321: ನಾರಾಯಣೀಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 321

ಸಾರ

ಬದರಿಕಾಶ್ರಮದಲ್ಲಿ ನಾರದ-ನಾರಾಯಣರ ಸಂವಾದ (1-43).

12321001 ಯುಧಿಷ್ಠಿರ ಉವಾಚ।
12321001a ಗೃಹಸ್ಥೋ ಬ್ರಹ್ಮಚಾರೀ ವಾ ವಾನಪ್ರಸ್ಥೋಽಥ ಭಿಕ್ಷುಕಃ।
12321001c ಯ ಇಚ್ಚೇತ್ಸಿದ್ಧಿಮಾಸ್ಥಾತುಂ ದೇವತಾಂ ಕಾಂ ಯಜೇತ ಸಃ।।

ಯುಧಿಷ್ಠಿರನು ಹೇಳಿದನು: “ಗೃಹಸ್ಥನಾಗಿರಲೀ ಬ್ರಹ್ಮಚಾರಿಯಾಗಿರಲೀ ವಾನಪ್ರಸ್ಥನಾಗಿರಲಿ ಅಥವಾ ಭಿಕ್ಷುಕನೇ ಆಗಿರಲಿ, ಸಿದ್ಧಿಯನ್ನು ಪಡೆದುಕೊಳ್ಳಲು ಬಯಸುವವನು ಯಾವ ದೇವತೆಯನ್ನು ಪೂಜಿಸಬೇಕು?

12321002a ಕುತೋ ಹ್ಯಸ್ಯ ಧ್ರುವಃ ಸ್ವರ್ಗಃ ಕುತೋ ನಿಃಶ್ರೇಯಸಂ ಪರಮ್।
12321002c ವಿಧಿನಾ ಕೇನ ಜುಹುಯಾದ್ದೈವಂ ಪಿತ್ರ್ಯಂ ತಥೈವ ಚ।।

ಮನುಷ್ಯನಿಗೆ ಅಕ್ಷಯ ಸ್ವರ್ಗವು ಹೇಗೆ ಪ್ರಾಪ್ತವಾಗಬಲ್ಲದು? ಯಾವ ಸಾಧನದಿಂದ ಅವನ ಪರಮ ಕಲ್ಯಾಣವಾಗಬಲ್ಲದು? ಅವನು ಯಾವ ವಿಧದಲ್ಲಿ ದೇವತೆಗಳು ಮತ್ತು ಪಿತೃಗಳನ್ನು ಉದ್ದೇಶಿಸಿ ಹೋಮಮಾಡಬೇಕು?

12321003a ಮುಕ್ತಶ್ಚ ಕಾಂ ಗತಿಂ ಗಚ್ಚೇನ್ಮೋಕ್ಷಶ್ಚೈವ ಕಿಮಾತ್ಮಕಃ।
12321003c ಸ್ವರ್ಗತಶ್ಚೈವ ಕಿಂ ಕುರ್ಯಾದ್ಯೇನ ನ ಚ್ಯವತೇ ದಿವಃ।।

ಮುಕ್ತ ಪುರುಷನಿಗೆ ಯಾವ ಗತಿಯು ಪ್ರಾಪ್ತವಾಗುತ್ತದೆ? ಮೋಕ್ಷದ ಸ್ವರೂಪವ್ಯಾವುದು? ಸ್ವರ್ಗವನ್ನು ತಲುಪಿದವರು ಪುನಃ ಅಲ್ಲಿಂದ ಕೇಳಗೆ ಬೀಳದಿರಲು ಏನು ಮಾಡಬೇಕು?

12321004a ದೇವತಾನಾಂ ಚ ಕೋ ದೇವಃ ಪಿತೃಣಾಂ ಚ ತಥಾ ಪಿತಾ।
12321004c ತಸ್ಮಾತ್ಪರತರಂ ಯಚ್ಚ ತನ್ಮೇ ಬ್ರೂಹಿ ಪಿತಾಮಹ।।

ದೇವತೆಗಳಿಗೂ ದೇವನಾದವನು ಮತ್ತು ಪಿತೃಗಳಿಗೂ ಪಿತನೆಂದೆನಿಸಿಕೊಂಡವನು ಯಾರು? ಪಿತಾಮಹ! ಅಥವಾ ಅದಕ್ಕೂ ಶ್ರೇಷ್ಠ ತತ್ತ್ವವು ಯಾವುದು? ಇದರ ಕುರಿತು ನನಗೆ ಹೇಳು.”

12321005 ಭೀಷ್ಮ ಉವಾಚ।
12321005a ಗೂಢಂ ಮಾಂ ಪ್ರಶ್ನವಿತ್ಪ್ರಶ್ನಂ ಪೃಚ್ಚಸೇ ತ್ವಮಿಹಾನಘ।
12321005c ನ ಹ್ಯೇಷ ತರ್ಕಯಾ ಶಕ್ಯೋ ವಕ್ತುಂ ವರ್ಷಶತೈರಪಿ।।
12321006a ಋತೇ ದೇವಪ್ರಸಾದಾದ್ವಾ ರಾಜನ್ ಜ್ಞಾನಾಗಮೇನ ವಾ।
12321006c ಗಹನಂ ಹ್ಯೇತದಾಖ್ಯಾನಂ ವ್ಯಾಖ್ಯಾತವ್ಯಂ ತವಾರಿಹನ್।।

