320: ಶುಕೋತ್ಪತನಸಮಾಪ್ತಿಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 320

ಸಾರ

ಶುಕನಿಗೆ ಪರಮ ಪದ ಪ್ರಾಪ್ತಿ (1-19); ಪುತ್ರಶೋಕ ಪೀಡಿತನಾದ ವ್ಯಾಸನಿಗೆ ಮಹಾದೇವನಿಂದ ಸಮಾಧಾನ (20-41).

12320001 ಭೀಷ್ಮ ಉವಾಚ।
12320001a ಇತ್ಯೇವಮುಕ್ತ್ವಾ ವಚನಂ ಬ್ರಹ್ಮರ್ಷಿಃ ಸುಮಹಾತಪಾಃ।
12320001c ಪ್ರಾತಿಷ್ಠತ ಶುಕಃ ಸಿದ್ಧಿಂ ಹಿತ್ವಾ ಲೋಕಾಂಶ್ಚತುರ್ವಿಧಾನ್।।
12320002a ತಮೋ ಹ್ಯಷ್ಟವಿಧಂ ಹಿತ್ವಾ ಜಹೌ ಪಂಚವಿಧಂ ರಜಃ।
12320002c ತತಃ ಸತ್ತ್ವಂ ಜಹೌ ಧೀಮಾಂಸ್ತದದ್ಭುತಮಿವಾಭವತ್।।

ಭೀಷ್ಮನು ಹೇಳಿದನು: “ಈ ಮಾತನ್ನು ಹೇಳಿ ಸುಮಹಾತಪಸ್ವೀ ಬ್ರಹ್ಮರ್ಷಿಯು ಮುಂದುವರಿದನು. ಧೀಮಂತ ಶುಕನು ನಾಲ್ಕು ವಿಧದ ಲೋಕಗಳನ್ನೂ, ಎಂಟು ವಿಧದ ತಮೋಗುಣವನ್ನೂ, ಐದು ವಿಧದ ರಜೋಗುಣವನ್ನೂ ತ್ಯಜಿಸಿ ನಂತರದ ಸತ್ತ್ವಗುಣವನ್ನೂ ತ್ಯಜಿಸಿದನು. ಅದೊಂದು ಅದ್ಭುತವಾಗಿತ್ತು.

12320003a ತತಸ್ತಸ್ಮಿನ್ ಪದೇ ನಿತ್ಯೇ ನಿರ್ಗುಣೇ ಲಿಂಗವರ್ಜಿತೇ।
12320003c ಬ್ರಹ್ಮಣಿ ಪ್ರತ್ಯತಿಷ್ಠತ್ ಸ ವಿಧೂಮೋಽಗ್ನಿರಿವ ಜ್ವಲನ್।।

ಅವನು ಆ ನಿತ್ಯ, ನಿರ್ಗುಣ, ಲಿಂಗವರ್ಜಿತ ಬ್ರಹ್ಮನಲ್ಲಿ ಹೊಗೆಯಿಲ್ಲದ ಅಗ್ನಿಯಂತೆ ಪ್ರಜ್ವಲಿಸುತ್ತಾ ನಿಂತುಕೊಂಡನು.

12320004a ಉಲ್ಕಾಪಾತಾ ದಿಶಾಂ ದಾಹಾ ಭೂಮಿಕಂಪಸ್ತಥೈವ ಚ।
12320004c ಪ್ರಾದುರ್ಭೂತಾಃ ಕ್ಷಣೇ ತಸ್ಮಿಂಸ್ತದದ್ಭುತಮಿವಾಭವತ್।।

ಆ ಅದ್ಭುತವು ನಡೆಯಲು ಕ್ಷಣದಲ್ಲಿಯೇ ಉಲ್ಕಾಪಾತಗಳು ದಿಕ್ಕುಗಳನ್ನು ಬೆಳಗಿದವು. ಭೂಮಿಯು ಕಂಪಿಸಿತು.

12320005a ದ್ರುಮಾಃ ಶಾಖಾಶ್ಚ ಮುಮುಚುಃ ಶಿಖರಾಣಿ ಚ ಪರ್ವತಾಃ।
12320005c ನಿರ್ಘಾತಶಬ್ದೈಶ್ಚ ಗಿರಿರ್ಹಿಮವಾನ್ ದೀರ್ಯತೀವ ಹ।।

ಮರಗಳಿಂದ ಶಾಖೆಗಳು ತುಂಡಾದವು. ಪರ್ವತಗಳು ಶಿಖರಗಳನ್ನು ಕಳೆದುಕೊಂಡವು. ಹಿಮವಂತನ ಗಿರಿಯು ಸೀಳುತ್ತಿದೆಯೋ ಎಂಬಂತೆ ನಿರ್ಘಾತ ಶಬ್ದಗಳಾದವು.

