319: ಶುಕಾಭಿಪತನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 319

ಸಾರ

ಶುಕನ ಊರ್ಧ್ವಗತಿಯ ವರ್ಣನೆ (1-29).

12319001 ಭೀಷ್ಮ ಉವಾಚ।
12319001a ಗಿರಿಪೃಷ್ಠಂ1 ಸಮಾರುಹ್ಯ ಸುತೋ ವ್ಯಾಸಸ್ಯ ಭಾರತ।
12319001c ಸಮೇ ದೇಶೇ ವಿವಿಕ್ತೇ ಚ ನಿಃಶಲಾಕ ಉಪಾವಿಶತ್।।

ಭೀಷ್ಮನು ಹೇಳಿದನು: “ಭಾರತ! ವ್ಯಾಸನ ಸುತನು ಗಿರಿಪೃಷ್ಠವನ್ನೇರಿ ನಿರ್ಜನವಾದ ತೃಣರಹಿತವಾಗಿದ್ದ ಸಮಪ್ರದೇಶದಲ್ಲಿ ಕುಳಿತುಕೊಂಡನು.

12319002a ಧಾರಯಾಮಾಸ ಚಾತ್ಮಾನಂ ಯಥಾಶಾಸ್ತ್ರಂ ಮಹಾಮುನಿಃ।
12319002c ಪಾದಾತ್ ಪ್ರಭೃತಿಗಾತ್ರೇಷು ಕ್ರಮೇಣ ಕ್ರಮಯೋಗವಿತ್।।

ಕ್ರಮಯೋಗವಿದು ಮಹಾಮುನಿಯು ಶಾಸ್ತ್ರಗಳಲ್ಲಿ ಹೇಳಿರುವಂತೆ ಪಾದಗಳಿಂದ ಹಿಡಿದು ಸರ್ವಾಯವಗಳಲ್ಲಿಯೂ ಕ್ರಮವಾಗಿ ಆತ್ಮನನ್ನು ಧಾರಣೆಮಾಡಿಕೊಂಡನು.

12319003a ತತಃ ಸ ಪ್ರಾಙ್ಮುಖೋ ವಿದ್ವಾನಾದಿತ್ಯೇ ನಚಿರೋದಿತೇ।
12319003c ಪಾಣಿಪಾದಂ ಸಮಾಧಾಯ ವಿನೀತವದುಪಾವಿಶತ್।।

ಸ್ವಲ್ಪ ಸಮಯದಲ್ಲಿಯೇ ಸೂರ್ಯೋದಯವಾಗಲು ಅವನು ಕೈಕಾಲುಗಳನ್ನು ಸರಿಯಾಗಿಟ್ಟುಕೊಂಡು ವಿನೀತನಾಗಿ ಪೂರ್ವಾಭಿಮುಖವಾಗಿ ಕುಳಿತುಕೊಂಡನು.

12319004a ನ ತತ್ರ ಪಕ್ಷಿಸಂಘಾತೋ ನ ಶಬ್ದೋ ನಾಪಿ ದರ್ಶನಮ್।
12319004c ಯತ್ರ ವೈಯಾಸಕಿರ್ಧೀಮಾನ್ಯೋಕ್ತುಂ ಸಮುಪಚಕ್ರಮೇ।।

ಆ ಧೀಮಾನನು ಯೋಗಯುಕ್ತನಾಗಿ ಆತ್ಮಸಂಧಾನವನ್ನು ಪ್ರಾರಂಭಿಸಿದ ಸ್ಥಳದಲ್ಲಿ ಪಕ್ಷಿಗಳ ಸಮುದಾಯವಾಗಲೀ, ಶಬ್ದವಾಗಲೀ ಅಥವಾ ಯಾವುದೇ ದೃಶ್ಯವಾಗಲೀ ಇರಲಿಲ್ಲ.

