312: ಶುಕೋತ್ಪತ್ತಿಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 312

ಸಾರ

ಮಿಥಿಲೆಗೆ ಶುಕನ ಆಗಮನ (1-24). ಮಂತ್ರಿಯೇ ಮೊದಲಾದವರಿಂದ ಅವನ ಸತ್ಕಾರ (25-46).

12312001 ಭೀಷ್ಮ ಉವಾಚ।
12312001a ಸ ಮೋಕ್ಷಮನುಚಿಂತ್ಯೈವ ಶುಕಃ ಪಿತರಮಭ್ಯಗಾತ್।
12312001c ಪ್ರಾಹಾಭಿವಾದ್ಯ ಚ ಗುರುಂ ಶ್ರೇಯೋರ್ಥೀ ವಿನಯಾನ್ವಿತಃ।।

ಭೀಷ್ಮನು ಹೇಳಿದನು: “ಮೋಕ್ಷದ ಕುರಿತು ಚಿಂತಿಸುತ್ತಲೇ ಶುಕನು ತಂದೆಯ ಬಳಿ ಹೋದನು. ಆ ಶ್ರೇಯೋರ್ಥಿಯು ವಿನಯಾನ್ವಿತನಾಗಿ ಗುರುವನ್ನು ನಮಸ್ಕರಿಸಿ ಹೇಳಿದನು:

12312002a ಮೋಕ್ಷಧರ್ಮೇಷು ಕುಶಲೋ ಭಗವಾನ್ಪ್ರಬ್ರವೀತು ಮೇ।
12312002c ಯಥಾ ಮೇ ಮನಸಃ ಶಾಂತಿಃ ಪರಮಾ ಸಂಭವೇತ್ಪ್ರಭೋ।।

“ಭಗವಾನ್! ಪ್ರಭೋ! ಮೋಕ್ಷಧರ್ಮಗಳಲ್ಲಿ ಕುಶಲನಾದ ನೀನು ನನ್ನ ಮನಸ್ಸಿಗೆ ಪರಮ ಶಾಂತಿಯುಂಟಾಗುವಂಥಹುದನ್ನು ಹೇಳಬೇಕು.”

12312003a ಶ್ರುತ್ವಾ ಪುತ್ರಸ್ಯ ವಚನಂ ಪರಮರ್ಷಿರುವಾಚ ತಮ್।
12312003c ಅಧೀಷ್ವ ಪುತ್ರ ಮೋಕ್ಷಂ ವೈ ಧರ್ಮಾಂಶ್ಚ ವಿವಿಧಾನಪಿ।।

ಮಗನ ಮಾತನ್ನು ಕೇಳಿ ಪರಮ ಋಷಿಯು ಅವನಿಗೆ ಹೇಳಿದನು: “ಪುತ್ರ! ವಿವಿಧ ಮೋಕ್ಷ ಧರ್ಮಗಳನ್ನು ನೀನು ಅಧ್ಯಯನಮಾಡು” ಎಂದನು.

12312004a ಪಿತುರ್ನಿಯೋಗಾಜ್ಜಗ್ರಾಹ ಶುಕೋ ಬ್ರಹ್ಮವಿದಾಂ ವರಃ।
12312004c ಯೋಗಶಾಸ್ತ್ರಂ ಚ ನಿಖಿಲಂ ಕಾಪಿಲಂ ಚೈವ ಭಾರತ।।

ಭಾರತ! ತಂದೆಯ ನಿಯೋಗದಂತೆ ಬ್ರಹ್ಮವಿದರಲ್ಲಿ ಶ್ರೇಷ್ಠ ಶುಕನು ಕಪಿಲನದನ್ನೂ ಸೇರಿ ನಿಖಿಲ ಯೋಗಶಾಸ್ತ್ರವನ್ನು ಅರ್ಥಮಾಡಿಕೊಂಡನು.

12312005a ಸ ತಂ ಬ್ರಾಹ್ಮ್ಯಾ ಶ್ರಿಯಾ ಯುಕ್ತಂ ಬ್ರಹ್ಮತುಲ್ಯಪರಾಕ್ರಮಮ್।
12312005c ಮೇನೇ ಪುತ್ರಂ ಯದಾ ವ್ಯಾಸೋ ಮೋಕ್ಷವಿದ್ಯಾವಿಶಾರದಮ್।।

ಬ್ರಹ್ಮಶ್ರೀಯಿಂದ ಯುಕ್ತನಾದ ಬ್ರಹ್ಮನ ಪರಾಕ್ರಮವನ್ನೇ ಹೊಂದಿದ್ದ ಪುತ್ರನನ್ನು ವ್ಯಾಸನು ಮೋಕ್ಷವಿದ್ಯಾವಿಶಾರದನೆಂದು ತಿಳಿದುಕೊಂಡನು.