12320006a ನ ಬಭಾಸೇ ಸಹಸ್ರಾಂಶುರ್ನ ಜಜ್ವಾಲ ಚ ಪಾವಕಃ।
12320006c ಹ್ರದಾಶ್ಚ ಸರಿತಶ್ಚೈವ ಚುಕ್ಷುಭುಃ ಸಾಗರಾಸ್ತಥಾ।।

ಸಹಸ್ರಾಂಶುವು ಬೆಳಗಲಿಲ್ಲ. ಪಾವಕನು ಪ್ರಜ್ವಲಿಸಲಿಲ್ಲ. ಸರೋವರಗಳೂ, ನದಿಗಳೂ, ಮತ್ತು ಸಾಗರಗಳೂ ಉಕ್ಕಿ ಬಂದವು.

12320007a ವವರ್ಷ ವಾಸವಸ್ತೋಯಂ ರಸವಚ್ಚ ಸುಗಂಧಿ ಚ।
12320007c ವವೌ ಸಮೀರಣಶ್ಚಾಪಿ ದಿವ್ಯಗಂಧವಹಃ ಶುಚಿಃ।।

ವಾಸವನು ಸುಗಂಧಯುಕ್ತವಾದ ಮತ್ತು ರಸವತ್ತಾದ ಮಳೆಯನ್ನು ಸುರಿಸಿದನು. ವಾಯುವೂ ಕೂಡ ಶುಚಿಯಾದ ದಿವ್ಯಗಂಧವನ್ನು ಹೊತ್ತು ಬೀಸಿದನು.

12320008a ಸ ಶೃಂಗೇಽಪ್ರತಿಮೇ ದಿವ್ಯೇ ಹಿಮವನ್ಮೇರುಸಂಭವೇ।
12320008c ಸಂಶ್ಲಿಷ್ಟೇ ಶ್ವೇತಪೀತೇ ದ್ವೇ ರುಕ್ಮರೂಪ್ಯಮಯೇ ಶುಭೇ।।
12320009a ಶತಯೋಜನವಿಸ್ತಾರೇ ತಿರ್ಯಗೂರ್ಧ್ವಂ ಚ ಭಾರತ।
12320009c ಉದೀಚೀಂ ದಿಶಮಾಶ್ರಿತ್ಯ ರುಚಿರೇ ಸಂದದರ್ಶ ಹ।।

ಭಾರತ! ಉತ್ತರದ ದಿಶೆಯಲ್ಲಿ ಹೋಗುತ್ತಿದ್ದ ಅವನು ದಿವ್ಯ ಹಿಮವತ್ ಮತ್ತು ಮೇರುಪರ್ವತಗಳ ಅಪ್ರತಿಮ ಬೆಳ್ಳಿಯ ಬಿಳಿ ಮತ್ತು ಬಂಗಾರದ ಹೊಂಬಣ್ಣದ ಶುಭ ಶೃಂಗಗಳು ಒಂದಕ್ಕೊಂದು ತಾಗಿಕೊಂಡಿರುವ ಸುಂದರ ದೃಶ್ಯವನ್ನು ನೋಡಿದನು.

12320010a ಸೋಽವಿಶಂಕೇನ ಮನಸಾ ತಥೈವಾಭ್ಯಪತಚ್ಚುಕಃ।
12320010c ತತಃ ಪರ್ವತಶೃಂಗೇ ದ್ವೇ ಸಹಸೈವ ದ್ವಿಧಾಕೃತೇ।
12320010e ಅದೃಶ್ಯೇತಾಂ ಮಹಾರಾಜ ತದದ್ಭುತಮಿವಾಭವತ್।।

ಮಹಾರಾಜ! ಶುಕನು ಯಾವ ಶಂಕೆಯೂ ಇಲ್ಲದೇ ಆ ಶಿಖರಗಳನ್ನು ಏರಿದನು. ಆಗ ಕೂಡಲೇ ಆ ಪರ್ವತ ಶಿಖರಗಳು ಎರಡು ಭಾಗಗಳಾಗಿ ಸೀಳಿ ಹೋದವು. ಅದೊಂದು ಅದ್ಭುತವಾಗಿ ತೋರಿತು.

