ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 318
ಸಾರ
ನಾರದನು ಶುಕನಿಗೆ ಮೋಕ್ಷಧರ್ಮವನ್ನು ಉಪದೇಶಿಸಿದುದು (1-45). ಶುಕನು ಮೋಕ್ಷವನ್ನು ಪಡೆಯಲು ತಂದೆಯನ್ನು ಪರಿತ್ಯಜಿಸಿ ಸೂರ್ಯಮಂಡಲದ ಕಡೆ ಪ್ರಯಾಣಿಸಿದುದು (46-63).
12318001 ನಾರದ ಉವಾಚ।
12318001a ಸುಖದುಃಖವಿಪರ್ಯಾಸೋ ಯದಾ ಸಮುಪಪದ್ಯತೇ।
12318001c ನೈನಂ ಪ್ರಜ್ಞಾ ಸುನೀತಂ ವಾ ತ್ರಾಯತೇ ನಾಪಿ ಪೌರುಷಮ್।।
ನಾರದನು ಹೇಳಿದನು: “ಸುಖದುಃಖಗಳ ವಿಪರ್ಯಾಸ1ವುಂಟಾದಾಗ ಪ್ರಜ್ಞೆಯಾಗಲೀ, ಉತ್ತಮ ನೀತಿಯಾಗಲೀ ಅಥವಾ ಪೌರುಷವಾಗಲೀ ಮನುಷ್ಯನನ್ನು ರಕ್ಷಿಸುವುದಿಲ್ಲ.
12318002a ಸ್ವಭಾವಾದ್ಯತ್ನಮಾತಿಷ್ಠೇದ್ಯತ್ನವಾನ್ನಾವಸೀದತಿ।
12318002c ಜರಾಮರಣರೋಗೇಭ್ಯಃ ಪ್ರಿಯಮಾತ್ಮಾನಮುದ್ಧರೇತ್।।
ಆದುದರಿಂದ ಸ್ವಾಭಾವಿಕವಾಗಿಯೇ ಜ್ಞಾನಪ್ರಾಪ್ತಿಗೆ ಪ್ರಯತ್ನಿಸಬೇಕು. ಹಾಗೆ ಪ್ರಯತ್ನಿಸುವವನು ನಾಶನಾಗುವುದಿಲ್ಲ. ಪ್ರಿಯ ಆತ್ಮನನ್ನು ಜರಾಮರಣರೋಗಗಳಿಂದ ರಕ್ಷಿಸಿಕೊಳ್ಳಬೇಕು.
12318003a ರುಜಂತಿ ಹಿ ಶರೀರಾಣಿ ರೋಗಾಃ ಶಾರೀರಮಾನಸಾಃ।
12318003c ಸಾಯಕಾ ಇವ ತೀಕ್ಷ್ಣಾಗ್ರಾಃ ಪ್ರಯುಕ್ತಾ ದೃಢಧನ್ವಿಭಿಃ।।
ಶಾರೀರಿಕ ಮತ್ತು ಮಾನಸಿಕ ರೋಗಗಳು ದೃಢಧನ್ವಿಯು ಪ್ರಯೋಗಿಸಿದ ತೀಕ್ಷ್ಣಾಗ್ರ ಸಾಯಕಗಳಂತೆ ಶರೀರಗಳನ್ನು ಬಾಧಿಸುತ್ತಲೇ ಇರುತ್ತವೆ.
12318004a ವ್ಯಾಧಿತಸ್ಯ ವಿವಿತ್ಸಾಭಿಸ್ತ್ರಸ್ಯತೋ ಜೀವಿತೈಷಿಣಃ2।
12318004c ಅವಶಸ್ಯ ವಿನಾಶಾಯ ಶರೀರಮಪಕೃಷ್ಯತೇ।।
ಇಂದ್ರಿಯಗಳಿಗೆ ಅಧೀನನಾಗಿ ಜೀವಿಸಲು ಇಚ್ಛಿಸುವವನ ಶರೀರವನ್ನು ವಿವಿಧ ವ್ಯಾಧಿಗಳು ಕಾಡಿ ವಿನಾಶದೆಡೆಗೆ ಕೊಂಡೊಯ್ಯುತ್ತವೆ.
12318005a ಸ್ರವಂತಿ ನ ನಿವರ್ತಂತೇ ಸ್ರೋತಾಂಸಿ ಸರಿತಾಮಿವ।
12318005c ಆಯುರಾದಾಯ ಮರ್ತ್ಯಾನಾಂ ರಾತ್ರ್ಯಹಾನಿ ಪುನಃ ಪುನಃ।।
ನದಿಯ ಪ್ರವಾಹವು ಹಿಂದಕ್ಕೆ ಬರದೇ ಮುಂದು-ಮುಂದಕ್ಕೇ ಹರಿದುಕೊಂಡು ಹೋಗುವಂತೆ ರಾತ್ರಿ-ಹಗಲುಗಳು ಪುನಃ ಪುನಃ ಮುಂದೆ ಹೋಗುತ್ತಾ ಮನುಷ್ಯರ ಆಯುಷ್ಯವನ್ನು ಅಪಹರಿಸುತ್ತಿರುತ್ತವೆ.
12318006a ವ್ಯತ್ಯಯೋ ಹ್ಯಯಮತ್ಯಂತಂ ಪಕ್ಷಯೋಃ ಶುಕ್ಲಕೃಷ್ಣಯೋಃ।
12318006c ಜಾತಂ ಮರ್ತ್ಯಂ ಜರಯತಿ ನಿಮೇಷಂ ನಾವತಿಷ್ಠತೇ।।
ನಿಮಿಷಮಾತ್ರವೂ ನಿಲ್ಲದೇ ಸತತವಾಗಿ ಮರುಕಳಿಸುತ್ತಿರುವ ಶುಕ್ಲ-ಕೃಷ್ಣಪಕ್ಷಗಳು ಹುಟ್ಟಿದ ಮನುಷ್ಯನನ್ನು ಮುಪ್ಪಾಗಿಸುತ್ತವೆ.
12318007a ಸುಖದುಃಖಾನಿ ಭೂತಾನಾಮಜರೋ ಜರಯನ್ನಸೌ।
12318007c ಆದಿತ್ಯೋ ಹ್ಯಸ್ತಮಭ್ಯೇತಿ ಪುನಃ ಪುನರುದೇತಿ ಚ।।
ಪ್ರತಿನಿತ್ಯವೂ ಅಸ್ತಮಿಸುವ ಮತ್ತು ಪುನಃ ಉದಯಿಸುವ ಸೂರ್ಯನು ಅಜರನಾಗಿದ್ದರೂ ಪ್ರಾಣಿಗಳನ್ನು ಸುಖದುಃಖಗಳ ಮೂಲಕ ಜೀರ್ಣಗೊಳಿಸುತ್ತಿರುತ್ತಾನೆ.
12318008a ಅದೃಷ್ಟಪೂರ್ವಾನಾದಾಯ ಭಾವಾನಪರಿಶಂಕಿತಾನ್।
12318008c ಇಷ್ಟಾನಿಷ್ಟಾನ್ಮನುಷ್ಯಾಣಾಮಸ್ತಂ ಗಚ್ಚಂತಿ ರಾತ್ರಯಃ।।
ರಾತ್ರಿಗಳು ಮನುಷ್ಯರಿಗೆ ಅದೃಷ್ಟವೂ ಅಪೂರ್ವವೂ ಆದ ಇಷ್ಟ-ಅನಿಷ್ಟ ಭಾವಗಳನ್ನು ಮೂಡಿಸುತ್ತಾ ಅಸ್ತವಾಗುತ್ತಿರುತ್ತವೆ.
