ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 317
ಸಾರ
ನಾರದನು ಶುಕನಿಗೆ ಆಧ್ಯಾತ್ಮವಿಷಯಗಳನ್ನು ಉಪದೇಶಿಸಿದುದು (1-30).
12317001 ನಾರದ ಉವಾಚ।
12317001a ಅಶೋಕಂ ಶೋಕನಾಶಾರ್ಥಂ ಶಾಸ್ತ್ರಂ ಶಾಂತಿಕರಂ ಶಿವಮ್।
12317001c ನಿಶಮ್ಯ ಲಭತೇ ಬುದ್ಧಿಂ ತಾಂ ಲಬ್ಧ್ವಾ ಸುಖಮೇಧತೇ।।
ನಾರದನು ಹೇಳಿದನು: “ಶೋಕನಾಶಕ್ಕಾಗಿ ಶೋಕವಿಲ್ಲದ ಶಾಂತಿಕರ ಮಂಗಳ ಶಾಸ್ತ್ರವನ್ನು ಕೇಳುವವನು ಉತ್ತಮ ಬುದ್ಧಿಯನ್ನು ಪಡೆದುಕೊಂಡು ಸುಖವನ್ನು ಹೊಂದುತ್ತಾನೆ.
12317002a ಶೋಕಸ್ಥಾನಸಹಸ್ರಾಣಿ ಭಯಸ್ಥಾನಶತಾನಿ ಚ।
12317002c ದಿವಸೇ ದಿವಸೇ ಮೂಢಮಾವಿಶಂತಿ ನ ಪಂಡಿತಮ್।।
ಸಾವಿರಾರು ಶೋಕ ಪ್ರಸಂಗಗಳೂ ನೂರಾರು ಭಯಪ್ರಸಂಗಗಳೂ ದಿನ ದಿನವೂ ಮೂಢನನ್ನು ಆಕ್ರಮಿಸುತ್ತವೆ. ಪಂಡಿತನನ್ನಲ್ಲ.
12317003a ತಸ್ಮಾದನಿಷ್ಟನಾಶಾರ್ಥಮಿತಿಹಾಸಂ ನಿಬೋಧ ಮೇ।
12317003c ತಿಷ್ಠತೇ ಚೇದ್ವಶೇ ಬುದ್ಧಿರ್ಲಭತೇ ಶೋಕನಾಶನಮ್।।
ಆದುದರಿಂದ ಅನಿಷ್ಟವನ್ನು ನಿವಾರಿಸಿಕೊಳ್ಳಲು ಈ ಇತಿಹಾಸವನ್ನು ಕೇಳು. ಬುದ್ಧಿಯು ವಶದಲ್ಲಿದ್ದುದೇ ಆದರೆ ಶೋಕವು ವಿನಾಶವಾಗುತ್ತದೆ.
12317004a ಅನಿಷ್ಟಸಂಪ್ರಯೋಗಾಚ್ಚ ವಿಪ್ರಯೋಗಾತ್ ಪ್ರಿಯಸ್ಯ ಚ।
12317004c ಮನುಷ್ಯಾ ಮಾನಸೈರ್ದುಃಖೈರ್ಯುಜ್ಯಂತೇ ಅಲ್ಪಬುದ್ಧಯಃ।।
ಅಲ್ಪಬುದ್ಧಿಯ ಮನುಷ್ಯರು ಅನಿಷ್ಟಗಳನ್ನು ಪಡೆದುಕೊಂಡಿದುದರಿಂದಲೂ ಪ್ರಿಯವಾದುದನ್ನು ಕಳೆದುಕೊಂಡಿದುದರಿಂದಲೂ ಮಾನಸಿಕ ದುಃಖಗಳನ್ನು ಅನುಭವಿಸುತ್ತಾರೆ.
12317005a ದ್ರವ್ಯೇಷು ಸಮತೀತೇಷು ಯೇ ಗುಣಾಸ್ತಾನ್ನ ಚಿಂತಯೇತ್।
12317005c ತಾನನಾದ್ರಿಯಮಾಣಸ್ಯ ಸ್ನೇಹಬಂಧಃ ಪ್ರಮುಚ್ಯತೇ।।
ದ್ರವ್ಯಗಳು ಕಳೆದುಹೋದ ನಂತರ ಅವುಗಳಲ್ಲಿದ್ದ ಗುಣಗಳ ಕುರಿತೇ ಚಿಂತಿಸಬಾರದು. ಅದರಕುರಿತು ಚಿಂತಿಸುತ್ತಾ ಇದ್ದರೆ ಸ್ನೇಹಬಂಧನವು ಬಿಟ್ಟುಹೋಗುವುದಿಲ್ಲ.