12319005a ಸ ದದರ್ಶ ತದಾತ್ಮಾನಂ ಸರ್ವಸಂಗವಿನಿಃಸೃತಮ್।
12319005c ಪ್ರಜಹಾಸ ತತೋ ಹಾಸಂ ಶುಕಃ ಸಂಪ್ರೇಕ್ಷ್ಯ ಭಾಸ್ಕರಮ್।।

ಸರ್ವಸಂಗಗಳಿಂದಲೂ ರಹಿತನಾದ ತನ್ನ ಆತ್ಮನನ್ನು ಅವನು ನೋಡಿದನು. ಅನಂತರ ಭಾಸ್ಕರನನ್ನು ನೋಡಿ ಶುಕನು ಜೋರಾಗಿ ನಗತೊಡಗಿದನು.

12319006a ಸ ಪುನರ್ಯೋಗಮಾಸ್ಥಾಯ ಮೋಕ್ಷಮಾರ್ಗೋಪಲಬ್ಧಯೇ।
12319006c ಮಹಾಯೋಗೀಶ್ವರೋ ಭೂತ್ವಾ ಸೋಽತ್ಯಕ್ರಾಮದ್ವಿಹಾಯಸಮ್।।

ಮೋಕ್ಷಮಾರ್ಗವನ್ನು ಪಡೆದುಕೊಳ್ಳಲು ಪುನಃ ಯೋಗವನ್ನು ಆಶ್ರಯಿಸಿ ಅವನು ಮಹಾಯೋಗೀಶ್ವರನಾಗಿ ಆಕಾಶವನ್ನೇ ಅತಿಕ್ರಮಿಸಿ ಹೋಗಲು ಸಿದ್ಧನಾದನು.

12319007a ತತಃ ಪ್ರದಕ್ಷಿಣಂ ಕೃತ್ವಾ ದೇವರ್ಷಿಂ ನಾರದಂ ತದಾ।
12319007c ನಿವೇದಯಾಮಾಸ ತದಾ ಸ್ವಂ ಯೋಗಂ ಪರಮರ್ಷಯೇ।।

ಅನಂತರ ದೇವರ್ಷಿ ನಾರದನಿಗೆ ಪ್ರದಕ್ಷಿಣೆ ಮಾಡಿ ಆ ಪರಮ ಋಷಿಗೆ ತನ್ನ ಯೋಗದ ಕುರಿತು ಹೇಳಿದನು:

12319008a ದೃಷ್ಟೋ ಮಾರ್ಗಃ ಪ್ರವೃತ್ತೋಽಸ್ಮಿ ಸ್ವಸ್ತಿ ತೇಽಸ್ತು ತಪೋಧನ।
12319008c ತ್ವತ್ಪ್ರಸಾದಾದ್ಗಮಿಷ್ಯಾಮಿ ಗತಿಮಿಷ್ಟಾಂ ಮಹಾದ್ಯುತೇ।।

“ತಪೋಧನ! ಮಹಾದ್ಯುತೇ! ನಿನಗೆ ಮಂಗಳವಾಗಲಿ! ನಿನ್ನ ಅನುಗ್ರಹದಿಂದ ಮೋಕ್ಷಮಾರ್ಗವು ಗೋಚರಿತು. ಈಗ ನಾನು ಅಲ್ಲಿಯೇ ಹೊರಡುವವನಿದ್ದೇನೆ. ಇಷ್ಟವಾದ ಅಲ್ಲಿಗೇ ಹೋಗುತ್ತೇನೆ.”

12319009a ನಾರದೇನಾಭ್ಯನುಜ್ಞಾತಸ್ತತೋ ದ್ವೈಪಾಯನಾತ್ಮಜಃ।
12319009c ಅಭಿವಾದ್ಯ ಪುನರ್ಯೋಗಮಾಸ್ಥಾಯಾಕಾಶಮಾವಿಶತ್।।

ನಾರದನಿಂದ ಅನುಜ್ಞಾತನಾಗಿ ದ್ವೈಪಾಯನಾತ್ಮಜನು ಅವನನ್ನು ವಂದಿಸಿ, ಪುನಃ ಯೋಗವನ್ನಾಶ್ರಯಿಸಿ ಆಕಾಶವನ್ನು ಪ್ರವೇಶಿಸಿದನು.

