ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 314
ಸಾರ
ವ್ಯಾಸಾಶ್ರಮವಿದ್ದ ಹಿಮವತ್ಪರ್ವತದ ವರ್ಣನೆ (1-22). ತಂದೆಯ ಬಳಿ ಶುಕನ ಆಗಮನ (23-30). ವ್ಯಾಸನ ನಾಲ್ವರು ಶಿಷ್ಯರು ಅವನಲ್ಲಿ ವರವನ್ನು ಕೇಳಿದುದು (31-38). ಶಿಷ್ಯರಿಗೆ ವ್ಯಾಸನ ಉಪದೇಶ (39-49).
12314001 ಭೀಷ್ಮ ಉವಾಚ।
12314001a ಏತಚ್ಚ್ರುತ್ವಾ ತು ವಚನಂ ಕೃತಾತ್ಮಾ ಕೃತನಿಶ್ಚಯಃ।
12314001c ಆತ್ಮನಾತ್ಮಾನಮಾಸ್ಥಾಯ ದೃಷ್ಟ್ವಾ ಚಾತ್ಮಾನಮಾತ್ಮನಾ।।
ಭೀಷ್ಮನು ಹೇಳಿದನು: “ಆ ಮಾತನ್ನು ಕೇಳಿ ಕೃತಾತ್ಮಾ ಶುಕನು ನಿಶ್ಚಯಿಸಿ ಆತ್ಮನನ್ನು ಆತ್ಮನಲ್ಲಿ ಇರಿಸಿ ಆತ್ಮನನ್ನು ಆತ್ಮನಿಂದ ಕಂಡು ಕೃತಾರ್ಥನಾದನು.
12314002a ಕೃತಕಾರ್ಯಃ ಸುಖೀ ಶಾಂತಸ್ತೂಷ್ಣೀಂ ಪ್ರಾಯಾದುದಙ್ಮುಖಃ।
12314002c ಶೈಶಿರಂ ಗಿರಿಮುದ್ದಿಶ್ಯ ಸಧರ್ಮಾ ಮಾತರಿಶ್ವನಃ।।
ಆತ್ಮದರ್ಶನದಿಂದ ಸುಖವನ್ನೂ ಪರಮ ಶಾಂತಿಯನ್ನೂ ಪಡೆದು ವಾಯುವಿನ ವೇಗವಿದ್ದ ಶುಕನು ಹಿಮವತ್ಪರ್ವತದ ಕಡೆಗೆ ಉತ್ತರಾಭಿಮುಖವಾಗಿ ಪ್ರಯಾಣಮಾಡಿದನು.
12314003a ಏತಸ್ಮಿನ್ನೇವ ಕಾಲೇ ತು ದೇವರ್ಷಿರ್ನಾರದಸ್ತದಾ।
12314003c ಹಿಮವಂತಮಿಯಾದ್ದ್ರಷ್ಟುಂ ಸಿದ್ಧಚಾರಣಸೇವಿತಮ್।।
ಅದೇ ಸಮಯದಲ್ಲಿ ದೇವರ್ಷಿ ನಾರದನು ಸಿದ್ಧಚಾರಣ ಸೇಇತ ಹಿಮವತ್ಪರ್ವತವನ್ನು ನೋಡಲು ಅಲ್ಲಿಗೆ ಆಗಮಿಸಿದ್ದನು.
12314004a ತಮಪ್ಸರೋಗಣಾಕೀರ್ಣಂ ಗೀತಸ್ವನನಿನಾದಿತಮ್।
12314004c ಕಿಂನರಾಣಾಂ ಸಮೂಹೈಶ್ಚ ಭೃಂಗರಾಜೈಸ್ತಥೈವ ಚ।।
ಅದು ಅಪ್ಸರೆಯರ ಗುಂಪುಗಳ, ಕಿನ್ನರರ ಸಮೂಹಗಳ ಮತ್ತು ದುಂಬಿಗಳ ಗೀತ-ಸ್ವರಗಳಿಂದ ನಿನಾದಿತಗೊಂಡಿತ್ತು.
12314005a ಮದ್ಗುಭಿಃ ಖಂಜರೀಟೈಶ್ಚ ವಿಚಿತ್ರೈರ್ಜೀವಜೀವಕೈಃ।
12314005c ಚಿತ್ರವರ್ಣೈರ್ಮಯೂರೈಶ್ಚ ಕೇಕಾಶತವಿರಾಜಿತೈಃ।
12314005e ರಾಜಹಂಸಸಮೂಹೈಶ್ಚ ಹೃಷ್ಟೈಃ ಪರಭೃತೈಸ್ತಥಾ।।
ನೀರುಕಾಗೆಗಳಿಂದ, ಗೀಜುಗಪಕ್ಷಿಗಳಿಂದ, ವಿಚಿತ್ರ ಚಕೋರ ಪಕ್ಷಿಗಳಿಂದ, ಕೇಕೆಗೈಯುತ್ತಿದ್ದ ನೂರಾರು ಚಿತ್ರವರ್ಣದ ನವಿಲುಗಳಿಂದ, ಸಂತೋಷದಿಂದ ನಲಿದಾಡುತ್ತಿದ್ದ ರಾಜಹಂಸಗಳ ಸಮೂಹದಿಂದ ಆ ಪರ್ವತವು ಕೂಡಿತ್ತು.