12318009a ಯೋ ಯಮಿಚ್ಚೇದ್ಯಥಾಕಾಮಂ ಕಾಮಾನಾಂ ತತ್ತದಾಪ್ನುಯಾತ್।
12318009c ಯದಿ ಸ್ಯಾನ್ನ ಪರಾಧೀನಂ ಪುರುಷಸ್ಯ ಕ್ರಿಯಾಫಲಮ್।।
ಒಂದುವೇಳೆ ಪುರುಷನ ಕ್ರಿಯೆಯ ಫಲಗಳು ಪರಾಧೀನವಾಗಿರದೇ ಇದ್ದಿದ್ದರೆ ಅವನು ಯಾವ್ಯಾವುದನ್ನು ಕಾಮಿಸುತ್ತಿದ್ದನೋ ಆ ಕಾಮನೆಗಳನ್ನು ಪಡೆದುಕೊಳ್ಳುತ್ತಿದ್ದನು.
12318010a ಸಂಯತಾಶ್ಚ ಹಿ ದಕ್ಷಾಶ್ಚ ಮತಿಮಂತಶ್ಚ ಮಾನವಾಃ।
12318010c ದೃಶ್ಯಂತೇ ನಿಷ್ಫಲಾಃ ಸಂತಃ ಪ್ರಹೀಣಾಶ್ಚ ಸ್ವಕರ್ಮಭಿಃ।।
ಇಂದ್ರಿಯ ನಿಗ್ರಹಿಗಳೂ ದಕ್ಷರೂ ಮತಿಮಂತರೂ ಆದ ಮಾನವರು ತಮ್ಮ ಕರ್ಮಗಳ ಫಲಗಳಲ್ಲಿ ನಿರತರಾಗಿದ್ದರೂ ಅವುಗಳ ಫಲಗಳನ್ನು ತೊರೆದಿರುವುದು ಕಂಡುಬರುತ್ತದೆ.
12318011a ಅಪರೇ ಬಾಲಿಶಾಃ ಸಂತೋ ನಿರ್ಗುಣಾಃ ಪುರುಷಾಧಮಾಃ।
12318011c ಆಶೀರ್ಭಿರಪ್ಯಸಂಯುಕ್ತಾ ದೃಶ್ಯಂತೇ ಸರ್ವಕಾಮಿನಃ।।
ಇನ್ನು ಕೆಲವರು ಮೂರ್ಖರಾಗಿರುತ್ತಾರೆ. ನಿರ್ಗುಣರೂ ಪುರುಷಾಧಮರೂ, ಹಿರಿಯರ ಆಶೀರ್ವಾದಗಳಿಲ್ಲದವರೂ ಆದ ಅವರು ಸರ್ವಕಾಮಗಳನ್ನೂ ಪಡೆದುಕೊಂಡಿರುವುದನ್ನೂ ನಾವು ನೋಡುತ್ತೇವೆ.
12318012a ಭೂತಾನಾಮಪರಃ ಕಶ್ಚಿದ್ಧಿಂಸಾಯಾಂ ಸತತೋತ್ಥಿತಃ।
12318012c ವಂಚನಾಯಾಂ ಚ ಲೋಕಸ್ಯ ಸ ಸುಖೇಷ್ವೇವ ಜೀರ್ಯತೇ।।
ಇನ್ನು ಕೆಲವರು ಸತತವೂ ಇತರರ ಹಿಂಸೆಯಲ್ಲಿಯೇ ನಿರತರಾಗಿರುತ್ತಾರೆ. ಜನರನ್ನು ಮೋಸಗೊಳಿಸುತ್ತಾ ಅವರು ಸುಖೋಪಭೋಗಗಳಲ್ಲಿಯೇ ಮುದಿಯಾಗುತ್ತಾರೆ.
12318013a ಅಚೇಷ್ಟಮಾನಮಾಸೀನಂ ಶ್ರೀಃ ಕಂ ಚಿದುಪತಿಷ್ಠತಿ।
12318013c ಕಶ್ಚಿತ್ಕರ್ಮಾನುಸೃತ್ಯಾನ್ಯೋ ನ ಪ್ರಾಪ್ಯಮಧಿಗಚ್ಚತಿ।।
ಕೆಲವೊಮ್ಮೆ ಯಾವ ಕೆಲಸವನ್ನೂ ಮಾಡದೇ ಕುಳಿತಿರುವವನ ಬಳಿಗೆ ಸಂಪತ್ತು ತಾನೇ ತಾನಾಗಿ ಹೋಗಿ ಸೇರುತ್ತದೆ. ಮತ್ತೊಬ್ಬನು ಕಷ್ಟಪಟ್ಟು ದುಡಿದರೂ ತಾನು ಹೊಂದಬೇಕಾದ ವಸ್ತುವನ್ನು ಹೊಂದುವುದಿಲ್ಲ.
12318014a ಅಪರಾಧಂ ಸಮಾಚಕ್ಷ್ವ ಪುರುಷಸ್ಯ ಸ್ವಭಾವತಃ।
12318014c ಶುಕ್ರಮನ್ಯತ್ರ ಸಂಭೂತಂ ಪುನರನ್ಯತ್ರ ಗಚ್ಚತಿ।।
ಇದರಲ್ಲಿ ಪುರುಷನ ಸ್ವಭಾವತಃ ಅಪರಾಧವನ್ನು ನೋಡು. ವೀರ್ಯವು ಎಲ್ಲಿಯೋ ಹುಟ್ಟುತ್ತದೆ ಮತ್ತು ಪುನಃ ಬೇರೆ ಎಲ್ಲಿಯೋ ಹೋಗುತ್ತದೆ.
12318015a ತಸ್ಯ ಯೋನೌ ಪ್ರಸಕ್ತಸ್ಯ ಗರ್ಭೋ ಭವತಿ ವಾ ನ ವಾ।
12318015c ಆಮ್ರಪುಷ್ಪೋಪಮಾ ಯಸ್ಯ ನಿವೃತ್ತಿರುಪಲಭ್ಯತೇ।।
ಯೋನಿಯನ್ನು ಪ್ರವೇಶಿಸಿದ ವೀರ್ಯದಿಂದ ಗರ್ಭವು ಉಂಟಾಗಬಹುದು ಅಥವಾ ಆಗದಿರಬಹುದು. ಮಾವಿನ ಹೂವಿನಂತೆ ಕೆಲವು ವೇಳೆ ಅದು ವ್ಯರ್ಥವಾಗುವುದೂ ಕಂಡುಬರುತ್ತದೆ.
12318016a ಕೇಷಾಂ ಚಿತ್ಪುತ್ರಕಾಮಾನಾಮನುಸಂತಾನಮಿಚ್ಚತಾಮ್।
12318016c ಸಿದ್ಧೌ ಪ್ರಯತಮಾನಾನಾಂ ನೈವಾಂಡಮುಪಜಾಯತೇ।।
ಕೆಲವರು ಪುತ್ರಾಪೇಕ್ಷಿಗಳು ತಮ್ಮ ಮಕ್ಕಳಿಗೂ ಮಕ್ಕಳಾಗಬೇಕೆಂದು ಬಯಸಿರುತ್ತಾರೆ. ಅವರು ಎಷ್ಟೇ ಪ್ರಯತ್ನಗಳನ್ನು ಮಾಡಿದರೂ ಅವರಿಗೆ ಒಂದು ಸಂತಾನವೂ ಆಗುವುದಿಲ್ಲ.
12318017a ಗರ್ಭಾಚ್ಚೋದ್ವಿಜಮಾನಾನಾಂ ಕ್ರುದ್ಧಾದಾಶೀವಿಷಾದಿವ।
12318017c ಆಯುಷ್ಮಾನ್ ಜಾಯತೇ ಪುತ್ರಃ ಕಥಂ ಪ್ರೇತಃ ಪಿತೈವ ಸಃ।।
ಕೆಲವೊಮ್ಮೆ ಪತ್ನಿಯು ಗರ್ಭಿಣಿಯಾದಳೆಂದರೆ ಕುಪಿತ ಸರ್ಪಕ್ಕೆ ಹೆದರುವಂತೆ ಹೆದರುವವನಿಗೆ ಆಯುಷ್ಮಂತ ಪುತ್ರನೇ ಹುಟ್ಟುತ್ತಾನೆ. ಸಾಯುವುದೇ ಇಲ್ಲವೇನೋ ಎಂಬಂತೆ ಬದುಕಿರುತ್ತಾನೆ.