12319010a ಕೈಲಾಸಪೃಷ್ಠಾದುತ್ಪತ್ಯ ಸ ಪಪಾತ ದಿವಂ ತದಾ।
12319010c ಅಂತರಿಕ್ಷಚರಃ ಶ್ರೀಮಾನ್ ವ್ಯಾಸಪುತ್ರಃ ಸುನಿಶ್ಚಿತಃ।।

ಸುನಿಶ್ಚಿತನಾಗಿದ್ದ ಶ್ರೀಮಾನ್ ವ್ಯಾಸಪುತ್ರನು ಕೈಲಾಸಪೃಷ್ಠದಿಂದ ಹಾರಿ ಆಕಾಶವನ್ನು ಸೇರಿ ಅಂತರಿಕ್ಷಚರನಾದನು.

12319011a ತಮುದ್ಯಂತಂ ದ್ವಿಜಶ್ರೇಷ್ಠಂ ವೈನತೇಯಸಮದ್ಯುತಿಮ್।
12319011c ದದೃಶುಃ ಸರ್ವಭೂತಾನಿ ಮನೋಮಾರುತರಂಹಸಮ್।।

ಹಾಗೆ ಮನಸ್ಸು ಮತ್ತು ವಾಯುವಿನ ವೇಗದಲ್ಲಿ ಮೇಲೆಹೋಗುತ್ತಿದ್ದ ವೈನತೇಯ ಸಮದ್ಯುತಿ ಆ ದ್ವಿಜಶ್ರೇಷ್ಠನನ್ನು ಸರ್ವಭೂತಗಳೂ ನೋಡಿದವು.

12319012a ವ್ಯವಸಾಯೇನ ಲೋಕಾಂಸ್ತ್ರೀನ್ಸರ್ವಾನ್ಸೋಽಥ ವಿಚಿಂತಯನ್।
12319012c ಆಸ್ಥಿತೋ ದಿವ್ಯಮಧ್ವಾನಂ ಪಾವಕಾರ್ಕಸಮಪ್ರಭಃ।।

ಅಗ್ನಿ-ಸೂರ್ಯರ ಸಮಾನ ಪ್ರಭೆಯಿದ್ದ ಅವನು ಮೂರು ಲೋಕಗಳನ್ನೂ ಆತ್ಮಭಾವದಿಂದ ನೋಡುತ್ತಾ ಆ ದಿವ್ಯ ಮಾರ್ಗದಲ್ಲಿದ್ದುಕೊಂಡು ಪ್ರಯಾಣಿಸಿದನು.

12319013a ತಮೇಕಮನಸಂ ಯಾಂತಮವ್ಯಗ್ರಮಕುತೋಭಯಮ್।
12319013c ದದೃಶುಃ ಸರ್ವಭೂತಾನಿ ಜಂಗಮಾನೀತರಾಣಿ ಚ।।

ಏಕಮನಸ್ಕನಾಗಿ ಹೋಗುತ್ತಿದ್ದ ಆ ಅವ್ಯಗ್ರ ಭಯರಹಿತ ಶುಕನನ್ನು ಸರ್ವಭೂತಗಳೂ – ಜಂಗಮ-ಸ್ಥಾವರಗಳು – ನೋಡಿದವು.