12314006a ಪಕ್ಷಿರಾಜೋ ಗರುತ್ಮಾಂಶ್ಚ ಯಂ ನಿತ್ಯಮಧಿಗಚ್ಚತಿ।
12314006c ಚತ್ವಾರೋ ಲೋಕಪಾಲಾಶ್ಚ ದೇವಾಃ ಸರ್ಷಿಗಣಾಸ್ತಥಾ।
12314006e ಯತ್ರ ನಿತ್ಯಂ ಸಮಾಯಾಂತಿ ಲೋಕಸ್ಯ ಹಿತಕಾಮ್ಯಯಾ।।
ಪಕ್ಷಿರಾಜ ಗರುತ್ಮಂತನು ನಿತ್ಯವೂ ಅಲ್ಲಿಗೆ ಹೋಗುತ್ತಿರುತ್ತಾನೆ. ನಾಲ್ವರು ಲೋಕಪಾಲಕರೂ, ದೇವತೆಗಳು, ಋಷಿಗಣಗಳು ಲೋಕದ ಹಿತವನ್ನು ಬಯಸಿ ನಿತ್ಯವೂ ಅಲ್ಲಿ ಸೇರುತ್ತಾರೆ.
12314007a ವಿಷ್ಣುನಾ ಯತ್ರ ಪುತ್ರಾರ್ಥೇ ತಪಸ್ತಪ್ತಂ ಮಹಾತ್ಮನಾ।
12314007c ಯತ್ರೈವ ಚ ಕುಮಾರೇಣ ಬಾಲ್ಯೇ ಕ್ಷಿಪ್ತಾ ದಿವೌಕಸಃ।।
ಅಲ್ಲಿ ಮಹಾತ್ಮ ವಿಷ್ಣುವು ಪುತ್ರನಿಗಾಗಿ ತಪಸ್ಸನ್ನು ತಪಿಸಿದ್ದನು. ಅಲ್ಲಿಯೇ ಬಾಲ್ಯದಲ್ಲಿಯೇ ಕುಮಾರನು ದಿವೌಕಸರನ್ನು ಸೋಲಿಸಿದ್ದನು.
12314008a ಶಕ್ತಿರ್ನ್ಯಸ್ತಾ ಕ್ಷಿತಿತಲೇ ತ್ರೈಲೋಕ್ಯಮವಮನ್ಯ ವೈ।
12314008c ಯತ್ರೋವಾಚ ಜಗತ್ಸ್ಕಂದಃ ಕ್ಷಿಪನ್ವಾಕ್ಯಮಿದಂ ತದಾ।।
ಮೂರುಲೋಕಗಳನ್ನು ನಿರ್ಲಕ್ಷಿಸಿ ಸ್ಕಂದನು ಭೂಮಿಯ ಮೇಲೆ ಶಕ್ತಿಯನ್ನು ನೆಟ್ಟಿದ್ದನು. ಆ ಜಗತ್ತಿಗೆ ಅವನು ಈ ಮಾತನ್ನು ಹೇಳಿದ್ದನು:
12314009a ಯೋಽನ್ಯೋಽಸ್ತಿ ಮತ್ತೋಽಭ್ಯಧಿಕೋ ವಿಪ್ರಾ ಯಸ್ಯಾಧಿಕಂ ಪ್ರಿಯಾಃ।
12314009c ಯೋ ಬ್ರಹ್ಮಣ್ಯೋ ದ್ವಿತೀಯೋಽಸ್ತಿ ತ್ರಿಷು ಲೋಕೇಷು ವೀರ್ಯವಾನ್।।
“ಬ್ರಾಹ್ಮಣರು ಅಧಿಕ ಪ್ರಿಯರಾಗಿರುವ ನನಗಿಂತಲೂ ಅಧಿಕ ವೀರ್ಯವಂತನಾದ ಎರಡನೆಯ ಬ್ರಹ್ಮಣ್ಯನು ಈ ಮೂರು ಲೋಕಗಳಲ್ಲಿಯೂ ಯಾರಿದ್ದಾರೆ?
12314010a ಸೋಽಭ್ಯುದ್ಧರತ್ವಿಮಾಂ ಶಕ್ತಿಮಥ ವಾ ಕಂಪಯತ್ವಿತಿ।
12314010c ತಚ್ಚ್ರುತ್ವಾ ವ್ಯಥಿತಾ ಲೋಕಾಃ ಕ ಇಮಾಮುದ್ಧರೇದಿತಿ।।
ಅಂಥವನು ಯಾರಾದರೂ ಇದ್ದರೆ ಅವನು ಈ ಶಕ್ತಿಯನ್ನು ಕಿತ್ತುಹಾಕಲಿ ಅಥವಾ ಅಳ್ಳಾಡಿಸಲಿ!” ಇದನ್ನು ಕೇಳಿ ಲೋಕಗಳು “ಇದನ್ನು ಯಾರು ಕಿತ್ತುಹಾಕುತ್ತಾರೆ?” ಎಂದು ವ್ಯಥಿತಗೊಂಡವು.
12314011a ಅಥ ದೇವಗಣಂ ಸರ್ವಂ ಸಂಭ್ರಾಂತೇಂದ್ರಿಯಮಾನಸಮ್।
12314011c ಅಪಶ್ಯದ್ಭಗವಾನ್ವಿಷ್ಣುಃ ಕ್ಷಿಪ್ತಂ ಸಾಸುರರಾಕ್ಷಸಮ್।।
ಆಗ ದೇವಗಣಗಳೆಲ್ಲವೂ ಮತ್ತು ಅಸುರ ರಾಕ್ಷಸರೂ ಇಂದ್ರಿಯ-ಮನಸ್ಸುಗಳಲ್ಲಿ ಸಂಭ್ರಾಂತರಾಗಿದ್ದುದನ್ನು ಭಗವಾನ್ ವಿಷ್ಣುವು ನೋಡಿದನು.