12312006a ಉವಾಚ ಗಚ್ಚೇತಿ ತದಾ ಜನಕಂ ಮಿಥಿಲೇಶ್ವರಮ್।
12312006c ಸ ತೇ ವಕ್ಷ್ಯತಿ ಮೋಕ್ಷಾರ್ಥಂ ನಿಖಿಲೇನ ವಿಶೇಷತಃ।।

ಆಗ ಅವನು ಅವನಿಗೆ “ಮಿಥಿಲೇಶ್ವರ ಜನಕನಲ್ಲಿಗೆ ಹೋಗು. ಅವನು ವಿಶೇಷವಾಗಿ ಮೋಕ್ಷದ ಕುರಿತು ಎಲ್ಲವನ್ನೂ ನಿನಗೆ ಹೇಳುತ್ತಾನೆ” ಎಂದನು.

12312007a ಪಿತುರ್ನಿಯೋಗಾದಗಮನ್ಮೈಥಿಲಂ ಜನಕಂ ನೃಪಮ್।
12312007c ಪ್ರಷ್ಟುಂ ಧರ್ಮಸ್ಯ ನಿಷ್ಠಾಂ ವೈ ಮೋಕ್ಷಸ್ಯ ಚ ಪರಾಯಣಮ್।।

ತಂದೆಯ ನಿಯೋಗದಂತೆ ಅವನು ಧರ್ಮನಿಷ್ಠನಾಗಿದ್ದ ಮತ್ತು ಮೋಕ್ಷ ಪರಾಯಣನಾಗಿದ್ದ ಮಿಥಿಲೆಯ ಜನಕ ನೃಪನಲ್ಲಿಗೆ ಹೋದನು.

12312008a ಉಕ್ತಶ್ಚ ಮಾನುಷೇಣ ತ್ವಂ ಪಥಾ ಗಚ್ಚೇತ್ಯವಿಸ್ಮಿತಃ।
12312008c ನ ಪ್ರಭಾವೇಣ ಗಂತವ್ಯಮಂತರಿಕ್ಷಚರೇಣ ವೈ।।

ವ್ಯಾಸನು ಇದನ್ನೂ ಹೇಳಿದನು: “ಅವಿಸ್ಮಿತನಾಗಿ ನೀನು ಮನುಷ್ಯರು ಸಂಚರಿಸುವ ಮಾರ್ಗದಲಿಯೇ ಹೋಗು. ನಿನ್ನ ಯೋಗಪ್ರಭಾವದಿಂದ ಅಂತರಿಕ್ಷಮಾರ್ಗದಲ್ಲಿ ಹೋಗಬೇಡ.

12312009a ಆರ್ಜವೇಣೈವ ಗಂತವ್ಯಂ ನ ಸುಖಾನ್ವೇಷಿಣಾ ಪಥಾ।
12312009c ನಾನ್ವೇಷ್ಟವ್ಯಾ ವಿಶೇಷಾಸ್ತು ವಿಶೇಷಾ ಹಿ ಪ್ರಸಂಗಿನಃ।।

ಆರ್ಜವದಿಂದಲೇ ಅಲ್ಲಿಗೆ ಹೋಗಬೇಕು. ಸುಖಾನ್ವೇಷಿಣಿಯರ ಪಥದಲ್ಲಿ ಹೋಗಬಾರದು. ವಿಶೇಷವಾದವುಗಳನ್ನು ಬಯಸಿ ಹೋಗಬಾರದು. ಏಕೆಂದರೆ ಅದೇ ವಿಶೇಷವಾದವುಗಳೊಡನೆ ಹೆಚ್ಚಿನ ಆಸಕ್ತಿಯುಂಟಾಗುತ್ತದೆ.

12312010a ಅಹಂಕಾರೋ ನ ಕರ್ತವ್ಯೋ ಯಾಜ್ಯೇ ತಸ್ಮಿನ್ನರಾಧಿಪೇ।
12312010c ಸ್ಥಾತವ್ಯಂ ಚ ವಶೇ ತಸ್ಯ ಸ ತೇ ಚೇತ್ಸ್ಯತಿ ಸಂಶಯಮ್।।

ಆ ನರಾಧಿಪನ ಎದಿರು ಅಹಂಕಾರವನ್ನು ತೋರಿಸಬಾರದು. ಅವನ ವಶದಲ್ಲಿಯೇ ಇರಬೇಕು. ಅವನು ನಿನ್ನ ಸಂಶಯಗಳನ್ನು ಹೋಗಲಾಡಿಸುತ್ತಾನೆ.

12312011a ಸ ಧರ್ಮಕುಶಲೋ ರಾಜಾ ಮೋಕ್ಷಶಾಸ್ತ್ರವಿಶಾರದಃ।
12312011c ಯಾಜ್ಯೋ ಮಮ ಸ ಯದ್ಬ್ರೂಯಾತ್ತತ್ಕಾರ್ಯಮವಿಶಂಕಯಾ।।

ನನ್ನ ಯಾಜನಾದ ಆ ರಾಜನು ಧರ್ಮಕುಶಲನು ಮತ್ತು ಮೋಕ್ಷಶಾಸ್ತ್ರವಿಶಾರದನು. ಅವನು ಹೇಳಿದ ಯಾವುದೇ ಕಾರ್ಯವನ್ನು ನಿಃಶಂಕನಾಗಿ ಮಾಡಬೇಕು.”

