರೇ! ನನ್ನ ಪ್ರಸಾದದಿಂದ ಹೇಗೆ ಬ್ರಹ್ಮನು ಪ್ರಮಾಣರೂಪವಾಗಿ ಮಾಡಲ್ಪಟ್ಟಿರುವನೋ, ಮತ್ತು ಕ್ರೋಧದಿಂದ ರುದ್ರನು ಹೇಗೆ ಹುಟ್ಟಿರುವನೋ ಮತ್ತು ಹೇಗೆ ನನ್ನ ಪ್ರಕೃತಿಯಿಂದದ ನೀವುಗಳೂ ಹುಟ್ಟಿರುವಿರೋ, ಸೂರ್ಯ-ಚಂದ್ರರು, ಭೂತಗಳಿಂದ ಕರೆಯಲ್ಪಟ್ಟಿರುವ ವಾಯು-ಭೂಮಿ-ಜಲ-ಅಗ್ನಿಗಳೂ, ಸರ್ವ ನಕ್ಷತ್ರಗಣಗಳೂ ಹುಟ್ಟಿರುವವೋ ಮತ್ತು ತಮ್ಮತ ಮ್ಮ ಅಧಿಕಾರದಲಿದ್ದು ಪ್ರಮಾಣಭೂತರಾಗಿರುವರೋ ಹಾಗೆ ಬ್ರಹ್ಮವಾದಿಗಳಾದ ನೀವು ರಚಿಸಿರುವ ಶಾಸ್ತ್ರವೂ ಲೋಕದಲ್ಲಿ ಪ್ರಮಾಣಭೂತವಾಗಿರಲಿ. ಇದು ನನ್ನ ಆಜ್ಞೆ.

12322041c ಅಸ್ಮಾತ್ಪ್ರವಕ್ಷ್ಯತೇ ಧರ್ಮಾನ್ಮನುಃ ಸ್ವಾಯಂಭುವಃ ಸ್ವಯಮ್।।
12322042a ಉಶನಾ ಬೃಹಸ್ಪತಿಶ್ಚೈವ ಯದೋತ್ಪನ್ನೌ ಭವಿಷ್ಯತಃ।
12322042c ತದಾ ಪ್ರವಕ್ಷ್ಯತಃ ಶಾಸ್ತ್ರಂ ಯುಷ್ಮನ್ಮತಿಭಿರುದ್ಧೃತಮ್।।

ನೀವು ರಚಿಸಿರುವ ಈ ಧರ್ಮಶಾಸ್ತ್ರವನ್ನು ಸ್ವಯಂ ಸ್ವಾಯಂಭುವ ಮನುವು ಉಪದೇಶಿಸುತ್ತಾನೆ. ಭವಿಷ್ಯದಲ್ಲಿ ಉತ್ಪನ್ನರಾಗುವ ಉಶನ-ಬೃಹಸ್ಪತಿಳೂ ನಿಮ್ಮಿಂದ ಹೊರಹೊಮ್ಮಿರುವ ಈ ಶಾಸ್ತ್ರದ ಕುರಿತು ಪ್ರವಚನ ಮಾಡುತ್ತಾರೆ.

12322043a ಸ್ವಾಯಂಭುವೇಷು ಧರ್ಮೇಷು ಶಾಸ್ತ್ರೇ ಚೋಶನಸಾ ಕೃತೇ।
12322043c ಬೃಹಸ್ಪತಿಮತೇ ಚೈವ ಲೋಕೇಷು ಪ್ರವಿಚಾರಿತೇ।।

ಸ್ವಾಯಂಭುವ ಮನುವಿನಿಂದ ಹಾಗೂ ಉಶನ-ಬೃಹಸ್ಪತಿಗಳಿಂದ ರಚಿತಗೊಂಡ ಈ ಶಾಸ್ತ್ರವು ಲೋಕಗಳಲ್ಲಿ ಪ್ರಚಾರಗೊಳ್ಳುತ್ತದೆ.

12322044a ಯುಷ್ಮತ್ಕೃತಮಿದಂ ಶಾಸ್ತ್ರಂ ಪ್ರಜಾಪಾಲೋ ವಸುಸ್ತತಃ।
12322044c ಬೃಹಸ್ಪತಿಸಕಾಶಾದ್ವೈ ಪ್ರಾಪ್ಸ್ಯತೇ ದ್ವಿಜಸತ್ತಮಾಃ।।

ದ್ವಿಜಸತ್ತಮರೇ! ನೀವು ರಚಿಸಿದ ಈ ಶಾತ್ರವನ್ನು ಪ್ರಜಾಪಾಲ ವಸುವು ಮುಂದೆ ಬೃಹಸ್ಪತಿಯಿಂದ ಪಡೆದುಕೊಳ್ಳುತ್ತಾನೆ.