12314011e ಕಿಂ ನ್ವತ್ರ ಸುಕೃತಂ ಕಾರ್ಯಂ ಭವೇದಿತಿ ವಿಚಿಂತಯನ್।
12314012a ಸ ನಾಮೃಷ್ಯತ ತಂ ಕ್ಷೇಪಮವೈಕ್ಷತ ಚ ಪಾವಕಿಮ್।।
ಇಲ್ಲಿ ಮಾಡಬೇಕಾದ ಉತ್ತಮ ಕಾರ್ಯವು ಯಾವುದು ಎಂದು ಚಿಂತಿಸಿ, ಸ್ಕಂದನು ದೇವತೆಗಳ ವಿಷಯದಲ್ಲಿ ತೋರಿದ ತಿರಸ್ಕಾರ ಭಾವವನ್ನು ಸಹಿಸಿಕೊಳ್ಳಲಾರದೇ ಪಾವಕಿಯನ್ನು ನೋಡಿದನು.
12314012c ಸ ಪ್ರಹಸ್ಯ ವಿಶುದ್ಧಾತ್ಮಾ ಶಕ್ತಿಂ ಪ್ರಜ್ವಲಿತಾಂ ತದಾ।
12314012e ಕಂಪಯಾಮಾಸ ಸವ್ಯೇನ ಪಾಣಿನಾ ಪುರುಷೋತ್ತಮಃ।।
ಆಗ ನಸುನಕ್ಕು ಆ ವಿಶುದ್ಧಾತ್ಮ ಪುರುಷೋತ್ತಮನು ತನ್ನ ಎಡಗೈಯಿಂದ ಪ್ರಜ್ವಲಿಸುತ್ತಿದ್ದ ಆ ಶಕ್ತ್ಯಾಯುಧವನ್ನು ಅಳ್ಳಾಡಿಸಿದನು.
12314013a ಶಕ್ತ್ಯಾಂ ತು ಕಂಪಮಾನಾಯಾಂ ವಿಷ್ಣುನಾ ಬಲಿನಾ ತದಾ।
12314013c ಮೇದಿನೀ ಕಂಪಿತಾ ಸರ್ವಾ ಸಶೈಲವನಕಾನನಾ।।
ಬಲಶಾಲೀ ವಿಷ್ಣುವು ಆ ಶಕ್ತಿಯನ್ನು ಅಳ್ಳಾಡಿಸಲು ಪರ್ವತ-ವನ-ಕಾನನಗಳೊಂದಿಗೆ ಮೇದಿನಿಯೇ ಕಂಪಿಸಿತು.
12314014a ಶಕ್ತೇನಾಪಿ ಸಮುದ್ಧರ್ತುಂ ಕಂಪಿತಾ ಸಾ ನ ತೂದ್ಧೃತಾ।
12314014c ರಕ್ಷತಾ ಸ್ಕಂದರಾಜಸ್ಯ ಧರ್ಷಣಾಂ ಪ್ರಭವಿಷ್ಣುನಾ।।
ಅದನ್ನು ಕೀಳಲು ಸಮರ್ಥನಾಗಿದ್ದರೂ ಅವನು ಅದನ್ನು ಕೇವಲ ಅಳ್ಳಾಡಿಸಿ ಪ್ರಭು ವಿಷ್ಣುವು ಸ್ಕಂದರಾಜ ಮಾನವನ್ನು ಕಾಪಾಡಿದನು.
12314015a ತಾಂ ಕಂಪಯಿತ್ವಾ ಭಗವಾನ್ಪ್ರಹ್ರಾದಮಿದಮಬ್ರವೀತ್।
12314015c ಪಶ್ಯ ವೀರ್ಯಂ ಕುಮಾರಸ್ಯ ನೈತದನ್ಯಃ ಕರಿಷ್ಯತಿ।।
ಅದನ್ನು ಅಳ್ಳಾಡಿಸಿ ಭಗವಂತನು ಪ್ರಹ್ರಾದನಿಗೆ ಹೇಳಿದನು: “ಕುಮಾರನ ವೀರ್ಯವನ್ನು ನೋಡು. ಬೇರೆ ಯಾರೂ ಇದನ್ನು ಮಾಡಲಾರರು.”
12314016a ಸೋಽಮೃಷ್ಯಮಾಣಸ್ತದ್ವಾಕ್ಯಂ ಸಮುದ್ಧರಣನಿಶ್ಚಿತಃ।
12314016c ಜಗ್ರಾಹ ತಾಂ ತಸ್ಯ ಶಕ್ತಿಂ ನ ಚೈನಾಮಪ್ಯಕಂಪಯತ್।।
ಆ ಮಾತನ್ನು ಸಹಿಸಿಕೊಳ್ಳಲಾರದೇ ಪ್ರಹ್ರಾದನು ಶಕ್ತಿಯನ್ನು ಕಿತ್ತುಹಾಕಲು ನಿಶ್ಚಯಿಸಿದನು. ಅವನು ಆ ಶಕ್ತಿಯನ್ನು ಹಿಡಿದು ಎಳೆದನು. ಆದರೆ ಅವನಿಗೆ ಅದನ್ನು ಅಳ್ಳಾಡಿಸಲೂ ಸಾಧ್ಯವಾಗಲಿಲ್ಲ.
12314017a ನಾದಂ ಮಹಾಂತಂ ಮುಕ್ತ್ವಾ ಸ ಮೂರ್ಚಿತೋ ಗಿರಿಮೂರ್ಧನಿ।
12314017c ವಿಹ್ವಲಃ ಪ್ರಾಪತದ್ಭೂಮೌ ಹಿರಣ್ಯಕಶಿಪೋಃ ಸುತಃ।।
ಹಿರಣ್ಯಕಶಿಪುವಿನ ಆ ಮಗನು ಗಿರಿಮೂರ್ಧನಿಯಲ್ಲಿ ವಿಹ್ವಲನಾಗಿ ಮಹಾ ಕೂಗನ್ನು ಕೂಗುತ್ತಾ ಮೂರ್ಚಿತನಾಗಿ ಭೂಮಿಯ ಮೇಲೆ ಬಿದ್ದನು.