ಭೀಷ್ಮನು ಹೇಳಿದನು: “ಅನಘ! ಪ್ರಶ್ನೆಗಳನ್ನು ಕೇಳಲು ನಿನಗೆ ಚೆನ್ನಾಗಿ ತಿಳಿದಿದೆ! ಈಗ ನೀನು ನನ್ನಲ್ಲಿ ಅತ್ಯಂತ ಗೂಢ ಪ್ರಶ್ನೆಯನ್ನು ಕೇಳಿದ್ದೀಯೆ. ರಾಜನ್! ಭಗವಂತನ ಕೃಪೆ ಮತ್ತು ಜ್ಞಾನವನ್ನು ನೀಡುವ ಶಾಸ್ತ್ರಗಳ ವಿನಾ ಕೇವಲ ತರ್ಕದಿಂದ ಈ ಪ್ರಶ್ನೆಗಳಿಗೆ ಉತ್ತರವನ್ನು ನೂರು ವರ್ಷಗಳಲ್ಲಿಯೂ ನೀಡಲು ಸಾಧ್ಯವಿಲ್ಲ. ಅರಿಹನ್! ಈ ವಿಷಯವನ್ನು ತಿಳಿಯಲು ಅತ್ಯಂತ ಕಠಿನವಾದರೂ ನಿನಗೋಸ್ಕರವಾಗಿ ಇದರ ವ್ಯಾಖ್ಯೆಯನ್ನು ಮಾಡಲೇ ಬೇಕು.

12321007a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
12321007c ನಾರದಸ್ಯ ಚ ಸಂವಾದಮೃಷೇರ್ನಾರಾಯಣಸ್ಯ ಚ।।

ಈ ವಿಷಯದಲ್ಲಿ ಪುರಾತನ ಇತಿಹಾಸವಾದ ನಾರದ ಮತ್ತು ಋಷಿ ನಾರಾಯಣರ ಸಂವಾದವನ್ನು ಉದಾಹರಿಸುತ್ತಾರೆ.

12321008a ನಾರಾಯಣೋ ಹಿ ವಿಶ್ವಾತ್ಮಾ ಚತುರ್ಮೂರ್ತಿಃ ಸನಾತನಃ।
12321008c ಧರ್ಮಾತ್ಮಜಃ ಸಂಬಭೂವ ಪಿತೈವಂ ಮೇಽಭ್ಯಭಾಷತ।।

ನನ್ನ ತಂದೆಯು ನನಗೆ ಒಮ್ಮೆ ಹೇಳಿದ್ದನು: “ನಾರಾಯಣನೇ ಸಂಪೂರ್ಣ ಜಗತ್ತಿನ ಆತ್ಮ, ಚತುರ್ಮೂರ್ತಿ ಮತ್ತು ಸನಾತನ ದೇವತೆ. ಅವನೇ ಒಮ್ಮೆ ಧರ್ಮನ ಪುತ್ರನ ರೂಪದಲ್ಲಿ ಪ್ರಕಟನಾಗಿದ್ದನು.

12321009a ಕೃತೇ ಯುಗೇ ಮಹಾರಾಜ ಪುರಾ ಸ್ವಾಯಂಭುವೇಽಂತರೇ।
12321009c ನರೋ ನಾರಾಯಣಶ್ಚೈವ ಹರಿಃ ಕೃಷ್ಣಸ್ತಥೈವ ಚ1।।

ಮಹಾರಾಜ! ಹಿಂದಿನ ಸ್ವಾಯಂಭುವ ಮನ್ವಂತರದ ಸತ್ಯಯುಗದಲ್ಲಿ ಆ ಭಗವಂತನ ನಾಲ್ಕು ಅವತಾರಗಳಾಗಿದ್ದವು: ನರ, ನಾರಾಯಣ, ಹರಿ ಮತ್ತು ಕೃಷ್ಣ.

12321010a ತೇಭ್ಯೋ ನಾರಾಯಣನರೌ ತಪಸ್ತೇಪತುರವ್ಯಯೌ।
12321010c ಬದರ್ಯಾಶ್ರಮಮಾಸಾದ್ಯ ಶಕಟೇ ಕನಕಾಮಯೇ।।

ಅವರಲ್ಲಿ ಅವ್ಯಯ ನರ-ನಾರಾಯಣರು ಬದರಿಕಾಶ್ರಮಕ್ಕೆ ಹೋಗಿ ಒಂದು ಸುವರ್ಣಮಯ ರಥದ ಮೇಲೆ ನಿಂತು ಘೋರ ತಪಸ್ಸನ್ನಾಚರಿಸತೊಡಗಿದರು.

12321011a ಅಷ್ಟಚಕ್ರಂ ಹಿ ತದ್ಯಾನಂ ಭೂತಯುಕ್ತಂ ಮನೋರಮಮ್।
12321011c ತತ್ರಾದ್ಯೌ ಲೋಕನಾಥೌ ತೌ ಕೃಶೌ ಧಮನಿಸಂತತೌ।।
12321012a ತಪಸಾ ತೇಜಸಾ ಚೈವ ದುರ್ನಿರೀಕ್ಷೌ ಸುರೈರಪಿ।
12321012c ಯಸ್ಯ ಪ್ರಸಾದಂ ಕುರ್ವಾತೇ ಸ ದೇವೌ ದ್ರಷ್ಟುಮರ್ಹತಿ।।