12317006a ದೋಷದರ್ಶೀ ಭವೇತ್ತತ್ರ ಯತ್ರ ರಾಗಃ ಪ್ರವರ್ತತೇ।
12317006c ಅನಿಷ್ಟವದ್ಧಿತಂ ಪಶ್ಯೇತ್ತಥಾ ಕ್ಷಿಪ್ರಂ ವಿರಜ್ಯತೇ।।
ಯಾವುದರ ಮೇಲೆ ಬಯಕೆಯು ಹೆಚ್ಚಾಗುತ್ತದೆಯೋ ಅದರಲಿ ದೋಷವಿದೆಯೆಂದು ಕಂಡುಕೊಳ್ಳಬೇಕು. ಮನಸ್ಸು ಹೋದ ಕಡೆ ತಾನೂ ಹೋಗುತ್ತಿದ್ದರೆ ಅನಿಷ್ಟವು ಹೆಚ್ಚಾಗುತ್ತದೆ ಎನ್ನುವುದನ್ನು ಮನಗಾಣಬೇಕು. ಆ ದೃಷ್ಟಿಯಿಂದ ವಿಷಯಗಳನ್ನು ನೋಡುತ್ತಿದ್ದರೆ ಅನುರಾಗವಿರುವ ವಿಷಯ/ವಸ್ತುಗಳಲ್ಲಿ ಕ್ಷಿಪ್ರವಾಗಿ ವೈರಾಗ್ಯವುಂಟಾಗುತ್ತದೆ.
12317007a ನಾರ್ಥೋ ನ ಧರ್ಮೋ ನ ಯಶೋ ಯೋಽತೀತಮನುಶೋಚತಿ।
12317007c ಅಪ್ಯಭಾವೇನ ಯುಜ್ಯೇತ ತಚ್ಚಾಸ್ಯ ನ ನಿವರ್ತತೇ।।
ಕಳೆದುಹೋದುದರ ಕುರಿತು ಶೋಕಪಡುತ್ತಿರುವವನಿಗೆ ಅರ್ಥವೂ ಸಿಕ್ಕುವುದಿಲ್ಲ; ಧರ್ಮವೂ ಲಭಿಸುವುದಿಲ್ಲ; ಯಶಸ್ಸೂ ದೊರೆಯುವುದಿಲ್ಲ. ಕಳೆದುಹೋದುದನ್ನು ನೆನೆದು ಶೋಕಪಡುತ್ತಿದ್ದರೆ ಆ ವಸ್ತುವಿನ ಅಭಾವದ ಅನುಭವವಾಗುತ್ತದೆಯೇ ಹೊರತು ಆ ವಸ್ತುವನ್ನು ಅವನು ಪುನಃ ಪಡೆದುಕೊಳ್ಳಲಾರನು.
12317008a ಗುಣೈರ್ಭೂತಾನಿ ಯುಜ್ಯಂತೇ ವಿಯುಜ್ಯಂತೇ ತಥೈವ ಚ।
12317008c ಸರ್ವಾಣಿ ನೈತದೇಕಸ್ಯ ಶೋಕಸ್ಥಾನಂ ಹಿ ವಿದ್ಯತೇ।।
ಎಲ್ಲ ಜೀವಿಗಳಿಗೂ ಪ್ರಿಯವಾದವುಗಳ ಸಂಯೋಗ-ವಿಯೋಗಗಳು ಆಗುತ್ತಲೇ ಇರುತ್ತವೆ. ಒಬ್ಬನಿಗೆ ಯಾವಾಗಲೂ ಕೇವಲ ಶೋಕವಾಗುತ್ತದೆ ಅಥವಾ ಸಂತೋಷವಾಗುತ್ತದೆ ಎನ್ನುವುದಿಲ್ಲ. ಪ್ರತಿಯೊಬ್ಬನಿಗೂ ಸುಖ-ಶೋಕ ಪ್ರಸಂಗಗಳು ಅನುಕ್ರಮವಾಗಿ ಬಂದು ಹೋಗುತ್ತಲೇ ಇರುತ್ತವೆ.