12318018a ದೇವಾನಿಷ್ಟ್ವಾ ತಪಸ್ತಪ್ತ್ವಾ ಕೃಪಣೈಃ ಪುತ್ರಗೃದ್ಧಿಭಿಃ।
12318018c ದಶ ಮಾಸಾನ್ ಪರಿಧೃತಾ ಜಾಯಂತೇ ಕುಲಪಾಂಸನಾಃ।।
ಕೆಲವೊಮ್ಮೆ ದೇವತೆಗಳನ್ನು ಆರಾಧಿಸಿ, ತಪಸ್ಸನ್ನು ತಪಿಸಿ, ಪುತ್ರನ ಆಸೆಯಿಂದ ಕೃಪಣಳಾಗಿ ಹತ್ತು ಮಾಸಗಳು ಗರ್ಭವನ್ನು ಹೊತ್ತವಳಿಗೆ ಕುಲಪಾಂಸನನೇ ಹುಟ್ಟುತ್ತಾನೆ.
12318019a ಅಪರೇ ಧನಧಾನ್ಯಾನಿ ಭೋಗಾಂಶ್ಚ ಪಿತೃಸಂಚಿತಾನ್।
12318019c ವಿಪುಲಾನಭಿಜಾಯಂತೇ ಲಬ್ಧಾಸ್ತೈರೇವ ಮಂಗಲೈಃ।।
ಇಂತಹ ಮಂಗಲಕಾರ್ಯಗಳಿಂದ ಹುಟ್ಟಿದ ಕೆಲವು ಪುತ್ರರು ಪಿತೃಸಂಚಿತವಾದ ವಿಪುಲ ಧನ-ಧಾನ್ಯಗಳನ್ನೂ ಭೋಗಗಳನ್ನೂ ಪಡೆದು ಅನುಭವಿಸುತ್ತಲೇ ಇರುತ್ತಾರೆ.
12318020a ಅನ್ಯೋನ್ಯಂ ಸಮಭಿಪ್ರೇತ್ಯ ಮೈಥುನಸ್ಯ ಸಮಾಗಮೇ।
12318020c ಉಪದ್ರವ ಇವಾವಿಷ್ಟೋ ಯೋನಿಂ ಗರ್ಭಃ ಪ್ರಪದ್ಯತೇ।।
ಪತಿ-ಪತ್ನಿಯರು ಅನ್ಯೋನ್ಯರೊಡನೆ ಕಲೆತು ಮೈಥುನಕ್ಕೆ ಸಮಾಗಮವಾದಾಗ ಉಪದ್ರವವು ಪ್ರವೇಶಿಸಿದಂತೆ ಗರ್ಭವು ಯೋನಿಯನ್ನು ಸೇರುತ್ತದೆ.
12318021a ಶೀರ್ಣಂ ಪರಶರೀರೇಣ ನಿಚ್ಚವೀಕಂ ಶರೀರಿಣಮ್3।
12318021c ಪ್ರಾಣಿನಾಂ ಪ್ರಾಣಸಂರೋಧೇ ಮಾಂಸಶ್ಲೇಷ್ಮವಿಚೇಷ್ಟಿತಮ್।।
ಮಾಂಸ-ಕಫಗಳಿಂದ ಪ್ರಾಣಿಯ ಮರಣವಾದಾಗ ಶರೀರಿಗೆ ಬೇರೆಯ ಅಸ್ಥಿರ ಶರೀರವು ಪ್ರಾಪ್ತವಾಗುತ್ತದೆ.
12318022a ನಿರ್ದಗ್ಧಂ ಪರದೇಹೇನ ಪರದೇಹಂ ಚಲಾಚಲಮ್।
12318022c ವಿನಶ್ಯಂತಂ ವಿನಾಶಾಂತೇ ನಾವಿ ನಾವಮಿವಾಹಿತಮ್।।
ಯಾವ ರೀತಿಯಲ್ಲಿ ಒಂದು ನೌಕೆಯು ಭಗ್ನವಾದಾಗ ಅದರಲ್ಲಿರುವ ಜನರನ್ನು ತುಂಬಿಕೊಳ್ಳಲು ಮತ್ತೊಂದು ನೌಕೆಯು ಸಿದ್ಧವಾಗಿರುವುದೋ – ಅದೇ ರೀತಿಯಲ್ಲಿ ಶರೀರವು ಭಗ್ನವಾಗಿ ಆ ಶರೀರದಿಂದ ಜೀವನು ಹೊರಬಂದನಂತರ ಆ ಜೀವನ ಕರ್ಮಫಲಾನುಸಾರವಾಗಿ ಅಸ್ಥಿರವಾದ ಮತ್ತೊಂದು ಶರೀರವು ಸಿದ್ಧವಾಗಿಯೇ ಇರುತ್ತದೆ.
12318023a ಸಂಗತ್ಯಾ ಜಠರೇ ನ್ಯಸ್ತಂ ರೇತೋಬಿಂದುಮಚೇತನಮ್।
12318023c ಕೇನ ಯತ್ನೇನ ಜೀವಂತಂ ಗರ್ಭಂ ತ್ವಮಿಹ ಪಶ್ಯಸಿ।।
ಮಿಥುನ ಸಮಾಗಮದಿಂದ ಜಠರದಲ್ಲಿ ಇರಿಸಲ್ಪಟ್ಟ ಅಚೇತಸ ರೇತೋ ಬಿಂದುವು ಯಾವ ಪ್ರಯತ್ನದಿಂದ ಜೀವಂತವಾಗುತ್ತದೆ ಎನ್ನುವುದನ್ನು ನೀನು ಇಲ್ಲಿ ಕಾಣುತ್ತೀಯೆ.
12318024a ಅನ್ನಪಾನಾನಿ ಜೀರ್ಯಂತೇ ಯತ್ರ ಭಕ್ಷಾಶ್ಚ ಭಕ್ಷಿತಾಃ।
12318024c ತಸ್ಮಿನ್ನೇವೋದರೇ ಗರ್ಭಃ ಕಿಂ ನಾನ್ನಮಿವ ಜೀರ್ಯತೇ।।
ಅನ್ನಪಾನಾದಿಗಳು ಮತ್ತು ಭಕ್ಷಿಸಿದ ಭಕ್ಷಗಳು ಜೀರ್ಣವಾಗುವ ಅದೇ ಉದರದಲ್ಲಿ ಗರ್ಭವು ಏಕೆ ಜೀರ್ಣವಾಗಿ ಹೋಗುವುದಿಲ್ಲ?
12318025a ಗರ್ಭಮೂತ್ರಪುರೀಷಾಣಾಂ ಸ್ವಭಾವನಿಯತಾ ಗತಿಃ।
12318025c ಧಾರಣೇ ವಾ ವಿಸರ್ಗೇ ವಾ ನ ಕರ್ತುರ್ವಿದ್ಯತೇ ವಶಃ।।
12318026a ಸ್ರವಂತಿ ಹ್ಯುದರಾದ್ಗರ್ಭಾ ಜಾಯಮಾನಾಸ್ತಥಾಪರೇ।
12318026c ಆಗಮೇನ ಸಹಾನ್ಯೇಷಾಂ ವಿನಾಶ ಉಪಪದ್ಯತೇ।।
ಸ್ವಭಾವತಃ ಗರ್ಭ, ಮೂತ್ರ ಮತ್ತು ಪುರೀಷಗಳಿಗೆ ಅವುಗಳದ್ದೇ ಆದ ಮಾರ್ಗಗಳಿವೆ. ಗರ್ಭದ ಧಾರಣೆ ಮತ್ತು ವಿಸರ್ಗವು ಕರ್ತೃವಿನ ವಶದಲ್ಲಿರುವುದಿಲ್ಲ. ಉದರದಿಂದ ಗರ್ಭವು ಹರಿದುಹೋಗಬಹುದು. ಮತ್ತೆ ಕೆಲವು ಹುಟ್ಟುವಾಗಲೇ ಸತ್ತುಹೋಗಿರಬಹುದು. ಇತರ ಕೆಲವು ಹುಟ್ಟಿದ ನಂತರ ನಾಶಹೊಂದುತ್ತವೆ.