12322045a ಸ ಹಿ ಮದ್ಭಾವಿತೋ ರಾಜಾ ಮದ್ಭಕ್ತಶ್ಚ ಭವಿಷ್ಯತಿ।
12322045c ತೇನ ಶಾಸ್ತ್ರೇಣ ಲೋಕೇಷು ಕ್ರಿಯಾಃ ಸರ್ವಾಃ ಕರಿಷ್ಯತಿ।।

ಆ ರಾಜನು ನನ್ನ ಭಾವಿತನೂ ನನ್ನ ಭಕ್ತನೂ ಆಗುತ್ತಾನೆ. ಅವನು ಇದೇ ಶಾಸ್ತ್ರದಿಂದ ಲೋಕದ ಎಲ್ಲ ಕ್ರಿಯೆಗಳನ್ನೂ ಮಾಡುತ್ತಾನೆ.

12322046a ಏತದ್ಧಿ ಸರ್ವಶಾಸ್ತ್ರಾಣಾಂ ಶಾಸ್ತ್ರಮುತ್ತಮಸಂಜ್ಞಿತಮ್।
12322046c ಏತದರ್ಥ್ಯಂ ಚ ಧರ್ಮ್ಯಂ ಚ ಯಶಸ್ಯಂ7 ಚೈತದುತ್ತಮಮ್।।

ಇದೇ ಸರ್ವಶಾಸ್ತ್ರಗಳಲ್ಲಿ ಉತ್ತಮ ಶಾಸ್ತ್ರವೆಂದು ಪರಿಗಣಿಸಲ್ಪಡುತ್ತದೆ. ಇದರಲ್ಲಿ ಅರ್ಥ, ಧರ್ಮ ಮತ್ತು ಯಶಸ್ಸಿನಿಂದ ಕೂಡಿರುವ ಉತ್ತಮ ಗ್ರಂಥವಾಗುತ್ತದೆ.

12322047a ಅಸ್ಯ ಪ್ರವರ್ತನಾಚ್ಚೈವ ಪ್ರಜಾವಂತೋ ಭವಿಷ್ಯಥ।
12322047c ಸ ಚ ರಾಜಾ ಶ್ರಿಯಾ ಯುಕ್ತೋ ಭವಿಷ್ಯತಿ ಮಹಾನ್ವಸುಃ।।

ಇದನ್ನು ಪ್ರಚುರಪಡಿಸುವುದರಿಂದ ನೀವು ಪ್ರಜಾವಂತರಾಗುವಿರಿ. ರಾಜ ವಸುವೂ ಕೂಡ ಇದರಿಂದ ಮಹಾ ಶ್ರೀಯನ್ನು ಪದುಕೊಳುತ್ತಾನೆ.

12322048a ಸಂಸ್ಥಿತೇ ತು ನೃಪೇ ತಸ್ಮಿನ್ ಶಾಸ್ತ್ರಮೇತತ್ಸನಾತನಮ್।
12322048c ಅಂತರ್ಧಾಸ್ಯತಿ ತತ್ಸತ್ಯಮೇತದ್ವಃ ಕಥಿತಂ ಮಯಾ।।

ಆ ನೃಪನು ದಿವಂಗತನಾದ ಬಳಿದ ಈ ಸನಾತನ ಶಾಸ್ತ್ರವೂ ಲುಪ್ತವಾಗಿ ಹೋಗುತ್ತದೆ. ನೀವು ರಚಿಸಿರುವ ಈ ಶಾಸ್ತ್ರದ ಕುರಿತು ಎಲ್ಲವನ್ನೂ ನಿಮಗೆ ಹೇಳಿದ್ದೇನೆ.”

12322049a ಏತಾವದುಕ್ತ್ವಾ ವಚನಮದೃಶ್ಯಃ ಪುರುಷೋತ್ತಮಃ।
12322049c ವಿಸೃಜ್ಯ ತಾನೃಷೀನ್ಸರ್ವಾನ್ಕಾಮಪಿ ಪ್ರಸ್ಥಿತೋ ದಿಶಮ್।।

ಅದೃಷ್ಯ ಪುರುಷೋತ್ತಮನು ಈ ಮಾತುಗಳನ್ನಾಡಿ, ಆ ಎಲ್ಲ ಋಷಿಗಳನ್ನು ಅಲ್ಲಿಯೇ ಬಿಟ್ಟು ಬಯಸಿದ ದಿಕ್ಕಿನಲ್ಲಿ ಹೊರಟುಹೋದನು.