12312012a ಏವಮುಕ್ತಃ ಸ ಧರ್ಮಾತ್ಮಾ ಜಗಾಮ ಮಿಥಿಲಾಂ ಮುನಿಃ।
12312012c ಪದ್ಭ್ಯಾಂ ಶಕ್ತೋಽಂತರಿಕ್ಷೇಣ ಕ್ರಾಂತುಂ ಭೂಮಿಂ ಸಸಾಗರಾಮ್।।

ಇದನ್ನು ಕೇಳಿ ಅಂತರಿಕ್ಷಮಾರ್ಗದಲ್ಲಿ ಸಾಗರಗಳೊಂದಿಗೆ ಭೂಮಿಯನ್ನೇ ದಾಟಬಲ್ಲ ಆ ಧರ್ಮಾತ್ಮ ಮುನಿಯು ಕಾಲ್ನಡುಗೆಯಲ್ಲಿಯೇ ಮಿಥಿಲೆಗೆ ಹೋದನು.

12312013a ಸ ಗಿರೀಂಶ್ಚಾಪ್ಯತಿಕ್ರಮ್ಯ ನದೀಸ್ತೀರ್ತ್ವಾ ಸರಾಂಸಿ ಚ।
12312013c ಬಹುವ್ಯಾಲಮೃಗಾಕೀರ್ಣಾ ವಿವಿಧಾಶ್ಚಾಟವೀಸ್ತಥಾ।।
12312014a ಮೇರೋರ್ಹರೇಶ್ಚ ದ್ವೇ ವರ್ಷೇ ವರ್ಷಂ ಹೈಮವತಂ ತಥಾ।
12312014c ಕ್ರಮೇಣೈವ ವ್ಯತಿಕ್ರಮ್ಯ ಭಾರತಂ ವರ್ಷಮಾಸದತ್।।

ಅವನು ಗಿರಿಗಳನ್ನು, ನದೀ-ಸರೋವರಗಳನ್ನು, ಅನೇಕ ಸರ್ಪ-ಮೃಗಗಣಗಳಿಂದ ತುಂಬಿದ್ದ ವಿವಿಧ ಅಡವಿಗಳನ್ನೂ ಅತಿಕ್ರಮಿಸಿ, ಮೇರುವರ್ಷ1ವನ್ನೂ, ಹರಿವರ್ಷವನ್ನೂ ಹೈಮವತವರ್ಷ2ವನ್ನೂ ಅತಿಕ್ರಮಿಸಿ ಕ್ರಮೇಣವಾಗಿ ಭಾರತವರ್ಷವನ್ನು ತಲುಪಿದನು.

12312015a ಸ ದೇಶಾನ್ವಿವಿಧಾನ್ಪಶ್ಯಂಶ್ಚೀನಹೂಣನಿಷೇವಿತಾನ್।
12312015c ಆರ್ಯಾವರ್ತಮಿಮಂ ದೇಶಮಾಜಗಾಮ ಮಹಾಮುನಿಃ।।

ಚೀನ-ಹೂಣರು ವಾಸಿಸುತ್ತಿದ್ದ ವಿವಿಧ ದೇಶಗಳನ್ನು ದಾಟಿ ಆ ಮಹಾಮುನಿಯು ಈ ಆರ್ಯಾವರ್ತದೇಶಕ್ಕೆ ಆಗಮಿಸಿದನು.

12312016a ಪಿತುರ್ವಚನಮಾಜ್ಞಾಯ ತಮೇವಾರ್ಥಂ ವಿಚಿಂತಯನ್।
12312016c ಅಧ್ವಾನಂ ಸೋಽತಿಚಕ್ರಾಮ ಖೇಽಚರಃ ಖೇ ಚರನ್ನಿವ।।

ತಂದೆಯ ವಚನವನ್ನು ನೆನಪಿಸಿಕೊಳ್ಳುತ್ತಾ ಅದರ ಅರ್ಥವನ್ನೇ ಚಿಂತಿಸುತ್ತಾ ಅವನು ಆಕಾಶದಲ್ಲಿ ಹಾರಾಡುವ ಪಕ್ಷಿಯಂತೆ ಭೂಮಿಯ ಮೇಲೆ ನಡೆದು ಹೋಗುತ್ತಿದ್ದನು.

12312017a ಪತ್ತನಾನಿ ಚ ರಮ್ಯಾಣಿ ಸ್ಫೀತಾನಿ ನಗರಾಣಿ ಚ।
12312017c ರತ್ನಾನಿ ಚ ವಿಚಿತ್ರಾಣಿ ಶುಕಃ ಪಶ್ಯನ್ನ ಪಶ್ಯತಿ।।

ರಮ್ಯ ಪಟ್ಟಣಗಳು, ಸಮೃದ್ಧ ನಗರಗಳು ಮತ್ತು ವಿಚಿತ್ರ ರತ್ನಗಳು ಕಂಡರೂ ಕಾಣದಂತೆ ಶುಕನು ಹೋಗುತ್ತಿದ್ದನು.