ಅವರ ಆ ರಥಕ್ಕೆ ಎಂಟು ಚಕ್ರಗಳಿದ್ದವು2 ಮತ್ತು ಅದಕ್ಕೆ ಮನೋಹರ ಪ್ರಾಣಿಗಳನ್ನು ಕಟ್ಟಲಾಗಿತ್ತು. ಆ ಇಬ್ಬರು ಆದ್ಯರೂ ಲೋಕನಾಥರೂ ತಪಸ್ಸನ್ನಾಚರಿಸಿ ಕೃಶರಾಗಿ ಅವರ ಶರೀರದಲ್ಲಿ ಕೇವಲ ದಮನಿಗಳು ಕಾಣುತ್ತಿದ್ದವು. ತಪಸ್ಸಿನಿಂದ ಅವರ ತೇಜಸ್ಸು ಎಷ್ಟು ಬೆಳೆದಿತ್ತು ಅಂದರೆ ದೇವತೆಗಳಿಗೂ ಅವರನ್ನು ನೋಡಲು ಕಷ್ಟವಾಗುತ್ತಿತ್ತು. ಅವರಿಬ್ಬರ ಕೃಪೆಯು ಯಾರ ಮೇಲಿತ್ತೋ ಅವರೇ ಆ ದೇವರಿಬ್ಬರನ್ನೂ ನೋಡಬಹುದಾಗಿತ್ತು.

12321013a ನೂನಂ ತಯೋರನುಮತೇ ಹೃದಿ ಹೃಚ್ಚಯಚೋದಿತಃ।
12321013c ಮಹಾಮೇರೋರ್ಗಿರೇಃ ಶೃಂಗಾತ್ಪ್ರಚ್ಯುತೋ ಗಂಧಮಾದನಮ್।।

ನಿಶ್ಚಯವಾಗಿಯೂ ಅವರಿಬ್ಬರ ಇಚ್ಛಾನುಸಾರವಾಗಿ ತನ್ನ ಹೃದಯದಲ್ಲಿನ ಅಂತರ್ಯಾಮಿಯ ಪ್ರೇರಣೆಯಿಂದ ನಾರದನು ಮಹಾ ಮೇರುಗಿರಿಯ ಶೃಂಗದಿಂದ ಗಂಧಮಾದನ ಪರ್ವತದ ಮೇಲಿ ಇಳಿದು ಬಂದನು.

12321014a ನಾರದಃ ಸುಮಹದ್ಭೂತಂ ಲೋಕಾನ್ಸರ್ವಾನಚೀಚರತ್।
12321014c ತಂ ದೇಶಮಗಮದ್ರಾಜನ್ಬದರ್ಯಾಶ್ರಮಮಾಶುಗಃ।।

ರಾಜನ್! ಶೀಘ್ರವಾಗಿ ಸಂಚರಿಸಬಲ್ಲ ನಾರದನು ಸರ್ವ ಲೋಕಗಳನ್ನೂ ಸಂಚರಿಸುತ್ತಾ ಮಹಾಭೂತಗಳಿಂದ ಆ ಬದರಿಕಾಶ್ರಮ ಪ್ರದೇಶಕ್ಕೆ ಆಗಮಿಸಿದನು.

12321015a ತಯೋರಾಹ್ನಿಕವೇಲಾಯಾಂ ತಸ್ಯ ಕೌತೂಹಲಂ ತ್ವಭೂತ್।
12321015c ಇದಂ ತದಾಸ್ಪದಂ ಕೃತ್ಸ್ನಂ ಯಸ್ಮಿಽಲ್ಲೋಕಾಃ ಪ್ರತಿಷ್ಠಿತಾಃ।।
12321016a ಸದೇವಾಸುರಗಂಧರ್ವಾಃ ಸರ್ಷಿಕಿಂನರಲೇಲಿಹಾಃ।

ಅವರ ಆಹ್ನೀಕವೇಳೆಯು ಹೇಗಿರಬಹುದೆಂಬ ಕುತೂಹಲವು ಅವನಲ್ಲಿತ್ತು. “ನಿಜವಾಗಿಯು ಇದು ಭಗವಂತನ ಸ್ಥಾನವೇ ಆಗಿದೆ. ದೇವಾಸುರಗಂಧರ್ವ ಋಷಿ-ಕಿನ್ನರ-ಉರಗಗಳ ಲೋಕಗಳೆಲ್ಲವೂ ಇಲ್ಲಿಯೇ ಪ್ರತಿಷ್ಠಿತಗೊಂಡಿವೆ!

12321016c ಏಕಾ ಮೂರ್ತಿರಿಯಂ ಪೂರ್ವಂ ಜಾತಾ ಭೂಯಶ್ಚತುರ್ವಿಧಾ।।
12321017a ಧರ್ಮಸ್ಯ ಕುಲಸಂತಾನೋ ಮಹಾನೇಭಿರ್ವಿವರ್ಧಿತಃ।
12321017c ಅಹೋ ಹ್ಯನುಗೃಹೀತೋಽದ್ಯ ಧರ್ಮ ಏಭಿಃ ಸುರೈರಿಹ।
12321017e ನರನಾರಾಯಣಾಭ್ಯಾಂ ಚ ಕೃಷ್ಣೇನ ಹರಿಣಾ ತಥಾ।।

ಇವನು ಮೊದಲು ಒಂದೇ ರೂಪದಲ್ಲಿದ್ದವನು. ಧರ್ಮನ ಕುಲಸಂತಾನವನ್ನು ವಿಸ್ತರಿಸಲು ಅವನೇ ನಾಲ್ಕು ರೂಪಗಳನ್ನು ತಾಳಿದನು. ನಿಜವಾಗಿಯೂ ಇಂದು ಧರ್ಮನು ದೇವತಾಸ್ವರೂಪರಾದ ನರನಾರಾಯಣರಿಂದಲು, ಕೃಷ್ಣನಿಂದಲೂ ಮತ್ತು ಹಾಗೆಯೇ ಹರಿಯಿಂದಲೂ ಅನುಗೃಹೀತನಾಗಿದ್ದಾನೆ!