12317009a ಮೃತಂ ವಾ ಯದಿ ವಾ ನಷ್ಟಂ ಯೋಽತೀತಮನುಶೋಚತಿ।
12317009c ದುಃಖೇನ ಲಭತೇ ದುಃಖಂ ದ್ವಾವನರ್ಥೌ ಪ್ರಪದ್ಯತೇ।।
ಮೃತಗೊಂಡು ಅಥವಾ ನಷ್ಟವಾಗಿ ಕಳೆದುಹೋದುದಕ್ಕೆ ಶೋಕಿಸುತ್ತಿದ್ದವನಿಗೆ ದುಃಖವು ಪ್ರಾಪ್ತವಾಗುವುದಲ್ಲದೇ ಆ ಸಮಯದಲ್ಲಿ ಮಾಡಬೇಕಾದುದನ್ನು ಮಾಡದೇ ಇದ್ದುದಕ್ಕೆ ಅನರ್ಥವನ್ನೂ ಹೊಂದುತ್ತಾನೆ.
12317010a ನಾಶ್ರು ಕುರ್ವಂತಿ ಯೇ ಬುದ್ಧ್ಯಾ ದೃಷ್ಟ್ವಾ ಲೋಕೇಷು ಸಂತತಿಮ್।
12317010c ಸಮ್ಯಕ್ ಪ್ರಪಶ್ಯತಃ ಸರ್ವಂ ನಾಶ್ರುಕರ್ಮೋಪಪದ್ಯತೇ।।
ಲೋಕಗಳಲ್ಲಿಯ ಸಂತತಿಯನ್ನು ಬುದ್ಧಿಪೂರ್ವಕವಾಗಿ ನೋಡಿದವನು ಕಣ್ಣೀರು ಸುರಿಸುವುದಿಲ್ಲ. ಎಲ್ಲವನ್ನೂ ಚೆನ್ನಾಗಿ ವಿಮರ್ಶಿಸುವವನು ಮರಣ-ನಷ್ಟಗಳಿಗೆ ಕಣ್ಣೀರು ಸುರಿಸಬೇಕಾಗುವುದಿಲ್ಲ.
12317011a ದುಃಖೋಪಘಾತೇ ಶಾರೀರೇ ಮಾನಸೇ ವಾಪ್ಯುಪಸ್ಥಿತೇ।
12317011c ಯಸ್ಮಿನ್ನ ಶಕ್ಯತೇ ಕರ್ತುಂ ಯತ್ನಸ್ತನ್ನಾನುಚಿಂತಯೇತ್।।
ಶಾರೀರಿಕವಾದ ಅಥವಾ ಮಾನಸಿಕವಾದ ದುಃಖವು ಪ್ರಾಪ್ತವಾದಗ ಮತ್ತು ಅದನ್ನು ಯಾವ ಪ್ರಯತ್ನದಿಂದಲೂ ದೂರೀಕರಿಸಲು ಸಾಧ್ಯವಾಗದೇ ಇದ್ದಾಗ ಆ ವಿಷಯದ ಕುರಿತು ಚಿಂತಿಸಬಾರದು.
12317012a ಭೈಷಜ್ಯಮೇತದ್ದುಃಖಸ್ಯ ಯದೇತನ್ನಾನುಚಿಂತಯೇತ್।
12317012c ಚಿಂತ್ಯಮಾನಂ ಹಿ ನ ವ್ಯೇತಿ ಭೂಯಶ್ಚಾಪಿ ಪ್ರವರ್ಧತೇ।।
ದುಃಖದ ಕುರಿತು ಚಿಂತಿಸದೇ ಇರುವುದೇ ದುಃಖಕ್ಕೆ ಮದ್ದು. ದುಃಖವು ಸಂಭವಿಸಿದಾಗ ಅದರ ಕುರಿತೇ ಚಿಂತಿಸುತ್ತಿದ್ದರೆ ದುಃಖವು ಬಿಟ್ಟು ಹೋಗುವುದಿಲ್ಲ. ಚಿಂತಿಸುತ್ತಿದ್ದಂತೆಲ್ಲಾ ದುಃಖವು ಹೆಚ್ಚಾಗುತ್ತಾ ಹೋಗುತ್ತದೆ.