12322050a ತತಸ್ತೇ ಲೋಕಪಿತರಃ ಸರ್ವಲೋಕಾರ್ಥಚಿಂತಕಾಃ।
12322050c ಪ್ರಾವರ್ತಯಂತ ತಚ್ಚಾಸ್ತ್ರಂ ಧರ್ಮಯೋನಿಂ ಸನಾತನಮ್।।

ಅನಂತರ ಸರ್ವಲೋಕಗಳ ಹಿತಚಿಂತಕರಾದ ಆ ಲೋಕಪಿತೃಗಳು ಸನಾತನ ಧರ್ಮದ ಮೂಲವಾದ ಆ ಶಾಸ್ತ್ರವನ್ನು ಪ್ರಚುರಗೊಳಿಸಿದರು.

12322051a ಉತ್ಪನ್ನೇಽಂಗಿರಸೇ ಚೈವ ಯುಗೇ ಪ್ರಥಮಕಲ್ಪಿತೇ।
12322051c ಸಾಂಗೋಪನಿಷದಂ ಶಾಸ್ತ್ರಂ ಸ್ಥಾಪಯಿತ್ವಾ ಬೃಹಸ್ಪತೌ।।
12322052a ಜಗ್ಮುರ್ಯಥೇಪ್ಸಿತಂ ದೇಶಂ ತಪಸೇ ಕೃತನಿಶ್ಚಯಾಃ।
12322052c ಧಾರಣಾತ್ಸರ್ವಲೋಕಾನಾಂ ಸರ್ವಧರ್ಮಪ್ರವರ್ತಕಾಃ।।

ಪ್ರಥಮ ಕಲ್ಪದ ಪ್ರಥಮ ಯುಗದಲ್ಲಿ ಸಪ್ರಋಷಿಗಳಲ್ಲೊಬ್ಬನಾದ ಅಂಗಿರಸನಿಗೆ ಬೃಹಸ್ಪತಿಯು ಹುಟ್ಟಿದನು. ಸರ್ವಧರ್ಮಪ್ರವರ್ತಕರಾದ ಸರ್ವಲೋಕಗಳನ್ನೂ ಧರಿಸಿರುವ ಆ ಋಷಿಗಳು ತಪಸ್ಸನ್ನಾಚರಿಸಲು ನಿಶ್ಚಯಿಸಿ ಉಪನಿಷತ್ತುಗಳೇ ಮೊದಲಾದ ಅಂಗಗಳಿಂದ ಕೂಡಿದ್ದ ಆ ಶಾಸ್ತ್ರವನ್ನು ಬೃಹಸ್ಪತಿಯಲ್ಲಿ ಸ್ಥಾಪಿಸಿ ಬಯಸಿದ ಪ್ರದೇಶಕ್ಕೆ ಹೊರಟುಹೋದರು.”

ಸಮಾಪ್ತಿ ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ನಾರಾಯಣೀಯೇ ದ್ವಾವಿಂಶಾಧಿಕತ್ರಿಶತತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ನಾರಾಯಣೀಯ ಎನ್ನುವ ಮುನ್ನೂರಾಇಪ್ಪತ್ತೆರಡನೇ ಅಧ್ಯಾಯವು.

  1. ದಿವ್ಯಾವಯರೂಪಾಃ (ಭಾರತ ದರ್ಶನ). ↩︎

  2. ಸಮಮುಷ್ಕಚತುಷ್ಕಾ ಅರ್ಥಾತ್ ಒಂದೇ ಸಮನಾದ ನಾಲ್ಕು ವೃಷಣಗಳುಳ್ಳವರು (ಭಾರತ ದರ್ಶನ). ↩︎

  3. ತನ್ನ ಹಾಸಿಗೆಯಲ್ಲಿಯೂ ಸಿಂಹಾಸನದಲ್ಲಿಯೂ ಅವನಿಗೆ ಸ್ಥಾನವನ್ನಿತ್ತನು. ↩︎

  4. ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ವೈದೈಶ್ಚತುರ್ಭಿಃ ಸಮಿತಂ ಕೃತಂ ಮೇರೌ ಮಹಾಗಿರೌ। ಅಸ್ಮೈಃ ಸಪ್ತಭಿರುದ್ಗೀರ್ಣಂ ಲೋಕಧರ್ಮಮನುತ್ತಮಮ್।। (ಭಾರತ ದರ್ಶನ) ↩︎

  5. ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ಭೂತಭವ್ಯಭವಿಷ್ಯಜ್ಞಾಃ ಸತ್ಯಧರ್ಮಪರಾಯಣಾಃ। (ಭಾರತ ದರ್ಶನ) ↩︎

  6. ಯಥಾ (ಭಾರತ ದರ್ಶನ). ↩︎

  7. ರಹಸ್ಯಂ (ಭಾರತ ದರ್ಶನ). ↩︎