12312018a ಉದ್ಯಾನಾನಿ ಚ ರಮ್ಯಾಣಿ ತಥೈವಾಯತನಾನಿ ಚ।
12312018c ಪುಣ್ಯಾನಿ ಚೈವ ತೀರ್ಥಾನಿ ಸೋಽತಿಕ್ರಮ್ಯ ತಥಾಧ್ವನಃ।।

ಆ ದೇಶದಲ್ಲಿ ಅವನು ರಮ್ಯ ಉದ್ಯಾನಗಳನ್ನೂ ಹಾಗೆಯೇ ಸೌಧಗಳನ್ನೂ, ಪುಣ್ಯತೀರ್ಥಗಳನ್ನೂ ದಾಟಿದನು.

12312019a ಸೋಽಚಿರೇಣೈವ ಕಾಲೇನ ವಿದೇಹಾನಾಸಸಾದ ಹ।
12312019c ರಕ್ಷಿತಾನ್ಧರ್ಮರಾಜೇನ ಜನಕೇನ ಮಹಾತ್ಮನಾ।।

ಸ್ವಲ್ಪವೇ ಸಮಯದಲ್ಲಿ ಅವನು ಮಹಾತ್ಮ ಧರ್ಮರಾಜ ಜನಕನಿಂದ ರಕ್ಷಿತವಾಗಿದ್ದ ವಿದೇಹವನ್ನು ತಲುಪಿದನು.

12312020a ತತ್ರ ಗ್ರಾಮಾನ್ಬಹೂನ್ಪಶ್ಯನ್ಬಹ್ವನ್ನರಸಭೋಜನಾನ್।
12312020c ಪಲ್ಲೀಘೋಷಾನ್ಸಮೃದ್ಧಾಂಶ್ಚ ಬಹುಗೋಕುಲಸಂಕುಲಾನ್।।
12312021a ಸ್ಫೀತಾಂಶ್ಚ ಶಾಲಿಯವಸೈರ್ಹಂಸಸಾರಸಸೇವಿತಾನ್।
12312021c ಪದ್ಮಿನೀಭಿಶ್ಚ ಶತಶಃ ಶ್ರೀಮತೀಭಿರಲಂಕೃತಾನ್।।
12312022a ಸ ವಿದೇಹಾನತಿಕ್ರಮ್ಯ ಸಮೃದ್ಧಜನಸೇವಿತಾನ್।
12312022c ಮಿಥಿಲೋಪವನಂ ರಮ್ಯಮಾಸಸಾದ ಮಹರ್ದ್ಧಿಮತ್।।

ಅಲ್ಲಿ ಅನೇಕ ಗ್ರಾಮಗಳನ್ನೂ, ಪಶುಗಳನ್ನೂ ಅನ್ನರಸಭೋಜನಗಳನ್ನು, ಗೋವುಗಳಿಂದ ತುಂಬಿಹೋಗಿದ್ದ ಗೋವಲರ ಹಳ್ಳಿಗಳನ್ನು, ಬೆಳೆಗಳಿಂದ ತುಂಬಿದ್ದ ಭತ್ತದ ಗದ್ದೆಗಳನ್ನೂ, ಹಂಸ-ಸಾರಸಗಳಿಂದ ಕೂಡಿದ್ದ ಪದ್ಮದ ಕೊಳಗಳನ್ನೂ, ನೂರಾರು ಅಲಂಕೃತ ಶ್ರೀಮತಿಯರನ್ನು ನೋಡುತ್ತಾ ಸಮೃದ್ಧ ಜನಸೇವಿತ ವಿದೇಹವನ್ನು ದಾಟಿ ಆ ಮಹಾಬುದ್ಧಿವಂತನು ಮಿಥಿಲೆಯ ರಮ್ಯ ಉಪವನವನ್ನು ತಲುಪಿದನು.

12312023a ಹಸ್ತ್ಯಶ್ವರಥಸಂಕೀರ್ಣಂ ನರನಾರೀಸಮಾಕುಲಮ್।
12312023c ಪಶ್ಯನ್ನಪಶ್ಯನ್ನಿವ ತತ್ಸಮತಿಕ್ರಾಮದಚ್ಯುತಃ।।

ಆನೆ-ಕುದುರೆ-ರಥಗಳಿಂದ ಮತ್ತು ನರನಾರಿಯರ ಸಮಾಕುಲಗಳಿಂದ ತುಂಬಿದ್ದ ಆ ಉಪವನವನ್ನು ನೋಡಿಯೂ ನೋಡದಿದ್ದಂತೆ ಆ ಅಚ್ಯುತನು ದಾಟಿ ಮುಂದುವರೆದನು.