12318027a ಏತಸ್ಮಾದ್ಯೋನಿಸಂಬಂಧಾದ್ಯೋ ಜೀವನ್ ಪರಿಮುಚ್ಯತೇ।
12318027c ಪ್ರಜಾಂ ಚ ಲಭತೇ ಕಾಂ ಚಿತ್ಪುನರ್ದ್ವಂದ್ವೇಷು ಮಜ್ಜತಿ।।
ಯೋನಿಸಂಬಂಧದಿಂದ ಜೀವಂತವಾಗಿ ಹೊರಬರುವುದು ಸಂತಾನವೆನಿಸಿಕೊಳ್ಳುತ್ತದೆ. ಸಂತಾನವಾದೊಡನೆ ಪುನಃ ಪರಸ್ಪರ ಸಮಾಗಮದಲ್ಲಿ ಮುಳುಗುತ್ತಾರೆ.
12318028a ಶತಸ್ಯ ಸಹಜಾತಸ್ಯ ಸಪ್ತಮೀಂ ದಶಮೀಂ ದಶಾಮ್4।
12318028c ಪ್ರಾಪ್ನುವಂತಿ ತತಃ ಪಂಚ ನ ಭವಂತಿ ಶತಾಯುಷಃ।।
ನೂರು ವರ್ಷ ಆಯಸ್ಸನ್ನು ಪಡೆದು ಹುಟ್ಟಿದವನೂ ಏಳನೆಯ ಮತ್ತು ಹತ್ತನೆಯ ದಶೆಗಳನ್ನು5 ಹೊಂದಿ ನಂತರ ನೂರನೇ ವರ್ಷದಲ್ಲಿ ಪಂಚಭೂತಗಳಿಲ್ಲದವನಾಗುತ್ತಾನೆ.
12318029a ನಾಭ್ಯುತ್ಥಾನೇ ಮನುಷ್ಯಾಣಾಂ ಯೋಗಾಃ ಸ್ಯುರ್ನಾತ್ರ ಸಂಶಯಃ।
12318029c ವ್ಯಾಧಿಭಿಶ್ಚ ವಿಮಥ್ಯಂತೇ ವ್ಯಾಲೈಃ ಕ್ಷುದ್ರಮೃಗಾ ಇವ।।
ಹಿಂಸಮೃಗಗಳು ಕ್ಷುದ್ರಮೃಗಗಳನ್ನು ಹಿಂಸಿಸುವಂತೆ ನಾನಾವಿಧದ ವ್ಯಾಧಿಗಳು ಮನುಷ್ಯನನ್ನು ತಿಕ್ಕಿ-ತೀಡುತ್ತವೆ. ಆ ಸಮಯದಲ್ಲಿ ಮನುಷ್ಯರಿಗೆ ಮೇಲೇಳಲು ಮತ್ತು ಕುಳಿತುಕೊಳ್ಳಲು ಕೂಡ ಶಕ್ತಿಯಿರುವುದಿಲ್ಲ ಎನ್ನುವುದರಲ್ಲಿ ಸಂಶಯವಿಲ್ಲ.
12318030a ವ್ಯಾಧಿಭಿರ್ಭಕ್ಷ್ಯಮಾಣಾನಾಂ ತ್ಯಜತಾಂ ವಿಪುಲಂ ಧನಮ್।
12318030c ವೇದನಾಂ ನಾಪಕರ್ಷಂತಿ ಯತಮಾನಾಶ್ಚಿಕಿತ್ಸಕಾಃ।।
ವ್ಯಾಧಿಗಳು ಹಾಗೆ ತಿನ್ನುತ್ತಿರಲು ಅವರು ವಿಪುಲ ಧನವನ್ನೂ ಖರ್ಚುಮಾಡುತ್ತಾರೆ. ಪ್ರಯತ್ನಿಸಿದರೂ ಚಿಕಿತ್ಸಕರು ಅವರನ್ನು ವೇದನೆಯಿಂದ ಹೊರತರಲು ಶಕ್ಯರಾಗುವುದಿಲ್ಲ.
12318031a ತೇ ಚಾಪಿ ನಿಪುಣಾ ವೈದ್ಯಾಃ ಕುಶಲಾಃ ಸಂಭೃತೌಷಧಾಃ।
12318031c ವ್ಯಾಧಿಭಿಃ ಪರಿಕೃಷ್ಯಂತೇ ಮೃಗಾ ವ್ಯಾಧೈರಿವಾರ್ದಿತಾಃ।।
ನಿಪುಣರಾದ ಕುಶಲರಾದ ಮತ್ತು ಉತ್ತಮ ಔಷಧಿಗಳನ್ನು ತಿಳಿದುಕೊಂಡಿರುವ ವೈದ್ಯರೂ ಕೂಡ -ವ್ಯಾಧರಿಂದ ಪ್ರಾಣಿಗಳು ಮರ್ದಿಸಲ್ಪಡುವಂತೆ- ವ್ಯಾಧಿಗಳಿಂದ ಪೀಡಿತರಾಗುತ್ತಾರೆ.
12318032a ತೇ ಪಿಬಂತಃ ಕಷಾಯಾಂಶ್ಚ ಸರ್ಪೀಂಷಿ ವಿವಿಧಾನಿ ಚ।
12318032c ದೃಶ್ಯಂತೇ ಜರಯಾ ಭಗ್ನಾ ನಾಗಾ ನಾಗೈರಿವೋತ್ತಮೈಃ।।
ಅವರು ವಿವಿಧ ಕಷಾಯಗಳನ್ನೂ ತುಪ್ಪಗಳನ್ನೂ ಕುಡಿಯುತ್ತಿದ್ದರೂ ದೊಡ್ಡ ದೊಡ್ಡ ಆನೆಗಳಿಂದ ಪರ್ವತಗಳು ಪುಡಿಪುಡಿಯಾಗುವಂತೆ ಮುಪ್ಪಿನಿಂದ ಭಗ್ನರಾಗುವುದನ್ನು ನೋಡುತ್ತೇವೆ.
12318033a ಕೇ ವಾ ಭುವಿ ಚಿಕಿತ್ಸಂತೇ ರೋಗಾರ್ತಾನ್ ಮೃಗಪಕ್ಷಿಣಃ।
12318033c ಶ್ವಾಪದಾನಿ ದರಿದ್ರಾಂಶ್ಚ ಪ್ರಾಯೋ ನಾರ್ತಾ ಭವಂತಿ ತೇ।।
ಈ ಭುವಿಯಲ್ಲಿ ರೋಗಾರ್ತರಾಗಿರುವ ಮೃಗಪಕ್ಷಿಗಳಿಗೆ, ಕ್ರೂರ ಪ್ರಾಣಿಗಳಿಗೆ ಮತ್ತು ದರಿದ್ರರಿಗೆ ಯಾರು ತಾನೇ ಚಿಕಿತ್ಸೆಯನ್ನು ಮಾಡುತ್ತಾರೆ? ಪ್ರಾಯಶಃ ಅವುಗಳು ಆರ್ತರೇ ಆಗುವುದಿಲ್ಲ.
12318034a ಘೋರಾನಪಿ ದುರಾಧರ್ಷಾನ್ನೃಪತೀನುಗ್ರತೇಜಸಃ।
12318034c ಆಕ್ರಮ್ಯ ರೋಗ ಆದತ್ತೇ ಪಶೂನ್ ಪಶುಪಚೋ ಯಥಾ6।।
ಪಶುಭಕ್ಷ ಮೃಗಗಳು ಪಶುಗಳನ್ನು ಆಕ್ರಮಿಸುವಂತೆ ಘೋರ ದುರಾಧರ್ಷ ಉಗ್ರತೇಜಸ್ವೀ ನೃಪತಿಯರನ್ನೂ ಕೂಡ ರೋಗವು ಆಕ್ರಮಣಿಸಿ ಕೊಂಡೊಯ್ಯುತ್ತದೆ.