12319014a ಯಥಾಶಕ್ತಿ ಯಥಾನ್ಯಾಯಂ ಪೂಜಯಾಂ ಚಕ್ರಿರೇ ತದಾ।
12319014c ಪುಷ್ಪವರ್ಷೈಶ್ಚ ದಿವ್ಯೈಸ್ತಮವಚಕ್ರುರ್ದಿವೌಕಸಃ।।

ಎಲ್ಲ ಭೂತಗಳೂ ಯಥಾಶಕ್ತಿಯಾಗಿ ಯಥಾನ್ಯಾಯವಾಗಿ ಅವನಿಗೆ ಪೂಜೆಗಳನ್ನು ಸಲ್ಲಿಸಿದವು. ದಿವೌಕಸರು ಅವನ ಮೇಲೆ ದಿವ್ಯ ಪುಷ್ಪವೃಷ್ಟಿಯನ್ನು ಸುರಿಸಿದರು.

12319015a ತಂ ದೃಷ್ಟ್ವಾ ವಿಸ್ಮಿತಾಃ ಸರ್ವೇ ಗಂಧರ್ವಾಪ್ಸರಸಾಂ ಗಣಾಃ।
12319015c ಋಷಯಶ್ಚೈವ ಸಂಸಿದ್ಧಾಃ ಪರಂ ವಿಸ್ಮಯಮಾಗತಾಃ।।

ಅವನನ್ನು ನೋಡಿ ಸರ್ವ ಗಂಧರ್ವ-ಅಪ್ಸರಗಣಗಳೂ ವಿಸ್ಮಿತಗೊಂಡವು. ಸಂಸಿದ್ಧ ಋಷಿಗಳೂ ಪರಮ ವಿಸ್ಮಿತರಾದರು.

12319016a ಅಂತರಿಕ್ಷಚರಃ ಕೋಽಯಂ ತಪಸಾ ಸಿದ್ಧಿಮಾಗತಃ।
12319016c ಅಧಃಕಾಯೋರ್ಧ್ವವಕ್ತ್ರಶ್ಚ ನೇತ್ರೈಃ ಸಮಭಿವಾಹ್ಯತೇ।।

“ತಪಸ್ಸಿನಿಂದ ಸಿದ್ಧಿಯನ್ನು ಪಡೆದುಕೊಂಡಿರುವ ಈ ಅಂತರಿಕ್ಷಚರನು ಯಾರು? ಇವನ ಶರೀರವು ಕೆಳಮುಖವಾಗಿದೆ. ಮುಖವು ಮೇಲ್ಮುಖವಾಗಿದೆ. ನಮ್ಮ ಕಣ್ಣುಗಳನ್ನು ಇವನು ತನ್ನೆಡೆಯೇ ಸೆಳೆದುಕೊಳ್ಳುತ್ತಿದ್ದಾನೆ!”

12319017a ತತಃ ಪರಮಧೀರಾತ್ಮಾ ತ್ರಿಷು ಲೋಕೇಷು ವಿಶ್ರುತಃ।
12319017c ಭಾಸ್ಕರಂ ಸಮುದೀಕ್ಷನ್ಸ ಪ್ರಾಙ್ಮುಖೋ ವಾಗ್ಯತೋಽಗಮತ್।
12319017e ಶಬ್ದೇನಾಕಾಶಮಖಿಲಂ ಪೂರಯನ್ನಿವ ಸರ್ವತಃ।।

ಅನಂತರ ಮೂರು ಲೋಕಗಳಲ್ಲಿಯೂ ವಿಶ್ರುತನಾದ ಆ ಪರಮ ಧೀರಾತ್ಮನು ಭಾಸ್ಕರನನ್ನೇ ನೋಡುತ್ತಾ ಪೂರ್ವಾಭಿಮುಖವಾಗಿ ಅಖಿಲ ಆಕಾಶವನ್ನೂ ಎಲ್ಲಕಡೆಗಳಲ್ಲಿ ಶಬ್ದದಿಂದ ತುಂಬುತ್ತಾ ಮುಂದೆ ಸಾರಿದನು.