12312024a ಮನಸಾ ತಂ ವಹನ್ಭಾರಂ ತಮೇವಾರ್ಥಂ ವಿಚಿಂತಯನ್।
12312024c ಆತ್ಮಾರಾಮಃ ಪ್ರಸನ್ನಾತ್ಮಾ ಮಿಥಿಲಾಮಾಸಸಾದ ಹ।।

ತನ್ನ ಮನಸ್ಸಿನಲ್ಲಿ ಹೊತ್ತಿದ್ದ ಆ ಮಹಾಭಾರದ ಅರ್ಥದಕುರಿತೇ ಚಿಂತಿಸುತ್ತಾ ಆ ಆತ್ಮಾರಾಮ ಪ್ರಸನ್ನಾತ್ಮನು ಮಿಥೆಲೆಯನ್ನು ತಲುಪಿದನು.

12312025a ತಸ್ಯಾ ದ್ವಾರಂ ಸಮಾಸಾದ್ಯ ದ್ವಾರಪಾಲೈರ್ನಿವಾರಿತಃ।
12312025c ಸ್ಥಿತೋ ಧ್ಯಾನಪರೋ ಮುಕ್ತೋ ವಿದಿತಃ ಪ್ರವಿವೇಶ ಹ।।

ಅದರ ದ್ವಾರವನ್ನು ತಲುಪಿದ ಅವನನ್ನು ದ್ವಾರಪಾಲರು ತಡೆದರು. ಧ್ಯಾನಪರನಾಗಿ ನಿಂತಿದ್ದ ಆ ಮುಕ್ತನನ್ನು ತಿಳಿದ ಅವರು ಅವನಿಗೆ ಪ್ರವೇಶಿಸಲು ಬಿಟ್ಟರು.

12312026a ಸ ರಾಜಮಾರ್ಗಮಾಸಾದ್ಯ ಸಮೃದ್ಧಜನಸಂಕುಲಮ್।
12312026c ಪಾರ್ಥಿವಕ್ಷಯಮಾಸಾದ್ಯ ನಿಃಶಂಕಃ ಪ್ರವಿವೇಶ ಹ।।

ಅವನು ಸಮೃದ್ಧ ಜನಸಂಕುಲಗಳಿಂದ ಕೂಡಿದ್ದ ರಾಜಮಾರ್ಗವನ್ನು ತಲುಪಿ ರಾಜನ ಅರಮನೆಯನ್ನು ತಲುಪಿ ನಿಃಶಂಕನಾಗಿ ಪ್ರವೇಶಿಸಿದನು.

12312027a ತತ್ರಾಪಿ ದ್ವಾರಪಾಲಾಸ್ತಮುಗ್ರವಾಚೋ ನ್ಯಷೇಧಯನ್।
12312027c ತಥೈವ ಚ ಶುಕಸ್ತತ್ರ ನಿರ್ಮನ್ಯುಃ ಸಮತಿಷ್ಠತ।।

ಅಲ್ಲಿಯೂ ಕೂಡ ದ್ವಾರಪಾಲರು ಉಗ್ರಮಾತುಗಳಿಂದ ಅವನನ?ನು ತಡೆದರು. ಆಗಲೂ ಕೂಡ ಶುಕನು ಕೋಪರಹಿತನಾಗಿ ಸುಮ್ಮನೇ ನಿಂತುಕೊಂಡನು.

12312028a ನ ಚಾತಪಾಧ್ವಸಂತಪ್ತಃ ಕ್ಷುತ್ಪಿಪಾಸಾಶ್ರಮಾನ್ವಿತಃ।
12312028c ಪ್ರತಾಮ್ಯತಿ ಗ್ಲಾಯತಿ ವಾ ನಾಪೈತಿ ಚ ತಥಾತಪಾತ್।।

ಅವನು ಪ್ರಯಾಣದಿಂದ ಹಸಿವು-ಬಾಯಾರಿಕೆಗಳಿಂದ ಸಂತಪ್ತನಾಗಿದ್ದರೂ ಸಂತಪಿಸುತ್ತಿರಲಿಲ್ಲ. ಬಿಸಿಲಿದ್ದರೂ ಬಳಲಿರಲಿಲ್ಲ. ಬಿಸಿಲಿನಿಂದ ತಪ್ಪಿಸಿಕೊಳ್ಳಲು ಅವನು ಅಲ್ಲಿಂದ ಚಲಿಸಲೂ ಇಲ್ಲ.

12312029a ತೇಷಾಂ ತು ದ್ವಾರಪಾಲಾನಾಮೇಕಃ ಶೋಕಸಮನ್ವಿತಃ।
12312029c ಮಧ್ಯಂಗತಮಿವಾದಿತ್ಯಂ ದೃಷ್ಟ್ವಾ ಶುಕಮವಸ್ಥಿತಮ್।।

ಅಲ್ಲಿ ಮಧ್ಯಾಹ್ನದ ಸೂರ್ಯನಂತೆ ನಿಂತಿದ್ದ ಶುಕನನ್ನು ನೋಡಿ ಆ ದ್ವಾರಪಾಕರಲ್ಲಿ ಒಬ್ಬನು ಶೋಕಸಮನ್ವಿತನಾದನು.