12317013a ಪ್ರಜ್ಞಯಾ ಮಾನಸಂ ದುಃಖಂ ಹನ್ಯಾಚ್ಚಾರೀರಮೌಷಧೈಃ।
12317013c ಏತದ್ವಿಜ್ಞಾನಸಾಮರ್ಥ್ಯಂ ನ ಬಾಲೈಃ ಸಮತಾಮಿಯಾತ್।।
ಪ್ರಜ್ಞೆಯಿಂದ ಮಾನಸಿಕ ದುಃಖವನ್ನೂ ಔಷಧಿಗಳಿಂದ ಶಾರೀರಿಕ ದುಃಖವನ್ನೂ ಹೋಗಲಾಡಿಸಿಕೊಳ್ಳಬೇಕು. ಜ್ಞಾನಕ್ಕೆ ಈ ಸಾಮರ್ಥ್ಯವಿದೆ. ಮಗುವಂತೆ ರೋದಿಸಬಾರದು.
12317014a ಅನಿತ್ಯಂ ಯೌವನಂ ರೂಪಂ ಜೀವಿತಂ ದ್ರವ್ಯಸಂಚಯಃ।
12317014c ಆರೋಗ್ಯಂ ಪ್ರಿಯಸಂವಾಸೋ ಗೃಧ್ಯೇತ್ತತ್ರ ನ ಪಂಡಿತಃ।।
ಯೌವನ, ರೂಪ, ಜೀವಿತ, ದ್ರವ್ಯ ಸಂಚಯ, ಆರೋಗ್ಯ, ಮತ್ತು ಪ್ರಿಯಸಂವಾಸಗಳು ಅನಿತ್ಯವಾದವುಗಳು. ಪಂಡಿತನಾದವನು ಅವುಗಳಲ್ಲಿ ಆಸಕ್ತನಾಗಿರುವುದಿಲ್ಲ.
12317015a ನ ಜಾನಪದಿಕಂ ದುಃಖಮೇಕಃ ಶೋಚಿತುಮರ್ಹತಿ।
12317015c ಅಶೋಚನ್ ಪ್ರತಿಕುರ್ವೀತ ಯದಿ ಪಶ್ಯೇದುಪಕ್ರಮಮ್।।
ದೇಶಕ್ಕೇ ದುಃಖವು ಪ್ರಾಪ್ತವಾದಾಗ ಒಬ್ಬನೇ ಶೋಕಿಸಬಾರದು. ಒಂದು ವೇಳೆ ಉಪಾಯಗಳಿದ್ದರೆ ಶೋಕಿಸದೇ ಅವುಗಳನ್ನು ಮಾಡಬೇಕು.
12317016a ಸುಖಾದ್ ಬಹುತರಂ ದುಃಖಂ ಜೀವಿತೇ ನಾತ್ರ ಸಂಶಯಃ।
12317016c ಸ್ನಿಗ್ಧತ್ವಂ ಚೇಂದ್ರಿಯಾರ್ಥೇಷು ಮೋಹಾನ್ಮರಣಮಪ್ರಿಯಮ್।।
ಜೀವಿತದಲ್ಲಿ ಸುಖಕ್ಕಿಂತ ದುಃಖವೇ ಅಧಿಕಾವಿರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಇಂದ್ರಿಯ ವಿಷಯಗಳ ಮೇಲಿನ ಅನುರಾಗದಿಂದ ಮೋಹವುಂಟಾಗಿ ಮರಣವು ಅಪ್ರಿಯವಾಗುತ್ತದೆ.
12317017a ಪರಿತ್ಯಜತಿ ಯೋ ದುಃಖಂ ಸುಖಂ ವಾಪ್ಯುಭಯಂ ನರಃ।
12317017c ಅಭ್ಯೇತಿ ಬ್ರಹ್ಮ ಸೋಽತ್ಯಂತಂ ನ ತಂ ಶೋಚಂತಿ ಪಂಡಿತಾಃ।।
ದುಃಖವನ್ನು, ಸುಖವನ್ನು ಮತ್ತು ಇವೆರಡನ್ನೂ ಪರಿತ್ಯಜಿಸುವ ನರನು ಅಕ್ಷಯ ಬ್ರಹ್ಮಪದಕ್ಕೆ ಹೋಗುತ್ತಾನೆ. ಪಂಡಿತರು ಅವನಿಗಾಗಿ ಶೋಕಿಸುವುದಿಲ್ಲ.