12320011a ತತಃ ಪರ್ವತಶೃಂಗಾಭ್ಯಾಂ ಸಹಸೈವ ವಿನಿಃಸೃತಃ।
12320011c ನ ಚ ಪ್ರತಿಜಘಾನಾಸ್ಯ ಸ ಗತಿಂ ಪರ್ವತೋತ್ತಮಃ।।

ಆಗ ಕೂಡಲೇ ಅವನು ಆ ಎರಡು ಪರ್ವತಶೃಂಗಗಳ ಮಧ್ಯದಿಂದ ಹೊರಬಂದನು. ಮುಂದೆ ಹೋಗುತ್ತಿದ್ದ ಶುಕನ ಮಾರ್ಗವನ್ನು ಆ ಪರ್ವತೋತ್ತಮನು ಮತ್ತೆ ತಡೆಯಲಿಲ್ಲ.

12320012a ತತೋ ಮಹಾನಭೂಚ್ಚಬ್ದೋ ದಿವಿ ಸರ್ವದಿವೌಕಸಾಮ್।
12320012c ಗಂಧರ್ವಾಣಾಮೃಷೀಣಾಂ ಚ ಯೇ ಚ ಶೈಲನಿವಾಸಿನಃ।।

ಆಗ ದಿವಿಯಲ್ಲಿ ಸರ್ವದಿವೌಕಸರೂ ಗಂಧರ್ವ-ಋಷಿಗಳೂ ಮತ್ತು ಆ ಶೈಲನಿವಾಸಿಗಳೂ ಮಹಾ ಹರ್ಷೋದ್ಗಾರ ಮಾಡಿದರು.

12320013a ದೃಷ್ಟ್ವಾ ಶುಕಮತಿಕ್ರಾಂತಂ ಪರ್ವತಂ ಚ ದ್ವಿಧಾಕೃತಮ್।
12320013c ಸಾಧು ಸಾಧ್ವಿತಿ ತತ್ರಾಸೀನ್ನಾದಃ ಸರ್ವತ್ರ ಭಾರತ।।

ಭಾರತ! ಎರಡಾಗಿ ಸೀಳಿಹೋದ ಪರ್ವತವನ್ನು ದಾಟಿ ಮುಂದೆ ಹೋಗುತ್ತಿದ್ದ ಆ ಶುಕನನ್ನು ನೋಡಿ “ಸಾಧು! ಸಾಧು!” ಎಂದು ಎಲ್ಲಕಡೆ ನಾದಗಳಾದವು.

12320014a ಸ ಪೂಜ್ಯಮಾನೋ ದೇವೈಶ್ಚ ಗಂಧರ್ವೈರೃಷಿಭಿಸ್ತಥಾ।
12320014c ಯಕ್ಷರಾಕ್ಷಸಸಂಘೈಶ್ಚ ವಿದ್ಯಾಧರಗಣೈಸ್ತಥಾ।।

ದೇವತೆಗಳು, ಗಂಧರ್ವರು, ಋಷಿಗಳು, ಯಕ್ಷ-ರಾಕ್ಷಸ ಸಂಘಗಳು ಮತ್ತು ವಿದ್ಯಾಧರಗಣಗಳು ಅವನನ್ನು ಪೂಜಿಸಿದರು.

12320015a ದಿವ್ಯೈಃ ಪುಷ್ಪೈಃ ಸಮಾಕೀರ್ಣಮಂತರಿಕ್ಷಂ ಸಮಂತತಃ।
12320015c ಆಸೀತ್ಕಿಲ ಮಹಾರಾಜ ಶುಕಾಭಿಪತನೇ ತದಾ।।

ಮಹಾರಾಜ! ಶುಕನು ಮೇಲೆ ಹೋಗುತ್ತಿದ್ದಾಗ ಅಂತರಿಕ್ಷದ ಎಲ್ಲಕಡೆ ದಿವ್ಯ ಪುಷ್ಪಗಳು ಹರಡಿಹೋಗಿದ್ದವು.

12320016a ತತೋ ಮಂದಾಕಿನೀಂ ರಮ್ಯಾಮುಪರಿಷ್ಟಾದಭಿವ್ರಜನ್।
12320016c ಶುಕೋ ದದರ್ಶ ಧರ್ಮಾತ್ಮಾ ಪುಷ್ಪಿತದ್ರುಮಕಾನನಾಮ್।।

ಮೇಲು ಮೇಲಕ್ಕೆ ಹೋಗುತ್ತಿದ್ದಾಗ ಧರ್ಮಾತ್ಮ ಶುಕನು ಪುಷ್ಪಿತ ವೃಕ್ಷ-ಕಾನನಗಳಿಂದ ಕೂಡಿದ್ದ ರಮ್ಯವಾದ ಮಂದಾಕಿನೀ ನದಿಯನ್ನು ನೋಡಿದನು.