12312030a ಪೂಜಯಿತ್ವಾ ಯಥಾನ್ಯಾಯಮಭಿವಾದ್ಯ ಕೃತಾಂಜಲಿಃ।
12312030c ಪ್ರಾವೇಶಯತ್ತತಃ ಕಕ್ಷ್ಯಾಂ ದ್ವಿತೀಯಾಂ ರಾಜವೇಶ್ಮನಃ।।

ಅವನು ಅವನನ್ನು ಯಥಾನ್ಯಾಯವಾಗಿ ಪೂಜಿಸಿ, ಕೈಮುಗಿದು ನಮಸ್ಕರಿಸಿ, ಅರಮನೆಯ ಎರಡನೇ ಕಕ್ಷೆಗೆ ಪ್ರವೇಶಿಸಿದನು.

12312031a ತತ್ರಾಸೀನಃ ಶುಕಸ್ತಾತ ಮೋಕ್ಷಮೇವಾನುಚಿಂತಯನ್।
12312031c ಚಾಯಾಯಾಮಾತಪೇ ಚೈವ ಸಮದರ್ಶೀ ಮಹಾದ್ಯುತಿಃ।।

ಅಯ್ಯಾ! ಬಿಸಿಲು-ನೆರಳುಗಳನ್ನು ಸಮನಾಗಿ ಕಾಣುವ ಮಹಾದ್ಯುತಿ ಶುಕನು ಅಲ್ಲಿ ಕುಳಿತು ಮೋಕ್ಷದ ಕುರಿತೇ ಚಿಂತಿಸುತ್ತಿದ್ದನು.

12312032a ತಂ ಮುಹೂರ್ತಾದಿವಾಗಮ್ಯ ರಾಜ್ಞೋ ಮಂತ್ರೀ ಕೃತಾಂಜಲಿಃ।
12312032c ಪ್ರಾವೇಶಯತ್ತತಃ ಕಕ್ಷ್ಯಾಂ ತೃತೀಯಾಂ ರಾಜವೇಶ್ಮನಃ।।

ಮುಹೂರ್ತದಲ್ಲಿಯೇ ರಾಜನ ಮಂತ್ರಿಯು ಕೈಮುಗಿದು ಬಂದು ಅವನನ್ನು ಅರಮನೆಯ ಮೂರನೆಯ ಕಕ್ಷೆಗೆ ಪ್ರವೇಶಿಸಿದನು.

12312033a ತತ್ರಾಂತಃಪುರಸಂಬದ್ಧಂ ಮಹಚ್ಚೈತ್ರರಥೋಪಮಮ್।
12312033c ಸುವಿಭಕ್ತಜಲಾಕ್ರೀಡಂ ರಮ್ಯಂ ಪುಷ್ಪಿತಪಾದಪಮ್।।

ಅಲ್ಲಿ ಅಂತಃಪುರಕ್ಕೆ ಸಂಬಂಧಿಸಿದ ಚೈತ್ರರಥ3ಕ್ಕೆ ಸಮನಾದ ಪುಷ್ಪಭರಿತ ವೃಕ್ಷಗಳಿಂದ ಕೂಡಿದ ಪ್ರತ್ಯೇಕ ರಮ್ಯ ಜಲಾಕ್ರೀಡಾಪ್ರದೇಶಗಳಿದ್ದವು.

12312034a ತದ್ದರ್ಶಯಿತ್ವಾ ಸ ಶುಕಂ ಮಂತ್ರೀ ಕಾನನಮುತ್ತಮಮ್।
12312034c ಅರ್ಹಮಾಸನಮಾದಿಶ್ಯ ನಿಶ್ಚಕ್ರಾಮ ತತಃ ಪುನಃ।।

ಆ ಉತ್ತಮ ಕಾನನವನ್ನು ತೋರಿಸುತ್ತಾ ಮಂತ್ರಿಯು ಶುಕನಿಗೆ ಅರ್ಹ ಆಸನದಲ್ಲಿ ಕುಳ್ಳಿರಿಸಿ ಪುನಃ ಹೊರಟುಹೋದನು.

12312035a ತಂ ಚಾರುವೇಷಾಃ ಸುಶ್ರೋಣ್ಯಸ್ತರುಣ್ಯಃ ಪ್ರಿಯದರ್ಶನಾಃ।
12312035c ಸೂಕ್ಷ್ಮರಕ್ತಾಂಬರಧರಾಸ್ತಪ್ತಕಾಂಚನಭೂಷಣಾಃ।।
12312036a ಸಂಲಾಪೋಲ್ಲಾಪಕುಶಲಾ ನೃತ್ತಗೀತವಿಶಾರದಾಃ।
12312036c ಸ್ಮಿತಪೂರ್ವಾಭಿಭಾಷಿಣ್ಯೋ ರೂಪೇಣಾಪ್ಸರಸಾಂ ಸಮಾಃ।।
12312037a ಕಾಮೋಪಚಾರಕುಶಲಾ ಭಾವಜ್ಞಾಃ ಸರ್ವಕೋವಿದಾಃ।
12312037c ಪರಂ ಪಂಚಾಶತೋ ನಾರ್ಯೋ ವಾರಮುಖ್ಯಾಃ ಸಮಾದ್ರವನ್।।
12312038a ಪಾದ್ಯಾದೀನಿ ಪ್ರತಿಗ್ರಾಹ್ಯ ಪೂಜಯಾ ಪರಯಾರ್ಚ್ಯ ಚ।
12312038c ದೇಶಕಾಲೋಪಪನ್ನೇನ ಸಾಧ್ವನ್ನೇನಾಪ್ಯತರ್ಪಯನ್।।