12314018a ಯತ್ರೋತ್ತರಾಂ ದಿಶಂ ಗತ್ವಾ ಶೈಲರಾಜಸ್ಯ ಪಾರ್ಶ್ವತಃ।
12314018c ತಪೋಽತಪ್ಯತ ದುರ್ಧರ್ಷಸ್ತಾತ ನಿತ್ಯಂ ವೃಷಧ್ವಜಃ।।
ಆ ಶೈಲರಾಜನ ಮಗ್ಗುಲಿನಿಂದ ಉತ್ತರ ದಿಕ್ಕಿನಲ್ಲಿ ಪ್ರಯಾಣಿಸಿ ದುರ್ಧರ್ಷ ವೃಷಧ್ವಜನು ಅಲ್ಲಿ ನಿತ್ಯವೂ ತಪಸ್ಸನ್ನು ತಪಿಸಿದನು.
12314019a ಪಾವಕೇನ ಪರಿಕ್ಷಿಪ್ತೋ ದೀಪ್ಯತಾ ತಸ್ಯ ಚಾಶ್ರಮಃ।
12314019c ಆದಿತ್ಯಬಂಧನಂ ನಾಮ ದುರ್ಧರ್ಷಮಕೃತಾತ್ಮಭಿಃ।।
ಅಗ್ನಿಯಿಂದ ಸುತ್ತುವರೆಯಲ್ಪಟ್ಟು ಬೆಳಗುತ್ತಿದ್ದ ಆದಿತ್ಯಬಂಧನವೆಂಬ ಹೆಸರಿನ ಅವನ ಆಶ್ರಮವು ಅಕೃತಾತ್ಮರಿಗೆ ತಲುಪಲಸಾಧ್ಯವಾದುದು.
12314020a ನ ತತ್ರ ಶಕ್ಯತೇ ಗಂತುಂ ಯಕ್ಷರಾಕ್ಷಸದಾನವೈಃ।
12314020c ದಶಯೋಜನವಿಸ್ತಾರಮಗ್ನಿಜ್ವಾಲಾಸಮಾವೃತಮ್।।
ಅಗ್ನಿಜ್ವಾಲೆಯಿಂದ ಸುತ್ತುವರೆಯಲ್ಪಟ್ಟಿರುವ ಆ ಹತ್ತು ಯೋಜನ ವಿಸ್ತೀರ್ಣ ಪ್ರದೇಶಕ್ಕೆ ಯಕ್ಷ-ರಾಕ್ಷಸ-ದಾನವರಿಗೂ ಹೋಗಲು ಶಕ್ಯವಾಗುವುದಿಲ್ಲ.
12314021a ಭಗವಾನ್ಪಾವಕಸ್ತತ್ರ ಸ್ವಯಂ ತಿಷ್ಠತಿ ವೀರ್ಯವಾನ್।
12314021c ಸರ್ವವಿಘ್ನಾನ್ಪ್ರಶಮಯನ್ಮಹಾದೇವಸ್ಯ ಧೀಮತಃ।।
ಸ್ವಯಂ ವೀರ್ಯವಾನ್ ಭಗವಾನ್ ಪಾವಕನು ಅಲ್ಲಿ ಧೀಮತ ಮಹಾದೇವನ ಸರ್ವವಿಘ್ನಗಳನ್ನೂ ಪರಿಹರಿಸುತ್ತಾ ಅಲ್ಲಿ ನಿಂತಿರುತ್ತಾನೆ.
12314022a ದಿವ್ಯಂ ವರ್ಷಸಹಸ್ರಂ ಹಿ ಪಾದೇನೈಕೇನ ತಿಷ್ಠತಃ।
12314022c ದೇವಾನ್ಸಂತಾಪಯಂಸ್ತತ್ರ ಮಹಾದೇವೋ ಧೃತವ್ರತಃ।।
ಧೃತವ್ರತ ಮಹಾದೇವನು ಅಲ್ಲಿ ಸಹಸ್ರ ದಿವ್ಯವರ್ಷಗಳ ಪರ್ಯಂತ ದೇವತೆಗಳನ್ನು ಸಂತಾಪಗೊಳಿಸುತ್ತಾ ಒಂದೇ ಕಾಲಿನ ಮೇಲೆ ನಿಂತಿದ್ದನು.
12314023a ಐಂದ್ರೀಂ ತು ದಿಶಮಾಸ್ಥಾಯ ಶೈಲರಾಜಸ್ಯ ಧೀಮತಃ।
12314023c ವಿವಿಕ್ತೇ ಪರ್ವತತಟೇ ಪಾರಾಶರ್ಯೋ ಮಹಾತಪಾಃ।
12314023e ವೇದಾನಧ್ಯಾಪಯಾಮಾಸ ವ್ಯಾಸಃ ಶಿಷ್ಯಾನ್ಮಹಾತಪಾಃ।।
12314024a ಸುಮಂತುಂ ಚ ಮಹಾಭಾಗಂ ವೈಶಂಪಾಯನಮೇವ ಚ।
12314024c ಜೈಮಿನಿಂ ಚ ಮಹಾಪ್ರಾಜ್ಞಂ ಪೈಲಂ ಚಾಪಿ ತಪಸ್ವಿನಮ್।।
ಆ ಪರ್ವತರಾಜನ ಪೂರ್ವದಿಕ್ಕಿನಲ್ಲಿ ನಿರ್ಜನ ಪರ್ವತ ತಟದಲ್ಲಿ ಪಾರಶರ್ಯ ಮಹಾತಪಸ್ವೀ ವ್ಯಾಸನು ಮಹಾತಪಸ್ವಿಗಳಾದ ಸುಮಂತು, ಮಹಾಭಾಗ ವೈಶಂಪಾಯನ, ಮಹಾಪ್ರಾಜ್ಞ ಜೈಮಿನಿ ಮತ್ತು ತಪಸ್ವಿ ಪೈಲ – ಇವರಿಗೆ ವೇದಾಧ್ಯಯನವನ್ನು ಮಾಡಿಸುತ್ತಿದ್ದನು.