12318035a ಇತಿ ಲೋಕಮನಾಕ್ರಂದಂ ಮೋಹಶೋಕಪರಿಪ್ಲುತಮ್।
12318035c ಸ್ರೋತಸಾ ಸಹಸಾ ಕ್ಷಿಪ್ತಂ ಹ್ರಿಯಮಾಣಂ ಬಲೀಯಸಾ।।
ಹೀಗೆ ಸಂಸಾರವೆಂಬ ನದಿಯಲ್ಲಿ ತಳ್ಳಲ್ಪಟ್ಟು ಮೋಹ-ಶೋಕಗಳಲ್ಲಿಯೇ ಮುಳುಗಿ, ಬಲಿಷ್ಠ ಪ್ರವಾಹದಿಂದ ಬಹುಬೇಗ ಸೆಳೆದುಕೊಂಡು ಹೋಗುತ್ತಿರುವ ಈ ಲೋಕವು ಯಾವ ಕೂಗಾಟವೂ ಇಲ್ಲದೇ ಮುಂದುವರಿಯುತ್ತಲೇ ಇದೆ.
12318036a ನ ಧನೇನ ನ ರಾಜ್ಯೇನ ನೋಗ್ರೇಣ ತಪಸಾ ತಥಾ।
12318036c ಸ್ವಭಾವಾ ವ್ಯತಿವರ್ತಂತೇ ಯೇ ನಿಯುಕ್ತಾಃ ಶರೀರಿಷು।।
ಕರ್ಮಫಲಗಳನ್ನು ಉಪಭೋಗಿಸಲು ವಿಧಿಯಿಂದ ನಿಯುಕ್ತರಾಗಿರುವ ಮನುಷ್ಯರಿಗೆ ಧನದಿಂದಾಗಲೀ, ರಾಜ್ಯದಿಂದಾಗಲೀ, ಮತ್ತು ಉಗ್ರ ತಪಸ್ಸಿನಿಂದಾಗಲೀ ಸ್ವಭಾವವನ್ನು ಅತಿಕ್ರಮಿಸಲು ಸಾಧ್ಯವಾಗುವುದಿಲ್ಲ.
12318037a ನ ಮ್ರಿಯೇರನ್ನ ಜೀರ್ಯೇರನ್ಸರ್ವೇ ಸ್ಯುಃ ಸರ್ವಕಾಮಿಕಾಃ।
12318037c ನಾಪ್ರಿಯಂ ಪ್ರತಿಪಶ್ಯೇಯುರುತ್ಥಾನಸ್ಯ ಫಲಂ ಪ್ರತಿ।।
ಪ್ರಯತ್ನಕ್ಕೆ ತಕ್ಕ ಫಲವು ಹಸ್ತಗತವಾಗುತ್ತಿದ್ದರೆ ಮನುಷ್ಯರು ಮುದುಕರಾಗುತ್ತಿರಲಿಲ್ಲ, ಸಾಯುತ್ತಲೂ ಇರಲಿಲ್ಲ. ಅಪ್ರಿಯ ಘಟನೆಗಳನ್ನು ಕಾಣುತ್ತಲೂ ಇರಲಿಲ್ಲ. ಎಲ್ಲರೂ ತಮ್ಮ ತಮ್ಮ ಕಾಮನೆಗಳನ್ನು ಪಡೆದುಕೊಳ್ಳುತ್ತಿದ್ದರು.
12318038a ಉಪರ್ಯುಪರಿ ಲೋಕಸ್ಯ ಸರ್ವೋ ಭವಿತುಮಿಚ್ಚತಿ।
12318038c ಯತತೇ ಚ ಯಥಾಶಕ್ತಿ ನ ಚ ತದ್ವರ್ತತೇ ತಥಾ।।
ಎಲ್ಲರೂ ಮೇಲು-ಮೇಲಿನ ಲೋಕಗಳಿಗೇ ಹೋಗಲು ಇಚ್ಛಿಸುತ್ತಾರೆ. ಯಥಾಶಕ್ತಿ ಪ್ರಯತ್ನಿಸುತ್ತಾರೆ ಕೂಡ. ಆದರೆ ಅದು ಸಾಧ್ಯವಾಗುವುದಿಲ್ಲ.
12318039a ಐಶ್ವರ್ಯಮದಮತ್ತಾಂಶ್ಚ ಮತ್ತಾನ್ಮದ್ಯಮದೇನ ಚ।
12318039c ಅಪ್ರಮತ್ತಾಃ ಶಠಾಃ ಕ್ರೂರಾ7 ವಿಕ್ರಾಂತಾಃ ಪರ್ಯುಪಾಸತೇ।।
ಅಪ್ರಮತ್ತರೂ ಶಠರೂ ಕ್ರೂರರೂ ವಿಕ್ರಾಂತರೂ ಕೂಡ ಐಶ್ವರ್ಯಮದದಿಂದ ಮತ್ತರಾದ ಮತ್ತು ಮದ್ಯಪಾನದಿಂದ ಮತ್ತರಾದವರನ್ನು ಉಪಾಸಿಸುತ್ತಾರೆ.
12318040a ಕ್ಲೇಶಾಃ ಪ್ರತಿನಿವರ್ತಂತೇ ಕೇಷಾಂ ಚಿದಸಮೀಕ್ಷಿತಾಃ।
12318040c ಸ್ವಂ ಸ್ವಂ ಚ ಪುನರನ್ಯೇಷಾಂ ನ ಕಿಂ ಚಿದಭಿಗಮ್ಯತೇ।।
ಕೆಲವರಿಗೆ ಕ್ಲೇಶಗಳು ಯಾವ ಪ್ರಯತ್ನವೂ ಇಲ್ಲದೇ ಕಳೆದುಹೋಗುತ್ತವೆ. ಮತ್ತೆ ಕೆಲವರಿಗೆ ತಮ್ಮ ಐಶ್ವರ್ಯವೂ ಸಮಯಗಳಲ್ಲಿ ಉಪಯೋಗಕ್ಕೆ ಬರುವುದಿಲ್ಲ.
12318041a ಮಹಚ್ಚ ಫಲವೈಷಮ್ಯಂ ದೃಶ್ಯತೇ ಕರ್ಮಸಂಧಿಷು।
12318041c ವಹಂತಿ ಶಿಬಿಕಾಮನ್ಯೇ ಯಾಂತ್ಯನ್ಯೇ ಶಿಬಿಕಾಗತಾಃ।।
ಕರ್ಮಫಲಗಳಲ್ಲಿ ವಿಶೇಷ ವೈಪರೀತ್ಯವು ಕಂಡುಬರುತ್ತದೆ. ಕೆಲವರು ಪಲ್ಲಕ್ಕಿಗಳನ್ನು ಹೊರುತ್ತಾರೆ ಮತ್ತೆ ಕೆಲವರು ಆ ಪಲ್ಲಕ್ಕಿಗಳಲ್ಲಿ ಕುಳಿತು ಸಂಚರಿಸುತ್ತಾರೆ.
12318042a ಸರ್ವೇಷಾಮೃದ್ಧಿಕಾಮಾನಾಮನ್ಯೇ ರಥಪುರಃಸರಾಃ।
12318042c ಮನುಜಾಶ್ಚ ಶತಸ್ತ್ರೀಕಾಃ ಶತಶೋ ವಿಧವಾಃ ಸ್ತ್ರಿಯಃ।।
ಎಲ್ಲರೂ ಅಭಿವೃದ್ಧಿಯನ್ನೇ ಬಯಸುತ್ತಾರೆ. ಆದರೆ ಕೆಲವರು ಮಾತ್ರ ರಥಗಳಲ್ಲಿ ಕುಳಿತು ಹೋಗುತ್ತಾರೆ. ಕೆಲವರು ನೂರಾರು ಸ್ತ್ರೀಯರಲ್ಲಿ ಸುಖವನ್ನು ಪಡೆದರೆ ಇನ್ನು ಕೆಲವರಿಗೆ ಸ್ತ್ರೀಸೌಖ್ಯವೇ ಇರುವುದಿಲ್ಲ.