ಕೂಡಲೇ ಐದುನೂರು ಪರಮ ಸುಂದರಿ ನಾರಿಯರು ಪಾದ್ಯಾದಿಗಳನ್ನು ತೆಗೆದುಕೊಂಡು ಅವನ ಬಳಿ ಧಾವಿಸಿ ಬಂದು ಪರಮ ಪೂಜೆಯಿಂದ ಅರ್ಚಿಸಿದರು. ದೇಶಕಾಲದಲ್ಲಿ ದೊರಕುವ ಉತ್ತಮ ಆಹಾರವನ್ನಿತ್ತು ಆ ಸಾಧುವನ್ನು ತೃಪ್ತಿಪಡಿಸಿದರು. ಆ ಪ್ರಿಯದರ್ಶನ ತರುಣಿಯರು ಸುಂದರ ವೇಷ-ಭೂಷಣಗಳನ್ನು ಧರಿಸಿ, ಸುಂದರ ನಿತಂಬವುಳ್ಳವರಾಗಿದ್ದರು. ನವಿರಾದ ಕೆಂಪುವಸ್ತ್ರಗಳನ್ನು ಧರಿಸಿದ್ದರು. ಕುದಿಸಿದ ಚಿನ್ನದಿಂದ ತಯಾರಿಸಿದ ಭೂಷಣಗಳಿಂದ ಅಲಂಕೃತರಾಗಿದ್ದರು. ಸಲ್ಲಾಪ-ಉಲ್ಲಾಪಗಳಲ್ಲಿ ಕುಶಲರಾಗಿದ್ದರು. ನೃತ್ಯ-ಗೀತಾ ವಿಶಾರದೆಯರಾಗಿದ್ದರು. ನಸುನಗುತ್ತಾ ಮಾತನಾಡುತ್ತಿದ್ದರು. ರೂಪದಲ್ಲಿ ಅಪ್ಸರೆಯರ ಸಮನಾಗಿದ್ದರು. ಕಾಮೋಪಚಾರದಲ್ಲಿ ಕುಶಲರಾಗಿದ್ದರು. ಭಾವಿಜ್ಞರೂ ಸರ್ವಕೋವಿದರೂ ಆಗಿದ್ದರು.

12312039a ತಸ್ಯ ಭುಕ್ತವತಸ್ತಾತ ತದಂತಃಪುರಕಾನನಮ್।
12312039c ಸುರಮ್ಯಂ ದರ್ಶಯಾಮಾಸುರೇಕೈಕಶ್ಯೇನ ಭಾರತ।।

ಅಯ್ಯಾ! ಭಾರತ! ಅವನಿಗೆ ಊಟಮಾಡಿಸಿ ಅವರು ಆ ಅಂತಃಪುರಕಾನನದ ರಮ್ಯತೆಯನ್ನು ಒಂದೊಂದಾಗಿ ತೋರಿಸತೊಡಗಿದರು.

12312040a ಕ್ರೀಡಂತ್ಯಶ್ಚ ಹಸಂತ್ಯಶ್ಚ ಗಾಯಂತ್ಯಶ್ಚೈವ ತಾಃ ಶುಕಮ್।
12312040c ಉದಾರಸತ್ತ್ವಂ ಸತ್ತ್ವಜ್ಞಾಃ ಸರ್ವಾಃ ಪರ್ಯಚರಂಸ್ತದಾ।।

ಅವನ ಸತ್ತ್ವವನ್ನು ತಿಳಿದಿದ್ದ ಅವರೆಲ್ಲರೂ ಆಡುತ್ತಾ, ನಗುತ್ತಾ ಮತ್ತು ಹಾಡುತ್ತಾ ಆ ಉದಾರಸತ್ತ್ವ ಶುಕನನ್ನು ಸುತ್ತುವರೆದರು.

12312041a ಆರಣೇಯಸ್ತು ಶುದ್ಧಾತ್ಮಾ ತ್ರಿಸಂದೇಹಸ್ತ್ರಿಕರ್ಮಕೃತ್।
12312041c ವಶ್ಯೇಂದ್ರಿಯೋ ಜಿತಕ್ರೋಧೋ ನ ಹೃಷ್ಯತಿ ನ ಕುಪ್ಯತಿ।।

ಇಂದ್ರಿಯಗಳನ್ನು ವಶದಲ್ಲಿರಿಸಿಕೊಂಡಿದ್ದ ಮತ್ತು ಕ್ರೋಧವನ್ನು ಜಹಿಸಿದ್ದ ಆ ಶುದ್ಧಾತ್ಮ ತ್ರಿಸಂದೇಹ ತ್ರಿಕರ್ಮಕೃತುವು ಹರ್ಷಿತನಾಗಲಿಲ್ಲ. ಕುಪಿತನೂ ಆಗಲಿಲ್ಲ.