12314025a ಏಭಿಃ ಶಿಷ್ಯೈಃ ಪರಿವೃತೋ ವ್ಯಾಸ ಆಸ್ತೇ ಮಹಾತಪಾಃ।
12314025c ತತ್ರಾಶ್ರಮಪದಂ ಪುಣ್ಯಂ ದದರ್ಶ ಪಿತುರುತ್ತಮಮ್।
12314025e ಆರಣೇಯೋ ವಿಶುದ್ಧಾತ್ಮಾ ನಭಸೀವ ದಿವಾಕರಃ।। ।
ನಭದಲ್ಲಿ ದಿವಾಕರನನಂತಿದ್ದ ವಿಶುದ್ಧಾತ್ಮಾ ಆರಣೇಯ ಶುಕನು ಆ ಉತ್ತಮ ತಂದೆ ಮಹಾತಪಸ್ವಿ ವ್ಯಾಸಸ್ನು ಶಿಷ್ಯರಿಂದ ಪರಿವೃತನಾಗಿದ್ದ ಆ ಪುಣ್ಯ ಆಶ್ರಮಪದವನ್ನು ನೋಡಿದನು.
12314026a ಅಥ ವ್ಯಾಸಃ ಪರಿಕ್ಷಿಪ್ತಂ ಜ್ವಲಂತಮಿವ ಪಾವಕಮ್।
12314026c ದದರ್ಶ ಸುತಮಾಯಾಂತಂ ದಿವಾಕರಸಮಪ್ರಭಮ್।।
ಪ್ರಜ್ವಲಿಸುವ ಪಾವಕನಂತೆ ಬೆಳಗುತ್ತಿದ್ದ ದಿವಾಕರನ ಸಮ ಪ್ರಭೆಯನ್ನು ಹೊಂದಿದ್ದ ತನ್ನ ಮಗನು ಹತ್ತಿರ ಬರುತ್ತಿದ್ದುದನ್ನು ವ್ಯಾಸನು ನೋಡಿದನು.
12314027a ಅಸಜ್ಜಮಾನಂ ವೃಕ್ಷೇಷು ಶೈಲೇಷು ವಿಷಮೇಷು ಚ।
12314027c ಯೋಗಯುಕ್ತಂ ಮಹಾತ್ಮಾನಂ ಯಥಾ ಬಾಣಂ ಗುಣಚ್ಯುತಮ್।।
ಪರ್ವತದ ತಪ್ಪಲು ಪ್ರದೇಶ ಮತ್ತು ಮರಗಿಡಗಳ ಮೇಲೆ ದೃಷ್ಟಿಹಾಯಿಸದೇ ಧನುಸ್ಸಿನಿಂದ ಪ್ರಯೋಗಿಸಿದ ಬಾಣದಂತೆ ಯೋಗಯುಕ್ತನಾಗಿ ಆ ಮಹಾತ್ಮನು ಬರುತ್ತಿದ್ದನು.
12314028a ಸೋಽಭಿಗಮ್ಯ ಪಿತುಃ ಪಾದಾವಗೃಹ್ಣಾದರಣೀಸುತಃ।
12314028c ಯಥೋಪಜೋಷಂ ತೈಶ್ಚಾಪಿ ಸಮಾಗಚ್ಚನ್ಮಹಾಮುನಿಃ।।
ಅರಣೀಸುತ ಶುಕನು ಆಗಮಿಸಿ ತಂದೆಯ ಪಾದಗಳನ್ನು ಹಿಡಿದು ನಮಸ್ಕರಿಸಿದನು ಮತ್ತು ಆ ಮಹಾಮುನಿಯು ಮೌನಿಯಾಗಿಯೇ ಅವರನ್ನು ಕೂಡಿಕೊಂಡನು.
12314029a ತತೋ ನಿವೇದಯಾಮಾಸ ಪಿತ್ರೇ ಸರ್ವಮಶೇಷತಃ।
12314029c ಶುಕೋ ಜನಕರಾಜೇನ ಸಂವಾದಂ ಪ್ರೀತಮಾನಸಃ।।
ಅನಂತರ ಶುಕನು ತಂದೆಗೆ ಪ್ರೀತಮಾನಸನಾಗಿ ಜನಕರಾಜನೊಡನೆ ನಡೆದ ಸಂವಾದವನ್ನು ಏನನ್ನೂ ಬಿಡದೇ ಎಲ್ಲವನ್ನೂ ನಿವೇದಿಸಿದನು.
12314030a ಏವಮಧ್ಯಾಪಯನ್ಶಿಷ್ಯಾನ್ವ್ಯಾಸಃ ಪುತ್ರಂ ಚ ವೀರ್ಯವಾನ್।
12314030c ಉವಾಸ ಹಿಮವತ್ಪೃಷ್ಠೇ ಪಾರಾಶರ್ಯೋ ಮಹಾಮುನಿಃ।।
ಹೀಗೆ ಮಹಾಮುನಿ ಪಾರಾಶರ್ಯ ವ್ಯಾಸನು ತನ್ನ ಶಿಷ್ಯರು ಮತ್ತು ವೀರ್ಯವಾನ್ ಪುತ್ರನಿಗೆ ಅಧ್ಯಾಪನ ಮಾಡಿಸುತ್ತಾ ಆ ಹಿಮವತ್ ಪರ್ವತದ ಮೇಲೆ ವಾಸಿಸುತ್ತಿದ್ದನು.