12318043a ದ್ವಂದ್ವಾರಾಮೇಷು ಭೂತೇಷು ಗಚ್ಚಂತ್ಯೇಕೈಕಶೋ ನರಾಃ।
12318043c ಇದಮನ್ಯತ್ ಪರಂ ಪಶ್ಯ ಮಾತ್ರ ಮೋಹಂ ಕರಿಷ್ಯಸಿ।।
ದ್ವಂದ್ವಗಳಲ್ಲಿ ಸಿಲುಕಿದ ಭೂತಗಳಲ್ಲಿ ಕೆಲವರು ದುಃಖವನ್ನು ಅನುಭವಿಸುತ್ತಿದ್ದರೆ ಇನ್ನು ಕೆಲವರು ಸುಖವನ್ನು ಅನುಭವಿಸುತ್ತಿರುತ್ತಾರೆ. ಆದರೆ ಬ್ರಹ್ಮಪದವು ಈ ದ್ವಂದ್ವಗಳಿಗಿಂತಲೂ ಭಿನ್ನವಾದುದು ಮತ್ತು ವಿಲಕ್ಷಣವಾದುದು. ಈ ವಿಷಯದಲ್ಲಿ ನಿನಗೆ ಗೊಂದಲ ಬೇಡ.
12318044a ತ್ಯಜ ಧರ್ಮಮಧರ್ಮಂ ಚ ಉಭೇ ಸತ್ಯಾನೃತೇ ತ್ಯಜ।
12318044c ಉಭೇ ಸತ್ಯಾನೃತೇ ತ್ಯಕ್ತ್ವಾ ಯೇನ ತ್ಯಜಸಿ ತಂ ತ್ಯಜ।।
ಧರ್ಮ-ಅಧರ್ಮಗಳೆರಡನ್ನೂ ತ್ಯಜಿಸು. ಸತ್ಯ-ಅನೃತಗಳೆರಡನ್ನೂ ತ್ಯಜಿಸು. ಸತ್ಯಾನೃತಗಳೆರಡನ್ನೂ ತ್ಯಜಿಸಿ ಅವನ್ನು ಯಾವುದರಿಂದ ತ್ಯಜಿಸಿದೆಯೋ ಅದನ್ನೂ ತ್ಯಜಿಸು.
12318045a ಏತತ್ತೇ ಪರಮಂ ಗುಹ್ಯಮಾಖ್ಯಾತಮೃಷಿಸತ್ತಮ।
12318045c ಯೇನ ದೇವಾಃ ಪರಿತ್ಯಜ್ಯ ಮರ್ತ್ಯಲೋಕಂ ದಿವಂ ಗತಾಃ।।
ಋಷಿಸತ್ತಮ! ಯಾವುದರಿಂದ ದೇವತೆಗಳು ಮರ್ತ್ಯಲೋಕವನ್ನು ತ್ಯಜಿಸಿ ದಿವಕ್ಕೆ ಹೋದರೋ ಆ ಪರಮ ಗುಹ್ಯ ಆಖ್ಯಾನವನ್ನು ನಿನಗೆ ಹೇಳಿದ್ದೇನೆ.””
12318046 ಭೀಷ್ಮ ಉವಾಚ।
12318046a ನಾರದಸ್ಯ ವಚಃ ಶ್ರುತ್ವಾ ಶುಕಃ ಪರಮಬುದ್ಧಿಮಾನ್।
12318046c ಸಂಚಿಂತ್ಯ ಮನಸಾ ಧೀರೋ ನಿಶ್ಚಯಂ ನಾಧ್ಯಗಚ್ಚತ।।
ಭೀಷ್ಮನು ಹೇಳಿದನು: “ನಾರದನ ವಚನವನ್ನು ಕೇಳಿ ಪರಮಬುದ್ಧಿಮಾನ್ ಧೀರ ಶುಕನು ಮನಸ್ಸಿನಲ್ಲಿಯೇ ಯೋಚಿಸಿ ಯಾವ ನಿಶ್ಚಯಕ್ಕೂ ಬರಲಿಲ್ಲ.
12318047a ಪುತ್ರದಾರೈರ್ಮಹಾನ್ಕ್ಲೇಶೋ ವಿದ್ಯಾಮ್ನಾಯೇ ಮಹಾನ್ಶ್ರಮಃ।
12318047c ಕಿಂ ನು ಸ್ಯಾಚ್ಚಾಶ್ವತಂ ಸ್ಥಾನಮಲ್ಪಕ್ಲೇಶಂ ಮಹೋದಯಮ್।।
“ಹೆಂಡತಿ-ಮಕ್ಕಳಿಂದ ಮಹಾ ಕ್ಲೇಶವುಂಟಾಗುತ್ತದೆ. ವಿದ್ಯೆಯನ್ನು ಪಡೆದುಕೊಳ್ಳುವುದೂ ಮಹಾ ಶ್ರಮಸಾಧ್ಯವಾದುದು. ಅಲ್ಪಕ್ಲೇಶದಿಂದ ಮಹಾ ಅಭ್ಯುದಯವಾಗುವ ಶಾಶ್ವತ ಸ್ಥಾನವನ್ನು ಹೇಗೆ ಪಡೆದುಕೊಳ್ಳಬಹುದು?”
12318048a ತತೋ ಮುಹೂರ್ತಂ ಸಂಚಿಂತ್ಯ ನಿಶ್ಚಿತಾಂ ಗತಿಮಾತ್ಮನಃ।
12318048c ಪರಾವರಜ್ಞೋ ಧರ್ಮಸ್ಯ ಪರಾಂ ನೈಃಶ್ರೇಯಸೀಂ ಗತಿಮ್।।
ಒಂದು ಮುಹೂರ್ತಕಾಲ ಹೀಗೆ ಯೋಚಿಸಿ ಆ ಪರಾವರಜ್ಞನು ಮುಕ್ತಿಯ ಮಾರ್ಗವಾದ ಪರಮ ಧರ್ಮದ ಕುರಿತು ತನ್ನಲ್ಲಿ ತಾನೇ ನಿಶ್ಚಯಿಸಿದನು.
12318049a ಕಥಂ ತ್ವಹಮಸಂಕ್ಲಿಷ್ಟೋ ಗಚ್ಚೇಯಂ ಪರಮಾಂ ಗತಿಮ್।
12318049c ನಾವರ್ತೇಯಂ ಯಥಾ ಭೂಯೋ ಯೋನಿಸಂಸಾರಸಾಗರೇ।।
“ಯಾವುದಕ್ಕೂ ಅಂಟಿಕೊಳ್ಳದೇ ಮತ್ತು ಪುನಃ ಈ ಯೋನಿ ಸಂಸಾರಸಾಗರಕ್ಕೆ ಪುನಃ ಹಿಂದಿರುಗದಂತಹ ಆ ಪರಮ ಗತಿಯಲ್ಲಿ ನಾನು ಹೇಗೆ ಹೋಗಲಿ?
12318050a ಪರಂ ಭಾವಂ ಹಿ ಕಾಂಕ್ಷಾಮಿ ಯತ್ರ ನಾವರ್ತತೇ ಪುನಃ।
12318050c ಸರ್ವಸಂಗಾನ್ ಪರಿತ್ಯಜ್ಯ ನಿಶ್ಚಿತಾಂ ಮನಸೋ ಗತಿಮ್।।
ಎಲ್ಲಿಂದ ಪುನಃ ಹಿಂದಿರುಗಬೇಕಾಗುವುದಿಲ್ಲವೋ ಆ ಪರಮ ಭಾವವನ್ನು ಹೊಂದಲು ಬಯಸುತ್ತೇನೆ. ಸರ್ವಸಂಗಗಳನ್ನೂ ಪರಿತ್ಯಜಿಸಿ ಮನಸ್ಸಿನ ಮೂಲಕ ಆ ಉತ್ತಮ ಗತಿಯನ್ನು ಪಡೆಯಲು ನಿಶ್ಚಯಿಸಿದ್ದೇನೆ.