12319018a ತಮಾಪತಂತಂ ಸಹಸಾ ದೃಷ್ಟ್ವಾ ಸರ್ವಾಪ್ಸರೋಗಣಾಃ।
12319018c ಸಂಭ್ರಾಂತಮನಸೋ ರಾಜನ್ನಾಸನ್ ಪರಮವಿಸ್ಮಿತಾಃ।
12319018e ಪಂಚಚೂಡಾಪ್ರಭೃತಯೋ ಭೃಶಮುತ್ಫುಲ್ಲಲೋಚನಾಃ।।

ರಾಜನ್! ಒಮ್ಮೆಲೇ ತಮ್ಮಕಡೆ ಬರುತ್ತಿದ್ದ ಅವನನ್ನು ನೋಡಿ ಪಂಚಚೂಡಳೇ ಮೊದಲಾದ ಸರ್ವ ಅಪ್ಸರಗಣಗಳೂ ಸಂಭ್ರಾಂತಮನಸ್ಕರಾಗಿ ಪರಮವಿಸ್ಮಿತರಾಗಿ ವಿಕಸಿತ ಕಣ್ಣುಗಳಿಂದ ಅವನನ್ನು ನೋಡುತ್ತಾ ಪರಸ್ಪರರಲ್ಲಿ ಹೇಳಿಕೊಂಡವು:

12319019a ದೈವತಂ ಕತಮಂ ಹ್ಯೇತದುತ್ತಮಾಂ ಗತಿಮಾಸ್ಥಿತಮ್।
12319019c ಸುನಿಶ್ಚಿತಮಿಹಾಯಾತಿ ವಿಮುಕ್ತಮಿವ ನಿಃಸ್ಪೃಹಮ್।।

“ಉತ್ತಮ ಗತಿಯನ್ನಾಶ್ರಯಿಸಿ ಯಾವ ದೇವತೆಯು ಇತ್ತ ಕಡೆ ಬರುತ್ತಿದೆ? ಇದು ಸುನಿಶ್ಚಿತ ಜ್ಞಾನದಿಂದ ಕೂಡಿ ಸಕಲ ಬಂಧನಗಳಿಂದಲೂ ಸಂಶಯಗಳಿಂದಲೂ ಮುಕ್ತವಾಗಿರುವಂತಿದೆ. ಇದರ ಮನಸ್ಸಿನಲ್ಲಿ ಆಸೆ ಎಂಬುದೇ ಇಲ್ಲವೆಂದು ತೋರುತ್ತದೆ!”.

12319020a ತತಃ ಸಮತಿಚಕ್ರಾಮ ಮಲಯಂ ನಾಮ ಪರ್ವತಮ್।
12319020c ಉರ್ವಶೀ ಪೂರ್ವಚಿತ್ತಿಶ್ಚ ಯಂ ನಿತ್ಯಮುಪಸೇವತೇ।
12319020e ತೇ ಸ್ಮ ಬ್ರಹ್ಮರ್ಷಿಪುತ್ರಸ್ಯ ವಿಸ್ಮಯಂ ಯಯತುಃ ಪರಮ್।।

ಅನಂತರ ಅವನು ಊರ್ವಶೀ ಮತ್ತು ಪೂರ್ವಚಿತ್ತಿಯರು ನಿತ್ಯವೂ ಸೇವಿಸುವ ಮಲಯ ಎಂಬ ಪರ್ವತದ ಕಡೆಗೆ ಹೋದನು. ಆ ಬ್ರಹ್ಮರ್ಷಿಪುತ್ರನನ್ನು ನೋಡಿ ಅವರು ಪರಮ ವಿಸ್ಮಿತರಾದರು.