12314031a ತತಃ ಕದಾ ಚಿಚ್ಚಿಷ್ಯಾಸ್ತಂ ಪರಿವಾರ್ಯಾವತಸ್ಥಿರೇ।
12314031c ವೇದಾಧ್ಯಯನಸಂಪನ್ನಾಃ ಶಾಂತಾತ್ಮಾನೋ ಜಿತೇಂದ್ರಿಯಾಃ।।
12314032a ವೇದೇಷು ನಿಷ್ಠಾಂ ಸಂಪ್ರಾಪ್ಯ ಸಾಂಗೇಷ್ವತಿತಪಸ್ವಿನಃ।
12314032c ಅಥೋಚುಸ್ತೇ ತದಾ ವ್ಯಾಸಂ ಶಿಷ್ಯಾಃ ಪ್ರಾಂಜಲಯೋ ಗುರುಮ್।।
ವೇದಗಳಲ್ಲಿ ಮತ್ತು ವೇದಾಂಗಗಳಲ್ಲಿ ನಿಷ್ಠೆಯನ್ನು ಪಡೆದು ಆ ವೇದಾಧ್ಯಯನಸಂಪನ್ನ ಶಾಂತಾತ್ಮ ಜಿತೇಂದ್ರಿಯ ಶಿಷ್ಯರು ಒಮ್ಮೆ ವ್ಯಾಸನನ್ನು ಸುತ್ತುವರೆದು ಕುಳಿತಿದ್ದರು. ಆಗ ಶಿಷ್ಯರು ಕೈಮುಗಿದು ಗುರು ವ್ಯಾಸನಿಗೆ ಹೇಳಿದರು:
12314033a ಮಹತಾ ಶ್ರೇಯಸಾ ಯುಕ್ತಾ ಯಶಸಾ ಚ ಸ್ಮ ವರ್ಧಿತಾಃ।
12314033c ಏಕಂ ತ್ವಿದಾನೀಮಿಚ್ಚಾಮೋ ಗುರುಣಾನುಗ್ರಹಂ ಕೃತಮ್।।
“ನಾವು ಮಹಾ ಶ್ರೇಯಸ್ಸಿನಿಂದ ಕೂಡಿದವರಾಗಿ, ಯಶಸ್ಸಿನಲ್ಲಿಯೂ ವರ್ಧಿಸಿದ್ದೇವೆ. ಈಗ ಗುರುವಿನ ಒಂದು ಅನುಗ್ರಹವಾಗಬೇಕೆಂದು ಇಚ್ಛಿಸಿದ್ದೇವೆ.”
12314034a ಇತಿ ತೇಷಾಂ ವಚಃ ಶ್ರುತ್ವಾ ಬ್ರಹ್ಮರ್ಷಿಸ್ತಾನುವಾಚ ಹ।
12314034c ಉಚ್ಯತಾಮಿತಿ ತದ್ವತ್ಸಾ ಯದ್ವಃ ಕಾರ್ಯಂ ಪ್ರಿಯಂ ಮಯಾ।।
ಅವರ ಈ ಮಾತನ್ನು ಕೇಳಿ ಬ್ರಹ್ಮರ್ಷಿಯು ಅವರಿಗೆ ಹೇಳಿದನು: “ವತ್ಸರೇ! ನನ್ನಿಂದ ಯಾವ ಪ್ರಿಯ ಕಾರ್ಯವಾಗಬೇಕು ಅದನ್ನು ಹೇಳಿ.”
12314035a ಏತದ್ವಾಕ್ಯಂ ಗುರೋಃ ಶ್ರುತ್ವಾ ಶಿಷ್ಯಾಸ್ತೇ ಹೃಷ್ಟಮಾನಸಾಃ।
12314035c ಪುನಃ ಪ್ರಾಂಜಲಯೋ ಭೂತ್ವಾ ಪ್ರಣಮ್ಯ ಶಿರಸಾ ಗುರುಮ್।।
12314036a ಊಚುಸ್ತೇ ಸಹಿತಾ ರಾಜನ್ನಿದಂ ವಚನಮುತ್ತಮಮ್।
ರಾಜನ್! ಗುರುವಿನ ಈ ಮಾತನ್ನು ಕೇಳಿ ಹೃಷ್ಟಮಾನಸರಾದ ಆ ಶಿಷ್ಯರು ಪುನಃ ಅಂಜಲೀಬದ್ಧರಾಗಿ ಗುರುವನ್ನು ಶಿರಸಾ ನಮಸ್ಕರಿಸಿ ಒಟ್ಟಿಗೇ ಈ ಉತ್ತಮ ಮಾತನ್ನಾಡಿದರು.
12314036c ಯದಿ ಪ್ರೀತ ಉಪಾಧ್ಯಾಯೋ ಧನ್ಯಾಃ ಸ್ಮೋ ಮುನಿಸತ್ತಮ।।
12314037a ಕಾಂಕ್ಷಾಮಸ್ತು ವಯಂ ಸರ್ವೇ ವರಂ ದತ್ತಂ ಮಹರ್ಷಿಣಾ।
12314037c ಷಷ್ಠಃ ಶಿಷ್ಯೋ ನ ತೇ ಖ್ಯಾತಿಂ ಗಚ್ಚೇದತ್ರ ಪ್ರಸೀದ ನಃ।।
“ಮುನಿಸತ್ತಮ! ಉಪಾಧ್ಯಾಯನು ಪ್ರೀತನಾದನೆಂದರೆ ನಾವು ಧನ್ಯರೇ ಸರಿ. ನಾವೆಲ್ಲರೂ ಮಹರ್ಷಿಯಿಂದ ಒಂದು ವರವನ್ನು ಪಡೆಯಲು ಬಯಸುತ್ತೇವೆ. ನಿನ್ನ ಆರನೆಯ ಶಿಷ್ಯನು ಖ್ಯಾತನಾಗಬಾರದು. ನಮ್ಮ ಮೇಲೆ ಪ್ರಸೀದನಾಗಬೇಕು!