12318051a ತತ್ರ ಯಾಸ್ಯಾಮಿ ಯತ್ರಾತ್ಮಾ ಶಮಂ ಮೇಽಧಿಗಮಿಷ್ಯತಿ।
12318051c ಅಕ್ಷಯಶ್ಚಾವ್ಯಯಶ್ಚೈವ ಯತ್ರ ಸ್ಥಾಸ್ಯಾಮಿ ಶಾಶ್ವತಃ।।
ಎಲ್ಲಿ ನನ್ನ ಆತ್ಮವು ಶಾಂತಿಯನ್ನು ಪಡೆದುಕೊಳ್ಳುವುದೋ ಅಲ್ಲಿಗೆ ಹೋಗುತ್ತೇನೆ. ಅಲ್ಲಿ ನಾನು ಅಕ್ಷಯನೂ ಅವ್ಯಯನೂ ಮತ್ತು ಶಾಶ್ವತನೂ ಆಗಿರುತ್ತೇನೆ.
12318052a ನ ತು ಯೋಗಮೃತೇ ಶಕ್ಯಾ ಪ್ರಾಪ್ತುಂ ಸಾ ಪರಮಾ ಗತಿಃ।
12318052c ಅವಬಂಧೋ ಹಿ ಮುಕ್ತಸ್ಯ ಕರ್ಮಭಿರ್ನೋಪಪದ್ಯತೇ।।
ಯೋಗಮಾರ್ಗವನ್ನು ಬಿಟ್ಟು ಆ ಪರಮ ಗತಿಯನ್ನು ಹೊಂದಲು ಸಾಧ್ಯವಿಲ್ಲ. ಮುಕ್ತನಾದವನು ಕರ್ಮಬಂಧನಗಳಲ್ಲಿ ಸಿಲುಕಬಾರದು.
12318053a ತಸ್ಮಾದ್ಯೋಗಂ ಸಮಾಸ್ಥಾಯ ತ್ಯಕ್ತ್ವಾ ಗೃಹಕಲೇವರಮ್।
12318053c ವಾಯುಭೂತಃ ಪ್ರವೇಕ್ಷ್ಯಾಮಿ ತೇಜೋರಾಶಿಂ ದಿವಾಕರಮ್।।
ಆದುದರಿಂದ ಯೋಗವನ್ನೇ ಆಶ್ರಯಿಸಿ ಗೃಹರೂಪವಾಗಿರುವ ಈ ಶರೀರವನ್ನು ತ್ಯಜಿಸಿ ವಾಯುರೂಪನಾಗಿ ತೇಜೋರಾಶಿ ದಿವಾಕರನನ್ನು ಪ್ರವೇಶಿಸುತ್ತೇನೆ.
12318054a ನ ಹ್ಯೇಷ ಕ್ಷಯಮಾಪ್ನೋತಿ ಸೋಮಃ ಸುರಗಣೈರ್ಯಥಾ।
12318054c ಕಂಪಿತಃ ಪತತೇ ಭೂಮಿಂ ಪುನಶ್ಚೈವಾಧಿರೋಹತಿ।
12318054e ಕ್ಷೀಯತೇ ಹಿ ಸದಾ ಸೋಮಃ ಪುನಶ್ಚೈವಾಭಿಪೂರ್ಯತೇ8।।
ಸುರಗಣಗಳಿಂದ ಸೋಮನು ಕ್ಷಯಹೊಂದುವಂತೆ ಇವನು ಕ್ಷಯವನ್ನು ಹೊಂದುವುದಿಲ್ಲ. ಕಂಪಿತನಾಗಿ ಭೂಮಿಯ ಮೇಲೆ ಬಿದ್ದರೂ ಪುನಃ ಮೇಲೇರುತ್ತಾನೆ. ಸೋಮನು ಸದಾ ಕ್ಷೀಣಿಸುತ್ತಿರುತ್ತಾನೆ. ಪುನಃ ವೃದ್ಧಿಯನ್ನೂ ಹೊಂದುತ್ತಿರುತ್ತಾನೆ.
12318055a ರವಿಸ್ತು ಸಂತಾಪಯತಿ ಲೋಕಾನ್ರಶ್ಮಿಭಿರುಲ್ಬಣೈಃ।
12318055c ಸರ್ವತಸ್ತೇಜ ಆದತ್ತೇ ನಿತ್ಯಮಕ್ಷಯಮಂಡಲಃ।।
ರವಿಯಾದರೋ ತನ್ನ ಪ್ರಖರ ಕಿರಣಗಳಿಂದ ಸಮಸ್ತ ಲೋಕಗಳನ್ನೂ ಸಂತಾಪಗೊಳಿಸುತ್ತಾನೆ. ಅವನು ಎಲ್ಲಕಡೆಗಳಿಂದ ತೇಜಸ್ಸನ್ನು ಸಂಗ್ರಹಿಸುತ್ತಾನೆ. ಆದುದರಿಂದ ಅವನ ಮಂಡಲವು ನಿತ್ಯವೂ ಅಕ್ಷಯವಾಗಿರುತ್ತದೆ.
12318056a ಅತೋ ಮೇ ರೋಚತೇ ಗಂತುಮಾದಿತ್ಯಂ ದೀಪ್ತತೇಜಸಮ್।
12318056c ಅತ್ರ ವತ್ಸ್ಯಾಮಿ ದುರ್ಧರ್ಷೋ ನಿಃಸಂಗೇನಾಂತರಾತ್ಮನಾ।।
ಆದುದರಿಂದ ದೀಪ್ತತೇಜಸ ಆದಿತ್ಯಮಂಡಲಕ್ಕೆ ಹೋಗಲು ಇಷ್ಟಪಡುತ್ತೇನೆ. ಅಲ್ಲಿ ದುರ್ಧರ್ಷನಾಗಿ ನಿಃಸಂಗನಾಗಿ ಅಂತರಾತ್ಮನಲ್ಲಿ ವಾಸಿಸುತ್ತೇನೆ.
12318057a ಸೂರ್ಯಸ್ಯ ಸದನೇ ಚಾಹಂ ನಿಕ್ಷಿಪ್ಯೇದಂ ಕಲೇವರಮ್।
12318057c ಋಷಿಭಿಃ ಸಹ ಯಾಸ್ಯಾಮಿ ಸೌರಂ ತೇಜೋಽತಿದುಃಸಹಮ್।।
ಸೂರ್ಯನ ಸದನದಲ್ಲಿ ಈ ಶರೀರವನ್ನು ಇಟ್ಟು ಋಷಿಗಳೊಂದಿಗೆ ಅತಿ ದುಃಸಹವಾದ ಸೌರ ತೇಜಸ್ಸನ್ನು ಪ್ರವೇಶಿಸುತ್ತೇನೆ.
12318058a ಆಪೃಚ್ಚಾಮಿ ನಗಾನ್ನಾಗಾನ್ಗಿರೀನುರ್ವೀಂ ದಿಶೋ ದಿವಮ್।
12318058c ದೇವದಾನವಗಂಧರ್ವಾನ್ ಪಿಶಾಚೋರಗರಾಕ್ಷಸಾನ್।।
ಸೂರ್ಯಲೋಕಕ್ಕೆ ಹೋಗಲು ವೃಕ್ಷಗಳು, ಪರ್ವತಗಳು, ಬೆಟ್ಟಗಳು, ಭೂಮಿ, ದಶದಿಕ್ಕುಗಳು, ಸ್ವರ್ಗ, ದೇವ-ದಾನವ-ಗಂಧರ-ಪಿಶಾಚ-ಉರಗ-ರಾಕ್ಷಸರ ಅನುಮತಿಯನ್ನು ಕೇಳುತ್ತೇನೆ.