12320017a ತಸ್ಯಾಂ ಕ್ರೀಡಂತ್ಯಭಿರತಾಃ ಸ್ನಾಂತಿ ಚೈವಾಪ್ಸರೋಗಣಾಃ।
12320017c ಶೂನ್ಯಾಕಾರಂ ನಿರಾಕಾರಾಃ ಶುಕಂ ದೃಷ್ಟ್ವಾ ವಿವಾಸಸಃ।।

ಅದರಲ್ಲಿ ಜಲಕ್ರೀಡೆಯನ್ನಾಡುತ್ತಿದ್ದ ಅಪ್ಸರಗಣಗಳು ನಗ್ನರಾಗಿದ್ದರೂ ಶೂನ್ಯಾಕಾರ ನಿರಾಕಾರ ಶುಕನನ್ನು ನೋಡಿ ಯಾವರೀತಿಯ ವಿಕಾರವನ್ನೂ ಹೊಂದಲಿಲ್ಲ.

12320018a ತಂ ಪ್ರಕ್ರಮಂತಮಾಜ್ಞಾಯ ಪಿತಾ ಸ್ನೇಹಸಮನ್ವಿತಃ।
12320018c ಉತ್ತಮಾಂ ಗತಿಮಾಸ್ಥಾಯ ಪೃಷ್ಠತೋಽನುಸಸಾರ ಹ।।

ಹೀಗೆ ಶುಕನು ಉತ್ತಮ ಮಾರ್ಗದಲ್ಲಿ ಹೊರಟುಹೋದುದನ್ನು ತಿಳಿದ ಅವನ ಪಿತ ವ್ಯಾಸನು ಸ್ನೇಹಸಮನ್ವಿತನಾಗಿ ಅವನನ್ನು ಹಿಂಬಾಲಿಸಿ ಹೋದನು.

12320019a ಶುಕಸ್ತು ಮಾರುತಾದೂರ್ಧ್ವಂ ಗತಿಂ ಕೃತ್ವಾಂತರಿಕ್ಷಗಾಮ್।
12320019c ದರ್ಶಯಿತ್ವಾ ಪ್ರಭಾವಂ ಸ್ವಂ ಸರ್ವಭೂತೋಽಭವತ್ತದಾ।।

ಅಷ್ಟರಲ್ಲಿ ಶುಕನಾದರೋ ವಾಯುಮಂಡಲದಿಂದಲೂ ಮೇಲಿನ ಅಂತರಿಕ್ಷಗರ ಮಾರ್ಗವನ್ನು ಆಶ್ರಯಿಸಿ ತನ್ನ ಪ್ರಭಾವವನ್ನು ಪ್ರದರ್ಶಿಸಿ ಸರ್ವಭೂತನಾದನು.

12320020a ಮಹಾಯೋಗಗತಿಂ ತ್ವಗ್ರ್ಯಾಂ ವ್ಯಾಸೋತ್ಥಾಯ ಮಹಾತಪಾಃ।
12320020c ನಿಮೇಷಾಂತರಮಾತ್ರೇಣ ಶುಕಾಭಿಪತನಂ ಯಯೌ।।

ಮಹಾತಪಸ್ವೀ ವ್ಯಾಸನು ಮಹಾಯೋಗಗತಿಯನ್ನು ಆಶ್ರಯಿಸಿ ನಿಮಿಷಮಾತ್ರದಲ್ಲಿ ಶುಕಾಭಿಪತನದ ಸ್ಥಳವನ್ನು ತಲುಪಿದನು.

12320021a ಸ ದದರ್ಶ ದ್ವಿಧಾ ಕೃತ್ವಾ ಪರ್ವತಾಗ್ರಂ ಶುಕಂ ಗತಮ್।
12320021c ಶಶಂಸುರೃಷಯಸ್ತಸ್ಮೈ ಕರ್ಮ ಪುತ್ರಸ್ಯ ತತ್ತದಾ।।

ಪರ್ವತಾಗ್ರವನ್ನು ಎರಡಾಗಿ ಸೀಳಿ ಶುಕನು ಹೋಗಿದ್ದ ಆ ಸ್ಥಳವನ್ನು ಅವನು ನೋಡಿದನು. ಆಗ ಋಷಿಗಳು ಅವನ ಪುತ್ರನ ಆ ಕರ್ಮವನ್ನು ಪ್ರಶಂಸಿಸುತ್ತಿದ್ದರು.