12317018a ದುಃಖಮರ್ಥಾ ಹಿ ತ್ಯಜ್ಯಂತೇ ಪಾಲನೇ ನ ಚ ತೇ ಸುಖಾಃ।
12317018c ದುಃಖೇನ ಚಾಧಿಗಮ್ಯಂತೇ ನಾಶಮೇಷಾಂ ನ ಚಿಂತಯೇತ್।।
ಸಂಪಾದಿಸಿದ ಹಣವನ್ನು ತೊರೆಯುವಾಗ ದುಃಖವಾಗುತ್ತದೆ. ಅದನ್ನು ರಕ್ಷಿಸಿಕೊಳ್ಳುವಾಗಲೂ ಸುಖವಾಗುವುದಿಲ್ಲ. ಅದನ್ನು ಗಳಿಸುವಾಗಲೂ ದುಃಖವೇ ಉಂಟಾಗಿರುತ್ತದೆ. ಆದುದರಿಂದ ದುಃಖವನ್ನೇ ತರುವ ಹಣದ ಕುರಿತು ಚಿಂತಿಸಬಾರದು.
12317019a ಅನ್ಯಾಮನ್ಯಾಂ ಧನಾವಸ್ಥಾಂ ಪ್ರಾಪ್ಯ ವೈಶೇಷಿಕೀಂ ನರಾಃ।
12317019c ಅತೃಪ್ತಾ ಯಾಂತಿ ವಿಧ್ವಂಸಂ ಸಂತೋಷಂ ಯಾಂತಿ ಪಂಡಿತಾಃ।।
ಇನ್ನೂ ಹೆಚ್ಚಿನ ಧನವನ್ನು ಗಳಿಸಲು ಬಯಸುವ ನರರು ಅತೃಪ್ತರಾಗಿದ್ದುಕೊಂಡೇ ಸಾಯುತ್ತಾರೆ. ಆದರೆ ಪಂಡಿತರು ಯಾವಾಗಲೂ ಸಂತುಷ್ಟರಾಗಿಯೇ ಇರುತ್ತಾರೆ.
12317020a ಸರ್ವೇ ಕ್ಷಯಾಂತಾ ನಿಚಯಾಃ ಪತನಾಂತಾಃ ಸಮುಚ್ಚ್ರಯಾಃ।
12317020c ಸಂಯೋಗಾ ವಿಪ್ರಯೋಗಾಂತಾ ಮರಣಾಂತಂ ಹಿ ಜೀವಿತಮ್।।
ಸಂಪಾದಿಸಿದುದೆಲ್ಲವೂ ಕ್ಷಯಹೊಂದುತ್ತವೆ. ಮೇಲೆ ಏರಿದವು ಅಂತ್ಯದಲ್ಲಿ ಕೆಳಗೆ ಬೀಳುತ್ತವೆ. ಸಂಯೋಗಗಳು ವಿಯೋಗದಲ್ಲಿ ಕೊನೆಗೊಳ್ಳುತ್ತವೆ. ಜೀವಿತವು ಮರಣದಲ್ಲಿ ಅಂತ್ಯವಾಗುತ್ತದೆ.
12317021a ಅಂತೋ ನಾಸ್ತಿ ಪಿಪಾಸಾಯಾಸ್ತುಷ್ಟಿಸ್ತು ಪರಮಂ ಸುಖಮ್।
12317021c ತಸ್ಮಾತ್ ಸಂತೋಷಮೇವೇಹ ಧನಂ ಪಶ್ಯಂತಿ ಪಂಡಿತಾಃ।।
ಆಸೆಗೆ ಕೊನೆಯೆಂಬುದೇ ಇಲ್ಲ. ಆದುದರಿಂದ ತೃಪ್ತಿಯೇ ಪರಮ ಸುಖವು. ಆದುದರಿಂದ ಪಂಡಿತರು ಸಂತೋಷವೇ ಧನವೆಂದು ತಿಳಿಯುತ್ತಾರೆ.
12317022a ನಿಮೇಷಮಾತ್ರಮಪಿ ಹಿ ವಯೋ ಗಚ್ಚನ್ನ ತಿಷ್ಠತಿ।
12317022c ಸ್ವಶರೀರೇಷ್ವನಿತ್ಯೇಷು ನಿತ್ಯಂ ಕಿಮನುಚಿಂತಯೇತ್।।
ಓಡುತ್ತಿರುವ ಆಯುಸ್ಸು ಕಣ್ಣುರೆಪ್ಪೆಗಳನ್ನು ಮುಚ್ಚಿ ತೆಗೆಯುವಷ್ಟು ಕಾಲವೂ ನಿಲ್ಲುವುದಿಲ್ಲ. ತಮ್ಮ ಶರೀರಗಳೇ ಅನಿತ್ಯವಾಗಿರುವಾಗ ಯಾವುದು ನಿತ್ಯವಾದುದು ಎಂದು ಯೋಚಿಸಬೇಕು.