12321018a ತತ್ರ ಕೃಷ್ಣೋ ಹರಿಶ್ಚೈವ ಕಸ್ಮಿಂಶ್ಚಿತ್ಕಾರಣಾಂತರೇ।
12321018c ಸ್ಥಿತೌ ಧರ್ಮೋತ್ತರೌ ಹ್ಯೇತೌ ತಥಾ ತಪಸಿ ಧಿಷ್ಠಿತೌ।।

ಯಾವುದೋ ಒಂದು ಕಾರಣಾಂತರದಿಂದ ಕೃಷ್ಣ ಮತ್ತು ಹರಿ ಇಬ್ಬರೂ ಧರ್ಮನ ಮಕ್ಕಳಾಗಿ ತಪಸ್ಸಿನಲ್ಲಿ ನಿರತರಾಗಿದ್ದಾರೆ!

12321019a ಏತೌ ಹಿ ಪರಮಂ ಧಾಮ ಕಾನಯೋರಾಹ್ನಿಕಕ್ರಿಯಾ।
12321019c ಪಿತರೌ ಸರ್ವಭೂತಾನಾಂ ದೈವತಂ ಚ ಯಶಸ್ವಿನೌ।
12321019e ಕಾಂ ದೇವತಾಂ ನು ಯಜತಃ ಪಿತೃನ್ವಾ ಕಾನ್ಮಹಾಮತೀ।।

ಪರಮಧಾಮಗಲಾಗಿರುವ ಇವರಿಬ್ಬರ ಆಹ್ನಿಕಕ್ರಿಯೆಗಳು ಹೇಗಿರಬಹುದು? ಈ ಯಶಸ್ವಿಗಳು ಇಬ್ಬರು ಸರ್ವಭೂತಗಳ ಪಿತರರು. ದೇವತೆಗಳು. ಇವರು ಯಾವ ದೇವತೆಗಳನ್ನು ಯಜಿಸುತ್ತಾರೆ? ಈ ಮಹಾಮತಿಗಳು ಯಾವ ಪಿತೃಗಳನ್ನು ಯಜಿಸುತ್ತಾರೆ?”

12321020a ಇತಿ ಸಂಚಿಂತ್ಯ ಮನಸಾ ಭಕ್ತ್ಯಾ ನಾರಾಯಣಸ್ಯ ಹ।
12321020c ಸಹಸಾ ಪ್ರಾದುರಭವತ್ಸಮೀಪೇ ದೇವಯೋಸ್ತದಾ।।

ಹೀಗೆ ಮನಸ್ಸಿನಲ್ಲಿಯೇ ಭಕ್ತಿಯಿಂದ ನಾರಾಯಣನ ಕುರಿತು ಯೋಚಿಸಿ ಕೂಡಲೇ ಆ ದೇವತೆಗಳ ಸಮೀಪದಲ್ಲಿ ಕಾಣಿಸಿಕೊಂಡನು.

12321021a ಕೃತೇ ದೈವೇ ಚ ಪಿತ್ರ್ಯೇ ಚ ತತಸ್ತಾಭ್ಯಾಂ ನಿರೀಕ್ಷಿತಃ।
12321021c ಪೂಜಿತಶ್ಚೈವ ವಿಧಿನಾ ಯಥಾಪ್ರೋಕ್ತೇನ ಶಾಸ್ತ್ರತಃ।।

ದೇವ-ಪಿತೃಕಾರ್ಯಗಳನ್ನು ಪೂರೈಸುತ್ತಲೇ ಅವರು ಅವನನ್ನು ನೋಡಿದರು. ಅವನನ್ನು ಶಾಸ್ತ್ರಗಳಲ್ಲಿ ಹೇಳಿದ ವಿಧಿಗಳಂತೆ ಪೂಜಿಸಿದರು ಕೂಡ.

12321022a ತಂ ದೃಷ್ಟ್ವಾ ಮಹದಾಶ್ಚರ್ಯಮಪೂರ್ವಂ ವಿಧಿವಿಸ್ತರಮ್।
12321022c ಉಪೋಪವಿಷ್ಟಃ ಸುಪ್ರೀತೋ ನಾರದೋ ಭಗವಾನೃಷಿಃ।।

ಹಿಂದೆಂದೂ ಆಗಿರದ ಆ ಆಶ್ಚರ್ಯಕರ ವಿಸ್ತಾರ ವಿಧಿಯನ್ನು ಕಂಡು ಸುಪ್ರೀತನಾದ ನಾರದನು ಅವರ ಬಳಿ ಕುಳಿತುಕೊಂಡನು.

12321023a ನಾರಾಯಣಂ ಸಂನಿರೀಕ್ಷ್ಯ ಪ್ರಸನ್ನೇನಾಂತರಾತ್ಮನಾ।
12321023c ನಮಸ್ಕೃತ್ವಾ ಮಹಾದೇವಮಿದಂ ವಚನಮಬ್ರವೀತ್।।

ನಾರಾಯಣನನ್ನು ನೋಡಿ ಅಂತರಾತ್ಮನಲ್ಲಿಯೇ ಪ್ರಸನ್ನನಾಗಿ ನಮಸ್ಕರಿಗೆ ನಾರದನು ಆ ಮಹಾದೇವನಿಗೆ ಇಂತೆಂದನು.