12320022a ತತಃ ಶುಕೇತಿ ದೀರ್ಘೇಣ ಶೈಕ್ಷೇಣಾಕ್ರಂದಿತಸ್ತದಾ।
12320022c ಸ್ವಯಂ ಪಿತ್ರಾ ಸ್ವರೇಣೋಚ್ಚೈಸ್ತ್ರೀಽಲ್ಲೋಕಾನನುನಾದ್ಯ ವೈ।।
12320023a ಶುಕಃ ಸರ್ವಗತೋ ಭೂತ್ವಾ ಸರ್ವಾತ್ಮಾ ಸರ್ವತೋಮುಖಃ।
12320023c ಪ್ರತ್ಯಭಾಷತ ಧರ್ಮಾತ್ಮಾ ಭೋಃಶಬ್ದೇನಾನುನಾದಯನ್।।

ಆಗ ಅವನು “ಶುಕಾ!” ಎಂದು ದೀರ್ಘಸ್ವರದಲ್ಲಿ ಕೂಗಿಕೊಂಡನು. ತನ್ನ ಪಿತುವು ಉಚ್ಛ ಸ್ವರದಲ್ಲಿ ಮೂರುಲೋಕಗಳೂ ಕೇಳುವಂತೆ ಹಾಗೆ ಕೂಗಿಕೊಳ್ಳಲು ಸರ್ವಭೂತಾತ್ಮನಾಗಿದ್ದ ಧರ್ಮಾತ್ಮ ಶುಕನು ಸರ್ವಾತ್ಮನಾಗಿ ಸರ್ವತೋಮುಖನಾಗಿ “ಭೋಃ!” ಎಂಬ ಶಬ್ದದಿಂದ ಅನುನಾದಿಸಿ ಉತ್ತರಿಸಿದನು.

12320024a ತತ ಏಕಾಕ್ಷರಂ ನಾದಂ ಭೋ ಇತ್ಯೇವ ಸಮೀರಯನ್।
12320024c ಪ್ರತ್ಯಾಹರಜ್ಜಗತ್ಸರ್ವಮುಚ್ಚೈಃ ಸ್ಥಾವರಜಂಗಮಮ್।।

ಆಗ ಭೋ ಎಂಬ ಏಕಾಕ್ಷರ ನಾದದಿಂದ ಜಗತ್ತಿನ ಎಲ್ಲ ಸ್ಥಾವರ-ಜಂಗಮಗಳೂ ಒಂದಾಗಿ ಗಟ್ಟಿಯಾಗಿ ಕೂಗಿ ಪ್ರತಿಧ್ವನಿಸಿದವು.

12320025a ತತಃ ಪ್ರಭೃತಿ ಚಾದ್ಯಾಪಿ ಶಬ್ದಾನುಚ್ಚಾರಿತಾನ್ ಪೃಥಕ್।
12320025c ಗಿರಿಗಹ್ವರಪೃಷ್ಠೇಷು ವ್ಯಾಜಹಾರ ಶುಕಂ ಪ್ರತಿ।।

ಅಂದಿನಿಂದ ಈಗಲೂ ಕೂಡ ಗಿರಿಗಹ್ವರ ಪೃಷ್ಠಗಳಲ್ಲಿ ಶುಕನ ಕುರಿತಾದ ವ್ಯಾಸನ ಕೂಗನ್ನೂ, ಅದಕ್ಕುತ್ತರವಾಗಿ ಶುಕನ ಭೋ ಶಬ್ಧವನ್ನೂ ಮತ್ತು ಅಲ್ಲುಂಟಾದ ಪ್ರತಿಧ್ವನಿಗಳನ್ನೂ ಪ್ರತ್ಯೇಕ ಪ್ರತ್ಯೇಕವಾಗಿ ಹೇಳುತ್ತಾರೆ.

12320026a ಅಂತರ್ಹಿತಃ ಪ್ರಭಾವಂ ತು ದರ್ಶಯಿತ್ವಾ ಶುಕಸ್ತದಾ।
12320026c ಗುಣಾನ್ ಸಂತ್ಯಜ್ಯ ಶಬ್ದಾದೀನ್ ಪದಮಧ್ಯಗಮತ್ ಪರಮ್।।

ಹೀಗೆ ಶುಕನು ತನ್ನ ಪ್ರಭಾವವನ್ನು ತೋರಿಸುತ್ತಾ ಶಬ್ದಾದಿ ಗುಣಗಳನ್ನು ಪರಿತ್ಯಜಿಸಿ ಪರಮಪದದ ಮಧ್ಯಂಗತನಾದನು.