12317023a ಭೂತೇಷ್ವಭಾವಂ ಸಂಚಿಂತ್ಯ ಯೇ ಬುದ್ಧ್ವಾ ತಮಸಃ ಪರಮ್1।
12317023c ನ ಶೋಚಂತಿ ಗತಾಧ್ವಾನಃ ಪಶ್ಯಂತಃ ಪರಮಾಂ ಗತಿಮ್।।
ಬುದ್ಧಿಯ ಮೂಲಕ ಭೂತಗಳಲ್ಲಿ ಇಲ್ಲದಿರುವ ಪರಮ ತಮಸ್ಸಿನ ಕುರಿತು ಚಿಂತಿಸಿ ಮೋಕ್ಷಮಾರ್ಗದಲ್ಲಿ ಹೋಗುತ್ತಿರುವವರು ಶೋಕಿಸುವುದಿಲ್ಲ. ಅವರು ಪರಮ ಗತಿಯನ್ನೇ ಕಾಣುತ್ತಾರೆ.
12317024a ಸಂಚಿನ್ವಾನಕಮೇವೈನಂ ಕಾಮಾನಾಮವಿತೃಪ್ತಕಮ್।
12317024c ವ್ಯಾಘ್ರಃ ಪಶುಮಿವಾಸಾದ್ಯ ಮೃತ್ಯುರಾದಾಯ ಗಚ್ಚತಿ।।
ಹುಲ್ಲು ಮೇಯುತ್ತಿದ್ದ ಹಸುವನ್ನು ಹುಲಿಯು ಕೊಂಡೊಯ್ಯುವಂತೆ ಸಂಗ್ರಹಮಾಡುವುದರಲ್ಲಿಯೇ ಆಸಕ್ತನಾದ ಮತ್ತು ಕಾಮಗಳಿಂದ ಅತೃಪ್ತನಾದವನನ್ನು ಮೃತ್ಯುವು ಕೊಂಡೊಯ್ಯುತ್ತದೆ.
12317025a ಅಥಾಪ್ಯುಪಾಯಂ ಸಂಪಶ್ಯೇದ್ದುಃಖಸ್ಯ ಪರಿಮೋಕ್ಷಣೇ।
12317025c ಅಶೋಚನ್ನಾರಭೇತೈವ ಯುಕ್ತಶ್ಚಾವ್ಯಸನೀ ಭವೇತ್।।
ಹೀಗಿದ್ದರೂ ಸಂಸಾರ ದುಃಖದಿಂದ ಪಾರಾಗಲೂ ಯಾವುದಾದರೂ ಉಪಾಯವನ್ನು ಹುಡುಕಲೇ ಬೇಕು. ಶೋಕವನ್ನು ತೊರೆದು ಆತ್ಮಸಾಧನೆಯನ್ನು ಪ್ರಾರಂಭಿಸುವವನು ಯಾವ ವಿಧದ ವ್ಯಸನಗಳೂ ಇಲ್ಲದೇ ಮುಕ್ತನಾಗುತ್ತಾನೆ.
12317026a ಶಬ್ದೇ ಸ್ಪರ್ಶೇ ಚ ರೂಪೇ ಚ ಗಂಧೇಷು ಚ ರಸೇಷು ಚ।
12317026c ನೋಪಭೋಗಾತ್ ಪರಂ ಕಿಂ ಚಿದ್ಧನಿನೋ ವಾಧನಸ್ಯ ವಾ।।
ಧನಿಕನೇ ಆಗಲಿ ದ್ರರಿದ್ರನೇ ಆಗಲಿ – ಶಬ್ಧ-ಸ್ಪರ್ಶ-ರೂಪ-ಗಂಧ-ರಸಗಳನ್ನು ಉಪಭೋಗಿಸುವಾಗ ಸಂತೋಷ ಪಡುತ್ತಾನೆ ಮತ್ತು ಉಪಭೋಗಿಸಿಯಾದ ನಂತರ ದುಃಖಿಸುತ್ತಾನೆ.