12319021a ಅಹೋ ಬುದ್ಧಿಸಮಾಧಾನಂ ವೇದಾಭ್ಯಾಸರತೇ ದ್ವಿಜೇ।
12319021c ಅಚಿರೇಣೈವ ಕಾಲೇನ ನಭಶ್ಚರತಿ ಚಂದ್ರವತ್।
12319021e ಪಿತೃಶುಶ್ರೂಷಯಾ ಸಿದ್ಧಿಂ ಸಂಪ್ರಾಪ್ತೋಽಯಮನುತ್ತಮಾಮ್।।

“ಆಹಾ! ವೇದಾಭ್ಯಾಸರತನಾಗಿರುವ ಈ ದ್ವಿಜನ ಬುದ್ಧಿಸಮಾಧಾನವೇ! ಪಿತೃಶುಶ್ರೂಷೆಯಿಂದ ಅನುತ್ತಮ ಸಿದ್ಧಿಯನ್ನು ಪಡೆದು ಇವನು ಅತ್ಯಂತ ಸ್ವಲ್ಪವೇ ಕಾಲದಲ್ಲಿ ಚಂದ್ರನಂತೆ ನಭಕ್ಕೇರುತ್ತಿದ್ದಾನೆ!

12319022a ಪಿತೃಭಕ್ತೋ ದೃಢತಪಾಃ ಪಿತುಃ ಸುದಯಿತಃ ಸುತಃ।
12319022c ಅನನ್ಯಮನಸಾ ತೇನ ಕಥಂ ಪಿತ್ರಾ ವಿವರ್ಜಿತಃ।।

ಪಿತೃಭಕ್ತನೂ, ದೃಢತಪಸ್ವಿಯೂ, ತಂದೆಯ ಮುದ್ದಿನ ಮಗನೂ ಆದ ಇವನನ್ನು ಅನನ್ಯಮನಸ್ಕನಾದ ತಂದೆಯು ಹೇಗೆ ಕಳುಹಿಸಿಕೊಟ್ಟನು?”

12319023a ಉರ್ವಶ್ಯಾ ವಚನಂ ಶ್ರುತ್ವಾ ಶುಕಃ ಪರಮಧರ್ಮವಿತ್।
12319023c ಉದೈಕ್ಷತ ದಿಶಃ ಸರ್ವಾ ವಚನೇ ಗತಮಾನಸಃ।।

ಊರ್ವಶಿಯ ಮಾತನ್ನು ಕೇಳಿ ಪರಮಧರ್ಮವಿದು ಶುಕನು ಎಲ್ಲ ದಿಕ್ಕುಗಳನ್ನೂ ವೀಕ್ಷಿಸಿ, ಅವಳ ಮಾತಿನ ಕುರಿತು ಯೋಚಿಸಿದನು.

12319024a ಸೋಽಂತರಿಕ್ಷಂ ಮಹೀಂ ಚೈವ ಸಶೈಲವನಕಾನನಾಮ್।
12319024c ಆಲೋಕಯಾಮಾಸ ತದಾ ಸರಾಂಸಿ ಸರಿತಸ್ತಥಾ।।

ಅವನು ಅಂತರಿಕ್ಷವನ್ನೂ, ಶೈಲ-ವನ-ಕಾನನಗಳೊಂದಿಗೆ ಮಹಿಯನ್ನೂ, ಸರೋವರ-ನದಿಗಳನ್ನೂ ಅವಲೋಕಿಸಿದನು.

12319025a ತತೋ ದ್ವೈಪಾಯನಸುತಂ ಬಹುಮಾನಪುರಃಸರಮ್।
12319025c ಕೃತಾಂಜಲಿಪುಟಾಃ ಸರ್ವಾ ನಿರೀಕ್ಷಂತೇ ಸ್ಮ ದೇವತಾಃ।।
12319026a ಅಬ್ರವೀತ್ತಾಸ್ತದಾ ವಾಕ್ಯಂ ಶುಕಃ ಪರಮಧರ್ಮವಿತ್।
12319026c ಪಿತಾ ಯದ್ಯನುಗಚ್ಚೇನ್ಮಾಂ ಕ್ರೋಶಮಾನಃ ಶುಕೇತಿ ವೈ।।
12319027a ತತಃ ಪ್ರತಿವಚೋ ದೇಯಂ ಸರ್ವೈರೇವ ಸಮಾಹಿತೈಃ।
12319027c ಏತನ್ಮೇ ಸ್ನೇಹತಃ ಸರ್ವೇ ವಚನಂ ಕರ್ತುಮರ್ಹಥ।।