12320027a ಮಹಿಮಾನಂ ತು ತಂ ದೃಷ್ಟ್ವಾ ಪುತ್ರಸ್ಯಾಮಿತತೇಜಸಃ।
12320027c ನಿಷಸಾದ ಗಿರಿಪ್ರಸ್ಥೇ ಪುತ್ರಮೇವಾನುಚಿಂತಯನ್।।

ಅಮಿತತೇಜಸ್ವೀ ಪುತ್ರನ ಮಹಿಮೆಯನ್ನು ಕಂಡ ವ್ಯಾಸನು ಮಗನ ಕುರಿತೇ ಚಿಂತಿಸುತ್ತಾ ಗಿರಿಪ್ರಸ್ಥದಲ್ಲಿ ಕುಳಿತುಕೊಂಡನು.

12320028a ತತೋ ಮಂದಾಕಿನೀತೀರೇ ಕ್ರೀಡಂತೋಽಪ್ಸರಸಾಂ ಗಣಾಃ।
12320028c ಆಸಾದ್ಯ ತಮೃಷಿಂ ಸರ್ವಾಃ ಸಂಭ್ರಾಂತಾ ಗತಚೇತಸಃ।।

ಆಗ ಮಂದಾಕಿನೀ ತೀರದಲ್ಲಿ ಕ್ರೀಡಿಸುತ್ತಿದ್ದ ಅಪ್ಸರಗಣಗಳು ಆ ಋಷಿಯನ್ನು ನೋಡಿ ಎಲ್ಲರೂ ಸಂಭ್ರಾಂತರಾಗಿ ಬುದ್ಧಿಗೆಟ್ಟರು.

12320029a ಜಲೇ ನಿಲಿಲ್ಯಿರೇ ಕಾಶ್ಚಿತ್ಕಾಶ್ಚಿದ್ಗುಲ್ಮಾನ್ ಪ್ರಪೇದಿರೇ।
12320029c ವಸನಾನ್ಯಾದದುಃ ಕಾಶ್ಚಿದ್ದೃಷ್ಟ್ವಾ ತಂ ಮುನಿಸತ್ತಮಮ್।।

ಕೆಲವರು ನೀರಿನಲ್ಲಿಯೇ ಅಡಗಿಕೊಂಡರು. ಕೆಲವರು ಪೊದೆಗಳಲ್ಲಿ ಅವಿತುಕೊಂಡರು. ಇನ್ನು ಕೆಲವರು ಆ ಮುನಿಸತ್ತಮನನ್ನು ನೋಡಿ ವಸ್ತ್ರಗಳನ್ನು ಹುಡುಕತೊಡಗಿದರು.

12320030a ತಾಂ ಮುಕ್ತತಾಂ ತು ವಿಜ್ಞಾಯ ಮುನಿಃ ಪುತ್ರಸ್ಯ ವೈ ತದಾ।
12320030c ಸಕ್ತತಾಮಾತ್ಮನಶ್ಚೈವ ಪ್ರೀತೋಽಭೂದ್ವ್ರೀಡಿತಶ್ಚ ಹ।।

ತನ್ನ ಪುತ್ರನು ಮುಕ್ತತ್ವವನ್ನು ಪಡೆದುಕೊಂಡನು ಎಂದು ತಿಳಿದ ಆ ಮುನಿಯು ಪ್ರೀತನಾದನು ಮತ್ತು ಅಂತೆಯೇ ತನ್ನಲ್ಲಿರುವ ಆಸಕ್ತಿಯನ್ನು ಮನಗಂಡು ನಾಚಿದನು.

12320031a ತಂ ದೇವಗಂಧರ್ವವೃತೋ ಮಹರ್ಷಿಗಣಪೂಜಿತಃ।
12320031c ಪಿನಾಕಹಸ್ತೋ ಭಗವಾನಭ್ಯಾಗಚ್ಚತ ಶಂಕರಃ।।

ಆಗ ದೇವಗಂಧರ್ವರಿಂದ ಆವೃತನಾಗಿ ಮಹರ್ಷಿಗಣ ಪೂಜಿತನಾಗಿ ಪಿನಾಕಹಸ್ತ ಭಗವಾನ್ ಶಂಕರನು ಅಲ್ಲಿಗೆ ಆಗಮಿಸಿದನು.