12317027a ಪ್ರಾಕ್ಸಂಪ್ರಯೋಗಾದ್ಭೂತಾನಾಂ ನಾಸ್ತಿ ದುಃಖಮನಾಮಯಮ್।
12317027c ವಿಪ್ರಯೋಗಾತ್ತು ಸರ್ವಸ್ಯ ನ ಶೋಚೇತ್ ಪ್ರಕೃತಿಸ್ಥಿತಃ।।
ಪರಸ್ಪರ ಸೇರುವ ಮೊದಲು ಯಾವ ದುಃಖವೂ ಇರುವುದಿಲ್ಲ. ಸೇರಿ ನಂತರ ವಿಯೋಗವಾದರೆ ದುಃಖವುಂಟಾಗುತ್ತದೆ. ತನ್ನ ಸ್ವರೂಪವನ್ನು ತಿಳಿದುಕೊಂಡಿರುವ ವಿವೇಕಿಯು ವಿಯೋಗವಾದಾಗಲೂ ದುಃಖಿಸಬಾರದು.
12317028a ಧೃತ್ಯಾ ಶಿಶ್ನೋದರಂ ರಕ್ಷೇತ್ ಪಾಣಿಪಾದಂ ಚ ಚಕ್ಷುಷಾ।
12317028c ಚಕ್ಷುಃಶ್ರೋತ್ರೇ ಚ ಮನಸಾ ಮನೋ ವಾಚಂ ಚ ವಿದ್ಯಯಾ।।
ಧೈರ್ಯದಿಂದ ಶಿಶ್ನೋದರಗಳನ್ನು ರಕ್ಷಿಸಿಕೊಳ್ಳಬೇಕು. ಕೈ-ಕಾಲುಗಳನ್ನು ಕಣ್ಣಿನಿಂದ ರಕ್ಷಿಸಿಕೊಳ್ಳಬೇಕು. ಕಣ್ಣುಗಳನ್ನೂ ಕಿವಿಗಳನ್ನೂ ಮನಸ್ಸಿನಿಂದ ರಕ್ಷಿಸಿಕೊಳ್ಳಬೇಕು. ಮತ್ತು ಮಾತನ್ನು ವಿದ್ಯೆಯಿಂದ ರಕ್ಷಿಸಿಕೊಳ್ಳಬೇಕು.
12317029a ಪ್ರಣಯಂ ಪ್ರತಿಸಂಹೃತ್ಯ ಸಂಸ್ತುತೇಷ್ವಿತರೇಷು ಚ।
12317029c ವಿಚರೇದಸಮುನ್ನದ್ಧಃ ಸ ಸುಖೀ ಸ ಚ ಪಂಡಿತಃ।।
ಪ್ರಣಯವನ್ನು ಮತ್ತು ಇತರರ ಸಂಸ್ತುತಿಗಳನ್ನು ತೊರೆದು ವಿನೀತನಾಗಿ ಯಾವನು ವ್ಯವಹರಿಸುವನೋ ಅವನೇ ಸುಖಿಯು ಮತ್ತು ಅವನೇ ಪಂಡಿತನು.
12317030a ಅಧ್ಯಾತ್ಮರತಿರಾಸೀನೋ ನಿರಪೇಕ್ಷೋ ನಿರಾಮಿಷಃ।
12317030c ಆತ್ಮನೈವ ಸಹಾಯೇನ ಯಶ್ಚರೇತ್ ಸ ಸುಖೀ ಭವೇತ್।।
ಆಧ್ಯಾತ್ಮದಲ್ಲಿ ಅನುರಕ್ತನಾಗಿ, ಅಪೇಕ್ಷೆಗಳಿಲ್ಲದೇ, ಆಸೆಗಳಿಲ್ಲದೇ, ತನ್ನದೇ ಸಹಾಯದಿಂದ ನಡೆದುಕೊಳ್ಳುವವನು ಪರಮಸುಖಿಯಾಗುತ್ತಾನೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಶುಕಾಭಿಪತನೇ ಸಪ್ತದಶಾಧಿಕತ್ರಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಶುಕಾಭಿಪತನ ಎನ್ನುವ ಮುನ್ನೂರಾಹದಿನೇಳನೇ ಅಧ್ಯಾಯವು.
-
ಭೂತೇಷು ಭಾವಂ ಸಂಚಿಂತ್ಯ ಯೇ ಬುದ್ಧ್ವಾ ಮನಸಃ ಪರಮ್। (ಭಾರತ ದರ್ಶನ). ↩︎