12314038a ಚತ್ವಾರಸ್ತೇ ವಯಂ ಶಿಷ್ಯಾ ಗುರುಪುತ್ರಶ್ಚ ಪಂಚಮಃ।
12314038c ಇಹ ವೇದಾಃ ಪ್ರತಿಷ್ಠೇರನ್ನೇಷ ನಃ ಕಾಂಕ್ಷಿತೋ ವರಃ।।
ನಾವು ನಾಲ್ವರು ನಿನ್ನ ಶಿಷ್ಯರು. ಗುರುಪುತ್ರನು ಐದನೆಯವನು. ಇವರಲ್ಲಿ ಮಾತ್ರ ವೇದಗಳು ಪ್ರತಿಷ್ಠಿತವಾಗಿರಬೇಕು. ಇದೇ ನಾವು ಬಯಸುವ ವರ.”
12314039a ಶಿಷ್ಯಾಣಾಂ ವಚನಂ ಶ್ರುತ್ವಾ ವ್ಯಾಸೋ ವೇದಾರ್ಥತತ್ತ್ವವಿತ್।
12314039c ಪರಾಶರಾತ್ಮಜೋ ಧೀಮಾನ್ಪರಲೋಕಾರ್ಥಚಿಂತಕಃ।
12314039e ಉವಾಚ ಶಿಷ್ಯಾನ್ಧರ್ಮಾತ್ಮಾ ಧರ್ಮ್ಯಂ ನೈಃಶ್ರೇಯಸಂ ವಚಃ।।
ಶಿಷ್ಯರ ಮಾತನ್ನು ಕೇಳಿ ಪರಾಶರಾತ್ಮಜ ಧೀಮಾನ್ ಪರಲೋಕಾರ್ಥಚಿಂತಕ ಧರ್ಮಾತ್ಮಾ ವೇದಾರ್ಥವಿದು ವ್ಯಾಸನು ಧರ್ಮಾನುಕೂಲವಾದ ಮತ್ತು ಮೋಕ್ಷಾನುಕೂಲವಾದ ಈ ಮಾತನ್ನಾಡಿದನು.
12314040a ಬ್ರಾಹ್ಮಣಾಯ ಸದಾ ದೇಯಂ ಬ್ರಹ್ಮ ಶುಶ್ರೂಷವೇ ಭವೇತ್।
12314040c ಬ್ರಹ್ಮಲೋಕೇ ನಿವಾಸಂ ಯೋ ಧ್ರುವಂ ಸಮಭಿಕಾಂಕ್ಷತಿ।।
“ಬ್ರಹ್ಮಲೋಕದಲ್ಲಿ ಶಾಶ್ವತ ನಿವಾಸವನ್ನು ಬಯಸುವವನು ಬ್ರಾಹ್ಮಣನಿಗೆ ಸದಾ ಬ್ರಹ್ಮವೇದವನ್ನು ಅಧ್ಯಾಪನ ಮಾಡಿಸಬೇಕು.
12314041a ಭವಂತೋ ಬಹುಲಾಃ ಸಂತು ವೇದೋ ವಿಸ್ತಾರ್ಯತಾಮಯಮ್।
12314041c ನಾಶಿಷ್ಯೇ ಸಂಪ್ರದಾತವ್ಯೋ ನಾವ್ರತೇ ನಾಕೃತಾತ್ಮನಿ।।
ನೀವು ಅನೇಕರಾಗಿರಿ. ವೇದವನ್ನು ಎಲ್ಲೆಲ್ಲಿಯೂ ಹರಡಿರಿ. ಆದರೆ ಶಿಷ್ಯನಲ್ಲದವನಿಗೆ, ವ್ರತನಲ್ಲದವನಿಗೆ ಮತ್ತು ಅಕೃತಾತ್ಮನಿಗೆ ಇದನ್ನು ಹೇಳಿಕೊಡಬೇಡಿ.
12314042a ಏತೇ ಶಿಷ್ಯಗುಣಾಃ ಸರ್ವೇ ವಿಜ್ಞಾತವ್ಯಾ ಯಥಾರ್ಥತಃ।
12314042c ನಾಪರೀಕ್ಷಿತಚಾರಿತ್ರೇ ವಿದ್ಯಾ ದೇಯಾ ಕಥಂ ಚನ।।
ಈ ಎಲ್ಲ ಗುಣಗಳು ಶಿಷ್ಯನಲ್ಲಿವೆಯೇ ಇಲ್ಲವೇ ಎನ್ನುವುದನ್ನು ಯಥಾರ್ಥವಾಗಿ ತಿಳಿದುಕೊಳ್ಳಬೇಕು. ಚಾರಿತ್ರ್ಯವನ್ನು ಪರೀಕ್ಷಿಸದೆಯೇ ಎಂದೂ ವಿದ್ಯೆಯನ್ನು ನೀಡಬಾರದು.
12314043a ಯಥಾ ಹಿ ಕನಕಂ ಶುದ್ಧಂ ತಾಪಚ್ಚೇದನಿಘರ್ಷಣೈಃ।
12314043c ಪರೀಕ್ಷೇತ ತಥಾ ಶಿಷ್ಯಾನೀಕ್ಷೇತ್ಕುಲಗುಣಾದಿಭಿಃ।।
ಸುಡುವುದರಿಂದ, ಕತ್ತರಿಸುವುದರಿಂದ ಮತ್ತು ತಿಕ್ಕುವುದರಿಂದ ಹೇಗೆ ಚಿನ್ನವು ಶುದ್ಧವಾಗಿದೆಯೋ ಇಲ್ಲವೋ ಎಂದು ಪರೀಕ್ಷಿಸುತ್ತಾರೋ ಹಾಗೆ ಶಿಷ್ಯನನ್ನೂ ಕೂಡ ಕುಲ-ಗುಣ ಮೊದಲಾದ ವಿಷಯಗಳಲ್ಲಿ ಪರೀಕ್ಷಿಸಬೇಕು.