12320032a ತಮುವಾಚ ಮಹಾದೇವಃ ಸಾಂತ್ವಪೂರ್ವಮಿದಂ ವಚಃ।
12320032c ಪುತ್ರಶೋಕಾಭಿಸಂತಪ್ತಂ ಕೃಷ್ಣದ್ವೈಪಾಯನಂ ತದಾ।।
12320033a ಅಗ್ನೇರ್ಭೂಮೇರಪಾಂ ವಾಯೋರಂತರಿಕ್ಷಸ್ಯ ಚೈವ ಹ।
12320033c ವೀರ್ಯೇಣ ಸದೃಶಃ ಪುತ್ರಸ್ತ್ವಯಾ ಮತ್ತಃ ಪುರಾ ವೃತಃ।।

ಮಹಾದೇವನು ಅವನಿಗೆ ಸಾಂತ್ವಪೂರ್ವಕವಾದ ಈ ಮಾತನ್ನಾಡಿದನು: “ಹಿಂದೆ ನೀನು ಅಗ್ನಿ-ಭೂಮಿ-ಜಲ-ವಾಯು-ಅಂತರಿಕ್ಷಗಳ ವೀರ್ಯ ಸಮಾನ ಶಕ್ತಿಯಿರುವ ಪುತ್ರನನ್ನು ನನ್ನಲ್ಲಿ ಕೇಳಿಕೊಂಡಿದ್ದೆ.

12320034a ಸ ತಥಾಲಕ್ಷಣೋ ಜಾತಸ್ತಪಸಾ ತವ ಸಂಭೃತಃ।
12320034c ಮಮ ಚೈವ ಪ್ರಭಾವೇನ ಬ್ರಹ್ಮತೇಜೋಮಯಃ ಶುಚಿಃ।।

ನಿನ್ನ ತಪಸ್ಸಿನಿಂದಾಗಿ ಮತ್ತು ನನ್ನ ಪ್ರಭಾವದಿಂದಾಗಿ ನಿನಗೆ ಅದೇ ಲಕ್ಷಣಗಳಿದ್ದ ಬ್ರಹ್ಮತೇಜೋಮಯ ಶುಚಿ ಪುತ್ರನು ಹುಟ್ಟಿದನು.

12320035a ಸ ಗತಿಂ ಪರಮಾಂ ಪ್ರಾಪ್ತೋ ದುಷ್ಪ್ರಾಪಾಮಜಿತೇಂದ್ರಿಯೈಃ।
12320035c ದೈವತೈರಪಿ ವಿಪ್ರರ್ಷೇ ತಂ ತ್ವಂ ಕಿಮನುಶೋಚಸಿ।।

ವಿಪ್ರರ್ಷೇ! ಅಜಿತೇಂದ್ರಿಯರಿಗೆ ಮತ್ತು ದೇವತೆಗಳಿಗೂ ಪಡೆಯಲು ಅಸಾಧ್ಯವಾದ ಪರಮ ಗತಿಯನ್ನು ಅವನು ಪಡೆದುಕೊಂಡಿದ್ದಾನೆ. ಅವನ ವಿಷಯವಾಗಿ ನೀನು ಏಕೆ ಶೋಕಿಸುತ್ತಿರುವೆ?

12320036a ಯಾವತ್ಸ್ಥಾಸ್ಯಂತಿ ಗಿರಯೋ ಯಾವತ್ ಸ್ಥಾಸ್ಯಂತಿ ಸಾಗರಾಃ।
12320036c ತಾವತ್ತವಾಕ್ಷಯಾ ಕೀರ್ತಿಃ ಸಪುತ್ರಸ್ಯ ಭವಿಷ್ಯತಿ।।

ಎಲ್ಲಿಯವರೆಗೆ ಗಿರಿಗಳಿರುತ್ತವೆಯೋ ಮತ್ತು ಎಲ್ಲಿಯವರೆಗೆ ಸಾಗರಗಳು ಇರುತ್ತವೆಯೋ ಅಲ್ಲಿಯವರೆಗೆ ಪುತ್ರನೊಂದಿಗೆ ನಿನ್ನ ಕೀರ್ತಿಯು ಅಕ್ಷಯವಾಗಿರುತ್ತದೆ.