12321024a ವೇದೇಷು ಸಪುರಾಣೇಷು ಸಾಂಗೋಪಾಂಗೇಷು ಗೀಯಸೇ।
12321024c ತ್ವಮಜಃ ಶಾಶ್ವತೋ ಧಾತಾ ಮತೋಽಮೃತಮನುತ್ತಮಮ್।

“ನೀನು ಹುಟ್ಟಿಲ್ಲದವನು, ಶಾಶ್ವತ, ಧಾತಾ, ಮತ್ತು ಅನುತ್ತಮ ಅಮೃತನೆಂದು ಸಾಂಗೋಪಾಂಗವಾಗಿ ವೇದಗಳಲ್ಲಿ ಪುರಾಣಗಳಲ್ಲಿ ಹಾಡಲಾಗಿದೆ.

12321024e ಪ್ರತಿಷ್ಠಿತಂ ಭೂತಭವ್ಯಂ ತ್ವಯಿ ಸರ್ವಮಿದಂ ಜಗತ್।।
12321025a ಚತ್ವಾರೋ ಹ್ಯಾಶ್ರಮಾ ದೇವ ಸರ್ವೇ ಗಾರ್ಹಸ್ಥ್ಯಮೂಲಕಾಃ।
12321025c ಯಜಂತೇ ತ್ವಾಮಹರಹರ್ನಾನಾಮೂರ್ತಿಸಮಾಸ್ಥಿತಮ್।।

ಹಿಂದಿನ, ಇಂದಿನ ಮತ್ತು ಮುಂದಿನ ಸರ್ವ ಜಗತ್ತುಗಳೂ ನಿನ್ನಲ್ಲಿಯೇ ಪ್ರತಿಷ್ಠಿತಗೊಂಡಿವೆ. ಗ್ರಹಸ್ತಾಶ್ರಮದಿಂದ ಹಿಡಿದು ನಾಲ್ಕೂ ಆಶ್ರಮಗಳೂ ನಾನಾ ರೂಪಗಳಲ್ಲಿರುವ ನಿನ್ನನ್ನೇ ದೇವನೆಂದು ಪೂಜಿಸುತ್ತವೆ.

12321026a ಪಿತಾ ಮಾತಾ ಚ ಸರ್ವಸ್ಯ ಜಗತಃ ಶಾಶ್ವತೋ ಗುರುಃ।
12321026c ಕಂ ತ್ವದ್ಯ ಯಜಸೇ ದೇವಂ ಪಿತರಂ ಕಂ ನ ವಿದ್ಮಹೇ।।

ಸರ್ವ ಜಗತ್ತುಗಳ ಮಾತಾಪಿತನಾಗಿರುವ ಮತ್ತು ಶಾಶ್ವತ ಗುರುವಾಗಿರುವ ನೀನು ಇಂದು ಯಾರನ್ನು ದೇವ ಮತ್ತು ಪಿತೃವೆಂದು ಪೂಜಿಸುತ್ತೀಯೋ ನನಗೆ ತಿಳಿಯದಾಗಿದೆ!”

12321027 ಶ್ರೀಭಗವಾನುವಾಚ।
12321027a ಅವಾಚ್ಯಮೇತದ್ವಕ್ತವ್ಯಮಾತ್ಮಗುಹ್ಯಂ ಸನಾತನಮ್।
12321027c ತವ ಭಕ್ತಿಮತೋ ಬ್ರಹ್ಮನ್ವಕ್ಷ್ಯಾಮಿ ತು ಯಥಾತಥಮ್।।

ಶ್ರೀಭಗವಾನನು ಹೇಳಿದನು: “ಬ್ರಹ್ಮನ್! ಇದನ್ನು ಹೇಳಬಾರದು. ಆದರೂ ಅತ್ಯಂತ ಭಕ್ತಿಯಿರುವ ನಿನಗೆ ಈ ಸನಾತನ ಆತ್ಮರಹಸ್ಯವನ್ನು ಇದ್ದದ್ದನ್ನು ಇದ್ದಹಾಗೆ ಹೇಳುತ್ತೇನೆ.

12321028a ಯತ್ತತ್ಸೂಕ್ಷ್ಮಮವಿಜ್ಞೇಯಮವ್ಯಕ್ತಮಚಲಂ ಧ್ರುವಮ್।
12321028c ಇಂದ್ರಿಯೈರಿಂದ್ರಿಯಾರ್ಥೈಶ್ಚ ಸರ್ವಭೂತೈಶ್ಚ ವರ್ಜಿತಮ್।।
12321029a ಸ ಹ್ಯಂತರಾತ್ಮಾ ಭೂತಾನಾಂ ಕ್ಷೇತ್ರಜ್ಞಶ್ಚೇತಿ ಕಥ್ಯತೇ।
12321029c ತ್ರಿಗುಣವ್ಯತಿರಿಕ್ತೋಽಸೌ ಪುರುಷಶ್ಚೇತಿ ಕಲ್ಪಿತಃ।
12321029e ತಸ್ಮಾದವ್ಯಕ್ತಮುತ್ಪನ್ನಂ ತ್ರಿಗುಣಂ ದ್ವಿಜಸತ್ತಮ।।
12321030a ಅವ್ಯಕ್ತಾ ವ್ಯಕ್ತಭಾವಸ್ಥಾ ಯಾ ಸಾ ಪ್ರಕೃತಿರವ್ಯಯಾ।