12318059a ಲೋಕೇಷು ಸರ್ವಭೂತಾನಿ ಪ್ರವೇಕ್ಷ್ಯಾಮಿ ನಸಂಶಯಃ।
12318059c ಪಶ್ಯಂತು ಯೋಗವೀರ್ಯಂ ಮೇ ಸರ್ವೇ ದೇವಾಃ ಸಹರ್ಷಿಭಿಃ।।
ನಿಸ್ಸಂಶಯವಾಗಿ ನಾನು ಲೋಕದ ಸರ್ವಭೂತಗಳನ್ನೂ ಪ್ರವೇಶಿಸುತ್ತೇನೆ. ಋಷಿಗಳೊಂದಿಗೆ ಸರ್ವ ದೇವತೆಗಳೂ ನನ್ನ ಯೋಗವೀರ್ಯವನ್ನು ನೋಡಲಿ.”
12318060a ಅಥಾನುಜ್ಞಾಪ್ಯ ತಮೃಷಿಂ ನಾರದಂ ಲೋಕವಿಶ್ರುತಮ್।
12318060c ತಸ್ಮಾದನುಜ್ಞಾಂ ಸಂಪ್ರಾಪ್ಯ ಜಗಾಮ ಪಿತರಂ ಪ್ರತಿ।।
ಲೋಕವಿಶ್ರುತ ಋಷಿ ನಾರದನ ಅನುಮತಿಯನ್ನು ಕೇಳಿ ಪಡೆದು ಅವನು ತನ್ನ ತಂದೆಯ ಬಳಿ ಹೋದನು.
12318061a ಸೋಽಭಿವಾದ್ಯ ಮಹಾತ್ಮಾನಂ ಋಷಿಂ ದ್ವೈಪಾಯನಂ ಮುನಿಮ್।
12318061c ಶುಕಃ ಪ್ರದಕ್ಷಿಣೀಕೃತ್ಯ ಕೃಷ್ಣಮಾಪೃಷ್ಟವಾನ್ಮುನಿಃ।।
ಮಹಾತ್ಮ ಮುನಿ ಋಷಿ ದ್ವೈಪಾಯನನನ್ನು ಪ್ರದಕ್ಷಿಣೆ ಮಾಡಿ ನಮಸ್ಕರಿಸಿ ಶುಕ ಮುನಿಯು ಕೃಷ್ಣನಲ್ಲಿ ಅನುಜ್ಞೆಯನ್ನು ಕೇಳಿದನು.
12318062a ಶ್ರುತ್ವಾ ಋಷಿಸ್ತದ್ವಚನಂ ಶುಕಸ್ಯ ಪ್ರೀತೋ ಮಹಾತ್ಮಾ ಪುನರಾಹ ಚೈನಮ್।
12318062c ಭೋ ಭೋಃ ಪುತ್ರ ಸ್ಥೀಯತಾಂ ತಾವದದ್ಯ ಯಾವಚ್ಚಕ್ಷುಃ ಪ್ರೀಣಯಾಮಿ ತ್ವದರ್ಥಮ್।।
ಶುಕನ ಆ ಮಾತನ್ನು ಕೇಳಿ ಮಹಾತ್ಮ ಋಷಿಯು ಪ್ರೀತನಾಗಿ ಪುನಃ ಅವನಿಗೆ ಇದನ್ನು ಹೇಳಿದನು ಕೂಡ: “ಭೋ!ಭೋ! ಪುತ್ರ! ನಿಲ್ಲು! ಇಂದು ನಿನ್ನನ್ನು ನೋಡುತ್ತಾ ನನ್ನ ಕಣ್ಣುಗಳಿಗೆ ಪ್ರಿಯವಾದುದನ್ನು ಮಾಡಿಕೊಳ್ಳುತ್ತೇನೆ.”
12318063a ನಿರಪೇಕ್ಷಃ ಶುಕೋ ಭೂತ್ವಾ ನಿಃಸ್ನೇಹೋ ಮುಕ್ತಬಂಧನಃ।
12318063c ಮೋಕ್ಷಮೇವಾನುಸಂಚಿಂತ್ಯ ಗಮನಾಯ ಮನೋ ದಧೇ।
12318063e ಪಿತರಂ ಸಂಪರಿತ್ಯಜ್ಯ ಜಗಾಮ ದ್ವಿಜಸತ್ತಮಃ।।
ಆದರೆ ಶುಕನು ನಿರಪೇಕ್ಷನೂ ನಿಃಸ್ನೇಹನೂ, ಬಂಧನ ಮುಕ್ತನೂ ಆಗಿ ಮೋಕ್ಷದ ಕುರಿತೇ ಚಿಂತಿಸುತ್ತಾ ಹೋಗಲು ಮನಸ್ಸುಮಾಡಿದನು. ತಂದೆಯನ್ನು ಪರಿತ್ಯಜಿಸಿ ಆ ದ್ವಿಜಸತ್ತಮನು ಹೊರಟುಹೋದನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಶುಕಾಭಿಗಮನೇ ಅಷ್ಟಾದಶಾಧಿಕತ್ರಿಶತತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಶುಕಾಭಿಗಮನ ಎನ್ನುವ ಮುನ್ನೂರಾಹದಿನೆಂಟನೇ ಅಧ್ಯಾಯವು.-
ಸುಖವನ್ನೇ ದುಃಖವೆಂಬುದಾಗಿಯೂ ದುಃಖವನ್ನೇ ಸುಖವೆಂಬುದಾಗಿಯೂ ತಿಳಿದುಕೊಳ್ಳುವುದು. ↩︎
-
ವ್ಯಥಿತಸ್ಯ ವಿಧಿತ್ಸಾಭಿಸ್ತಾಮೃತೋ ಜೀವಿತೈಷಿಣಃ। (ಭಾರತ ದರ್ಶನ). ↩︎
-
ಶೀಘ್ರಂ ಪರಶರೀರಾಣಿ ಚ್ಛಿನ್ನಬೀಜಂ ಶರೀರಿಣಮ್। ಎಂಬ ಪಾಠಾಂತರವಿದೆ (ಭಾರತದರ್ಶನ). ↩︎
-
ಸ ತಸ್ಯ ಸಹಜಾತಸ್ಯ ಸಪ್ತಮೀಂ ನವಮೀಂ ದಶಾಮ್। (ಭಾರತ ದರ್ಶನ). ↩︎
-
ಶರೀರದ ಹತ್ತು ದಶೆಗಳು: ಗರ್ಭವಾಸ, ಜನನ, ಬಾಲ್ಯ, ಕೌಮಾರ, ಪೌಗಂಡ (ಐದರಿಂದ ಹತ್ತರವರೆಗಿನ ಸ್ಥಿತಿ), ಯೌವನ, ಏಳನೆಯದಾದ ಸ್ಥಾವಿರ್ಯ (ಮುಪ್ಪು), ಎಂಟನೆಯ ಜರಾವಸ್ಥೆ (ಕಡುಮುಪ್ಪು), ಒಂಭತ್ತನೆಯ ಪ್ರಾಣ ನಿಂತು ಹೋಗುವಿದೆ ಮತ್ತು ಹತ್ತನೆಯದಾಗಿ ಪಂಚಭೂತಗಳ ಅಭಾವ. ↩︎
-
ಆಕ್ರಮ್ಯಾದದತೇ ರೋಗಾಃ ಪಶೂನ್ಪಶುಗಣಾ ಯಥಾ। (ಭಾರತ ದರ್ಶನ). ↩︎
-
ಶಠಾನ್ ಶೂರಾ (ಭಾರತ ದರ್ಶನ) ↩︎
-
ಭಾರತದರ್ಶನದಲ್ಲಿ ಇದರ ನಂತರ ಈ ಶ್ಲೋಕಾರ್ಧವಿದೆ: ನೇಚ್ಛಾಮ್ಯೇವಂ ವಿದತ್ವೈತೇ ಹ್ರಾಸ್ಸವೃದ್ಧೀ ಪುನಃ ಪುನಃ।। ↩︎