12320037a ಚಾಯಾಂ ಸ್ವಪುತ್ರಸದೃಶೀಂ ಸರ್ವತೋಽನಪಗಾಂ ಸದಾ।
12320037c ದ್ರಕ್ಷ್ಯಸೇ ತ್ವಂ ಚ ಲೋಕೇಽಸ್ಮಿನ್ಮತ್ಪ್ರಸಾದಾನ್ಮಹಾಮುನೇ।।

ಮಹಾಮುನೇ! ನನ್ನ ಪ್ರಸಾದದಿಂದ ನೀನು ಈ ಲೋಕದಲ್ಲಿ ನಿನ್ನ ಪುತ್ರನ ಸದೃಶವಾದ ಛಾಯೆಯನ್ನು ಸರ್ವದಾ ಸರ್ವತ್ರ ಕಾಣುವೆ. ಅದು ಎಂದೂ ನಿನ್ನ ದೃಷ್ಟಿಪಥವನ್ನು ಬಿಟ್ಟು ಹೋಗುವುದಿಲ್ಲ.”

12320038a ಸೋಽನುನೀತೋ ಭಗವತಾ ಸ್ವಯಂ ರುದ್ರೇಣ ಭಾರತ।
12320038c ಚಾಯಾಂ ಪಶ್ಯನ್ಸಮಾವೃತ್ತಃ ಸ ಮುನಿಃ ಪರಯಾ ಮುದಾ।।

ಭಾರತ! ಸ್ವಯಂ ಭಗವಂತ ರುದ್ರನಿಂದ ಸಂತವಿಸಲ್ಪಟ್ಟ ಮುನಿಯು ಎಲ್ಲೆಲ್ಲಿಯೂ ಮಗನ ಛಾಯೆಯನ್ನೇ ಕಾಣುತ್ತಾ ಪರಮ ಮುದದಿಂದ ಆಶ್ರಮಕ್ಕೆ ಹಿಂದಿರುಗಿದನು.

12320039a ಇತಿ ಜನ್ಮ ಗತಿಶ್ಚೈವ ಶುಕಸ್ಯ ಭರತರ್ಷಭ।
12320039c ವಿಸ್ತರೇಣ ಮಯಾಖ್ಯಾತಂ ಯನ್ಮಾಂ ತ್ವಂ ಪರಿಪೃಚ್ಚಸಿ।।

ಭರತರ್ಷಭ! ಇಗೋ ನೀನು ಕೇಳಿದಂತೆ ನಿನಗೆ ಶುಕನ ಜನ್ಮ ಮತ್ತು ಗತಿಗಳ ಕುರಿತು ವಿಸ್ತಾರವಾಗಿ ನಾನು ಹೇಳಿದ್ದೇನೆ.

12320040a ಏತದಾಚಷ್ಟ ಮೇ ರಾಜನ್ ದೇವರ್ಷಿರ್ನಾರದಃ ಪುರಾ।
12320040c ವ್ಯಾಸಶ್ಚೈವ ಮಹಾಯೋಗೀ ಸಂಜಲ್ಪೇಷು ಪದೇ ಪದೇ।।

ರಾಜನ್! ಹಿಂದೆ ನಾರದನು ನನಗೆ ಇದನ್ನು ಹೇಳಿದ್ದನು. ಮಹಾಯೋಗಿ ವ್ಯಾಸನೂ ಕೂಡ ಪದೇ ಪದೇ ಇದರ ಕುರಿತು ಹೇಳುತ್ತಿದ್ದನು.

12320041a ಇತಿಹಾಸಮಿಮಂ ಪುಣ್ಯಂ ಮೋಕ್ಷಧರ್ಮಾರ್ಥಸಂಹಿತಮ್।
12320041c ಧಾರಯೇದ್ಯಃ ಶಮಪರಃ ಸ ಗಚ್ಚೇತ್ ಪರಮಾಂ ಗತಿಮ್।।

ಮೋಕ್ಷಧರ್ಮಾರ್ಥಸಂಹಿತವಾದ ಈ ಪುಣ್ಯ ಇತಿಹಾಸವನ್ನು ಶಮಪರನಾಗಿ ಧಾರಣೆಮಾಡಿದವನು ಪರಮ ಗತಿಯಲ್ಲಿ ಹೋಗುತ್ತಾನೆ.”

ಸಮಾಪ್ತಿ ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಶುಕೋತ್ಪತನಸಮಾಪ್ತಿರ್ನಾಮ ವಿಂಶಾಧಿಕತ್ರಿಶತತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಶುಕೋತ್ಪತನಸಮಾಪ್ತಿ ಎನ್ನುವ ಮುನ್ನೂರಾಇಪ್ಪತ್ತನೇ ಅಧ್ಯಾಯವು.