ದ್ವಿಜಸತ್ತಮ1 ಸೂಕ್ಷ್ಮವಾಗಿರುವ, ಅವಿಜ್ಞೇಯವಾಗಿರುವ, ಅಚಲವೂ, ಧೃವವೂ ಆಗಿರುವ, ಇಂದ್ರಿಯಗಳಿಂದ ಮತ್ತು ಅವುಗಳ ಅರ್ಥಗಳಿಂದಲೂ ಸರ್ವಭೂತಗಳಿಗೂ ವರ್ಜಿತವಾಗಿರುವ ಅದೇ ಎಲ್ಲ ಭೂತಗಳ ಅಂತರಾತ್ಮವು. ಅದನ್ನು ಕ್ಷೇತ್ರಜ್ಞನೆಂದೂ, ತ್ರಿಗುಣಗಳಿಂದ ಅತಿರಿಕ್ತನಾದ ಪುರುಷನೆಂದೂ ಹೇಳುತ್ತಾರೆ. ಆ ಅವ್ಯಕ್ತದಿಂದ ತ್ರಿಗುಣವು ಉತ್ಪತ್ತಿಯಾಯಿತು. ಅವ್ಯಕ್ತವೇ ವ್ಯಕ್ತಭಾವವನ್ನು ಹೊಂದಿದಾಗ ಅವ್ಯಯ ಪ್ರಕೃತಿ ಎನಿಸಿಕೊಳ್ಳುತ್ತದೆ.

12321030c ತಾಂ ಯೋನಿಮಾವಯೋರ್ವಿದ್ಧಿ ಯೋಽಸೌ ಸದಸದಾತ್ಮಕಃ।
12321030e ಆವಾಭ್ಯಾಂ ಪೂಜ್ಯತೇಽಸೌ ಹಿ ದೈವೇ ಪಿತ್ರ್ಯೇ ಚ ಕಲ್ಪಿತೇ।।

ಸದಾಸದಾತ್ಮಕನಾದ ಅವನೇ ನಮ್ಮೀರ್ವರ ಯೋನಿಯೆಂದು ತಿಳಿ. ನಾವಿಬ್ಬರೂ ಅವನನ್ನೇ ಪೂಜಿಸುತ್ತೇವೆ. ಅವನನ್ನೇ ನಾವು ನಮ್ಮ ದೇವತೆ ಮತ್ತು ಪಿತೃವೆಂದು ಕಲ್ಪಿಸಿಕೊಳ್ಳುತ್ತೇವೆ.

12321031a ನಾಸ್ತಿ ತಸ್ಮಾತ್ಪರೋಽನ್ಯೋ ಹಿ ಪಿತಾ ದೇವೋಽಥ ವಾ ದ್ವಿಜಃ।
12321031c ಆತ್ಮಾ ಹಿ ನೌ ಸ ವಿಜ್ಞೇಯಸ್ತತಸ್ತಂ ಪೂಜಯಾವಹೇ।।

ದ್ವಿಜ! ಅವನಿಗಿಂತಲೂ ಶ್ರೇಷ್ಠನಾದ ದೇವತೆಯಾಗಲೀ ಪಿತೃವಾಗಲೀ ಬೇರೆ ಯಾರೂ ಇಲ್ಲ. ಅವನೇ ನಮ್ಮೆಲ್ಲರ ಆತ್ಮಸ್ವರೂಪನಾಗಿದ್ದಾನೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಆದುದರಿಂದ ಅವನನ್ನೇ ನಾವು ನಿತ್ಯವೂ ಪೂಜಿಸುತ್ತೇವೆ.

12321032a ತೇನೈಷಾ ಪ್ರಥಿತಾ ಬ್ರಹ್ಮನ್ಮರ್ಯಾದಾ ಲೋಕಭಾವಿನೀ।
12321032c ದೈವಂ ಪಿತ್ರ್ಯಂ ಚ ಕರ್ತವ್ಯಮಿತಿ ತಸ್ಯಾನುಶಾಸನಮ್।।

ಲೋಕದ ಉನ್ನತಿಯ ಮರ್ಯಾದೆಯನ್ನು ಅವನೇ ಸ್ಥಾಪಿಸಿದ್ದಾನೆ. ದೈವ ಮತ್ತು ಪಿತೃ ಕರ್ಮಗಳನ್ನು ಮಾಡಬೇಕೆಂಬುದು ಅವನ ಅನುಶಾಸನವೇ ಆಗಿದೆ.

12321033a ಬ್ರಹ್ಮಾ ಸ್ಥಾಣುರ್ಮನುರ್ದಕ್ಷೋ ಭೃಗುರ್ಧರ್ಮಸ್ತಪೋ ದಮಃ।
12321033c ಮರೀಚಿರಂಗಿರಾತ್ರಿಶ್ಚ ಪುಲಸ್ತ್ಯಃ ಪುಲಹಃ ಕ್ರತುಃ।।
12321034a ವಸಿಷ್ಠಃ ಪರಮೇಷ್ಠೀ ಚ ವಿವಸ್ವಾನ್ಸೋಮ ಏವ ಚ।
12321034c ಕರ್ದಮಶ್ಚಾಪಿ ಯಃ ಪ್ರೋಕ್ತಃ ಕ್ರೋಧೋ ವಿಕ್ರೀತ ಏವ ಚ।।
12321035a ಏಕವಿಂಶತಿರುತ್ಪನ್ನಾಸ್ತೇ ಪ್ರಜಾಪತಯಃ ಸ್ಮೃತಾಃ।
12321035c ತಸ್ಯ ದೇವಸ್ಯ ಮರ್ಯಾದಾಂ ಪೂಜಯಂತಿ ಸನಾತನೀಮ್।।