ಆಗ ಅಲ್ಲಿಯ ಸರ್ವ ದೇವತೆಗಳೂ ಬದ್ಧಾಂಜಲಿಗಳಾಗಿ ಎಲ್ಲ ಕಡೆಗಳಿಂದಲೂ ಆದರಪೂರ್ವಕವಾಗಿ ಅವನನ್ನೇ ನೋಡುತ್ತಿದ್ದರು. ಪರಮ ಧರ್ಮವಿದು ಶುಕನು ಬಹುಮಾನದಿಂದ ತನ್ನನ್ನೇ ನೋಡುತ್ತಿದ್ದ ದೇವತೆಗಳಿಗೆ ಈ ಮಾತನ್ನಾಡಿದನು: “ಶುಕಾ! ಎಂದು ಕೂಗುತ್ತಾ ನನ್ನ ತಂದೆಯೇನಾದರೂ ಇಲ್ಲಿಗೆ ಬಂದರೆ ನೀವೆಲ್ಲರೂ ಒಟ್ಟಾಗಿ ಅವನಿಗೆ ಪ್ರತಿಧ್ವನಿಯನ್ನು ನೀಡಬೇಕು. ನನ್ನ ಮೇಲಿನ ಸ್ನೇಹದಿಂದ ನೀವೆಲ್ಲರೂ ಈ ವಚನದಂತೆ ಮಾಡಬೇಕು.”

12319028a ಶುಕಸ್ಯ ವಚನಂ ಶ್ರುತ್ವಾ ದಿಶಃ ಸವನಕಾನನಾಃ।
12319028c ಸಮುದ್ರಾಃ ಸರಿತಃ ಶೈಲಾಃ ಪ್ರತ್ಯೂಚುಸ್ತಂ ಸಮಂತತಃ।।
12319029a ಯಥಾಜ್ಞಾಪಯಸೇ ವಿಪ್ರ ಬಾಢಮೇವಂ ಭವಿಷ್ಯತಿ।
12319029c ಋಷೇರ್ವ್ಯಾಹರತೋ ವಾಕ್ಯಂ ಪ್ರತಿವಕ್ಷ್ಯಾಮಹೇ ವಯಮ್।।

ಶುಕನ ವಚನವನ್ನು ಕೇಳಿ ವನ-ಕಾನನಗಳೊಂದಿಗೆ ದಿಕ್ಕುಗಳು, ಸಮುದ್ರಗಳು, ನದಿಗಳು, ಶೈಲಗಳು ಎಲ್ಲಕಡೆಗಳಿಂದ ಪ್ರತ್ಯುತ್ತರಿಸಿದವು: “ವಿಪ್ರ! ನೀನು ಆಜ್ಞಾಪಿಸಿದಂತೆಯೇ ಆಗುತ್ತದೆ. ಋಷಿಯು ಆಡಿದ ಮಾತನ್ನೇ ನಾವು ಪ್ರತಿಧ್ವನಿಸುತ್ತೇವೆ!””

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಶುಕಾಭಿಪತನೇ ಏಕೋನವಿಂಶಾಧಿಕತ್ರಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಶುಕಾಭಿಪತನ ಎನ್ನುವ ಮುನ್ನೂರಾಹತ್ತೊಂಭತ್ತನೇ ಅಧ್ಯಾಯವು.


  1. ಗಿರಿಶೃಂಗಂ ಎಂಬ ಪಾಠಾಂತರವಿದೆ (ಭಾರತ ದರ್ಶನ). ↩︎