12314044a ನ ನಿಯೋಜ್ಯಾಶ್ಚ ವಃ ಶಿಷ್ಯಾ ಅನಿಯೋಗೇ ಮಹಾಭಯೇ।
12314044c ಯಥಾಮತಿ ಯಥಾಪಾಠಂ ತಥಾ ವಿದ್ಯಾ ಫಲಿಷ್ಯತಿ।।
ಮಾಡಬಾರದ ಮತ್ತು ಭಯವನ್ನುಂಟು ಮಾಡುವ ಕೆಲಸದಲ್ಲಿ ಶಿಷ್ಯರನ್ನು ತೊಡಗಿಸಬಾರದು. ಅವರ ಬುದ್ಧಿಯು ಹೇಗಿರುವುದೋ ಮತ್ತು ನೀವು ಹೇಗೆ ಅವರಿಗೆ ಕಲಿಸುತ್ತೀರೋ ಹಾಗೆಯೇ ಅವರ ವಿದ್ಯೆಯು ಫಲಿಸುತ್ತದೆ.
12314045a ಸರ್ವಸ್ತರತು ದುರ್ಗಾಣಿ ಸರ್ವೋ ಭದ್ರಾಣಿ ಪಶ್ಯತು।
12314045c ಶ್ರಾವಯೇಚ್ಚತುರೋ ವರ್ಣಾನ್ ಕೃತ್ವಾ ಬ್ರಾಹ್ಮಣಮಗ್ರತಃ।।
ಎಲ್ಲರೂ ಎಲ್ಲ ಸಂಕಟಗಳಿಂದಲೂ ಪಾರಾಗಲಿ. ಎಲ್ಲರೂ ಕಲ್ಯಾಣವನ್ನು ಕಾಣಲಿ. ಬ್ರಾಹ್ಮಣರಿಗೆ ಪ್ರಾಶಸ್ತ್ಯಕೊಟ್ಟು ನಾಲ್ಕೂ ವರ್ಣದವರಿಗೂ ಹೇಳಬೇಕು.
12314046a ವೇದಸ್ಯಾಧ್ಯಯನಂ ಹೀದಂ ತಚ್ಚ ಕಾರ್ಯಂ ಮಹತ್ಸ್ಮೃತಮ್।
12314046c ಸ್ತುತ್ಯರ್ಥಮಿಹ ದೇವಾನಾಂ ವೇದಾಃ ಸೃಷ್ಟಾಃ ಸ್ವಯಂಭುವಾ।।
ವೇದಾದ ಅಧ್ಯಯನವು ಮಹತ್ತರವಾದುದೆಂದು ತಿಳಿದಿದೆ. ಅದನ್ನು ಮಾಡಬೇಕು. ದೇವತೆಗಳ ಸ್ತುತಿಗಾಗಿ ಸ್ವಯಂಭುವು ವೇದಗಳನ್ನು ಸೃಷ್ಟಿಸಿದನು.
12314047a ಯೋ ನಿರ್ವದೇತ ಸಂಮೋಹಾದ್ಬ್ರಾಹ್ಮಣಂ ವೇದಪಾರಗಮ್।
12314047c ಸೋಽಪಧ್ಯಾನಾದ್ಬ್ರಾಹ್ಮಣಸ್ಯ ಪರಾಭೂಯಾದಸಂಶಯಮ್।।
ವೇದಪಾರಂಗತ ಬ್ರಾಹ್ಮಣನನ್ನು ಸಂಮೋಹದಿಂದ ಯಾರು ನಿಂದಿಸುರ್ವರೋ ಅವರು ಬ್ರಾಹ್ಮಣನಿಂದನೆಯ ಪರಿಣಾಮವಾಗಿ ಎಲ್ಲದರಲ್ಲಿಯೂ ಪರಾಭವವನ್ನು ಹೊಂದುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.
12314048a ಯಶ್ಚಾಧರ್ಮೇಣ ವಿಬ್ರೂಯಾದ್ಯಶ್ಚಾಧರ್ಮೇಣ ಪೃಚ್ಚತಿ।
12314048c ತಯೋರನ್ಯತರಃ ಪ್ರೈತಿ ವಿದ್ವೇಷಂ ವಾಧಿಗಚ್ಚತಿ।।
ಯಾರು ಅಧರ್ಮದಿಂದ ಹೇಳುತ್ತಾರೋ ಮತ್ತು ಯಾರು ಅಧರ್ಮದಿಂದ ಪ್ರಶ್ನಿಸುತ್ತಾರೋ ಆ ಇಬ್ಬರಲ್ಲಿ ದ್ವೇಷವುಂಟಾಗುತ್ತದೆ, ವಿವಾದವುಂಟಾಗುತ್ತದೆ ಮತ್ತು ಅವರಲ್ಲಿ ಒಬ್ಬನು ಹಾಳಾಗುತ್ತಾನೆ.
12314049a ಏತದ್ವಃ ಸರ್ವಮಾಖ್ಯಾತಂ ಸ್ವಾಧ್ಯಾಯಸ್ಯ ವಿಧಿಂ ಪ್ರತಿ।
12314049c ಉಪಕುರ್ಯಾಚ್ಚ ಶಿಷ್ಯಾಣಾಮೇತಚ್ಚ ಹೃದಿ ವೋ ಭವೇತ್।।
ಸ್ವಾಧ್ಯಾಯದ ವಿಧಿಯ ಕುರಿತು ನಿಮಗೆ ಎಲ್ಲವನ್ನೂ ಹೇಳಿದ್ದೇನೆ. ಶಿಷ್ಯರಿಗೆ ಉಪಕಾರವನ್ನು ಮಾಡಿ. ಇವೆಲ್ಲವೂ ನಿಮ್ಮ ಮನಸ್ಸಿನಲ್ಲಿರಲಿ.””
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಚತುರ್ದಶಾಧಿಕತ್ರಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಮುನ್ನೂರಾಹದಿನಾಲ್ಕನೇ ಅಧ್ಯಾಯವು.