ಬ್ರಹ್ಮ, ಸ್ಥಾಣು, ಮನು, ದಕ್ಷ, ಭೃಗು, ಧರ್ಮ, ತಪಸ್ಸು, ದಮ, ಮರೀಚಿ, ಅಂಗಿರಸ, ಅತ್ರಿ, ಪುಲಸ್ತ್ಯ, ಪುಲಹ, ಕ?ರತು, ವಸಿಷ್ಠ, ಪರಮೇಷ್ಠೀ, ವಿವಸ್ವಾನ್, ಸೋಮ, ಕರ್ದಮ, ಕ್ರೋಧ, ವಿಕ್ರೀತ – ಈ ಇಪ್ಪತ್ತೊಂಡು ಪ್ರಜಾಪತಿಗಳು ಅವನಿಂದಲೇ ಹುಟ್ಟಿದರೆಂಬ ಸ್ಮೃತಿಯಿದೆ. ಅವರು ಆ ದೇವನ ಸನಾತನ ಮರ್ಯಾದೆಯನ್ನು ಗೌರವಿಸುತ್ತಾರೆ.

12321036a ದೈವಂ ಪಿತ್ರ್ಯಂ ಚ ಸತತಂ ತಸ್ಯ ವಿಜ್ಞಾಯ ತತ್ತ್ವತಃ।
12321036c ಆತ್ಮಪ್ರಾಪ್ತಾನಿ ಚ ತತೋ ಜಾನಂತಿ3 ದ್ವಿಜಸತ್ತಮಾಃ।।

ದ್ವಿಜಸತ್ತಮರು ದೈವ ಮತ್ತು ಪಿತೃಕಾರ್ಯಗಳನ್ನು ತತ್ತ್ವತಃ ತಿಳಿದುಕೊಂಡು ಆತ್ಮ ಪ್ರಾಪ್ತಿಯನ್ನು ತಿಳಿದಿರುತ್ತಾರೆ.

12321037a ಸ್ವರ್ಗಸ್ಥಾ ಅಪಿ ಯೇ ಕೇ ಚಿತ್ತಂ ನಮಸ್ಯಂತಿ ದೇಹಿನಃ।
12321037c ತೇ ತತ್ಪ್ರಸಾದಾದ್ಗಚ್ಚಂತಿ ತೇನಾದಿಷ್ಟಫಲಾಂ ಗತಿಮ್।।

ಸ್ವರ್ಗದಲ್ಲಿರುವ ದೇಹಿಗಳಲ್ಲಿ ಕೆಲವರು ಕೂಡಾ ಅವನನ್ನು ನಮಸ್ಕರಿಸುತ್ತಾರೆ. ಅವನ ಪ್ರಸಾದದಿಂದ ಸ್ವರ್ಗಕ್ಕಿಂತಲೂ ಹೆಚ್ಚು ಇಷ್ಟಫಲವನ್ನು ನೀಡುವ ಗತಿಯನ್ನು ಹೊಂದುತ್ತಾರೆ.

12321038a ಯೇ ಹೀನಾಃ ಸಪ್ತದಶಭಿರ್ಗುಣೈಃ ಕರ್ಮಭಿರೇವ ಚ।
12321038c ಕಲಾಃ ಪಂಚದಶ ತ್ಯಕ್ತ್ವಾ ತೇ ಮುಕ್ತಾ ಇತಿ ನಿಶ್ಚಯಃ।।

ಹದಿನೈದು ಕಲೆಗಳನ್ನೂ ಪರಿತ್ಯಜಿಸಿ ಹದಿನೇಳು ಗುಣಗಳಿಂದಲೂ4 ಕರ್ಮಗಳಿಂದಲೂ ಹೀನರಾಗಿರುವವರು ಮುಕ್ತರೇ ಸರಿ. ಇದು ನಿಶ್ಚಯ.

12321039a ಮುಕ್ತಾನಾಂ ತು ಗತಿರ್ಬ್ರಹ್ಮನ್ ಕ್ಷೇತ್ರಜ್ಞ ಇತಿ ಕಲ್ಪಿತಃ।
12321039c ಸ ಹಿ ಸರ್ವಗತಶ್ಚೈವ5 ನಿರ್ಗುಣಶ್ಚೈವ ಕಥ್ಯತೇ।।

ಬ್ರಹ್ಮನ್! ಮುಕ್ತರಾದವರಿಗೆ ಕ್ಷೇತ್ರಜ್ಞನೇ ಗತಿಯೆಂದು ಕಲ್ಪಿತವಾಗಿದೆ. ಅವನನ್ನು ಸರ್ವರ ಗತಿಯೆಂದೂ ನಿರ್ಗುಣನೆಂದೂ ಕರೆಯುತ್ತಾರೆ.

12321040a ದೃಶ್ಯತೇ ಜ್ಞಾನಯೋಗೇನ ಆವಾಂ ಚ ಪ್ರಸೃತೌ ತತಃ।
12321040c ಏವಂ ಜ್ಞಾತ್ವಾ ತಮಾತ್ಮಾನಂ ಪೂಜಯಾವಃ ಸನಾತನಮ್।।

ಜ್ಞಾನಯೋಗದಿಂದ ಅವನನ್ನು ಕಾಣಬಹುದು. ನಾವಿಬ್ಬರೂ ಅವನಿಂದ ಹೊರಬಂದಿದ್ದೇವೆ. ಇದನ್ನು ತಿಳಿದುಕೊಂಡು ನಾವು ಆ ಸನಾತನ ಆತ್ಮನನ್ನು ಪೂಜಿಸುತ್ತೇವೆ.