12312042a ತಸ್ಮೈ ಶಯ್ಯಾಸನಂ ದಿವ್ಯಂ ವರಾರ್ಹಂ ರತ್ನಭೂಷಿತಮ್।
12312042c ಸ್ಪರ್ಧ್ಯಾಸ್ತರಣಸಂಸ್ತೀರ್ಣಂ ದದುಸ್ತಾಃ ಪರಮಸ್ತ್ರಿಯಃ।।

ಆ ಪ್ರರಮ ಸ್ತ್ರೀಯರು ಅವನಿಗೆ ದಿವ್ಯವಾದ ವರಾರ್ಹವಾದ ರತ್ನಭೂಷಿತ ಬಹುಮೂಲ್ಯವಾದ ರತ್ನಗಂಬಳಿಯಿಂದ ಆಚ್ಛಾದಿತವಾದ ಶಯ್ಯಾಸನವನ್ನು ಅವನಿಗೆ ಸಿದ್ಧಗೊಳಿಸಿದರು.

12312043a ಪಾದಶೌಚಂ ತು ಕೃತ್ವೈವ ಶುಕಃ ಸಂಧ್ಯಾಮುಪಾಸ್ಯ ಚ।
12312043c ನಿಷಸಾದಾಸನೇ ಪುಣ್ಯೇ ತಮೇವಾರ್ಥಂ ವಿಚಿಂತಯನ್।।

ಶುಕನಾದರೋ ಕಾಲುತೊಳಿದು ಸಂಧ್ಯಾವಂದನೆಯನ್ನು ಮಾಡಿ ಪುಣ್ಯ ಆಸನದ ಮೇಲೆ ಕುಳಿತು ಮೋಕ್ಷದ ಕುರಿತೇ ಚಿಂತಿಸುತ್ತಿದ್ದನು.

12312044a ಪೂರ್ವರಾತ್ರೇ ತು ತತ್ರಾಸೌ ಭೂತ್ವಾ ಧ್ಯಾನಪರಾಯಣಃ।
12312044c ಮಧ್ಯರಾತ್ರೇ ಯಥಾನ್ಯಾಯಂ ನಿದ್ರಾಮಾಹಾರಯತ್ಪ್ರಭುಃ।।

ಪ್ರಭುವು ರಾತ್ರಿಯ ಮೊದಲ ಯಾಮದಲ್ಲಿ ಧ್ಯಾನಪರಾಯಣನಾಗಿದ್ದುಕೊಂಡು ಮಧ್ಯರಾತ್ರಿಯಲ್ಲಿ ಯಥಾನ್ಯಾಯವಾಗಿ ನಿದ್ರೆಮಾಡಿದನು.

12312045a ತತೋ ಮುಹೂರ್ತಾದುತ್ಥಾಯ ಕೃತ್ವಾ ಶೌಚಮನಂತರಮ್।
12312045c ಸ್ತ್ರೀಭಿಃ ಪರಿವೃತೋ ಧೀಮಾನ್ಧ್ಯಾನಮೇವಾನ್ವಪದ್ಯತ।।

ಬಳಿಕ ಶುಕನು ಬ್ರಾಹ್ಮೀಮುಹೂರ್ತದಲ್ಲಿ ಎದ್ದು ಶೌಚ-ಮುಖಮಾರ್ಜನ-ಸ್ನಾನ-ಸಂಧ್ಯಾದಿಗಳನ್ನು ಮುಗಿಸಿ ಸ್ತ್ರೀಯರಿಂದ ಪರಿವೃತನಾಗಿ ಧ್ಯಾನದಲ್ಲಿಯೇ ಮಗ್ನನಾದನು.

12312046a ಅನೇನ ವಿಧಿನಾ ಕಾರ್ಷ್ಣಿಸ್ತದಹಃಶೇಷಮಚ್ಯುತಃ।
12312046c ತಾಂ ಚ ರಾತ್ರಿಂ ನೃಪಕುಲೇ ವರ್ತಯಾಮಾಸ ಭಾರತ।।

ಭಾರತ! ಈ ರೀತಿಯಲ್ಲಿ ಅಚ್ಯುತನು ಉಳಿದ ಹಗಲನ್ನೂ ಮತ್ತು ರಾತ್ರಿಯನ್ನೂ ನೃಪನ ಭವನದಲ್ಲಿ ಕಳೆದನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಶುಕೋತ್ಪತ್ತೌ ದ್ವಾದಶಾಧಿಕತ್ರಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಶುಕೋತ್ಪತ್ತಿ ಎನ್ನುವ ಮುನ್ನೂರಾಹನ್ನೆರಡನೇ ಅಧ್ಯಾಯವು.


  1. ಇಲಾವೃತವರ್ಷ . ↩︎

  2. ಕಿಂಪುರುಷವರ್ಷ . ↩︎

  3. ಕುಬೇರನ ಉದ್ಯಾನವನ ಚೈತ್ರರಥ. ↩︎