12321041a ತಂ ವೇದಾಶ್ಚಾಶ್ರಮಾಶ್ಚೈವ ನಾನಾತನುಸಮಾಸ್ಥಿತಾಃ6
12321041c ಭಕ್ತ್ಯಾ ಸಂಪೂಜಯಂತ್ಯಾದ್ಯಂ ಗತಿಂ ಚೈಷಾಂ ದದಾತಿ ಸಃ।।

ಅವನನ್ನು ವೇದಗಳು, ಆಶ್ರಮಗಳು, ಮತ್ತು ನಾನಾ ಶರೀರಗಳಲ್ಲಿರುವವರು ಭಕ್ತಿಯಿಂದ ಪೂಜಿಸುತ್ತಾರೆ. ಅವನು ಅವುಗಳಿಗೆ ಸದ್ಯದಲ್ಲಿಯೇ ಉತ್ತಮ ಗತಿಯನ್ನೂ ದಯಪಾಲಿಸುತ್ತಾನೆ.

12321042a ಯೇ ತು ತದ್ಭಾವಿತಾ ಲೋಕೇ ಏಕಾಂತಿತ್ವಂ ಸಮಾಸ್ಥಿತಾಃ।
12321042c ಏತದಭ್ಯಧಿಕಂ ತೇಷಾಂ ಯತ್ತೇ ತಂ ಪ್ರವಿಶಂತ್ಯುತ।।

ಲೋಕದಲ್ಲಿ ಯಾರು ಏಕಾಂತಿತ್ತ್ವದಲ್ಲಿ ಇದ್ದುಕೊಂಡು ಅವನ ಸ್ಮರಣೆಯನ್ನು ಮಾಡುವರೋ ಅವರು ಅವನನ್ನು ಪ್ರವೇಶಿಸಿ ಅತ್ಯಧಿಕ ಲಾಭವನ್ನು ಪಡೆದುಕೊಳ್ಳುತ್ತಾರೆ.

12321043a ಇತಿ ಗುಹ್ಯಸಮುದ್ದೇಶಸ್ತವ ನಾರದ ಕೀರ್ತಿತಃ।
12321043c ಭಕ್ತ್ಯಾ ಪ್ರೇಮ್ಣಾ ಚ ವಿಪ್ರರ್ಷೇ ಅಸ್ಮದ್ಭಕ್ತ್ಯಾ ಚ ತೇ ಶ್ರುತಃ।।

ನಾರದ! ವಿಪ್ರರ್ಷೇ! ಅವನ ಮೇಲಿರುವ ನಿನ್ನ ಭಕ್ತಿಯಿಂದ ಮತ್ತು ನಮ್ಮನ್ನೂ ಭಕ್ತಿ-ಪ್ರೇಮಗಳಿಂದ ಕೇಳಿದ್ದುದರಿಂದ ಅತ್ಯಂತ ರಹಸ್ಯವಾದ ಈ ವಿಷಯವನ್ನು ಹೇಳಿದ್ದೇನೆ.””

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಏಕವಿಂಶಾಧಿಕತ್ರಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಮುನ್ನೂರಾಇಪ್ಪತ್ತೊಂದನೇ ಅಧ್ಯಾಯವು.


  1. ಕೃಷ್ಣಃ ಸ್ವಯಂಭುವಃ (ಭಾರತ ದರ್ಶನ). ↩︎

  2. ಅಷ್ಟಚಕ್ರಯುಕ್ತ ಈ ರಥವು ಶ್ರೀ ಅಷ್ಟಾಕ್ಷರ ಮಂತ್ರದ ಪ್ರತೀಕವೆಂದು ಹೇಳುತ್ತಾರೆ. ಕಲ್ಯಾಣಮಾವಹತು ಕಾರ್ತಯುಗಂ ಸ್ವಧರ್ಮಂ। ಪ್ರಖ್ಯಾಪಯನ್ ಪ್ರಣಿಹಿತೇಷು ನರಾಧಿಕೇಷು। ಆದ್ಯಂ ಕಮಪ್ಯಧಿಗತೋ ರಥಮಷ್ಟಚಕ್ರಂ। ಬಿಂಧುಸ್ಸತಾಂ ಬದರಿಕಾಶ್ರಮತಾಪಸೋ ನಃ।। - ನಿಗಮಾಂತಮಹಾದೇಶಿಕರ ರಹಸ್ಯತ್ರಯಸಾರ. ↩︎

  3. ತತಃ ಪ್ರಾಪ್ನುವಂತಿ (ಭಾರತ ದರ್ಶನ). ↩︎

  4. ಗುಣಗಳ ಮತ್ತು ಕಲೆಗಳ ವರ್ಣನೆಯು ಹಿಂದೆ ಜನಕ-ಸುಲಭಾ ಸಂವಾದದಲ್ಲಿ ಬಂದಿದೆ. ↩︎

  5. ಸರ್ವಗುಣಶ್ಚೈವ (ಭಾರತ ದರ್ಶನ). ↩︎

  6. ನಾನಾಮತಸಮಾಸ್ಥಿತಾಃ (ಭಾರತ ದರ್ಶನ). ↩︎